ಮೇ ೨೪, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಸಿದ್ದನಕಟ್ಟೆಯ ಸ್ವಾವಲಂಬಿ ಪಂಕಜ:ಗಂಗಾಧರಯ್ಯ ವ್ಯಕ್ತಿಚಿತ್ರ    
ಎಸ್.ಗಂಗಾಧರಯ್ಯ
ಬುಧವಾರ, 6 ಜೂನ್ 2012 (03:23 IST)
(ಫೋಟೋಗಳು:ಗಂಗೂ)

ಊರಿನಿಂದ ದೂರವಿರುವ ತೋಟ, ಅದರೊಳಗೊಂದು ಮನೆ, ಮನೆಯ ಸುತ್ತ ಗಿಡಮರಗಳ ಅಚ್ಚ ಹಸಿರು, ಆ ಹಸಿರಿನೊಳಗೆ ಬಗೆ ಬಗೆಯ ಹೂಗಳ ಘಮಲು, ಈ ಘಮಲಿನ ವಾರಸುದಾರರು ನಾವೇ ಎಂಬಂತೆ ಸಾವಧಾನದ ಹೆಜ್ಜೆಗಳನ್ನಿಟ್ಟು ಅಡ್ಡಾಡುವ ನವಿಲುಗಳು, ಅವುಗಳಿಗೆ ಸಾಥು ಕೊಡುವ ಕೋಳಿಗಳು, ನಾಯಿಗಳು, ಬೆಳಗು ಬೈಗುಗಳಲ್ಲಿ ಥರಾವರಿ ಹಕ್ಕಿಗಳ ಕಲರವ.... ತೋಟದ ಹಿಂಬದಿಗೆ ಗುಡ್ಡಗಳ ಸಾಲು, ಅವುಗಳೆಡೆಯಿಂದ ಸದಾ ತಣ್ಣಗೆ ತೀಡುವ ತಂಗಾಳಿ.... ಚಿಕ್ಕನಾಯಕನಹಳ್ಳಿಯಂಥ ಅಪ್ಪಟ ಬಯಲು ಸೀಮೆಯ ನಾಡಲ್ಲಿ ಇಂಥದ್ದೊಂದು ಪಕ್ಕಾ ಮಲೆನಾಡಿನ ವಾತಾವರಣವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೂ ತಮ್ಮ ಅಭಿರುಚಿ, ಪರಿಶ್ರಮ ಹಾಗೂ ಅಪರಮಿತ ಕ್ರಿಯಾಶಿಲತೆಯೊಂದಿಗೆ ಇಂಥದ್ದೊಂದು ಸಾಧ್ಯವಾಗಿಸಿಕೊಂಡು ಪ್ರಕೃತಿಯ ಮಕ್ಕಳಂತೆ ಬದುಕುತ್ತಿರುವ ಸಂಸಾರವೊಂದಿದೆ. ಇಂಥ ಸಂಸಾರದ ಒಡತಿಯೇ ಸಿದ್ಧನಕಟ್ಟೆಯ ಪಂಕಜ. ತಮ್ಮದೇ ಅಭಿರುಚಿಯ, ವಕೀಲಿ ವೃತ್ತಿಯ ಪತಿಯ ಸಹಕಾರದೊಂದಿಗೆ ಸಾವಯವ ಕೃಷಿಯನ್ನೂ, ಈ ಕೃಷಿಯ ಜೊತೆಗೆ ತಮ್ಮ ಕೈಗೆಟಕುವಂಥ ಹಲವು ಗೃಹ ಉದ್ದಿಮೆಗಳನ್ನೂ ನಡೆಸುತ್ತಾ, ಆ ಮೂಲಕ ಮನಸ್ಸು ಮಾಡಿದರೆ ಹಳ್ಳಿಯ ಹೆಣ್ಣು ಮಗಳು ಕೂಡಾ ಏನೆಲ್ಲಾ ಸಾಧಿಸ ಬಹುದು, ಅನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಇವರ ಈ ಸಾಧನೆ ಹಳ್ಳಿಗಾಡಿನಲ್ಲಿ ಸ್ವಾವಲಂಬನೆಯ ಬದುಕಿಗೆ ಬಲು ದೊಡ್ಡ ಮಾದರಿ, ಅಂಥ ಇದನ್ನು ನೋಡಿದ ಯಾರಿಗೇ ಆಗಲಿ ಅನಿಸದಿರದು.

ಸುಮಾರು ನಲವತ್ತೈದು ವರ್ಷ ವಯಸ್ಸಿನ, ಸದಾ ನಗು ಮೊಗದ ಪಂಕಜ ಪದವಿಯವರೆಗೆ ಓದಿಕೊಂಡು, ಅಲ್ಲಿ ಗಳಿಸಿದ ಜ್ಞಾನದೊಂದಿಗೆ ತಮ್ಮ ಅಪಾರ ಕನಸುಗಳನ್ನೂ, ಅವುಗಳ ಸಾಕಾರಕ್ಕೆ ಬೇಕಾಗುವ ಛಲವನ್ನೂ ಮೈಗೂಡಿಸಿಕೊಡಂಥವರು. ಇವರ ಇಂಥ ಛಲದ ಪರಿಣಾಮವಾಗಿ ಅನೇಕ ಗೃಹ ಉದ್ದಿಮೆಗಳು ಈ ಊರಾಚೆಯ ತೋಟದೊಳಗೆ ಹುಟ್ಟಿಕೊಂಡಿವೆ. ರಾಗಿ, ಭತ್ತ, ಮೆಣಸಿನಕಾಯಿಗಳಿಗಾಗಿ ಫ್ಲೋರಿಂಗ್ ಮಿಲ್ಲುಗಳು, ಕೊಬರಿ ಚೂರಿನಿಂದ ಶುದ್ಧ ಎಣ್ಣೆ ತೆಗೆಯುವ ಯಂತ್ರ, ಅಡಕೆ ಸುಲಿಯುವ ಯಂತ್ರ, ಸುಲಿದ ಅಡಕೆ ಒಣಗಿಸುವ ಡ್ರೈಯರ್, ಅಡಕೆ ಪಟ್ಟೆಗಳಿಂದ ವಿವಿಧ ಗಾತ್ರದ ತಟ್ಟೆಗಳನ್ನು ತಯಾರಿಸುವ ಯಂತ್ರಗಳು, ತಮಗೆ ಬೇಕಾದಾಗ ತಯಾರು ಮಾಡಿಕೊಳ್ಳಲು ಇಟ್ಟಿಗೆ ಯಂತ್ರ, ಆರೆ, ಪಿಕಾಸಿ, ಕುಡುಗೋಲುಗಳನ್ನು ಅಣಿದುಕೊಳ್ಳಲು ತಮ್ಮದೇ ಒಂದು ಪುಟ್ಟ ಕುಲುಮೆ, ಕಳೆದ ವರ್ಷವಷ್ಟೇ ಸರ್ಕಾರದವರು ಕಿಸಾನ್ ಸೇವಾ ಕೇಂದ್ರದ ಅಡಿಯಲ್ಲಿ ಕೊಡುವ ಯೋಜನೆಯಲ್ಲಿ ಪೆಟ್ರೋಲ್ ಬಂಕ್... ಹೀಗೆ ಬೆಳೆಯುತ್ತಾ ಹೋಗುತ್ತದೆ ಇವರ ಉದ್ದಿಮೆಗಳ ಪಟ್ಟಿ. ಇದಿಷ್ಟೇ ಆಗಿದ್ದರೆ ಪಂಕಜ ಅವರಿಗೆ ಬೆಳಗಿನಿಂದ ಸಂಜೆಯವರೆಗೂ ಕಾಲ ಇದಕ್ಕೆಲ್ಲಾ ಸಾಕಾಗುತ್ತಿತ್ತೋ ಏನೋ. ಆದರೆ ಇವರ ಆಸಕ್ತಿಯ ವಲಯದ ವಿಸ್ತಾರದೊಳಗೆ ಕೃಷಿ ಮತ್ತಿತರ ಸಂಗತಿಗಳೂ ಸೇರಿಕೊಂಡಿರುವುದರಿಂದ ದಿನವಿಡೀ ದಣಿವರಿಯದಂತೆ ದುಡಿಯುವುದು ಇವರಿಗೆ ಒಗ್ಗಿ ಹೋಗಿದೆ.

ಕೃಷಿಯಲ್ಲಿ ಸಾವಯವ ಪದ್ಧತಿಗೆ ಮಾರು ಹೋಗಿರುವ ಇವರು ಕೊಟ್ಟಿಗೆ ಗೊಬ್ಬರದ ಜೊತೆಗೆ ಎರೆ ಹುಳುಗಳ ಗೊಬ್ಬರವನ್ನೂ ತಯಾರಿಸುತ್ತಾ ಇಡೀ ತೋಟವನ್ನು ರಾಸಾಯನಿಕ ಅಥವಾ ಕ್ರಮಿನಾಶಕದಿಂದ ದೂರವಿಟ್ಟಿದ್ದಾರೆ. ಇದಕ್ಕಾಗಿ ಇವರು ಹಸುಗಳನ್ನು ಸಾಕಿದ್ದಾರೆ. ಇವುಗಳ ಸಗಣಿಯಿಂದ ಗೊಬ್ಬರದ ಜೊತೆಗೆ ಮನೆಗೆ ಬೇಕಾಗುವ ಗೋಬರ್ ಗ್ಯಾಸ್‌ನ್ನು ಕೂಡಾ ಮಾಡಿಕೊಂಡಿದ್ದಾರೆ. ಅದೇ ರೀತಿ ಈ ತೋಟದೊಳಗೆ ತೆಂಗು, ಅಡಕೆ, ಬಾಳೆ ಮುಂತಾದ ಮಾಮೂಲಿ ಬೆಳೆಗಳ ಜೊತೆಗೆ ಹಲವು ಬಗೆಯ ವಿಶೇಷ ಹಣ್ಣಿನ ಗಿಡಗಳನ್ನೂ, ಚಕ್ಕೆ, ಲವಂಗ, ಅರಿಶಿ, ಶುಂಠಿ ಮುಂತಾದ ಸಾಂಬಾರ ಪದಾರ್ಥದ ಗಿಡಗಳನ್ನೂ ಬೆಳಸಿದ್ದಾರೆ. ಇಲ್ಲಿನ ಒಂದೊಂದು ಗಿಡವೂ ಇವರ ವಿಶೇಷ ಅಕ್ಕರೆಯಿಂದ ಧನ್ಯವಾಗಿವೆ.
ಪಂಕಜರಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಒಲವು. ಇಂಥ ಇವರ ಒಲವಿನಿಂದಾಗಿ ಈ ತೋಟ ಗಿಳಿಗಳು, ಪಾರಿವಾಳಗಳು, ನವಿಲುಗಳು, ಮೊಲಗಳು, ಟರ್ಕಿ ಕೋಳಿ ಮುಂತಾದವುಗಳ ತಾಣವಾಗಿದೆ. ತೋಟವನ್ನೂ ಒಂದು ಕಾಡಿನಂತೆ ಭಾವಿಸಿರುವ ಇವುಗಳೆಲ್ಲಾ ತೋಟದಾಚೆಯ ಗುಡ್ಡಗಳಲ್ಲೂ ಅಡ್ಡಾಡಿಕೊಂಡಿರುತ್ತವೆ. ಇವುಗಳ ಇರುವಿಕೆಯನ್ನು ಮತ್ತೂ ಚಂದವಾಗಿಸಿರುವಂತೆ ಎಲ್ಲೆಲ್ಲಿಂದಲೋ ತಂದು ನೆಟ್ಟಿರುವ ನೂರಾರು ಬಗೆಯ ಹೂವಿನ ಗಿಡಗಳಿವೆ. ಇವೆಲ್ಲವುಗಳ ನಡುವೆ ಇವೆಲ್ಲವುಗಳ ಗೆಳೆಯನಂತೆ ಚಂದದ ಹೆಂಚಿನ ಮನೆಯಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಬರುವ ಕಾಯಿ ತಿಮ್ಮನಹಳ್ಳಿಯ ಪಕ್ಕದಲ್ಲಿರುವ ಸಿದ್ದನಕಟ್ಟೆ ಒಂದು ಪುಟ್ಟ ಹಳ್ಳಿ. ಸುಮಾರು ವರ್ಷಗಳ ಹಿಂದೆಯೇ ಈ ಹಳ್ಳಿಯನ್ನು ಬಿಟ್ಟು ತೋಟದಲ್ಲಿ ಪುಟ್ಟೊಂದು ಮನೆಯನ್ನು ಕಟ್ಟಿಕೊಂಡು ಹೋಗುವಾಗಲೇ ಈ ಗಂಡ ಹೆಂಡತಿಯರೊಳಗೆ ಹೊಸದೊಂದು ಬಗೆಯ ಬದುಕಿನ ಕನಸುಗಳು ಕೊಸರಾಡುತ್ತಿದ್ದವು. ಆದರೆ ಅವು ಸಾಕಾರಗೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೆ ಅವಕ್ಕೆಲ್ಲಾ ಬೇಕಾಗುವಷ್ಟು ಹಣ ಕೂಡಾ ಅವರ ಬಳಿ ಇರಲಿಲ್ಲ. ಆದರೂ ಪಂಕಜ ಅವರ ದೃಢ ನಿರ್ಧಾರ ಅವುಗಳಿಗೆ ಅಂಜಲಿಲ್ಲ.

‘ನಾನು ಇವತ್ತು ಈ ಸ್ಥಿತೀಗೆ ಬರೋಕೆ ಇಂಥ ಕೆಲಸ ಮಾಡಿಲ್ಲ ಅನ್ನೋ ಹಂಗಿಲ್ಲ. ಈ ತೋಟಕ್ಕೆ ಬಂದ ಹೊಸತರಲ್ಲಿ ಹೂಗಳನ್ನು ಬೆಳೆದು ಅವುಗಳನ್ನು ಮಾರುತ್ತಿದ್ದೆ. ನಂತರ ತೆಂಗಿನ ಚಿಪ್ಪನ್ನು ಸುಟ್ಟು ಇದ್ದಿಲು ಮಾಡಿ ಮಾರುತ್ತಿದ್ದೆ. ಸೋಗೆಯ ಕಡ್ಡಿ ಸಿಗಿದು ಕಟ್ಟಿಗೆ ಕಟ್ಟಿ ಮಾರುತ್ತಿದ್ದೆ. ಕ್ರಮೇಣ ಇಷ್ಟಿಷ್ಟೇ ದುಡ್ಡು ಕೂಡಿಸಿಕೊಂಡು ಅದರ ಜೊತೆಗೆ ಬ್ಯಾಂಕಿನಲ್ಲಿ ಸಾಲ ತೆಗೆದು ಇವುಗಳೆನ್ನೆಲ್ಲಾ ಮಾಡಿದ್ದೇನೆ. ಈ ಎಲ್ಲವನ್ನೂ ಒಟ್ಟಿಗೇ ಮಾಡಿಲ್ಲ. ಒಂದಾದ ಮೇಲೆ ಒಂದರಂತೆ ಮಾಡಿದ್ದೇನೆ. ಅಂದ್ರೆ, ಒಂದರ ಸಾಲ ತೀರುತ್ತಿದ್ದಂತೆ ಇನ್ನೊಂದಕ್ಕೆ ಸಾಲ ತೆಗೆದುಕೊಳ್ಳುತ್ತಿದ್ದೆ. ಅದು ತೀರಿದ ಮೇಲೆ ಇನ್ನೊಂದು. ಈಗ ನೋಡಿ ಹೆಚ್ಚೂ ಕಡಿಮೆ ಎಲ್ಲದರ ಸಾಲ ತೀರಿಸಿದ್ದೇನೆ. ಎಲ್ಲಾ ಅವುಗಳಲ್ಲೇ ದುಡಿದು. ಈ ಊರಿಗೊಂದು ಪೆಟ್ರೋಲ್ ಬಂಕ್ ಇರಲಿಲ್ಲ. ಪೆಟ್ರೋಲ್, ಡೀಸೆಲ್ ಬೇಕಾದ್ರೆ ದೂರದ ಊರುಗಳಿಗೇ ಹೋಗಬೇಕಾಗಿತ್ತು.

`ನಾನೇ ಯಾಕೆ ಮಾಡಬಾರದು ಅನಿಸಿತು. ಕಿಸಾನ್ ಸೇವಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಇತ್ತು. ಧೈರ್ಯ ಮಾಡಿ ಮಾಡಿದ್ದೀನಿ. ಅಲ್ಲಿ ಕೆಲಸಕ್ಕೆ ಬರೀ ಹೆಣ್ಣು ಮಕ್ಕಳನ್ನೇ ನೇಮಿಸಿಕೊಂಡಿದೀನಿ. ಸಾಲದ್ದಕ್ಕೆ ಬರುವ ಆದಾಯದಲ್ಲಿ ಒಳ್ಳೆಯ ಸಂಬಳವನ್ನೂ ಕೊಡ್ತಾ ಇದೀನಿ... ನಾನು ಏನೇನು ಮಾಡಿದೀನಿ ಅದರ ಹೊಣೆಗಾರಿಕೆಯೂ ನನ್ನದೇ. ಇದರಲ್ಲಿ ನನ್ನ ಮನೆಯವರು ತಲೆ ಹಾಕುವುದಿಲ್ಲ. ಅದೇ ರೀತಿ ಎಷ್ಟು ಬಂತು ಎಷ್ಟು ಹೋಯ್ತು ಅಂತಾನೂ ಕೇಳೋದಿಲ್ಲ. ಆದರೆ, ನನ್ನ ಕೆಲಸದಲ್ಲಿ ಕೆಲವೊಮ್ಮೆ ಅವರೂ ಸಹಕರಿಸುತ್ತಾರೆ... ನಿಜ ಹೇಳ್ತೀನಿ, ಯಾವುದೇ ಹೆಣ್ಣು ಮಗಳಾಗಲಿ ಎಲ್ಲದಕ್ಕೂ ಗಂಡನ ಬಳಿ ಕೈ ಚಾಚಬಾರದು... ಹೆಣ್ಣು ಮನಸ್ಸು ಮಾಡಿದ್ರೆ ಮಾಡೋಕೆ ಕೈ ತುಂಬಾ ಕೆಲ್ಸ ಇರ‍್ತಾವೆ ನೋಡಿ... ಸಾಲದ್ದಕ್ಕೆ ಈಗ ಬ್ಯಾಂಕುಗಳಲ್ಲಿ ಕೂಡಾ ಒಳ್ಳೆಯ ಸೌಲಭ್ಯ ಸಿಗುತ್ತೆ...’ ಸ್ವಾವಲಂಬನೆಯ ಬದುಕಿಗೆ ಕಾಲಿಟ್ಟಿದ್ದನ್ನು ಹಾಗೂ ಅದರಲ್ಲಿ ಯಶಸ್ಸು ಸಾಧಿಸಿದ್ದನ್ನು ಪಂಕಜ ಅವರು ನೆನಪಿಸಿಕೊಳ್ಳುವುದು ಹೀಗೆ.

ಪಂಕಜ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗ ಮೆಡಿಕಲ್ ಓದುತ್ತಿದ್ದಾನೆ. ಮಗಳು ಆರ್ಕಿಟೆಕ್ಟ್. ಇದು ಇಷ್ಟು ಸಾಕು, ಇಷ್ಟಕ್ಕೇ ಇದು ಮುಗೀತು, ಇದ್ಯಾರಿಗೆ ಬೇಕಪ್ಪಾ ಇದರ ಉಸಾಬರಿ, ಅಂತ ಯಾವತ್ತೂ ಯೋಚಿಸದ ಮನಸ್ಸು ಪಂಕಜ ಅವರದು. ಹಾಗಾಗಿಯೆ ಇವರು ಇಷ್ಟರಲ್ಲೇ ತಮ್ಮ ತೋಟದಲ್ಲೊಂದು ಅನಾಥಶ್ರಮವೊಂದನ್ನು ಸ್ಥಾಪಿಸಬೇಕೆಂಬ ಉತ್ಸಾಹದಲ್ಲಿದ್ದಾರೆ. ‘ನೀನು ಎಲ್ಲಾದ್ರೂ ಕೆಲಸಕ್ಕೆ ಸೇರ‍್ಕೋ, ಆದ್ರೆ ವಾರದಾಗೆ ಒಂದು ಸಾರ್ತಿ ಹಳ್ಳಿಗೆ ಬಂದು ಇವರ ಆರೋಗ್ಯ ನೋಡಿಕೋಬೇಕು ಅಂತ ಮಗನಿಗೆ ಮಾತು ಹಾಕಿದ್ದೇನೆ. ಅವನೂ ಅದಕ್ಕೆ ಒಪ್ಪಿಕೊಂಡಿದ್ದಾನೆ.’ ಅನ್ನುವಾಗ ಹಳ್ಳಿಯ ಬದುಕನ್ನು ಸಹ್ಯಗೊಳಿಸುವ, ಆ ಮೂಲಕ ಶ್ರೀಮಂತಗೊಳಿಸಿ ಅದರ ನೆಲದ ಋಣ ತೀರಿಸಬೇಕೆನ್ನುವಂಥ ಭಾವವೊಂದು ಅವರೊಳಗಾಡಿದಂತೆ ಭಾಸವಾಗುತ್ತದೆ.

ಇಂಥ ಪಂಕಜ ಅವರ ಸಾಧನೆ ಇವತ್ತು ಹೆಣ್ಣು ಮಕ್ಕಳಿಗೆ ಅದರಲ್ಲೂ ಹಳ್ಳಿಯ ಹೆಣ್ಣು ಮಕ್ಕಳಿಗೆ ಒಂದು ದೊಡ್ಡ ಆದರ್ಶವಾಗಬೇಕಿದೆ. ಅದೇ ರೀತಿ, ಸ್ರ್ತೀ ಸ್ವಾವಲಂಬನೆ, ಸಬಲೀಕರಣದ ಕಣಜದಂತಿರುವ, ಇಂಥ ಮಾತುಗಳ ವ್ಯಾಕರಣಕ್ಕೆ ಹೊಸದೊಂದು ವ್ಯಾಖ್ಯಾನವನ್ನು ನೀಡಿರುವ, ಪಂಕಜ ಅವರನ್ನು ಅಭಿನಂದಿಸಲೇ ಬೇಕು.

ಪುಟದ ಮೊದಲಿಗೆ
 
Votes:  11     Rating: 5    
 
 
ಸಂಬಂಧಿಸಿದ ಲೇಖನಗಳು
  ಐನ್‌ಸ್ಟೈನ್‌ ನ ಧರ್ಮ ಮತ್ತು ವಿಜ್ಞಾನ:ತಿರುಮಲೇಶರ ಅನುವಾದ
  ಪ್ರವೀಣ ಬರೆಯುವ ಮಾಲ್ಡೀವ್ಸ್ ದಿನಚರಿ ಶುರುವಾಯಿತು
  ಸಂಭ್ರಮದ ಹೊಟ್ಟೆಯಲ್ಲಿ ಸಂಕಟ:ತರೀಕೆರೆ ವಾರದ ಬರಹ
  ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
  ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
  ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ
  ಇಲ್ಲಿನ ಕಲ್ಯಾಣ ವಿಶೇಷ: ಪ್ರಶಾಂತ್ ತಾಂಜಾನಿಯಾ ಡೈರಿ
  ಅಲ್ಲಿಯೂ ಅಂಟಿದ ಮಳೆ ಇಲ್ಲಿಯೂ ಅಂಟುವ ಮಳೆ:ನಾಗಶ್ರೀ ಅಂಕಣ
  ಹಾವುಗಳೇ ಕಚ್ಚದಿರಿ:ರಹಮತ್ ತರೀಕೆರೆ ವಾರದ ಬರಹ
  ಸಾಹಿತಿಗಳೂ ರಾಜಕಾರಣವೂ: ನಾ.ಡಿಸೋಜ ಅಂಕಣ
  ಬಿರುಬೇಸಗೆಯಲ್ಲಿ ಕಾವ್ಯಾನುರಾಗ:ಮಹೇಶ್ ಬರೆವ ಡೆಲ್ಲಿಪೋಸ್ಟ್
  ಬೆರ್ಚಪ್ಪ ಪ್ರಪಂಚ:ತಿರುಮಲೇಶರ ವಾರದ ಬರಹ
  ಕೀರ್ಲೋಸ್ಕರದಾಗ ಕೆಲಸ ಸಿಕ್ಕತ:ಪ್ರಶಾಂತ್ ಆಡೂರ ನೆನಪುಗಳು
  ಕಣ್ಣು ಚುಚ್ಚುವ ಬೆಳಕು ಬಾಲ್ಯ:ಸಿಂಧು ಬರೆವ ಅಮ್ಮನ ಕಾಲಂ
  ಕನ್ನಡ ಗದ್ಯದ ಒಂದು ಪರಿ:ರಹಮತ್ ತರೀಕೆರೆ ವಾರದ ಬರಹ
  ಅವನು ಕಟ್ಟಿದ ಆರು ಸಾವಿರ ಮೆಟ್ಟಿಲುಗಳು:ನಾಗಶ್ರೀ ಅಂಕಣ
  ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು:ರಶೀದ್ ಅಂಕಣ
  ‘ನೋಡಿ ನಿರ್ಮಲ ಜಲಸಮೀಪದಿ..:ತಿರುಮಲೇಶರ ವಾರದ ಬರಹ
  ಶ್ರೀಮಾನ್ ಮತದಾರ ಎಂಬ ಅಬ್ಬೇಪಾರಿ:ನಾ.ಡಿಸೋಜಾ ಅಂಕಣ
  ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ:ಅಬ್ದುಲ್ ರಶೀದ್ ಅಂಕಣ
  ಜಿಂಕೆಮರಿ ಮರಿಯಾನಾ ಮಿಂಚುಬಳ್ಳಿ:ನಿಹಾರಿಕಾ ಡೈರಿ
  ಪ್ರಶಾಂತ್ ಬೀರೂರು ಬರೆವ ತಾಂಜಾನಿಯಾ ಡೈರಿ ಶುರುವಾಯಿತು
  ಸಾಪೇಕ್ಷತೆ ಎಂದರೇನು?:ತಿರುಮಲೇಶರ ವಾರದ ಬರಹ
  ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ:ಪ್ರಶಾಂತ್ ಬರಹ
  ದುಡಿವ ಕಂದಮ್ಮಗಳ ಕಂಡು:ಲಕ್ಷ್ಮೀಶಂಕರ ಜೋಷಿ ಕಾಲಂ
  ಬೆಳೆಕೇ ಎಲ್ಲ ಎನ್ನುವ ಚಿತ್ರಗಳು:ಮಹೇಶ್ ‘ಡೆಲ್ಲಿಪೋಸ್ಟ್’
  ಭೂಮಿ ಕಂಪಿಸಿದ ಚೀನಾದಿಂದ ನಾಗಶ್ರೀ ತಿಳಿಸಿದ ಸಂಗತಿಗಳು
  ಅಲ್ಲಾಡುತ್ತಿದ್ದ ಹಳೆಯ ಅಂಬಾಸೆಡರ್:ಅಬ್ದುಲ್ ರಶೀದ್ ಅಂಕಣ
  ಎಮ್ಮಯ ಕಾಲದ ಇಂಗ್ಲಿಷ್ ಎಂ.ಎ:ತಿರುಮಲೇಶರ ವಾರದ ಬರಹ
  ಎನ್.ಸಿ.ಮಹೇಶ್ ಬರೆಯುವ ‘ದೆಹಲಿ ಪೋಸ್ಟ್’ ಶುರುವಾಯಿತು
  ನಿಮ್ಮದೇ ನಾಟಕಕ್ಕೆ ನಮ್ಮದೇ ತಾಲೀಮು:ಸಿಂಧು ‘ಅಮ್ಮನ ಕಾಲಂ’
  ಬೆಂಕಿಪುರ ಭದ್ರಾವತಿಯಾದ ಕಥಾನಕ:ನಾ.ಡಿಸೋಜಾ ಅಂಕಣ
  ವ್ಯಾಕರಣವೆಂಬುದು ಗ್ರಾಮ್ಯವಲ್ಲವೇ?:ತಿರುಮಲೇಶರ ವಾರದ ಬರಹ
  ವೃದ್ಧಾಶ್ರಮಕ್ಕ ಜಾಗಾ ಇದ್ದರ ನೋಡ:ಪ್ರಶಾಂತ್ ಪ್ರಹಸನ
  ಸೇಂದಿ ನಕ್ಷತ್ರ ಗುರಾಯಿಸಿ ಬರೆದ ಒಗರು ಒಗರು ಕಾಲಂ
  ವಿವೇಕ್ ಕಥೆಯ ಘಾಚರಿನ ಘೋಚಾರ ಲೋಕ:ನಾಗಶ್ರೀ ಅಂಕಣ
  ವಿಶ್ವವಿದ್ಯಾಲಯಗಳೆಂಬ ಆಲದಮರಗಳು:ತಿರುಮಲೇಶರ ವಾರದ ಬರಹ
  ಕನ್ನಡದ ಬ್ಲಾಗುಗಳ ಬಾಗಿಲಲಿ ನಿಂತು:ಎಂ.ಎಸ್.ಶ್ರೀರಾಮ್ ಬರಹ
  ಬಾರಾ ಖೂನ ಮಾಫ:ಲಕ್ಷ್ಮೀಶಂಕರ ಜೋಶಿ ಅಂಕಣ
  ಸರಳತೆ ಎಂಬ ಸಿರಿವಂತಿಕೆ:ನಾ.ಡಿಸೋಜಾ ಅಂಕಣ
  ಉತ್ತರ ದಿಕ್ಕಿನ ತಿರುಗಾಟದ ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ಹುಲ್ಲಿನ ತಾರೀಫು
  ರ್ರೀ..ನಂದ ಅಕೌಂಟ ಕ್ಲೋಸ್ ಮಾಡರಿ:ಪ್ರಶಾಂತ್ ಆಡೂರ ಪ್ರಹಸನ
  ಸೇಯಿ ಎಲಿಬಿದೆಯ ಆಸ್ಪತ್ರೆ ಸಹವಾಸ:ರೇಣುಕಾ ಕಾಲಂ
  ಸಹಜ ಸಭ್ಯತೆ ಕುರಿತ ಒಂದು ಕಾದಂಬರಿ:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ನಗೆಯ ಹಾಯಿದೋಣಿ
  ಹೆಂಗಸರ ದುಃಖ ಮತ್ತು ಗಂಡಸರ ಸವಾರಿ:ಲಕ್ಷ್ಮೀ ಜೋಶಿ ಕಾಲಂ
  ಕಾಲುವೆಗಳ ಊರಿನ ಕೆಂಪು ಕತ್ತಲು: ನಿಹಾರಿಕಾ ಡೈರಿಯ ಪುಟಗಳು
  ಉಪ್ಪಿಟ್ಟನ್ನ ಮುತ್ತಿಕೊಂಡಿದ್ದ ಇರುವೆಗಳು:ನಾ.ಡಿಸೋಜಾ ಅಂಕಣ
  ಭಾಷೆಯೊಂದರ ಅಕ್ರಮ ಸಕ್ರಮ:ತಿರುಮಲೇಶರ ವಾರದ ಬರಹ
  ಹೋದ ಒಂಟಿಹಾದಿಯ ಬಿಟ್ಟುಬಂದು:ನಾಗಶ್ರೀ ಅಂಕಣ
  ನಾ ಹೇಗೆ ಬಡವನು ನಾ ಹೇಗೆ ಪರದೇಶಿ:ಶ್ರೀರಾಮ್ ವಾರದ ಬರಹ
  ದೆಹಲಿಯ ಹಿರಿಯ ಕನ್ನಡತಿ ನೇತ್ರಾವತಿ ಮಯ್ಯ:ರೇಣುಕಾ ಕಾಲಂ
  ಪರದಂಡ ಚಂಗಪ್ಪನವರ ದೇವರು:ಅಬ್ದುಲ್ ರಶೀದ್ ಅಂಕಣ
  ಮುಂಗಾಮಿ ಹಿಂಗಾಮಿ ತದ್ರೂಪಗಳು:ತಿರುಮಲೇಶರ ವಾರದ ಬರಹ