ಮೇ ೨೨, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಪೆಜತ್ತಾಯರ ಬೇಸಾಯದ ಬದುಕು:ಇಂದಿನ ಗ್ರಾಮೀಣ ಜೀವನ    
ಎಸ್.ಎಂ. ಪೆಜತ್ತಾಯ
ಗುರುವಾರ, 7 ಜೂನ್ 2012 (03:16 IST)

ಬೇಸಾಯ ಬದುಕಿನ ಸಂಸಾರಗಳ ಜೀವನದ ಅಂದು, ಇಂದು, ನಾಳೆಗಳ ಕುರಿತು ಪೆಜತ್ತಾಯರು ಬರೆಯುತ್ತಿರುವ ಲೇಖನ ಮಾಲೆಯ ಎರಡನೆ ಕಂತು.

ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ರಾಜ್ಯದ ಗ್ರಾಮೀಣ ಬದುಕು ಬಹಳವಾಗಿ ಬದಲಾಯಿಸಿದೆ. ಇದಕ್ಕೆ ಕಾರಣ ವಿದ್ಯುದೀಕರಣ, ರಸ್ತೆ ಮತ್ತು ಸಾರಿಗೆ, ದೂರವಾಣಿ, ದೂರದರ್ಶನ, ಉಪಗ್ರಹ ದೂರದರ್ಶನ, ವಿಸ್ತರಿಸುತ್ತಿರುವ `ಕೊಳ್ಳುವವನ ಮಾರುಕಟ್ಟೆ’ ಮತ್ತು ಸಾಧಾರಣವಾಗಿ ಪ್ರತೀ ಹೋಬಳಿಯಲ್ಲಿ ಶುರುವಾಗಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಮತ್ತು ವಿಸ್ತೃತವಾಗಿ ದೊರೆಯುತ್ತಿರುವ ಕಾಲೇಜ್ ವಿದ್ಯಾಭ್ಯಾಸ. 

ಹಳ್ಳಿ ಎಂಬ ಪೇಟೆ
ಹಳ್ಳಿಯ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿದೆ. ಹಳ್ಳಿಯ ಮಧ್ಯಮ ವರ್ಗದವರ ಮನೆಗಳಲ್ಲಿ ದ್ವಿಚಕ್ರ ವಾಹನಗಳು ನಿತ್ಯ ಬಳಕೆಯಲ್ಲಿವೆ. ಅನುಕೂಲವಂತರ ಮನೆಗಳಲ್ಲಿ ಕಾರು ಜೀಪುಗಳ ಬಳಕೆ ಇದೆ. ಜನಸಾಮಾನ್ಯರ ಓಡಾಟಕ್ಕೆ ಕೂಡ ಹಳ್ಳಿ ಊರುಗಳಿಗೆ ಬಸ್ಸುಗಳ ಸಂಚಾರ ಹೆಚ್ಚಿದೆ. ಅದಲ್ಲದೆ ಖಾಸಗಿ ವ್ಯಾನುಗಳು ಜನಸಾಮಾನ್ಯರ ಒಡಾಟಕ್ಕೆ ಮತ್ತು ಸರಕು ಸಾಗಣೆಗೆ ದೊರೆಯುತ್ತಿವೆ. ಪೇಟೆಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ತ್ರಿಚಕ್ರಿ `ಆಟೋರಿಕ್ಷಾ’ ಈಗ ಸರ್ವ ವ್ಯಾಪಿ ವಾಹನವಾಗಿದೆ. ಹಳ್ಳಿಯ ಪ್ರತ್ಯೊಬ್ಬ ಸಂಸಾರಿಯೂ `ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು' ಎಂಬ ನಿರ್ಧಾರ ಮಾಡಿರುವುದು ಸರ್ವ ವ್ಯಾಪಿಯಾಗಿ ಗೋಚರವಾಗುತ್ತಿದೆ. ಬೆಳಗ್ಗೆ ಎದ್ದರೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಮಕ್ಕಳು ಠೀಕಾಗಿ  ಯೂನಿಫಾರಂ ಧರಿಸಿ ತರಹೇವಾರಿ ವಾಹನಗಳಲ್ಲಿ ಮತ್ತು ಸಾರ್ವಜನಿಕ ಬಸ್ಸುಗಳಲ್ಲಿ ಶಾಲೆಗೆ ಹೊರಡುತ್ತಿರುವುದು ದೈನಂದಿನ ದೃಶ್ಯ. ಇದು ಸಂತೋಷ ನೀಡುವ ದೃಶ್ಯ. ವಿದ್ಯಾರ್ಜನೆಯ ಬಗ್ಗೆ ಜನರು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ವಾಹನ ಸೌಕರ್ಯವಿರುವುದರಿಂದ ಹಳ್ಳಿಯ ಯುವಜನರು ತಮ್ಮ ತಮ್ಮ ಮನೆಗಳಲ್ಲೇ ವಾಸಿಸುತ್ತಾ ಹತ್ತಿರದ ಶಾಲೆ ಕಾಲೇಜುಗಳಿಗೆ ಹೋಗಿಬರುವುದು ಸಾಮಾನ್ಯ ದೃಶ್ಯವಾಗಿಬಿಟ್ಟಿದೆ. 

ಬದಲಾದ ಹಳ್ಳಿಯ ಜೀವನ ಶೈಲಿ
ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಗ್ರಾಮೀಣ ಜನರು ಬೇಗನೆ ಮಲಗಿ ಬೇಗನೆ ಎದ್ದು ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಹಳ್ಳಿಗಳು ಸಾಯಂಕಾಲ ಎಂಟು ಎಂಟೂವರೆ ಗಂಟೆಗೆ ನಿದ್ರೆಯಲ್ಲಿ ಮುಳುಗಿರುತ್ತಿದ್ದ ಕಾಲವೊಂದಿತ್ತು.

ತದನಂತರ ಹಳ್ಳಿ ಹಳ್ಳಿಗೂ ವಿದ್ಯುತ್ ಹರಿದು ಬಂತು. ವಿದ್ಯುತ್ ಬೆಳಕಿನಲ್ಲಿ ಜನರು ಆರಾಮಾಗಿ ಓದುತ್ತಾ, ಹರಟೆ ಹೊಡೆಯುತ್ತಾ, ರೇಡಿಯೊ ಟೇಪ್ ರೆಕಾರ್ಡರ್ ಮೊದಲಾದುವನ್ನು ಕೇಳುತ್ತಾ ಸ್ವಲ್ಪ ತಡವಾಗಿ ಮಲಗಿ ನಿದ್ರಿಸಲು ಶುರು ಮಾಡಿದರು. ಆಮೇಲೆ ಬಂತು ಟೀವಿ, ಟೀವಿಯ ಬೆನ್ನಿಗೆ ವಿವಿಆರ್, ತದನಂತರ ಧಾಳಿಯಿಟ್ಟುವು  `ಡಿಶ್ ಅಂಟೆನಾ'  ಮತ್ತು ಉಪಗ್ರಹ ಟೀವಿ `ಚಾನಲ್'ಗಳು!  ಮನೆಯ ಪ್ರತಿಯೊಬ್ಬರಿಗೂ ಒಂದೊಂದು ಚಾನಲ್ ಇಷ್ಟ. ಶುರುವಾಯಿತು ಅಹೋ ರಾತ್ರಿ ಟೀವಿ ವೀಕ್ಷಣೆ. ಮಧ್ಯೆ ವಿದ್ಯುತ್ ವ್ಯತ್ಯಯವಾಗಲು ಶುರುವಾದರೆ ಹೆಚ್ಚಿನ ಗ್ರಾಮೀಣ ಮನೆಗಳಲ್ಲಿ `ಜೆನ್ ಸೆಟ್' ಕೂಡಾ ಸ್ಥಾಪಿಸಲ್ಪಟ್ಟವು. ಡಿಶ್ ಆಂಟೆನಾ, ಉಪಗ್ರಹ ಟೀವಿ ಶ್ರೀಮಂತ ಹಾಗೂ ಮಧ್ಯಮ ವರ್ಗದ ಮನೆಗಳಲ್ಲಿ ರಾರಾಜಿಸಿತು. `ವೀ ಸಿ ಆರ್'ಗಳು ಗ್ರಾಮೀಣ ಜನರಿಗೆ ಮನೆಯಲ್ಲಿ ಕುಳಿತೇ ಸಿನೆಮಾಗಳನ್ನು ನೋಡಿ ಆನಂದಿಸುವ ಅವಕಾಶ ಮಾಡಿಕೊಟ್ಟವು. ಹಳ್ಳಿಗಳಲ್ಲಿ ಕೂಡಾ ಕೇಬಲ್ ಟೀವಿ ಮತ್ತು ವೀಡಿಯೋ ಲೈಬ್ರರಿಗಳು ಹುಟ್ಟಿಕೊಂಡುವು. ಈ ತೆರನಾದ ಟೀವಿಯ ಭರಾಟೆಯ ನಡುವೆ ಹಳ್ಳಿಯ ದೈನಂದಿನ ಕಾರ್ಯಕ್ರಮಗಳಾದ ದೇವರ ಭಜನೆ, ಮಕ್ಕಳ ಬಾಯಿಪಾಠ ಕಾರ್ಯಕ್ರಮ ಮತ್ತು ಸಂಜೆ ಎಲ್ಲರೂ ಒಟ್ಟಿಗೆ ಕುಳಿತು ಉಣ್ಣುವ ಸೌಹಾರ್ದಪೂರ್ಣ ಪರಿಪಾಠ ಹೆಚ್ಚಿನ ಮನೆಗಳಲ್ಲಿ ನಿಂತೇ ಹೋಯಿತು. ಸಾಯಂಕಾಲದ ಊಟವನ್ನು  ಹೆಚ್ಚಿನ ಮನೆಮಂದಿ ಕೈತಟ್ಟೆ ಹಿಡಿದು ಟೀವಿಯ ಮುಂದೆ ಮಾಡತೊಡಗಿದರು. ಪೇಟೆಯ ಮನೆಗಳಂತೆಯೇ ಹಳ್ಳಿಮನೆಗಳ ಕ್ರಮ ಕೂಡಾ ಬದಲಾದವು. ಪೇಟೆಯಾಗಲೀ, ಹಳ್ಳಿಯಾಗಲೀ, ಶಾಲೆಗೆ ಹೋಗದ ಚಿಕ್ಕ ಮಗು ಕೂಡಾ ರಾತ್ರಿ ಹನ್ನೊಂದರ ತನಕ ಜಾಗರ ಮಾಡುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ.

ವಿದ್ಯಾಭ್ಯಾಸ
ಇದರ ಅರ್ಥ ಈಗಿನ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದಿರುವರೆಂದಲ್ಲ. ಅವರು ಈ ವಾತಾವರಣಕ್ಕೆ ಹೊಂದಿಕೊಂಡೇ ಓದು ಮುಂದುವರೆಸಿದ್ದಾರೆ. ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಹಲವಾರು ವಿದ್ಯಾರ್ಥಿಗಳು ಇತ್ತೀಚೆಗೆ ಕೇಬಲ್ ಟೀವಿ ಹಾಕಿಕೊಂಡೇ ಓದುತ್ತಿರುವುದನ್ನು ನೋಡಿದ್ದೇನೆ. ಅವರ ಪೋಷಕರನ್ನು ಕೇಳಿದರೆ ಅವರು `ಈ ವಿದ್ಯಾರ್ಥಿಗಳು ಯಾವಾಗಲೂ ಮೊದಲ ದರ್ಜೆಯಲ್ಲೇ ಪಾಸಾಗುತ್ತಾರೆ, ಆದ್ದರಿಂದ ತಾವೇನೂ ಅವರ ಈ ಚರ್ಯೆಯನ್ನು ವಿರೋಧಿಸುತ್ತಿಲ್ಲ’ ಎನ್ನುತ್ತಾರೆ. ಈಗಿನ ಎಳೆಯರು ಬುದ್ಧಿವಂತರು ಮತ್ತು ಜ್ಞಾನದಾಹಿಗಳು. ಅವರಿಗೆ ಓದಿ ತಿಳಿಯಲು ಗ್ರಂಥಾಲಯಗಳು ಇವೆ. ಹಲವಾರು ಪುಸ್ತಕಗಳು ಲಭ್ಯವಿವೆ. ಪ್ರಾಥಮಿಕ ಶಾಲಾ ಮಕ್ಕಳು ಕೂಡಾ ಈ ದಿನಗಳಲ್ಲಿ ಅಂತರ್ಜಾಲದ ಬಳಕೆ ಮಾಡಿ ಜ್ಞಾನ ಸಂಗ್ರಹಣೆ ಮಾಡುತ್ತಾರೆ. ಈಗಿನ ವಿದ್ಯಾರ್ಥಿಗಳಿಗೆ ಓದುವ ಹಠ ಇದೆ. ಸ್ಪರ್ಧಾತ್ಮಕವಾದ ಈ ದಿನಗಳಲ್ಲಿ ತಾವು ಚೆನ್ನಾಗಿ ಓದಿ ಪೈಪೊಟಿಯಿಂದ ತಮಗೆ ಇಷ್ಟವಾದ ವಿಷಯಗಳಲ್ಲಿ ಪರಿಣತಿ ತೋರಿಸಿ ಶಾಲಾ ಕಾಲೇಜುಗಳಲ್ಲಿ ಓದಬೇಕು ಎಂಬ ಛಲ ಇದೆ. ಈ ರೀತಿಯ ಛಲದ ಮನೋಭಾವ ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ಕಂಡು ಬರುತ್ತಿದೆ. ಇದು ಬಹಳ ಉತ್ತಮವಾದ  ಮನೋಭಾವ.

ಬದಲಾದ ದಿನಚರಿ
ಗ್ರಾಮೀಣ ಜನತೆ ಕೂಡಾ ರಾತ್ರಿ ತಡವಾಗಿ ಮಲಗುವುದರಿಂದ ಬೆಳಗ್ಗೆ ಬೇಗನೇ ಏಳುವ ಹವ್ಯಾಸ ಕೂಡಾ ಹಳ್ಳಿಗಳಲ್ಲಿ ದೂರವಾಗುತ್ತಿದೆ. ಬೆಳಗಿನ ಜಾವಕ್ಕೇ ಎದ್ದೇಳುತ್ತಿದ್ದ ರೈತಾಪಿ ಜನರು ಸೂರ್ಯ ದರ್ಶನವಾದ ಮೇಲೆಯೇ ಏಳುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದೆ. ಹಿಂದಿನ ಕಾಲದಲ್ಲಿ ಗದ್ದೆಗಳಿಗೆ ನೀರು ಹಾಯಿಸಲು, ಜಾನುವಾರುಗಳ ರಖೋಲೆ ಮಾಡಲು ಜನ ಬೇಗನೇ ಏಳಬೇಕಾಗುತ್ತಿತ್ತು. ಈಗ ಗ್ರಾಮೀಣ ಪ್ರದೇಶದ ಹೆಚ್ಚಿನ ಮನೆಗಳಲ್ಲಿ ದನ ಕರುಗಳೇ ಇಲ್ಲ. ಇದ್ದರೂ ಅನಿವಾರ್ಯವಾಗಿ ಸಾಕಿಕೊಂಡ ಒಂದೆರಡು ದನಕರುಗಳು ಮಾತ್ರ. ಹಳ್ಳಿಗಳಲ್ಲೂ ಅಡುಗೆಯ ಗ್ಯಾಸ್ ಇಂದು ಲಭ್ಯ ಇದೆ. ನವೀನ ಉಪಕರಣಗಳ ಬಳಕೆ ಹೆಚ್ಚಿರುವುದರಿಂದ ಮನೆಕೆಲಸಗಳಿಗೆ ಜಾಸ್ತಿ ಸಮಯ ಬೇಕಾಗುತ್ತಿಲ್ಲ.

ಗ್ರಾಮೀಣ ಹೆಂಗಸರಿಗೂ ಈಗ ಸ್ವಲ್ಪ ಬಿಡುವು ಸಿಗುತ್ತಿದೆ. ವಿದ್ಯುತ್ ಉಪಕರಣಗಳು, ವಿದ್ಯುತ್ ಒಲೆ, ಅಡುಗೆಗೆ ಸೌದೆಯ ಬದಲಿಗೆ ಗೋಬರ್ ಗ್ಯಾಸ್, ಪೆರ್ಟೋಲಿಯಮ್ ಗ್ಯಾಸ್ ಇವುಗಳ ಬಳಕೆ ಈಗ ಹೆಚ್ಚುತ್ತಿದೆ. ಹಳ್ಳಿಗಳಿಗೂ ಈಗ ಬೆಳಗಿನ ಹೊತ್ತೇ ದಿನದ ವಾರ್ತಾಪತ್ರಿಕೆ ಮತ್ತು ಪ್ಯಾಕೆಟ್ ಹಾಲು ಬಂದು ತಲುಪುತ್ತಿವೆ. ಕೆಲವು ವರ್ಷಗಳ ಹಿಂದೆ ಈ ಸೌಲಭ್ಯಗಳನ್ನು ಗ್ರಾಮೀಣ ಜನತೆಗೆ ಯೋಚಿಸಲೂ ಸಾಧ್ಯವಿರಲಿಲ್ಲ. ಗದ್ದೆ ಹೂಡಲು ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ ಗಳು ಅನುಕೂಲ ಎನಿಸಿದೆ. ಕೊಟ್ಟಿಗೆ ಗೊಬ್ಬರಕ್ಕೆ ಸ್ವಲ್ಪ ತತ್ವಾರವಾದರೆ ಏನಂತೆ?  `ರಾಸಾಯನಿಕ ಗೊಬ್ಬರ ಗದ್ದೆಗೆ ಚೆಲ್ಲಿದರಾಯಿತು’ ಎಂಬ ಮನೋಭಾವ ಹಳ್ಳಿಗಳಲ್ಲಿ ಕಾಣುತ್ತಿದೆ. ಜಾನುವಾರುಗಳ ಸಂಖ್ಯೆ ಕ್ಷೀಣಿಸಲು  ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂದು ಹುಲ್ಲುಗಾವಲುಗಳ ಕೊರತೆ, ಹಸಿರು ಮೇವಿನ ಕೊರತೆ ಎದ್ದು ಕಾಣುತ್ತಿವೆ. ಇಂದಿನ ರೈತರಿಗೆ ಹಿಂದಿನಂತೆ ತಮ್ಮ ಮನೆಗಳಲ್ಲೇ ದನಕರು ಕಟ್ಟಿ ಹಾಲು ಕರೆದು ಉಣ್ಣಬೇಕಿಲ್ಲ. ಮದರ್ ಡೈರಿಯ ಹಾಲು ಬೆಳಗಾದರೆ ಮನೆ ಬಾಗಿಲಿಗೇ ಬರುತ್ತಿದೆ. ಈ `ನಿರ್ಧರಿತ ಗುಣಮಟ್ಟದ ಹಾಲು'  ಹಳ್ಳಿಗಳ ಜನರಿಗೆ ಕೂಡಾ ಮೆಚ್ಚಿಗೆ ಆಗುತ್ತಿದೆ. ರಸ್ತೆ ಸಂಪರ್ಕ ಉತ್ತಮಗೊಂಡಿದ್ದು ವಾಹನಗಳ ಸಂಖ್ಯೆ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಈಗ ಉತ್ತಮ ಗುಣಮಟ್ಟದ ದಿನಸಿ, ಬಟ್ಟೆಬರೆ, ನಿತ್ಯೋಪಯೋಗಿ ವಸ್ತುಗಳು ಮತ್ತು ಉತ್ತಮ ತರಕಾರಿ ದೊರೆಯುತ್ತಿವೆ. ಇದರಿಂದಾಗಿ ಹಳ್ಳಿಗಳಲ್ಲಿ ಹಿಂದಿನಂತೆ ಮನೆಗೆ ಬೇಕಾದ ತರಕಾರಿ ಬೆಳೆಯುವ ಹವ್ಯಾಸ ಕಡಿಮೆಯಾಗುತ್ತಿದೆ.

ಅಟ್ಟ ಸೇರಿದ ಬೀಸುವ ಕಲ್ಲು
ಹಿಂದಿನ ಕಾಲದ ಬೀಸುವ ಕಲ್ಲು, ರುಬ್ಬುವ ಕಲ್ಲು, ಒರಳು ಒನಕೆಗಳೆಲ್ಲಾ ಹೆಚ್ಚಿನ ಗ್ರಾಮೀಣ ಮನೆಗಳಲ್ಲಿ ಮೂಲೆ ಸೇರಿವೆ. ಹಳ್ಳಿ ಪ್ರದೇಶಗಳಲ್ಲಿಯೂ ಅಕ್ಕಿ ಗಿರಣಿಗಳು, ಹಿಟ್ಟಿನ ಮಿಲ್ಲುಗಳು ಇವೆ. ಹೆಚ್ಚಿನ ಮನೆಗಳಲ್ಲಿ ಮಿಕ್ಸಿಗಳು `ಗ್ರೈಂಡರ್' ಗಳು ನಿತ್ಯ ಬಳಕೆಯಲ್ಲಿವೆ. ಹೆಚ್ಚಿನ ಹಳ್ಳಿಗಳಲ್ಲಿ ಪೈಪ್ ಮೂಲಕ ಹರಿಯುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಕಾರ ಮಾಡಿಸಿಕೊಟ್ಟಿದೆ.  ಹೊಲಗಳಿಗೆ ನೀರುಣಿಸಲು ಮತ್ತು ಮನೆಯ ಅಗತ್ಯಗಳಿಗೆ ಬೇಕಾದ ನೀರು ಒದಗಿಸಲು ಪಂಪುಗಳಿವೆ. ಹಳ್ಳಿಗಳಲ್ಲೂ ಪೇಟೆಯ ಮನೆಗಳಂತೆ `ಕರೆಂಟ್' ಇಲ್ಲದ ಪಕ್ಷದಲ್ಲಿ ಮನೆಯೊಳಗೆ ಕೋಲಾಹಲ ಉಂಟಾಗುವುದು ಈಗ ಸಾಮಾನ್ಯ.

ಹಳ್ಳಿಯ ಯುವಜನರ ವಿದ್ಯಾಭ್ಯಾಸ ಮಟ್ಟ ಹೆಚ್ಚುತ್ತಿದಂತೆ ಗ್ರಾಮೀಣರ ನಡೆ ನುಡಿಗಳಲ್ಲೂ ಬದಲಾವಣೆ ಕಾಣುತ್ತಿದೆ. ಆಧುನಿಕ ವೇಷ ಭೂಷಣಗಳು ಹಳ್ಳಿಗಳಲ್ಲೂ ಸಾಮಾನ್ಯವಾಗಿ ಕಾಣುತ್ತಿವೆ. ವೃತ್ತಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಜನಸಾಮಾನ್ಯರ ತಿಳುವಳಿಕೆ ಹೆಚ್ಚಿದೆ. ಹಳ್ಳಿಗರಲ್ಲಿ  ಕೂಡಾ `ಪೇಟೆಯವರಿಗೆ ಸರಿಸಮವಾಗಿ ಬಾಳು ನಡೆಸಿಯೇವು' ಎಂಬ ಭಾವನೆ ಅಂಕುರಿಸುತ್ತಿದೆ. ಪೇಟೆಯವರಿಗೆ ಮಾತ್ರ ಮೊದಲು ಲಭ್ಯವಾಗುತ್ತಿದ್ದ ಟೀವಿ ಮೊದಲಾದ ದೃಶ್ಯ ಮಾಧ್ಯಮಗಳು ಈಗ ಹಳ್ಳಿಯವರಿಗೂ ಲಭ್ಯ. ಯಾವ ಹಳ್ಳಿಗನೂ ಇಂದು ತನಗೆ `ಸಾಮಾನ್ಯ ಜ್ಞಾನ ಕಡಿಮೆ ಇದೆ' ಎಂಬ ಕೀಳರಿಮೆ ಹೊಂದಿರಬೇಕಾಗಿಲ್ಲ. ಹಳ್ಳಿಗಳಲ್ಲೂ ಕಡಿಮೆ ದೈಹಿಕ ಶ್ರಮದ ಸುಖಜೀವನ ಸಾಧ್ಯವಾಗುತ್ತಿದೆ. ಇದು ತುಂಬಾ ಸಂತೋಷಕರ ಬೆಳವಣಿಗೆ.

ಇಂದು ಎಲ್ಲರ ಮುಖವೂ ಪಟ್ಟಣಗಳ ಕಡೆಗೆ
ಸ್ನಾತಕ ಜನರಿಗೆ, ವಿದ್ಯಾವಂತರಿಗೆ ಪೇಟೆಗಳಲ್ಲಿ ಉದ್ಯೋಗಾವಕಾಶ ಹೆಚ್ಚು ಇದ್ದುದರಿಂದ, ವಿದ್ಯಾವಂತ ಯುವಜನರು ಈ ಉದ್ಯೋಗ ಅವಕಾಶಗಳ ಹಿಂದೆ ಬಿದ್ದು ಪೇಟೆಗಳನ್ನು ಸೇರುತ್ತಿದ್ದರು. ಓದಿದ ಯುವ ಪೀಳಿಗೆಗೆ  ಹಳ್ಳಿಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿರಲಿಲ್ಲ. ಅದೇ `ಹಳೆಯ  ವ್ಯವಸಾಯ ಇಲ್ಲವೆ ಅದೇ ಚಿಕ್ಕಪುಟ್ಟ ವ್ಯಾಪಾರ’ ಇವು ಇಂದಿನ ವಿದ್ಯಾವಂತ ಯುವಜನರನ್ನು ಆಕರ್ಷಿಸುತ್ತಿಲ್ಲ. ಆದಲ್ಲದೆ ಪಟ್ಟಣಗಳಲ್ಲಿನ ಜೀವನ ವೈವಿಧ್ಯ, ಮನರಂಜನಾ ವೈವಿಧ್ಯ ಮತ್ತು ಅಲ್ಲಿ ಸಿಗುವ ಆಹಾರ ವೈವಿಧ್ಯ ಹಳ್ಳಿಗಳಲ್ಲಿಲ್ಲ. ಪಟ್ಟಣದ ಥಳುಕಿನ ಜೀವನ ಹಳ್ಳಿಗಳಲ್ಲಿ ಇಲ್ಲ.

ತದ್ರೀತಿಯಾಗಿ ಹಳ್ಳಿಗಳಲ್ಲಿ ಉಸಿರುಕಟ್ಟಿಸುವ ವಾಹನ ದಟ್ಟಣೆ ಇಲ್ಲ. ವಾಯು ಮಾಲಿನ್ಯವಿಲ್ಲ. ಜನದಟ್ಟನೆಯ ಸಂತೆಯೊಳಗಣ ಜೀವನ ಶೈಲಿ ಇಲ್ಲ.

ಈ ಎಲ್ಲಾ ಬದಲಾವಣೆಗಳು ಕಾಲಕ್ರಮೇಣ ಬಂದವುಗಳೇ. ಇವಕ್ಕೆ ನಮ್ಮೆಲ್ಲರ ಸ್ವಾಗತ ಇದೆ. ಗ್ರಾಮೀಣರು ಜೀವನ ಶೈಲಿಯನ್ನು ಬದಲಿಸಿ ಹಿಂದಿನ ಹಿಟ್ಟು ಬೀಸೋಕಾಲಕ್ಕೆ ಹೋಗಬೇಕಾಗಿಲ್ಲ. ಆದರೆ ಈಗಿನ ಗ್ರಾಮೀಣ ಜೀವನದ ಬಗ್ಗೆ ಮತ್ತು ಗ್ರಾಮೀಣ ಉದ್ಯೋಗಗಳ ಬಗ್ಗೆ ನಾವು ಸ್ವಲ್ಪ ಹೆಚ್ಚಿಗೆ ಚಿಂತಿಸಲೇ ಬೇಕಾಗಿದೆ.

ವಿದ್ಯಾವಂತ ಯುವಜನರು ಪಟ್ಟಣ ಸೇರುತ್ತಾ ಇರುವಾಗ, ಅಷ್ಟು ವಿದ್ಯಾವಂತರಲ್ಲದ ಯುವಜನರು ಪೂರಕ ಉದ್ಯೋಗಗಳ ಮೇಲೆ ಕಣ್ಣಿಟ್ಟು ಪಟ್ಟಣಗಳನ್ನು ಸೇರುತ್ತಾ ಇದ್ದಾರೆ. ಇಂದಿನ ಕಟ್ಟಡಗಳನ್ನು ಕಟ್ಟುವ ಬೃಹತ್ ಉದ್ಯಮದಲ್ಲಿ, ಗಾರ್ಮೆಂಟ್ ತಯಾರಿಯ ಉದ್ಯಮದಲ್ಲಿ, ಆಫೀಸ್ ಮೊದಲಾದುವನ್ನು ಸ್ವಚ್ಛವಾಗಿ ಇರಿಸುವ ಉದ್ಯಮಗಳಲ್ಲಿ ಅಲ್ಪ ಸ್ವಲ್ಪ ಓದಿಕೊಂಡ ಗ್ರಾಮೀಣ ಜನರೇ ಸಿಂಹಪಾಲು ವಹಿಸಿಕೊಂಡಿದ್ದಾರೆ. ಸೆಕ್ಯೂರಿಟಿ ಉದ್ಯಮ ಮತ್ತು ಹೋಟೆಲ್ ಉದ್ಯಮದಲ್ಲೂ ಇವರ ಪಾಲು ಗಣನೀಯ. ಪಟ್ಟಣಗಳಲ್ಲಿ ಅವರಿಗೆ ಪ್ರತೀ ದಿನವೂ ದುಡಿಯುವ ಅವಕಾಶ ಇದೆ. ಹಳ್ಳಿಗಳಲ್ಲಿ ಇದ್ದಾಗ ಅವರನ್ನು ನಿರುದ್ಯೋಗ ಸಮಸ್ಯೆ ಸದಾ ಕಾಡುತ್ತಾ ಇತ್ತು. ಒಮ್ಮೆ ಪಟ್ಟಣ ಸೇರಿದ ಜನರು ಪುನಹಾ ಹಳ್ಳಿಗಳಿಗೆ ಹೋಗಲು ಬಯಸುವುದಿಲ್ಲ.

ಎಂದು ಹುಟ್ಟೀತು ತಮ್ಮ ನೆಲದ ಪ್ರೀತಿ?
ಇಂದಿನ ಗ್ರಾಮೀಣ ಯುವಜನರಿಗೆ ಪಟ್ಟಣವಾಸದ ಆಕರ್ಷಣೆ ಸ್ವಲ್ಪ ಕಡಿಮೆಯಾಗಬೇಕು. ತಮ್ಮೂರ ನೆಲ ಜಲಗಳಲ್ಲಿ ಸ್ವಲ್ಪ ಪ್ರೀತಿ ಹುಟ್ಟಬೇಕು. ರಾಸಾಯನಿಕ ಬೇಸಾಯ ಕಡಿಮೆ ಮಾಡಿ ಸಮನ್ವಯ ರೀತಿಯಿಂದ ಬೇಸಾಯ ಮಾಡಲಾದರೂ ಬೇಕು. ರಾತೋರಾತ್ರಿ ಇಂದು ಸಾವಯವ ಬೇಸಾಯಕ್ಕೆ ಹಿಂದಿರುಗಲು ಸಾಧ್ಯವಿಲ್ಲ. ಗ್ರಾಮೀಣರು ಇಂದು ಜಾನುವಾರು ದನಕರು ಸಾಕಣೆ ಜಾಸ್ತಿ ಮಾಡಿ, ತಮ್ಮ ಜಮೀನಿನಲ್ಲಿ ಹೆಚ್ಚಿನ ಗಿಡ ಮರಗಳನ್ನು ನೆಡಬೇಕು. ಪ್ರತೀ ರೈತನು ತನ್ನ ಮನೆಗೆ ಬೇಕಾದ ಹಾಲು ಹೈನು ತರಕಾರಿಗಳನ್ನು ಕಡ್ಡಾಯವಾಗಿ ಉತ್ಪಾದಿಸಬೇಕು. ತನ್ನ ಹೊಲಕ್ಕೆ ಬೇಕಾದಷ್ಟು ತಿಪ್ಪೇ ಗೊಬ್ಬರವನ್ನು ತಾನೇ ಉತ್ಪಾದಿಸಲೇಬೇಕು. ಹೈನುಗಾರಿಕೆ, ಕುರಿ ಸಾಕಣೆ, ಕೋಳಿ ಸಾಕಣೆಗಳನ್ನು ಉಪವೃತ್ತಿಯಾಗಿಸಿಕೊಂಡು ಈಗ ಸಿಗುತ್ತಿರುವ ಈ  ಬಿಡುವಿನ ಸಮಯವನ್ನು ಸದುಪಯೋಗ ಮಾಡಬೇಕು.

ಊರವರೊಡನೆ ಸೇರಿಕೊಂಡು ಸೌಹಾರ್ಧ ಬಾಳುವೆ ಮಾಡಬೇಕು. ಹಿಂದಿನ ಕಾಲದಲ್ಲಿದ್ದಂತೆ `ಊರವರೆಲ್ಲರೂ ಒಂದೇ' ಎಂಬ ಭಾವ ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಹರ್ಷಚಿತ್ತರಾಗಿ ಬಾಳಲು ಪ್ರಯತ್ನಿಸಬೇಕು. `ನಾವು ಮತ್ತು ನಮ್ಮ ಊರ’ ಎಂಬ ಭಾವ ಬೆಳೆಯಬೇಕು. ಇಂದಿನ ಹಳ್ಳಿಗರ ಧೋರಣೆ ಏನೆಂದರೆ `ನಾನು, ನನ್ನ ಹೊಲ ಮತ್ತು ನನ್ನ ಸಂಸಾರ' ಎಂಬ ಭಾವ ಗ್ರಾಮೀಣ ಜನರಲ್ಲಿ ಜಾಸ್ತಿಯಾಗುತ್ತಿದೆ.  ಪರಸ್ಪರ ಸಂಭಾಷಣೆ ಕೂಡಾ ಕಡಿಮೆಯಾಗುತ್ತಿದೆ.ದಶಕಗಳ ಹಿಂದೆ, ಪಕ್ಕದ ಹೊಲದ ರೈತನ ದನ ಪರಾಮೋಷದಿಂದ ತನ್ನ ಹೊಲ ಮೇಯಲು ನುಗ್ಗಿದರೆ, ಸದ್ರಿ ರೈತ ಅದನ್ನು ನೆರೆಮನೆಯವನ ಹಟ್ಟಿಯ ವರೆಗೆ ಅಟ್ಟಿಕೊಂಡು ಹೋಗಿ ಆತನ ಮನೆ ಮುಟ್ಟಿಸುವ ಸೌಜನ್ಯ ತೋರುತ್ತಿದ್ದ. ಈಗ ಈ ಕ್ರಮ ಮಾಯವಾಗುತ್ತಾ ಬರುತ್ತಿದೆ. ಬದಲಾಗಿ ಪಕ್ಕದ ಮನೆಯ ರೈತನ ಮನೆಗೆ ದೂರವಾಣಿ ಕರೆ ಮಾಡಿ ಸುಖಾ ಸುಮ್ಮನೆ ಜಗಳವಾಡುವ ಪ್ರವೃತ್ತಿ ಹೆಚ್ಚುತ್ತಿದೆ.

ಹಳ್ಳಿಗಳಲ್ಲಿ ಇಂದು ಪರಿಸರ ಮಾಲಿನ್ಯ ಹೆಚ್ಚಿದೆ
ಹಿಂದೆ ಹಳ್ಳಿಗಳಲ್ಲಿ ಕುಡಿಯುವಾತನಿಗೆ ಊರಲ್ಲೇ ಮರ್ಯಾದೆ ಇರಲಿಲ್ಲ. ಗುಟ್ಕಾ ಚಟದ ಹೆಸರೇ ಕೇಳಿ ಗೊತ್ತಿರಲಿಲ್ಲ. ಯುವಜನರು ಹಿರಿಯರ ಎದುರು ಎಲೆಅಡಿಕೆ ಹಾಕಿಕೊಳ್ಳಲು ಅಂಜುತ್ತಿದ್ದ ಕಾಲವೊಂದಿತ್ತು. ಸರಾಯಿ ಮಾರುವ ಪಡಖಾನೆಗಳು ಊರ ಹೊರಗಿರುತ್ತಿದ್ದುವು. ಈಗ ಆ ಸಂಸ್ಕೃತಿ ಹಳ್ಳಿಗಳಿಂದ ಮಾಯವಾಗಿವೆ. ಎಲ್ಲಾ ಹಳ್ಳಿಗಳಲ್ಲಿ ಊರೋಳಗೇ ಸರಾಯಿ ಲಭ್ಯ. ಹೊತ್ತು ಗೊತ್ತಿಲ್ಲದ ಕುಡಿತಕ್ಕೆ ಕೂಡಾ ಯಾರೂ ಅಭ್ಯಂತರ ಮಾಡುವಂತಿಲ್ಲ. ಬೀಡಿ ಸಿಗರೇಟು ಗುಟ್ಕಾ ಸೇವನೆಗೆ ಯಾರೂ ಏನೂ ಹೇಳುವಂತಿಲ್ಲ. ಖಾಲಿ ಸರಾಯಿ ಪ್ಯಾಕೇಟ್, ಖಾಲಿ ಗುಟ್ಕಾ ಪ್ಯಾಕೇಟ್ ಗಳು ಸರ್ವಂತರ್ಯಾಮಿ ಕಸಗಳಾಗಿ ಹೊಲ ಗದ್ದೆಗಳನ್ನು ಮಲಿನಗೊಳಿಸುತ್ತಿವೆ. ಈ ಕೃತಕ ಕಸ ವಸ್ತುಗಳು ಜೀರ್ಣವಾಗಿ ಹೊಲಗದ್ದೆಗಳ ಮಣ್ಣಿಗೆ ಮಿಳಿತವಾಗಲು ನೂರಾರು ವರ್ಷಗಳೇ ಬೇಕಂತೆ. 

ಹಿಂದು ಹಳ್ಳಿಗಳಲ್ಲಿ ಮನೆಯ ಅಗತ್ಯಕ್ಕೆ ಬೇಕಾದ ಅಂಗಡಿ ಸಾಮಾನುಗಳನ್ನು ಕಾಗದದ ಪೊಟ್ಟಣಗಳಲ್ಲಿ ಕಟ್ಟಿ ಕೊಡುತ್ತಾ ಇದ್ದರು. ಹಾಗೆಯೇ, ಗ್ರಾಹಕರು ಅಂಗಡಿಗೆ ಹೋಗುವಾಗ ಒಂದು ಕೈಚೀಲ ಒಯ್ಯುತ್ತಾ ಇದ್ದರು. ಇಂದು ಗ್ರಾಹಕ ಕೈ ಬೀಸಿ ಅಂಗಡಿಗೆ ಹೋಗಿ ಬೇಕಾದ ಕಿರಾಣಿ ಸಾಮಾನುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಮನೆಗೆ ತರುತ್ತಾನೆ. ಪ್ಲಾಸ್ಟಿಕ್ಕಿನ ಖಾಲಿ ಚೀಲ ಪರಿಸರ ಮಾಲಿನ್ಯಕ್ಕೆ ಕಾರಣ ಅಗುತ್ತದೆ. ಅನಾವಶ್ಯಕ ಪ್ಲಾಸ್ಟಿಕ್ ದುರುಪಯೋಗ ಮಾಡುವ ಚಟ ನಿಲ್ಲಬೇಕು. ಇಂದು ಹಳ್ಳಿಗಳಲ್ಲೂ ಇತರೇ ಸಾಮಾನು ಬಿಡಿ, ಒಂದು ಸೋಪು ಬೇಕಾದರೂ ಒಂದು ಕ್ಯಾರಿ ಬ್ಯಾಗ್ ಕೇಳುವ ಅಭ್ಯಾಸ ಹೆಚ್ಚಿದೆ.

ಸಮಾನತೆಯ ದುರುಪಯೋಗ ಸಲ್ಲದು
ಈಗ ಎಲ್ಲೆಲ್ಲೂ ಸಮಾನತೆಯ ಕಾಲ. ಹಿರಿಯ ಕಿರಿಯ ಬಡವ ಬಲ್ಲಿದರೆಂಬ ಭೇದವಿಲ್ಲ. ಸರಿ, ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಈ ಸಮಾನತೆ ಮತ್ತು ಸ್ವಾತಂತ್ರ್ಯದ ಭಾವ ಇಂದಿನ ಯುವಜನರಲ್ಲಿ ಮತ್ತು ಜನ ಸಾಮಾನ್ಯರಲ್ಲಿ ಸ್ವೇಚ್ಛಾಚಾರಗಳಿಗೆ ಪ್ರಚೋದಕವಾಗಬಾರದು. ಧೂಮಪಾನ, ಗುಟ್ಕಾ ಚಟ ಹಾಗೂ ಕುಡಿತದ ಅಭ್ಯಾಸಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆಯಾಗಬೇಕು.

ಈಗಿನ ಯಾಂತ್ರೀಕರಣ ಹಾಗೂ ಸುಧಾರಣೆಗಳಿಂದ ಪ್ರತೀ ರೈತನಿಗೂ ಮೊದಲಿಗಿಂತ ಬಿಡುವು ಹೆಚ್ಚಿದೆ. ಇದರ ಸದುಪಯೋಗವನ್ನು ಇಂದಿನ ಗ್ರಾಮೀಣ ಯುವಜನತೆ ಮತ್ತು ಜನಸಾಮಾನ್ಯರು ಮಾಡಬೇಕು.  ಜನರು ಇತ್ತೀಚೆಗೆ ಬಲಿಯಾಗುತ್ತಿರುವ ಕುಡಿತ, ಧೂಮಪಾನ ಮತ್ತು ಸರ್ವವ್ಯಾಪಿ `ಗುಟ್ಕಾ ಚಟ'ಗಳನ್ನು ಕಡಿಮೆ ಮಾಡುವರೇ ಪ್ರಯತ್ನಿಸಬೇಕು. ಹಳ್ಳಿಗಳಲ್ಲಿಯೂ ಇಂದು ಬಾರ್, ಕ್ಲಬ್ ಮತ್ತು ರಿಸಾರ್ಟ್ ಇವು ತಲೆಯೆತ್ತಿವೆ. ಯುವಜನರು ಇವುಗಳನ್ನೇ ನೆಚ್ಚಿ ಸಮಯ ಮತ್ತು  ಹಣ ಪೋಲು ಮಾಡಬಾರದು.

ಹಳ್ಳಿಗರು ಇಂದು ಯಾರಿಗೂ ಕಡಿಮೆ ಇಲ್ಲ!
ಸಂತೋಷದ ವಿಚಾರವೆಂದರೆ ಇಂದಿನ ಗ್ರಾಮೀಣ ಜನತೆ ಯಾವುದರಲ್ಲೂ ಹಿಂದಿಲ್ಲ. ಆದರೆ ಯುವಜನರು ತಮ್ಮ ಉತ್ತಮ ವಿದ್ಯಾಭ್ಯಾಸದ ಗುಣಮಟ್ಟಗಳಿಂದಾಗಿ ಪಟ್ಟಣದ ಕೆಲಸಗಳ ಕಡೆಗೆ ಆಕರ್ಷಿತರಾಗಿ ಪಟ್ಟಣ ಸೇರುತ್ತಿದ್ದಾರೆ. ಸಾಮಾನ್ಯವಾಗಿ ಹೈಸ್ಕೂಲ್ ಕಲಿತ ಬಾಲಕ ಕೂಡಾ ಪಟ್ಟಣವಾಸಕ್ಕೆ ಒಲವು ತೋರುತ್ತಿದ್ದಾನೆ. ತನ್ನ ಹೊಲದ ಮೈಮುರಿತದ ದುಡಿಮೆ ಅವನಿಗೆ ಬೇಕಿಲ್ಲ. ಅವನಿಗೆ ತೀರ ಅಲ್ಪ ಸಂಬಳದ ಪಟ್ಟಣದ  ಉದ್ಯೋಗವಾದರೂ ಸರಿ, ಅದರದೇ ಆಕರ್ಷಣೆ!

ಅದೇ `ಬಿಳೇ ಕಾಲರ್' ಉದ್ಯೋಗದ ಆಸೆ! ಹಳ್ಳಿಯ ಕಿಶೋರಿಯರು ಕೂಡಾ ಪಟ್ಟಣ ವಾಸದ ಕನಸನ್ನೇ ಹೊತ್ತಿರುತ್ತಾರೆ. ಈಗೀಗ ನಾವು ಕಾಣುತ್ತಿರುವಂತೆ ಹಳ್ಳಿಗಳಲ್ಲಿ ಯುವಕರಾರೂ ನೆಲೆಸುತ್ತಿಲ್ಲ. ಎಲ್ಲೆಡೆಗೂ ಪಸರಿಸಿರುವ ವ್ಯಾಪಕ ವಿದ್ಯಾಭ್ಯಾಸ ಹಳ್ಳಿಗರಿಗೆ ಒಂದು ಶಾಪವಾಗಬಾರದಷ್ಟೇ?

ಪಟ್ಟಣ ವಲಸೆ ಏಕೆ?
ಇದಕ್ಕೆ ಕಾರಣ ಹಳ್ಳಿಯ ಜೀವನದ ಅನಿಶ್ಚಿತತೆ ಮತ್ತು ಅಭದ್ರತೆ. ಮಳೆಯಿದ್ದು ಸಮರ್ಪಕವಾದ ಬೆಳೆ ಬಂದರೆ, ಬೆಳೆದ ಬೆಳೆಗಳಿಗೆ ಸಮರ್ಪಕವಾದ ಬೆಲೆ ಇಲ್ಲ. ಬರ ಬಂದರೆ ಬೆಳೆಯೇ ಇಲ್ಲ. ನೀರಾವರಿ ಮಾಡೋಣ ಎಂದರೆ ವಿದ್ಯುತ್ ಇಲ್ಲ. ಇವುಗಳಿಗೆ ಪೂರಕವಾಗಿ ಜಾನುವಾರುಗಳಿಗೆ ಹಣ ತೆತ್ತರೂ ಅವಕ್ಕೆ ಬೇಕಾದ ಮೇವು ಲಭ್ಯವಿಲ್ಲ.
ಇದಕ್ಕೆ ಪೂರಕವಾಗಿ ಹಳ್ಳಿಯ ಯುವಜನರೆಲ್ಲಾ ಪೇಟೆ ಸೇರುತ್ತಿರುವುದರಿಂದ ಹೊಲದಲ್ಲಿ ದುಡಿಯುವ ಯುವಜನರಿಲ್ಲ. ಹಳ್ಳಿಗಳು ಕ್ರಮೇಣ ದುರ್ಬಲರು ಹಾಗೂ ವೃದ್ಧರು ನೆಲಸಿರುವ ತಾಣಗಳಾಗುತ್ತಿವೆ. 

ಯುವಜನರನ್ನು ನಿಲ್ಲಿಸಿಕೊಳ್ಳುವ ತ್ರಾಣ ಹಿರಿಯರಿಗಿಲ್ಲವಾಗಿದೆ. ಸ್ವಾತಂತ್ರ್ಯ ಬಂದಮೇಲೆ ನಮ್ಮ ರೈತ ನೋಡಿರುವುದು ಕಷ್ಟಪರಂಪರೆ ಮತ್ತು ತೀರಿಸಲಾಗದ ಸಾಲಗಳನ್ನು ಮಾತ್ರ. ಬೆಳೆ ಬಂದಾಗ ಬೆಲೆ ಇಲ್ಲ, ಬೆಲೆ ಬಂದಾಗ ಕೈಯಲ್ಲಿ ಬೆಳೆ ಇಲ್ಲ. ಕರ್ನಾಟಕದ ರೈತ ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಸಾಯುತ್ತಿದ್ದಾನೆ. ತಾನೊಂದು ದಿನ ಸುಖ ಕಂಡೇನೆಂಬ ಆಸೆ ಆತನಿಗೆ ಒಂದು `ಮರೀಚಿಕೆ'ಯಾಗಿದೆ. ಭೂಮಿ ತಾಯನ್ನು ನಂಬಿ ಕೆಟ್ಟೆನೆಂಬ ತಿಳುವಳಿಕೆ ಆತನಿಗೆ ಮನವರಿಕೆಯಾಗುತ್ತಾ ಬಂದಿದೆ. ಈಗ ಆತನು ತನ್ನ ಮಕ್ಕಳಿಗೆ `ಪಟ್ಟಣ ಸೇರಬೇಡಿರಿ’ ಎಂದು ಉಪದೇಶ ಕೊಡುವ ನೈತಿಕ ಧೈರ್ಯವನ್ನು ಕಳೆದುಕೊಂಡಿದ್ದಾನೆ.

ನಮ್ಮ ರೈತನ ಬಗ್ಗೆ ಸ್ವಲ್ಪ ಯೋಚಿಸುವಿರಾ?

(ಮುಂದುವರೆಯುವುದು)

ಬೇಸಾಯದ ಬದುಕಿನ ಪೆಜತ್ತಾಯರ ಬರಹ ಮಾಲೆಯ ಮೊದಲ ಕಂತು

ಪುಟದ ಮೊದಲಿಗೆ
 
Votes:  6     Rating: 4.5    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ