ಸ್ಥಾವರ ಜಂಗಮಗಳ ಮಾತು ಬಂದಾಗಲೆಲ್ಲ ನನಗೆ ಮುಲ್ಲಾ ನಸ್ರುದ್ದೀನನ ಎರಡು ಕಥೆಗಳು ನೆನಪಾಗುತ್ತವೆ. ಈ ಎರಡು ಕಥೆಗಳೂ ವಿರುದ್ಧವಾದ ಧ್ರುವಗಳು ಎನ್ನುವುದಕ್ಕಾಗಿ ಅಲ್ಲ, ಇವೆರಡೂ ಎದುರುಬದುರು ನಿಂತು ಒಂದೆ ಆಗಿರುವ ವಿಚಾರವನ್ನು ಕುರಿತು ಹೇಳುತ್ತಿವೆ ಎನ್ನುವುದಕ್ಕಾಗಿ. ಈ ಕಥೆಗಳನ್ನು ನೀವು ಕೇಳಿರುವ ಸಂಭವವಿದೆ. ಆದರೂ ನಿಮಗೆ ನಾನಿದನ್ನು ಬೇರೆಯೇ ಆದ ಸಂದರ್ಭದಲ್ಲಿ ಹೇಳುತ್ತೇನೆ ಕೇಳಿ.
ಒಂದು ದಿನ ಮುಲ್ಲಾ ಬೆಂಗಳೂರು ಪೇಟೆಯ ಅವೆನ್ಯೂ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗೆಲ್ಲ ಅದು ಈ ರೀತಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಜಟಕಾ, ಪೇಟ ಸುತ್ತಿಕೊಂಡ ಜನ, ಹಳ್ಳಿಗಳಿಂದ ಸಿಟಿ ಮಾರ್ಕೆಟ್ಟಿಗೆ ಅದೂ ಇದೂ ಮಾರಲು ಬಂದ ಹಳ್ಳಿಗರು, ಆ ಅದೂ ಇದನ್ನು ಕೊಳ್ಳಲು ಬಂದವರು, ಒಂದೆರಡು ಗುಡಿಗಳು, ಒಂದಿಷ್ಟು ಚಿಲ್ಲರೆ ಅಂಗಡಿಗಳು, ಗಿರಾಕಿಗಳು... ಇತ್ಯಾದಿ. ಎಲ್ಲ ಒಂದಕ್ಕೊಂದು ಸಂಬಂಧವಿರುವಂತೆ ಇದ್ದರೂ ಯಾವಯಾವುದೋ ನಿರ್ಬಂಧಕ್ಕೆ ಸಿಕ್ಕಿಕೊಂಡವು.
ಈ ವ್ಯಾಪಾರಗಳನ್ನು ನೋಡಿಕೊಂಡು ನಡೆಯುತ್ತಿದ್ದ ಮುಲ್ಲಾನಿಗೆ ಇದ್ದಕ್ಕಿದ್ದಂತೆಯೇ ನಗು ಬಂದುಬಿಟ್ಟಿತು. ಬಂದಿದ್ದನ್ನು ನುಂಗಿಕೊಳ್ಳಲೂ ಆಗದೆ ಉಗಿಯಲೂ ಆಗದೆ ಅವನು ಜೋರಾಗಿ ನಕ್ಕುಬಿಟ್ಟ. ಅತ್ತ ಇತ್ತ ನಡೆಯುತ್ತಿದ್ದವರು, ಜಟಕಾ ಓಡಿಸುವವರು, ಜಟಕಾದಲ್ಲಿ ಪ್ರಯಾಣ ಮಾಡುತ್ತಿದ್ದವರು, ಗಿರಾಕಿಯನ್ನು ಅಟೆಂಡ್ ಮಾಡುತ್ತಿದ್ದವರು, ಗಿರಾಕಿಗೆ ಕಾದವರು ಎಲ್ಲರೂ ನಿಂತು ಕುಂತು ಅವನತ್ತ ನೋಡಿ ಈ ನಸ್ರುದ್ದೀನನಿಗೆ ಹುಚ್ಚು ಹಿಡಿಯಿತೆಂದು ಭಾವಿಸಿ ನಕ್ಕುಬಿಟ್ಟರು. ಜನರ ಕಣ್ಣಿಗೆ ವಿನಾಕಾರಣವೆಂಬಂತೆ ನಕ್ಕ ಮುಲ್ಲಾನಿಗೆ ಪ್ರಜ್ಞೆ ಮರಳಿತು. ಜನ ತನ್ನನ್ನೇ ನೋಡಿ ನಗುತ್ತಿದ್ದಾರೆ! ಅವನಿಗೆ ಅವಮಾನವಾಗಿ ಹೋಯಿತು. ಇನ್ನದು ಸುತ್ತಮುತ್ತಲಿನ ಅಕ್ಕಿಪೇಟೆ, ಅರಳೇಪೇಟೆ, ಚಿಕ್ಕಪೇಟೆ, ಬಳೇಪೇಟೆಗಳಿಗೆ, ಗುಟ್ಟಳ್ಳಿ, ಗವೀಪೇಟೆಗಳಿಗೆ ಹಬ್ಬಲು ಬಹಳ ಕಾಲ ಬೇಕಿಲ್ಲ ಎನ್ನಿಸಿಬಿಟ್ಟಿತು. ಸದರಿ ಬೆಂಗಳೂರಿನಲ್ಲಿ ಇನ್ನೊಂದು ಕ್ಷಣವಾದರೂ ಇರಲು ಅವನಿಗೆ ಸಾಧ್ಯವಾಗದೆ ಹೆಸರು ಕುಲ ಗೊತ್ತಿರದ ದೂರದ ಒಂದು ಕೊಂಪೆಗೆ ವಲಸೆ ಹೋಗಿಬಿಟ್ಟ.
ದಿನ ಕಳೆದು, ಕಳೆದು ಮುಲ್ಲಾನಿಗೆ ವಯಸ್ಸಾಯಿತು. ಮುದುಕ ಮುಲ್ಲಾ ಈಗ ಮೈ, ಮನಸ್ಸು ಎಲ್ಲ ಮಾಗಿದವನು. ಬಹುಕಾಲ ನೋಡಿರದ ಹೊರಗಿನವರು ಯಾರೂ ಗುರುತು ಹಿಡಿಯದಂತೆ ಆಗಿಬಿಟ್ಟಿದ್ದ. ಆದರೂ ಬೆಂಗಳೂರು ಕುರಿತು ಇದು ನಿನ್ನ ಊರು ನಿನ್ನ ಊರು ಎಂದು ಅವನ ಕರುಳು ಕರೆಯುತ್ತಲೇ ಇತ್ತು. ಕಡೆಗಾಲದಲ್ಲೊಮ್ಮೆ ಊರು ನೋಡಿಯೇ ಬರುವ ಮನಸ್ಸು ಮಾಡಿ ಮುಲ್ಲಾ ಬೆಂಗಳುರಿಗೆ ಹೊರಟೇ ಬಿಟ್ಟ. ಅವನಿಗೊಂದು ಖಾತ್ರಿ. ಇಷ್ಟು ದಿನವಾಯಿತು. ಯಾರು ತಾನೇ ಆ ವಿಚಾರವನ್ನ ಗಮನದಲ್ಲಿ ಇಟ್ಟುಕೊಂಡಿರ‍್ತಾರೆ? ಧೈರ್ಯ ಬಂದ ಮುಲ್ಲಾ ಬೆಂಗಳೂರಿಗೆ ಬಂದಿಳಿಯುತ್ತಾನೆ, ಅರೇ ಊರು ಅದೆಷ್ಟು ಅಗಾಧ ಬೆಳೆದುಬಿಟ್ಟಿದೆ. ಏನೂ ಗುರುತಾಗುತ್ತಿಲ್ಲ. ಗುರುತಿನವರು ಯಾರೂ ಉಳಿದಂತೆ ಕಾಣುತ್ತಿಲ್ಲ.
ಯಾರು ಯಾರನ್ನೋ ಕೇಳಿಕೊಂಡು ಮುಲ್ಲಾ ಅಂತೂ ಇಂತೂ ಸಿಟಿ ಮಾರ್ಕೆಟ್ಟು, ಅವೆನ್ಯೂ ರೋಡು ತಲುಪಿದ. ಕಣ್ಣು ಕೋರೈಸಿಹೋಯಿತು. ಅದೇನು ವೈಭವ ಇದರದು. ರಸ್ತೆಗಳೆಲ್ಲ ಅಗಲಗಲ ಆಗಿ ಆಗಿ ಇಕ್ಕಟ್ಟಾಗಿಹೋಗಿವೆ. ಜಟಕಾಗಿಂತ ಅತಿಪಾಲು ವೇಗವಾಗಿ ಹೋಗುವ ವಾಹನಗಳೇ ತುಂಬಿದ ರಸ್ತೆ ಅದೆಷ್ಟೋ ನಿಧಾನವಾಗಿ ಹೋಗಿದೆ. ಜನಗಳ ಮಾತು, ವೇಷಭೂಷಣ ಎಲ್ಲ ಬದಲಾಗಿ ಹೋಗಿವೆ. ರಸ್ತೆಯ ಈ ಬದಿಯಿಂದ ಬದುಕಿ ಆ ಬದಿಗೆ ಹೋಗುವುದೇ ದುಸ್ತರವಾಗಿದೆ.
ಯಾವಾಗಿನಿಂದ ಇದು ಹೀಗಾಗಿ ಹೋಯಿತು ಎಂಬ ಕುತೂಹಲ ಮನಸ್ಸು ತುಂಬಿ ಮುಲ್ಲ ಯಾರ‍್ಯಾರನ್ನೋ ಕೇಳಿದ. ಯಾರಿಗೂ ಅದರ ಅರಿವಿರಲಿಲ್ಲ. ಮುಲ್ಲ ಇನ್ನೇನು ಹತಾಶೆಗೆ ಜಾರಬೇಕು, ಮುಲ್ಲನ ಭಾಗ್ಯವೆಂಬಂತೆ ಅಂತೆಯೇ ಹಣ್ಣಾಗಿದ್ದ ಒಬ್ಬ ಮುಲ್ಲನಿಗೆ ಸಿಕ್ಕಿಬಿಟ್ಟ. ಅವನ ಭುಜ ಹಿಡಿದು ನಿಲ್ಲಿಸಿ ಮುಲ್ಲ ಓ ಭಯ್ಯಾ. ಈ ಬೆಂಗಳೂರಿನ ಪೇಟೆಯ ಈ ಅವೆನ್ಯೂ ರೋಡು ಇಂತಾದುದು ಎಂದು? ಎಂದು ಕೇಳಿದ.
ಆ ಹಣ್ಣು ಮನುಷ್ಯ ಮುಲ್ಲಾನ ಕಣ್ಣುಗಳಲ್ಲಿನ ಕುತೂಹಲವನ್ನೇ ನೋಡುತ್ತ, ಅಳೆಯುತ್ತ ಹೇಳಿದ: ಅರೇ ಭಯ್ಯಾ, ಅದೇ ಆ ತಿಕ್ಕಲ ಮುಲ್ಲಾ ನಸ್ರುದ್ದೀನ ಓ ಅಲ್ಲಿ ನಿಂತು ಸುಮ್ಮ ಸುಮ್ಮನೆ ನಕ್ಕು ಆ ಮೇಲೆ ಊರಿಂದ ಓಡಿಹೋದನಂತಲ್ಲ, ಅವತ್ತಿಂದ ಆಚೆ ಹೀಗಾಯಿತು ನೋಡು, ಊರು ಇಷ್ಟೆಲ್ಲಾ ಬೆಳೆದು ಹೋಯಿತು.
***
ಈಗ ಇನ್ನೊಂದು ಕಥೆ. ಮುವ್ವತ್ತೈದು ವರ್ಷಗಳ ಬಳಿಕ ರಸ್ತೆಯಲ್ಲಿ ಸಿಕ್ಕು ಹಣ್ಣುಹಣ್ಣು ಮುದುಕ ಮುಲ್ಲಾ ನಸ್ರುದ್ದೀನನನ್ನ ಸುಳ್ಳು ಸಾಕ್ಷಿ ಹೇಳುವ ರಂಗಧಾಮಯ್ಯ ಕೇಳಿದ, ಮುಲ್ಲಾ ನಿನಗೆ ವಯಸ್ಸೆಷ್ಟಾಯಿತು? ಅಂತ.
ಮುಲ್ಲಾ ಹೇಳಿದ, ಬರೋಬ್ಬರಿ ಮುವತ್ತು ಮ್ಯಾಲೈದು ವರ್ಷ ಆಯಿತು ನೋಡಪ್ಪಾ.
ಅಂಥಾ ಸುಳ್ಳು ಸಾಕ್ಷಿ ಹೇಳುವ ರಂಗಧಾಮಯ್ಯನಿಗೇ ಆಶ್ಚರ್ಯವಾಗಿಹೋಯಿತು.
ಏನು ಹೇಳ್ತೀ ನಸ್ರುದ್ದೀನಸಾಬು, ಮೂವತ್ತೈದು ವರ್ಷದ ಹಿಂದೆಯೇ ನೀನು ನನಗೆ ಮೂವತ್ತೈದು ವರ್ಷ ಆಗಿದೆ ಅಂದಿದ್ದೆ.
ಸಾವಧಾನವಾಗಿ ಮುಲ್ಲಾ ಹೇಳಿದ, ನೋಡು ರಂಗಧಾಮಯ್ಯ, ಮನುಷ್ಯನಿಗೆ ನಾಲಿಗೆ ಶುದ್ಧ ಇರಬೇಕು. ಒಂದೊಂದು ಸಲ ಒಂದೊಂದು ಹೇಳಕ್ಕಾಗುತ್ತಾ?
ಈಗ ಹೆಗಲೇರಿದ ಬೇತಾಳದ ಪ್ರಶ್ನೆ: ನೀವೇ ಹೇಳಿ: ಇವೆರಡೂ ಕಥೆ ಬೇರೆಬೇರೆಯೋ, ಒಂದೆಯೋ? ಬೇರೆಬೇರೆ ಆದರೆ ಈ ಮಾತುಗಳ ಶಕ್ತಿಯೇನು? ಒಂದೇ ಆದರೆ ಆಗ ಈ ಮಾತುಗಳ ಶಕ್ತಿಯೇನು?
ಸ್ಥಾವರವನ್ನು ಜಂಗಮವೆಂದು, ಜಂಗಮವನ್ನು ಸ್ಥಾವರವೆಂದೂ ಬದಲಿಸಿಬಿಡುವ ಮತ್ತು ತಾನು ನಡೆಯುತ್ತಿರುವ ಹಾದಿಗೆ ಸಂಬಂಧಿಸದ ಬೇರೆ ಏನನ್ನೋ ದಕ್ಕಿಸಿಕೊಳ್ಳಲು, ಹಿಡಿದಿಡಲು, ಅಗತ್ಯವಾದಾಗ ಹೇಳಿಬಿಡಲು ತವಕಿಸುವ ಮಾತಿನ ಈ ಶಕ್ತಿಯ ಬಗ್ಗೆ ನನಗೆ ಜಗತ್ತಿನ ವಿಸ್ಮಯಗಳನ್ನೆಲ್ಲ ಮೀರಿದ ಕುತೂಹಲವಿದೆ. ಇಲ್ಲಿ ಪೇಟೆ ಬೀದಿಯಲ್ಲಿ ನಕ್ಕ ಮುಲ್ಲನ ನಗೆ ಸ್ಥಾವರವಾಗಿಬಿಟ್ಟಿದೆ. ಅವನು ನಕ್ಕ ನಂತರ ಬೆಳೆದ ಊರಿನ ಜಂಗಮತ್ವದ ಜೊತೆಗೇ ಆ ಮುಲ್ಲನ ನಗೆಯು ಜಂಗಮವಾಗಿ ಬೆಳೆಯುತ್ತಿದೆ. ಆ ಬೆಳವಣಿಗೆ ಆ ಅರಿವಿದ್ದವನ ಜೊತೆ ಅಳಿದುಹೋಗುತ್ತಿತ್ತೇನೋ. ಆದರೆ ಅದು ಮುಲ್ಲ ಅವನನ್ನು ಪ್ರಶ್ನಿಸುವುದರೊಂದಿಗೆ ನವೀಕರಣಗೊಂಡುಬಿಟ್ಟಿದೆ. ಇದು ಆ ತಲೆಮಾರಿನಾಚೆ ಒಂದು ಕಥೆಯಾಗಿ ಜಂಗಮವಾಗುತ್ತ ಹೋಗುತ್ತದೆ. ಆ ಜಂಗಮದ ಜೋಳಿಗೆಯೊಳಗೆ ನೆನಪೆಂಬ ಅಮೃತತ್ವದ ಮೂಲಿಕೆಗಳು ಅದೃಷ್ಟವನ್ನು ಅವಲಂಬಿಸಿ ಶೇಖರಣೆಗೊಳ್ಳುತ್ತಾ ಕಥೆಗೆ ಶತಶರದದ ಸಂಜಿವತನವನವನ್ನು ಕೊಟ್ಟುಕೊಳ್ಳುತ್ತಾ ಹೋಗುತ್ತವೆ.
ಅದರಾಚೆಗೆ ನೋಡೋಣ. ಇನ್ನೊಂದು ಕಥೆಯಲ್ಲಿ ಮುಲ್ಲನ ಕಾಲ ಅವನಲ್ಲಿ ಮಾತ್ರವೇ ತನ್ನ ಮೂವತ್ತೈದರ ವಯಸ್ಸಿನಲ್ಲಿ ನಿಂತುಬಿಟ್ಟಿದೆ. ಆದರೆ ರಂಗಧಾಮಯ್ಯನ ಕಾಲ ಮುಲ್ಲನ ಮೂವತ್ತೈದು ವಯಸ್ಸಿನ ಜೊತೆ ಮೂವತ್ತೈದು ವರ್ಷ ಬೆಳೆದುಕೊಂಡು ಬಂದಿದೆ. ಅದು ಹಂಚಿಕೊಳ್ಳದಿದ್ದರೆ ರಂಗಧಾಮಯ್ಯನ ಜೊತೆಗೆ ಬೆಳೆಯುವುದು ನಿಲ್ಲಿಸುತ್ತದೆ. ಬೆಳೆಯುವ ಅದೃಷ್ಟವಿದ್ದರೆ ಬೇರೊಂದೆಡೆ ಅದರ ಒಂದು ಕವಲು ಚಿಗುರಿ, ಅಥವಾ ಬಿತ್ತ ಅಂಕುರಿಸಿ ಬೆಳೆಯುತ್ತಲೋ, ಇಲ್ಲದಿದ್ದರೆ ಸತ್ತ ಕೋತಿಯ ಮರಿಯಂತೆ ಬಿಸಾಡುವವರೆಗೂ ಜೋಳಿಗೆಯಲ್ಲಿ ಜಂಗಮತ್ವವ ಆರೋಪಿಸಿಕೊಂಡು ನಿರ್ಜೀವ ಚಲಿಸುತ್ತಲೋ ಇರುತ್ತದೆ.
ಎಲ್ಲ ಕವಿಗಳೂ ಹೀಗೇ ತಾವು ಶ್ರೇಷ್ಠವೆಂದು ನಂಬುವ ಜಂಗಮತ್ವವೇ ತಮ್ಮ ಕೃತಿಯಲ್ಲಿ ಸ್ಥಾವರವಾಗಿ ಉಳಿಯಬೇಕೆನ್ನುವ ಹಾಗೂ ತಮ್ಮ ಜಂಗಮತ್ವದ ಪ್ರತಿಪಾದನೆಯ ಕುರಿತು ತನ್ನಲ್ಲಿನ ಶ್ರೇಷ್ಠತೆಯ ವ್ಯಸನ ತನ್ನ ಕೃತಿಯ ಮೂಲಕ ಸ್ಥಾವರವಾಗಿ ಉಳಿಯಬೇಕೆನ್ನುವ ವಿರೋಧಾಭಾಸವನ್ನು ಆವಾಹಿಸಿಕೊಂಡು ಅಥವಾ ಅಡಗಿಸಿಟ್ಟುಕೊಂಡು ಬರೆಯುತ್ತಾರೆ. ಈ ಸ್ಥಾವರದ ಮೇಲೆ ಸುರಿವುದೆಂದು ಬಯಸುವ ಜಂಗಮತ್ವದ ಮಳೆಯೊಂದು ಆಸೆ, ಆಸೆ ಮಾತ್ರ.
ಗ್ವಾಟೆಮಾಲದ ಒಬ್ಬಾನೊಬ್ಬ ಕವಿ ಹೇಳಿದ್ದಾನೆ ನಾವು ಈ ವಿಶ್ವವನ್ನು ಇನ್ನೂ ಹುಟ್ಟದ ಕಣ್ಣುಗಳಿಂದ ನೋಡಬೇಕೆಂದು. ಆ ಕಣ್ಣುಗಳು ಸ್ಥಾವರ ಜಂಗಮಗಳ ಉಪಾಧಿಯನ್ನು ಆವಾಹಿಸಿಕೊಂಡಿಲ್ಲ. ಅದರಿಂದ ಕಾಲಯಾನದ ನಿಜದ ನೆಲೆಯಾದ ಈ ವರ್ತಮಾನದಲ್ಲಿ ನನಗೆ ಜರೂರು ಬೇಕಿರುವ ಆ ಹುಟ್ಟದ ಕಣ್ಣುಗಳು ಎಲ್ಲಿ ಇವೆಯೆಂದು ಹುಡುಕುತ್ತಾ ಹೋಗುತ್ತೇನೆ.