ಮೇ ೨೫, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ವಾಜಿ ಮಗಳು ಪಮ್ಮಿ ಸಿಕ್ಕಿದ್ದಳು :ಸುಮನ್ ದೇಸಾಯಿ ಬರಹ    
ಸುಮನ್ ದೇಸಾಯಿ
ಸೋಮವಾರ, 18 ಜೂನ್ 2012 (04:18 IST)

ಹೋದ ತಿಂಗಳ ನಮ್ಮಜ್ಜಿ ಜೋಡಿ ಹಳ್ಳಿಗೆ ಹೋಗಿದ್ದೆ. ಸವದತ್ತಿ ಹತ್ರ ಇರೊ ಈ ಸಣ್ಣ ಹಳ್ಳಿಯೊಳಗ ನಾನು ಕಳೆದ ಭಾಳಷ್ಟು ಖುಷಿಯ ಕ್ಷಣಗಳ ನೆನೆಪವ. ನನ್ನ ಮತ್ತ ಅಜ್ಜಿನ ಕುಡಿಸ್ಕೊಂಡ ಬಸ್ಸು ಧಾರವಾಡ ಬಸ್ ಸ್ಟ್ಯಾಂಡ್ ದಾಟಿ ಮದಿಹಾಳ ದಾಟಿ ಸವದತ್ತಿ ರಸ್ತೆಕ ಹೋಗೊದ ತಡಾ ನೆನಪುಗಳ ಬಣ್ಣ ಬಣ್ಣದ ಪಾತರಗಿತ್ತಿಗಳು ಹಾರ್ಕೊತ ಬಂದು ನನ್ನ ಸುತ್ತಲು ತಿರಗಲಿಕ್ಕೆ ಶುರು ಮಾಡಿದ್ವು. ಈಗ ನಾ ಹಳ್ಳಿಗೆ ಹೋಗಲಾರ್ದ ಸಮೀಪ ಸಮೀಪ ಒಂದಿಪ್ಪತ್ತ ವರ್ಷ ಆಗಿರ್ಬೇಕು. ಆವಾಗೆಲ್ಲಾ ಅಜ್ಜಿ ಜೋಡಿ ಹಗಲೆಲ್ಲಾ ಬರತಿದ್ದೆ. ಆ ಹಳ್ಳಿ ಒಳಗ ನಮ್ಮ ಅಜ್ಜಿಗೆ ವಿಷೇಶ ಮರ್ಯಾದಿ ಸಿಗತಿತ್ತು. ಅಜ್ಜಿ ಮಮ್ಮಗಳಂತ ನನಗು ಭಾಳ ಅಚ್ಛಾ ಪ್ರೀತಿ ಸಿಗತಿತ್ತು. ಊರಾಗ ಒಂದಹದಿನೈದು ಬ್ರಾಹ್ಮಣರ ಮನಿ ಇದ್ವು. ಅದರಾಗ ನಮ್ಮದು ಮತ್ತ ವಾದಿರಾಜಾಚಾರ ಕಟ್ಟಿಯವರ ಮನಿತನ ಭಾಳ ವಝನಿ ಮನೆತನ. ವಾದಿರಾಜಾಚಾರ ಅಂದ್ರ ನಾವೆಲ್ಲಾ ಅವರಿಗೆ ವಾಜಿಮಾಮಾ ಅಂತ ಕರಿತಿದ್ವಿ. ವಾಜಿ ಮಾಮಾನ ಕಡಿ ಮಗಳು ಪಮ್ಮಿ (ಪರಿಮಳಾ) ನನ್ನ ಪ್ರಿತಿಯ ಗೆಳತಿ. ನಾವಿಬ್ರು ಕುಡಿ ಎಷ್ಟ ಮಜಾ ಮಾಡತಿದ್ವಿ ಅಂದ್ರ, ಎಲ್ಲಾರು ಬಂದು ನಮ್ಮಜ್ಜಿ ಮುಂದ, "ಅವ್ವಾರ ನಿಮ್ಮ ಮಮ್ಮಗಳಿಗೆ ಮತ್ತ ಆ ವಾಜಣ್ಣಾರ ಮಗಳಿಗೆ ಬಾಲಾ ಒಂದಿಲ್ಲ ನೋಡ್ರಿ, ಎರಡುಕೂಡೆ ತ್ವಾಟದಾಗ ಥೇಟ್ ಮಂಗ್ಯಾನಂಘ ಧಾಂದಲೇ ಹಾಕತಿರತಾವ. ಖರೆ ಖರೇನ್ ಆ ಗಿಡದಾಗಿನ ಮಂಗ್ಯಾಗೊಳ ಇವೆರಡನ್ನು ನೋಡಿನ ಗಿಡಾ ಹತ್ತಲಿಕ್ಕೆ ಕಲತಿರಬೇಕನಿಸ್ತದ ನೋಡ್ರಿ" ಅಂತ ನಮ್ಮಜ್ಜಿನ ಮಾತಾಡಿಸಿ ನಮ್ಮ ಫೀರ್ಯಾದಿ ಹೇಳಿ ಅಜ್ಜಿ ಕೊಟ್ಟ ಅವಲಕ್ಕಿ ಇಸಕೊಂಡ, ತಮ್ಮ ಕಷ್ಟಾ ಸುಖಾ ಹೇಳ್ಕೊಂಡ, ಪರಿಹಾರಾ ಕೇಳ್ಕೊಂಡ ಹೋಗ್ತಿದ್ರು. ಆದ್ರ ನಮ್ಮಜ್ಜಿ  ಹಿರೇಮಮ್ಮಗಳಂತ ನನ್ನ ಮ್ಯಾಲೆ ಭಾಳ ಪ್ರೀತಿ ಇದ್ಲು, ನಂಗ ಭಾಳ ಎನು ಬೈತಿದ್ದಿಲ್ಲಾ, ಜ್ವಾಕಿಂದ ನೆಲದ ಮ್ಯಾಲಷ್ಟ ಆಡ್ರಿ, ಗಿಡಾಪಡಾ ಹತ್ತಬ್ಯಾಡ್ರಿ ಅಂತ್ತಿದ್ಲು ಅಷ್ಟ. ನಾವಿಬ್ಬರು ಕೂಡಿ ಹೊಳಿದಂಡಿಗೆ ಹೋಗಿ ಗಪ್ಪಚಿಪ್ಪ ಯಾರಿಗು ಕಾಣದ ಹಂಗಾ ಕೂತು ಮೀನಾ ಹಿಡಿತಿದ್ವಿ ಒಂದಿನಾ ಹಿಂಗ ಮೀನಾ ಹಿಡಿಬೇಕಾದ್ರ ವಾಜಿಮಾಮಾನ ಕೈಯ್ಯಾಗ ಸಿಕ್ಕು, ಎನ ಅಪದ್ಧ ಹುಟ್ಟಿರಿ ಬ್ರಾಹ್ಮಣರ ಮನ್ಯಾಗ ಅಂದು ಇಬ್ಬರನು ಮನಿಗೆ ದರಾ ದರಾ ಎಳ್ಕೊಂಡ ಹೋಗಿ ಭಾವಿಕಟ್ಟಿಮ್ಯಾಲೆ ಕುಡಿಸಿ ನೀರ ಹಾಕಿಸಿ. ಇಬ್ಬರಿಗು ಪಂಚಗವ್ಯಾ ಕುಡಿಸಿದ್ದಾ.

ಹಿಂಗ ದಿನಾ ಒಂದ ಎನರೆ ಒಂದು ಕಿತಬಿ ಕೆಲಸಾ ಮಾಡ್ಕೊತ ಬಯ್ಸ್ಕೊತ ಇರ್ತಿದ್ವಿ. ಪಾತವ್ವನ ಕೊಳಿಗೊಳ ಎರಡು ಕಾಲ ಕುಡಿಸಿ ಧಾರಾ ಕಟ್ಟಿ ಅವು ನಡಿಲಿಕ್ಕೆ ಬರಲಾರದ ಎಡವೊದನ್ನ ನೋಡಿ ಕಿಸಿ ಕಿಸಿ ನಗತಿದ್ವಿ, ಆದ್ರ ಪಾತವ್ವ ಮುದಕಿ ನಾವ ಮಾಡಿದ್ದಕ್ಕ ಸಿಟ್ಟಿಗೆಳ್ತಿದ್ದಿಲ್ಲಾ, ಬಚ್ಚಬಾಯಿಲೆ ಮುಸಿ ಮುಸಿ ನಕ್ಕೊತ ಕೋಳಿ ಕಾಲಿನ ಧಾರಾ ಬಿಚ್ಚತಿದ್ಲು.ಮನ್ಯಾಗ ಯಾರಿಗು ಕಾಣಸಲಾರಧಂಗ ಹುಣಸಿಹಣ್ಣು, ಉಪ್ಪು, ಜಿರಿಗಿ, ಖಾರಪುಡಿ, ಬೆಲ್ಲಾ ಎಲ್ಲಾ ತಗೊಂಡು ಬಂದು, ಹಿತ್ತಲದಾಗ ಅರಬಿ ಒಗಿಯೊಕಟ್ಟಿ ಮ್ಯಾಲೆ ಹುಣಸಿಹಣ್ಣಿನ ಚಿಗಳಿ ಕುಟ್ಟಿ, ಒಂದ ಉದ್ದನ ಕಡ್ಡಿಗೆ ಅಂಟಿಸಿಕೊಂಡು, ನಮ್ಮ ಮನಿಮುಂದ ಒಂದು ಸಿನೇಮಾ ಟಾಕೀಸ್ ಇತ್ತು, ಅಲ್ಲೆ ಹೋಗಿ ಸಿನೇಮಾ ನೋಡ್ಕೊತ ಕುತುಬಿಡ್ತಿದ್ವಿ. ಆ ಟಾಕೀಸ್ ನ್ಯಾಗ ನಾವು ಯಾವಾಗ ಹೋದ್ರು ನಮಗ ಫ್ರೀ ಪ್ರವೇಶ ಇರ್ತಿತ್ತು.

ಹಿಂಗ ಊರು ಹೇಂಗೆಂಗ ಹತ್ರ ಬರಲಿಕತ್ತು ಹಂಗಂಗ ಹಳೆನೆನಪುಗಳು ತಾಜಾ ಆಗಲಿಕ್ಕತ್ತುವು. ಆವಾಗೊಮ್ಮೆ ಇವಾಗೊಮ್ಮೆ ಊರಿನ ಸುದ್ದಿ ಕಿವಿಗೆ ಬಿಳತಿದ್ವು. ಈಗೊಂದ ಹದಿನೈದು ವರ್ಷ ಹಿಂದಿನ ಮಾತು, ಅಜ್ಜಿ ಅಂದಿದ್ದ ನೆನಪು, "ವಾಜಿ ಮಗಳು ಪಮ್ಮಿ, ಯಾರೊ ಮಾದರ ಹುಡಗನ್ನ ಜೋಡಿ ಓಡಿ ಹೋಗೆದಂತ ಖೋಡಿ, ಪಾಪ ವಾಜಿಗೆ ಊರಾಗ ಭಾಳ ಅವಮಾನ ಆಗೆದಂತ, ಮತ್ತ ಬ್ರಾಹ್ಮಣ ಸಂಘದವರು ಬಾದರಾಯಣದೇವರ ಗುಡಿದು ಯಜಮಾನಕಿನು ಕಸಗೊಂಡಾರಂತ, ಪಾಪ ಭಾಳ ಸಜ್ಜನ ಮನಶ್ಯಾ ಅವಗ ಹಿಂಗ ಆಗಬಾರದಿತ್ತು." ಅಂತ ನಮ್ಮ ಮಾಮಿ ಮುಂದ ಹೇಳೊದ ಕೇಳಿ ಏನೊ ಒಂಥರಾ ಕುತುಹಲಾಗಿತ್ತು, ಪಮ್ಮಿನ ನೋಡಿ ಮಾತಾಡಬೇಕನಿಸಿತ್ತು. ಆದ್ರ ಅದು ಸಾಧ್ಯ ಆಗಲೇಇಲ್ಲಾ. ಹಿಂಗಾ ನಾ ನನ್ನ ಅಭ್ಯಾಸಾ ಕಾಲೇಜು ಅನಕೊತ ವ್ಯಸ್ತ ಆಕ್ಕೊತ ಹೋದೆ. ಪಮ್ಮಿ ಈ ಪ್ರಸಂಗ ನೆನಪ ಹಾರಕೊತಹೊತು.

ಆದ್ರ ಇಷ್ಟ ವರ್ಷದ ಮ್ಯಾಲೆ ಈಗ ಮತ್ತ ಆ ಅಡಿಕ್ಕೊಂಡ ಕೂತ ನೆನಪುಗಳೆಲ್ಲಾ ಪರದೆ ಸರಿಸಿ ಹೋರಗ ಬಂದಿದ್ವು.ಊರು ಬಂದಿತ್ತು, ಅಜ್ಜಿನ ಬಸ್ಸಿನಿಂದ ಕೇಳ್ಗ ಇಳಿಸಿಕೋಂಡು ಸುತ್ತಲು ಕಣ್ಣ ಹಾಯಿಸಿ ನೋಡಿದೆ. ಊರಿಗೆ ಶಹರದ ಸೊಗಡು ಬಂದಿತ್ತು. ಬದಲಾದ ಊರನ್ನ ನೋಡಕೊತ, ಎಲ್ಲರೆ ಹಳೆ ಚಿತ್ರ ಕಾಣಸ್ತದೆನೊ ಅಂತ ನೋಡಕೊತ ಹೊಂಟಿದ್ದೆ. ಪರಪ್ಪ ಬಂದು ಕೈಯಾಗಿನ ಲಗೇಜ್ ಇಸ್ಕೊಂಡ ಅಜ್ಜಿ ಜೋಡಿ ಮಾತಾಡ್ಕೊತ ಬರಲಿಕತ್ತಿದ್ದಾ, ಊರು ಬದಲಾಗಿತ್ತು ಹಳೆ ಜಂತಿ ಮನಿ ಹೊಗಿ ಗಚ್ಚಿನಮನಿ ಬಂದಿದ್ವು. ಸಣ್ಣ ಸಣ್ಣ ಡಬ್ಬಿ ಅಂಗಡಿ ಹೋಗಿ,ಹೊಸಾ ನಮೂನಿವು ಬಣ್ಣ ಬಣ್ಣದ ಅಂಗಡಿಗೊಳ ಹುಟಗೊಂಡಿದ್ವು. ಎದುರಿಗೆ ಬಂದವರನ್ನ ಮಾತಾಡಿಸ್ಕೊತ, ಆರಾಮಿದ್ದಿರೇನ ಅಂತ ಕೇಳಕೊತ ಮನಿಗೆ ಬಂದು ಮುಟ್ಟಿದ್ವಿ.ಆಮ್ಯಾಲೆ ಒಂದ ತಾಸು,ನಾವು ಬಂದೇವಿ ಅಂತ ಗೊತ್ತಾಗಿ ನಮ್ಮನ್ನ ಮಾತಾಡಿಸ್ಲಿಕ್ಕೆ ಬಂದ ಮಂದಿಗೆ ಉತ್ತರಾ ಕೊಟ್ಟು ಸಾಕಾಗಿತ್ತು. ಕಮತರ ಮನಿ ಲಕ್ಷ್ಮವ್ವ ನಮ್ಮಜ್ಜಿಗೆ "ಅವ್ವಾರ ನಿಮ ಮಮ್ಮಗಳು ಭಾಳ ಸೂಕ್ಷ್ಮ, ಸಮಾಧಾನ ಆಗ್ಯಾಳ ನೊಡ್ರಿ, ಆವಾಗೆಲ್ಲಾ ಊರಿಗೆ ಬಂದ್ರ ಥೈ ಥೈಅಂತ ಕುಣಕೊತ ಇಡಿ ಊರ ತುಂಬ ದಣಿಗಿ ಹಾಕತಿದ್ಲು. ಅಂದ್ಲು, ಅದಕ್ಕ ನಮ್ಮ ಅಜ್ಜಿ" ಲಕ್ಷ್ಮವ್ವ ಈಗಾ ಆಕಿನ್ನಾ ಥೈ ಥೈ ಅಂತ ಕುಣಸೊ ಅಂಥಾ ಎರಡ ಮಕ್ಕಳ ಹುಟ್ಟ್ಯಾವ ಆಕಿಗೆ, ಇನ್ನೆನ ಕುಣಿತಾಳ ಅಂತ ಪ್ರೀತಿಲೆ ನನ್ನ ಬಗ್ಗೆ, ನನ್ನ ಮಕ್ಕಳ ಬಗ್ಗೆ ಹೇಳಲಿಕತ್ತಿದ್ಲು.

ಅವತ್ತ ನನ್ನ ಮತ್ತ ಅಜ್ಜಿನ್ನ ವಾಜಿಮಾಮಾ ಬಂದು ಅವರ ಮನಿಗೆ ಊಟಕ್ಕ ಕರದ ಹೋಗಿದ್ದಾ. ಸ್ನಾನಾ ಎಲ್ಲಾ ಮುಗಿಸಿಕೊಂಡು ನಾನು ಅಜ್ಜಿ ವಾಜಿಮಾಮಾನ ಮನಿಗೆ ಹೊದ್ವಿ, ಅದ ಹಳ್ಳಿಯ  ಹಳೆಯಕಾಲದ ದೊಡ್ಡ ಮನಿ. ಪಮ್ಮಿ ಇಲ್ಲದ ಮನಿ ಯಾಕೊ ಬ್ಯಾಸರನಿಸ್ತು. ಅಷ್ಟರಾಗ ಪಮ್ಮಿ ಅಮ್ಮ ರಂಗೂಮಾಮಿ ಒಳಗಿಂದ ಬಂದ್ರು. ಯಾಕೊ ಮಾಮಿ ಭಾಳ ಸೊರಗಿಧಂಗ ಅನಿಸ್ತು. ರಂಗೂಮಾಮಿ ಯಾವಾಗಲು ಭಾಳ ಸಮಾಧಾನ ಮತ್ತ ಪ್ರೀತಿ ಅಂತಃಕರಣದ ಮನಷ್ಯಾಳು. ಅಜ್ಜಿಗೆ ನಮಸ್ಕಾರ ಮಾಡಿ, ಹತ್ರ ಕೂತು ಪ್ರೀತಿಯಿಂದ ಎಲ್ಲಾ ಸುದ್ದಿ ಕೇಳಿದ್ಲು. ನನ್ನ ಬಗ್ಗೆ ಮತ್ತ ಮಕ್ಕಳ ಬಗ್ಗೆ ಕೇಳಿ ಆಕೀಗೆ ಭಾಳ್ ಖುಶಿ ಆಧಂಗ ಇತ್ತು.ಯಾಕೊ ರಂಗೂಮಾಮಿ ಕಣ್ಣಾಗ ಎನೋ ಕಳಕೊಂಡ ನಿರಾಶೆಯ ನೆರಳು ಕಾಣಿಸ್ಲಿಕತ್ತಿತ್ತು.ಅಷ್ಟರಾಗ ವಾಜಿಮಾಮಾನ ಪೂಜಾನು ಮುಗ್ದಿತ್ತು, ಎಲ್ಲಾರಗೂ ತಿರ್ಥಾ ಕೊಟ್ಟಾ, ರಂಗೂಮಾಮಿ ಒಳಗ ಹೋಗಿ ಎಲ್ಲಾರಗೂ ಊಟಕ್ಕ ಎಲಿ ಹಾಕಿದ್ಲು, ರಂಗೂಮಾಮಿ ಕೈಯಾಗಿನ ರುಚಿ ರುಚಿ ಅಡಗಿ ಉಂಡು ಭಾಳ ವರ್ಷ ಆಗಿತ್ತು. ಮಸ್ತ ಭಾರಿ ಊಟಾ ಮಾಡಿ, ಪಡಸಾಲ್ಯಾಗ ಕುತು ಎಲಿ ಅಡಕಿ ಹಾಕ್ಕೊಳಿಕತ್ತಾಗ, ಮಾಮಿ ಬಂದು ಹತ್ರ ಕೂತು ಎಲಿ ತಗೊಂಡು ನನಗಂತ ಅಡಕಿಪುಡಿ ಯಾಲಕ್ಕಿ ಹಾಕಿ ವೀಡಾ ಮಾಡ್ಲಿಕತ್ಲು. ಅಜ್ಜಿ ನಡಮನ್ಯಾಗ ಮಲ್ಕೊಂಡಿದ್ಲು, ವಾಜಿಮಾಮಾ ಖೊಲ್ಯಾಗ ಮಲ್ಕೊಂಡಿದ್ದಾ, ಮತ್ತ ಮಾಮಿ ನನ್ನ ಹತ್ರ ಮಾತಾಡ್ಕೊತ ಕುತಕೊಂಡಿದ್ಲು.ನಾನು ಕೇಳಲ್ಯೊ ಬ್ಯಾಡೊ ಅಂತ ಅನುಮಾನಿಸಿಕೊತ, ಕೇಳಿದೆ ಮತ್ತ ಪಮ್ಮಿ ಹೇಂಗಿದ್ದಾಳ ಮಾಮಿ, ನಿಂಗ ಭೆಟ್ಟಿ ಆಗಿರತಾಳೆನು? ಇದಾ ಊರಾಗ ಇದ್ದಾಳೆನು ಅಂತ ಕೇಳಿದೆ? "ಅದಕ್ಕ ಮಾಮಿ ಅಸಹಾಯಕ ಧ್ವನಿಯೊಳಗ ಎಲ್ಲಾನು ಹೇಳ್ಲಿಕ್ಕೆ ಶುರು ಮಾಡಿದ್ಲು." ಇಲ್ಲೆ ಇದ್ದಾಳವಾ ನಮ್ಮ ಹೊಟ್ಟಿ ಉರಸಲಿಕ್ಕೆ ಇದ ಊರಾಗ ಇದ್ದಾಳ. ಊರ್ ಹೊರಗ ಜನತಾ ಮನಿಯೊಳಗ ಅತ್ತಿ,ಮಾವಾ, ಗಂಡ ಮತ್ತ ನಾಲ್ಕ ಮಕ್ಕಳಜೊಡಿ ಇದ್ದಾಳ. ಕಡಿ ಮಗಳಂತ ಎಷ್ಟ ಅಚ್ಛಾದಿಂದ ಬೇಳ್ಸಿದ್ವಿ ಪಮ್ಮಿನ್ನ, ಅವತ್ತ ಆಕಿದು ಮ್ಯಾಟ್ರಿಕ್ ಪರಿಕ್ಷಾದ ರಿಸಲ್ಟ ಬಂದಾಗ ನಮಗೆಲ್ಲಾ ಎಷ್ಟ ಖುಷಿ ಆಗಿತ್ತು. 93% ರಷ್ಟು ಮಾಡಿದ್ಲು, ನಿಮ್ಮ ವಾಜಿಮಾಮಾ ಅಂತು ಊರಿಗೆ ಸಿಹಿಊಟಾ ಹಾಕ್ಸಿದ್ದರು. ಇನ್ನು ನೆನಪದ ನಂಗ ಇವ್ರು ಎಷ್ಟ ಹೌಸಿಲೆ ಸವದತ್ತಿ ಸಾಯಿನ್ಸ ಕಾಲೇಜಿಗೆ ಪಮ್ಮಿನ ಎಡ್ಮಿಷನ್ ಮಾಡಿಸಿ ಬಂದಿದ್ರು.ಅದ ನಾವ ಮಾಡಿದ್ದ ದೊಡ್ಡ ತಪ್ಪ ಆತ ನೋಡ. ಮದಲನೆ ವರ್ಷ ಯಾವ ಅಡಚಣಿ ಇಲ್ಲದ ಕಳಿತು. ಯಥಾಪ್ರಕಾರ ಪಮ್ಮಿ ಛಲೊ ಮಾರ್ಕಸ್ ತಗೊಂಡು ಪಾಸಾದ್ಲು. ಕಾಲೇಜನ್ಯಾಗ ಆಟದಾಗ, ಎಲ್ಲಾ ಸ್ಪರ್ಧೆಗಳೊಳಗ ಮುಂದ ಇರತಿದ್ಲು. ಆದರ ಎರಡನೆ ವರ್ಷದ ಕಡಿ ಕಡಿಕ ಯಾಕೊ ಪಮ್ಮಿ ಬಗ್ಗೆ ಅಲ್ಲೊಂದ ಇಲ್ಲೊಂದ ಅಪಸ್ವರಾ ಕೇಳಸ್ಲಿಕತ್ವು. ಆದರ ಮಗಳಮ್ಯಾಲಿನ ಹುಚ್ಚು ವಿಶ್ವಾಸಾ ನಮ್ಮ ಕಣ್ಣ ಕುರುಡ ಮಾಡಿದ್ವು. ಪಿಯುಸಿ ಎರಡನೆ ವರ್ಷದ ರಿಸಲ್ಟ ಬಂದಿತ್ತು, ಪಮ್ಮಿ 85% ನಂಗ ಮಾಡಿದ್ಲು. ಬಿಎಸ್ಸಿ.ಗೆ ಎಡಮಿಷನ್ ಮಾಡಸ್ಲಿಕ್ಕಂತ ಸವದತ್ತಿ ಕಾಲೇಜಿಗೆ ಹೋದಾಗ ಜೋಶಿ ಮಾಸ್ತರು ಇವ್ರನ್ನ ಬಾಜುಕ ಕರಕೊಂಡ ಹೋಗಿ "ಮತ್ತ ಕಟ್ಟಿ ಆಚಾರ ನಾ ಹಿಂಗ ಹೇಳ್ತೇನಿ ಅಂತ ತಪ್ಪ ತಿಳ್ಕೊಬ್ಯಾಡ್ರಿ  ಮತ್ತ ನಾ ಒಂದ ವಿಚಾರ ಹೇಳತೇನಿ, ನಿಮ್ಮ ಮಗಳ ಪರಿಮಳಾನ್ನ ಧಾರವಾಡಕ್ಕರ ಇಲ್ಲಂದ್ರ ಬ್ಯಾರೆ ಯಾವದರ ಕಾಲೇಜಿಗೆ ಹೆಸರ ಹಚ್ಚರಿ ಇಲ್ಲಾಂದ್ರ ಛೊಲೊ ವರಾ ನೋಡಿ ಮದವಿ ಮಾಡಿಬಿಡ್ರಿ. ಆದ್ರ ಇಲ್ಲೆ ಸವದತ್ತಿ ಒಳಗ ಕಾಲೇಜಿಗೆ ಮಾತ್ರ ಹಚ್ಚಬ್ಯಾಡ್ರಿ ಅಂತ ಹೇಳಿದ್ದ ಕೇಳಿ, ಪಮ್ಮಿನ್ನ ಮನಿಗೆ ಕರಕೊಂಡ ಬಂದು ವಿಚಾರ ಮಾಡಿದಾಗ ಗೊತ್ತಾತು ಆಕಿ ಊರಹೊರಗ ಮಾದರಓಣ್ಯಾಗ ಬಿದರಬುಟ್ಟಿ ಮಾಡೊ ಕಾಳಪ್ಪನ ಮಗಾ ಸಿದ್ದ್ಯಾನ ಪ್ರೀತಿ ಮಾಡ್ಲಿಕತ್ತಿದ್ಲಂತ. ಸಿದ್ದ್ಯಾ ಸವದತ್ತಿ ಸಾಯಿನ್ಸ ಕಾಲೇಜಿನ ಹತ್ರ ಇದ್ದ ಕ್ಯಾಂಟೀನ್ ನ್ಯಾಗ ಕೆಲಸಾ ಮಾಡತಿದ್ದಾ, ಇಕಿ ಕ್ಯಾಂಟೀನಿಗೆ ಹೋದಾಗ ನೋಡಿ ನೋಡಿನ ಇವರಿಬ್ಬರ ಪ್ರೀತಿ ಶುರು ಆಗಿದ್ದು.ಪಮ್ಮಿ ಹೇಳಿದ್ದ ಈ ಮಾತ ಕೇಳಿ ನಿಮ್ಮ ಮಾಮಾ ದಂಗ ಬಡಧಂಗ ಕುತಬಿಟ್ರು. ಮುಂದ ವಾರ ಹದಿನೈದ ದಿನಾ ಅವರು ತಮ್ಮ ಸುರತ್ಯಾಗ ಇದ್ದಿದ್ದಿಲ್ಲಾ. ತಮ್ಮನ್ನ ತಾವು ಸಂಭಾಳಿಸಿಕೊಂಡ ಮ್ಯಾಲೆ, ಒಂದ ದಿನಾ ಒಂದ ನಾಲ್ಕೈದು ಟಪಾಲ ಕಾರ್ಡ ತಗೊಂಡಬಂದು ತಮ್ಮ ತಂಗಿಗೆ, ತಮ್ಮಗ, ಮತ್ತ ಧಾರವಾಡನ್ಯಾಗ ಇದ್ದ ಹಿರೆ ಮಗಳಿಗೆ ಯಾವರ ವರಾ ಇದ್ರ ಲಗೇಚ ಹೇಳ್ರಿ. ಪಮ್ಮಿ ಮದವಿ ಮಾಡಬೇಕಂತ ಮಾಡೇನಿ ಅಂತ ಪತ್ರಾ ಬರದ ಹಾಕಿದ್ರು. ಆದ್ರ ಆ ದೈವದ ನಿರ್ಧಾರನ ಬ್ಯಾರೆ ಇತ್ತ ಅನಿಸ್ತದ, ನಾವುಇಲ್ಲೆ ಹೇಂಗೆಂಗ ವರಾ ನೋಡೊ ಗಡಿಬಿಡಿಯೊಳಗ ಇದ್ವ್ಯೊ, ಪಮ್ಮಿ ಮನಸು ಇದೆಲ್ಲಾದರಿಂದ ತಪ್ಪಿಸಿಕೊಂಡುಹೋಗೊ ತಯಾರಿ ನಡಸಿತ್ತು. ಒಂದದಿನಾ ಬೆಳಗಹರಿಯೊದ್ರೊಳಗ ನಮ್ಮನ್ನೆಲ್ಲಾ ಝಾಡಿಸಿ ಒದ್ದು, ಅವನ ಜೋಡಿ ಊರು ಬಿಟ್ಟು ಹೋಗೆಬಿಟ್ಟಿದ್ಲು. ನಿಮ್ಮ ಮಾಮಾ ಅಂತು ಪೂರಾ ಕುಸದಬಿಟ್ಟರು. ಆಮ್ಯಾಲೆ ಆಗಿದ್ದ ಅವಮಾನಗೊಳ ಒಂದ ಎರಡ, ಊರಾಗ ಮಾರಿ ಎತ್ತಿ ಅಡ್ಯಾಡೊ ಹಂಗಿದ್ದಿಲ್ಲಾ. ಬ್ರಾಹ್ಮಣ ಸಮಾಜದಾಗ ಬಹಿಷ್ಕಾರಾ ಹಾಕೊದೊಂದ ಬಾಕಿ ಇತ್ತ ನೋಡ ಅಷ್ಟ ಅವಹೇಳನಾ ಮಾಡಿದ್ರು. ಹತ್ತ ತಲಿಯಿಂದ ಬಂದ ಬಾದರಾಯಣ ದೇವರ ಗುಡಿದು ಯಜಮಾನಕಿನು ಕಸಗೊಂಡ್ರು. ಪಮ್ಮಿ ಓಡಿಹೋಗಿದ್ದಕ್ಕಿಂತ ಇವರಿಗೆ ಗುಡಿ ಪೂಜಾ ಮತ್ತ ದೇವರ ಸನ್ನಿಧಿ ತಪ್ಪಿದ್ದಕ್ಕ ತಡಕೊಳ್ಳಾರದ ಸಂಕಟಾಗಿತ್ತು. ವರ್ಷ ದಿಡ ವರ್ಷ ಆದಿಂದ ಪಮ್ಮಿ ಅವನ ಜೊಡಿ ಮತ್ತ ಊರಿಗೆ ವಾಪಸ ಆಗಿ ಅವನ ಜೋಡಿ ಇದ ಊರಾಗ ಸಂಸಾರ ಮಾಡಲಿಕ್ಕೆ ಶುರು ಮಾಡಿದ್ಲು. ಆದ್ರ ನಿಮ್ಮ ಮಾಮಾ ಆಕಿ ಸತ್ತಾಳಂತ ತಲಿ ಮ್ಯಾಲೆ ನೀರ್ ಹಾಕ್ಕೊಂಡ ಆಕಿ ಹೆಸರಲೆ ಎಳ್ಳು ನೀರು ಬಿಟ್ಟಬಿಟ್ಟಿದ್ರು. ಆದ್ರ ತಾಯಿ ಜೀವ ನಂದು ಆಕಿನ್ನ ನೋಡಬೇಕನಸ್ತದ ಆದ್ರ ಎನಮಾಡಲಿ, ಮಕ್ಕಳು. ಸೊಸೆಂದ್ರು, ಮೊಮ್ಮಕ್ಕಳ ಸುಖಾ ಕಾಣಬೇಕಂದ್ರ ಎಲ್ಲಾದಕ್ಕು ಪಡಕೊಂಡ ಬಂದಿರಬೇಕನೋಡು. ಎಲ್ಲಾ ನಮ್ಮ ಪ್ರಾರಬ್ಧಕರ್ಮ ನಾವ ಅನುಭೊಗಸಬೇಕು. ಹಿರೆ ಮಗಳಿಗೆ  ಮಕ್ಕಳಭಾಗ್ಯಾನ ಇಲ್ಲ, ಇದ್ದೊಬ್ಬ ಮಗಾ ಛಂದಾಗಿ ಕಲಿಲಿಲ್ಲಾ, ಮನ್ಯಾಗಿನ ಆಸ್ತಿ ಕರಗಿಸ್ಕೊತ ಚೈನಿ ಮಾಡತಾನ, ಇನ್ನ ಕಡಿ ಮಗಳು ಶಾಣೆ ಇದ್ದಾಳ ಭಾಳ ಅಷ್ಟ ಕಲಿಲಿ ಎನರೆ ಸಾಧಸಲಿ ಅಂತ ಆಶಾ ಮಾಡಿದ್ವಿ ಅದು ಮಣ್ಣ ಮೂರಪಾಲಾತು. ನಮ್ಮ ನಸಿಬನ ಖೊಟ್ಟಿ ಅದ ನೋಡು ಅಂತಾ ಪಮ್ಮಿ ಸುದ್ದಿ ಎಲ್ಲಾ ಹೇಳಿ ಮುಗಿಸಿ ರಂಗೂಮಾಮಿ ಕಣ್ಣಾಗ ನೀರ ತಗದದ್ದನ್ನ ನೋಡಿ ಭಾಳ ಸಂಕಟಾತು ಮತ್ತ ಪಮ್ಮಿ ಮ್ಯಾಲೆ ಭಾಳ ಸಿಟ್ಟೂನು ಬಂತು. ಊರಿಗೆ ವಾಪಸ ಹೋಗೊದ್ರಾಗ ಒಂದ ಸಲಾ ಪಮ್ಮಿನ್ನ ಭೆಟ್ಟಿಯಾಗಿ ಅಕಿ ಮಾಡಿದ ತಪ್ಪನ್ನ ಆಕಿಗೆ ತಿಳಿಸ್ಬೇಕಂತ ಅನಕೊಂಡೆ.

ಮರದಿನಾ ಮುಂಝಾನೆ ಹತ್ತ ಘಂಟೆ ಸುಮಾರಿಗೆ ಲಕ್ಷಮವ್ವನ್ನ ಜನತಾಮನಿ ಎಲ್ಲವ ಅಂತ ಕೇಳಿ ತಿಳಕೊಂಡು ಪಮ್ಮಿನ್ನ ಭೆಟ್ಟಿ ಆಗಲಿಕ್ಕೆ ಹೊಂಟೆ. ಹೊಳಿ ದಂಡಿ ಅತ್ಲಾಕಡೆ ಕಡಿಕ ಒಂದಿಪ್ಪತ್ತೈದ ಮನಿ ಇದ್ವು. ಹಂಗ ಮನಿಗೊಳ ಸಾಲಿನ್ಯಾಗ ಹುಡಕಿಕೊತ ಹೊಂಟಿದ್ದೆ ಸಹಸಾ ಈ ಹೊತ್ತಿನ್ಯಾಗ ಯಾರು ಇರುದಿಲ್ಲಾ ಎಲ್ಲಾರು ದುಡಕೊಂಡ ತಿನ್ನೊ ಮಂದಿ ಮುಂಝಾನೆನ ಕೆಲಸಕ್ಕ ಹೋಗಿಬಿಟ್ಟಿರತಾರ. ಎಲ್ಲೆ ಪಮ್ಮಿನು ಕೆಲಸಕ್ಕ ಹೋಗಿದ್ಲಂದ್ರ ಅಂತ ವಿಚಾರನು ಬಂತು, ಆದರ ಅಂಥಾ ಕಲ್ಪನಾ ಮಾಡ್ಕೊಳಿಕ್ಕೆ ಯಾಕೊ ಮನಸು ಒಪ್ಪಲಿಲ್ಲಾ. ಎಂಥಾ ಹುಚ್ಚತನಾ ಮಾಡಿದ್ಲು ಪಮ್ಮಿ, ಕಲತು ಮುಂದ ಬಂದಿದ್ರ ಇಷ್ಟೊತ್ತಿಗೆ ಯಾವದರ ದೊಡ್ಡ ಆಫೀಸರ ನೌಕರಿಯೊಳಗ ಇರಬಹುದಿತ್ತು. ಹೀಂಗ ವಿಚಾರ ಮಾಡಕೊತ ಹೊಂಟಿದ್ದೆ ಅಷ್ಟರಾಗ ಪರಪ್ಪಾ ಹೆಂಡಿ ತುಂಬಲಿಕ್ಕೆ ಬಿದರ ಕೇರಸಿ(ಬುಟ್ಟಿ) ತರಲಿಕ್ಕಂತ ಅಲ್ಲೆ ಬಂದಿದ್ದಾ ನನ್ನ ನೋಡಿ "ಅವ್ವಾರ ಗೆಳತಿನ್ನ ಭೇಟ್ಟ್ಯಾಗಾಕ ಬಂದಿರೇನ್ರಿ, ಬರ್ರಿ ಮನಿ ತೋರಸ್ತೇನಿ ಅಂತ ಹೇಳಿ ಕರಕೊಂಡಹೋದಾ. ಅಷ್ಟರಾಗ ಪರಪ್ಪನ ಧ್ವನಿ ಕೇಳಿ ಪಮ್ಮಿ ಹೊರಗ ಬಂದ್ಲು. ಇಷ್ಟ ವರ್ಷದ ಮ್ಯಾಲೆ ಆಕಿನ್ನ ನೋಡಿ ನಂಗ ಭಾಳ ಖುಷಿ ಆಗಿತ್ತು, ಪಮ್ಮಿ ಮದ್ಲ ಹೇಂಗಿದ್ಲೊ ಈಗೂ ಹಂಗ ಇದ್ಲು. ಆಕಿನು ಅಷ್ಟ ಒಂದ ನಿಮಿಷದಾಗ ನನ್ನ ಗುರುತುಹಿಡದ್ಲು. ಮದಲಿನಂಗ ಖುಷಿಯಿಂದ ನನ್ನ ಕೈ ಹಿಡ್ಕೊಂಡ ಒಳಗಹೋದ್ಲು. ಮನಿ ಮುಂದ ಶಗಣಿಲೇ ಸಾರಿಸಿ ರಂಗೋಲಿ ಹಾಕಿದ್ಲು,ಪುಟ್ಟದಾದ ಎರಡ ಖೊಲಿ ಮನಿ ಅದು, ಸ್ವಚ್ಛ ಥಳಾ ಥಳಾ ಹೋಳಿತಿತ್ತು, ಅಡಗಿ ಮನ್ಯಾಗ ದೇವರ ಮಾಡಾ, ದೇವರ ಮುಂದ ಜೋಡಿ ದೀಪಾ ಹಚ್ಚಿದ್ಲು. ಎಲ್ಲೆ ನೋಡಿದ್ರಲ್ಲೆ ಸ್ವಚ್ಛ, ಮನಿ ನೋಡಿದ್ರ ಮನಸಿಗೆ ಶಾಂತ ಅನಿಸ್ತಿತ್ತು, ಅಲ್ಲೆ ಅಕಿ ಚಹಾ ಮಾಡಕೊತ ನನ್ನ ಬಗ್ಗೆ ಮಕ್ಕಳ ಬಗ್ಗೆ ನಮ್ಮ ಮನಿ ಬಗ್ಗೆ ತಿಳ್ಕೊಂಡ್ಲು. ನಾನು ಕೇಳಿದೆ ಪಮ್ಮಿ ಆರಾಮಿದ್ದಿಯೆನಲೇ ಅಂತ ಅದಕ್ಕ ಅಕಿ ಸಂತ್ರುಪ್ತಿಯಿಂದ ಭಾಳ ಆರಾಮ ಇದ್ದೇನಿ ಅಂತ ಹೇಳಿದ್ಲು, ನಾ ಆಶ್ಚರ್ಯದಿಂದ ಆಕಿನ್ನ ನೋಡ್ತಿದ್ದೆ. ಮಾಮಿ ಪಮ್ಮಿ ಬಗ್ಗೆ ಹೇಳಿದಾಗ ನನ್ನ ಮನಸಿನಾಗ ಯಾವದೊ ಮಾಸಲು ಮಾಸಲು ಚಿತ್ರಾ ಮೂಡಿತ್ತು. ಆದ್ರ ಇಲ್ಲೆ ನೋಡಿದ್ರ ಸ್ವಚ್ಛ ನಿರ್ಮಲ ಚಿತ್ರನಾ ನೋಡಿದೆ. ಮನ್ಯಾಗ ಯಾರು ಕಾಣಸ್ಲಿಲ್ಲಾ, ಎಲ್ಲೆ ಹೋಗ್ಯಾರ ಅಂತ ಕೇಳಿದೆ, ಅದಕ್ಕ ಅಕಿ" ನಮ್ಮನಿಯವರು ಮುಂಝಾನೆನ ನಮ್ಮ ಅತ್ತಿ, ಮಾವಾ, ಮತ್ತ ಮಕ್ಕಳನ್ನ ಕರಕೊಂಡು ಯಲ್ಲಮ್ಮ ಗುಡ್ಡಕ್ಕ ಹೋಗ್ಯಾರ ಈಗ ಬರೊ ಹೊತ್ತಾಗೇದ ಅಂತ ಹೇಳಿದ್ಲು. ಪಮ್ಮಿ ನೀ ತಪ್ಪ ಮಾಡಿದಿ ಅಂತ ಯಾವಾಗು ನಿಂಗ ಅನಿಸ್ಲಿಲ್ಲೆನು ಅಂತ ಕೇಳಿದೆ. ಅದಕ್ಕ ಆಕಿ ಶಾಂತ ಆಗಿ ಇಲ್ಲಾ ಅಂತ ಗೋಣ ಹಾಕಿದ್ಲು. ಆಕಿ ತಿರಗಿ ನನ್ನ ಒಂದ ಪ್ರಶ್ನೆ ಕೇಳಿದ್ಲು, ನಾ ಆವತ್ತ ಅಪ್ಪ ಹೇಳಿದಂಗ ಬ್ಯಾರೆ ವರನ್ನ ನೋಡಿ ಮದವಿ ಮಾಡಕೊಂಡ ನನ್ನ ಪ್ರೀತಿಗೆ ಕೈ ಕೊಟ್ಟ ಹೊಗಿದ್ರ, ಅದು ಸರಿ ಇರತಿತ್ತೇನು? ವಿಚಾರ ಮಾಡ ಸುಮಿ.. ಆವಾಗ ನಾ ಈ ನಿರ್ಧಾರ ತಗೊಂಡಿದ್ದಿಲ್ಲ ಅಂದ್ರ ಇವತ್ತ ನಾ ಈ ಜೀವನದ ಪರಿಕ್ಷಾ ಒಳ್ಗ ಸೊತ ಹೊಗತಿದ್ದೆ. ನಾ ಕಾಲಿಟ್ಟ ಮನಿ ಮಂದಿಗೆ ನನ್ನ ಪ್ರೀತಿ ಅಂತಃಕರಣ ಮತ್ತ ಕರ್ತವ್ಯಾ ಇದ್ಯಾವದನ್ನು ಪ್ರಾಮಾಣಿಕತನದಿಂದ ಕೊಡಲಿಕ್ಕಾಗತಿದ್ದಿಲ್ಲಾ. ಹಂಗೆನಾರಾ ಆಗಿದ್ರ ನಾ ಛೊಲೊ ಹೆಂಡತಿ, ಸೊಸಿ, ತಾಯಿ, ಆಗಲಿಕ್ಕೆ ಸಾಧ್ಯಾನಾ ಇದ್ದಿದ್ದಿಲ್ಲಾ. ನನ್ನ ಪ್ರಕಾರಾ ನಾವು ಮದವಿ ಮಾಡಕೊಂಡ ಗಂಡನ್ನ ಆತನ ಸಂಪೂರ್ಣ ಗುಣಾವಗುಣಗಳ ಜೊತಿಗೆ ಸ್ವೀಕಾರ ಮಾಡಬೇಕು, ಅಷ್ಟ ಅಲ್ಲಾ ಅವರ ಮನ್ಯಾಗಿನ ಮಂದಿನ್ನ, ಅವರ ಸುತ್ತಮುತ್ತಲಿನ ಪರಿಸರನಾ ಮತ್ತ ಆತನ ಹಡದವರು ಮತ್ತ ಬೆನ್ನಿಲೆ ಬಿದ್ದವರನ ಸುಧ್ಧಾ ನಮ್ಮವರು ಅಂತ ತಿಳ್ಕೊಬೇಕು. ಇದೆಲ್ಲಾ ಮನಸ್ಸಿನಾಗ ನಮ್ಮವರಾಗೊರ ಬಗ್ಗೆ ಪ್ರೀತಿ ಇದ್ರ ಮಾತ್ರಾ ಸಾಧ್ಯಾ ಆಗತದ, ಇಂಥಾ ಪರಿಸ್ಥಿತಿಯೊಳಗ ನನ್ನ ಮನಸ್ಸಿನಾಗ ಬ್ಯಾರೆ ಯಾರನೊ ಇಟಗೊಂಡು, ಮತ್ತೊಬ್ಬರ ಹೆಂಡತಿ ಆಗಿ ನಾ ಎಲ್ಲಾರಗು ಸುಖಾ ಸಂತೋಷ ಕೊಡ್ಲಿಕ್ಕೆ ಹೆಂಗ ಸಾಧ್ಯಾ ಇತ್ತು. ನನ್ನ ದೄಷ್ಟಿಯೊಳಗ ನಾ ಪೂರ್ತಿ ಕೀಳಮಟ್ಟಕ್ಕ ಇಳದಹೊಗತಿದ್ದೆ. ಈಗ ನಾನು ನನ್ನ ಜೀವನದೊಳಗ ತೄಪ್ತಿಯಿಂದ ಇದ್ದೇನಿ. ಪ್ರೀತಿ ಮಾಡೊ ಗಂಡಾ, ಅತ್ತಿ ಮಾವಾ ಮದಲ ಕಿರಿ ಕಿರಿ ಮಾಡಿದ್ರು, ಆದರ ಇಗೆನಿಲ್ಲಾ ಭಾಳ ಅಂತಃಕರಣದಿಂದ ನೋಡ್ಕೊತಾರ. ದೇವರ ಪುಣ್ಯಾದಿಂದ ಶಾಣ್ಯಾ ಮಕ್ಕಳ ಹುಟ್ಟ್ಯಾವ. ಅವರು ಹೊರಗಿನ ಬಿಸಲು ಕಾಣಲಾರಧಂಗ ನೊಡ್ಕೊತಾರ. ಸವದತ್ತ್ಯಾಗ ಬಿದರಿನ ಸಾಮಾನಿನ ಅಂಗಡಿ ಹಾಕ್ಯಾರ, ನಾನು ನಮ್ಮ ಅತ್ತಿ ಮಾವಾ ಎಲ್ಲಾರು ಕೂಡೆ ಮನಿಯೊಳಗನಾ ಕುತು ಬಿದರಿನ ಛಂದ ಛಂದ ಶೋ ಪಿಸ್ ಮಾಡಿಕೊಡತೇವಿ. ವ್ಯಾಪಾರನು ಛೋಲೊ ಅದ. ನಮ್ಮ ಜೀವನಾ ಛಂದ ಮಾಡಕೊಳ್ಳೊದು ನಮ್ಮ ಕೈಯಾಗನ ಇರ್ತದ. ಜೀವನಾ ನಿಶ್ಚಿಂತಿಯಿಂದ ನಡದದ. ಇನ್ನ ಅಪ್ಪಾ ಅಮ್ಮಾ ತೋರಿಸಿದ ವರ ಎನರೆ ನಾ ಮಾಡಿಕೊಂಡಿದ್ರ ನಾ ಎನ್ ಅವರ ಕಣ್ಣ ಮುಂದ ಇರಲಿಕ್ಕೆ ಸಾಧ್ಯರ ಇತ್ತೇನು? ಇಬ್ಬರಿಗೂ ನನ್ನಿಂದ ದೂರಾಗೊ ನೋವನ್ನ ಅನುಭೋಗಸೊದು ಅನಿವಾರ್ಯನ ಇತ್ತು. ಒಂದ ವ್ಯಾಳೆ ನಾ ಅವರ ಪ್ರಕಾರನ ಮದವಿ ಮಾಡಕೊಂಡಿದ್ರು ಅವರಿಬ್ಬರು ಎನ ಸುಖದಿಂದ ಇರತಿದ್ದಿಲ್ಲಾ. ಯಾಕಂದ್ರ ನಾ ಹೋದ ಮನ್ಯಾಗ ಛೋಲೊ ಜೀವನಾ ಮಾಡಲಿಕ್ಕೆ ನಂಗ ಆಗತಿದ್ದೇ ಇಲ್ಲಾ. ಅಪ್ಪ ಅಮ್ಮಗ ತಡಕೊಳ್ಳಾರದ ನೋವು ಕೊಟ್ಟೇನಿ, ನಂಗ ಗೊತ್ತದ, ಜೀವನಿಡಿ ಅದರ ಝಳಾ ನಂಗ ಬಡಿತನಾ ಇರತದ.ಆದ್ರ ನನಗ ಗೊತ್ತದ ಅಪ್ಪಗ ನನ್ನ ಮ್ಯಾಲೆ ಎಷ್ಟ ಪ್ರೀತಿ ಅದ ಅಂತ. ಒಂದಿಲ್ಲ ಒಂದಿನಾ ಅವರು ಮತ್ತ ನನ್ನ ತಮ್ಮ ಹತ್ರ ಕರಿತಾರ ಅಂತ ವಿಶ್ವಾಸ ಅದ.ಅದಕ್ಕ ನಾ ಇನ್ನು ಇದ ಊರಾಗ ಇದ್ದೇನಿ. ದೂರಿಂದನರ ಯಾಕಾಗ್ಲಿ ಅಪ್ಪ ಅಮ್ಮನ ನೋಡ್ಲಿಕ್ಕರ ಸಿಗತದ ಅಂತ. ನಾ ಈಗ ಇದ್ದ ಜೀವನದಾಗ ತೄಪ್ತಿಯಿಂದ ಇದ್ದೇನಿ." ಇಷ್ಟೆಲ್ಲಾ ಹೇಳೊಮುಂದ ಪಮ್ಮಿ ಮಾರಿಯೊಳಗಿನ ಆತ್ಮವಿಶ್ವಾಸ ನೋಡಿ ಭಾಳ ಖುಷಿ ಆತು. ಅಷ್ಟರಾಗ ಹೊರಗ ಸಪ್ಪಳಾತು, ಇಬ್ಬರು ಹೊರಗ ಬಂದ್ವಿ. ಪಮ್ಮಿ ಅತ್ತಿ ಮಾವಾ ಎಲ್ಲಾರು ಗುಡ್ಡದಿಂದ ಬಂದಿದ್ರು. ನನ್ನ ಪಮ್ಮಿಯ ಸುಸಂಸ್ಕೄತತೆಯ ನೆರಳು ಮನಿಮಂದಿಯೊಳಗೆಲ್ಲಾ ಎದ್ದು ಕಾಣಸ್ತಿತ್ತು. ಪಮ್ಮಿ ನನ್ನ ಅವರಿಗೆಲ್ಲಾ ಪರಿಚಯ ಮಾಡಸಿದ್ಲು. ಮಕ್ಕಳಿಗೆ  ಒಯ್ದಿದ್ದ ಚಾಕಲೇಟ್ಸ ಕೊಟ್ಟೆ. ಇಸ್ಕೊಂಡ ಥ್ಯಾಂಕ್ಸ ಹೇಳಿದ ಅವರನ್ನ ನೋಡಿ ಆಶ್ಚರ್ಯ ಆತು. ಪಮ್ಮಿ ಅತ್ತಿ ಮಾವಾ, ಗಂಡಾ ಎಲ್ಲಾ ಭಾಳ ಛೊಲೊ ಮಾತಾಡಿಸಿದ್ರು. ಪಮ್ಮಿ ಗಂಡಾ ಅಡ್ಡಿಯಿಲ್ಲಾ ಕಪ್ಪ ಇದ್ರು ಲಕ್ಷಣ ಇದ್ದಾ. ಖರೆ ಬರಬೇಕಾದ್ರ ಪಮ್ಮಿ ಬಗ್ಗೆ ಏನೊ ಒಂಥರಾ ಮರುಕಾ ಅನುಕಂಪ ಇಟಗೊಂಡ ಬಂದಿದ್ದೆ. ಆದ್ರ ಆಕಿನ್ನ ಮತ್ತ ಆಕಿ ಜೀವನಾ ನೋಡಿ ಅವೆಲ್ಲಾ ಹೋಗಿ ಪಮ್ಮಿ ಬಗ್ಗೆ ಹೆಮ್ಮೆ ಭಾವನೆ ಉಕ್ಕಿ ಬಂತು. ಆಕಿ ಕೊಟ್ಟ ಕುಂಕಮಾ ಖಣಾ ತಗೊಂಡು ಊರಿಗೆ ಹೋಗೊದ್ರಾಗ ಮತ್ತ ಒಂದ ಸಲಾ ಬಂದಹೋಗತೇನಿ ಅಂತ ಹೇಳಿ ವಾಪಸ ಮನಿಕಡೆ ಹೊಂಟಬಂದೆ. ಬರಬೇಕಾದ್ರ ಮನಸ್ಸು ಎಷ್ಟ ಭಾರ ಮತ್ತ ಕಸಿವಿಸಿಯಿಂದ ಇತ್ತೊ, ವಾಪಸ ಹೋಗಬೇಕಾದ್ರ ಅಷ್ಟ ಹವರಗ ಶಾಂತ ಆಗಿತ್ತು. ಆಕಿ ಮಾಡಿದ್ದ ತಪ್ಪು ಆಕಿಗೆ ತಿಳಿಸಿಕೊಡಬೇಕಂತ ಹೋದಾಕಿಗೆ, ಆಕಿ ಮ್ಯಾಲೆ ಅಭಿಮಾನ ಪಡೊಹಂಗ ಮಾಡಿಕಳಿಸಿದ್ಲು ನನ್ನ. ಎಲ್ಲೊ ಒಂದ ಕಡೆ ಪಮ್ಮಿ ಜೀವನದಾಗ ಯಶಸ್ಸಿನ ಹಾದಿ ಒಳಗ ಇದ್ದಾಳ ಅನಿಸ್ತು. ಅಲ್ಲೆ ಇದ್ದ ಬಾದರಾಯಣ ದೇವರಗುಡಿಗೆ ಹೋಗಿ ಆಕಿಗೆ ಅಖಂಡ ಗೆಲವು ಸಿಗಲಿ ಅಂತಾ ಬೇಡ್ಕೊಂಡು, ಮನಿಕಡೆ ಹೊಂಟೆ.

ಪುಟದ ಮೊದಲಿಗೆ
 
Votes:  30     Rating: 4.73    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ