ಸ.ರಘುನಾಥ ಈಗ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಶೆಟ್ಟಿಹಳ್ಳಿ ಎಂಬ ಹಳ್ಳಿಯಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ. ಇನ್ನು ಒಂದೆರಡು ವರ್ಷಕ್ಕೆ ಅವನಿಗೂ ಅರವತ್ತು ವರ್ಷವಾಗುತ್ತದೆ. ಆಗ ಅವನು ನಿವೃತ್ತನಾಗುತ್ತಾನೆ. ಅವನೊಬ್ಬ ಅನ್‌ಅಸ್ಯೂಮಿಂಗ್ ಮನುಷ್ಯ. ಇಲ್ಲಿಯವರೆಗೂ ಅವನು ನಿಜಕ್ಕೂ ಶ್ರೇಷ್ಠ ಶಿಕ್ಷಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರೂ ಯಾವ ಸರಕಾರಕ್ಕೂ ಅವನ ಇರವೇ ನೆನಪಾಗುವುದಿಲ್ಲ. ಏಕೆಂದರೆ ಅವನು ಪ್ರಶಸ್ತಿಗಾಗಿ ಅರ್ಜಿ ಹಾಕುವುದಿಲ್ಲ. ಶಾಲು ಹಾರಗಳಿಗಾಗಿ ಕಾಸು ಖರ್ಚು ಮಾಡುವುದಿಲ್ಲ. ರಾಜಕಾರಣಿಗಳ ಹಿಂದೆ ತಿರುಗುವುದಿಲ್ಲ, ರಾಜಕಾರಣ ಮಾಡುವುದಿಲ್ಲ. ತನ್ನ ಸುತ್ತಲೇ ಸುತ್ತುವ ವೃತ್ತ ಜೀವನಕ್ಕೆ ವಿರುದ್ಧವಾಗಿ ಬದುಕನ್ನು ಕಟ್ಟಿಕೊಂಡಿರುವವ. ಮೂವತ್ತೈದು ವರ್ಷಗಳ ತನ್ನ ವೃತ್ತಿ ಜೀವನದ ಬಹುಪಾಲು ಶಾಲೆ, ಮಕ್ಕಳು, ಹಳ್ಳಿಯ ಅಮಾಯಕ ಮಂದಿ, ರೋಗಿಗಳು, ಭಿಕ್ಷುಕರ ಮಕ್ಕಳು, ಕಾಡಿನ ಸಣ್ಣ ಪುಟ್ಟ ಪ್ರಾಣಿಗಳು, ಮರಗಿಡಗಳು ಹೀಗೆ ಜಂಗಮ-ಸ್ಥಾವರಗಳೆಲ್ಲವನ್ನೂ ಕಣ್ಣಾಯದೊಳಗೆ ಸ್ಥಾಪಿಸಿಕೊಂಡು ಅವುಗಳ ಸೇವೆ ಮಾಡುತ್ತ ಬರುತ್ತಿರುವವ ಆಮೇಲೆ ಏನು ಮಾಡುತ್ತಾನೆ ಎನ್ನುವುದು ನನಗೆ ಕುತೂಹಲಕರವಾಗಿ ತೋರುತ್ತದೆ.
ನಿಜ. ಆಮೇಲೆ ಅವನಿಗೆ ತುಂಬ ಪುರುಸೊತ್ತು ಸಿಗುತ್ತದೆ. ನಿಧಾನವಾಗಿ ಬೆಳಗಿನ ಜಾವ ಮಲಗಿ ಇನ್ನೂ ನಿಧಾನವಾಗಿ ಏಳಬಹುದು. ತೆಲುಗು ಕವಿಗಳು ಬರೆದುದನು ಕನ್ನಡದಲ್ಲಿ ಅಥವಾ ಕನ್ನಡದ ಕೃತಿಗಳನ್ನು ತೆಲುಗಿಗೆ ಅನುವಾದಿಸುತ್ತ ಇರಬಹುದು. ತನ್ನದೇ ಕನ್ನಡದಲ್ಲಿ ಕವಿತೆಗಳ, ಕಥೆಗಳ, ಅಂಕಣಗಳ ಬರೆಯಬಹುದು. ತಾನಿನ್ನೂ ಬರೆಯದಿರುವ ಕಾದಂಬರಿಯನ್ನು ಬರೆಯಲು ಪ್ರಯತ್ನಿಸಬಹುದು. ರಾಜ್ಯೋತ್ಸವ ಮುಂತಾಗಿ ಸಮಾರಂಭಗಳಿಗೆ ಯಾರಾದರೂ ಕರೆದರೆ (ಬಹಳ ಸಲ ತನ್ನ ಅಪರೂಪದ ಉಳಿಕೆ ಹಣದಲ್ಲಿ) ಹೋಗಿ ಭಾಷಣ ಮಾಡಬಹುದು. ಮನಸ್ಸಿದ್ದರೆ ಇನ್ನು ಮುಂದೆ ತನ್ನ ಹೆಂಡತಿ ನಿಮ್ಮಿಯ ಮೊಣಕಾಲಿಗೆ ನೋವಿನ ಔಷಧಿ ಹಚ್ಚಬಹುದು. ತಾನು ತಲೆ, ಮೈಗೆ ಎಣ್ಣೆ ಹಚ್ಚಿಸಿಕೊಂಡು ಅಭ್ಯಂಜನ ಮಾಡಬಹುದು. ಬೋರಲು ಮಲಗಿ ಮೊಮ್ಮಗ ಮಾಲಿಂಗನಿಂದ ದಣಿದು ನೋಯುವ ಒಂಟಿಕಾಲನ್ನು ತುಳಿಸಿಕೊಳ್ಳಬಹುದು.
ಅದಷ್ಟನ್ನೇ ಮಾಡಿಕೊಂಡಿರಲು ಹೇಗೆ ಸಾಧ್ಯ ಎನ್ನುವುದು ಅವನಿಗೆ ಸಮಸ್ಯೆಯಾದರೆ ಈಗಿನಂತೆಯೇ ತನ್ನ ಭಿಕ್ಷುಕರ ಮಕ್ಕಳನ್ನು ನೋಡಿಕೊಳ್ಳಲು ಅವನೇ ನಡೆಸಿಕೊಂಡು ಬರುತ್ತಿರುವ ನಮ್ಮ ಮಕ್ಕಳು ಎಂಬ ಇನ್‌ಫಾರ‍್ಮಲ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಇನ್ನಷ್ಟು ವ್ಯಾಪಕವಾಗಿ ಅದನ್ನು ಮಾಡಬಹುದು. ಒಳ್ಳೆಯ ಮನಸ್ಸಿನಿಂದ ನಡೆಸುತ್ತಿರುವ ಶಾಲೆಗಳ ಮಕ್ಕಳಿಗೆ ಅಥವಾ ತೇರಹಳ್ಳಿ ಬೆಟ್ಟದ ಕೋಟಿಗಾನಹಳ್ಳಿ ರಾಮಯ್ಯನ ಆದಿಮದ ಕಮ್ಮಟದಲ್ಲಿ ಭಾಗವಹಿಸುವ ಮಕ್ಕಳಿಗೆ ಕಥೆ ಹೇಳಲು ಹೋಗಬಹುದು.
ಅವನಿಗೆ ಮನೆಯಿಲ್ಲ; ದುರಸ್ತಿ ಮಾಡಿಸುವ ತಲೆ ನೋವಿಲ್ಲ. ಹೊಲವಿಲ್ಲ; ಅದನ್ನು ನೋಡಿಕೊಂಡಿರುವ ಅನಿವಾರ್ಯತೆಯಿಲ್ಲ. ಅವನ ಬಳಿ ಎಮ್ಮೆ ಹಸುಗಳಿಲ್ಲ; ಅವುಗಳ ಲಾಲನೆ ಪಾಲನೆಯ ಕರ್ತವ್ಯವಿಲ್ಲ. ಅವನು ಪ್ರೀತಿಯನ್ನು ಉಚಿತವಾಗಿ ಹಂಚುವವನು. ಅದನ್ನು ಪಡೆದುಕೊಂಡವರು ಹಲವರು. ಅವನಿಗೆ ಪ್ರತ್ಯುಪಕಾರ ಮಾಡಿದವರ ಸಂಖ್ಯೆ ಹೆಚ್ಚೇನೂ ಇರಲಾರದು. ಅವನು ಅದರ ಬಗ್ಗೆ ಮಾತಾಡುವುದಿಲ್ಲ. ವಿರಾಮ ದೊರೆತದ್ದರಿಂದ ಅವನು ಇವನಂತೆಯೇ ನಾಟಿ ಬುದ್ಧಿಯ ಕವಿ ಪಣಸಮಾಕನಹಳ್ಳಿ ಚೌಡರೆಡ್ಡಿಯ ಜೊತೆ ಬೈಕಿನ ಹಿಂದೆ ಕುಳಿತು ಷಿಕಾರಿಕಿ ವೆಳ್ಳವಚ್ಚು. ಆ ಮೇಲೆ ಬಂದು ನಾಟಿ ಕೋಳಿಯ ಬಗ್ಗೆ ನೆನಪುಗಳ ಕೆರಳಿಸುವ ಉಪನ್ಯಾಸ ಕೊಡಬಹುದು. ತುಂಬ ಪ್ರೀತಿಯಿಂದ ಮಿಲಿಟರಿ ಸಾರು, ಬರೀ ರಾಗಿ ಮುದ್ದೆ ಉಣ್ಣಬಹುದು. 
ಹೊರ ಸಂಚಾರ ಎಂಬ ಪ್ರಬಂಧ ನಮ್ಮ ಎಳವೆಯಲ್ಲಿ ಪಠ್ಯವಾಗಿತ್ತು. ಆದರೆ ಹುಲಿಯ ಕಥೆ ಕೇಳಿ ಬೆಚ್ಚಿದವರಿಗೆ ಅದೇನು ರುಚಿಸೀತು? ಆದರೆ ರಘುಗೆ ಅವು ರುಚಿಸುತ್ತವೆ. ಒಂದು ಕಾಲಿನ ಅವನು ಎರಡಿರುವ ನನಗಿಂತ ಹೆಚ್ಚು ದೇಸದೇಸ ತಿರುಗಿದ್ದಾನೆ. ನನಗಿಂತ ಹೆಚ್ಚು ರೂಕ್ಷ ಬದುಕನ್ನು ತಾಖತ್ತಿನಿಂದ ಎದುರಿಸಿದ್ದಾನೆ. ನನಗೆ ಅರಿವಾಗದ ಏನೇನೆಲ್ಲದರಿಂದ ಬದುಕಿನ ಮೊಳಕೆಯಲ್ಲೇ ವಂಚಿತನಾಗಿದ್ದಾನೆ. ಅವನು ಸಾಯಲು ಹೊರಟು ಸಾವಿನಿಂತ ತ್ಯಜಿಸಲ್ಪಟ್ಟು ಬದುಕನ್ನು ಆಯ್ದುಕೊಂಡವನು. ಕಾಲು ಕಳೆದುಕೊಂಡು ಬದುಕನ್ನು ಉಳಿಸಿಕೊಂಡವನು. ಆ ಬಳಿಕ ರಘು ಬದುಕಿನಲ್ಲಿ ಪಡೆದ ಒಂದಿಷ್ಟನ್ನೇ ಬಹಳ ಬಹಳವೆಂದು ಅನುಭವಿಸಿದ್ದಾನೆ. ಆದರೆ ಆ ಬಳಿಕ ಸಾವಿನ ಹಾದಿಯಲ್ಲಿರುವ ಅದೆಷ್ಟೋ ಮಂದಿಗೆ ಬದುಕಿನ ಸೌಂದರ್ಯವನ್ನು ಕುರಿತು ಹೇಳಿದ್ದಾನೆ. ತನ್ನ ಅನುಭವದ ಭಾಗವಾದ ಅವೆಲ್ಲಕ್ಕೂ ತಾನು ತೋರಿದ ಸಂವೇದನಾತ್ಮಕ ಪ್ರತಿಕ್ರಿಯೆ ಎಂಬಂತೆ ತುಂಬ ಹೃದ್ಯವಾದ ಕಾವ್ಯವನ್ನೂ, ಕಥೆಗಳನ್ನೂ, ಅಂಕಣರೂಪಿ ಪ್ರಬಂಧಗಳನ್ನೂ ಬರೆದಿದ್ದಾನೆ. ತನ್ನ ಅಂಕಣ ಬರಹಗಳಲ್ಲಿ ಹೇಗೋ ಹಾಗೆ ಕಥೆ ಕವಿತೆಗಳಲ್ಲೂ ಬದುಕನ್ನು ನಿರ್ವ್ಯಾಜ ಪ್ರೀತಿಯಿಂದ ಮನಗಾಣಿಸಿದ್ದಾನೆ.
ಅವನ ಕಥೆ, ಅಂಕಣಗಳು ಬದುಕನ್ನು ಸಂಭ್ರಮಿಸುತ್ತವೆ. ಸ್ನೇಹವನ್ನು ಹಬ್ಬದಂತೆ ಆಚರಿಸುತ್ತವೆ. ಅವನ ಗಡಿಗೆಗಳು ಎಂಬ ಕವಿತೆ ಮತ್ತು ಯಾದಿ ಹಬ್ಬದ ಸಂತೆ ಮಾಡಿದ್ದು ಎಂಬ ಕಥೆಯನ್ನು ನಾನು ಲೀವ್ಸ್ ಎಂಬ ಆಂಗ್ಲ ಪತ್ರಿಕೆಯಲ್ಲಿಯೂ ಮ್ಯೂಸ್ ಇಂಡಿಯಾ ಎಂಬ ಆಂಗ್ಲ ಇ ಮ್ಯಾಗಝೈನಿನಲ್ಲೂ ಅನುವಾದಿಸಿ ಪ್ರಕಟಿಸಿದ್ದೇನೆ. ಕನ್ನಡ ಹೆಮ್ಮೆ ಪಡಬಹುದಾದ ರಚನೆಗಳು ಅವು. ಅಂತಹವು ಬಹಳವಿವೆ. ಮಕ್ಕಳ ಸಾಹಿತ್ಯ ರಚನೆಯಲ್ಲೂ ರಘು ಹಿಂದೆ ಬಿದ್ದಿಲ್ಲ. ಆ ಕೃತಿಗಳು ಮಕ್ಕಳ ಮನಸ್ಸನ್ನು ಅರಿತ ಮತ್ತು ಅವನ್ನು ವಿಕಸನಗೊಳಿಸುವ ಬರೆಹಗಳು.
ರಘು ಕನ್ನಡಕ್ಕೆ ಕೊಟ್ಟ ಕೊಡುಗೆ ಗಮನಾರ್ಹವಾದರೂ ಅವನು ಪಡೆದ ಪ್ರತಿಕ್ರಿಯೆ ಮಾತ್ರ ನಮ್ಮ ವ್ಯಕ್ತಿ ಪೂಜೆಯ ಹೊಣೆ ಹೊತ್ತ ತತ್ಪರ ಮಂದಿಯ ಅನಾದರ. ನಮ್ಮಲ್ಲಿ ವ್ಯಕ್ತಿ ಪೂಜೆಯ ವಿಚಾರ ಇನ್ಸ್ಟಿಟ್ಯೂಷನಲೈಸ್ ಆಗಿ ಹೋಗಿರುವುದು ಎಲ್ಲರಿಗೂ ಗೊತ್ತಿದೆ. ಸ್ವತಃ ಪೂಜಿತರಿಗೂ ಅದು ಗೊತ್ತು. ಆದರೆ ಆತ್ಮರತಿಯಲ್ಲಿ ತೊಡಗಿದ ಕನ್ನಡ ಸಾರಸ್ವತ ಲೋಕದ ಹಲವರ ಬಗ್ಗೆ ಏನಾದರೂ ಹೇಳದಿರುವುದು ನಮ್ಮ ಸೂಕ್ಷ್ಮವೆಂದು ಭಾವಿಸುವ ಅನಿವಾರ್ಯತೆ ನಮಗಿದೆ. ಏಕೆಂದರೆ ಅದು ಕೊಳೆ ಬಟ್ಟೆಯನ್ನು ಬೀದಿಯಲ್ಲಿ ಒಗೆದ ಹಾಗೆ. ಅದನ್ನು ಜಾಸ್ತಿ ತಿಳಿದುಕೊಂಡವರಲ್ಲಿ ರಘು ಕೂಡ ಒಬ್ಬ.
ರಘು ಬರೆದಿರುವುದು (ಪ್ರಕಟಿತ) ಆರು ಕವನ ಸಂಕಲನಗಳು, ಒಂದು ಸಣ್ಣಕಥೆಯ ಸಂಕಲನ, ಎರಡು ವಿಮರ್ಶಾ ಸಂಕಲನಗಳು, ಮೂರು ಲೇಖನಗಳ ಸಂಕಲನಗಳು, ಕನ್ನಡದಿಂದ ತೆಲುಗಿಗೆ ಬಸವಣ್ಣನ ವಚನಗಳು, ಕೈವಾರ ನಾರಣಪ್ಪನ ಪದಗಳು, ಮಕ್ಕಳ ಕವಿತೆಗಳು, ಮಕ್ಕಳ ಕೈಲಿ ಬರೆಸಿದ ಕವಿತೆಗಳು, ಕನ್ನಡದ ನೂರಕ್ಕೂ ಮಿಕ್ಕ ಕವಿತೆಗಳ ತೆಲುಗು ಅನುವಾದ ಹೀಗೆ ಯಾದಿ ದೊಡ್ಡದಿದೆ. ಇದರಿಂದ ಲಾಭ ಪಡೆದಿದ್ದು ರಘು ಅಲ್ಲ, ಯಾರು ಎನ್ನುವುದು ಊಹೆಗೆ ಬಿಟ್ಟ ವಿಚಾರ. ಅಂತೆಯೇ ಅವನ ಶ್ರಮದ ಲಾಭ ಪಡೆದು ದೊಡ್ಡವರಾದವರ ವಿಚಾರ ಕೂಡ.
ಈ ನೆಲದ ಬಗ್ಗೆ ಅಬ್ಸೆಸಿವ್ ಎನ್ನುವಷ್ಟು ಪ್ರೀತಿ ಇಟ್ಟುಕೊಂಡಿರುವ ರಘು ಇಂಗ್ಲಿಷ್ ಹೆಚ್ಚು ಬಲ್ಲವನಲ್ಲ. ಆದ್ದರಿಂದಲೇ ಇರಬೇಕು, ಅವನ ಚಿಂತನೆಗಳು ನೆಲದ ಮಾತಾಡುವಾಗ ಬಳಲುವುದಿಲ್ಲ. ಯಾವುದೇ ಪೂರ್ವಗ್ರಹದಿಂದ ಪೀಡಿತವಾಗದ ಸ್ನೇಹ ಕೊಟ್ಟಿರುವ ಮತ್ತು ಪಡೆದಿರುವ ಇವನನ್ನ ಪ್ರೀತಿಸುವ ಅಸಂಖ್ಯ ಮನುಜ ಪ್ರೀತಿಯ ಅಸಾಹಿತ್ತಿಕ ಜನರೂ, ಕೆಲವು ಸಾಹಿತಿಗಳೂ ಇದ್ದಾರೆ. ಅಂತೆಯೇ ಅನೇಕ ಮ್ಯಾನೆಜರ‍್ಸ್ ಆಫ್ ಲಿಟರೇಚರ್‌ಗಳು ಅವನನ್ನು ಬಲ್ಲವರು. ಅವರೆಲ್ಲರ ಕಾಯಕ ಲವ್ ದೈ ಸೆಲ್ಪ್ ಮೋರ್ ದ್ಯಾನ್ ಎನಿಥಿಂಗ್. ಕುತೂಹಲವೆಂದರೆ ಪ್ರಕಾಶಕರೊಬ್ಬರು ಇವನ ಕಥಾಸಂಕಲನವೊಂದನ್ನು ಬೇರೆ ಬೇರೆ ಕಾಲದಲ್ಲಿ ಬೇರೆಬೇರೆ ಹೆಸರುಗಳಲ್ಲಿ ಪ್ರಕಟಿಸಿ ಕಾಸುಮಾಡಿಕೊಂಡಿದ್ದು.
ಕನ್ನಡ ಮತ್ತು ತೆಲುಗು ನಡುವಣ ಕೊಡುಕೊಳ್ಳುವಿಕೆಯ ವಿಚಾರದಲ್ಲಿ ರಘು ಮಾಡಿರುವ ಕೆಲಸ ನಿಜಕ್ಕೂ ಮೌಲಿಕವಾದದ್ದು. ಭಾಷಾಂತರದ ಸಂದರ್ಭದಲ್ಲಿ ಕನ್ನಡದ ವಿಚಾರಕ್ಕೆ ಬಂದರೆ ಸುತ್ತಲಿನ ಭಾಷೆಗಳಿಗಿಂತ ಇದು ಕೊಂಚ ಮೇಲು ಎನ್ನುವಷ್ಟು ಅನುವಾದಗಳು ಇಲ್ಲಿ ಬರುತ್ತಿವೆ. ಆದರೂ ಕೊಡುಕೊಳುವುದಕ್ಕೆ ಇರುವ ಅಗತ್ಯವನ್ನು ಗಮನಿಸಿದರೆ ಆಗುತ್ತಿರುವುದು ಬಹಳ ಕಡಿಮೆ. ಈ ಕೊರತೆಯನ್ನು ರಘು ಕೊಂಚಮಟ್ಟಿಗಾದರೂ ನೀಗಿಸುತ್ತಿದ್ದಾನೆ. ಅವನ ಪ್ರಯತ್ನಗಳು ಪ್ರಾಮಾಣಿಕವಾಗಿವೆ. ಇತ್ತೀಚೆಗೆ ಅವನು ಅನುವಾದಿಸಿದ ಷಾಜಹಾನರ ನಖಾಬ್ ಅನ್ನು ವಿಹಾ ಪುಸ್ತಕ ಪ್ರಕಟಿಸಿದೆ. ಮೋ ಅವರ ತೆಲುಗು ಕವಿತೆಗಳ ಅನುವಾದವೂ ಪ್ರಕಟಣೆಗೆ ಸಿದ್ಧವಾಗಿದೆ.
ತೆಲುಗು ಕನ್ನಡದಂತೆಯೇ ಕಂಡರೂ ಅದು ನೋಟಕ್ಕೆ ಮಾತ್ರ. ಇದರ ಮುತ್ತುಗಳೂ ಆಳ ಕಡಲಿನಲ್ಲಿ ಮಾತ್ರವೇ ಇರುವಂಥವು. ರಘು ತೆಲುಗಿನ ಮುತ್ತನ್ನು ಆ ಆಳ ಕಡಲಿಂದ ಎತ್ತಿ ತಂದು ಅಚ್ಚುಕಟ್ಟಾಗಿ ನಮಗೆ ಕೊಟ್ಟಿದ್ದಾನೆ. ಕನ್ನಡದ ಮುತ್ತನ್ನು ಎತ್ತಿ ತಂದು ಅಚ್ಚುಕಟ್ಟಾಗಿ ತೆಲುಗರಿಗೆ ಕೊಟ್ಟಿದ್ದಾನೆ.
ಇದಿಷ್ಟು ನಾನು ಕನ್ನಡದಲ್ಲಿ ಆಡಿದ ಮಾತಾಯಿತು. ಆನುಷಂಗಿಕವಾಗಿ ಒಂದು ಮಾತನ್ನು ಹೇಳಲಿಕ್ಕಿದೆ. ಭಾಷೆ ಸೋಲುವುದೆಲ್ಲಿ ಎಂಬ ಪ್ರಶ್ನೆ ಬಹಳ ಸಲ ನನ್ನ ಕಾಡಿದೆ. ಲಕಾನ್‌ನನ್ನ ಅನುಸರಿಸಿ ಹೇಳುವುದೆಂದರೆ ಭಾಷೆ ಯಾವಾಗಲೂ ಅಪರಿಪೂರ್ಣ, ಅದು ಲುಕ್ಸಾನು, ಅದೊಂದು ದೊಡ್ಡ ಕಂದಕ. ನಾವು ಯಾರ ಬಗ್ಗೆ ಏನು ಹೇಳಿದರೂ ಅದು ಕೊರತೆಯೇ. ಹೇಳುವುದರಲ್ಲಿ ಏನೋ ಒಂದನ್ನು ಹೇಳಲು ನಮ್ಮ ಮಾತಿಗೆ ಸಾಧ್ಯವಾಗಿರುವುದಿಲ್ಲ. ಆದ್ದರಿಂದಲೇ ನಾವು ಮಾತನ್ನಾಡುತ್ತಿರಬೇಕೆಂದು ಮಾತು ಆಶಿಸುತ್ತ ಇರುತ್ತದೆ. ಅದು ಮುಂದಿನ ಮಾತು ಹಿಂದಿನ ಮಾತಲ್ಲಿದ್ದ ತಪ್ಪನ್ನು ಸರಿಮಾಡಬಹುದೆಂಬ ಆಶಯದಲ್ಲಿ. ಆದರೆ ಇವತ್ತಿನ ಸಾಹಿತ್ಯಲೋಕ ಸೆಲೆಕ್ಟಿವ್ ಟಾಕಿಂಗ್ ಅನ್ನು ತನ್ನ ಮ್ಯಾನಿಫೆಸ್ಟೋ ಮಾಡಿಕೊಂಡಿದೆ. ಇದು ಮಾತಿಗೆ ತನ್ನ ಕೊರತೆ ತುಂಬಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ. ಅದು ಸೇತುವೆಗಳನ್ನು ಬೇಡದ ಕಡೆ ನಿರ್ಮಿಸುತ್ತದೆ. ದಾಟಬೇಕಾಗಿರುವವರು ದಡದಲ್ಲಿಯೇ ಉಳಿಯುವಂತೆ ಮಾಡಿಬಿಡುತ್ತದೆ.