ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ರಶೀದ್ ಬರೆದ ಕವಿತೆ.
(೧)
ಏ ನಕ್ಷತ್ರ ಏನು ಮಾಡಿಬಿಟ್ಟಿರುವೆ
ಈ ನಡುವಯಸ್ಕ ಹೃದಯಕ್ಕೆ
ಇನ್ನೆಂದೂ ನಿಲಲಾಗದಂತೆ.
ಹುಟ್ಟಿದಾಗಿಂದ ಅದುಮಿಟ್ಟಿದ್ದ ಒಂದು ಅಳು,
ಕರುಳೊಳಗೇ ಬಾಯಿಲ್ಲದೆ ಸಿಲುಕಿಕೊಂಡಿದ್ದ
ಒಂದು ಸುಡು ಮಿಂಚಿನಂತಹ ಚೀತ್ಕಾರ,
ಒಂದು ಸುಖದ ಪರಿಮಳದಂತಹ ಬಾಕು
ಇನ್ನು ಉರಿಯುತ್ತ ಇರುವುದು ಇರುವರೆಗೆ
ನಿನ್ನ ಸಣ್ಣ ನಡುವಿನ ಒಂದು ಒದ್ದೆ ಉಮ್ಮಳ
ಯಾವುದೋ ನಕ್ಷತ್ರಪುಂಜ ಹೊರಳುವ
ಹಾಲಾಹಲದಂತೆ ಕೇಳಿಸುವುದು ಇಲ್ಲಿಗೆ,
ಉದುರಿಬಿದ್ದ ಒಂದು ಕಣ್ಣ ಹನಿ
ನದಿಯಂತೆ ಹರಿದು ಈ ಪ್ರಪಾತವ ಸೇರುವುದು,
ಮುಡಿಯ ಸರಿಸಿ ಕಾಣಿಸುವ ನಿನ್ನ ಕಿವಿಯ
ಸಣ್ಣದೊಂದು ನಗ್ನತೆ ಅಪರಿಮಿತ ರತಿ ಸುಖವ
ತೋರಿಸುವುದು,
ಏ ನಕ್ಷತ್ರ ಏನು ಮಾಡಿಬಿಟ್ಟಿರುವೆ
ಈ ನಡುವಯಸ್ಕ ಹೃದಯಕ್ಕೆ
ಇನ್ನೆಂದೂ ನಿಲಲಾಗದಂತೆ
ಹೊರಟು ಹೋಗು ಈ ಜಗದ ಬಾರವೇ
ಹೋಗು ಈ ನಡೆವ ಸುಖ, ಹೊರಳಿ ಅಲ್ಲಿಗೇ
ಬರಬೇಕಾದ ದುಃಖ
ಹೊರಟು ಹೋಗಲಿ ಈ ಇರುವ ಉಣ್ಣುವ
ಕೂಡುವ ಈ ಓಡಾಡುವ ನಿತ್ಯ ಮರಣ
ಹರಿದು ಬರಲಿ ನಿನ್ನ ಎದೆಯ ಬೆವರ ಪರಿಮಳ
ಈ ನಡುವಯಸ್ಕನ ಸುಡುವ ಎದೆಯ.
ಕಳ್ಳು ಹಾಲಂತವಳೇ
ಬದುಕಿಯೇ ಇಲ್ಲ ಎಂದನಿಸುವ
ಸುಳ್ಳು ದೇವತೆಯೇ
ಒಂದು ವಿಶಾಲ ನದಿಯಂತಹ ನಿನ್ನ ನಡುವನ್ನು
ಕೊಡು ಈ ನಡುವಯಸ್ಕನಿಗೆ
ಬದುಕಲಿಕ್ಕೆ
(೨)
ಹೇ ನಕ್ಷತ್ರ ನಾವಿಬ್ಬರು ಬೇರೆಂದು ಹೇಗೆ ಬಗೆಯಲಿ?
ನಿನ್ನ ಉಸಿರಿಗೇ ಸುಟ್ಟ ನನ್ನ ತುಟಿಗಳಿಂದ ನಗಲು ನೋಡುತ್ತಿರುವೆ.
ನಿಲಿಸಲಾಗದ ಈ ಅಸಾಧ್ಯ ನಿಟ್ಟುಸಿರು, ಸುಡು ಬಿಸಿಲಿನ ಹಾಗಿರುವ
ನೀನಿಲ್ಲದ ಉರಿ, ಎದೆಯೊಳಗೆ ಹರಿದು ಹೋಗುವ
ಈ ಇನ್ನಿಲ್ಲದಂತಹ ಲಾವಾಗ್ನಿ
ಇವೆಲ್ಲ ಬರೆಯಲು ಮತ್ತು ಓದಲು ಮಾತ್ರ ಇರುವುದು
ಅಂದುಕೊಂಡಿದ್ದೆ.
ಇದೀಗ ನೀ ಹೊರಟ ಮರುಗಳಿಗೆಯೇ
ಇವೆಲ್ಲವೂ ಒಂದಾಗಿ ಮುತ್ತಿಕೊಂಡಿವೆ.
ಮಹಾ ಕಟುಕಿಯಂತೆ
ಹೊರಟವನ ತುದಿಗಣ್ಣಲ್ಲೇ ನಿಲ್ಲಿಸಿ ನೆಲಕ್ಕೆ ಕೆಡವಿರುವೆ.
ನೀ ಬಂದೆ, ಕಂಡೆ, ಕೂಡಿದೆ, ಹೋದೆ
ಒಂದು ಅಗಾಧ ಕಡಲಂತಹ ಉಮ್ಮಳವ
ಮೈಯೆಲ್ಲ ಉಳಿಸಿ.
ಕವಿತೆ ಸಾಲು ಪ್ರತಿಮೆ ಮಣ್ಣಾಂಗಟ್ಟಿ
ಎಲ್ಲವನು ನೆಲದಲ್ಲಿ ಅಲ್ಲಲ್ಲಿ ಚಲ್ಲಾಪಿಲ್ಲಿ ಬೀಳಿಸಿ
ನನ್ನ ಅಷ್ಟೊಂದು ಅಳಿಸಿ!