ಮೇ ೨೧, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ತೋಳ್ಪಾಡಿ ಸೌಂದರ್ಯ ಲಹರಿ:ಮಗುವಾಗಿ ಬಿಟ್ಟಿರುವ ಕಾಮ    
ಲಕ್ಷ್ಮೀಶ ತೋಳ್ಪಾಡಿ
ಶುಕ್ರವಾರ, 22 ಜೂನ್ 2012 (04:08 IST)

’ಶ್ರೀಚಕ್ರ’ವನ್ನು ಕುರಿತ ತಾತ್ತ್ವಿಕ ವಿವರಣೆಯ ಕೊನೆಯ ಭಾಗಕ್ಕೆ ಬರುತ್ತಿದ್ದೇನೆ.

‘ಆವರಣ’ದ ಪರಿಕಲ್ಪನೆಯಾಗಲೀ, ಆವರಣ ಬದ್ಧ ಸ್ಥಿತಿಯನ್ನು ಹೇಳುತ್ತ, ಆವರಣವನ್ನು ಮೀರುವ, ಬಿಡುಗಡೆಯ, ಬಯಲಾಗುವ ಸಾಧ್ಯತೆಯನ್ನು ಸೂಚಿಸುವುದಾಗಲೀ- ಶಾಕ್ತತಂತ್ರಕ್ಕೆ ಮಾತ್ರ ಮೀಸಲಾದ ಧೋರಣೆ- ಆಚರಣೆಗಳಲ್ಲ. ವೇದಾಂತಿಗಳು ’ಮಾಯೆ’ಯ ಆವರಣವೆನ್ನುವರು. ಬೌದ್ಧರು ರೂಪ; ವೇದನಾ, ಸಂಜ್ಞಾ, ಸಂಸ್ಕಾರ, ವಿಜ್ಞಾನಗಳೆಂಬ ಪಂಚಸ್ಕಂಧವೆನ್ನುವರು. ಇವು ಉಪನಿಷತ್ತುಗಳ ’ಪಂಚ ಕೋಶ ವಿಜ್ಞಾನ’ಕ್ಕೆ ಸಂವಾದಿಯಾಗಿ ಐದು ಆವರಣಗಳೇ ಆಗಿವೆ. ಉಪನಿಷತ್ ಸಾಹಿತ್ಯದಲ್ಲಿ ಇನ್ನೊಂದೆಡೆ ಜೀವನನ್ನು ಸುತ್ತುವರಿದ ಹದಿನೈದು ಬೇಲಿಗಳ ವಿವರಣೆ ಇದೆ. ’ಶ್ರದ್ಧೆ’ ಎನ್ನುವುದೂ ಕೂಡ ಒಂದು ಬೇಲಿ (=ದಾಟಬೇಕಾದ್ದು) ಎಂಬ ಅಪೂರ್ವ ಕಾಣ್ಕೆ ಇದೆ ಅಲ್ಲಿ. ಇವೆಲ್ಲವೂ ಸೂಚಿಸುವುದು- ವ್ಯಕ್ತಿಯ ಪ್ರಜ್ಞಾ ವಿಕಾಸಕ್ಕೆ ಆವರಣವು ಅಗತ್ಯ, ಆವರಣದಿಂದ ಸಿಗುವ ಭದ್ರತೆ, ಪೊರೆಯಲ್ಪಡುವ ಭಾವನೆ; ರಸಾನುಭವ, ಇವುಗಳಿಂದೆಲ್ಲ ಉಂಟಾಗುವ ತನ್ನತನದ ವಿಶಿಷ್ಟ ಅರಿವು- ಇವೆಲ್ಲ ಅಗತ್ಯ ಎಂಬುದನ್ನು, ಹಾಗೆಯೇ ಆವರಣವನ್ನು ಮೀರುವುದು ಕೂಡಾ- ಕಟ್ಟುವಂತೆ ಮುರಿಯುವುದು ಕೂಡ- ವಿಕಾಸವನ್ನು ಸಾಧಿಸುವುದಕ್ಕೆ ಅಗತ್ಯ ಎಂಬುದನ್ನು.

ಸೃಷ್ಟಿ ಪ್ರಕ್ರಿಯೆಯಲ್ಲಿಯೇ ಇವೆರಡೂ- ಕಟ್ಟುವುದು ಮತ್ತು ಮುರಿಯುವುದು- ಹುಟ್ಟು ಮತ್ತು ಸಾವು- ಜತೆಗಿವೆ. ಹಾಸು ಹೊಕ್ಕಾಗಿವೆ. ಕಟ್ಟುವುದೆಂದರೆ ಒಂದು ವಿಚಿತ್ರವಾದ ರೀತಿಯಲ್ಲಿ ಮುರಿಯುವುದು ಕೂಡಾ. ಎಲ್ಲ ಕೆತ್ತನೆಯೂ ಒಂದು ರೀತಿಯಲ್ಲಿ ಭಂಜನೆಯೇ ಅಲ್ಲವೆ? ಅಥವಾ ’ಕೆತ್ತನೆ’ಯಲ್ಲಿ ’ಭಂಜನೆ’ಯ ಗುಣವೂ ಉಂಟಲ್ಲವೆ? ಹುಟ್ಟು ಎನ್ನುವುದು ಸಾವಿನ ಕ್ಷಣಗಣನೆಯ ಪ್ರಾರಂಭವಲ್ಲವೆ? ಹೀಗಿರುವುದರಿಂದ ’ತಂತ್ರ’ವು ಉಪಾಸನೆಯಲ್ಲಿ ಸೃಷ್ಟಿ-ಕ್ರಮದಂತೆ ಸಂಹಾರಕ್ರಮ ಅಥವಾ ವಿಲೋಮಕ್ರಮ ಕೂಡಾ ಅಗತ್ಯವೆಂದು ಕಂಡುಕೊಂಡಿದೆ. ನಡೆದು ಬಂದದಾರಿಯಲ್ಲಿ ಹಿಮ್ಮುಖವಾಗಿ ಮರಳುವಾಗ ದಾರಿಯನ್ನು ಇನ್ನೊಮ್ಮೆ ನಡೆದಂತೆ; ಬದುಕನ್ನು ಇನ್ನೊಮ್ಮೆ ಅನುಭವಿಸಿದಂತೆ! ’ಇನ್ನೊಮ್ಮೆ’ ಎನ್ನುವಾಗ ಅದು ರಸಾನುಭವದ ಸವಿಯೂ ಹೌದು; ಅದು ಮುಗಿತಾಯದ ಮಾತೂ ಹೌದು. ರಾಗವನ್ನು ಆಲಾಪಿಸುವಾಗ ’ಆರೋಹಣ’ದಲ್ಲಿ ಹೇಗೆ- ’ಅವರೋಹಣ’ದಲ್ಲಿಯೂ ಹಾಗೆ ರಸಾನುಭವವಿಲ್ಲವೆ? ಷಡ್ಜದಿಂದ ಹೊರ ಹೊಮ್ಮಿದ ಸ್ವರ ಸಂಚಾರ ಮರಳಿ ಷಡ್ಜದಲ್ಲಿಯೇ ಮುಗಿತಾಯಗೊಳ್ಳುವುದು. ರಾಗದ ಜೀವಸ್ವರಗಳ ಹಿಮ್ಮುಖ ನಡಿಗೆಯ ಸ್ವರ ನಾಟ್ಯವದು! ’ನಡೆದು ಬಂದ ದಾರಿ’ ಎನ್ನುವ ಮಾತೇ ’ಇತಿಹಾಸ’ವನ್ನು ಒಂದು ದೂರದಿಂದ ನೋಡುವ ’ಕಾಣ್ಕೆ’ಯನ್ನು ಸೂಚಿಸುವ ರೂಪಕಾತ್ಮಕ ನುಡಿಗಟ್ಟಾಗಿದೆ. ಅದಕ್ಕಿಂತಲೂ ಹೆಚ್ಚು- ’ನಡೆದು ಬಂದ ದಾರಿ’ಯ ದರ್ಶನವೇ ’ಇತಿಹಾಸ’ವಾಗಿದೆ!

ಆಶ್ಚರ್ಯವೆಂದರೆ, ಇನ್ನೊಮ್ಮೆ ಅನುಭವಿಸುವಾಗ ಅನುಭವವು ಗಾಢ. ಏಕೆಂದರೆ ಆಗ, ಇದುವರೆಗಿನಂತಲ್ಲ; ನಮ್ಮ ಮಾನಸಿಕ ಪ್ರಕ್ರಿಯೆಗಳ ಮೂಲಕ ಅಲ್ಲ; ಆದರೆ ನೇರವಾಗಿ ’ಅನುಭವ’ದ ಜೊತೆ ಮುಖಾಮುಖಿಯಲ್ಲಿರುತ್ತೇವೆ. ನಮಗೆ ಭಯವಿದೆ ಎಂದುಕೊಳ್ಳೋಣ. ಭಯವೆಂದರೇನು? ಅದು ಯಾವುದೋ ಕೆಲ ಗೃಹೀತಗಳಿಗೆ ನಮ್ಮ ಮನಸ್ಸು ಪ್ರತಿಕ್ರಿಯೆ ಮಾಡುವ ಒಂದು ರೀತಿ. ಅಂದರೆ, ನಮಗೆ ಭಯಕ್ಕಿಂತಲೂ ಹೆಚ್ಚು ’ಭಯದ ಭಯ’ವಿದೆ. ಎಲ್ಲ ಸಂವೇದನೆಗಳೂ ಹೀಗೆಯೇ. ’ಭಯದ ಭಯ’ ’ಕಾಮದ ಕಾಮ’ ’ನೋವಿನ ನೋವು’ ’ಹಸಿವಿನ ಹಸಿವು’. ಹಸಿವು, ಹಸಿವು ಎಂದು ಉಂಡರೆ ಹಸಿವು ಹೆಚ್ಚು ಎನ್ನುತ್ತಿದ್ದರು- ’ಸತ್ಯಕಾಮ’. ಅಂದರೆ, ಪ್ರಕೃತಿಯ ಸಂವೇದನೆಗಳಿಗೆ ನಮ್ಮ ಮನೋ-ದೈಹಿಕ ಪ್ರತಿಕ್ರಿಯೆಗಳೇ ನಮ್ಮ ’ಸತ್ಯ’ವಾಗಿ ಬಿಟ್ಟಿದೆ. ಇದೇ ನಮ್ಮ ಬದುಕು! ಇದು ನಮ್ಮ ಆವರಣದ ಫಲ. ಇದು ತಪ್ಪೆಂದಾಗಲೀ, ಇದು ಸತ್ಯವಲ್ಲವೆಂದಾಗಲೀ ಯಾರೂ ಹೇಳಲಾರರು. ಆದರೆ ’ಅನುಭವ’ ಇಷ್ಟೇ ಅಲ್ಲ ಎನ್ನುವುದು ಮಾತ್ರ ನಿಜ. ’ಸತ್ಯಸ್ಯ ಸತ್ಯ’ ಎನ್ನುವ ಮಾತನ್ನು ಉಪನಿಷತ್ತು ಟಂಕಿಸಿದೆ. ಇದು ಸತ್ಯವಲ್ಲ ಎಂದು ಹೇಳಿಲ್ಲ. ’ಸತ್ಯ’ ಇಷ್ಟೇ ಅಲ್ಲ ಎಂದಿತು. ಈ ಆವರಣವನ್ನು ದಾಟಿದರೆ ಅಲ್ಲಿನ ಸತ್ಯದ ಪರಿಯೇ ಬೇರೆ ಎಂದಿತು. ’ಚೆನ್ನನ ಪರಿಯೇ ಬೇರೆ’ ಎಂದು ಅಕ್ಕಮಹಾದೇವಿ ಅದ್ಭುತವಾಗಿ ಹೇಳಿದಂತೆ. (’ಸತ್ಯಸ್ಯ ಸತ್ಯ’ ಎನ್ನುವ ಮಾತು, ’ಭಯದ ಭಯ’, ’ಕಾಮದ ಕಾಮ’, ’ಹಸಿವಿನ ಹಸಿವು’ -ಮುಂತಾದ ಪಡೆನುಡಿಗಳನ್ನು ಇನ್ನೊಂದು ರೀತಿಯಲ್ಲಿ ಸೂಚಿಸಿದಂತಿದೆ. ಹಸಿವನ್ನು ತಣಿಸಿಕೊಳ್ಳುವ ಆಸೆ ಒಂದೆಡೆ. ಅದೂ ಹಸಿವಿನ ಹಸಿವೇ. ಹಸಿವಿನ ಸತ್ಯವೇನು ಎಂದು ಕೇಳುವುದು ಒಂದೆಡೆ. ಅದೂ ಹಸಿವಿನ ಹಸಿವೇ. ಈ ಎರಡನೆಯದನ್ನು ’ಸತ್ಯಸ್ಯ ಸತ್ಯ’ ಎನ್ನುವ ನುಡಿಗಟ್ಟು ಸೂಚಿಸುತ್ತದೆ) ನಮಗೆ ಸಾವಿನ ಭಯವೋ ನಿರಂತರ. ಆದರೆ, ಸಾಯುತ್ತಲೇ ಇರುವೆವು. ಸಾವಿಗೆ ಪ್ರತಿಕ್ಷಣ ಹತ್ತಿರವಾಗುತ್ತಲೇ ಇರುವೆವು. ಈ ಸತ್ಯವನ್ನು ಮಾತ್ರ ಮರೆಯುವೆವು.

ಸಾವಿನ ಭಯವನ್ನು ಮೀರದೆ ನಿಜವಾಗಿ ಬದುಕಲೂ ಸಾಧ್ಯವಾಗದು. ಭಯವನ್ನು ಮೀರಿದಾಗ ಅಂದರೆ ನಮ್ಮ ಪ್ರತಿಕ್ರಿಯಾತ್ಮಕವಾದ ಆವರಣವನ್ನು ದಾಟಿದಾಗ ಸಾವನ್ನು ಇಲ್ಲೇ ಅನುಭವಿಸಲು ಸಾಧ್ಯ ಎನ್ನುತ್ತದೆ ತಂತ್ರ. ಸಂಹಾರ ಕ್ರಮದ ಅರ್ಥವೇ ಅದು! ಮತ್ತು ಸಾವಿನ ಅನುಭವವು ಬದುಕೇ ಅಲ್ಲವೆ? ’ಅನುಭವ’ವು ಬದುಕೇ ಅಲ್ಲವೆ? ’ತಂತ್ರ’ವು ಗಾಢವಾದ ಅನುಭವದ ಕಡೆಗೆ ನೋಡುತ್ತಿದೆ. ನಮ್ಮ ಪ್ರತಿಕ್ರಿಯಾತ್ಮಕತೆಯನ್ನು ಮೀರಿದರೆ ಆ ಗಾಢವಾದ ಅನುಭವವು ಇಲ್ಲೇ ಅನಾವರಣಗೊಳ್ಳುತ್ತದೆ ಎನ್ನುತ್ತಿದೆ. ಅದಕ್ಕಾಗಿಯೇ ಸಂಹಾರ ಕ್ರಮವನ್ನು ಸಂಯೋಜಿಸಿದೆ. ಗಾಢವಾದುದು ಇಲ್ಲೇ ಹತ್ತಿರದಲ್ಲಿದೆ. ಇದೇ ಉಪಾಸನೆ (=ಹತ್ತಿರವಿರುವುದು)ಯ ಅರ್ಥ ಎನ್ನುತ್ತಿದೆ. ಎಷ್ಟು ಹತ್ತಿರವೆಂದರೆ, ಸೃಷ್ಟಿಕ್ರಮದಲ್ಲಿ- ಅಂದರೆ ’ಬಿಂದು’ವಿನಿಂದ ತೊಡಗಿ ’ತ್ರೈಲೋಕ್ಯ ಮೋಹನ ಚಕ್ರ’ದವರೆಗಿನ ಉಪಾಸನೆಯ ನಡಿಗೆಯಲ್ಲಿ, ’ಸರ್ವಾಶಾಪರಿಪೂರಕ ಚಕ್ರ’ಕ್ಕಿಂತ ಮುನ್ನ ’ಸರ್ವಸಂಕ್ಷೆಭಣ ಚಕ್ರ’ವು ಎದುರಾಗುವುದು. ಇದು ಆಸೆಗಳನ್ನು ಈಡೇರಿಸಿಕೊಳ್ಳಬೇಕೆಂಬ ಸೃಷ್ಟಿ ಕ್ರಮಕ್ಕೆ ಸಹಜವಾದ, ತಹತಹವನ್ನು ಸಂಕ್ಷೆಭೆಯನ್ನು ಸೂಚಿಸುವುದು. ಸರ್ವಾಶಾ ಪರಿಪೂರಣಕ್ಕೆ ’ಸಂಕ್ಷೆಭೆಯೇ ಮೂಲ’. ಆದರೆ, ಸಂಹಾರ ಕ್ರಮದಲ್ಲಿಯಾದರೋ, ಸರ್ವಾಶಾಪರಿಪೂರಕ ಚಕ್ರವನ್ನು ದಾಟಿದಾಗ ಸರ್ವ ಸಂಕ್ಷೆಭಣದ ಆವರಣವು ಎದುರಾಗುವುದು. ಅಂದರೆ, ಇಲ್ಲಿನ ಸಂಕ್ಷೆಭದ ಪರಿಯೇ ಬೇರೆ! ಆಸೆಗಳು ಈಡೇರಿದ ಮೇಲೆ; ಈಡೇರುವ ಮೊದಲಲ್ಲ, ಉಂಟಾಗುವ ಸಂಕ್ಷೆಭೆ ಇದು. ಬದುಕಿಗೆ ಆಳವಾದ ಅರ್ಥವೇನಾದರೂ ಇದ್ದರೆ ಅದನ್ನು ಬಗೆಯಲನುವಾಗುವಂತೆ, ಅನುಭವವು ಇನ್ನಷ್ಟು ಆಳದಲ್ಲಿದೆ; ಅದನ್ನು ಪಡೆಯಬೇಕಾಗಿದೆ ಎನ್ನುವುದನ್ನು ಸೂಚಿಸುವಂತೆ- ಉಂಟಾಗುವ ಕ್ಷೆಭೆ ಇದು. ಭಯದ ಭಯವಲ್ಲ. ಆ ಕಾಲ್ಪನಿಕ ಭಯವನ್ನು ಬಿಟ್ಟುಕೊಟ್ಟು ನಿಜವಾಗಿ ’ಭಯ’ದ ಜೊತೆ ಒಂದಾಗುವ ಹಂತದ ಸಂಕ್ಷೆಭೆ ಇದು. (ಶಾಕ್ತತಂತ್ರದ ದೇವೀ ಉಪಾಸನೆಗಳಲ್ಲಿ, ದಶ ಮಹಾವಿದ್ಯೆಗಳಲ್ಲಿ ’ಬಗಲಾಮುಖಿ’ ’ಛಿನ್ನಮಸ್ತಾ’, ’ಧೂಮಾವತಿ’ ಮುಂತಾದ ಉಪಾಸನೆಗಳು ಪ್ರಕೃತಿಯ ಉಗ್ರ ಕ್ಷೆಭಕಾರಕ ಮುಖಗಳನ್ನು ಸಂಕೇತಿಸುತ್ತವೆ) ಅಚ್ಚರಿ ಎಂದರೆ, ಎರಡು ರೀತಿಯ ಸಂಕ್ಷೆಭೆಗಳ ಮೂಲವೂ ಒಂದೇ. ಆದರೆ ಸಂಹಾರಕ್ರಮದಲ್ಲಿ- ಇನ್ನೊಂದು ನೆಲೆಕಂಡಾಗ- ಅನುಭವವು ಗಾಢ. ’ಭಯದ ಭಯ’ವನ್ನು ಬಿಟ್ಟುಕೊಟ್ಟಾಗ, ಪ್ರಕೃತಿಯಲ್ಲಿಯೇ ಇರುವ ’ಭಯ’ದ, ಪ್ರಕೃತಿಯ ಉಗ್ರಮುಖದ ಜತೆ- ತಾದಾತ್ಮ್ಯ ಉಂಟಾಗುತ್ತದೆ. ತಾದಾತ್ಮ್ಯದಿಂದ ಉಂಟಾಗುವುದು ’ಅರಿವು’. ಪ್ರಕೃತಿಯ ಅಖಂಡವಾದ ’ಅರಿವು’. ಆ ಅರಿವು, ನಮ್ಮ ಮಾನಸಿಕ ಪ್ರತಿಕ್ರಿಯೆಗಳನ್ನು ಮೀರಿದ್ದು. ನಾವೆಂದರೆ ಅಖಂಡವಾದ ಪ್ರಕೃತಿಯೇ. ಈ ಅನುಭವವು ಗಾಢವಾದದ್ದು. ಇದನ್ನು ಪಡೆಯುವುದೇ ಉಪಾಸನೆಯ ಉದ್ದೇಶ. ಇಂಥ ಅನುಭವವನ್ನು ಪಡೆದವರ ಮಾತುಗಳೇನೋ ಮೇಲ್ನೋಟಕ್ಕೆ ಸರಳವಾಗಿವೆ. ಆದರೆ ಅವುಗಳ ಮರ್ಮ ತಿಳಿಯಬೇಕೆಂದರೆ ಅವುಗಳನ್ನು ಹಿಂತಿರುಗಿಸಿ ನೋಡಬೇಕೆನಿಸುತ್ತದೆ.

’ಇಟ್ಟಾಂಗೆ ಇರುವೆನೊ ಹರಿಯೆ; ಸೃಷ್ಟಿವಂದಿತ ಪಾದಪದುಮ’ ಎನ್ನುತ್ತಾರೆ ಶ್ರೀಪಾದರಾಜರು.

ಇಟ್ಟಾಂಗೆ ಇರುವೆನೋ ಎಂದಾಗ ನಾವು ಇರುವ ಸ್ಥಿತಿಯನ್ನೇ ಇನ್ನೊಮ್ಮೆ ಕಂಡದ್ದು. ಹರಿ ಇಟ್ಟಂತೆಯೇ ಮೊದಲೂ ಇತ್ತು. ಆದರೆ ಆಗ ತಿಳಿದಿರಲಿಲ್ಲ. ತಿಳುವಳಿಕೆಗೆ ತನ್ನ ಪ್ರತಿಕ್ರಿಯೆಯೇ ಅಡ್ಡಿಯಾಗಿತ್ತು. ಈಗ ತನ್ನ ಪ್ರತಿಕ್ರಿಯೆ ಕಳಚಿ ಬಿದ್ದಿದೆ! ಈಗಿನ ಅನುಭವವೇ ಬೇರೆ. ಈಗ ಇಡಿಯಾಗಿ ಬದುಕು ಸಿಕ್ಕಿದೆ. ಆದುದರಿಂದ ಇಡಿಯಾದ ಒಪ್ಪಿಗೆಯೇ ಉಂಟಾಗಿದೆ! ಇದು ಇನ್ನೊಮ್ಮೆ ನೋಡುತ್ತಿರುವ ಹೊತ್ತು!

ಕಂದರ್ಪಕಾಡುತಿಹನೆ, ತಂದು ತೋರಿಸು ತನ್ನ ತಂದೆಯನೆಂದು ಪೂವಿಂದ ಬಾಣವ ಎಸೆವನೆ ಎನ್ನುತ್ತಾರೆ. ಇದೂ ಶ್ರೀಪಾದರಾಜರದೇ ಮಾತು. ಕಂದರ್ಪನೆಂದರೆ ’ಕಾಮ’. ಭಗವಂತನೇ ಕಾಮನ ತಂದೆ ಎಂದು ಇನ್ನೊಮ್ಮೆ ನೋಡುವಾಗ ಸಿಗುವ ಒಳನೋಟ! ಆದುದರಿಂದ ಕಾಮ ತಾನು ಮಗುವಾಗಿ ಬಿಟ್ಟಿದ್ದಾನೆ.  ಮಗುವಿನಂತೆ ಕಾಡುತ್ತಲೂ ಇದ್ದಾನೆ. ತನ್ನ ತಂದೆಯನ್ನು ತೋರಿಸು ಎಂದು ಈ ಕಾಟ. ಈಗ ’ಕಾಮದ ಕಾಮ’ ಎಂಬ ಮಾತಿಗೆ ಅದು ದೇವರನ್ನು ಸೂಚಿಸುವ ಅರ್ಥ ಬಂದು ಬಿಟ್ಟಿದೆ! ಎಷ್ಟು ಹತ್ತಿರ! ಒಂದು ಸಣ್ಣ ಪಲ್ಲಟ! ತನ್ನ ಸೃಷ್ಟಿಯಲ್ಲಿ ತನ್ನ ಚಹರೆಯನ್ನು ಕಂಡಾಗ, ಚಕಿತ ಮನಸ್ಸು, ತನ್ನನ್ನು ಪಡೆದವರನ್ನು ನೆನೆಯುವುದು! ಹೀಗೆ ಸೃಷ್ಟಿ ಎಂದರೆ ನಮ್ಮೆದುರಿಗೆ ಹಿಡಿದ ಕನ್ನಡಿ ಕೂಡ. ಈ ಅನುಭವವೇ ’ಇನ್ನೊಮ್ಮೆ’ ಎನ್ನುವ ಸೃಷ್ಟಿಶೀಲ ಪರಿಕಲ್ಪನೆಗೆ ನೆರವಾಯಿತು

ಪಾಡು-ಪಂಥಗಳೊಂದುಗೂಡುವ ಸಮಯದಿ ಸದ್ದು ಮಾಡಲು ಬ್ಯಾಡವೋ ಎನ್ನುತ್ತಾರೆ. ’ಪಾಡು’ ಎಂದಾಗ ಅದು ಮೊದಲಿನ ಪಾಡು. ಒಳನೋಟ ಉಂಟಾಗದ ಮುನ್ನ ಇದ್ದ ಪಾಡು. ’ಪಂಥ’ವೆಂದಾಗ ಈಗ ದಾರಿಗೆ ಬಂದ ಹೊತ್ತು. ಅದೇ ಇದಾಗಿ ಬದಲಾದಾಗ ಏನು ಮಾತು? ಸುಮ್ಮಗಿರಬಾರದೆ ಸ್ವಲ್ಪ- ಎಂಬ ಹುಸಿಗದರುವಿಕೆ! 

ತುಂಗಕುಚಗಳ ಪಿಡಿದ ಕರಗಳಿಗೆ ಶರಣು ಎನ್ನುತ್ತಾರೆ. ಇದು ಕಾಮದ sublimitation’ ’ತುಂಗ’ ಎನ್ನುವ ಪದದಲ್ಲಿಯೇ sublimitation’ನ ಧ್ವನಿ ಇದೆ.

ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ? ಎನ್ನುತ್ತಾರೆ. ಚುಂಗಡಿ ಎಂದರೆ ಬಿಡಿ ಬಿಡಿಯಾಗಿರುವ ತುಂಡು ತುಣುಕು. ಚಿಲ್ಲರೆ. ಅನುಭವದ ಚೂರುಪಾರು. ಅದು ಬೇಕಿಲ್ಲ. ಇಡಿಯಾದ ಅನುಭವ ಬೇಕು; ಅದನ್ನು ಪೂರೈಸಿಕೊಡು- ಎನ್ನುತ್ತಿದ್ದಾರೆ. ಈ ಮಾತು ಅದ್ಭುತ. ಚುಂಗಡಿಯ ನಿಲಿಸದಂತೆ ಅನುಭವವನ್ನು ಪೂರಯಿಸಿಕೊಳ್ಳುವುದು ’ತಂತ್ರ’ದ ಉದ್ದೇಶ ಎನ್ನಬಹುದು. 

’ಸರ್ವ ಸಂಕ್ಷೆಭ’ವನ್ನು ದಾಟಿ ನಾಲ್ಕನೆಯ ಆವರಣಕ್ಕೆ ಬಂದರೆ ಅದು ’ಸರ್ವಸೌಭಾಗ್ಯದಾಯಕ’ ಚಕ್ರ.  ಇದು ಶ್ರೀಚಕದಲ್ಲಿ ೧೪ ತ್ರಿಕೋಣಗಳಲ್ಲಿ ಹಬ್ಬಿರುವ ಆವರಣ. ಇದನ್ನು ಮನುಷ್ಯ ಶರೀರದ ’ನಾಡೀಪ್ರಪಂಚ’ ಎಂದು ಗುರುತಿಸುತ್ತದೆ ಭಾವನೋಪನಿಷತ್ತು. ’ನಾಡಿ’ ಎಂದಾಗ ಅರಿವು ಹೆಚ್ಚು ತಾಂತ್ರಿಕ Technical’ವಾಯಿತು. ೧೪ ನಾಡಿಗಳನ್ನು ಹೆಸರಿಸಿದ್ದಾರೆ. ಅಲಂಬುಷಾ; ಕುಹೂ ಇತ್ಯಾದಿ.  ಮುಖ್ಯವಾದವು ಇಡಾ; ಪಿಂಗಳಾ ಮತ್ತು ಸುಷುಮ್ನಾ ನಾಡಿಗಳು. ತಂತ್ರ, ಯೋಗ ಸಂಬಂಧಿಯಾದ ಎಲ್ಲ ವಾಙ್ಮಯಗಳಲ್ಲೂ ಈ ಮೂರು ನಾಡಿಗಳ ಪ್ರಸ್ತಾವ ಇದ್ದೇ ಇರುತ್ತದೆ. ಇವು ಸೂಕ್ಮ ಶರೀರದಲ್ಲಿರುವ ನಾಡಿಗಳು. ಸೂಕ್ಷ್ಮ ಶರೀರವೆಂದರೆ, ಪ್ರಕೃತಿ ನಮ್ಮನ್ನು ಪೋಷಿಸುತ್ತಿರುವ, ಕಣ್ಣಿಗೆ ಕಾಣದ ಹೊಕ್ಕುಳಬಳ್ಳಿ! ಇಡಾ- ಎಡಭಾಗದಲ್ಲಿದೆ. ಆದುದರಿಂದ ಅದು ಎಡಗಡೆಯ ಉಸಿರು, ಪಿಂಗಳಾ- ಬಲಭಾಗದಲ್ಲಿದೆ. ಅದು ಬಲಗಡೆಯ ಉಸಿರು. ’ಸುಷುಮ್ನಾ’ ಹೆಸರೇ ಸೂಚಿಸುವಂತೆ ಬೆಳಕಿನ ನಾಡಿ. ಬೆಳಕಿನ ಬಳ್ಳಿ. ಮಿಂಚಿನ ಬಳ್ಳಿ. ಈ ಎರಡರ ನಡುವಿನಲ್ಲಿದೆ. ’ಮಧ್ಯಮ ಮಾರ್ಗ!’ ಎರಡು ಉಸಿರುಗಳ- ಉಚ್ಛ್ವಾಸ, ನಿ:ಶ್ವಾಸಗಳ- ನಡುವೆ ಹರಿಯುವ, ಈ ಎರಡು ಉಸಿರುಗಳನ್ನೂ ಧಾರಣ ಮಾಡಿರುವ ಜೀವನ ಜೀವಂತಿಕೆಗೆ ಕಾರಣವಾದ ಬೆಳಕಿನ ನಾಡಿ ಇದು. ಉಚ್ಛ್ವಾಸ, ನಿ:ಶ್ವಾಸಗಳ- ನಡುವೆ ಇರುವ ವಿಶ್ವಾಸವಿದು! ಸುಷುಮ್ನಾ ನಾಡಿಗೂ ಮಸ್ತಿಷ್ಕಕ್ಕೂ ಸಂಬಂಧ. ಬೆಳಕಿಗೂ ಹೊಳಹಿಗೂ ಸಂಬಂಧ! ಸುಷುಮ್ನಾದ ಸಾಧಕ, ’ಛಿನ್ನಮಸ್ತಾ’ ದೇವಿಯ ಅನುಭವ ಪಡೆಯುವನು ಎನ್ನಲಾಗಿದೆ. ’ಛಿನ್ನಮಸ್ತಾ’ ಎಂದರೆ ತಲೆ ಕತ್ತರಿಸಲ್ಪಟ್ಟ; ಶಿರಸ್ಸಿಲ್ಲದ’ ಎಂದರ್ಥವೇನೋ ಆಗುತ್ತದೆ. ಸಾಧಕರ ಅನುಭವವೇನೆಂದರೆ, ದೇಹವು (=ಪಿಂಡಾಂಡ) ವಿಶ್ವದ (=ಬ್ರಹ್ಮಾಂಡ) ಜೊತೆಗೆ ಸಂಪರ್ಕಿಸಿಕೊಂಡಿರುವುದರ ಅನುಭವವಾಗುವಾಗ, ಸಾಧಕನ ನೆತ್ತಿಯಲ್ಲಿ ಸೂಕ್ಷ್ಮವಾದ ಬಿರಿಯುವಿಕೆಯ ಅನುಭವವಾಗುವುದಂತೆ. ಇದನ್ನು- ’ವ್ಯಪೋಹ್ಯ ಶೀರ್ಷಕಪಾಲೇ’- ಎಂದು ಉಪನಿಷತ್ತು ಸೂಚಿಸುತ್ತದೆ. ಈ ಅನುಭವದ ಮೇಲಿನಿಂದ ಛಿನ್ನಮಸ್ತಾ ದೇವಿಯ ಪರಿಕಲ್ಪನೆಯಂಟಾಯಿತು ಎನ್ನಬಹುದು.

ಮನುಷ್ಯ ತನ್ನ ಅಹಂಕಾರವನ್ನು ಕಳೆದುಕೊಳ್ಳುವುದಕ್ಕೂ, ವಿಶ್ವದೊಡನೆ ತಾನು ಸಂಬಂಧಿಸಿದುದನ್ನು ತಿಳಿಯುವುದಕ್ಕೂ, ಮಸ್ಕಿಷ್ಕದಲ್ಲಿಯೇ ಸೂಕ್ಷ್ಮವಾದ ಅರಳುವಿಕೆಯ ಅನುಭವ ಉಂಟಾಗುವುದಕ್ಕೂ- ಸುಷುಮ್ನಾ ಜಾಗ್ರತಗೊಳ್ಳುವುದಕ್ಕೂ- ಹತ್ತಿರದ ಸಂಬಂಧವಿದೆ. ತಲೆ ಇಲ್ಲದ ತನ್ನ ರೂಪವನ್ನು ತೋರಿಸಿ, ನಿಮ್ಮ ತಲೆಯನ್ನು ಅಂದರೆ ಅಹಂಕಾರವನ್ನು ತನಗೆ ಅರ್ಪಿಸಿ ಎಂದು ಸೂಚಿಸುತ್ತಿದ್ದಾಳೆ- ಛಿನ್ನಮಸ್ತಾ.  ಅವಳು ತಾಯಿಯಲ್ಲವೆ!

ಪುಟದ ಮೊದಲಿಗೆ
 
Votes:  5     Rating: 4.8    
 
 
ಸಂಬಂಧಿಸಿದ ಲೇಖನಗಳು
  ಶ್ರೀನಿವಾಸ ಹಾವನೂರರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ರಕ್ಷಾನ ಬಾಲ್ಯಕಾಲ:ಪೆಜತ್ತಾಯರ ಸರಣಿ
  ರಾಜೇಶ್ವರಿ ಕಥನ:ಕಾಡೆಂಬ ಕಡಲಿನ ಮೂರನೇ ಕಂತು
  ಭೂತದೈವಗಳ ಲೋಕದಲ್ಲಿ ಲಕ್ಷ್ಮೀಪ್ರಸಾದ್ ಪಯಣ ಆರಂಭ
  ಗಿರೀಶ್ ಶ್ರೀಧರ ದೀಕ್ಷಿತರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ‘ನಂಗೆ ಅಮ್ಮ ಹೇಳಿದ್ದು’ ಕಥನ ೩:ಕಾಡೆಂಬ ಕಡಲಿನಲ್ಲಿ ೨
  ಶಿಶುಪಾಲನೆಯ ಸವಿ ನೆನಪುಗಳು:ಪೆಜತ್ತಾಯರ ‘ರಕ್ಷಾ’ ಸರಣಿ
  ಸಂಶೋಧನೆಗಳ ಕುರಿತು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಪೆಜತ್ತಾಯರು ಬರೆದ ‘ನಮ್ಮ ರಕ್ಷಕ ರಕ್ಷಾ’ ಆರಂಭವಾಯಿತು
  ರಾಜೇಶ್ವರಿ ತೇಜಸ್ವಿ ಕಥನ ೨:ಕಾಡೆಂಬ ಕಡಲಿನಲ್ಲಿ
  ಡಾ. ಬಿ ಎ. ಸಾಲ್ತೊರೆ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಭಗವತಿಯ ಲಯಾಂಗ, ಭಗವತಿಯ ಭೋಗಾಂಗ:ತೋಳ್ಪಾಡಿ ಲಹರಿ
  ರಾಜೇಶ್ವರಿ ತೇಜಸ್ವಿ ಕಥನ ೧:ಝರಿಯೂ ರಾಜ ಕಾಗೆಯೂ
  ಬಾ.ರಾ. ಗೋಪಾಲರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಊರದೈವಗಳ ಸಂಗದಲ್ಲಿ:ಪೆಜತ್ತಾಯರ ರೈತ ಪುಟಗಳು
  ದೇವತೆಗಳ ಆಸೆಬುರುಕತನಗಳು:ತೋಳ್ಪಾಡಿ ಸೌಂದರ್ಯ ಲಹರಿ ೪೧
  ಅಗ್ರಹಾರದ ಲಕ್ಷ್ಮಿ ನರಸಿಂಹನ್:ಅಪ್ಪಾಜಿರಾಯರ ಸರಣಿ
  ಜ್ಯೋತಿರಾಜನ ಪ್ರೇಮ ತಿರಸ್ಕಾರದ ಕಥನ:ಮುದನೂರ್ ಸರಣಿ
  ಕೆ.ಟಿ ಹೇಳಿದ ತೇಜಸ್ವಿಯವರ ಕೀಟಲೆಯ ಕಥೆಗಳು:ಹೆತ್ತೂರು ಸರಣಿ
  ನೆಂಟರಾಗಿ ಬಂದ ಕಾಡಿನ ವಾರಸುದಾರರು:ಪೆಜತ್ತಾಯರ ಪುಟಗಳು
  ಮಂಜೇಶ್ವರ ಗೋವಿಂದ ಪೈಗಳು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಕರ್ವಾಲೊಗೆ ಡ್ರಾಯಿಂಗ್ ಮಾಡಿದ್ದು:ಕೆ.ಟಿ ಸರಣಿ
  ಎಲ್ಲಿಹುದು ಎನ್ನ ದೋಣಿ?:ಪೆಜತ್ತಾಯರ ರೈತಪುಟಗಳು
  ಅಂಜಲಿ ಕುಂಭಮೇಳ ಕಥಾನಕದ ಕೊನೆಯ ಕಂತು
  ತೇಜಸ್ವಿಯ ತೋರಿಸಿಕೊಟ್ಟ ಪ್ರೊಫೆಸರ್:ಕೆ.ಟಿ ಸರಣಿ
  ಕೇಸರಿಯ ವನವಾಸದ ಮೊದಲ ದಿನಗಳು:ಪೆಜತ್ತಾಯರ ಪುಟಗಳು
  ಸ್ವಚ್ಛ ಕನ್ನಡಿಯಂತಿರುವ ಪ್ರಜ್ಞಾಸ್ಥಿತಿ:ಸೌಂದರ್ಯ ಲಹರಿ ೪೦
  ದೇವಮಾನವರ ವಿಕೃತಿಗಳು:ಮುಂದುವರಿದ ಅಂಜಲಿ ಕುಂಭಮೇಳ ಕಥೆ
  ಕಲ್ಲಪ್ಪ ಕುಂದಣಗಾರ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಕೇಸರಿಗೇ ಒದ್ದ ನಾಟಿದನ:ಪೆಜತ್ತಾಯರ ಪುಟಗಳು
  ಕೆ.ಟಿ.ಮಾಡಿಕೊಂಡ ತೇಜಸ್ವಿ ನೆನಪುಗಳು:ಹೆತ್ತೂರು ಸರಣಿ
  ಬತ್ತಲೆ ನಾಗಾ ಬಾಬಾಗಳ ಜೊತೆ:ಅಂಜಲಿ ಕುಂಭಮೇಳ ಕಥೆ
  ಡಾ. ಗೋವಿಂದ ಸ್ವಾಮಿರಾವ್ ಗಾಯಿ: ಅಪ್ಪಾಜಿರಾಯರ ಸರಣಿ
  ಪವರ್ ಟಿಲ್ಲರು ಸೆಗಣಿ ಹಾಕುವುದಿಲ್ಲ:ಪೆಜತ್ತಾಯರ ಪುಟಗಳು
  ದ್ವಾರಕಾನಗರಿಯಲಿ ನವಿಲುಗರಿಧಾರಿ:ಅಂಜಲಿ ಕುಂಭಮೇಳ ಕಥೆ ೪
  ಆರ್.ಎಸ್.ಪಂಚಮುಖಿಯವರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಾಗ ಐತಾಳರ ಅಮೆರಿಕಾ ಸರಣಿ ಕೊನೆಯ ಕಂತು
  ನಾನು ಉಣ್ಣುವುದೆಲ್ಲ ನಿನ್ನದೇ:ತೋಳ್ಪಾಡಿ ಸೌಂದರ್ಯ ಲಹರಿ
  ಅಂತೂ ಬಂತು ಪವರ್ ಟಿಲ್ಲರ್:ಪೆಜತ್ತಾಯರ ಪುಟಗಳು
  ನಾಭಿ ಹಿಂಡುವಷ್ಟು ಅಳು:ಅಂಜಲಿ ಕುಂಭಮೇಳ ಕಥೆ ೩
  ಪಿ.ಬಿ. ದೇಸಾಯಿ: ಅಪ್ಪಾಜಿ ರಾಯರ ಹಸ್ತಪ್ರತಿ ಸರಣಿ
  ಕಾಡ ಬದಿಯ ಪುಟ್ಟ ಗುಡಿಸಲು:ಪೆಜತ್ತಾಯರ ಪುಟಗಳು
  ಸೊರಗಿದ್ದ ಕನ್ನಡ ಯೋಗಗುರು:ಅಂಜಲಿ ಕುಂಭಮೇಳ ಕಥೆ
  ಕೋಟೆಯಲ್ಲಿ ಕಾಯುತ್ತಿದ್ದಾಕೆ:ಮುದನೂರ್ ಕೋತಿರಾಜ್ ಸರಣಿ
  ಮೈಸೂರುಹಟ್ಟಿ ಕೃಷ್ಣ ಅಯ್ಯಂಗಾರರು: ಅಪ್ಪಾಜಿರಾಯರ ಸರಣಿ
  ಪಂಚನಬೆಟ್ಟು ಎಂಬ ಶಹರ:ಪೆಜತ್ತಾಯರ ಪುಟಗಳು
  ಕುಂಭ ಮೇಳ ನೋಡಿ ಬಂದು ಅಂಜಲಿ ಬರೆವ ಕಥೆಯ ಮೇಳ:೧
  ಹೊಸಕೋಟೆ ಕೃಷ್ಣ ಶಾಸ್ತ್ರಿಗಳು:ಅಪ್ಪಾಜಿರಾಯರ ಸರಣಿ
  ಅನಿವಾಸಿ ಕನ್ನಡ ಕಲರವ:ಐತಾಳರ ಅಮೇರಿಕಾ ಸರಣಿ
  ಇನ್ನು ಮುಂದೆ ಇದು ಗೋಟ್ನವಲ್ಲ ಫಾರ್ಮು:ಪೆಜತ್ತಾಯರ ಪುಟಗಳು
  ರುದ್ರಪಟ್ಟಣಂ ಶಾಮಾಶಾಸ್ತ್ರಿ:ಅಪ್ಪಾಜಿರಾಯರ ಸರಣಿ
  ಬೆಟ್ಟದ ಜೀವ ಹೊತ್ತಿಸಿದ ಚಾರಣದ ಕಿಚ್ಚು:ಪೆಜತ್ತಾಯರ ಪುಟಗಳು
  ಅಂತಕನ ಅಂತ್ಯದ ಕುರಿತು:ತೋಳ್ಪಾಡಿ ಲಹರಿ
  ಆರ್. ನರಸಿಂಹಾಚಾರ್ಯರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಭಾರತೀಯ ವಿಜ್ಞಾನಿಗಳ ಸಂಘ:ಐತಾಳರ ಅಮೇರಿಕಾ ಸರಣಿ