ಮೊನ್ನೆ ವಿಧಾನಸೌಧವೆಂಬೋ ಕಲ್ಲು ಹೃದಯದ ಕಟ್ಟಡದಲ್ಲಿ ನಮ್ಮ ಸದನದ ೬೦ನೇ ವಾರ್ಷಿಕ ನಡೆಯುತ್ತಿತ್ತು. ನಾನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದೆ.
ಡ್ರಾಕುಲಾ ಸಿನಿಮಾದಲ್ಲಿ ಸಟ್ಟನೇ ಎಲ್ಲಿಂದಲೋ ಒಂದು ಕೈ ಬಂದಂತೆ ನನ್ನ ಮೋಬೈಲಿಗೆ ಮೆಸೇಜು ಬಂತು. ಇಂಥಾ ಅಡ್ಡ ಹೊತ್ತಿನಲ್ಲಿ ಬಂತೆಂದರೆ ನಮ್ಮ ಸಂಪಾದಕರದೇ ಅಂತ ಖಾರ್ತಿಯಾಗಿ ಹೊರಗೆ ಹೋದೆ. “ಕಾಲ್, ಅರ್ಜಂಟ್” ಅಂತ ನಮ್ಮ ಸಂ ಅವರು ಸಂಸಸೇ (ಸಂದೇಶದ ಸಣ್ಣ ಸೇವೆ,) ಕಳಿಸಿದ್ದರು. ಈ ಸಂಸಂಸಸೇ ಗಳಿಗೆ ನಾವು ಹುಡುಗರೆಲ್ಲ ‘ಸಂಪಾದಕರು ಸಂಥಿಂಗ್ ಸರಿಯಾಗಿ ಸೇ’ ಮಾಡಬೇಕಾದಾಗಲೆಲ್ಲ ಹೀಗೆ ಕಳಿಸುತ್ತಾರೆ ಅಂತ ಅರ್ಥ ಕಟ್ಟಿಕೊಂಡು ನಗಾಡುತ್ತೇವೆ.
ಹಾಗೆಂದು ಅವರು ಪ್ರತಿ ಸಾರಿ ಸಂಸಂಸಸೇ ಮಾಡಿದಾಗಲೆಲ್ಲ ಅಂಥಾ ತುರ್ತೇನೂ ಇರೋದಿಲ್ಲ. ಎಲ್ಲದಕ್ಕೂ ಅವರು ಈ ರೀತಿ ಕಳಿಸುತ್ತಾರೆ. ನಿಜ ಹೇಳಬೇಕೆಂದರೆ ಅವರಿಗೆ ಎಸ್ಸೆಮ್ಮೆಸ್ಸು ಕಳಿಸಲು ಬರೋದಿಲ್ಲ. ಅವರ ಆಪ್ತ ಕಾರ್ಯದರ್ಶಿ ಕಳಿಸುತ್ತಾರೆ. ಸಂಪಾದಕರ ಹತ್ತಿರ ಇರುವುದು ಅಮೇರಿಕೆಯಲ್ಲಿರುವ ಅವರ ಮೊಮ್ಮಗಳು ಕೊಟ್ಟಿರುವ ಹೈಟೆಕ್ ಫೋನು. “ನನಗೆ ಈ ಫೋನಿನಲ್ಲಿ ಬೇರೇನೂ ಗೊತ್ತಾಗೊಲ್ಲ. ಬಂದ ಫೋನು ತೆಗೊಳೊದು, ಯಾರಿಗಾದರೂ ಫೋನು ಮಾಡೋದು, ಇವಷ್ಟೇ ಗೊತ್ತಾಗೋದು,” ಅಂತ ಅವರೇ ಹೇಳ್ತಾರೆ.
ಅಲ್ರೀ ಬಿಡದಿಗೆ ಹೋಗಿ ಎಂದರೆ ವಿಧಾನಸೌಧಕ್ಕೆ ಹೋಗಿದ್ದೀರಲ್ರೀ, ಅಂದರು. “ಆ ಬಿಡದಿ ಮಾಯೆ ಎಲ್ಲಾ ನಮಗೆ ಬೇಡ ಸಾ. ಅದಕ್ಕೆ ಟೀವಿಯವರು ಇದ್ದಾರೆ. ಎಷ್ಟಂದರೂ ನಮಗೂ ಈ ವಿಧಾನಸೌಧಕ್ಕೂ ಬಿಡದೀ ಮಾಯೆ ಅಲ್ಲವೇ ಸಾ,” ಎಂದೆ. “ಅಯ್ಯೋ ಸಾಕ್ರಿ ನಿಮ್ಮ ಕತೆ. ಈ ಸದನ, ಅದರ ಬಾವಿ, ಅದರಲ್ಲಿ ಬಿದ್ದವರು, ಇದರ ಬಗ್ಗೆ ಬರೆದರೆ ಯಾರ್ ಓದ್ತಾರ್ರೀ? ನಮ್ಮ ರೀಡರ‍್ಸ್ ಯಾರ್ ಗೊತ್ತೇನ್ರೀ, ಯೂಥ್ಸ್. ಅವರಿಗೆ ಬೇಕಾಗಿದ್ ಮಾಡ್ರೀ” ಎಂದರು. “ಅವರಿಗೆ ಎಲ್ಲವೂ ಸೆಕ್ಸೀ ಆಗಿರೋದು ಬೇಕು. ಯಾವುದಾದರೂ ಸೆಕ್ಸೀ ಆಗಿಲ್ಲಾ ಅಂದರೆ ಅದನ್ನು ಮಾಡಬೇಕಾದ ಜವಾಬ್ದಾರಿ ನಮ್ಮದು ಗೊತ್ತಾ?” ಅಂತ ಕೂಗಿದರು.
ಇದೇ ಅವರನ್ನು ಯಶಸ್ವೀ ಸಂಪಾದಕರನ್ನಾಗಿಸಿರುವುದು. ಯುವ ಶಕ್ತಿಯ ಮೇಲೆ ಅವರಿಗಿರುವ ಅತೀವ ವಿಶ್ವಾಸ. ಅದೇ ಅವರಿಗೆ ಶಕ್ತಿ ತುಂಬುತ್ತಿರುವುದು. ಆದರೆ ಇದು ಸ್ವಾಮಿ ವಿವೇಕಾನಂದರು ನಂಬಿದ್ದ ಯುವ ಶಕ್ತಿ ಅಲ್ಲ. ನಮ್ಮವರ ಕಣ್ಣಿರುವುದು ಈ ಹುಡುಗರ ವಾಲೆಟ್ಟಿನಲ್ಲಿ ಇರುವ ದುಡ್ಡಿನ ಮೇಲೆ, ಅವರು ನಿರ್ಧರಿಸುವ ಸಮಾಜದ ವಿವಿಧ ಟ್ರೆಂಡ್‌ಗಳ ಮೇಲೆ. ಈ ಹುಡುಗ ಹುಡುಗಿಯರ ಆಸಕ್ತಿ, ನಿರಾಸಕ್ತಿಯ ಮೇಲೆ ನಿಂತಿರುವ ಮಾರ್ಕೆಟ್‌ನ ಮೇಲೆ.
ಈಗ ಎಲ್ಲ ಎಂಬಿಎ ಮಾಡಿದವರ, ಅವರಿಗೆ ಕಲಿಸಿರುವ ಮಾರ್ಕೆಟಿಂಗ್ ಗುರುಗಳ ತಲೆಯಲ್ಲಿರುವುದು ಒಂದೇ ಮಂತ್ರ-ಯೂಥ್. ಈ ಜಾದೂ ಮಂತ್ರವನ್ನು ನಮ್ಮ ಸಂಪಾದಕರೂ ಯಾವಾಗಲೂ ಜಪಿಸುತ್ತಿರುತ್ತಾರೆ. ಜಾಗತಿಕ ಮಾರುಕಟ್ಟೆಯ ಮಾಯಾ ಬಜಾರಿನ ಗಲ್ಲಿಗಳಲ್ಲಿ ಮೂರೆಲೆಯ ಜಾದೂ ತೋರಿಸುವ ಕಾರ್ಪೋರೇಟು ಗಾರುಡಿಗರಂತೆ ಇದ್ದಂತೆ ಇದು ನಮ್ಮ ಸಂಪಾದಕರಿಗೆ ಜಾಬ್ ಸೆಕ್ಯೂರಿಟಿಯ ತಂತ್ರ.
ಸಂಪಾದಕರ ಆರೋಗ್ಯ ಹಾಳಾಗಿ, ಕೂದಲು ಹಣ್ಣಾಗಿ, ಅವರ ಮೆದುಳು ಟೆಕ್ನಾಲಜಿಕಲಿ ಚಾಲೆಂಜ್ಡ್ ಆದರೂ ಕೂಡ ಅವರು ಯೂಥ್ ಪಾವರ್ ಮೇಲೆ ವಿಶ್ವಾಸ ಬಿಟ್ಟು ಕೊಟ್ಟಿಲ್ಲ. ತಾವು ಇಂದಿಗೂ ಕೂಡ ನಾನು ಯೂಥ್‌ನ ಅಂಚಿನಲ್ಲಿ ಇದ್ದೇನೆ. ವಯಸ್ಸಾಗಿರೋದೆಲ್ಲ ಉಳಿದವರಿಗೆ ಎಂಬಂತೆಯೇ ಆಡುತ್ತಾರೆ. ತಮ್ಮ ಯೂಥಿನ ಜಮಾನಾದಲ್ಲಿ ಹೇರ್ ಸ್ಟೈಲಿಗೋಸ್ಕರ ಎಷ್ಟು ಖರ್ಚು ಮಾಡಿದ್ದರೋ ಅದಕ್ಕಿಂತ ಹೆಚ್ಚು ಈಗ ಕೂದಲಿಗೆ ಬಣ್ಣ ಹಚ್ಚಲು ವ್ಯಯ ಮಾಡುತ್ತಾರೆ. ಕಂಪ್ಯೂಟರನ್ನು ಗಣಪತಿ ಮಾಡದಲ್ಲಿ ಇಟ್ಟು, ಅಮವಾಸ್ಯೆಗೊಮ್ಮೆ ಪೂಜೆ ಮಾಡಿ ಸ್ಕ್ರೀನ್ ಮೇಲೆ ಹೂವು ಇಟ್ಟು ಮೌಸ್ ಪ್ಯಾಡಿನ ಮೇಲೆ ಒಂದು ರದ್ದೀ ಪೇಪರಿನ ತುಂಡಿನಲ್ಲಿ ಸಕ್ಕರೆ-ಕೊಬ್ಬರಿ ಚೂರು ಇಟ್ಟು ತಿಂದು ಬಿಡುತ್ತಾರೆ. ಅದಕ್ಕಷ್ಟೇ ಅವರ ಕಂಪ್ಯೂಟರ್ ಬಳಕೆಯಾಗುವುದು.
ಇಷ್ಟೆಲ್ಲಾ ಇದ್ದರೂ ಅವರಿಗೆ ಪತ್ರಿಕೆ ಓದುವವರು ಯಾರು, ಅವರಿಗೆ ಏನು ಬೇಕು ಎನ್ನುವುದು ಚೆನ್ನಾಗಿ ಗೊತ್ತು. ಅದಕ್ಕೇ ನಮ್ಮ ಪತ್ರಿಕೆ ಯುವ ಓದುಗರಿಗೆ ಬೇಕಾದ್ದನ್ನು ಬಡಿಸುವ ಸಮಾಚಾರ ದರ್ಶಿನಿಯಾಗಿ ಬಿಟ್ಟಿದೆ.
ಸಂಪಾದಕರ ಸುದ್ದಿಯ ಸೆಕ್ಸೀಕರಣಕ್ಕೆ ಪ್ರತಿಕ್ರಿಯೆಯಾಗಿ ನಾನು ಹೇಳಿದೆ “ಮತ್ತೆ ಇಲ್ಲಿ ಕೂತುಕೊಂಡು ನಾನು ಎನ್ ಮಾಡ್ತಾ ಇದ್ದೇನೆ? ಡೆಮಾಕ್ರಸಿಯನ್ನು ಹೇಗೆ ಸೆಕ್ಸೀ ಮಾಡಬೇಕೆಂಬೋ ಚಿಂತನೆ ಮಾಡ್ತಾ ಇದ್ದೇನೆ.” “ನಾವು ಮಾಡೋದೇನು? ಅದು ಆಲರೆಡಿ ಆಗಿ ಬಿಟ್ಟಿದೆ. ಸೌದಿ, ಸೀಸಿ, ಪಾಲೇಮಾರು ಅವರು ಅದನ್ನು ಒಂದು ಸಾರಿ ತೋರಿಸಿಕೊಟ್ಟಿಲ್ಲವೇ,” ಎಂದೆ. ಇಂತಾಗಿ ಅವರನ್ನು ವಿಚಾರದ ಖೆಡ್ಡಾಕ್ಕೆ ಕೆಡವಿ ನಾನು ಕಚೇರಿಗೆ ಹೋದೆ.
ಸಂಜೆ ಬರೆದದ್ದು ಈ ಲೇಖನ, ಇದನ್ನು ಓದುವ ಮೊದಲು ಒಂದು ಕ್ವಿಜ್. ಸರಿಯಾಗಿ ಉತ್ತರಿಸಿದವರಿಗೆ ಅದೇ ಬಹುಮಾನ. ಬ್ರಾಕೆಟ್ಟಿನಲ್ಲಿ :-ಸರಿ ಅಥವಾ ತಪ್ಪು ಉತ್ತರಗಳಿವೆ ಎನ್ನುವುದೇ ತಪ್ಪು.
ಈ ಕೆಳಗಿನ ಹೋರಾಟ, ಆಂದೋಲನ, ಚಳವಳಿ, ಜಾಗೃತಿ ಕಾರ್ಯಕ್ರಮಗಳಲ್ಲಿ ನೀವು ಯಾವಾಗಲಾದರೂ ಪಾಲ್ಗೊಂಡಿದ್ದೀರಾ?
ಮತ್ತೆ ಬ್ರಾಕೆಟ್ಟಿನಲ್ಲಿ :-ಈಗಿನ ವರ್ಚುವಲ್ ಜಗತ್ತಿನಲ್ಲಿ ಚಳವಳಿ ಅಂದರೆ ಇಷ್ಟೇ-ನಿಮ್ಮ ಫೇಸ್ ಬುಕ್, ಟ್ವಿಟರ್, ಗೂಗಲ್ ಪ್ಲಸ್ ಅಕೌಂಟುಗಳಲ್ಲಿ, ಸ್ಟೇಟಸ್ ಅಪಡೇಟ್ ಮಾಡುವುದು, ಅತ್ತೂ ಕರೆದೂ ಎಫ್ ಬೀ ಫ್ರೆಂಡಾಗಿಸಿಕೊಂಡವರೊಂದಿಗೆ ಷೇರು ಮಾಡುವುದು, ಎಂದೂ ಕಾಣದ ಸೈಬರ್ ಫ್ರೆಂಡುಗಳು ಭಲೇ ಭರ್ತಿ ಕೆಲಸದಲ್ಲಿ ಇದ್ದಾಗ ಹಿಡಕೊಂಡು ಚಾಟಿಸುವುದು, ಪಿಂಗುವುದು, ಚೇನ್ ಮೇಲ್ ಕಳಿಸುವುದು, ಎಸ್ಸೆಮ್ಮೆಸ್ಸು ಕಳಿಸುವುದು, ಇತ್ಯಾದಿ. ಬ್ಲಾಗುಗಳಲ್ಲಿ ಬರಕೊಳ್ಳುವುದು. ಅದಕ್ಕೆ ಬಂದ ಕಮೆಂಟುಗಳನ್ನು ನೋಡಿ ಖುಷಿಯಾಗುವುದು. ಯಾರೂ ಕಮೆಂಟು ಮಾಡದಿದ್ದರೆ ಬೇರೆ ಈಮೇಲ್ ಐಡಿಯಿಂದ ಕಮೆಂಟು ಬರೆದುಕೊಂಡು ತಮ್ಮ ಬ್ಲಾಗು ಮನೆಯ ಮುಂದೆ ರಂಗೋಲಿ ಹಾಕಿಕೊಳ್ಳುವುದು.
ವಿಷಯಗಳು
೧. ಕೆಲವು ದಿನಗಳಿಂದ ನಡೆಯುತ್ತಿರುವ “ಕಲಾಂ ಫಾರ್ ಪ್ರೆಸಿಡೆಂಟ್” ಎಂಬ್ ಇಂಟರನೆಟ್ ಆಂದೋಲನದಲ್ಲಿ ಪಾಲ್ಗೊಳ್ಳುವುದು. ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಅವರ ಚಿತ್ರ ಅಥವಾ ಹೇಳಿಕೆಗಳನ್ನೋ, ಅವರಿಗೆ ಸಂಬಂಧಪಟ್ಟ ಸುದ್ದಿಗಳನ್ನೋ ನೋಡಿ, ಷೇರು ಮಾಡುವುದು, ಆನ್ ಲೈನ್ ಪೋಲುಗಳಲ್ಲಿ ಅವರ ಪರವಾಗಿ ಮತ ಕ್ಲಿಕ್ಕಿಸುವುದು.
೨. ಸೋನಿಯಾ ಗಾಂಧಿಯ ಮನೆಯ ಅಡುಗೆಯವರು, ತೋಟಗಾರರು, ಚಾಲಕರೋ ಮುಂತಾದ ವಿಧೇಯಕ ಕೆಲಸಗಾರರು ರಾಷ್ಟ್ರಪತಿಯಾಗಲಿದ್ದಾರೆ ಎಂಬ ಜೋಕುಗಳನ್ನು ನೋಡಿ ನಕ್ಕು. ‘ನನಗೆ ಗೊತ್ತಿತ್ತು’ ಎಂಬ ಮೆಲುದನಿಯ ಮಾತಿನಿಂದ, ಸ್ವಲ್ಪ ಖಿನ್ನತೆಯಿಂದ, ಇತರರಿಗೆ ಕಳಿಸುವುದು.
೩. ಎಚ್ಚರದ ಸ್ಥಿತಿಯಲ್ಲಿ ಇದ್ದಾಗಲೆಲ್ಲಾ, ಅಂದರೆ ಫೇಸುಬುಕ್ಕು ನೋಡುವಾಗಲೆಲ್ಲಾ, ರಜನಿ-ಸಿಐಡಿ ಜೋಕುಗಳಂತೆ ಸೋನಿಯಾ-ಮನಮೋಹನ್ ನಗೆ ಚಟಾಕಿಗಳನ್ನು ಹಾರಿಸಿ, ಇತರರೂ ಹಾರಿಸುವಂತೆ ಪ್ರೇರೇಪಿಸುವುದು.
೪. ಪ್ರಧಾನಿಯನ್ನು ಸಂಸತ್ ಸದಸ್ಯರು ಆಯ್ಕೆ ಮಾಡುವ ವ್ಯವಸ್ಥೆಯನ್ನು ನಿವಾಳಿಸಿ ಒಗೆದು, ಈ ಉನ್ನತ ಸ್ಥಾನದಲ್ಲಿರುವ ಸರಕಾರದ ಪ್ರಮುಖರನ್ನು ಜನರೇ ನೇರವಾಗಿ ಆಯ್ಕೆ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂಬ ಮಾತು, ಮೇಲು, ಟ್ವೀಟು, ಅಪ್‌ಡೇಟು, ಮೆಸೇಜು ಆಡುವುದು, ಕಳಿಸುವುದು, ಮಾಡುವುದು.
೫. ಚಳವಳಿಗಳ ಅಣ್ಣ ಎಂದೇ ಹೆಸರಾದ ‘ಅಣ್ಣಾ ಹಜಾರೆ ಆಂದೋಲನ’ದಲ್ಲಿ ವೆಬ್ಭಾಗವಹಿಸುವುದು ಅಂದರೆ ವೆಬ್ಬಿನ ಮೂಲಕ ಭಾಗವಹಿಸುವುದು. ಗರ್ಲುಫ್ರೆಂಡುಗಳ ಒತ್ತಾಯಕ್ಕೆ ಮಣಿದು, ಮೇಣಬತ್ತಿ ಹಿಡಕೊಂಡು ಹತ್ತು ಹೆಜ್ಜೆ ನಡೆದು ಪೇಪರ್, ಟೀವಿಯಲ್ಲಿ ಕಾಣಿಸಿಕೊಂಡಾಗ “ವಾಚ್ ಮಿ ಆನ್ ದಿಸ್ ಪ್ಲೇಸ್ ಆಟ್ ದಿಸ್ ಟೈಮ್” ಎಂದು ಹೇಳಿ ಫೀಮೇಲುಗಳಿಗೆಲ್ಲ ಈಮೇಲು ಕಳಿಸುವುದು. ಬೆಳಿಗ್ಗೆ ಆರಕ್ಕೆ ಎದ್ದು ರಸ್ತೆ ಕೂಟಿಗೆ ಹೋಗಿ ಜೀವನದಲ್ಲಿ ಮೊದಲನೇ ಬಾರಿಗೆ ಒಂದಕ್ಕಿಂತ ಹೆಚ್ಚು ಪೇಪರ್ ಖರೀದಿಸುವುದು. ಅಪ್ಪೀ ತಪ್ಪೀ ಫೋಟೋ ಬಂದಿದ್ದರೆ ಇತತರಿಗೆ ಫೋನು ಮಾಡಿ ‘ನನ್ ಫೋಟೋ ಬಂದಿದೆ, ನೀವ್ ನೋಡೇ ಇಲ್ವಾ, ಎನ್ ಜನಾರೀ ನೀವು,’ ಅನ್ನುವುದು.
೬. “ಮತದಾನ ಕಡ್ಡಾಯ ಮಾಡಬೇಕರೀ,” ಅಂತ ಹೇಳಿಕೊಂಡು ಓಡಾಡುವುದು. “ಅಲ್ಲ, ಆ ಗುಜರಾತಿನಲ್ಲಿ ನೋಡಿ ಮೋದಿ ಹೆಂಗ್ ಮಾಡಿದ್ದಾರೆ, ಹಂಗ್ ಮಾಡಬೇಕು ಎಲ್ಲಾಕಡೆ. ಆಗಲೇ ನಮ್ಮ ಜನರಿಗೆ ಬುದ್ದಿ ಬರೋದು” ಎನ್ನುವುದು. ನೆನಪಾದಾಗಲೆಲ್ಲಾ, ಮತ್ತು ಇತರರು ಮರೆತಾಗಲೆಲ್ಲ, ಮೋದಿ ಮೋಡಿಯ ಉದಾಹರಣೆಗಳನ್ನು ಕೊಡುವುದು. ನರೇಂದ್ರ ಮೋದಿ ಫಾರ್ ಪೀಎಮ್ ಎಂಬ ಸ್ಲೋಗನ್ ಗೆ ‘ನಮೋ’ ಎನ್ನುವುದು.
೭. ‘ಇಂಡಿಯಾದಲ್ಲಿ ಎಲ್ಲಾ ಕೆಟ್ಟು ಹೋಗ್ತಾ ಇದೆ. ನಾವು ಅನುಭವಿಸಿದ್ದು ಸಾಕು. ನಮ್ಮ ಹುಡುಗ ಇಂಜಿನಿಯರಿಂಗ್, ಮೆಡಿಸಿನ್ ಓದಿ ಅಮೇರಿಕಾದಲ್ಲಿ ಸೆಟ್ಲ್ ಆಗಲಿ,’ ಹೇಗೂ ಅಲ್ಲಿ ಅವನ ಅಕ್ಕ ಇದ್ದಾಳೆ, ಎಲ್ಲ ಸರಿ ಹೋಗತ್ತೆ. ನಾನೂ, ಇವಳು ರಾಮಾ, ಕೃಷ್ಣ ಅಂದುಕೊಂಡು ಒಂಟ್ಹೋಗ್ತೇವೆ ಒಂದಿವ್ಸ, ಅಂತ ಅಂದುಕೊಳ್ಳುವುದು. ಆಫೀಸು ಕ್ಯಾಂಟೀನಿನಲ್ಲಿ ಇದನ್ನು ಇತರರಿಗೆ ಹೇಳಿ “ಅಯ್ಯೋ ಸರಿ ಬಿಡಿ ಸಾ, ಇಲ್ಲೇನಿದೆ” ಅಂತ ಅಪ್ರೂವಲ್ ಗಿಟ್ಟಿಸಿಕೊಳ್ಳುವುದು.
೮. ಕೇವಲ ಶಿಕ್ಷಿತರಿಗೆ ಮಾತ್ರ ಮತಾಧಿಕಾರ ನೀಡಬೇಕು, ಕನಿಷ್ಟ ಶಿಕ್ಷಣ ಪಡೆದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎನ್ನುವುದು.
೯. ವಿದೇಶಗಳಲ್ಲಿನ ಕಪ್ಪು ಹಣ ವಾಪಸು ತರಬೇಕು. ಅದು ಇಲ್ಲಿಗೆ ಬಂದು ಮುಟ್ಟುವ ಒಳಗೆ ದೇಶದ ಬಡತನ ನಾಶವಾಗಿರುತ್ತದೆ ಎಂದು ಹೇಳುವ ರಾಮದೇವ ಬಾಬಾ, ಅಡವಾಣಿ ಬಾಬಾ, ರಣಛೋಡ ಬಾಬಾ ಮುಂತಾದವರ ಮಾತಿಗೆ ಸಹಮತ ವ್ಯಕ್ತ ಪಡಿಸುವುದು.
೧೦. “ನಮ್ಮ ದೇಶದಲ್ಲಿ ಡೆಮಾಕ್ರಸಿ ಜಾಸ್ತಿ ಆಯಿತು. ಇನ್ ಫ್ಯಾಕ್ಟ್ ಈ ದೇಶಕ್ಕೆ ಡೆಮಾಕ್ರಸಿನೇ ಬ್ಯಾಡ್ರೀ, ಯಾರರ ಒಳ್ಳೇ ಡಿಕ್ಟೇಟರ್ ಬೇಕ್ ಅವಾಗ ಎಲ್ಲಾರೂ ಹಾದಿಗೆ ಬರತಾರ, ಅವನಾಪನ,” ಎಂದು ಸುರತದ ನಂತರದ ಶಾಂತಿಯಂತೆ ಉದ್ದನೆಯ ವಾಕ್ಯದ ನಂತರ ಸಹಜವಾಗಿ ಬರುವ ಉಸ್ಸೆನ್ನುವ ಉದ್ಗಾರ ತೆಗೆಯುವುದು.
೧೧. ಚುನಾವಣೆಗಳಲ್ಲಿ ಮತ ಹಾಕುವುದು.
ಈಗ ನೀವು ಒಂದರಿಂದ ಹತ್ತರವರೆಗೆ ಯಾವುದಾದರೂ ಒಂದನ್ನು ಮಾಡಿ ಹನ್ನೊಂದನ್ನು ಮಾಡದೇ ಇದ್ದಲ್ಲಿ ಅದು ಚಳವಳಿ ಅಲ. ಹುಡುಗಾಟ, ಅಷ್ಟೇ.
ಯಾಕೆಂದರೆ ಪ್ರಜಾತಂತ್ರ ಸಂಬಂಧಪಟ್ಟ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನಡೆಯುವ ಸಂಕೀರ್ಣ ಪ್ರಕ್ರಿಯೆ. ಬೇಸರ ಬಂದಾಗ ಆಡಿ ಖುಷಿ ಪಡುವ ವಿಡಿಯೋ ಗೇಮ್ ಅಲ್ಲ. ಬೇಕಾದವರನ್ನು ಗೆಲ್ಲಿಸಲು, ಬೇಡಾದವರನ್ನು ಸೋಲಿಸಲು ಚುನಾವಣೆಗಳು ನಡೆಯುತ್ತಿರುವುದು ನಿಮ್ಮ ಗೇಮ್ ಬಾಕ್ಸುಗಳಲ್ಲಿ ಅಥವಾ ಐಫೋನಿನ ಸ್ಕ್ರೀನುಗಳ ಮೇಲೆ ಅಲ್ಲ. ಅವು ನಡೆಯುವುದು ಬಿರು ಬಿಸಿಲು, ಮಳೆ, ಗಾಳಿ, ಚಳಿಯ ದಿನಗಳಲ್ಲಿ. ಧೂಳು, ಕಸ, ತುಂಬಿರುವ ಏರಿಯಾಗಳ ಗಲೀಜು ಸರಕಾರಿ ಕಚೇರಿ, ಶಾಲೆ, ಪಂಚಾಯಿತಿ ಕೇಂದ್ರಗಳಲ್ಲಿ.
ನಾವು ಮತ ಹಾಕಬೇಕೆಂದರೆ ಬೆಳಿಗ್ಗೆ ಬೇಗ ಎದ್ದು ಚಾನೆಲ್ ನೋಡದೆ ಮತಗಟ್ಟೆಯವರೆಗೆ ನಡೆದು ಹೋಗಬೇಕು, ಅಲ್ಲಿ ಉದ್ದನೆಯ ಕ್ಯೂಗಳಲ್ಲಿ ಯಾರ‍್ಯಾರ ಜೊತೆಯಲ್ಲಿಯೋ ಗಂಟೆಗಟ್ಟಲೇ ನಿಲ್ಲಬೇಕು. ಅಲ್ಲಿಯ ನೂಕು ನುಗ್ಗಾಟದ ನಡುವೆ ಸುಮಾರು ಹೊತ್ತು ನಿಂತು ಒಳಗೆ ಹೋಗಿ ಅಲ್ಲಿರುವ ದುರಹಂಕಾರಿ ಸರಕಾರಿ ಅಧಿಕಾರಿಗಳ ಅಸಹಕಾರದ ನಡುವೆಯೂ ಬುದ್ಧಿವಂತಿಕೆಯ ನಿರ್ಧಾರ ಮಾಡಬೇಕು. ಆ ತರಕಲಾಂಡಿ ಮಷೀನನ್ನು ಪೀಂ ಅನ್ನಿಸಿ ಹೊರ ಬರಬೇಕು. ಅಷ್ಟೊತ್ತಿಗೆ ತುಂಬ ಟೈಂ ವೇಸ್ಟ್ ಆಗಿರುತ್ತದೆ. ತುಂಬ ದಿನಗಳಿಂದ ಪ್ಲ್ಯಾನು ಮಾಡಿದ್ದ ಕ್ರಿಕೆಟ್ ಮ್ಯಾಚು, ಹೊಸ ಸಿನೆಮಾ, ಆಪ್ತೇಷ್ಟರ ಭೇಟಿ, ಮಾಲಿನ ಕಿಟಕಿ ಖರೀದಿ, ಮುಂತಾದವು ತಪ್ಪಿ ಹೋಗಿರುತ್ತದೆ. ಇರಲಿ ಬಿಡಿ, ಅಂತ ಸುಮ್ಮನೆ ಮನೆಗೆ ಬರಬೇಕು. ಎಲ್ಲಕ್ಕಿಂತ ಮೊದಲಿಗೆ ಈ ವ್ಯವಸ್ಥೆ ಬದಲಾಯಿಸುವ ಮನಸ್ಸು ಬೇಕು. ಅಯ್ಯೋ ಅದೆಲ್ಲಾ ಯಾವಾನಿಗೆ ಬೇಕು ಅನ್ನುವ ತಾತ್ಸಾರ ಬಿಡಬೇಕು.
“ಡೆಮಾಕ್ರಸಿ ಇಸ್ ನಾಟ್ ಎ ಚೀಪ್ ಟ್ರಿಕ್” ಅಂತ ಟಿ.ಎನ್. ಶೇಷನ್ ಹೇಳಿದ್ದು ಇದಕ್ಕೇ. ನಮ್ಮ ಪೂರ್ವಜರು ತಮ್ಮ ರಕ್ತ ಕೊಟ್ಟು ಸಂಪಾದಿಸಿದ್ದನ್ನು ನಾವು ಬೆವರು ಹರಿಸಿ ಉಳಿಸಿಕೊಳ್ಳಬೇಕಷ್ಟೇ.
ಹಾಗಾದರೆ,
ಇವೆಲ್ಲ ವಿಷಯಗಳಲ್ಲಿ ಮತದಾರರು, ಅದರಲ್ಲೂ ಯುವಕರು ಆಸಕ್ತಿ ತೋರಿಸಿದರೆ ತಪ್ಪೇ?
ಯುವಜನರಿಗೆ ತಮ್ಮ ಸರಕಾರ, ಆಡಳಿತ, ಜನತಂತ್ರದ ಬಗ್ಗೆ ಆಸಕ್ತಿ ಇಲ್ಲವೇ ಇಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ಅವರಲ್ಲಿ ಈ ರೀತಿಯ ಚರ್ಚೆ ನಡೆಯುತ್ತಿದ್ದರೆ ತಪ್ಪೇ? ಇಂತಹ ಬೆಳವಣಿಗೆಗಳಿಂದಲೇ ಅಲ್ಲವೇ ಜನತಂತ್ರ ವ್ಯವಸ್ಥೆ ವಿಕಾಸವಾಗುವುದು? ಚುನಾವಣೆ ನಡೆದಾಗಲೆಲ್ಲ ಯುವಕರು ಸಮಾಜದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ತಾನಿನ್ನೂ ಯುವಕ ಎಂದುಕೊಂಡಿರುವ ರಾಹುಲ್ ಗಾಂಧಿ ಯಿಂದ ಹಿಡಿದು ೯೦ ವರ್ಷದ ಹುಟ್ಟು ಹಬ್ಬದ ಷುಗರ್ ಲೆಸ್ ಕೇಕ್ ಕತ್ತರಿಸಿದವರೆಲ್ಲ ಹೇಳುತ್ತಿಲ್ಲವೇ?
ಆದರೆ,
ಯುವ ಮತದಾರರಿಗೆ ನಿಜವಾಗಿಯೂ ಈ ವಿಷಯದಲ್ಲಿ ಆಸಕ್ತಿ ಇದೆಯೇ? ಬದಲಾವಣೆ ತರಬೇಕು ಎನ್ನುವ ಮನಸ್ಸು ಇದೆಯೇ?
“ಅಯ್ಯೋ ನಮಗೆ ನಿರಾಶೆಯಾಗಿದೆ. ನನ್ನ ಒಂದು ಓಟಿನಿಂದ ಏನಾಗಬೇಕಾಗಿದೆ? ಯಾ ನನ್ ಮಗಾ ಆರಿಸಿ ಬಂದರೂ ಅಷ್ಟೇ” ಅನ್ನುವರು ಬಹಳ. “ನನ್ನತ್ರ ಮತದಾರರ ಗುರುತಿನ ಚೀಟಿನೇ ಇಲ್ಲ. ತರೋಕೋದ್ರೆ ದುಡ್ಡು ಕೇಳ್ತಾರೆ ನನ್ ಮಕ್ಳು. ಯಾವಾನಿಗೆ ಬೇಕೋಗೋ ನಿನ್ ಐಡಿ ಕಾರ್ಡು. ನೀನೇ ಇಟ್ಕೋ ಅಂತ್ಹೇಳ್ ಬಂದೆ” ಎನ್ನುವರು ಇತರರು.
ಇವರೆಲ್ಲಾ ಯಾರು?
ವಿದೇಶಗಳಿಗೆ ದುಡಿಯಲು, ಯುರೋಪ್ ನೋಡಲು, ಆಸ್ಟ್ರೇಲಿಯಾಕ್ಕೆ ಏಟು ತಿನ್ನಲು ಹೋಗಬೇಕಾದರೆ, ಪಾಸ್ ಪೋರ್ಟ್ ತೆಗೆಸಲು ಇವರು ಮೈಲುಗಟ್ಟಲೇ ಕ್ಯೂಗಳಲ್ಲಿ ತಾಸುಗಟ್ಟಲೇ ಕಾದವರು.
ಅಮೇರಿಕಾ ದೂತಾವಾಸದ ಎದುರು ಬೆಳಿಗ್ಗೆ ಮೂರು ಗಂಟೆಗೆ ಹೋಗಿ ಫುಟಪಾತ್ ಮೇಲೆ ಟವೇಲು ಹಾಕಿ ಮಲಗಿದವರು. ಆ ಟಾವೇಲಿನ ಮೇಲೆ ಒಂದು ಕಣ್ಣಿಡುತ್ತಾ ಪಕ್ಕದ ಫ್ಲೈಓವರ್ ಕೆಳಗೆ ಎಗ್ ರೈಸ್ ತಿಂದು ವಾಪಸ್ ಓಡಿ ಬಂದವರು. ಅಮ್ಮ, ಅಪ್ಪ, ಅಕ್ಕ, ಭಾವಂದಿರನ್ನೂ ಕರೆದುಕೊಂಡು ಹೋಗಿ, ಅವರಿಂದ ಆ ಚೆನ್ನೈನ ಟ್ರಾಫಿಕ್ಕಿನಲ್ಲಿಯೂ ಕೇಳಿಸುವಂತೆ ಹನುಮಾನ್ ಚಾಲೀಸಾ ಭಜನೆ ಮಾಡಿಸಿದವರು.
ಹೊಸ ಸಿನೆಮಾದ ರಾತ್ರಿ ಷೋಗಾಗಿ ಮಲ್ಟಿ ಪ್ಲೆಕ್ಸ್‌ಗೆ ಬೆಳಗ್ಗೇ ಹೋಗಿ ಪ್ರಿಮಿಯಂ ದರದಲ್ಲಿ ಟಿಕೀಟು ಪಡೆದವರು.
ಸ್ವಿಫ್ಟ್ ಕಾರನ್ನು ಬುಕ್ ಮಾಡಿ, ಎಂಟು ತಿಂಗಳ ಕಾಯ್ದು ಷೋರೂಂ ಮಾಲೀಕನ ಹೆಂಡತಿಯ ತಮ್ಮನ ಕ್ಲಾಸ್ ಮೇಟ್‌ನಿಂದ ಒತ್ತಡ ತಂದು, ಖರೀದಿಸಿ ಮನೆಗೆ ತಂದು ಸಹೋದ್ಯೋಗಿಗಳಿಗೆ ಸಿಹಿ ಹಂಚಿ, ಸೋಷಿಯಲ್ ಸ್ಟೇಟಸ್ ಹಾಗೂ ಫೇಸ್ ಬುಕ್ ಸ್ಟೇಟಸ್ ಎರಡನ್ನೂ ಅಪ್ ಡೇಟ್ ಮಾಡಿಕೊಂಡವರು.
ಇಂತಹ ಕುರುಕಲು ಸಂಗತಿಗಳಿಗೆಲ್ಲ ತೋರಿಸುವ ಸಹನೆ ಇಲ್ಲಿ ಯಾಕೆ ಸಾಧ್ಯವಾಗುವುದಿಲ್ಲ?
ಇನ್ನು ಮೇಲಿನ ರಸಪ್ರಶ್ನೆಯ ಹತ್ತು ವಿಚಾರಗಳಲ್ಲಿ ಸತ್ಯಕ್ಕೆ ದೂರವಾದ ಸಂಗತಿಗಳು ಕೆಲವೊಂದು ಇವೆ. ಅವನ್ನು ಮುಂದಿನ ಸರಣಿಗಳಲ್ಲಿ ನೋಡೋಣ.
ಎಲ್ಲಾ ಸರಿ, ಇವನ್ಯಾಕೆ ಹೀಗೆ ಬರೆದ? ಇವನಿಗೆ ವಯಸ್ಸಾಗಿದ್ದು ಖಂಡಿತ ಎಂದು ನೀವು ಅಂದುಕೊಳ್ಳಬಹುದು. ನನ್ನಿಂದ ಯೌವ್ವನ ದೂರವಾಗುತ್ತಿದೆ ಎಂಬ ಹೊಟ್ಟೆ ಉರಿಯಿಂದ ನಾನು ಈ ರೀತಿ ಬರೆದಿರಬಹುದು ಎಂದು ನೀವು ಅಂದುಕೊಳ್ಳಬಹುದು.
ಹೌದು ಮತ್ತೆ. ದಿನ ಕಳೆದಂತೆ ವಯಸ್ಸು ಕಮ್ಮಿ ಆಗಲು ನಾನೇನು ಹಾಲಿವುಡ್ ಬೆಂಜಮಿನ್ನನ ಅಂಗಿಯ ಬಟನ್ನೇ?
(ಕೆಂಡಸಂಪಿಗೆಯಲ್ಲಿ ಹೃಷಿಕೇಶ್ ಎಲ್ಲ ಬರಹಗಳಿಗೆ ಇಲ್ಲಿ ಕ್ಲಿಕ್ಕಿಸಿ)