ಮೇ ೨೨, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ನೇರಳೆ ಹಣ್ಣಿನ ಲೋಕೇಶ:ಗಂಗಾಧರಯ್ಯ ವ್ಯಕ್ತಿಚಿತ್ರ    
ಎಸ್.ಗಂಗಾಧರಯ್ಯ
ಬುಧವಾರ, 27 ಜೂನ್ 2012 (04:07 IST)
(ಫೋಟೋಗಳು:ಗಂಗೂ)

ಕಳೆದ ಒಂದು ಒಂದೂವರೆ ತಿಂಗಳಿಂದ ಮಾಯವಾಗಿದ್ದ ಮಳೆ ಅಂದು ಸಂಜೆಯ ಇಳಿ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಶುರುವಾಗಿತ್ತು. ಮಳೆಯ ದಪ್ಪ ದಪ್ಪ ಹನಿಗಳ ಸದ್ದಿನ ಜೊತೆಗೆ ಕಾಂಪೌಂಡ್ ಗೇಟು ಕಿರುಗುಟ್ಟಿತು. ಯಾರೂ ಅಂತ ಕಿಟಕಿಯಿಂದ ನೋಡಿದರೆ ತಲೆಯ ಮೇಲೆ ನೇರಳೆ ಹಣ್ಣಿನ ಮಂಕರಿಯನ್ನು ಹೊತ್ತುಕೊಂಡು ಒಳ ಬರುತ್ತಿದ್ದ ಲೊಕೇಶ. ‘ನೀರು ಬಿದ್ರೆ ಸಾಕು ಹಣ್ಣೆಲ್ಲಾ ಮಸಕಿದಂಗಾಗಿ ನೀರೊಡಕಂಡು ಬಿಡ್ತಾವೆ, ಹಂಗೇನಾದ್ರೂ ಆದ್ರೆ ನನ್ನ ಗಂಟಿಗೇ ಯಡವಟ್ಟಾಗಿ ಬಿಡುತ್ತೆ,’ ಅಂತ ನಾನು ಬಾಗಿಲು ತೆರೆದೊಡನೆ ಒಳಬಂದವನೇ ಒಂದೇ ಉಸುರಿಗೆ ಮಾತನಾಡುತ್ತಲೇ ಮಂಕರಿಯನ್ನ ತಲೆಯ ಮೇಲಿಂದ ಕೆಳಗಿಳಿಸಿ ನೀರು ಬೀಳದಂತೆ ನೇರಳೆಹಣ್ಣುಗಳ ಮೇಲೆ ಮುಚ್ಚಿದ್ದ ಬಟ್ಟೆಯನ್ನು ಒಮ್ಮೆ ಎತ್ತಿ ನೋಡತೊಡಗಿದ. ಹಣ್ಣುಗಳಿಗೆ ನೀರು ಬಿದ್ದಿರಲಿಲ್ಲವಾದ್ದರಿಂದ ಕೊಂಚ ನಿಸುರಾದವನಂತೆ ‘ಇದ್ರ ಮನೆ ಹಾಳಾಗಿ ಹೋಗ ಇಷ್ಟು ದಿನತ್ತಕಾವ ಅದೆಲ್ಲಿಗೆ ಹಾಳಾಗಿ ಹೋಗಿತ್ತೋ ಈ ಮಳೆ ಅನ್ನೋದು ಈಗ ಬಂದೈತೆ ಎಲ್ಲಾ ಹಾಳಾಗಿ ಹೋದ ಮೇಲೆ,’ ಅಂತ ಸುರಿಯುತ್ತಿದ್ದ ಮಳೆಯನ್ನು ಬೈಯ್ಯತೊಡಗಿದ. ‘ಈ ಮಳೆ ಏನಾರಾ ಒಂದು ತಿಂಗ್ಳಿಗೆ ಮುಂಚೆ ಬಂದಿದ್ರೆ ನಮ್ಗೆ ಏನಿಲ್ಲಾ ಅಂದ್ರೂ ನಾಲ್ಕು ಪಲ್ಲ(ಕ್ವಿಂಟಾಲ್) ಹೆಸರು ಕಾಳು ಆಗೋವು. ಈಗ ಹಾಕಿರೋ ಬೀಜದ ಕಾಳು ಸಿಕ್ತಿಲ್ಲ, ದನ ಕಟ್ಟಿ ಮೇಸಿಬಿಟ್ವಿ,’ ಮಳೆಯಿಲ್ಲದೆ ತನ್ನ ಹೊಲದಲ್ಲಿ ಒಣಗಿ ಹೋದ ಹೆಸರು ಗಿಡವದ ಬಗ್ಗೆ ಮಾತನಾಡುತ್ತಾ ಒಂದು ಸಣ್ಣ ನಿಟ್ಟುಸಿರು ಬಿಟ್ಟು ಬಾಗಿಲಿನಿಂದಾಚೆ ನೋಡತೊಡಗಿದ.

ಹೊರಗೆ ಇನ್ನೂ ಮಳೆ ಬಿರುವಾಗಿಯೇ ಬೀಳುತ್ತಿತ್ತು. ‘ಈ ಮಳೇನಾ ನಂಬಾಕಾಗಲ್ಲ, ಇಲ್ಲಿ ಇಂಗೆ ಬತ್ತಾಯ್ತೆ, ನಮ್ಮೂರ‍್ಕಡಿಕೆ ಬೀಳ್ತಾಯ್ತೋ ಇಲ್ವೋ, ಈಗ್ಲಾರಾ ಚೆನ್ನಾಗಿ ಬಂದ್ರೆ ಇನ್ನೇನು ಮುಂಗಾರು ಕತೆ ಮುಗೀತು, ಹಿಂಗಾರ‍್ನಾದ್ರೂ ಮಾಡ್ಕೋಬಹ್ದು,’ ಎದುರಿಗಿದ್ದ ನನಗೆ ಒಂದೂ ಮಾತನಾಡಲು ಅವಕಾಶ ಕೊಡದೆ ಒಂದೇ ಸಮನೆ ಹೀಗೆ ಮಾತನಾಡುತ್ತಿದ್ದವನಿಗೆ ಅದೇನು ಅನಿಸಿತೋ ಏನೋ, ‘ಅದಿರ‍್ಲಿ ಇಲ್ನೋಡಿಲ್ಲಿ ಹೆಂಗೆ ಇದಾವೆ ಹಣ್ಣು, ಸಕ್ಲೇಶಪುರದಿಂದ ತಂದಿದೀನಿ ಇವುನ್ನ’ ಅಂದವನೇ ಮಂಕರಿಯ ಮೇಲಿನ ಬಟ್ಟೆಯನ್ನು ಸರಿಸಿ ಬೊಗಸೆಯ ತುಂಬಾ ನೇರಳೆ ಹಣ್ಣುಗಳನ್ನು ತುಂಬಿಕೊಂಡು ನನ್ನೆದುರು ಹಿಡಿದ. ನಾನು ಹಣ್ಣುಗಳನ್ನೇ ನೋಡುತ್ತಾ ಏನನ್ನೂ ಮಾತನಾಡಲಿಲ್ಲವಾದ್ದರಿಂದ ‘ಅಕ್ಕ ಈ ಹಣ್ಣು ನೋಡಿದ್ರೆ ಏನಿಲ್ಲಾ ಅಂದ್ರೂ ಎರಡು ಸೇರು ತಗಂಬಿಡ್ತಿದ್ರು, ಹಂಗಿದಾವೆ ಇವು,’ ಅಂದು ಮೋಕರಿಯೊಳಗಿದ್ದ ಹಣ್ಣುಗಳನ್ನು ಮೆಲ್ಲಗೆ ನೇವರಿಸುತ್ತಾ, ಅದರಲ್ಲಿನ ದಪ್ಪವುಗಳನ್ನು ಹಾಗು ಚೆನ್ನಾಗಿ ಹಣ್ಣಾಗಿದ್ದವುಗಳನ್ನು ಆರಿಸುತ್ತಾ, ‘ಸಲ ಸಲ ಪಾವಿಗೆ ಹತ್ರಂಗೆ ಕೊಡ್ತಿದ್ದೆ ಈ ಸಾರ್ತಿ ಮಾತ್ರ ಹದಿನೈದು, ಇವುನ್ನ ಸಕ್ಲೇಶಪುರುತ್ತಾಕೆ ಹೋಗಿ ಕಷ್ಟಪಟ್ಟು ತಗಂಡು ಬಂದಿದೀನಿ,’ ಅನ್ನುತ್ತಾ ಮಂಕರಿಯೊಳಗೇ ಇದ್ದ ಪಾವಿಗೆ ತುಂಬ ತೊಡಗಿದ.

ಮೂರು ಪಾವು ಅಳೆದು ಹಾಕಿದ. ಹೊರಗೆ ಬೀಳುತ್ತಿದ್ದ ಮಳೆಯ ಬಿರುವು ಕೊಂಚ ಕಡಿಮೆಯಾಗಿದ್ದರೂ ಪೂರಾ ನಿಂತಿರಲಿಲ್ಲ. ಪೂರಾ ಮಳೆ ನಿಲ್ಲುವವರೆಗೂ ಅವನು ಆಚೆ ಹೋಗು ಹಾಗಿರಲಿಲ್ಲ. ಅಷ್ಟರಲ್ಲಿ ನಮ್ಮ ಮನೆಯ ಮೊದಲ ಮಹಡಿಯಲ್ಲಿದ್ದ ಒಡೆದು ಹೋಗಿದ್ದ ಕಿಟಕಿ ಗಾಜಿನಿಂದಾಗಿ ಅಲ್ಲಿ ಒಳ ಬಂದ ಮಳೆಯ ನೀರು ಸ್ಟೈರ್ ಕೇಸಿನ ಮೆಟ್ಟಿಲುಗಳ ಮೇಲೆ ಕೆಳಗಿಳಿದು ಬರುತ್ತಿತ್ತು. ಅದನ್ನು ನೋಡಿದ ಲೋಕೇಶ ಕೂತಲ್ಲೇ ತಿರುಗಿ ಒಮ್ಮೆ ಮನೆಯನ್ನೆಲ್ಲಾ ಕುತೂಹಲದ ಕಣ್ಣುಗಳಲ್ಲಿ ತುಂಬಿಕೊಂಡು ‘ಮನೆ ಕಟ್ಟಿ ಎಷ್ಟು ವರ್ಷ ಆತು,’ ಅಂದ. ‘ಹತ್ತು ವರ್ಷ’ ಅಂದೆ ನಾನು. ‘ಊರ‍್ನಾಗಿರೋ ನಮ್ಮ ಮನೆ ಮಳೆ ಬಂದ್ರೆ ಸಾಕು ಪೂರಾ ಸೋರುತ್ತೆ. ಕರೇ ಹೆಂಚಿನ ಮನೆ ನಮ್ಮ ತಾತನ ಕಾಲದ್ದು. ಎಲ್ಲಾ ಕರಗಿ ಹೋಗವೇ. ಮುಟ್ಟಿದರೆ ಸಾಕು ಹಂಗೇ ಪುಡಿ ಪುಡಿಯಾಗ್ತಾವೆ. ನಮ್ಮ ಅಪ್ಪ ಅನ್ನೋನು ಒಂದು ಮನೆ ಕಟ್ಲಿಲ್ಲ, ಒಂದು ಜಮೀನು ಮಾಡ್ಲಿಲ್ಲ, ಸೋಂಬೇರಿ ಥರ ಹಂಗೇ ಕಾಲ ಕಳೆದು ಬಿಟ್ಟವ್ನೆ. ಮೂರು ಜನ ತಂಗೇರು, ಎಲ್ಲರ‍್ನೂ ನಾನೇ ಮದುವೆ ಮಾಡಿದೀನಿ... ಒಂದೂವರೆ ಲಕ್ಷ ಸಾಲ ಆಗಿತ್ತು... ಎಲ್ಲಾ ಹತ್ತತ್ರ ತೀರ‍್ತಾ ಬಂದೈತೆ... ಎಲ್ಲಾ ವ್ಯಾಪಾರ‍್ದಾಗೆ ದುಡ್ದುದ್ದು... ಈಗ ಕೈಲಿ ಇಪ್ಪತ್ತು ಸಾವ್ರ ಐತೆ, ಮನೆ ಕಟ್ಟುಸ್ ಬೇಕು ಅಂತ್ಲೇ ಕೂಡಿಟ್ಕಂಡಿದೀನಿ, ಆದ್ರೆ ಇದು ಯತ್ಲಾಗಿ ಸಾಲುತ್ತೆ, ಅಲ್ವಾ?’ ಅಂತ ಕೇಳಿದವನೆ ‘ಅದೆತ್ಲಾಗೂ ಸಾಕಾಗಲ್ಲ ಬಿಡು,’ ತನಗೆ ತಾನೇ ಹೇಳಿಕೊಂಡು ಮತ್ತೊಮ್ಮೆ ಕೂತಲ್ಲೇ ಸುತ್ತಲು ತಿರುಗಿ ನೋಡಿದ.

ಸುಮಾರು ಐದೂವರೆ ಅಡಿ ಎತ್ತರದ, ಕೋಲು ಮೂಖದ, ಚುರುಕು ಕಂಗಳ ಲೋಕೇಶನ ಊರು ತಿಪಟೂರಿನ ಹತ್ತಿರದ ಆದಿಹಳ್ಳಿ. ಹತ್ತಿರತ್ತಿರ ಮುವ್ವತ್ತೈದು. ಹೈಸ್ಕೂಲಿನವರೆಗೂ ಓದಿರುವ ಇವನು ಕಾಡುಗೊಲ್ಲರ ಹುಡುಗ. ಕೃಷಿಯನ್ನೇ ನಂಬಿ ಬದುಕುತ್ತಿರುವ ಲೋಕೇಶ ನೇರಳೇ ಹಣ್ಣಿನ ಕಾಲದಲ್ಲಿ ಅರೆಕಾಲಿ ವ್ಯಾಪಾರಿ. ಆಗ ಇವನು ತನ್ನ  ಊರಿನ ಸುತ್ತ ಮುತ್ತ ಇರುವ ಹಾಗೂ ನೆಂಟರಿಷ್ಟರ ತೋಟದಲ್ಲಿರುವ ನೇರಳೆ ಹಣ್ಣುಗಳನ್ನು ಕಿತ್ತು ಹತ್ತಿರದ ತಿಪಟೂರು ಹಾಗೂ ಅರಸೀಕೆgಯಲ್ಲಿ ಮನೆ ಮನೆಗೂ ಹೋಗಿ ಮಾರಾಟ ಮಾಡುತ್ತಾನೆ. ಇವನಿಗೆ ಈ ನೇರಳೇಹಣ್ಣನ್ನು ಯಾರ‍್ಯಾರ ಮನೆಯಲ್ಲಿ ಇಷ್ಟಪಡುತ್ತಾರೆ ಅನ್ನುವುದು ಗೊತ್ತು. ಹಾಗಾಗಿ ನೇರಳೆ ಹಣ್ಣಿನ ಕಾಲ ಬರುತ್ತಿದ್ದಂತೆ ಆ ಮನೆಗಳಿಗೆಲ್ಲಾ ಮೊದಲು ಹೋಗಿ ಮಾರಾಟ ಮಾಡುತ್ತಾನೆ. ಕೆಲವು ಮನೆಗಳಲ್ಲಿ ಈ ಹಣ್ಣಿನ ಕಾಲ ಬಂದರೂ ಲೋಕೇಶ ಬರದಿದ್ದರೆ ಖುದ್ದಾಗಿ ತಾವೇ ಫೋನು ಮಾಡಿ ತರುವಂತೆ ಹೇಳುತ್ತಾರೆ. ಊರಿನ ಹತ್ತಿರದ ಹಣ್ಣುಗಳೆಲ್ಲಾ ಮುಗಿಯುತ್ತಿದ್ದಂತೆ ದೂರ ದೂರದ ಊರುಗಳಿಗೆ ಹೋಗಿ ಕಿತ್ತು ತರುತ್ತಾನೆ. ವಿಶೇಷ ಅಂದರೆ ಇವನೇ ಮರ ಹತ್ತಿ, ಅದರ ರಂಬೆ ರಂಬೆಯಲ್ಲೂ ಓಡಾಡಿ, ತನ್ನ ಬಗಲಿನಲ್ಲಿರುವ ಬ್ಯಾಗಿಗೆ ತುಂಬಿಕೊಂಡು ಇಳಿಯುವುದರಿಂದ, ಆ ಅಷ್ಟೂ ಹಣ್ಣುಗಳು ಒಂಚೂರೂ ನಜ್ಜು ಗುಜ್ಜಾಗದೆ ಫ್ರೆಶ್ ಆಗಿರುತ್ತವೆ. ಅಲ್ಲದೆ ಅವು ಮಣ್ಣು, ಧೂಳು, ಕಸ ಕಡ್ಡಿಗಳಿಂದ ಮುಕ್ತವಾಗಿರುತ್ತವೆ.

ದಿನಕ್ಕೆ ಏನಿಲ್ಲಾ ಅಂದ್ರೂ ನನ್ನ ಖರ್ಚು ಕಳೆದು ನಾನ್ನೂರು ರೂಪಾಯಿ ದುಡೀತೀನಿ, ಇದರಾಗೆ ಅಷ್ಟೇ ಕಷ್ಟಾನೂ ಐತೆ, ಒಂಚೂರು ಹೆಚ್ಚೂ ಕಮ್ಮಿ ಆತು ಅಂದ್ರೆ ಕತೆ ಮುಗೀತು. ಮರ ಹತ್ತಾಕೆ ಚೆನ್ನಾಗಿ ಗೊತ್ತಿರಬೇಕು... ಒಂದೇ ಕೆಲ್ಸ ಮಾಡ್ಕಂಡು ಬದುಕ್ತೀವಿ ಅಂದ್ರೆ ಕಷ್ಟ ಐತೆ... ಮಾಡ್ತೀನಿ ಅನ್ನೋನಿಗೆ ಮಾಡೋಕೆ ಬೇಕಾದಷ್ಟು ಕೆಲ್ಸ ಸಿಗ್ತವೇ,’ ಅಂದ ಲೋಕೇಶ ಮೇಲೆದ್ದು ಆಚೆ ಹೊಗಿ ಆಕಾಶದತ್ತ ಕತ್ತೆತ್ತಿ, ‘ಮೋಡ ಚೆನ್ನಾಗಿ ಗುಡ್ಡುಗಾಗೆವೆ ರಾತ್ರಿಕೂ ಮಳೆ ತಪ್ಪಿದ್ದಲ್ಲ. ಅಷ್ಟರಲ್ಲಿ ಮನೆ ಸೇರ‍್ಕಂಡ್ ಬಿಡಬೇಕು, ಇವತ್ತಿನ್ನೇನು ಮಾರೋ ಕೆಲ್ಸ ಮುಗ್ದಂಗೆಯಾ...’ ಮುಂತಾಗಿ  ಗೊಣಗಿಕೊಂಡು ತಾನು ಹಾಕಿಕೊಂಡು ಬಂದಿದ್ದ ಹವಾಯ್ ಚಪ್ಪಲಿಗಳನ್ನು ಅವುಗಳಲ್ಲಿದ್ದ ಕೊಳೆ ತೊಳೆದುಕೊಳ್ಳಲಿ ಅನ್ನುವ ಸಲುವಾಗಿ ಪೋರ್ಟಿಕೋದಡಿಯಿಂದ ಆಚೆ ಮಳೆ ಬೀಳುತ್ತಿದ್ದ ಜಾಗಕ್ಕೆ ಬಿಟ್ಟು ಮತ್ತೆ ಒಳ ಬಂದು ಕೂತ.

ಆ ಹೊತ್ತಿಗೆ ಮಗಳು ನಮ್ಮಿಬ್ಬರಿಗೂ ಕಾಫಿ ಮಾಡಿಕೊಂಡು ತಂದು ಕೊಟ್ಟಳು. ಕಾಫಿ ಕುಡಿಯುತ್ತಲೇ ಮರೆತಿದ್ದೇನನ್ನೋ ನೆನಪಿಸಿಕೊಂಡವನಂತೆ ನನ್ನ ಊರು, ನನಗಿರುವ ಜಮೀನು, ಅದರಲ್ಲಿ ಏನೇನು ಬೆಳೆ ಇದೆ ಅಂತೆಲ್ಲಾ ವಿಚಾರಿಸಿಕೊಂಡ. ಹಾಗೆ ನೋಡಿದರೆ ಕಳೆದೆರಡು ವರ್ಷಗಳಿಂದಲೂ ನಮ್ಮ ಮನೆಗೆ ನೇರಳೆ ಹಣ್ಣು ತಂದು ಕೊಡುವ ಈ ಲೋಕೇಶನಿಗೆ ನನಗಿಂತಲೂ ನನ್ನ ಹೆಂಡತಿಯೇ ಹೆಚ್ಚು ಪರಿಚಿತಳು. ಅವನು ನನ್ನ ಜೊತೆ ಇಷ್ಟು ಮಾತನಾಡಿದ್ದು ಇದೇ ಮೊದಲಾದರೂ ತುಂಬಾ ಹಳೆಯ ಗೆಳೆಯನಂತೆ ಮಾತನಾಡುತ್ತಾ ಹೋದ. ‘ನಂಗೆ ಒಬ್ಬ ಮಗ ಇದಾನೆ, ಮೂರು ವರ್ಷದವನು. ಇನ್ನೇನು ಸ್ಕೂಲಿಗೆ ಸೇರಿಸ್ಬೇಕು. ಎಲ್ಲಿ ಸೇರ‍್ಸಾದು ಅಂತ ಯೋಚ್ನೆ ಮಾಡ್ತಿದೀನಿ. ಅಲ್ಲೇ ನಮ್ಮೂರಾಗೇ ಅಂಗನವಾಡಿ, ಪ್ರೈಮರಿ ಸ್ಕೂಲು ಐತೆ. ಆದ್ರೆ ನಮ್ಮೂರಿನವ್ರೆಲ್ಲಾ ತಿಪಟೂರಿಗೆ ಇಲ್ಲಾ ಅರಸೀಕೆರೆಗೆ ಕಳುಸ್ತಿದಾರೆ ಕಾನ್ವೆಂಟಿಗೆ. ಹಂಗಾಗಿ ಮುಂದಿನ ಸರ್ತಿಗೆ ನಾನೂ ಕಾನ್ವೆಂಟಿಗೆ ಕಳಿಸ್ಬೇಕು ಅಂತಿದೀನಿ,’ ಅಂದ. ನಾನಿದ್ದೋನು ‘ಊರಾಗೇ ಸ್ಕೂಲು ಇಟ್ಕಂಡು ತಿಪಟೂರಿಗೆ ಯಾಕೆ ಕಳುಸ್ತೀಯ ಅಲ್ಲಿಗೆ ಕಳಿಸ ಬಹುದಲ್ಲ,’ ಅಂದೆ. ‘ನೀನೊಳ್ಳೆ ಚೆನಾಗಿ ಹೇಳ್ತೀಯಾ ಎಲ್ಲಾರ ಮಕ್ಳೂ ಇಂಗ್ಲೀಷಾಗೆ ಓದೋಕೋಗ್ವಾಗ ನಾನೆಂಗೆ ಇಲ್ಲಿಗೆ ಕಳುಸ್ಲಿ ಹೇಳು. ನಿಂಗೊಂದು ವಿಚಾರ ಗೊತ್ತ, ಎಸ್ಸೆಸ್ಸೆಲ್ಸೀ ನಾನು ಇಂಗ್ಲೀಷಿನಾಗೆ ಡುಮ್ಕಿ ಹೊಡ್ದುದ್ದಕ್ಕೇ ಮತ್ತೆ ಹಿಂಗೆ ವ್ಯಾಪಾರ ಮಾಡ್ಕೆಂಡು ಅಲೀತಿರಾದು, ಇಲ್ಲಾ ಅಂದಿದ್ರೆ ನಾನೂ ಎಲ್ಲೋ ಇರ‍್ತಿದ್ದೆ. ನಂಗೆ ಇದೊಂದು ಮಾತ್ರ ಏನು ಮಾಡಿದ್ರೂ ತಲ್ಗೇ ಹತ್ತುತ್ತಿರ‍್ಲಿಲ್ಲ. ನಂದು ಆತು ನನ್ನ ಮಗಾನೂ ಹಂಗೆ ಆಗ್ಬಾರ‍್ದು ಅಂತ ಅಷ್ಟೆಯಾ.’

‘ಅಲ್ಲಾ ಕಣೋ ಲೋಕೇಶ ಮೊದಲು ಮಾತೃಭಾಷೇನ ಚೆನ್ನಾಗಿ ಕಲೀಬೇಕು ಆಮೇಲೆ ಇನ್ನ ಎಲ್ಲಾ ಭಾಷೆಗಳ್ನೂ ಚೆನ್ನಾಗಿ ಕಲ್ತುಕೋ ಬಹ್ದು ಅಂತ ಸಾಹಿತಿಗಳು ದಿನಾಲು ಪೇಪರಿನಾಗೆ ಬರೀತಿರೋದ ನೀನು ಓದಲ್ವೇನೋ.’ ‘ಒಂದು ಮಾತು ಹೇಳ್ತೀನಿ ಈ ಬರೆಯೋರು ಇದಾರಲ್ಲ ಯಾರುನ್ನ ನಂಬಿದ್ರೂ ಅವರನ್ನ ನಂಬಬಾರ‍್ದು. ಯಾಕೆ ಅಂದ್ರೆ ಮೊನ್ನೆ ಅದ್ಯಾವುದೋ ಪೇಪರಿನಾಗೆ ಓದಿದೆ, ಅವ್ರ ಮಕ್ಳು ಮೊಮ್ಮಕ್ಳುನ್ನೆಲ್ಲಾ ಇಂಗ್ಲಿಷ್ ಸ್ಕೂಲುಗಳಿಗೆ ಸೇರ‍್ಸವ್ರಂತೆ ಬೇರೆಯವ್ರಿಗೆ ಮಾತ್ರ ಕನ್ನಡಕ್ಕೆ ಸೇರ‍್ಸಿ ಅಂತಾರೆ, ಅಂತ ಚೆನ್ನಾಗಿ ಉಗಿದಿದ್ರು, ನೀನದನ್ನ ಓದ್ಲಿಲ್ವ.’

ಈ ಹೊತ್ತಿಗಾಗಲೇ ಲೋಕೇಶ ಅಳೆದು ಕೊಟ್ಟಿದ್ದ ನೇರಳೆ ಹಣ್ಣುಗಳನ್ನು ತೊಳೆದು, ಅವುಗಳಿಗೊಂದಿಷ್ಟು ಉಪ್ಪು ಬೆರಸಿಕೊಂಡು ಚಪ್ಪರಿಸುತ್ತಾ ತಿನ್ನುತ್ತಿದ್ದ ಮಗಳು ನಮ್ಮ ಈ ಸಂಭಾಷಣೆಯನ್ನು ಕೇಳುತ್ತಾ ಮುಗುಳ್ನಗುತ್ತಾ ಕೂತಿದ್ದಳು. ಲೋಕೇಶನ ನೇರ ಮಾತುಗಳು, ಅವನ ಮುಖದಲ್ಲಾಡುತ್ತಿದ್ದ ಮುಗ್ಧತೆಯಿಂದಾಗಿ ಅವನು ನನಗೆ ತುಂಬಾ ಹತ್ತಿರದ, ತುಂಬಾ ಹಳೆಯ, ಮನಸು ಬಿಚ್ಚಿ ಮಾತನಾಡುವ ನಿಜವಾದ ಗೆಳೆಯನಂತೆ ಭಾಸವಾಗುತ್ತಾ ಅವನನ್ನೇ ದಿಟ್ಟಿಸತೊಡಗಿದೆ. ನಾನು ಹಾಗೆ ದಿಟ್ಟಿಸತೊಡಗಿದಂತೆ ಕೊಂಚ ನಾಚಿಕೊಂಡವನಂತೆ, ತಾನು ಆಡುತ್ತಿದ್ದ ಮಾತುಗಳಿಗೆ ಕೊಂಚ ಬ್ರೇಕ್ ಹಾಕಿಕೊಂಡವನಂತೆ, ‘ಇವತ್ತೇ ಕಡೆ ನೋಡು, ಇನ್ನ ಹಣ್ಣು ಸಿಗಲ್ಲ, ಚೆನ್ನಾಗಿ ಮಳೆ ಬಂತು ಅಂದ್ರೆ ಕೈತುಂಬಾ ಕೆಲ್ಸ, ಹಿಂಗೆಲ್ಲಾ ಬರಾಕಾಗಲ್ಲ. ಮುಂಚೇನೇ ಮಳೆ ಬಂದಿದ್ರೆ ಹೆಸರು ಕಾಳು ಸುರ‍್ದು ಹೋಗಾವು. ಎಲ್ಲಾ ಹಾಳು ಮಾಡಿ ಬಿಡ್ತು. ಹಂಗಾರೂ ಏನಿಲ್ಲಾ ಅಂದ್ರೂ ಒಂದು ಐವತ್ತು ಸೇರಾದ್ರೂ ಆಗ್ತಾವೆ. ಒಂದೆರ‍್ಡು ಸೇರು ತಂದು ಕೊಡ್ತೀನಿ ಸುಮ್ಕಿರು. ಅದ್ಕೇನು ನೀನು ದುಡ್ಡು ಕೊಡ ಬೇಡ. ಬೇಕು ಅಂದ್ರೆ ಹೋದ ವರ್ಷ ಬೆಳೆದ ಹುರುಳಿ ಕಾಳು ಇದಾವೆ ತಂದು ಕೊಡಾನಾ,’ ಅಂತ ಕೇಳಿ ನನ್ನನ್ನೇ ನೋಡಿದ.

ನಾನೇನೂ ಮಾತನಾಡದ್ದರಿಂದ ‘ನೀನು ಏನೇ ಹೇಳು ಮನೇಲಿ ಕುರಿ, ಮೇಕೆ ಅಂತ ಇದ್ರೆ ಲಕ್ಷ ರುಪಾಯಿ ಇದ್ದಂಗೆ. ತಂಗೇರ ಮದ್ವಿಗೆ ಅಂತ ಎಲ್ಲಾ ಕಳೆದು ಬಿಟ್ಟೆ. ಯಂಗಾರಾ ಮಾಡಿ ಒಂದಷ್ಟು ಕುರಿಗಳ್ನ ಮಾಡಿಕೋಬೇಕು... ಮನೆ ಕಟ್ಕೋ ಬೇಕು...’ಲೋಕೇಶನೊಳಗಿನ ಅದಮ್ಯ ಉತ್ಸಾಹ, ದಣಿವರಿದ ಮನಸ್ಸು, ಆರೋಗ್ಯವಂತ ಕನಸನ್ನು ಕಂಡು ನನಗೆ ಅವನ ಬಗ್ಗೆ ಪರೀತಿಯ ಬದಲು ಒಮದು ರೀತಿಯ ಗೌರವ ಭಾವ ಮೂಡತೊಡಗಿತು. ವಯಸ್ಸಿನಲ್ಲಿ ನನಗಿಂತಲೂ ಚಿಕ್ಕವನಾದ ಆದರೆ ಜೀವನಾನುಭವದಲ್ಲಿ ಅಗಾಧ ಅನುಭವಿಯಾಗಿದ್ದ ಲೋಕೇಶ ಆಮಿಷಗಳ ಬೆನ್ನು ಹತ್ತಿ ನಗರಗಳತ್ತ ಮುಖ ಮಾಡುತ್ತಿರುವ, ಕೃಷೀ ಬದುಕನ್ನು ಒಂದು ರೀತಿಯಲ್ಲಿ ಅನಾದರಿಸುತ್ತಿರುವ ಇಂದಿನ ಬಹುತೇಕ ಹಳ್ಳಿಯ ಯುವಕರಿಗೆ ಒಂದು ದೊಡ್ಡ ಆದರ್ಶದಂತೆ ಕಾಣತೊಡಗಿದ.

ಅಷ್ಟರಲ್ಲಿ ಹೊರಗೆ ಮಳೆ ಬಹುಮಟ್ಟಿಗೆ ನಿಂತು ಹೋಗಿತ್ತು. ದೂಬರು ಹನಿಗಳು ಮಾತ್ರ ಸಣ್ನಗೆ ಬೀಳುತ್ತಿದ್ದವು. ಸಂಜೆಯಾಗಿದ್ದಂತೆ ಕಾಣುತ್ತಿದ್ದ ಆಕಾಶದಲ್ಲಿ ಮತ್ತೆ ಮುಳುಗುವ ಸೂರ್ಯನ ಮುದಿ ಬೆಳಕಿನಾಟ ನಡೆದಿತ್ತು.

ಮಂಕರಿಯನ್ನು ನನ್ನಿಂದ ತಲೆಯ ಮೇಲಕ್ಕೆ ಹೊರಿಸಿಕೊಂಡು ಗೇಟಿನ ಹತ್ತಿರಕ್ಕೆ ನಡೆದು ಒಂದು ಕ್ಷಣ ಅಲ್ಲಿ ನಿಂತು, ‘ಮಗನ್ನ ಇಂಗ್ಲಿಷ್ ಸ್ಕೂಲಿಗೆ ಕಳಿಸಿದ್ರೆ ಏನು ತಪ್ಪಾಗಲ್ಲ ತಾನೆ,’ ಅಂದ.

‘ಸದ್ಯದ ಸ್ಥಿತೀಲಿ ಅಲ್ಲಿಗೆ ಕಳಿಸೋದ್ರಲ್ಲಿ ಏನು ತಪ್ಪಿಲ್ಲ ಕಣೋ,’ ಅಂದೆ ನಾನು.

ರಸ್ತೆಗಿಳಿಯುತ್ತಿದ್ದಂತೆಯೇ ಲೋಕೇಶ ‘ನೇರ‍್ಲೇ ಹಣ್ಣು, ನೇರ‍್ಲೇ ಹಣ್ಣು,’ ಅಂತ ಕೂಗಿಕೊಂಡು ಹೊರಟ.

ಪುಟದ ಮೊದಲಿಗೆ
 
Votes:  10     Rating: 4.9    
 
 
ಸಂಬಂಧಿಸಿದ ಲೇಖನಗಳು
  ಮೂಲದ ಮಾಣಿಯೂ ಕೋಣವೂ ದೈವಗಳಾದವು:ಲಕ್ಷ್ಮೀಪ್ರಸಾದ್ ಸರಣಿ
  ಸಂಭ್ರಮದ ಹೊಟ್ಟೆಯಲ್ಲಿ ಸಂಕಟ:ತರೀಕೆರೆ ವಾರದ ಬರಹ
  ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
  ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
  ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ
  ಇಲ್ಲಿನ ಕಲ್ಯಾಣ ವಿಶೇಷ: ಪ್ರಶಾಂತ್ ತಾಂಜಾನಿಯಾ ಡೈರಿ
  ಅಲ್ಲಿಯೂ ಅಂಟಿದ ಮಳೆ ಇಲ್ಲಿಯೂ ಅಂಟುವ ಮಳೆ:ನಾಗಶ್ರೀ ಅಂಕಣ
  ಹಾವುಗಳೇ ಕಚ್ಚದಿರಿ:ರಹಮತ್ ತರೀಕೆರೆ ವಾರದ ಬರಹ
  ಸಾಹಿತಿಗಳೂ ರಾಜಕಾರಣವೂ: ನಾ.ಡಿಸೋಜ ಅಂಕಣ
  ಬಿರುಬೇಸಗೆಯಲ್ಲಿ ಕಾವ್ಯಾನುರಾಗ:ಮಹೇಶ್ ಬರೆವ ಡೆಲ್ಲಿಪೋಸ್ಟ್
  ಬೆರ್ಚಪ್ಪ ಪ್ರಪಂಚ:ತಿರುಮಲೇಶರ ವಾರದ ಬರಹ
  ಕೀರ್ಲೋಸ್ಕರದಾಗ ಕೆಲಸ ಸಿಕ್ಕತ:ಪ್ರಶಾಂತ್ ಆಡೂರ ನೆನಪುಗಳು
  ಕಣ್ಣು ಚುಚ್ಚುವ ಬೆಳಕು ಬಾಲ್ಯ:ಸಿಂಧು ಬರೆವ ಅಮ್ಮನ ಕಾಲಂ
  ಕನ್ನಡ ಗದ್ಯದ ಒಂದು ಪರಿ:ರಹಮತ್ ತರೀಕೆರೆ ವಾರದ ಬರಹ
  ಅವನು ಕಟ್ಟಿದ ಆರು ಸಾವಿರ ಮೆಟ್ಟಿಲುಗಳು:ನಾಗಶ್ರೀ ಅಂಕಣ
  ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು:ರಶೀದ್ ಅಂಕಣ
  ‘ನೋಡಿ ನಿರ್ಮಲ ಜಲಸಮೀಪದಿ..:ತಿರುಮಲೇಶರ ವಾರದ ಬರಹ
  ಶ್ರೀಮಾನ್ ಮತದಾರ ಎಂಬ ಅಬ್ಬೇಪಾರಿ:ನಾ.ಡಿಸೋಜಾ ಅಂಕಣ
  ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ:ಅಬ್ದುಲ್ ರಶೀದ್ ಅಂಕಣ
  ಜಿಂಕೆಮರಿ ಮರಿಯಾನಾ ಮಿಂಚುಬಳ್ಳಿ:ನಿಹಾರಿಕಾ ಡೈರಿ
  ಪ್ರಶಾಂತ್ ಬೀರೂರು ಬರೆವ ತಾಂಜಾನಿಯಾ ಡೈರಿ ಶುರುವಾಯಿತು
  ಸಾಪೇಕ್ಷತೆ ಎಂದರೇನು?:ತಿರುಮಲೇಶರ ವಾರದ ಬರಹ
  ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ:ಪ್ರಶಾಂತ್ ಬರಹ
  ದುಡಿವ ಕಂದಮ್ಮಗಳ ಕಂಡು:ಲಕ್ಷ್ಮೀಶಂಕರ ಜೋಷಿ ಕಾಲಂ
  ಬೆಳೆಕೇ ಎಲ್ಲ ಎನ್ನುವ ಚಿತ್ರಗಳು:ಮಹೇಶ್ ‘ಡೆಲ್ಲಿಪೋಸ್ಟ್’
  ಭೂಮಿ ಕಂಪಿಸಿದ ಚೀನಾದಿಂದ ನಾಗಶ್ರೀ ತಿಳಿಸಿದ ಸಂಗತಿಗಳು
  ಅಲ್ಲಾಡುತ್ತಿದ್ದ ಹಳೆಯ ಅಂಬಾಸೆಡರ್:ಅಬ್ದುಲ್ ರಶೀದ್ ಅಂಕಣ
  ಎಮ್ಮಯ ಕಾಲದ ಇಂಗ್ಲಿಷ್ ಎಂ.ಎ:ತಿರುಮಲೇಶರ ವಾರದ ಬರಹ
  ಎನ್.ಸಿ.ಮಹೇಶ್ ಬರೆಯುವ ‘ದೆಹಲಿ ಪೋಸ್ಟ್’ ಶುರುವಾಯಿತು
  ನಿಮ್ಮದೇ ನಾಟಕಕ್ಕೆ ನಮ್ಮದೇ ತಾಲೀಮು:ಸಿಂಧು ‘ಅಮ್ಮನ ಕಾಲಂ’
  ಬೆಂಕಿಪುರ ಭದ್ರಾವತಿಯಾದ ಕಥಾನಕ:ನಾ.ಡಿಸೋಜಾ ಅಂಕಣ
  ವ್ಯಾಕರಣವೆಂಬುದು ಗ್ರಾಮ್ಯವಲ್ಲವೇ?:ತಿರುಮಲೇಶರ ವಾರದ ಬರಹ
  ವೃದ್ಧಾಶ್ರಮಕ್ಕ ಜಾಗಾ ಇದ್ದರ ನೋಡ:ಪ್ರಶಾಂತ್ ಪ್ರಹಸನ
  ಸೇಂದಿ ನಕ್ಷತ್ರ ಗುರಾಯಿಸಿ ಬರೆದ ಒಗರು ಒಗರು ಕಾಲಂ
  ವಿವೇಕ್ ಕಥೆಯ ಘಾಚರಿನ ಘೋಚಾರ ಲೋಕ:ನಾಗಶ್ರೀ ಅಂಕಣ
  ವಿಶ್ವವಿದ್ಯಾಲಯಗಳೆಂಬ ಆಲದಮರಗಳು:ತಿರುಮಲೇಶರ ವಾರದ ಬರಹ
  ಕನ್ನಡದ ಬ್ಲಾಗುಗಳ ಬಾಗಿಲಲಿ ನಿಂತು:ಎಂ.ಎಸ್.ಶ್ರೀರಾಮ್ ಬರಹ
  ಬಾರಾ ಖೂನ ಮಾಫ:ಲಕ್ಷ್ಮೀಶಂಕರ ಜೋಶಿ ಅಂಕಣ
  ಸರಳತೆ ಎಂಬ ಸಿರಿವಂತಿಕೆ:ನಾ.ಡಿಸೋಜಾ ಅಂಕಣ
  ಉತ್ತರ ದಿಕ್ಕಿನ ತಿರುಗಾಟದ ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ಹುಲ್ಲಿನ ತಾರೀಫು
  ರ್ರೀ..ನಂದ ಅಕೌಂಟ ಕ್ಲೋಸ್ ಮಾಡರಿ:ಪ್ರಶಾಂತ್ ಆಡೂರ ಪ್ರಹಸನ
  ಸೇಯಿ ಎಲಿಬಿದೆಯ ಆಸ್ಪತ್ರೆ ಸಹವಾಸ:ರೇಣುಕಾ ಕಾಲಂ
  ಸಹಜ ಸಭ್ಯತೆ ಕುರಿತ ಒಂದು ಕಾದಂಬರಿ:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ನಗೆಯ ಹಾಯಿದೋಣಿ
  ಹೆಂಗಸರ ದುಃಖ ಮತ್ತು ಗಂಡಸರ ಸವಾರಿ:ಲಕ್ಷ್ಮೀ ಜೋಶಿ ಕಾಲಂ
  ಕಾಲುವೆಗಳ ಊರಿನ ಕೆಂಪು ಕತ್ತಲು: ನಿಹಾರಿಕಾ ಡೈರಿಯ ಪುಟಗಳು
  ಉಪ್ಪಿಟ್ಟನ್ನ ಮುತ್ತಿಕೊಂಡಿದ್ದ ಇರುವೆಗಳು:ನಾ.ಡಿಸೋಜಾ ಅಂಕಣ
  ಭಾಷೆಯೊಂದರ ಅಕ್ರಮ ಸಕ್ರಮ:ತಿರುಮಲೇಶರ ವಾರದ ಬರಹ
  ಹೋದ ಒಂಟಿಹಾದಿಯ ಬಿಟ್ಟುಬಂದು:ನಾಗಶ್ರೀ ಅಂಕಣ
  ನಾ ಹೇಗೆ ಬಡವನು ನಾ ಹೇಗೆ ಪರದೇಶಿ:ಶ್ರೀರಾಮ್ ವಾರದ ಬರಹ
  ದೆಹಲಿಯ ಹಿರಿಯ ಕನ್ನಡತಿ ನೇತ್ರಾವತಿ ಮಯ್ಯ:ರೇಣುಕಾ ಕಾಲಂ
  ಪರದಂಡ ಚಂಗಪ್ಪನವರ ದೇವರು:ಅಬ್ದುಲ್ ರಶೀದ್ ಅಂಕಣ
  ಮುಂಗಾಮಿ ಹಿಂಗಾಮಿ ತದ್ರೂಪಗಳು:ತಿರುಮಲೇಶರ ವಾರದ ಬರಹ
  ಚಿತ್ರ ಸಂತೆಯಲ್ಲೊಂದು ವಿಚಿತ್ರ ಸಂತೆ:ಪ್ರಶಾಂತ್ ಆಡೂರ ಕಥನ