ಅದು ೧೯೫೮ನೇ ಇಸವಿ ಇರಬೇಕು. ನಾನು ಏಳನೇ ತರಗತಿಯಲ್ಲಿ ಓದುತ್ತಾ ಇದ್ದೆ, ನನ್ನ ಅಣ್ಣ ನರಹರಿ ಮೊದಲ ವರ್ಷದ ಬಿ.ಎ. ಓದುತ್ತಾ ಇದ್ದ. ಇಂದು ನನ್ನ ಅಣ್ಣ ನರಹರಿ ಇಹಲೋಕದಲ್ಲಿ ಇಲ್ಲ. ನಾಲ್ಕು ವರುಷದ ಮೊದಲು ಆತ ಇಹಲೋಕದ ವ್ಯಾಪಾರ ಮುಗಿಸಿದ್ದಾನೆ.
ನಮ್ಮ ಎಳವೆಯಲ್ಲಿ ನಾವಿಬ್ಬರೂ ಸಕಲ ಕಿತಾಪತಿಗಳಲ್ಲಿ ಪಾಲುದಾರರು. ಎಡ್ಗರ್ ರೈಸ್ ಬರೋಸ್ ಅವರ ಟಾರ್ಜ಼ಾನ್, ಷೆರ್ಲಾಕ್ ಹೋಮ್ಸ್, ಜೂಲ್ಸ್ ವೆರ್ನ್, ಮಾರ್ಕ್ ಟ್ವೈನ್ ಮುಂತಾದವರ ಕಾದಂಬರಿಗಳನ್ನು ಓದುತ್ತಾ ಇದ್ದೆವು. ಪ್ಯಾಪುಲರ್ ಮೆಕ್ಯಾನಿಕ್ಸ್ ಮ್ಯಾಗಜಿನ್ ತರಿಸಿಕೊಂಡು ಅದನ್ನು ಪಾರಾಯಣ ಮಾಡುತ್ತಾ ಇದ್ದೆವು. ನಮ್ಮ ನಮ್ಮ ಸೈಕಲುಗಳನ್ನು ರಿಪೇರಿ ಮಾಡಿಕೊಳ್ಳಬಲ್ಲ ಬಲ್ಲಿದರಾಗಿದ್ದೆವು. ನಮ್ಮಲ್ಲಿ ಒಂದು ಏರ್ ಗನ್ ಇತ್ತು. ಸೈಕಲ್ ಪಂಪಿನಿಂದ ತಯಾರಿಸಿದ ವಾಟರ್ ಗನ್ ಇತ್ತು. ಲೋಹದ ಕಬೆಯ ಕ್ಯಾಟಪುಲ್ಟ್ ಇತ್ತು. ಅದರ ಅಸ್ತಿತ್ವದಿಂದಾಗಿ ನಮ್ಮ ಅಕ್ಕಪಕ್ಕದ ಮನೆಗಳ ಮಾವಿನ ಮರಗಳಲ್ಲಿ ಮಾವಿನ ಕಾಯಿಗಳೇ ಕಾಣಿಸುತ್ತಾ ಇರಲಿಲ್ಲ. ಮಾವಿನ ಮಿಡಿಗಳೇ ನಮ್ಮ ಕವಣೆಗೆ ಆಹುತಿಯಾಗಿ ನಮ್ಮ ಮತ್ತು ಗೆಳೆಯರ ಹೊಟ್ಟೆ ಸೇರುತ್ತಾ ಇದ್ದುವು. ನಮ್ಮ ಪಾಲಿಗೆ ನರಹರಿ ಅರ್ಜುನ. ಅವನ ಗುರಿ ಎಂದಿಗೂ ತಪ್ಪುತ್ತಲೇ ಇರಲಿಲ್ಲ.
ಆತ ಸೀನಿಯರ್ ವಿಂಗ್ ಎನ್.ಸಿ.ಸಿ. ಕೆಡೇಟ್, ಆದರೆ ನಾನು ಜೂನಿಯರ್ ವಿಂಗ್ ಎನ್.ಸಿ.ಸಿ. ಕ್ಯಾಡೇಟ್. ನಾವೂ ಒಮ್ಮೊಮ್ಮೆ ನಾವು “ಒಳ್ಳೆಯ ಹುಡುಗರೇ” ಆಗಿ ಇತರರಿಗೆ ತೋರಿ ಬರುತ್ತಿದ್ದೆವು. ಶಿಸ್ತಿನ ಸಿಪಾಯಿ ಲೆಫ್ಟಿನೆಂಟ್ ಜಿ.ಟಿ. ನಾರಾಯಣರಾವ್ ಅವರು ಡೆಪ್ಯೂಟಿ ಕಮಾಂಡಂಟ್ ಆಗಿ ಕೊಡಗಿನ ಕೊಟ್ಟಮುಡಿಯಲ್ಲಿ ದಶಂಬರ ತಿಂಗಳ ಚಳಿಯಲ್ಲಿ ನಡೆಸಿಕೊಟ್ಟ ಎನ್.ಸಿ.ಸಿ. ಸೀನಿಯರ್ ವಿಂಗ್ ಮತ್ತು ಜೂನಿಯರ್ ವಿಂಗ್ ಗಳ ಕಂಬಾಯಿನ್ಡ್ ಟ್ರೈನಿಂಗ್ ಕ್ಯಾಂಪಿನಲ್ಲಿ ಭಾಗವಹಿಸಿ ಶಹಬ್ಬಾಸ್ ಗಿರಿ ಪಡೆದು ಬಂದ ಹುಡುಗರು ನಾವು.
ನಾವು ಅದುತನಕ ಎಂದಿಗೂ ಕಾವೇರಿ ಬದಿಯ ಚಳಿ ಕಂಡವರಲ್ಲ. ಬೆಳಗಿನ ತಾಪಮಾನ ಒಂಬತ್ತು ಡಿಗ್ರಿಯ ಆಸುಪಾಸಿನಲ್ಲಿ ಇರುತ್ತಾ ಇತ್ತು. ಕ್ಯಾಂಪ್ ಮುಗಿಸಿ ಮನೆಗೆ ಬಂದ ಮೇಲೆ ನಮ್ಮ ಚಟುವಟಿಕೆ ಇನ್ನೂ ಹೆಚ್ಚಾಯಿತು.
ಆಟದಲ್ಲಿ, ಊಟದಲ್ಲಿ ನಾವೇ ಮೊದಲು, ಇತರೇ ಹುಡುಗರೊಡನೇ ನಾವು ಆಡುವ ಫುಟ್‍ಬಾಲ್ ಮತ್ತು ಕಿಕೆಟ್ ಮ್ಯಾಚುಗಳಲ್ಲಿ ನಾವೇ ಗೆಲುವಿಗೆ ಕಾರಣ ಅನ್ನಿಸುತ್ತಿದ್ದೆವು. ಅಪರೂಪದಲ್ಲಿ ನಡೆಯುವ ಹುಡುಗರ ಬೀದಿ ಕಾಳಗಗಳಲ್ಲಿ ನಮ್ಮನ್ನು ಮೀರಿಸುವ ವೀರರೇ ಇರಲಿಲ್ಲ.
ಹೀಗಿರಲು ಬೇಸಿಗೆಯ ರಜಾ ಬಂತು. ನಮ್ಮ ತಾಯಿಯವರಿಗೆ ನಮಗೆ ರಜಾ ಸಿಕ್ಕಿದರೆ “ಖುಶಿ ಮತ್ತು ಕಿರಿಕಿರಿ” ಜತೆಜತೆಯಾಗಿ ಕಾಡುತ್ತಾ ಇದ್ದುವು. ಬೆಳೆಯುವ ಪ್ರಾಯದ ಸುಪುತ್ರ(?)ರಾದ ನಮಗೆ ಅಸಾಧ್ಯ ಹಸಿವೆ! ಅವರಿಗೆ ಊಟ ತಿಂಡಿ ತಯಾರಿಸಿ ಕೈತುಂಬಾ ಬಡಿಸುವ ಖುಶಿ ಒಂದು ಕಡೆ.
ಕಿರಿ ಕಿರಿ ಅಂದರೆ ಇಡೀ ದಿನ ಮನೆ ಸುತ್ತಲೂ ಆಡುತ್ತಾ ದಾಂಧಲೆ ಎಬ್ಬಿಸುತ್ತಿದ್ದೆವು. ಮನೆಯ ಕಾಂಪೌಂಡ್ ಒಳಗೆ ಹಾರ್ಡ್ ಬಾಲ್ ಕ್ರಿಕೆಟ್ ಆಡಿ ನಮ್ಮ ಮನೆಯ ಕಿಟಿಕಿ ಗಾಜುಗಳನ್ನು ಮಾತ್ರವಲ್ಲ. ಪಕ್ಕದ ಮನೆಯವರ ಕಿಟಿಕಿಯ ಗಾಜುಗಳನ್ನೂ ಒಡೆಯುತ್ತಾ ಇದ್ದೆವು. ಇಲ್ಲವೇ ಸೈಕಲ್ ಹೊಡೆಯುತ್ತಾ ಬರೇ ಮೂರು ಮೈಲು ದೂರದ ಮಲ್ಪೆಗೆ ಹೋಗಿ, ಸಮುದ್ರದಲ್ಲಿ ಗಂಟೆಗಟ್ಟಲೆ ಈಜು ಹೊಡೆಯುತ್ತಾ ಇದ್ದೆವು.
ನಿರಂತರವಾಗಿ ನಮ್ಮನ್ನು ನಿಭಾಯಿಸುವ ಚಿಂತೆ ಅವರನ್ನು ಕಾಡುತ್ತಿತ್ತು. ಆ ವರುಷ ಬೇಸಿಗೆಯ ರಜಾ ಸಿಕ್ಕಿದ ಮರುದಿನವೇ ಸೀನಿಯರ್ ಮೆಕ್ಯಾನಿಕ್ ಫ್ರೆಡ್ಡಿಯಣ್ಣನ ಕಾರ್ ಗ್ಯಾರೇಜಿನಲ್ಲಿ ನಮಗೊಂದು ಹಳೆಯ ಮ್ಯಾಚ್‍ಲೆಸ್ ಮೋಟರ್ ಸೈಕಲ್ ಕಂಡುಬಂತು. ಅದು 1942ನೇ ಮಾಡೆಲ್ ಇಂಗ್ಲಿಷ್ ಬೈಕ್. ಮೆಕ್ಯಾನಿಕ್ ಫ್ರೆಡ್ಡಿಯಣ್ಣ ಯುವಕನಾಗಿದ್ದಾಗ ಅವರ ಕೈಯ್ಯಲ್ಲೇ ಅದು ಸಾಕಷ್ಟು ಓಡಿ “ಮುಂದಕ್ಕೆ ರಿಪೇರಿ ಆಗುವುದಿಲ್ಲ” ಎಂಬ ಹಣೆಪಟ್ಟಿ ಪಡೆದು ರಿಟಾಯರ್ ಆಗಿತ್ತು. ಅದರ ಮೇಲಿನ ಪ್ರೀತಿಯಿಂದ ಅವರು ಅದನ್ನು ಗುಜರಿಗೆ ಕೊಡದೇ ತನ್ನ ಗ್ಯಾರೇಜಿನಲ್ಲಿ ಇರಿಸಿಕೊಂಡಿದ್ದರು. ಆ ಬೈಕ್ ಅವರ ಗ್ಯಾರೇಜಿನ ಮೂಲೆಯಲ್ಲಿ ಧೂಳು ಹಿಡಿದು ಕುಳಿತಿತ್ತು. ಅದರ ಆಯುಸ್ಸು ಮುಗಿದಿದೆ ಅಂತ ಅನ್ನಿಸಿಕೊಂಡ ವಿಚಾರ ಖಚಿತ ಆದಾಗ ಫ್ರೆಡ್ಡಿಯಣ್ಣ ಆ ಮೋಟರ್ ಸೈಕಲಿನ ರಿಜಿಸ್ಟ್ರೇಶನ್ ನೋಂದಣಿಯನ್ನು ಬಹು ವರ್ಷಗಳ ಹಿಂದೆಯೇ ಸರಂಡರ್ ಮಾಡಿ ಅದನ್ನು ಮೂಲೆ ಸೇರಿಸಿದ್ದರು. ಗ್ಯಾರೇಜಿನ ಮೂಲೆಯಲ್ಲಿದ್ದ ಮ್ಯಾಚ್‍ಲೆಸ್ ಮೋಟರ್ ಬೈಕ್ ಯಾವಾಗ ನಮ್ಮ ಕಣ್ಣಿಗೆ ಬಿತ್ತೋ! ಅದೇ ದಿನ ನಮಗಿಬ್ಬರಿಗೂ ಅದನ್ನು ಸರಿಪಡಿಸಿ ಓಡಿಸುವ ಆಲೋಚನೆ ಶುರು ಆಯಿತು. ಅದು ನಮಗೆ ಬೇಕೇ ಬೇಕು ಅನಿಸಿತು. ಆಗಲೇ ಮುದುಕರಾಗಿದ್ದ ಫ್ರೆಡ್ಡಿಯಣ್ಣನ ಜತೆ ಮೂರು ದಿನ ಚರ್ಚೆ ಮಾಡಿ ಅದರ ಬೆಲೆಯನ್ನು ಎಂಟು ನೂರರಿಂದ ನಾಲ್ಕು ನೂರಕ್ಕೆ ಇಳಿಸಿದೆವು. ನಮ್ಮ ಪಾಕೆಟ್ ಮನಿ, ಪೋಸ್ಟ್ ಆಫೀಸಿನ ಎಸ್.ಬಿ. ಖಾತೆಯ ಎಲ್ಲ ಮೊತ್ತಗಳನ್ನು ಸೇರಿಸದರೂ ರೂಪಾಯಿ ನಾಲ್ಕು ನೂರು ಆಗಲಿಲ್ಲ. ಆಗ ನಾಲ್ಕು ನೂರು ಬಹುದೊಡ್ಡ ಮೊತ್ತ!
“ಆ ಫಾರಿನ್ ಬೈಕನ್ನು ನಾವೇ ಈ ಸಲದ ರಜಾದಿನಗಳಲ್ಲಿ ರಿಪೇರಿ ಮಾಡಿ, ಮಂಗಳೂರಿನಲ್ಲಿ ಇದ್ದ RTO ಕಛೇರಿಯಲ್ಲಿ ತೋರಿಸಿ, ಅದಕ್ಕೆ ರಸ್ತೆಯಲ್ಲಿ ಓಡುವ ಅರ್ಹತೆ ಇದೆ ಅಂತ ನಿರೂಪಿಸಿ, ಅದರ ಹಳೆಯ MDX 909 ನಂಬ್ರವನ್ನು ಊರ್ಜಿತಗೊಳಿಸಿ (ಅಂದರೆ ಸಜೀವ ಮಾಡಿ) ರೆಜಿಸ್ಟ್ರೇಶನ್ ಸರ್ಟಿಫಿಕೇಟ್ ಪಡೆದು ಅದನ್ನು ಕ್ರಮಬದ್ಧವಾಗಿ ನಾವು ಓಡಿಸುತ್ತೇವೆ!” ಅಂತ ನಮ್ಮ ತಾಯಿಯವರಲ್ಲಿ ವರಾತ ಹಚ್ಚಿದೆವು. ಕೊನೆಗೆ ತಾಯಿಯವರು ತಲೆಚಿಟ್ಟು ಹಿಡಿದು “ಏನಾದರೂ ಮಾಡಿ! ಸದ್ಯಕ್ಕೆ ನಿಮ್ಮ ರಜಾದಲ್ಲಿ ಬೈಕ್ ರಿಪೇರಿ ಮಾಡುತ್ತಾ ಮನೆಯ ಗ್ಯಾರೇಜಿನಲ್ಲೇ ಠಿಕಾಣಿ ಹೂಡುತ್ತೀರಲ್ಲ? ನನಗೆ ಅಷ್ಟೇ ಸಾಕು!” ಅಂತ ನಮಗೆ ಒಪ್ಪಿಗೆ ಕೊಟ್ಟರು. ತಾಯಿಯವರು ಕೊಟ್ಟ ನಾಲ್ಕು ನೂರು ತೆತ್ತು ಚುಕ್ತಾ ನಿಶಿಯ ರಶೀದಿ ಪಡೆದು ಬೈಕ್ ಕೊಂಡೆವು. ಫ್ರೆಡ್ಡಿಯಣ್ಣ “ಯಾವ ಕಾರಣಕ್ಕೂ ಈ ಸ್ಕ್ರ್ಯಾಪ್ ಮಾಡಿದ ಬೈಕ್ ಅವರಿಗೆ ವಾಪಸ್ ತಂದುಕೊಡುವುದಿಲ್ಲ” ಎಂಬ ಅಂಶವನ್ನು ಡೆಲಿವರಿ ನೋಟಿನಲ್ಲಿ ಬರೆಸಿಕೊಂಡು ಬೈಕ್ ಮತ್ತು ಬೈಕಿನ ಊರ್ಜಿತ ಇಲ್ಲದ R.C. ಪುಸ್ತಕ ಇವನ್ನು ನಮ್ಮ ಕೈಗೆ ಇತ್ತರು!
ನಮ್ಮ ಮ್ಯಾಚ್ ಲೆಸ್ ಬೈಕನ್ನು ನೂಕುತ್ತಾ ಮನೆಗೆ ತಂದೆವು. ನೂಕುವುದೂ ಸುಲಭ ಆಗಿರಲಿಲ್ಲ. ಆ ಬೈಕಿನ ಚಕ್ರದ ಲಡ್ಡಾದ ಎರಡೂ ಟ್ಯೂಬುಗಳಿಗೆ ನೂರು ಮಾರಿಗೊಮ್ಮೆ ಕೈ ಪಂಪಿನಿಂದ ಗಾಳಿತುಂಬುತ್ತಾ ಕೊನೆಗೂ ಅದನ್ನು ನಮ್ಮ ಮನೆಯ ಕಾರ್ ಶೆಡ್ಡಿನೊಳಗೆ ತಂದೆವು ಇರಿಸಿದೆವು.
ಆ ದಿನ ರಾತ್ರಿ ನಾವು “ಮುಂದಿನ ವರ್ಷದ ರಜೆಯಲ್ಲಿ ನಮ್ಮ ಬೈಕಿನಲ್ಲಿ ಸವಾರಿ ಮಾಡುತ್ತಾ ಕಾರವಾರ, ಗೋವಾ ನೋಡಿಕೊಂಡು ಮುಂಬಯಿಗೆ ಹೋಗಿ ಬರೋಣ!” ಅಂತ ಮಾತನಾಡುತ್ತಾ ನಿದ್ರೆ ಹೋದೆವು. ನರಹರಿಗೆ ಆಗ ಹದಿನೆಂಟು ತುಂಬಿತ್ತು. ಕಾರು ಮತ್ತು ಬೈಕ್ ಡ್ರೈವಿಂಗ್ ಲೈಸನ್ಸ್ ಗಳನ್ನು ಅವನು ಆಗಲೇ ಪಡೆದಿದ್ದ.
ನಮ್ಮ ತಾಯಿಯವರಿಗೆ ಆ ಲಡ್ದು ಬೈಕ್ ಕಂಡು ತುಂಬಾ ಸಂತಸ ಆಯಿತು. ಕಾರಣ ಏನೆಂದರೆ, ಈ ಬೈಕನ್ನು ರಿಪೇರಿ ಮಾಡಲು ಪ್ರಯತ್ನಿಸುತ್ತಾ ನಾನು ಮತ್ತು ಹರಿ ಅಣ್ಣ ನಮ್ಮ ಕಾರ್ ಶೆಡ್ಡಿನಲ್ಲೇ ಏನಾದರೂ ರಿಪೇರಿ ಮಾಡುತ್ತಾ ಇದ್ದು ಬೇರೆ ಯಾವ ಕಿತಾಪತಿಗೂ ಹೋಗುವುದಿಲ್ಲ ಅಂತ ಅವರಿಗೆ ಸಮಾಧಾನ ಆಗಿತ್ತು.
ನಾವಿಬ್ಬರೂ ಕರೆದ ಕೂಡಲೇ ಊಟ ತಿಂಡಿಗೆ ಹಾಜರಾಗುತ್ತೇವೆ ಎಂಬ ಒಂದು “ಸುಪ್ತ ನಂಬಿಕೆ” ಕೂಡಾ ಅವರಲ್ಲಿ ಮೂಡಿತು.
ಊಟಕ್ಕೆ ಕರೆದರೆ ನಿಧಾನ ಸಾಗಿ ಆಯಿಲ್ ತಾಗಿದ ಕೈಯ್ಯಲ್ಲಿ ಊಟ ಮಾದಲಾಗದೇ. “ಒಂದು ಚಮಚ ಕೊಡಿ” ಅನ್ನುತ್ತಾ ಗಬಗಬನೆ ತಿಂದು ಬೈಕಿನ ಹತ್ತಿರ ಓಡುತ್ತಾ ಇದ್ದೆವು.
ಬೈಕನ್ನು ಎರಡು ದಿನ ತೊಳೆದು ಮಾಲಿಶ್ ಮಾಡಿದೆವು. ಪೈಂಟ್ ಎಲ್ಲಾ ಅಲ್ಲಲ್ಲಿ ಕಿತ್ತು ಹೋಗಿತ್ತು. ಕ್ರೋಮಿಯಮ್ ಪಾರ್ಟ್‍ಗಳೆಲ್ಲ ಜುಂಗು ತಿಂದುಹೋಗಿದ್ದುವು. ಸೀಟ್ ಕವರುಗಳೆಲ್ಲಾ ಬಿರುಕು ಬಿಟ್ಟಿದ್ದುವು. ನಮ್ಮ ಕನಸಿನ ಬೈಕ್‍ಅನ್ನು ಇದಿರು ಇಟ್ಟುಕೊಂಡು ನಮ್ಮಲ್ಲಿ ಇರುವ ಎಲ್ಲಾ ಪ್ಯಾಪುಲರ್ ಮೆಕ್ಯಾನಿಕ್ಸ್ ಸಂಚಿಕೆಗಳನ್ನು ಎರಡು ದಿನಗಳ ಕಾಲ ಮಗುಚಿ ಹಾಕಿದೆವು.
ನಮ್ಮ ಕೈಯ್ಯಲ್ಲಿ ನಲುವತ್ತು ದಿನಗಳ ರಜಾ ಉಳಿದಿದ್ದುವು! ಅದಕ್ಕೆ ಸರಿಯಾಗಿ ನಮ್ಮ ಕಾರ್ಯನೀತಿಯನ್ನು ರೂಪಿಸಿಕೊಂಡೆವು. ಮೂವತ್ತು ದಿನಗಳಲ್ಲಿ ಎಲ್ಲಾ ರಿಪೇರಿ ಮುಗಿಸಿ, ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ಮೇಲೆ ನಮ್ಮ ಸ್ಥಳೀಯ ಸುತ್ತಾಟ!
ಮೊದಲ ಕೆಲಸ: ದೊಡ್ಡ ಅಣ್ಣನ ಕಾರು ಹೊರಗೆ, ನಮ್ಮ ಬೈಕ್ ಗ್ಯಾರಜ್ ಒಳಗೆ!
ಮೊದಲ ಹದಿನೈದು ದಿನಗಳ ರಿಪೇರಿ ಕಾರ್ಯಕ್ರಮ:
ಮೊದಲು ಕ್ರೋಮಿಯಮ್ ಪ್ಲೇಟ್ ಮಾಡಬೇಕಾದ ಭಾಗಗಳನ್ನು ಕಳಚಬೇಕು.
ಹ್ಯಾಂಡಲ್ ಬಾರ್, ಹೆಡ್ ಲೈಟ್, ಪೆಟ್ರೋಲ್ ಟ್ಯಾಂಕ್, ಎರಡು ರಿಮ್, ಸೈಲೆನ್ಸರ್ ಇತ್ಯಾದಿ.
ಆನಂತರ ಎಂಜಿನ್, ಡ್ರೈವ್ ಚೈನ್, ಗೇರ್ ಬಾಕ್ಸ್ ಬಿಚ್ಚಿ ಕೆರೋಸಿನ್ ಎಣ್ಣೆಯಲ್ಲಿ ಕ್ಲೀನ್ ಮಾಡುವುದು.
ಆ ನಂತರದ ಹದಿನೈದು ದಿನಗಳ ರಿಪೇರಿ ಕಾರ್ಯ:
ಎಂಜಿನ್, ಗೇರ್ ಬಾಕ್ಸ್, ಡ್ರೈವ್ ಚೈನ್, ಡೈನಮೋ ಇವನ್ನು ಬಿಚ್ಚಿ ನೋಡಿ, ಬೇಕಾದ ಸ್ಪೇರ್ ಪಾರ್ಟ್ಸ್ ಕೊಳ್ಳುವುದು. ಪುನಃ ಜೋಡಿಸುವುದು.
ರಿಪೇರಿ ಆದ ನಂತರ ಕ್ರೋಮಿಯಂ ಪ್ಲೇಟಿಂಗ್ ಮತ್ತು ಪೈಂಟ್ ಮಾಡಿಸುವುದು.
ಕೊನೆಯದಾಗಿ ಇಲೆಕ್ಟ್ರಿಕಲ್ ಕೆಲಸ. ಆಮೇಲೆ ರೋಡ್ ಟ್ರಯಲ್!
ಮೂವತ್ತನೇ ದಿನದ ನಂತರ:
ಎಲ್ಲಾ ರಿಪೇರಿ ಮುಗಿದ ಮೇಲೆ ಮೋಟರ್ ಸೈಕಲಿಗೆ ಫಿಟ್‍ನೆಸ್ ಸರ್ಟಿಫಿಕೇಟ್ ಮಾಡಿಸಲು ಮಂಗಳೂರಿಗೆ ಹೋಗುವುದು.
RTO ಆಫೀಸಿನಲ್ಲಿ ಸಾದ್ಯ ಇದ್ದರೆ ಅದೇ ಹಳೆಯ ನಂಬರ್ MDX 909 ಪಡೆದು ಮತ್ತು ಬೈಕನ್ನು ಉಡುಪಿಗೆ ತರುವುದು.
ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡು ಕೆಲಸ ಶುರು ಮಾಡೇ ಬಿಟ್ಟೆವು. ಒಂದು ಡಬ್ಬ ಕೆರೋಸಿನ್ ಹಲವು ಚಟ್ಟಿಗಳನ್ನು ಕೊಂಡೆವು. ಬಿಚ್ಚಿದ ಬಿಡಿ ಭಾಗಗಳನ್ನು ತೊಳೆಯಲು ತಯಾರಾದೆವು. ಹಲವಾರು ನಟ್, ಸ್ಕ್ರೂ, ಬೋಲ್ಟ್ ಇವನ್ನು ಬಿಚ್ಚಲು ನಮ್ಮಿಂದ ಆಗಲಿಲ್ಲ. ನಮ್ಮ ಕೈ ಹತ್ಯಾರುಗಳಿಂದ ಬಿಚ್ಚಲು ಬಾರದವನ್ನು “ಹತೋಡಿ ಮಂತ್ರ” (ಅಂದರೆ ಸುತ್ತಿಗೆ ಮತ್ತು ಚ್ಯಾಣದ ಪೆಟ್ಟು) ಬಳಸಿ ಬಿಚ್ಚಲು ಪ್ರಯತ್ನ ಮಾಡಿದೆವು. ಬಿಚ್ಚಲು ಬಾರದನ್ನು ಹಾಗೆಯೇ ಬಿಟ್ಟು ಮುನ್ನಡೆದುವು, ಎಂಜಿನ್ ಹೆಡ್ ತೆಗೆದೆವು. ಕ್ರ್ಯಾಂಕ್ ಶಾಫ್ಟ್ ಬಿಚ್ಚಿದೆವು. ಜೀವನದಲ್ಲಿ ಮೊದಲಬಾರಿಗೆ ಜರ್ನಲ್ ಬೇರಿಂಗ್ ನೋಡಿದೆವು. ಡೈನಮೋ ಬಿಚ್ಚಲು ನಮ್ಮಿಂದ ಆಗಲಿಲ್ಲ. ಡ್ರೈವ್ ಚೈನ್ ರಸ್ಟ್ ಬಂದಿದ್ದು ನಮ್ಮ ಕೈಯ್ಯಲೇ ನೂರಾರು ಲಿಂಕ್ ಗಳು ಬೇರೆ ಆದುವು. ಎಂಜಿನ್ ಒಳಗೆಲ್ಲ ರಸ್ಟ್! ತೊಳೆದು ತೊಳೆದು ರಸ್ಟ್ ತೆಗೆಯಲು ನೋಡಿದೆವು. ಫೈಬರ್ ಗ್ಯಾಸ್ಕೆಟುಗಳು ಮತ್ತು ವಾಷರುಗಳು ನಮ್ಮ ಕೈಯ್ಯಲ್ಲೇ ಪುಡಿ ಪುಡಿ ಆದುವು. ಹೀಗೆಯೇ ಇಪ್ಪತ್ತಾರು ದಿವಸಗಳು ಕಳೆದು ಹೋದುವು. ಕೊನೆಗೊಮ್ಮೆ ಬೇಕಾಗುವ ಸ್ಪೇರ್ ಪಾರ್ಟ್ ಪಟ್ಟಿ ಮಾಡಲು ಕುಳಿತೆವು. ಕೊನೆಗೊಮ್ಮೆ ಪಟ್ತಿ ತಯಾರಾಯಿತು. ಯಾವ ಸ್ಪೇರ್ ಪಾರ್ಟ್‍ಗಳೂ ಸ್ಥಳೀಯವಾಗಿ ಲಭ್ಯ ಇರಲಿಲ್ಲ. ಮುಂಬಯಿಯ ಪಾರಸೀ ಕಂಪೆನಿಯೊಂದಕ್ಕೆ ಎಕ್ಸ್ ಪ್ರೆಸ್ ಡೆಲಿವರೀ ಪತ್ರ ಬರೆದು ಕ್ರಯ ವಿಚಾರಿಸಿದೆವು. ಅವರ ಮಿನಿಮಮ್ ಕೊಟೇಶನ್ ಹತ್ತೊಂಬತ್ತು ಸಾವಿರ ಅಂತ ಉತ್ತರಿಸಿದರು.
ಆ ಕಾಲದಲ್ಲಿ ಹೊಸಾ ಬುಲೆಟ್ ಬೈಕಿಗೆ ನಾಲ್ಕುವರೆ ಸಾವಿರ ಕ್ರಯ ಇತ್ತು ಅಂತ ನನ್ನ ನೆನಪು! ನಮಗೆ ಭ್ರಮನಿರಸನ ಆಯಿತು.
ಕೊನೆಗೂ ರದ್ದಿ ಪೇಪರ್ ಮಾರುವ ಅಸಾದಿಯ ಅಂಗಡಿಗೆ ನಾಲ್ಕು ದೊಡ್ಡ ಬುಟ್ಟಿಗಳಲ್ಲಿ ನಮ್ಮ ಬೈಕ್ ಸಾಗಿಸಿ ಗುಜರಿ ಬೆಲೆಗೆ ನಮ್ಮ ಮೋಟರ್ ಸೈಕಲ್ ಮಾರಿದೆವು. ಐವತ್ತು ರೂಪಾಯಿ ಬಂತು. ಬುಟ್ಟಿ ಹೊತ್ತ ಕೂಲಿಯಾಳುಗಳಿಗೆ ರೂಪಾಯಿ ಇಪ್ಪತ್ತು ಕೊಡಬೇಕಾಯಿತು.
ಉಳಿಕೆಯ ಮೂವತ್ತನ್ನು ತಾಯಿಯವರಿಗೆ ಹಿಂದಿರುಗಿಸಿದೆವು.
ತುಂಬಾ ಸುಸ್ತಾಗಿದ್ದ ನಾವು ಮೂರು ದಿನ ಊಟ ಮತ್ತು ನಿದ್ರೆ ಬಿಟ್ಟು ಬೇರೇನೂ ಮಾಡಲಿಲ್ಲ.
ಮೊದಲು ನನಗೆ ಸ್ಕೂಲ್ ಶುರು ಆಯಿತು. ಆ ಮೇಲೆ ಹರಿ ಅಣ್ಣನಿಗೆ ಕಾಲೇಜ್!
ನಮ್ಮ ಪ್ರಾಜೆಕ್ಟ್ ಸಂಪೂರ್ಣ “ಫೈಲೂರ್” ಆಗಿತ್ತು.
ಬರೇ ಮುನ್ನೂರ ಎಂಬತ್ತು ರೂಪಾಯಿಗಳ ಖರ್ಚಿನಲ್ಲಿ ನಮ್ಮ ಅಮ್ಮನ ಉಪಾಯ “ಸಂಪೂರ್ಣ” ಫಲಿಸಿತ್ತು! ನಾವು ಯಾವ ಕಿತಾಪತಿಯನ್ನೂ ಮಾಡದೇ ರಜಾದಿನಗಳನ್ನು ಮನೆಯ ಕಾರ್ ಗರಾಜ್ ಒಳಗೇ ಕಳೆದಿದ್ದೆವು!
ನನ್ನ ಅಮ್ಮ “ಮುಂದಿನ ರಜೆಗೆ ಒಂದು ಗುಜರಿ ಕಾರನ್ನೇ ಕೊಂಡು ರಿಪೇರಿ ಮಾಡಿ! ನಿಮ್ಮಿಬ್ಬರ ಕೀಟಲೆ ಇಲ್ಲದೇ ಇದ್ದರೆ ಈ ಲೋಕದಲ್ಲಿ ಶಾಂತಿ ನೆಲಸುತ್ತೆ” ಅಂತ ಅಂದರು!