ಮೇ ೧೯, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಬೆನ್ನಿ ಬೆನ್ಯಾಮಿನ್ ‘ಆಡುಜೀವನ’ ಮಲಯಾಳಂ ಕಾದಂಬರಿಯ ಮೂವತ್ತೊಂಬತ್ತನೇ ಕಂತು, ಅನುವಾದ:ಅಶೋಕ್ ಕುಮಾರ್    
ಡಾ. ಅಶೋಕ್ ಕುಮಾರ್
ಗುರುವಾರ, 28 ಜೂನ್ 2012 (00:00 IST)
ಚಿತ್ರಗಳು: ವಿಷ್ಣು

ಮರುದಿನ ಇನ್ನೂ ಬೆಳಕು ಹರಿದಿರಲಿಲ್ಲ. ಅಪರಿಚಿತವಾದ ಒಂದು ಶಬ್ದವನ್ನು ಕೇಳಿಯೇ ನಾನು ನಿದ್ರೆಯಿಂದ ಬೆಚ್ಚಿ ಎಚ್ಚರಗೊಂಡೆ. ನಾನು ಕಿವಿಗೊಟ್ಟೆ. ಏನೂ ಇಲ್ಲ. ನನ್ನ ಭ್ರಮೆಯಿರ ಬಹುದು. ಮತ್ತೆ ಕಣ್ಮುಚ್ಚಿ ಮಲಗಿದೆ. ಆಗ ಪುನಃ ಆ ಸದ್ದು. ನಾನು ಮೇಲೆದ್ದೆ. ಮರುಭೂಮಿಯು ಅದರ ರೌದ್ರಭಾವ ಎಲ್ಲಾ ಕಳಚಿಟ್ಟು ಶಾಂತವಾಗಿ ನಿದ್ರಿಸುತ್ತಿದೆ. ಅತೀವ ದೂರದಿಂದ ಬರುವ ಸೂಕ್ಷ್ಮ ಸಪ್ಪಳವು ಕೂಡ ಯಾರಿಗೇ ಆದರೂ ಸ್ಪಷ್ಟವಾಗಿ ಕೇಳಿಸುವುದು. ಅಷ್ಟರ ಮಟ್ಟಿಗೆ ಪ್ರಶಾಂತವಾದ ಸ್ಥಿತಿ. ಆಗ ಅಗೋ ಮತ್ತೆ ಆ ಸದ್ದು. ನಾನು ನನ್ನ ಗಮನವನ್ನು ಪೂರ್ತಿಯಾಗಿ ಕೆತ್ತಿ ಚೂಪುಗೊಳಿಸಿ ಕಿವಿಗೊಟ್ಟೆ. ಭಾರವನ್ನು ಹೇರಲಾದ ಗಾಡಿಗಳು ನೀಳವಾದ ಹೆದ್ದಾರಿಯಲ್ಲಿ ಹಾದುಹೋಗುವಾಗ ಟಯರುಗಳಿಂದ ವಿಶಿಷ್ಟ ಶಬ್ದ ಹೊರಡುತ್ತದೆ. ರಾತ್ರಿಯ ನಿಶ್ಶಬ್ದ ಜಾವಗಳಲ್ಲಿ ನಾನು ಊರಲ್ಲಿದ್ದಾಗ ಅದನ್ನು ಎಷ್ಟೋ ಸಲ ಕೇಳಿದ್ದೇನೆ. ಇದೂ ಸಹ ದೂರ ಯಾವುದೋ ಹೈವೇಯಲ್ಲಿ ಸಾಗಿ ಹೋಗುತ್ತಿರುವ ಒಂದು ಗಾಡಿಯ ಶಬ್ದವೇ. ಖಂಡಿತ! ಅದು ಹೀಗೆ ಎಡೆಬಿಟ್ಟು, ಎಡೆಬಿಟ್ಟು ಕೇಳಿಬರುತ್ತಲಿದೆ.

ನನ್ನ ಎದುರಿನಲ್ಲಿ ಸಾಮಾನ್ಯ ದೊಡ್ದದಾದ ಒಂದು ಬೆಟ್ಟವಿದೆ. ನನ್ನ ಬೋಧೆ ನನ್ನನ್ನು ವಂಚಿಸುತ್ತಿಲ್ಲ ಎಂದಾದರೆ, ಈ ಶಬ್ದ ಆಯಾಸಗೊಂಡ ನನ್ನ ಮನಸ್ಸಿನ ಒಂದು ಮಾಯಾಸ್ವಪ್ನವಲ್ಲದಿದ್ದರೆ, ಖಂಡಿತವಾಗಿಯೂ ಈ ಬೆಟ್ಟದ ಆಚೆ ಬದಿಯಲ್ಲಿ ಒಂದು ಹೈವೇ ಹಾದುಹೋಗುತ್ತಿದೆ. ಆ ಹೈವೇಯ ಮೂಲಕ ಗಾಡಿಗಳು ಹಾದುಹೋಗುತ್ತಿವೆ. ನಾನು ಮಲಗಿದ್ದಲ್ಲಿಂದ ಧಡಕ್ಕನೆ ಮೇಲೆದ್ದೆ. ಇಬ್ರಾಹಿಂ. ನಾನು ಕಿರುಚಿ ಕೂಗಿದೆ. ಇದೋ ನಾವು ತಲುಪಿದೆವು. ನಾವು ತಲುಪಿಯಾಯಿತು....ಸಂತೋಷದಿಂದ ನನ್ನ ಗುಂಡಿಗೆ ಮಿಡುಕಾಡುತ್ತಿತ್ತು. ನಾನು ಇಬ್ರಾಹಿಂ ಮಲಗಿರುವಲ್ಲಿಗೆ ಓಡಿಹೋದೆ. ಆದರೆ ಅವನು ಅಲ್ಲಿ ಇರಲಿಲ್ಲ. ನಾನು ಸುತ್ತಲೂ ನೋಡಿದೆ. ಎಲ್ಲಿಯೂ ಇಲ್ಲ.

ಇಬ್ರಾಹಿಂ....ಇಬ್ರಾಹಿಂ.... ನಾನು ಸುತ್ತಲೂ ನಡೆದು ಕೂಗಿದೆ. ಎಲ್ಲಿಂದಲೂ ಯಾವುದೇ ಉತ್ತರವಿಲ್ಲ. ಇವನು ಎಲ್ಲಿ ಹೋಗಿ ಸತ್ತಿದ್ದಾನೋ. ಅಷ್ಟು ಆಳವಾಗಿ ನಿದ್ದೆಹೋಗಿದ್ದಾನೋ....? ಇಬ್ರಾಹಿಂ....ಇಬ್ರಾಹಿಂ....ನಾನು ಮತ್ತೆಯೂ ಅಲ್ಲೆಲ್ಲಾ ಸುತ್ತಾಡಿ ತಿರುಗಾಡಿ ನಡೆದು ಕರೆದೆ. ಆದರೆ ಆ ಕರೆಗಳೆಲ್ಲ ಮಾರುತ್ತರ ಇಲ್ಲದೆ ಮರುಭೂಮಿಯ ಅನಂತತೆಯಲ್ಲಿ ಹೋಗಿ ವಿಲೀನವಾದವು.

ಮರುಭೂಮಿಯ ಮೂಡಣ ಮೂಲೆಯಲ್ಲಿ ಮೊದಲ ಬೆಳಕು ಮೂಡಿತು. ನನ್ನ ಮುಂದಿನಿಂದ ಕತ್ತಲ ಪೊರೆ ಸರಿದು ಹೋಯಿತು. ಮಣ್ಣೂ ಬೆಟ್ಟವೂ ನನ್ನೆದುರಿಗೆ ಪ್ರತ್ಯಕ್ಷವಾದವು. ಬೆಳಕಿನ ಸಹಾಯದಿಂದ ನಾನು ಅಲ್ಲೆಲ್ಲಾ ತುಂಬಾ ಹೊತ್ತು ನಡೆದಾಡಿ ನೋಡಿದೆ. ಎಲ್ಲಿಯೂ ಇಬ್ರಾಹಿಂ ಖಾದರಿ ಇಲ್ಲ. ಮಣ್ಣಿನ ದಿಬ್ಬದ ಮೇಲಕ್ಕೆ ಏರಿ ನಾನು ಸುತ್ತಲಾದ ಸುತ್ತಲೆಲ್ಲ ನೋಡಿದೆ. ಎಲ್ಲಿಯೂ ಅವನ ಯಾವುದೇ ಕುರುಹೂ ಸಹ ಇಲ್ಲ. ಆಮೇಲೂ ಬಹಳ ಹೊತ್ತಿನ ಹುಡುಕಾಟದ ಬಳಿಕವೇ ನಾನು ಆ ವಾಸ್ತವಿಕತೆಯೊಂದಿಗೆ ಹೊಂದಿಕೊಂಡದ್ದು. ಇಬ್ರಾಹಿಂ ಖಾದರಿ ಎಂಬ ನನ್ನ ಮಾರ್ಗದರ್ಶಿ, ನನ್ನ ರಕ್ಷಕನು ನನ್ನ ಜೀವನದಿಂದ ಎಂದೆಂದಿಗೂ ಅಪ್ರತ್ಯಕ್ಷವಾಗಿಬಿಟ್ಟಿದ್ದಾನೆ. ಎಲ್ಲಿಗೆ ಹೋಗಿ ಮರೆಯಾದ ಎಂಬುದಕ್ಕೆ ಯಾವೊಂದು ಸುಳಿವೂ ಇಲ್ಲದಂತೆ. ಭೂಮಿಯಲ್ಲಿ ಉಳಿದು ಬಿಟ್ಟಿರುವ ಕಟ್ಟಕಡೆಯ ಮನುಷ್ಯ ನಾನೊಬ್ಬನೇ ಎಂಬ ತರಹದ ಏಕಾಂತತೆಯೂ ದುಃಖವೂ ನನಗುಂಟಾಯಿತು. ನಾನು ಮರಳಿನಲ್ಲಿ ಕುಕ್ಕರುಬಡಿದು ಕುಳಿತು ಭೋರೆಂದು ಅತ್ತೆ. ಇಬ್ರಾಹಿಂ, ನೀನು ಹೀಗೆ ಮಾಡಬಹುದಾ, ನನ್ನನ್ನು ಈ ಹಾದಿಯಲ್ಲಿ ಹೀಗೆ ಒಬ್ಬಂಟಿಯಾಗಿಸಿಬಿಟ್ಟು ....ಎಲ್ಲಿಗೆ....? ಇಷ್ಟು ದಿವಸಗಳೂ ನಾವು ಒಟ್ಟಿಗೆ ಇರಲಿಲ್ಲವೇ....? ಈ ವೇದನೆಯಲ್ಲೂ ಈ ಸಂಕಟದಲ್ಲೂ ಎಲ್ಲಾ.... ಇದೋ ನಮಗೆ ಪಾರಾಗುವುದಕ್ಕೆ ಸಿಕ್ಕಿರುವ ಹಾದಿಗೆ ನಾವು ಹೋಗಿ ತಲುಪಲಿದ್ದೇವೆ. ಹೆಚ್ಚೆಂದರೆ ಒಂದು ಗಂಟೆ ಕಾಲದ ನಡಿಗೆ. ಅಷ್ಟರೊಳಗೆ ನಾವು ಆ ಹೈವೇಗೆ ತಲುಪುತ್ತೇವೆ. ಆದರೆ ನೀನು ಎಲ್ಲಿ....? ಕಳೆದ ರಾತ್ರಿ ನೀನು ಎಲ್ಲಿಗೆ ಹೋಗಿ ಮರೆಯಾದೆ....? ನನ್ನೊಡನೆ ನೀನು ಒಂದು ಮಾತು ಹೇಳಬಹುದಿತ್ತು. ಒಂದು ವಿದಾಯದ ನುಡಿಯನ್ನಾದರೂ ನನ್ನಿಂದ ನೀನು ಕೇಳಬಹುದಿತ್ತು....

ಬಿಸಿಲು ಸಾಂದ್ರವಾದ ಮೇಲೆಯೇ ಆಮೇಲೆ ನಾನು ಅಲ್ಲಿಂದ ಮೇಲೆದ್ದು ನಡೆಯಲಾರಂಭಿಸಿದ್ದು. ಅಷ್ಟು ದಿನಗಳವರೆಗೆ ನಡೆದದ್ದಕ್ಕಿಂತಲೂ ನೂರು ಪಟ್ಟು ಕಠಿನವಾದ ನಡಿಗೆ ಅದು ಎಂದೇ ನನಗನ್ನಿಸಿತು. ಎಷ್ಟೇ ನಡೆದರೂ ಎಲ್ಲೂ ತಲುಪುತ್ತಿಲ್ಲ ಎಂಬಂತೆನಿಸಿತು. ನಡೆದಷ್ಟೂ ಹಿಂದಕ್ಕೇ ಸರಿಯುತ್ತಿರುವಂತೆ ಭಾಸವಾಗುತ್ತಿತ್ತು. ಆ ಏಕಾಂತತೆ ನನ್ನನ್ನು ಅದೆಷ್ಟು ಘಾಸಿಗೊಳಿಸಿತು ಎಂಬುದನ್ನು ನನ್ನಿಂದ ಯೋಚಿಸಲೂ ಸಹ ಸಾಧ್ಯವಿಲ್ಲ. ಸರಿಸುಮಾರು ಸಾಯಂಕಾಲದ ಕೊನೆಗೆ ನಾನು ಆ ಹೈವೇಗೆ ತಲುಪಿದೆ. ಅಷ್ಟೇನೂ ಧಾರಾಳವಾಗಿ ಗಾಡಿಗಳು ಹೋಗುವಂತಹ ಒಂದು ಹೈವೇ ಆಗಿರಲಿಲ್ಲ ಅದು. ಯಾವಾಗಾದರೊಮ್ಮೊಮ್ಮೆ ಆ ಹಾದಿಯಾಗಿ ಒಂದು ಗಾಡಿ ಬರುತ್ತಿತ್ತು. ಹೆಚ್ಚಿನವು ಭಾರದ ಸಾಮಗ್ರಿ ಹೇರಿಕೊಂಡು ಹೋಗುವ ಟ್ರೈಲರ್‌ಗಳು. ಮತ್ತೆ ಅಪರೂಪವಾಗಿ ಕಾರುಗಳು ಆ ಮಾರ್ಗವಾಗಿ ಭರ್ರನೆ ಹಾದುಹೋದವು. ವಿವಶನಾಗಿ ನಾನು ರಸ್ತೆಬದಿಯಲ್ಲಿ ನಿಂತು ಬರುತ್ತಿರುವ ಪ್ರತಿಯೊಂದು ಗಾಡಿಗೂ ಕೈ ಅಡ್ಡ ತೋರುತ್ತಲೇ ಇದ್ದೆ. ಆದರೆ, ನನ್ನ ಆಶಾನಿರೀಕ್ಷೆಗಳಲ್ಲಿ ನಿರಾಶೆಯನ್ನು ಹರಡುತ್ತಾ ಎಲ್ಲಾ ಗಾಡಿಗಳೂ ನನ್ನನ್ನು ಅಲಕ್ಷಿಸಿ ಅವುಗಳ ಲಕ್ಷ್ಯಗಳ ಕಡೆಗೆ ದೂರವಾಗಿ ಹೋದವು. ಒಂದೊಂದು ಗಾಡಿ ಹೋಗಿಬಿಟ್ಟಾಗಲೂ ಮುಂದಿನದು ಖಂಡಿತವಾಗಿ ನನ್ನ ಬಳಿ ನಿಲ್ಲಿಸುವುದೆಂದೂ ನಾನು ಆಶಿಸುತ್ತಲೇ ಇದ್ದೆ. ಆದರೆ ಆಗಲೂ ಅದೃಷ್ಟವು ನನ್ನ ಜೊತೆಗಿರಲಿಲ್ಲ. ಯಾವ ಗಾಡಿಯವನೂ ನನಗೆ ಕರುಣೆ ತೋರಲಿಲ್ಲ. ಅದಲ್ಲದಿದ್ದರೆ ಯಾವೊಬ್ಬ ಗಾಡಿಯವನ ಮನಸ್ಸಿನಲ್ಲೂ ಅಲ್ಲಾಹು ಹಾಗೊಂದು ಸೂಚನೆ ಕೊಡಲಿಲ್ಲ. ಆ ವಿಧವಾಗಿ ನಾನು ಅನಾಥವಾಗಿ ತೊರೆಯಲ್ಪಟ್ಟ ಇನ್ನೊಂದು ರಾತ್ರಿ ಸಹ ಬಂದು ಸೇರಿತು.

ನಲವತ್ತು

ಹೊತ್ತು ಬೆಳಗಾಯಿತು. ರಾತ್ರಿಯ ಅಂತ್ಯದೊಂದಿಗೆ ಹೆಚ್ಚುಕಡಿಮೆ ಸ್ತಬ್ಧವಾಗಿದ್ದ ಗಾಡಿಗಳ ಪ್ರವಾಹ ಮತ್ತೆ ಶುರುವಾಯಿತು. ಬಹುತೇಕ ಗಾಡಿಗಳು ಸರಕು ಹೊತ್ತು ಸಾಗುವಂತಹವು. ನಾನು ರೋಡಿನ ಮಧ್ಯಭಾಗದ ವರೆಗೂ ಹೋಗಿ ಪ್ರತಿಯೊಂದು ಗಾಡಿಗೂ ಕೈ ಅಡ್ಡ ತೋರಿಸುತ್ತಿದ್ದೆ. ಆದರೆ ಹಿಂದಿನ ದಿನದ ಹಾಗೆಯೇ ಆ ದಿನವೂ ಎಲ್ಲಾ ವಾಹನಗಳೂ ನನ್ನನ್ನು ಅವಗಣಿಸಿ ಹಾದು ಹೋದವು. ನನಗೆ ಅದರಲ್ಲಿ ಸೋಜಿಗವೇನೂ ಅನಿಸಲಿಲ್ಲ. ಯಾರಿಗೇ ಆದರೂ ಜೊತೆಗೆ ಕರೆದೊಯ್ಯಬೇಕೆಂದು ತೋಚುವಂತಹ ಒಂದು ಅವಸ್ಥೆಯಾಗಿರಲಿಲ್ಲ ಆಗ ನನ್ನದು. ಮೂರು ವರ್ಷದ ’ಮಸರ’ದ ಜೀವನ. ತದನಂತರ ಎಷ್ಟೋ ದಿನಗಳ ಕಾಲ ಮರುಭೂಮಿಯ ಮೂಲಕ ಸಾಗಿದ ಅಲೆದಾಟ. ನಾನು ಖಂಡಿತವಾಗಿಯೂ ಮಾನವರೂಪವೇ ಅಲ್ಲವಾಗಿಬಿಟ್ಟಿದ್ದೆ. ನನಗಾದರೋ ನೀರಡಿಕೆಯೂ ಹಸಿವೆಯೂ ಬಹಳಷ್ಟು ಹೆಚ್ಚಾಗುತ್ತಲಿತ್ತು. ಮರುಹಸಿರಿನ ನೆಳಲಿನಿಂದ ನಾನು ಹೊರಟು ಅಂದಿಗೆ ಮೂರು ದಿನಗಳು ಕಳೆದಿದ್ದವು. ಜೀವನಕ್ಕೆ ಇಷ್ಟೆಲ್ಲ ಸಮೀಪದಲ್ಲಿ ಬಂದು ತಲುಪಿಯೂ ಅದು ಕೈಜಾರಿ ಹೋಗುವುದೆಂದರೆ ಅದನ್ನು ಕಲ್ಪಿಸಿಕೊಳ್ಳುವುದು ಕೂಡ ನನ್ನಿಂದಾಗುತ್ತಿರಲಿಲ್ಲ. ಇಷ್ಟೆಲ್ಲಾ ಆದಮೇಲೂ ಅಲ್ಲಾಹುವಿನ ಕಟಾಕ್ಷ ನನ್ನ ಕಡೆಗೆ ಬೀಳದಿರುವ ಬಗ್ಗೆ ನನಗೆ ಆ ಹೊತ್ತು ನನ್ನ ಮೇಲೆಯೇ ವಿದ್ವೇಷ ಮೂಡಿತು. ನಾನು ಇಷ್ಟರ ಮಟ್ಟಿಗಿನ ಪಾಪವನ್ನು ಅದೇನು ತಾನೆ ಮಾಡಿದ್ದೇನೆ? ಎದೆಬಡಿದುಕೊಂಡು ಕಣ್ಣೀರಿನಿಂದಿಗೆ ನಾನು ಕೇಳಿದೆ. ಅಲ್ಲಾಹ್ ನೀನು ನನ್ನ ಇಬ್ಬರು ಜೊತೆಗಾರರನ್ನು ಮರುಭೂಮಿಯಲ್ಲಿ ನಷ್ಟಗೊಳಿಸಿದೆ. ಹಕೀಮನ್ನು ಮರಳುಗಾಡು ಬತ್ತಿಸಿ ಕೊಂದಿತು. ಇಬ್ರಾಹಿಮನ್ನು ಅದು ಅಪ್ರತ್ಯಕ್ಷಗೊಳಿಸಿತು. ನನ್ನನ್ನು ನೀನು ಇಲ್ಲಿಯ ವರೆಗೆ ಕರೆತಂದು ಬಿಟ್ಟಿರುವೆ. ಇನ್ನೂ ಏತಕ್ಕೆ....? ಏತಕ್ಕೆ....? ಉತ್ತರ ಸಿಗದಂತಹ ಒಂದು ಪ್ರಶ್ನೆಯಾಗಿ ಅದು ಇನ್ನೂ ನನ್ನ ಮನಸ್ಸಿನಲ್ಲಿ ಮಡುಗಟ್ಟಿ ನಿಂತಿದೆ. ನಿಮಿಷಗಳು ಮಧ್ಯಾಹ್ನದ ಬಿಸಿಲಿಗೆ ಕಾಲಿಡುತ್ತಿದ್ದವು. ಎಡೆಬಿಟ್ಟು ಎಡೆಬಿಟ್ಟು ಗಾಡಿಗಳು ನನ್ನನ್ನು ದಾಟಿಹೋಗುತ್ತಿದ್ದವು.

ದೂರದಿಂದಲೆ, ಉತ್ತಮ ಬೆಲೆಬಾಳುವ ಒಂದು ಕಾರು ರೊಯ್ಯನೆ ಧಾವಿಸಿ ಬರುವುದನ್ನು ನಾನು ಕಂಡೆ. ಅದಕ್ಕೆ ಕೈಚಾಚಿದರೆ ಏನೂ ಫಲವಿಲ್ಲವೆಂದು ನನಗೆ ಗೊತ್ತಿತ್ತು. ಟ್ರೈಲರ್ ಗಾಡಿ ಮಂದಿ ಕೂಡ ತಲೆ ಹೊರಹಾಕಿ ತುಚ್ಛವಾಗಿ ನೋಡುತ್ತ ಹೋಗಿಬಿಡುವಂತಿರುವ ಈ ನನ್ನನ್ನು ಇಂತಹ ಒಂದು ಕಾರಿನಲ್ಲಿ ಹತ್ತಿಸುವರೇ! ಹಾಗಿದ್ದೂ ಯಾವುದೋ ಒಂದು ಆಂತರಿಕ ಪ್ರಚೋದನೆಯ ಮೂಲಕ, ಅದು ಹತ್ತಿರ ಬಂದಾಗ ನಾನು ಆ ಗಾಡಿಗೂ ಕೈ ಅಡ್ಡ ಹಾಕಿದೆ. ಸ್ವಾಭಾವಿಕವಾಗಿಯೇ ಅದುವೂ ನನ್ನನ್ನು ದಾಟಿ ಮುಂದೆ ಹೋಯಿತು. ಆದರೆ ಸ್ವಲ್ಪ ದೂರ ಹೋಗಿ ಅದು ಬ್ರೇಕ್‌ನ ಸದ್ದು ಮೊಳಗಿಸುತ್ತ ನಿಂತಿತು. ನನಗೆ ಅದ್ಭುತವೆನಿಸಿತು. ನಾನು ಕೈತೋರಿಸಿದ್ದಕ್ಕೆ ಅದು ನಿಂತಿತೇನು....? ಒಂದು ನಿಮಿಷ ಶಂಕಿಸಿ ನಿಂತ ಮೇಲೆ ನಾನು ಅದರ ಬಳಿಗೆ ಓಡಿಹೋದೆ. ಅದರೊಳಗೆ ಕುಲೀನ ವಸ್ತ್ರಧಾರಿಯಾದ ಓರ್ವ ಸುಂದರ ಅರಬ್ಬಿ. ಗ್ಲಾಸ್ ಕೆಳಗಿಳಿಸಿ ಆತ ನನ್ನೊಡನೆ ಏನನ್ನೋ ಕೇಳಿದ. ಏನು ಹೇಳಬೇಕೆಂದು ನನಗೆ ತಿಳಿದಿರಲಿಲ್ಲ. ಅಲ್ಲ, ನನಗೆ ಹೇಳಲು ಏನೂ ಇರಲಿಲ್ಲ. ಪ್ರೀತಿವಂತನಾದ ಅರಬ್ಬಿಯೇ, ನಿನ್ನೆಯಿಂದ ಅವೆಷ್ಟು ಗಾಡಿಗಳು ನನ್ನನ್ನು ದಾಟಿ ಹೋಗಿವೆ. ಯಾರೊಬ್ಬರು ಕೂಡ ನನಗೋಸ್ಕರ ಅವರ ಗಾಡಿಯ ಬ್ರೇಕನ್ನೊಮ್ಮೆ ತುಳಿಯಲಿಲ್ಲ. ನನ್ನ ಹತ್ತಿರ ನಿಲ್ಲಿಸಿ ನಿನಗೇನು ಬೇಕು, ನೀನೇಕೆ ಇಲ್ಲಿ ನಿಂತಿರುವೆ ಎಂದು ಮುಂತಾಗಿ ಕೇಳಲಿಲ್ಲ. ನನ್ನ ಸಲುವಾಗಿ ಬ್ರೇಕ್‌ನಲ್ಲಿ ಒಮ್ಮೆ ಕಾಲನ್ನು ಅದುಮಲು ನಿಮಗೆ ತೋಚಿತಲ್ಲ, ಸಾಕು ನನಗೆ ಅದುವೇ ಸಾಕು. ನಾನು ಅಲ್ಲಿ ನಿಂತು ಅಯಾಚಿತವಾಗಿ ರೋದಿಸಿಬಿಟ್ಟೆ. ಆತ ಬಳಿಕ ನನ್ನೊಡನೆ ಏನನ್ನೂ ಕೇಳಲಿಲ್ಲ. ನನಗಾಗಿ ಗಾಡಿಯ ಬಾಗಿಲನ್ನು ತೆರೆದುಕೊಟ್ಟು ನನ್ನನ್ನು ಒತ್ತಾಯಪೂರ್ವಕ ಗಾಡಿಯ ಹಿಂಭಾಗದಲ್ಲಿ ಕೂರಿಸಿದ.

ಅನಂತರ ಗಾಡಿ ಓಡಿಸಿಕೊಂಡು ಹೋದ.

ಆ ಶ್ರೇಷ್ಠ ಗಾಡಿಯ ಹೊಳೆಹೊಳೆವ ಸೀಟಿನಲ್ಲಿ ನನ್ನ ಸ್ವಚ್ಛಗೇಡಿನೊಂದಿಗೆ ದೇಹವೂರಿ ಕುಳಿತುಕೊಳ್ಳಲು ನನಗೆ ಮುಜುಗರವೆನಿಸಿತು. ಆದರೂ ನಾನು ಕುಳಿತೆ. ನಾನು ಏರಿಕೊಂಡು ತುಸು ಹೊತ್ತು ಕಳೆದಾಗ ಆತ ಗಾಡಿಯೊಳಗಿನ ಏ. ಸಿ. ಆಫ್ ಮಾಡಿದ. ಗ್ಲಾಸ್ ಕೆಳಗಿಳಿಸಿಬಿಟ್ಟ. ಮೂಗನ್ನು ಮುಚ್ಚಿ ಹಿಡಿದುಕೊಂಡ. ಅದು ನನ್ನ ಕೊಳಕು ವಾಸನೆಯ ಕಾರಣದಿಂದ ಎಂದು ನನಗೆ ಗೊತ್ತಿತ್ತು. ಬೇಕಿದ್ದರೆ ಆಗಲೇ ಆತ ನನ್ನನ್ನು ಗಾಡಿಯಿಂದ ಇಳಿಸಿಬಿಡಬಹುದಾಗಿತ್ತು. ಆದರೆ ಆತ ಯಾವುದೇ ಅಸಹ್ಯ ಭಾವವನ್ನೂ ನನ್ನೊಡನೆ ತೋರಲಿಲ್ಲ. ನಾನು ಆ ಮಹಾನ್ ಆದ ಮನುಷ್ಯನೊಡನೆ ಸ್ವಲ್ಪ ನೀರು ಕೇಳಿದೆ. ಆತ ನನಗೆ ಒಂದು ಶೀಷೆ ನೀರು ತೆಗೆದುಕೊಟ್ಟ. ನಾನು ಅದನ್ನು ಒಂದೇ ಉಸಿರಿಗೆ ಹೀರಿ ಕುಡಿದೆ. ಇನ್ನೂ ಬೇಕೇ ಎಂದು ಆತ ಮತ್ತೆ ಕೇಳಿದ. ನಾನು ತಲೆಯಾಡಿಸಿದೆ. ಇನ್ನೂ ಒಂದು ಬಾಟಲಿ ನೀರನ್ನೂ ಕೊಟ್ಟ. ನಾನು ಅದನ್ನೂ ಕುಡಿದು ಬತ್ತಿಸಿದೆ. ಅಷ್ಟಾದರೂ ನನ್ನ ದಾಹ ತಣಿದಿರಲಿಲ್ಲ. ಆದರೆ, ಇನ್ನೂ ಒಂದು ಸಲ ಕೇಳಲು ನನ್ನ ಮನಸ್ಸು ಸಮ್ಮತಿಸಲಿಲ್ಲ. ನಾನು ನಿಧಾನವಾಗಿ ಆ ಸೀಟಿಗೆ ಒರಗಿ ಕುಳಿತುಕೊಂಡೆ. ಆಯಾಸದಿಂದಾಗಿ ನಾನು ಹಾಗೆಯೇ ನಿದ್ದೆಹೋದೆ. ಆದುದರಿಂದಲೆ ಎಷ್ಟು ಹೊತ್ತು ಆ ಪ್ರಯಾಣ ಮುಂದುವರಿಯಿತು ಎಂದು ನನಗೆ ಅಂದಾಜು ಕಲ್ಪನೆಯೂ ಇಲ್ಲ. ಸುಮಾರು ಒಂದು ಸಾಯಂಕಾಲದ ವೇಳೆಗೆ ಗಾಡಿಯು ಒಂದು ನಗರ ಪ್ರದೇಶಕ್ಕೆ ತಲುಪಿ ಬ್ರೇಕ್ ಹಾಕಿದಾಗಲೇ ಮತ್ತೆ ನಾನು ಎಚ್ಚರಗೊಂಡದ್ದು. ನಾನು ಗಾಬರಿಯಾಗಿ ಸುತ್ತಲೂ ನೋಡಿದೆ. ದೊಡ್ಡ ದೊಡ್ಡ ಕಟ್ಟಡಗಳು. ಭಾರೀ ಜನಸಂದಣಿ, ಗದ್ದಲಗಳು. ಭಾರೀ ವಾಹನ ದಟ್ಟಣೆ. ಇನ್ನೂ ಸ್ವಲ್ಪ ಹೊತ್ತು ಸಂಚರಿಸಿ ಆತ ಗಾಡಿಯನ್ನು ಒಂದು ಬದಿಗೆ ಸೇರಿಸಿ ನಿಲ್ಲಿಸಿ ನನ್ನತ್ತ ತಿರುಗಿ ನೋಡಿದ. ನನಗೆ ಇಳಿಯಲು ನೀಡಿದ ಸೂಚನೆ ಅದೆಂದು ನನಗೆ ಅರ್ಥವಾಯಿತು. ಅಷ್ಟು ಹೊತ್ತೂ ನನ್ನನ್ನು ಸಹಿಸಿದ ಆ ಮನುಷ್ಯನೊಡನೆ ನನಗಿರುವ ಕೃತಜ್ಞತೆಯನ್ನು ಹೇಗೆ ತಾನೆ ನಾನು ತಿಳಿಸುವುದು. ಆ ಮಹಾ ಸನ್ಮನಸ್ಕತೆಗೆ ಬದಲಾಗಿ ಒಂದು ಹನಿ ಅಳುವನ್ನಷ್ಟೇ ನಾನು ಮರಳಿ ಕೊಟ್ಟೆ. ಒಂದು ವಾಕ್ಕನ್ನೂ ಕೇಳಲಿಲ್ಲ. ಹೇಳಲಿಲ್ಲ.

ನಾನು ಗಾಡಿಯಿಂದಿಳಿದೆ. ಅದರ ಬಾಗಿಲು ಮುಚ್ಚಿದೆ. ನನ್ನನ್ನು ಆ ನಗರದ ಮಧ್ಯದಲ್ಲಿ ಒಂಟಿಯಾಗಿಸಿ ಅದು ದೂರಕ್ಕೆ ಓಡಿ ಮರೆಯಾಯಿತು. ನಾನು ಕಂಬನಿಗರೆದೆ. ಸಿರಿವಂತನ ಗಾಡಿಯಲ್ಲೂ ಅಪರೂಪಕ್ಕೊಮ್ಮೆ ಅಲ್ಲಾಹು ಸಂಚರಿಸುತ್ತಾನೆಂದು ನನಗೆ ಆ ಗಳಿಗೆಯಲ್ಲಿ ಮನವರಿಕೆಯಾಯಿತು.

ನಲವತ್ತೊಂದು

ಸ್ವಲ್ಪ ಹೊತ್ತು ನಾನು ಆ ನಗರ ಪ್ರದೇಶದಲ್ಲಿ ಕಣ್ಪಿಳುಕಿಸುತ್ತ ನಿಂತೆ. ಹಾದುಹೋಗುವವರು ನನ್ನನ್ನು ಒಂದು ವಿಚಿತ್ರ ಜೀವಿಯನ್ನು ಎಂಬಂತೆ ಕಣ್ಬಿಟ್ಟು ನೋಡುವುದನ್ನು ನಾನು ಕಂಡೆ. ನಾನು ಮೆಲ್ಲಗೆ ಹಾದಿಯ ಒತ್ತಿನಗುಂಟ ನಡೆದೆ. ಅದೊಂದು ಮಾರ್ಕೆಟ್ ಆಗಿತ್ತು. ಉದ್ದಕ್ಕೂ ಹರಡಿ ಹಬ್ಬಿರುವ ಒಂದು ಸಂತೆ ಬೀದಿ. ಸುತ್ತಲೂ ತರಕಾರಿಗಳ ಮತ್ತು ಹಣ್ಣು ಹಂಪಲುಗಳ ರಾಶಿ. ಅದರ ತೇವ ವಾಸನೆ ಎಲ್ಲೆಲ್ಲೂ ತುಂಬಿ ನಿಂತಿದೆ. ಹೊಳೆಯಂತೆ ಇಡಿಕಿರಿದು ತೇಲಿ ಸಾಗುತ್ತಿರುವ ಅರಬ್ಬಿಗಳು. ಅವರುಗಳ ನಡುವೆ ಕರಿಯ ಉಡುಪಿನಲ್ಲಿ ಕಣ್ಣುಗಳು ಮಾತ್ರ ಹೊರತೋರುವ ಸ್ತ್ರೀಯರು. ಮಾರಾಟಗಾರರ ರೂಪದಲ್ಲಿ ಇಂಡಿಯನ್‌ರು. ವ್ಯಾಪಾರದ ಕೋಲಾಹಲಗಳು. ಎಲ್ಲರ ನಡುವಿನಲ್ಲಿ ತೀರಾ ಪ್ರಾಕೃತ ವೇಷದಲ್ಲಿ ನಾನು. ಎಲ್ಲರೂ ನನ್ನನ್ನು ಪಿಳಿ ಪಿಳಿ ನೋಡುತ್ತಲೂ ನನ್ನನ್ನು ಸ್ಪರ್ಶಿಸದಿರಲು ದೂರ ಹೋಗುತ್ತಲೂ ಇದ್ದರು. ಅದರಿಂದ ನನಗೆ ಸ್ವಲ್ಪವೂ ದುಃಖವೆನಿಸಲಿಲ್ಲ. ನಿಜವಾಗಿಯೂ ನನಗೇನೆ ನನ್ನ ದುರ್ವಾಸನೆ ಬಡಿಯುತ್ತಿತ್ತು.

ನನಗೆ ತುಂಬಾ ಹಸಿವಾಗಿತ್ತು. ಆದರೆ ಆಹಾರ ಸೇವಿಸಲು ನನ್ನ ಕೈಯಲ್ಲಿ ಕವಡೆ ಕಾಸೂ ಇರಲಿಲ್ಲ. ಅಷ್ಟೆಲ್ಲಾ ಕಾಲದ ಜೀವನದಲ್ಲಿ ಹಣವು ಒಂದು ಅಗತ್ಯ ಎಂಬುದರ ಅನುಭವವಾದಂತಹ ಏಕೈಕ ಸಂದರ್ಭವಾಗಿತ್ತು ಅದು. ’ಮಸರ’ದಲ್ಲಾಗಿದ್ದರೆ ಅರ್‌ಬಾಬ್‌ನ ಖುಬೂಸ್ ಆದರೂ ತಿನ್ನಬಹುದಿತ್ತು. ಅದಕ್ಕೆ ಹಣವೇನೂ ಕೊಡಬೇಕಾಗಿರಲಿಲ್ಲ. ಯಾರಿಗೂ ಕಾಣದ ಹಾಗೆ ಆಡುಗಳ ತಿನಿಸನ್ನೂ ಕದ್ದು ತಿನ್ನ ಬಹುದಿತ್ತು. ಅದಕ್ಕೂ ಹಣ ಬೇಕಿಲ್ಲ. ಆದರೆ ಈ ನಗರಗಳಲ್ಲಿ ನನಗೇನಾದರೂ ತಿನ್ನಲು ಬೇಕಿದ್ದರೆ ಹಣ ಕೊಟ್ಟೇ ಆಗಬೇಕು. ಅಲ್ಲದೆ ಇಲ್ಲಿ ನನಗಾರು ಆಹಾರ ಕೊಡುವರು....? ಒಂದೆರಡು ಅಂಗಡಿಗಳಿಗೆ ಪ್ರವೇಶಿಸಲು ನಾನೊಂದು ಪ್ರಯತ್ನ ನಡೆಸಿದೆ. ಏನಾದರೂ ಭಿಕ್ಷೆ ಬೇಡಿ ತಿನ್ನಲಾದರೂ. ಆದರೆ ಅವುಗಳ ಮಾಲಿಕರು ಇಳಿದು ಬಂದು ಒಂದು ನಿಕೃಷ್ಟವಾದ ಕಂತ್ರಿ ನಾಯಿಯನ್ನೋ ಎಂಬ ಹಾಗೆ ನನ್ನನ್ನು ಓಡಿಸಿ ಬಿಟ್ಟರು.

ಯಾವುದೋ ಪ್ರತೀಕ್ಷೆಯಲ್ಲಿ ಉಬ್ಬುತ್ತ ಮತ್ತೆ ನಾನು ಆ ಸಂತೆಯ ಮೂಲಕ ನಡೆದೆ. ಬಹಳ ನಡೆದಾಗ ತಲೆ ಸುತ್ತುತ್ತಿರುವ ಹಾಗನಿಸಿತು. ನಾನು ಇನ್ನೂ ಸ್ವಲ್ಪ ಮುಂದೆ ಹೋಗಿರಬಹುದು. ಅಲ್ಲಿ ಒಂದು ಅಂಗಡಿಯ ಮುಂದೆಯೇ ಒಂದು ಬೋರ್ಡ್ ಕಂಡಿತು. ’ಮಲಬಾರ್ ರೆಸ್ಟೋರೆಂಟ್’. ಅದೂ ಮಲಯಾಳಭಾಷೆಯಲ್ಲಿ. ನನಗೆ ನೆಮ್ಮದಿಯಾಯಿತು. ನನ್ನ ಭಾಷೆಯನ್ನು ಬಲ್ಲಂತಹ, ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳಬಲ್ಲಂತಹ ಒಬ್ಬರು ಅಲ್ಲಿರುತ್ತಾರೆಂಬುದು ಖಂಡಿತ. ಏನಾದರಾಗಲಿ ಎಂದುಕೊಂಡು ನಾನು ಅಲ್ಲಿಗೆ ನಡೆದೆ. ಅದರ ಮೆಟ್ಟಿಲನ್ನು ತಲುಪಿದ್ದಷ್ಟೇ ನನಗೆ ನೆನಪಿರುವುದು. ನಾನು ಪ್ರಜ್ಞೆ ತಪ್ಪಿ ಅದರ ಮುಂದಕ್ಕೆ ಕುಸಿದು ಬಿದ್ದೆ.

(ಮುಂದುವರೆಯುವುದು)

ಪುಟದ ಮೊದಲಿಗೆ
 
Votes:  6     Rating: 4.83    
 
 
ಸಂಬಂಧಿಸಿದ ಲೇಖನಗಳು
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’
  ನಕ್ಷತ್ರ ಬರೆದ ಕರುಳ ಸಂಕಟದ ಕವಿತೆ