ಮುಳುಗಡೆ ಅನ್ನುವ ಶಬ್ದ ನನ್ನನ್ನ ಕಾಡತೊಡಗಿದ್ದು, ೧೯೫೯ರಲ್ಲಿ, ನನಗೆ ಒಂದು ಸರಕಾರಿ ಕೆಲಸ ದೊರೆತು ನಾನು ಶರಾವತಿ ಯೋಜನೆಯನ್ನ ಪ್ರವೇಶ ಮಾಡಿದ ನಂತರ. ‘ಶರಾವತಿ ಮೈಸೂರಿನ ಹೆಮ್ಮೆ, ಭಾರತದ ಬೆಳಕು’ ಅನ್ನುವ ಘೋಷಣೆಯನ್ನ ಮುಂದೆ ಮಾಡಿಕೊಂಡು ಕಾರ್ಯಗತವಾದ ಈ ಯೋಜನೆ ನಮ್ಮಲ್ಲಿ ಒಂದು ಬಹು ದೊಡ್ಡ ನಿರೀಕ್ಷೆಯನ್ನ ಉಂಟು ಮಾಡಿತ್ತು ಅನ್ನುವುದರಲ್ಲಿ ಸಂದೇಹವಿಲ್ಲ. ಅದೇ ಸಮಯದಲ್ಲಿ ಉತ್ತರ ಭಾರತದಲ್ಲಿ ಹೀರಾಕುಡ್ ಹಾಗು ಭಕ್ರಾ ನಂಗಲ್ ಅಣೆಕಟ್ಟುಗಳು ಎದ್ದು ನಿಂತು, ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಇವುಗಳನ್ನ ‘ಆಧುನಿಕ ಭಾರತದ ದೇವಾಲಯಗಳು’ ಎಂದು ಕರೆದದ್ದು ನಮಗೆ ಸ್ಫೂರ್ತಿಯನ್ನ ನೀಡಿತು.
೧೯೫೯ರಲ್ಲಿ ಲಿಂಗನಮಕ್ಕಿ ಎಂಬಲ್ಲಿ ಬೃಹದಾಕಾರದ ಒಂದು ಅಣೆಕಟ್ಟು ಎದ್ದು ನಿಲ್ಲತೊಡಗಿದಾಗ ಕೂಡ ಈ ಅಣೆಕಟ್ಟು ಮುಂದೆ ತಂದೊಡ್ಡಲಿರುವ ಸಮಸ್ಯೆಗಳ ಕಲ್ಪನೆ ನನಗಿರಲಿಲ್ಲ. ಕಾಮಗಾರಿಗಳು ಎಂದಿನಂತೆ ನಡೆಯುತ್ತಲಿದ್ದವು. ವರ್ಷದ ನಾಲ್ಕು ತಿಂಗಳು ತಮಿಳುನಾಡು, ಕೇರಳ, ಆಂಧ್ರದಿಂದ ಜನ ಬಂದು ಇಲ್ಲಿ ಕೆಲಸ ಮಾಡುತ್ತಲೇ ಇದ್ದರು. ಮಳೆಗಾಲ ಆರಂಭವಾದ ತಕ್ಷಣ ಅಣೆಕಟ್ಟಿನ ಕಾಮಗಾರಿ ಸ್ಥಗಿತಗೊಂಡು ಇಡೀ ಯೋಜನಾ ಪ್ರದೇಶಕ್ಕೆ ಗರಬಡಿಯುತ್ತಿತ್ತು. ಮತ್ತೆ ಮಳೆಗಾಲ ಮುಗಿಯಿತೆನ್ನುವಾಗ ಸುಮಾರು ೭೦,೦೦೦ ಕಾರ್ಮಿಕರು ಇಲ್ಲಿ ಬಂದು ಕೆಲಸದ ಮೇಲೆ ತೊಡಗುತ್ತಿದ್ದರು. ಕಾಮಗಾರಿಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಿಂದಾಗಿ ಶರಾವತಿ ದೊಡ್ಡ ಸುದ್ದಿ ಮಾಡಿತು. ಜೊತೆಗೆ ನಿಧಾನವಾಗಿ ಅಣೆಕಟ್ಟುಗಳು (ಲಿಂಗನಮಕ್ಕಿಯ ಜೊತೆಯಲ್ಲಿಯೇ ಇದಕ್ಕೆ ಸಮತೋಲನವಾಗಿ ತಲಕಳಲೆ ಅನ್ನುವಲ್ಲಿ ಕೂಡ ಒಂದು ಅಣೆಕಟ್ಟು ನಿರ್ಮಾಣವಾಯಿತು) ಎದ್ದು ನಿಲ್ಲತೊಡಗಿದಾಗ ಮುಳುಗಡೆಯಾಗುವವರ ಸಮಸ್ಯೆ ತಲೆ ಎತ್ತತೊಡಗಿತು.
ಒಂದು ಕಡೆ ಅಣೆಕಟ್ಟಿನ ಕಾಮಗಾರಿ ನಡೆಯುತ್ತಿರುವಾಗಲೇ ಇನ್ನೊಂದು ಕಡೆ ಮುಳುಗಡೆಯವರ ಸಮಸ್ಯೆಗಳು ಹೆಡೆ ಬಿಚ್ಚತೊಡಗಿದವು. ಲಿಂಗನಮಕ್ಕಿ, ತಲಕಳಲೆ ಅಣೆಕಟ್ಟಿನಲ್ಲಿ ಮುಳುಗಡೆ ಆಗಲಿರುವ ಹಳ್ಳಿಗಳ ಪಟ್ಟಿ ಹೊರಬಿದ್ದಿತು. ಅವರ ಜಮೀನು ಮನೆ ಕೊಟ್ಟಿಗೆಗೆ ಬೆಲೆ ಕಟ್ಟಲು, ಅವರಿಗೆ ಪರಿಹಾರ ಕೊಡಲು ಸರಕಾರಿ ನೌಕರರು, ಅಧಿಕಾರಿಗಳು ಯೋಜನಾ ಪ್ರದೇಶಕ್ಕೆ ಬಂದು ಹೋಗತೊಡಗಿದರು. ಹಾಗೆಯೇ ಇಲ್ಲಿ ಮುಳುಗಡೆಯಾಗುವವರಿಗೆ ಬೇರೆಡೆಗಳಲ್ಲಿ ಜಮೀನು ನಿವೇಶನ ಕೊಡಲು ಸರಕಾರ ಮುಂದೆ ಬಂದಿತು. ಇಲ್ಲಿಂದ ಮನೆ ಸಾಮಾನು ಅಲ್ಲಿಗೆ ಒಯ್ಯುವ, ಹೊಸ ಜಾಗದಲ್ಲಿ ಮನೆ ತೋಟ ಮಾಡುವ, ದನಕರು ಇಲ್ಲಿಂದ ಸಾಗಿಸುವ ಕೆಲಸ ಪ್ರಾರಂಭವಾಯಿತು. ಹಲವಾರು ಹಳ್ಳಿಗಳನ್ನ ಮುಳುಗಡೆ ಹಳ್ಳಿಗಳು ಎಂದು ಗುರುತಿಸಲಾಯಿತು. 
ಶಾಂತವಾಗಿದ್ದ ಮಲೆನಾಡ ಕಾನನದ ನಡುವೆ ಒಂದು ಅಗ್ನಿಪರ್ವತ ಸ್ಫೋಟಗೊಂಡಿತು. ನೆಮ್ಮದಿಯಿಂದದ್ದ ಜನ ಕಂಗಾಲಾದರು, ಅವರ ಕಾಲ ಕೆಳಗಿನ ನೆಲ ಕಂಪಿಸತೊಡಗಿತು. ನಿಶ್ಚಿಂತೆಯಿಂದ ಬದುಕಿದ್ದವರು ಹೌಹಾರಿದರು. ಬದುಕಿ ಬಾಳಿದ ನೆಲವನ್ನ ಬಿಟ್ಟುಹೋಗಬೇಕಲ್ಲ ಅನ್ನುವ ಚಿಂತೆ ಒಂದು ಕಡೆ, ಹೊಸದಾಗಿ ಅಪರಿಚಿತವಾದ ಸ್ಥಳದಲ್ಲಿ ಬದುಕನ್ನ ಸಾಗಿಸಬೇಕಲ್ಲ ಅನ್ನುವ ಚಿಂತೆ ಇನ್ನೊಂದು ಕಡೆ. ಹತ್ತಿರದ ನೆಂಟರು ಇಷ್ಟರು ದೂರವಾಗುವ ಚಿಂತೆ. ಚಿರಪರಿಚಿತವಾದ ಕಾಡು ಬಳ್ಳಿ ಹಳ್ಳ ಹೊಳೆ ಎಲ್ಲವನ್ನ ಅಗಲಿ ಹೋಗಬೇಕಾದ ನೋವು.
ಜೊತೆಗೆ ಸರಕಾರಿ ನೌಕರರ ಕಿರುಕುಳ. ಇಷ್ಟು ಕೊಡು ಅಷ್ಟು ಕೊಡು ಅನ್ನುವ ವರಾತ. ದಿನನಿತ್ಯ ಬುತ್ತಿ ಕಟ್ಟಿಕೊಂಡು ಸರಕಾರಿ ಕಛೇರಿಗಳಿಗೆ ಬಂದು ಬಿಲ್ಲು ಪಾಸಾಗಿದೆಯೇ, ಚೆಕ್ಕು ಬಂದಿದೆಯೇ, ಹೊಸ ಜಮೀನು ಮಂಜೂರಾಗಿದೆಯೇ ಅನ್ನುವುದನ್ನ ನೋಡುವ ಹಪಹಪಿಸುವಿಕೆ.
ಹಿಂದೆಯೇ ಅಣೆಕಟ್ಟು ನಿಧಾನವಾಗಿ ಎದ್ದು ನಿಂತು ಕಾಡಿನ ನಡುವೆ ಒಂದು ಬೆಳ್ಳಿಗೆರೆಯಾಗಿ ಹರಿಯುತ್ತಿದ್ದ ನದಿ ನಿಧಾನವಾಗಿ ಅತ್ತಿತ್ತ ಮೈಚಾಚಿಕೊಂಡು ಮನೆ ಗದ್ದೆ, ಹೊಲ ತೋಟ, ಕಾಡು ಕಣಿವೆ ಎಂದೆಲ್ಲ ಆವರಿಸಿಕೊಂಡಾಗ ನಂಬಿದ್ದ ನೀರೇ ನುಂಗುವ ಮಾರಿಯಾಗಿ ಬಂದು ಕಾಡತೊಡಗಿದ ಅನುಭವ. ಸಾಲದ್ದಕ್ಕೆ ನೀರು ಕಾಡಿಗೆ ನುಗ್ಗಿದ ಮೇಲೆ ಕಾಡಿನಲ್ಲಿಯ ಪ್ರಾಣಿಗಳು ಹಾವು ಹುಪ್ಪಟೆಗಳು ಮನೆಗಳತ್ತ ಧಾಳಿ ಇಟ್ಟವು.
ಇದರ ಜೊತೆಗೆ ಮನೆಯ ಹಂಚು ಪಕಾಶಿಗಳನ್ನ ಹೊಸ ಪ್ರದೇಶಗಳಿಗೆ ಸಾಗಿಸಲೆಂದು ಬಂದ ಸರಕಾರಿ ಲಾರಿಗಳ ಚಾಲಕರು ರೈತರನ್ನ ಸುಲಿಯಲು ಮುಂದಾದರು.
ಹಲವಾರು ಹಳ್ಳಿಗಳ ನೂರಾರು ಕುಟುಂಬಗಳು, ಸಾವಿರಾರು ಜನ ಈ ಮುಳುಗಡೆಯ ಬವಣೆಗೆ ಬಲಿಯಾದರು. ಕೆಲವರು ಇಲ್ಲಿಯ ದೇವರುಗಳನ್ನ ಇಲ್ಲಿ ಬಿಟ್ಟು ಹೋದರು, ಇಲ್ಲಿಯ ಕಲೆ ಇಲ್ಲೇ ಉಳಿಯಿತು. ಜನ ಜಾನುವಾರುಗಳಿಗೆ ಔಷಧಿಯಾಗಿದ್ದ ಗಿಡಮೂಲಿಕೆಗಳು ಇಲ್ಲೇ ಉಳಿದವು. ಕೂಗಳತೆಯಲ್ಲಿದ್ದ ನೆಂಟರೆಲ್ಲ ದೂರ ದೂರ ಹೋದರು.
ಸರಕಾರ ಇವರಿಗೆಲ್ಲ ಪರಿಹಾರ ಕೊಟ್ಟಿತು. ಹೊಸ ಜಮೀನು ಮಾಡಲು ಅವಕಾಶ ಕಲ್ಪಿಸಿಕೊಟ್ಟಿತು. ಜೊತೆಗೆ ‘ನೀವು ದೇಶಕ್ಕಾಗಿ ತ್ಯಾಗ ಮಾಡಿದ್ದೀರಿ’ ಎಂಬ ಹೊಗಳಿಕೆಯ ಕಿರೀಟವನ್ನ ತಲೆಯ ಮೇಲೆ ಇರಿಸಿ ಸನ್ಮಾನ ಮಾಡಿತು.
೧೯೪೫ರಲ್ಲಿ ಶರಾವತಿಗೆ ಮೊದಲ ಅಣೆಕಟ್ಟನ್ನ ಹಿರೇಭಾಸ್ಕರ ಎಂಬಲ್ಲಿ ನಿರ್ಮಿಸಿದಾಗ ಮಲೆನಾಡ ಜನರಿಗೆ ಅಂತಹ ತೊಂದರೆ ಆಗಿರಲಿಲ್ಲ. ಆಗ ಅಲ್ಲಲ್ಲಿಯೇ ಜಮೀನು ಕೊಡಲಾಗಿತ್ತು. ನೆಂಟರಿಷ್ಟರು ದೂರವಾಗಿರಲಿಲ್ಲ. ಆದರೆ ಲಿಂಗನಮಕ್ಕಿಯಿಂದಾಗಿ ಜನ ನಾನಾ ಬಗೆಯ ತಾಪತ್ರಯಗಳಿಗೆ ಒಳಗಾದರು. ಇಲ್ಲಿ ಮುಳುಗಡೆಯಾದ ಜನರಿಗೆ ನೂರು ಇನ್ನೂರು ಕಿ.ಮೀ. ದೂರದ ಸ್ಥಳಗಳನ್ನ ತೋರಿಸಲಾಯಿತು.ಕೇವಲ ಹಣದಿಂದ ಪರಿಹಾರದಿಂದ ದೂರವಾಗದ ಹಲವು ತೊಂದರೆಗಳನ್ನ ಇವರು ಅನುಭವಿಸಿದರು. ಆದರೆ ಈ ತಾಪತ್ರಯದ ಕಲ್ಪನೆ ಸರಕಾರಿ ಬಂಗಲೆಗಳಲ್ಲಿ ವಾಸಿಸುವ ಜನರಿಗೆ ಆಗಲೇ ಇಲ್ಲ.
ಅಲ್ಲದೆ ಮುಳುಗಡೆಯಾದವರ ಸಮಸ್ಯೆ ಇದಾದರೆ ಮುಳುಗಡೆಯಾಗದೇ ಅಣೆಕಟ್ಟೆಯ ಹಿನ್ನೀರಿನಲ್ಲಿ ಬದುಕುವಂತಹ ಜನರ ನೋವು ಮತ್ತೊಂದು ರೀತಿಯಲ್ಲಿತ್ತು. ಇವರೆಲ್ಲ ದ್ವೀಪಗಳ ನಡುವೆ ಸಿಕ್ಕಿ ಬಿದ್ದರು. ಸಾಗರದಂತಹ ಊರು ಹಿಂದೆ ಕೇವಲ ೨೦=೩೦ ಕಿ.ಮೀ. ಇದ್ದುದು ಈಗ ೭೦=೮೦ ಕಿ.ಮೀ. ದೂರವಾಯಿತು. ಇರುವ ಹಳ್ಳಿಗಳ ಜನರಿಗೆ ಆಸ್ಪತ್ರೆಗಳಿಲ್ಲ, ಶಾಲೆಗಳಿಲ್ಲ, ಪೋಸ್ಟ್ ಆಫೀಸುಗಳಿಲ್ಲ, ಏನಾದರೂ ಆದರೆ ತಟ್ಟನೆ ಯಾರನ್ನೂ ಕರೆಯುವಂತಿಲ್ಲ, ವಾಹನ ಸೌಕರ್ಯಗಳಿಲ್ಲ ಈ ಬಗೆಯ ಸಂಕಷ್ಟಗಳಿಗೆ ಈ ಜನ ಬಲಿಯಾದರು.
ಈ ಹಿಂದೆ ವಿಶಾಲವಾದ ಕಾಡು ಕಾನನದಲ್ಲಿ ವಿಹರಿಸಿಕೊಂಡಿದ್ದ ಪ್ರಾಣಿ ಪಕ್ಷಿಗಳು ಇರುವ ಅಲ್ಪ ನೆಲವನ್ನೇ ತಮ್ಮ ವಿಹಾರದ ತಾಣವನ್ನಾಗಿ ಮಾಡಿಕೊಂಡವು. ಹತ್ತಿರವಿದ್ದ ನೆಂಟರೆಲ್ಲ ದೂರವಾಗಿ ಇಲ್ಲಿಯ ಜನ ಮತ್ತೊಂದು ರೀತಿಯಲ್ಲಿ ಕೊರಗತೊಡಗಿದರು.
ವಿಚಿತ್ರವೆಂದರೆ ಈ ಮುಳುಗಡೆ ಜನರ ಬವಣೆಯನ್ನ ಯಾರೂ ಗುರುತಿಸಲಿಲ್ಲ. ದೇಶಕ್ಕಾಗಿ ಇವರು ಮಾತ್ರ ಏಕೆ ಈ ಎಲ್ಲ ನೋವನ್ನ ಸಹಿಸಬೇಕು ಅನ್ನುವ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಈ ಜನ ಮಾಡಿದ ಪಾಪವಾದೂ ಏನು ಎಂಬುದು ಒಂದು ಪ್ರಶ್ನೆಯಾಗಿಯೇ ಉಳಿಯಿತು.
ನಾನಿಲ್ಲಿ ಶರಾವತಿಯನ್ನ ಮಾತ್ರ ಎತ್ತಿಕೊಳ್ಳಲು ಒಂದು ಕಾರಣವಿದೆ. ಇಂದು ಮುಳುಗಡೆ ಅನ್ನುವ ಶಬ್ದ ನಮ್ಮ ಕಿವಿಯ ಮೇಲೆ ಪದೇಪದೇ ಬೀಳುತ್ತಿದೆ. ದಿನನಿತ್ಯ ಒಂದಲ್ಲಾ ಒಂದು ಅಣೆಕಟ್ಟಿನ ನಿರ್ಮಾಣ, ಜನರ ಪ್ರತಿಭಟನೆ, ಸರಕಾರದ ಸಮಜಾಯಿಷಿ, ಬಲಾತ್ಕಾರ ಇತ್ಯಾದಿಗಳ ಬಗ್ಗೆ ನಾವು ಕೇಳುತ್ತಲೇ ಇರುತ್ತೇವೆ.
ಒಂದು ಅಂಕಿ ಅಂಶದ ಪ್ರಕಾರ ಈ ದೇಶದ ವಿಭಜನೆ ಆದಾಗ ಎಷ್ಟು ಜನ ನಿರಾಶ್ರಿತರಾದರೋ ಅದಕ್ಕಿಂತ ಮೂರು ಪಟ್ಟು ಜನ ಈ ಮುಳುಗಡೆಯಿಂದಾಗಿ ನಿರಾಶ್ರಿತರಾಗಿದ್ದಾರಂತೆ. ಇಂದು ಜನ ಕೇವಲ ಅಣೆಕಟ್ಟಿನ ನಿರ್ಮಾಣದಿಂದಾಗಿ ಮಾತ್ರ ವಲಸೆ ಹೋಗುತ್ತಿಲ್ಲ. ಅಣೆಕಟ್ಟು, ಕಾರ್ಖಾನೆ, ವಿಮಾನ ನಿಲ್ದಾಣ, ರಸ್ತೆ ಅಗಲೀಕರಣ, ಪಟ್ಟಣಗಳ ಹೊಸ ಬಡಾವಣೆ, ಎಸ್.ಈ.ಜಡ್, ಇತ್ಯಾದಿ ಇತ್ಯಾದಿಗಳಿಗಾಗಿ ರೈತರನ್ನ ಒಕ್ಕಲೆಬ್ಬಿಸುತ್ತಿದ್ದೇವೆ. ಅಂದರೆ ನಿರಾಶ್ರಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ನಡುವೆ ಸುಖ ನೆಮ್ಮದಿಯಿಂದ ಇರಬೇಕಾದ ಜನ ಇನ್ನಾರಿಗಾಗಿಯೋ ನೋವನ್ನ ಉಣ್ಣುತ್ತಿದ್ದಾರೆ.
ಹೌದು, ಇದೆಲ್ಲವನ್ನ ನಾವು ಅಭಿವೃಧ್ದಿಯ ಹೆಸರಿನಲ್ಲಿ ಮಾಡುತ್ತಿದ್ದೇವೆ. ಬುದ್ಧಿವಂತ ಜನ ಒಂದು ಮುಳುಗಡೆಯ ವಿಷಯ ಬಂದಾಗ ತಮ್ಮ ಬುದ್ಧಿವಂತಿಕೆಯಿಂದ ಹಣ ಮಾಡಿಕೊಳ್ಳುತ್ತಾರೆ, ಬಂಜರು ನೆಲದಲ್ಲಿ ಗಿಡ ನೆಟ್ಟು, ಇಲ್ಲದ ಮನೆ ಕೊಟ್ಟಿಗೆಯನ್ನ ಇದೆ ಎಂದು ತೋರಿಸಿ, ಅಳತೆ ಮಾಡಲು ಬರುವ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಶ್ರೀಮಂತರಾದ ಮುಳುಗಡೆಯ ಜನರನ್ನ ನಾನು ನೋಡಿದ್ದೇನೆ. ಆದರೆ ಮುಗ್ಧ ರೈತರು, ಯಾವುದೇ ಪ್ರಭಾವ ಇಲ್ಲದವರು ಸಾಯುತ್ತಾರೆ.
ಸರಕಾರ ಜಮೀನು ತನ್ನದಾಗುವ ತನಕ ಇವರನ್ನ ಓಲೈಸಿಕೊಳ್ಳುತ್ತದೆ. ನಂತರ ಇವರ ಸುದ್ದಿಗೆ ಹೋಗುವುದಿಲ್ಲ.
ಹೇಮಾವತಿ ಯೋಜನೆ ಕಟ್ಟಿ ಮುಗಿದ ನಲವತ್ತು ವರ್ಷಗಳ ನಂತರ ಅಲ್ಲಿಯ ರೈತರಿಗೆ ಸರಕಾರ ಪರಿಹಾರ ನೀಡಿದೆ ಅನ್ನುವ ಸುದ್ದಿ ಮೊನ್ನೆ ಪತ್ರಿಕೆಗಳಲ್ಲಿ ಬಂದಿದೆ. ಅಂದರೆ ಆ ಜನರ ಹೋರಾಟ ಎಂತಹದು ಅನ್ನುವುದನ್ನ ನಾವು ಗಮನಿಸಬಹುದು. ಹೀಗೆಯೇ ಹಲವಾರು ಯೋಜನೆಗಳಲ್ಲಿ ಮನೆ ಮಠ ಕಳೆದು ಕೊಂಡವರಿಗೆ ಈಗಲೂ ಪರಿಹಾರ ಸಿಕ್ಕಿಲ್ಲ. ಶರಾವತಿ ಯೋಜನೆ ಮುಗಿದು, ವರಾಹಿ ಯೋಜನೆ ಮುಗಿದು ಹಲವು ವರ್ಷಗಳು ಕಳೆದರೂ ಅಲ್ಲಿಯ ಮುಳುಗಡೆ ಜನ ದಿನನಿತ್ಯ ಬುತ್ತಿ ಕಟ್ಟಿಕೊಂಡು ಸರಕಾರಿ ಕಛೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ.
ಎಷ್ಟೋ ಕಡೆಗಳಲ್ಲಿ ಮುಳುಗಡೆಯವರಿಗೆ ಎಂದು ಮೀಸಲಿರಿಸಿದ ನಿವೇಶನಗಳು ಇತರರ ಪಾಲಾಗಿವೆ. ಮುಳುಗಡೆಯ ಪ್ರತಿ ಕುಟುಂಬಕ್ಕೂ ಒಂದು ನೌಕರಿ ನೀಡಬೇಕೆಂಬ ನಿಯಮದ ಅಡಿಯಲ್ಲಿ ನಮ್ಮ ರಾಜಕಾರಿಣಿಗಳ ಸಂಬಂಧಿಕರು ಮುಳುಗಡೆಯಾಗದೆಯೂ ಒಂದೊಂದು ನೌಕರಿ ಪಡೆದಿದ್ದಾರೆ.
ಶರಾವತಿಯ ನಡುಗಡ್ಡೆಗಳಲ್ಲಿ ಸಿಕ್ಕಿ ಬಿದ್ದಿರುವ ಜನ ಸಾಗರಕ್ಕೆ ಬರಲು ಲಾಂಚ್ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಉಚಿತವಾಗಿ ಜಲ ಸಾರಿಗೆ ಕಲ್ಪಿಸುವುದಾಗಿ ಹೇಳಿದ ಸರಕಾರ ಈಗ ಹಣ ಕೊಟ್ಟರೂ ಸೌಲಭ್ಯ ಕಲ್ಪಿಸದಂತಹ ಸ್ಥಿತಿಯಲ್ಲಿ ಇದೆ.
ಇತೀಚೆಗೆ ಇಂತಹ ಮುಳುಗಡೆ ಪ್ರದೇಶಕ್ಕೆ ಬಂದ ಒರ್ವ ರಾಜಕಾರಿಣಿ ಹೀಗೆ ಆಯಿತು ಎಂದು ಕೊರಗಬೇಡಿ, ಇದರೊಳಗಿನಿಂದ ಎದ್ದು ಬನ್ನಿ ಎಂದು ಉಪದೇಶ ನೀಡಿದ. ಈ ರೀತಿಯಲ್ಲಿ ಉಪದೇಶ ನೀಡುವುದು ಸುಲಭ. ಆದರೆ ಈ ಹಿಂಸೆಯೊಳಗಿನಿಂದ ಎದ್ದು ಬರುವುದು ಸುಲಭದ ಕೆಲಸವಲ್ಲ.
೧೯೬೪ರಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯ ಕೆಲಸ ಮುಗಿದು ಅಣೆಕಟ್ಟೆಯಲ್ಲಿ ನೀರು ನಿಂತಾಗ ಲಿಂಗನಮಕ್ಕಿ ಹತ್ತಿರದ ಒಂದು ಗುಡ್ಡದಲ್ಲಿ ಸಾವಿರಾರು ಮೊಲಗಳು ಬಂದು ಸೇರಿದವು. ಸುತ್ತ ನೀರು ನಿಂತದ್ದರಿಂದ ಬೇರೆಲ್ಲಿಗೆ ಹೋಗಲೂ ಅವುಗಳಿಗೆ ಸಾಧ್ಯವಾಗಲಿಲ್ಲ. ಇಡೀ ಬೆಟ್ಟದ ನೆತ್ತಿ ಹತ್ತಿ ಚೆಲ್ಲಿದ ಹಾಗೆ ಕಾಣಿಸುತ್ತಿತು. ಸುತ್ತಲಿನ ಜನ ದೊಡ್ಡ ದೊಡ್ಡ ಸೋಟೆಗಳನ್ನ ಹಿಡಿದು ಅಲ್ಲಿಗೆ ಹೋಗಿ ಅಲ್ಲಿಯ ಮೊಲಗಳನ್ನೆಲ್ಲ ಹೊಡೆದು ತಂದರು. ನಿಜವಾಗಿಯೂ ಮುಳುಗಡೆಯಾದವರ ಕತೆಗೂ ಈ ಕತೆಗೂ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಇವರ ಗೋಳನ್ನ ಕೇಳುವವರೇ ಇಲ್ಲವಾಗಿದ್ದಾರೆ.
ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭವಾಗಿ ಅಣೆಕಟ್ಟುಗಳು ತುಂಬಿದ ನಂತರ ಸಣ್ಣ ಪ್ರಮಾಣದ ಭೂಕಂಪಗಳು ಆಗುವುದು ಸಾಮಾನ್ಯ ವಿಷಯವಾಗಿದೆ. ೨೦೧೦ರಲ್ಲಿ ಹೊಸನಗರದ ಸುತ್ತ ಒಂದು ವರ್ಷದಲ್ಲಿ ಸುಮಾರು ಹತ್ತು ಭೂಕಂಪಗಳು ಆಗಿವೆ ಎಂದು ಭೂಗರ್ಭ ಇಲಾಖೆ ದಾಖಲೆ ಮಾಡಿದೆ. ಭೂಮಿಗೂ ಒಂದು ಧಾರಣಶಕ್ತಿ ಇರುತ್ತದೆ. ಈ ಧಾರಣಶಕ್ತಿ ಮೀರಿದರೆ ನೆಲ ಅದುರ ಬಹುದು. ಈ ಬಗ್ಗೆ ಸರಕಾರ ಎಂದೂ ವಿಚಾರ ಮಾಡಿಲ್ಲ.
ಅಣೆಕಟ್ಟುಗಳ ನಿರ್ಮಾಣದಿಂದಾಗಿ ಸ್ಥಳೀಯರು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಕಟ್ಟಿದ ಅಣೆಕಟ್ಟುಗಳು ಹೂಳಿನಿಂದ ತುಂಬಿಕೊಂಡು ಒಂದು ತಿಂಗಳ ಮಳೆಗೆ ಅಣೆಕಟ್ಟು ತುಂಬಿಕೊಳ್ಳುತ್ತದೆ. ಇಂತಹ ಹಲವು ಸಮಸ್ಯೆಗಳ ಕುರಿತು ಸರಕಾರ ವಿಚಾರ ಮಾಡುತ್ತಿಲ್ಲ.
ಮಳೆಯನ್ನೇ ಅವಲಂಬಿಸಿ ಕೊಂಡಿರುವ ಈ ಅಣೆಕಟ್ಟುಗಳು ಮಳೆ ಕಡಿಮೆಯಾಗಿದ್ದರಿಂದಾಗಿ ಒಣಗಿ ನಿಂತಿರುವ ಸಮಸ್ಯೆಯೂ ನಮ್ಮನ್ನ ಕಾಡುತ್ತಿರುವುದು ಸುಳ್ಳಲ್ಲ. ಶರಾವತಿ ಯೋಜನಾ ಪ್ರದೇಶದಲ್ಲಿ ಒಂದು ಕಾಲದಲ್ಲಿ ವರ್ಷಕ್ಕೆ ೩೨೦ ಇಂಚು ಮಳೆ ಬೀಳುತ್ತಿದ್ದುದು ಇಂದು ೭೦=೯೦ ಇಂಚಿಗೆ ಬಂದು ನಿಂತಿದೆ ಅಂದರೆ ಈ ವಿಪರ್ಯಾಸದ ಚಿಂತೆ ಯಾರಿಗೂ ಇಲ್ಲವಾಗಿದೆ.
ನಾಡಿನ ಉದ್ದಕ್ಕೂ ಅಣೆಕಟ್ಟುಗಳು ಎದ್ದು ನಿಲ್ಲುತ್ತಿವೆ. ಪಶ್ಚಿಮಘಟ್ಟ ಪ್ರದೇಶ ಒಂದರಲ್ಲಿಯೇ ಸರಕಾರ ಸುಮಾರು ೬೯ ಅಣೆಕಟ್ಟುಗಳನ್ನ ನಿರ್ಮಿಸಲು ಹೊರಟಿದೆಯಂತೆ. ಅಂದರೆ ಮುಂದಿನ ದಿನಗಳಲ್ಲಿ ಮುಳುಗಡೆಯಿಂದಾಗಿ ನರಳುವವರ, ನಿಟ್ಟುಸಿರು ಬಿಡುವವರ, ತಮ್ಮ ಹಣೆ ಹಣೆ ಚಚ್ಚಿಕೊಳ್ಳುವವರ ಸಂಖ್ಯೆ ಅಧಿಕವಾಗಲಿದೆ ಅನ್ನುವುದನ್ನ ನಾವು ಗಮನಿಸಬೇಕು.
ನಿಜ ನಮಗೆ ಅಭಿವೃದ್ಧಿ ಬೇಕು. ಆದರೆ ಇದಕ್ಕಾಗಿ ನಾವು ತೆರುವ ಬೆವರು ಕಣ್ಣೀರು ಎಷ್ಟಿರಬೇಕು? ಇದು ನಾವು ಯೋಚಿಸಬೇಕಾದ ವಿಷಯವಲ್ಲವೆ?
ಕೆಂಡಸಂಪಿಗೆಯಲ್ಲಿ ನಾ,ಡಿ.ಯವರ ಎಲ್ಲ ಬರಹಗಳಿಗೆ ಇಲ್ಲಿ ನೋಡಿ