ಮೇ ೧೮, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಬೆನ್ನಿ ಬೆನ್ಯಾಮಿನ್ ‘ಆಡುಜೀವನ’ ಮಲಯಾಳಂ ಕಾದಂಬರಿಯ ಕೊನೆಯ ಕಂತು    
ಡಾ. ಅಶೋಕ್ ಕುಮಾರ್
ಗುರುವಾರ, 5 ಜುಲೈ 2012 (00:00 IST)

ಎಲ್ಲಾ ಅರಬ್ಬೀ ನಗರಗಳಲ್ಲೂ ಯಾವೊಬ್ಬ ವ್ಯಕ್ತಿಗೂ ಯಾವುದೇ ಆವಶ್ಯಕತೆಗೂ ಓಡಿ ಸಮೀಪಿಸಬಹುದಾದ ಆಸರೆಯಾಗಿ , ಪ್ರೀತಿಯ ಒಂದು ವಟವೃಕ್ಷವಿರುತ್ತದೆ. ಅದರ ನೆರಳಿನಾಸರೆಯಲ್ಲಿ ಜೀವಿಸುವ ಒಂದು ಮಾನವ ಸಮೂಹವವೂ ಇರುತ್ತದೆ. ಆ ರೀತಿಯಲ್ಲಿ ’ಬತ’ ಮಾರ್ಕೆಟ್‌ನ ಮಲಯಾಳಿಗಳಿಗೆ ಒಂದು ಆಶ್ರಯಧಾಮವಾಗಿರುವ ’ಕುಂಜಿಕ್ಕಾ’ನ ಹೋಟೆಲಿನ ಮುಂದೆಯೇ ನಾನಂದು ಕುಸಿದು ಬಿದ್ದಿದ್ದೆ. ಅಲ್ಲಾಹುವಿನ ಪ್ರೀತಿಯ ದಾರಿಗಳು ಹೇಗಿರುತ್ತವೆ ಕಂಡಿರಾ. ತೀರಾ ಅಪರಿಚಿತವಾದ ಆ ಸಂತೆಯಲ್ಲಿ ನಾನು ಎಲ್ಲಿಯಾದರೂ ಬಸವಳಿದು ಬೀಳಬಹುದಿತ್ತು. ಆ ಪ್ರಾಕೃತರೂಪದಲ್ಲಿದ್ದ ನನ್ನನ್ನು ಯಾರೂ ತಿರುಗಿಕೂಡ ನೋಡುತ್ತಿರಲಿಲ್ಲ. ಆದರೆ, ನಾನು ತಲುಪಬೇಕಿರುವುದು ಕುಂಜಿಕ್ಕಾನ ಮುಂದೆಯೇ ಎಂದು ಅಲ್ಲಾಹು ನಿಶ್ಚಯಿಸಿಯಾಗಿತ್ತು. ನಾನು ಆ ಹಾದಿಯಲ್ಲಿ ನಡೆದೆ. ಮಲಬಾರ್ ರೆಸ್ಟೋರೆಂಟಿನ ಮುಂದೆ ತಲುಪಿದೆ. ಬಿದ್ದೆ. ಉಳಿದದ್ದೆಲ್ಲವನ್ನೂ ಅವನು ಕುಂಜಿಕ್ಕಾನ ಹೃದಯಕ್ಕೆ ವಹಿಸಿದ್ದನಲ್ಲವೇ.

ಮತ್ತೆ ಕಣ್ಣು ತೆರೆದಾಗ ನಾನು ಈ ಕುಂಜಿಕ್ಕಾನ ಕೋಣೆಯಲ್ಲಿದ್ದೆ. ಅಲ್ಲಿ ತಲುಪಿದ ಮೂರನೆ ದಿನವಂತೆ ನಾನು ಕಣ್ಣು ತೆರೆದದ್ದು. ಜ್ಞಾನ ಬಂದಾಗ ನನ್ನ ಕಾಲುಗಳಲ್ಲೂ ದೇಹದಲ್ಲೂ ಎಲ್ಲಾ ಬಹಳ ನೋವಿತ್ತು. ನನ್ನ ಕೈಗೆ ಒಂದು ಡ್ರಿಪ್ ಚುಚ್ಚಲಾಗಿತ್ತು. ಒಂದು ಆಸ್ಪತ್ರೆಯಲ್ಲಿ ಮಲಗಿದ್ದೇನೋ ಎಂದು ನಾನು ಸಂಶಯಪಟ್ಟೆ.    

ಆದರೂ ಸುತ್ತಲೂ ಮಲಯಾಳಿಗಳನ್ನು ಕಂಡು ನಾನು ಅತ್ತೇಬಿಟ್ಟೆ. ಕುಂಜಿಕ್ಕಾ ನನ್ನ ಕೈ ಹಿಡಿದು ಸಂತೈಸಿದರು. ಅಷ್ಟು ದಿನಗಳಲ್ಲಾಗಲೇ ನಾನು ’ಬತ’ ಪಟ್ಟಣದ ಮಲಯಾಳಿಗಳ ನಡುವೆ ಒಂದು ಮಾತಿನ ವಿಷಯವಾಗಿ ಬಿಟ್ಟಿದ್ದೆ. ನಾನು ಕಣ್ಣು ತೆರೆದದ್ದನ್ನು ತಿಳಿದು ಅವರಲ್ಲಿ ಹಲವರು ಆ ಕೋಣೆಗೆ ಓಡುತ್ತ ಏದುತ್ತ ಬಂದರು. ಅವರು ಆಪಲ್, ಕಿತ್ತಳೆ, ದ್ರಾಕ್ಷಿ, ಬಾಳೆಹಣ್ಣುಗಳನ್ನೆಲ್ಲ ನನಗೆ ಉಡುಗೊರೆಯಾಗಿ ತಂದು ಕೊಟ್ಟರು. ಎಲ್ಲರಿಗೂ ತಿಳಿಯಬೇಕೆಂದಿದ್ದುದು ನನ್ನ ಕತೆ. ನಾನು ಹೇಗೆ ಆ ಸ್ಥಿತಿಗೆ ಬಂದೆ ಎಂದು....? ನಾನು ಹೇಗೆ ಅಲ್ಲಿಗೆ ಬಂದು ತಲುಪಿದೆ ಎಂದು....? ಎಲ್ಲರ ಮುಖದಲ್ಲೂ ತುಂಬಿ ನಿಂತಿದ್ದ ಕಾತರ ಅದೊಂದೇ ಆಗಿತ್ತು. ಆದರೆ ಯಾರೂ ಅದನ್ನು ನನ್ನೊಡನೆ ಕೇಳಲಿಲ್ಲ. ಮತ್ತೆ ಎರಡು ದಿವಸ ಕಳೆದು ಡಾಕ್ಟರ್ ಬಂದು ನನ್ನನ್ನು ಪುನಃ ಪರೀಕ್ಷಿಸಿ ನನ್ನ ಕೈಯಿಂದ ಡ್ರಿಪ್‌ಅನ್ನು ತೆಗೆದ ಬಳಿಕವಷ್ಟೆ ಒಂದು ರಾತ್ರಿ ಕುಂಜಿಕ್ಕಾ ನನ್ನೊಡನೆ ಅದನ್ನು ಮೆಲ್ಲಗೆ ಕೇಳಿದರು.    

ನನಗೊಂದು ಕನ್ನಡಿ ಬೇಕು. ನಾನು ಹೇಳಿದೆ.

ಯಾಕೆ ಕನ್ನಡಿ....? ಪಕ್ಕದಲ್ಲಿ ಕುಳಿತಿದ್ದ ಕುಂಜಿಕ್ಕಾ ಕೇಳಿದರು.

ನಾನು ನನ್ನನ್ನೊಮ್ಮೆ ನೋಡಬೇಕು. ಜೊತೆಗಿದ್ದವರು ಕಣ್ಬಿಟ್ಟುಕೊಂಡು ಪರಸ್ಪರ ನೋಡಿಕೊಂಡರು.

ಎಲ್ಲರೂ ದುರುಗುಟ್ಟಿ ನೋಡುವ, ಎಲ್ಲರೂ ನಿಕೃಷ್ಟನೆಂದು ಭಾವಿಸುವ ನನ್ನನ್ನು ನಾನೊಮ್ಮೆ ಕಾಣಬೇಕಾಗಿತ್ತು. ಸುತ್ತಲೂ ನಿಂತಿದ್ದವರಲ್ಲಿ ಯಾರೋ ಒಂದು ಚಿಕ್ಕ ಕನ್ನಡಿ ತಂದುಕೊಟ್ಟರು. ಹಾಗೆ ಮಲಗಿದಲ್ಲೇ ಮಲಗಿ ಬಹಳ ಕಾಲದ ಬಳಿಕ ನಾನು ನನ್ನನ್ನು ನೋಡಿದೆ. ತುಂಬಾ ಹೊತ್ತು ನೋಡಿದೆ. ದಿಟವಾಗಿಯೂ ನನಗೆ ನನ್ನ ಗುರುತೇ ಹತ್ತಲಿಲ್ಲ. ಅಲ್ಲಿ ಕಂಡದ್ದು ಪೂರಾ ತೀರ ಅಪರಿಚಿತನನ್ನೇ. ತಲೆಗೂದಲನ್ನು ಗಿಡ್ಡವಾಗಿ ಕತ್ತರಿಸಲಾಗಿತ್ತು. ಗಡ್ಡವನ್ನು ಬೋಳಿಸಲಾಗಿತ್ತು. ಕನ್ನಡಿಯಲ್ಲಿ ಕಾಣುತ್ತಿದ್ದುದು ಊರಿನಿಂದ ಹೊರಟು ಬಂದ ನಾನೇ ಆಗಿರಲಿಲ್ಲ. ಬೇರೆ ಯಾರೋ ಒಬ್ಬ ವ್ಯಕ್ತಿ! ಕರ್ರಗೆ ತೆಳ್ಳಗೆ ಕೆನ್ನೆಯೆದ್ದು ಕಾಣುವ ಹಲ್ಲುಬ್ಬಿದ ಒಂದು ರೂಪ. ಬೇರೊಂದು ಸಂದರ್ಭದಲ್ಲಾಗಿದ್ದರೆ ಅದು ನಾನೇನೇ ಎಂದು ಯಾರಾದರೂ ಹೇಳಿದ್ದರೆ ನಾನು ಖಂಡಿತ ನಂಬುತ್ತಿರಲಿಲ್ಲ.

ಅಂದು ಕುಸಿದುಬಿದ್ದ ನನ್ನನ್ನು ಕುಂಜಿಕ್ಕಾ ಮತ್ತು ಕೆಲಸಗಾರರು ಸೇರಿ ಆಧರಿಸಿ ಹಿಡಿದು ಹೋಟೆಲ್‌ನೊಳಕ್ಕೆ ಒಯ್ದು ಕೂರಿಸಿ ನೀರು ಮತ್ತು ಆಹಾರವನ್ನು ನೀಡಿದ್ದು, ಅನಂತರ ಅವರ ಕೋಣೆಗೆ ತಲುಪಿಸಿದ್ದು, ’ಬತ’ ಮಾರ್ಕೆಟ್‌ನ ಕುಂಜಿಕ್ಕಾನ ಗೆಳೆಯರ ಬಳಗವೆಲ್ಲ ಸೇರಿ ಆ ದಿನವೂ ಮರುದಿನವೂ ನನಗೆ ಸ್ನಾನ ಮಾಡಿಸಿದ್ದು, ಒಬ್ಬ ಬಾರ್ಬರನ್ನು ಕರೆಯಿಸಿ ತಲೆಗೂದಲು ದಾಡಿ ಎಲ್ಲ ಹೆರೆಸಿದ್ದು , ಡಾಕ್ಟರನ್ನು ಕೋಣೆಗೆ ಕರೆಸಿ ನನ್ನನ್ನು ಪರೀಕ್ಷೆ ಮಾಡಿಸಿದ್ದು, ಔಷಧಗಳನ್ನು ಕೊಟ್ಟದ್ದು ಎಲ್ಲವನ್ನೂ ಕುಂಜಿಕ್ಕಾ ನನಗೆ ವಿವರವಾಗಿ ಹೇಳಿದರು. ಆದರೆ, ನನ್ನ ಅಬೋಧ ಮನಸ್ಸಿನಲ್ಲೂ ಸಹ ಅವುಗಳ ಬಗ್ಗೆ ನನಗೆ ಯಾವುದೇ ಸುಳಿವೂ ಇರಲಿಲ್ಲ.

ಎಲ್ಲದಕ್ಕೂ ಕಣ್ಣೀರಲ್ಲದೆ ಬೇರೇನೂ ಉತ್ತರ ನನ್ನಲ್ಲಿರಲಿಲ್ಲ. ಮರಳಿಕೊಡಲು ಬೇರಾವ ಪ್ರೀತಿಯೂ  ನನ್ನಲ್ಲಿರಲಿಲ್ಲ. ನನಗಿದ್ದುದು ಒಂದೇ ಒಂದು ಸಂಕಟ ಮಾತ್ರ. ನನ್ನ ತಲೆ ಕೂದಲು ಮತ್ತು ಗಡ್ಡಗಳನ್ನು ಬೋಳಿಸಿಬಿಡುವ ಮುನ್ನ ಅವರು ಒಂದು ಫೋಟೋ ತೆಗೆಯಲಿಲ್ಲವಲ್ಲ ಎಂಬುದೇ. ನನ್ನ ಆ ಆದಿಮ ರೂಪದಲ್ಲಿ ನನ್ನನ್ನು ನಾನು ಒಮ್ಮೆಯೂ ನೋಡಿಲ್ಲ. ಇಂದು ಆ ಜೀವನದ ಗುರುತುಗಳನ್ನು ನಿಮಗೆ ತಲುಪಿಸಿ ಕೊಡಬೇಕೆಂದರೆ ನನ್ನ ಅನುಭವಗಳಲ್ಲದೆ, ನನ್ನ ನೆನಪುಗಳಲ್ಲದೆ , ಬೇರಾವ ಪುರಾವೆಯೂ ನನ್ನ ಬಳಿಯಿಲ್ಲ. ಆ ದೇಶಕ್ಕೆ ನಾನು ಹೋಗಿ ತಲುಪಿದ್ದೆ ಎಂದು ರುಜುವಾತು ಪಡಿಸಲು ಇದ್ದ  ನನ್ನ ಪಾಸ್‌ಪೋರ್ಟ್ ಸಹ ಅರ್‌ಬಾಬ್‌ನ ಕೈವಶವಾಗಿಬಿಟ್ಟಿತ್ತಲ್ಲ.... 

ಇವತ್ತು ಎಷ್ಟನೇ ತಾರೀಖು....? ನಾನು ಸುತ್ತ ಕೂಡಿ ನಿಂತವರನ್ನು ಕೇಳಿದೆ.
ಹದಿಮೂರನೇ ತಾರೀಖು.
ಯಾವ ತಿಂಗಳು....? ಅವರ ಮುಖಗಳು ಸುಕ್ಕುಗಟ್ಟಿದವು.
ಆಗಸ್ಟ್.
ಯಾವ ವರ್ಷ....? ಅವರಿಗೆಲ್ಲ ಕಾತರ ಮೂಡಿತು.
ಸಾವಿರದ ಒಂಬೈನೂರ ತೊಂಬತ್ತೈದು.

ರಬ್ಬುಲ್ ಆಲ್ ಅಮೀನ್ ಆದ ತಂಬುರಾನೇ....! ನಾನು ಎದೆಯ ಮೇಲೆ ಕೈಯಿಟ್ಟುಕೊಂಡುಬಿಟ್ಟೆ. ಅನಂತರ  ಮನಸ್ಸಿನಲ್ಲೂ    ಬೆರಳಿನಲ್ಲೂ   ಕಾಲವನ್ನು ಲೆಕ್ಕ ಹಾಕಿದೆ.
ಮೂರು ವರ್ಷ ನಾಲ್ಕು ತಿಂಗಳು ಒಂಬತ್ತು ದಿನಗಳು....! ಕೇಳುತ್ತ ನಿಂತವರು ಸ್ತಬ್ಧರಾಗಿ ಹೋದರು.
ಮತ್ತೂ ಎರಡು ದಿನಗಳು ಕಳೆದ ಮೇಲೆ ನನಗೆ ತುಸು ನಡೆಯಲು ಸಾಧ್ಯ ಎಂದಾದಾಗ ಕುಂಜಿಕ್ಕಾ ನನ್ನನ್ನು ಆ ಕೋಣೆಯಿಂದ ಹೊರಕ್ಕಿಳಿಸಿ ಪಕ್ಕದ ಕೋಣೆಗೆ ಕರೆದೊಯ್ದರು. ಅಲ್ಲಿ ಒಂದು ಟೆಲಿಫೋನ್ ಇತ್ತು. ಕುಂಜಿಕ್ಕಾ ನನ್ನನ್ನು ಅದರ ಮುಂದೆ ಕೂರಿಸಿದ.
ಊರಿಗೆ ಫೋನ್ ಮಾಡೋದು ಬೇಡವೇ....? ಉಮ್ಮನ ಮತ್ತು ಬೀವಿಯ ಧ್ವನಿ ಕೇಳಬೇಡವೇ.

ನಾನು ರೋದಿಸಿದೆ. ನನ್ನ ಮನೆಯಲ್ಲಿ ಫೋನೇ  ಇರಲಿಲ್ಲ. ನಾನು ಪಕ್ಕದ ಮನೆಯೊಂದರ ಫೋನ್ ನಂಬರ್ ಹೇಳಿಕೊಟ್ಟೆ. ಅಷ್ಟು ಕಾಲ ಕಳೆದಿದ್ದರೂ ಒಮ್ಮೆಯೂ ಕರೆ ಮಾಡದ ನಂಬರ್ ನನ್ನ ನೆನಪಿನಲ್ಲಿ ಹೇಗೆ ನಿಚ್ಚಳವಾಗಿ ಬಂದಿತು ಎಂದು ಈಗಲೂ ನನಗೆ ಅಚ್ಚರಿಯೆನಿಸುತ್ತಿದೆ (ಮುಂಬೈಯಿಂದಲೇ ಆ ನಂಬರ್‌ಗೆ ನಾನು ಕೊನೆಯ ಬಾರಿಗೆ ಕರೆ ಮಾಡಿದ್ದು.)

ಬಹಳ ಹೊತ್ತು ಕುಂಜಿಕ್ಕಾ ಆ ಫೋನಿನ ಬಳಿ ಕಳೆದರು. ಊರಿಗೆ ಕನೆಕ್ಷನ್ ಸಿಗುತ್ತಲೇ ಇರಲಿಲ್ಲ.
ಕೊನೆಗೆ ಅಲ್ಲಿ ಬೆಲ್ ಬಾರಿಸಿತು. ಅವರು ನನ್ನ ಕೈಗೆ ಫೋನ್ ಕೊಟ್ಟರು. ನಾನು ಯಾರೆಂದು ಆ ಮನೆಯವರಿಗೆ ಹೇಳಿ ಮನವರಿಕೆ ಮಾಡಿಸಲು ನಾನು ಬಹಳಷ್ಟು ಹೆಣಗ ಬೇಕಾಯಿತು. ನನ್ನ ಗುರುತಾದಾಗ ಸ್ವಲ್ಪ ಹೊತ್ತು ಅವರ ದನಿ ನಿಂತುಹೋಯಿತು. ಓ ನನ್ನ ನಜೀಬ್, ಇಷ್ಟು ಕಾಲ ನೀನು ಎಲ್ಲಿದ್ದೆ....? ಬಳಿಕ ಅವರು ಕೇಳಿದರು.
ನನ್ನಲ್ಲಿ ಉತ್ತರ ಏನೂ ಇರಲಿಲ್ಲ.
ನನ್ನ ಬಗ್ಗೆ ಊರಿನಲ್ಲಿ ಪ್ರಚಾರವಾಗಿರಬಹುದಾದ ಕಥೆಗಳನ್ನು ನಾನು ಕಲ್ಪಿಸಿಕೊಂಡೆ

ಒಂದು ಹದಿನೈದು ನಿಮಿಷ ಬಿಟ್ಟು ಕರೆ ಮಾಡು. ನಾನು ನಿನ್ನ ಹೆಂಡತಿಯನ್ನು ಕರಕೊಂಡು ಬರ್ತೇನೆ. ಅವರು ಹೇಳಿದರು.
ಆ ಹದಿನೈದು ನಿಮಿಷಗಳಿಗೆ ಅದಕ್ಕೆ ಮುಂಚಿನ ಮೂರೂವರೆ ವರ್ಷಗಳಿಗಿಂತಲೂ ಹೆಚ್ಚು ಉದ್ದವಿದ್ದಿತು ಎಂದು ಈಗ ಅನಿಸುತ್ತಿದೆ. ಕಾದೂ ಕಾದೂ ಕೊನೆಗೆ ಕುಂಜಿಕ್ಕಾ ಮತ್ತೆ ಫೋನ್ ಎತ್ತಿ ತಿರುಗಿಸಿದರು.

ಆ ಬಾರಿ ಹೆಚ್ಚು ಕಷ್ಟಪಡಬೇಕಾಗಿ ಬರಲಿಲ್ಲ. ಬೇಗ ಬೆಲ್ ಬಾರಿಸಿತು. ಕುಂಜಿಕ್ಕಾ ನನ್ನ ಕೈಯಲ್ಲಿ ಫೋನ್ ಕೊಟ್ಟರು. ನಾನು ಹಲೋ ಎಂದು ಹೇಳಿದೆನಷ್ಟೇ. ಆ ಕಡೆಯಿಂದ ನನ್ನ ಸೈನುವಿನ ಒಂದು ದೊಡ್ಡ ಅಳು ನನಗೆ ಕೇಳಿ ಬಂತು. ಅನಂತರ ತುಂಬಾ ಹೊತ್ತು ನಾವಿಬ್ಬರೂ ಬರೀ ಅಳುವುದನ್ನಷ್ಟೇ ಮಾಡಿದೆವು. ಅವಳೇನೂ ಕೇಳಲಿಲ್ಲ. ಎಲ್ಲಿದ್ದಿರಿ, ಯಾಕೆ ಇದುವರೆಗೂ ಫೋನ್ ಕರೆ ಮಾಡಲಿಲ್ಲ. ಅಲ್ಲಿ ಕುಳಿತು ಅವಳು ನನ್ನ ಮನಸ್ಸನ್ನು ಓದಿರಬಹುದು.

ಬಹಳ ರೋದಿಸಿದ ಬಳಿಕ ಅವಳು ಹೇಳಿದಳು, ನಮ್ಮ ಮಗ ನಬೀಲ್ ಈ ವರ್ಷದಿಂದ ಬಾಲವಾಡಿಗೆ ಹೋಗುತ್ತಿದ್ದಾನೆ. ಅವನನ್ನು ನೋಡಬೇಡವೇ? ಇಕ್ಕಾ, ಯಾವಾಗ ಬರುತ್ತೀರಿ....? ಇಕ್ಕಾ, ಮತ್ತೆ.. ಮತ್ತೆ.. ನಮ್ಮ ’ಉಮ್ಮ’ ಹೋಗಿಬಿಟ್ಟರು. ಕಳೆದ ವರ್ಷ. ನಿಮ್ಮ ಬಗ್ಗೆ ಏನೂ ಸುದ್ದಿ ತಿಳಿಯದೆ ಎದೆ ತುಂಬ ದುಃಖದ ಭಾರದಿಂದ ನೊಂದು....
ಆಮೇಲೆ ನನಗೆ ಏನನ್ನಾದರೂ ಕೇಳಿಸಿಕೊಳ್ಳಲು ಶಕ್ತಿಯಿರಲಿಲ್ಲ. ನಾನು ಫೋನ್ ಇಟ್ಟೆ. ನಾನು ಮನದಲ್ಲೇ ನೋವಿನಿಂದ ನೊಂದೆ. ಮುಖ ಮುಚ್ಚಿಕೊಂಡು ಅತ್ತೆ. ಕುಂಜಿಕ್ಕಾ ನನ್ನನ್ನು ಸಮಾಧಾನ ಪಡಿಸಿದರು.

ಇಷ್ಟೆಲ್ಲಾ ಸಹಿಸಲಿಲ್ಲವೇ ನಜೀಬ್. ಎಲ್ಲವನ್ನೂ ಕೊಡುವವನು ಪಡಚ್ಚೋನೇ ಎಂದು ತಿಳಿ. ಅದನ್ನು ಪ್ರಶ್ನಿಸಲು ನಮಗೆ ಹಕ್ಕಿಲ್ಲ.

ಕುಂಜಿಕ್ಕಾನ ಪ್ರೀತಿಯನ್ನುಣ್ಣುತ್ತಾ ಮತ್ತೂ ಮೂರು ತಿಂಗಳ ಕಾಲ ನಾನು ಆ ಕೊಣೆಯಲ್ಲಿ ಉಳಿದೆ. ಅಲ್ಲಿರುವಾಗಲೇ ನನ್ನ ಗಾಯಗಳು ಒಣಗಿದವು. ಕಾಲಿನ ಬಾವು ಇಳಿಯಿತು. ನಾನು ನನ್ನ ಆರೋಗ್ಯವನ್ನು ಮರಳಿ ಪಡೆದೆ. ಆ ಮಧ್ಯೆ ಹಲವು ವೇಳೆ ಕುಂಜಿಕ್ಕಾರೊಂದಿಗೂ ಸ್ನೇಹಿತರೊಂದಿಗೂ ನಾನು ನನ್ನ ಕಥೆ ಹೇಳಿದೆ. ಹಲವರು ಅವಿಶ್ವಸನೀಯ ಎಂದು ಹೇಳಿ ಅದನ್ನು ತಳ್ಳಿ ಹಾಕಿದರು. ಕೆಲವರು ಮಾತ್ರ ನನ್ನನ್ನು ನಂಬಿದರು. ನಂಬಿದವರೂ ಕೂಡ ಇಬ್ರಾಹಿಂ ಖಾದರಿಯ ಕಾಣೆಯಾಗುವಿಕೆಯಲ್ಲಿ ಅಪನಂಬಿಕೆ ವ್ಯಕ್ತ ಪಡಿಸಿ ನನ್ನ ಉಳಿದ ಕತೆಗಳನ್ನು ನಂಬಿದರು. ಅವರು ಕೇಳುವುದೂ ಸರಿಯೇ. ನನಗೆ ಅದರ ಬಗ್ಗೆ ಒಂದು ನಿಖರವಾದ ವಿಶದೀಕರಣವನ್ನು ನೀಡಲಾಗುವುದಿಲ್ಲ. ಇಬ್ರಾಹಿಂ ಖಾದರಿ ನನ್ನ ರಕ್ಷಕ. ಮರುಭೂಮಿಯಲ್ಲಿನ ನನ್ನ ವಿಮೋಚಕ. ನನ್ನ ಮೂಸಾ ನಬಿ. ನನ್ನನ್ನು ಪಾರಾಗುವಿಕೆಯ ಹೆಬ್ಬಾಗಿಲ ವರೆಗೆ ತಲುಪಿಸಿಬಿಟ್ಟು ಆತ ಅಪ್ರತ್ಯಕ್ಷವಾಗಿ ಹೋದುದು ಎಲ್ಲಿಗಿರಬಹುದು....? ನಿಮ್ಮ ಹಾಗೆ ನನಗೂ ಅದು ತಿಳಿಯದು.

ನಾನು ಸೌಖ್ಯ ಮರಳಿ ಪಡೆಯುತ್ತ ಬರುತ್ತಿದ್ದ ವೇಳೆಯಲ್ಲೇ ಹಮೀದ್ ಕುಂಜಿಕ್ಕಾರ ಕೋಣೆಗೆ ಆಸರೆ ಬೇಡಿ ಬಂದ. ಒಬ್ಬ ಅರಬ್ಬಿಯ ತೋಟದಲ್ಲಿ ಅವನಿಗೆ ಕೃಷಿ ಕೆಲಸವಿತ್ತು. ರಾತ್ರಿಯ ತನಕ ದುಡಿಮೆಯೂ ತುಂಬಾ ಹೊಡೆತ ಬಡಿತಗಳೂ ಅತ್ಯಲ್ಪ ಮಜೂರಿಯೂ ಅವನಿಗೆ ಸಿಗುತ್ತಿತ್ತು. ತಡೆಯಲಾಗದಾದಾಗಲೆ ಅವನು ಅಲ್ಲಿಂದ ಓಡಿಬಂದು ಬಿಟ್ಟ. ಕೋಣೆಯಲ್ಲಿ ಅವನು ಜೊತೆಯಾಗಿ ದೊರೆತದ್ದು ಎನಗೊಂದು ಆಶ್ವಾಸನವಾಗಿತ್ತು. ಕುಂಜಿಕ್ಕಾ ಮತ್ತು ಕೆಲಸಗಾರರು ಹೋಟೆಲಿಗೆ ಹೋಗಿ ಆದಮೇಲೆ  ಆ ಫ಼್ಲಾಟಿನಲ್ಲಿ ಒಂಟಿಯಾಗಿರುವುದು ಎಂಬ ನನ್ನ ಭಾರೀ ಏಕಾಂಗಿತನ ಆ ರೀತಿಯಲ್ಲಿ ಬದಲಾಯಿತು. ಅದು ನನ್ನ ಜೀವನವನ್ನು ಸಂತೋಷಭರಿತವಾಗಿಸಿತು.

ಆ ತರುವಾಯ ಅಗಣಿತ ದಿನಗಳ ಸಮಾಲೋಚನೆಗಳ ಮತ್ತು ಅನೇಕಾನೇಕ ಜನರ ಸಲಹೆ ಸೂಚನೆಗಳ ಕೊನೆಯಲ್ಲಿಯೇ ಇನ್ನು ಹೆಚ್ಚು ತಡ ಮಾಡದೆ ಪೊಲೀಸರಿಗೆ ಶರಣಾಗಿ ಸಿಕ್ಕಿಬೀಳುವುದು ಎಂದು ನಾವಿಬ್ಬರೂ ನಿರ್ಧರಿಸಿದೆವು. ಆ ರೀತಿಯಾಗಿ ನಾವು ಜೈಲಿಗೆ ಬಂದು ತಲುಪಿದೆವು.

ನಲವತ್ತಮೂರು

ಒಂದೊಂದು ಮುಖಗಳ ಮೂಲಕವೂ ಸಂಚರಿಸಿ ಸಂಚರಿಸಿ ಅರ್‌ಬಾಬ್ ಮುಂದಕ್ಕೆ ನಡೆದು ಬರುತ್ತಿದ್ದಾನೆ! ಆತ ಪ್ರತಿಯೊಂದು ಹೆಜ್ಜೆ ಮುಂದಕ್ಕೆ ಇರಿಸುವಾಗಲೂ ನನ್ನ ಗುಂಡಿಗೆ ಅತಿ ರಭಸದೊಂದಿಗೆ ಬಡಿದುಕೊಳ್ಳುತ್ತಿತ್ತು. ಮತ್ತೆ ಮಸರಕ್ಕೆ ಒಂದು ಮರಳುವಿಕೆ ಎಂಬುದನ್ನು ಕಲ್ಪಿಸಿಕೊಳ್ಳಲೂ ನನ್ನಿಂದಾಗುತ್ತಿರಲಿಲ್ಲ. ಅಲ್ಲಾಹ್. ಮತ್ತೆಯೂ....? ನನ್ನಿಂದಾಗದು....ನನ್ನಲ್ಲಿ ಕರುಣೆ ತೋರಿಸಪ್ಪಾ....ನನ್ನ ಮನಸ್ಸು ಉರಿಯಲ್ಲಿ ಬೆಂದು ರೋದಿಸಿತು. ಆದರೆ ಹಮೀದ್‌ನ ಹಾಗೆ ಅಳಬೇಕೆಂದು ನನಗನ್ನಿಸಲಿಲ್ಲ. ನಾನು ನನ್ನ ಧೈರ್ಯವನ್ನು ಗಟ್ಟಿಯಾಗಿ ಹಿಡಿದು ನಿಂತೆ. ಅದು ಒಂದು ಯುಗದಷ್ಟು ದೀರ್ಘವಾದ ಕಾದುನಿಲ್ಲುವಿಕೆಯಾಗಿತ್ತು ಎಂದು ನನಗೀಗ ತೋಚುತ್ತಿದೆ. ಕೊನೆಯಲ್ಲಿ ಅರ್‌ಬಾಬ್ ನನ್ನ ಮುಂದೆ ತಲುಪಿ ನಿಂತನು. ನನ್ನನ್ನು ದುರುಗುಟ್ಟಿ ನೋಡಿದನು. ಆತನ ಕಣ್ಣುಗಳಲ್ಲಿ ಒಂದು ಮರುಭೂಮಿಯೇ ಅಲೆಬಡಿಯುತ್ತಿರುವುದನ್ನು ನಾನು ಕಂಡೆ. ಅದರ ಭೀಕರತೆ ನನ್ನನ್ನು ಭಯಪಡಿಸಿತು. ಆದರೆ ನಾನು ಮಿಸುಕಾಡಲಿಲ್ಲ. ನಾನು ಯಾವೊಂದು ಪರಿಚಿತಭಾವವನ್ನೂ ಹೊರತೋರಲಿಲ್ಲ. ನನ್ನ ಮುಖದಲ್ಲಿ ಯಾವುದೇ ಪರಿಭ್ರಾಂತಿಯೂ ಮಿಡುಕಾಡಲಿಲ್ಲ. ನನ್ನನ್ನು ಹೊರಕ್ಕೆ ಹಿಡಿದೆಳೆಯುವ ನಿಮಿಷವನ್ನೇ ನಿರೀಕ್ಷಿಸುತ್ತ ನಾನು ಕಾದು ನಿಂತೆ. ಆದರೆ ಬಹಳ ಹೊತ್ತು ನನ್ನ ಮುಖವನ್ನು ನೋಡುತ್ತ ನಿಂತ ಮೇಲೆ ಅರ್‌ಬಾಬ್ ನನ್ನ ಹೆಗಲನ್ನು ಒಮ್ಮೆ ತಟ್ಟಿದ. ಅನಂತರ ನನ್ನ ಗುರುತಿಲ್ಲದವನಂತೆ ಮುಂದಿನ ವ್ಯಕ್ತಿಯತ್ತ ಸರಿದ. ನನನ್ನು ಹಿಡಿಯ ಬೇಕೆಂದು ಬಂದ ಅರ್‌ಬಾಬ್‌ಗೆ ದಿಢೀರನೆ ಹಾಗೊಂದು ಮನಃಪರಿವರ್ತನೆ ಉಂಟಾದುದರ ಹಿಂದೆ ಯಾವುದೇ ಕಾರಣವನ್ನೂ ನನಗೆ ಕಾಣಲಾಗಲಿಲ್ಲ. ಆಶ್ಚರ್ಯ. ಮಹದಾಶ್ಚರ್ಯ. ಹಾಗಲ್ಲದೆ ಬೇರೇನನ್ನು ಹೇಳಲಿ....?

ಆದರೆ ನನ್ನ ಮನಸ್ಸಿನೊಳಕ್ಕೆ ಒಂದೆರಡು ದೊಡ್ಡ ಕೆಂಡದುಂಡೆಗಳನ್ನು ಗೋರಿ ಎಸೆದು ಬಿಟ್ಟೇ ಅಂದು ಅರ್‌ಬಾಬ್ ಮರಳಿದ್ದ.

ಅಂದಿನ ಅರಬ್ಬಿ ಪರೇಡ್ ಮುಗಿದ ಮೇಲೆ ನನಗೆ ಪರಿಚಯವಿರುವ ಒಬ್ಬ ಪೊಲೀಸ್ ಪೇದೆಯೊಂದಿಗೆ ಮಾತನಾಡುತ್ತಾ ಆಗ ಬಂದವನು ನನ್ನ ಅರ್‌ಬಾಬ್‌ನೇ ಎಂದೂ ಆತ ನನ್ನನ್ನು ಕಂಡು ಹಿಡಿಯಲಾಗದೆ ಹೋದದ್ದಕ್ಕೆ ಅಲ್ಲಾಹುವಿನ ಕೃಪೆಯೊಂದೇ ಕಾರಣ ಎಂದೂ ನಾನು ಹೇಳಿದೆ. ಆದರೆ ಪೊಲೀಸ್ ಹೇಳಿದ ಉತ್ತರ ’ ಅವನು ನನ್ನ ’ವೀಸಾ’ದವನಲ್ಲವಾಗಿಬಿಟ್ಟ. ಇಲ್ಲದಿದ್ದಲ್ಲಿ ನಾನವನನ್ನು ಮಸರದ ತನಕ ದರದರ ಎಳೆದೊಯ್ಯುತ್ತಿದ್ದೆ, ಎಂದು ಹೇಳಿಯೇ ಆತ ಹೋಗಿದ್ದು ಎಂದು! ನನಗೆ ಅಚ್ಚರಿಯೆನಿಸಿತು. ಒಂದೋ ಹಿಡಿಯಲೆಂದು ಬಂದ ವ್ಯಕ್ತಿಯನ್ನು ಕಂಡರೂ ಹಿಡಿದುಕೊಂಡು ಹೋಗದೆ ಹಾಗೇ ಹಿಂತಿರುಗುತ್ತಿರುವುದರ ಹೀನಾಯವನ್ನು ಮರೆಸಲು ಒಂದು ಸುಳ್ಳು ಹೇಳಿದ್ದಾನೆ. ಅಲ್ಲದಿದ್ದರೆ ಅರ್‌ಬಾಬ್ ಜ್ವಲಿಸುವ ಒಂದು ಸತ್ಯವನ್ನು ಹೊರಗೆಡಹಿದ್ದಾನೆ. ಹಾಗಿದ್ದರೆ ....

ನಾನು ಆತನ ವೀಸಾದ ಕೆಲಸದಾಳಾಗಿರಲಿಲ್ಲವೇ....? ಬೇರಾರದೋ ವೀಸಾದಲ್ಲಿ ಬಂದ ನನ್ನನ್ನು ಆತ ಅಂದು ಏರ್‌ಪೋರ್ಟ್‌ನಿಂದ ನಿಜವಾಗಿಯೂ ಅಪಹರಿಸಿಕೊಂಡು ಹೋಗಿದ್ದನೇ....?!! ಹಾಗಿದ್ದರೆ ಅಲ್ಲಾಹ್....ಬೇರಾರದೋ  ವಿಧಿಗೆ ನೀನು ನನ್ನನ್ನು ಉದ್ದೇಶಪೂರ್ವಕವಾಗಿ ಕಳಿಸಿಕೊಟ್ಟೆಯಾ....?!!

ಅದನ್ನು ಸಾಧೂಕರಿಸುವ ರೀತಿಯಲ್ಲಿ ಆಮೇಲೆ ಕರುವಾಟ್ಟೂರಿನ ’ಭಾವ’ ಆಣೆ ಹಾಕಿ ಹೇಳಿದ. ನಾನು ಖಂಡಿತ ಆಡು ಮೇಯಿಸೋ ಕೆಲಸದ ವೀಸಾ ಅಲ್ಲ ಕಳಿಸಿಕೊಟ್ಟದ್ದು, ಅದೊಂದು ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಹೆಲ್ಪರ್ ಕೆಲಸದ ವೀಸಾ ಆಗಿತ್ತು ಎಂದು. ಯಾರಿಗೆ ಗೊತ್ತು ಯಾರು ಹೇಳುವುದು ನಿಜವೆಂದು. ಯಾರು ಮಾಡಿದ್ದು ಸರಿಯೆಂದು. ಆ ಕುರಿತು ಹೆಚ್ಚು ಚಿಂತಿಸಿ ತಲೆ ಹುಣ್ಣಾಗಿಸಲು ನಾನು ಹೆಣಗಲಿಲ್ಲ. ಆ ಜೀವನಕ್ಕೆ ನಡೆದು ತಲುಪ ಬೇಕಾದುದು ನನ್ನ ವಿಧಿಯಾಗಿತ್ತು. ನಾನು ಅದನ್ನು ದಾಟಿ ತಪ್ಪಿಸಿಕೊಂಡು ಬಂದು ಬಿಟ್ಟೆ. ನಾನು ಅಂದುಕೊಳ್ಳುವುದು ಅಷ್ಟೇನೆ. ಅದರಿಂದಾಚೆಗೆ ಏನನ್ನಾದರೂ ಇನ್ನು ಚಿಂತಿಸಿದರೆ ಖಂಡಿತವಾಗಿಯೂ ನನಗೆ ಹುಚ್ಚೇ ಹಿಡಿಯುವುದು.        

ಮತ್ತೂ ಮೂರು ವಾರಗಳು ಕಳೆದವು. ಯಾವುದಾದರೂ ಖೋಟಾ ದಾಖಲೆ ತೆಗೆದುಕೊಂಡು ಅರ್‌ಬಾಬ್ ಪುನಃ ನನ್ನನ್ನು ಅರಸಿ ಬರುವನೋ ಎಂಬ ಭಯದಿಂದಲೇ ನಾನು ಅಷ್ಟು ದಿನಗಳನ್ನೂ ಕಳೆದೆ. ಆದರೆ ಅರ್‌ಬಾಬ್ ಮತ್ತೆ ಬರಲಿಲ್ಲ. ಬೇರಾರಾದರೂ ಆತನಿಗೆ ಸಿಕ್ಕಿರಬೇಕು. ಅಲ್ಲಾಹುವಿನ ಪ್ರೀತಿ ಆ ಅಸಹಾಯಕನ ಜೊತೆಗಿರಲಿ.

ವಾಡಿಕೆಯಂತೆ ಒಂದು ಅರಬ್ಬೀ ಪರೇಡ್‌ನ ಮರುದಿನ ಎಂಬೆಸಿ ನೌಕರರು ಬಂದರು. ನಾವುಗಳೆಲ್ಲರೂ ಸಾಲಾಗಿ ನಿಂತೆವು. ಅವರು ಒಬ್ಬೊಬ್ಬರದೇ ಹೆಸರುಗಳನ್ನು ಕರೆಯುತ್ತ ಹೋದರು. ನಾನು ಯಾವುದೇ ಆಸೆ ನಿರೀಕ್ಷೆಗಳಿಲ್ಲದೆ ಅಲಸವಾಗಿ ನಿಂತುಕೊಂಡಿದ್ದೆ. ಫಕ್ಕನೆ ನನ್ನ ಹೆಸರು ಕೇಳಿಸಿದಂತಹ ಒಂದು ಅನಿಸಿಕೆ. ಒಂದು ಕ್ಷಣ ನಾನು ಶಂಕಿಸಿದೆ. ನನ್ನನ್ನೇ ಏನು ಕರೆದದ್ದು....? ನನ್ನ ಭ್ರಮೆಯಿರಬಹುದೇ....? ಅದು ನನ್ನ ಹೆಸರೇ ಹೌದೇ....? ಆದರೆ ಅವರು ಪುನಃ ಕರೆದರು. ನಜೀಬ್ ಮುಹಮ್ಮದ್. ಆಗ ನಾನು ಸ್ಪಷ್ಟವಾಗಿಯೆ ಕೇಳಿಸಿಕೊಂಡೆ. ಅದು ನನ್ನ ಹೆಸರೇನೆ. ಡವಗುಟ್ಟುವ ಹೃದಯದೊಂದಿಗೆ ನಾನು ಮುಂದಕ್ಕೆ ಹೋಗಿ ನಿಂತೆ. ಅದನ್ನು ಕೇಳಿ ನನ್ನ ಜೊತೆಗಿದ್ದವರಿಂದ ಒಂದು ಆಹ್ಲಾದದ ಶಬ್ದ ಆರವ ಹೊರಟಿತು. ಜೈಲುವಾಸದ ವಿಷಯದಲ್ಲಿ ಆ ಗುಂಪಿನಲ್ಲಿ ಅತ್ಯಂತ ’ಸೀನಿಯಾರಿಟಿ’ ಇದ್ದುದು ನನಗೇನೆ.

ಅಂದು ನಮ್ಮಲ್ಲಿ ಎಂಬತ್ತು ಮಂದಿಗೆ ಇಂಡಿಯಾಗೆ ’ ಫ಼್ರೀ ಔಟ್ ಪಾಸ್ ’ ಸಿಕ್ಕಿತು. ಅನಧಿಕೃತ ವಲಸಿಗರನ್ನು ಸರ್ಕಾರಿ ಖರ್ಚಿನಲ್ಲಿ ಸ್ವದೇಶಗಳಿಗೆ ವಿಮಾನ ಹತ್ತಿಸಿ ಕಳಿಸಿಬಿಡುವ ಯೋಜನೆಯ ಭಾಗವಾಗಿತ್ತು ಅದು. ಆದುದರಿಂದ ನನಗಾಗಿ ಟಿಕೆಟ್ ಕೊಳ್ಳುವ ತೊಂದರೆ ’ಕುಂಜಿಕ್ಕಾ’ರಿಗೆ ಉಂಟಾಗಲಿಲ್ಲ. ಕೊಳ್ಳುವ ಅಗತ್ಯ ಬಂದಿದ್ದರೆ ಅದನ್ನೂ ಆತ ಮಾಡುತ್ತಿದ್ದರು ಎಂದು ನನಗೆ ಖಾತರಿಯಿತ್ತು. ಅವರೇ ಕುಂಜಿಕ್ಕಾ.

ಎಂಬೆಸಿ ಉದ್ಯೋಗಿಗಳು ಬಿಡುಗಡೆಯ ಪೇಪರ್‌ಗಳನ್ನು ಸರಿಪಡಿಸುವುದರ ತನಕ ಸಿಕ್ಕಿದ ಸ್ವಲ್ಪ ಸಮಯದಲ್ಲಿ ನಾನು ಜೊತೆಗೆ ಇದ್ದಂಥ ಎಲ್ಲರೊಡನೆಯೂ ವಿದಾಯ ಹೇಳಿದೆ.

ವಾರ್ಡನ್‌ನ ಕೋಣೆಯಲ್ಲಿ ನಮ್ಮಿಂದ ಯಾವಯಾವುದೋ ಕಾಗದಪತ್ರಗಳಲ್ಲಿ ಸಹಿ ಹಾಕಿಸಿದರು. ಬಳಿಕ ನಮ್ಮ ಕೈಗಳಿಗೆ ಕೋಳ ತೊಡಿಸಿದರು. ಅನಂತರ ಒಂದು ಮೂಲೆಗೆ ಕರೆದುಕೊಂಡು ಹೋಗಿ ಎಲ್ಲರನ್ನೂ ಸಾಲಾಗಿ ನಿಲ್ಲಿಸಿದರು. ಮಧ್ಯಾಹ್ನದ ಹೊತ್ತಿಗೆ ಒಂದು ಬಸ್ ಬಂದಿತು. ಆ ಬಸ್ಸು ಸೀದಾ ಹೋದದ್ದು ಏರ್‌ಪೋರ್ಟಿಗೇ. ಅದುವೂ  ಪ್ರತ್ಯೇಕ ಬಾಗಿಲ ಮೂಲಕ ಸೀದಾ ಒಳಗಡೆಗೇ. ಆದುದರಿಂದ ಕುಂಜಿಕ್ಕಾಗೆ ಒಮ್ಮೆ ಫೋನ್ ಮಾಡಿ ಹೇಳಲೂ ಕೂಡ ನನಗೆ ಸಾಧ್ಯವಾಗಲಿಲ್ಲ. ಯಾರಾದರೂ ಹೇಳಿ ಗೊತ್ತಾಗಿರಬಹುದು. ಆದರೂ ಮುಖತಃ ಒಂದು ಕೃತಜ್ಞತಾ ನುಡಿಯನ್ನು ಹೇಳಲಾಗದುದರ ದುಃಖ ನನಗೆ ಈಗಲೂ ಇದೆ. ಜಗತ್ತಿನ ಯಾವುದಾದರೂ ಭಾಗದಲ್ಲಿ ಕುಳಿತು ಅವರು ಇದನ್ನು ಓದುತ್ತಿರುವುದಾದರೆ ಆ ನನ್ನ ಅಪರಾಧವನ್ನು ಮನ್ನಿಸುವರೆಂದು ನಾನು ಆಶಿಸುತ್ತೇನೆ.

ರಾತ್ರಿಯ ವೇಳೆಗೆ ವಿಮಾನ ಬಂದಿತು. ಎಂಬೆಸಿ ನೌಕರರು ಬೋರ್ಡಿಂಗ್ ಪಾಸ್ ವಿತರಣೆ ಮಾಡಿದರು. ನಮ್ಮನ್ನು ಗುಂಪಾಗಿಯೇ ವಿಮಾನದತ್ತ ನಡೆಸಿದರು. ಕೈಕೋಳ ತೊಡಿಸಿರುವ ಎಂಬತ್ತು ಆಡುಗಳನ್ನು ಒಂದು ಮಸರಕ್ಕೆ ಅಟ್ಟಿಸಿಕೊಂಡು ಹೋಗಿ ಸೇರಿಸುತ್ತಿರುವುದಾಗಿಯೇ ನನಗಾಗ ಅನ್ನಿಸಿದ್ದು. ಅವುಗಳಲ್ಲಿ ಒಂದು ಆಡು ನಾನಾಗಿದ್ದೆ! ಆಡುಜೀವನ!!
(ಮುಗಿಯಿತು)

ಆಡುಜೀವನದ ಕುರಿತು ಅನುವಾದಕ ಅಶೋಕ್ ಕುಮಾರ್

ಪುಟದ ಮೊದಲಿಗೆ
 
Votes:  6     Rating: 4.33    
 
 
ಸಂಬಂಧಿಸಿದ ಲೇಖನಗಳು
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’
  ನಕ್ಷತ್ರ ಬರೆದ ಕರುಳ ಸಂಕಟದ ಕವಿತೆ
  ಸುಧಾ ಚಿದಾನಂದಗೌಡ ಸಣ್ಣಕತೆ ‘ಲೇಡಿ ಲಕ್ಕವ್ವ’