‘ಮಾರ್ಕ್ವೆಜ್‌ಗೆ ಇನ್ನು ಮುಂದೆ ಬರೆಯಲಾಗುವುದಿಲ್ಲ, ಅವನು ‘ಡಿಮೆನ್ಷಿಯ’ಎಂಬ ಮರೆವಿನ ಖಾಯಿಲೆಗೆ ತುತ್ತಾಗಿದ್ದಾನೆ, ಹಾಗಾಗಿ ಅವನ ನೆನಪಿನ ಶಕ್ತಿಯೇ ಕುಂದಿ ಹೋಗಿದೆ,’ ಇಂಥದ್ದೊಂದು ಆಘಾತಕರ ಸುದ್ದಿಯನ್ನು ಮಾರ್ಕ್ವೆಜ್‌ನ ಕಿರಿಯ ಸಹೋದರ ಜೇಮ್ ಮಾರ್ಕ್ವೆಜ್ ಹೇಳಿದ್ದೇ ತಡ ಪ್ರಪಂಚದಾದ್ಯಂತ ಸಾಹಿತ್ಯಪ್ರಿಯರು ಹಾಗೂ ಮಾರ್ಕ್ವೆಜ್‌ನ ಅಭಿಮಾನಿಗಳು ದಿಗ್ಬ್ರಮೆಗೊಳಗಾದರು. ಕಳೆದ ಐದಾರು ವರ್ಷಗಳಿಂದ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದ ಹಾಗೂ ಈ ಮುಂಚೆಯೇ ‘ಲಿಂಫ್ಯಾಟಿಕ್ ಕ್ಯಾನ್ಸರ್’ನಿಂದ ನರಳುತ್ತಿದ್ದ ಮಾರ್ಕ್ವೆಜ್‌ನ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಕೆಲವರ ಊಹೆ ಒಂದು ರೀತಿಯಲ್ಲಿ ನಿಜವಾಗಿ ಹೋಯ್ತು. ಕಿಮೋಥೆರಪಿಯಿಂದ ಕ್ಯಾನ್ಸರ್ ರೋಗ ಕೊಂಚ ಮಟ್ಟಿಗೆ ಗುಣವಾಗುತ್ತಾ ಮಾರ್ಕ್ವೆಜ್ ಮುಂಚಿನಂತೆ ಬರೆಯತೊಡಗುತ್ತಾನೆ ಅನ್ನುವಷ್ಟರಲ್ಲಿ ಮರೆವಿನ ಖಾಯಿಲೆ ಅನ್ನುವುದು ಮಾರ್ಕ್ವೆಜ್‌ನನ್ನು ಆವರಿಸಿಕೊಳ್ಳುವ ಮೂಲಕ ಪ್ರಪಂಚ ಕಂಡ ಶ್ರೇಷ್ಠ ಲೇಖಕನೊಬ್ಬನನ್ನು ಬದುಕಿರುವಾಗಲೇ ಕೊಂದು ಬಿಟ್ಟಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ತೆಗೆದುಕೊಂಡ ಮದ್ದುಗಳ ಅಡ್ಡ ಪರಿಣಾಮವಾಗಿ ಮಾರ್ಕ್ವೆಜ್‌ನ ಮೆದುಳಿನ ಮೇಲೆ ಆಗಿರುವುದರಿಂದ ಹೀಗಾಗಿದೆ ಅಂತ ಹೇಳಲಾಗುತ್ತಿದೆ. ಹಾಗಿದ್ದರೂ ಈ ಖಾಯಿಲೆ ಮಾರ್ಕ್ವೆಜ್‌ನ ಕುಲಕ್ಕೆ ವಂಶಪಾರಂಪರಿಕವಾದದ್ದು. ಇವನ ಕಿರಿಯ ಸಹೋದರ ಹಾಗೂ ಇವನ ತಾಯಿಗೂ ಈ ಖಾಯಿಲೆ ಇತ್ತು.
೧೯೮೨ರಲ್ಲಿ ನೊಬೆಲ್ ಬಹುಮಾನ ಪಡೆದ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಲ್ಯಾಟಿನ್ ಅಮೇರಿಕಾದ ಮಹಾನ್ ಪ್ರತಿಭೆ. ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುತ್ತಿದ್ದ ಮಾರ್ಕ್ವೆಜ್ ಇತಿಹಾಸ, ಪುರಾಣ ಹಾಗೂ ವರ್ತಮಾನಗಳನ್ನು ಜೊತೆ ಜೊತೆಗೇ ಬೆಸೆಯುತ್ತಾ ವಿಶಿಷ್ಟ ಲೋಕವೊಂದನ್ನು ಅನಾವರಣಗೊಳಿಸುವ ರೀತಿಗೆ ಓದುಗ ನಿಬ್ಬೆರಗಾಗುತ್ತಾನೆ. ಮೂರು ತಲೆಮಾರುಗಳ ಬದುಕಿನ ಸಕಲ ಪರಿಕರಗಳ ಧ್ಯಾನದೊಂದಿಗೆ ಬಿಚ್ಚಿಕೊಳ್ಳುವ ಮಾರ್ಕ್ವೆಜ್‌ನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಜಾಗತಿಕ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ ಹಾಗೂ ನೊಬೆಲ್ ಬಹುಮಾನವನ್ನು ತಂದುಕೊಟ್ಟ ಕೃತಿ. ಅದೇ ರೀತಿ, ಇದು ಜಗತ್ತಿನ ಸುಮಾರು ಮುವ್ವತ್ತೇಳು ಭಾಷೆಗಳಿಗೆ ಅನುವಾದಗೊಂಡಿರುವ ಹಾಗೂ ಸುಮಾರು ಮುವ್ವತ್ತು ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿರುವ ಕೃತಿ. ‘ಮ್ಯಾಜಿಕಲ್ ರಿಯಲಿಸಂ’ನ ಮಾಂತ್ರಿಕ ಶೈಲಿಯಲ್ಲಿ ಲ್ಯಾಟಿನ್ ಅಮೇರಿಕಾದ ಸಂಕೀರ್ಣ ಅನುಭವಗಳನ್ನು ಕಡೆಯುತ್ತಾ ಹೋಗುವ ಹಾಗೂ ಮಾನವ ಲೋಕದ ವೈವಿಧ್ಯಮಯ ಅನುಭವಗಳ ಅನ್ವೇಷಣೆಯಲ್ಲಿ ನಿರತನಾಗಿದ್ದ ಮಾರ್ಕ್ವೆಜ್ ಮಹಾ ಉತ್ಸಾಹಿ. ಒಂದಷ್ಟು ದಿನ ಪತ್ರಿಕಾ ವರದಿಗಾರನಾಗಿಯೂ ಕೆಲಸ ಮಾಡಿದ್ದ ಮಾರ್ಕ್ವೆಜ್ ಆ ಪತ್ರಿಕಾ ಅನುಭವಗಳನ್ನು ಕೂಡ ಸೃಜನಶಿಲತೆಗೆ ಒಡ್ಡಿಕೊಂಡು ಯಶಸ್ಸನ್ನು ಕಂಡಿದ್ದಂಥ ಲೇಖಕ. ‘ಆಫ್ ಲವ್ ಅಂಡ್ ಅದರ್ ಡೆಮನ್ಸ್’ ಎಂಬ ಕಾದಂಬರಿ ಇದಕ್ಕೆ ಉತ್ತಮ ಉದಾಹರಣೆ.
ಕೆಲವು ದಿನಗಳ ಹಿಂದೆ ಮಾರ್ಕ್ವೆಜ್‌ನ ಸಹೋದರ ತನ್ನ ಅಣ್ಣನ ಆರೋಗ್ಯದ ಗುಟ್ಟನ್ನು ರಟ್ಟು ಮಾಡುವವರೆಗೂ ‘ಲಿವಿಂಗ್ ಟು ಟಡಲ್ ದ ಟೇಲ್,’ ಅನ್ನುವ ಆತ್ಮಕಥೆಯ ಮೂರು ಭಾಗಗಳಲ್ಲಿ ಮೊದಲನೆಯ ಭಾಗವಷ್ಟನ್ನೇ ಪ್ರಕಟಿಸಿದ್ದ ಮಾರ್ಕ್ವೆಜ್, ತಾನು ಕ್ಯಾನ್ಸರ್ ಖಾಯಿಲೆಗೆ ತುತ್ತಾದ ನಂತರ ಉಳಿದೆರಡು ಭಾಗಗಳನ್ನು ಬರೆಯುವುದರಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾನೆ, ಅಂತಲೇ ನಂಬಿತ್ತು ಸಾಹಿತ್ಯ ವಲಯ. ಆದರೆ ಮಾರ್ಕ್ವೆಜ್‌ನ ಸದ್ಯದ ಸ್ಥಿತಿ ಇಂಥ ಸಾಹಿತ್ಯಾಸಕ್ತರ ನಂಬಿಕೆ ಪೂರಾ ಹುಸಿಯಾಗಿಸಿದೆ. ಹಾಗೆ ನೋಡಿದರೆ ಐದು ವರ್ಷಗಳ ಹಿಂದೆ ಪ್ರಕಟವಾದ, ಓದುಗರು ಹಾಗೂ ವಿಮರ್ಶಕರುಗಳಿಂದ ಮಿಶ್ರ ಪ್ರತಿಕ್ರಿಯೆಗೆ ಒಳಗಾದ, ‘ಮೆಮಾಯಿರ‍್ಸ್ ಆಫ್ ಮೈ ಮೆಲಾಂಕಲಿ ವೋರ‍್ಸ್,’ ಮಾರ್ಕ್ವೆಜ್‌ನಿಂದ ಬರೆಸಿಕೊಂಡ ಕಟ್ಟಕಡೆಯ ಕಾದಂಬರಿ. ಅದಾದ ಮೇಲೆ ಅವನು ಮತ್ತೇನನ್ನೂ ಬರೆದಿಲ್ಲ. 
‘ನಾನು ಅಕಸ್ಮಾತ್ತಾಗಿ ಬರೆಯತೊಡಗಿದವನು. ಬಹುಶಃ ನನ್ನ ಪೀಳಿಗೆಗ ಕೂಡಾ ಲೇಖಕರನ್ನ ಸೃಷ್ಟಿಸುವಂಥ ತಾಕತ್ತಿದೆ, ಅನ್ನುವುದನ್ನು ಗೆಳೆಯನೊಬ್ಬನಿಗೆ ಸಾಬೀತು ಮಾಡಿಸುವ ಸಲುವಾಗಿ. ಅದಾದ ಮೇಲೆ ನಾನು ಖುಷಿಗಾಗಿ ಬರೆಯುವ ಬೋನಿಗೆ ಬಿದ್ದೆ. ಆ ನಂತರ ಈ ಲೋಕದಲ್ಲಿ ಬರೆಯುವ ಬದುಕಿಗಿಂತ ನಾನು ಇಷ್ಟಪಡುವ ಸಂಗತಿ ಮತ್ತೊಂದಿಲ್ಲ,’ ಅಂತ ಹೇಳಿಕೊಂಡಿರುವ ಮಾರ್ಕ್ವೆಜ್ ಯಶಸ್ಸು ಹಾಗೂ ಕೀರ್ತಿಯ ವಿಚಾರದಲ್ಲಿ ಬಹುತೇಕ ಲೇಖಕರಿಗಿಂತ ಭಿನ್ನ. ‘ನಾನು ಯಾವೊಬ್ಬ ಲೇಖಕನಿಗೂ ಯಶಸ್ಸನ್ನು ಬಯಸುವುದಿಲ್ಲ. ಅದು ಪರ್ವತದ ತುತ್ತ ತುದಿಯನ್ನು ಹತ್ತುವ ಸಲುವಾಗಿ ಪರ್ವತಾರೋಹಿಯೊಬ್ಬ ಹೆಚ್ಚೂ ಕಡಿಮೆ ತನ್ನು ತಾನು ಕೊಂದು ಕೊಳ್ಳುವಂಥದ್ದು. ಅದೇ ರೀತಿ, ಸಾಹಿತ್ಯಕ ಯಶಸ್ಸಿನ ಪ್ರವೃತ್ತಿ ಇರದವನ ಪುಸ್ತಕಗಳು ಬಿಸಿ ಬಿಸಿ ಕೇಕುಗಳಂತೆ ಖರ್ಚಾಗುವುದೇ ಅವನಿಗೆ ಸಂಭವಿಸಬಹುದಾದಂತ ಅತ್ಯಂತ ಕೆಟ್ಟ ಸಂಗತಿ...’ ಅನ್ನುತ್ತಾನೆ ಮಾರ್ಕ್ವೆಜ್.
ಮಕಾಂಡೋದ ಬಗೆಗಿನ ಹಳೆಯ ನೆನಪುಗಳು ಹಾಗೂ ಏಕಾಂತ ತುಂಬಾ ಪ್ರಭಾವಿಯಾಗಿ ಚಿತ್ರಿಸಲ್ಪಟ್ಟಿರುವ ‘ಲೀಫ್ ಸ್ಟಾರ್ಮ್’ ಮಾರ್ಕ್ವೆಜ್‌ನ ಮೊದಲ ಕಾದಂಬರಿ. ಇದನ್ನು ಅವನು ಬರೆದದ್ದು ತಾನು ಕೆಲಸ ಮಾಡುತ್ತಿದ್ದ ‘ಎಲ್ ಹೆರಾಲ್ಡೋ,’ ಎಂಬ ಪತ್ರಿಕಾ ಕಛೇರಿಯ ನೀರವ ರಾತ್ರಿಗಳಲ್ಲಿ. ಅದು ಲ್ಯಾಟಿನ್ ಅಮೇರಿಕಾದಲ್ಲಿ ಅವನಿಗೆ ನಿಜಕ್ಕೂ ಒಳ್ಳೆಯ ಹೆಸರನ್ನು ತಂದುಕೊಡಬೇಕಿತ್ತು. ಆದರೆ ಅದು ಹೆಸರು ತಂದುಕೊಡುವುದಿರಲಿ ಅದನ್ನು ಪ್ರಕಟಿಸಲು ಯಾವೊಬ್ಬ ಪ್ರಕಾಶಕನೂ ಮುಂದೆ ಬರಲಿಲ್ಲ. ಸಾಲದೆಂಬಂತೆ ಸ್ಪೇನಿನ ಪ್ರಖ್ಯಾತ ವಿಮರ್ಶಕನೊಬ್ಬ ಅದೊಂದು ಕಾದಂಬರಿಯೇ ಅಲ್ಲ, ಮಾಕ್ವೆರ್ಜ್ ಬರವಣಿಗೆಯ ಬದುಕನ್ನು ಅವಲಂಬಿಸುವುದಕ್ಕಿಂತ ಬೇರೊಂದು ಕೆಲಸವನ್ನು ಮಾಡಿದರೇ ಒಳಿತು, ಅನ್ನುವಂಥ ಮಾತುಗಳನ್ನು ಆಡಿದ್ದ. ಆದರೂ ಧೃತಿಗೆಡದ ಮಾರ್ಕ್ವೆಜ್ ಗೆಳೆಯರ ಸಹಾಯದಿಂದ ತಾನೇ ಅದನ್ನು ಪ್ರಕಟಮಾಡುತ್ತಾನೆ. ಆದರೂ ಲ್ಯಾಟಿನ್ ಅಮೇರಿಕ ಹಾಗೂ ಜಗತ್ತಿನ ಸಾಹಿತ್ಯ ವಲಯದಲ್ಲಿ ಮಾರ್ಕ್ವೆಜ್ ತಾನೊಬ್ಬ ಅದ್ಭುತ ಲೇಖಕ ಅನ್ನುವುದನ್ನು ಗುರುತಿಸಿಕೊಳ್ಳಲು ತನ್ನ ಐದನೆಯ ಪುಸ್ತಕ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್,’ ಎಂಬ ಕಾದಂಬರಿಯನ್ನು ಬರೆಯುವವರೆಗೂ ಕಾಯಬೇಕಾಗುತ್ತೆ.
ಮಾರ್ಕ್ವೆಜ್ ಹದಿಮೂರು ವರ್ಷ ವಯಸ್ಸಿನವನಾಗಿದ್ದಾಗ ಅವನನ್ನು ಹುಟ್ಟಿದ ಊರು ಅರಕಾಟಕಾದಿಂದ ಬೊಗಾಟಾ ಎಂಬ ಊರಿಗೆ ಓದುವ ಸಲುವಾಗಿ ಕಳಿಸಲಾಗುತ್ತದೆ. ಕಡಲತಡಿಯಿಂದ ಬಂದ ಈ ಹದಿಮೂರರ ಪೊರನಿಗೆ ಇದ್ದಕ್ಕಿದ್ದಂತೆ ತನ್ನ ಲೊಕಕ್ಕಿಂತ ಭಿನ್ನವಾದ ಲೋಕವೊಂದಕ್ಕೆ ಬದುಕಲು ಬಲವಂತಪಡಿಸುವುದಕ್ಕಿಂತಲೂ ಕಠೋರವಾದದ್ದು ಹಾಗೂ ಗಲಿಬಿಲಿಗೊಳಿಸುವಂಥಾದ್ದು ಬೇರೊಂದಿರಲಿಲ್ಲ. ಶಿಕ್ಷಣದ ನೆಪದಲ್ಲಿ ಇಂಥದ್ದೊಂದು ಶಿಕ್ಷೆಗೊಳಗಾಗಿದ್ದಕ್ಕೆ ಅವನು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆಗ ಅವನನ್ನು ಸಂತೈಸಲು ನೆರವಿಗೆ ಬಂದದ್ದೇ ಓದುವ ಅಭ್ಯಾಸ. ಇದಕ್ಕೆ ಅವನಿಗೆ ಅಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರುಗಳೂ ಸಹಕಾರಿಯಾಗಿದ್ದರು. ಹೀಗೆ ಓದುವಾಗ ಇವನನ್ನು ಕಾದಂಬರಿಯ ಲೊಕಕ್ಕೆ ಆಕರ್ಷಿಸಿದ್ದು ಹಾಗೂ ಕಾದಂಬರಿಕಾರನಾಗುವಂತೆ ಮಾಡಿದ್ದು ಕಾಫ್ಕಾನ ‘ಮೆಟಾಮಾರ್ಫಸಿಸ್‌ಸ್’ ಅನ್ನುವ ಕಾದಂಬರಿ. ಆ ಕಾದಂಬರಿಯ ಮೊದಲ ಸಾಲುಗಳಾದ ‘ಒಂದು ದಿನ ಬೆಳಿಗ್ಗೆ ಗ್ರೆಗೋರ್ ಸಂಸ ಅತಂಕದ ಕನಸುಗಳಿಂದ ಎಚ್ಚರಗೊಂಡಾಗ, ತಾನೊಂದು ದೈತ್ಯ ಕೀಟವಾಗಿ ಪರಿವರ್ತನೆಗೊಂಡು ಬಿಟ್ಟಿರುತ್ತಾನೆ,’ ಅನ್ನುವ ಸಾಲುಗಳನ್ನು ಓದಿ ಮಾರ್ಕ್ವೆಜ್ ನಡುಗುತ್ತಾ ಪುಸ್ತಕವನ್ನು ಮುಚ್ಚಿಟ್ಟು ಬಿಡುತ್ತಾನೆ. ಅದಾದ ಮರುದಿನವೇ ತನ್ನ ಮೊಟ್ಟ ಮೊದಲ ಕಥೆ ಬರೆಯುತ್ತಾನೆ. ಮಾರ್ಕ್ವೆಜ್‌ನ ಮೇಲೆ ಕಾಫ್ಕಾನ ಪ್ರಭಾವ ತುಂಬಾ ಇರುವುದನ್ನು ನಾವು ಅವನ ಬಹಳಷ್ಟು ಕೃತಿಗಳಲ್ಲಿ ಗುರುತಿಸಬಹುದು.
ಹೀಗೆ ಓದುವುದನ್ನು ಬಿಟ್ಟು ತನ್ನ ಮಗ ಬರವಣಿಗೆಯೆಂಬ ಮರೀಚಿಕೆಯ ಬೆನ್ನು ಹತ್ತಿರುವುದು ತಿಳಿಯುತ್ತಿದ್ದಂತೆಯೇ ಮಾಜಿ ಟೆಲಿಗ್ರಾಫ್ ಆಪರೇಟರ್ ಆಗಿದ್ದ ಮಾಕ್ವೆಜ್‌ನ ಅಪ್ಪನಿಗೆ ಇವನು ದಾರಿತಪ್ಪಿದ ಮಗನಂತೆ ಕಾಣತೊಡಗುತ್ತನೆ. ಅದೇ ರೀತಿ,ಅಸ್ತವ್ಯಸ್ತವಾಗಿ ಬಟ್ಟೆತೊಟ್ಟುಕೊಂಡು ಸಿಕ್ಕ ಸಿಕ್ಕ ಪುಸ್ತಕಗಳನ್ನು ಹುಚ್ಚನಂತೆ ಓದುತ್ತಾ ಅಲೆಮಾರಿಯಂತೆ ಅಲೆಯುತ್ತಿದ್ದ ಮಾಕ್ವೆಜ್‌ನನ್ನು ಕಂಡು ಅವನ ಗೆಳೆಯರೂ ಅದೇ ತೀರ್ಮಾನಕ್ಕೆ ಬಂದಿದ್ದರು.
‘ಸಾಮಾನ್ಯವಾಗಿ ಒಬ್ಬ ಲೇಖಕ ಬರೆಯೋದು ಒಂದೇ ಕೃತಿ. ಆದರೆ ಅದು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಬೇರೆ ಬೇರೆ ಸಂಪುಟಗಳಲ್ಲಿ ಕಾಣಿಸಿಕೊಳ್ಳಬಹುದು,’ ಅನ್ನುವ ನಂಬಿಕೆಯಿದ್ದ ಮಾರ್ಕ್ವೆಜ್, ತನಗೆ ತನ್ನ ಬಾಲ್ಯಕಾಲದ ಲೋಕ ಅದರೊಳಗೆ ಬರುವ ಅವನ ಅಜ್ಜ-ಅಜ್ಜಿಯರು ಅವನ ಬರವಣಿಗೆ ನೆರವಾದ ಬಗೆಯನ್ನು ತುಂಬಾ ವಿಶೇಷವಾಗಿ ಸ್ಮರಿಸಿಕೊಳ್ಳುತ್ತಾನೆ. ಮಾರ್ಕ್ವೆಜ್ ಐದು ವರ್ಷದ ಮಗುವಾಗಿದ್ದಾಗ ಅವನ ಅಜ್ಜಿ ಡೋನಾ ಟ್ರ್ಯಾಂಕ್ವಿಲೀನಾ ಮಾರ್ಕ್ವೆಜ್‌ಗೆ ತನ್ನ ಮನೆಯಲ್ಲಿನ್ನೂ ಅಲೆಯುತ್ತಿದ್ದ ಸತ್ತವರ ಕಥೆಗಳನ್ನು ಹೇಳಿ ಇನ್ನಿಲ್ಲದ ಭಯ ಹುಟ್ಟಿಸಿ, ಕುರ್ಚಿಗಂಟಿ ಕೂರುವಂತೆ ಮಾಡಿಬಿಡುತ್ತಿದ್ದಳು. ಆದರೆ ಅಂಥ ಅಜ್ಜಿ ಹೇಳುತ್ತಿದ್ದ ಕಥೆಗಳು ಅವನಿಗೆ ಅನೇಕ ಕೃತಿಗಳ ಮೊದಲ ಸುಳಿವುಗಳನ್ನು ಕೊಟ್ಟಿದ್ದವು. ಅವಳು ಬದುಕುತ್ತಿದ್ದ ಪರಿಸರದ ಪುರಾಣಗಳು, ದಂತಕತೆಗಳು ಹಾಗೂ ನಂಬಿಕೆಗಳು, ಅವಳ ಪ್ರತಿದಿನದ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ಮುಂದೆ ಇವುಗಳನ್ನೆಲ್ಲಾ ತನ್ನ ಬರವಣಿಗೆಯಲ್ಲಿ ಉಪಯೋಗಿಸಿಕೊಳ್ಳುವಾಗ ತಾನು ಹೊಸದೇನನ್ನೂ ಕಂಡುಹಿಡಿಯುತ್ತಿಲ್ಲ, ಅಂತ ಅವನಿಗೆ ಅನಿಸುತ್ತಿತ್ತು. ಅದೇರೀತಿ, ಮಾರ್ಕ್ವೆಜ್‌ನನ್ನು ತುಂಬಾ ನಿಗಾ ಮಾಡುತ್ತಿದ್ದ ಅವನ ಅಜ್ಜ ಅವನನ್ನು ಮನೆಯಿಂದ ಆಚೆ ಕರೆದೊಯ್ಯುತ್ತಾ ಅಲ್ಲಿನ ಲೊಕದೊಳಗಿನ ವಿಸ್ಮಯಗಳಿಗೆ ಮುಗ್ಧ ಮನಸ್ಸು ತುಡಿಯುವುದಕ್ಕೆ ನೆರವಾಗುತ್ತಿದ್ದ. ಪ್ರತೀ ವರ್ಷವೂ ತನ್ನ ಊರಿಗೆ ಬರುತ್ತಿದ್ದ ಸರ್ಕಸ್ಸಿಗೆ ಅವನ ಅಜ್ಜ ಮಾರ್ಕ್ವೆಜ್‌ನನ್ನು ಕರೆದೊಯ್ದು, ಅಲ್ಲಿನ ಜಿಪ್ಸಿಗಳ ಬಗ್ಗೆ, ದೊಂಬರಾಟದ ಕಲಾವಿದರ ಬಗ್ಗೆ ಹಾಗೂ ಸವಾರಿ ಒಂಟೆಗಳ ಬಗ್ಗೆ ಹೇಳುತ್ತಿದ್ದ. ಅಂತ ಒಂದು ಸಂದರ್ಭದಲ್ಲಿ ಅವನ ಅಜ್ಜ ಅವನ್ನು ಹಿಮಗಟ್ಟಿದ್ದ ಮಿಲೆಟ್ ಮೀನುಗಳ ಪೆಟಾರಿಯೊಂದನ್ನು ತೆರೆದು ಅದರೊಳಕ್ಕೆ ಅವನ ಕೈ ಹಿಡಿಸಿದ್ದ. ಮಾರ್ಕ್ವೆಜ್ ಮುಂದೊಂದು ದಿನ ‘ನನ್ನ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಆ ಕ್ಷಣದಲ್ಲಿ ನನ್ನೊಳಗೆ ಮೊಳಕೆಯೊಡೆದಿತ್ತು,’ ಅಂತ ಹೇಳಿಕೊಳ್ಳುತ್ತಾನೆ.
‘ಈ ಲೋಕ ಸಮಾಜವಾದದ ಲೋಕ ಆಗಬೇಕು ಅನ್ನುವ ಆಸೆ ನನ್ನದು. ಒಂದಲ್ಲಾ ಒಂದು ದಿನ ಅದು ಆಗಿಯೇ ಆಗುತ್ತದೆ ಅನ್ನುವ ನಂಬಿಕೆ ನನ್ನದು. ಮನುಕುಲದ ತಕ್ಷಣದ ಭವಿಷ್ಯ ಸಮಾಜವಾದದಲ್ಲಿ ಅಡಗಿದೆ. ಅದೇರೀತಿ, ಕಾದಂಬರಿಗಳು ವಾಸ್ತವದ ಕಾವ್ಯಾತ್ಮಕ ಸ್ಥಳಪಲ್ಲಟವಾಗಿರಬೇಕು.’ ಅನ್ನುವ ಮಾರ್ಕ್ವೆಜ್ ಫಿಡೆಲ್ ಕ್ಯಾಸ್ಟ್ರೋನ ಆತ್ಮೀಯ ಗೆಳೆಯನಾಗಿದ್ದರೂ, ಸೋವಿಯತ್ ಸರ್ಕಾರ ಅಥವಾ ಕಮ್ಯುನಿಸ್ಟ್ ಲೋಕವನ್ನು ಆಳುವ ನಿರುತ್ಸಾಹಿ ಅಧಿಕಾರಿಗಳ ಅಭಿಮಾನಿಯಾಗಿರಲಿಲ್ಲ. ಯೂರೋಪಿನ ಅನೇಕ ಬುದ್ಧಿಜೀವಿಗಳಂತೆ ಸೈದ್ಧಾಂತಿಕ ಹೇಳಿಕೆಗಳನ್ನು ಕೊಟ್ಟವನಲ್ಲ.
‘ಏಕಾಂತ’ ಮಾರ್ಕ್ವೆಜ್‌ನ ಬಹುತೇಕ ಕೃತಿಗಳಲ್ಲಿ ವಿಭಿನ್ನ ನೆಲೆಗಳಲ್ಲಿ ಪ್ರಕಟಗೊಳ್ಳುತ್ತದೆ. ಅದರ ಬೇರುಗಳು ಅವನ ಸ್ವಂತ ಅನುಭವದ ಆಳದಲ್ಲಿ ಅಡಗಿವೆ. ಅರಕಾಟಕದ ಅಜ್ಜ ಅಜ್ಜಿಯರ ಬಲುದೊಡ್ಡ ಮನೆಯಲ್ಲಿ ಪುಟ್ಟ ಒಂಟಿ ಹುಡುಗನಾಗಿ, ಬೊಗಾಟಾ ಟ್ರ್ಯಾಮ್ ಗಾಡಿಯಲ್ಲಿ ಭಾನುವಾರದ ಮಧ್ಯಾಹ್ನದ ದುಃಖಗಳನ್ನು ಕಾವ್ಯದೊಳಗೆ ಮುಳುಗಿಸಿ ಬಿಡುತ್ತಿದ್ದ, ಕೈಯ್ಯಲ್ಲಿ ಬಿಡಿಗಾಸೂ ಇಲ್ಲದ ಹುಡುಗನಾಗಿ ಹಾಗೂ ಬರಾಂಕಿಲ್ಲಾದ ವೇಶ್ಯಾಗೃಹದಲ್ಲಿ ಬದುಕುತ್ತಿದ್ದ ಯುವ ಲೇಖಕನಾಗಿ-ಏಕಾಂತದ ಭಿತಿ ಅವನನ್ನು ಸದಾ ಭೇಟೆಯಾಡಿದೆ. ವಿಶ್ವವಿಖ್ಯಾತ ಲೇಖಕನಾಗಿರುವಂಥ ಈ ಹೊತ್ತಿನಲ್ಲೂ ಅದು ಅವನನ್ನು ಎಲ್ಲೆಡೆಯೂ ಹಿಂಬಾಲಿಸುತ್ತದೆ. ಕರ್ನಲ್ ಅರೇಲಿಯಾನೋ ಬ್ಯುಯೆಂದಿಯಾ ಸೋತ ಮುವ್ವತ್ತೆರಡು ಯುದ್ದಗಳಲ್ಲೂ ಅವನು ಗೆದ್ದಿದ್ದಾನೆ. ಆದರೆ ಯಾವುದನ್ನು ವಿಧಿ ಅಳಿಸಲಾಗದಂತೆ, ಎದ್ದು ಕಾಣುವಂತೆ ಬ್ಯುಯೆಂದಿಯಾಗೆ ಗುರುತು ಮಾಡಿದೆಯೋ, ಅದು ನಿರ್ದಯವಾಗಿ ಮಾರ್ಕ್ವೆಜ್‌ನದು ಕೂಡಾ ಆಗಿದೆ,’ ಅನ್ನುವ ಮಾರ್ಕ್ವೆಜ್‌ನ ಗೆಳೆಯನೊಬ್ಬನ ಮಾತು ಅವನ ಕೃತಿಗಳನ್ನು ಓದಿಕೊಂಡವರಿಗೆ, ಅವುಗಳೊಳಗಿನ ಲೋಕವನ್ನು ಅರಿತವರಿಗೆ ಸರಿ ಅನಿಸದೇ ಇರದು.
ಮಾರ್ಕ್ವೆಜ್‌ನ ಕಾದಂಬರಿ ‘ಒನ್ ಹಂಡ್ರೆಡ್ ಇಯಸ್ ಆಫ್ ಸಾಲಿಟ್ಯೂಡ್,’ ನಡೆಯುವ ಮಕಾಂಡೋ ಅನ್ನುವ ಊರಿನ ಜನರಿಗೆ ಇದ್ದಕ್ಕಿದ್ದಂತೆ ‘ನಿದ್ದೆ ಬಾರದ’ ರೋಗ ಬಂದು ಬಿಡುತ್ತದೆ. ನಂತರ ಅದು ‘ನೆನಪು ಮಾಸಿಬಿಡುವ’ ರೊಗಕ್ಕೆ ತಿರುಗಿ ಬಿಡುತ್ತದೆ. ಆಗ ಅಲ್ಲಿಗೆ ಬರುವ ಮೆಲ್‌ಕಿಯಾದೆಸ್ ಎಂಬ ಜಿಪ್ಸಿ ಮುದುಕ ಈ ಖಾಯಿಲೆಗಳಿಗೆ ತೆಳು ಬಣ್ಣದ ನೀರೊಂದನ್ನು ಕುಡಿಯಲು ಕೊಟ್ಟು ಅಲ್ಲಿನ ಜನರನ್ನು ಆ ರೋಗಗಳಿಂದ ಮುಕ್ತಿಗೊಳಿಸುತ್ತಾನೆ.
ಇಂಥ ಮಾಂತ್ರಿಕ ಸೃಷ್ಟಿಕರ್ತ ಮಾಕ್ವೆಜ್ ಇನ್ನು ಮುಂದೆ ಬರೆಯುವುದಿಲ್ಲ, ಅನ್ನುವುದನ್ನು ನೆನೆದರೇ ಎದೆ ಭಾರವಾಗುತ್ತದೆ. ಆದರೂ ಮರೆವಿಗೆ ಜಾರಿರುವ ಮಾರ್ಕ್ವೆಜ್‌ನನ್ನು ಮುಕ್ತಿಗೊಳಿಸಲು ಕಾದಂಬರಿಯೊಳಗೆ ಅವನೇ ಸೃಷ್ಟಿಸಿದ ಆ ಅದ್ಭುತ ವ್ಯಕ್ತಿ ಮೆಲ್‌ಕಿಯಾದೆಸ್ ನಡೆದು ಬಂದು ಅವನ ಮರೆವಿಗೆ ಮದ್ದುಕೊಡುವಂತಾದರೆ....