ಮೇ ೨೫, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ರಾಮದಾಸ್ ಅಂಕಲ್ ತೊಟ್ಟಿಲಲ್ಲಿ ಕುಳಿತರು:ಪೆಜತ್ತಾಯರ ವಾರದ ಬರಹ    
ಎಸ್.ಎಂ. ಪೆಜತ್ತಾಯ
ಶುಕ್ರವಾರ, 13 ಜುಲೈ 2012 (01:18 IST)

ನಾನು ಉಡುಪಿಯಲ್ಲಿ ಹೈಸ್ಕೂಲ್ ಓದುತ್ತಾ ಇದ್ದಾಗಿನ ಪ್ರಸಂಗ ಇದು. 1958ನೆಯ ಇಸವಿ ಇರಬಹುದು. ಉಡುಪಿಯ ಅಜ್ಜರಕಾಡು ಬಡಾವಣೆಯಲ್ಲಿ ನಮ್ಮ ಮನೆ ಇತ್ತು.
ನಮ್ಮ ನೆರೆಮನೆಯವರಾದ ರಾಮದಾಸ್ ಅಂಕಲ್ ಸ್ಥಳೀಯ ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿದ್ದರು. ಅವರ ಮಕ್ಕಳಾದ ಜಗದೀಶ ಮತ್ತು ಮುಕುಂದ ಎಂಬ ಹುಡುಗರು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಓದುತ್ತಿದ್ದರು. ನಾನು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಓದುತ್ತಾ ಇದ್ದೆ. ನಾವೆಲ್ಲರೂ ಸಂಜೆ ಹೊತ್ತು ಜತೆಯಾಗಿ ಆಟ ಆಡುತ್ತಾ ಇದ್ದೆವು.

ರಾಮದಾಸರದು ಬಹು ಸೌಮ್ಯ ಸ್ವಭಾವ, ಅವರ ಪತ್ನಿ ಪ್ರಭಾ ಆಂಟಿ ಸ್ಥಳೀಯ ಹೆಣ್ಮಕ್ಕಳ ಪ್ರೌಢಶಾಲೆಯೊಂದರಲ್ಲಿ ಸೈನ್ಸ್ ಟೀಚರ್ ಆಗಿದ್ದರು. ಪ್ರಭಾ ಟೀಚರ್ ತನ್ನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಊರ ಮಕ್ಕಳಿಗೆಲ್ಲಾ ಟೀಚರ್! ಊರ ಮಕ್ಕಳಿಗೆಲ್ಲಾ ಬುದ್ಧಿ ಹೇಳುವಷ್ಟು ಜೋರಾಗಿ ಇದ್ದ ಪ್ರಭಾ ಟೀಚರರನ್ನು ಕಂಡರೆ ನಮಗೆಲ್ಲಾ ಭಯ. ಅವರ ಕಣ್ಣಿಗೆ ನಾವು ಕಂಡರೆ ಸಾಕು, ಅವರ ನ್ಯಾಯಯುತವಾದ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಅವರು ಸದಾ ಉರುಡಾಡಿ ಗಾಯ ಮಾಡಿಕೊಳ್ಳುತ್ತಾ ಇದ್ದ ನಮ್ಮಲ್ಲಿ, “ನಿನ್ನ ಮೊಣಕೈಕಾಲಲ್ಲಿ ಯಾವಾಗಲೂ ತರಚಿದ ಗಾಯ ಯಾಕೆ? ನಿನ್ನ ಶರ್ಟು ಯಾಕೆ ಹರಿದಿದೆ? ಯಾರೊಡನೆ ಇಂದು ಕುಸ್ತಿ ಮಾಡಿದಿ?” ಅಂತ ಎಲ್ಲಾ ಅಸಂಗತ ಪ್ರಶ್ನೆಗಳನ್ನು ಕೇಳುತ್ತಾ ಇದ್ದರು. ಅದಕ್ಕಿಂತಲೂ ಸಾಯಂಕಾಲ ನಾಲ್ಕೂವರೆಯಿಂದ ಆರೂವರೆಯ ತನಕ ನಾವು ನಮಗೆ ಇಷ್ಟ ಬಂದ ಆಟಗಳನ್ನು ಅವರ ಮನೆಯ ಪಕ್ಕದಲ್ಲಿ ಆಡಿಕೊಳ್ಳುತ್ತಾ ಅವರ ಕಣ್ಣಿಗೆ ಬೀಳುತ್ತಲೇ ಇದ್ದೆವು. ನಮ್ಮ ಕಿರುಚಾಟ ಗಲಾಟೆ ಜೋರಾದಾಗ ಹೆಸರು ಹಿಡಿದು ಕರೆದು, “ಈ ಸಾರಿ ನಿನಗೆ ಸೈನ್ಸಿನಲ್ಲಿ ಮಾರ್ಕು ಎಷ್ಟು?” ಎಂಬ ಪ್ರಾಣಸಂಕಟ ತರುವ ಪ್ರಶ್ನೆ ಕೇಳುತ್ತಾ ಇದ್ದರು. ನಾವು ಅವರ ಪ್ರಶ್ನೆಗೆ ಐವತ್ತೋ ಅರುವತ್ತೋ ಎಂಬ ಸುಳ್ಳು ಸುಳ್ಳು ಉತ್ತರವನ್ನೇ ಹೇಳುತ್ತಾ ಇದ್ದೆವು. ಅವರಿಗೆ ನಮ್ಮ ಸುಳ್ಳಿನ ಮೇಲೆ ಸ್ವಲ್ಪ ಸಂಶಯ ಬಂದರೂ ಸಾಕು ಸೈನ್ಸಿನ ಒಂದು ಪ್ರಶ್ನೆ ಕೇಳುತ್ತಾ ಇದ್ದರು. ನಾವು `ಬೆ ಬ್ಬೆ ಬ್ಬೆ’ ಅಂತ ಅಂದ ಕೂಡಲೇ, `ನಾಳೆ ಈ ಪ್ರಶ್ನೆಗೆ ಉತ್ತರ ಬರೆದುಕೊಂಡು ಬಾ’ ಎಂದು ಹೇಳುತ್ತಾ, `ಇಂದಿನ ಆಟ ಸಾಕು. ನಾಳೆ ನೀನು ಬರೆದ ಉತ್ತರವನ್ನು ನನಗೆ ತೋರಿಸಿಯೇ ಆಟಕ್ಕೆ ಹೋಗಬೇಕು ತಿಳಿಯಿತೇ?’ ಎಂಬ ಕಟ್ಟಾಜ್ಞೆ ಹೊರಡಿಸುತ್ತಾ ಇದ್ದರು. ಮರುದಿನ ಆ ಪ್ರಶ್ನೆಗೆ ಉತ್ತರ ಬರೆದುಕೊಂಡು ಹೋಗದೇ ಇದ್ದರೆ ಪ್ರಭಾ ಟೀಚರ್ ನಮ್ಮ ಮನೆಗೇ ಬಂದು ದೂರು ಹೇಳುವುದು ಖಂಡಿತಾ!

ಈ ಪ್ರಭಾ ಟೀಚರ್ ಕಾಟದಿಂದ ತಪ್ಪಿಸಿಕೊಳ್ಳಲು ನಾವು ನಮ್ಮ ಆಟದ ಮೈದಾನವನ್ನೇ ಬದಲಾಯಿಸಿದೆವು. ಒಂದೇ ಒಂದು ಫರ್ಲಾಂಗ್ ದೂರ ಇದ್ದ ಬ್ರಹ್ಮಗಿರಿಯ ಆಟದ ಮೈದಾನ ಸೇರಿದೆವು. ಬೇಸಿಗೆಯ ರಜಾ ಸಿಕ್ಕಿತ್ತು. ಬೆಳಗಿನಿಂದ ಸಂಜೆಯವರೆಗೆ ನಮ್ಮ ಆಟ ನಿರಂತರ ಸಾಗಿತ್ತು. ಜಗದೀಶ ಮತ್ತು ಮುಕುಂದರು ಮಾತ್ರ ದಿನವೂ ಸಾಯಂಕಾಲ ನಾಲ್ಕರಿಂದ ಆರರ ತನಕ ಮಾತ್ರ ಕಟ್ಟುನಿಟ್ಟಾಗಿ `ತಾಯಿಯ ಆಜ್ಞಾಪಾಲಕರಾಗಿ’ ಆಟ ಆಡಲು ಬರುತ್ತಿದ್ದರು.

ಪ್ರಭಾ ಟೀಚರ್ ಮನೆಯ ಕಾಂಪೌಂಡಿನಲ್ಲಿದ್ದ ದೊಡ್ಡ ಮಾವಿನ ಮರ ಹುಲುಸಾಗಿ ಹೂ ಬಿಟ್ಟು ತುಂಬಾ ಮಿಡಿಕಚ್ಚಿ ಕಣ್ಣು ಕೋರೈಸುವಂತೆ ನಿಂತಿತ್ತು. ನಮ್ಮ ಊರಿನ ಯಾವ ಹುಡುಗನಿಗೂ ಪ್ರಭಾ ಟೀಚರ್ ಆ ಮಾವಿನ ಮರಕ್ಕೆ ಕಲ್ಲೆಸೆಯುವ ಧೈರ್ಯ ಇರಲಿಲ್ಲ. ಒಂದು ಭಾನುವಾರ ಬೆಳಿಗ್ಗೆ ರಾಮದಾಸ್ ಅಂಕಲ್ ಅವರಿಗೆ, `ನಮ್ಮ ಮರದಿಂದ ಮಾವಿನ ಮಿಡಿ ಕೊಯ್ದು ಕೊಡಿ, ಉಪ್ಪಿನ ಕಾಯಿ ಹಾಕುತ್ತೇನೆ’ ಅಂತ ಪ್ರಭಾ ಟೀಚರ್ ಅಪ್ಪಣೆ ಆಯಿತಂತೆ.            

ಆಗ ರಾಮದಾಸ ಅಂಕಲ್ ತಾನು ಪೇಟೆಯಲ್ಲೇ ಬೆಳೆದವನು ನನಗೆ ಮರಹತ್ತಲು ಬರುವುದಿಲ್ಲ ಅಂತ ಪರಿಪರಿಯಾಗಿ ಕೇಳಿಕೊಂಡರೂ, ಪ್ರಭಾ ಟೀಚರ್ ಜಗ್ಗಲಿಲ್ಲವಂತೆ. ಮಾವಿನ ಮರ ಹತ್ತಿ ಮಿಡಿ ಕೊಯ್ಯುವ ಗುರುವನಿಗೇ ಎರಡು ರೂಪಾಯಿ ಹೆಚ್ಚಿಗೆ ಕೊಟ್ಟು ಕರೆತರುತ್ತೇನೆಂದರೂ ಪ್ರಭಾ ಟೀಚರ್ ಒಪ್ಪಲಿಲ್ಲವಂತೆ.

`ಆ ದುರಹಂಕಾರಿ ಗುರುವನಿಗೆ ಇನ್ನು ನೀವು ಹೋಗಿ ದಮ್ಮಯ್ಯ ಅನ್ನಬೇಡಿ, ಆತ ನಾಳೆ ಬರುತ್ತೇನೆ, ನಾಳೆ ಬರುತ್ತೇನೆ ಅನ್ನುತ್ತಾ ಐದು ದಿನಗಳಿಂದ ನನಗೆ ಕೈ ಕೊಟ್ಟಿದ್ದಾನೆ. ನಿಮಗೆ ಮಾವಿನ ಮಿಡಿ ಕೊಯ್ಯಲು ಯಾಕೆ ಸಾಧ್ಯ ಇಲ್ಲ? ಮಾವಿನ ಮಿಡಿ ಕೊಯ್ಯುವ ಕಲ್ಲಿ ಎಂಬ ಗೋಣಿ ತಾಟು ಲಗತ್ತಿಸಿದ ದೋಟಿಯನ್ನು ಪಕ್ಕದ ಮನೆಯ ಮಾರ್ಟಿಸ್ ಅವರ ಮನೆಯಿಂದ ತಂದು ಇರಿಸಿದ್ದೇನೆ. ಅದನ್ನು ನಾನು ಇಂದು ಸಂಜೆ ಅವರಿಗೆ ಹಿಂತಿರುಗಿ ಕೊಡಲೇಬೇಕು. ನಾನು ಬೋಧಿಸುತ್ತಿರುವ ಸೈನ್ಸ್ ಪ್ರಕಾರ ನೀವೂ ಮನುಷ್ಯ ಗುರುವನೂ ಮನುಷ್ಯ. ಅವನಂತೆಯೇ ನೀವೂ ಮರ ಹತ್ತಿ ಮಾವಿನ ಮಿಡಿ ಕೊಯ್ಯಬಹುದು. ನಿಮಗೇನು ಧಾಡಿ, ಮರ ಹತ್ತಿ ಮಾವಿನ ಮಿಡಿ ಕೊಯ್ದು ಕೊಡಿ’ ಅಂತ ಟೀಚರ್ ಅವರ ಅಪ್ಪಣೆ ಆಯಿತಂತೆ.

ಮೊದಲೇ ವಿಧೇಯ ಪತಿ, ಈ ಆಜ್ಞೆಯನ್ನು ಪಾಲಿಸದೇ ರಾಮದಾಸ್ ಅಂಕಲ್ ಅವರಿಗೆ ಬೇರೆ ವಿಧಿಯೇ ಇರಲಿಲ್ಲ.

ರಾಮದಾಸ್ ಅವರು ತಮ್ಮ ಕಾಂಪೌಂಡಿನ ಗೋಡೆ ಏರಿ ಮಾವಿನ ಮರದ ಕೆಳಗಿನ ಅಡ್ಡ ರೆಂಬೆಗೆ ಏರಿದರು. ಕಲ್ಲಿಯನ್ನು ಪಡೆದು ಅವರ ಕೈಗೆಟಕುವ ಹತ್ತಾರು ಮಾವಿನ ಮಿಡಿ ಕೊಯ್ದು ಕೆಳಗೆ ನಿಂತ ತಮ್ಮ ಮಕ್ಕಳ ಕಡೆಗೆ ಕಲ್ಲಿಯನ್ನು ತಿರುಗಿಸಿ ಕೊಟ್ಟರು. ಟೀಚರಿಗೆ ತನ್ನ ಸೈನ್ಸ್ ಥಿಯರಿಯ ಮೇಲೆ ಅಪಾರವಾದ ವಿಶ್ವಾಸ ಮೂಡಿತು. ಮರದ ಮೇಲಿನ ಕೊಂಬೆ ಹಿಡಿದು ನಿಂತಿದ್ದ ಅವರ ಪತಿರಾಯರು. `ಇನ್ನು ಸಾಕು ಕಣೆ, ಮೇಲೇರಿದರೆ ಕೆಳಗೆ ಇಳಿಯಲಾರೆ’ ಅಂತ ಗೋಗರೆದರು.

`ಇದೇನು ವಿಚಿತ್ರ ಮಾತು ನಿಮ್ಮದು, ಮೇಲೆ ಏರಿದಷ್ಟೇ ಸಲೀಸಾಗಿ ಕೆಳಕ್ಕೆ ಇಳಿಯಬಹುದು. ಕೆಳಗೆ ಇಳಿಯುವಾಗ ನಿಮಗೆ ಗುರುತ್ವಾಕರ್ಷಣ ಶಕ್ತಿಯೂ ಸಹಾಯಕ್ಕೆ ಬರುತ್ತದೆ, ನೀವು ಸ್ಕೂಲಿನಲ್ಲಿ ನ್ಯೂಟನನ ಸಿದ್ಧಾಂತ ಓದಿಲ್ಲವೆ? ಸುಮ್ಮಕ್ಕೆ ಹತ್ತಿರಿ ನೋಡೋಣ ಮೇಲಿನ ರೆಂಬೆಗೆ’ ಅಂತ ಅಪ್ಪಣೆ ಕೊಡಿಸಿದರಂತೆ.

ಹೆದರಿ ಹೆದರಿಕೊಂಡೇ ಮೇಲಿನ ರೆಂಬೆಗೆ ಏರಿದ ರಾಮದಾಸ್ ಅಂಕಲ್ ಅಲ್ಲಿಂದ ತಮಗೆ ಸಿಕ್ಕುವ ಮಾವಿನ ಮಿಡಿಗಳನ್ನು ಕೊಯ್ದು ಕೆಳಗೆ ನಿಂತ ಮಕ್ಕಳಿಗೆ ರವಾನಿಸಿದರು.
`ಇನ್ನೊಂದು ಕೊಂಬೆ ಮೇಲೇರಿ, ಅಲ್ಲಿಂದ ನಿಮಗೆ ದೋಟಿಯಲ್ಲಿ ಮಾವಿನ ಮಿಡಿ ಇಳಿಸಲು ಆಗದು. ನಿಮಗೆ ಒಂದು ಚೀಲ ಹಾಗೂ ದಪ್ಪದ ದಾರ ಒಂದನ್ನು ದೋಟಿಗೆ ಕಟ್ಟಿ ಮೇಲಕ್ಕೆ ರವಾನಿಸುತ್ತೇನೆ. ಅದರಲ್ಲಿ ಮಾವಿನ ಮಿಡಿಗಳನ್ನು ತುಂಬಿಸಿ ಮೆಲ್ಲಗೆ ಕೆಳಗೆ ಕಳುಹಿಸಿ. ಮಾವಿನ ಮಿಡಿಗಳು ನೆಲಕ್ಕೆ ಬಿದ್ದರೆ ಉಪ್ಪಿನ ಕಾಯಿ ಹಾಕಲು ಬರುವುದಿಲ್ಲ. ಆದ್ದರಿಂದ ಬಹು ಜಾಗ್ರತೆಯಾಗಿ ಮಾವಿನ ಮಿಡಿ ಕೆಳಗೆ ಇಳಿಸಿ’ ಎಂಬ ಅಪ್ಪಣೆ ಆಯಿತು. ಸಾಧಾರಣ ಇಪ್ಪತ್ತು ಅಡಿ ಮೇಲೇರಿದ್ದ ರಾಮದಾಸ್ ಅಂಕಲ್‍ಗೆ ಕೆಳಗೆ ನೋಡಲೂ ಭಯ.
`ಇನ್ನು ಸಾಕು ಕಣೆ, ನನ್ನಿಂದ ಮೇಲೆ ಏರಲು ಸಾಧ್ಯವೇ ಇಲ್ಲ’ ಅಂತ ರಾಮದಾಸರು ಕೂಗಿ ಹೇಳಿದಾಗ ಟೀಚರಮ್ಮ ತಮ್ಮ ಬತ್ತಳಿಕೆಯ ಕೊನೆಯ ಅಸ್ತ್ರವನ್ನು ಪ್ರಯೋಗ ಮಾಡಿದರು.

`ನಿಮ್ಮ ಹೆಸರು ರಾಮದಾಸ್, ಅದ್ಯಾಕೆ ನಿಮ್ಮ ಅಪ್ಪ ಅಮ್ಮ ನಿಮಗೆ ಇಷ್ಟು ಒಳ್ಳೆಯ ಹೆಸರಿಟ್ಟರೋ? ಇಂತಹ ಖ್ಯಾತನಾಮರಾದ ನೀವು ನಮ್ಮ ಮಾವಿನ ಮರದ ತುದಿಗೆ ಏರುವುದು ಬೇಡ, ಬರೇ ಮೂವತ್ತು ಅಡಿ ಎತ್ತರಕ್ಕೆ ಏರಬಾರದೇ?’

ತನ್ನ ಸ್ವಾಭಿಮಾನವನ್ನೇ ಕೆಣಕುವ ಈ ಪ್ರಶ್ನೆಯ ಬಿಸಿ ತಾಳಲಾರದೆ, ಕೈಚೀಲ, ದಾರ ಮತ್ತು ತಮ್ಮ ದೋಟಿಯನ್ನು ಹೇಗಾದರೂ ಮೇಲಿನ ರೆಂಬೆಗೆ ಏರಿಸಿ, ರಾಮದಾಸರು ತೃತೀಯ ಅಂತಸ್ತನ್ನು ಏರಿ ತಮ್ಮ ದೋಟಿ ಮತ್ತು ಕೈಚೀಲಗಳನ್ನು ಉಪಯೋಗಿಸಿ ತಮ್ಮ ಮನೆಗೆ ಬೇಕಷ್ಟು ಮಾವಿನ ಮಿಡಿ ಕೊಯ್ದರು.

ಟೀಚರಿಗೆ ಈ ವರ್ಷದ ಮಟ್ಟಿಗೆ ಸಾಕಷ್ಟು ಮಾವಿನ ಮಿಡಿ ಸಂಗ್ರಹ ಆದೊಡನೆ ರಾಮದಾಸರಿಗೆ ಕೆಳಗೆ ಇಳಿದು ಬರಲು ಅಪ್ಪಣೆ ಆಯಿತು.

ರಾಮದಾಸರು ಕಲ್ಲಿಯನ್ನು ನೆಲಕ್ಕೆ ಎಸೆದು ನಿಟ್ಟುಸಿರು ಬಿಟ್ಟರು. ಚೀಲ ನೆಲಮುಟ್ಟಿ ಖಾಲಿಯಾಗಿದ್ದರೂ ಅದಕ್ಕೆ ಕಟ್ಟಿದ ಉದ್ದವಾದ ಹಗ್ಗ ಮರದ ಮೇಲೆಯೇ ಇತ್ತು. ಅದೇ ಅವರ ಅದೃಷ್ಟ ಎನ್ನಬೇಕು.

ರಾಮದಾಸರಿಗೆ ತಮ್ಮ ತೃತೀಯ ಮಜಲಿನ ಎತ್ತರದಿಂದ ಭೂಮಿ ನೋಡುವಾಗ ತಲೆಯೇ ತಿರುಗಿತು. ಯಾವುದೋ ಶೂರತನ ತೋರುವ ಖಯಾಲಿಯಲ್ಲಿ ಮೇಲೇರಿ ಬಿಟ್ಟಿದ್ದರು. ಇಳಿಯುವ ಪರಿಯನ್ನು ಕಾಣದೇ ನಡುಗ ತೊಡಗಿದರು. ಅವರ ಮೈ ಬೆವರಿತು. ಕೆಳಗಿನ ಕೊಂಬೆಗೆ ಕಾಲುನೀಡಿ ಇಳಿದು ಬರಲು ಧೈರ್ಯ ಸಾಲದಾಯಿತು.

ಕೆಳಗಿನಿಂದ ಪ್ರಭಾ ಟೀಚರ್ ಅವರ `ಥಿಯರಿ ಕ್ಲಾಸ್’ ಶುರು ಆಯಿತು.

`ಹೇಗೆ ಏರಿದಿರೋ ಹಾಗೆಯೇ ಇಳಿದು ಬನ್ನಿ. ಮೇಲ್ಗಡೆಯ ಕೊಂಬೆಯನ್ನು ಹಿಡಿದು ಕಾಲುಚಾಚಿ ಇಳಿದುಬನ್ನಿ, ನೀವು ಮೇಲೇರಿದ ವಿಧಾನವನ್ನು ನೆನಪು ಮಾಡಿಕೊಂಡು ರಿವರ್ಸ್ ಡೈರೆಕ್ಷನಿನಲ್ಲಿ ಧೈರ್ಯವಾಗಿ ಇಳಿದು ಬನ್ನಿ, ಕೆಳಗೆ ನೆಲ ನೋಡಬೇಡಿರಿ.. ಕೆಳಗಿನ ರೆಂಬೆಯ ಮೇಲೆ ಮಾತ್ರ ನಿಮ್ಮ ಲಕ್ಷ್ಯ ಇರಲಿ’ ಅಂತ ಪಾಠ ಹೇಳತೊಡಗಿದರು.

ಅಂಕಲ್ ಗಡಗಡ ನಡುಗುತ್ತಾ ತಾವು ಹಿಡಿದಿದ್ದ ಮೇಲಿನ ಕೊಂಬೆಯನ್ನು ಬಿಡದೇ ನಿಂತಿದ್ದರು. ಕೊಂಚ ಸಮಯದ ನಂತರ, `ನನ್ನ ಗಂಟಲು ಒಣಗುತ್ತಾ ಇದೆ, ನನಗೆ ಈ  ಮಾವು ಇಳಿಸುವ ಚೀಲದಲ್ಲಿ ಸ್ವಲ್ಪ ಕುಡಿಯುವ ನೀರು ಕಳಿಸುವೆಯಾ?’ ಅಂದರು.

ಮಾವಿನ ಮಿಡಿಯ ಚೀಲದಲ್ಲಿ ಒಂದು ಬಾಟಲಿ ನೀರು ಅಂತರಿಕ್ಷಕ್ಕೆ ಹೋಯಿತು. ನೀರು ಕುಡಿದ ಅಂಕಲ್ ಪುನಃ ಧೈರ್ಯ ಮಾಡಿ ಕೆಳಗಿಳಿಯಲು ಪ್ರಯತ್ನಿಸಿ ಸೋತರು. ಬಹಳ ಪ್ರಯತ್ನಮಾಡಿ, ಕೊನೆಗೊಮ್ಮೆ ತಾನು ನಿಂತಿದ್ದ ರೆಂಬೆಯಲ್ಲೇ ಕುಳಿತುಕೊಳ್ಳಲು ಸಮರ್ಥರಾದರು. ಟೀಚರು ಎಷ್ಟು ಹೇಳಿದರೂ, ಅಂಕಲ್ ಕೆಳಗೆ ಇಳಿಯುವ ಧೈರ್ಯ ಮಾಡಲಿಲ್ಲ.
ಅಂಕಲ್ ಮೇಲಿನಿಂದ, `ಬೆಳಗ್ಗೆ ತಿಂದ ತಿಂಡಿ ಎಲ್ಲಿ ಹೋಯಿತೋ ಗೊತ್ತಿಲ್ಲ, ತಿನ್ನಲು ಏನಾದರೂ ಸ್ವಲ್ಪ ಮತ್ತು ಕುಡಿಯಲು ಸ್ವಲ್ಪ ಚಾ ಸಿಗಬಹುದೇ?’ ಅಂತ ತನ್ನ ಪತ್ನಿಯನ್ನು ಯಾಚಿಸಿದರು.

ಎಷ್ಟಾದರೂ ನಮ್ಮ ಟೀಚರ್ ಅವರದು ಹೆಣ್ಗರುಳು ಅಲ್ಲವೇ?

ಬೆಳಗ್ಗೆ ಮಾಡಿದ ಇಡ್ಲಿ ಮತ್ತು ಒಂದು ಫ್ಲಾಸ್ಕ್ ಚಾ ಅಂತರಿಕ್ಷಕ್ಕೆ ಏರಿತು.

ಉಪಹಾರದ ನಂತರವೂ ರಾಮದಾಸ್ ಅಂಕಲ್‍ಗೆ ಧೈರ್ಯ ಹೆಚ್ಚಾಗಲಿಲ್ಲ. ಮಾವಿನ ಮಿಡಿ ಇಳಿಸುವ ಚೀಲದಲ್ಲಿ ಫ್ಲಾಸ್ಕ್ ಮತ್ತು ಖಾಲಿ ಬಾಳೆ ಎಲೆ ಕೆಳಕ್ಕೆ ಬಂದುವು. ಆಪತ್ಬಾಂಧವ ಚೀಲಕ್ಕೆ ಕಟ್ಟಿದ ಉದ್ದ ಹಗ್ಗವನ್ನು ತಾವು ಕುಳಿತ ಅಡ್ದ ಗೆಲ್ಲಿಗೆ ಗಟ್ಟಿಯಾಗಿ ಬಿಗಿದು ತಮ್ಮ ಫುಡ್ ಸಪ್ಲೈ ಲೈನನ್ನು ರಾಮದಾಸರು ಕಾಪಾಡಿಕೊಂಡರು. ಎಷ್ಟಾದರೂ ಅವರು ಮುಂಜಾಗ್ರತೆ ವಹಿಸುವ ಬ್ಯಾಂಕ್ ಅಧಿಕಾರಿಯವರಲ್ಲವೇ?

ಅಷ್ಟರಲ್ಲಿ ಪ್ರಭಾ ಟೀಚರ್ ಬತ್ತಿ ಬಸವಳಿದು ಕಣ್ಣೀರು ಸುರಿಸುವ ಸ್ಥಿತಿಗೆ ತಲುಪಿದ್ದರು. ಅಂಕಲ್ ಮರಹತ್ತಿದ್ದು ಒಂಬತ್ತು ಗಂಟೆಗೆ ಈಗ ಗಂಟೆ ಹನ್ನೆರಡು. `ಹುಡುಗ್ರಾ, ಸುಮ್ಮನೆ ಇಲ್ಲಿ ನಿಂತು ನೋಡುತ್ತಾ ಇದ್ದರೆ ಏನೂ ಪ್ರಯೋಜನ ಇಲ್ಲ. ಬೇಗನೆ ನಿಮ್ಮ ಸಂಗಡ ಆಡುವ ದೊಡ್ದ ಹುಡುಗರನ್ನು ಕರೆತನ್ನಿ’ ಅಂತ ಅಧಿಕಾರವಾಗಿಯೇ ನಮ್ಮನ್ನು ಕೇಳಿಕೊಂಡರು.
ಅದು ತನಕ ಮೂಕಪ್ರೇಕ್ಷಕರಾಗಿದ್ದ ನಾವು ಸೈಕಲ್ ಹೊಡೆದುಕೊಂಡು ನಮ್ಮೊಡನೇ ಆಡುವ ಹಿರೇ ಹುಡುಗರನ್ನು ಕರೆತಂದೆವು.

ಅವರೆಲ್ಲಾ ಕೋತಿಗಳಂತೆ ಮರ ಏರಿ ರಾಮದಾಸ್ ಅಂಕಲ್ ಅವರೊಡನೆ ಮಾತನಾಡಿ ಅವರನ್ನು ಕೆಳಗಿಳಿಸುವ ಪ್ರಯತ್ನ ಮಾಡಿದರು. ಆದರೂ, ರಾಮದಾಸ್ ಅಂಕಲ್  ತನ್ನಿಂದ ಕೆಳಗೆ ಇಳಿದು ಬರಲು ಸಾಧ್ಯವೇ ಇಲ್ಲ ಅಂತ ಹೇಳಿದರು.

ನೋಡುತ್ತಿದ್ದಂತೆಯೇ ನಮ್ಮ ರಮೇಶ ಶೆಟ್ಟಿ ಸಲೀಸಾಗಿ ಮರ ಏರಿ ಅಂಕಲ್ ಜತೆ ಕುಳಿತು ಅವರಿಗೆ ಧೈರ್ಯ ಹೇಳಿದ. ಅವರು ಕೆಳಗೆ ಇಳಿಯಲು ಒಪ್ಪದೇ ಇದ್ದಾಗ ಏನಾದರೂ ವ್ಯವಸ್ಥೆ ಮಾಡುವುದಾಗಿ ಧೈರ್ಯಕೊಟ್ಟ.

ನಮ್ಮಲ್ಲಿ ಎಲ್ಲೂ ಇಪ್ಪತ್ತು ಅಡಿಗಿಂತ ಎತ್ತರದ ಏಣಿ ಇರಲಿಲ್ಲ. ರಮೇಶ ಶೆಟ್ಟಿಯ ಮನೆಯ ಅಟ್ಟದಲ್ಲಿ ಆತ ನಾಲ್ಕು ವರ್ಷ ಪ್ರಾಯ ತುಂಬುವವರೆಗೆ ಮಲಗಿದ್ದ ಬಲವಾದ ಹಲಸಿನ ಮರದ ತೊಟ್ಟಿಲು ಇತ್ತು.

ಅಕ್ಕ ಪಕ್ಕದ ಮನೆಗಳ ಬಾವಿಗಳ ಬಲವಾದ ಹಗ್ಗಗಳನ್ನು ತರಲಾಯಿತು. ಹುಡುಗರೆಲ್ಲರೂ ತೊಟ್ಟಿಲಿಗೆ ಹಗ್ಗ ಕಟ್ಟಿ ಅದನ್ನು ಮರದ ಮೇಲೇರಿಸಿದರು. ರಮೇಶ ಶೆಟ್ಟಿ ರಾಮದಾಸ್ ಅಂಕಲ್ ಅನ್ನು `ಅಂಕಲ್, ಈಗ ಈ ತೊಟ್ಟಿಲು ಏರಿ ಕುಳಿತು ಬಿಡಿ’ ಅಂತ ಹೇಳಿದರೆ, ಅವರಿಗೆ ತೊಟ್ಟಿಲೇರಲೂ ಹೆದರಿಕೆ. ರಮೇಶ್ ತಾನೇ ಒಮ್ಮೆ ತೊಟ್ಟಿಲಲ್ಲಿ ನಿಂತು ಕುಣಿದು ಗಟ್ಟಿ ಇದೆ ಎಂದು ಖಾತ್ರಿ ಮಾಡಿದ ನಂತರ ರಾಮದಾಸ್ ಅಂಕಲ್ ರಮೇಶನ ಕೈ ಹಿಡಿದು ನಿಧಾನವಾಗಿ ತೊಟ್ಟಿಲೇರಿ ಕುಳಿತರು. ಹಗ್ಗ ಹಿಡಿದ ಹುಡುಗರು ನಿಧಾನವಾಗಿ ತೊಟ್ಟಿಲನ್ನು ಕೆಳಕ್ಕೆ ಇಳಿಸಿದರು. ನಿಮಿಷಾರ್ಧದಲ್ಲಿ ತೊಟ್ಟಿಲು ನೆಲದಲ್ಲಿ ಬಂದು ಕುಳಿತಿತು. ಪ್ರಭಾ ಟೀಚರ್ ಬಂದು ತನ್ನ ಪತಿರಾಯರಿಗೆ ಕೈನೀಡಿ ತೊಟ್ಟಿಲಿನಿಂದ ಎದ್ದು ಬರಲು ಸಹಕರಿಸಿದರು.
`ಮಕ್ಕಳೇ, ಬಹಳ ಉಪಕಾರ ಆಯಿತಪ್ಪಾ, ನಿಮ್ಮ ಉಪಕಾರ ಹೇಗೆ ತೀರಿಸಲಿ?’ ಎಂದು ಪ್ರಭಾ ಟೀಚರ್ ಕೇಳಿದರು.

ತುಂಟ ರಮೇಶ `ಟೀಚರ್, ತಾವು ಇನ್ನುಮುಂದೆ ನಮಗೆ ವಿಜ್ಞಾನದ ಹೋಮ್ ವರ್ಕ್ ಕೊಡದಿದ್ದರೆ ಸಾಕು’ ಅಂದ.

ಟೀಚರ್ ಸಮೇತವಾಗಿ ಎಲ್ಲರೂ ಘೊಳ್ಳನೆ ನಕ್ಕೆವು.

(ಕೆಂಡಸಂಪಿಗೆಯಲ್ಲಿ ಪೆಜತ್ತಾಯರ ಎಲ್ಲ ಬರಹಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ)

ಪುಟದ ಮೊದಲಿಗೆ
 
Votes:  17     Rating: 4.65    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ