೧೯೭0ರಲ್ಲಿ ನಾನು ಹಿರೇಮನೆ ಹುಚಪ್ಪನವರ ಮಹಾತ್ಮ ಗಾಂಧಿ ಆಶ್ರಮ ಶಾಲೆಗೆ ಭೇಟಿ ಕೊಟ್ಟಾಗ ಅಲ್ಲಿ ಬಸಪ್ಪನಿದ್ದ. ಇವನ ಕೆಲಸವೆಂದರೆ ಮಕ್ಕಳಿಗೆ ನೀರು ಕಾಯಿಸಿ ಕೊಡುವುದು, ಅವರಿಗೆ ಸ್ನಾನ ಮಾಡಿಸುವುದು, ನೋಡಿಕೊಳ್ಳುವುದು ಮಾಡುತ್ತಿದ್ದ. ತುಂಬಾ ಆಕರ್ಷಕವಾದ ವ್ಯಕ್ತಿತ್ವ ಅವನದ್ದು. ಕೊಂಚ ಕುಳ್ಳಗೆ ದಢೂತಿ ಅಲ್ಲದ ವ್ಯಕ್ತಿತ್ವ. ಕುದಿ ಕುದಿ ನೀರನ್ನ ಸ್ನಾನ ಮಾಡುತ್ತಿದ್ದ. ಪುಟುಪುಟು ಹೆಜ್ಜೆ ಹಾಕಿಕೊಂಡು ನಡೆಯುತ್ತಿದ್ದ. ಇವನಿಗೆ ಬೇಟೆಯ ಹುಚ್ಚು. ಆಗೆಲ್ಲ ಕಾಡಿನಲ್ಲಿ ಬೇಟೆ ಆಡಬಾರದು ಅನ್ನುವ ಕಾನೂನು ಬಂದಿರಲಿಲ್ಲ. ಹೀಗಾಗಿ ನವಿಲಕ್ಕಿ ಬೇಟೆ, ಮೊಲದ ಬೇಟೆ, ಜೀಂವಾದಿ(ಹಂದಿ) ಬೇಟೆ ಎಂದೆಲ್ಲ ಈತ ಹಳ್ಳಿ ಜನರನ್ನ ಕಟ್ಟಿಕೊಂಡು ಹೋಗುತ್ತಿದ್ದ.
ಹೀಗೆ ಬೇಟೆಯಾಡಲು ಹೋದಾಗ ಹಂದಿಗೆ ಗುಂಡು ಹೊಡೆದ. ಹಂದಿ ಕಬ್ಬಿನ ಗದ್ದೆಯ ಪಕ್ಕದಲ್ಲಿ ಹೋಗಿ ತಲೆಮರೆಸಿಕೊಂಡಿತು. ಬಸಪ್ಪನಿಗೆ ಮಹಾ ಧೈರ್ಯ. ಸಂಗಡಿಗರು ಬೇಡ ಎಂದರೂ ಈತ ಹೋಗಿ ಹಂದಿಯನ್ನ ಕೆಣಕಿದ. ಹಂದಿ ಇವನ ಮೇಲೆ ಆಕ್ರಮಣ ಮಾಡಿ ಇವನನ್ನ ಎತ್ತಿ ಎಸೆಯಿತು. ಇವನ ಬೆನ್ನು ಎರಡಾಗಿ ಸೀಳಿ ಹೋಯಿತು. ಇವನನ್ನ ಕಂಬಳಿಯಲ್ಲಿ ಮನೆಗೆ ಹೊತ್ತು ತಂದರು. ಬಾಳೆ ಎಲೆಯ ಮೇಲೆ ಮಲಗಿಸಿ ಏನೋ ಗಾಂವಟಿ ಔಷಧಿ ಮಾಡತೊಡಗಿದರು. ನಾನು ಹುಚ್ಚಪ್ಪ ಇವನನ್ನ ನೋಡಲು ಹೋದಾಗ ಈತ ನಮ್ಮನ್ನ ನೋಡಿ ‘ನಂದಾಯ್ತು ದೇವರೇ’ ಎಂದು ಕೈ ಮುಗಿದ. ನಾವು ಕಣ್ಣಂಚಿಗೆ ಬಂದ ನೀರನ್ನ ಒರೆಸಿಕೊಂಡು ಬಂದೆವು.
ಆದರೆ ಬಸಪ್ಪ ಎದ್ದು ಕೂತ. ಮತ್ತೆ ಎಂದಿನಂತೆ ಉತ್ಸಾಹದಿಂದ ನಡೆದು ಕೆಲಸಕ್ಕೆ ಬಂದ. ಈ ಬಸಪ್ಪ ಸೊಗಸಾಗಿ ಹಾಡುತ್ತಿದ್ದ. ತಾನು ಗಾಡಿ ಹೊಡೆದುಕೊಂಡು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಹೋದಾಗ ಅಲ್ಲಿಯ ಜನ ಹೇಳುವ ಹಾಡುಗಳನ್ನ ಕೇಳಿ ಕಲಿತು ಬಂದುದಾಗಿ ಹೇಳುತ್ತಿದ್ದ. ತಾಳ ಹಿಡಿದು ನಿಂತರೆ ಇವನ ಹಾಡುಗಾರಿಕೆ ಯಾರನ್ನೂ ಮರಳು ಮಾಡುವಂತೆ ಇರುತ್ತಿತ್ತು. ನಾನು ಇವನಿಂದ ಎರಡು ಹಾಡುಗಳನ್ನ ಕೇಳಿ ಬರೆದುಕೊಂಡೆ. ಒಂದು ಸೋಮರಾಯ ಭೀಮರಾಯ ಮತ್ತೊಂದು ಜೋಗದ ಕುರಿತ ಹಾಡು. ‘ಜೋಗದ ಗುಂಡಿ ವಿಸ್ತಾರ ಹೇಳತ್ತೇನೆ ಕೇಳಿರಿ ನೀವ್ ಪೂರಾ’ ಅನ್ನುವುದು ಅವನು ಜೋಗದ ಕುರಿತು ಹಾಡುತ್ತಿದ್ದ ಹಾಡು. ಅದಾವಾಗಲೋ ಅಲ್ಲಿಗೆ ಬಂದ ಗವರ‍್ನರ
ದುರುದುಂಬಿ (ದುರ್ಬೀನು) ಹಚ್ಚಿ ಜಲಪಾತವನ್ನ, ಅಲ್ಲಿಯ ಬಣ್ಣಗಳ ಮೆರವಣಿಗೆಯನ್ನ ನೋಡಿ ಸಂತಸ ಪಟ್ಟ ಕತೆ ಅದು. ಕೂಸ್ನೂರು ಹೋಬಳಿಯ ಓರ್ವ ಯುವಕ ಕಟ್ಟಿ ಹಾಡಿದ ಕತೆ ಅನ್ನುವುದನ್ನ ಬಸಪ್ಪನೇ ಹೇಳುತ್ತಿದ್ದ. ಮೂಗೂರು ಮಲ್ಲಪ್ಪನ ನಂತರ ಜೋಗದ ಬಗ್ಗೆ ಬರೆಯಲಾದ ಇನ್ನೊಂದು ಜನಪದ ದನಿಯ ಹಾಡು. ನಾನು ನನ್ನ ‘ಜೋಗ್ ಜಲಪಾತ ಮೊದಲ ನೂರುವರ್ಷ’ ಕೃತಿಯಲ್ಲಿ ಇದನ್ನ ಬಳಸಿಕೊಂಡಿದ್ದೇನೆ. 
ಇನ್ನು ಬಸಪ್ಪ ಹೇಳಿದ ಎರಡನೇ ಹಾಡು ‘ಸೋಮರಾಯ ಭೀಮರಾಯ’.
ಸೋಮರಾಯ ಭೀಮರಾಯ ಜೋಡೀಲಿ ಗೆಳೆಯರು
ಕಂಡರು ಮುಕ್ತಿ ಮಾರ್ಗವನು ಕೇಳಿರಿ ಇದನು'
ಎಂದು ಆರಂಭವಾಗುವ ಹಾಡು. ಸೋಮರಾಯನ ಮನೆತನ ಭೀಮರಾಯಗೆ ಗೊತ್ತಿಲ್ಲದಿರುವುದನ್ನ ಹಾಗು ಭೀಮರಾಯನ ಮನೆತನ ಸೋಮರಾಯನಿಗೆ ಗೊತ್ತಿಲ್ಲದಿರುವುದನ್ನ ಮೊದಲಲ್ಲೇ ಸ್ಪಷ್ಟ ಪಡಿಸುತ್ತದೆ. ಇವರಿಬ್ಬರ ಗೆಳೆತನ ಮಾತ್ರ ನಡೆಯುತ್ತಿದ್ದುದು ಗರಡಿ ಮನೆಯಲ್ಲಿ. ಗರಡಿ ಮನೆಯಲ್ಲಿ ಮಾತ್ರ ಇವರಿಬ್ಬರೂ ಸಮಾನವಾಗಿ ಹೋರಾಡುವ ಅದಕ್ಕಾಗಿಯೇ ಸ್ನೇಹಿತರಾಗಿರುವವರು. ಆಪ್ತರಾಗಿ ಇರುವವರು. ಒಂದು ದಿನ ಭೀಮರಾಯ ಸೋಮರಾಯನ ಊರಿಗೆ ಬರುತ್ತಾನೆ. ಅಚಾನಕ್ ಆಗಿ ಅಂಗಡಿ ಬೀದಿಯಲ್ಲಿ ಎಲೆ ಅಡಕೆಕೊಳ್ಳಲು ಬಂದ ಸೋಮರಾಯನ ಹೆಂಡತಿಯನ್ನ ಭೀಮರಾಯ ನೋಡಿ ಬಿಡುತ್ತಾನೆ. ಆಕೆಯನ್ನ ಈತ ವರ್ಣಿಸುತ್ತಾನೆ ಕೂಡ. ಅವಳ ಚೆಲುವನ್ನ ಕೊಂಡಾಡುತ್ತಾನೆ. ಇವಳು ಯಾರು ಎಂದು ಕೇಳುತ್ತಾನೆ.
‘ಇವಳು ಹೆಂಡತಿ ಅಂತ ಹೇಳಿದರೆ
ಗೆಳೆತನ ಕೆಟ್ಟೋಗತೈತೆ’
ಎಂದು ತಿಳಿದ ಸೋಮರಾಯ ‘ಇವಳು ಸೂಳೆ ಅಂತ ಸುಳ್ಳು’ ಮಾತ ಹೇಳುತ್ತಾನೆ. ಆಗ ಭೀಮರಾಯ ತನಗೆ ಒಂದು ರಾತ್ರಿಯ ಮಟ್ಟಿಗೆ ಇವಳ ಸಹವಾಸ ದೊರಕಿಸಿಕೊಡು ಅನ್ನುತ್ತಾನೆ. ಗೆಳೆಯನ ಮೇಲೆ ಒತ್ತಡ ತರುತ್ತಾನೆ. ಈ ಮಾತನ್ನ ಒಪ್ಪಿಕೊಂಡ ಸೋಮರಾಯ ಮನೆಗೆ ಬಂದು ಹೆಂಡತಿಯನ್ನ ಬಹಳ ಕಷ್ಟಪಟ್ಟು ಒಪ್ಪಿಸುತ್ತಾನೆ.
ಪತೀವೃತಾ ಬಾ ಎಂದು ಕರೆದಾನು
ಕೇಳ್ ನನ್ನ ಗೆಳೆಯಾ ಮನಸ್ಸಿಟ್ಟ ನಿನ್ನೋಳು
ಒಲ್ಲೆ ಎನ್ನಬೇಡ ಸ್ತ್ರೀಯಳೇ ಮಾತು ಕೇಳು
ಭೋಗ ಕೊಡು ಏಳು
ಎಂದು ಹೆಂಡತಿಯನ್ನ ಒಪ್ಪಿಸುತ್ತಾನೆ. ಗರಡಿ ಮನೆಗೆ ಬಂದು ಗೆಳೆಯನನ್ನ ಕರೆದೊಯ್ದು ತನ್ನ ಮನೆಯಲ್ಲಿ ಬಿಟ್ಟು ಗರಡಿ ಮನೆಗೆ ಹಿಂತಿರುಗುತ್ತಾನೆ. ಏನೋ ಆಸೆ ಇರಿಸಿಕೊಂಡು ಬಂದು ಭೀಮರಾಯ ಸೋಮರಾಯನ ಮನೆಯೊಳಗೆ ಬಂದವನೇ ಇದು ಸೂಳೆಯ ಮನೆ ಇದ್ದ ಹಾಗೆ ಇಲ್ಲವಲ್ಲ ಅನ್ನುವ ಚಿಂತೆಗೆ ಒಳಗಾಗುತ್ತಾನೆ. ಆಗ ಆರಿ ಹೋಗುತ್ತಿರುವ ಹಣತೆಯನ್ನ ಸರಿ ಪಡಿಸುವಂತೆ ಸೋಮರಾಯನ ಹೆಂಡತಿಗೆ ಹೇಳಿದವನು ಅವಳು ದೀಪದ ಕುಡಿ ಸರಿಪಡಿಸಿ ತನ್ನ ಕೈಯನ್ನ ಸೀರೆಯ ಸೆರಗಿ ಒರೆಸಿಕೊಳ್ಳುತ್ತಾಳೆ. ಸೂಳೆಯಾಗಿದ್ದಿದ್ದರೆ ಇವಳಲ್ಲಿ ಶೀಲ ಸೂಕ್ಷ್ಮ ಇರುತ್ತಿತ್ತು ಈಕೆ ಸೂಳೆಯಲ್ಲ ಅನ್ನುವುದು ಖಚಿತವಾಗಿ ನೀನು ಯಾರು ನಿಜ ಹೇಳು ಎಂದು ಒತ್ತಾಯ ಮಾಡುತ್ತಾನೆ.
ಯಾವ ತಾಯಿ ಮಗಳು ನೀನು ಯಾವ ಪುರುಷಾನ ಸತಿಯು ನೀನು ಚೂರ ಕೂನ ಇಲ್ಲದಂಗೆ ಹೇಳೆಂದನು ಆಕೆ ಸೂಳೆ ಅಂತ ಸುಳ್ಳೆ ಮಾತ ಹೇಳಿದಳು.
ಆಕೆ ತಾನು ಸೂಳೆಯೇ ಹೌದು ಎಂದಾಗ ಈತ ಮಂಚದ ಮೇಲೆ ಕುಳಿತುಕೊಂಡು ಸುತ್ತ ನೋಡುತ್ತಾನೆ. ಆಗ ಆತನಿಗೆ ಮೇಲೆ ಸಿಕ್ಕಿಸಿ ಇರಿಸಿದ ಖಡ್ಗ ಕಾಣಿಸುತ್ತದೆ. ಅದರ ಮೇಲೆ ಸೋಮರಾಯ ಎಂದು ಬರೆದಿರುತ್ತದೆ.
ಸೋಮರಾಯನ ಮನೆತನವಿದು
ಸೋಮರಾಯನ ಸತಿಯಳೀಕೆ
ಇಂಥ ಕೆಟ್ಟ ಕೆಲಸ ಮಾಡೋವ್ನಲ್ಲ ಎಂದೂ ನಾನು
ಮುಂಜಾಲಿ ಎದ್ದು ಗೆಳೆಯನಿಗೆ ಹೇಂಗೆ ಮಾರಿ ತೋರಲೆಂದನು.
ಇದೇ ವ್ಯಥೆಯಿಂದ ಆತ ಅದೇ ಖಡ್ಗದಿಂದ ತನ್ನ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದನ್ನ ಕಂಡ ಸೋಮರಾಯನ ಹೆಂಡತಿ ತಾನೂ ಕೂಡ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಬೆಳಗಾದಾಗ ಸೋಮರಾಯ ಬರುತ್ತಾನೆ. ಇಲ್ಲಿ ಎರಡು ಹೆಣಗಳು ಬಿದ್ದಿರುತ್ತವೆ. ಅವನಿಗೂ ಹೀಗೆಲ್ಲ ನಡೆಯಿತಲ್ಲ ಎಂದು ಬೇಸರವಾಗುತ್ತದೆ. ಅವನೂ ಗೆಳೆಯನನ್ನ, ಹೆಂಡತಿಯನ್ನ ಹಿಂಬಾಲಿಸುತ್ತಾನೆ.
ಪರಮೇಶ್ವರ ಇವರ ಭಕ್ತಿ ಭಾವ ನೋಡಿ ಮೆಚ್ಚಿ, ಮೂವರಿಗೂ ಮುಕ್ತಿ ಮಾರ್ಗವನ್ನ ಕರುಣಿಸುತ್ತಾನೆ. ‘ಗುಡಿ ಸಂಗಮೇಶ’ ಅನ್ನುವ ಕವಿ ಇದನ್ನ ರಚಿಸಿದ ಅನ್ನುವ ಅಂಶ ಕೂಡ ಹಾಡಿನ ಕೊನೆಯಲ್ಲಿ ನಮಗೆ ದೊರೆಯುತ್ತದೆ. ತುಂಬಾ ಅಪರೂಪದ ಕತೆ. ಭೀಮರಾಯನ ವ್ಯಕ್ತಿತ್ವ, ಕತೆಯಲ್ಲಿ ಬರುವ ಹಲವು ತಿರುವುಗಳು ನನಗೆ ಹಿಡಿಸಿದವು. ನಾನು ಈ ಹಾಡನ್ನ ಕರ್ನಾಟಕ ವಿಶ್ವ ವಿದ್ಯಾಲಯದ ‘ಕರ್ನಾಟಕ ಭಾರತಿ’ ಪತ್ರಿಕೆಗೆ ಕಳುಹಿಸಿದೆ. ಅದು ೧೯೭೨ರ ರಾಜ್ಯೋತ್ಸವ ಸಂಚಿಕೆಯಲ್ಲಿ ಪ್ರಕಟವಾಯಿತು.
ನಂತರದ ದಿನಗಳಲ್ಲಿ ಉತ್ತರ ಕರ್ನಾಟಕದ ಜಾನಪದ ತಜ್ಞರಾದ ಮಿತ್ರ ಡಾ. ಚೆನ್ನಣ್ಣ ವಾಲಿಕಾರ ಇದೇ ಹಾಡನ್ನ ಅವರ ಪ್ರದೇಶದಲ್ಲಿ ಸಂಗ್ರಹಿಸಿ ‘ಸೋಮ ಭೀಮರ ಧಪ್ಪಿನಾಟ’ ಅನ್ನುವ ಒಂದು ನಾಟಕವನ್ನ ಪ್ರಕಟಿಸಿದರು. ಈ ಅವರು ಸಂಗ್ರಹಿಸಿದ ಹಾಡಿನಲ್ಲಿ ಹಣತೆಯ ಪ್ರಕರಣ ಮಾತ್ರ ಇರಲಿಲ್ಲ.
ಪಡವಗೋಡು ಬಸಪ್ಪ ಉತ್ತರ ಕರ್ನಾಟಕಕ್ಕೆ ಹೋದವನು ಈ ಹಾಡನ್ನ ಸಂಗ್ರಹಿಸಿದ್ದ. ಅಲ್ಲದೆ ಪದದ ಧಾಟಿಯಲ್ಲಿ ಹಾಡುವುದನ್ನ ನಾನು ಕೇಳಿದೆ. ಅವರ ಹಾಡಿನ ರೀತಿ ಹಾಗು ಧಾಟಿ ಬೇರೆಯದೇ ಆಗಿತ್ತು.
ಈ ಹಾಡಿನ ನಾಟಕದ ರೂಪ ಬಂದ ನಂತರ ನನಗೂ ಇದನ್ನ ನಾಟಕವನ್ನಾಗಿಸಬಾರದೇಕೆ ಅನಿಸಿತು. ಇದರ ಫಲವಾಗಿ ೨೦೦೫, ಮಾರ್ಚ, ೨೦ರಂದು ‘ಸೋಮರಾಯ ಭೀಮರಾಯ’ ಕಾಗೋಡು ತಿಮ್ಮಪ್ಪ ರಂಗ ಮಂದಿರದಲ್ಲಿ ವೇದಿಕೆಯನ್ನ ಏರಿತು. ಸೂರನ ಗದ್ದೆ ಶ್ರೀ ಬೀರೇಶ್ವರ ಯುವಕ ಸಂಘದ ಯುವಕರು ಈ ಪ್ರಯತ್ನಕ್ಕೆ ಕೈ ಜೋಡಿಸಿದರು. ಭಾಗವತರಾಗಿ ಕಾಗೋಡು ನಾರಾಯಣಪ್ಪ, ಕನ್ನಪ್ಪ, ಹಂಚಿನ ಮನೆ ಬೀರಪ್ಪ ದನಿಗೂಡಿಸಿದರೆ, ನಟರಾಗಿ ಪರಶುರಾಮ, ನಾಗರಾಜ ವಿ.ಆರ್. ಹುಚ್ಚಪ್ಪ, ಎಸ್. ವಿಶ್ವೇಸ್ವರಕು, ಪುಷ್ಪಾ ಮೊದಲಾದವರು ಸಾಥ್ ನೀಡಿದರು. ನಾಟಕವನ್ನ ಪ್ರಖ್ಯಾತ ರಂಗ ನಿರ್ದೇಶಕ ಶ್ರೀ ಸಿ.ಟಿ. ಬ್ರಹ್ಮಾಚಾರ್ ಅವರು ನಿರ್ದೇಶಿಸಿದರು. ನಾಟಕ ಮಲೆನಾಡಿಗೆ ಹೇಳಿ ಮಾಡಿಸಿದ ಕೆಲ ಇಂಪಾದ ದಾಟಿಗಳಿಂದಾಗಿ, ಉತ್ತಮ ಅಭಿನಯದಿಂದಾಗಿ ಕಳೆಗಟ್ಟಿತು. ಈ ವರೆಗೆ ಈ ನಾಟಕ ಹಲವು ಪ್ರಯೋಗಗಳನ್ನ ಕೂಡ ಕಂಡಿದೆ.
ಹಿರೇಮನೆಯ ಆಶ್ರಮ ಶಾಲೆಯ ಒಂದು ಕೊಠಡಿಯಲ್ಲಿ, ಒಂದು ಸಂಜೆ, ಹೊರಗೆಲ್ಲ ಇಬ್ಬನಿ ಬೀಳುತ್ತಿರಲು, ಶಾಲಾ ಕೊಠಡಿಯಲ್ಲಿ ಒಂದು ಲಾಟೀನು ಉರಿಯುತ್ತಿರಲು ಪಡವಗೋಡು ಬಸಪ್ಪ ಹೇಳಿದ ಈ ಹಾಡನ್ನ ನಾನು ಕೇಳಿ ರೋಮಾಂಚನಗೊಂಡಿದ್ದೆ. ನಂತರದ ದಿನಗಳಲ್ಲಿ ಅದನ್ನ ಅವನಿಂದ ಬರೆಸಿಕೊಂಡಿದ್ದೆ.
ಅಂದು ‘ಮಲ್ಲಿಗೆ’ ಪತ್ರಿಕೆ ಜನಪ್ರಿಯವಾಗಿತ್ತು. ಅದಕ್ಕೆ ಈ ಹಾಡನ್ನ ಒಂದು ಕತೆಯಾಗಿಸಿ ನಾನು ಕಳುಹಿಸಿದಾಗ ಇದು ‘ಮಲ್ಲಿಗೆ’ಯಲ್ಲಿ ಪ್ರಕಟವಾಗಿ ಹಲವರ ಗಮನ ಸೆಳೆದಿತ್ತು. ‘ಮಲ್ಲಿಗೆ’ಯಿಂದ ನನಗೆ ಬಂದ ಗೌರವ ಧನ ಕೇವಲ ೧೫ ರುಪಾಯಿ. ಇದಾದ ಕೆಲದಿನಗಳ ನಂತರ ಬಸಪ್ಪನ ಮಗನ ಮದುವೆ. ಮದುವೆಗೆ ಬಂದವರ ತಲೆಗೆ ಪರಿಮಳದ ಎಣ್ಣೆ ಸವರುತ್ತ ಸಂಭ್ರಮದಿಂದ ತಿರುಗಾಡುತ್ತಿದ್ದ ಬಸಪ್ಪನ ಕೈಗೆ ಈ ೧೫ ರುಪಾಯಿಗಳನ್ನ ತಲುಪಿಸಲು ನಾನು ಶತ ಪ್ರಯತ್ನ ಮಾಡಿ ಸೋತಿದ್ದೆ. ‘ಏಯ್ ತೆಗೀರಿ ಸ್ವಾಮಿ, ಇದರಾಗೆ ನಂದೇನೈತೆ’ ಎಂದಿದ್ದ ಆತ.
ಆದರೆ ಒಂದು ಹಳ್ಳಿ ಹಾಡು ಎಷ್ಟೆಲ್ಲ ಜನರ ಹೃದಯವನ್ನ ಮೀಟಿತಲ್ಲ ಅನ್ನುವುದು ನನಗೆ ಅಚ್ಚರಿ ಉಂಟು ಮಾಡಿದ ವಿಷಯ. ಬಹುಶಃ ನಮ್ಮ ಜನಪದದ ಮಹಿಮೆ ಇದೇ ಎಂದು ನಾನು ಅಂದುಕೊಂಡಿದ್ದೇನೆ. ಎಲ್ಲವನ್ನೂ ಕೊಟ್ಟು ಏನನ್ನೂ ಕೊಟ್ಟಿಲ್ಲ ಅನ್ನುವ ಈ ಮನೋಭಾವ ಇದೆಯಲ್ಲ ಅದು ದೊಡ್ಡದು.