‘ಪ್ರತಿ ಕವಿಯು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ;ನಾನೇಕೆ ಬರೆಯಬೇಕು ? ಹೆಸರು ಬರಬೇಕೆಂದೆ ? ಪುಸ್ತಕ ಬಿಡುಗಡೆ ಸಮಾರಂಭ ಆಗಬೇಕೆಂದೇ ?
ಊಹೂಂ... ಕೊನೆಗೂ ಅದು ಬದುಕನ್ನು ಇನ್ನೂ ಆಳವಾಗಿ, ಪ್ರಾಮಾಣಿಕವಾಗಿ, ಕಾವ್ಯ ಎಂಬ ಜ್ಞಾನೇಂದ್ರಿಯದ ಮೂಲಕ ಅನುಭವಿಸುತ್ತಾ, ತಿಳಿಯುತ್ತಾ ಸಾಗುವ ಕಾಲುದಾರಿ ಇದು.’
ಕಾಯ್ಕಿಣಿಯವರು ನನ್ನ ಮೊದಲನೇ ಸಂಗ್ರಹದ ಮುನ್ನುಡಿಯಲ್ಲಿ ಬರೆದ ಮಾತುಗಳು ಇವು.
ನಾನೂ ಅನೇಕ ಬಾರಿ ಇದೇ ಪ್ರಶ್ನೆ ಅಂದರೆ ’ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಯನ್ನು ಎದುರಿಗಿರಿಸಿಕೊಂಡಾಗಲೆಲ್ಲಾ ಪುಟ್ಟ ಇರುವೆಯೊಂದು ದೊಡ್ಡ ಪರ್ವತವೊಂದನ್ನು ಎತ್ತಲು ಪ್ರಯಾಸ ಪಡುವಾಗಿನ ಸ್ಥಿತಿ ನನ್ನದಾಗುತ್ತದೆ. ಈ ರೀತಿಯಾದ ಪ್ರಶ್ನೆಯೊಂದಕ್ಕೆ ಸರಿಯಾಗಿ ಉತ್ತರಿಸಿ ಸಮಾಧಾನ ಪಟ್ಟುಕೊಳ್ಳುವಷ್ಟು ನಾನೇನೂ ಬರೆದಿಲ್ಲ. ಇದೀಗ ತಾನೇ ಆರಂಭ, ಪ್ರಬುದ್ಧ ಉತ್ತರಗಳು ನನ್ನ ’ಆಲೋಚನೆಗೆ ನಿಲುಕದೇ ಇದ್ದರೂ... ಇಷ್ಟಂತೂ ಹೇಳಬಲ್ಲೆ ಬರೆಯಲು ಕೂತ ಕ್ಷಣಗಳಲ್ಲಿ, ನನ್ನದೇ ಆದ ಲೋಕವೊಂದು ಅನಾವರಣಗೊಳ್ಳುತ್ತದೆ. ವಾಸ್ತವಿಕತೆಯ ಯಾವ ಹಂಗಿಗೂ, ಜಂಜಡಗಳಿಗೂ ಸಿಲುಕದೇ ಅಲ್ಲಿನ ನಾನೇ ನಾನಾಗಿ ವಿಹರಿಸುತ್ತೇನೆ. ’ಬರೆಯಬೇಕು’ ಎಂಬ ತುಡಿತವನ್ನು ತಂದಿಡುವ ಆ ಅನಾಮಿಕ ಕ್ಷಣ ನನ್ನನ್ನು ಎಲ್ಲರಿಂದ, ಎಲ್ಲದರಿಂದ, ಎಲ್ಲವೂಗಳಿಂದ ಮುಕ್ತವಾಗಿಸಿ ಸಂಪೂರ್ಣ ತನ್ನೆಡೆಗೆ ಸೆಳೆಯುತ್ತದೆ. ನಾನು ಅವುಗಳ ಎದುರಿನಲ್ಲಿ ನನ್ನನ್ನೇ ಒಡ್ಡಿಕೊಳ್ಳುತ್ತಾ ಸಂಪೂರ್ಣವಾಗಿ ಶರಣಾಗುತ್ತೇನೆ..., ಅಂತಹ ಗಳಿಗೆಗಳು ತೋಳಿನಲ್ಲಿ ಮತ್ತೆ ಮತ್ತೆ ಮೈ ಮರೆಯಬೇಕೆನ್ನಿಸುತ್ತದೆ. ಅದು ನನ್ನ ಪೂರ್ತಿ ಸ್ವಾರ್ಥದ, ನಿಸ್ವಾರ್ಥದ, ಸ್ವಂತದ, ಸ್ವಂತದ್ದಲ್ಲದ ಎಲ್ಲಾ ಅಹಂಗಳ ಬದಿಗಿಟ್ಟು ನೆಮ್ಮದಿಯ ಅರುಸುತ್ತಾ, ಅಲೆಯುತ್ತಾ ಸಿಕ್ಕಷ್ಟು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ, ಮತ್ತಷ್ಟು ಬೇಡುತ್ತಾ ನಡೆಯುವ ಆಪ್ತ ಸಮಯದ ಹಾಗೆ ಹೆಜ್ಜೆ ಇಡುವಾಗಲೆಲ್ಲ ಸಿಕ್ಕು, ಹೆಕ್ಕಿಕೊಂಡ ಸಾಲುಗಳ ಇಲ್ಲಿ ಕಾಣಿಸಿದ್ದೇನೆ.
(೧)
‘ಗ್ರೀನ್ ರೂಮಿನಲ್ಲಿ’
ಬೆರಗುಗಣ್ಣಿನ ಪುಟ್ಟ ಮೊಲಕ್ಕೆ
ಆನೆಗಳ ಕಾಣುವ ತವಕ
ಅವರಿವರ ಕಾಡಿಬೇಡಿ
ಎಲ್ಲರ ಮರೆತು ಹೊಕ್ಕಿಯೇ
ಬಿಟ್ಟಿತು ಗಜಗಳ ಗ್ರೀನ್ ರೂಂ
ಐರಾವತಗಳೆರಡು ಬೀಗುತ್ತಾ ಬಂದವು
ಪುನಃ ಪುನಃ ತಮ್ಮ ಆಭರಣಗಳ
ಸರಿಪಡಿಸಿಕೊಳ್ಳುತ್ತಾ
ತಮ್ಮದೇ ಅಲಂಕಾರವ ತಾವಿಬ್ಬರೇ
ಕನ್ನಡಿಯಲಿ ನೋಡಿ ನೋಡಿ
ನಲಿದವು
ಒಬ್ಬರಿಗೊಬ್ಬರು ತಾವೇ ಹೊಗಳಿಕೊಂಡವು
ಸಮಯ ಕಾದು ಬೆವರತೊಡಗಿತು
ಮದವೇರಿ ಜಿದ್ದಿಗೆ ಬಿದ್ದವು
ಎಡೆಬಿಡದ ಕೆಸರೆರಚಾಟ
ಎದುರುಬದರಾಗಿ ಹಣೆಗೆ ಹಣೆಯ
ಚಚ್ಚಿ ಊಳಿಟ್ಟವು
ಕೋಣೆಯ ಸುತ್ತಲೂ ಗರಗರನೆ
ತಿರುಗಿ ತಿರುಗಿ ಸೆಣೆಸಿದವು
ಸಂಭ್ರಮದಿ ಅವಿತು ಕೂತಿದ್ದ ಶಶದ
ಎದೆಯೊಳಗೆ ಈತ ಭಯದ ಭೂಕಂಪ
ತನಗಾಗಿ ಹಂಬಲಿಸಿ ಕೂತ
ಇನಿಯನ ನೆನಪು ಒತ್ತರಿಸಿ ಬಂದು
ನಿಂತಿತು ಕಣ್ಣಗಾಲಿಗಳೆದುರು
ಚಂಗನೆ ಹಾರಿ
ಹಿಡಿಯಿತು ತನ್ನೂರಿನ ಹಾದಿ ಕ್ಷಣಕ್ಕೂ
ನಿಲ್ಲದೇ...
(೨)
ಕಪ್ಪುಚುಕ್ಕೆ’
ಅಂದೆಂದಿನಿಂದಲೋ ಸಾಲು ಸಾಲು
ಅಕ್ಷರಗಳ ಕಾಲಿನ ಬಳಿ ಕೂತ
ಪೂರ್ಣ ವಿರಾಮದ ಚುಕ್ಕೆಗಳಿಗೊಮ್ಮೆ
ಅರಳಿ ಬೆಳೆದು ಕಾಗದಲೋಕ
ಆಳುವ ಹಂಬಲ
ಒಟ್ಟಾಗಿ ಗುಟ್ಟಾಗಿ ಸಭೆ
ಸೇರಿದವು ತಮ್ಮದೇ ದಂಡು ಕಟ್ಟಿಕೊಂಡು
ದೂರದಾಗಸದ ಮಧುಪರ್ಕವ
ಹೊತ್ತು ತರಲು ಹೊರಟೇಬಿಟ್ಟವು
ಅಂಟಿನಿಂತರು ಒಬ್ಬರ ಅಂಗಿಯ
ತುದಿ ಹಿಡಿದು ಮತ್ತೊಬ್ಬರು
ಮುಗಿಲೆತ್ತರಕೆ ಸರಳರೇಖೆಗಳ
ಚಿತ್ತಾರ
ಮಧುವಿನರಮನೆಯ ಬಾಗಿಲ
ಕೋರೈಸುವ ಮಿಂಚಿಗೆ
ಕಣ್ಣುಗಳು ಮಂಜಾದವು
ರೈಲು, ಹಳಿ ತಪ್ಪಿತು
ಸುಟ್ಟು ಮಸಿಯ ಗುಡ್ಡೆಯಲಿ
ಸಿಲುಕಿಕೊಂಡವು
ಸಿಕ್ಕಿದಲ್ಲಿ ಓಡುತ್ತಾ ಒಬ್ಬರ
ತಲೆಯ ಮೇಲೊಬ್ಬರು ಹತ್ತಿ
ದಾಟಿ ಇಳಿದು ಬಂದು
ಪದಗಳ ಪಾದ ಒರೆಸತೊಡಗಿದವು
(೩)
ರಾಜಕಾರಣ’
ಗಂಟಲು ಆರಿ ಕೂತಿವೆ ಆಳದ
ಬಾವಿಗಳು
ಬಲಿಪೀಠದ ಕುರಿಯಂತೆ
ಸೋಗು ಹಾಕಿ ಭರ್ತಿ ತುಂಬಿದ
ಒಡಲ ಹೀರಿ ಹೀರಿ ತೇಗಿದ ನರಿಗಳು
ಇದೀಗ ಹುಲಿಯ ತೊಗಲು ತೊಟ್ಟು
ಹನಿ ಜಲವು ಎಲ್ಲಿಯೂ
ಒಸರದಂತೆ ಗಸ್ತು ತಿರುಗುತ್ತಿವೆ.
(೪)
ಧರ್ಮ’
ಆರಾಮ ಕುರ್ಚಿಯಲಿ ಶಿಸ್ತು
ಕೂತಿದ್ದಾನೆ ಪೋರ
ಮಾತಿಲ್ಲ ಕಥೆಯಿಲ್ಲ ಗಜ ಗಾಂಭೀರ‍್ಯ
ಚಂದದ ಮುಖದಲ್ಲಿ ಹುಡುಕಿದರೆ
ನಗುವಿನ ಸೆಲೆಯೂ ಇಲ್ಲ
ಗರಿಗರಿ ಸಮವಸ್ತ್ರ ನಳನಳಿಸುವ
ಪಾದರಕ್ಷೆಗೆ ದಿಟ್ಟಿ
ತಾಕುವಂತಿದೆ
ಕಲೆಯಿಲ್ಲ ಕೊಳೆಯಿಲ್ಲ
ಯಾರೋ ಈಗಷ್ಟೇ ಅಣಿ ಮಾಡಿದಂತಿದೆ
ಅಂಗಿಯ ಮೇಲೊಂದು ಸುಕ್ಕು
ಕಂಡರೂ ಮನೆಯವರೆಲ್ಲಾ
ಗಾಬರಿ ಬಿದ್ದು ತೀಡತೊಡಗುತ್ತಾರೆ
ಕೆಟ್ಟ ಕನಸ ಕಂಡವರ ಹಾಗೆ
ಕಿಟಾರನೆ
ಕಿರುಚಿ ಓಡುತ್ತಾರೆ
ಕಾಲ ಧೂಳಿಗೆ ಸಣ್ಣ
ಬಿಂದಿ ಅಂಟಿದರೂ...
ಪದೇ ಪದೇ ಅವನ ಮುಂಗುರುಳು
ಕೆನ್ನೆ ಹಣೆ ಗಲ್ಲವ ಅಷ್ಟದ್ರವ್ಯಗಳಿಂದ
ಒರೆಸುತ್ತಲೇ ಇರುತ್ತಾರೆ
ಅವನೆಂದೂ ಕೆಳಗಿಳಿದು ನಡೆದು
ಕಳೆಗುಂದದ ಹಾಗೆ ಹಾಸಿ
ಇಟ್ಟಿದ್ದಾರೆ ಕೋಮಲ ಹೂ
ಪಕಳೆಗಳ.
(೫)
ಶೂನ್ಯದಿಂದ’
ಬಿಳಿಯ ಖಾಲಿ ಹಾಳೆ
ಶಾಹಿ ತುಂಬಿದ ಲೇಖನಿಯೊಮ್ಮೆ
ಮುಖಾಮುಖಿಯಾದವು
ಮೊದಲ ನೋಟದಲ್ಲಿ ಒಲವ ಅಂಕುರ
ಕಣ್ಣಲ್ಲಿ ಕಣ್ಣಿಟ್ಟು
ಕೈಗೆ ಕೈ ಹೊಸೆದವು
ಅದರಕ್ಕದರ ಬೆಸೆದು
ಜೇನ ಹೊಳೆ
ಸ್ವರ್ಶ ಚಿತ್ತಾರದಿ ಕಳೆದೇಹೋದವು
ಇಬ್ಬರೂ ಮತ್ತೊಬ್ಬರಾಗುತ್ತಲೇ
ಒಬ್ಬರಾದವು
ಉಕ್ಕಿ ಮೊರೆಯಿತು ಸಾಗರ
ತಬ್ಬಿ ನಲಿಯಿತು ಭುವಿ
ಬೆವೆತು ಬಣ್ಣವಾದವು
ಹುಟ್ಟಿತು ಕವಿತೆ
(೬)
ಮೊರೆತ'
ಅಂದೆಂದೋ ಅವಳ ಕೈಯಲ್ಲಿದ್ದ
ಬಾವಿಯ ನೀರು ತುಂಬಿಕೊಂಡಿದ್ದ
ಪುಟ್ಟ ಬಾಟಲಿಯೊಂದು
ಅಣಕಿಸಿ ಹೋಗಿದ್ದಕ್ಕೆ
ಈಗಲೂ ಬಿಕ್ಕಿ ಬಿಕ್ಕಿ
ರೋದಿಸುತ್ತಿದೆ
ಅಗಾಧ ಕಡಲು.