ಮಾಜಿ ಕೇಂದ್ರ ಮಂತ್ರಿ, ಲೋಕಸಭಾ ಸದಸ್ಯ ಅನಂತಕುಮಾರ್ ಹುಟ್ಟಿ ಬೆಳೆದದ್ದು ಹುಬ್ಬಳ್ಳಿಯಲ್ಲಿ. ಈಗತಾನೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಜಗದೀಶ್ ಶೆಟ್ಟರ್ ಹುಟ್ಟಿ ಬೆಳೆದದ್ದು ಕೂಡ ಹುಬ್ಬಳ್ಳಿಯಲ್ಲಿಯೇ. ಸದ್ಯದ ಬಿಜೆಪಿಯ ರಾಜಕೀಯ ಬೆಳವಣಿಗೆಗಳಲ್ಲಿ ಈ ‘ಹುಬ್ಬಳ್ಳಿ ಕನೆಕ್ಷನ್’ ಕೆಲವರನ್ನು ಕಂಗೆಡಿಸಿದೆ. ಚಿತ್ರವಿಚಿತ್ರ ಸುದ್ದಿಗಳಿಗೆ ಕಾರಣವಾಗಿದೆ. ರಾಜಕೀಯ ಪಂಡಿತರ, ವಿಶ್ಲೇಷಕರ ನಡುವೆ ಬಹುಚರ್ಚಿತ ವಿಷಯವಾಗಿದೆ.
ಏನು ಆ ಹುಬ್ಬಳ್ಳಿ ಕನೆಕ್ಷನ್?
ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಒನ್ ಪಾಯಿಂಟ್ ಪ್ರೋಗ್ರಾಂ ಆಗಿತ್ತು. ಹಾಗೆಯೇ ತಮ್ಮ ಬೆಂಬಲಿತ ಮಂತ್ರಿ-ಶಾಸಕರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಉದ್ದೇಶ ಅದರೊಳಡಗಿತ್ತು. ಆ ಮೂಲಕ ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿಯಲ್ಲಿ ತಮ್ಮ ನಾಯಕತ್ವಕ್ಕಿನ್ನೂ ಕಿಮ್ಮತ್ತಿದೆ ಎಂದು ತೋರಿಸುವುದಾಗಿತ್ತು.
ಯಡಿಯೂರಪ್ಪನವರು ಅಂದುಕೊಂಡಂತೆಯೇ ಆಗಿದೆ. ಇದು ಮೇಲ್ಮೋಟಕ್ಕೆ ಯಡಿಯೂರಪ್ಪನವರ ಗೆಲುವಿನಂತೆ ಕಂಡರೂ, ರಾಜಕೀಯ ಒಳಸುಳಿಗಳನ್ನು ಬಲ್ಲವರ ಪ್ರಕಾರ ಇದು ಅವರ ಗೆಲುವಲ್ಲ, ಸೋಲು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಭಾರತೀಯ ಜನತಾಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದ ೨೦೦೮ರಿಂದ ಇಲ್ಲಿಯವರೆಗೆ, ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ಆಮೇಲೆ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಹೈಕಮಾಂಡನ್ನೇ ಹೈಜಾಕ್ ಮಾಡಿ ಮೆರೆದದ್ದು ಯಡಿಯೂರಪ್ಪನವರೊಬ್ಬರೆ. ಅಂದರೆ ಈ ನಾಲ್ಕು ವರ್ಷಗಳ ಕಾಲ ಯಡಿಯೂರಪ್ಪನವರದೇ ದರ್ಬಾರ್ ಆಗಿತ್ತು. ಹಾಗೆಯೇ ಈ ನಾಲ್ಕು ವರ್ಷಗಳ ಕಾಲ, ಯಡಿಯೂರಪ್ಪನವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಅನಂತಕುಮಾರ್ ರಾಜ್ಯ ರಾಜಕಾರಣದಿಂದ ದೂರವೇ ಉಳಿದಿದ್ದರು. 
ಈಗ ಅನಂತಕುಮಾರ್ ಎದ್ದು ನಿಂತಿದ್ದಾರೆ. ತಮ್ಮ ರಾಜಕೀಯ ಎದುರಾಳಿ ಯಡಿಯೂರಪ್ಪನವರನ್ನು ಅವರ ತಂತ್ರಗಳನ್ನು ಅವರಿಗೇ ತಿರುಗಿಸುವ ಮೂಲಕ, ಬಗ್ಗು ಬಡಿದಿದ್ದಾರೆ.
ಅಂದರೆ, ಯಡಿಯೂರಪ್ಪನವರ ಪ್ರಕಾರ ಅಧಿಕಾರ ಲಿಂಗಾಯತರ ಕೈಯಲ್ಲಿರಬೇಕು, ಅದರಿಂದ ಮುಂದಿನ ಚುನಾವಣೆಯಲ್ಲಿ ಬಹುಸಂಖ್ಯಾತ ಲಿಂಗಾಯತರ ಬೆಂಬಲ ಗಳಿಸಿ, ಮತ್ತೆ ಅಧಿಕಾರ ಪಡೆಯಬೇಕು, ಅದಕ್ಕಾಗಿ ನಾನಲ್ಲದಿದ್ದರೂ ನಾನು ಹೇಳಿದಂತೆ ಕೇಳುವ ಮತ್ತೊಬ್ಬ ಲಿಂಗಾಯತ ಮುಖ್ಯಮಂತ್ರಿಯಾಗಿರಬೇಕು ಎಂದು ಸೌಮ್ಯ ಸ್ವಭಾವದ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿದರು.
‘ಎಲ್ಲರಿಗೂ ಗೊತ್ತಿರುವಂತೆ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದು ಯಡಿಯೂರಪ್ಪನವರ ಬ್ಲ್ಯಾಕ್‌ಮೇಲ್ ತಂತ್ರವಾದರೂ, ದಿಲ್ಲಿಯ ನಾಯಕರೊಂದಿಗೆ ನಡೆದ ನಾಟಕದ ಸೂತ್ರಧಾರಿ ಅನಂತಕುಮಾರ್’ ಎನ್ನುತ್ತಿದೆ ಬಿಜೆಪಿಯ ಒಂದು ಗುಂಪು. ‘ಯಡಿಯೂರಪ್ಪನವರು ತಮ್ಮ ಬೆಂಬಲಿತ ಮಂತ್ರಿಗಳ ರಾಜೀನಾಮೆ ಕೊಡಿಸಿ, ಸರ್ಕಾರ ಉರುಳಿಸುವ ಬ್ಲ್ಯಾಕ್ ಮೇಲ್ ತಂತ್ರ ಒಡ್ಡಿ ದೆಹಲಿಯ ನಾಯಕರಾದ ಗಡ್ಕರಿ, ರಾಜ್‌ನಾಥ್ ಸಿಂಗ್, ಜೇಟ್ಲಿಗಳನ್ನು ತಮ್ಮ ದಾರಿಗೆಳೆದುಕೊಂಡಿದ್ದೇನೋ ನಿಜ. ಆದರೆ, ಸದಾನಂದಗೌಡರ ಪರವಾಗಿದ್ದ ಎಲ್.ಕೆ. ಅಡ್ವಾಣಿಯವರನ್ನು ರಾತ್ರೋರಾತ್ರಿ ಜಗದೀಶ್ ಶೆಟ್ಟರ್ ಪರ ವಾಲುವಂತೆ ಮಾಡಿದ್ದು ಅನಂತಕುಮಾರ್’ ಎನ್ನುವುದನ್ನು ಬಿಜೆಪಿಯವರೇ ಬಾಯ್ಬಿಟ್ಟಿದ್ದಾರೆ.
ಹೆಸರು ಹೇಳಲೊಪ್ಪದ ಬಿಜೆಪಿಯ ಹಿರಿಯ ನಾಯಕರೊಬ್ಬರು, ಬಿಜೆಪಿಯ ಸದ್ಯದ ಬೆಳವಣಿಗೆಯನ್ನು ತರ್ಕಬದ್ಧವಾಗಿ ಮಂಡಿಸಿದ್ದು ಹೀಗೆ:
‘ಅಡ್ವಾಣಿಯವರಿಗೆ ಸದಾನಂದಗೌಡರ ಪರ ಒಲವಿತ್ತು. ಅದಕ್ಕಿಂತ ಹೆಚ್ಚಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು. ಅವರು ಕುರ್ಚಿಯಿಂದ ಕೆಳಗಿಳಿದು ಸದಾನಂದಗೌಡರು ಬಂದಾಗ, ನೀವು ಪಕ್ಷದ ವರ್ಚಸ್ಸನ್ನು ಮತ್ತೆ ಹೆಚ್ಚಿಸಬೇಕು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು, ನಿಮ್ಮ ಪರ ನಾನಿರುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಗೌಡರು ಅಡ್ವಾಣಿಯೇ ನನ್ನ ಪರವಾಗಿರುವಾಗ ಇನ್ನೇನು ಎಂದು ಯಡ್ಡಿಯನ್ನು ಎಡಗಣ್ಣಿನಿಂದ ನೋಡತೊಡಗಿದರು. ಜೊತೆಗೆ ಯಡ್ಡಿಯ ಬೆಂಬಲಿತ ಮಂತ್ರಿಗಳ ಕೈ ಬಾಯಿ ಕಟ್ಟಿಹಾಕಿದರು. ಇದು ಅಡ್ವಾಣಿ ಪ್ರಕಾರ ಸರಿಯಾದ ಕ್ರಮವಾಗಿತ್ತು.
‘ಆದರೆ ಇವತ್ತು ರಾಜಕಾರಣ ದಂಧೆಯಾಗಿರುವಾಗ, ಬಿಜೆಪಿಯೂ ದಂಧೆಯಲ್ಲಿರುವ ರಾಜಕೀಯ ಪಕ್ಷವಾಗಿರುವಾಗ, ಮುಂಬರುವ ದಿನಗಳಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿರುವಾಗ, ಗೆಲ್ಲಬೇಕಾದರೆ ಅಪಾರ ಹಣದ ಜೊತೆಗೆ ಜಾತಿ ಜನಗಳ ಬೆಂಬಲವೂ ಮುಖ್ಯವಾಗಿರುವಾಗ- ಸದಾನಂದಗೌಡರ ಸ್ವಚ್ಛ, ಶುದ್ಧ ಆಡಳಿತ ನಡೆಯುವುದಿಲ್ಲ ಎನ್ನುವುದು ಗಡ್ಕರಿ ಬಳಗಕ್ಕೆ ಮನದಟ್ಟಾಯಿತು. ಹಾಗಾಗಿ ಅವರು ಜಾತಿಬಲ, ಹಣಬಲವಿರುವ ಯಡ್ಡಿ ಬಳಗವನ್ನು ಬೆಂಬಲಿಸಿದರು.
‘ಆದರೆ ಇದನ್ನು ಅಡ್ವಾಣಿ ವಿರೋಧಿಸಿ, ಶೆಟ್ಟರ್ ಅವರನ್ನು ಭೇಟಿಯಾಗಲು ನಿರಾಕರಿಸಿದರು. ಶೆಟ್ಟರ್ ದೆಹಲಿಯಲ್ಲಿ ಅನಾಥರಾಗಿ ಅಲೆಯುತ್ತಿದ್ದಾಗ, ಹುಬ್ಬಳ್ಳಿ ಕನೆಕ್ಷನ್ ಮೂಲಕ ಅನಂತ್‌ರನ್ನು ಅಪ್ಪಿಕೊಂಡರು. ಇಬ್ಬರಿಗೂ ಸಮಾನಶತ್ರುವಾದ ಯಡ್ಡಿಯನ್ನು ಮುಗಿಸುವ ತಂತ್ರಕ್ಕೆ ಜೊತೆಯಾದರು. ಸಂದರ್ಭದ ಸದುಪಯೋಗಪಡಿಸಿಕೊಂಡ ಅನಂತಕುಮಾರ್ ಅಡ್ವಾಣಿಯವರ ಮನವೊಲಿಸಿದರು. ಅದಕ್ಕೆ ಬೇಕಾದ, ‘ಲಿಂಗಾಯತ ಕೋಮಿನ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಮತ್ತೊಬ್ಬ ಲಿಂಗಾಯತ ನಾಯಕ ಯಡ್ಡಿಯನ್ನು ಮಟ್ಟಹಾಕುವ ಮಂತ್ರವನ್ನು’ ಕಿವಿತುಂಬಿದರು. ಆಗ ಅಡ್ವಾಣಿ ಎಸ್ ಎಂದರು.’
ಜಗದೀಶ್ ಶೆಟ್ಟರ್ ಮತ್ತು ಅನಂತಕುಮಾರ್ ಇಬ್ಬರನ್ನೂ ಯಡಿಯೂರಪ್ಪನವರು ಈ ನಾಲ್ಕು ವರ್ಷಗಳ ಕಾಲ ಅಧಿಕಾರ ಕೇಂದ್ರದಿಂದ ದೂರವಿಟ್ಟಿದ್ದರು. ಇದು ಜಗತ್ತಿಗೇ ಗೊತ್ತಿರುವ ಸತ್ಯ. ಹಾಗೆಯೇ ಈಗ, ಸದಾನಂದಗೌಡರು ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಕೆಳಗಿಳಿಸಿ, ಅಧಿಕಾರ ಲಿಂಗಾಯತರ ಕೈಯಲ್ಲಿ ಇರಬೇಕೆಂಬ ಕಾರಣಕ್ಕೆ ಶೆಟ್ಟರ್ ಅವರನ್ನು ಮುಂದೆ ನಿಲ್ಲಿಸುತ್ತಿರುವುದೇ ಹೊರತು, ಶೆಟ್ಟರ್ ಮೇಲಿನ ಪ್ರೀತಿಯಿಂದಲ್ಲ. ಇದು ಕೂಡ ಶೆಟ್ಟರ್‌ಗೆ ಗೊತ್ತಿರುವ ಸತ್ಯವೆ.
ಹೀಗಾಗಿ ಅನಂತಕುಮಾರ್, ‘ನಾವಿಬ್ಬರೂ ಹುಬ್ಬಳ್ಳಿಯವರು, ನಾನೀಗ ನಿನಗೆ ಸಿಎಂ ಆಗಲು ಸಹಾಯ ಮಾಡುತ್ತೇನೆ, ನಾನು ರಾಜ್ಯಾಧ್ಯಕ್ಷನಾಗಲು ಸಹಕರಿಸು. ಅಧಿಕಾರ ನಮ್ಮ ಕೈವಶವಾಗುತ್ತಿದ್ದಂತೆ, ಲಿಂಗಾಯತ ನಾಯಕನಾಗಿ ನೀನು ಹೊರಹೊಮ್ಮಿದರೆ, ಪಾರ್ಟಿ ಪ್ರೆಸಿಡೆಂಟ್ ಆಗಿ ನಾನು ರಾಜ್ಯ ಸುತ್ತಿ, ಹಣ ಮತ್ತು ಅಧಿಕಾರದ ನೆರವಿನಿಂದ ಮುಂದಿನ ಚುನಾವಣೆ ಗೆದ್ದು ಅಧಿಕಾರ ಹಂಚಿಕೊಳ್ಳೋಣ’ ಎಂದರು. ಹೀಗಾದಾಗ ಸಹಜವಾಗಿಯೇ ಇಬ್ಬರ ಸಮಾನಶತ್ರು ಯಡಿಯೂರಪ್ಪನವರು ಯಾರೂ ಕೇಳದಂತಾಗಿ ಮೂಲೆಗುಂಪಾಗುತ್ತಾರೆಂಬುದು ಇವರ ಅಪೇಕ್ಷೆ.
ಇದು ಭಾರತೀಯ ಜನತಾ ಪಕ್ಷದ ಪಡಶಾಲೆಯಲ್ಲಿಯೇ ಕೇಳಿಬಂದ ಸುದ್ದಿಯಾದ್ದರಿಂದ ಎಚ್ಚೆತ್ತ ಅನಂತಕುಮಾರ್, ‘ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ೨೦೧೪ರ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಈ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಮಾಡಬೇಕು. ಅದಕ್ಕಾಗಿ ರಾಷ್ಟ್ರದಲ್ಲಿ ಹೆಚ್ಚು ಸಂಸದರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿರುವ ತಮಗೆ ರಾಜ್ಯ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದೂ ಆಯಿತು.
ಇದನ್ನು ಅನಂತಕುಮಾರ್ ಸ್ಪಷ್ಟಪಡಿಸುವ ಅಗತ್ಯವಿದೆ ಎಂದಮೇಲೆ, ಶೆಟ್ಟರ್ ಮುಖ್ಯಮಂತ್ರಿಯಾಗುವಲ್ಲಿ ಅನಂತಕುಮಾರ್ ಆಟವೂ ಇದೆ ಎನ್ನುವುದು ಎಂತಹವರಿಗೂ ಅರ್ಥವಾಗುತ್ತದೆ. ಅರ್ಥವಾದರೂ ಅರ್ಥವಾಗದಂತಿರುವ ಯಡಿಯೂರಪ್ಪನವರ ಪಾಡಂತೂ ಯಾರಿಗೂ ಬೇಡವಾಗಿದೆ.
ಇದು ದೇಶ, ಧರ್ಮದ ಮಾತುಗಳನ್ನಾಡಿ ಅಧಿಕಾರಕ್ಕೆ ಬಂದ ಬಿಜೆಪಿಗಳ `ತತ್ವಬದ್ಧ' ರಾಜಕಾರಣ!