ಮೇ ೨೦, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಉರುಳಿಗೆ ಕೊರಳು ಒಡ್ಡಿರುವ ಗುಡಿಗಾರರು:ನಾ.ಡಿಸೋಜಾ ಅಂಕಣ    
ಡಾ. ನಾ.ಡಿಸೋಜ
ಸೋಮವಾರ, 6 ಆಗಸ್ಟ್ 2012 (03:35 IST)

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮುಟಾಗಳಲ್ಲಿ ಅಧಿಕ ಸಂಖ್ಯೆಯಲ್ಲಿ, ಮುಂಬಯಿ, ಬೆಂಗಳೂರು, ಗೋವಾದಲ್ಲಿ ಅಲ್ಪ ಸಂಖ್ಯಾತರಾಗಿ ಇರುವವರು ಗುಡಿಗಾರರು. ಇವರು ಹಿಂದೊಂದು ಕಾಲದಲ್ಲಿ ಗೋವೆಯಿಂದ ಕರ್ನಾಟಕಕ್ಕೆ ಬಂದವರು. ಇವರಲ್ಲಿ ಇಂದಿಗೂ ಕೊಂಕಣಿ ಮಾತನಾಡುವ, ಕನ್ನಡ ನುಡಿಯುವ ಗುಡಿಗಾರರಿದ್ದಾರೆ. ಜೊತೆಗೆ ಕನ್ನಡ ನಾಡಿಗೆ ಹೆಸರು ತಂದವರು ಇವರು. ಕನ್ನಡ ನಾಡನ್ನ ಗಂಧದ ಗೂಡು ಎಂದು ನಾವು ಕರೆಯುವಾಗಲೆಲ್ಲ ಇವರನ್ನ ಪ್ರಮುಖವಾಗಿ ನೆನಸಿಕೊಳ್ಳುತ್ತೇವೆ.

ಇಂತಹ ಜನಾಂಗದಿಂದ ಬಂದ ಓರ್ವ ಗುಡಿಗಾರ ಕಲಾವಿದ ಮೊನ್ನೆ ಸಾಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ್ಮಹತ್ಯೆ ಕೇವಲ ರೈತರಿಗೆ ಮಾತ್ರ ಮೀಸಲು ಅಂದುಕೊಂಡಿದ್ದೆವು ನಾವು. ಅದು ಈಗ ಗುಡಿಗಾರರಿಗೂ ಹೇಳಿ ಮಾಡಿಸಿದೆ. ರೈತರು ಸಾಲತೀರಿಸಲು ಆಗಲಿಲ್ಲ ಎಂದು ಈ ಕೃತ್ಯಕ್ಕೆ ಕೈ ಹಾಕುತ್ತಾರೆ. ಆದರೆ ಈ ಕಲಾ ಕ್ಷೇತ್ರದ ಗುಡಿಗಾರರು ಶ್ರೀಗಂಧ ತಮಗೆ ಸಿಗಬೇಕಾದ ಪ್ರಮಾಣದಲ್ಲಿ ಸಿಗಲಿಲ್ಲ ಅನ್ನುವ ಕಾರಣಕ್ಕೆ ಆತ್ಮಹತ್ಯೆಗೆ ತೊಡಗುತ್ತಾರೆ.

ಮಣ್ಣು, ಶಿಲೆ, ಮರ, ಬೆಂಡು, ದಂತ, ಇವುಗಳನ್ನ ಆಯ್ಕೆ ಮಾಡಿಕೊಂಡು ಗುಡಿಗಾರರು ಕಲಾಕೃತಿಗಳನ್ನ ಸಿದ್ಧಪಡಿಸುತ್ತಾರೆ. ಮಣ್ಣಿನಿಂದ ಗಣಪತಿಗಳನ್ನ, ಶಿಲೆಯಿಂದ ದೇವತಾ ವಿಗ್ರಹಗಳನ್ನ, ಮರದಿಂದ ಮೂರ್ತಿಗಳನ್ನ, ಬೆಂಡಿನಿಂದ ಹಾರ, ಬಾಸಿಂಗ, ತೊಂಡಿಲುಗಳನ್ನ, ದಂತದಿಂದ ಕಲಾ ಕೃತಿಗಳನ್ನ ಮಾಡಿಕೊಂಡು ಬಂದವರು ಇವರು. ಇವರು ಗುಡಿಗಳಲ್ಲಿ ಬಣ್ಣದ ಕೆಲಸ ಮಾಡಿಕೊಂಡು ಇದ್ದವರು ಅನ್ನುವ ಕಾರಣಕ್ಕೆ ಇವರನ್ನ ಗುಡಿಗಾರರು ಎಂದು ಕರೆಯಲಾಯಿತು ಅನ್ನುವ ಮಾತಿದೆ. ಉತ್ತರ ಕನ್ನಡದಲ್ಲಿ ಇವರು ಚಿತ್ರಕ್ ಎಂದೇ ಕರೆಯಲ್ಪಡುತ್ತಾರೆ.

ದಂತ ನಮ್ಮಲ್ಲಿ ಹೇರಳವಾಗಿ ದೊರೆಯುತ್ತಿದ್ದಾಗ ಇವರು ದಂತದಲ್ಲಿ ಕಲಾ ಕೃತಿಗಳನ್ನ ಮಾಡಿದವರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಇರುವ ಒಂದು ದಂತದ ಸಿಂಹಾಸನ ಇವರ ಶ್ರೇಷ್ಠತೆಗೆ ಉದಾಹರಣೆಯಾಗಿ ಇಂದಿಗೂ ನಿಂತಿದೆ. ಸುಮಾರು ಹದಿನೆಂಟು ಆನೆಗಳ ದಂತವನ್ನ ಬಳಸಿ ಕೆತ್ತಲಾದ ಈ ಸಿಂಹಾಸನವನ್ನ ಸೊರಬದ ಮೂಡುಗೋಡು ಹೀರಣ್ಯಪ್ಪ ಅನ್ನುವ ಕಲಾವಿದ ಹಲವು ವರ್ಷಗಳ ಪ್ರಯತ್ನದಿಂದ ಕೆತ್ತಿದ ಅನ್ನುವುದು ಒಂದು ಇತಿಹಾಸ ಹಾಗು "ದಂತ"ಕತೆ. ಸೊರಬದ ಒಂದು ಮನೆಯ ಮಹಡಿಯ ಮೇಲೆ ಹಲವಾರು ಗುಡಿಗಾರರ ನೆರವಿನಿಂದ ಈ ಸಿಂಹಾಸನವನ್ನ ಕೆತ್ತಲಾಯಿತು. ಮುಂದೆ ಈ ಕಲಾವಿದ ಇವರ ಜೊತೆಯಲ್ಲಿ ಇನ್ನೂ ಕೆಲವರು ಮೈಸೂರಿನ ಇಂದಿನ ಅರಮನೆಯ ದಂತದ ಮರದ ಕೆಲಸ ಮಾಡಲು ಆಯ್ಕೆಯಾದರು ಅನ್ನುವುದು ಒಂದು ಸತ್ಯವೇ. ಮೈಸೂರು ಅರಮನೆಯ ಅಂಬಾ ಭವಾನಿ ತೊಟ್ಟಿಯಲ್ಲಿ ನಮ್ಮ ಗುಡಿಗಾರರು ಕೆತ್ತಿದ ಹಲವು ಕಲಾ ಕೃತಿಗಳು ಇವೆ ಅನ್ನುವುದು ಒಂದು ಅಂಬೋಣ.

ಮೇಲೆ ಹೇಳಿದ ದಂತದ ಸಿಂಹಾಸನವನ್ನ ಕೆತ್ತುವಾಗ ಏನು ಚಿಕ್ಕಚಿಕ್ಕ ದಂತದ ತುಂಡುಗಳು ದೊರೆಯುತ್ತಿದ್ದವು, ಅವುಗಳಿಂದ ಮಾಡಲಾದ ಚಿಕ್ಕ ಗಾತ್ರದ ದಂತದ ದೇವತಾ ವಿಗ್ರಹಗಳು ಮೊನ್ನೆ ಮೊನ್ನೆಯವರೆಗೆ ಮಲೆಮಾಡಿನ ಮನೆಗಳಲ್ಲಿ ನೋಡಲು ದೊರೆಯುತ್ತಿದ್ದವು.

೧೯೫೬ರಲ್ಲಿ ನಮ್ಮ ಪ್ರಧಾನಿ ಜವಾಹರಲಾಲ್ ನೆಹರು ಸಾಗರಕ್ಕೆ ಬಂದಾಗ ಇನ್ನೋರ್ವ ಗುಡಿಗಾರ ಕಲಾವಿದ ಶಾಂತಪ್ಪನವರು ನೆಹರು ಅವರಿಗೆ ಪಂಚಶೀಲದ ಒಂದು ಹಾರವನ್ನ ಹಾಕಿದರು. ಐದು ದಂತದ ತೆಳು ಫಲಕದ ಮೇಲೆ ಪಂಚತಂತ್ರಗಳನ್ನ ಬರೆದು, ಇಡೀ ಹಾರವನ್ನ ದಂತದ ಎಳೆಗಳಿಂದ ಮಾಡಿ ನೆಹರು ಅವರಿಗೆ ತೊಡಿಸಿದ ಈ ಹಾರ ಅವರ ಮನ ಸೆಳೆದು ನೆಹರು ಕಲಾವಿದನನ್ನ ನೋಡಲು ಬಯಸಿದ್ದು ಹಳೆಯ ವಿಷಯ.

ಈ ಗುಡಿಗಾರರು ಕೆತ್ತಿದ ದೇವತಾ ವಿಗ್ರಹಗಳು, ಕ್ಯಾಸ್ಕೆಟಗಳು, ಆಭರಣ ಇರಿಸುವ ಕರಂಡಕಗಳು, ಗಾಳಿ ಹಾಕಿಕೊಳ್ಳುವ ಫ್ಯಾನುಗಳು, ಲಂಡನ್ನಿನ ಆಲ್ಬರ್ಟ ವಿಕ್ಟೋರಿಯಾ ಮ್ಯೂಸಿಯಂನಲ್ಲಿ, ಮುಂಬಯಿಯ ಮ್ಯೂಸಿಯಂನಲ್ಲಿ, ಹೈದರಾಬಾದಿನ ಸಾಲಾರ್ ಜಂಗ ಮ್ಯೂಸಿಯಂನಲ್ಲಿ, ಮೈಸೂರಿನ ಜಗನ್ಮೋಹನಾ ಚಿತ್ರ ಶಾಲೆಯಲ್ಲಿ, ಇನ್ನೂ ಹಲವೆಡೆಗಳಲ್ಲಿ ಇಂದಿಗೂ ಪ್ರದರ್ಶನಕ್ಕೆ ಇಡಲ್ಪಟ್ಟಿವೆ.

ಕೆಲ ವರ್ಷಗಳ ಹಿಂದೆ ಆನೆಗಳ ವಧೆ ಆಗುತ್ತಿದೆ ಅನ್ನುವ ಕಾರಣಕ್ಕೆ ದಂತವನ್ನ ಗುಡಿಗಾರರ ಕೈಯಿಂದ ಕಸಿದುಕೊಳ್ಳಲಾಯಿತು. ದಂತದ ಕಲಾಕೃತಿಗಳನ್ನ ಮಾಡಬಾರದು, ಮಾರಬಾರದು, ಮನೆಯಲ್ಲಿ ಇರಿಸಿಕೊಂಡರೆ ಅದನ್ನ ಸರಕಾರದ ಬಳಿ ದಾಖಲಿಸಿಕೊಳ್ಳಬೇಕು ಎಂದೆಲ್ಲ ನಿಯಮಗಳು ಬಂದು ನಮ್ಮ ಗುಡಿಗಾರರು ದಂತದಿಂದ ದೂರವಾದರು. ನಾಜೂಕಿನ ಕೆತ್ತನೆ ಕೆಲಸ ಮಾಡುವಂತಹ ಒಂದು ಸೂಕ್ಷ್ಮವಾದ ಕಲಾ ಮಾಧ್ಯಮ ಕಣ್ಮರೆಯಾಯಿತು.

ಮುಂದೆ ಅದರ ಸರದಿ ಬಂದದ್ದು ಶ್ರೀಗಂಧಕ್ಕೆ. ಶ್ರೀಗಂಧ ವಿಶೇಷವಾದ ಒಂದು ಮರ. ಮೆದುವಾದ, ಚೀರ್ಣ (ಚಾಣ) ಹಾಕಿ ಮೀಟಿದಾಗ ಬೆಣ್ಣೆಯಂತೆ ಸುರುಳಿಯಾಗಿ ಬರುವ, ತುಸು ಎಣ್ಣೆಯನ್ನ ಸದಾ ಒಸರಿಸುವ, ಪರಿಮಳವನ್ನ ನೀಡುವ ಈ ಮರ ದೇವತಾ ವಿಗ್ರಹಗಳಿಗೆ ಹೇಳಿ ಮಾಡಿಸಿದ್ದು. ಶ್ರೀಗಂಧದ ದೇವರ ವಿಗ್ರಹಗಳಿಗೆ ಬೆಲೆ ಬರಲು, ಬೇರೆ ಯಾವುದೇ ಮರದ ವಿಗ್ರಹಗಳನ್ನ ಜನ ಬಯಸದಿರಲು ಇದರ ಈ ಸುವಾಸನೆ ಕೂಡ ಕಾರಣ. ಈ ಮರದ ಬಣ್ಣ ಕೂಡ ಇದರ ಒಂದು ಆಕರ್ಷಣೆಗೆ ಮೂಲ. ಅಲ್ಲದೆ ಶ್ರೀಗಂಧ ಅನ್ನುವ ಒಂದು ಘನತೆ ಕೂಡ ಈ ಮರಕ್ಕಿದೆ.

ಇಂತಹ ಮರ ಕಾಡುಗಳ್ಳರ ಕೈಲಿ ಸಿಕ್ಕಿ ಮಾಯವಾಗತೊಡಗಿತು. ಇದು ಕಳ್ಳ ಪೇಟೆಯಲ್ಲಿ ಅಧಿಕ ಬೆಲೆಗೆ ಮಾರಾಟವಾಗತೊಡಗಿತು. ಅಲ್ಲದೆ ಸಿಕ್ಕ ಸಿಕ್ಕಲ್ಲಿ ಬೆಳೆಯುವ ಮರ ಇದಾಗಿರಲಿಲ್ಲ. ಹಾಗು ಪ್ಲ್ಯಾಂಟೇಷನ್‌ಗಳಲ್ಲಿ ಇದನ್ನ ಬೆಳೆಯುವ ಪ್ರಯತ್ನ ಈಗ ನಡೆದಿದೆಯಲ್ಲದೆ ಹಿಂದೆ ಇದಕ್ಕೆ ಅವಕಾಶ ಇರಲಿಲ್ಲ. ಜೊತೆಗೆ ಸರಕಾರದ ಶ್ರೀಗಂಧದ ಎಣ್ಣೆಯ ಕಾರ್ಖಾನೆಗೆ ಮೊದಲ ಆದ್ಯತೆಯನ್ನ ನೀಡಬೇಕಿದ್ದರಿಂದ ಶ್ರೀಗಂಧ ಕೂಡ ಗುಡಿಗಾರರಿಂದ ದೂರವಾಯಿತು. ಆದರೂ ಗುಡಿಗಾರರು
ಅತ್ತು ಕರೆದು ಸರಕಾರದಿಂದ ರಿಯಾಯ್ತಿ ದರದಲ್ಲಿ ಕೆಲ ಕೆ.ಜಿ. ಶ್ರೀಗಂಧವನ್ನ ಪಡೆಯುವ ಯತ್ನ ಮಾಡಿದರು.

ನಮ್ಮ ಮರಗಳ್ಳರಿಗೆ ಹೇರಳವಾಗಿ ಸಿಗುವ ಶ್ರೀಗಂಧದ ಮರ ಸರಕಾರಕ್ಕೆ ದೊರೆಯುವುದಿಲ್ಲ. ಅಲ್ಲದೆ ಹೀಗೆ ಸಿಕ್ಕ ಕಳ್ಳ ಮರವನ್ನ ಸರಕಾರ ನ್ಯಾಯಾಲಯದಲ್ಲಿ ಕೇಸು ಮುಗಿಯುವ ತನಕ ರಾಶಿ ಹಾಕುತ್ತದೆ. ಕೇಸು ಮುಗಿದ ಮೇಲೆ ಅದನ್ನ ಹರಾಜು ಹಾಕುತ್ತದೆ. ಆಗ ಹೊರ ರಾಜ್ಯದವರು ಬಂದು ಈ ಮರವನ್ನ ಹರಾಜಿನಲ್ಲಿ ಹಿಡಿದು ಸಾಗಿಸುತ್ತಾರೆ. ಸರಕಾರ ಇದೇ ಮರವನ್ನ ತಾನು ಖರೀದಿಸಿ ಗುಡಿಗಾರರಿಗೆ ನೀಡಬಹುದು. ಆದರೆ ಗುಡಿಗಾರರ ಕುರಿತು ಬಾಯುಪಚಾರ ಹೇಳುವ ಸರಕಾರ ಈ ಕೆಲಸಕ್ಕೆ ಮುಂದಾಗುವುದಿಲ್ಲ. ಮೂರು ನಾಲ್ಕು ತಿಂಗಳಿಗೊಮ್ಮೆ ಗುಡಿಗಾರರಿಗೆ ಒಂದು ಕೇಜಿ ಮರ ಕೊಡುವುದರ ಮೂಲಕ ಸರಕಾರ ತನ್ನ ಕಲಾ ಪ್ರೇಮವನ್ನ ಪ್ರದರ್ಶಿಸುತ್ತದೆ.

ದಂತ ಇಲ್ಲ ಶ್ರೀಗಂಧ ದೊರೆಯುವುದಿಲ್ಲ ಎಂದಾಗ ಗುಡಿಗಾರರು ನಿಜಕ್ಕೂ ಅನಾಥರಾದರು. ಆಗ ಶಿವನಿ ಅನ್ನುವ ಒಂದು ಮರ ಬಳಕೆಗೆ ಬಂದಿತು. ಯಾವುದೇ ಪರಿಮಳ ಇಲ್ಲದ, ತುಸು ಬಿಳಿ ಹಳದಿ ಬಣ್ಣದ ಈ ಮರದಿಂದ ಗುಡಿಗಾರರು ವಿಗ್ರಹಗಳನ್ನ ಮಾಡತೊಡಗಿದರು. ಅದೂ ಅರೆ ಮನಸ್ಸಿನಿಂದ. ಆದರೆ ಎಷ್ಟೇ ಕಲಾವಂತಿಕೆಯನ್ನ ತೋರ‍್ಪಡಿಸಿದರೂ ಜನ ಇದನ್ನ ಕಲಾಕೃತಿ ಎಂದು ಪರಿಗಣಿಸಲಿಲ್ಲ. ಇದನ್ನ ದೇವರ ಮನೆಯಲ್ಲಿ ಇರಿಸಿ ಪೂಜಿಸಲು ಮುಂದಾಗಲಿಲ್ಲ. ಶೀಗಂಧಕ್ಕೆ ಅದರ ಹೆಸರು ಪರಿಮಳ, ಬಣ್ಣ ಬಂಡವಾಳವಾಗಿತ್ತು. ಆದರೆ ಶಿವನಿಗೆ ಆ ಯೋಗ್ಯತೆ ಬರಲಿಲ್ಲ. ಈ ಹಗುರ ಮರಕ್ಕೆ ಬೆಲೆ ಇಲ್ಲದಿರುವುದು ಮತ್ತೊಂದು ಕಾರಣ. ಗುಡಿಗಾರರು ಎಷ್ಟೇ ಶ್ರಮವಹಿಸಿ ಕಲಾಕೃತಿಗಳನ್ನ ಕೆತ್ತಿದರೂ ಅದರ ಬೆಲೆ ಕಟ್ಟುವಾಗ ಮರ ಲೆಕ್ಕಕ್ಕೆ ಬರುತ್ತದೆಯೇ ಹೊರತು ಅಲ್ಲಿ ತೋರಿದ ಕಲೆಯಲ್ಲ. ಆದರೆ ಹಿಂದೆ ಶ್ರೀಗಂಧದಲ್ಲಿ ಕೆತ್ತುತ್ತಿದ್ದಾಗ ಮರ ಮತ್ತು ಕಲೆ ಎರಡೂ ಗಣನೆಗೆ ತೆಗೆದು ಕೊಳ್ಳಲಾಗುತ್ತಿತ್ತು.

ಇಲ್ಲಿ ಸರಕಾರ ಕೂಡ ತುಸು ಹಿಂದೆ ಸರಿಯಿತು. ಶ್ರೀಗಂಧವನ್ನ ರಿಯಾಯತಿ ದರದಲ್ಲಿ ಸರಬರಾಜು ಮಾಡಬೇಕಲ್ಲ ಅನ್ನುವ ಹೊಟ್ಟೆ ಉರಿ ಒಂದು ಕಡೆ. ಅದೇ ಶ್ರೀಗಂಧವನ್ನ ಎಣ್ಣೆ ಕಾರ್ಖಾನೆಗೆ, ಇನ್ನೂ ಕೆಲವರಿಗೆ ಸರಬರಾಜು ಮಾಡಿದರೆ, ಕೈ ತುಂಬ ಹಣ. ಈ ಗುಡಿಗಾರರ ಸಹವಾಸ ಏಕೆ? ಸರಿ ಗುಡಿಗಾರರ ಕಾರ್ಡಿಗೆ ಗಂಟು ಗಂಟಾದ, ತೀರಾ ಸಪೂರ ಇರುವ, ಕಜ್ಜಿ ಹತ್ತಿದ, ಯಾವ ಕಲಾ ಕೃತಿಯನ್ನೂ ಮಾಡಲಾಗದ ಶ್ರೀಗಂಧವನ್ನ ಸರಬರಾಜು ಮಾಡಲು ಸರಕಾರ ಮುಂದಾಯಿತು. ಗುಡಿಗಾರರು ನಿಂತ ರಾಧಾ ಕೃಷ್ಣರನ್ನ, ಮಲಗಿರುವ ವಿಷ್ಣುವನ್ನ, ಕುಣಿಯುತ್ತಿರುವ ನಟರಾಜನನ್ನ ಮಾಡಬೇಕೆಂಬ ಇರಾದೆ ಇರಿಸಿಕೊಂಡಿದ್ದರೆ ಅವರ ಕೈಗೆ ಸಿಗುತ್ತಿದ್ದುದು ಅಷ್ಟಾವಂಕ ಶ್ರೀಗಂಧ. ಕಾರ್ಡಿಗೆಂದು ಕೊಟ್ಟ ಶ್ರೀಗಂಧ ನೋಡಿಯೇ ಗುಡಿಗಾರರು ಸೊರಗಿ ಹೋದರು.

ಇನ್ನು ಈ ಶ್ರೀಗಂಧ ಪಡೆಯಲಾದರೂ ಸುಖ ಉಂಟೆ? ಮೂರು ಆರು ತಿಂಗಳಿಗೊಮ್ಮೆ ಕಾರ್ಡಿಗೆ ಶ್ರೀಗಂಧ ಬರುತ್ತಿತ್ತು. ಇದನ್ನು ಪಡೆಯಲು ಕೂಡ ಹಲವಾರು ವಿಘ್ನಗಳು, ಸರಕಾರೀ ಕಛೇರಿಯ ಪೀಡೆಗಳು, ತಾಪತ್ರಯಗಳು. ಇನ್ನು ಶ್ರೀಗಂಧದ ಕೆಲ ಸಂಕೀರ್ಣಗಳು ಕರ್ನಾಟಕದಲ್ಲಿ ಇವೆ. ಇಲ್ಲಿ ತಯಾರಾದ ಕಲಾ ಕೃತಿಗಳನ್ನ ಬೆಂಗಳೂರಿನ ಕಾವೇರಿ ಎಂಪೋರಿಯಂ ಮೂಲಕವೇ ಮಾರಾಟವಾಗಬೇಕು ಅನ್ನುವುದು ಸರಕಾರದ ನಿಯಮ. ಈ ಕಾವೇರಿ ಎಂಪೋರಿಯಂಗೆ ಕರ್ನಾಟಕದ ಕಲಾವಿದರು ತಯಾರಿಸಿದ ಕಲಾಕೃತಿಗಳು ಕಣ್ಣಿಗೇನೆ ಬೀಳುವುದಿಲ್ಲವಂತೆ. ಹರಿಯಾಣ, ಪಂಜಾಬು, ತಮಿಳುನಾಡು, ಕೇರಳದ ಕಲಾಕೃತಿಗಳ ಪ್ರದರ್ಶನ, ಮಾರಾಟ, ಪ್ರಚಾರ ಇಲ್ಲಿ ಆಗುತ್ತದೆ. ಆದರೆ ಗುಡಿಗಾರರ ಕೃತಿಗಳಿಗೆ ಇಲ್ಲಿ ಅವಕಾಶ ಇಲ್ಲ, ಇದ್ದರೂ ಕಡಿಮೆ. ಇದು ಸ್ವತಹ ಗುಡಿಗಾರರ ಬವಣೆ.

ಅಲ್ಲದೆ ಬೇಡಿಕೆ ಇರುವ ಕಲಾ ಕೃತಿಗಳನ್ನ ಮಾತ್ರ ಎಂಪೋರಿಯಂ ಖರೀದಿಸುತ್ತದೆ. ಗುಡಿಗಾರರು ತಾವಾಗಿ ಕೂತು ಸಿದ್ಧಪಡಿಸಿದ ಕೃತಿಗಳನ್ನ ಅದು ತಿರುಗಿಯೂ ನೋಡುವುದಿಲ್ಲ. ಅಂದರೆ ಓರ್ವ ಕಲಾವಿದನ ಸೃಜನಶೀಲತೆ ಹೇಗೆ ಸಾಯುತ್ತಿದೆ ಅನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಈ ಕಾರಣಕ್ಕಾಗಿ ಕಲಾವಿದರು ತಮ್ಮ ಕಲ್ಪನೆ, ಕಲಾವಂತಿಕೆಯನ್ನ ಇನ್ನಾರದ್ದೋ ಅಭಿರುಚಿಗೆ ಧಾರೆ ಎರೆದು ಬದುಕುವ ಸ್ಥಿತಿ ಬಂದಿದೆ.

ಹೌದು ಗುಡಿಗಾರರನ್ನ ನಾವು ಕಲಾವಿದರು ಎಂದು ಕರೆಯುತ್ತೇವೆ. ಮೂಡುಗೋಡು ಹೀರಣ್ಯಪ್ಪನವರನ್ನ ಕಲಾವಿದರೆಂದು ಗೌರವಿಸಬೇಕಲ್ಲದೆ ಬೇರೆ ರೀತಿಯಲ್ಲಿ ಅಲ್ಲ. ಆದರೆ ಗುಡಿಗಾರರು ಅವರು ಕಲ್ಲಿನ ಕೆತ್ತನೆ ಮಾಡಲಿ, ಬೇರೆ ಏನೇ ಮಾಡಲಿ ಅವರು ಕರಕುಶಲ ಕರ್ಮಿಗಳು. ಆರ‍್ಟಿಸಾನ್ಸ. ಕರಕುಶಲ ಕರ್ಮಿಗಳಿಗೆ ಏನೇನು ನಿಯಮ ಲಾಗು ಆಗುತ್ತದೋ ಆ ಎಲ್ಲ ನಿಯಮಗಳು ಇವರಿಗೂ ಅನ್ವಯಿಸುತ್ತವೆ. ಕರ್ನಾಟಕದ ಲಲಿತಕಲಾ ಅಕ್ಯಾಡೆಮಿಗೆ ಮೊದಲಿನಿಂದಲೂ ಗುಡಿಗಾರರನ್ನ ಸದಸ್ಯರನ್ನಾಗಿ ಮಾಡುವ ಪದ್ಧತಿ ಇರಲಿಲ್ಲ. ದಿ.ಪಿ.ಆರ್. ತಿಪ್ಪೇಸ್ವಾಮಿಯವರು ಅಕ್ಯಾಡೆಮಿ ಅಧ್ಯಕ್ಷರಾದ ಮೇಲೆ ಓರ್ವ ಗುಡಿಗಾರ ಕಲಾವಿದ ಅಲ್ಲಿ ಸದಸ್ಯನಾದ.

ಇನ್ನು, ಒಂದು ಶರ್ಟನ್ನ ಹೊಲಿಯುವ ದರ್ಜಿ, ಒಂದು ಆಟೋಗೆ ಬಣ್ಣ ಹಚ್ಚುವ ಪೈಂಟರ್, ಮೂಲೆಯಲ್ಲಿ ತನ್ನ ಹೆಸರನ್ನ ಬರೆಯುತ್ತಾನೆ. ಆದರೆ ಒಂದು ಕೃತಿಯನ್ನ ಕೆತ್ತುವ ಗುಡಿಗಾರ ಎಲ್ಲೂ ತನ್ನ ಹೆಸರನ್ನ ಮೂಡಿಸುವುದಿಲ್ಲ. ಇದನ್ನ ಯಾರೂ ಬಯಸುವುದಿಲ್ಲ.

ಇಡೀ ತನ್ನ ಬದುಕನ್ನ ಬಗ್ಗಿ ಕುಳಿತು, ಕಲಾಕೃತಿಯ ಮೇಲೆ ಕಣ್ಣನ್ನ ಇರಿಸಿಕೊಂಡು ಕೆತ್ತನೆ ಮಾಡುವ ಕಲಾವಿದ ಬಹಳ ಬೇಗನೆ ತನ್ನ ಕಣ್ಣ ದೃಷ್ಟಿಯನ್ನ ಕಳೆದುಕೊಳ್ಳುತ್ತಾನೆ. ಕಲ್ಲಿನ ಕೆಲಸ ಮಾಡುವ ಕಲಾವಿದನ ಕಣ್ಣಿಗೆ ಕಲ್ಲಿನಪುಡಿ ಹಾರುತ್ತದೆ. ಸಹಜವಾಗಿ ಆತ ಕುರುಡನಾಗುತ್ತಾನೆ. ಇಂತಹ ಹಲವು ಬವಣೆಗಳನ್ನ ನಮ್ಮ ಗುಡಿಗಾರರು ಅನುಭವಿಸುತ್ತ ಬಂದಿದ್ದಾರೆ.

ಬ್ರಿಟೀಷರ ಕಾಲದಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ಈ ಕಲೆ ರಾಜಮಹಾರಾಜರ ಕಾಲದಲ್ಲಿ ಕೂಡ ಉಸಿರು ಹಿಡಿದುಕೊಂಡು ಬದುಕಿತ್ತು. ಆದರೆ ಇದೀಗ ಗುಡಿಗಾರಿಕೆ ಕೊನೆಯ ಉಸಿರನ್ನ ಬಿಡುತ್ತಿದೆ. ಇದಕ್ಕೆ ಕಾರಣ ನಮ್ಮ ಸರಕಾರದ ಧೋರಣೆ. ದಂತ ಗಂಧದ ಜೊತೆಯಲ್ಲಿ ಗುಡಿಗಾರರನ್ನೂ ನಾವು ಕಳೆದುಕೊಂಡೆವು ಅನ್ನುವ ಕಳಂಕ ಯಾರಾದರೂ ಹೊರಬೇಕು ಅನ್ನುವುದಾದರೆ ಅದು ನಮ್ಮ ಸರಕಾರ, ಅದರ ಬೇಜವಾಬ್ದಾರಿತನ. ನಾಳೆ ನಮ್ಮ ರೈತರು ಹಿಡಿದ ಹಾದಿಯನ್ನ ಈ ಗುಡಿಗಾರರೂ ಹಿಡಿದರೆ ಅಚ್ಚರಿ ಪಡಬೇಕಾಗಿಲ್ಲ.

(ಕೆಂಡಸಂಪಿಗೆಯಲ್ಲಿ ನಾ.ಡಿ ಯವರ ಎಲ್ಲ ಬರಹಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ)

ಪುಟದ ಮೊದಲಿಗೆ
 
Votes:  10     Rating: 4.2    
 
 
ಸಂಬಂಧಿಸಿದ ಲೇಖನಗಳು
  ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
  ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
  ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ
  ಇಲ್ಲಿನ ಕಲ್ಯಾಣ ವಿಶೇಷ: ಪ್ರಶಾಂತ್ ತಾಂಜಾನಿಯಾ ಡೈರಿ
  ಅಲ್ಲಿಯೂ ಅಂಟಿದ ಮಳೆ ಇಲ್ಲಿಯೂ ಅಂಟುವ ಮಳೆ:ನಾಗಶ್ರೀ ಅಂಕಣ
  ಹಾವುಗಳೇ ಕಚ್ಚದಿರಿ:ರಹಮತ್ ತರೀಕೆರೆ ವಾರದ ಬರಹ
  ಸಾಹಿತಿಗಳೂ ರಾಜಕಾರಣವೂ: ನಾ.ಡಿಸೋಜ ಅಂಕಣ
  ಬಿರುಬೇಸಗೆಯಲ್ಲಿ ಕಾವ್ಯಾನುರಾಗ:ಮಹೇಶ್ ಬರೆವ ಡೆಲ್ಲಿಪೋಸ್ಟ್
  ಬೆರ್ಚಪ್ಪ ಪ್ರಪಂಚ:ತಿರುಮಲೇಶರ ವಾರದ ಬರಹ
  ಕೀರ್ಲೋಸ್ಕರದಾಗ ಕೆಲಸ ಸಿಕ್ಕತ:ಪ್ರಶಾಂತ್ ಆಡೂರ ನೆನಪುಗಳು
  ಕಣ್ಣು ಚುಚ್ಚುವ ಬೆಳಕು ಬಾಲ್ಯ:ಸಿಂಧು ಬರೆವ ಅಮ್ಮನ ಕಾಲಂ
  ಕನ್ನಡ ಗದ್ಯದ ಒಂದು ಪರಿ:ರಹಮತ್ ತರೀಕೆರೆ ವಾರದ ಬರಹ
  ಅವನು ಕಟ್ಟಿದ ಆರು ಸಾವಿರ ಮೆಟ್ಟಿಲುಗಳು:ನಾಗಶ್ರೀ ಅಂಕಣ
  ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು:ರಶೀದ್ ಅಂಕಣ
  ‘ನೋಡಿ ನಿರ್ಮಲ ಜಲಸಮೀಪದಿ..:ತಿರುಮಲೇಶರ ವಾರದ ಬರಹ
  ಶ್ರೀಮಾನ್ ಮತದಾರ ಎಂಬ ಅಬ್ಬೇಪಾರಿ:ನಾ.ಡಿಸೋಜಾ ಅಂಕಣ
  ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ:ಅಬ್ದುಲ್ ರಶೀದ್ ಅಂಕಣ
  ಜಿಂಕೆಮರಿ ಮರಿಯಾನಾ ಮಿಂಚುಬಳ್ಳಿ:ನಿಹಾರಿಕಾ ಡೈರಿ
  ಪ್ರಶಾಂತ್ ಬೀರೂರು ಬರೆವ ತಾಂಜಾನಿಯಾ ಡೈರಿ ಶುರುವಾಯಿತು
  ಸಾಪೇಕ್ಷತೆ ಎಂದರೇನು?:ತಿರುಮಲೇಶರ ವಾರದ ಬರಹ
  ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ:ಪ್ರಶಾಂತ್ ಬರಹ
  ದುಡಿವ ಕಂದಮ್ಮಗಳ ಕಂಡು:ಲಕ್ಷ್ಮೀಶಂಕರ ಜೋಷಿ ಕಾಲಂ
  ಬೆಳೆಕೇ ಎಲ್ಲ ಎನ್ನುವ ಚಿತ್ರಗಳು:ಮಹೇಶ್ ‘ಡೆಲ್ಲಿಪೋಸ್ಟ್’
  ಭೂಮಿ ಕಂಪಿಸಿದ ಚೀನಾದಿಂದ ನಾಗಶ್ರೀ ತಿಳಿಸಿದ ಸಂಗತಿಗಳು
  ಅಲ್ಲಾಡುತ್ತಿದ್ದ ಹಳೆಯ ಅಂಬಾಸೆಡರ್:ಅಬ್ದುಲ್ ರಶೀದ್ ಅಂಕಣ
  ಎಮ್ಮಯ ಕಾಲದ ಇಂಗ್ಲಿಷ್ ಎಂ.ಎ:ತಿರುಮಲೇಶರ ವಾರದ ಬರಹ
  ಎನ್.ಸಿ.ಮಹೇಶ್ ಬರೆಯುವ ‘ದೆಹಲಿ ಪೋಸ್ಟ್’ ಶುರುವಾಯಿತು
  ನಿಮ್ಮದೇ ನಾಟಕಕ್ಕೆ ನಮ್ಮದೇ ತಾಲೀಮು:ಸಿಂಧು ‘ಅಮ್ಮನ ಕಾಲಂ’
  ಬೆಂಕಿಪುರ ಭದ್ರಾವತಿಯಾದ ಕಥಾನಕ:ನಾ.ಡಿಸೋಜಾ ಅಂಕಣ
  ವ್ಯಾಕರಣವೆಂಬುದು ಗ್ರಾಮ್ಯವಲ್ಲವೇ?:ತಿರುಮಲೇಶರ ವಾರದ ಬರಹ
  ವೃದ್ಧಾಶ್ರಮಕ್ಕ ಜಾಗಾ ಇದ್ದರ ನೋಡ:ಪ್ರಶಾಂತ್ ಪ್ರಹಸನ
  ಸೇಂದಿ ನಕ್ಷತ್ರ ಗುರಾಯಿಸಿ ಬರೆದ ಒಗರು ಒಗರು ಕಾಲಂ
  ವಿವೇಕ್ ಕಥೆಯ ಘಾಚರಿನ ಘೋಚಾರ ಲೋಕ:ನಾಗಶ್ರೀ ಅಂಕಣ
  ವಿಶ್ವವಿದ್ಯಾಲಯಗಳೆಂಬ ಆಲದಮರಗಳು:ತಿರುಮಲೇಶರ ವಾರದ ಬರಹ
  ಕನ್ನಡದ ಬ್ಲಾಗುಗಳ ಬಾಗಿಲಲಿ ನಿಂತು:ಎಂ.ಎಸ್.ಶ್ರೀರಾಮ್ ಬರಹ
  ಬಾರಾ ಖೂನ ಮಾಫ:ಲಕ್ಷ್ಮೀಶಂಕರ ಜೋಶಿ ಅಂಕಣ
  ಸರಳತೆ ಎಂಬ ಸಿರಿವಂತಿಕೆ:ನಾ.ಡಿಸೋಜಾ ಅಂಕಣ
  ಉತ್ತರ ದಿಕ್ಕಿನ ತಿರುಗಾಟದ ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ಹುಲ್ಲಿನ ತಾರೀಫು
  ರ್ರೀ..ನಂದ ಅಕೌಂಟ ಕ್ಲೋಸ್ ಮಾಡರಿ:ಪ್ರಶಾಂತ್ ಆಡೂರ ಪ್ರಹಸನ
  ಸೇಯಿ ಎಲಿಬಿದೆಯ ಆಸ್ಪತ್ರೆ ಸಹವಾಸ:ರೇಣುಕಾ ಕಾಲಂ
  ಸಹಜ ಸಭ್ಯತೆ ಕುರಿತ ಒಂದು ಕಾದಂಬರಿ:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ನಗೆಯ ಹಾಯಿದೋಣಿ
  ಹೆಂಗಸರ ದುಃಖ ಮತ್ತು ಗಂಡಸರ ಸವಾರಿ:ಲಕ್ಷ್ಮೀ ಜೋಶಿ ಕಾಲಂ
  ಕಾಲುವೆಗಳ ಊರಿನ ಕೆಂಪು ಕತ್ತಲು: ನಿಹಾರಿಕಾ ಡೈರಿಯ ಪುಟಗಳು
  ಉಪ್ಪಿಟ್ಟನ್ನ ಮುತ್ತಿಕೊಂಡಿದ್ದ ಇರುವೆಗಳು:ನಾ.ಡಿಸೋಜಾ ಅಂಕಣ
  ಭಾಷೆಯೊಂದರ ಅಕ್ರಮ ಸಕ್ರಮ:ತಿರುಮಲೇಶರ ವಾರದ ಬರಹ
  ಹೋದ ಒಂಟಿಹಾದಿಯ ಬಿಟ್ಟುಬಂದು:ನಾಗಶ್ರೀ ಅಂಕಣ
  ನಾ ಹೇಗೆ ಬಡವನು ನಾ ಹೇಗೆ ಪರದೇಶಿ:ಶ್ರೀರಾಮ್ ವಾರದ ಬರಹ
  ದೆಹಲಿಯ ಹಿರಿಯ ಕನ್ನಡತಿ ನೇತ್ರಾವತಿ ಮಯ್ಯ:ರೇಣುಕಾ ಕಾಲಂ
  ಪರದಂಡ ಚಂಗಪ್ಪನವರ ದೇವರು:ಅಬ್ದುಲ್ ರಶೀದ್ ಅಂಕಣ
  ಮುಂಗಾಮಿ ಹಿಂಗಾಮಿ ತದ್ರೂಪಗಳು:ತಿರುಮಲೇಶರ ವಾರದ ಬರಹ
  ಚಿತ್ರ ಸಂತೆಯಲ್ಲೊಂದು ವಿಚಿತ್ರ ಸಂತೆ:ಪ್ರಶಾಂತ್ ಆಡೂರ ಕಥನ
  ಬ್ಯಾಂಗಲೋರ್ ಮತ್ತು ಬಾಲ್ಸೆವಿಕ್ ಸಿಂಗರ್:ಶ್ರೀರಾಮ್ ಬರಹ
  ಪುಟ್ಟಹಕ್ಕಿಯ ನಿದ್ದೆಪುರಾಣ: ಸಿಂಧು ಬರೆಯುವ ಅಮ್ಮನ ಕಾಲಂ