ಈ ವಾರದ ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು. ಇನ್ನೂ ಆರು ವರುಷದ ಅಂಬರ್‌ನಿಗೆ ಶಾಲೆಗಿಂತ ಗುಡ್ಡ ಬೆಟ್ಟ ಅಲೆಯೋದು ತುಂಬಾ ಇಷ್ಟ. ಅಪ್ಪ ಅಮ್ಮನ ಜೊತೆ ಈಗಾಗಲೇ ಉತ್ತರಾಂಚಲ, ಕೊಡಗು, ರಾಜಾಸ್ಥಾನ, ಕಛ್ ಹೀಗೆಲ್ಲಾ ಸುತ್ತಿದ್ದಾನೆ. ಉತ್ತರಾಂಚಲದ ತನ್ನ ಪ್ರೀತಿಯ ತ್ರಿಶೂಲ ಪರ್ವತವನ್ನು ಬಿಟ್ಟು ಬರುವಾಗ ಅತ್ತಿದ್ದಾನೆ. ಊರು,ಗುಡ್ಡ, ಬೆಟ್ಟ ಅಲೆಯದೇ ಇರುವ ಹೊತ್ತಲ್ಲಿ ಅಂಬರ್ ಬೆಂಗಳೂರಿನ ಗೋಲ್ಡನ್ ಬೀಡ್ಸ್ ಮೋಂಟೆಸ್ಸೋರಿ ಶಾಲೆಯಲ್ಲಿ ಓದುತ್ತಾನೆ.
ಅಂಬರ್‌ನಿಗೆ ಸಣ್ಣ ವಯಸ್ಸಿನ ಸ್ನೇಹಿತರಷ್ಟೇ ದೊಡ್ಡ ವಯಸ್ಸಿನ ಸ್ನೇಹಿತರೂ ಇದ್ದಾರೆ. ಇವನ ಹಾಗೆಯೇ ಊರೂರು ಸುತ್ತುವ ಬೇರೆ ಊರು ಬೇರೆ ದೇಶಗಳ ದೊಡ್ಡವರೂ ಇವನಿಗೆ ಬೇಗ ಗೆಳೆಯರಾಗಿ ಬಿಡುತ್ತಾರೆ.ಅಂಬರ್‌ನಿಗೆ ರಾಮ, ಕೃಷ್ಣ, ಹನುಮಂತ ಇವರನ್ನೆಲ್ಲಾ ಕಂಡರೆ ತುಂಬಾ ಇಷ್ಟ. ಟಿವಿ ಯಲ್ಲಿ ಬರುವ ಇವರ ಕಥೆಗಳನ್ನ ನೋಡಿ ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುತ್ತಾನೆ. ಇವನಿಗೆ ಚೆಸ್ ಆಡೋದು ಇಷ್ಟ. ಜೊತೆಗೆ ಕ್ರಿಕೆಟ್ ಕೂಡಾ ಅಂತ ಸ್ವಲ್ಪ ಸಂಕೋಚದಲ್ಲೇ ಹೇಳುತ್ತಾನೆ.
ದೊಡ್ಡವನಾದ ಮೇಲೆ ಏನು ಮಾಡ್ತೀಯಾ ಅಂತ ಕೇಳಿದರೆ ಏನನ್ನಾದರೂ ತಯಾರಿಸೋದು ಇಷ್ಟ ಅಂತ ಹೇಳುತ್ತಾನೆ. ಅಂಬರ್ ನೀಲ್ ಎಂಬ ಈ ಹುಡುಗ ಬಿಡಿಸಿದ ಚಿತ್ರಗಳು ಈ ವಾರದ ಮಕ್ಕಳಸಂಪಿಗೆಯಲ್ಲಿ ನಿಮ್ಮ ಅವಗಾಹನೆಗಾಗಿ.