ಹಾಲ್ದೊಡ್ಡೇರಿ ಸುಧೀಂದ್ರ
ಬೆಂಗಳೂರು ಸಮೀಪದ ಜೈನ್ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (UVCE) ಹಾಗೂ ಮದ್ರಾಸಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಗಳಲ್ಲಿ ಅಧ್ಯಯನ ನಡೆಸಿರುವ ಇವರು, ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರದಲ್ಲಿ (IISc) ಸಂಶೋಧನಾ ಸಹಾಯಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ವಿಜ್ಞಾನಿಯಾಗಿ ಮಿಲಿಟರಿ ವಿಮಾನ ಎಂಜಿನ್‍ಗಳ ಹಾರಾಟ ಯೋಗ್ಯತೆ ಹಾಗೂ ದೃಢೀಕರಣ ಕ್ಷೇತ್ರದಲ್ಲಿ 22 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಹಿಂದೂಸ್ತಾನ್ ವಿಮಾನ ಕಾರ್ಖಾನೆಯ (HAL) ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ವಿಮಾನ ಇಂಧನ ಪೂರೈಕೆ ವ್ಯವಸ್ಥೆಯ ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿ 2 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ ಸಂಬಂಧಿತ ಕೆಲಸಗಳಿಗಾಗಿ ದೇಶದ ಆಯಕಟ್ಟಿನ ವಾಯುನೆಲೆಗಳು ಹಾಗೂ ವಿದೇಶಿ ವಿಮಾನ ನಿರ್ಮಾಣ ಕಂಪನಿಗಳಿಗೆ ಭೇಟಿ ನೀಡಿರುವ ಇವರು, ತಮ್ಮ ಪ್ರವಾಸಾನುಭವಗಳನ್ನು ಕನ್ನಡ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುದ್ರಣ ಮಾಧ್ಯಮ, ರೇಡಿಯೊ, ಟೀವಿ ಹಾಗೂ ಇಂಟರ್‌ನೆಟ್ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ಆವಿಷ್ಕಾರಗಳನ್ನು ನಿರಂತರವಾಗಿ ಪರಿಚಯಿಸುತ್ತಿದ್ದಾರೆ.