ದ್ವಿಚಕ್ರ ವಾಹನದಿಂದ ಬಿದ್ದು ಬಂದ ಒಬ್ಬರ ಹರಿದ ಗಾಯಕ್ಕೆ ಹೊಲಿಗೆ ಹಾಕಿ, ಮುರಿದ ಮೂಳೆಗೆ ತಾತ್ಕಾಲಿಕ ಪಟ್ಟಿ ಕಟ್ಟಿ ಆಗುವಷ್ಟರಲ್ಲಿ, ನಿದ್ರಾದೇವಿ ನಿನ್ನ ಸಹವಾಸ ನನಗೆ ಬೇಡ ಎಂದು ಬೇರೆಯವರನ್ನು ಅಪ್ಪಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲೇ ಇನ್ನೊಂದು ಹುಡುಗಿ. ಆಗಷ್ಟೇ ಹೈಸ್ಕೂಲು ಮುಗಿಸಿದ ಆಕೆ, ತಾನು ಲವ್ ಮಾಡಿದ ಹುಡುಗನನ್ನು ಮದುವೆಯಾಗಲು ತಂದೆ ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಮೇಟಾಸಿಡ್ ಕುಡಿದು ಬಂದಿದ್ದಳು. ಅವಳಿಗೆ ಚಿಕಿತ್ಸೆ ನೀಡಿದ ಬಳಿಕ ಇಬ್ರಾಹಿಂ ಎಂಬ ಮತ್ತೊಬ್ಬ ಪೇಷೆಂಟು ಬಂದಿದ್ದ. ಅವನ  ಸ್ಥಿತಿ ನೋಡಿ, ಯಾಕೋ  ಸಂಶಯ ಮೂಡಿತು.
ನೆನಪುಗಳ ಮೆರವಣಿಗೆ ಸರಣಿಯಲ್ಲಿ
ಡಾ. ಕೆ.ಬಿ. ಸೂರ್ಯಕುಮಾರ್ ಬರಹ  ಇಂದಿನ ಓದಿಗಾಗಿ. 

ಒಬ್ಬ ಡಾಕ್ಟರ್ ಕೆಲಸಕ್ಕೆ ಸೇರಿದನೆಂದರೆ ದಿನದ ಡ್ಯೂಟಿ ರಾತ್ರಿಯ ಪಾಳಿ ಎಲ್ಲಾ ಅವನ ಜೀವನದ ಒಂದು ಅಂಗವಾಗಿ ಬಿಡುತ್ತದೆ. ದೊಡ್ಡಾಸ್ಪತ್ರೆಗಳಲ್ಲಿ ರಾತ್ರಿ ಡ್ಯೂಟಿಯಲ್ಲಿ ಅಪರೂಪಕ್ಕೊಮ್ಮೆ ಕೇಸುಗಳು ಕಡಿಮೆ ಇದ್ದರೂ ಹೆಚ್ಚಿನ ರಾತ್ರಿಗಳಂತೂ ನಿಜಕ್ಕೂ ಬಿಜಿ಼.

ರಾತ್ರಿಯ ಹೊತ್ತು, ಜನರ ಓಡಾಟ ಕಡಿಮೆ. ನಗರದ ಚಳಿಗೆ ಹೆಚ್ಚಿನವರು ಮುದುಡಿ ಮುದ್ದೆಯಾಗಿ ಕಂಬಳಿ ಹೊದ್ದುಕೊಂಡು ಮಲಗಿದರೆ, ಕೆಲವು ನಿಶಾಚರರ ಮನಸ್ಸು ಬಿರಿದು ಹಪ್ಪಳವಾಗುವುದು ಇದೇ ಸಮಯದಲ್ಲಿ. ಎಲ್ಲೆಲ್ಲೋ ‘ಅಮೃತ’ಪಾನ ಮಾಡಿ ತಮ್ಮ ಕುದುರೆಯನ್ನೇರಿ ರಸ್ತೆಯಲ್ಲಿ ಡರ್ರೆಂದು ಹೊರಟಾಗ, ಅನೇಕರು ಸಾಗುವುದಕ್ಕಿಂತ ಹಾರುವುದೇ ಹೆಚ್ಚು. ಇಂತಹ ಪುಷ್ಪಕ ವಾಹನದಲ್ಲಿ ತೇಲಿಕೊಂಡು ಹೋಗುವ ನಮ್ಮ ಮಿತ್ರರಿಗೆ ಚಳಿಯೂ ಒಂದು ಮುಸುಕಿನ ಮರೆಯಲ್ಲಿನ ಆಶೀರ್ವಾದ. ರಸ್ತೆಯಂತೂ ಖಾಲಿ. ತಾವೇ ರಾಜರು ಎಂಬ ಭಾವನೆ ಹೊತ್ತು, ತಮ್ಮ ಕುದುರೆಯನ್ನು ಎತ್ತೆತ್ತಲೋ ಚಲಾಯಿಸಿ, ಕೊನೆಗೆ ತಮ್ಮ ಅರಮನೆ ಸೇರುವಾಗ, ಕುದುರೆಯಿಂದ ಇಳಿಯುವ ಸ್ಥಿತಿಯಲ್ಲಿ ಇಲ್ಲದಿರುವ ರಾಜಕುಮಾರರ ಸಂಖ್ಯೆಯೇ ಹೆಚ್ಚು. ಇಂತವರಿಗೆ ದಾರಿಯಲ್ಲಿ ಕೆಲವೊಮ್ಮೆ ಇವರಂತೆಯೇ ರಥವನ್ನೇರಿ ಬರುವ ಇನ್ನಿತರ ಮಂತ್ರಿ ಕುವರರು ಸಿಗುವುದೂ ಉಂಟು. ದಾರಿಯಲ್ಲಿ ನೀನು ಮೇಲೋ, ನಾನು ಮೇಲೋ ಎಂಬ ಕುದುರೆ – ರಥ ಪೈಪೋಟಿಯಲ್ಲಿ ಕುದುರೆ ಹೋಗಿ ಹೊಂಡಕ್ಕೆ ಬಿದ್ದು, ರಥ ಗೋಡೆಯನ್ನು ಚುಂಬಿಸಿದರೆ, ಅಥವಾ ಇನ್ನೂ ಕೆಲವೊಮ್ಮೆ ರಥ, ಕುದುರೆ ಎದುರು-ಬದುರು ಆದರಂತೂ ಯಾರು ಜಾಣರು ಯಾರು ‘ಮಾರಣ’ರು ಎನ್ನುವುದು ಕಷ್ಟ. ಇಂತಹವರು ಆಸ್ಪತ್ರೆಗೆ ದರ್ಶನ ಕೊಡುವುದು ತಡ ರಾತ್ರಿಯ ನಂತರವೇ. ಈ ಹೀರೋಗಳು, ಇವರ ಬಳಗ, ಸುರಾಪಾನ ಮಾಡಿದ ಅಸುರರು ಬಂದರಂತೂ ರಾತ್ರಿಯ ಪಾಳಿಯಲ್ಲಿ ಇರುವವರಿಗೆ ರೋಗಿಗಳನ್ನು ನೋಡುವುದು ಬಿಟ್ಟು, ಸುರಾಸುರರ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಒಂದು ಪ್ರಯಾಸದ ಕೆಲಸವಾಗಿ ಬಿಡುತ್ತದೆ.

ಆ ಒಂದು “ಶುಭ ” ರಾತ್ರಿ ಇಂತಹದೇ ಮೂರು ಕೇಸುಗಳು ಬಂದಿದ್ದವು. ದ್ವಿಚಕ್ರ ವಾಹನದಿಂದ ಬಿದ್ದು ಬಂದ ಒಬ್ಬರ ಹರಿದ ಗಾಯಕ್ಕೆ ಹೊಲಿಗೆ ಹಾಕಿ, ಮುರಿದ ಮೂಳೆಗೆ ತಾತ್ಕಾಲಿಕ ಪಟ್ಟಿ ಕಟ್ಟಿ ಆಗುವಷ್ಟರಲ್ಲಿ, ನಿದ್ರಾದೇವಿ ನಿನ್ನ ಸಹವಾಸ ನನಗೆ ಬೇಡ ಎಂದು ಬೇರೆಯವರನ್ನು ಅಪ್ಪಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲೇ ಇನ್ನೊಂದು ಹುಡುಗಿ. ಆಗಷ್ಟೇ ಹೈಸ್ಕೂಲು ಮುಗಿಸಿದ ಆಕೆ, ತಾನು ಲವ್ ಮಾಡಿದ ಹುಡುಗನನ್ನು ಮದುವೆಯಾಗಲು ತಂದೆ ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಮೇಟಾಸಿಡ್ ಕುಡಿದು ಬಂದಿದ್ದಳು. ಲವ್ ಎಂಬ ಶಬ್ದದಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಳಿದರೆ ಸರಿಯಾಗಿ ತಿಳಿಯದೇ ಇರುವಷ್ಟು ಚಿಕ್ಕ ವಯಸ್ಸಿನಲ್ಲೇ ಈಗಿನ ಹುಡುಗಿಯರಿಗೆ ತಮ್ಮ ಜೀವದ ಮೇಲೆ ಅಷ್ಟು ಕಾಳಜಿ! ಕಷ್ಟಪಟ್ಟು ದುಡಿದು ಇವರ ಹೊಟ್ಟೆ ಬಟ್ಟೆಗೆ ಹಾಕಿ ಇವರ ‘ತಡಿ’ ಬೆಳೆಸಿ ದೊಡ್ಡದು ಮಾಡಿದ, ತಂದೆ-ತಾಯಿಗೆ, ತನ್ನ ಮಾತು ಕೇಳಲಿಲ್ಲ ಎಂದು ‘ಬುದ್ಧಿ ಕಲಿಸಲು ವಿಷ ತೆಗೆದುಕೊಂಡೆ’ ಎಂಬ ಉವಾಚ ಬೇರೆ! ಅವಳ ಹೊಟ್ಟೆಯ ಒಳಗೆ ಟ್ಯೂಬ್ ತುರುಕಿಸಿ, ನೀರು ಒಳಗೆ ಬಿಟ್ಟು, ಸ್ಟೋಮಕ್ ವಾಶ್ ಆಗಿ, ಅವಳನ್ನು ಅಡ್ಮಿಟ್ ಮಾಡಿ, ಇಂಜೆಕ್ಷನ್ ಕೊಟ್ಟು, ಡ್ರಿಪ್ ಹಾಕಿ ತಲೆಯನ್ನು ಮೇಜಿನ ಮೇಲೆ ಅಡ್ಡ ಇಡುವಷ್ಟರಲ್ಲಿ ಬಂದಿತ್ತು ಇನ್ನೊಂದು ಕೇಸ್.

*****

ಇಬ್ರಾಹಿಂ ಜಿಲ್ಲೆಯ ಗಡಿ ಪ್ರದೇಶಕ್ಕೆ ಬಂದು ಆಗಾಗಲೇ ಮುವ್ವತ್ತು ವರ್ಷಗಳಾಗಿದ್ದವು. ತನ್ನ ತಾಯ್ನಾಡನ್ನು ಬಿಟ್ಟು ಚಿಕ್ಕವನಿದ್ದಾಗಲೇ, ಅಡಿಕೆ ಹೊರುವ ಚಿಕ್ಕದೊಂದು ಬೆತ್ತದ ಕುಕ್ಕೆಯನ್ನು ತಲೆಯ ಮೇಲಿಟ್ಟುಕೊಂಡು ಬಂದು ಈ ಜಿಲ್ಲೆಯ ನೆಲ ತುಳಿದಿದ್ದ, ಇಬ್ಬೀ. ಮನೆ ಮನೆಗೆ ಹೋಗಿ ಅಡಿಕೆ ವ್ಯಾಪಾರ ಶುರು ಮಾಡಿದಾಗ, ಮೊದ ಮೊದಲಿಗೆ ಒಳ್ಳೆಯ ರೇಟು ಕೊಟ್ಟ. ಇವನ ಬರುವಿಕೆಯನ್ನ ಜನ ಕಾಯ ತೊಡಗಿದ್ದರು. ದೊಡ್ಡ ತೋಟ ಇದ್ದವರಂತೂ ಮಂಗಳೂರಿಗೆ ಅಡಿಕೆ ಕಳುಹಿಸುವುದು ವಾಡಿಕೆ. ಇಬ್ಬಿ ಅವರನ್ನು ಬಿಟ್ಟು ಹತ್ತು ಹದಿನೆಂಟು ಮರ ಇದ್ದವರನ್ನು, ಧನಿಗಳ ಒಕ್ಕಲುಗಳನ್ನು, ಸಣ್ಣ ತೋಟದವರನ್ನು ಓಲೈಸ ತೊಡಗಿದ. ಹೋದಲೆಲ್ಲಾ ಹಣ್ಣಡಿಕೆ, ಬಿದ್ದಡಿಕೆ, ಸಣ್ಣ ಅಡಿಕೆ ಎಂದು ವಿಂಗಡಿಸುತ್ತಿದ್ದ. ಲೆಕ್ಕ ಹಾಕುವಾಗ ಬಿದ್ದದ್ದು ಲೆಕ್ಕಕ್ಕಿಲ್ಲ ಎಂದು ಬದಿಗೆ ಸರಿಸಿಟ್ಟು, ಕೊನೆಗೆ ಕುಕ್ಕೆ ತಲೆಗೆ ಏರುವ ಮುನ್ನ ಅವನ್ನೂ ಸೇರಿಸಿ ಹೊರುವುದು ಇವನ ಜಾಯಮಾನ. ಕುಡಿತದ ಚಟ ಇಲ್ಲ, ಸೇದಿದರೆ ಆಗೊಂದು ಈಗೊಂದು ಬೀಡಿ. ಉಟ್ಟ ಒಂದು ಪಂಚೆ, ಹಾಕಿದ ಮಾಸಲು ಬನಿಯನ್ನು, ತಲೆಗೊಂದು ಬಿಳಿ ಚಾಲೇಮುಂಡು ಇಷ್ಟೇ ಅವನ ಉಡುಗೆ-ತೊಡುಗೆ. ಇರಲಿಕ್ಕೆ ಒಂದು ಮನೆಯ ಸೂರಿನ ಕೆಳಗೆ ಬಿದಿರಿನ ಗಳ ಹಾಕಿ, ತಟ್ಟಿ ಕಟ್ಟಿದ ಕೋಣೆ. ತಿನ್ನಲು ಕುಚಲಕ್ಕಿ ಗಂಜಿ, ಒಂದು “ಒಣಕ್ ಮತ್ತಿ” ಮೀನು, ಅದೂ ಒಂದು ತುಂಡು, ಇವನ ಆಹಾರ. ಬೆಳಗ್ಗೆ ಎದ್ದು ಹೊರಟರೆ ಹಿಂತಿರುಗುವುದು ರಾತ್ರಿಯೆ.

ಈ ಹಿಂದೆಯೇ ಹೇಳಿದಂತೆ ಇವನ ಬರುವಿಕೆಯ ದಾರಿ ಕಾಯುವವರು ಕೆಲವರು. ಗೊಬ್ಬರ ತರಲು ಹಣ ಬೇಕೆಂದೋ, ಇಲ್ಲ ಇನ್ನೇನೋ ಕಾರಣ ಹೇಳಿ ಇಬ್ರಾಹಿಂಗೇ ಆ ವರ್ಷದ ಪಸಲು ಕೊಡುತ್ತೇನೆಂದು ಹೇಳಿ, ಅಡ್ವಾನ್ಸ್ ಕೇಳುವ ಚಿಂತೆಯಲ್ಲಿ ಇರುವ ಯಜಮಾನರು ಒಂದು ಕಡೆ. ಇನ್ನು, ಕೈ ತುಂಬಾ ಎಲೆ ತೆಗೆದು ಬಾಯಿಗೆ ಹಾಕಲು, ಹೊಗೆ ಸೊಪ್ಪು ತರಲು ಗಂಡ ಹಣ ಕೊಡದೇ ಇರುವಾಗ ಸೆರಗಲ್ಲಿ ಕಟ್ಟಿಟ್ಟ ಹಣ್ಣಡಿಕೆಯನ್ನ ಯಾರಿಗೆ ತೋರಿಸದೆ ಇಬ್ರಾಹಿಂಗೆ ಕೊಡುವ ಯಜಮಾನಿ, ಕುಡಿತದ ಚಟಕ್ಕೆ ಅಪ್ಪ ಹಣ ಕೊಡುವುದಿಲ್ಲ ಎಂದಾಗ ಒಣಗಿದ ರಾಶಿಯಿಂದಲೇ ಅಡಿಕೆ ತೆಗೆದು ಅಟ್ಟದ ಮೇಲಿಟ್ಟ ಮಗರಾಯ. ತನಗೇ ಕುಡಿಯಲು ಹಣವಿಲ್ಲದ ಗಂಡ, ತನ್ನ ಪೌಡರ್, ಸ್ನೋ, ಅಲಂಕಾರಕ್ಕೆ ಹಣ ಎಲ್ಲಿಂದ ತರುತ್ತಾನೆ ಎಂದು ಆಗಾಗ ಮರದಿಂದ ಬಿದ್ದ ಅಡಿಕೆ ತೆಗೆದು ಮೂಲೆಯಲ್ಲಿಟ್ಟ ಸೊಸೆ… ಹೀಗೆ ವಿವಿಧ ಲಾಭಕ್ಕೆ, ಹಲವು ಕಾರಣಕ್ಕಾಗಿ ಕಾಯುವ ಮಂದಿಗೆ ಟೋಪಿ ಹಾಕಲು, ಈ ಎಲ್ಲಾ ಬಕರಾಗಳ ಚರಿತ್ರೆಯನ್ನು ಅಮೂಲಾಗ್ರವಾಗಿ ಬಲ್ಲವನಾಗಿದ್ದ ಇಬ್ರಾಹಿಂ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ, ಬೆಳೆದ ಅಡಿಕೆ ಆರಕ್ಕೆ ಹೋಗುವುದು ಇಬ್ರಾಹಿಂಗೆ ಮೂರಕ್ಕೆ ಸಿಕ್ಕಿ, ಎಂಟಕ್ಕೆ ಮಂಗಳೂರಿನಲ್ಲಿ ಮಾರಿ ಹೊಟ್ಟೆ ಬೆಳೆಸಿ, ಬೈಕು ತೆಗೆದು, ಮನೆ ಮಾಡಿ, ಕೊನೆಗೆ ಜೀಪು ಕೂಡಾ ಕೊಂಡು ಕೊಂಡ. ಜನರ ಬಾಯಲ್ಲಿ ಇಬ್ಬಿ ಆಗಿದ್ದವನು, ಇಬ್ರಾಹಿಂ ಇಚ್ಚನಾಗಿ, ತಲೆಯ ಮೇಲೆ ಇರುತ್ತಿದ್ದ ಹೊರೆ ಹೋಗಿ, ಸ್ವಲ್ಪ ಸಮಯದಲ್ಲಿ ಹೊಟ್ಟೆ ಮುಂದೆ ಬಂದ ಇಬ್ರಾಹಿಂ ಕೊನೆಗೆ ಎಲ್ಲರ ಬಾಯಲ್ಲಿ ಇಬ್ರಾಹಿಂ “ಸಾಹುಕಾರ” ಆಗಿ ಬಿಟ್ಟಿದ್ದ. ಇವನಿಗೆ ಅಡಿಕೆ ಕೊಟ್ಟವರು ಮನೆಯ ಸೂರು ಸೋರಿಕೊಂಡು, ಹರಿದ ಕೊಡೆ ಹಿಡಿದುಕೊಂಡು, ಇವನ ಜೀಪಿನಲ್ಲಿಯೆ ಬಾಡಿಗೆ ಕೊಟ್ಟು ಅತ್ತಿತ್ತ ಓಡಾಡುವ ಸ್ಥಿತಿ ಬಂದಿತ್ತು.

ಹೀಗಿದ್ದಾಗ ಒಂದು ದಿನ ಹೊಟ್ಟೆ ಉರಿ ಶುರುವಾಗಿ ನಮ್ಮ ಸಾಹುಕಾರರಿಗೆ ಏನೋ ಒಂದು ‘ತಳರ್ಚ’ ಅಥವಾ ಸುಸ್ತು. ಹೆಂಡತಿ ಅವಳಿಗೆ ಗೊತ್ತಿದ್ದ ಎಲ್ಲಾ ಕಷಾಯ ಮಾಡಿಕೊಟ್ಟರೂ ಅದು ಉಪಯೋಗಕ್ಕೆ ಬರಲಿಲ್ಲ. ಕೇರಳದಿಂದ ಬಂದವರಿಗೆ ನಾಟಿಮದ್ದು, ಆಯುರ್ವೇದದಲ್ಲಿ ತುಂಬಾ ನಂಬಿಕೆ. ಆಗ ಅವನು ಹೋದದ್ದು ಪಕ್ಕದ ಹಳ್ಳಿಯಲ್ಲಿ ಇದ್ದ ಒಬ್ಬ ಮಹಾ ವೈದ್ಯನ ಬಳಿ. ಆತನೋ ಅಳಲೆ ಕಾಯಿ ಪಂಡಿತ. ಓದಿದ್ದು ಎಂಟನೇ ತರಗತಿಯ ವರೆಗೆ ಮಾತ್ರ. ಬೆಳೆದದ್ದು ಕಾಸರಗೋಡಿನ ಒಬ್ಬ ಡಾಕ್ಟರ್ ಬಳಿ ಕೈ ಕೆಲಸದವನಾಗಿ. ಅಲ್ಲಿ ಆ ಡಾಕ್ಟರ್ ಕೊಡುವ ಔಷಧ, ಅವರ ಮೇಜಿನ ಮೇಲೆ ಕಾಣುತ್ತಿದ್ದ ಮಾತ್ರೆಗಳ ಡಬ್ಬ, ಬ್ಯಾಗ್ ಹಿಡಿದುಕೊಂಡು ಬಂದು ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿ, ಈ ಕಾಯಿಲೆಗೆ ಅದು ಒಳ್ಳೆಯದು, ಇದು ಒಳ್ಳೆಯದು ಎಂದು ಹೇಳುವ ಮೆಡಿಕಲ್ ರೆಪ್ರೆಸೆಂಟೀಟಿವ್ ಗಳನ್ನು ನೋಡುತ್ತಾ ಬೆಳೆದವನು. ಬೆಳೆದು ಮುಂದೆ “ದಡ್ಡ” ವ ನಾದಾಗ ಒಂದು ರಾತ್ರಿ ಡಾಕ್ಟರರ ಸ್ಟೇತೋಸ್ಕೋಪ್, ಬೀ. ಪೀ. ನೋಡುವ ಮೆಶೀನ್, ಇಂಜೆಕ್ಷನ್ ಕೊಡುವ ಸಿರಿಂಜ್ ಗಳ ಜೊತೆ ಅಲ್ಲಿಂದ ಮಾಯವಾದವನು ಬಂದು ಸೇರಿದ್ದು ಡಾ. ಹರಿ ವೈದ್ಯನಾಗಿ ಆ ಹಳ್ಳಿಯಲ್ಲಿ. ಕೇರಳದಿಂದ ಬಂದ ಪಂಡಿತ ಎಂದಮೇಲೆ ಕೇಳಬೇಕೇ. ಹಳ್ಳಿಯ ಜನರು ಅಲ್ಲಿಗೆ ಹೋಗಲು ತೊಡಗಿದ್ದರು. ನಮ್ಮ ಇಬ್ರಾಹಿಂ ಸಾಹುಕಾರರು ಕೂಡ ಹಾಗೆ ಮಾಡಿದ್ದರು.

ತನ್ನ ಸ್ಟೆತೋಸ್ಕೋಪ್ ಅನ್ನು ಕಿವಿಗೂ ಹಾಕದೇ ಕತ್ತಿನ ಸುತ್ತಲೇ ಇಟ್ಟು ಕೊಂಡು, ಇವನನ್ನು ಕೂಲಂಕಷವಾಗಿ, ಪರೀಕ್ಷೆ ಮಾಡಿದರು ನಮ್ಮ ಅ. ಕಾ. ಪಂಡಿತರು. ಎಲ್ಲಾ ನೋಡಿ ಒಂದು ಸ್ಪೆಷಲಿಸ್ಟ್ ತರ ಮೂತ್ರ ಪರೀಕ್ಷೆ ಮಾಡ ಬೇಕು ಎಂದಾಗ ಇಬ್ರಾಹಿಂ, ಬಾತ್ರೂಮಿಗೆ ಹೋಗಿ ಅಲ್ಲಿಯೇ ಇದ್ದ ಪಾತ್ರೆಗೆ ಮೂತ್ರ ಮಾಡಿ, ಅದನ್ನು ಡಾಕ್ಟರಿಗೆ ತಂದು ಕೊಟ್ಟ. ಅವರು ಒಂದು ಟೆಸ್ಟ್ ಟ್ಯೂಬ್ ತೆಗೆದು, ಐದು ಮಿಲಿ ಬದಲು ಅದರ ಅರ್ಧಕ್ಕೆ ನೀಲಿ ಬಣ್ಣದ ಬೆನೆಡಿಕ್ಟ್ ದ್ರಾವಣವನ್ನು ಹಾಕಿ, ಅದಕ್ಕೆ ಎಂಟು ತೊಟ್ಟು ಮೂತ್ರದ ಬದಲು ಐದು ಮಿಲಿ ಮೂತ್ರ ಸೇರಿಸಿ, ಸ್ಪಿರಿಟ್ ದೀಪದಲ್ಲಿ ಇವನ “ಡಾಕ್ಟರು” ಕಾಯಿಸುವಾಗ, ಕುದಿಯಲು ತೊಡಗಿದ ದ್ರಾವಣ ಪಟ್ಟಂತ ಹಾರಿ, ಅರ್ಧ ನೆಲಕ್ಕೆ ಬಿತ್ತು. ಉಳಿದ ಅಂಶ ನೀಲಿಯ ಬದಲು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗಿತ್ತು. ಹಸಿರು, ಹಳದಿ, ಕಿತ್ತಳೆ, ಕೆಂಪು ಬಣ್ಣಗಳು ಮೂತ್ರದಲ್ಲಿ ಸಕ್ಕರೆಯ ಅಂಶವನ್ನು ತೋರಿಸುತ್ತದೆ ಎಂದು ಅರ್ಧಂಬರ್ಧ ಗೊತ್ತಿದ್ದ ಅವರು ಯುರೇಕಾ ಎಂದು ಆರ್ಕಿಮಿಡೀಸ್ ಬೆತ್ತಲೆ ಓಡಿದಂತೆ, ನೋಡಿಲ್ಲಿ ಇದರ ಬಣ್ಣ ಎಂದಾಗ, ಸುಸ್ತು ಎಂದು ಪರೀಕ್ಷೆ ಮಾಡಿಸ ಹೋದ ಇಬ್ರಾಹಿಂ ಸಾಹುಕಾರನಿಗೆ ಒಂದು ಸಿಹಿ ಸುದ್ದಿ ಕಾದಿತ್ತು. ಆತ ಕುಕ್ಕೆ ಹೊರುವವನ ಸ್ಥಿತಿಯಿಂದ ಮೇಲೆ ಎದ್ದು ಶ್ರೀಮಂತರ ಸಾಲಿಗೆ ಸೇರಿ ರಾಜ ಕಾಯಿಲೆ ಹಿಡಿದು ಕೊಂಡಿದ್ದ.

ಲವ್ ಎಂಬ ಶಬ್ದದಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಳಿದರೆ ಸರಿಯಾಗಿ ತಿಳಿಯದೇ ಇರುವಷ್ಟು ಚಿಕ್ಕ ವಯಸ್ಸಿನಲ್ಲೇ ಈಗಿನ ಹುಡುಗಿಯರಿಗೆ ತಮ್ಮ ಜೀವದ ಮೇಲೆ ಅಷ್ಟು ಕಾಳಜಿ! ಕಷ್ಟಪಟ್ಟು ದುಡಿದು ಇವರ ಹೊಟ್ಟೆ ಬಟ್ಟೆಗೆ ಹಾಕಿ ಇವರ ‘ತಡಿ’ ಬೆಳೆಸಿ ದೊಡ್ಡದು ಮಾಡಿದ, ತಂದೆ-ತಾಯಿಗೆ, ತನ್ನ ಮಾತು ಕೇಳಲಿಲ್ಲ ಎಂದು ‘ಬುದ್ಧಿ ಕಲಿಸಲು ವಿಷ ತೆಗೆದುಕೊಂಡೆ’ ಎಂಬ ಉವಾಚ ಬೇರೆ!

ಇಬ್ರಾಹಿಮನಿಗೆ ನಮ್ಮ ಪಂಡಿತರಲ್ಲಿ ಅಪಾರ ಭಕ್ತಿ, ನಂಬಿಕೆ. ಟೆಸ್ಟ್ ಟ್ಯೂಬನ್ನು ಮೇಲೆ ಕೆಳಗೆ ಹಿಂದೆ ಮುಂದೆ ಎಲ್ಲಾ ತಿರುಗಿಸಿ ನೋಡಿದ ನಮ್ಮ ರಾಯರು ನಿನಗೆ ಸಕ್ಕರೆ ಕಾಯಿಲೆ ಇದೆ, ನೀನು ದಿನಕ್ಕೆ ಎರಡು ಬಾರಿ ಎರಡು ಚಮಚದಂತೆ ತ್ರಿಫಲಾಧಿ ಚೂರ್ಣ, ಎರಟಿ ಮಧುವಿನ ಕಷಾಯ ಮತ್ತು ಡಯೋನಿಲ್ ಮಾತ್ರೆ ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು ಎಂದು ಹೇಳಿ, ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು. ಮನೆಗೆ ಬಂದ ಇಬ್ರಾಹಿಂ ತನಗೆ ದೊಡ್ದ ರೋಗ ಬಂದು ಸ್ವರ್ಗವೇ ಸಿಕ್ಕಿತೆಂಬ ಸಂತಸದಲ್ಲಿ ಅವರು ಹೇಳಿದ ಮಾತ್ರೆಯನ್ನು ಕಷಾಯವನ್ನು ಕುಡಿದು ಮಲಗಿದ. ಮರುದಿನ ಹಾಸಿಗೆಯಿಂದ ಏಳ ಬೇಕಾದರೆ ತಲೆ ತಿರುಗುವುದು ಬಹಳ ಜಾಸ್ತಿಯಾಗಿ, ಜೀಪಿನ ಡ್ರೈವರ್ ಅನ್ನು ಕರೆದು ಮತ್ತೆ ವೈದ್ಯರ ಬಳಿ ಹೋಗಿದ್ದ. ವೈದ್ಯರು ಪರೀಕ್ಷೆ ಮಾಡಿ, ನಾಡಿ ಹಿಡಿದು ನೋಡಿ ಏನೂ ಹೆದರ ಬೇಡ ರಾತ್ರಿಯವರೆಗೆ ಇಲ್ಲಿಯೇ ಮಲಗಿರು ಎಂದಿದ್ದರು. ಸಂಜೆಯಾದಂತೆ ಸುಸ್ತು ಹೆಚ್ಚಾದಾಗ ವೈದ್ಯರು ನೋಡು, ನೀನು ನಿನ್ನೆ ಪಥ್ಯ ಸರಿಯಾಗಿ ಮಾಡಲಿಲ್ಲ. ಅದಕ್ಕೆ ಸಕ್ಕರೆ ಮತ್ತೆ ಹೆಚ್ಚಾಗಿದೆ ಎನ್ನುವ ಸಮಯದಲ್ಲಿ ತ್ರಾಣ ಇಲ್ಲದ ಇಬ್ರಾಹಿಂ ಕುಸಿದು ಬೀಳುವುದರಲ್ಲಿದ್ದ. ಇದನ್ನು ನೋಡಿದ ವೈದ್ಯರು ನಿನ್ನ ಶರೀರದಲ್ಲಿ ಸಕ್ಕರೆ ಮಿತಿಮೀರಿ ಹೋಗಿದೆ, ಅದಕ್ಕೆ ನೀನು ಹೀಗೆ ಬೆವರುತ್ತಿರುವುದು. ಬೆವರಿನಲ್ಲಿ ಸಕ್ಕರೆ ಹೇಗೆ ಹರಿದುಹೋಗುತ್ತಿದೆ. ಬೇಕಾದರೆ ಬೆವರನ್ನು ನೆಕ್ಕಿ ನೋಡು ಎಂದಾಗ, ಮೊದಲು ಬೇಡವೆನಿಸಿದರೂ ಅವರ ಒತ್ತಾಯಕ್ಕೆ ಕಟ್ಟು ಬಿದ್ದು ನೆಕ್ಕಿದಾಗ ನಾಲಿಗೆಗೆ ರುಚಿಸಿದ್ದು ಬರೀ ಉಪ್ಪು. ಹೇಳಿದರೆ ವೈದ್ಯರು ಸಿಟ್ಟಿಗೇಳ ಬಹುದು ಎಂದು, ಹೌದು, ಸಿ……ಹಿ ಸಿ…..ಹಿ ಎಂದು ನಿಧಾನಕ್ಕೆ ಹೇಳಿದ್ದ ಅವನು.

ಕೂಡಲೇ “ಡಾಕ್ಟರ್” ಇಷ್ಟು ಜಾಸ್ತಿ ಸಕ್ಕರೆಗೆ ಬೇಕೆ ಬೇಕು ರಾಮಬಾಣ ಎನ್ನುತ್ತಾ ಬ್ಯಾಗಿನಲ್ಲಿದ್ದ ಇನ್ಸುಲಿನ್ ಇಂಜೆಕ್ಷನ್ ಅನ್ನು ತೆಗೆದು ಚುಚ್ಚಿದರು. ಅದನ್ನು ಕೊಟ್ಟ ಕೆಲವೇ ನಿಮಿಷದಲ್ಲಿ ಇಬ್ರಾಹಿಂ ಸರಿಯಾದ..

ನಿಲ್ಲಲು ತ್ರಾಣವಿಲ್ಲದೇ ಕುಸಿಯುತ್ತಿದ್ದ ಅವನು ಒಮ್ಮೆಲೇ ನೆಟ್ಟಗಾದ. ಆದರೇ, ತನ್ನ ಕಾಲಿನ ಮೇಲೆ ಅಲ್ಲಾ, ಅಂಗಾತ ನೆಲದ ಮೇಲೆ!! ಬಿದ್ದು ಹೊರಳಾಡಿದ ಇಬ್ರಾಹಿಮನ ಪ್ರಜ್ಞೆ ಹೋದಾಗ ಮಾತ್ರ ವೈದ್ಯನಿಗೆ ತಾನು ಬೇಡದ ಕೆಲಸ ಮಾಡಿದೆ ಎಂಬುದು ಗೊತ್ತಾಗಿ, ಜೀಪ್ ಡ್ರೈವರನ್ನು ಕರೆದು ಇವರಿಗೆ ಸಕ್ಕರೆ ಬಹಳ ಜಾಸ್ತಿಯಾಗಿದೆ ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದರು.

ಆ ರಾತ್ರಿ ಬಂದ ಮೂರನೇ ಕೇಸ್ ಇದು.

ಇಬ್ರಾಹಿಂ ನನ್ನು ಪರೀಕ್ಷಿಸಿದ ನನಗೆ ನಾಡಿಯಾಗಲಿ, ರಕ್ತದ ಚಲನೆಯಾಗಲೀ ಸಿಗದಿರುವಾಗ ಅವನ ಜೀವ ಹೋಗಿದೆ ಎಂದೆನಿಸಿ ಹೃದಯಬಡಿತ ನೋಡಿದೆ. ಮೈಯ್ಯೆಲ್ಲಾ ಬೆವರಿನಿಂದ ತೊಯ್ದು, ಎದೆ ಬಡಿತ ನಿಧಾನವಾಗಿ, ಮೈ ಎಲ್ಲ ತಣ್ಣಗಾದದ್ದನ್ನು ಕಂಡ ನನಗೆ ಏನು ಆಗಿರಬಹುದು ಎಂದು ಗೊತ್ತಾಯ್ತು. ಕೂಡಲೇ ಗ್ಲುಕೋಸ್ ಡ್ರಿಪ್ ಹಾಕಲು ಹೇಳಿ ಇಪ್ಪತೈದು ಪರ್ಸೆಂಟ್ ಡೆಕ್ಸ್ಟ್ರೋಸ್ ಅನ್ನು ನರಕ್ಕೆ ಚುಚ್ಚಿದೆ. ಸಿಸ್ಟರ್ರನ್ನು ಕರೆದು ಸ್ವಲ್ಪ ಸಕ್ಕರೆಯನ್ನು ಅವರ ಬಾಯಿಗೆ ಹಾಕಲು ಹೇಳಿದೆ. ಅವರ ಜೊತೆಗೆ ಜೀಪಿನಲ್ಲಿ ಒಂದು ದೊಡ್ಡ ತಂಡವೇ ಬಂದಿತ್ತು. ಈ ಊರಿನ “ಕೆಲವು” ಜನರಲ್ಲಿ ಅದು ಒಂದು ವಿಶೇಷ ಅಭ್ಯಾಸ. ಒಬ್ಬ ರೋಗಿಯನ್ನು ಕರೆದುಕೊಂಡು ಹೋಗುವ ಜೀಪಿನಲ್ಲಿ ಮನೆಯವರೆಲ್ಲ, ಜಾಗ ಇದ್ದರೆ ಊರಿನವರು ಕೂಡಾ, ಹತ್ತಿ ಬರುವುದು ದಿನ ನಿತ್ಯದ ನೋಟ.

ಅದರಲ್ಲಿ ಒಬ್ಬ,
“ಏನು ಸಾರೇ. ಪಂಸಾರೆ (ಸಕ್ಕರೆ ) ಸೂಕಡ್ (ಕಾಯಿಲೆ) ಇರುವ ನಮ್ಮ ಏಟನಿಗೆ ( ಅಣ್ಣನಿಗೆ) ನೀನು ಗ್ಲೂಕೋಸ್, ಚಕ್ಕರೆ ಕೊಡೋದು ಯಾಕೆ. ಇದು ಶೆರಿಯಲ್ಲ, ಏನಾದರೂ ಬುದ್ದಿಮುಟ್ಟು (ತೊಂದರೆ ) ಆಯೆಂಗಿಲಿ ( ಆದರೆ ) ಎಂದು ಅವನದೇ ಮಲಯಾಳ ಮಿಶ್ರಿತ ಕನ್ನಡದಲ್ಲಿ ಹೇಳಿದ.

ಅವನನ್ನು ದುರುಗುಟ್ಟಿ ನೋಡಿದ ನಾನು ವಾರ್ಡ್ ಬಾಯ್’ನ್ನು ಕರೆದು ಎಲ್ಲರನ್ನು ಒತ್ತಾಯದಿಂದ ಹೊರಗೆ ಕಳುಹಿಸಿದೆ, ಚಿಕಿತ್ಸೆ ಮುಂದುವರಿಯಿತು. ನಿಧಾನವಾಗಿ ಎದ್ದು ಕುಳಿತ ಇಬ್ರಾಹಿಂ, ಸರಾಗವಾಗಿ ಉಸಿರಾಡಿದ್ದ. ಮರುದಿನ ಮೂರು ಬಾರಿ ಅವನ ರಕ್ತದ ಪರೀಕ್ಷೆ ಮಾಡಿ ನೋಡಿದಾಗ ಸಕ್ಕರೆಯ ಅಂಶ ಸಾಮಾನ್ಯವಾಗಿತ್ತು. ಇನ್ನು ಎರಡು ದಿವಸ ಅವನನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ದಿನವೂ ಪರೀಕ್ಷೆ ಮಾಡುತ್ತಾ ಯಾವುದೇ ತೊಂದರೆ ಇಲ್ಲದೆ ಅವನನ್ನು ಮನೆಗೆ ಕಳುಹಿಸಿದ್ದೆ.

ಇಲ್ಲಿ ಆಗಿದ್ದು ಇಷ್ಟೇ… ಇಬ್ರಾಹಿಂನ ಮೂತ್ರ ಮೊದಲು ಪರೀಕ್ಷೆ ಮಾಡಿದ ಸಮಯದಲ್ಲಿ ಅದರಲ್ಲಿ ಸಕ್ಕರೆಯ ಅಂಶ ಸ್ವಲ್ಪ ಕಂಡು ಬಂದದ್ದು ನಿಜ. ಆದರೆ ಮೂತ್ರದಲ್ಲಿ ಕಂಡು ಬರುವ ಎಲ್ಲಾ ಅಂಶ ಮಧುಮೇಹ ಅಥವಾ ಡಯಾಬಿಟಿಸ್ ಅಲ್ಲ. ಕಲುಷಿತ ಬಾಟ್ಲಿಯಿಂದ, ಪ್ರಯೋಗಾಲಯದ ತಪ್ಪಿನಿಂದ, ಪರೀಕ್ಷೆಗೆ ಹಾಕುವ ದ್ರಾವಣ, ಮೂತ್ರದ ಪ್ರಮಾಣದಿಂದ ಹಿಡಿದು ರಿನಲ್ ಗ್ಲೈಕಾಸುರಿಯ ಎಂಬ ಸಾಧಾರಣದ ಸ್ಥಿತಿಯವರೆಗೆ ಈ ಅಂಶ ಕಾಣಬಹುದು

ಸಕ್ಕರೆ ಅಂಶ ಮೂತ್ರದಲ್ಲಿ ಕಂಡುಬಂದಾಗ ರಕ್ತದಲ್ಲಿ ಇದರ ಪ್ರಮಾಣ ಎಷ್ಟು ಇದೆ ಎಂದು ನೋಡುವುದು ಸರಿಯಾದ ಕ್ರಮ. ಪ್ರತಿಯೊಬ್ಬ ಮನುಷ್ಯನ ಶರೀರದಲ್ಲಿ ಸಕ್ಕರೆಯ ಅಂಶ ಇದ್ದೇ ಇರುತ್ತದೆ ಮತ್ತು ಬದುಕಲು ಅದು ಅತೀ ಅವಶ್ಯಕ. ಆಹಾರ ಸೇವಿಸದೆ ಇರುವಾಗ ಅದು ರಕ್ತದಲ್ಲಿ ಒಂದು ಲೀಟರ್ ಗೆ ಎಪ್ಪತ್ತರಿಂದ ನೂರಾ ಹತ್ತು ಮಿಲಿ ಗ್ರಾಂ ಇರುವುದು ಸಾಮಾನ್ಯ. ಹೆಚ್ಚಾದ ಸಕ್ಕರೆಯನ್ನು ಹೊರ ಹಾಕಲು ಮಾನವನ ಕಿಡ್ನಿಯಲ್ಲಿ ದೈವ ನಿರ್ಮಿತವಾದ ಒಂದು ಫಿಲ್ಟರ್ ಇದ್ದು ನೂರೆಂಬತ್ತು ಮಿಲಿ ಗ್ರಾಂನಿಂದ ಜಾಸ್ತಿಯಾದಾಗ, ಅದನ್ನು ಹೊರ ಹಾಕುತ್ತದೆ. ಆದರೆ ಈ ವಿಷಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ನಮ್ಮ ಪಂಡಿತರು ಮೂತ್ರದಲ್ಲಿ ಬಣ್ಣ ಕಂಡ ಕೂಡಲೆ, ಕೆಂಪು ಬಣ್ಣ ಕಂಡ ಗೂಳಿಯಂತೆ ಹರಿ ಹಾಯ್ದು, ಡಯೋನಿಲ್ ಮಾತ್ರೆಯನ್ನು ಹಾಕಿದ್ದರು. ನಿಜವಾದ ಮಧುಮೇಹ ಇರುವ ರೋಗಿಗೆ ಇದನ್ನು ಅರ್ಧ ಮಾತ್ರೆಯಿಂದ ಶುರು ಮಾಡಿ, ನಂತರ ಕೆಲವು ದಿನಗಳ ಬಳಿಕ ಹಿಡಿತ ಬಾರದಿದ್ದರೆ ಮಾತ್ರ ಜಾಸ್ತಿ ಮಾಡುವುದು ಸರಿಯಾದ ಚಿಕಿತ್ಸೆ. ಆದರೆ ಇಲ್ಲಿ ಪಂಡಿತರು ಮೂರು ಮಾತ್ರೆ ಹಾಕಿದಾಗ ಶರೀರದಲ್ಲಿನ ಸಕ್ಕರೆ ಸಹಜ ಸ್ಥಿತಿಗಿಂತ ( ನಾರ್ಮಲ್ ಲೆವೆಲ್ ) ಬಹಳ ಕಡಿಮೆಯಾಗಿ, ಮೆದುಳಿಗೆ ಬೇಕಾದ ಸಕ್ಕರೆ ಸಿಗಲಿಲ್ಲ. ಹಾಗಾಗಿ ಅವನಿಗೆ ಸುಸ್ತು ಹೆಚ್ಚಾಗಿ, ಬೆವರಿಕೆಗೆ ಎಡೆಯಾಗಿತ್ತು. ಇದನ್ನು ಸಕ್ಕರೆ ಹೆಚ್ಚಾಗಿ ಹೀಗೆ ಆಗುತ್ತಿದೆ ಎಂದು ಅಪಾರ್ಥ ಮಾಡಿಕೊಂಡು ವೈದ್ಯರು, ಅದರ ಪ್ರಮಾಣವನ್ನು ಕಡಿಮೆ ಮಾಡುವ ಇನ್ಸುಲಿನ್ ಇಂಜೆಕ್ಷನ್ ಕೊಟ್ಟು, ಮೊದಲೇ ಕಡಿಮೆಯಾಗಿದ್ದ ಸಕ್ಕರೆಯನ್ನು ಇನ್ನೂ ಕಡಿಮೆ ಮಾಡಿ ಹೈಪೋಗ್ಲ್ಯಸಿಮಿಯಾ ಎಂಬ ಸ್ಥಿತಿಗೆ ರೋಗಿಯನ್ನು ತಂದಿಟ್ಟಿದ್ದರು.

ಶರೀರದಲ್ಲಿ ಕಡಿಮೆಯಾಗಿದ್ದ ಸಕ್ಕರೆಯ ಅಂಶ, ರಕ್ತನಾಳಕ್ಕೆ ಗ್ಲೂಕೋಸ್ ಕೊಟ್ಟು, ಬಾಯಿಯ ಮೂಲಕ ಸಕ್ಕರೆ ತಿನ್ನಿಸಿದಾಗ ಸರಿಯಾಗಿ, ರಕ್ತವನ್ನು ಸೇರಿ, ಮೆದುಳು ಸರಿಯಾಗಿ ಕೆಲಸ ಮಾಡಿ ರೋಗಿಯೂ ಮೊದಲಿನಂತಾಗಿದ್ದ.

******

ಈಗಲೂ ಇಬ್ರಾಹಿಂ ಕೆಲವೊಮ್ಮೆ ಆಸ್ಪತ್ರೆಗೆ ಬರುತ್ತಿರುತ್ತಾರೆ. ಮೂತ್ರ ಪರೀಕ್ಷೆಯಲ್ಲಿ ಈಗಲೂ ಸಕ್ಕರೆ ಅಂಶ ತೋರಿಸುತ್ತಿದೆ. ಆದರೆ ಈಗ ಅವರಿಗೆ ಮತ್ತು ನನಗೆ ಇದರ ಬಗ್ಗೆ ಚಿಂತೆ ಇಲ್ಲ. ಯಾಕೆಂದರೆ ಅದು ಮಧುಮೇಹ ಅಥವಾ ಡಯಾಬಿಟಿಸ್ ಅಲ್ಲ ಎನ್ನುವುದು ನಮ್ಮಿಬ್ಬರಿಗೂ ತಿಳಿದಿದೆ.

ಆದರೆ ಇದು ಒಂದೆಡೆಯಾದರೆ, ಇನ್ನೊಂದೆಡೆ ನಮ್ಮ ಅ. ಕಾ. ಪಂಡಿತರು ಇನ್ನೂ ಹೆಚ್ಚಿನ “ಮುತುವರ್ಜಿ” ಯಿಂದ ಕೆಲಸ ಮಾಡುತ್ತಿದ್ದಾರೆ. ಇಬ್ರಾಹಿಂನ ಸಕ್ಕರೆಯ ಕಥೆ ಹೆಚ್ಚಿನ ಯಾರಿಗೂ ಗೊತ್ತಿಲ್ಲದೆ ಇರುವುದರಿಂದ, ಈ ವೈದ್ಯರ ಬಳಿ ಬರುವವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಇತ್ತೀಚಿಗೆ ಒಂದು ದೊಡ್ಡ ಕಾರ್ ಖರೀದಿಸಿ, ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಹೊಸ ಮನೆ ಕಟ್ಟಲು ಜಾಗ ಹುಡುಕುತ್ತಿದ್ದಾರೆ ಎಂದು ಯಾರೋ ನನಗೆ ಹೇಳಿದರು….