ಇಂಥ ಅದೆಷ್ಟೋ ಸನ್ನಿವೇಶಗಳನ್ನು ನೀವುಗಳೂ ಕೇಳಿರಬಹುದು. ಆಟೋಗಳಲ್ಲಿ, ಸಿಟಿ ಬಸ್‌ಗಳಲ್ಲಿ ಓಡಾಡುವಾಗ ಇಂಥ ಕೆಲವು ತುಣುಕುಗಳು ಯಾವುದೋ ಸಿನೆಮಾ ಟೀಸರ್‌ಗಳಂತೆ ನಮ್ಮ ಕಣ್ಣೆದುರು ಹಾದು ಹೋಗಬಹುದು. ತರಹೇವಾರಿ ಸಿನೆಮಾಗಳು ಬಂದಂತೆ ಪ್ರಯಾಣದ ಸನ್ನಿವೇಶಗಳೂ ಕೂಡ ಬಂದು ಬಂದು ಹೋಗುತ್ತವೆ. ಕೊರೊನಾ ನಂತರ ಥಿಯೇಟರಿನಲ್ಲಿ ಸಿನೆಮಾಗಳನ್ನು ನೋಡುವವರ ಸಂಖ್ಯೆ ಈಗ ಕುಸಿದಿದೆ. ಎಲ್ಲಾ ಓಟಿಟಿಯಲ್ಲಿ ನೋಡಿಬಿಡ್ತಾರೆ. ಈಗಂತೂ ‘ಡೌನ್ ಪೇಮೆಂಟೋ, ಇಲ್ಲಾ ಸೆಕೆಂಡ್ ಹ್ಯಾಂಡೋ ಮನೆಗ್ ಒಂದ್ ಕಾರ್ ಇರ್ಲಿ’ ಎಂದು ದುಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಆದರೂ ಸ್ವಂತ ವಾಹನ ಹೊಂದಿದ ಬದಲಾವಣೆಯಾಗಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೈದನೆಯ ಬರಹ ನಿಮ್ಮ ಓದಿಗೆ

   ನಾಗರಿಕತೆ ಮನುಷ್ಯ ಸಮಾಜವನ್ನು ಇಣುಕಿದಾಗಿನಿಂದ ಈಗಿನ ತುರ್ಯಾವಸ್ಥೆ  ತಲುಪುವವರೆಗೂ ಸಾಮಾಜಿಕರು ನಂಬಿದ್ದು ಸಾರ್ವಜನಿಕ ಸಾರಿಗೆಯನ್ನು. ಎತ್ತಿನಗಾಡಿ, ಜಟಕಾ, ಸೈಕಲ್ ರಿಕ್ಷಾದ ಯುಗ ಕಳೆದು ಈಗ ನಾವು ಪ್ರಯಾಣದಲ್ಲೂ, ಜೀವನಶೈಲಿಯಲ್ಲೂ ‘ಆಟೋ’ ಯುಗಕ್ಕೆ ಬಂದಿದ್ದೇವೆ.  ತುರ್ತಾಗಿ ಎಲ್ಲಿಗಾದ್ರೂ ಹೊಗಬೇಕೆಂದರೆ ಶ್ರೀಸಾಮಾನ್ಯ ಹಿಡಿಯುವುದೇ ಆಟೋವನ್ನು. ಕ್ಷಮಿಸಿ ಆಟೋ ರಿಕ್ಷಾ ಅನ್ನಬೇಕು ಅಲ್ವ! ವ್ಯಕ್ತಿಯೇ ಜನರನ್ನು ಕೂರಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಚಿತ್ರ, ಸೈಕಲ್‌ಗೆ ಮಾಡನ್ನು ಅಳವಡಿಸಿ  ವ್ಯಕ್ತಿಯೇ ತುಳಿಯುತ್ತಿದ್ದ ಚಿತ್ರಗಳೆಲ್ಲ ಸಿನೆಮಾಗಳಲ್ಲಿ ನೋಡಿದ ನೆನಪು ಇವೆಲ್ಲಾ ಮ್ಯಾನ್ಯುವಲ್. ಆದರೀಗ  ರಿಕ್ಷಾಗಳೆಲ್ಲಾ ಆಟೋ ಆಗಿದ್ದಾವೆ  ಕಣ್ರೀ…   ಎಲ್ಪಿಜಿ, ಎಲೆಕ್ಟ್ರಿಕ್‌ಗೆ   ಪರಿವರ್ತನೆಯಾಗಿವೆ.  ಈ ಆಟೋ ರಿಕ್ಷಾಗಳ ಒಂದೊಂದು ಪ್ರಯಾಣವೂ ಒಂದೊಂದು ಅನುಭೂತಿಯನ್ನು ಕೊಟ್ಟಿದೆ.

ಸಿಡುಕ ಡ್ರೈವರ್, ಹಣ ಹೆಚ್ಚಿಗೆ ಕೇಳುವವನು, ಮನೆಯ ಸಮಸ್ಯೆಯನ್ನು  ಚರ್ಚಿಸುವ ಆಟೋ ಡ್ರೈವರ್, ಹೆಂಡತಿಯನ್ನು ಕೆಲಸಕ್ಕೆ ಕರೆದುಕೊಂಡು ಗಂಡ- ಮಗಳಿಗೆ ಹೆರಿಗೆ ಆಗಿದೆ ಎಂದು ಊಟ ತೆಗೆದುಕೊಂಡು ಹೋಗುವ ತಂದೆ, ಹೀಗೆ ಹಲವಾರು ಆಟೋ  ಡ್ರೈವರ್‌ಗಳನ್ನು ಪರಿಚಯ ಆಟೋ ಹಿಡಿದವರಿಗೆ ಆಗಿರಬಹುದು. ಸ್ವಂತ ಗಾಡಿಯಲ್ಲಿ ಓಡಾಡುವ ಸುಖ ಆಟೋಪ್ರಯಾಣಕ್ಕಿಂತ  ಭಿನ್ನಮಾರ್ರೇ. ಆಟೋದಲ್ಲಿನ ಹೆಚ್ಚಿನ ಪ್ರಯಾಣಗಳು ಅದರಲ್ಲೂ ಸೀಟ್ ಆಟೋದ ಪ್ರಯಾಣಗಳು ಹಲವು ತಹತಹಗಳ ಮಗ್ಗುಲುಗಳನ್ನು ಪರಿಚಯಿಸುತ್ತವೆ. ‘ಬಲ್ಲವನೆ ಬಲ್ಲ ಬೆಲ್ಲದ ಸವಿಯ’ ಎನ್ನುವಂತೆ ಆಟೋ ಪ್ರಯಾಣದ ಸುಖಾಸುಖಗಳಲ್ಲೂ    ಬದುಕಿನ ಹಲವು  ಪರದೆಗಳನ್ನು ಕೊಂಚವಾದರೂ ಸರಿಸಿ  ಪರದೆಯ  ಹವಣುಗಳನ್ನು, ಸಂಭ್ರಮವನ್ನು ನೋಡಬಹುದು.

     ಆಟೋದವರು ಕರೆದಾಗಲೆಲ್ಲ ಬರುವವರಲ್ಲ ಅನುಕೂಲವಿದ್ದರೆ ಬರುತ್ತಾರೆ. ಹಾಗೆ ನಾವು ಅನುಕೂಲ ಅನ್ನುವ ಕಾರಣಕ್ಕೆ ಆಟೋ ಹತ್ತುವುದು, ಹಗಲಿಗೊಂದು ದರ! ರಾತ್ರಿಯೊಂದು ದರ!  ಅವರಿಗೆ ಎಲೆಕ್ಟ್ರಿಕ್ ಮೀಟರ್ ಕಡ್ಡಾಯ! ನಮಗೆ? ಹೂ0 ನಮಗೂ ಬೇಕು ‘ಮೀಟರ್…’ ರಾತ್ರಿ ಹೊತ್ತು ಆಟೋ ಹತ್ತೋಕೆ! ಇರಲಿ!! ಆಟೋದವರು ಆಟಾಟೋಪಕ್ಕೆ ಹೆಚ್ಚು ಅನ್ವರ್ಥ. ಆದರೆ ಅವರಲ್ಲಿಯೂ ಸಜ್ಜನರಿರುತ್ತಾರೆ ಅಲ್ವ!

 ಒಂದಿನಾ   ಅಂತೂ   ಮಳೆಯ ಕಾರಣಕ್ಕೆ  ತರಾತುರಿಯಲ್ಲಿ ಆಟೋ ಹಿಡಿದೆ. ಅದರ ಡ್ರೈವರ್ ಉತ್ಸಾಹಿ ತರುಣನಾಗಿದ್ದ. ತನ್ನ ಗೆಳೆಯನನ್ನೂ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಸಂಭ್ರಮಿಸುತ್ತಿದ್ದ. ಒಂದಷ್ಟು ಮುಂದೆ ಆಟೋ ಸಾಗಿದಂತೆ  ಡ್ರೈವರ್  ಮಹಾನ್ ಯುದ್ಧವನ್ನು ಗೆದ್ದಂತೆ ಗೆಳೆಯನಲ್ಲಿ ‘ಅಂತೂ ಸಕ್ಸಸ್ ಕಣ್ಲ. ಅವರಣ್ಣ ಒಬ್ಬ ರಾಂಗ್ ಆಗ್ದೆ ಇದ್ರೆ ಸಾಕು. ಏನ್ ಗೊತ್ತೇನ್ಲ!  ಈ ಹುಡ್ಗೀರ್ಗೆ ಫ್ರೆಶ್ ಆಗಿರೋ ಮಲ್ಲಿಗೆ ಹೂವ, ಒಂದ್ ಪ್ಲೇಟ್ ಗೋಬಿ, ಕೇಳಿದ್ದು ಡ್ರೆಸ್, ತುಟಿ ಬಣ್ಣ ಗಿಣ್ಣ ಕೊಡುಸ್ ಬುಟ್ರೆ ಬಿದ್ರೂ ಅಂತಾನೆ’ ಎಂದು ಹೇಳುತ್ತಿದ್ದಂತೆ ಗೆಳೆಯನೂ ಮೂಕ ಬಸವನಂತೆ ಹೂ0…. ಹೂ0… ಎಂದು ಹೂ0ಕರಿಸುತ್ತಿದ್ದ.
ನನ್ ಕಿವಿಗಳು ಜಾಗೃತವಾದವು; ಹಾಗೇ ಆಲಿಸುತ್ತಿದ್ದೆ. ಮತ್ತೆ ಮತ್ತೆ ಅವಳಣ್ಣ, ಚಿಕ್ಕಪ್ಪ, ಪೋಲಿಸ್ ಅನ್ನುವ ಪದಗಳು  ಕೇಳಿಸತೊಡಗಿದಾಗ ನಾನು ‘ಎಕ್ಸ್ ಕ್ಯೂಸ್ ಮಿ ಏನ್ ಸಮಾಚಾರ. ಏನೋ ತೊಂದರೆಯಲ್ಲಿರುವ ಹಾಗಿದೆ.  ತಪ್ಪಲ್ವ! ಎಲ್ಲರನ್ನು ಒಪ್ಪಿಸಿ ನಿಮ್ ಹುಡ್ಗೀನ ಕರ್ಕೊಂಡು ಬಂದಿದ್ರೆ ಇನ್ನೂ ಖುಷಿ ಇರ್ತಿತ್ತಲ್ಲ!ʼ ಅಂದೆ.
  ತಾನಾಡಿದ   ಮಾತುಗಳು ಬಹುಶಃ ಆತನಿಗೆ ದುಬಾರಿಯಾದವು ಅನ್ನಿಸಿತೇನೋ? ‘ಇಲ್ಲ ಮೇಡಂ! ಇಲ್ಲ ಅವರಣ್ಣ  ಒಪ್ಪಿದಾರೆ! ನಾವೂ…… ನಾವ್ ಮದ್ವೆ ಆಗಿದ್ದೀವಿ! ಇಬ್ರೂ ಮೇಜರ್ರೂ… ನೋ ಪ್ರಾಬ್ಲಂ’ ಎಂದು ಉಸಿರನ್ನೂ ತೆಗೆದುಕೊಳ್ಳದೆ  ಹೇಳಿದ.   ‘ಏನೋ ತೊಂದ್ರೆ ಮಾಡ್ಕೊಂಡಿದ್ದೀರ. ಅದಕ್ಕೆ ಇಷ್ಟೆಲ್ಲಾ   ಮಾತಾಡಿದ್ರಿ ನೀವು ಅಂದೆ’.  ‘ಅದ್ಸರಿ….. ನೀವು ಹುಡುಗಿರ ಬಗ್ಗೆ……..’ ಎನ್ನುತ್ತಿದ್ದಂತೆ   ತರಾತುರಿಯಿಂದ ಸೈಕಲ್ ಹೊಡೆಯುತ್ತಿದ್ದ ಮಕ್ಕಳನ್ನು ಬಳಸಿಕೊಂಡು ನಾನು ಇಳಿಯಬೇಕಾದ ಸ್ಥಳಕ್ಕೆ ನನ್ನನ್ನು ಬೃಹತ್ ಭಾರ ಇಳಿಸುವಂತೆ  ಇಳಿಸಿದ. ನಾನೂ  ಭಾರನೇ….. ಬಿಡಿ  ಹೋಗಲಿ!  ನಾ ಕೊಟ್ಟ ಬಾಡಿಗೆ ಹಣವನ್ನು ಕಿಸೆಯಲ್ಲಿ ಕಿಸಕ್ಕನೆ ತುರುಕಿಕೊಂಡು ಭರ್ರನೆ ಹೋಗೇ ಬಿಟ್ಟ.  ಹೆಣ್ಣು  ಮಕ್ಕಳನ್ನು ವಸ್ತುಗಳ ಮೂಲಕ  ಅಳೆಯೋ ಇವನು ನಿಜವಾಗಿಯೂ ಆ ಹುಡುಗೀನ ಪ್ರೀತಿಸ್ತಾನ…… ನಮ್  ಹುಡ್ಗೀರೂ ಇಂಥವರಿಗೇ ಬೀಳ್ತಾರಲ್ಲ… ಅಂದುಕೊಳ್ಳುತ್ತಾ  ಮುಂದೆ ಹೆಜ್ಜೆ ಹಾಕಿದೆ.
  ಇಂದಿಗೆ ಅದೆಷ್ಟೋ ಈ ರೀತಿಯ ಮದುವೆಗಳು ನಡೆಯುತ್ತಿವೆ. ಅದೆ ಪ್ರಾರಂಭದಲ್ಲಿ ‘ಮಧು’ ಆನಂತರ ‘ವ್ಯಾ…’ ಅನ್ನುವ ಹಾಗೆ  ಮದುವೆಗಳು ಮಧುರಿಮವಾಗಿಲ್ಲ! ಸಾರ ಕಳೆದುಕೊಳ್ಳುತ್ತಿವೆ. ಜೀವನದ ಪ್ರಮುಖ ಘಟ್ಟ ಮದುವೆ ವಿಚಾರ.  ಇದೊಂದನ್ನು ಬಿಟ್ಟು ಇನ್ನೆಲ್ಲಾ ವಿಚಾರದಲ್ಲೂ  ನಮ್ಮ ಯುವಜನಾಂಗಕ್ಕೆ ಅಪ್ಪ ಅಮ್ಮ ಮುಖ್ಯರಾಗುತ್ತಾರೆ, ಆದರೆ ಮದುವೆಗೆ ಬೇಡ! ತದನಂತರ ಬೇಕು! ಇದು  ಯಾವ ನ್ಯಾಯ? ರೋಮಿಯೋ-ಜೂಲಿಯೆಟ್, ಹೀರ್ -ರಾಂಝಾ ಇವರುಗಳ ಪ್ರೇಮಕತೆಗಳಂತಾಗದೆ, ಕಷ್ಟವಾದರೂ ನಮ್ಮ ನಳ-ದಮಯಂತಿಯರ ಕತೆಯಂತೆ  ಇಂದಿನ ಯುವ ಪ್ರೇಮಿಗಳ ಕತೆಗಳೂ ಸುಖಾಂತವಾಗಲಿ ಅಲ್ಲವೆ!
    ಸಂಕ್ರಾಂತಿ  ಹಬ್ಬದ ಮುನ್ನಾ ದಿನ ಹೀಗೆ ಸೀಟ್ ಆಟೋ ಪ್ರಯಾಣದಲ್ಲಿ ಇಬ್ಬರು ಅಕ್ಕ -ತಂಗಿಯರ ಮಾತುಗಳು  ನನ್ನ ಮೊಬೈಲ್ ತೀಡುವಿಕೆಯನ್ನು  ಹಿಂದಿಕ್ಕಿದವು. ‘ಅವನ್ ರಾತ್ರೆಲ್ಲಾ ನಿದ್ದೆನೆ  ಮಾಡ್ನಿಲ್ಲ. ಮಾತಾಡ್ತ್ಲೆ ಇದ್ದ. ರಜ  ಇಲ್ವಂತೆ, ಬರಿ ಹನ್ನೆರಡ್ ದಿನವಂತೆ   ರಜ ಕೊಟ್ಟಿರದು. ಅವಳಿಗೂ ಅಷ್ಟೆಯ’ ಎನ್ನುತ್ತಿದ್ದಂತೆ ಓಹೋ ಇವರು ಮದುವೆ ಪಾರ್ಟಿ ಇರಬಹುದು ಅಂದುಕೊಂಡೆ.  ಮಾತಾಡುತ್ತಲೇ ಇದ್ದ  ಹುಡುಗನ  ಚಿಕ್ಕಮ್ಮ ಮತ್ತೆ ಮಾತು ಮುಂದುವರೆಸುತ್ತಾ ‘ಅವಳು ಕಾರ್ಡ್ ಮಾಡಿ  ಆನ್ಲೈನಲ್ಲೇ ಅಸ್ವಿನಿಗ್ ಕಳಸೌಳೆ ಅವರ್ ಪ್ರೆಂಡ್ಗಳಿಗ್ ಕಳ್ಸಕೆ. ಅಲ್ಲಾ ಹುಡ್ಗೀ ಏನ್ ಬುದ್ವಂತೆ ಅಲ್ವ! ಬಾಳ ಹಿಡ್ಕಟ್ಟಲಿ  ಸಂಸಾರ ಮಾಡ್ಕೊಂಡ್  ಹೋಯ್ತಾಳೆ.    ರಾತ್ರಿ ಬ್ಲೌಸ್ ಹೊಲಿಯಕ್ ಎಷ್ಟು  ಕೊಟ್ಟೆ ಅಂದೆ  ಮದ್ಲಿಂಗನ್ನ ಒಂಬತ್ ಸಾವ್ರ ಅಂದ.  ಬೇರೆ ಹುಡ್ಗೀರ್ ಆಗಿದ್ರೆ  ಸುಳ್ ಹೇಳಾದ್ರೂ ಇನ್ನೆರಡು ಸಾವ್ರ  ಇಸ್ಕೊಂಡಿರೋರು. ಬಾಳ ಒಳ್ಳೆ ಹುಡ್ಗೀ. ಹೊಸ ಫ್ಯಾಷನ್ ಚೂಡಿದಾರ  ಹಾಕಿರದ್ನೆ ನೋಡಿಲ್ಲ. ಹಳೆವ್ನೆ ಐರನ್ ಮಾಡ್ಕಣದೂ…. ಹಾಕಳದು’ ಎನ್ನುತ್ತಿದ್ದಂತೆ ಅಕ್ಕ ತಂಗಿಯ  ಮಾತಿಗೆ ಪ್ರತಿಕ್ರಿಯಿಸುತ್ತಾ ‘ನಿಜ ಮಾತ್ರವ  ಅಷ್ಟು  ಶ್ರೀಮಂತರಾದ್ರೂ ಒಂಚೂರು ಜಂಬಿಲ್ಲ, ಬೇರೆರಾಗಿದ್ರೆ ಅಷ್ಟು ಕಡಿಮೆ ಸೀರೆ ಒಪ್ಪೋರ? ಹಿರಿಯೊಳ್ ಅವಳಲ್ಲ; ಎನೂ ಇಲ್ದೆ ಇದ್ರೂ ಧಿಮಾಕು  ಮಾಡ್ತಾಳೆ,  ಎಷ್ಟು ಮಾತಾಡ್ತಳೆ ಅಂತೀಯ ಮದ್ವೆ ಒಂದು ಕಳೀಲಿ ಅಂತಿದೀನಿ’ ಎನ್ನುತ್ತಿರುವಾಗಲೆ ನಾನು ಇಳಿಯಬೇಕಾದ ಸ್ಥಳ ಬಂತು ಇಳಿದು ಹೊರಟೆ. ಇಲ್ಲಿ ಇಬ್ಬರ ಸೊಸೆಯರ ವಿಚಾರವಿದೆ. ಮೊದಲನೆಯದಾಗಿ  ಮದುವೆಯಾದವಳು ಇನ್ನೂ ಅತ್ತೆ ಮನೆಗೆ ಹೊಂದಿಕೊಂಡಿಲ್ಲ ಎನ್ನುವುದಾದರೆ, ಮದುವೆಯಾಗಬೇಕಾದವಳು  ಸರಳತೆಯಿಂದ ಭಾವೀ ಅತ್ತೆಯ ಮನಸ್ಸನ್ನು  ಗೆದ್ದು  ಮದುವೆಗೆ ಮೊದಲೆ ಪ್ರೀತಿಯ ಆಸನವನ್ನು ಅತ್ತೆಯ ಹೃದಯದಲ್ಲಿ ಕಾಯ್ದಿರಿಸಿಕೊಂಡಿದ್ದು. ವಿನಯ, ಸರಳತೆ, ಹೊಂದಾಣಿಕೆ, ಪ್ರಾಮಾಣಿಕತೆ ಇವಿಷ್ಟೆ ಮನುಷ್ಯ ಸಂಬಂಧವನ್ನು ಬೆಸೆಯುವ ಬೆಸುಗೆಗಳು. ಇವುಗಳನ್ನು ಬಿಟ್ಟು ಬಡಾಯಿ, ಪ್ರತಿಷ್ಟೆಗಳು ಸಂಬಂಧವನ್ನು ಘಾಸಿಗೊಳಿಸುವ  ಮುಳ್ಳುಗಳಾಗುತ್ತವೆ ಅಲ್ವೆ!  ಆದರೂ ಈ ಅಕ್ಕತಂಗಿಯರ   ಮಾತಿನಲ್ಲೂ ನನಗೆ ಆಕ್ಷೇಪವಿದೆ. ಕಾರಣ ಅವರಿಬ್ಬರ ಸಂಭಾಷಣೆಯಲ್ಲಿ  ಬಂದ ಮದುಮಗನಿಗೆ ಕೊಡುವ ತಟ್ಟೆಚೆಂಬಿನ ವಿಷಯ. ‘ಅದೆಂಗೆ ಸ್ಟೀಲ್ನವು ಕೊಡ್ತಾರೆ? ಬೆಳ್ಳಿವೆ ಕೊಡದು! ಕೇಳಿ ನಾವ್ಯಾಕ್ ನಿಷ್ಟುರಾಗದು?  ಕೊಡ್ನಿಲ್ಲ  ಅಂದ್ರೆ ಗೌರಿ ಹಬ್ಬಕ್ಕೆ ಯಾವ್ದಾದ್ರು ವಡವೆ  ಮಾಡ್ಸಿ  ಹಾಕಿ ಅನ್ನದು’ ಅನ್ನುವ ಮಾತುಗಳು.  ಭಾವೀ ಗಂಡನ ಕಡೆಯವರಿಗೆ  ಸ್ವಲ್ಪ ಹಣ ಉಳಿತಾಯವಾಯಿತು  ಎಂದು ಸಂಭ್ರಮಿಸುವ   ಅತ್ತೆ  ಸೊಸೆಯ ತವರು ಮನೆಯವರ ಹಣವೂ ಉಳಿತಾಯವಾಗಲಿ ಎಂದು ಏಕೆ ಚಿಂತಿಸಲಿಲ್ಲ? ಮನುಷ್ಯ ಯಾವಾಗಲೂ ತನ್ನ ಮೂಗಿನ ನೇರಕ್ಕೆ ಯೋಚಿಸುತ್ತಾನೆ. ನಿಸ್ವಾರ್ಥಿಯಾಗಿ, ಪುರೋಗಾಮಿಯಾಗಿ ಯಾಕೆ  ಚಿಂತಿಸಲಾರ  ಅನ್ನಿಸಿತು. ಸೊಸೆಗೆ ಬಾಗುವ ಗುಣವಿರಬೇಕಾದರೆ ಅತ್ತೆಯೂ ಮಾಗಿದ  ಮಾತುಗಳನ್ನಾಡಬೇಕಿತ್ತು ಅಲ್ವೆ!

 ಇಂಥ  ಅದೆಷ್ಟೋ ಸನ್ನಿವೇಶಗಳನ್ನು ನೀವುಗಳೂ ಕೇಳಿರಬಹುದು. ಆಟೋಗಳಲ್ಲಿ, ಸಿಟಿ ಬಸ್‌ಗಳಲ್ಲಿ ಓಡಾಡುವಾಗ  ಇಂಥ ಕೆಲವು ತುಣುಕುಗಳು ಯಾವುದೋ ಸಿನೆಮಾ ಟೀಸರ್‌ಗಳಂತೆ ನಮ್ಮ ಕಣ್ಣೆದುರು ಹಾದು ಹೋಗಬಹುದು. ತರಹೇವಾರಿ ಸಿನೆಮಾಗಳು  ಬಂದಂತೆ  ಪ್ರಯಾಣದ ಸನ್ನಿವೇಶಗಳೂ ಕೂಡ ಬಂದು ಬಂದು ಹೋಗುತ್ತವೆ. ಕೊರೊನಾ ನಂತರ  ಥಿಯೇಟರಿನಲ್ಲಿ ಸಿನೆಮಾಗಳನ್ನು ನೋಡುವವರ ಸಂಖ್ಯೆ ಈಗ ಕುಸಿದಿದೆ. ಎಲ್ಲಾ ಓಟಿಟಿಯಲ್ಲಿ ನೋಡಿಬಿಡ್ತಾರೆ. ಈಗಂತೂ ‘ಡೌನ್ ಪೇಮೆಂಟೋ, ಇಲ್ಲಾ ಸೆಕೆಂಡ್ ಹ್ಯಾಂಡೋ ಮನೆಗ್ ಒಂದ್ ಕಾರ್ ಇರ್ಲಿ’ ಎಂದು ದುಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಆದರೂ ಸ್ವಂತ ವಾಹನ ಹೊಂದಿದ   ಬದಲಾವಣೆಯಾಗಿದೆ.  ಸಾಮಾಜಿಕ ಬದುಕಿನ  ಚಡಪಡಿಕೆ, ನೋವು ಸುಖ ಎಲ್ವನ್ನು ಅನುಭವಿಸಬೇಕು ಅಂದರೆ  ಜನಸಾಮಾನ್ಯರ  ನಡುವೆ ಬದುಕಬೇಕು. ಸಾರ್ವಜನಿಕ ಸಾರಿಗೆನೋ. ತರಕಾರಿ ಮಾರುಕಟ್ಟೆಯೋ? ಇಲ್ಲ ಸಾಮಾನ್ಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವುದೋ ಇತ್ಯಾದಿ… ಇತ್ಯಾದಿ.

 ಶ್ರೀಸಾಮಾನ್ಯರ ಪ್ರಯಾಣದ ಆಪತ್ಭಾಂಧವರು ಅಂದರೆ ಆಟೋದವರೆ. ಆಟೋ ಡ್ರೈವರ್ ಅಂದ್ರೆ ಭಯವೇ! ತುಂಬಾ ಒರಟರಾಗಿರ್ತಾರೆ ಅನ್ನುವ ಕಾರಣಕ್ಕೆ. ಹೌದಪ್ಪ! ನಮ್ ಪಾಡಿಗೆ ನಿಂತಿದ್ರೂ ಬನ್ನೀ……! ಎಲ್ಗೆ…..! ಹತ್ತೀ…! ಎಂದು ಗದರುವ ಧಾಟಿಯಲ್ಲಿ ಕೇಳುವುದನ್ನು ಕೇಳಿಸಿಕೊಂಡಿದ್ದೇನೆ.  ತೆಗೆದ ಬಾಯಿಗೆ  ಏನಾದ್ರೂ  ಹೇಳಿಬಿಡ್ಬೇಕು ಅನ್ನಿಸಿದ್ರೂ ಯಾಕೆ ಸುಖಾ ಸುಮ್ಮನೆ  ತಲೆಬಿಸಿ ಅನ್ನಿಸಿ  ಮೌನವಾಗೇ ಉಳಿಯಬೇಕಾಗುತ್ತದೆ. ಆಟೋ ಡ್ರೈವರ್ಗಳ ಬಳಿ  ನಮ್ಮ  ಆಟಾಟೋಪ ನಡೆಯಲ್ಲ ಬಿಡಿ!  ಎಲ್ಲರೂ ಹಾಗೆ ಇರುತ್ತಾರೆ ಎಂದು ಸುಲಭದ ತೀರ್ಮಾನಕ್ಕೆ ಬರುವುದೂ ಕಷ್ಟವೇ… ಅವರಲ್ಲಿಯೂ  ಒಳ್ಳೆಯ ಮನಸ್ಸಿನವರು ಇರುತ್ತಾರೆ. ಯಾರದ್ದೋ ಕೈಚೀಲ, ಮುಖ್ಯದಾಖಲಾತಿಗಳ ಬ್ಯಾಗನ್ನು ವಿಳಾಸದಾರರನ್ನು ಹುಡುಕಿ, ಇಲ್ಲವೆ ಪೊಲೀಸರಿಗೆ ಒಪ್ಪಿಸಿ ಜನಸ್ನೇಹಿ ಆಟೋಡ್ರೈವರ್ಗಳಾಗಿರುವ  ಅದೆಷ್ಟೋ  ಉದಾಹರಣೆಗಳಿವೆ.

ಆಟೋ ಕೆಲವರಿಗೆ ಅನ್ನದ ಮಾರ್ಗವಾದರೆ ಇನ್ನು ಕೆಲವರಿಗೆ ಅನ್ನದ ಮಾರ್ಗವನ್ನು ತಲುಪುವ ಮಾಧ್ಯಮ. ಬೈಕಿಗೆ ಎರಡು ಚಕ್ರ, ಕಾರಿಗೆ  ನಾಲ್ಕು ಚಕ್ರ, ಆಟೋಗೆ ಯಾಕೆ ಮೂರೆ ಚಕ್ರ? ಎಂದು ಎಂದೋ ಪ್ರಶ್ನಿಸಿದ ಮಗುವೊಂದರ ಪ್ರಶ್ನೆಗೆ ನನ್ನಲ್ಲಿ ಇಂದಿಗೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ವಾಹನದ ರಚನೆಯೇ ಹಾಗೋ… ಅಥವಾ ಅದನ್ನು ಓಡಿಸುವ ಚಾಲಕ ತನ್ನ ಪ್ರಯಾಣಿಕರ  ಭಾರವನ್ನು  ತನ್ನ ಜೀವವನ್ನು ಪಣಕ್ಕಿಟ್ಟು  ಹೊರುತ್ತಾನೆಯೋ  ಗೊತ್ತಿಲ್ಲ! ಒಟ್ಟು ಪ್ರಯಾಣಿಕರು ಆಟೋ ಹತ್ತಿ ಇಳಿಯುವವರೆಗೆ ಆತನ ಮೇಲೆ ನಂಬಿಕೆಯಿಂದ   ಇರುತ್ತೇವೆ. ದೈವ, ನಂಬಿಕೆ, ವಿಧಿ,  ಅದೃಷ್ಟ  ಎನ್ನುವ ನಾವು ಪರೋಕ್ಷವಾಗಿ  ಬದುಕು ಅನ್ನುವ ಆಟೋದಲ್ಲಿ ನಿರಂತರ ಪಯಣಿಗರಾಗಿದ್ದೇವೆ ಅನ್ನಿಸುತ್ತದೆ. ವ್ಯಾವಹಾರಿಕ ಬದುಕಿನ ಆಟೋ ಚಾಲಕರು ಬದಲಾಗುವಂತೆ ಕೆಲವೊಮ್ಮೆ ಅಚಲ ವಿಶ್ವಾಸದಿಂದ, ಕೆಲವೊಮ್ಮೆ ಅದೃಷ್ಟವನ್ನು, ಜೀವನವೇ ಸಾಕು ಅನ್ನುವ ಜಿಗುಪ್ಸೆ, ಮುಂತಾದ ಪ್ರಕಲ್ಪನೆಗಳೊಂದಿಗೆ  ನಿತ್ಯ ಪ್ರಯಾಣ ಮಾಡುತ್ತಿರುತ್ತೇವೆ,
ಹೊಳೆದಾಟಿದ  ಮೇಲೆ ಅಂಬಿಗನ ಹಂಗೇಕೆ ಅನ್ನುವ ಹಾಗೆ ಬಾಡಿಗೆ ಕೊಡುವಾಗ ಬಡಿಗೆಯಲ್ಲಿ ಹೊಡೆಸಿಕೊಳ್ಳುವಷ್ಟು ಕಿರಿಕಿರಿ   ಆಗುತ್ತದೆ. ನಮ್ಮ ಜನರೂ ಏನೂ ಕಡಿಮೆಯಿಲ್ಲ ಬಿಡಿ  ಲಕ್ಷಗಳಿಗೆ ಬೆಲೆ ಇಲ್ಲದಂತೆ ದುಂದುವೆಚ್ಚವೆ ಮಾಡಿ  ಮದುವೆ, ಗೃಹಪ್ರವೇಶ  ಇತ್ಯಾದಿಗಳನ್ನು ಮಾಡಿದರೂ  ಆಟೋದವರಿಗೆ ಬಾಡಿಗೆ ಕೊಡುವಾಗ  ಐವತ್ತಾ…… ? ಮುವತ್ತಲ್ವ….!  ಎಂದು ಚೊರೆ ಮಾಡುವುದಿದೆ.  ಅದಕ್ಕಿಂತ ಬೆಲೆ ಬಾಳುವ ಅದೆಷ್ಟೋ ಅನ್ನಾಹಾರಗಳನ್ನು ಅವರ ಮನೆಯ  ಸಮಾರಂಭಗಳಿಗೆ ಬಂದ ಅತಿಥಿಗಳು  ಬಡಿಸಿಕೊಂಡು ತಿನ್ನದೆ ವ್ಯರ್ಥ ಮಾಡಿರುತ್ತಾರೆ. ಅದನ್ನು ಯೋಚನೆ ಮಾಡುವುದೇ ಇಲ್ಲ. ಮನುಷ್ಯನ ಸ್ವಭಾವವೇ ಹಾಗೆ; ಹೆಬ್ಬಾಗಿಲಲ್ಲಿ ಹೋಗುವುದನ್ನು ಬಿಟ್ಟು ಬಚ್ಚಲು ಗಿಂಡಿಯಲ್ಲಿ ಹೋಗುವುದರ ಕಡೆಗೆ ಅತೀ ಗಮನ ಕೊಡುವುದು. ವೈದ್ಯರ ಫೀಸು ಹತ್ತು. ಐವತ್ತು ಇದ್ದದ್ದು ಇಂದಿಗೆ ಇನ್ನೂರು, ಮುನ್ನೂರರ ಗಡಿಯನ್ನು ದಾಟಿದೆ, ಹಾಲು ಅರ್ಧ ಲೀಟರಿಗೆ ಎರಡುಕಾಲು ರೂಪಾಯಿ ಇದ್ದದ್ದು ಇಂದಿಗೆ ಇಪ್ಪತ್ತೆರಡು ರೂ ಆಗಿದೆ, ಪೆಟ್ರೋಲ್, ಡೀಸೆಲ್ ಶತಕ ಸಿಡಿಸಿ ಗೆದ್ದಂತೆ, ಶತಕ ಸಿಡಿಸದೆ ಹತಾಶನಾದ  ಬ್ಯಾಟ್ಸ್ ಮ್ಯಾನ್‌ನಂತೆ    ನೂರನ್ನು ಮೀರಿ, ಮೀರದೆ ಪೈಪೋಟಿ ನಡೆಸುತ್ತಿವೆ, ಹೀಗಿರುವಾಗ ಐದು ರೂಪಾಯಿ ಮಿನಿಮಮ್ ಬಾಡಿಗೆ ಕೊಡುತ್ತಿದ್ದವರು  ಮ್ಯಾಕ್ಸಿಮಮ್ ಕೊಡುವುದಿರಲಿ ಇಷ್ಟು  ವರ್ಷವಾದರೂ ‘ಮಿನಿಮಮ್ ಮೂವತ್ತಲ್ವ!’ ಎಂದು ವಾದಿಸುತ್ತಿದ್ದೇವೆ. ‘ನೀನೊಬ್ನೆನಾ ಡ್ರೈವರ್’  ಎಂದು  ಧ್ವನಿ ಎತ್ತರಿಸಿ ಮಾತನಾಡುತ್ತೇವೆ.
     ಕೆಲವೊಂದು ಆಟೋ ಡ್ರೈವರ್ಗಳೇನು ಕಡಿಮೆಯಿರುವುದಿಲ್ಲ. ಒಬ್ಬರನ್ನೊಬ್ಬರು ಆಲಿಂಗನ ಬಯಸುವಂತೆ  ಪೋಲಿಸ್ನವರು ಇವರ ಮೇಲೆ ಕಣ್ಣಿಟ್ಟರೆ ಇವರೋ “ಪೋಲಿಸಿನವರು ಯಾವಾಗಲು ದುಬಾರಿ!” ಅನ್ನುವ ಹಾಗೆ ಕಣ್ತಪ್ಪಿಸಿ ಓಡಾಡ್ತಾರೆ. ಆಟೋ ದಾಖಲಾತಿಗಳು, ಇನ್ಷೂರೆನ್ಸ್ ಕಾಪಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಸರಿಯಾಗಿ  ಇಟ್ಟುಕೊಂಡು  ಯೂನಿಫಾರ್ಮ್ ಹಾಕಿದರೆ  ಭಯಪಡಬೇಕಾದ ಅಗತ್ಯವಿಲ್ಲ. ತಾವೆ ಸರಿಯಿಲ್ಲದೆ ಅನಧಿಕೃತ ದಂಡ ಕೊಟ್ಟು ಮತ್ತವರನ್ನು ಬೈದರೆ ಅದಕ್ಕೆ ಮಾನ್ಯತೆ ಇಲ್ಲ ಅನ್ನಿಸುತ್ತದೆ.
    ಒಂದು ಕಾಲದಲ್ಲಿ ಮನುಷ್ಯ ಶ್ರಮಜೀವಿಯಾಗಿದ್ದ,  ಹಣದ ಹರಿವು ಕಡಿಮೆಯಿತ್ತು! ಹಣದ ಮಹತ್ವ ತಿಳಿದಿದ್ದ, ಎಲ್ಲಿಂದ ಎಲ್ಲಿಗೆ  ಬೇಕಾದರೂ ಭಾರವನ್ನೂ ಕೈಯಲ್ಲಿ ಹಿಡಿಯಲಾಗದೆ ಇದ್ದರೂ ತಲೆಯ ಮೇಲೆ ಹೊತ್ತು ಸಾಗುತ್ತಿದ್ದ.  ಆದರೆ  ಇಂದು ಹಣ ತನ್ನ ಮಹತ್ವ ಕಳೆದುಕೊಂಡಿದೆ, ಸ್ವೈಪ್, ಸ್ಕ್ಯಾನ್‌ಗಳು ಉಚ್ಛಾಸ -ನಿಶ್ವಾಸ ಎಂಬಂತಾಗಿವೆ. ಮೈಯಲ್ಲೂ ಅಂಥಾ ಕಸುವಿಲ್ಲ, ಪರಾವಲಂಬನೆ ಹೆಚ್ಚಾಗಿದೆ. ಹಾಗಾಗಿ ಆಟೋಗಳ ಸಂಖ್ಯೆ ಅಪರಿಮಿತವಾಗಿದೆ. ಅದರೂ ಅಲ್ಲೂ ಬ್ಯಾಲೆನ್ಸ್ ತಪ್ಪಿದೆ. ಕೊರೊನಾ ನಂತರ ಸ್ವಂತ ವಾಹನಗಳನ್ನು ಹೊಂದಿದವರೆ ಹೆಚ್ಚಾಗಿದ್ದಾರೆ. ಆಟೋದವರ ದುಡಿಮೆಗೆ ತೊಂದರೆಯಾಗಿದೆ. ಜನರನ್ನು ಸೋಮಾರಿಗಳಾಗಿಸಿರುವುದರಲ್ಲೂ  ಆಟೋಗಳ ಪಾಲಿದೆ. ಮಿನಿಮಮ್ ಕೊಟ್ಟರೆ ಆಯ್ತು ಎನ್ನುತ್ತಾ ಮ್ಯಾಕ್ಸಿಮಮ್ ಆಟೋ ಪ್ರಯಾಣ  ಮಾಡುತ್ತೇವೆ. ಆದರೆ ಒಗ್ಗಟ್ಟಿಗೆ ಇನ್ನೊಂದು ಹೆಸರು ಆಟೋಚಾಲಕರು. ನಾಡಹಬ್ಬಗಳನ್ನು ರಾಷ್ಟ್ರೀಯ ಹಬ್ಬಗಳು ಇವರಿಂದಲೆ ಹೆಚ್ಚು ಕಳೆಗಟ್ಟುತ್ತವೆ. ಪ್ರೀತಿಯಿಂದ ಕನ್ನಡ ಸಿನಿಮಾಗಳ ಹೆಸರನ್ನು, ನಟರ ಹೆಸರನ್ನು ಹಾಕಿಸಿ ಸಂಭ್ರಮದಿಂದ ವಿಭ್ರಮಿಸುತ್ತಾರೆ.  ಒಂದರ್ಥದಲ್ಲಿ   ಆಯಾ ಪ್ರಾದೇಶಿಕ ಭಾಷೆಯ ನುಡಿವಿಹಾರಕರೂ  ಹೌದು!!
  ಪ್ರಯಾಣಿಕರ ಮಾರ್ಗಿ ಅಂದರೆ ವಿಳಾಸ ತಾನೆ! ಆ ವಿಳಾಸವನ್ನು ಸರಿಯಾಗಿ ಆಟೋ ಚಾಲಕನಿಗೆ ಹೇಳಿದರೆ ಅದಕ್ಕೆ ಪೂರಕವೆಂಬಂತೆ  ಆತನಿಗೂ  ಆ  ಸ್ಥಳ ಪರಿಚಯವಿದ್ದರೆ  ಅಂಥ ಪ್ರಯಾಣ   ವಿಲಾಸದಿಂದ ಕೂಡಿರುತ್ತದೆ. ಸ್ವಲ್ಪ ಮುಗ್ಗರಿಸಿದರೂ  ಅತೀ ಬಾಡಿಗೆ ಕೊಡಬೇಕಾಗಿ ಬಂದು  ಪ್ರಯಾಣಿಕರು ವಿ….ಲಾಸ್/ ಲಾಸ್ಟ್ ಎಂದು ಕೊಳ್ಳಬೇಕಾಗುತ್ತದೆ.
ಪ್ರಯಾಣಕ್ಕೆ ವಿಳಾಸ ಪ್ರಮಾಣವಾಗಿರುವಂತೆ ಬದುಕಿಗೆ ಗುರಿಯೇ ಪ್ರಮಾಣ ಅಲ್ವೆ! ಗುರಿಯೊಂದಿದ್ದರೆ ಸಾಕೆ? ನಮ್ಮ ಪ್ರಯತ್ನ ಬೇಡವೆ? ಅದೂ ಬೇಕು ಗುರಿ, ಗುರುಗಳ ನಡುವೆ ವಿದ್ಯಾರ್ಥಿ ಇರುವಂತೆ ಹುಟ್ಟು -ಸಾವುಗಳ ನಡುವಿನ ಜೀವಿತಾವಧಿ ನಮ್ಮ ಪ್ರಯಾಣ.  ಮಗು ಇಂಥ ದಿನವೇ ಹುಟ್ಟುತ್ತದೆ ಅಥವಾ ಇಂಥ ದಿನವೇ ಹುಟ್ಟಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಆದರೆ ಹುಟ್ಟಿದ ವ್ಯಕ್ತಿ ಇಂಥ ಸಮಯಕ್ಕೆ  ಉಸಿರು ನಿಲ್ಲಿಸುತ್ತಾನೆ, ಶೋಕಾಚರಣೆಗೆ ತಯಾರಿ  ಮಾಡಿಕೊಳ್ಳಿ ಎನ್ನುವರುಂಟೇ? ಹುಟ್ಟುತ್ತೇವೆ ಎನ್ನುವುದು ತಿಳಿದಿರುವುದಿಲ್ಲ. ಒಂದಲ್ಲಾ  ಒಂದು ದಿನ ಸಾವು ಖಚಿತ  ತಿಳಿದ  ಮೇಲೆಯೂ ಬಿಟ್ಟು ಹೋಗುವ  ಸ್ಥಿರ-ಚರ  ಆಸ್ತಿಗಳ ಮೇಲೆ ನಮಗೇಕೆ ಅತೀ ವ್ಯಾಮೋಹ ಗೊತ್ತಿಲ್ಲ! ಅಸ್ತಿಗಳು ಸವೆಯುವವರೆಗೂ  ಹಣ  ಮಾಡಲು ತುಡಿಯುತ್ತೇವೆಯೋ ಹೊರತು  ದುಡಿದ ಹಣವನ್ನು ಸದ್ವಿನಿಯೋಗ ಮಾಡುವ  ಆಲೋಚನೆ   ಮಾಡುವುದಿಲ್ಲ, ತಾವೂ ಅನುಭವಿಸುವುದಿಲ್ಲ.  ‘ಅರ್ಥರೇಖೇಯಿದ್ದಡೇನು ಫಲ? ಆಯುಷ್ಯರೇಖೆಯಿಲ್ಲದನ್ನಕ್ಕ’ ಎಂಬಂತೆ ಅರ್ಥವನ್ನು ಅರ್ಥವಿಲ್ಲದಂತೆ ಸಂಚಯಿಸಿಕೊಳ್ಳುವ ಬದಲು ಮನುಷ್ಯ ಲೋಕೋಪಯೋಗಿಯಾಗಬೇಕು. ‘ಹೋಹಾಗ ಮಂದಿ ಬಾಯಾಗ  ಇರಬೇಕ’ ಅನ್ನುವಂತೆ ಸತ್ತಮೇಲೆಯೂ ಇತರರು ಸ್ಮರಿಸುವಂಥ ಸೌಧರ್ಮಿಕೆಯ ಬದುಕನ್ನು ಬದುಕಬೇಕಾಗುತ್ತದೆ.
ಮಂಗಳವಾರ ಸಂತೆಯಲ್ಲೊಮ್ಮೆ ಅವರೆಕಾಯಿ, ಸಿಹಿಗೆಣಸು, ಹಸಿಕಡ್ಲೆ ಗಿಡ ಖರೀದಿ ಮಾಡಿ ಭಾರವನ್ನು  ಹಿಡಿಯಲಾರದೆ ಹೆಜ್ಜೆ  ಇಡಲಾಗದೆ ಪರಿತಪಿಸುವಾಗಲೆ  ಆಪತ್ಭಾಂಧವನಂತೆ  ಬಂದ ಆಟೋಡ್ರೈವರ್ ‘ಬನ್ನಿ….’  ಎಂದು ಬಹಳ ಸಜ್ಜನಿಕೆಯಿಂದ ಆಟೋ ಹತ್ತಿಸಿಕೊಂಡಎಷ್ಟು ಒಳ್ಳೆಯವರು ಇವರು ಎನ್ನುತ್ತಾ ಮನೆ ತಲುಪಿದಾಗ ನಿಗದಿತ ಬಾಡಿಗೆಯನ್ನು ಕೊಟ್ಟರೆ  ಅವನು ಹಾವು ತುಳಿದಂಗಾಡೋದೇ? ‘ಮೇಡಂ ಏನಿದು ನಾನು ನೀವಿದ್ದಲ್ಲಿ ನಿಲ್ಲಿಸಿ ಕರೆದುಕೊಂಡು ಬಂದಿದ್ದೇನೆ ಇಷ್ಟೇ ಕೊಡ್ತಾರ ಸೇರಿಸಿ ಕೊಡಿ’  ಎಂದು ತಗಾದೆ ತೆಗೆಯೋದೆ. ಹೋಗಲಿ ಬಾಡಿಗೆ ಮಾತನಾಡದೆ ಬಂದದ್ದು ನನ್ನ ತಪ್ಪು ಎನ್ನುತ್ತಾ ನೂರರ ನೋಟನ್ನು ಕೊಟ್ಟರೆ  ಚಿಲ್ಲರೆ ಕೊಡುವಾಗ ಹರಿದ ನೋಟನ್ನು ಕೊಡೊದೇ? ಇವನ ಜೊತೆ ಹೆಚ್ಚು ಮಾತನಾಡಿ ಪ್ರಯೋಜನ ಇಲ್ಲವೆಂದು  ‘ಅಯ್ಯೋ ಚೇಂಜ್ ಇದೆ’ ಎನ್ನುತ್ತಾ ಬಾಗಿಲ ತುದಿಯಲ್ಲೆ ಇರಿಸಿದ ಚಿಲ್ಲರೆ ಕೊಟ್ಟು ಗರಿಗರಿಯಾಗಿದ್ದ ನನ್ನ ನೋಟನ್ನು ಹಿಂಪಡೆದೆ. ಇಂಥ ಚಾಲಾಕಿ ಚಾಲಕರ ಪರಿಚಯ ಅದೆಷ್ಟೋ ಜನರಿಗಾಗಿರುತ್ತದೆ ಅಲ್ವೆ! ಯಾವುದೇ ಕೆಲಸ ಮಾಡಬೇಕಾದರೂ ಪೂರ್ವಯೋಜನೆ ಬೇಕು ಎನ್ನುತ್ತಾರಲ್ಲ; ಇದಕ್ಕೆ  ‘ಚಹರೆ ನೋಡಿ  ಚಾದರ್  ಹಾಕಬಾರದು’ ಅನ್ನುವುದು   ಅಂಧವಿಶ್ವಾಸ,   ಪೂರ್ವಾಗೃಹಪೀಡಿತತನ ನಮ್ಮ ಬದುಕನ್ನು ಪ್ರಯಾಸವನ್ನಾಗಿಸುತ್ತವೆ.  ಇವುಗಳನ್ನೂ ಮೀರಿದ ಸುಖಕರ ಪ್ರಯಾಣ ನಮ್ಮದಾಗಿರಬೇಕು.

  ಈ ಆಟೋಡ್ರೈವರುಗಳು ಬರೆ  ಆಟೋ  ಮಾತ್ರ ಡ್ರೈವ್ ಮಾಡರು ಇಡೀ ಸಮಾಜವನ್ನು ಡ್ರೈವ್ ಮಾಡುವರು. ಸ್ವಂತ ವಾಹನಗಳು ಇದ್ದರೂ ಕೆಲವೊಮ್ಮೆ ಆಟೋಪ್ರಯಾಣ  ಅನಿವಾರ್ಯ. ನಮ್ಮ ಗುರಿಯ ವಿಳಾಸಗರಿಯನ್ನು ತೋರಿಸಿ ನಿರುಮ್ಮಳವಾಗಿ ಕುಳಿತು ಸ್ಥಳ ಬಂದಾಗ  ಇಳಿದು ಹಣಕೊಟ್ಟು ನಿರ್ಗಮಿಸುವುದು ಒಂದು ಅನುಭೂತಿಯೇ. ಏನಂತೀರಿ….? ನಂಬಿಕೆ   ಇಟ್ಟು ಕುಳಿತು ಪ್ರಯಾಣ ಮಾಡಿರುತ್ತೀವಿ ಆ ನಂಬಿಕೆ ಉಳಿಸಿಕೊಂಡಾತನಿಗೆ ಧನ್ಯವಾದಗಳನ್ನು ಹೇಳುವುದರಲ್ಲಿ ನಮ್ಮ ಕೃತಕೃತ್ಯತೆ ಇದೆ…… ಆದರೆ ಎಷ್ಟು ಮಂದಿ ಹೇಳುತ್ತೇವೆ?  ತೀರಾ ವಿರಳ.  ಸಮಾಜದ ಸಹಚರ್ಯಕ್ಕೆ ಇದರ ಅಗತ್ಯವಿದೆ……!!

ಇಂದ್ರಿಯಗಳು ನಮ್ಮ ನಿಯಂತ್ರಣವನ್ನು ಸೂಚಿಸುವಂತೆ, ಷಡ್ರಸಗಳು ಆರು ರುಚಿಗಳನ್ನು ಹೇಳುವಂತೆ, ಕಾಮನಬಿಲ್ಲು ಏಳು ಬಣ್ಣಗಳನ್ನು ಸಂಕೇತಿಸುವಂತೆ, ನವ ರಸಗಳು ವಿವಿಧ ಭಾವಗಳನ್ನು ಸಂಕೇತಿಸುವಂತೆ, ಅಗಣಿತ ಪರಿಪ್ರೇಕ್ಷಗಳು ಮಾನವನ ಬದುಕಿನ ರಸಘಟ್ಟಗಳಿಗೆ ಹೊನಲಾಗಿ ಬರುತ್ತವೆ ಇನ್ನು ಕೆಲವು ಅನುಭವಿಸಲಾರದವು, ವರ್ಗಾಯಿಸಲಾಗದ ತಹತಹಗಳಾಗಿ  ಕಾಡುತ್ತವೆ. ಅದನ್ನೆಲ್ಲ ನಿಭಾಯಿಸಬೇಕು. ಪ್ರಯಾಣ ಮಾಡುವಾಗಲೆಲ್ಲಾ ಜಿರೋ ಟ್ರಾಫಿಕ್ ಇರುತ್ತದೆಯೇ? ಇರಲ್ಲ. ತುಂಬುವಾಹನಗಳ ಜೊತೆಯಲ್ಲಿ ಪ್ರಯಾಣಿಸಬೇಕು. ಬೇಗ ತಲುಪುವ ಧಾವಂತಕ್ಕೆ ಸಿಗ್ನಲ್ ಜಂಪ್‌ಮಾಡ್ಲಿಕ್ಕಾಗುತ್ತಾ ಇಲ್ಲ!  ತಡವಾದರೂ  ಅನೇಕ ಸಿಗ್ನಲ್ಗಳನ್ನು ಧಾಟಿಯೇ ಹೋಗಬೇಕು. ಗುರಿತಲುಪುವುದು   ಮುಖ್ಯ.  ಇಲ್ಲಿ ತಡವಾದರು ನೆಮ್ಮದಿ ಇರುತ್ತದೆ. ಅನಾಯಾಸ, ಸ್ವಯಂಚಾಲಿತ ಎನ್ನುವಂತೆ ನಮ್ಮ ಮೊಬೈಲ್ ಟೈಪಿಂಗ್ ಆಟೋಕರೆಕ್ಷನ್ ತೆಗೆದಕೊಂಡು ಸರಿಯಾದ ಸಂದೇಶವಾಗುವಂತೆ   ಯಾವ ಜಿಜ್ಞಾಸೆಯೂ ಇಲ್ಲದೆ  ನಮ್ಮೆಲ್ಲರ  ಪ್ರತಿ ಪ್ರಯಾಣವೂ  ತೊಡರುಗಳನ್ನು ಮೀರಿ ಸುಖಪ್ರಯಾಣವೇ ಆಗಿ ಆಟೋ ಪರಿವರ್ತನೆಯಾಗಿ ಎಲ್ಲವೂ ಸುಭಗವೇ ಆಗಲಿ  ಎಂಬುದೆ ನನ್ನ ಕನವರಿಕೆ.