ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ ಬದುಕು ಮೂರು ನಿಮಿಷದಲ್ಲಿ ಕಂಡ ಎಪಿಸೋಡಿನಂತೆ ನನ್ನೆದುರು ಪ್ರಸಾರವಾಗುತ್ತಿತ್ತು.‌ ಊರಿನಲ್ಲಿ ಸೀತಕ್ಕನಿಗೆ ಅವಳದೇ ಆದ ಒಂದಷ್ಟು ಸ್ನೇಹಗಳಿದ್ದವು. ಆಕೆ ಮಾತ್ರ ಮಾಡಬಹುದಾದ, ಅರ್ಧ ಸಂಬಳದ ಕೆಲಸಗಳಿದ್ದವು. ಅದನ್ನು ಆಕೆಗೆ ಕೊಡುವ ಮನೆಯೊಡತಿಯರೇ ಆಕೆಯ ಸ್ನೇಹಿತೆಯರಾಗಿದ್ದರು. ಅವರ ಮನೆಗಳ ಪಾತ್ರೆ ತೊಳೆಯುತ್ತ, ಹೂಗಿಡಗಳಿಗೆ ನೀರು ಹಾಕುತ್ತ, ಯಾರದೋ ಹೂದೋಟದಲ್ಲಿ ಹೂವರಳಿಸುತ್ತ, ಅಂಗಳಕ್ಕೆ ಸಗಣಿ ನೀರು ಬಳಿಯುತ್ತಾ, ಹಬ್ಬಕ್ಕೆ ತೋರಣ ಕಟ್ಟುತ್ತಾ, ಅವರಾಗಿ ಕೊಟ್ಟರಷ್ಟೇ ತಾನೂ ಹೂ ಮುಡಿಯುತ್ತ ಇದ್ದಳು ಆ ಅಜ್ಜಿ.
ವಿನಾಯಕ‌ ಅರಳಸುರಳಿ ಅಂಕಣ “ಆಕಾಶ ಕಿಟಕಿ”

ಕೆಲವೊಂದು ಬಾಗಿಲನ್ನು ನೂಕಿ ಒಳಹೋಗದ ಹೊರತು ಆಚೆಯ ಪ್ರಪಂಚಗಳು ನಮಗೆ ಕಾಣಿಸುವುದೇ ಇಲ್ಲ. ಅನುಭವಕ್ಕೆ ದಕ್ಕುವ ತನಕ ಅಂಥಾ ಲೋಕಗಳು ನಮ್ಮ ಪಾಲಿಗೆ ಶೂನ್ಯವಾಗಿಯೇ ಉಳಿದುಹೋಗುತ್ತವೆ. ಬದುಕಿನ ಯಾವುದೋ ಹಂತದಲ್ಲಿ ಅಚಾನಕ್ಕಾಗಿ ಎದುರಾಗಿ ಮರೆಯಾಗುವ ಆ ವಿಚಿತ್ರ ಲೋಕಗಳು, ಅಲ್ಲಿ ಬದುಕಿರುವ ಜೀವಗಳು, ಅವುಗಳ ನಗು-ಅಳುಗಳು ನಮ್ಮಲ್ಲಿ ಗಾಢ ಕಲೆಯಾಗಿ ಉಳಿದುಹೋಗುತ್ತವೆ‌.

ಬದುಕಿನ ನಿಜವಾದ ಅನುಭವ, ಜೀವದ ನಿಜವಾದ ಬೆಲೆ, ಜೀವಂತ ಇರುವುದರ ನಿಜವಾದ ಅರ್ಥ ಅರಿವಾಗಬೇಕೆಂದರೆ ಮೆದುಳು, ಹೃದಯ, ಕಿಡ್ನಿಗಳಂಥಾ ಸೂಕ್ಷ್ಮ ಅಂಗಗಳ ಆಸ್ಪತ್ರೆಗಳಲ್ಲಿ ಒಂದಷ್ಟು ಸಮಯ ಇದ್ದು ಬರಬೇಕು. ಉದ್ಯೋಗಿಯಾಗಿ ಅಲ್ಲ. ನಮ್ಮ ಪ್ರಾಣಪ್ರಿಯವಾದ ಜೀವವೊಂದನ್ನು ಉಳಿಸಿಕೊಳ್ಳಲೆಂದು ಆಸ್ಪತ್ರೆಯಲ್ಲಿ ಬಿಟ್ಟುಕೊಂಡ ಬಂಧುವಾಗಿ!

ಅದೊಂದು ಖಾಸಗೀ ಆಸ್ಪತ್ರೆ. ಜೀವಗಳು ಉಳಿಯುವ, ಹೋಗುವ ಜಾಗ. ಅಲ್ಲಿನ ವಾರ್ಡೊಂದರಲ್ಲಿ ಪಿಳಿ ಪಿಳಿ ಕಣ್ಣು ಬಿಡುವ ಅಸ್ತಿ ಪಂಜರದಂತಿದ್ದ ತನ್ನ ಗಂಡನನ್ನು ಬಿಟ್ಟುಕೊಂಡಿದ್ದಳು ಸೀತಕ್ಕ. ಆಕೆಯ ವಯಸ್ಸು ಏನಿಲ್ಲವೆಂದರೂ ಎಪ್ಪತ್ತು. ಕೂಲಿ ಕೆಲಸ ಮಾಡುವವಳು.

“ನಂಗೊಂದ್ ಐನೂರ್ ರುಪಾಯಿದ್ರೆ ಕೊಡ್ತ್ರಾ? ನನ್ ಸಣ್ಮಗ ಬಪ್ಪುಕಿತ್. ಅವ ಕೊಟ್ಕೂಡ್ಲೇ ವಾಪಾಸ್ ಕೊಡ್ತೆ”

ಇಡೀ ವಾರ್ಡು ಆಕೆಯನ್ನು ನೆನಪಿಟ್ಟುಕೊಂಡಿದ್ದೇ ಬಹುಷಃ ಈ ಬೇಡಿಕೆಯ ಮೂಲಕ. ಆಸ್ಪತ್ರೆಯು ಪ್ರತೀ ದಿನ ಬರೆದು ಕೈಗಿಡುತ್ತಿದ್ದ ಸಾವಿರಾರು ರೂಪಾಯಿ ಔಷಧಿಗಳನ್ನು ಕೊಳ್ಳಲಾಗದೆ ಯಾರ ಬಳಿಯಾದರೂ ಹಣ ಕೊಳ್ಳುತ್ತಾ, ಅದನ್ನು ಹಿಂದೆ ಕೊಡಲು ಎರಡು ದಿನಕ್ಕೊಮ್ಮೆ ಆಸ್ಪತ್ರೆಗೆ ಬರುವ ಮಗನ ದಾರಿ ಕಾಯುತ್ತಿದ್ದವಳು ಆಕೆ. ಮಗನಾದರೂ ಹೇಳಿದ ದಿನಕ್ಕೆ ಬರದೇ ಆಟಾಡಿಸುತ್ತಿದ್ದ. ಪಾಪ, ಗಾರೆ ಕೆಲಸದವನಾದ ಅವನನ್ನು ಬದುಕು ಆಟಾಡಿಸುತ್ತಿತ್ತು. ಅದನ್ನು ಅವನು ಅಮ್ಮನಿಗೆ ವರ್ಗಾಯಿಸುತ್ತಿದ್ದ. ಮಗ ಬರದ ದಿನಗಳಲ್ಲಿ ಸೀತಕ್ಕ ಗಂಡನನ್ನು ವಾರ್ಡಿನಲ್ಲೇ ಬಿಟ್ಟು ಹೊರಟು ಬಿಡುತ್ತಿದ್ದಳು. ಅದೇ ಹೊತ್ತಿಗೆ ಮಗ ಆಸ್ಪತ್ರೆಗೆ ಬಂದು ಅವಳನ್ನು ಹುಡುಕುತ್ತಿದ್ದ. ಹೀಗೆ ಒಂದೇ ಒದ್ದಾಟದ ಸಮಾನ ಚಂದಾದಾರರಾದ ಅವರಿಬ್ಬರೂ ಒಬ್ಬರನ್ನೊಬ್ಬರು ಹುಡುಕುತ್ತ ಅಲೆಯುತ್ತಿದ್ದರು.

ಇತ್ತ ಆಕೆಯ ಗಂಡನಾದರೋ ಉರಿಗೋಪದವನು. ವಾರ್ಡಿನಲ್ಲಿದ್ದಷ್ಟೂ ದಿನ ಅವನು ಮಾತಾಡಿದ್ದಕ್ಕಿಂತ ಬೈದಿದ್ದೇ ಹೆಚ್ಚು. “ಏ ಹೆಂಗ್ಸೇ, ನನ್ನ ಈ ಸ್ಥಿತೀಲಿ ಬಿಟ್ಟು ಎತ್ಲಾಗ್ ಹ್ವಾದ್ಯೆ ಹೆಕ್ಕ ತಿಂಬುಕೆ?” ಎಂದು ಅವನು ಇಡೀ ಆಸ್ಪತ್ರೆಗೆ ಕೇಳುವಂತೆ ಕೂಗುತ್ತಿದ್ದ. ಪಾಪದ ಸೀತಕ್ಕ, ಇಂಥದೇ ಕರೆಯೊಂದನ್ನು ಹಿಡಿದು ಅದ್ಯಾವುದೋ ಬೀದಿಯಲ್ಲಿ ಮಗನ ಹುಡುಕಿ ಅಲೆಯುತ್ತಿದ್ದಳು. ಎಷ್ಟೇ ಕಷ್ಟವಾದರೂ, ದುಡ್ಡು ಕೊಟ್ಟವರುವ ಯಾರೇ ಆದರೂ ಮಾರನೇ ದಿನ ತಪ್ಪದೇ ನೋಟಿನ ಸಮೇತ ಹಾಜರಾಗುತ್ತಿದ್ದಳು ಸೀತಕ್ಕ. ಗೃಹಸ್ಥನಾಗಿದ್ದ ಆಕೆಯ ದೊಡ್ಡ ಮಗನಿಗೆ ಕೈಯಲ್ಲಿ ಏನೋ ತೊಂದರೆಯಿತ್ತು. ವೈಕಲ್ಯದ ಸಮೇತ ಅವನು ಗಾರೆ ಕೆಲಸ ಮಾಡುತ್ತಿದ್ದ. ಸಣ್ಣ ಮಗ ಸಹಾ ಕೂಲಿ ಕೆಲಸ ಮಾಡುತ್ತಿದ್ದ. ಸೀತಕ್ಕ ಸಹಾ ಅವರಿವರ ಮನೆ ಕೆಲಸ ಮಾಡಿಕೊಂಡಿದ್ದರು. ಹೀಗೆ ಆ ದಿನಕ್ಕಷ್ಟೇ ಸಾಕಾಗುವ ದುಡಿಮೆಯ ಅಸ್ಥಿರತೆಯ ನಡುವೆಯೂ ಆ ಕುಟುಂಬ ಕಿಡ್ನಿ ಫೇಯ್ಲಾದ ವೃದ್ಧ ತಂದೆಯನ್ನು ದುಬಾರಿ ಖಾಸಗೀ ಆಸ್ಪತ್ರೆಗೆ ಸೇರಿಸಿಕೊಂಡಿತ್ತು. ಇದ್ಯಾವುದರ ಅರಿವಿಲ್ಲದ, ಇದ್ದರೂ ಕಾಣದಂತಿರುವ ಆಸ್ಪತ್ರೆ, ವ್ಯವಸ್ಥೆಗಳು ಅವರೋಹಣದ ಹಾದಿಯಲ್ಲಿರುವ ಆರೋಗ್ಯಕ್ಕೆ ದಿನವೂ ಸಾವಿರ ಸಾವಿರದ ಬಿಲ್ಲುಗಳನ್ನು ಕೊಡುತ್ತಾ ಆಕೆಯ ಸಂಕಟಗಳನ್ನು ತಮ್ಮ‌ ಕೈಲಾದಷ್ಟೂ ಹೆಚ್ಚಿಸಿದ್ದವು.

ಹಣ ಪಡೆದು ಮರಳಿ ಬಂದ ಮೇಲೆ ಸೀತಕ್ಕ ರೋಗಿಯನ್ನು ಬಿಟ್ಟು ಹೋಗಿದ್ದಕ್ಕೆ ವಾರ್ಡಿನ ಹೆಡ್ ನರ್ಸ್‌ಳಿಂದ ಚೆನ್ನಾಗಿ ಬೈಸಿಕೊಳ್ಳುತ್ತಿದ್ದಳು. ಮೇಲೆ ಹೇಳಿದಂತೆ ಸೀತಕ್ಕನ ಗಂಡನೂ ಆಕೆಯನ್ನು ಕಂಡರೆ ಸಿಡಿದು ಬೀಳುತ್ತಿದ್ದ. ಸೇವೆ ಮಾಡುವ ಆಕೆಯನ್ನು ಮಲಗಿದ ಹಾಸಿಗೆಯಿಂದಲೇ ವಾಚಾಮಗೋಚರ ಬೈಯುತ್ತಿದ್ದ. ಅಷ್ಟಾಗಿ ಪ್ರಪಂಚ ಜ್ಞಾನವಿರದ ಸೀತಕ್ಕ ಸಹಾ ಏನೇನೋ ತಪ್ಪು ಮಾಡಿ ನರ್ಸು, ಡಾಕ್ಟರುಗಳಿಂದ ಬೈಸಿಕೊಳ್ಳುತ್ತಿದ್ದಳು. ಸಾಲದ್ದಕ್ಕೆ ಪಕ್ಕದ ಬೆಡ್ಡಿನ ಪೇದೆ ರಾಮದಾಸರಿಗೂ ಸದಾ ವಟವಟ ಮಾತಾಡುವ ಆಕೆಯನ್ನು ಕಂಡರೆ ಅದೇನೋ ತಾತ್ಸಾರ. “ಏ ಹೆಂಗ್ಸೇ, ಸ್ವಲ್ಪ ಬಾಯ್ಮುಚ್ಕ ಕೂರುಕಾತಿಲ್ಯ?” ಎಂದು ಆಗಾಗ ಗದರುತ್ತಿದ್ದರು. ಆಗಾಗ ತಂದೆಯನ್ನು ನೋಡಲು ಬರುತ್ತಿದ್ದ ಕಿರಿ ಮಗ ಸಹಾ ಬೈಗುಳದ ಅಕೌಂಟಿಗೆ ತನ್ನದೊಂದಷ್ಟು ಪಾಲನ್ನು ಜಮೆ ಮಾಡಿ ಹೋಗುತ್ತಿದ್ದ.

ಸೀತಕ್ಕ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವಟ ವಟ ಮಾತನಾಡುತ್ತಲೇ ಎಲ್ಲವನ್ನೂ ಎದುರಿಸಿಬಿಡುತ್ತಿದ್ದಳು. ನರ್ಸುಗಳು ಬೈದಾಗ ಪೆಚ್ಚಾಗುತ್ತಿದ್ದಳು. ಮಗ ಬೈದಾಗ ಸಮಜಾಯಿಷಿ ಕೊಡುತ್ತಿದ್ದಳು. ಗಂಡ ಬೈದಾಗ “ನಾ ನಿಮ್ನ ಬಿಟ್ಟಿಕ್ ಹ್ವಾತೆ” ಎಂದು ಬೆದರಿಕೆ ಹಾಕುತ್ತಿದ್ದಳು. ರಾಮದಾಸರು ಬೈದಾಗ ಏ ಗಂಡ್ಸೇ ಎಂದು ತಿರುಗಿ ಬೈಯುತ್ತಿದ್ದಳು. ಒಂದೇ ರೀತಿ ಕಾಣುವ ಬೇರೆ ಬೇರೆ ಮಾತ್ರೆಗಳನ್ನು ಯಾವುದು ಬೆಳಿಗ್ಗೆ, ಯಾವುದು ಮಧ್ಯಾಹ್ನ, ಯಾವುದು ರಾತ್ರಿ, ಯಾವುದು ಅರ್ಧ, ಯಾವುದು ಪೂರ್ತಿ ಎಂದೆಲ್ಲ ವಿಂಗಡಣೆ ಮಾಡುವುದು ಓದು ಬರಹ ಬಾರದ ಆಕೆಯ ಪಾಲಿಗೆ ಕಠಿಣ ಕೆಲಸವಾಗಿತ್ತು. ಸಾಲದ್ದಕ್ಕೆ ಡಾಕ್ಟರುಗಳು ಗೀಚಿದ ಬ್ರಹ್ಮಲಿಪಿ ಆಕೆಯ ಗೊಂದಲವನ್ನು ಇಮ್ಮಡಿಗೊಳಿಸುತ್ತಿತ್ತು. ಆಗೆಲ್ಲ ಅಕ್ಕಪಕ್ಕದ ಬೆಡ್ಡಿನ ರೋಗಿಗಳ ಕಡೆಯವರು ಆಕೆಗೆ ನೆರವಾಗುತ್ತಿದ್ದರು. ಇಲ್ಲಿ, ಬದುಕು ಒಂದು ವಾರ್ಡಿನೊಳಗೆ ಕೂಡಿ ಚಿಲಕ ಹಾಕಿರುವ ರೋಗಿಗಳ ಕಡೆಯವರೆಲ್ಲ ಒಬ್ಬರಿಗೆ ಇನ್ನೊಬ್ಬರು ನೆರವಾಗುವುದು ಸರ್ವೇ ಸಾಮಾನ್ಯ. ದೇಹದ ಅಂಗಗಳೆಲ್ಲ ಒಣಗಿ ಅಸ್ತಿ ಪಂಜರವೊಂದು ಸುಮ್ಮನೆ ಚರ್ಮ ಅಂಟಿಸಿಕೊಂಡು ಮಲಗಿದಂತಿದ್ದ ಕೃಶ ಗಂಡನನ್ನು ಎತ್ತಲಾಗದೆ ಒದ್ದಾಡುತ್ತಿದ್ದವಳಿಗೆ ಅವನನ್ನು ಎಬ್ಬಿಸಿ, ಮೈ ಒರೆಸಿ, ಸ್ವಚ್ಛ ಮಾಡುವುದಕ್ಕೂ ಇನ್ನೊಬ್ಬರ ಸಹಾಯ ಬೇಕೇ ಬೇಕಾಗಿತ್ತು. ವಾರಕ್ಕೆ ಮೂರು ಡಯಾಲಿಸಿಸ್ ಗೊಳಗಾಗುತ್ತಿದ್ದ ಗಂಡ ದೇಹ ಸತ್ವವನ್ನೆಲ್ಲ ಕೆಳದುಕೊಂಡು ಹಗುರಾಗಿದ್ದರೂ, ಆ ಹಗುರವೂ ಭಾರವೆನಿಸುವ ವಯೋ ಸಹಜ ದೌರ್ಬಲ್ಯ ಸೀತಕ್ಕನದಾಗಿತ್ತು.

ಇಂತಿಪ್ಪ ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ ಬದುಕು ಮೂರು ನಿಮಿಷದಲ್ಲಿ ಕಂಡ ಎಪಿಸೋಡಿನಂತೆ ನನ್ನೆದುರು ಪ್ರಸಾರವಾಗುತ್ತಿತ್ತು.‌ ಊರಿನಲ್ಲಿ ಸೀತಕ್ಕನಿಗೆ ಅವಳದೇ ಆದ ಒಂದಷ್ಟು ಸ್ನೇಹಗಳಿದ್ದವು. ಆಕೆ ಮಾತ್ರ ಮಾಡಬಹುದಾದ, ಅರ್ಧ ಸಂಬಳದ ಕೆಲಸಗಳಿದ್ದವು. ಅದನ್ನು ಆಕೆಗೆ ಕೊಡುವ ಮನೆಯೊಡತಿಯರೇ ಆಕೆಯ ಸ್ನೇಹಿತೆಯರಾಗಿದ್ದರು. ಅವರ ಮನೆಗಳ ಪಾತ್ರೆ ತೊಳೆಯುತ್ತ, ಹೂಗಿಡಗಳಿಗೆ ನೀರು ಹಾಕುತ್ತ, ಯಾರದೋ ಹೂದೋಟದಲ್ಲಿ ಹೂವರಳಿಸುತ್ತ, ಅಂಗಳಕ್ಕೆ ಸಗಣಿ ನೀರು ಬಳಿಯುತ್ತಾ, ಹಬ್ಬಕ್ಕೆ ತೋರಣ ಕಟ್ಟುತ್ತಾ, ಅವರಾಗಿ ಕೊಟ್ಟರಷ್ಟೇ ತಾನೂ ಹೂ ಮುಡಿಯುತ್ತ ಇದ್ದಳು ಆ ಅಜ್ಜಿ. ಮನೆಯ ತುಂಬಾ ಕಲಹಗಳಿದ್ದುದಕ್ಕೋ ಏನೋ, ಮನಸ್ಸು ಪ್ರಶಾಂತವಾಗಿತ್ತು. ಅಥವಾ ಅವಳು ಹಾಗೆ ನಟಿಸುತ್ತಿದ್ದಳು. ಏನೇ ಚಿಂತೆಯಿದ್ದರೂ ವಟವಟ ಮಾತನಾಡಿ ಹಗುರಾಗುವ ಕಲೆಯನ್ನು ಬದುಕೇ ಆಕೆಗೆ ಕಲಿಸಿತ್ತು.

ತಿಂಗಳು, ಎರಡು ತಿಂಗಳಿಗೊಮ್ಮೆ ಆಕೆಯೇ ನನಗೆ ಕರೆ ಮಾಡುತ್ತಿದ್ದಳು. ಎಂಥದೋ ಕಥೆ ಹೇಳುತ್ತಿದ್ದಳು. ಆಗೆಲ್ಲ ನನಗೆ ಅಲ್ಲೊಂದು ಕಾಡು ಮೂಲೆಯ ಹಳ್ಳಿಯಲ್ಲಿ, ಯಾರದೋ ಹಿತ್ತಲಲ್ಲಿ ನಿಧಾನವಾಗಿ ದುಡಿಯುತ್ತ ಜೀವಂತ ಹೂವಿನಂತೆ ಓಡಾಡಿಕೊಂಡಿರುವ ಅವಳ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು. ಹೀಗಿದ್ದಾಗೊಮ್ಮೆ ಅಚಾನಕ್ಕಾಗಿ ಆಕೆಯ ನಂಬರ್ ಸ್ವಿಚ್ಚಾಫಾಯಿತು. ನಾನೂ ನಾನಾ ಪಾಡುಗಳ ನಡುವೆ ಬ್ಯುಸ಼ಿಯಾದೆ. ಕೊನೆಗೊಮ್ಮೆ ಸೀತಕ್ಕನಿಂದಲೇ ಫೋನು ಬಂತು. ಫೋನು ಎತ್ತಿದೊಡನೆಯೇ “ಅವ್ರು ಹ್ವಾಯ್ಬಿಟ್ರು ಅಯ್ಯ” ಎಂದಳು ಸೀತಕ್ಕ. “ನಂಗೂ ತಲೆ ತಿರ್ಗು. ಕೆಲ್ಸಕ್ಕೆಲ್ಲೂ ಹ್ವಾಪುಕಾತಿಲ್ಲೆ. ಮನೀಲೇ ಇರ್ತೆ. ದುಡೀದೇ ಇರೋರ್ ಮೊಬೈಲಿಗೆ ಕರೆನ್ಸಿ ಎಲ್ಲಿಂದ ಬರ್ಕ್ ಹೇಳಿ. ಅದ್ಕೇ ನಂಬರ್ ಆಫಾಯಿತ್” ಎಂದಳು. “ಹತ್ರ ಇದ್ದಿರೆ ನಿಮ್ಮನೆ ಕೆಲ್ಸಕ್ಕಾರೂ ಬತ್ತಿದ್ದೆ ಅಯ್ಯಾ. ಯಾರತ್ರನಾದ್ರೂ ಮಾತಾಡುವ ಅಂದ್ರೆ ಕರೆನ್ಸಿನೂ ಇಲ್ಲ. ಅವ್ರೂ ಹ್ವಾದ್ರು” ಎಂಬ ವಿಷಾದದೊಂದಿಗೆ ಮಾತು ಮುಗಿಸಿದಳು. ಸೀತಕ್ಕ, ಅಮ್ಮ ಮಾತನಾಡುತ್ತ ಪಾತ್ರೆ ತೊಳೆಯುವ ದೃಶ್ಯವೊಂದು ನನ್ನ ಕಲ್ಪನೆಯಲ್ಲಿ ತೇಲಿ ಹೋಯಿತು. “ನಿಮ್ಮ ನಂಬರ್ಗೆ ರಿಚಾರ್ಜ್ ಮಾಡ್ತೆ ಸೀತಕ್ಕ. ಫೋನ್ ಮಾಡ್ತಿರಿ” ಎಂದೆ. ಅದ್ಯಾಕೋ ಬದುಕಿನ ಕಷ್ಟದ ಸಮಯದಲ್ಲಿ ಜೊತೆಗಿದ್ದ ಇಂಥಾ ಒಡನಾಟಗಳನ್ನು ಕಳೆದುಕೊಳ್ಳಲು ಮನಸ್ಸೇ ಇರಲಿಲ್ಲ. ಆಕೆ “ಅಯ್ಯೋ ಬೇಡ ಬೇಡ” ಎನ್ನುವಾಗಲೇ ಒಂದು ತಿಂಗಳ ಚಿಕ್ಕ ಪ್ಯಾಕು ಹಾಕಿದೆ. ನಿರಂತರ ಬೇಸರದ ಅವಳ ಬದುಕಿಗೆ ಇದಕ್ಕಿಂತ ಹೆಚ್ಚಿಗೆ ಏನು ಮಾಡುವುದೂ ಸಾಧ್ಯವಿರಲಿಲ್ಲ.

ಸೀತಕ್ಕ ಆಗೊಮ್ಮೆ ಈಗೊಮ್ಮೆ ಕರೆಯಾಗಿ ನಮ್ಮ ದಿನವನ್ನು ಪ್ರವೇಶಿಸುತ್ತಿದ್ದಳು. ಅಮ್ಮನ ಜೊತೆಗೂ ಹರಟುತ್ತಿದ್ದಳು. ಊರ ಜಾತ್ರೆ, ಒಡತಿಯ ಮನೆಯ ಹಬ್ಬ, ಮಗನ ಸಾಲ, ಸೊಸೆಯ ಬೈಗುಳ, ಮೊಮ್ಮಗ ಬರಬಹುದೆಂಬ ನಿರೀಕ್ಷೆ.. ಇವಿವೇ ಮಾತುಗಳು. ಬದುಕನ್ನು ವಿಶೇಷವಾಗಿ ಆಚರಿಸಲಿಕ್ಕೆ ಮಜಬೂತಾದ ಕಾರಣವೇನೂ ಆಕೆಗೆ ಬೇಕಿರಲಿಲ್ಲ ಅಂತ ಆಗಾಗ ಅನ್ನಿಸುತ್ತಿತ್ತು. ಕೆಲಸಕ್ಕೆ ಕರೆಯುವ ಮನೆಯೊಡತಿ ಒಂದು ಲೋಟ ಪಾಯಸ ಕೊಟ್ಟರೂ ಅದರದ್ದೇ ಕತೆ ಹೇಳುತ್ತಿದ್ದಳು ಸೀತಕ್ಕ. ಪಾಯಸ, ಅದನ್ನು ಕೊಟ್ಟ ಅಮ್ಮ, ಅವರ ಮನೆ, ಮಕ್ಕಳು, ಅವರ ಒದ್ದಾಟಗಳು, ಹೋರಾಟಗಳು.. ಒಂದು ಪಾಯಸದ ಹಿಂದೆ ಏನೇನೋ ಇರುತ್ತಿದ್ದವು. ಆ ಊರಿನ ಹತ್ತಾರು ಮನೆಗಳ ಯಾರಿಗೂ ಗೊತ್ತಿಲ್ಲದ ಒಳ ಸುಳಿಗಳೆಲ್ಲ ಅದು ಹೇಗೋ ಸೀತಕ್ಕನಿಗೆ ಮಾತ್ರ ತಿಳಿಯುತ್ತಿದ್ದವು.

ಗಂಡ ಹೋಗುವ ಮುನ್ನದ ಸೀತಕ್ಕನಿಗೂ, ಅವನು ಹೋದ ನಂತರದ ಸೀತಕ್ಕನಿಗೂ ವ್ಯತ್ಯಾಸವಿದೆ ಅಂತ ಬಲವಾಗಿ ಅನ್ನಿಸತೊಡಗಿತ್ತು. ಬೈಯುತ್ತಲೇ ಆದರೂ ಅವನು ಆಕೆಯ ಅಂತರಂಗದಲ್ಲಿ ಧೈರ್ಯವಾಗಿ ನೆಲೆ ನಿಂತಿದ್ದ. ಅವನು ಇದ್ದಾನೆ ಎನ್ನುವ ಧೈರ್ಯವಾಗಿ ಆಕೆ ಇಡೀ ಬದುಕನ್ನು ಎದುರಿಸುತ್ತಿದ್ದಳು.‌ ಬೈಸಿಕೊಳ್ಳುತ್ತಲೇ ಅವನ‌ ಸೇವೆ ಮಾಡುತ್ತಿದ್ದಳು.‌ ಅದು ಅವನ‌ ವ್ಯಕ್ತಿತ್ವದ ದೊಡ್ಡ ಗುಣವೋ, ಇಲ್ಲಾ ಅವನ‌‌ ಮೇಲಿಟ್ಟ ಆಕೆಯ ಪ್ರೀತಿಯ ಬಲವೋ ಗೊತ್ತಿರಲಿಲ್ಲ. ಅಲ್ಲಿಯ ತನಕ ಎಲ್ಲವನ್ನೂ ಸಹಜವೆಂಬಂತೆ ಎದುರಿಸಿಕೊಂಡಿದ್ದ ಸೀತಕ್ಕ ಅವನು ಬದುಕಿನಿಂದ ಎದ್ದು ಹೋಗಿದ್ದೇ ಒಳಗಿನಿಂದಲೂ ವೃದ್ಧೆಯಾಗತೊಡಗಿದಳು.

ಹೀಗೆ ಒಂದಷ್ಟು ದಿನ ಮಾತಿಗೆ ಸಿಕ್ಕ ಸೀತಕ್ಕನ ಮೊಬೈಲ್ ಕೊನೆಗೊಂದು ದಿನ ಮತ್ತೆ ಸ್ವಿಚ್ಚಾಫಾಯಿತು. ವಾರ, ತಿಂಗಳುಗಳು ಕಳೆದರೂ ಅದು ಮತ್ತೆ ಚಾಲೂ ಆಗಲೇ ಇಲ್ಲ. ಎಲ್ಲಿ ಹೋದಳೋ, ಏನಾಯಿತೋ ಕೇಳೋಣವೆಂದರೆ ಆಕೆಗೆ ಸಂಬಂಧ ಪಟ್ಟ ಇನ್ನೊಂದೇ ಒಂದು ಜೀವವೂ ನನಗೆ ಪರಿಚಯವಿರಲಿಲ್ಲ. ಬದುಕೆನ್ನುವ ರಂಗಸಜ್ಜಿಕೆಯಲ್ಲಿ ಸಂಭಾಷಣೆಯಷ್ಟೇ ಆಗಿ ಸುಳಿದು ಹೋದ ಪಾತ್ರದಂತೆ ಬಂದು ಮರೆಯಾದ ಸೀತಕ್ಕ ನೆನಪಿನ ಪುಟಗಳಲ್ಲಿ ಅಮರಳಾದಳು.