ಪುರಾಣ ಕತೆಯನ್ನು ವರ್ತಮಾನಕ್ಕೆಳೆಯುವ, ಕಥೆಯ ಮೈ ಕೆಡದಂತೆ ಅದನ್ನು ಹದವಾಗಿ ಬೆಸೆಯುವ ಕುಶಲತೆ ವೆಂಕಟೇಶಮೂರ್ತಿಯವರಿಗಿದೆ. ಅವರ ಪುರಾಣ ಪಾತ್ರಗಳು ವರ್ತಮಾನದ ವ್ಯಕ್ತಿಗಳಂತೆ ಆಡುವರಾದರೂ ಔಚಿತ್ಯದ ವಿವೇಕದಲ್ಲಿಯೇ ಅದನ್ನು ನಿಭಾಯಿಸುವ ಶಕ್ತಿ ಅವರ ಬರಹಕ್ಕಿದೆ. ಹೀಗಾಗಿಯೇ ವಸ್ತು ಜಗತ್ತಿನ ಕುರಿತು ಆಡುವ ಮಾತುಗಳೂ ಶುಷ್ಕವಾಗದೇ, ನಿತ್ಯಜೀವನದ ಕೃಪಣತೆಯ ಸೋಕಿಲ್ಲದಂತೆ ಚಿತ್ತಾಕರ್ಷಕವೂ ಚಿತ್ರವತ್ತಾಗಿಯೂ ಮೂಡುತ್ತದೆ. ಅದನ್ನವರು ಭಾಷೆಯ ಮೂಲಕ ಸಾಧಿಸುತ್ತಾರೆ.
ಎಚ್.ಎಸ್. ವೆಂಕಟೇಶಮೂರ್ತಿಯವರೊಂದಿಗಿನ ರಂಗ ಸಂಬಂಧದ ಕುರಿತು ಡಾ. ಶ್ರೀಪಾದ ಭಟ್‌ ಬರಹ

ಎಲ್ಲಿ ಯಾವುದು ಇಲ್ಲವೋ ಅಲ್ಲಿಗೆ ಅದು ಬೇಕು. ಹೊಳಲಿಗೆ ಕೊಳಲು ಬೇಕು. ರಥ ಚೀತ್ಕಾರದ ಕರ್ಕಶ ನಗರಕ್ಕೆ ಕೊಳಲ ಮಧುರ ನಿನಾದದ ಅವಶ್ಯಕತೆ ಇದೆ. ಅದಕ್ಕಂತಲೇ ಗೋಕುಲದಿಂದ ಮಥುರೆಗೆ ಹೊರಟ ಕೃಷ್ಣ ತನ್ನ ಜತೆ ಕೊಳಲನ್ನು ಒಯ್ಯುತ್ತಾನೆ. ಮಥುರೆಯ ಪಾಪಾಸು ಕಳ್ಳಿಗಳನ್ನು ಸವರಿ ತುಳಸಿ ಗಿಡ ಹಚ್ಚಲು ಬಲರಾಮ ನೇಗಿಲು ಹಿಡಿದಿದ್ದಾನೆ.

ಎಚ್.ಎಸ್.ವಿ.ಯವರ ಕಂಸಾಯಣದಲ್ಲಿ ಕಾಣಬರುವ ಚಿತ್ರಣವಿದು.

ತಮ್ಮ ಕಾವ್ಯರಚನೆಯ ವರ್ತಮಾನದಲ್ಲಿ ಪರಂಪರೆಯೊಂದಿಗೆ ನಿರಂತರ ಸಂವಾದ ನಡೆಸುತ್ತ ಭವಿಷ್ಯತ್ತಿನ ಕನಸು ನೇಯುವವರು ವೆಂಕಟೇಶ ಮೂರ್ತಿಯವರು. ಹೀಗಾಗಿ ಅವರ ಕೃತಿಗಳಲ್ಲಿ ಈ ತ್ರಿಕಾಲಜ್ಞಾನ ತೈಲಧಾರೆಯಂತೆ ಇರುತ್ತದೆ.

ಪ್ರಸ್ತುತ ಕಂಸಾಯಣ ನಾಟಕವನ್ನೇ ತೆಗೆದುಕೊಳ್ಳೋಣ. ವೆಂಕಟೇಶಮೂರ್ತಿಯವರು ಬಹುವಾಗಿ ಗೌರವಿಸುವ, ಪ್ರೀತಿಸುವ ಪು.ತಿ.ನ. ಅವರ ಗೋಕುಲ ನಿರ್ಗಮನದ ಜತೆ ಅವರು ಸಂವಾದಿಸಿದ ಬಗೆ ಇದು. ಗೋಕುಲ ನಿರ್ಗಮನ ಗೀತ ನಾಟಕದಲ್ಲಿ ಗೋಕುಲದಿಂದ ಮಥುರೆಗೆ ಹೊರಟ ಕೃಷ್ಣ ತನ್ನ ಕೊಳಲನ್ನು ಅಲ್ಲಿಯೇ ಬಿಟ್ಟು ಹೊರಡುತ್ತಾನೆ. ಗೋಕುಲವೇ ಇನ್ನೆಂದೂ ಕಾಣದಂತೆ ಮಾಯವಾಗುತ್ತದೆ. ಹೀಗಾಗಿ ಗೋಕುಲ ನಿರ್ಗಮನವೆಂಬುದು ಕೃಷ್ಣ ಗೋಕುಲದಿಂದ ನಿರ್ಗಮಿಸಿದ ಕತೆ ಮಾತ್ರವಲ್ಲದೇ ಈ ಭೂಮಿಯಿಂದ ಗೋಕುಲವೇ, ಬೃಂದಾವನವೇ ನಿರ್ಗಮಿಸಿದ ಕಥನವೂ ಆಗುತ್ತದೆ. ಅದಕ್ಕೆಂದೇ ಅಲ್ಲಿ ಒಂದು ರಾತ್ರಿಯಲ್ಲಿ ಸ್ವಪ್ನ ಸದೃಶ ಘಟನಾವಳಿಗಳು ಜರುಗಿಹೋಗುತ್ತವೆ.

ಮೂರ್ತಿಯವರ ಕಂಸಾಯಣ ನಾಟಕವು ಗೋಕುಲನಿರ್ಗಮನದೊಂದಿಗೆ ಸಂವಾದಿಸುವ ಪರಿ ನೋಡಿ. ಗೋಕುಲ ನಿರ್ಗಮನದ ಕತೆ ಎಲ್ಲಿಗೆ ನಿಲ್ಲುತ್ತದೋ ಅಲ್ಲಿಂದ ಈ ನಾಟಕದ ಕತೆ ಶುರುವಾಗುತ್ತದೆ. ಗೋಕುಲ ನಿರ್ಗಮನದಲ್ಲಿ ಯಾದವರ ಗುಂಪು ಕೃಷ್ಣ ಬಲರಾಮರ ನೇತೃತ್ವದಲ್ಲಿ ಮೆರವಣಿಗೆ ಹೊರಟರೆ ಅದೇ ಮೆರವಣಿಗೆ ಮಥುರೆಗೆ ಬರುವದರೊಂದಿಗೆ ಈ ನಾಟಕ ಶುರುವಾಗುತ್ತದೆ. ಕೃಷ್ಣ ತನ್ನ ಕೊಳಲನ್ನು ಮಥುರೆಗೆ ತಂದು ಅಲ್ಲಿಯ ಓಣಿ ಓಣಿಗಳಲ್ಲಿ ನುಡಿಸುತ್ತಿದ್ದಾನೆ. ಅಲ್ಲಿ ಮಥುರೆಯ ಹೆಂಗಳೆಯರ ದಂಡು ದಂಡೇ ನೆರೆಯುತ್ತದೆ. ನಾವಿರುವ ತಾಣವನ್ನೇ ಗೋಕುಲವಾಗಿಸಿಕೊಳ್ಳಬೇಕು ಅನ್ನುತ್ತದೆ ಈ ನಾಟಕ. ಅಲ್ಲಿ ಸ್ವಪ್ನವೋ ದಿಟವೋ ಎಂದು ತಿಳಿಯದ ಮಾಯಕವೊಂದು ಘಟಿಸುತ್ತಿದ್ದರೆ ಇಲ್ಲಿ ಅಪ್ಪಟ ವರ್ತಮಾನದ ಕಟ್ಟೆಚ್ಚರದಲ್ಲಿ ಘಟನೆಗಳು ಜರುಗುತ್ತವೆ. ಇಲ್ಲಿಯೂ ಹಾಡಿದೆ, ಕುಣಿತವಿದೆ. ಆದರೆ ಕಟ್ಟೆಚ್ಚರದ ಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆಯುಳ್ಳ ರಾಜಕೀಯವೂ ಇದೆ.

ತನ್ನ ಇಡಿಯ ಜೀವಿತವನ್ನು ಮಹಾನಗರದಲ್ಲಿಯೇ ಕಳೆದ ಈ ಕವಿಗೆ ತಾನಿರುವ ತಾಣದಲ್ಲಿಯೇ ಇಂಥದೊಂದು ಗೋಕುಲವನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಈ ಬಗೆಯ ಚಿಂತನೆಗೆ ಕಾರಣವೂ ಆಗಿತ್ತೇನೋ.

ಪುರಾಣ ಕತೆಯನ್ನು ವರ್ತಮಾನಕ್ಕೆಳೆಯುವ, ಕಥೆಯ ಮೈ ಕೆಡದಂತೆ ಅದನ್ನು ಹದವಾಗಿ ಬೆಸೆಯುವ ಕುಶಲತೆ ವೆಂಕಟೇಶಮೂರ್ತಿಯವರಿಗಿದೆ. ಅವರ ಪುರಾಣ ಪಾತ್ರಗಳು ವರ್ತಮಾನದ ವ್ಯಕ್ತಿಗಳಂತೆ ಆಡುವರಾದರೂ ಔಚಿತ್ಯದ ವಿವೇಕದಲ್ಲಿಯೇ ಅದನ್ನು ನಿಭಾಯಿಸುವ ಶಕ್ತಿ ಅವರ ಬರಹಕ್ಕಿದೆ. ಹೀಗಾಗಿಯೇ ವಸ್ತು ಜಗತ್ತಿನ ಕುರಿತು ಆಡುವ ಮಾತುಗಳೂ ಶುಷ್ಕವಾಗದೇ, ನಿತ್ಯಜೀವನದ ಕೃಪಣತೆಯ ಸೋಕಿಲ್ಲದಂತೆ ಚಿತ್ತಾಕರ್ಷಕವೂ ಚಿತ್ರವತ್ತಾಗಿಯೂ ಮೂಡುತ್ತದೆ. ಅದನ್ನವರು ಭಾಷೆಯ ಮೂಲಕ ಸಾಧಿಸುತ್ತಾರೆ. ಮೂಲ ಕತೆಯಲ್ಲಿ ಅವರು ಯಾವ ಬದಲಾವಣೆಯನ್ನೂ ಮಾಡಿಕೊಂಡಂತೆ ಕಾಣುವುದಿಲ್ಲ. ಆದರೆ ಆ ಪಾತ್ರಗಳು ಆಡುವ ಭಾಷೆ ಅದು ಪುರಾಣಲೋಕದ್ದಲ್ಲ. ಅದು ಅಪ್ಪಟ ವರ್ತಮಾನದ ಭಾಷೆ. ಹೀಗಾಗಿ ಥಟ್ಟನೆ ಅದು ನಮ್ಮ ಸಮಕಾಲೀನ ಸಂಗತಿ ಎಂದೆನಿಸಿಬಿಡುತ್ತದೆ. ಅಲ್ಲದೇ ಹೊಸದೇ ರೂಪು ತಳೆದಂತೆನಿಸುತ್ತದೆ. ಉದಾಹರಣೆಗೆ ಅವರ ಊರ್ಮಿಳಾ ನಾಟಕವನ್ನು ಗಮನಿಸಬಹುದು. ಹನುಮನೇನೊ ಲಂಕೆಯನ್ನು ಸುಟ್ಟ. ಆದರೆ ರಾಜ ಮಾಡಿದ ತಪ್ಪಿಗೆ ಬಲಿಯಾದ ಅಮಾಯಕ ಪ್ರಜೆಗಳ ನೋವನ್ನು ಅಲ್ಲಿ ಚರ್ಚಿಸಲಾಗುತ್ತದೆ. ರಾತ್ರಿ ನಿದ್ದೆಯಲಿದ್ದ ಮಕ್ಕಳು, ಹೆಂಗಸರು, ಮುದುಕರು ಬೆಂಕಿಯಲ್ಲಿ ಸುಟ್ಟು ಕರಕಲಾದ ಸಂಗತಿಯನ್ನು ಕುರಿತು ನಾಟಕದಲ್ಲಿ ವಿವರಿಸುತ್ತ… ‘ಮುದುಕರು ತನ್ನ ಕನ್ನಡಕ ಎಲ್ಲಿʼ ಎಂದು ತಡಕಾಡುತ್ತಿದ್ದರು ಎಂಬ ಮಾತು ಬರುತ್ತದೆ. ‘ಇದ್ದಕ್ಕಿದ್ದಂತೆ ಕನ್ನಡಕʼ ಎಂಬ ಪದ ಪ್ರಯೋಗವಾಗುತ್ತಿದ್ದಂತೆ, ನಮ್ಮ ಕಾಲದ ಮಾತು ಬಳಕೆಯಾಗುತ್ತಿದ್ದಂತೆ ಓದುಗ/ನೋಡುಗರಿಗೆ ಅದು ನಮ್ಮ ಕಾಲದ ಕತೆಯಾಗಿ ಕಾಣಬರುತ್ತದೆ. ಅವರ ನಾಟಕಗಳು ಇಂಥ ಅನೇಕ ಚಕಿತಗೊಳಿಸುವ ಭಾಷಾ ಪ್ರಯೋಗ ಮಾಡಿದ್ದಿದೆ.

ಸಮಕಾಲೀನ ರಾಜಕೀಯ ಚರ್ಚೆಯನ್ನು ನಾಟಕದಲ್ಲಿ ಒಳಗೊಳ್ಳುವ ಬಗೆಯಲ್ಲಿ ಕೂಡ ಅವರು ತುಂಬ ವಿಧದ ಪ್ರಯೋಗ ನಡೆಸಿದ್ದಿದೆ. ಅಗ್ನಿವರ್ಣ ಒಂದು ಬಗೆಯಾದರೆ, ಊರ್ಮಿಳಾ ಇನ್ನೊಂದು ಬಗೆ. ಧರಣಿ ಮಂಡಲ ನಾಟಕವಂತೂ ಸತ್ಯಾಗ್ರಹ ಪರಿಕಲ್ಪನೆಯನ್ನು ಬಳಸಿಕೊಂಡ ವಿಧಾನವೇ ಹೊಸಬಗೆಯದು. ಪುಣ್ಯಕೋಟಿ ನೋಡ ನೋಡುತ್ತ ಗಾಂಧಿಯಂತೆ ಕಾಣತೊಡಗುವುದರ ರೂಪಾಂತರದ ಜಾಣ್ಮೆಯನ್ನು ಓದಿಯೇ ಸವಿಯಬೇಕು.

ನಟರು, ನಿರ್ದೇಶಕರು ನಾಟಕ ಪ್ರಯೋಗದಲ್ಲಿ ಯಾವಬಗೆಯ ಪಾತ್ರವಹಿಸುವರೆಂಬುದರ ಬಗ್ಗೆ ಅವರಿಗೆ ಖಚಿತ ಅರಿವಿತ್ತು. ಹೀಗಾಗಿಯೇ ಅವರ ನಾಟಕಗಳು ಸಾಕಷ್ಟು ಪ್ರಯೋಗ ಕಂಡಿವೆ. ಕಾರಂತರಾದಿಯಾಗಿ ನಮ್ಮ ತಲೆಮಾರಿನವರೂ ಅವರ ನಾಟಕಗಳನ್ನು ಮತ್ತೆ ಮತ್ತೆ ಆಡಿಸಿದ್ದಾರೆ. ತಮ್ಮ ನಾಟಕ ಸಂಕಲನದ ಮುನ್ನುಡಿಯೊಂದರಲ್ಲಿ ಅವರು ಹೀಗೆ ಬರೆದಿದ್ದಾರೆ. “ನಾಟಕಕಾರನದ್ದು ಭಾಷಿಕ ಅಭಿವ್ಯಕ್ತಿ. ಆದರೆ ಆ ಮಾತಿನ ಮೂಲಚೂಲಗಳನ್ನು ಹಿಡಿದು ಆಡು, ಮಾತುಗಳ ನಡುವೆ ಸ್ತಬ್ಧ ನಾಲಗೆಯಾಗಿ ನಿಲ್ಲುವ ಮೌನದ ಸಂಜ್ಞೆಯನ್ನು ಪರಿಭಾವಿಸುವ ಹೊಣೆಗಾರಿಕೆ ಕಲಾವಿದರದ್ದು… ಮಾತುಗಳೇ ಎಲ್ಲಕ್ಕೂ ಮೂಲ, ನಿಜ. ಆದರೆ ಮಾತಿನ ಮೂಲವನ್ನು ಬಗೆಯದೇ ರಂಗಸಾಕ್ಷಾತ್ಕಾರವು ಸಾಧಿತವಾಗದು. ಬೀಜಕ್ಕೆ ಗಾಯವಾಗದಂತೆ ಮರವನ್ನು ಬಯಲಿಗೆ ಎತ್ತಿಕೊಳ್ಳುವ ಶಕ್ತಿ ರಂಗನಿರ್ವಾಹಕರಿಗೆ ಇದ್ದಾಗ ಮಾತ್ರ ಮಾತು ಪ್ರಾತ್ಯಕ್ಷಿಕೆಯಾಗಿ ಉನ್ಮೀಲಿತವಾಗುತ್ತದೆ”

ಅವರ ಕಾವ್ಯದಲ್ಲಿಯ ನಾಟಕೀಯ ಶಕ್ತಿ, ನಾಟಕದಲ್ಲಿಯ ಕಾವ್ಯಶಕ್ತಿ ಯಾವುದು ಯಾವುದಕ್ಕೆ ನೆರವಾಗಿದೆ ಎಂದು ಪ್ರಥಕ್ಕರಿಸುವುದು ಕಷ್ಟ. ಅವರ ನಾಟಕಗಳಿಗೆ ಸಂಗೀತ ಸಂಯೋಜಿಸುವುದು ನನಗೆ ತುಂಬ ಇಷ್ಟದ ಕೆಲಸವಾಗಿತ್ತು. ಏಕೆಂದರೆ ಅವರ ಶಬ್ದಗಳಲ್ಲಿ ಚಿತ್ರಗಳಿರುತ್ತವೆ. ಅದನ್ನು ದನಿಯಾಗಿಸುವುದು ತುಂಬ ಸುಖದ ಅನುಭವ.

ಮಕ್ಕಳಿಗೆಂದು ಅವರು ರಚಿಸಿದ ಹಕ್ಕಿಸಾಲು ಕವನ ಸಂಗ್ರಹ ನನ್ನ ಪಾಲಿಗೆ ಮಹಾಕಾವ್ಯ. ಅದು ಮಕ್ಕಳಿಗೆಂತೋ ದೊಡ್ಡವರಿಗೂ ಸಲ್ಲುವ ಚಂದದ ಪಾಠ. ಅನೇಕ ಕಾರ್ಯಾಗಾರಗಳಲ್ಲಿ ನಾನದನ್ನು ಪಠ್ಯವಾಗಿ ಬಳಸಿದ್ದೆ. ‘ನಾನು ನನ್ನಂಗೆ ಇರ್ಬೇಕಪ್ಪ. ನಾನು ನಾನೇ ಅಂತ ನನ್ನ ಅಪ್ಪ ಅಮ್ಮಂಗೆ ತಿಳೀಬೇಕಪ್ಪ, ಕನ್ನಡಿ ಗಿನ್ನಡಿ ನೋಡ್ಕೊಂಡಾಗ ನನ್‌ ಮುಖಾನೇ ಕಾಣ್ಬೇಕಪ್ಪʼ ಎಂಬ ಸರಳ ಸಾಲಿನಲ್ಲಿಯ ತಾತ್ವಿಕ ಸಂಗತಿಗಳ ಕುರಿತು ಎಷ್ಟು ಬೇಕಾದ್ರೂ ಚರ್ಚೆ ಮಾಡಲು ಸಾಧ್ಯ. ಎಂದೂ ಮುದಿಯಾಗದ ಎಷ್ಟೊಂದು ಕವನಗಳಿವೆ ಅಲ್ಲಿ.

ಅವರೊಡನೆ ನನ್ನದು ರಂಗಸಂಬಂಧ. ಕಂಸಾಯಣ ನಾಟಕದಿಂದ ಅದು ಆರಂಭವಾಯ್ತು. ಮಕ್ಕಳಿಗಾಗಿ ಆಡಿಸಿದ ಆ ನಾಟಕವು ನನ್ನನ್ನು ದೆಹಲಿಯ ಎನ್.ಎಸ್.ಡಿ. ಉತ್ಸವಕ್ಕೂ ಪರಿಚಯಿಸಿತು. ಆ ನಾಟಕದ ಪ್ರಯೋಗದ ಕುರಿತು ಅವರು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದರು. ಅವರ ಸಮಗ್ರ ಮಕ್ಕಳ ನಾಟಕ ಸಂಗ್ರಹದ ಪುಸ್ತಕದಲ್ಲಿಯ ಮುನ್ನುಡಿಯಲ್ಲಿ ಅವರು ಹೀಗೆ ಬರೆದಿದ್ದಾರೆ. “ಶ್ರೀಪಾದ ಭಟ್ಟರು ಮಕ್ಕಳನ್ನು ಬೆಂಗಳೂರಿಗೆ ಕರೆತಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಂಸಾಯಣ ಪ್ರಯೋಗಿಸಿದಾಗ ನನಗೆ ಕಂಸಾಯಣದ ಹೊಸ ಸಾಧ್ಯತೆಯೊಂದು ಗಮನಕ್ಕೆ ಬಂತು. ಬುಡಕಟ್ಟು ಮತ್ತು ನಾಗರೀಕ ಜಗತ್ತಿನ ಘರ್ಷಣೆಯಾಗಿ ಅದನ್ನು ಪಡಿಮೂಡಿಸಬಹುದೆಂಬ ಸಾಧ್ಯತೆ ಹೊಳೆಯಿತು”

ಇದು ನನಗೆ ದೊರೆತ ಗೌರವ ಎಂದೇ ಭಾವಿಸಿದ್ದೇನೆ.

‘ನಿನಗೆ ನೀನೇ ಗೆಳತಿʼ ಎಂಬ ನಾಟಕ ಬರೆದು ಅದು ಪ್ರಕಟವಾಗುವ ಮುನ್ನ ನನಗೆ ಕಳುಹಿಸಿ “ಇದನ್ನು ಕಾಲೇಜು ವಿದ್ಯಾರ್ಥಿಗಳನ್ನು ಗಮನದಲಿಟ್ಟು ಬರೆದಿದ್ದೇನೆ. ಎಲ್ಲಿಯಾದರೂ ಪ್ರಯೋಗಿಸಿ ಅದರ ಶಕ್ತಿ, ಮಿತಿಗಳ ಬಗ್ಗೆ ನನಗೆ ತಿಳಿಸುವಿರಾ? ನಂತರ ಅದನ್ನು ಪರಿಷ್ಕರಿಸಿ ಪ್ರಕಟಿಸುವೆ” ಎಂದಿದ್ದರು. ನಾನು ಅದನ್ನು ಪ್ರಯೋಗಿಸಿ ಅವರೊಡನೆ ಸಾಕಷ್ಟು ಚರ್ಚಿಸಿದ್ದೆ. ‘ಬುದ್ಧಚರಣʼ ಕಾವ್ಯವನ್ನು ನಾನು ರಂಗದ ಓದಿಗೆ ಬಳಸಬೇಕೆಂಬ ಬಯಕೆ ಅವರಿಗಿತ್ತು. ಆದರೆ ಅವರ ಜೀವಿತ ಕಾಲದಲ್ಲಿ ನನಗದು ಸಾಧ್ಯವಾಗಿಲ್ಲ.

ಅವರ ಸಮಗ್ರ ನಾಟಕಗಳ ಕುರಿತ ಲೇಖನವಿದಲ್ಲ. ನಾನು ಒಡನಾಡಿದ, ಪ್ರಯೋಗಿಸಿದ ಅವರ ನಾಟಕಗಳ ಅನುಭವದಲ್ಲಿ ಇಷ್ಟು ಮಾತು ಮಾತ್ರ ಬರೆದಿರುವೆ. ನನಗೆ ಪ್ರಿಯವಾದ ಅವರ ಕವನದ ಸಾಲುಗಳೊಂದಿಗೆ ಈ ನುಡಿ ನಮನ ಸಲ್ಲಿಸುವೆ.

‘ …. ಮುಗುಳುನಗೆಗೆ ಯಾವತ್ತೂ ತುಟಿಯ ಎಂಜಲು
ಹತ್ತುವದಿಲ್ಲ. ದೀಪದ ಮೂತಿಗೆ ಮಸಿ ಮೆತ್ತುವ
ಸರದಾರ ಇನ್ನೂ ಈ ಜಗತ್ತಿನಲ್ಲಿ ಹುಟ್ಟಿಲ್ಲ.
ಬೆಳಗಾಗೆದ್ದು ಈ ಮಕ್ಕಳ ತುಟಿಗಳಿಂದ
ನಗೆ ಹೂ ಬಿಡಿಸಿಕೊಂಡು ಗಾಳಿಯಲ್ಲಿ ಉಪ್ಫೆಂದು ಹಾರಿಸುವವನೇ
ನಿನಗಿದೋ ನನ್ನ ಹೃತ್ಪೂರ್ವಕ ಅಭಿನಂದನೆ.’