ಎಲ್ಲ ಧರ್ಮಗಳಾಚೆ ಮನುಷ್ಯರ ಮನಸ್ಸುಗಳು ಒಂದೇ ಆಗಿರುತ್ತವೆ! ಒಡವೆಗಳು ಸಂಕೋಲೆಗಳಾಗುವ ಹೊತ್ತಿಗೆ ಇಷ್ಟಪಟ್ಟು ಜೀಕಿದ ಜೋಕಾಲಿಯೇ ಎತ್ತಿ ದೂರ ಚಲ್ಲಿಬಿಡುತ್ತದೆ. ಇಷ್ಟೆಲ್ಲದರಾಚೆ ಹೊಂದಿಕೊಂಡು ಅವನೊಂದಿಗೆ ಸುಖವಾಗಿ ಎರಡು ಹೊತ್ತು ಉಂಡು ಆಕಾರವನ್ನೇ ಕಳೆದುಕೊಂಡು ನೆರಳಿನಂತೆ ಇದ್ದುಬಿಡುವುದು ನನಗೆ ಅಸಹ್ಯವೆನ್ನಿಸಲು ಶುರುವಾಗಿ ಎದ್ದು ತೌರುಮನೆಗೆ ತೌರು ಮನೆಯ ದಾರಿ ತುಳಿದಿದ್ದೆ. ನನ್ನ ಮಕ್ಕಳನ್ನು ತನ್ನ ಮಕ್ಕಳಂತೆ ಅವಳು ನೋಡಿಕೊಳ್ಳುತ್ತಾಳೆಂಬ ನಂಬುಗೆ ನನಗೆ.
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಬಿಡುಗಡೆ”

ಏಕಾಏಕಿ ರಶೀದ ತೀರ ಎಳೆ ವಯಸ್ಸಿನ ಹುಡುಗಿಯನ್ನು ಹೆಂಡತಿಯನ್ನಾಗಿಸಿಕೊಂಡು ಮನೆಗೆ ಕರೆದುಕೊಂಡು ಬಂದಾಗ ನನ್ನ ಪಾಲಿನ ಮನೆಯೆಂಬ ಮನೆಯೇ ಇಲ್ಲವಾಗಿ ಸುಮ್ಮನೆ ಅಡಿಗೆ ಮನೆ ಸೇರಿಬಿಟ್ಟಿದ್ದೆ.

ಪರದೆಯೊಳಗಿನ ಹೆಂಗಸರು ಮುಖ ತೋರಿಸದೇ ಇರುವುದಕ್ಕೆ ನೂರು ಕಾರಣಗಳಿರುತ್ತವೆ. ಏನೇನೆಂದವು ಕೇಳುವುದಿರುವುದಿಲ್ಲ. ಬುರ್ಖಾದೊಳಗಿನ ಮುಖದ ಮೇಲಿನ ಭಾವನೆಗಳನು ಯಾರೆಂದರೆ ಯಾರಿಗೂ ಓದಲು ಸಿಗುವುದೇ ಇಲ್ಲ.  ಕೊರಳಿಗೆ ಉರುಳಾಗುವ ರಿಶ್ತೆಗಳ ಬಿಗಿತಗಳು ಬಿಗುವಾಗಿ ಉಸಿರು ಕಟ್ಟಿಸಿದಂತಾಗಿ ಬುರ್ಖಾದೊಳಗಿನ ಮುಖದಲ್ಲಿ ಉರಿ ಏಳುತ್ತದೆ. ಪರದೆಯ ಹೊರ ಜಗತ್ತು ಪರದೆಯ ಒಳಗಿರುವಂತೆ ಇರುವುದೇ ಇಲ್ಲವೆಂದಾದರೆ ಈ ಪರದೆ ಹಾಕಿಸಿ ಕಾಣಿಸಲು ಯತ್ನಿಸುವುದಾದರೂ ಅದೇನನ್ನು..?

ಹೆಂಡತಿಯ ಮೇಲೆ ಹೆಂಡತಿ ತರುವುದು ನಮ್ಮ ಧರ್ಮ ಅವನಿಗೆ ಕೊಟ್ಟಿರುವ ಹಕ್ಕು… – ಎಂದೆಲ್ಲ ವಾದಕ್ಕೆ ಇಳಿಯುವವರ ಮುಂಗೈ ಹಿಡಿದು ಕೇಳಬೇಕು: ಜೀವನ ಕೇವಲ ಹಕ್ಕುಗಳನ್ನು ಸಾಧಿಸುವುದರಲ್ಲಿ ಎಲ್ಲಿರುತ್ತದೆ-ಎಂದು. ಧರ್ಮ ಸಮ್ಮತಿಸುತ್ತದೆಯೆಂದು ಒಂದರ ಮೇಲೆ ಒಂದು ಮದುವೆ ಮಾಡಿಕೊಳ್ಳುವುದು ಪುಸ್ತಕದಲ್ಲಿನ ಧರ್ಮಕ್ಕೆ ಕೈ ಕಾಲು ಮೂಡಿಸಿ ಹೊರಗಿನ ದುನಿಯಾದಲ್ಲಿ ನಡೆದಾಡಿಸುವುದಕ್ಕಾಗಿಯೆ..? ಮದುವೆಯೆಂದರೆ ಕೇವಲ ಜಿಸ್ಮ್‌ನ ಹಸಿವಲ್ಲವಲ್ಲ. ಆತನ ರಾಜ್ಯಭಾರ ಮುಂದುವರಿಸಲು ನನಗೆ ಮಕ್ಕಳಾಗದಿದ್ದರೆ ಇನ್ನೊಂದು ಮಾಡಿಕೊಳ್ಳಲೆಂದು ಸುಮ್ಮನಿದ್ದುಬಿಡುತ್ತಿದ್ದೆ. ಮನುಷ್ಯನ ಇಂಥ ವಕ್ರಗಳಿಗಾಗಿ ಅಂತಲೆ ತವಾಯಫ್‌ಖಾನಾಗಳು ಇವೆಯಲ್ಲ. ವಯಸ್ಸಿನ ಮೂಲಕ ಸುಖವನ್ನು ಹೊಂದುವುದು ನನ್ನ ತಿಳುವಳಿಕೆಯಿಂದ ಹೊರತಾಗಿದೆ. ನನ್ನ ಮೇಲಿನ ಅವನ ಮನಸ್ಸು ಸತ್ತಿದುದಕ್ಕೇ ನನ್ನಲ್ಲವನಿಗೆ ಸುಖ ಸಿಗದೇ ಹೋಯಿತೆನಿಸುತ್ತದೆ. ಸುಖ ಚರ್ಮದ ಮೆರುಗಿನಲ್ಲೂ ಇರುವುದಿಲ್ಲ… ಚರ್ಮದ ಮಡಕೆಗಳಲ್ಲಿಯೂ ಇರುವುದಿಲ್ಲ… ಸುಖದ ಮೂಲ ಇರುವುದು ಮನಸ್ಸಿನ ಏಹಸಾಸ್‌ನಲ್ಲಿ ಎಂಬುವುದು ನನ್ನ ಮನಸ್ಸಿನ ಪರದೆಯೊಳಗಿನ ಬೆಚ್ಚಗಿನ ಭಾವನೆ.

ಏನೆಂದರೆ ಆ ಎಳೆ ವಯಸ್ಸಿನ ಹುಡುಗಿಗೆ ನನ್ನ ಹಿರೀ ಮಗನದೇ ವಯಸ್ಸು

ಅದು ಎಂಥ ದುರ್ಭರ ಪ್ರಸಂಗ ಮತ್ತು ಅದಾವ ಮಜಬೂರಿಯಿಂದ ಎದ್ದು ಬಂದು ಕುಬೂಲ್ ಎಂದಳೊ ಆ ಹುಡುಗಿ… ಯಾ ಅಲ್ಲಾಹ್.. ಈ ಕುಬೂಲಿಗೆ ಮೊದಲು ಅವನ ಬೊಜ್ಜು, ಕಸಬರಿಗೆಯ ಹಾಗಿನ ಆ ಬಿಳೀ ಹೋತದ ಗಡ್ಡ, ಮೈಯೊಳಗಿನ ಬೆವರ ವಾಸನೆ ಮರೆಸಲು ಹಚ್ಚಿದ ಉಸಿರುಗಟ್ಟಿಸುವ ಅತ್ತರು… ಮೇಲು ನೋಟದ ಇವನ್ನೆಲ್ಲ ಅವಳು ಅದು ಹೇಗೆ ಗಮನಿಸದೆ ಹೋದಳೋ.. ಇಲ್ಲವೆಂದರೆ ಅವಳ ಮಾ-ಬಾಪ್ ತಮ್ಮ ತಲೆ ಮೇಲಿನ ಹೊರೆ ಇಳಿಸಿಕೊಳ್ಳುವ ಮತ್ತೊಂದು ನಯದ ಮಜಬೂರಿ ಇತ್ತೆಂದುಕೊಳ್ಳಲೆ? ಇಂಥ ಊಹೆಗಳಲ್ಲಿ ನಾನು ಮುಳುಗಿ, ಕಳೆದುಹೋಗಿರುವಾಗ ನನ್ನದೇ ಹಾಸಿಗೆಯ ಮೇಲೆ ನನ್ನ ಗಂಡ ತನ್ನ ಎರಡನೇಯ ಹೆಂಡತಿಯೊಂದಿಗೆ ತನ್ನ ಮತ್ತೊಂದು ರಾತ್ರಿ ಕಳೆದುಬಿಟ್ಟಿದ್ದ. ಪಾಪದ ಆ ಎಳೆ ವಯಸ್ಸಿನ ಹುಡುಗಿಗದು ಮೊದಲ ರಾತ್ರಿ ಆಗಿತ್ತು.

ಬೆಳಿಗ್ಗೆ ಅಡಿಗೆ ಮನೆ ಸೇರಿಕೊಳ್ಳುವ ಹೊತ್ತಿಗೆ ಅದು ಯಾಕೊ ಆ ಎಳೆ ಹುಡುಗಿ ನನಗೆ ನವವಧುವಿನ ಹಾಗೆ ಅನಿಸಲಿಲ್ಲ. ಅವಳ ಮೊಗದಲ್ಲಿ ಅಂಥ ಯಾವ ಲಜ್ಜಾದಂಥ ಚಹರೆಗಳೂ ಕಾಣಸಿಗಲಿಲ್ಲ. ಎಲ್ಲೊ ಕಳೆದು ಹೋದಂತೆ… ಚಂಡಮಾರುತಕ್ಕೆ ಸಿಲುಕಿ ಬದುಕುಳಿದು ಬಂದಂತಿದ್ದಳು.

ಬತ್ತಿಹೋಗುವ ಒರತೆಯ ಕೊನೆಯ ಹನಿಯನೂ ಬಿಡದೆ ನೆಕ್ಕುವಾಗಿನ ಮರುಭೂಮಿಯ ದಾಹದ ತೀವ್ರತೆಗೆ ಎಳೆ ಹುಡುಗಿ ಥರಗುಟ್ಟಿದ್ದಳು. ಇಷ್ಟು ವರ್ಷಗಳವರೆಗೆ ಅದೇ ಗಂಡನೊಂದಿಗೆ ಬಾಳ್ವೆ ಮಾಡಿದ ನನಗೆ ರಾತ್ರಿ ಎಲ್ಲ ನಡೆದುದು ಏನೆಂದು ಅರ್ಥವಾಗಲು ಬಹಳ ಸಮಯ ಬೇಕಾಗಲಿಲ್ಲ. ಅಲ್ಲೀವರೆಗಿದ್ದ ಅವಳ ಮೇಲಿನ ಕೋಪ, ಈರ್ಷೆಗಳೆಲ್ಲ ಮಂಜಿನ ಹನಿಯಂತೆ ಕರಗಿ, ಬೇಫಿಕರಾಗಿ ತರಗೆಲೆಯಂತೆ ತತ್ತರಿಸಿ ಬವಳಿದ ಅವಳೆಡೆ ನನ್ನರಿವಿಗೂ ಬಾರದೆ ಎರಡೂ ಕೈಗಳನು ಚಾಚಿಬಿಟ್ಟಿದ್ದೆ. ತಾಯಿಯನ್ನು ಸೇರುವ ಮಗುವಿನಂತೆ ಅವಳು ರಭಸವಾಗಿ ಬಂದು ನನ್ನೆದೆಯಲ್ಲಿ ಮುಖ ಹುದುಗಿಸಿ, ಅವಳ ಮುಂದಿನ ಜನುಮವೆಲ್ಲ ನನ್ನೆದೆಯೊಳಗೇ ಗೋಚರಿಸಿದವಳ ಹಾಗೆ ಉಮ್ಮಳಿಸಿ ಕಣ್ಣೀರಾಗಿಬಿಟ್ಟಿದ್ದಳು. ಅವಳಲ್ಲಿನ ಸೋತುಹೋದ ಭಾವ, ಒಡೆದುಹೋದ ಕನಸುಗಳು ಮತ್ತು ಹೆಮ್ಮರವಾದ ಭ್ರಮನಿರಸನ ಅವಳನ್ನು ಕಣ್ಣೀರಾಗಿಸಿಬಿಟ್ಟಿದ್ದವು. ಮಧ್ಯರಾತ್ರಿಯಲ್ಲಿ ಬಯಲಿನಲಿ ಬತ್ತಲಾಗಿ ಭಣಗುಟ್ಟಿದವಳ ಸೋಲು ನನ್ನ ಗೆಲುವೆಂದುಕೊಂಡರೆ ಅದೆಲ್ಲ ಅವಳೆಡೆಗಿನ ನನ್ನ ಈರ್ಷೆಯೇ ಆದೀತು.

*****

              ಇದೆಲ್ಲ ಅಚಾನಕ್ಕೆಂಬಂತೆ ಹೀಗೇಕಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಅವಳು ಬಂದು ರಾತ್ರಿ ನನ್ನ ಪಕ್ಕದಲ್ಲಿ ಮಲಗತೊಡಗಿದಳು. ಹಾಗೆ ಮಲಗಲು ಬಂದವಳನ್ನಾತ ವಧಾ ಸ್ಥಾನಕ್ಕೆ ಕಟುಕನೊಬ್ಬ ಎಳೆದೊಯ್ಯುವ ಕುರಿಯಂತೆ ಎಳೆದುಕೊಂಡು ಹೋಗಿ ನಿರ್ಲಜ್ಜನಂತೆ ಬಲಾತ್ಕಾರ್ ಮಾಡಿಬಿಟ್ಟಿರುತ್ತಿದ್ದ! ಕುತ್ತಿಗೆ ಕುಯ್ದು ಸುರಿವ ರಕ್ತ ಕುಡಿವ ರಾಕ್ಷಸನಿಗೆ ಸೀಳಿದ ಎದೆಯೊಳಗಿನ ಹೃದಯದ ಬಡಿತಗಳು ಕೇಳಿಸಲಾರದವಾಗಿದ್ದವು.

ಗಂಡನೆಂಬ ಈ ಗಂಡಸು ರಾತ್ರಿ ವೇಳೆಯಲ್ಲಿ ಅದೆಷ್ಟೊಂದು ಕ್ರೂರವಾಗಿಬಿಡುತ್ತಿದ್ದುದಕ್ಕೆ ಇಲ್ಲೀವರೆಗೂ ನನಗೂ ಕಾರಣ ತಿಳಿಯಲಾಗಿಲ್ಲ.. ಖುದಾ ಕೀ ಕಸಂ.. ನಾನು ಇಲ್ಲಿಯವರೆಗೂ ಕಾಣದ ಅವನ ಇನ್ನೊಂದು ಕ್ರೌರ್ಯದ ಮುಖ ಈಗ ಅನಾವರಣಗೊಂಡಿದ್ದು ಅವನ ಮತ್ತೊಂದು ಮದುವೆಯ ಪ್ರಸಂಗದಿಂದಾಗಿತ್ತು.

*****

     ನಟ್ಟ ನಡು ರಾತ್ರಿ ನನ್ನ ಮೈ ಮೇಲೆ ಕೈ ಹಾಕಿದ್ದು ಯಾರೆಂದು ತಿರುಗಿ ನೋಡಿದರೆ  ಸುಟ್ಟು ಸೋರಿದ ಮೋಂಬತ್ತಿಯ ರಸವನ್ನು ಮೈತುಂಬ ಸುರುವಿಸಿಕೊಂಡು ವಿಹ್ವಲಗೊಂಡಂತಿದ್ದ ಬೇಚಾರಾ ಆ ಹೆಣ್ಣೇ ಕಣ್ಣಿಗೆ ಕಾಣಸಿಗುತ್ತಿದ್ದಳು. ಅಷ್ಟರ ಮಟ್ಟಿಗೆ ಆ ಪಾಪದ ಹೆಣ್ಣು ನನ್ನಲ್ಲಿ ತಾಯ ಸಂತೈಸುವಿಕೆ ಅರಸಲು ಯತ್ನಿಸುತ್ತಿದ್ದಳೆಂದರೆ.. ಹ್ಹೇ ಪರ್ವರ್ದಿಗಾರ್ ನಿನ್ನ ದರ್ಬಾರಿನಲ್ಲಿ ನನ್ನಂಥ ಔರತ್‌ಗಳಿಗೆ ನ್ಯಾಯ ಸಿಗುವುದು ಯಾವಾಗ..

ಇಲ್ಲಿಯವರೆಗಿನ ಯಾವ ರಂಜಾನ್‌ಗಳಿಗೂ ಅವನನ್ನು ಹಾದಿ ಮೇಲೆ ತಂದುಬಿಡಲು ಸಾಧ್ಯವಾಗಿಲ್ಲವೆಂದರೆ ಅವನೊಳಗಿನ ಸೈತಾನ್‌ನ ಹಲ್ಲಿಗೆ ರಕ್ತದ ರುಚಿ ಹತ್ತಿದೆಯೆಂದೇ ಹೇಳಬೇಕು. ಇದೆಲ್ಲ ಯಾಕೊ ಸರಿ ಹೋಗುತ್ತಿಲ್ಲ ಅನ್ನುವಷ್ಟರಲ್ಲಿ ನನ್ನ ಗಂಡನ ಇಬ್ಬರೂ ಹೆಂಡತಿಯರು ಗೆಳತಿಯರಾಗಿಬಿಟ್ಟಿದ್ದರು. ಈಗ ಗಂಡನೆನಿಸಿಕೊಂಡವ ತನ್ನ ಇಬ್ಬರೂ ಹೆಂಡತಿಯರಿಗೆ ಅಸಹ್ಯದ ಒಂದು ಸಮಸ್ಯೆಯಾಗಿಬಿಟ್ಟ!

*****

              ಇವಳೇ ಬೇಕೆಂದು ಅವನು ನನ್ನ ಮದುವೆಯಾಗಿದ್ದ. ಮೂವರು ಮಕ್ಕಳಾಗುವಷ್ಟರಲ್ಲಿ ನಾನವನಿಗೆ ಬೇಡದವಳಾಗಿಬಿಟ್ಟಿದ್ದೆ! ಈ ಬೇಕು ಬೇಡಗಳು ಯಾವುದನ್ನು ಅವಲಂಬಿಸಿರುತ್ತವೆ ಅನ್ನುವುದನ್ನು ಸುಲಭವಾಗಿ ತಿಳಿಯಲಾಗುವುದಿಲ್ಲ. ನನ್ನ ಜತೆಗೇ ಅವನೂ ಬೊಜ್ಜು ಬರಿಸಿಕೊಂಡವನೇ… ಕಾಲನ ಹಿಡಿತಕೆ ಸಿಕ್ಕು ಮುದುಡಿ, ಹಿಡಿಯಾದವನೇ. ಸಮಯದ ಧಾಳಿ ಇಬ್ಬರ ಮೇಲೂ ಆಗಿದೆ. ನಾನವನ ಧಾಳಿಗೆ ರೋಸಿ, ನವೆದು ಹೋಗಿದ್ದರೂ ಇನ್ನೂ ಅವನದೇ ಚತ್‌ನ ಕೆಳಗೆ ದಿನಗಳನ್ನು ದೂಡುತ್ತಿರುವುದು ನನಗೆ ಅವನಿಗಿರುವಂಥ ಅವ್ಯಾವೂ ಹಕ್ಕುಗಳು ಇಲ್ಲವೆಂಬ ಕಾರಣಕ್ಕೆಯೆ ಆಗಿದೆ.

ಆತನ ಎಲ್ಲ ಹಸಿವುಗಳನ್ನು ತಣಿಸಿ ಮಕ್ಕಳನ್ನೂ ಕೊಟ್ಟಿದ್ದೇನೆ. ಜೀವ ಬೇಕೆಂದಿದ್ದರೆ ಇಬ್ಬಂದಿಗೇಡಿನ ಬದುಕಿನಿಂದ ಹೊರ ಬರಲು ಜೀವ ಕೂಡ ಕೊಟ್ಟುಬಿಟ್ಟಿರುತ್ತಿದ್ದೆ. ಆತನ ಎಲ್ಲ ಹೆಜ್ಜೆಗಳು ಮೂಡಿದ್ದು ಮನೆಯೆಂಬ ನಾಕು ಗೋಡೆಗಳ ನಡುವಲ್ಲಿ ಮಾತ್ರ… ಮನವೆಂಬ ಹೂದೋಟದಲ್ಲಲ್ಲ. ಹೆಜ್ಜೆಗಳ ಬಿರುಸಿಗೆ ಬಾಡುವ ಹೂವುಗಳು ಹೀಗೆಲ್ಲ ಯಾಕೆ ಮತ್ತು ಯಾವ ಸುಖಕ್ಕಾಗಿ ಅರಳಿಕೊಳ್ಳುತ್ತಿರಬೇಕೆಂದು ಪದೇ ಪದೇ ಕೇಳುತ್ತಿರುತ್ತೇನೆ. ಉತ್ತರಿಸುವವರು ಯಾರು…? ನನ್ನ ಬಹಳಷ್ಟು ಪ್ರಶ್ನೆಗಳನ್ನು ಮಕ್ಕಾದ ಮೌಲ್ವಿಗಳೊಂದಿಗೆ ಕೇಳಿ ಪರಿಹರಿಸಿಕೊಳ್ಳಬೇಕು. ಮಕ್ಕಾದ ದೈವದ ಸನ್ನಿಧಿಯಲ್ಲಿ ದೊಡ್ಡ, ದೊಡ್ಡದಾಗಿ ಓದಿಕೊಂಡವರ ಹತ್ತಿರ ಮಜಹಬ್ ನ್ನ ಅರ್ಥಮಾಡಿಕೊಳ್ಳಬೇಕು. ಮಕ್ಕಾದಲ್ಲಿಯೇ ಮುಕ್ತಿ ಅಂತ ಒಂದು ಇರುವುದಾದರೆ ಅಲ್ಲಿಯೇ ಇದ್ದುಬಿಡಬೇಕು ಇಲ್ಲಾ ಮುಗಿಸಿಕೊಳ್ಳಬೇಕು.. ಮತ್ತೆ ಇಲ್ಲಿಗೆ ಹಿಂತಿರುಗಿ ಬರದಿರುವ ಆಲೋಚಗೆ ತುಂಬಾ ಗಟ್ಟಿಯಾಗಿದೆ.

*****

 ಗಂಡನೆಂಬ ಓರ್ವ ಪುರುಷ ಪಾಪದ ಆ ಅಸಹಾಯಕ ಹೆಣ್ಣನ್ನು ನನ್ನದೇ ಹಾಸಿಗೆಗೆ ಎಳೆದೊಯ್ಯುವಾಗ ನನಗಾಗಿದ್ದು ಕೇವಲ ಈರ್ಷೆ ಮತ್ತು ವಾಕರಿಕೆಯ ಅಸಹ್ಯ. ಆದರೆ ನಂತರದಲ್ಲಿ ಅದೇ ಪಾಪದ ಹೆಣ್ಣು ನಡುರಾತ್ರಿಯಲ್ಲಿ ನನ್ನ ಪಕ್ಕ ಮಗುವಿನ ಹಾಗೆ ಬಂದು ಮಲಗಿದಾಗ ನನಗೆ ಗಂಡನೆಂಬ ಆ ಪ್ರಾಣಿಯ ಮೇಲೆ ಇನ್ನಷ್ಟು, ಮತ್ತಷ್ಟು ಹೇಸಿಗೆ ಹುಟ್ಟತೊಡಗಿತ್ತು. ಅಂಥ ಹತ್ತು ಹಲವು ಅಸಹ್ಯದ ಹೇಸಿಗೆಗಳನ್ನು ಹೊತ್ತು ಹೊಸಿಲುದಾಟಿ ಹೆಸರಿಟ್ಟುಕೊಂಡ ರಿಶ್ತೆಯನ್ನು ಧಿಕ್ಕರಿಸಿ ಬೆಳಗಾಗುವುದರೊಳಗೆ ಖೈದಾಗಿದ್ದ ಮನೆ ಎಂಬೋ ಮನೆಯನ್ನು ಬಿಟ್ಟು ಬಂದುಬಿಟ್ಟಿದ್ದೆ.

ಎಲ್ಲ ಧರ್ಮಗಳಾಚೆ ಮನುಷ್ಯರ ಮನಸ್ಸುಗಳು ಒಂದೇ ಆಗಿರುತ್ತವೆ! ಒಡವೆಗಳು ಸಂಕೋಲೆಗಳಾಗುವ ಹೊತ್ತಿಗೆ ಇಷ್ಟಪಟ್ಟು ಜೀಕಿದ ಜೋಕಾಲಿಯೇ ಎತ್ತಿ ದೂರ ಚಲ್ಲಿಬಿಡುತ್ತದೆ. ಇಷ್ಟೆಲ್ಲದರಾಚೆ ಹೊಂದಿಕೊಂಡು ಅವನೊಂದಿಗೆ ಸುಖವಾಗಿ ಎರಡು ಹೊತ್ತು ಉಂಡು ಆಕಾರವನ್ನೇ ಕಳೆದುಕೊಂಡು ನೆರಳಿನಂತೆ ಇದ್ದುಬಿಡುವುದು ನನಗೆ ಅಸಹ್ಯವೆನ್ನಿಸಲು ಶುರುವಾಗಿ ಎದ್ದು ತೌರುಮನೆಗೆ ತೌರು ಮನೆಯ ದಾರಿ ತುಳಿದಿದ್ದೆ. ನನ್ನ ಮಕ್ಕಳನ್ನು ತನ್ನ ಮಕ್ಕಳಂತೆ ಅವಳು ನೋಡಿಕೊಳ್ಳುತ್ತಾಳೆಂಬ ನಂಬುಗೆ ನನಗೆ.

*****

ಭಾಗ -2

ತೌರುಮನೆಯವರು ರಶೀದನ ಎರಡನೇಯ ಮದುವೆಯಲ್ಲಿ ಅಂಥ ಹೊಸದೇನನ್ನೂ ಕಾಣಲಿಲ್ಲ! ಹೆಂಡಂದಿರು ಹೆಚ್ಚಾಗುವುದೆಂದರೆ ಗಂಡನ ಸಾಮರ್ಥ್ಯ ಹೆಚ್ಚಿದಂತೆ – ಎನ್ನುವ ರೀತಿಯಲ್ಲಿ ಅಪ್ಪನ ಉಪದೇಶ. ಧರ್ಮವನ್ನು ಆಚರಿಸಿದವನು ಅಧರ್ಮವನ್ನು ಹೇಗೆ ಮಾಡಿದಂತಾಯಿತೆಂದು ಭೋಧಿಸತೊಡಗುತ್ತಾರೆ. ವಿಕೃತ ಮನಸ್ಸು ಅಷ್ಟು ಸುಲಭವಾಗಿ ಧರ್ಮದ ಹೆಸರಿನಲ್ಲಿ ಅದು ಹೇಗೆ ಮಾಫಿ ಪಡೆದುಕೊಳ್ಳುತ್ತದೆ ಎಂಬುವುದೇ ಸೋಜಿಗವೆನಿಸುತ್ತದೆ ನನಗೆ. ಮನಸ್ಸುಗಳನ್ನು ಮುರಿದುಕೊಂಡು ರಿಶ್ತೆ, ನಾತೆಗಳನ್ನು ಬೆಳೆಸಿಕೊಳ್ಳುವುದರಲ್ಲಿಯ ಧರ್ಮದ ಹಲವು ಮುಖಗಳು ನನ್ನ ಮಂದ ಬುದ್ದಿಗೆ ಅರ್ಥವಾಗದೇ ಹೋಗುತ್ತವೆ. ಸ್ಮಶಾನದ ಊರಿನಲ್ಲಿ ಘೋರಿಯ ಕತೆಗಳು ಕೇಳಸಿಗುವುದು ಸಾಮಾನ್ಯವೇ ಆಗಿರುತ್ತದೆ! ಹಾಗೆ ನೋಡಿದರೆ ಮನುಷ್ಯರು ಕಫನ್ ತಯಾರಿಸಿಕೊಂಡು ಘೋರಿ ಸಿದ್ಧಗೊಳಿಸಿಕೊಳ್ಳುವುದರಲ್ಲಿ ಒಂದು ಅರ್ಥವೂ ಇದೆ. ಆದರೆ ಹೆಣವಾಗಿಬಿಡುವುದರಲ್ಲಿ ಯಾವ ಅರ್ಥವನ್ನೂ ನಾ ಕಾಣೆ.

ಮಗಳ ಮನಸ್ಸು ತಹಬದಿಗೆ ಬರುವ ತನಕ ತೌರು ಮನೆಯಲ್ಲಿ ಇದ್ದರೆ ಇರಲೆನ್ನುವ ಉಢಾಪೆಯವರಾದರು ತಂದೆ-ತಾಯಿಯರು. ಸುತ್ತ ಸಂಬಂಧಗಳಿದ್ದರೂ ತಾನೊಬ್ಬಳು ಏಕಾಂಗಿಯಾಗಿ ಹೋದೆನೆಲ್ಲ ಎನ್ನುವ ಹಳಹಳಿಯಾಗಿ ನನ್ನೊಳಗಿನ ನಿಜಮುಖದ ಹುಡುಕಾಟ ಮತ್ತು ನನ್ನೊಳಗಿನ ನೆರಳಿಗೊಂದು ಆಕಾರ  ಬರಿಸಿಕೊಳ್ಳುವುದು ಎಲ್ಲ ಗೊಂದಲಗಳಿಗೆ ಕೊಡುವ ಪೂರ್ಣವಿರಾಮ ಅನಿಸತೊಡಗುವುದು.

 

              ಮಜಹಬ್ ನ್ನು ಪ್ರಶ್ನಿಸುವುದು ನಿಷಿದ್ಧವೆಂದು ತಿಳಿದಾಗಿದೆ! ಧಾರ್ಮಿಕತೆಯನ್ನು ಹೆಗಲಿಗೆ ಹೊತ್ತವರು ಧರ್ಮವನ್ನು ತರ್ಕಕ್ಕೆ ಸಿಲುಕಿಸಬಾರದೆಂದು ಹೇಳಿರುವುದೆಲ್ಲ ಹುಟ್ಟಿದಾಗಿನಿಂದ ಹೊತ್ತು, ಹೊತ್ತು ಇಳಿಸದ ಹೊರೆಯಾಗಿದೆ. ಆದರೆ ನನ್ನದೇ ಮನೋಧರ್ಮಕ್ಕೆ ನಾನು ಬದ್ಧಳಾಗಿ, ನನ್ನೊಳಗಿನ ಕೂಗಿಗೆ ನಾನೇ ಕಿವಿಯಾಗಿ ನಾನಿಂದು ಗಂಡನೆಂಬವನೊಬ್ಬನ ಪರಿಧಿಯಿಂದ ಹೊರಬಂದಾಗಿದೆ!

ಇಷ್ಟು ದೊಡ್ಡ ಜೀವನ ಒಂದೆರಡು ಧೋಖಾದಿಂದ ಮುಗಿದುಹೋಗುವುದಿಲ್ಲ- ಎಂದೆಲ್ಲ ನನ್ನನ್ನೇ ನಾ ಸಮಾಧಾನಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುತ್ತೇನೆ.

ಬರಬರುತ್ತ ತೌರುಮನೆಯಲ್ಲಿ ನನ್ನನ್ನು ಅಸ್ಪೃಶ್ಯಳ ಹಾಗೆ ಕಾಣತೊಡಗಿದರು. ಗಂಡನ ಮನೆಬಿಟ್ಟು ಬಂದಿದ್ದು ನನ್ನದೇ ತಪ್ಪೆನ್ನುವ ಅಭಿಪ್ರಾಯ ಎಲ್ಲರದೂ ಆಗಿತ್ತು. ನನ್ನ ಪರವಾಗಿರುವ ಒಂದೇ ಒಂದು ಸಾಲಿಗಾಗಿ ಹಲವು ಪುಸ್ತಕಗಳ ಪುಟಗಳನ್ನು ತಿರುವಿಹಾಕಿದೆ. ಕೊನೆಯಲ್ಲಿ ನನಗೆ ಅರ್ಥವಾಗಿದ್ದೇನೆಂದರೆ- ಪ್ರಶ್ನಿಸುವ ಅಧಿಕಾರ ಇಲ್ಲದ ಹೆಣ್ಣು ಗಂಡಿನ ಗುಲಾಮಳು; ಹಾಗೆ ಗುಲಾಮಳಾಗಿದ್ದರೇನೇ ಹೆಣ್ಣಿನ ಜೀವಕ್ಕೆ ಬಿಡುಗಡೆ!

ಖುದಾನ ಈ ಕಾಯನಾತ್‌ದಲ್ಲಿ ಅವನ ಮಂಜೂರಿಯಿಂದಲೇ ನಿನ್ನ ಗಂಡ ಮತ್ತೊಂದು ನಿಖಾಹ್ ಆಗಿರೋದು..- ಎಂಬುದಕ್ಕೆ ಎಷ್ಟೆಲ್ಲ ಮಾತುಕತೆಗಳಾದವು.‌

ಮೆಕ್ಕಾದಲ್ಲಿ ಕೂಡ ಓದುವುದು ಇಲ್ಲಿಯದೇ ಖುರಾನ್ ಅನ್ನು… ಮೆಕ್ಕಾದಲ್ಲಿ ಕೂಡ ಮಾಡುವುದು ಇಲ್ಲಿನದೇ ನಮಾಜ್ ಅನ್ನು..  ಹೀಗಿರುವಾಗ ಇಲ್ಲಿ ಒಪ್ಪಿತ ಆಗಿದ್ದು ಮೆಕ್ಕಾದಲ್ಲಿ ಅದು ಹೇಗೆ ತಿರಸ್ಕೃತ ಆದೀತು.. ನಾವು ಎಲ್ಲೇ ಇರಲಿ, ನಮಗೆಲ್ಲ ಇರುವುದು ಒಬ್ಬನೇ ಖುದಾ.. ಪವಿತ್ರ ಗ್ರಂಥದಲ್ಲಿ ಬರೆದ ಒಂದೊಂದು ಮಾತನ್ನೂ ನಾವು ಆಚರಿಸಬೇಕು ಮಗಳೇ.. – ಮೆಕ್ಕಾದ ಮೌಲ್ಪಿಗಳಲ್ಲಿ ಮಜಹಬ್ ನ್ನು ಒರೆಗೆ ಹಚ್ಚುವ ನನ್ನ ಮಾತು ಕೇಳಿದ ಜಮಾತ್‌ನ ಮುಖಂಡ ಹೀಗೆಲ್ಲ ಹೇಳುವುದನು ಕೇಳ್ತಿರುವುದು ಕನಸಿನಲ್ಲಿ ಅಂತಾಗಿ ಅಜೀಬ್ ಅನ್ನಿಸುವುದು.

ಈ ಬುರ್ಖಾದೊಳಗಿನ ಹೆಣ್ಣುಗಳು ತೆರೆದುಕೊಳ್ಳುವುದು ಒಂದು ಬಚ್ಚಲು ಮನೆಯಲ್ಲಿ, ಇನ್ನೊಂದು ಕನ್ನಡಿಯ ಮೈಯಲ್ಲಿ.. ಅವಳ ಅಂತರಂಗ ಮತ್ತೊಂದು ಮೂರನೇಯದರಲ್ಲಿ ಎಲ್ಲಿರುತ್ತದೆ.. ರಸ್ತೆಯಲ್ಲಿ ನಡೆದುಕೊಂಡು ಹೊರಟರೆ ನೋಡುವ ಕಣ್ಣುಗಳ ಇರಿತಕೆ ಸಿಲುಕಿ ಮೈ ಮೇಲಿನ ಬಟ್ಟೆಗಳೇ ಇಲ್ಲವಾಗಿ ಬತ್ತಲಾದ ಅನುಭವ.. ಎಂಥದು ಈ ದುನಿಯಾ ಖುದಾ… ಆಗೆಲ್ಲ ಮಡಿಚಿಟ್ಟ ಬುರ್ಖಾ ತೀರ ಆಪ್ತವೆನ್ನಿಸುವುದು.

ಓ ಕಣ್ಣಡಿಯೊಳಗಿನ ಹೆಣ್ಣೇ… ಅದೇನನ್ನು ನೆನಪಿಸಿಕೊಂಡು ಇಷ್ಟೊಂದು ಉದಾಸವಾಗಿರುವೆ… ನೀನು ಗಂಡನ ಮನೆಯಲ್ಲಿ ಇದ್ದೂ ಇಲ್ಲದವಳಂತೆ ಇದ್ದೆ… ಈಗ ಇದ್ದುದನ್ನ ಬಿಟ್ಟು ಬಂದೆ ಅನ್ನುವ ಹಳಹಳಿ ಏಕೆ.. – ಹೀಗೆಲ್ಲ ಕನ್ನಡಿ ತಿವಿದು ಕೇಳಿದರೆ ಏನು ಹೇಳಲಿ..

ವಾಗ್ಧಾನಗಳ, ರಿವಾಜುಗಳ ಮೂಸೆಗೆ ತಮ್ಮನು ತಾವು ನಿಲ್ಲಿಸಿಕೊಂಡು, ಕಟ್ಟಿಕೊಂಡವರು ಕಾಲನ ದಾಳವಾಗಿ ಇರುತ್ತಾರೆ ಅಷ್ಟೇ. ಅತ್ಯಂತ ದುಃಖದ ವಿಷಯವೆಂದರೆ ನಾವಿಬ್ಬರೂ ಒಬ್ಬರ ಸನಿಹ ಇನ್ನೊಬ್ಬರು ಸರಿದು ನಿಲ್ಲಲೇ ಇಲ್ಲ. ಕಾಲನ ತೆಕ್ಕೆಯಲ್ಲಿ ಸಿಕ್ಕು ನಲುಗಿದವರ ಗಾಯವನು ಕಾಲವೇ ಮಾಯಿಸಬೇಕು.

ಅನಿಶ್ಚಿತದ ಈ ಜಿಂದಗಿ ಹೇಗಿದೆಯೆಂದರೆ: ಮರಳ ಮೇಲಿನ ಹೆಜ್ಜೆಗಳು ನೀರ ಅಲೆಗೆ ಕುಸಿದು ಹೋಗುವ ಹಾಗೆ..

ನೆರಳಾಗಿ ಬದುಕುವುದೊಂದೇ ಮುಂದಿರುವ ಆಯ್ಕೆಯೆಂದು ತಂದೆ ಅಪರೋಕ್ಷವಾಗಿ ತಿಳಿಸಿಯಾಗಿತ್ತು. ನಾನು ಪ್ರಶ್ನಿಸಲಿಲ್ಲ. ಅಸಹ್ಯವೆನ್ನಿಸಿಕೊಂಡೆ. ನೆರಳಾಗಿದ್ದವಳಿಗೆ ಹೊಸದೇ ಆದ ಆಕಾರ ಮೂಡಿ ಧರಿಸುವ ಬುರ್ಖಾದಷ್ಟೇ ಕಪ್ಪಾಗಿ ಹೆಜ್ಜೆ ಕಿತ್ತಿಟ್ಟವಳು ನಾನು.

*****

ಹೊರಗೆ ಹೋಗುವಾಗ ಕನ್ನಡಿಯ ಮುಂದೆ ನಿಂತು ಮುಖದ ಭಾವಗಳನು ಒಳಗೇ ಇಂಗಿಸಿಕೊಂಡು ಜಮಾನಾಕ್ಕೆ ಬೇಕಾದ ಮುಖವಾಡ ಧರಿಸುವ ಅಭಿನಯ ಮಾಡ್ತೀನಿ. ಕಣ್ಣ ಆಳದಲ್ಲೆಲ್ಲೊ ಪಸೆಯ ಆಚೆ ಇರುವ ಹನಿಗಳು ಯಾವಾಗ ಬೇಕೊ ಆವಾಗ ಬರುವಂತೆ ಸದ್ದಿಲ್ಲದೆ ಹೆಪ್ಪುಗಟ್ಟಿದ್ದರ ಅರಿವಾಗುತ್ತದೆ. ಆಗ ಈ ಹಾಳಾದ ಬುರ್ಖಾನೇ ಒಂದು ಹಂತಕ್ಕೆ ಸರಿ ಅನ್ನಿಸಿಬಿಡುತ್ತದೆ. ಇನ್ನಿತರವುಗಳ ಜೊತೆಗೆ ಬುರ್ಖಾದಲ್ಲಿ ದುಃಖವನು ಕೂಡ ಹುದುಗಿಸಿಟ್ಟುಕೊಳ್ಳಬಹುದು.

ಈ ದಿನಗಳಲ್ಲಿ ನನ್ನಲಿ ಯಾವೆಂದರೆ ಯಾವ ಉಮ್ಮೀದುಗಳೂ ಉಳಿದುಕೊಂಡಿಲ್ಲ. ಅದೇ ಕಾರಣಕ್ಕಾಗಿಯೇ ಇರಬೇಕು ಆತನ ಪರಿಧಿಯಲ್ಲಿ ಸುತ್ತುವುದು ಬೇಡವೆನ್ನಿಸಿದ್ದು.

ಬೇಸಹಾರಾ ಆದ ನಾವುಗಳು ನಮ್ಮ ಮರ್ಜಿಯಿಂದ ಯಾವಾಗ ಜಿಂದಗಿಯ ಸಫರ್ ಸುರುಮಾಡುತ್ತೇವೆ. ಬುರ್ಖಾದೊಳಗಿನ ಈ ಔರತ್ ಇನ್ನೊಬ್ಬರ ಕೈಯೊಳಗಿನ ದಾಳ ಅಷ್ಟೇ.

ಅವನಿಗೆ ಬೇಕಾಗುವಷ್ಟು ಮಕ್ಕಳನ್ನು ಹೆತ್ತು ಕೊಟ್ಟಿದ್ದೆ. ಆಗ ಆ ಮನೆಯಲ್ಲಿನ ಹರ್ ಚೀಜ್ ನನ್ನದೇ ಅನ್ನುವ ಮೋಹಕ್ಕೊಳಗಾಗಿದ್ದೆ. ಈಗದೆಲ್ಲ ಬರೀ ಭ್ರಮೆ ಎಂದು ಸಾಬೀತಾಗಿದೆ. ನನ್ನದೆಂದುಕೊಂಡ ಮನೆಯಲ್ಲಿ ನಾನೇ ಹೊರಗಿನವಳಾಗಿ ಹೋದ ತನ್ಹಾಯಿ ಇದೆ ಒಳಗೆ.

******

              ಬೇಡದ ಮಕ್ಕಳನ್ನು ಹೆರುವುದರಿಂದ… ನಿತ್ಯ ಬಲಾತ್ಕಾರಕ್ಕೊಳಗಾಗುವುದರಿಂದ ಅಂತರಾಳದಲಿ ಕವಲಾಗಿ ನಿಂತಿರುವ ಬದುಕು ಸೋತುಹೋಗುತ್ತದಾ? ಆ ಮೂಲಕ ಹೊಸದನ್ನು ಕಾಣುವ, ನಿಜದ ಹತ್ತಿರ ಸರಿದು ನಿಲ್ಲುವ ಆ ಒಂದು ತುಡಿತ, ಹವಣಿಕೆ ಸತ್ತು ಹೋಗುತ್ತದಾ?

ಬರ್ಬಾದಾದ ಬದುಕಿನಲಿ ಇನ್ನೇನೂ ಉಳಿದಿಲ್ಲವೆನ್ನುವ ಹೊತ್ತಿನಲಿ ತಲೆ ಎತ್ತಿ ನೋಡುವ ಚಂದಿರನಲಿ ಕಾಣಿಸುವುದು ನಾನೇ ನಾನಾಗಿ, ನನಗೇ ನಾನು ಸಿಕ್ಕಿದುದಕ್ಕೆ ಪಟ್ಟುಕೊಳ್ಳುವ ಸಂಭ್ರಮ ಹೋಳಿಯ ಬಣ್ಣಗಳಷ್ಟೇ ನಿರ್ಮಲವೆನಿಸುವವು.

ಸಂಕೋಲೆಗಳಿಲ್ಲದ ರಾತ್ರಿಗಳೆಲ್ಲ ಬೆಳಗಿನಷ್ಟೇ ಬೆಳ್ಳಗಾಗಿವೆ. ಒಲ್ಲದ ಗಂಡನನ್ನು ಧಿಕ್ಕರಿಸಿ ಬರುವುದು ಪಾಪವೆನ್ನುವುದಾದರೆ ಅಂಥ ಚಂದದ ಪಾಪಗಳಿಗೆ ತಲೆಕಡಿಸಿಕೊಳ್ಳುವುದೂ ಹರುಷದ ಸಂಗತಿಯೆನಿಸುವುದು.

ಕತ್ತಲೆಯ ಮೂಲೆಗಳಿಂದ ಅನುರಣಿಸಿದ ಹೇವರಿಕೆಗಳು ತುಕ್ಕು ಹಿಡಿದ ಸಂಬಂಧ ರಿಶ್ತೆಗಳನು ಒದ್ದು ಓಡಿಸಿದ್ದವು. ಮೊದಲೆಲ್ಲ ನಾನು ನನ್ನ ನೆರಳಿಗೇ ಅಂಜಿಕೊಂಡಿರುತ್ತಿದ್ದೆ. ಈಗೆಲ್ಲ ನನ್ನ ನೆರಳು ನನ್ನೊಂದಿಗೇ ಸಮವಾಗಿ ಹೆಜ್ಜೆ ಹಾಕುತ್ತದೆ… ನನ್ನಷ್ಟೇ ಚಂದವಾಗಿ ನಗುತ್ತದೆ. ಪರದೆಯಾಚೆಗಿನ ನಗು ಎಲ್ಲರಿಗೂ ನೋಡಲು ಕಾಣಿಸುತ್ತದೆ.

ಮೊದಲೆಲ್ಲ ನೋಡಿಕೊಳ್ಳುವ ಕನ್ನಡಿಯಲ್ಲಿ ಬುರ್ಖಾದೊಳಗಿನ ನನ್ನದೇ ಮುಖ ನನಗೇ ಕಾಣಿಸುತ್ತಿರಲಿಲ್ಲ. ಈಗೆಲ್ಲ ಜನ ಜಂಗುಳಿಯಲ್ಲೂ ಎಲ್ಲರೂ ನನ್ನ ಗುರುತಿಸಿ ಮಾತನಾಡುತ್ತಾರೆ. ಆಗೆಲ್ಲ ನನ್ನ ಮುಖದ ಮೇಲಿನ ಹರುಷ ಎದುರಿನವರ ಕಣ್ಣುಗಳಲ್ಲಿ ನಗುತ್ತದೆ.

ನಾನು ತಾಯಿಯಲ್ಲ… ಹೆಂಡತಿಯಲ್ಲ… ಮಗಳೂ ಅಲ್ಲದ ಹೊತ್ತಿನಲ್ಲಿ ಮೂಡಿದ ಎರಡು ರೆಕ್ಕೆಗಳು ನನ್ನನು ತೇಲಿಸಿ ತಂದು ನಿಲ್ಲಿಸಿದಲ್ಲಿಂದ ಸುಮ್ಮನೆ ಒಂದು ಬಾರಿ ಕಣ್ಹಾಯಿಸಿದರೆ ಯಾವ ತಲೆಗಳೂ ಕಾಣಸಿಗುವುದಿಲ್ಲ.

*****

              ಮಕ್ಕಳು ಆವಾಗಾವಾಗ ಬಂದು ಭೇಟಿಯಾಗುತ್ತಿದ್ದರು. ಮಕ್ಕಳ ಚಿಂತೆ ನನಗಿರಲಿಲ್ಲ. ಹೆಳುವಾದ ನನ್ನ ಬದುಕಿಗೊಂದು ಆಕಾರ ಮೂಡಿಸಿಕೊಳ್ಳಲು ಹಗಲು ರಾತ್ರಿ ಚಿಂತಿಸಿದ್ದೊಂದೇ ಬಂತು. ಒಬ್ಬಳೇ ಹೊರಗೆ ಹೋಗುವವಳನ್ನು ಹತ್ತು ಹೆಜ್ಜೆಗಳು ಹಿಂಬಾಲಿಸುತ್ತವೆ. ರೆಕ್ಕೆ ಮುರಿದುಕೊಂಡ ಹಕ್ಕಿಯ ಹಾಗೆ ಸುರಕ್ಷಿತತೆಗಾಗಿ ಅಪ್ಪನ ಗೂಡು ಸೇರಿಕೊಳ್ಳುತ್ತೇನೆ. ಈ ವ್ಯವಸ್ಥೆ ಯಾಕೆ ಹೀಗೆಂದು ಅರ್ಥಮಾಡಿಕೊಳ್ಳಲು ಯತ್ನಿಸಿ ವಿಫಲಳಾಗುತ್ತೇನೆ. ತಹಬದಿಗೆ ಬರದ ಮನಸ್ಸು ಗಾಳಿಪಟವಾಗಿಬಿಡುತ್ತದೆ.

ಏನೊಂದೂ ಬಗೆಹರಿಯದ ಗೊಂದಲಗಳ ಅವೇ ದಿನಗಳಲ್ಲಿ ಕಿವಿಯಲ್ಲಿ ಕಾದ ಸೀಸ ಸುರುವಿದ ಹಾಗೆ ಒಂದು ಸುದ್ದಿ ಗಂಡನ ಮನೆ ಕಡೆಯಿಂದ ಬರುತ್ತದೆ: ನನ್ನ ದೊಡ್ಡ ಮಗ ಮತ್ತು ನನ್ನ ಗಂಡನ ಎಳಸು ಹೆಂಡತಿ ನಿನ್ನೆ ರಾತ್ರಿಯಿಂದ ಕಾಣುತ್ತಿಲ್ಲವೆಂದು.