ಇಡೀ ಕಾದಂಬರಿ, ಒಬ್ಬ ಪ್ರಾಮಾಣಿಕ ವೈದ್ಯ ದೇಶ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದಾಗಲೂ ಹೇಗೆ ಭ್ರಷ್ಟ ವ್ಯವಸ್ಥೆಗೆ ಬಲಿಯಾಗುತ್ತಾನೆ ಎನ್ನುವ ಕರಾಳ ಕಥನ. ಕೋವಿಡ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆ ಮೇಲೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಶ್ರೀ ಸಾಮಾನ್ಯನ ಎಲ್ಲ ಆರೋಪಗಳೂ ಸತ್ಯವೆಂದು ಬಿಂಬಿಸುತ್ತದೆ. ವೈದ್ಯಕೀಯ ವ್ಯವಸ್ಥೆಯ ಭ್ರಷ್ಟತೆ ಹೇಗೆ ಲಕ್ಷಾಂತರ ಜನರ ಜೀವನ, ಜೀವದ ಜತೆ ಆಟವಾಡಿದ ಕರಾಳ ಕಥೆಯೇ ಈ ಕಾದಂಬರಿ.
ಡಾ. ಲಕ್ಷ್ಮಣ ವಿ.ಎ. ಕಾದಂಬರಿ ‘ಪಿ. ಎಚ್. ಸಿ ಕವಲುಗುಡ್ಡ’ ಕುರಿತು ಕೊಟ್ರೇಶ್ ಅರಸೀಕೆರೆ ಬರಹ

ಕೊರೋನಾದ ಇನ್ನೊಂದು ಮುಖವೆಂದು ಬಿಂಬಿಸುತ್ತಿರುವ HMPV ಎಂಬ ವೈರಸ್ ಹರಡುತ್ತಿದೆ ಎಂಬ ಹೊಸ ದಿನಮಾನದಲ್ಲಿ ಕೊರೋನಾ ಕಾಲಘಟ್ಟದ ತಲ್ಲಣ ಕುರಿತು ವೈದ್ಯ ಲಕ್ಷ್ಮಣ ವಿ ಅಟಪಟಕರ ಯವರ ‘PHC ಕವಲುಗುಡ್ಡ’ ಹೊರ ಬಂದಿದೆ. ಕಂಡದ್ದನ್ನು, ಕಲ್ಪಿಸಿಕೊಂಡದ್ದು ಅಥವಾ ಸೃಷ್ಠಿಸಿದ ಐತಿಹಾಸಿಕವಲ್ಲದ ಸ್ವತಃ ಒಬ್ಬ ವೈದ್ಯನಾಗಿ ಕೊರೋನಾ ಕಾಲಘಟ್ಟದಲಿ ಒಬ್ಬ ಯೋಧನಾಗಿ ಹೋರಾಟ ಮಾಡಿ ಅನುಭವಿಸಿದ ಕಥೆ ಎಂಬ ಕಾರಣಕ್ಕಾಗಿ ಮುಖ್ಯವಾಗುತ್ತದೆ.

ಪಾತ್ರಗಳೇ ಎದ್ದು ಬಂದಾವು ಎಂಬ ಕಾರಣಕ್ಕಾಗಿ ಕಾದಂಬರಿಯಲ್ಲಿ ಹೊಸ ಹೆಸರುಗಳು, ಸ್ಥಳ, ಘಟನೆಗಳು ಸೃಷ್ಟಿಯಾಗಿದೆಯೇ ಹೊರತು ಇಡೀ ಕಾದಂಬರಿ ನೈಜತೆಯ ಕನ್ನಡಿಯಾಗಿದೆ.

(ಡಾ. ಲಕ್ಷ್ಮಣ ವಿ.ಎ.)

ಎರಡನೆಯ ಮಹಾಯುದ್ಧದ ನಂತರ ಇಡೀ ಮನುಕುಲ ಅನುಭವಿಸಿದ ಪ್ಲೇಗ್ ಮಹಾಮಾರಿಯ ಕುರಿತು ಬಂದ ಆಲ್ಬರ್ಟ್ ಕ್ಯಾಮೂಸ್‌ನ ಪ್ರಸಿದ್ಧ ಕಾದಂಬರಿ ‘ಪ್ಲೇಗ್’ ನ್ನು ನೆನಪಿಸುತ್ತದೆ ಈ ಕಾದಂಬರಿ. ಭಾಷೆಯ ವಿಷಯದಲ್ಲಿ ಇನ್ನಷ್ಟು ಗಟ್ಟಿಯಾಗಬೇಕಿದ್ದರೂ, ವಿಸ್ತೃತ ರೂಪವಲ್ಲದಿದ್ದರೂ ಹೊಸ ಜಮಾನದ ಓದುಗರಿಗೆ ಸುಲಭವಾಗಿ ಓದಲು ಕಟ್ಟಿಕೊಟ್ಟ ಬರಹ ಇದು. ನೈತಿಕ ಮೌಲ್ಯವನ್ನು ಕಟ್ಟಿಕೊಡುವುದರಲ್ಲಿ ಈ ಕಾದಂಬರಿಯ ಸೌಂದರ್ಯ ಅಡಗಿದೆ ಎಂದು ನಾನಂತೂ ಭಾವಿಸುತ್ತೇನೆ.

ಅಂದು ಅಲ್ಬರ್ಟ್ ಕ್ಯಾಮೂಸ್ ಪ್ರಸ್ತಾಪಿಸಿದ ಸಂಗತಿಗಳಿಗೂ, ಇಂದಿನ ಕೊರೊನಾ ಕಾಲಘಟ್ಟದ ಸಂಗತಿಗಳಿಗೂ ಅಂಥಹ ವ್ಯತ್ಯಾಸವೇನಿಲ್ಲ. ಅಂದಿನ ಸಾಮಾಜಿಕ ವ್ಯವಸ್ಥೆ, ರಾಜಕೀಯ ವ್ಯವಸ್ಥೆಯ ಮನಸ್ಸುಗಳೆರಡೂ ಹೆಚ್ಚು ಭಿನ್ನವಾಗೇನಿಲ್ಲ. ಮೊದ ಮೊದಲು ಪ್ಲೇಗ್ ಸೋಂಕು ಇದೆಯೆಂದು ನಂಬಲು ತಯಾರಿಲ್ಲದ ವ್ಯವಸ್ಥೆ ಕೊನೆಗೆ ಜನರನ್ನು ಕೈದಿಗಳಂತೆ, ದೇವರು ಕೊಟ್ಟ ಶಿಕ್ಷೆ ಎಂದು ಧರ್ಮದ ಸಂಕೀರ್ಣತೆಯಲ್ಲಿ ಜನರನ್ನು ಬಂಧಿಸುವ ಹುನ್ನಾರ ನಡೆದಂತೆ ಕೊರೊನಾ ಕಾಲಘಟ್ಟದಲ್ಲಿ ಕೊರೊನಾ ಸೋಂಕು ಬಂದಾಗ ಆ ಸೋಂಕು ಇದೆ ಎಂಬ ಬಗ್ಗೆ ಯೇ ಗೊಂದಲಗಳು ಸೃಷ್ಠಿಯಾಗಿದ್ದನ್ನು ನೆನಪಿಸುತ್ತದೆ. ಪ್ರಾರಂಭದಲ್ಲಿ ಜನರನ್ನು ಧಾರ್ಮಿಕ ಭಾವನೆಯಲ್ಲಿ ಬಂಧಿಸುವ ಪ್ರಯತ್ನ ನಡೆದದ್ದೂ ಗೊತ್ತು. ನಂತರ ಸೋಂಕು ನಿವಾರಿಸಲು ತೆಗೆದುಕೊಂಡ ಪ್ರಯತ್ನದಲ್ಲಿನ ವೈಫಲ್ಯ, ರಾಜಕೀಯ ಭ್ರಷ್ಟಾಚಾರ ಎಲ್ಲದರ ಪದರ ಬಿಡಿಬಿಡಿಯಾಗಿ ನೆನಪಿಗೆ ಬರುತ್ತದೆ. ಯಾವುದೇ ಪ್ರಭುತ್ವ ಕೂಡ ಇದಕ್ಕೆ ಹೊರತಾಗಿಲ್ಲ ಎಂಬುದು ವಿಪರ್ಯಾಸ.

‘ಕವಲುಗುಡ್ಡ’ ಕಾದಂಬರಿ ಆರಂಭವಾಗುವುದು ಕೊರಾನಾ ಮಾರಿ ಶುರುವಾದ ಸಂದರ್ಭದಲಿ ಡಾಕ್ಟರ್‌ಗಳ ಕೊರತೆ ಶುರುವಾಗಿ ಸರ್ಕಾರ ಕಾಂಟ್ರಾಕ್ಟ್ ಮೇಲೆ ವೈದ್ಯರನ್ನು ತೆಗೆದುಕೊಳ್ಳಲು ಆರಂಭಿಸಿದ ಘಟನೆಯಿಂದ. ಈ ಕಾದಂಬರಿಯ ಕೇಂದ್ರ ವ್ಯಕ್ತಿ ಡಾ. ಸುಹಾಸ್ ಈ ನೇಮಕಾತಿ ಸಂದರ್ಶನಕ್ಕೆ ಹಾಜರಾಗುವ ಸನ್ನಿವೇಶದಿಂದ. ಕುಟುಂಬದ ಹೊಟ್ಟೆ ಪೊರೆಯುವ ಕಾರಣದ ಜತೆಗೆ ತನ್ನ ವೃತ್ತಿಧರ್ಮ, ವೃತ್ತಿಪರತೆಯ ಕಾರಣದಿಂದ ಅತಿ ಉತ್ಸುಕನಾಗಿ ಕೆಲಸಕ್ಕೆ ಸೇರಿದ ಡಾಕ್ಟರ್ ಸುಹಾಸ್ ತನ್ನ ಪ್ರಾಮಾಣಿಕ, ನೈತಿಕತೆಯ ಗುಣದಿಂದ ಕೊನೆಗೆ ಭ್ರಷ್ಟ ವ್ಯವಸ್ಥೆಯಿಂದಾಗಿ ವೃತ್ತಿಯಿಂದ ಹೊರ ತಳ್ಳಲ್ಪಡುತ್ತಾನೆ. ಉತ್ಸಾಹದಿಂದ ಆರಂಭವಾಗಿ ಕೊನೆಗೆ ವಿಷಾದದೆಡೆಗೆ ಓದುಗರನ್ನು ಕರೆದೊಯ್ಯುತ್ತದೆ.

ಮೂಲಭೂತ ಸೌಕರ್ಯಗಳಲ್ಲಿ ಒಂದೆನಿಸಿದ ಆರೋಗ್ಯ ಕಾಳಜಿ ಬಗ್ಗೆ ಈ ದೇಶದ ಸರ್ಕಾರಗಳ ಮನಸ್ಥಿತಿಯನ್ನು ಕಾದಂಬರಿಕಾರ ಕಾದಂಬರಿಯ ಮೊದಲ ಪುಟದಲ್ಲೇ ಆರೋಗ್ಯ ಕೇಂದ್ರದ ಸ್ಥಿತಿಗಳನ್ನು ನೈಜವಾಗಿ ಪರಿಚಯಿಸುತ್ತಾನೆ. ನಂತರ ಆರೋಗ್ಯ ಕೇಂದ್ರದಲ್ಲಿ (ಡಿ ಎಚ್ ಓ) ಅಧಿಕಾರಸ್ಥರ ಮನಸ್ಥಿತಿಯನ್ನು ದಾಖಲಿಸುತ್ತಾ ಇಡೀ ವ್ಯವಸ್ಥೆಯ ರೋಗ ಸ್ಥಿತಿ, ಅಧಿಕಾರಿಗಳ ಉಡಾಫೆ, ಮದ, ದರ್ಪವನ್ನು ಅನಾವರಣಗೊಳಿಸುತ್ತಾರೆ. ಭಾರತದ ಯಾವುದೇ ಮೂಲೆಗೆ ಹೋದರೂ ಆರೋಗ್ಯ ಇಲಾಖೆ ಅಥವಾ ಯಾವುದೇ ಸರ್ಕಾರಿ ಇಲಾಖೆಯ ದರ್ಶನ ಎನ್ನಬಹುದೇನೋ. ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಮೇಲಿನ ಅಧಿಕಾರಿಗಳು, ಅವರನ್ನು ಹಿಡಿತದಲ್ಲಿ ಇಟ್ಟುಕೊಂಡ ಪುಢಾರಿಗಳ ನೈಜ ದರ್ಶನ (ಭಾರತ ದರ್ಶನ?) ಮಾಡಿಸುತ್ತಾರೆ ಕಾದಂಬರಿಕಾರ. ನಾಳೆ ಮುಂದಿನ ಜನರೇಶನ್‌ಗೆ ಈ ಮನಸ್ಥಿತಿಯ ವ್ಯವಸ್ಥೆ ಒಂದು ದಾಖಲೆಯಾಗಿರುತ್ತದೆ ಈ ವಿವರಗಳು.

ಈ ಕಾದಂಬರಿಯ ಎರಡನೇ ಅಧ್ಯಾಯದಲ್ಲಿ ಇಡೀ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯ ತೆರೆದಿಡುತ್ತದೆ. ಪ್ರತಿ ಮಹಿಳೆಯರ ಪರಿಶ್ರಮ, ಕುಟುಂಬವನ್ನು ಸಂಭಾಳಿಸುವ ರೀತಿ, ಮಹಿಳೆಯ ಆರ್ಥಿಕ ಶಕ್ತಿಯನ್ನು ಹೂ ಮಾರುವ ಮಹಿಳೆ ಹಾಗೂ ಈ ಕಥಾ ನಾಯಕನ ಹಿನ್ನೆಲೆಯಲ್ಲಿ ಚೆಂದವಾಗಿ ಕಟ್ಚಿಕೊಡುತ್ತಾರೆ. ಕುಟುಂಬದಿಂದಲೇ ಸಮಾಜ, ಸಮಾಜದಿಂದಲೇ ದೇಶ ಎನ್ನುವ ಸಮಾಜಶಾಸ್ತ್ರದ ಮಾತು ನೆನಪಿಗೆ ಬರುತ್ತದೆ. ಇದನ್ನು ಓದುತ್ತಲೇ ಲಂಕೇಶರ ‘ಅವ್ವ’ ಕಾವ್ಯ ನೆನಪಾಗುತ್ತದೆ. ಹಾಗೆಯೇ ಬಹುತ್ವ ನೆಲೆಯಲ್ಲಿ ರೂಪಿತಗೊಂಡಿರುವ ಈ ನೆಲದ ವಿವಿಧ ಮುಖಗಳನ್ನು ಕೋವಿಡ್ ಸಮಯದ ಆರಂಭದಲ್ಲಿ ಆದ ಘಟನೆಗಳನ್ನು ನಿರೂಪಿಸುತ್ತಾರೆ. ಕೋವಿಡ್ ರೋಗ ಒಂದೇ ಅಲ್ಲ, ಸಾಮಾಜಿಕ ರೋಗವನ್ನು, ಇಲ್ಲಿಯ ಮಾಧ್ಯಮಗಳು ಮಾಡಿದ ಅನಾಹುತಗಳನ್ನು ತೆರೆದಿಡುತ್ತಾರೆ. ಒಬ್ಬ ಪ್ರಾಮಾಣಿಕ ಕಾದಂಬರಿಕಾರನಿಂದ ಮಾತ್ರ ಇದು ಸಾಧ್ಯ. ಆರೋಗ್ಯ, ಆರ್ಥಿಕ ರೋಗಕ್ಕಿಂತ ಸಾಮಾಜಿಕ ರೋಗ ಬಹಳ ಕೆಟ್ಟದ್ದು.

ಒಂದು ದೊಡ್ಡ ಪ್ರಜಾಪ್ರಭುತ್ವ ದೇಶ ಎಷ್ಟೆಲ್ಲ ಗಟ್ಟಿಯೋ ಹಾಗೆಯೇ ಒಳಗಿನ ಹುಳುಕುಗಳು ವ್ಯವಸ್ಥೆಯನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಕಾಲದಲ್ಲೂ ಪ್ರಭುತ್ವದ ನಡವಳಿಕೆ ಮೇಲೆ ಸಮಾಜದ/ದೇಶದ ಸ್ವಾಸ್ಥ್ಯ ನಿರ್ಧರಿತವಾಗಿರುತ್ತದೆ. ಕೋವಿಡ್ ಆರಂಭದಿಂದ ಅದು ಕೊನೆಗೆ ಮುಟ್ಟಿದ ಘಟ್ಟವನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಈ ಕಾದಂಬರಿ.

ಕೋವಿಡ್ ಮುಖ್ಯವಾಗಿ ಪರಿಣಾಮ ಬೀರಿದ್ದು ಸಾಮಾಜಿಕ ವ್ಯವಸ್ಥೆಯ ಮೇಲೆ. ಕಂಟೋನ್ಮಟ್ ಝೋನ್‌ಗಳು, ಸರ್ಕಾರದ ನೀತಿ ಶ್ರಮಿಕರ, ಬಡವರ ಅನ್ನವನ್ನು ಕಸಿದುಕೊಂಡ ಬಗೆ, ನಿರುದ್ಯೋಗಿಗಳಾದ ಲಕ್ಷಾಂತರ ಜನ, ಅನ್ನ-ನೀರಿಗೆ ಪಟ್ಟ ಪಡಿಪಾಟಲು, ತಮ್ಮ ಊರಿಗೆ ಕಾಲು ನಡಿಗೆಯಲ್ಲೇ ಹೊರಟ ಶ್ರಮಿಕ ವರ್ಗ ಇಡೀ ದೇಶದ ವ್ಯವಸ್ಥೆಯನ್ನೇ ಬೆತ್ತಲೆಗೊಳಿಸಿದವು.

ಉರಿವ ಮನೆಯಲ್ಲಿ ಗಳ ಹಿರಿಯುವಲ್ಲಿ ತೊಡಗಿದ ಅಧಿಕಾರಸ್ಥ ಜನ, ಜನ ಪ್ರತಿನಿಧಿಗಳು ಇಡೀ ವ್ಯವಸ್ಥೆಯನ್ನು ಅಲ್ಲಾಡಿಸಿಬಿಟ್ಟವು. ವಿವಿಧ ರೀತಿಯ ಖಾಯಿಲೆಯಿಂದ ನರಳುತ್ತಿದ್ದ ಜನರಿಗೆ ಚಿಕಿತ್ಸೆ ಸಿಗದೆ ಮೃತಪಟ್ಟ ಪ್ರಕರಣಗಳು, ಆರೋಗ್ಯ ಇಲಾಖೆಯ ಅಸಹಾಯಕತೆ, ಭ್ರಷ್ಟಾಚಾರ ಎಲ್ಲವನ್ನೂ ಕಾದಂಬರಿಯ ನಾಯಕ ಡಾ. ಸುಹಾಸ್ ತೆರೆದಿಡುತ್ತಾನೆ. ಕೋವಿಡ್ ನಿಭಾಯಿಸುವಲ್ಲಿ ನಿರತರಾದ ಜನರ ಮಾನಸಿಕ ಸ್ಥಿತಿ, ಅಭದ್ರತೆ, ಮಾನಸಿಕ ಸ್ವಾಸ್ಥ್ಯ, ಆರೋಗ್ಯದ ಏರುಪೇರು ಎಲ್ಲವೂ ಇಲ್ಲಿ ದಾಖಲೆಯಾಗಿದೆ. ಗುಳೆ ಹೋಗುವಾಗ ಅತ್ಯಾಚಾರಕ್ಕೊಳಗಾದ ಮೂಕ ಹುಡುಗಿಯ ವೇದನೆ ಸಂಕಟ ತರಿಸುತ್ತದೆ. ಹೊರಗೆ ಬಾರದ ಇನ್ನೂ ಅದೆಷ್ಟೋ ಸಂಗತಿಗಳ ಕಲ್ಪನೆ ಭಯತರಿಸುತ್ತದೆ. ಖಾಯಿಲೆಯಿಂದ ಸತ್ತವರಿಗಿಂತ ವ್ಯವಸ್ಥೆಗೆ ಬಲಿಯಾದವರ ಸಂಖ್ಯೆ ದುಃಖವನ್ನು ತರುತ್ತದೆ.

ಇಡೀ ಕಾದಂಬರಿ, ಒಬ್ಬ ಪ್ರಾಮಾಣಿಕ ವೈದ್ಯ ದೇಶ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದಾಗಲೂ ಹೇಗೆ ಭ್ರಷ್ಟ ವ್ಯವಸ್ಥೆಗೆ ಬಲಿಯಾಗುತ್ತಾನೆ ಎನ್ನುವ ಕರಾಳ ಕಥನ. ಕೋವಿಡ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆ ಮೇಲೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಶ್ರೀ ಸಾಮಾನ್ಯನ ಎಲ್ಲ ಆರೋಪಗಳೂ ಸತ್ಯವೆಂದು ಬಿಂಬಿಸುತ್ತದೆ. ವೈದ್ಯಕೀಯ ವ್ಯವಸ್ಥೆಯ ಭ್ರಷ್ಟತೆ ಹೇಗೆ ಲಕ್ಷಾಂತರ ಜನರ ಜೀವನ, ಜೀವದ ಜತೆ ಆಟವಾಡಿದ ಕರಾಳ ಕಥೆಯೇ ಈ ಕಾದಂಬರಿ.

ಈ ಕಾದಂಬರಿ ನೈಜ ಘಟನೆಯನ್ನಾಧರಿಸಿದಕ್ಕೆ ಬಹಳ ಮುಖ್ಯವಾಗಿದೆ. ಇದೊಂದು ಚಾರಿತ್ರಿಕ ದಾಖಲೆಯಾದರೂ ಭಾಷೆಯ ಇನ್ನಷ್ಟು ಗಟ್ಟಿತನ ಬೇಕಿತ್ತು. ಕವಲುಗುಡ್ಡ ಕೇವಲ ಕವಲುಗುಡ್ಡವಾಗದೇ ಜಾಗತಿಕವಾಗಬೇಕಿತ್ತು. ಕವಲುಗುಡ್ಡದ ಇನ್ನೂ ಅನೇಕ ಕವಲುಗಳ ಅನಾವರಣೆಯ ಅವಶ್ಯಕತೆ ಬೇಕು ಎನಿಸಿದರೂ ಸುಲಭ ಓದಿಗೆ ತಕ್ಕದಾಗಿದೆ.

ಈ ಕಾದಂಬರಿಗೆ ಕಾದಂಬರಿಕಾರನ ಚಂದದ ಮಾತುಗಳಿವೆ. ಪ್ರಕಾಶಕರ ನುಡಿಗಳಿವೆ. ಪುಸ್ತಕ ಮನೆ ಬಹಳ ಸೊಗಸಾಗಿ ಮುದ್ರಿಸಿದೆ. ಪುಸ್ತಕದ ಲೇ ಔಟನ್ನು ಇನ್ನಷ್ಟು ಸುಧಾರಿಸಬಹುದಿತ್ತು. ಒಟ್ಟಿನಲ್ಲಿ ಒಳ್ಳೆಯ, ನೈಜ ಓದಿಗೆ ಈ ಕಾದಂಬರಿ ಕಾರಣವಾಗುತ್ತದೆ.