ನೋಡು ನನ್ನ ನೆನಪಾಗುತ್ತದೆಯೆ ಎಂದು
ಮುಸಲಾಧಾರ ಮಳೆ
ಕಿಡಕಿಯ ಬಳಿ ನಿಂತು ನೋಡು
ನೋಡು ನನ್ನ ನೆನಪಾಗುತ್ತದೆಯೆ ಎಂದು
ಕೈ ಉದ್ದ ಮಾಡು
ಹೊಡೆಸಿಕೋ ಮಳೆ ನೀರ ಕೈಗಳ ಮೇಲೆ
ಇಷ್ಟೇ ಇಷ್ಟು ಬೊಗಸೆಯಲ್ಲಿ ಹಿಡಿದು ಕುಡಿದು ನೋಡು
ನೋಡು ನನ್ನ ನೆನಪಾಗುತ್ತದೆಯೆ ಎಂದು
ಗಾಳಿ ಎರಚುವ ಮಳೆ ಹನಿಗಳ
ಸಿಂಪಡಿಸಿಕೋ ಮುಖಕ್ಕೆ, ರೆಪ್ಪೆ ಮುಚ್ಚಿ ಅನುಭವಿಸು
ತಲ್ಲೀನಳಾಗು
ಏನೂ ಅರ್ಥವಾಗದಿದ್ದರೆ
ಆಚೆ ಬಾ, ಬಾ ಸಮುದ್ರದತ್ತ
ಕಡಲು ಹುಚ್ಚೆದ್ದೇ ಇರುತ್ತದೆ
ನೀರಲ್ಲಿ ಕಾಲ ನೆನೆಸಿ ನಿಂತಿರು
ಕಾಲ ಕೆಳಗೆ ತೆರೆಗಳು ಮಿಸುಕಾಡಬಹುದು
ನೋಡು ನನ್ನ ನೆನಪಾಗುತ್ತದೆಯೆ ಎಂದು
ಆಮೇಲೆ ನಡೆಯಲಾರಂಭಿಸು
ನೀರಿನ ಅಸಂಖ್ಯ ಸೂಜಿಗಳ ಚುಚ್ಚಿಸಿಕೋ
ನಡೆಯುತ್ತಿರು ಮಳೆ ನಿಲ್ಲುವವರೆಗೆ
ಮಳೆಯಂತೂ ನಿಲ್ಲದು
ಕೊನೆಗೆ ಮನೆ ಸೇರು
ಸೀರೆ ಬದಲಿಸಬೇಡ ಕೂದಲೊರೆಸಬೇಡ
ಮತ್ತೆ ಅದೇ ಕಿಟಕಿಗೆ ಬಾ
ಗಂಡನ ಹಾದಿಯ ಕಾಯೀಗ
ನೋಡು ನನ್ನ ನೆನಪಾಗುತ್ತದೆಯೆ ಎಂದು
ಬಾಗಿಲ ಗಂಟೆ ಬಾರಿಸಬಹುದು
ಬಾಗಿಲು ತೆರೆ ಯಜಮಾನರಿರಬೇಕು
ಆತನ ಕೈ ಬ್ಯಾಗ್ ಇಸಿದುಕೋ
ರೈನ್ ಕೋಟ್ ಅವನೇ ತೆಗೆಯಬಹುದು
ಕೇಳಬಹುದಾತ ಯಾಕೆ ಒದ್ದೆಯಾಗಿದ್ದೀ
ಹೇಳು ಮನೆ ಸೋರುತ್ತಿದೆ
ಚಹಾ ಮಾಡು ನೀನೂ ತೆಗೆದುಕೋ
ಅವನೆದ್ದು ಪಂಕಜ್ ಉಧಾಸ್ ಹಚ್ಚಬಹುದು
ಅದ ನಿಲ್ಲಿಸಿ ಕಿಶೋರೀ ಅಮೋಣಕರ್ ಳ
ಸಹೇಲಾರೇ ಹಚ್ಚು
ನೋಡು ನನ್ನ ನೆನಪಾಗುತ್ತದೆಯೆ ಎಂದು
ಮತ್ತೆ ರಾತ್ರಿಯಾದೀತು
ಆತ ನಿನ್ನ ತೋಳ ತೆಕ್ಕೆಯಲ್ಲಿ ಬಳಸಿ
ಅನ್ನಬಹುದು ನೀ ನನಗಿಷ್ಟ ಎಂದು
ನೀನೂ ಹಾಗೆಯೇ ಹೇಳು
ಸಿಡಿಲಿನ ಖಡ ಖಡ
ಮೋಡಗಳ ಗಡ ಗಡ ನಡೆದೇ ಇರಬಹುದು
ಆತ ಆ ಕಡೆ ಹೊರಳಬಹುದು
ಬೆನ್ನು ಹಾಕಿದ ಅತನ ದೇಹ ನೋಡು
ನೋಡು ನನ್ನ ನೆನಪಾಗುತ್ತದೆಯೆ ಎಂದು
ಇದಾದ ಮೇಲೆ ಬಿಟ್ಟ ಕಣ್ಣಿಂದ
ಸೂರು ನೋಡಲು ಮರೆಯಬೇಡ
ಇದಾದ ಮೇಲೆ ಹೊರಗಿನ ಮಳೆಯ
ಸುಮ್ಮನೇ ಕೇಳಿಸಿಕೊಳ್ಳಲು ಪ್ರಯತ್ನಿಸು
ಇದಾದ ಮೇಲೆ ದಿಂಬಿನ ಕೆಳಗೆ ನುಸುಳು
ನಿದ್ದೆ ಹೋಗಲು ಪ್ರಯತ್ನಿಸು
ನೋಡು ಮುಂದಿನ ಮಳೆಗಾಲದಲ್ಲಿಯಾದರೂ
ಒಂದು ದಿನ
ನನ್ನ ನೆನಪಾಗುತ್ತದೆಯೋ ಎಂದು
ಮೂಲ: ಕಿಶೋರ್ ಕದಂ
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಲೇಖಕ ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರಗಳ ನಿರ್ಮಾಪಕ. ಚಿತ್ರ ಸಮಾಜ ಚಳುವಳಿಯೊಂದಿಗೆ ಬೆಳೆದವರು.