ಸಂಗೀತ ಕ್ಷೇತ್ರದ ಕುರಿತ ಬರಹಗಳ ವಿಸ್ತಾರ ಬಹುಸೀಮಿತ. ವಿಮರ್ಶೆಗಳು, ವ್ಯಕ್ತಿಚಿತ್ರಣಗಳು, ದಂತಕತೆಯಾದ ಸಂಗೀತ ದಿಗ್ಗಜರ ಕುರಿತು ಶಾಸ್ತ್ರೀಯ ಶೈಲಿಯ ಬರಹಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಸಂಗೀತ ಉಪಕರಣವೊಂದರ ತಯಾರಿಯಲ್ಲಿ ತೊಡಗಿರುವ ಸಮುದಾಯದ ಜೀವನ ಶೈಲಿ ಹೇಗಿರುತ್ತದೆ, ಅವರ ನೋವು ನಲಿವುಗಳೇನು ಎಂಬುದನ್ನು ಗಾಯಕ ಟಿ.ಎಂ. ಕೃಷ್ಣ ತಮ್ಮ ಹೊಸ ಕೃತಿ ‘ಸಬಾಸ್ಟಿಯನ್ & ಸನ್ಸ್’ನಲ್ಲಿ ಮಂಡಿಸಿದ್ದಾರೆ. ಅವರು ಬರೆದ ಇಂಗ್ಲಿಷ್ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕಿ ಸುಮಂಗಲಾ ಕೆಂಡಸಂಪಿಗೆಗೆ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

 

ಅದು 2019ರ ಡಿಸೆಂಬರಿನ ಭಾನುವಾರ… ಯು.ಆರ್. ಅನಂತಮೂರ್ತಿ ಸ್ಮರಣೆಯ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುತ್ತಿದ್ದ ಟಿ.ಎಂ. ಕೃಷ್ಣ ಮಡಿ-ಮೈಲಿಗೆ ಕುರಿತ ವಿರೋಧಾಭಾಸವನ್ನು ಮೃದಂಗ ಮತ್ತು ಅದನ್ನು ತಯಾರಿಸುವವರ ಉದಾಹರಣೆ ಕೊಟ್ಟು ವಿವರಿಸುತ್ತಿದ್ದರು. ತದನಂತರದ ಭಾನುವಾರ ಪಟ್ಟಮ್ಮಾಳ್ ಕುರಿತು ಮಾತನಾಡುವಾಗಲೂ ಯಾವುದೋ ವಿಷಯದ ಕುರಿತು ವಿವರಿಸುವಾಗ ಮೃದಂಗ ತಯಾರಕರ ಇತಿಹಾಸ-ವರ್ತಮಾನವನು ಅರಸುತ್ತ ತಾವು ಮಾಡಿದ ಕ್ಷೇತ್ರ ಅಧ್ಯಯನದ ಕುರಿತು ಏನೋ ಹೇಳಿದರು. ಅದ್ಯಾಕೋ ಈ ಕ್ಷೇತ್ರ ಅಧ್ಯಯನದ ವಿಚಾರ ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಹೇಗಾದರೂ ಮಾಡಿ ಈ ಕೃತಿಯನ್ನು ಅನುವಾದಿಸಲೇಬೇಕು ಎಂದು ಅಂದೇ ನಿರ್ಧರಿಸಿದೆ. ಹಾಗೆ “ಸೆಬಾಸ್ಟಿಯನ್ & ಸನ್ಸ್” ಜೊತೆಗೆ ನನ್ನ ಅಕ್ಷರಪಯಣವೂ ಕಳೆದ ವರ್ಷವಿಡೀ ಸಾಗಿತು.

ಮೃದಂಗ ತಯಾರಕ ಸಮುದಾಯದ ಈ ಕಥನ ನನ್ನನ್ನು ಹಿಡಿದಿಟ್ಟಿತ್ತು, ನಿಜ. ಆದರೆ ಇಲ್ಲೊಂದು ತೊಡಕು ಇತ್ತು. ಕ್ಷೇತ್ರ ಅಧ್ಯಯನದ ಕೃತಿಯ ಕುರಿತು ನನಗಿದ್ದ ಅತೀವವಾದ ಆಸಕ್ತಿ, ಹುರುಪು ಈ ಬಂಡವಾಳವಷ್ಟೇ ಅನುವಾದಕ್ಕೆ ಖಂಡಿತವಾಗಿಯೂ ಸಾಲದಿತ್ತು. ಏಕೆಂದರೆ ಕೃತಿಯನ್ನು ಓದುತ್ತಿದ್ದಂತೆ ಅರಿವಾಯಿತು, ಕರ್ನಾಟಕ ಸಂಗೀತದ ಕುರಿತಾಗಿ ನನ್ನ ಜ್ಞಾನ ಸೊನ್ನೆಯಾದರೆ, ಮೃದಂಗವಾದ್ಯದ ಕುರಿತ ನನ್ನ ಅರಿವು ಸೊನ್ನೆಗೂ ಕೆಳಗೆ, ಮೈನಸ್ ಅಂಕಿಗಳಲ್ಲಿತ್ತು. ಕಛೇರಿಗಳಲ್ಲಿ ವೇದಿಕೆಯ ಮೇಲೆ ಮೃದಂಗ ವಾದಕರನ್ನು ಮತ್ತು ಮೃದಂಗವನ್ನೇನೋ ಕಂಡಿದ್ದೆ. ನಾನು ಕರ್ನಾಟಕ ಸಂಗೀತದ ಕಛೇರಿಗಳಿಗೆ ಹೋಗಿದ್ದು ಕೂಡ ವಿರಳ ಎಂದೇ ನಾಚಿಕೆಯಿಂದ ಒಪ್ಪಿಕೊಳ್ಳುವೆ. ಹೀಗಾಗಿ ಮೃದಂಗವನ್ನು ಮುಟ್ಟಿ, ತಟ್ಟಿ ತಡಕಿ ನೋಡುವ ಅಗತ್ಯದ ಜೊತೆಗೆ ಪರ್ಲಾಂಡು ಎಂಬ ಅದ್ಭುತ ತಯಾರಕ ಬದುಕಿದ್ದ ತಂಜಾವೂರು ಕೀತುಕಾರ ಬೀದಿಯಲ್ಲಿ ಒಮ್ಮೆ ಅಡ್ಡಾಡಲೇ ಬೇಕಿತ್ತು ನನಗೆ. ಆಫೀಸು ಕೆಲಸದ ನಿಮಿತ್ತ ತಂಜಾವೂರಿಗೆ ಹೋಗಿದ್ದ ನನಗೆ ಅದಕ್ಕೊಂದು ಒಳ್ಳೆಯ ಅವಕಾಶವೂ ಸಿಕ್ಕಿತು, ಆಗ ಜೊತೆಗಿದ್ದ ನನ್ನ ಸಹೋದ್ಯೋಗಿ ಹೇಮಾ ತಮಿಳು ಮನೆಮಾತಿನವಳು. ಅದೊಂದು ದೊಡ್ಡ ಅನುಕೂಲವಾಗಿತ್ತು.

ಕೀತುಕಾರ ಬೀದಿಯಲ್ಲಿ ಅಡ್ಡಾಡುವಾಗ ಸುಮಾರು ಆರೇಳು ದಶಕಗಳ ಕೆಳಗೆ ಈ ಬೀದಿ ಹೇಗಿದ್ದೀತು, ಅಲ್ಲಿಯ ಇದೇ ಬೀದಿಗಳಲ್ಲಿ ಓಡಾಡುತ್ತ, ಬದುಕಿದ್ದ ಪರ್ಲಾಂಡುವಿನ ಮನದಲ್ಲಿ ಅದಾವ ಕ್ಷಣದಲ್ಲಿ ಹಾಗೆ ಕಪ್ಪಿ ಮೃದಂಗ ಎಂಬ ಹೊಸತೊಂದು ಕಲ್ಪನೆ ಕುಡಿಯೊಡೆದಿದ್ದೀತು ಎಂದು ಆಲೋಚಿಸುತ್ತಿದ್ದೆ. ಪರ್ಲಾಂಡು ಮಗಳು ಜೆಸಿಂಥ ಮೇರಿ, ಅವರ ಪತಿ ಗೇಬ್ರಿಯಲ್, ಪರ್ಲಾಂಡು ಅವರ ತಮ್ಮ ಇನ್ನೋರ್ವ ಅತ್ಯುತ್ತಮ ತಯಾರಕ ಆಂಟನಿ ಮಗಳು ಸೆಲೆತ್ ಮೇರಿ ಹಾಗೂ ಅವರ ಮಗ ಪ್ರಕಾಶ್ ಅವರನ್ನು ಭೇಟಿಯಾಗಿದ್ದು ನನ್ನ ಈ ಇಡೀ ಅಕ್ಷರಪಯಣದ ಸದಾ ಹಸಿರಾದ ಕ್ಷಣಗಳು.

(ಟಿ.ಎಂ. ಕೃಷ್ಣ)

ನಾವು ಅಲ್ಲಿಗೆ ಹೋಗಿದ್ದು ಕಳೆದ ವರ್ಷ ಫೆಬ್ರವರಿ ಕೊನೆಯ ವಾರ. ಮಾರ್ಚ್ ಎರಡನೇ ವಾರ ಆಫೀಸಿನ ಶಾಲಾ ಕ್ಷೇತ್ರ ಭೇಟಿಯನ್ನು ಈ ಬಾರಿ ಮಧುರೆಗೆ ಇಟ್ಟುಕೊಳ್ಳುವುದು ಎಂದು ನಾನು ಹೇಮಾ ನಿರ್ಧರಿಸಿದ್ದೆವು. ಮಧುರೆಗೆ ಹೋಗಲೇಬೇಕೆಂದು ನನಗೆ ಬಲವಾಗಿ ಅನ್ನಿಸಿದ್ದಕ್ಕೆ ಎರಡು ಕಾರಣಗಳಿದ್ದವು. ಒಂದು ತಂಜಾವೂರು ಬಾನಿ ಎಂದು ಹೆಸರಾದ ತಂಜಾವೂರು ಮೃದಂಗ ತಯಾರಿಕಾ ಪರಂಪರೆಯನ್ನು ಪರಿಚಯಿಸಿದ ಸೆವಿಟ್ಟಿಯನ್ (ಸೆಬಾಸ್ಟಿಯನ್)ಗೆ ಮೃದಂಗ ತಯಾರಿಕೆಯನ್ನು ಕೈಗೆತ್ತಿಕೊಳ್ಳುವಂತೆ ಮನವೊಲಿಸಿದ್ದು ಮಧುರೆ ರತ್ನಂ. ಆವರೆಗೆ ಸೆವಿಟ್ಟಿಯನ್ ತವಿಲ್ ವಾದ್ಯವನ್ನು ತಯಾರು ಮಾಡುತ್ತಿದ್ದರು.

ಮಧುರೆ ರತ್ನಂ ಅವರ ಮೊಮ್ಮಗ ಜೆ.ಎಂ.ಎಸ್. ಬ್ರಿಟ್ಟೋ ಈಗಲೂ ತಮ್ಮ ತಾತನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಡೀ ಕೃತಿಯಲ್ಲಿ ಮೃದಂಗದ ಚರ್ಮ, ಕರಣೆ (ಸಾದಂ), ನಾದ ಇತ್ಯಾದಿ ವಿಚಾರಗಳ ಕುರಿತು ಬ್ರಿಟ್ಟೋ ಆಡುವ ಅನುಭವದ ಮಾತುಗಳು ನನ್ನನ್ನು ಬೆರಗುಗೊಳಿಸಿದೆ. ಕೃತಿಯನ್ನು ಅನುವಾದಿಸುತ್ತ, ಅಲ್ಲಿಯ ಎಲ್ಲ ಪಾತ್ರಗಳೊಡನೆ ಒಂದು ನಂಟು ಬೆಳೆಯುತ್ತದಲ್ಲ… ಹಾಗೆ ನನಗೂ ಅಪಾರ ತಿಳಿವಳಿಕೆಯ, ಅದ್ಭುತ ವ್ಯಕ್ತಿಯಾಗಿ ಕಾಣುವ ಬ್ರಿಟ್ಟೋ ಜೊತೆಗೊಂದು ನಂಟು ಬೆಳೆಯಿತು.

ಚರ್ಮವಾದ್ಯಗಳನ್ನು ತಯಾರಿಸುವ ಪ್ರಕ್ರಿಯೆಲ್ಲಿ ಸೂಕ್ಷ್ಮವಾಗಿ ಗಮನಿಸುವ ಮೂಲಕವೇ ಹಲವು ವಿಚಾರಗಳನ್ನು ಕಂಡುಕೊಂಡ ಬ್ರಿಟ್ಟೋ ಆಡುವ ಮಾತುಗಳು ಪ್ರತಿಸಲವೂ ನನ್ನನ್ನು ‘ಅರೆʼ ಎಂದು ಚಕ್ಕನೆ ಹಿಡಿದು ನಿಲ್ಲಿಸಿದೆ. ಹೀಗಾಗಿ ಬ್ರಿಟ್ಟೋ ಅವರನ್ನು ಒಮ್ಮೆ ಮುಖತಃ ಕಾಣಬೇಕೆಂದು ತೀವ್ರವಾಗಿ ಅನ್ನಿಸಿತ್ತು. ಮಾರ್ಚ್ ನಲ್ಲಿ ಕೋವಿಡ್ ಕಾರಣದಿಂದಾಗಿ ನಮ್ಮ ಕಛೇರಿಯ ಕ್ಷೇತ್ರ ಭೇಟಿಗಳಿಗೂ ತಿಲಾಂಜಲಿಯಿತ್ತು, ‘ಮನೆಯಿಂದ ಕೆಲಸ’ ಎಂಬ ನಾವೆಂದೂ ಊಹಿಸದ ರೀತಿಯ ಕೆಲಸ ಶುರುವಾಯಿತು. ಮಧುರೆಗೆ ಹೋಗುವ ಕನಸು ನನಸಾಗಲೇ ಇಲ್ಲ. ಆದರೆ ಮೃದಂಗದ ಹಲವು ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಟಿ.ಎಂ. ಕೃಷ್ಣ ಜೊತೆಗೆ ಬ್ರಿಟ್ಟೋ ನಮ್ಮನ್ನು ಕೈಹಿಡಿದು ಕರೆದೊಯ್ಯುವ ಕೆಲವು ಭಾಗಗಳನ್ನು ಇಲ್ಲಿ ನೀಡಿರುವೆ:

(ವಿ.ಸೂ.: ಈ ಮುಂದಿನ ಭಾಗದಲ್ಲಿ ‘ನಾನು/ನನಗೆ’ ಎಂದು ಬರುವುದನ್ನು ಟಿ.ಎಂ. ಕೃಷ್ಣ ಎಂದು ಓದಿಕೊಳ್ಳಬೇಕು)

*****

ಮೃದಂಗ ಕಲಾವಿದರು ಆಗೀಗ ಹೇಳುತ್ತಿರುತ್ತಾರೆ, ವಾದ್ಯಕ್ಕೆಂದೇ ವಿಶೇಷವಾಗಿ ಯಾವ ಪ್ರಾಣಿಯನ್ನೂ ಕೊಲ್ಲೋದಿಲ್ಲ ಅಂತ. ಔಟ್‌ಲುಕ್ ಪತ್ರಿಕೆಯ ಪತ್ರಕರ್ತರಾಗಿದ್ದ ಎಸ್. ಆನಂದ್ 2003ರಲ್ಲಿ ಹಿರಿಯ ಮೃದಂಗ ಕಲಾವಿದ ಶಿವರಾಮನ್ ಅವರ ಸಂದರ್ಶನವನ್ನು ಮಾಡಿದಾಗ, ಅವರು ಈ ಬಗ್ಗೆ ಹೇಳಿದ್ದು: ‘ಮೃದಂಗಗಳನ್ನು ಮಾಡೋದಕ್ಕೆ ಅಂತಲೇ ದನಗಳನ್ನು ಕೊಲ್ಲೋದಿಲ್ಲ. ಅವುಗಳನ್ನು ಹೇಗಿದ್ದರೂ ವಧಿಸುತ್ತಾರೆ, ನಾವು ಬರೀ ಚರ್ಮ ಮಾತ್ರ ಬಳಸ್ತೇವೆ.’

ಅದೇ ಲೇಖನದಲ್ಲಿ ಮೃದಂಗ ತಯಾರಕ ರಾಜಮಾಣಿಕ್ಕಂ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ, ‘ಈ ಜನರು ಎಂದಾದರೂ ನಾವೇನು ಮಾಡುತ್ತೇವೆ ಅಂತ ನೋಡಲಿಕ್ಕೆ ಕಸಾಯಿಖಾನೆಗೆ ಹೋಗಿದ್ದಾರಾ? ನಾವು ಹಸುಗಳನ್ನು ಪರೀಕ್ಷಿಸಿ, ಒಳ್ಳೆಯ, ಹೊಳೆಯುವ, ಮೃದುವಾದ ಚರ್ಮವಿರುವ ಆರೋಗ್ಯವಂತ ಹಸುವನ್ನೇ ಆರಿಸ್ತೇವೆ. ಹಸುವು ಕೊನೇ ಪಕ್ಷ ಒಂದೆರಡು ಕರುಗಳನ್ನಾದರೂ ಹಾಕಿರಬೇಕು, ಆದರೆ ಮುದಿ ಹಸು ಅಲ್ಲ.’ ಈ ಮಾತು ಎಮ್ಮೆ ಮತ್ತು ಮೇಕೆಗಳಿಗೂ ಅನ್ವಯಿಸುತ್ತದೆ.

ವಾದ್ಯಗಳನ್ನು ಮಾಡುವುದಕ್ಕೆ ಸತ್ತ ಪ್ರಾಣಿಯ ಚರ್ಮವನ್ನು ಯಾಕೆ ಉಪಯೋಗಿಸಲು ಆಗುವುದಿಲ್ಲ ಎನ್ನುವುದನ್ನು ಮಧುರೆಯ ಜಾನ್ ಬ್ರಿಟ್ಟೋ ವಿಶದವಾಗಿ ವಿವರಿಸುತ್ತಾರೆ. ‘ಪ್ರಾಣಿಯನ್ನು ವಧಿಸಿದಾಗ, ಅದರ ಕತ್ತಿನ ಬಳಿ ಕೊಯ್ಯತ್ತಾರೆ. ಇದರಿಂದ ರಕ್ತ ದೇಹದಿಂದ ಹೊರಗೆ ಹರಿದು ಹೋಗುತ್ತೆ, ಅಂದರೆ ಚರ್ಮದ ಕೆಳಗಿನ ನಾಳಗಳಿಂದ ರಕ್ತ ಬಸಿದು ಹೋಗುತ್ತೆ. ಇದು ಚರ್ಮಕ್ಕೆ ರಬ್ಬರಿನಂತೆ ಹಿಗ್ಗುವ ಗುಣ ಕೊಡುತ್ತೆ. ಪ್ರಾಣಿ ಸ್ವಾಭಾವಿಕವಾಗಿ ಸತ್ತರೆ, ಆಗ ರಕ್ತವು ದೇಹದೊಳಗೇ ಹೆಪ್ಪುಗಟ್ಟುತ್ತೆ. ಇದರಿಂದಾಗಿ ಚರ್ಮವು ಬಿರುಸಾಗಿ, ರಟ್ಟಿನ ಹಾಗೆ ಆಗುತ್ತೆ. ನಾವು ಅದನ್ನು ನೀರಿನಲ್ಲಿ ನೆನೆಸಿ, ಎಳೆಯಲು ಪ್ರಯತ್ನಿಸಿದ್ರೆ, ಚರ್ಮ ತುಂಡಾಗುತ್ತದೆ’.

*****

ಹಲವಾರು ತಯಾರಕರು ನನಗೆ ಹೇಳಿದಂತೆ, ಮೇಕೆಯು ವಾಸಿಸುವ ಪರಿಸರ ಮತ್ತು ಅದು ಏನು ತಿನ್ನುತ್ತದೆ ಎನ್ನುವುದು ಚರ್ಮದ ಗುಣಲಕ್ಷಣವನ್ನು ಗಾಢವಾಗಿ ಪ್ರಭಾವಿಸುತ್ತದೆ. ‘ಮಧುರೆ ಸುತ್ತಮುತ್ತ ಸಿಗುವ ಮೇಕೆಗಳ ಚರ್ಮದಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ, ಯಾಕಂದ್ರೆ ಮೇಕೆಗಳು ಸಿಹಿ ನೀರನ್ನು ಹೆಚ್ಚು ಕುಡೀತವೆ. ಮದ್ರಾಸಿನ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತೆ, ಮೇಕೆ ಆ ನೀರನ್ನು ಕುಡಿದ್ರೆ ಕೊಬ್ಬಿನ ಅಂಶ ಕಡಿಮೆಯಾಗುತ್ತೆ, ಜೊತೆಗೆ ಚರ್ಮ ತೆಳ್ಳಗೆ ಇರುತ್ತೆ’ ಎಂದು ಬ್ರಿಟ್ಟೋ ಹೇಳಿದ್ದರು. ತಯಾರಕರು ಮೇಕೆಯ ತೆಳ್ಳಗಿನ ಚರ್ಮವನ್ನು ಹುಡುಕುತ್ತಾರೆ.

*****

ಮೃದಂಗದ ಧ್ವನಿಗೆ ಈ ಅನ್ನ ಮತ್ತು ಕಿಟ್ಟಾಂಕಲ್ಲು ಮಿಶ್ರಣದ, ಕರಣೆಯು ತುಂಬಾ ಮುಖ್ಯವಾದದ್ದು. ಕರಣೆಯು ಚರ್ಮದ ಪದರದ ಮೇಲೆ ಒಂದು ಸಣ್ಣ ಭಾರವನ್ನು ಇಟ್ಟಂತೆ ವರ್ತಿಸುತ್ತದೆ. ಈ ಭಾರವೇ ಬಲ ಮುಚ್ಚಿಗೆಗೆ ಇಂಪಾದ ನಾದಹೊಮ್ಮಿಸುವ ಗುಣ ಕೊಡುವುದು. ಅದಿಲ್ಲದೆ, ಮೃದಂಗವನ್ನು ನಿಮಗೆ ಬೇಕಾದಂತೆ ಶ್ರುತಿ ಮಾಡುವುದಕ್ಕೆ ಸಾಧ್ಯವಿಲ್ಲ. ಮೃದಂಗದಲ್ಲಿ ನುಡಿಸುವ ಪ್ರತಿಯೊಂದು ಪೆಟ್ಟಿನಿಂದ ಹೊಮ್ಮುವ ಸ್ವರವೂ ಜೀವಾಳ ಬಿಲ್ಲೆಯ ಮೇಲಿನ ಈ ಕರಣೆಯ ಭಾರದ ಫಲ ಎನ್ನಬಹುದು. ಬಲಮುಚ್ಚಿಗೆಯ ಸಂಗೀತಾತ್ಮಕತೆಗೆ ನಿಸ್ಸಂಶಯವಾಗಿ ಕರಣೆಯನ್ನು ಹಚ್ಚುವ ವಿಧಾನವೇ ಪ್ರಧಾನ ಕಾರಣ.

ಕರಣೆಯು ಮೃದಂಗದ ಧ್ವನಿಗೆ ಒಂದು ಹೊಸ ನಾದಗುಣವನ್ನು ಕೊಡುತ್ತದೆ, ಏಕೆಂದರೆ ಕೇಂದ್ರಭಾಗದಲ್ಲಿರುವ ಕರಣೆಯಿಂದ ಹೊರಡುವ ನಾದ ಮತ್ತು ಜೀವಾಳ ಬಿಲ್ಲೆಯ (ಕೊಟ್ಟು ತಟ್ಟಿನ) ಅಂಚಿನಲ್ಲಿ, ಎರಡು ತಟ್ಟುಗಳು ಸಂಧಿಸುವಲ್ಲಿ ಮತ್ತು ಹೊರಸುತ್ತಿನಲ್ಲಿರುವ ವೃತ್ತಾಕಾರದ ಬಿಲ್ಲೆಯಲ್ಲಿ ಹೊರಡುವ ನಾದಗಳು ಭಿನ್ನವಾಗಿರುತ್ತವೆ. ಈ ಪ್ರತಿಯೊಂದೂ ವಾದ್ಯದ ಗುಣಲಕ್ಷಣವನ್ನು ವೃದ್ಧಿಸುತ್ತವೆ. ನಂತರ ಈ ವೈವಿಧ್ಯಮಯ ನಾದಗಳನ್ನು ಮೃದಂಗ ವಾದಕರು ಅಸಂಖ್ಯಾತ ಬಗೆಗಳಲ್ಲಿ ಜೋಡಣೆ ಮಾಡಬಲ್ಲರು. ಜೀವಾಳ ಬಿಲ್ಲೆಯ ಮೇಲೆ ಕರಣೆಯ ಭಾರ ಹೆಚ್ಚಾದಂತೆ ಮೃದಂಗದ ಬಲಮುಚ್ಚಿಗೆಯ ಶ್ರುತಿ ಕಡಿಮೆಯಾಗುತ್ತದೆ. ವಾರು ಪಿಡಿಯು ಚರ್ಮದ ಪದರವನ್ನು ತುಂಬಾ ಬಿಗಿಗೊಳಿಸುವುದರಿಂದ, ಕರಣೆ ಹಚ್ಚುವ ಮೊದಲು ಬಲ ಮುಚ್ಚಿಗೆಯ ಧ್ವನಿಯು ಹೆಚ್ಚಿನ ಶ್ರುತಿಯಲ್ಲಿರುತ್ತದೆ. ಹಾಡುತ್ತಿರುವ ಮಹಿಳೆ ಅಥವಾ ಪುರುಷರ ಶ್ರುತಿಗೆ ಹೊಂದುವ ಮಟ್ಟಕ್ಕೆ ಇದನ್ನು ಇಳಿಸಬೇಕಾಗುತ್ತದೆ.

ಚರ್ಮವಾದ್ಯಗಳನ್ನು ತಯಾರಿಸುವ ಪ್ರಕ್ರಿಯೆಲ್ಲಿ ಸೂಕ್ಷ್ಮವಾಗಿ ಗಮನಿಸುವ ಮೂಲಕವೇ ಹಲವು ವಿಚಾರಗಳನ್ನು ಕಂಡುಕೊಂಡ ಬ್ರಿಟ್ಟೋ ಆಡುವ ಮಾತುಗಳು ಪ್ರತಿಸಲವೂ ನನ್ನನ್ನು ‘ಅರೆʼ ಎಂದು ಚಕ್ಕನೆ ಹಿಡಿದು ನಿಲ್ಲಿಸಿದೆ. ಹೀಗಾಗಿ ಬ್ರಿಟ್ಟೋ ಅವರನ್ನು ಒಮ್ಮೆ ಮುಖತಃ ಕಾಣಬೇಕೆಂದು ತೀವ್ರವಾಗಿ ಅನ್ನಿಸಿತ್ತು.

ಕರಣೆಯ ಮೂಲಕ ಶಬ್ದವು ಹೇಗೆ ಅನುರಣನಗೊಳ್ಳುತ್ತದೆ ಎಂಬುದಕ್ಕೆ ಬ್ರಿಟ್ಟೋ ನನಗೆ ಈ ಸೊಗಸಾದ ವಿವರಣೆ ನೀಡಿದರು. ‘ಚರ್ಮದ ಮೇಲೆ ಸಾಕಷ್ಟು ರಂಧ್ರಗಳು, ರೋಮಗಳು ಇರುತ್ತವೆ. ನೀವು ರೋಮವನ್ನು ತೆಗೆದುಹಾಕಿದಾಗ, ಅಲ್ಲಿ ಬರೀ ರಂಧ್ರಗಳು ಉಳಿದಿರುತ್ತವೆ. ರೋಮವನ್ನು ತೆಗೆದ ಕಡೆ ಸೂಕ್ಷ್ಮ ತಗ್ಗು ಇರುತ್ತದೆಯಲ್ಲ, ಅಲ್ಲಿ ಕರಣೆಯ ಕಣಗಳು ಹೋಗಿ ಕೂರುತ್ತವೆ ಮತ್ತು ಕರಣೆಯಲ್ಲಿ ಬಿರುಕು ಬರುತ್ತೆ. ಅಂದರೆ ಕರಣೆಯು ರಂದ್ರಗಳಲ್ಲಿ ಕೂತಾಗ, ಬಿರುಕು ಉಂಟಾಗುತ್ತದೆಯಲ್ಲ, ಕಂಪನಗಳು ಈ ಬಿರುಕುಗಳ ಮೂಲಕ ಹಾದು ಬರುವಾಗ ನಾದ ಹುಟ್ಟುತ್ತೆ.’ ಅವರು ಬಿರುಕುಗಳು ಎಂದು ಹೇಳಿದ್ದನ್ನು ಕರಣೆಯ ಮೇಲ್ಮೈಯಲ್ಲಿ ನೋಡಬಹುದು, ಅದು ಬೇಸಿಗೆಯಲ್ಲಿ ಬಿರುಕುಬಿಟ್ಟ ಒಣಭೂಮಿಯಂತೆ ಕಾಣುತ್ತದೆ. ಕರಣೆಯಲ್ಲಿರುವ ಈ ಸಂದುಗಳು ಅಥವಾ ಬಿರುಕುಗಳ ಮೂಲಕ ಶಬ್ದವು ಹೊರಹೊಮ್ಮುತ್ತದೆ ಎನ್ನುವುದನ್ನು ಬ್ರಿಟ್ಟೋ ಸೂಚಿಸಿದ್ದರು.

ಸಿ. ವಿ. ರಾಮನ್ ‘ಮ್ಯುಸಿಕಲ್ ಡ್ರಮ್ಸ್ ವಿತ್ ಹಾರ್ಮೋನಿಕ್ ಓವರ್‌ಟೋನ್ಸ್’ ಎಂಬ ಲೇಖನವನ್ನು ಬರೆದಿದ್ದು, ಅದು 1920ರಲ್ಲಿ ನೇಚರ್ ನಿಯತಕಾಲಿಕದಲ್ಲಿ ಪ್ರಕಟಗೊಂಡಿತ್ತು. ಅದರಲ್ಲಿ ಅವರು ಕರಣೆಯ ಕುರಿತು ಹೀಗೆ ಹೇಳಿದ್ದಾರೆ: ‘ಕೇಂದ್ರಭಾಗದಲ್ಲಿರುವ ಭಾರವು ಕಂಪನಗಳ ಶಕ್ತಿಯನ್ನು ಹೆಚ್ಚಿಸುವ ಮೂಲಕ, ನಾದದ ಅವಧಿಯನ್ನು ಲಂಬಿಸಿ, ಸಂಗೀತಾತ್ಮಕ ಪರಿಣಾಮವನ್ನು ಉತ್ತಮಪಡಿಸುತ್ತದೆ.’ ಹೀಗೆ ನಾದವು ಕರಣೆಯಲ್ಲಿರುವ ಬಿರುಕು ಅಥವಾ ಸಂದುಗಳ ಮೂಲಕ ಹೊರಹೊಮ್ಮುತ್ತದೆ ಎಂದು ಬ್ರಿಟ್ಟೋ ತಮ್ಮ ಅನುಭವದಿಂದಲೇ ಮನಗಂಡಿದ್ದಾರೆ.

*****

ಅತ್ಯುತ್ತಮ ಕಟ್ಟೆ ತಯಾರಿಸಬೇಕೆಂದರೆ ಹಲಸಿನ ಮರಕ್ಕೆ ಕನಿಷ್ಠ 50 ವರ್ಷವಾಗಿರಬೇಕು, ಅಗಲವಾಗಿರಬೇಕು ಮತ್ತು ತುಂಬ ಎತ್ತರವೂ ಆಗಿರಬಾರದು. ಆದರೆ ಇಷ್ಟೇ ಎಲ್ಲವೂ ಅಲ್ಲ. ಮರಗೆತ್ತನೆಯವರ ಪ್ರಕಾರ ಕಾಂಡದಲ್ಲಿ ಏನಾದರೂ ಕಲೆ, ಗಂಟು ಅಥವಾ ಗೆಣ್ಣು ಇರಬಾರದು. ಈ ಪ್ರತಿಯೊಂದೂ ಅಂಶವನ್ನು ಪೂರೈಸುವ ಮರವನ್ನು ಹುಡುಕುವುದು ಅಸಾಧ್ಯವೇ ಸರಿ, ಆದರೂ ಅವರು ಹುಡುಕುತ್ತಲೇ ಇರುತ್ತಾರೆ.

ಈ ಸ್ವಾಭಾವಿಕ ಲಕ್ಷಣಗಳು ಯಾಕೆ ಮರದ ಗುಣವನ್ನು ಕುಂದಿಸುತ್ತದೆ ಎನ್ನುವುದಕ್ಕೆ ಹಲವಾರು ವಿವರಣೆಗಳಿವೆ. ಬ್ರಿಟ್ಟೋ ಕೊಡುವ ಒಂದು ವಿವರಣೆ ಹೀಗಿದೆ: ‘ಮರದ ತುಂಡಿನಲ್ಲಿ ಸುಳಿಗಳಿದ್ದರೆ, ಅದರಿಂದ ರಾತ್ರಿ ಹೊಡೆಯೋ ಅಲಾರಂ ಸದ್ದಿನ ಹಾಗೆ ಧ್ವನಿ ಬರುತ್ತದೆ, ಹಗಲು ಕೇಳುವ ಅಲಾರಂ ಸದ್ದಿನಂತೆ ಅಲ್ಲ ಅಂತ ಅವರು ಹೇಳ್ತಾರೆ. ಗೆಣ್ಣು ಇದ್ದರೆ, ಆಚಾರಿಗಳು ಅದನ್ನು ಮರೆಮಾಚಿ, ನಿಮಗೆ ಕೊಡಬಹುದು. ಆದರೆ ಸ್ವಲ್ಪ ದಿನ ಆದಮೇಲೆ ಆ ಭಾಗ ಮೇಲೆದ್ದು ಬರುತ್ತೆ. ಇನ್ನು ಬಿರುಕು ಇರಲೇ ಬಾರದು. ರಂಧ್ರಗಳಿದ್ರೆ, ಕೀಟಗಳು ಒಳಗೆ ಸೇರಿಕೊಳ್ಳುತ್ತವೆ.’

ಬ್ರಿಟ್ಟೋ ಪ್ರಕಾರ, ಪರಿಪೂರ್ಣ ಮರದ ತುಂಡು ಸಿಗಬಹುದಾದ ಭಾಗ ಎಂದರೆ ಪ್ರಧಾನ ಕಾಂಡ, ಹಾಗೆಂದು ತೀರಾ ಬೇರಿನ ಸಮೀಪವೂ ಅಲ್ಲ. ಈ ಭಾಗ ಅತಿ ಹೆಚ್ಚು ಸಂಖ್ಯೆಯ ಮರದ ಬೆಳವಣಿಗೆ ಉಂಗುರಗಳನ್ನು ಹೊಂದಿರುತ್ತದೆ, ಜೊತೆಗೆ ಹೆಚ್ಚು ಗಂಟುಗಳಿರೋದಿಲ್ಲ. ಮಣಿ ಅಯ್ಯರ್‌ಗೆ ಕಟ್ಟೆಯಲ್ಲಿ ಒಂದೇ ಒಂದು ಗೆಣ್ಣು ಇದ್ದರೂ ಇಷ್ಟವಾಗುತ್ತಿರಲಿಲ್ಲ; ಅದು ಪರಿಪೂರ್ಣ ಶುದ್ಧವಾಗಿರಬೇಕು. ಮರದ ತೊಗಟೆಯ ಬಣ್ಣ ಬಿಳಿಯಾಗಿರುವುದನ್ನೂ ಅವರು ಇಷ್ಟಪಡುತ್ತಿದ್ದರು. ಪ್ರತಿಯೊಂದೂ ದೋಷರಹಿತ, ಕಲೆರಹಿತವಾಗಿರಬೇಕು.

*****

ಮಧುರೆಯಲ್ಲಿ ಕಿರಿದಾದ ಓಣಿಯಲ್ಲಿರುವ ಮೃದಂಗ ತಯಾರಕ ಬ್ರಿಟ್ಟೋ ಜಿಂಕೆ ಮತ್ತು ಹುಲಿ ಚರ್ಮದ ವ್ಯವಹಾರ ಮಾಡುತ್ತಾನೆಂಬ ಅನುಮಾನದಲ್ಲಿ ಅಧಿಕಾರಿಗಳು ಆತನ ಅಂಗಡಿ ಮೇಲೆ ಹಲವು ಬಾರಿ ದಾಳಿ ನಡೆಸಿದ್ದಾರೆ. ‘ನನ್ನ ಕಂಡರೆ ಆಗದೇ ಇರೋ ಜನರು ಹೋಗಿ ಆ ಥರಾ ದೂರು ಕೊಟ್ಟಿದ್ದರಿಂದ ಸಮಸ್ಯೆಯಾಯಿತು. ನನ್ನ ಅಂಗಡಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಜಿಂಕೆ ಮತ್ತು ಹುಲಿ ಚರ್ಮವನ್ನು ಕಳ್ಳಸಾಗಣೆ ಮಾಡ್ತೀಯ ಅಂತ ಆರೋಪಿಸಿದರು. ನನ್ನ ಹತ್ರ ಇರೋ ಚರ್ಮ ಎಲ್ಲವನ್ನು ತೋರಿಸಿದೆ. ಇಲ್ಲಿ ಮತ್ತು ನನ್ನ ಮನೇಲಿರೋ ಎಲ್ಲ ವಸ್ತುಗಳಿದ್ದು ವಿಡಿಯೋ ಮಾಡ್ಕಂಡು ಹೋಗಿ ಅಂದೆ. ಮನೆಗೆ ಪೊಲೀಸ್ ಅಧಿಕಾರಿಗಳು ಬಂದಿದ್ದು ನೋಡಿ ನನ್ನ ಹೆಂಡತಿಯೂ ಭಯಪಟ್ಟಳು. ನಾನು ನೆನೆಸಿಟ್ಟಿದ್ದ ಚರ್ಮವನ್ನೂ ತೋರಿಸಿದೆ. ಅಧಿಕಾರಿಗಳಿಗೆ ಆ ವಾಸನೆ ತಡೆಯಕ್ಕೆ ಆಗಲಿಲ್ಲ, ಅವರು ಅಲ್ಲೇ ನಿಂತು ಸಿಗರೇಟು ಸೇದುತ್ತ, ಈ ವಾಸನೆಯಿಂದ ತಪ್ಪಿಸಿಕೊಳ್ಳಲು ನೋಡಿದ್ರು. ಇಂತಹ ಸ್ಥಿತಿಯಲ್ಲಿ ಹೆಂಗೆ ಕೆಲಸ ಮಾಡ್ತೀಯಪ್ಪ ಅಂತ ಕೇಳಿದ್ರು. ನನಗೆ ರೂಢಿಯಾಗಿದೆ ಎಂದೆ. ನನಗೆ ಬಂದ ಪ್ರಶಸ್ತಿಗಳು, ಪತ್ರಿಕೆಯಲ್ಲಿ ನನ್ನ ಬಗ್ಗೆ ಬಂದ ಲೇಖನ, ಇವನ್ನೆಲ್ಲ ಅಂಗಡಿಯಲ್ಲಿ ಪ್ರದರ್ಶಿಸುವಂತೆ ಒತ್ತಾಯಿಸಿದ್ದೇ ಅವರು. ಒಮ್ಮೆ ದಿ ಹಿಂದೂ ಪತ್ರಿಕೆಯು ಮಧುರೆ ಯಾವುದಕ್ಕೆಲ್ಲ ಪ್ರಸಿದ್ಧವಿದೆ ಎಂದು ಒಂದು ಲೇಖನ ಪ್ರಕಟಿಸಿತ್ತು. ಅದರಲ್ಲಿ ಮಲ್ಲಿಗೆ ಹೂ ಮತ್ತು ಜಲ್ಲಿಕಟ್ಟು ಜೊತೆಗೆ, ನನ್ನ ಅಂಗಡಿಯನ್ನು ಒಂದು ಪ್ರಮುಖ ಸ್ಥಳವಾಗಿ ಗುರುತಿಸಿತ್ತು.

ನನಗೊಂದು ಪ್ರಮಾಣಪತ್ರ ಕೊಡಿ ಅಂತ ತಮಿಳುನಾಡು ಸಂಸ್ಕೃತಿ ಇಲಾಖೆಯವರಿಗೆ ಹೇಳಿದೆ, ಯಾಕಂದ್ರೆ ನಾನು ಆಗಾಗ ಇಂತಹ ದಾಳಿಗಳಿಗೆ ಗುರಿಯಾಗ್ತಿದ್ದೆ. ಅವರು ಪೊಲೀಸ್ ಠಾಣೆಗೆ ಹೋಗಿ ಕೇಳು, ಕೊಡ್ತಾರೆ ಅಂದ್ರು. ಪೊಲೀಸರಿಗೆ ಈ ಕಲೆ ಬಗ್ಗೆ ಏನು ಗೊತ್ತಿರುತ್ತೆ? ನಾನೇನು ಮಾಡ್ತಿದ್ದೀನಿ ಅಂತ ನಿಮಗೆ ಚೆನ್ನಾಗಿ ಗೊತ್ತು. ನೀವು ಪರಿಶೀಲನೆ ಮಾಡಿ, ನನ್ನ ಅಂಗಡಿಗೊಂದು ಪ್ರಮಾಣಪತ್ರ ಕೊಟ್ಟರೆ ಅದು ಉಪಯೋಗಕ್ಕೆ ಬರುತ್ತೆ. ಕೆಲವು ಸಲ ನನ್ನ ಚರ್ಮದ ವಹಿವಾಟು ನಿಲ್ಲಿಸಬೇಕಾಗುತ್ತೆ. ಅವರು ತಪಾಸಣೆಗೆ ಅಂತ ಚರ್ಮ ತೆಗೆದುಕೊಂಡು ಹೋಗ್ತಾರೆ. ತಪಾಸಣೆ ಮಾಡಿದ ಮೇಲೆ ವಾಪಸು ಕೊಡ್ತಾರೆ ನಿಜ, ಆದರೆ ಸುಮ್ಮನೆ ಎಲ್ಲ ರಗಳೆ. ನೀವು ಪ್ರಮಾಣಪತ್ರ ಕೊಟ್ಟರೆ ಸಹಾಯವಾಗುತ್ತೆ ಅಂತ ನಾನು ಅವರಿಗೆ ವಿವರಿಸಿದೆ. ಅವರು ನನ್ನ ಕೋರಿಕೆಯನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳಲಿಲ್ಲ. ಬರೀ ಕಲಾವಿದರಿಗೆ ಮಾತ್ರ ಗೌರವ ಕೊಡ್ತಾರೆ ಅಲ್ಲಿ. ನಾವು (ಮೃದಂಗ ತಯಾರಕರು) ಸದಸ್ಯತ್ವ ಕಾರ್ಡಿಗೂ ಅರ್ಹತೆಯಿಲ್ಲದವರು, ಅದು ಕೇವಲ ಕಲಾವಿದರಿಗೆಂದೇ ಇರೋದು ಅಂತನೂ ಹೇಳಿದ್ರು. ನಮ್ಮ ತಂದೆಗೆ ಅರವತ್ತು ವರ್ಷವಾದಾಗ, ನಾವು ಸಂಸ್ಕೃತಿ ಇಲಾಖೆಯ ಮೂಲಕ ಪಿಂಚಣಿಗೆ ಅರ್ಜಿ ಹಾಕಿದ್ವಿ. ಆದರೆ ತಯಾರಕರು ಇದಕ್ಕೆ ಅರ್ಹರಲ್ಲ ಅಂತ ತಿರಸ್ಕರಿಸಿದ್ರು.’
ಇದು ಇಂದು ಬ್ರಿಟ್ಟೋ ಎದುರಿಸುತ್ತಿರುವ ಸ್ಥಿತಿ.

*****

ಈ ಸಂಕೀರ್ಣ ಸಾಮಾಜಿಕ ಮತ್ತು ಕಲಾನುಭವದ ಸಂದರ್ಭದಲ್ಲಿ, ಧ್ವನಿಯು ನಿಜಕ್ಕೂ ಎಲ್ಲಿಂದ ಟಿಸಿಲೊಡೆಯುತ್ತದೆ ಎಂಬ ಪ್ರಶ್ನೆಯು ಗ್ರಹಿಕೆಗೆ ನಿಲುಕದೇ ಉಳಿಯುತ್ತದೆ. ಬ್ರಿಟ್ಟೊ ಒಂದು ವಿವರಣೆ ಕೊಡುತ್ತಾರೆ: ‘ಮೃದಂಗದಿಂದ ಹೊಮ್ಮುವ ಉತ್ತಮ ನಾದಕ್ಕೆ ಮೂರು ಭಾಗಗಳಿವೆ; ಕೈ ನಾದ, ವಾದಕರ ಕೈಗಳಲ್ಲಿರುವುದು; ತೋಲ್ ನಾದ, ಅಂದರೆ ಚರ್ಮದಿಂದ ಹೊಮ್ಮುವುದು; ಮರ ನಾದ ಅಂದರೆ ಮರ ಅಥವಾ ಕಟ್ಟೆಯಿಂದ ಹೊಮ್ಮುವುದು. ಒಳ್ಳೆಯ ಸಂಗೀತಕ್ಕೆ ಈ ಮೂರೂ ಒಂದುಗೂಡಿ ಬೆರೆತು ಹೊಮ್ಮಬೇಕು.’ ಎಲ್ಲರಂತೆಯೇ, ಬ್ರಿಟ್ಟೋ ಕೂಡ ಇಲ್ಲಿ ತಯಾರಕರನ್ನು ಮರೆತೇ ಬಿಟ್ಟಿದ್ದಾರೆ.

ಹಾಗಾದರೆ ಧ್ವನಿಯ ಮೂಲ ಯಾರು? ಈ ಸಂಗೀತ ಸಂಯೋಜನೆಯಲ್ಲಿ ಸತ್ತಿದ್ದು ಮತ್ತು ಸಜೀವವಿರುವುದು ಹೇಗೆ ಒಂದಾಗಿ ಬೆರೆತು ಹೊರಹೊಮ್ಮುತ್ತವೆ? ಹಸು, ಮೇಕೆ ಮತ್ತು ಎಮ್ಮೆ ಚರ್ಮಗಳು ಪರಸ್ಪರರನ್ನು ಆಲಿಸುತ್ತ, ಪರಸ್ಪರರ ಚಲನೆಗಳಿಗೆ ಪ್ರತಿಸ್ಪಂದಿಸುತ್ತ, ತಾಗುತ್ತ, ಜೊತೆಗೂಡುತ್ತ ನಡೆದಂತೆ ಸಂಗೀತ ಜರುಗುತ್ತದೆ. ಹಾಗಿದ್ದರೆ ಧ್ವನಿಯನ್ನು ಯಾರು ಸೃಷ್ಟಿಸಿದರು? ನನಗೆ ಗೊತ್ತಿಲ್ಲ. ಚರ್ಮದ ಧ್ವನಿಯ ಮೂಲಕ ಪ್ರಾಣಿಯು ಮತ್ತೆ ಸಜೀವವಾಗುತ್ತದೆ ಎಂದು ಪ್ರಾಯಶಃ ರವಿಕುಮಾರ್ ಸರಿಯಾಗಿ ಹೇಳಿದ್ದಾರೆ; ಬಹುಶಃ ಧ್ವನಿಯು ತನ್ನಷ್ಟಕ್ಕೇ ಒಂದು ಸಜೀವಿ.