ಹಿರಿಯುರ `ರಾತ್ರಿ ಎಷ್ಟು ಹೊತ್ತಾದರೂ ಮಲಗದ, ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ’ ತಮ್ಮ ಸಂತಾನಗಳ ಮನಸ್ಸಿನ ಹಾಗೂ ಬದುಕಿನ ಮರ್ಮವೇನು ಎಂಬುದನ್ನು ಅರಿಯಲು ಮೊದಲು ತಾವೇ ಒಂದು ಹೆಜ್ಜೆ ಮುಂದೆ ಇಡಬೇಕಿದೆ. ಜಗತ್ತೇ ಒಂದು ಹಳ್ಳಿಯಾದ ಅಂತರ್ಜಾಲದ ಯುಗದಲ್ಲಿ, ಹಳ್ಳಿಯೇ ತಮ್ಮ ಜಗತ್ತಾಗಿದ್ದ ಪೀಳಿಗೆಗೆ ಮತ್ತು ಅವರ ಮಕ್ಕಳಿಗೆ ಈ ಹೆಜ್ಜೆಯು ಒಂದು ಸವಾಲು. ಆದರೆ, ವಿಧಿ ಇಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮಿಂದ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ದೂರ ಆಗಬಾರದು ಎಂದರೆ ಅವರ ಬದುಕಿನ ಲಯಗಳನ್ನು ಅರಿಯಲು ಹಿರಿಯ ಪೀಳಿಗೆಯವರು ಪ್ರಯತ್ನ ಮಾಡಲೇಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೆಂಟನೆಯ ಬರಹ
“ರಾತ್ರಿ ಎಷ್ಟ್ ಹೊತ್ತಾದ್ರೂ ಮಲಗಲ್ಲ, ಬೆಳಿಗ್ಗೆ ಎಷ್ಟ್ ಹೊತ್ತಾದ್ರೂ ಏಳಲ್ಲ”
ನನ್ನ ಪೀಳಿಗೆಯ ಅಂದರೆ ಈಗ 50-60 ವಯಸ್ಸಾಗಿರುವವರು ಮತ್ತು ಇನ್ನೂ ಹೆಚ್ಚು ವಯಸ್ಸಿನವರೂ ಸಹ ಇಂದಿನ ಯುವಕ ಯುವತಿಯರು ಮತ್ತು ಹದಿಹರೆಯದವರ ಬಗ್ಗೆ ಆಗಾಗ ದೂರುವ ಮಾತಿದು. ತಡರಾತ್ರಿಯವರೆಗೂ ತಮ್ಮ ಚಲನವಾಣಿಯಲ್ಲೊ, ಗಣಕಯಂತ್ರದಲ್ಲೊ, ಟ್ಯಾಬ್ ಮುಂತಾದ ನೂತನ ಸಲಕರಣೆಗಳಲ್ಲೊ, ಅಥವಾ ತಡರಾತ್ರಿಯ ತನಕದ ಸಮಕಾಲೀನ ಮನರಂಜನೆ-ಓಡಾಟಗಳಲ್ಲೊ ತಮ್ಮನ್ನು ತಾವು ಹುದುಗಿಸಿಕೊಂಡಿರುವ ಯುವಪೀಳಿಗೆಯವರಲ್ಲಿ ಬಹುಪಾಲು ಮಂದಿ ಮಲಗುವುದು ಮಧ್ಯರಾತ್ರಿಯ ನಂತರವೇ. ಹೀಗಾಗಿ ಬೆಳಿಗ್ಗೆ ಬೇಗ ಏಳುವುದು ಸಹ ಅವರಿಗೆ ತುಂಬ ಕಷ್ಟಕರವಾದ ಸಂಗತಿಯಾಗುತ್ತದೆ. ಅದರಲ್ಲೂ ವಾರಾಂತ್ಯವಾದ ಶನಿವಾರ-ಭಾನುವಾರಗಳಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ.
ಈ ಮೇಲ್ಪದರದ ವಿಷಯವನ್ನು ನಾವು ತುಸು ಹೆರೆದು, ಸಿಪ್ಪೆ ತೆಗೆದು ಇದರ ತಿರುಳೇನೆಂದು ನೋಡಿದರೆ ಇದು ಕೇವಲ ನಿದ್ರಿಸುವ ಮತ್ತು ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ಸಮಯದ ವಿಷಯ ಅಲ್ಲ, ಬದಲಾದ ಜೀವನಶೈಲಿಯನ್ನು ಕುರಿತಾದ ತುಂಬ ಆಳವಾದ ಸಂಗತಿ ಎಂದು ನಮಗೆ ಅರ್ಥವಾಗುತ್ತದೆ.
*****
ಯುವಪೀಳಿಗೆಯ ಕಣ್ಣುಗಳಿಂದ ಬದುಕನ್ನು ನೋಡುವ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ನಮಗೆ ಕಳೆದ ಸುಮಾರು 30-35 ವರ್ಷಗಳಲ್ಲಿ ಅಂದರೆ ಜಾಗತೀಕರಣದ ಅನಂತರ ಭಾರತ ಹಾಗೂ ಇಡೀ ಜಗತ್ತು ದೊಡ್ಡ ಪ್ರಮಾಣದಲ್ಲಿ ಬದಲಾದ ಬಗೆಯು ನಮ್ಮ ಮನಸ್ಸಿಗೆ ಬರುತ್ತದೆ. ಮನುಕುಲದ ನಾಗರಿಕತೆಯ ಹಂತಗಳನ್ನು ಯುಗಗಳಲ್ಲಿ ಗುರುತಿಸುವುದಾದರೆ ಗುಹಾವಾಸಯುಗ, ಕೃಷಿಯುಗ, ಕೈಗಾರಿಕಾಯುಗಗಳ ನಂತರ ಇದು ಮಾಹಿತಿ ತಂತ್ರಜ್ಞಾನದ ಯುಗ. ಮಹಾ ಬದಲಾವಣೆಯೊಂದು ಇವತ್ತು ಮಧ್ಯವಯಸ್ಸು ಮೀರಿದ ಪೀಳಿಗೆಯ ಕಣ್ಣೆದುರಿಗೇ ಸಂಭವಿಸಿದೆ!
ವಿದ್ಯುಚ್ಛಕ್ತಿಯು ಸುಮಾರು 300 ವರ್ಷಗಳ ಹಿಂದೆ(1700ರ ಸುಮಾರಿಗೆ) ಕಂಡುಹಿಡಿಯಲ್ಪಟ್ಟಿತು. ಆವರೆಗೆ ಅಂದರೆ ಮನುಕುಲದ ಕೃಷಿಯುಗದಲ್ಲಿ ಮಾನವ ಸಮುದಾಯಗಳ ಜೀವನವು ಬಹುಮಟ್ಟಿಗೆ ಪ್ರಕೃತಿಯ ವಿನ್ಯಾಸಗಳಿಗನುಗುಣವಾಗಿಯೇ ನಡೆಯುತ್ತಿತ್ತು. ಸೂರ್ಯನಿದ್ದಾಗ ಮಾತ್ರ ಚಟುವಟಿಕೆ. ಏಳುವುದು ಮಲಗುವುದು ಎಂಬ ಈ ಮುಖ್ಯ ದೈನಿಕಗಳು ಸೂರ್ಯೋದಯ ಸೂರ್ಯಾಸ್ತಗಳೊಂದಿಗೇ ಜರುಗಬೇಕಿತ್ತು. ಮುಂದೆ, ಕಾಲ ಸರಿದಂತೆ, ವಿದ್ಯುಚ್ಛಕ್ತಿಯ ಬೆಂಬಲ ಇದ್ದಂತಹ ಕೈಗಾರಿಕಾ ಯುಗಕ್ಕೆ ಬಂದರೆ ಉತ್ಪಾದನೆಯನ್ನು ಹೆಚ್ಚು ಮಾಡಲು ರಾತ್ರಿಪಾಳಿಯ ಕೆಲಸದ ಸಂಸ್ಕೃತಿ ಪ್ರಾರಂಭ ಆಯಿತು. ಹೀಗಾಗಿ ನಮ್ಮ ಒಟ್ಟು ಜನಸಂಖ್ಯೆಯಲ್ಲಿ ಕೈಗಾರಿಕೆಗಳಲ್ಲಿ, ಹಾಗೆಯೇ ಆಸ್ಪತ್ರೆಗಳಲ್ಲಿ, ಹವಾಮಾನ ಇಲಾಖೆಯಲ್ಲಿ ರಾತ್ರಿಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದ ಸಮುದಾಯದವರು, ಸೂರ್ಯನ ಸಮಯಕ್ಕೆ ವಿರುದ್ಧ ಸಮಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಗಮನಿಸಬೇಕಾದ ವಿಷಯ ಅಂದರೆ ಅವರು ರಾತ್ರಿಪಾಳಿಯಲ್ಲಿ ಕೆಲಸ ಮಾಡಿದರೂ ಸಹ ಅವರವರ ದೇಶದ ಸಮಯ ವಲಯ(ಟೈಂ ಝೋನ್)ಗಳಲ್ಲೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರಿಗೂ ಬದುಕಿನ ಲಯಗಳಿಗೂ – ವಾರದಲ್ಲಿ ಕೆಲವು ದಿನಗಳ ನಿದ್ರೆಯ ಸಮಯವನ್ನು ಬಿಟ್ಟರೆ – ತಾಳ ತಪ್ಪಿ ಹೋಗಿರಲಿಲ್ಲ. ಜೊತೆಗೆ, ಹೆಂಗಸರು ಈಗಿನಷ್ಟು ಸಂಖ್ಯೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಇದನ್ನೇ ಬೇರೆ ಪದಗಳಲ್ಲಿ ಹೇಳುವುದಾದರೆ ನಮ್ಮ ಸ್ಥಳೀಯ ಜೀವನಕ್ರಮದ ಬೇರುಗಳು ಅಲ್ಲಾಡಿರಲಿಲ್ಲ.
ಆದರೆ ಮನುಕುಲದ ಮುಂದಿನ ಯುಗವಾದ ಮಾಹಿತಿ ತಂತ್ರಜ್ಞಾನಯುಗಕ್ಕೆ ಬಂದಾಗ ಈ ಸನ್ನಿವೇಶವು ಬದಲಾಯಿತು. ಒಂದು ದೇಶದವರು ಇನ್ನೊಂದು ದೇಶದವರ ಸಮಯದ ವಲಯಕ್ಕೆ ತಕ್ಕಂತೆ ಕೆಲಸ ಮಾಡಲಾರಂಭಿಸಿದಾಗ ಜೀವನಶೈಲಿಗಳಲ್ಲಿ ಮಹತ್ತರ ಬದಲಾವಣೆಗಳಾದವು.
ಬಿಪಿಓ ಕೆಲಸಗಳ ಯುಗ:
`ಬಿಸಿನೆಸ್ ಪ್ರೋಸೆಸ್ ಔಟ್‌ಸೋರ್ಸಿಂಗ್’ ಅಂದರೆ ವ್ಯವಹಾರದ ಪ್ರಕ್ರಿಯೆಗಳ ಹೊರಗುತ್ತಿಗೆ – ಇದು ಜಾಗತೀಕರಣದ ಸಮಯದಲ್ಲಿ ಅಂದರೆ 1990-91ರಲ್ಲಿ ಬಹುವಾಗಿ ಕಂಡುಬಂದಿತು. ಇದು ನಮ್ಮಂತಹ ಆಗಿನ `ಮೂರನೇ ಜಗತ್ತಿನ’ ದೇಶಗಳ ಉದ್ಯೋಗ ವಲಯದಲ್ಲಿ ಆದ ಬಹು ದೊಡ್ಡ ಬದಲಾವಣೆ ಅನ್ನಬಹುದು. ರಾಷ್ಟ್ರೀಯ ಮಾನವ ಸಂಪನ್ಮೂಲ ಎಂದು ನಾವು ಕರೆಯುವ ನಮ್ಮ ಯುವಕ ಯುವತಿಯರು ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ಬೇರೆ ದೇಶಗಳ ಸಮಯವಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದು ಆಗಲೇ. ಎಲ್ಲರೂ ಮಲಗಿರುವ ಹೊತ್ತಿನಲ್ಲಿ ಎದ್ದು ಕಛೇರಿಗೆ ಹೋಗುವುದು ಮಾತ್ರ ಅಲ್ಲ, ತಮ್ಮ ಭಾಷಾ ಉಚ್ಚಾರ(ಆಕ್ಸೆಂಟ್) ಅಷ್ಟೇ ಏಕೆ ತಮ್ಮ ಹೆಸರನ್ನು ಸಹ ಈ ಯುವಕ ಯುವತಿಯರು ಬದಲಾಯಿಸಿಕೊಂಡರು! ಹರೀಶ್ ಹ್ಯಾರಿಯಾದ, ಜಾಹ್ನವಿ ಜೆನ್ನಿಯಾದಳು. ತಮ್ಮೊಂದಿಗೆ ವ್ಯವಹರಿಸುವ ವಿದೇಶಿ ಗ್ರಾಹಕರ ಜೊತೆ ವ್ಯವಹರಿಸುವಾಗ ಅವರಿಗೆ ತಾವು ಭಾತರದವರೊಂದಿಗೆ ಮಾತಾಡುತ್ತಿದ್ದೇವೆ ಎಂಬುದು ಗೊತ್ತಾಗಬಾರದು; ತಮ್ಮದೇ ದೇಶದವರೊಂದಿಗೆ ಮಾತಾಡುತ್ತಿದ್ದೇವೆ ಎಂಬ ಭಾವನೆ ಬರಬೇಕು ಎಂಬುದಕ್ಕಾಗಿ ಇಷ್ಟು ಸಾಹಸ! ಗೊಲ್ಲಹಳ್ಳಿ ಶಿವಪ್ರಸಾದ್‌ರು ಬರೆದ `ಝಣಝಣ ಕಾಂಚಣದಲ್ಲಿ ಅಮೆರಿಕಾದ ಲಾಂಛನದಲ್ಲಿ ಎಲ್ಲ ಮಾಯ … ನಾಳೆ ನಾವು ಮಾಯ’ ಕವಿತೆ ನೆನಪಾಗುತ್ತದೆ.
ಬದಲಾಯಿತು ಯುವಪೀಳಿಗೆಯ ಜೀವನಶೈಲಿ:
ಎಷ್ಟೆಷ್ಟು ಹೊತ್ತಿಗೋ ಮನೆಯಿಂದ ಹೊರಡುವುದು, ಎಷ್ಟೆಷ್ಟು ಹೊತ್ತಿಗೋ ಬರುವುದು, ಎಲ್ಲರೂ ಎದ್ದಿದ್ದಾಗ ತಾವು ಮಲಗಿರುವುದು, ಎಲ್ಲರೂ ಮಲಗಿದ್ದಾಗ ತಾವು ಎದ್ದಿರುವುದು, ಇದರಿಂದಾಗಿ ಮನೆಯಲ್ಲಿನ ಊಟ-ತಿಂಡಿಗಳನ್ನು ತಿನ್ನುವ ಪ್ರಮೇಯವಿಲ್ಲದೆ ಕಛೇರಿಯ ಉಪಾಹಾರಗೃಹದಲ್ಲೋ, ಅಥವಾ, ಅಣಬೆಗಳಂತೆ ಎಲ್ಲೆಲ್ಲೂ ಹುಟ್ಟಿಕೊಳ್ಳುತ್ತಿದ್ದ ಮ್ಯಾಕ್ ಡೊನಾಲ್ಡ್ಸ್‌ಗಳಲ್ಲೋ, ಪಿಜ್ಙಾ ಹಟ್‌ಗಳಲ್ಲೋ ತಿನ್ನುವುದು ….. ನಮ್ಮ ಯುವಕ-ಯುವತಿಯರ ಹೆಸರು ಮಾತ್ರ ಬದಲಾದದ್ದಲ್ಲ, ಅವರ ಊಟ-ಉಡುಪು-ಮನರಂಜನೆಗಳ ಅಭಿರುಚಿ ಸಹ ಬದಲಾಯಿತು. ಹಬ್ಬ-ಹರಿದಿನಗಳಿಗೂ ರಜೆ ಸಿಗದಂತಹ ಪರಿಸ್ಥಿತಿ ಇದ್ದದ್ದರಿಂದ ಮನೆಯ ಆಚರಣೆ, ರೀತಿ-ರಿವಾಜುಗಳ ಪರಿಚಯವು ಸಹ ತಪ್ಪಲಾರಂಭಿಸಿತು. 1990ರ ಮುಂಚೆ ಅಂದರೆ ಜಾಗತೀಕರಣದ ಮುಂಚೆ ಪ್ರತಿಭಾ ಪಲಾಯನ ಅನ್ನುವುದು ಭೌತಿಕವಾಗಿ ಆಗುತ್ತಿದ್ದರೆ 1990ರ ನಂತರ ಪ್ರತಿಭಾ ಪಲಾಯನ ಅನ್ನುವುದು ಇಲ್ಲಿದ್ದೇ ಆಗಲು ಅಂದರೆ ಮಾನಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶುರುವಾಯಿತು! (ಅಮ್ಮಾ ನಾ ಸೇಲಾದೆ, ಅಮೆರಿಕಾ ಪಾಲಾದೆ ಎಂಬ ಕಾಶಿನಾಥ್‌ರ ಹಾಡು ನೆನಪಾಗುತ್ತದಲ್ಲವೆ?)
ಇಂದಿನ ಯುವಪೀಳಿಗೆಯ ಒತ್ತಡಮಯ ಜೀವನಶೈಲಿ – ಅಸ್ತಿತ್ವ ಕಳೆದುಕೊಳ್ಳುತ್ತಿರುವ ಅಡಿಗೆಮನೆಗಳು
ಈಗ ಸುಮಾರು ಮೂವತ್ತು-ಮೂವತ್ತೈದು ವರ್ಷಗಳ ನಂತರ ಏನಾಗುತ್ತಿದೆ ನಮ್ಮ ಯುವಪೀಳಿಗೆಗೆ ಎಂಬುದನ್ನು ಗಮನಿಸೋಣ. ಹಿಂದೆ ಇದ್ದಂತಹ ಕೂಡುಕುಟುಂಬಗಳು ಈಗ ಇಲ್ಲದಿರುವುದು, ಬೀಜಕೇಂದ್ರ ಕುಟುಂಬಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ದೀರ್ಘಕಾಲ ಮನೆಯಿಂದ ಹೊರಗೆ ಇರಬೇಕಾದ ಸುದೀರ್ಘ ಕೆಲಸದ ಅವಧಿ, ನಗರಗಳಲ್ಲಿ ಇರುವ ಅಗಣಿತ ಹೋಟಲ್‌ಗಳು – ಆಹಾರ ಸರಬರಾಜು ವ್ಯವಸ್ಥೆ – ತಂತ್ರಾಂಶ ಆಧಾರಿತ ಸರಬರಾಜುಗಳು (ಸ್ವಿಗ್ಗಿ, ಝೊಮ್ಯಾಟೊ ಇತ್ಯಾದಿ). ಮನೆಯಲ್ಲಿ ಬಿಸಿ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ತಿನ್ನಲು ತಯಾರಾಗಿರುವ ಆಹಾರ ಪದಾರ್ಥಗಳು (ಉಪ್ಪಿಟ್ಟು, ಅವಲಕ್ಕಿ, ಮಲಬಾರ್ ಪರೋಟ…… ಇಂಥವು), ಗಂಡ ಮತ್ತು ಹೆಂಡತಿ ಇಬ್ಬರೂ ದೀರ್ಘಕಾಲ ಗಣಕಯಂತ್ರದ ಮುಂದೆ ಕುಳಿತು ಕೆಲಸ ಮಾಡಿ, ವಾಹನ ದಟ್ಟಣೆಯಲ್ಲಿ ಗಂಟೆಗಟ್ಟಲೆ ಕಳೆದು ಇಳಿಸಂಜೆ ಅಥವಾ ರಾತ್ರಿ ಮನೆ ತಲುಪುವ ಸಂದರ್ಭದಲ್ಲಿ ಆಗ ಹೊಸದಾಗಿ (ಫ್ರಂ ಸ್ಕ್ರ್ಯಾಚ್ ಅಂತಾರಲ್ಲ) ಅಡಿಗೆ ಪ್ರಾರಂಭಿಸಲು ಅದು ಆಗುವವರೆಗೆ ಕಾಯಲು ಯಾರಿಗೆ ತಾನೆ ತಾಳ್ಮೆ ಇರಬಹುದು!? ಹೀಗಾಗಿ ನಮ್ಮ ಅಡಿಗೆಮನೆಗಳು ತಮ್ಮ ಪ್ರಾಮುಖ್ಯ, ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ಪರಿಹಾರ ಏನು? ಹಿಮ್ಮರಳಲು ಸಾಧ್ಯವೆ?
ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಿಂದ ನಾವು ಕೃಷಿಯುಗಕ್ಕೆ ಮರಳಿ ಹೋಗಲು ಸಾಧ್ಯ ಇಲ್ಲ, ಸರಳ ಕೈಗಾರಿಕೆಗಳ ಯುಗಕ್ಕೂ ಮರಳಲು ಸಾಧ್ಯ ಇಲ್ಲ. ಜೀವನದ ನದಿ ಹಿಮ್ಮುಖವಾಗಿ ಹರಿಯುವುದಿಲ್ಲ. `ಅಯ್ಯೋ, ಹಳೆಯ ಕಾಲ ಹೀಗಿತ್ತು, ಹಾಗಿತ್ತು, ಈಗ ಹಾಗಿಲ್ಲ’ ಎಂದು ಹಳಹಳಿಸಿ ಪ್ರಯೋಜನ ಇಲ್ಲ. ಹಿರಿಯುರ `ರಾತ್ರಿ ಎಷ್ಟು ಹೊತ್ತಾದರೂ ಮಲಗದ, ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ’ ತಮ್ಮ ಸಂತಾನಗಳ ಮನಸ್ಸಿನ ಹಾಗೂ ಬದುಕಿನ ಮರ್ಮವೇನು ಎಂಬುದನ್ನು ಅರಿಯಲು ಮೊದಲು ತಾವೇ ಒಂದು ಹೆಜ್ಜೆ ಮುಂದೆ ಇಡಬೇಕಿದೆ. ಜಗತ್ತೇ ಒಂದು ಹಳ್ಳಿಯಾದ ಅಂತರ್ಜಾಲದ ಯುಗದಲ್ಲಿ, ಹಳ್ಳಿಯೇ ತಮ್ಮ ಜಗತ್ತಾಗಿದ್ದ ಪೀಳಿಗೆಗೆ ಮತ್ತು ಅವರ ಮಕ್ಕಳಿಗೆ (ಅಂದರೆ ಅಂತರ್ಜಾಲವು ನಮ್ಮನ್ನು ಆವರಿಸುವ ಮುಂಚಿನ ಪೀಳಿಗೆಗೆ) ಈ ಹೆಜ್ಜೆಯು ಒಂದು ಸವಾಲು. ಆದರೆ, ವಿಧಿ ಇಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮಿಂದ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ದೂರ ಆಗಬಾರದು ಎಂದರೆ ಅವರ ಬದುಕಿನ ಲಯಗಳನ್ನು ಅರಿಯಲು ಹಿರಿಯ ಪೀಳಿಗೆಯವರು ಪ್ರಯತ್ನ ಮಾಡಲೇಬೇಕು. ಹಾಗಾದರೆ ಏನು ಮಾಡಬಹುದು ಹಿರಿಯರು? ಈ ಕೆಳಗಿನ ಹೆಜ್ಜೆಗಳು ಬಹುಶಃ ನಾವು ಚರ್ಚಿಸಿದ ಪೀಳಿಗೆಯ ಅಂತರವನ್ನು ಕಡಿಮೆ ಮಾಡಬಹುದು ಅನ್ನಿಸುತ್ತದೆ.
1. ಕಿರಿಯರ ಪ್ರತಿ ಹೆಜ್ಜೆಯನ್ನೂ ನೈತಿಕತೆಯ ಕಣ್ಣುಗಳಿಂದ ಅಳೆದು ಅವರ ಬಗ್ಗೆ ತೀರ್ಮಾನ ಮಾಡುವುದನ್ನು ದೂರ ಇಡಬೇಕು. `ಬೆಳಿಗ್ಗೆ ಬೇಗ ಏಳಲ್ಲ – ಹಿರಿಯರ ಮಾತಿನ ಬಗ್ಗೆ ಗೌರವ ಇಲ್ಲ, ಮನೆಯಲ್ಲಿ ಮಾಡಿದ್ದು ತಿನ್ನಲ್ಲ – ನಾನು ಮಾಡಿದ ಅಡಿಗೆಯ ಬಗ್ಗೆ ಅಕ್ಕರೆ ಇಲ್ಲ, ಮದುವೆ ಮಾಡಿಕೊಳ್ಳಕ್ಕೆ ಒಪ್ಪಲ್ಲ – ಬದುಕಿನ ಬಗ್ಗೆ ಗಾಂಭೀರ್ಯವೇ ಇಲ್ಲ, ಮೈ ಕಾಣುವ ಬಟ್ಟೆ ಹಾಕ್ತಾಳೆ – ಸಂಪ್ರದಾಯದ ಬಗ್ಗೆ ಸ್ವಲ್ಪವೂ ಆದರ ಇಲ್ಲ’ ……. ಹೀಗೆ ಯೋಚಿಸುತ್ತಾ `ನಾವು ಸರಿ – ಅವರು ತಪ್ಪು’ ಎಂಬ ನಿಲುವಿನಿಂದಲೇ ಕಿರಿಯರನ್ನು ನೋಡುತ್ತಿದ್ದರೆ ಪೀಳಿಗೆಗಳ ಈ ಮಹಾ ಅಂತರ ಹೆಚ್ಚುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ಕೈಗಾರಿಕೆಯ ಯುಗದಲ್ಲಿ ಹುಟ್ಟಿದವರು ಕೃಷಿಯುಗದಲ್ಲಿ ಹುಟ್ಟಿದ ತಮ್ಮ ಹಿರಿಯರಿಗೆ `ಅಯ್ಯೋ, ಈ ಹಿರಿಯರಿಗೆ ನಮ್ಮ ಪೀಳಿಗೆಯ ಲಯಗಳು ಅರ್ಥವೇ ಆಗುವುದಿಲ್ಲ’ ಎಂದು ಪೇಚಾಡುತ್ತಿರಲಿಲ್ಲವೆ, ಇದೂ ಹಾಗೆಯೇ.
2. ಕಿರಿಯರ ಕಣ್ಣುಗಳಿಂದ ಪ್ರಪಂಚವನ್ನು ನೋಡಲು ನಾವು ಹಿರಿಯರು ಪ್ರಯತ್ನ ಮಾಡಬೇಕಿದೆ. ಅವರ ಭಾಷೆ, ತಂತ್ರಜ್ಞಾನದ ಯಜಮಾನ್ಯವುಳ್ಳ ಅವರ ಸಂವಹನ ಕ್ರಮ, ಅವರ ಮನರಂಜನೆಯ ರೀತಿಗಳು, ಅಂದರೆ ಅವರು ಕೇಳುವ ಹಾಡುಗಳು, ನೋಡುವ ಸಿನಿಮಾಗಳು, ಅವರ ಚಾರಣ(ಟ್ರೆಕಿಂಗ್)ದ ಆಸಕ್ತಿ, ಗಿಡ ಮತ್ತು ಪ್ರಾಣಿಗಳನ್ನು ಮಕ್ಕಳಂತೆ ಸಾಕುವ ಅವರ ದೃಷ್ಟಿಕೋನ (ಪ್ಲ್ಯಾಂಟ್ ಪೇರೆಂಟಿಂಗ್, ಪೆಟ್ ಪೇರೆಂಟಿಂಗ್), ಅವರ ವಿಭಿನ್ನ ಪ್ರವಾಸಗಳು, ನಮ್ಮ ಭೂಗೋಳಕ್ಕೆ ಆಗಿರುವಂತಹ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಅವರು ತೋರುವ ಕಾಳಜಿ, ಅದಕ್ಕಾಗಿ ಹೊಸ ಹೊಸ ಹೊಸ ಯೋಜನೆಗಳನ್ನು ಮಾಡಿ ಅವುಗಳಲ್ಲಿ ಪಡೆಯುತ್ತಿರುವ ಕಾರ್ಯಸಿದ್ಧಿ, ಕ್ರೀಡೆಗಳು, ವ್ಯಾಯಾಮ, ಮತ್ತು ದೇಹದ ತಕ್ಕುಮೆ(ಫಿಟ್ನೆಸ್)ಗಾಗಿ ಅವರು ವಹಿಸುವ ಶ್ರಮ, ಇವನ್ನೆಲ್ಲ ನಾವು ಹಿರಿಯರು ಮೆಚ್ಚಬೇಕಲ್ಲವೆ? ಮೆಚ್ಚುವುದು ಮಾತ್ರವಲ್ಲ, ಅವರಿಂದ ನಾವು ಕಲಿಯುವುದು ಸಹ ತುಂಬ ಇದೆ.
3. ಕಿರಿಯರನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ತಂತ್ರಜ್ಞಾನಭರಿತ ಪ್ರಪಂಚದಲ್ಲಿ ನಾವು ಸಹ ಓಡಾಡಲು, ಅಡ್ಡಾಡಲು ಕಲಿಯಬೇಕು. ಇತ್ತೀಚೆಗೆ ಕನ್ನಡ ಬರದ ಯುವಕನೊಬ್ಬ ಚ್ಯಾಟ್ ಜಿಪಿಟಿಯನ್ನು ಬಳಸಿ ಆಟೊ ಚಾಲಕನೊಂದಿಗೆ ಚೌಕಾಸಿ ಮಾಡಿ ಅವನ ಮನವೊಲಿಸಿ ಪ್ರಯಾಣದರ ಕಡಿಮೆ ಮಾಡಿಸಿಕೊಂಡಿದ್ದನ್ನು(!) ನಮ್ಮಲ್ಲಿ ಕೆಲವರು ಓದಿರಬಹುದು. ಜಾಣದೂರವಾಣಿಗಳು(ಸ್ಮಾರ್ಟ್ ಫೋನ್ಸ್), ಗೂಗಲ್ ಕೊಡುವ ಸ್ಥಳಗುರುತು(ಲೊಕೇಷನ್)ಗಳ ಮೂಲಕ ಜಾಗಗಳನ್ನು ಹುಡುಕುವುದು, ಝೆಪ್ಟೋ, ಡಂಝೋ, ಬ್ಲಿಂಕಿಟ್ ಮುಂತಾದ ಅನ್ವಯ(ಯಾಪ್)ಗಳ ಮೂಲಕ ಅವರು ಝಟ್‌ಪಟ್ ಎಂದು ಮನೆಗೆ ಸಮಾನು ತರಿಸುವ ಜಾಣರೀತಿ…… ಇವುಗಳನ್ನು ನಾವೂ ಕಲಿತರೆ ನಮ್ಮ ಬದುಕು ಸಹ ತುಸು ಸುಲಭವಾಗುವುದರಲ್ಲಿ ಸಂಶಯ ಇಲ್ಲ.
4. ಹಿರಿಯರಿಗೆ ಗೊತ್ತಿರದ ಎಷ್ಟೋ ರುಚಿ-ಅಭಿರುಚಿಗಳು ಇಂದಿನ ಕಿರಿಯರಲ್ಲಿವೆ. ಚೀಸ್ ತಿನ್ನುವುದರಿಂದ ಹಿಡಿದು, ಪುಸ್ತಕಗಳು, ಶಾಂತವಾದ ಸ್ವಚ್ಛ ವಾತಾವರಣ ಮತ್ತು ಕಾಫಿ ಒಟ್ಟಿಗೆ ಸಿಗುವ `ಕೆಫೆ’ಗಳು, ಹೆಂಗಸರು ಪಾವತಿ ಮಾಡಿ ಯಾರ ಹಂಗೂ ಇಲ್ಲದೆ ತಮ್ಮಷ್ಟಕ್ಕೆ ತಾವು ಆರಾಮವಾಗಿ ವಿಶ್ರಾಂತಿ ಪಡೆಯಲಿಕ್ಕಾಗಿ ಮಾಡಿಕೊಂಡಿರುವ ನಗರ ಮಧ್ಯದ `ಆರಾಮತಾಣ’ಗಳು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಆಪ್ತ ಸಲಹೆ, ಸಮಾಲೋಚನೆಗಾಗಿ ಅವರು ತಮ್ಮ ಬದುಕಿನಲ್ಲಿ ನಿರ್ಮಿಸಿಕೊಂಡಿರುವ ಮಾನಸಿಕ ಹಾಗೂ ಭೌತಿಕ ಸ್ಥಳಾವಕಾಶ, ತಾವೇ ತಯಾರು ಮಾಡುವ ಪುಟ್ಟ ಪುಟ್ಟ ಸಿನಿಮಾಗಳು (ಶಾರ್ಟ್ ಮೂವೀಸ್), ಮತ್ತು ಇತ್ತೀಚೆಗೆ (ಅಂದರೆ 2011ರಿಂದ ಈಚೆಗೆ) ಬಹು ಜನಪ್ರಿಯತೆ ಪಡೆದಿರುವ ಏಕವ್ಯಕ್ತಿ ಹಾಸ್ಯ ಪ್ರದರ್ಶನ(ಸ್ಟ್ಯಾಂಡ್ ಅಪ್ ಕಾಮಿಡಿ)ದಲ್ಲಿ ಅವರು ತೋರುವ ಗಾಢ ಆಸಕ್ತಿ… ಇವೆಲ್ಲವೂ ನೂತನವಾಗಿವೆ ಮತ್ತು ಚೇತೋಹಾರಿಯಾಗಿವೆ ಅಲ್ಲವೆ? ನಾವು `ಹಳೆಯ ರೀತಿಗಳೇ ಸರಿ’ ಎಂಬ ನಮ್ಮ ಜಿಗುಟು ಮನೋಧರ್ಮವನ್ನು ಬದಿಗಿಟ್ಟು ಹೊಸ ಕಣ್ಣುಗಳಿಂದ ಅವುಗಳನ್ನು ನೋಡಬೇಕು ಅಷ್ಟೆ.

ಗಣಕ ವಿಜ್ಞಾನದಲ್ಲಿ ಬಿಇ ಓದಿದ ನಮ್ಮ ಮಗ `ಅಪ್ಪ, ನಾನು ಸಾಫ್ಟ್ವೇರ್ ಕೆಲಸಕ್ಕೆ ಹೋಗಲ್ಲ, ಶೆಫ್ ಆಗಿ ಕೆಫೆ ತೆರೀತೀನಿʼ ಅಂದಾಗ, ಅಥವಾ `ಬಿ ಟೆಕ್’ ಓದಿದ ಮಗಳು `ಅಮ್ಮ, ನಾನು ಮೇಕ್‌ಅಪ್ ಆರ್ಟಿಸ್ಟ್ ಆಗ್ತೀನಿ’ ಎಂದರೆ ಒಂದೇ ಸಲಕ್ಕೆ ಗಾಬರಿ ಬಿದ್ದು `ಬುದ್ಧಿ ಇದೆಯಾ ನಿಂಗೆ?’ ಎಂದು ಕಿರಿಚಾಡುವ ಬದಲು ಅವರ ಜೊತೆ ಕುಳಿತು, ಮಾತಾಡಿ ಹಾಗೆ ಅವರು ಹೇಳಿದ್ದರ ಹಿಂದಿನ `ಯಾಕೆ, ಏನು, ಹೇಗೆ’ಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಹಿರಿಯರು ಮಾಡಿದರೆ ಬಹುಶಃ ಎರಡೂ ಪೀಳಿಗೆಗಳ ಜೀವನ ಪ್ರಯಾಣವೂ ಸುಗಮ ಆಗುತ್ತದೆ ಮತ್ತು ಈ ಎರಡು ಪೀಳಿಗೆಗಳ ನಡುವಿನ ಮಹಾ ಅಂತರವನ್ನು ದಾಟಲು ಸಾಧ್ಯವಾಗುತ್ತದೆ ಅನ್ನಿಸುತ್ತದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

ಹಳೆ ತಲೆಮಾರಿನವರ ಕಣ್ಣು ತೆರೆಸುವ ಬರಹ. ಹೊಸ ತಲೆಮಾರಿನವರ ಅಭಿರುಚಿ,, ಆಸಕ್ತಿಗಳನ್ನು ಅರಿತು,ಅವರ ಜೊತೆ ಹೊಂದಿಕೊಂಡು ಬದುಕನ್ನು ಮತ್ತಷ್ಟು ಸುಂದರಗೊಳಿಸಲು ಸಹಕಾರಿಯಾಗಿರುವ ನಿಮ್ಮ ಬರಹಕ್ಕೆ ಧನ್ಯವಾದ ಮೇಡಮ್. 🙏🙏