“ಚೀಸ್ ಮಾರುಕಟ್ಟೆಯಲ್ಲಿ ಬೆಲೆ ಚೌಕಾಶಿಮಾಡಿ ಕೈ ಮುಟ್ಟುತ್ತಾ, ಒಬ್ಬರು ಇನ್ನೊಬ್ಬರ ಕೈಗೆ ಚಪ್ಪಾಳೆ ಹೊಡೆಯುವುದನ್ನು ಮೊದಲಬಾರಿಗೆ ನೋಡಿದಾಗ ನನಗೆ ಚಿಕ್ಕಂದಿನಲ್ಲಿ ಅಪ್ಪನ ಕೊಟ್ಟಿಗೆಗೆ ಆಕಳುಗಳನ್ನು ಕೊಳ್ಳಲು ಗಿರಾಕಿಗಳನ್ನು ಕರೆತರುವ ದಲ್ಲಾಳಿಗಳ ನೆನಪಾಗಿತ್ತು.ಅಂದಿನ ದಿನಗಳಲ್ಲಿ ಅಪ್ಪ ಕೊಟ್ಟಿಗೆಯ ತುಂಬಾ ಆಕಳುಗಳನ್ನು ಸಾಕುತ್ತಿದ್ದ.ಏನಿಲ್ಲವೆಂದರೂ ಅಂದು ನಮ್ಮನೆಯಲ್ಲಿ ಸುಮಾರು ಹತ್ತಾರು ಆಕಳುಗಳು,ಕೆಲವು ಕರುಗಳು,ಎರಡು ಎತ್ತುಗಳು ಇರುತ್ತಿದ್ದವು.ಕೆಲವೊಂದನ್ನು ಮಾರಬೇಕೆನಿಸಿದಾಗ ಅಪ್ಪ ದಲ್ಲಾಳಿಗೆ ಸುದ್ದಿಮುಟ್ಟಿಸುತ್ತಿದ್ದ.ಆತ ಗಿರಾಕಿಯನ್ನು ಕರೆದುಕೊಂಡು ಬರುತ್ತಿದ್ದ.”
ಸೀಮಾ ಎಸ್. ಹೆಗಡೆ ಬರೆಯುವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

 

ಪ್ರಪಂಚದ ನಕಾಶೆಯಲ್ಲಿ ಕಾಣಲು ದುರ್ಲಭವೆನಿಸುವಷ್ಟು ಪುಟ್ಟದಾದ ದೇಶ ನೆದರ್ಲ್ಯಾಂಡ್ಸ್ ಗೆ ಅದರದೇ ಆದ ಎಷ್ಟೊಂದು ವಿಶಿಷ್ಟತೆಗಳು ಇವೆ! ಸಮುದ್ರದ ತಳದಲ್ಲಿರುವ ಭೂಭಾಗ, ಅಸಂಖ್ಯಾತ ಕಾಲುವೆಗಳು, ಬಗೆಬಗೆಯ ಸೈಕಲ್ ಗಳು, ಬಣ್ಣಬಣ್ಣದ ಟುಲಿಪ್ ಗಳು, ವಿಂಡ್ ಮಿಲ್ ಗಳು, ಡಚ್ ಪಾಟರಿ, ಮರದ ಬೂಟು, ನಾನಾಬಗೆಯ ಚೀಸ್… ಹೀಗೆ ಪಟ್ಟಿ ಮುಂದುವರಿಯುಲೇ ಇರುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಯಾವತ್ತಿಗೂ ಹೆಸರಾದ ದೇಶ ನೆದರ್ಲ್ಯಾಂಡ್ಸ್. ನಗರದಿಂದ ಸ್ವಲ್ಪ ಹೊರಬೀಳುತ್ತಿದ್ದಂತೆಯೇ ಹುಲ್ಲುಗಾವಲು ಮತ್ತು ಅದರಲ್ಲಿ ಮೇಯುತ್ತಿರುವ ನೂರಾರು ಹಸುಗಳು, ಕುರಿಗಳು ಕಾಣಿಸತೊಡಗುತ್ತವೆ. ಇಲ್ಲಿ ಕೆಲವೊಮ್ಮೆ ಹಾಲಿನ ಉತ್ಪಾದನೆ ಹೆಚ್ಚಾಗಿ, ಹೆಚ್ಚುಳಿದ ಹಾಲನ್ನು ಕಾಲುವೆಗಳಿಗೆ ಚೆಲ್ಲಿದ್ದೂ ಕೂಡ ಇದೆಯಂತೆ! ಇಷ್ಟೊಂದು ಹಾಲು ಉತ್ಪಾದನೆಯಾಗುತ್ತಿರುವ ದೇಶದಲ್ಲಿ ಹಾಲು, ಹಾಲಿನ ಉತ್ಪನ್ನಗಳು ಅಗ್ಗವೆಂದೇನೂ ಅಂದುಕೊಳ್ಳಬೇಡಿ. ಬದಲಾಗಿ ಎಲ್ಲವೂ ದುಬಾರಿಯಾಗಿಯೇ ಇರುವುದು. ಹಲವಾರು ಬಗೆಯ ಹಾಲು, ಹಾಲಿನ ಉತ್ಪನ್ನಗಳು ಸೂಪರ್ ಮಾರ್ಕೆಟ್ ನ ಶೆಲ್ಫ್ ನಲ್ಲಿ ಸಾಲಾಗಿ ನಿಂತಿರುತ್ತವೆ. ಕೆಲವೊಮ್ಮೆ ಯಾವುದನ್ನ ಕೊಳ್ಳಲಿ ಯಾವುದನ್ನ ಬಿಡಲಿ ಎಂಬ ಗೊಂದಲವನ್ನುಂಟುಮಾಡುತ್ತವೆ!

ಡಚ್ಚರು ಚೀಸ್ ಅನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತಹ ಆಹಾರಗಳಲ್ಲಿ ಚೀಸ್ ಬಳಸುತ್ತಾರೆ. ಇಲ್ಲಿ ತಯಾರಾಗುವ ಚೀಸ್ ನ ಬಗೆಗಳಂತೂ ಒಂದೆರಡಲ್ಲ. ಪ್ರಪಂಚದ ಕೆಲವೇ ಕೆಲವು ಅತ್ಯುತ್ತಮ ಚೀಸ್ ಗಳಲ್ಲಿ ಸ್ಥಾನ ಪಡೆದುದು ಇಲ್ಲಿನ Gouda ಚೀಸ್ (ಹೆಚ್ಚುಕಡಿಮೆ ‘ಹೌಡ’ ಎಂದು ಓದಬಹುದು, ಆದರೆ ಅದೂ ಕೂಡ ಪೂರ್ತಿ ಸರಿಯಲ್ಲ. ಡಚ್ ಭಾಷೆಯ G ಅಕ್ಷರದ ಉಚ್ಚಾರಣೆಯನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ). ಇದು ತುಂಬಾ ಹಳೆಯಕಾಲದಿಂದ ಶುರುವಾಗಿ ಇಂದಿಗೂ ಕೂಡ ಅತ್ಯಂತ ಜನಪ್ರಿಯವಾಗಿರುವ ಚೀಸ್. ಇದರ ಬಗೆಗಿನ ಉಲ್ಲೇಖ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು 1184 ರಲ್ಲಿ. Gouda ಎಂಬುದು ಇಲ್ಲಿನ ಒಂದು ಪಟ್ಟಣ- ಈ ಚೀಸ್ ಅಲ್ಲಿ ತಯಾರಾದುದಲ್ಲವಾದರೂ, ಮೊಟ್ಟಮೊದಲ ಬಾರಿಗೆ ಅಲ್ಲಿ ಮಾರಾಟವಾದುದು. ಹಳೆಯ ಕಾಲದಲ್ಲಿ ಚೀಸ್ ಮಾರಾಟಮಾಡಲು ಪರವಾನಗಿ ಬೇಕಿತ್ತಂತೆ, ಆಗಿನ ಕಾಲದಲ್ಲಿ ಗೌಡ ಪಟ್ಟಣಕ್ಕೆ ಪರವಾನಗಿ ದೊರೆಯಿತು. ಅಲ್ಲಿಂದ ಮುಂದೆ ಆ ಪಟ್ಟಣದಲ್ಲಿ ಮಾರಾಟವಾಗುತ್ತಿದ್ದ ಮಾದರಿಯ ಚೀಸ್ ಗೆ Gouda ಚೀಸ್ ಎಂಬ ಹೆಸರು ಬಿತ್ತು. ಇಂದು ಪ್ರಪಂಚದಾದ್ಯಂತ Gouda ಚೀಸ್ ತಯಾರಾಗುತ್ತಿದೆ. ಅದರ ಹೊರತಾಗಿ ಇನ್ನೂ ಹಲವಾರು ಮಾದರಿಯ ಚೀಸ್ ಗಳು ನೆದರ್ಲ್ಯಾಂಡ್ಸ್ ನಲ್ಲಿ ತಯಾರಾಗುತ್ತವೆ. ಹಾಗೆ ತಯಾರಾಗುವ ಎಲ್ಲಾ ಚೀಸ್ ವಿಧಗಳೂ ಒಂದೊಂದು ಪಟ್ಟಣಗಳ ಹೆಸರನ್ನು ಹೊಂದಿವೆ ಏಕೆಂದರೆ ಅವು ಅಲ್ಲಿ ಮೊದಲ ಬಾರಿಗೆ ಮಾರಾಟವಾದವು. ಪ್ರತಿಯೊಂದು ವಿಧದ ಚೀಸ್ ಗೂ ಕೂಡ ಒಂದೊಂದು ತಯಾರಿಕಾ ವಿಧಾನವಿರುತ್ತದೆ, ಆ ವಿಧಾನದಲ್ಲಿ ತಯಾರಾದ ಚೀಸ್ ಗೆ ಪ್ರಪಂಚದಾದ್ಯಂತ ಎಲ್ಲಿ ತಯಾರಾದರೂ ಹೆಸರು ಮಾತ್ರ ಡಚ್ ಪಟ್ಟಣದ್ದೇ!

(ಚೀಸ್ ಸಾಗಾಣಿಕೆ)

ನೆದರ್ಲ್ಯಾಂಡ್ಸ್ ನಲ್ಲಿ ಕೂಡ Gouda ಚೀಸ್ ತುಂಬಾ ಪ್ರಸಿದ್ಧ, ಜನ ಇಷ್ಟಪಟ್ಟು ತಿನ್ನುತ್ತಾರೆ. ಆ ಚೀಸ್ ನಲ್ಲಿಯೇ ಮತ್ತೂ ಆರು ವಿಧಗಳಿವೆ. 4-6 ವಾರಗಳಷ್ಟು ಕಾಲ ಶೇಖರಿಸಿಟ್ಟ ಚೀಸ್, 8-10 ವಾರಗಳಷ್ಟು ಶೇಖರಿಸಿದ್ದು, 16-18 ವಾರಗಳದ್ದು, 7-8 ತಿಂಗಳುಗಳಷ್ಟು ಹಳೆಯದು, 10-12 ತಿಂಗಳು ಹಳೆಯದು, 18 ತಿಂಗಳು ಮತ್ತು ಅದಕ್ಕಿಂತ ಹಳೆಯದು. ಅದು ಹಳೆಯದಾದಂತೆ ಅದರ ವಾಸನೆ ಇನ್ನೂ ಕಟುವಾಗುತ್ತಾ ಹೋಗುತ್ತದೆ, ಮೃದುತ್ವವನ್ನು ಕಳೆದುಕೊಂಡು ಗಟ್ಟಿಯಾಗುತ್ತಾ ಹೋಗುತ್ತದೆ. ಅಂಥ ಚೀಸ್ ತಿನ್ನಲು ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಮಾತ್ರ ಸಾಧ್ಯವೇನೋ! ಅಷ್ಟು ಕಟು ವಾಸನೆ! ರುಚಿಯೆಂಬುದು ನಾಲಿಗೆಯನ್ನು ಚಿಕ್ಕಂದಿನಿಂದ ಪಳಗಿಸಿದುದರಮೇಲೆ ಅವಲಂಬಿಸಿರುತ್ತದೆ ಎಂದು ಎಲ್ಲೋ ಓದಿದ್ದೆ. ನಾವು ತಿನ್ನುವ ಆಹಾರವನ್ನು ಇನ್ನೊಬ್ಬರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ದೇಶದಲ್ಲಿಯೇ ಎಷ್ಟೊಂದು ವ್ಯತ್ಯಾಸ! ಉತ್ತರಭಾರತದವರು ದಕ್ಷಿಣಕ್ಕೆ ಬಂದರೆ ನೀವು ಮೂರು ಹೊತ್ತೂ ಅನ್ನ ತಿನ್ನುತ್ತೀರಿ ಎಂದು ಕಿರಿಕಿರಿ ಮಾಡಿದರೆ, ದಕ್ಷಿಣದವರು ಉತ್ತರಕ್ಕೆ ಹೋಗಿ ಆ ಚಪಾತಿ ತಿಂದು ಅನ್ನಸಿಗದೇ ಹೊಟ್ಟೆತುಂಬಿದಂತೆಯೇ ಅನಿಸಲಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಇಲ್ಲಿನ ಜನರು ಬ್ರೆಡ್ ನ ನಡುವೆ ಆ ವಾಸನೆಯ ಚೀಸ್ ಅನ್ನು ಇಟ್ಟುಕೊಂಡು ಹೇಗಾದರೂ ತಿನ್ನುತ್ತಾರೋ ಎಂದುಕೊಳ್ಳುತ್ತಿದ್ದೆ. ಆದರೆ ಆನಂತರದಲ್ಲಿ ಅದನ್ನೇ ನೋಡಿ ಅವರ ಆಹಾರ, ಆ ಚೀಸ್ ನ ವಾಸನೆ ಎರಡಕ್ಕೂ ಒಗ್ಗಿಹೋದೆ. ಆದರೆ ಇಂದಿಗೂ ಅದನ್ನು ತಿನ್ನಲು ಮಾತ್ರ ಸಾಧ್ಯವಾಗುತ್ತಿಲ್ಲ. ಕೇವಲ 4-10 ವಾರಗಳಷ್ಟು ಹಳೆಯ ಚೀಸ್ ಅನ್ನು ಮಾತ್ರ ಸಹಿಸಬಲ್ಲೆ!

ಚೀಸ್ ಬರಿಯ ಹಸುವಿನ ಹಾಲಿನದು ಮಾತ್ರ ಎಂದುಕೊಳ್ಳಬೇಡಿ, ಮೇಕೆಯ ಮತ್ತು ಕುರಿಯ ಹಾಲಿನಿಂದ ತಯಾರಿಸಿದ ಚೀಸ್ ಕೂಡ ಇಲ್ಲಿ ಲಭ್ಯವಿದೆ. ಹೆಚ್ಚಾಗಿ ಅದನ್ನು ಸಲಾಡ್ ಮೇಲೆ ಹಾಕಿಕೊಂಡು ತಿನ್ನುತ್ತಾರೆ. ಆದರೆ ಆ ಚೀಸ್ ಗಳನ್ನು ಬಹುಕಾಲ ಶೇಖರಿಸುವುದಿಲ್ಲ. ಕೇವಲ ಹಸುವಿನ ಹಾಲಿನ ಚೀಸ್ ಅನ್ನು ಮಾತ್ರ ಶೇಖರಿಸಿಡುತ್ತಾರೆ. ತಯಾರಾದ ನಂತರ ಅದಕ್ಕೆ ಉಂಡೆ ಅಥವಾ ಗಾಲಿಗಳ ರೂಪಕೊಟ್ಟು ಅವುಗಳಿಗೆ ಮೇಣದ ಮೇಲ್ಪದರವನ್ನು ಹಾಕಿ ಮುಚ್ಚಿಡುತ್ತಾರೆ. ಹಳದಿ, ಕೇಸರಿ, ಕೆಂಪು, ಕಪ್ಪು ಹೀಗೆ ಬೇರೆ ಬೇರೆ ಬಣ್ಣದ ಮೇಲ್ಪದರಗಳಿರುತ್ತವೆ. ಆ ಬಣ್ಣವನ್ನು ನೋಡಿ ಆ ಚೀಸ್ ಎಷ್ಟು ಹಳೆಯದು ಎಂಬುದನ್ನು ತಿಳಿಯಬಹುದು. ಈ ರೀತಿ ಮಾಡಿ ಓರಣವಾಗಿ ಜೋಡಿಸಿಟ್ಟ ಬಣ್ಣಬಣ್ಣದ ಚೀಸ್ ನೋಡಲು ತುಂಬಾ ಸುಂದರ! ಚೀಸ್ ಗಳಿಗೆ ಕಾಳುಮೆಣಸು, ಬೆಳ್ಳುಳ್ಳಿ, ಮೆಣಸು, ಜೀರಿಗೆ, ಮೆಂತ್ಯ, ತುಳಸಿ, ಜೇನುತುಪ್ಪ, ಇಟಲಿಯ ಕೆಲವು ಮೂಲಿಕೆಗಳು ಹೀಗೆ ಹತ್ತುಹಲವಾರು ಬಗೆಯ ಮಸಾಲೆ ಪದಾರ್ಥಗಳನ್ನು ಸೇರಿಸಿ ಅನೇಕ ರುಚಿಗಳಲ್ಲಿ ಹೊರತರುತ್ತಾರೆ. ಪ್ರತಿನಿತ್ಯ ಏನಾದರೂ ಒಂದು ಹೊಸರುಚಿಯ ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಂತೂ ಕೊಕೋ ಬೀಜದ ಚಿಕ್ಕಚಿಕ್ಕ ಚೂರುಗಳನ್ನು ಹಾಕಿದ ಚೀಸ್ ಪ್ರಸಿದ್ಧವಾಗುತ್ತಿದೆ.

(Gouda ಚೀಸ್)

ರುಚಿಯೆಂಬುದು ನಾಲಿಗೆಯನ್ನು ಚಿಕ್ಕಂದಿನಿಂದ ಪಳಗಿಸಿದುದರಮೇಲೆ ಅವಲಂಬಿಸಿರುತ್ತದೆ ಎಂದು ಎಲ್ಲೋ ಓದಿದ್ದೆ. ನಾವು ತಿನ್ನುವ ಆಹಾರವನ್ನು ಇನ್ನೊಬ್ಬರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ದೇಶದಲ್ಲಿಯೇ ಎಷ್ಟೊಂದು ವ್ಯತ್ಯಾಸ! ಉತ್ತರಭಾರತದವರು ದಕ್ಷಿಣಕ್ಕೆ ಬಂದರೆ ನೀವು ಮೂರು ಹೊತ್ತೂ ಅನ್ನ ತಿನ್ನುತ್ತೀರಿ ಎಂದು ಕಿರಿಕಿರಿ ಮಾಡಿದರೆ, ದಕ್ಷಿಣದವರು ಉತ್ತರಕ್ಕೆ ಹೋಗಿ ಆ ಚಪಾತಿ ತಿಂದು ಅನ್ನಸಿಗದೇ ಹೊಟ್ಟೆತುಂಬಿದಂತೆಯೇ ಅನಿಸಲಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ.

ಎಲ್ಲಿ ನೋಡಿದಲ್ಲಿ ಸಂತೆಯಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಚೀಸ್ ಮಾರಾಟಕ್ಕಿರುತ್ತದೆ. ಸೂಪರ್ ಮಾರ್ಕೆಟ್ ಗಳಲ್ಲಂತೂ ಚೀಸ್ ಗೆಂದೇ ಪ್ರತ್ಯೇಕ ಶೆಲ್ಫ್ ಗಳಿರುತ್ತವೆ. ಕೆಲವೊಂದು ದೊಡ್ಡ ಸೂಪರ್ ಮಾರ್ಕೆಟ್ ಗಳಲ್ಲಂತೂ ರುಚಿನೋಡಿ ನಂತರ ಖರೀದಿಸಬಹುದು. ಇನ್ನು ನಗರಗಳ ಕೇಂದ್ರ ಪ್ರದೇಶಗಳಲ್ಲಂತೂ ಹೆಚ್ಚು ಯಾತ್ರಿಕರು ಬರುವ ಜಾಗದಲ್ಲಿ ಚೀಸ್ ಒಂದನ್ನೇ ಮಾರಾಟ ಮಾಡುವ ಅಂಗಡಿಗಳಿರುತ್ತವೆ. ಎಷ್ಟೋ ವಿಧದ ಚೀಸ್ ಗಳನ್ನು ರುಚಿನೋಡಲು ಮತ್ತು ಮಾರಾಟಕ್ಕೆ ಇಟ್ಟಿರುತ್ತಾರೆ. ಯಾತ್ರಿಕರು ಯಾರಾದರೂ ಚೀಸ್ ಗಳ ಬಗ್ಗೆ ವಿಚಾರಿಸಿದರೆ, ಪ್ರಶ್ನೆಗಳನ್ನು ಕೇಳಿದರೆ ಆ ಅಂಗಡಿಯವರಿಗೆ ಖುಷಿ, ತಮ್ಮ ದೇಶದ ಚೀಸ್ ಬಗ್ಗೆ ಡಚ್ಚರಿಗೆ ಎಲ್ಲಿಲ್ಲದ ಅಭಿಮಾನ. ಕೇಳಿದವರಿಗೆ ಆಸ್ಥೆಯಿಂದ ವಿವರಣೆ ನೀಡುತ್ತಾರೆ. ನೆದರ್ಲ್ಯಾಂಡ್ಸ್ ಪ್ರಪಂಚದಲ್ಲೇ ಅತಿಹೆಚ್ಚು ಚೀಸ್ ರಫ್ತುಮಾಡುವ ದೇಶ. ಈ ದೇಶದಲ್ಲಿ ಒಂದು ವರ್ಷಕ್ಕೆ ಉತ್ಪಾದನೆಯಾಗುವ ಚೀಸ್ ನ ಪ್ರಮಾಣ 65,00,00,000 ಕೆಜಿಗಳಷ್ಟು! ಅದರಲ್ಲಿ ಎರಡು ಮೂರಾಂಶದಷ್ಟೂ ಚೀಸ್ ರಫ್ತಾಗುತ್ತದೆ. ಈ ವಿಚಾರವನ್ನು ಮೊದಲ ಬಾರಿಗೆ ಕೇಳಿದಾಗ ತೆರೆದ ಬಾಯನ್ನು ಮುಚ್ಚಲು ನನಗೆ ಕೆಲ ಸೆಕೆಂಡುಗಳೇ ಹಿಡಿದವು!

(ಚೀಸ್ ಸಿದ್ಧಪಡಿಸುವ ಮಾದರಿಗಳು)

ಹಳೆಕಾಲದಲ್ಲಿ ಚೀಸ್ ಮಾರಲು ಪರವಾನಗಿ ಬೇಕಾಗಿತ್ತು ಎಂದು ಮೇಲೆ ಹೇಳಿದೆನಲ್ಲ ಅದಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ವಿಷಯವಿದೆ; ಕೃತಕ ಚೀಸ್ ಮಾರುಕಟ್ಟೆ! ಆಗಿನ ಕಾಲದಲ್ಲಿ ಈಗಿನಂತೆ ಎಲ್ಲಾ ಕಡೆ ಚೀಸ್ ಮಾರುವಂತಿರಲಿಲ್ಲ. ಎಲ್ಲಾ ಚೀಸ್ ಅನ್ನೂ ಪರವಾನಗಿ ಇರುವ ಮಾರುಕಟ್ಟೆಗೆ ತಂದು, ಅಲ್ಲಿ ಅದಕ್ಕೆ ಬೆಲೆಕಟ್ಟಿ ಅದು ಹರಾಜಾಗಬೇಕಿತ್ತು. ಇಂದೂ ಕೂಡ ಅದೇ ಮಾದರಿಯಲ್ಲಿ ನಾಟಕೀಯವಾಗಿ ಆ ಮಾರುಕಟ್ಟೆಯನ್ನು ನೆದರ್ಲ್ಯಾಂಡ್ಸ್ ನ ಐದು ಪಟ್ಟಣಗಳಲ್ಲಿ ನಡೆಸುತ್ತಾರೆ. ಯಾತ್ರಿಕರಿಗೆಂದೇ ವಿಶೇಷವಾಗಿ ನಡೆಸುತ್ತಿರುತ್ತಾರೆ. ಈ ಮಾರುಕಟ್ಟೆಗಳು ಹೊರಾಂಗಣದಲ್ಲಿ ನಡೆಯುವುದರಿಂದ ಬೇಸಿಗೆಯಲ್ಲಿ ಮಾತ್ರ ಅದಕ್ಕೆ ಅವಕಾಶ.

ಈ ಮಾರುಕಟ್ಟೆ ಬೆಳಿಗ್ಗೆ ಹತ್ತು ಗಂಟೆಗೆ ಶುರುವಾಗುತ್ತದೆ. ಅದಕ್ಕಿಂತ ಮೊದಲು ಚೀಸ್ ಅನ್ನು ಸುಂದರವಾಗಿ ಜೋಡಿಸಿಟ್ಟಿರುತ್ತಾರೆ. ಹತ್ತು ಗಂಟೆಗೆ ಘಂಟೆ ಬಾರಿಸಿ ಈ ಮಾರುಕಟ್ಟೆ ಶುರುವಾಯಿತೆಂಬುದನ್ನು ಔಪಚಾರಿಕವಾಗಿ ಸಾರುತ್ತಾರೆ. ನಂತರ ಚೀಸ್ ನ ತಪಾಸಣೆ ನಡೆಯುತ್ತದೆ. ಆ ನಂತರದಲ್ಲಿ ಬೆಲೆಯ ಬಗ್ಗೆ ಸಮಾಲೋಚನೆ, ಚೌಕಾಶಿ. ಅವರ ಚೌಕಾಶಿ ವಿಧಾನ ನೋಡಲು ಬಹಳ ತಮಾಷೆಯಾಗಿರುತ್ತದೆ. ಒಬ್ಬರ ಕೈ ಮತ್ತೊಬ್ಬರು ಮುಟ್ಟುವುದು, ಚಪ್ಪಾಳೆ ಹೊಡೆಯುವುದು. ಆ ಮೂಲಕ ಮಾತಿಲ್ಲದೇ ಚೌಕಾಶಿ, ಬೆಲೆ ನಿರ್ಧಾರ ನಡೆಯುತ್ತದೆ. ಒಮ್ಮೆ ಬೆಲೆ ನಿರ್ಧಾರವಾದ ನಂತರ ಚೀಸ್ ಗಳನ್ನೂ ಹಳೆಯಕಾಲದ ಮಾದರಿಯಲ್ಲಿಯೇ ಇಬ್ಬರು ಹೊತ್ತುಕೊಂಡು ಹೋಗಿ ತಕ್ಕಡಿಯಲ್ಲಿಟ್ಟು ತೂಗುತ್ತಾರೆ. ನಂತರ ಅದನ್ನು ದೋಣಿಗಳಲ್ಲಿ ತುಂಬಿಸಿಕೊಂಡು ಕಾಲುವೆಯಲ್ಲಿ ಸಾಗಿಸುತ್ತಾರೆ. ಇಂದು ಇದು ನಾಟಕೀಯವಾಗಿ ನಡೆಯುತ್ತದೆ ನಿಜ, ಆದರೆ ಹಿಂದಿನ ಕಾಲದಲ್ಲಿ ಚೀಸ್ ನ ಮಾರಾಟ ಹೇಗೆ ನಡೆಯುತ್ತಿತ್ತು ಎಂಬ ಕಲ್ಪನೆ ನಮಗೆ ಬರುತ್ತದೆ.

(ಚೀಸ್ ಮೇಡ್)

ಈ ಮಾರುಕಟ್ಟೆಯಲ್ಲಿ ಒಂದೊಂದು ಕೆಲಸಮಾಡುವ ಕೆಲಸಗಾರರಿಗೂ ಒಂದೊಂದು ಬಗೆಯ ಉಡುಪುಗಳು- ಚೀಸ್ ಅನ್ನು ಹೊಂದಿಸಿ ಇಡುವವರು ನೀಲಿಯ ಶರ್ಟ್ ಮತ್ತು ಕಪ್ಪು ಪ್ಯಾಂಟ್ಸ್ ಧರಿಸಿರುತ್ತಾರೆ, ಚೀಸ್ ಅನ್ನು ಹೊತ್ತೊಯ್ಯುವವರು ಬಿಳಿಯ ಬಟ್ಟೆಯನ್ನು ಧರಿಸಿರುತ್ತಾರೆ. ಮಾರುಕಟ್ಟೆಯ ಮುಖ್ಯ ನಿರ್ವಾಹಕ (ಆತನನ್ನು ಚೀಸ್ ಫಾದರ್ ಎಂದು ಕರೆಯುತ್ತಾರೆ) ಬಿಳಿಯ ಬಟ್ಟೆ ಮತ್ತು ಕೇಸರಿ ಬಣ್ಣದ ಟೊಪ್ಪಿ ಧರಿಸಿ ಕೈಯ್ಯಲ್ಲಿ ಬೆಳ್ಳಿಯ ಹಿಡಿಕೆಯಿರುವ ಕಪ್ಪು ಊರುಗೋಲನ್ನು ಹಿಡಿದಿರುತ್ತಾನೆ. ಇದರಿಂದಾಗಿ ನೋಡಿದ ಕೂಡಲೇ ಯಾರು ಯಾವ ಕೆಲಸಮಾಡುವವರು ಎಂಬುದು ತಿಳಿದುಬಿಡುತ್ತದೆ. ಇವರೆಲ್ಲರ ಜೊತೆ ಡಚ್ಚರ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಚೀಮ್ ಮೇಡ್ (cheesemaid) ಗಳಿರುತ್ತಾರೆ. ಇವರ ಕೆಲಸ ಚೀಸ್ ಮತ್ತು ಚೀಸ್ ಮಾರುಕಟ್ಟೆಯ ಬಗ್ಗೆ ಪ್ರಚಾರ ಮಾಡುವುದು, ಯಾತ್ರಿಕರಿಗೆ ಮಾಹಿತಿ ನೀಡುವುದು, ರುಚಿನೋಡಲು ಚೀಸ್ ತುಣುಕುಗಳನ್ನು ಕೊಡುವುದು.

ಚೀಸ್ ಮಾರುಕಟ್ಟೆಯಲ್ಲಿ ಬೆಲೆ ಚೌಕಾಶಿಮಾಡಿ ಕೈ ಮುಟ್ಟುತ್ತಾ, ಒಬ್ಬರು ಇನ್ನೊಬ್ಬರ ಕೈಗೆ ಚಪ್ಪಾಳೆ ಹೊಡೆಯುವುದನ್ನು ಮೊದಲಬಾರಿಗೆ ನೋಡಿದಾಗ ನನಗೆ ಚಿಕ್ಕಂದಿನಲ್ಲಿ ಅಪ್ಪನ ಕೊಟ್ಟಿಗೆಗೆ ಆಕಳುಗಳನ್ನು ಕೊಳ್ಳಲು ಗಿರಾಕಿಗಳನ್ನು ಕರೆತರುವ ದಲ್ಲಾಳಿಗಳ ನೆನಪಾಗಿತ್ತು. ಅಂದಿನ ದಿನಗಳಲ್ಲಿ ಅಪ್ಪ ಕೊಟ್ಟಿಗೆಯ ತುಂಬಾ ಆಕಳುಗಳನ್ನು ಸಾಕುತ್ತಿದ್ದ. ಏನಿಲ್ಲವೆಂದರೂ ಅಂದು ನಮ್ಮನೆಯಲ್ಲಿ ಸುಮಾರು ಹತ್ತಾರು ಆಕಳುಗಳು, ಕೆಲವು ಕರುಗಳು, ಎರಡು ಎತ್ತುಗಳು ಇರುತ್ತಿದ್ದವು. ಕೆಲವೊಂದನ್ನು ಮಾರಬೇಕೆನಿಸಿದಾಗ ಅಪ್ಪ ದಲ್ಲಾಳಿಗೆ ಸುದ್ದಿಮುಟ್ಟಿಸುತ್ತಿದ್ದ. ಆತ ಆಕಳನ್ನು ನೋಡಲು ಗಿರಾಕಿಯನ್ನು ಕರೆದುಕೊಂಡು ಬರುತ್ತಿದ್ದ. ಬಂದವರು ನೋಡಿ, ಆಕಳು ಇಷ್ಟವಾಗಿ ಅದನ್ನು ಕೊಳ್ಳುವ ಮನಸ್ಸಾದ ನಂತರದಲ್ಲಿ ಗಿರಾಕಿ, ದಲ್ಲಾಳಿ, ಮತ್ತು ಅಪ್ಪನ ನಡುವೆ ಬೆಲೆಯ ಚೌಕಾಶಿ ಪ್ರಾರಂಭವಾಗುತ್ತಿತ್ತು. ಅದನ್ನು ನಾನು ಮತ್ತು ನನ್ನ ತಮ್ಮ ತಪ್ಪದೇ ನೋಡಿ ಖುಷಿಪಡುತ್ತಿದ್ದೆವು. ಅದು ನಡೆಯುವುದು ಹೀಗೆ- ಮೂವರಲ್ಲಿ ಯಾರೂ ಬೆಲೆಯನ್ನು ಬಾಯಿಬಿಟ್ಟು ಹೇಳುವಂತಿಲ್ಲ. ಮೊದಲು ದಲ್ಲಾಳಿ ಅಪ್ಪನ ನಿರೀಕ್ಷೆ ಎಷ್ಟೆಂಬುದನ್ನು ತಿಳಿದುಕೊಳ್ಳಬೇಕು. ಅಪ್ಪ ಮತ್ತು ದಲ್ಲಾಳಿ ಎದುರುಬದರು ನಿಂತು ಕೈ ಹಿಡಿದುಕೊಳ್ಳುತ್ತಾರೆ, ಆತ ಇಬ್ಬರ ಹಸ್ತಗಳೂ ಮುಚ್ಚುವಂತೆ ಒಂದು ಟವೆಲ್ ಹಾಕುತ್ತಾನೆ. ನಂತರ ಆತನ ಬೆರಳುಗಳನ್ನು ಮುಟ್ಟುವ ಮೂಲಕ ತಾನು ನಿರೀಕ್ಷಿಸುತ್ತಿರುವ ಬೆಲೆಯನ್ನು ಅಪ್ಪ ತಿಳಿಸಬೇಕು. ಆತನಿಗೆ ಅಪ್ಪ ಕೇಳುತ್ತಿರುವ ಬೆಲೆ ಜಾಸ್ತಿ ಎಂದು ಎನಿಸಿದರೆ ಆತ “ಹೆಗಡೇರೆ ನೀವು ಆ ಬೆರಳು ಬಿಡಿ, ಅಷ್ಟಾದರೆ ಕಷ್ಟ” ಎನ್ನುತ್ತಾನೆ, ಆಗ ಅಪ್ಪ ಆ ಬೆರಳಿನ ಅರ್ಧ ಮುಟ್ಟುತ್ತಾರೆ, ಹೀಗೆಯೇ ಚೌಕಾಶಿ ನಡೆಯುತ್ತದೆ. ಆತ ಇನ್ನೂ ಬೆಲೆ ಕಡಿಮೆ ಮಾಡಿಸತೊಡಗಿದರೆ ಅಪ್ಪ “ಇಲ್ರೀ ಇದಕ್ಕಿಂತ ಕಡಿಮೆ ಆದರೆ ನನಗೆ ಪೂರೈಸುವುದಿಲ್ಲ, ಆಕಳ ಹುಲ್ಲು, ದಾಣಿಯ ಖರ್ಚಾದರೂ ಹುಟ್ಟಬೇಕಲ್ಲಾ” ಎನ್ನುತ್ತಾರೆ. ಅಂತೂ ಜಗ್ಗಾಟ ಎಳೆದಾಟಗಳ ನಡುವೆ ಒಂದು ಬೆಲೆ ನಿರ್ಧಾರವಾಗುತ್ತದೆ. ಇಷ್ಟೆಲ್ಲಾ ನಡೆಯುವಾಗ ಗಿರಾಕಿ ಪಕ್ಕದಲ್ಲಿ ಸುಮ್ಮನೆ ನಿಂತಿರುತ್ತಾನೆ. ನಂತರ ದಲ್ಲಾಳಿ ಗಿರಾಕಿಯ ಕೈ ಹಿಡಿದುಕೊಂಡು ಟವಲ್ ಹಾಕುತ್ತಾನೆ. ಆತನ ಕೈ ಬೆರಳುಗಳನ್ನು ಮುಟ್ಟುತ್ತಾ ಎಷ್ಟು ಬೆಲೆ ಕೊಟ್ಟು ಆತ ಆಕಳನ್ನು ಕೊಳ್ಳಬಹುದು ಎಂಬುದನ್ನು ತಿಳಿಸುತ್ತಾನೆ. ಈಗ ಅವರಿಬ್ಬರ ನಡುವೆ ಆ ಬೆರಳು ಬಿಡಿ, ಈ ಬೆರಳು ಬಿಡಿ, ಅಷ್ಟಾದರೆ ಸಾಧ್ಯವಿಲ್ಲ, ಇದಕ್ಕಿಂತ ಕಡಿಮೆ ಸಾಧ್ಯವಿಲ್ಲ ಇತ್ಯಾದಿ ಸಂಭಾಷಣೆಗಳು ವಿನಿಮಯವಾಗುತ್ತವೆ.

(ಚಿತ್ರಗಳು: ಶ್ರೀಧರ ಹೆಗಡೆ ಮತ್ತು ರಾಜೀವ ಭಟ್)

ಕೊನೆಗೊಂದು ಬೆಲೆಗೆ ದಲ್ಲಾಳಿ ಗಿರಾಕಿಯನ್ನು ಒಪ್ಪಿಸುತ್ತಾನೆ. ನಂತರ ಗಿರಾಕಿಯ ಬಳಿ ಹಣವನ್ನು ತೆಗೆದುಕೊಂಡು ಅಪ್ಪನಿಗೆ ಎಷ್ಟು ಕೊಡಬೇಕೋ ಅಷ್ಟನ್ನು ಕೊಟ್ಟು, ಉಳಿದದ್ದನ್ನು ಮೆಲ್ಲಗೆ ತನ್ನ ಜೇಬಿಗೆ ಇಳಿಸುತ್ತಾನೆ. ಆತ ಮಾಡುವುದೇನೆಂದರೆ ಅಪ್ಪ ಹೇಳಿದ ಬೆಲೆಗಿಂತ ಸ್ವಲ್ಪ ಜಾಸ್ತಿ ಬೆಲೆ ಗಿರಾಕಿಯಿಂದ ವಸೂಲಿಮಾಡಿ ತನ್ನ ಕಮಿಷನ್ ತೆಗೆದುಕೊಳ್ಳುವುದು. ಎಷ್ಟು ತೆಗೆದುಕೊಂಡ ಎಂಬುದು ಅವನನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗುವುದಿಲ್ಲ, ಅದಕ್ಕಾಗಿಯೇ ಈ ರೀತಿ ಕಣ್ಣಾಮುಚ್ಚಾಲೆ. ಆದರೆ ಇದು ನೋಡಲು ಭಾರೀ ತಮಾಷೆಯಾಗಿರುತ್ತಿತ್ತು. ಇಂದಿನ ಕಾಲದಂತೆ ಕ್ಯಾಮೆರಾ ಅಥವಾ ಫೋನ್ ಇದ್ದಿದ್ದರೆ ಫೋಟೋ, ವಿಡಿಯೋ ಮಾಡಿಕೊಳ್ಳಬಹುದಿತ್ತು. ಈಗ ಬಹುಶಃ ಈ ರೀತಿ ಬೆಲೆ ನಿರ್ಧಾರ ನಡೆಯುವುದೇ ಇಲ್ಲವೇನೋ.

ಅಪ್ಪನಿಗೆ ವಯಸ್ಸಾದಂತೆ ಅವನ ಆಕಳುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಈಗ ಅಪ್ಪನ ಕೊಟ್ಟಿಗೆಯಲ್ಲಿ ಒಂದೆರಡು ಆಕಳುಗಳು ಮಾತ್ರ ಇದ್ದವು. ನಾವೂ ಕೂಡ ಅಪ್ಪನನ್ನು ಒತ್ತಾಯಿಸಿ ಇನ್ನು ನಿನ್ನ ಬಳಿ ನಿಭಾಯಿಸಲು ಆಗುವುದಿಲ್ಲ, ಆಕಳುಗಳನ್ನು ಮಾರಿಬಿಡು ಎಂದು ಆಕಳುಗಳನ್ನು ಮಾರಿಸಿದ್ದಾಯಿತು. ಆದರೆ ಚಿಕ್ಕಂದಿನಲ್ಲಿ ನೋಡಿದ ಕೊಟ್ಟಿಗೆ ಇಂದು ಬಿಕೋ ಎನ್ನುತ್ತದೆ. ಈಗ ಆಕಳುಗಳನ್ನು ಮಾರುವ, ಕೊಳ್ಳುವ ವಿಧಾನಗಳೂ ಸಹ ಬದಲಾಗಿವೆ. ಮೊನ್ನೆಯಷ್ಟೇ ಅಪ್ಪ ಇನ್ನೊಂದು ಆಕಳನ್ನು ಮಾರಿದನಂತೆ. ಗಿರಾಕಿಗೆ ವಾಟ್ಸಾಪ್ ನಲ್ಲಿ ಆಕಳ ಫೋಟೋ ಕಳುಹಿಸಿ, ಬೆಲೆ ಚೌಕಾಶಿ ನಡೆಸಿ, ಆನಂತರ ಗಿರಾಕಿ ಟ್ರಕ್ ತಂದು ಆಕಳನ್ನು ಒಯ್ದನಂತೆ. ಕಾಲ ಬದಲಾದಂತೆ, ದಲ್ಲಾಳಿಗಳ ಅಗತ್ಯ ಕಡಿಮೆಯಾದಂತೆ ಅವರೂ ಸಹ ಬೇರೆ ಯಾವುದೊ ಕಸುಬಿಗೆ ಸರಿದಿದ್ದಾರೆ. ಕಳೆದ ಹಲವಾರು ವರ್ಷಗಳಲ್ಲಿ ಏನೇನೋ ಬದಲಾಗಿವೆ, ಅಪ್ಪನಿಗೆ ವಯಸ್ಸಾಗುತ್ತಿದೆ, ಕೊಟ್ಟಿಗೆ ಬರಿದಾಗುತ್ತಿದೆ, ನಾನು ಊರಿಂದ ದೂರ ಬಂದಿದ್ದೇನೆ- ಬರೀ ದೇಹದಿಂದ ಮಾತ್ರ, ಮನಸ್ಸಿನಿಂದಲ್ಲ. ಹಾಗೆ ನೋಡಿದರೆ ಇಲ್ಲಿನ ಚೀಸ್ ಮಾರುಕಟ್ಟೆಗೂ ಅಪ್ಪನ ಕೊಟ್ಟಿಗೆಗೂ ಸಂಬಂಧವೇ ಇಲ್ಲ, ಆದರೂ ಕೂಡ ಇಲ್ಲಿ ನಡೆಯುವ ಯಾವ್ಯಾವುದೋ ಘಟನೆಗಳು ಮತ್ತೆ ಮತ್ತೆ ಬಾಲ್ಯಕ್ಕೆ, ನನ್ನೂರಿಗೆ ಎಳೆದುಕೊಂಡು ಹೋಗುತ್ತಲೇ ಇರುತ್ತವೆ. ಅಲ್ಲಿಯ ನೆನಪೇ ಅಪ್ಯಾಯಮಾನ.


ಕೊನೆಯಲ್ಲೊಂದು ಮಾಹಿತಿ- ಚೀಸ್ ಯಾವತ್ತೂ ಸಸ್ಯಾಹಾರಿ ಎಂದುಕೊಳ್ಳುವುದು ತಪ್ಪು. ಚೀಸ್ ತಯಾರಿಸುವಾಗ ಹಾಲನ್ನು ಒಡೆಸಿ ಘನೀಕರಿಸಲು ರೆನೆಟ್ (rennet) ಎನ್ನುವ ಪದಾರ್ಥವನ್ನು ಬಳಸುತ್ತಾರೆ. ಅದು ಆಕಳ ಕರುಗಳ ಹೊಟ್ಟೆಯ ಒಳಪದರದಿಂದ ಮಾಡಿರುವಂಥದು. ನಮ್ಮ ದೇಶದಲ್ಲಿ ಇದನ್ನು ಉಪಯೋಗಿಸಲಿಕ್ಕಿಲ್ಲ, ಆದರೆ ಯುರೋಪ್ ನಲ್ಲಿದ್ದು ಚೀಸ್ ಕೊಳ್ಳುವುದಾದರೆ ಇದರ ಬಗ್ಗೆ ವಿಚಾರಿಸಿಕೊಳ್ಳುವುದು ಉತ್ತಮ. ಕಾಫ್‍ ರೆನೆಟ್ (calf rennet) ಬದಲಾಗಿ ಸಸ್ಯಾಧಾರಿತ ರೆನೆಟ್ ಅಥವಾ ಕೆಲವು ಮೈಕ್ರೋಬಯಲ್ ರೆನೆಟ್ (microbial rennet) ಉಪಯೋಗಿಸಿ ಮಾಡಿದ ಚೀಸ್ ಗಳು ಕೂಡ ಸಿಗುತ್ತವೆ. ವಿಚಾರಿಸಿ-ಕೊಳ್ಳಿ!