ಇತ್ತೀಚೆಗಂತೂ ದೇವರ ಆರಾಧನೆಯ ಜೊತೆ ಜೊತೆಗೆ ಪುರುಷ ಪ್ರಯತ್ನಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಕಲಿತಿದ್ದೇನೆ. ದೇವರು ಒಂಥರಾ ರಾಸಾಯನಿಕ ಕ್ರಿಯೆಯ ‘ಕ್ರಿಯಾವರ್ಧಕ’ (ಕ್ಯಾಟಲಿಸ್ಟ್) ಇದ್ದ ಹಾಗೆ ಎಂದು ನಂಬಿದ್ದೇನೆ. ವ್ಯಕ್ತಿ ತಾನು ಮಾಡುವ ಕಾರ್ಯಗಳಿಂದ ದೇವರ ಸ್ಥಾನಕ್ಕೆ ಏರಬಹುದು ಎಂದು ಹಲವು ಮಹಾನುಭಾವರ ಜೀವನದಿಂದ ತಿಳಿದುಕೊಂಡಿದ್ದೇನೆ. ಆದರೂ ಹಲವರು ದೇವರ ಹೆಸರಲ್ಲಿ ಜಗಳವಾಡುವುದನ್ನು ನೋಡಿ ವಿಚಿತ್ರ ಎನಿಸುತ್ತದೆ. ‘ಪ್ರಯತ್ನವೇ ದೇವರು’ ಎಂಬ ಜೊತೆಗೆ ಧೈರ್ಯವಿದ್ದರೆ ನಾವು ಎಂತಹ ಕಾರ್ಯವನ್ನಾದರೂ ಸಾಧಿಸಬಹುದು ಎಂಬ ನಂಬಿಕೆ ಬಂದಿದೆ.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತನೆಯ ಕಂತು ನಿಮ್ಮ ಓದಿಗೆ

 ದೇವರಾಗಲು ಹೊರಟ ದೇವರಾಗಲಿಲ್ಲ
ಮನುಜನಾಗಲು ಹೊರಟ ದೇವರಾದನಲ್ಲ!

ಎಂಬ ಗೀತೆಯನ್ನು ನನಗೆ ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. ದೇವರ ಇರುವಿಕೆಯ ಬಗ್ಗೆ ನನಗೆ ಈಗೀಗ ಗೊಂದಲ ಮೂಡುತ್ತಾದರೂ ನಾನು ಚಿಕ್ಕಂದಿನಿಂದಲೂ ಆಸ್ತಿಕ ವಾತಾವರಣದಲ್ಲಿ ಬೆಳೆದಿದ್ದುದರಿಂದ ನನಗೆ ದೇವರ ಬಗ್ಗೆ ಇರುವ  ಅಪಾರ ಭಕ್ತಿಯು ಆ ಗೊಂದಲವನ್ನು ಹೋಗಲಾಡಿಸುತ್ತದೆ.. ನಾನು ಬೆಳೆದ ಅಜ್ಜಿಯ ಮನೆಯು ವೀರಭದ್ರ ದೇಗುಲದ ಸನಿಹವೇ ಇದ್ದುದರಿಂದ ಹಾಗೂ ಅದರ ಹತ್ತಿರವೇ ಬಸವಣ್ಣನ ಗುಡಿಯೂ ಇದ್ದುದರಿಂದ ನನ್ನಲ್ಲಿ ದೈವಿಕ ಭಾವನೆ ತುಸು ಹೆಚ್ಚೇ ಇತ್ತು. ಮನೆಯಲ್ಲಿ ನನ್ನಜ್ಜಿ ಪ್ರತೀ ಸೋಮವಾರ ಶಿವಪೂಜೆಯನ್ನು ಮಾಡದೇ ಊಟವನ್ನೂ ಸಹ ಮಾಡುತ್ತಿರಲಿಲ್ಲ. ಅಲ್ಲದೇ ವೀರಭದ್ರ ಸ್ವಾಮಿಯ ಜಾತ್ರಾ ಸಮಯದಲ್ಲಿ ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳು ತಂದ ಕಾಯಿಗಳನ್ನು ಒಡೆದುಕೊಡಲು ದೇಗುಲಕ್ಕೆ  ಹೋಗುತ್ತಿದ್ದೆ. ನಾಗರಪಂಚಮಿಯ ದಿನ ಊರಲ್ಲಿ ಇರುವ ಎಲ್ಲಾ ದೇಗುಲಗಳಿಗೂ ಹೋಗಿ ಕಾಯಿ ಒಡೆಯುವ ಆಚರಣೆ ಆ ಊರಲ್ಲಿದ್ದುದರಿಂದ ನಾನೇ ಎಲ್ಲಾ ದೇಗುಲಗಳಿಗೂ ಹೋಗುತ್ತಿದ್ದೆ. ನನ್ನಮ್ಮನೂ ಸಹ ದೈವ ಭಕ್ತರಾದ್ದರಿಂದ ನನಗೆ ಆ ಪ್ರಭಾವವೂ ಇತ್ತು.

ನನ್ನ ಅಜ್ಜಿ ಮನೆಯಲ್ಲಿ ಯಾವುದಾದರೂ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವಾಗ ದೇವರನ್ನು ಕೇಳುವ ವಾಡಿಕೆಯಿತ್ತು. ಆಗ ಅದೇ ಊರಲ್ಲಿದ್ದ ಒಬ್ಬರ ಮೈಮೇಲೆ ದೇವರು ಬರುತ್ತಿತ್ತು ಎಂಬ ನಂಬಿಕೆಯಿಂದ ಅವರನ್ನು ಮನೆಗೆ ಕರೆಸಿ ಕೇಳುತ್ತಿದ್ದರು. ಅವರು ಆಗ ವರ್ತಿಸುವ ರೀತಿ ಹಾಗೂ ಉತ್ತರಿಸುತ್ತಿದ್ದ ರೀತಿಯನ್ನು ನೋಡಿ ನಾನು ತುಂಬಾ ನಗುತ್ತಿದ್ದೆ. ಆಗ ಮನೆಯಲ್ಲಿ ಬೈದು ‘ದೇವರಿಗೆ ಅಣಕಿಸಬಾರದು ಶಾಪ ಕೊಡುತ್ತದೆ’ ಎಂದು ಹೆದರಿಸುತ್ತಿದ್ದರು. ಈ ಕಾರಣ ಮನೆಗೆ ದೇವರನ್ನು ಹಿಡಿದುಕೊಂಡು ಯಾರೇ ಬಂದರೂ ಅವರಿಗೆ ಅಕ್ಕಿಯನ್ನೇ ನೀಡುತ್ತಿದ್ದೆ.

ದೇಗುಲದಲ್ಲಿ ಆಗ ಅಪ್ಪಣೆ ಕೇಳುವ ಪದ್ಧತಿಯಿತ್ತು. ಅದು ಈಗಲೂ ಇದೆ. ಹೇಗೆಂದರೆ ದೇವರ ಮುಂದೆ ಕುಳಿತು ಎಡ ಅಥವಾ ಬಲಗಡೆಯ ಹೂವಿನ ಪ್ರಸಾದ ಕೇಳುತ್ತಾರೆ. ದೇವರ ಮೇಲಿನ ಹೂವು ಕೆಳಕ್ಕೆ ಬೀಳುವ ಬದಿಯ ಆಧಾರದ ಮೇಲೆ ಕೆಲಸ ಆಗುತ್ತೋ, ಬಿಡುತ್ತೋ ಅನ್ನೋ  ನಿರ್ಧಾರ ಮಾಡುತ್ತಾರೆ. ಆ ಸಮಯದಲ್ಲಿ ದೇವರ ಮೂರ್ತಿಯ ಮುಂದೆ ಕುಳಿತವರು ಆ ಮೂರ್ತಿಯೊಡನೆ ಮಾತಾಡುತ್ತಿದ್ದ ಪರಿ ಮಾತ್ರ ನನ್ನನ್ನು ಬೆರಗುಗೊಳಿಸುತ್ತಿತ್ತು. ನಾರ್ಮಲ್ ಮನುಷ್ಯರ ಜೊತೆಯಲ್ಲಿ ಮಾತಾಡುವ ರೀತಿಯಲ್ಲಿ  ದೇವರೊಡನೆ ಏಕಮುಖವಾಗಿ ಸಂಭಾಷಿಸುತ್ತಿದ್ದ ರೀತಿ ಮಾತ್ರ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿತ್ತು. ಕಾರಣವಿಷ್ಟೇ, ನಮ್ಮ ಮೇಷ್ಟ್ರು ಕಥೆ ಹೇಳುವಾಗ ಹಿಂದೆ ಋಷಿಮುನಿಗಳು ದೇವರನ್ನು ಒಲಿಸಿಕೊಳ್ಳಲು ಕಾಡಿಗೆ ಹೋಗಿ ನೂರಾರು ವರ್ಷ ತಪಸ್ಸು ಮಾಡುತ್ತಿದ್ದರಂತೆ ಎಂದು ಹೇಳುತ್ತಿದ್ದರು. ಅಲ್ಲದೇ ನಾವು ಹಳೇ ಭಕ್ತಿ ಪ್ರಧಾನ ಚಲನಚಿತ್ರಗಳನ್ನು ನೋಡುವಾಗ ಇದೇ ರೀತಿಯ ಸನ್ನಿವೇಶಗಳನ್ನು ತೋರಿಸುತ್ತಿದ್ದರು. ಚಳಿ ಮಳೆ ಬಿಸಿಲೆನ್ನದೇ ಅವರು ಕಠಿಣ ತಪಸ್ಸು ಮಾಡಿದ ನಂತರ ದೇವರು ಅವರಿಗೆ ಪ್ರತ್ಯಕ್ಷವಾಗುತ್ತಿದ್ದ. ದೇವರನ್ನು ಒಲಿಸಿಕೊಳ್ಳೋಕೆ ಅಷ್ಟೊಂದು ಕಷ್ಟ ಪಡುತ್ತಿದ್ದರು ಋಷಿಮುನಿಗಳು. ಆದರೆ ಈಗ ಬರೀ ಕ್ಷಣಾರ್ಧದಲ್ಲಿಯೇ ದೇವರ ಜೊತೆ ಹೀಗೆ ಮಾತಾಡುತ್ತಾರಲ್ಲಾ! ಅದು ಹೇಗೆ ಎಂಬ ಪ್ರಶ್ನೆಯೂ ಮೂಡುತ್ತಿತ್ತು. ಯಾರಿಗಾದರೂ ಕೇಳಿದರೆ ಅವರು ಬಯ್ದಾರು ಎಂಬುದಕ್ಕಿಂತ ದೇವರು ಎಲ್ಲಿ ಶಾಪ ಕೊಡುತ್ತೋ ಎಂಬ ಭಯವೇ ನನಗೆ ಆ ರೀತಿಯ ಪ್ರಶ್ನೆಗಳನ್ನು ಸುಪ್ತವಾಗಿರಿಸಿತ್ತು.

ಒಮ್ಮೆ ಚಿಕ್ಕವನಿದ್ದಾಗ ಹನುಮಪ್ಪನ ಗುಡಿಗೆ ಹೋಗಿ ಬಂದು ಶಾಲೆಗೆ ಹೋಗಿದ್ದೆ. ಅಂದು ಮೇಷ್ಟ್ರು ಕೊಟ್ಟ ಲೆಕ್ಕಗಳನ್ನೆಲ್ಲಾ ಸರಿ ಮಾಡಿ ಅವರಿಂದ ‘ಗುಡ್’ ಎನಿಸಿಕೊಂಡಿದ್ದೆ. ಇದರ ಕ್ರೆಡಿಟ್ಟನ್ನು ನಾನು ಹನುಮಪ್ಪನಿಗೆ ಕೊಟ್ಟಿದ್ದೆ. ಏಕೆಂದರೆ ನಾನು ಗಣಿತದಲ್ಲಿ ಆಗ ಡಲ್ ಇದ್ದೆ. 7ನೇ ತರಗತಿಯಿಂದ ನನಗೆ ಆಗ ಗಣಿತ ಪಾಠ ಮಾಡಿದ ಬುಡೇನ್ ಸಾಬ್ ಮೇಷ್ಟ್ರ ಪ್ರಭಾವದಿಂದ ಗಣಿತ ಸುಲಭವಾಯಿತಲ್ಲದೇ ಫೇವರೇಟ್ ಸಬ್ಜೆಕ್ಟ್ ಕೂಡ ಆಯ್ತು!!

ಚಿಕ್ಕವನಿದ್ದಾಗ ನನಗೆ ಕ್ರಿಕೆಟ್ ಹುಚ್ಚು ವಿಪರೀತ ಇತ್ತು. ಅದರಲ್ಲೂ ಸಚಿನ್ ತೆಂಡೂಲ್ಕರ್ ನನ್ನ ಫೇವರೇಟ್ ಆಟಗಾರ. ಆಗ ಅವನು ಔಟಾದನೆಂದರೆ ಭಾರತ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಇದ್ದ ಕಾಲ. ತೆಂಡೂಲ್ಕರ್ ಶತಕದ ಅಂಚಿನಲ್ಲಿದ್ದ ಸಮಯದಲ್ಲಿ ಅಥವಾ ಭಾರತವು ಸೋಲಿನ ಸುಳಿಯಲ್ಲಿದ್ದ ಸಮಯದಲ್ಲಿ ದೇವರಿಗೆ ಕಾಯಿ ಒಡೆಸುತ್ತೇನೆಂದು ನಾನು ಹರಕೆ ಕಟ್ಟಿಕೊಳ್ಳುತ್ತಿದ್ದೆ!!  ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಾನು ಪರೀಕ್ಷೆ ಬರೆಯುವ ಪ್ಲೈವುಡ್ ರಟ್ಟಿಗೆ ದೇವರ ಫೋಟೋವನ್ನೇ ಅಂಟಿಸಿಕೊಂಡು ಹೋಗ್ತಾ ಇದ್ದೆ. ಪ್ರೌಢಶಾಲೆಗೂ ಸಹ ಮಠದ ಶಾಲೆ ಸೇರಿದ್ದರಿಂದ ದೈವಭಕ್ತಿ ಮತ್ತೂ ಹೆಚ್ಚಾಗುತ್ತಾ ಹೋಯಿತು. ಭಜನೆ, ಧ್ಯಾನ ಮುಂತಾದವುಗಳನ್ನು ಅಲ್ಲಿ ಮಾಡಿಸಲಾಗುತ್ತಿತ್ತು. ತಮಾಷೆ ಏನೆಂದರೆ ನಾನು ಆಗ ಪರೀಕ್ಷೆ ಬರೆಯಲು ಹೊಸ ರೇನಾಲ್ಡ್ಸ್ ಪೆನ್ನು ತೆಗೆದುಕೊಂಡು ಬನಶಂಕರಿ ದೇಗುಲಕ್ಕೆ ಹೋಗಿ ದೇವರ ಮುಂದಿಟ್ಟು ಪ್ರಾರ್ಥಿಸಿಕೊಂಡು ಅದೇ ಪೆನ್ನನ್ನು ಪರೀಕ್ಷೆ ಬರೆಯಲು ತೆಗೆದುಕೊಂಡು ಹೋಗುತ್ತಿದ್ದೆ!!

ಆಗ ನಮ್ಮೂರ ಬದಿಯಲ್ಲಿ ಮದುವೆ ಮಾಡಲು ಸಂಬಂಧ ಬೆಳೆಸುವ ಮುನ್ನ ದೇವರ ಅಪ್ಪಣೆ ಕೇಳೋ ಪದ್ಧತಿ ಇತ್ತು. ಇಂದಿಗೂ ಇದು ಕೆಲವರ ಮನೆಯಲ್ಲಿ ಜಾರಿಯಲ್ಲಿದೆ. ಹೂವು ಬೀಳುವ ಆಧಾರದ ಮೇಲೆ ಅವರ ಸಂಬಂಧ ಮುಂದುವರೆಯುತ್ತಿತ್ತು!! ಕೆಲವರು ಮದುವೆಯಾಗಲು ಇಷ್ಟವಾಗದವರು ನೇರವಾಗಿ ಒಪ್ಪಿಗೆ ಇಲ್ಲ ಎಂದು ಹೇಳುವ ಬದಲು ದೇವರ ಮೇಲೆ ಹೊತ್ತಾಕಿ ಜಾರಿಕೊಂಡು ಬಿಡುತ್ತಿದ್ದರು!! ಇದೇ ಘಟನೆಗೆ ಸಂಬಂಧಿಸಿದಂತೆ ನನ್ನ ಗೆಳೆಯ ಹೇಳಿದ ಘಟನೆಯನ್ನು ಹೇಳುತ್ತೇನೆ ಕೇಳಿ. ಒಬ್ಬ ಹುಡುಗ ಒಬ್ಬಳನ್ನು ತುಂಬಾ ಇಷ್ಟಪಟ್ಟು ಅವಳನ್ನು ಮದುವೆಯಾಗಲು ಅವರ ಅಪ್ಪನ ಬಳಿ ಕೇಳಿದನಂತೆ. ಆಗ ಅವರು “ನಮ್ಮೂರ ದೇವರ ಪ್ರಸಾದ (ಅಪ್ಪಣೆ) ಕೇಳುತ್ತೇನೆ. ಅದು ಬಲಗಡೆಯ ಪ್ರಸಾದ ಕೊಟ್ಟರೆ ಓಕೆ” ಎಂದು ಹೇಳಿದರಂತೆ. ಆಗ ಅವನಿಗೆ ಪೀಕಲಾಟ ಶುರು ಆಯ್ತಂತೆ. ಒಂದೊಮ್ಮೆ ದೇವರ ಎಡಬದಿಯಿಂದ ಹೂವು ಕೆಳಗೆ ಬಿದ್ದರೆ ಮದುವೆಯಾಗೋಕೆ ಸಾಧ್ಯವಿಲ್ಲ ಎಂದುಕೊಂಡು ಬೇಸರದಲ್ಲಿ ತನ್ನ ಗೆಳೆಯನ ಬಳಿ ಬಂದು ತನ್ನ ಸಮಸ್ಯೆ ಹೇಳಿಕೊಂಡನಂತೆ. ಆಗ ಅವರು ಒಂದು ಪ್ಲ್ಯಾನ್ ಮಾಡಿದರಂತೆ. ಅವರು ಅರ್ಚಕನ ಬಳಿ ಹೋಗಿ ನಡೆದ ವಿಷಯವನ್ನೆಲ್ಲಾ ಹೇಳಿ ‘ದಯಮಾಡಿ ಸಹಾಯ ಮಾಡಿ’ ಎಂದು ಒಂದಷ್ಟು ಹಣವನ್ನು ಅವರಿಗೆ ಕೊಟ್ಟರಂತೆ. ಅವರು ಆಗಲಿ ಎಂದು ದೇವರ ಮೂರ್ತಿಯ ಬಲಬದಿಯ ಹೂವು ಬೇಗನೇ ಬೀಳುವಂತೆ ಹಾಗೂ ಎಡಗಡೆಯ ಹೂವು ಬೀಳದಿರುವಂತೆ ವ್ಯವಸ್ಥೆ ಮಾಡಿ ಹೂವನಿಟ್ಟು ಪೂಜೆ ಮಾಡಿದರಂತೆ. ಮಾರನೇ ದಿನ ವಧುವಿನ ತಂದೆ ಹೋಗಿ ಪ್ರಸಾದ ಕೇಳಿದಾಗ ಅವರ ಪ್ಲ್ಯಾನಿನಂತೆಯೇ ನಡೆದು ಮದುವೆ ಮಾಡಿಕೊಟ್ಟರಂತೆ!

ಕೆಲವರು ಪ್ರಶ್ನೆ ಮಾಡುವುದುಂಟು. ದೇವರ ರೂಪ ಹೇಗಿದೆ? ಯಾರು ನೋಡಿದ್ದಾರೆ? ಅವನು ನಮ್ಮ ಕಷ್ಟಗಳಲ್ಲಿ ನೇರವಾಗಿ ಅವನೇ ಪ್ರತ್ಯಕ್ಷನಾಗಿ ಬಂದು ಸಹಾಯ ಮಾಡುತ್ತಾನ? ಎಂದು. ಇದಕ್ಕೆ ಪೂರಕವಾದ ಒಂದು ಕಥೆಯಿದೆ. ಒಂದೂರಿನಲ್ಲಿ ಒಬ್ಬ ಅಪಾರ ದೈವ ಭಕ್ತನಿದ್ದನಂತೆ. ಒಮ್ಮೆ ಅವರ ಊರಿನಲ್ಲಿ ಮಳೆಯಿಂದಾಗಿ ಪ್ರವಾಹ ಬರುವ ಸ್ಥಿತಿ ಉಂಟಾಯಿತಂತೆ. ಆಗ ಊರ ಜನರೆಲ್ಲರೂ ಇತರೆಡೆ ವಲಸೆ ಹೋಗಲು ನಿರ್ಧರಿಸಿ ಅವನನ್ನೂ ಕರೆದರಂತೆ. ದೈವ ಭಕ್ತ ಮಾತ್ರ ‘ದೇವರು ಬಂದು ನನ್ನ ಕಾಪಾಡುತ್ತಾನೆ’ ಎಂದು ಅಲ್ಲೇ ಉಳಿದುಕೊಂಡನಂತೆ. ಆಗ ಪ್ರವಾಹ ಹೆಚ್ಚಾಗಿ ಅವನ ಮನೆ ಮುಳುಗಿ ಹೋಗುವ ಸ್ಥಿತಿಯಾದಾಗ ಒಬ್ಬ ದೋಣಿ ತಂದು ಅವನ ಬಳಿ ಬಂದು ‘ಬಾ ನನ್ನ ಜೊತೆ’ ಎಂದನಂತೆ. ಅವನು “ದೇವರೇ ಬಂದು ನನ್ನನ್ನು ಬದುಕಿಸುತ್ತಾನೆ. ನಾನು ಬರುವುದಿಲ್ಲ” ಎಂದನಂತೆ. ಇದೇ ರೀತಿ ಮತ್ತೊಬ್ಬನು ಹೆಲಿಕ್ಯಾಪ್ಟರ್ ತಂದು ಅವನ ಬಳಿ ಹೋಗಿ ಹಗ್ಗ ಎಸೆದು “ಇದನ್ನು ಹಿಡಿದುಕೊಂಡು ಬಾ ನನ್ನ ಜೊತೆ. ನಿನ್ನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ” ಎಂದನಂತೆ. ಅವನು ಮೊದಲಿನ ರೀತಿಯೇ ಉತ್ತರಿಸಿ ಅಲ್ಲಿಯೇ ಉಳಿದು, ಪ್ರವಾಹ ಹೆಚ್ಚಾಗಿ ಸತ್ತು ಹೋದನಂತೆ. ಸ್ವರ್ಗದಲ್ಲಿ ದೇವರ ಬಳಿ “ದೇವರೇ ನಾನು ನಿನ್ನ ಅಪಾರ ಭಕ್ತ. ಆದರೂ ನನ್ನ ಉಳಿಸಲು ಬರಲಿಲ್ಲವೇಕೆ?” ಎಂದಾಗ ದೇವರು “ಅಯ್ಯೋ ಮೊದಲ ಬಾರಿ ಜನರ ರೂಪದಲ್ಲೂ, ನಂತರ ದೋಣಿಯವನ ರೂಪದಲ್ಲೂ, ತದನಂತರ ಹೆಲಿಕ್ಯಾಪ್ಟರ್ ತಂದವನ ರೂಪದಲ್ಲೂ ಬಂದಿದ್ದು ನಾನೇ. ಆದರೆ ರಕ್ಷಿಸಲು ಕರೆದಾಗ ನೀನೇ ಬರಲಿಲ್ಲ” ಎಂದಾಗ ಭಕ್ತನಿಗೆ ತುಂಬಾ ಆಶ್ಚರ್ಯವಾಯಿತಂತೆ! ನಾವು ಯಾರಿಗಾದರೂ ಕಷ್ಟದಲ್ಲಿದ್ದಾಗ ಸಹಾಯ ಮಾಡಿದಾಗ ದೇವರು ಬಂದ್ಹಂಗೆ ಬಂದು ನನ್ನ ಕಾಪಾಡಿದೆ ಎನ್ನುತ್ತಾರಲ್ಲವೇ?

ನನ್ನ ಹಲವರು ಗೆಳೆಯರಿದ್ದಾರೆ. ಅದರಲ್ಲಿ ಬಹುತೇಕರು ನಾಸ್ತಿಕರು. ಆದರೆ ಅವರೆಂದೂ ನನ್ನ ನಂಬಿಕೆಗೆ ಅಡ್ಡ ಬಂದಿಲ್ಲ. ನನ್ನನ್ನು ದೇಗುಲಕ್ಕೆ ಕರೆದುಕೊಂಡು ಹೋಗ್ತಾರೆ. ಆದರೆ ಅವರು ಮಾತ್ರ ದೇಗುಲದ ಒಳಗೆ ಅಪ್ಪಿ ತಪ್ಪಿಯೂ ಕಾಲಿಡುವುದಿಲ್ಲ!! ಇವರಿಗೆ ಕಷ್ಟ ಬಂದಾಗಲೂ ದೇವರ ಬಳಿ ಬೇಡುವುದಿಲ್ಲ. ಕೆಲವರು ಇರ್ತಾರೆ. ಇವರು ಸುಖವಿದ್ದಾಗ ದೇವರ ನಂಬದೇ ಇರುವ ಹಾಗೂ ಕಷ್ಟ ಬಂದಾಗ ದೇವರನ್ನು ನಂಬುವವರು!! ‘ಸಂಕಟ ಬಂದಾಗ ವೆಂಕಟ ರಮಣ’ ಅನ್ನೋ ರೀತಿಯವರು!! ಇಂತವರನ್ನು ಕುರಿತು ಡಿವಿಯವರು ತಮ್ಮ ಕಗ್ಗದಲ್ಲಿ

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ
ನಂಬಿಯುಂ ನಂಬದಿರುವಿಬ್ಬಂದಿ ನೀನು|
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು
ಸಿಂಬಳದ ನೊಣ ನೀನು ಮಂಕುತಿಮ್ಮ||         ಎಂದು ಹೇಳಿದ್ದಾರೆ.

ನಾನೂ ಸಹ ತುಂಬಾ ಪ್ರಯತ್ನ ಮಾಡಿಯೂ ನನ್ನ ಕೆಲಸಗಳು ಆಗದ ಸನ್ನಿವೇಶದಲ್ಲಿ ದೇವರ ಮೇಲೆ ಸಿಟ್ಟಾಗಿ ಪೂಜಿಸುವುದನ್ನು ಬಿಟ್ಟಿದ್ದೇನೆ. ಆದರೂ ಮೊದಲಿನಿಂದಲೂ ‘ದೇವರು ಸರ್ವಶಕ್ತ’ ಎಂಬ ಭಾವ ನನ್ನ ಮನದಲ್ಲಿ ಆಳವಾಗಿ ಬೇರೂರಿರುವುದಿಂದ ದೇವರ ಮೇಲಿನ ಶ್ರದ್ಧೆ, ಭಕ್ತಿಯನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಾಗುತ್ತಿಲ್ಲ.

ಆದರೆ ಇತ್ತೀಚೆಗಂತೂ ದೇವರ ಆರಾಧನೆಯ ಜೊತೆ ಜೊತೆಗೆ ಪುರುಷ ಪ್ರಯತ್ನಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಕಲಿತಿದ್ದೇನೆ. ದೇವರು ಒಂಥರಾ ರಾಸಾಯನಿಕ ಕ್ರಿಯೆಯ ‘ಕ್ರಿಯಾವರ್ಧಕ’ (ಕ್ಯಾಟಲಿಸ್ಟ್) ಇದ್ದ ಹಾಗೆ ಎಂದು ನಂಬಿದ್ದೇನೆ. ವ್ಯಕ್ತಿ ತಾನು ಮಾಡುವ ಕಾರ್ಯಗಳಿಂದ ದೇವರ ಸ್ಥಾನಕ್ಕೆ ಏರಬಹುದು ಎಂದು ಹಲವು ಮಹಾನುಭಾವರ ಜೀವನದಿಂದ ತಿಳಿದುಕೊಂಡಿದ್ದೇನೆ. ಆದರೂ ಹಲವರು ದೇವರ ಹೆಸರಲ್ಲಿ ಜಗಳವಾಡುವುದನ್ನು ನೋಡಿ ವಿಚಿತ್ರ ಎನಿಸುತ್ತದೆ. ‘ಪ್ರಯತ್ನವೇ ದೇವರು’ ಎಂಬ ಜೊತೆಗೆ ಧೈರ್ಯವಿದ್ದರೆ ನಾವು ಎಂತಹ ಕಾರ್ಯವನ್ನಾದರೂ ಸಾಧಿಸಬಹುದು ಎಂಬ ನಂಬಿಕೆ ಬಂದಿದೆ. ನಾವು ಮಾನಸಿಕವಾಗಿ ದುರ್ಬಲರಾಗಬಾರದು. ದುರ್ಬಲರ ಸಹಾಯಕ್ಕೆ ದೇವರೂ ಬರುವುದಿಲ್ಲ ಎನ್ನುತ್ತಾರೆ. ಇದರ ಬಗ್ಗೆ ತಿಳಿಸುವ ಸಂಸ್ಕೃತ ಶ್ಲೋಕ ಈ ರೀತಿ ಇದೆ.

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ನೈವ ಚ
ಅಜ ಪುತ್ರಾಂ ಬಲಿಂ ದದ್ಯಾತ್ ದೇವೋ ದುರ್ಬಲ ಘಾತ್ವಕಃ

ಇದರ ಅರ್ಥ ಹೀಗಿದೆ:- ದೇವರು ಕುದುರೆ, ಆನೆ, ಹುಲಿಯನ್ನು ಬಲಿ ಪಡೆಯುವುದಿಲ್ಲ. ಆದರೆ ಮೇಕೆ ಮರಿಯನ್ನು ಬಲಿ ಪಡೆಯುತ್ತಾನೆ. ದೇವರು ದುರ್ಬಲರನ್ನು ನಾಶಪಡಿಸುತ್ತಾನೆ. ಆದ್ದರಿಂದ ನಾವು ದುರ್ಬಲರಾಗದೇ ಧೈರ್ಯದಿಂದ ಆತ್ಮವಿಶ್ವಾಸದಿಂದ ಬದುಕಬೇಕು. ‘ಅವರವರ ನಂಬಿಕೆ ಅವರಿಗೆ’ ‘ದೇವನೊಬ್ಬ ನಾಮ ಹಲವು’  ಎಂಬ ಮನೋಭಾವ ಬೆಳೆಸಿಕೊಂಡು ಸರ್ವ ದೈವ ಆರಾಧಕರನ್ನು ಗೌರವದಿಂದ ಕಾಣಬೇಕು. ಆಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ.