Advertisement
 ಐವತ್ತರ ಹೊಸ್ತಿಲಲ್ಲಿ: ಕಿಟ್ಟು ಬರಹ

 ಐವತ್ತರ ಹೊಸ್ತಿಲಲ್ಲಿ: ಕಿಟ್ಟು ಬರಹ

ಓಡುವ ಜೋರಿಗೆ ಹಿಂದೆ ಸರಿದ ಹಾದಿಯನ್ನು ತಿರುಗಿ ನೋಡುವ ಅವಶ್ಯಕತೆ ಕಾಣಲಿಲ್ಲ. ಮುಂದೆ ಕಾಣದ ಗುರಿಯ ಕಡೆ ಓಡುವುದೇ ಜೀವನದ ಗುರಿ ಎನಿಸಿತ್ತು. ಆದಷ್ಟು ವೇಗವಾಗಿ ಓಡಬೇಕು, ಆದಷ್ಟು ಬೇಗ ಮುಟ್ಟಬೇಕು. ಕೊನೆಗೊಮ್ಮೆ, ಮಧ್ಯಂತರದ ಹತ್ತಿರ ನಿಧಾನಿಸುವ, ನಿಂತು ಹಿಂದೊಮ್ಮೆ ನೋಡುವ ಕಿರು ಆಸೆಯೊಂದು ಮೊಳೆತಾಗಲೇ, ನಾನು ಓಡುತ್ತಿರುವ ಓಟ ಇಳಿಜಾರಿನ ಓಟವೆಂದು ತಿಳಿದದ್ದು. ಬೇಕೆಂದಾಗ ನಿಧಾನಿಸುವುದು ನಿಂತು ನೋಡುವುದು ಅಷ್ಟು ಸುಲಭದ ಮಾತಲ್ಲವೆಂದು ಅರಿವಿಗೆ ಬಂದದ್ದು. ಜೀವನ ಇಳಿಜಾರಿನಲ್ಲಿ ವೇಗವನ್ನು ಗಿಟ್ಟಿಸಿಕೊಂಡಿದೆ. ಓಡುವ ಜೀವನವೇ ಸಹಜವೆಂಬಂತಾಗಿದೆ. ಒಮ್ಮಿಂದೊಮ್ಮೆಲೇ ನಿಲ್ಲಲು ಪ್ರಯತ್ನಿಸಿದರೆ ಮುಗ್ಗರಿಸುವ ಎಲ್ಲ ಸಾಧ್ಯತೆಗಳಿವೆ…
ಐವತ್ತರ ಹೊಸ್ತಿಲಿನ ಬದುಕಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ

ಜೀವನವೆಂಬ ಸುಂದರ ಸುಧೀರ್ಘ ಚಲನಚಿತ್ರದಲ್ಲಿ ಇನ್ನೇನು ಮಧ್ಯಂತರವಾಗುವ ಸಮಯ. ನಿಧಾನವಾಗಿ, ಸರಳವಾಗಿ, ನಿರಾಯಾಸವಾಗಿ ಪ್ರಾರಂಭವಾದ ಕಥೆ ಬೇರೆ ಬೇರೆ ಪಾತ್ರಗಳ ಪರಿಚಯ ಮಾಡುತ್ತಾ, ಪರಿಚಯವಾದ ಪಾತ್ರಗಳೊಂದಿಗೆ ಬೆರೆಯುತ್ತ ಬೆಸೆಯುತ್ತ, ಕೆಲವೊಮ್ಮೆ ಸುಲಭವಾದ, ಇನ್ನೂ ಕೆಲವೊಮ್ಮೆ ಕಠಿಣವಾದ, ಕೆಲವೊಮ್ಮೆ ಸರಳವಾದ, ಇನ್ನೂ ಕೆಲವೊಮ್ಮೆ ಕ್ಲಿಷ್ಟವಾದ ಸಂಬಂಧಗಳ ಬಲೆಯನ್ನು ಬಿಚ್ಚುತ್ತಾ ಬರು ಬರುತ್ತಾ ವೇಗವನ್ನು ಹೆಚ್ಚಿಸಿಕೊಂಡಿದೆ. ಚಿತ್ರಕಥೆಯಲ್ಲಿ ಮಧುರ ಕ್ಷಣಗಳಿವೆ, ಹಾಡುಗಳಿವೆ, ಕುಣಿತವಿದೆ, ಕಷ್ಟಗಳಿವೆ, ಕಠಿಣ ನಿರ್ಧಾರಗಳಿವೆ, ನಿರ್ಧರಿಸಲಾಗದ ಸಂದರ್ಭಗಳಿವೆ, ಒಳ್ಳೆಯ ಪಾತ್ರಗಳಿವೆ, ಕೆಟ್ಟ ಪಾತ್ರಗಳಿವೆ, ಒಳ್ಳೆಯದೋ ಕೆಟ್ಟದ್ದೋ ಎಂದು ತಿಳಿಯಲಾರದ ಪಾತ್ರಗಳೂ ಇವೆ. ಬಿಡಿ ಬಿಡಿಯಾಗಿ ಪಾತ್ರಗಳೆಲ್ಲ ಸರಳವಾಗಿಯೇ ಇದ್ದರೂ ಎಲ್ಲಾ ಪಾತ್ರಗಳನ್ನು ಒಂದು ಕಥೆಯಲ್ಲಿ ಜೋಡಿಸುವಾಗ ಕಥೆಯನ್ನು ಸರಳವಾಗಿರಿಸುವುದು ಕಥೆಗಾರನಿಗಷ್ಟು ಸುಲಭವಾದಂತೆ ತೋರುತ್ತಿಲ್ಲ. ಏನೇ ಆದರೂ ಇಲ್ಲಿಯ ತನಕ ಚಿತ್ರಕಥೆ ಮನೋರಂಜಕವಾಗಿ ಕುತೂಹಲಕಾರಿಯಾಗಿ ಮುಂದೆ ಸಾಗಿದೆ. ಕಥೆ ಇಲ್ಲಿಯವರೆಗೆ ಸಾಗಿಬಂದ ರೀತಿಯನ್ನು ನೋಡಿದರೆ ಸಾಮಾನ್ಯವಾಗಿ ಮಧ್ಯಂತರದ ಹತ್ತಿರ ನಿರೀಕ್ಷಿಸಬಹುದಾದ ಯಾವ ಅನಿರೀಕ್ಷಿತ ತಿರುವಿನ ಸುಳಿವೂ ಕಾಣುವುದಿಲ್ಲ. ಹೀಗೇ ಮುಂದುವರಿಯಬಹುದೆಂಬ ಮುಂದುವರಿಯಬೇಕೆಂಬ ಹಂಬಲ. ಮುಂದಿನದನ್ನು ಬಲ್ಲವರಾರು ಕಥೆಗಾರನಲ್ಲದೆ?

ಈ ಜೀವನವನ್ನೊಂದು ಪಯಣದಂತೆ ನೋಡುವುದಾದರೆ ಅದು ಶುರುವಾದದ್ದು ಅಂಬೆಗಾಲಿನೊಂದಿಗೆ, ಹೆತ್ತವರ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆಯನ್ನಿಡಲು ಕಲಿಯುವುದರೊಂದಿಗೆ, ಹೋಗಬೇಕಾದ ದಿಕ್ಕಿನ ಪರಿಜ್ಞಾನ ಅಷ್ಟಾಗಿ ಇಲ್ಲದಿದ್ದರೂ ದಿಕ್ಕನ್ನು ಸನ್ನೆಯಿಂದಲೇ ತೋರಿಸುವುದರೊಂದಿಗೆ, ತೊದಲು ನುಡಿಯಲ್ಲಿ ತೊದಲುವುದರೊಂದಿಗೆ. ಹಾರುವ ಚಿಟ್ಟೆಯನ್ನೋ ಓಡುವ ಅಂಬೋ ಕರುವನ್ನೋ, ಬೊಗಳುವ ಬೌ ಬೌ ವನ್ನೋ ಹಿಂಬಾಲಿಸಲು ಪ್ರಯತ್ನಿಸುವುದರೊಂದಿಗೆ. ಸೆರಗನ್ನು ಹಿಡಿದು ಅಮ್ಮನ ನಡಿಗೆಯನ್ನು ಸರಿಗಟ್ಟುವ ಸಾಹಸದೊಂದಿಗೆ, ಅಪ್ಪನ ಸೈಕಲ್‌ನೊಂದಿಗಿನ ಓಟದೊಂದಿಗೆ. ತಮ್ಮನೊಂದಿಗಿನ ಆಟ ಜಗಳಾಟವಾದಾಗ ಹೊಡೆದು ಓಡುವುದರೊಂದಿಗೆ. ಗೆಳೆಯರೊಡನೆಯ ಅಡುಗಾಟದೊಂದಿಗೆ ಹುಡುಗಾಟದೊಂದಿಗೆ. ಸಂಬಂಧಿಕರ ಒಡನಾಟದೊಂದಿಗೆ.

ನೋಡನೋಡುತ್ತಲೇ ಪುಟ್ಟ ಪುಟ್ಟ ಹೆಜ್ಜೆಗಳ ಜೀವನ ದೃಢವಾದ ನಡಿಗೆಯಾಯಿತು. ಸಹಜವಾಗಿ, ಸಹಜವಾದ ಚಿಟ್ಟೆ ಕರು ಅಪ್ಪ ಅಮ್ಮ ಸೈಕಲ್‌ಗಳ ಹಿಂದೆ ಓಡುತ್ತಿದ್ದ ಜೀವನ ಜೀವನಕ್ಕೆ ಇವುಗಳಿಗಿಂತ ಹೆಚ್ಚು ಮುಖ್ಯವೆಂದುಕೊಂಡ, ಗಂಭೀರವೆನಿಸಿದ ವಿಷಯಗಳ, ವಸ್ತುಗಳ ಹಿಂದೆ ಓಡಲಾರಂಭಿಸಿತು. ಆ ಓಟವನ್ನು ಹುರಿದುಂಬಿಸಿದವರು ಹಲವರು, ಜೊತೆಯಲ್ಲಿ ಓಡಿದವರು ಕೆಲವರು, ಮುಗ್ಗರಿಸುವುದನ್ನು ಹಾರೈಸಿದವರು ಬೆರಳೆಣಿಕೆಯಷ್ಟು ಜನ. ಓಟ ಮುಂದುವರಿಯಿತು…

ಕೆಲವರ ಓಡು ಜೋರಾಗಿ ಮುಂದೋಡಿ ಬೇರೆಯಾದರೆ ಕೆಲವರು ಹಿಂದುಳಿದು ಬೇರೆಯಾದರು. ಕೆಲವರ ದಿಕ್ಕು ಬದಲಾಯಿತು. ಇನ್ನೂ ಕೆಲವರು ನಿಂತರು. ಜೊತೆಗಿದ್ದವರ ಸಂಖ್ಯೆ ಕಮ್ಮಿಯಾಗುತ್ತಿದೆಯೇ ಎಂಬ ಅಂಜಿಕೆ ಮನದಲ್ಲಿ ಸುಳಿಯುವ ಮುಂಚೆಯೇ ಹೊಸಬರು ಸೇರಿಕೊಂಡರು. ಹೊಸತನವನ್ನು ಸೇರಿಸಲು ಪ್ರಯತ್ನಿಸಿದರು. ಹೊಸ ಸಂಬಂಧ, ಹೊಸ ಜನ, ಹೊಸತನ. ಹೆಂಡತಿ ಮಗಳು ಮನೆ ಹೀಗೆ ಹೊಸ ಹುರುಪು ಹೊಸ ಜವಾಬ್ದಾರಿಗಳು. ಓಟ ಮುಂದುವರಿಯಿತು…

ಕೆಲ ಹಳೆಯ ಸಂಬಂಧಗಳು ಮೊದಲಿಗಿಂತಲೂ ಗಟ್ಟಿಯಾದವು. ಕೆಲವು ಹಳಸಿದವು. ನಿಕಟ ಒಡನಾಟ ಗಟ್ಟಿ ಗೆಣೆತನದ ಶಾಖಕ್ಕೆ ಹಲವು ಸಂಬಂಧಗಳು ಹಾಳಾಗದೇ ಮುಂದುವರಿದವು. ಓಟದುದ್ದಕ್ಕೂ ಅದೆಷ್ಟೋ ಕೈಯಾಡಿಸುವ ಕೈತೋರಿಸುವ ಪರಿಚಿತ ಅಪರಿಚಿತ ದಾರಿಹೋಕರು. ನೀರುಣಿಸಿದವರೆಷ್ಟೋ. ನೆರಳ ಕೊಟ್ಟವರೆಷ್ಟೋ. ಕೆಲವರು ನೆನಪಿನಲ್ಲುಳಿದರು, ಬಹಳಷ್ಟು ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮರೆತುಹೋದರು. ಓಟ ಮುಂದುವರೆಯಿತು…

ಓಡುವ ಜೋರಿಗೆ ಹಿಂದೆ ಸರಿದ ಹಾದಿಯನ್ನು ತಿರುಗಿ ನೋಡುವ ಅವಶ್ಯಕತೆ ಕಾಣಲಿಲ್ಲ. ಮುಂದೆ ಕಾಣದ ಗುರಿಯ ಕಡೆ ಓಡುವುದೇ ಜೀವನದ ಗುರಿ ಎನಿಸಿತ್ತು. ಆದಷ್ಟು ವೇಗವಾಗಿ ಓಡಬೇಕು, ಆದಷ್ಟು ಬೇಗ ಮುಟ್ಟಬೇಕು. ಕೊನೆಗೊಮ್ಮೆ, ಮಧ್ಯಂತರದ ಹತ್ತಿರ ನಿಧಾನಿಸುವ, ನಿಂತು ಹಿಂದೊಮ್ಮೆ ನೋಡುವ ಕಿರು ಆಸೆಯೊಂದು ಮೊಳೆತಾಗಲೇ, ನಾನು ಓಡುತ್ತಿರುವ ಓಟ ಇಳಿಜಾರಿನ ಓಟವೆಂದು ತಿಳಿದದ್ದು. ಬೇಕೆಂದಾಗ ನಿಧಾನಿಸುವುದು ನಿಂತು ನೋಡುವುದು ಅಷ್ಟು ಸುಲಭದ ಮಾತಲ್ಲವೆಂದು ಅರಿವಿಗೆ ಬಂದದ್ದು. ಜೀವನ ಇಳಿಜಾರಿನಲ್ಲಿ ವೇಗವನ್ನು ಗಿಟ್ಟಿಸಿಕೊಂಡಿದೆ. ಓಡುವ ಜೀವನವೇ ಸಹಜವೆಂಬಂತಾಗಿದೆ. ಒಮ್ಮಿಂದೊಮ್ಮೆಲೇ ನಿಲ್ಲಲು ಪ್ರಯತ್ನಿಸಿದರೆ ಮುಗ್ಗರಿಸುವ ಎಲ್ಲ ಸಾಧ್ಯತೆಗಳಿವೆ. ಆದುದರಿಂದಲೇ ಓಟ ಮುಂದುವರಿದಿದೆ…

ಓಡುತ್ತಲೇ ಬಯಲಿನ ಹುಡುಕಾಟ ಪ್ರಾರಂಭವಾಗಿದೆ. ಇಳಿಜಾರಿನಿಂದ ಬಯಲಿನ ಕಡೆ ಜೀವನವನ್ನು ಕೊಂಡೊಯ್ಯಬೇಕಿದೆ. ಬಯಲು ಸಮೀಪಿಸಿದಂತೆ ಓಟದ ವೇಗವನ್ನು ಕಡಿಮೆ ಮಾಡಬೇಕಿದೆ, ನಿಲ್ಲಬೇಕಿದೆ, ನಿಂತು ತಿರುಗಿ ನೋಡಬೇಕಿದೆ. ಮತ್ತದೇ ಚಿಟ್ಟೆ, ಕರು, ನಾಯಿಮರಿ ಮತ್ತು ಹುಡುಗಾಟಗಳ ಹಿಂದೆ ಪುಟ್ಟ ಪುಟ್ಟ ಹೆಜ್ಜೆಯನ್ನಿಡಬೇಕಿದೆ…

ಓಟ ಮುಂದುವರಿದಿದೆ…

About The Author

ಕಿಟ್ಟು

ಕಿಟ್ಟು (ಕೃಷ್ಣಪ್ರಸಾದ ಗಾಂವಕರ) ಮೂಲತಃ  ಉತ್ತರ ಕನ್ನಡದ ಅಂಕೋಲೆಯವರು.  ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ IT ಕಂಪನಿಯಲ್ಲಿ ಉದ್ಯೋಗ.  ಉದ್ಯೋಗದ ಏಕತಾನತೆಯನ್ನು ಹೋಗಲಾಡಿಸಲು ಕಂಡುಕೊಂಡ  ಕನ್ನಡ ಸಾಹಿತ್ಯ, ಛಾಯಾಗ್ರಹಣ, ಮೋಟಾರ್ಸೈಕಲ್‌ನಲ್ಲಿ ದೂರದ ಪ್ರವಾಸ ಇತ್ಯಾದಿ ಹವ್ಯಾಸಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ