ಅಪ್ಪ

೧. ಹಿಟ್ಲರ್

ಅಪ್ಪ ಪೆಟ್ಟು ಕೊಟ್ಟಾಗಲೆಲ್ಲ
ಅವನೊಳಗೆ ಹಿಟ್ಲರ್ ಕಾಣುತ್ತಿದ್ದ
ಈಗ ನಾನೂ ಅಪ್ಪನಾಗಿದ್ದೇನೆ
ತಂಟೆ ಮಾಡಿದಾಗ ಮಕ್ಕಳಿಗೆ
ಮನಸಾರೆ ಪೆಟ್ಟೂ ಕೊಟ್ಟಿದ್ದೇನೆ
ಒಳಗಿನ ಹಿಟ್ಲರ್ ನನಗೆ ಕಾಣುತ್ತಲೇ ಇಲ್ಲ

೨. ನಗುವಿನಂಗಿ

ನಮ್ಮೆದ್ರುಗಡೆ ನಗ್ತಾ ಇರೋರೆಲ್ಲ
ಖುಷಿಯಾಗೇ ಈದಾರೆ ಅಂತ ಅಲ್ಲ ಮಗಾ
ನಗು ಅನ್ನೋ ಅಂಗಿ ಒಳಗೆ
ನೋವು ಮೋಸ ಕೋಪ
ಎಲ್ಲಾನೂ ಮುಚ್ಚಿಟ್ಕಂಡಿರ್ತಾರೆ
ಅಂದು ನಕ್ಕ ಅಪ್ಪನ ನಗುವಿನೊಳಗೆ
ಏನಿದೆ ಅನ್ನೋದೇ ಅರ್ಥ ಆಗಲಿಲ್ಲ

೩. ವಿಷಕಂಠ

ಅಳು ನುಂಗಿ ನಗುವುದು
ಅತ್ತಷ್ಟು ಸುಲಭವಲ್ಲ
ವಿಷವನ್ನೇ ಉಣಿಸಿದವರಿಗೂ
ಹಸಿವು ತಣಿಸಿ ಹೊಟ್ಟೆ ತುಂಬಿಸುವ
ಭೂತಾಯಿ ನೊಡಿ ಕಲಿಬೇಕು ಮಗಾ
ಎನ್ನುವ ಅಪ್ಪ ವಿಷಕಂಠನಂತೆ ಕಂಡ

೪. ಕಾಯಕವೇ…

ಕೂತುಂಡ್ರೆ ಕೊಪ್ಪರಿಗೆ ಹೊನ್ನೂ
ಮೇಣದ ಬತ್ತಿ ಹಂಗೆ ಕರಗೋಗುತ್ತೆ
ಮಗಾ ಎನ್ನುತ್ತಾ
ಬಿಡುವಿಲ್ಲದೆ ದುಡಿಯುತ್ತಿರುವ
ಅಪ್ಪನೊಳಗೆ
ಕಾಯಕವೇ ಕೈಲಾಸವೆಂದ
ಬಸವಣ್ಣನೆ ಕಂಡಂಗಾತು

೫. ಸಂತ

ಜೀವನದಾಗೇನೈತಿ
ಮೂರೇ ದಿನದ ಸಂತಿ
ಅಂದೆ
ಸಂತನಂತಾಡಬೇಡ
ಸಂತೆಯಲ್ಲೂ
ಸಂತೋಷವಾಗಿರೋದನ್ನು ಕಲಿ
ಎಂದ ಅಪ್ಪನೊಳಗೇ
ಒಬ್ಬ ಸಂತ ಕಂಡಂಗಾತು

೬. ಅನಕ್ಷರಸ್ಥ

ಓದ್ಕೊಂಡಿರೋರೆಲ್ಲ ಒಳ್ಳೇವ್ರಲ್ಲ
ಮನುಷ್ಯತ್ವ ಪ್ರೀತಿ ಕರುಣೆ ತುಂಬಿರೋನು ಒಳ್ಳೆಯವನು
ಎಂದ ಅನಕ್ಷರಸ್ಥ ಅಪ್ಪನ ಒಳಗೊಬ್ಬ
ಹೃದಯವಂತ ಮನುಜ ಕಂಡ

೭. ಅನುಭವಿ

ಓದಿರೋರೆಲ್ಲ ಬುದ್ಧಿವಂತ್ರಲ್ಲ
ಹಾರ್ಗೊಳ್ಳಾದ ಎತ್ತಿನ್ ಗಾಡೀನೂ
ತೊಂದ್ರೆ ಆಗ್ದಿಂದ್ದಂಗೆ ಮನೆ ಸೇರ್ಸೋನು ಬುದ್ಧಿವಂತ
ಎಂದ ಅನಕ್ಷರಸ್ಥ ಅಪ್ಪನೊಳಗೊಬ್ಬ
ಅನುಭವಿ ಕಂಡ

೮. ನೋವುಗಳು

ನೋವುಗಳು ನೂರಿದ್ರೂ ನರುಳ್ತಾ ಇರ್ಬಾರ್ದು
ಭೂಮ್ತಾಯಿ ಯಾವತ್ತಾದ್ರೂ ಅತ್ತಿದ್ದು ನೋಡಿದಿಯಾ
ಎಂದ ಅಪ್ಪನ ಹೃದಯದೊಳಗಿನ ನೋವುಗಳು
ಒಳಗಿಂದಲೇ ಇಣುಕಿದಂತೆ ಕಂಡವು

೯. ಅಪ್ಪನೆಂಬ ಆಲದಮರ

ಕೆಂಪು ಕೆಂಡದಂತೆ ಉರಿಯುವ ಸೂರ್ಯ
ನೂರು ನಕ್ಷತ್ರಗಳ ದಂಡು ಕಟ್ಟಿಕೊಂಡು
ದಂಡೆತ್ತಿ ಬರುತ್ತಿದ್ದ
ಅಪ್ಪನೆಂಬ ಆಲದ ಮರ ಅಡ್ಡ ಗೋಡೆಯಾಗಿ ನಿಂತು ಆಸರೆಯಾಗಿದ್ದ

೧೦. ಕಣ್ಣೀರು ಹರಿಸದವನು

ಕಷ್ಟಗಳ ಕಡಲಲ್ಲಿ
ಮುಳುಮುಳುಗಿ ಈಜುತ್ತ
ಬೆಂಕಿಯಿಂದ ಬಾಣಲೆಗೆ
ಬಾಣಲೆಯಿಂದ ಬೆಂಕಿಗೆ ಬಿದ್ದೇಳುತ್ತಾ
ಒಂದು ಹನಿ ಕಣ್ಣೀರಿಗೂ
ಕಟ್ಟಲಾಗದ ಬೆಲೆಯಿದೆಯೆಂದು
ಕಣ್ಣೀರೇ ಹರಿಸದವನ ಹೆಸರೇ ಅಪ್ಪ

ರಾಘವೇಂದ್ರ ಈ ಹೊರಬೈಲು ಶಿಮೊಗ್ಗ ಜಿಲ್ಲೆಯ, ಹೊರಬೈಲು ತಾಲ್ಲೂಕಿನವರು
ಪ್ರಸ್ತುತ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.