ಒಂದು ಕಾಲದಲ್ಲಿ ತಮ್ಮ ಜೀವನ ನಿರ್ವಹಣೆಗೆ ಇಲ್ಲಿನ ಕ್ವಾರಿಗಳನ್ನು ನಂಬಿದ್ದ ಹಲವಾರು ಕುಟುಂಬಗಳು ಈಗ ಬೇರೆ ಬೇರೆ ವೃತ್ತಿ ಹಿಡಿದಿದ್ದಾರೆ. ಅದರ ಜತೆಗೆ ದೇವನಹಳ್ಳಿಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆದ ನಂತರ ಅಲ್ಲಿಗೆ ಹಲವು ಸಂಪರ್ಕ ರಸ್ತೆಗಳ ನಿರ್ಮಾಣ ಶುರು ಆಯಿತು. ಬೆಟ್ಟಹಳ್ಳಿ ಮೂಲಕ ಒಂದು ರಸ್ತೆ ಅಗಲ ಮಾಡುವ ಯೋಜನೆ ಹಮ್ಮಿಕೊಳ್ಳಲಾಯಿತು. BEL ವೃತ್ತದಿಂದ ಈ ರಸ್ತೆ ಬೆಟ್ಟಹಳ್ಳಿ ಹಾದು ಯಲಹಂಕದ ಬಳಿ ದೇವನಹಳ್ಳಿ ರಸ್ತೆ ಸೇರುವಂತೆ ಯೋಜನೆ ರೂಪಿಸಿದ್ದು. ಬೆಟ್ಟಹಳ್ಳಿ ಮುಖ್ಯ ರಸ್ತೆಯ ಎರಡೂ ಪಕ್ಕದ ಸುಮಾರು ಬಡವರ ಮನೆಗಳು ಈ ರಸ್ತೆಗೆ ಎರವಾದವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೈದನೆಯ ಕಂತು
ಹಿಂದಿನ ಸಂಚಿಕೆ ಹೀಗೆ ಮುಗಿದಿತ್ತಾ
….ಕೂಲಿ ಅವರು ಸೈಕಲ್ ಲಾರಿ ಮೇಲೆ ಹಾಕಿದರು, ನಾನು ಕ್ಯಾಬಿನ್‌ನಲ್ಲಿ ಮಿಕ್ಕ ಮೂರು ಜನರ ಜತೆ ಅಡಗಿ ಕೂತೆ. ಲಾರಿ ಸೀದಾ ನಮ್ಮ ಸೈಟ್ ಮುಂದೆ ಬಂದು ನಿಂತಿತು……. ಅಂತ ಹೇಳಿದೆ ತಾನೇ? ಲಾರಿ ಬಂದಾಗ ಮಲ್ಲಯ್ಯ ಸೈಟ್‌ನಲ್ಲಿ ಪಾಯದ ಪಕ್ಕ ರಾಶಿ ಹಾಕಿದ್ದ ಮಣ್ಣಿನ ಗುಡ್ಡೆ ಮೇಲೆ ಕೂತಿದ್ದ. ಲಾರಿ ನಿಂತಕೂಡಲೇ ಹತ್ತಿರ ಬಂದ.
ಎರಡೂ ಕೈ ಬೊಗಸೆ ಮಾಡಿ ಅದರಲ್ಲಿ ಮರಳು ತುಂಬಿಕೊಂಡ. ಎರಡು ಮೂರು ಸಲ ಮರಳು ನೋಡಿದ. ನನ್ನ ಮುಖ ನೋಡಿದ. ಮುಖದಲ್ಲಿ ಕೋಪ ಅಸಹನೆ ಇದೆ ಅಂತ ನನಗೆ ಅನಿಸಿತು. ಕೂಲಿ ಅವರು ಲಾರಿ ಓನರ್ ಆ ಪಕ್ಕ ಇದ್ದರು. ನಿಧಾನಕ್ಕೆ ನನ್ನ ಬಳಿ ಬಂದ. ಮುಂದೆ ನಿಂತ. ಮರಳು ನನ್ನ ತಲೆ ಮೇಲೆ ಈಗ ಸುರೀತಾನೆ ಅಂತ ಕಣ್ಣು ಮುಚ್ಚಿದೆ. ಧಪ್ ಅಂತ ಶಬ್ದ ಆಯಿತು. ಕಣ್ಣು ತೆರೆದೆ. ನಮ್ಮಿಬ್ಬರ ನಡುವೆ ಮರಳು ಎಸೆದಿದ್ದ ಅದು ಗುಪ್ಪೆ ಆಗಿತ್ತು ಮತ್ತು ಅದು ನೆಲಕ್ಕೆ ಬಿದ್ದ ಶಬ್ದವೇ ಧಾಪ್ ಶಬ್ದ!
‘ಇದೇನು ತಂದಿದ್ದೀರಿ? ಬರೀ ಕೆಸರು. ಇದರಲ್ಲಿ ಕೆಲಸ ಮಾಡೋದು ಹೇಗೆ…..?” ಅಂದ.
ಮಲ್ಲಯ್ಯನನ್ನು ಮುಂದೆ ಹೇಗೆ ದಾರಿಗೆ ತಂದೆ ಎನ್ನುವುದು ನೆನಪಾದರೆ ಈಗಲೂ ನನ್ನ ಮುಖ ಸೆವೆಂಟಿ ಮಿಮೀ ಆಗುತ್ತೆ….
ಇದು ಈ ಸದ್ಯಕ್ಕೆ ಮುಂದಕ್ಕೆ
ಲಾರಿ ಮೇಲೆ ಸೈಕಲ್ ಹಾಕಿಕೊಂಡು ಮರಳು ತಂದೆನಲ್ಲಾ, ಇದು ನನಗೆ ಸುಮಾರು ವರ್ಷ ಒಂದು ಸುಖವಾದ ನೆನಪಾಗಿತ್ತು. ಇಲ್ಲಿಂದ ಅಲ್ಲಿವರೆಗೂ ಏದುಬ್ಬಸ ಪಟ್ಟುಕೊಂಡು ಸೈಕಲ್ ತಿಳಿದದ್ದು ಮತ್ತು ವಾಪಾಸ್ ಕುಡಿದ ನೀರು ಅಲ್ಲಾಡದ ಹಾಗೆ ಬಂದದ್ದು ನೆನೆದು ನೆನೆದು ಖುಷಿಪಡುತ್ತಿದ್ದೆ!
“ಇದೇನು ತಂದಿದ್ದೀರಿ? ಬರೀ ಕೆಸರು. ಇದರಲ್ಲಿ ಕೆಲಸ ಮಾಡೋದು ಹೇಗೆ…..?” ಅಂದ, ಮಲ್ಲಯ್ಯ ಅಂತ ಹೇಳಿದೆ ತಾನೇ?
“ಇದು ಕೆಸರಾ? ಇರು ಇದನ್ನ ಮಾರಿದವನು ಜತೆಲೆ ಬಂದಿದ್ದಾನೆ. ಅವನನ್ನು ಕೂಗ್ತಿನಿ….” ಅಂತ ಹೇಳಿ ಲಾರಿ ಆಕಡೆ ಪಕ್ಕ ಹೊರಟೆ, ಅವನನ್ನು ಕರೆಯಲು.
“ಅವರನ್ನೇಕೆ ಕೂಗ್ತೀರಾ? ಏನೂ ಬೇಡ…” ಅಂದ!
“ಇದು ಚೆನ್ನಾಗಿಲ್ಲ ಅಂದರೆ ವಾಪಸ್ ತಗೊಂಡು ಹೋಗಿ ಬೇರೆದು ತಂದು ಹಾಕಲಿ, ಕಾಸು ಕೊಟ್ಟಿಲ್ವಾ…”
ಇದು ನನ್ನ ಲಾಜಿಕ್. ಮಲ್ಲಯ್ಯಗೆ ಈ ವಾದದಲ್ಲಿ ಇನ್ವಾಲ್ವ್ ಆಗೋದು ಇಷ್ಟ ಇರಲಿಲ್ಲ ಅಂತ ಗೊತ್ತಾಯ್ತು. ಮರಳು ಸುರಿದು ದುಡ್ಡು ತಗೊಂಡು ಅವರು ಹೋದರು. ಮರಳು ಬರೀ ಕೆಸರು ಕೆಸರು ಆಗಿದ್ದರೆ ಇವನು ಒಪ್ತಾ ಇದ್ನಾ ಅಂತ ಎಷ್ಟೋ ದಿವಸದ ನಂತರ ಹೊಳಿತು! ಮತ್ತೆ ಒಂದೆರೆಡು ಸಲ ಯಶವಂತಪುರದಿಂದಲೇ ಮರಳು ತಂದೆ, ಇದೇ ಸ್ಟೋರಿ ರಿಪೀಟ್ ಆಯ್ತು. ಅವನು ಬರೀ ಮಣ್ಣು ಇದು, ಕೆಸರುಕೆಸರು ಅನ್ನೋದು. ನಾನು ಅದರಲ್ಲೇ ಕಟ್ಟು ಅದೇನಾಗುತ್ತೋ ನೋಡೋಣ ಅಂತ ಹಠ ಹಿಡಿಯೋದು… ಹೀಗೆ. ಎರಡು ಮೂರು ಸಲ ಮರಳು ಹೊಡೆದ ಲಾರಿ ಡ್ರೈವರ್ ಈ ವೇಳೆಗೆ ಸಾಕಷ್ಟು ಪರಿಚಯ ಆಗಿದ್ದ. ನನ್ನ ಅವನ ನಡುವೆ ಸುಮಾರು ಸಲ ಕ್ಯಾನ್ಸರ್(ನಿಕೋಟಿನ್ )ವಿನಿಮಯ ಆಗಿತ್ತು.
“ನಿಮಗೆ ಮರಳು ಯಾವಾಗ ಯಾವಾಗ ಬೇಕು ಅಂತ ನನಗೆ ಒಂದು ಅಂದಾಜು ಇದೆ. ಇಲ್ಲಿ ಬಂದಾಗ ನೋಡಿಕೊಂಡು ನಾನೇ ತಂದು ಹಾಕ್ತೀನಿ.. ನೀವೇಕೆ ಅಷ್ಟು ದೂರ ಸೈಕಲ್ ಹೊಡೀತಿರಾ…..” ಅಂತ ಸಲಹೆ ಕೊಟ್ಟ. “ಅಲ್ಲಿರೋ ರೇಟ್‌ಗೆ ಹಾಕ್ತೀನಿ…” ಅಂತ ಶರಾ ಸೇರಿಸಿದ. ಆಯ್ತು ಅಂತ ಒಪ್ಪಿದ್ದೂ ಆಯ್ತು. ಈ ನಡುವೆ ಸಿಮೆಂಟ್ ಮನೆಗೆ ಒಂದೂವರೆ ಕಿಮೀ ದೂರದ ಅಂಗಡಿ ನಾನೇ ಫಿಕ್ಸ್ ಮಾಡಿದೆ. ಜಲ್ಲಿ ಕಲ್ಲು, ಸೈಜ್ ಕಲ್ಲು ಇವುಗಳ ಅಡ್ಡ ಆಗ ಜಾಲಹಳ್ಳಿ ಸ್ಟೇಟ್ ಬ್ಯಾಂಕ್ ಎದುರು. ಭಾರತ್ ಕೆಫೆ ಅಂತ ಅದರ ಪಕ್ಕದ ಮೈದಾನ. ಇಲ್ಲಿ ನಾನು ಶ್ರೀಕಂಠ ಕೋಳಿ ತಿನ್ನುವ ಪ್ರಯೋಗ ನಡೆಸಿದ್ದು ನಿಮಗೆ ಹೇಳಿದ ನೆನಪು. ಜಲ್ಲಿ ಮತ್ತು ಸೈಜ್ ಕಲ್ಲಿಗೆ ನನ್ನ ಸೈಟ್‌ನಿಂದಾ ಉತ್ತರ ಪಶ್ಚಿಮ ಮಧ್ಯ ಒಂದು ರೇಖೆ ಎಳೆದರೆ ಅಲ್ಲಿ ಬೆಟ್ಟಹಳ್ಳಿ ಅಂತ ಒಂದು ಹಳ್ಳಿ. ಚಿಕ್ಕ ಬೆಟ್ಟಹಳ್ಳಿ, ದೊಡ್ಡ ಬೆಟ್ಟಹಳ್ಳಿ ಅಂತ ಒಂದೆರೆಡು ಮೈಲಿ ಅಂತರದಲ್ಲಿ ಎರಡೂ ಹಳ್ಳಿಗಳು. ಅಲ್ಲಿ ಕಲ್ಲಿನ ಬೆಟ್ಟ ಇತ್ತು. ನಾನು ಮನೆ ಶುರುಮಾಡಿದಾಗ ಇಲ್ಲಿ ಸುಮಾರು ನೂರು ಮತ್ತು ಐವತ್ತು ಮೀಟರ್ ಎತ್ತರ ಇದ್ದಿರಬಹುದಾದ ಎರಡು ಬೆಟ್ಟಗಳು ಇದ್ದವು. ಮನೆ ಕಟ್ಟಲು ಅವಶ್ಯವಿದ್ದ ಜಲ್ಲಿ ಕಲ್ಲು, ಚಪ್ಪಡಿ ಹಾಸು ಮತ್ತು ಸೈಜ್ ಕಲ್ಲುಗಳು ಇಲ್ಲಿಂದ ಪೂರೈಕೆ ಆಗುತ್ತಿತ್ತು. ಇಪ್ಪತ್ತು ಮೂವತ್ತು ವರ್ಷದಲ್ಲಿ ಈ ಬೆಟ್ಟಗಳು ಸಂಪೂರ್ಣ ಕರಗಿ ಅಲ್ಲೆರೆಡು ಕೊರಕಲು ಉಂಟಾಗಿವೆ. ಒಂದು ಕಾಲದಲ್ಲಿ ಇಲ್ಲಿ ಬೆಟ್ಟ ಇತ್ತು ಎಂದು ಹೇಳುವ ಯಾವ ಕುರುಹೂ ಇಲ್ಲ! ಈಗ ಬೆಂಗಳೂರಿನಲ್ಲಿ ಎಲ್ಲಕಡೆ ಬಹು ಮಹಡಿ ಮತ್ತು ಮಹಡಿಗಳ ಕಾಂಪ್ಲೆಕ್ಸ್‌ಗಳೇ ಬರುತ್ತಿರುವುದರಿಂದ ಹಿಂದೆ ಉಪಯೋಗವಾಗುತ್ತಿದ್ದ ಸೈಜ್ ಕಲ್ಲುಗಳನ್ನು ಉಪ್ಯೋಗಿಸುವುದು ಕಡಿಮೆಯಾಗಿದೆ. ಕಾರಣ ಬಹು ಮಹಡಿ ಕಟ್ಟಡಗಳಿಗೆ ಕಾಲಂ ಮತ್ತು ಬೀಮ್ ಉಪಯೋಗಿಸುವುದು. ಪ್ರಕೃತಿ ಮಾತೆಗೆ ಇದರಿಂದ ಒಂದು ಯಾರೂ ಗಮನಿಸದಿರುವ ನೆರವು ಬಂದಿದೆ. ಅದೆಂದರೆ ಭೂತಾಯಿಯ ಒಡಲನ್ನು ಬಗೆದು ಕಲ್ಲು ತೆಗೆಯುವ ಕೆಲಸ. ಇದು ನನ್ನಂತಹ ಪರಿಸರ ಪ್ರೇಮಿಗಳಿಗೆ ಒಂದು ಸಮಾಧಾನ ಕೊಡುವ ಸಂಗತಿ, ನಮ್ಮ ಎಫರ್ಟ್ ಏನೂ ಇಲ್ಲದೇ ಭೂತಾಯಿಗೆ ನೋವು ಕಡಿಮೆ ಮಾಡುವುದು ಸಾಮಾನ್ಯವೇ?
ಬೆಟ್ಟಹಳ್ಳಿ ಪಾಂಡವರಿಗೂ ಮೊದಲು ಇತ್ತು ಎಂದು ನಲವತ್ತು ವರ್ಷದ ಹಿಂದೆ ಕಣ್ಣು ಮುಚ್ಚಿ ಹೇಳಬಹುದಾಗಿತ್ತು, ಅದರಲ್ಲಿದ್ದ ಬೆಟ್ಟ ನೋಡಿ. ಇಲ್ಲಿ ಬಹು ಹಿಂದಿನಿಂದಲೇ ಜನವಸತಿ ಇತ್ತು ಎಂದು ತೋರುವ ಕುರುಹುಗಳನ್ನು ಪತ್ತೆ ಹಚ್ಚಿದ್ದರು. ಮನೆ ನಿರ್ಮಾಣಕ್ಕೆ ಅಲ್ಲಿನ ಕಲ್ಲು ಬೆಟ್ಟದ ಕಲ್ಲುಗಳು ಯತೇಚ್ಛವಾಗಿ ಉಪ್ಯೋಗಿಸಲ್ಪಟ್ಟಿತು. ಇಲ್ಲಿನ ಕಲ್ಲು ಬಂಡೆಗಳ ಜತೆ ಜತೆಗೆ ಸಂಸಾರ ನಡೆಸಿದ ಮೂರು ನಾಲ್ಕು ಮತ್ತು ಅದಕ್ಕೂ ಹಿಂದಿನ ತಲೆಮಾರಿನ ಜನ ಸುತ್ತಮುತ್ತ ಇದ್ದಾರೆ. ಒಂದು ಕಾಲದಲ್ಲಿ ತಮ್ಮ ಜೀವನ ನಿರ್ವಹಣೆಗೆ ಇಲ್ಲಿನ ಕ್ವಾರಿಗಳನ್ನು ನಂಬಿದ್ದ ಹಲವಾರು ಕುಟುಂಬಗಳು ಈಗ ಬೇರೆ ಬೇರೆ ವೃತ್ತಿ ಹಿಡಿದಿದ್ದಾರೆ. ಅದರ ಜತೆಗೆ ದೇವನಹಳ್ಳಿಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆದ ನಂತರ ಅಲ್ಲಿಗೆ ಹಲವು ಸಂಪರ್ಕ ರಸ್ತೆಗಳ ನಿರ್ಮಾಣ ಶುರು ಆಯಿತು. ಬೆಟ್ಟಹಳ್ಳಿ ಮೂಲಕ ಒಂದು ರಸ್ತೆ ಅಗಲ ಮಾಡುವ ಯೋಜನೆ ಹಮ್ಮಿಕೊಳ್ಳಲಾಯಿತು. BEL ವೃತ್ತದಿಂದ ಈ ರಸ್ತೆ ಬೆಟ್ಟಹಳ್ಳಿ ಹಾದು ಯಲಹಂಕದ ಬಳಿ ದೇವನಹಳ್ಳಿ ರಸ್ತೆ ಸೇರುವಂತೆ ಯೋಜನೆ ರೂಪಿಸಿದ್ದು. ಬೆಟ್ಟಹಳ್ಳಿ ಮುಖ್ಯ ರಸ್ತೆಯ ಎರಡೂ ಪಕ್ಕದ ಸುಮಾರು ಬಡವರ ಮನೆಗಳು ಈ ರಸ್ತೆಗೆ ಎರವಾದವು. ಒಂದು ಶನಿವಾರ ಪೊಲೀಸರು, ಬುಲ್ಡೋಜರ್‌ಗಳು ಬಂದು ನಿವಾಸಿಗಳನ್ನು ಓಡಿಸಿ ರಸ್ತೆಗೆ ಅನುವು ಮಾಡಿದರು. ಮೂವತ್ತು ನಲವತ್ತು ವರ್ಷಗಳಿಂದ ಅಲ್ಲಿ ಬೇರು ಬಿಟ್ಟಿದ್ದ ಎರಡು ಮೂರು ಪೀಳಿಗೆಯ ಬಡವರು ನೆಲೆ ಕಳೆದುಕೊಂಡರು. ಎಂದೂ ಏರೋಪ್ಲೇನ್‌ನಲ್ಲಿ ಕೂರದ, ಹತ್ತಿರದಿಂದ ಸಹ ಅದನ್ನು ನೋಡಿರದ ಮತ್ತು ಏಳೇಳು ಜನ್ಮಕ್ಕೂ ಏರೋಪ್ಲೇನ್‌ನಲ್ಲಿ ನಾವೂ ಹೋಗುತ್ತೇವೆ ಎಂದು ಊಹೆ ಸಹ ಮಾಡದಿದ್ದ ಜನರು ಈ ರಸ್ತೆಗೆ ತಮ್ಮ ನೆಲೆ ತೆತ್ತರು. ಒಬ್ಬ ಸಾಹುಕಾರ ಬದುಕಬೇಕಾದರೆ ಸಾವಿರ ಬಡವರು ಸಾಯಬೇಕು ಎನ್ನುವ ಕಮ್ಯೂನಿಸ್ಟ್ ಚಿಂತನೆ ಇಲ್ಲಿ ಸಾಬೀತಾಯಿತು..! ಈಗಲೂ ಅರ್ಧಂಬರ್ಧ ಕೆಡವಿದ ಮನೆಗಳ ಅಸ್ಥಿಪಂಜರಗಳು ಅಲ್ಲಿ ಉಳಿದಿವೆ. ನಮ್ಮ ಗೋಳು ಕೇಳಿ ಎಂದು ಅವು ಆಗಾಗ ಗೋಳಿಡುತ್ತವೆ ಎಂದು ಅನಿಸುತ್ತೆ.
ಬೆಟ್ಟಹಳ್ಳಿಯಲ್ಲಿ ಕ್ವಾರಿ ಕೆಲಸ ನಡೆಯುವಾಗ ಅಲ್ಲಿನ ಹತ್ತಿರದ bts, ನಂತರ bmtc ಬಸ್ ಸ್ಟಾಪಿಗೆ ಜಲ್ಲಿ ಮೆಶಿನ್ ಸ್ಟಾಪ್ ಅನ್ನುತ್ತಿದ್ದರು. ಈಗ ಹಳಬರು ಆ ಜಾಗಕ್ಕೆ ಜಲ್ಲಿ ಮೆಶಿನ್ ಎಂದು ಹೇಳುತ್ತಾರೆ. ಅಲ್ಲಿದ್ದ ಜಲ್ಲಿ ಮೆಶಿನ್ ಕಾರ್ಯ ನಿರ್ವಹಿಸುತ್ತಿದ್ದ ಹಾಗಿಲ್ಲ. ಈಚೆಗೆ ಅಲ್ಲಿ ಒಂದು ಹೊಸ ನಾಮಕರಣ ಆಗಿದೆ. ಹೊಸ ಹೆಸರು ದೇವಿ ಸರ್ಕಲ್ ಎಂದು ಮಾರ್ಪಾಟಾಗಿ ಫಲಕವೊಂದು ಹುಟ್ಟಿದೆ. ಇದು ಯಾವ ದೇವಿ ಎಂದು ತಲೆಕೆಡಿಸಿಕೊಂಡವರುಂಟು. ಯಾವುದಾದರೂ ರಾಜಕೀಯ ದೇವಿ ಆಗಿರದೆ ನಮ್ಮ ಪುರಾಣ ಪುಣ್ಯಕತೆಗಳ ದೇವಿ ಆಗಿದ್ದರೆ ಒಳ್ಳೆಯದು!
ನಾನು ಮನೆ ಕಟ್ಟಬೇಕಾದರೆ ಈ ಕ್ವಾರಿಗಳಿಂದಲೇ ಜಲ್ಲಿ ಕಲ್ಲು, ಸೈಜ್ ಕಲ್ಲು ಚಪ್ಪಡಿ ಇವೆಲ್ಲಾ ಸಪ್ಲೈ ಆದವು. ಆಗ ಒಂದು ಯುವಕರ ಗುಂಪು ಬಿಇಎಲ್‌ಗೆ ಸೇರಿದ ಭಾರತ್ ಕೆಫೆ ಹತ್ತಿರ ಗುಂಪು ಸೇರುತ್ತಿತ್ತು. ಇವರ ಮುಖ್ಯ ಕೆಲಸ ಅಂದರೆ ಸುತ್ತ ಮುತ್ತ ನಿರ್ಮಾಣವಾಗುತ್ತಿದ್ದ ಮನೆಗಳಿಗೆ ಕಟ್ಟಡ ಸಾಮಗ್ರಿ ಅದರಲ್ಲೂ ಕಲ್ಲು ಸಪ್ಲೈ ಮಾಡುವುದು.
ಕೆಂಪರಾಜು ಎನ್ನುವ ಒಬ್ಬ ನಗುಮುಖದ ಹುಡುಗ ನನಗೆ ಕಲ್ಲು ಸರಬರಾಜು ಮಾಡಿದ. ಮುಂದೆ ಈತ ನಾಡಿನ ಖ್ಯಾತ ರಾಜಕಾರಣಿ ಅಶೋಕ್ ಅವರ ಸೋದರ ಸಂಬಂಧಿ ಎಂದು ತಿಳಿಯಿತು. ಭಾರತ್ ಕೆಫೆ ಹತ್ತಿರ ಸೇರುತ್ತಿದ್ದ ಗುಂಪಿನಲ್ಲಿ ಆಗ ಅಶೋಕ ಸಹ ಕಾಣುತ್ತಿದ್ದರು. ಮುಂದೆ ಅವರು ರಾಜಕಾರಣಕ್ಕೆ ಇಳಿದದ್ದು ಉನ್ನತ ಹುದ್ದೆಗೆ ಏರಿದ್ದು ಎಲ್ಲಾ ಈಗ ಆಗಾಗ ನೆನಪಾಗುತ್ತದೆ. ಅವರು ಸುತ್ತಮುತ್ತಲ ಹಳ್ಳಿಗಳಲ್ಲಿ ನಿವೇಶನಗಳನ್ನು ನಿರ್ಮಿಸಿ ಬೆಂಗಳೂರಿಗರ ನಿವೇಶನ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನೀಗಿಸಿದ್ದು ಮುಂದೆ ಹೇಳುತ್ತೇನೆ. ನಾನೂ ಸಹ ಇದರ ಫಲಾನುಭವಿ!
ಮರಳು, ಜಲ್ಲಿ, ಸಿಮೆಂಟ್ ಇವೂ ಮೂರೂ ವಸ್ತು ಸರಬರಾಜು ಮಾಡುವವರು ಮೇಸ್ತ್ರಿಗಳ ಕಂಟ್ರಾಕ್ಟರ್‌ಗಳ ಹತ್ತಿರ ನಿಕಟ ಸಂಪರ್ಕ ಇಟ್ಟುಕೊಂಡಿರುತ್ತಿದ್ದರು. ಅವರಿಗೆ ಕಮಿಷನ್ ಕೊಟ್ಟು ಹತ್ತಿರ ಇಟ್ಟುಕೊಳ್ಳುತ್ತಿದ್ದರು. ಅಂತಹ ನಿಕಟ ಬಾಂಧವ್ಯವನ್ನು ನಾನು ಮಲ್ಲಯ್ಯನಿಂದ ಕಸಿದುಕೊಂಡಿದ್ದೆ. ಇದು ಯಾರಿಗೇ ಆಗಲಿ ಕೋಪ ರೋಷ ಮತ್ತು ಸೇಡು ಹುಟ್ಟಿಸುವ ಪ್ರಸಂಗಗಳು. ಮಲ್ಲಯ್ಯ ಅದು ಹೇಗೆ ಈ ಭಾವನೆಗಳನ್ನು ಅದುಮಿ ಹಿಡಿದನೋ ಎನ್ನುವ ಆಶ್ಚರ್ಯ ನನಗೆ ಈಗ ಆಗುತ್ತಿದೆ. ಆದರೆ ಆಗ ಅವನಿಗೆ ಬುದ್ಧಿ ಮತ್ತು ಪಾಠ ಕಲಿಸುವ ಹುಮ್ಮಸ್ಸು ಇತ್ತು ಎಂದು ಈಚೆಗೆ ಅರ್ಥೈಸಿಕೊಂಡಿದ್ದೇನೆ, ರೈಲು ಹೋದನಂತರ ಸ್ಟೇಶನ್ ತಲುಪಿದ ಹಾಗೆ! ಈಗ ಹಾಗೆ ಜಿಗುಟು ಹಿಡಿದು ವರ್ತಿಸಬಾರದಿತ್ತು ಎಂದು ಎಷ್ಟೋ ಸಲ ಅನಿಸಿದೆ, ಮತ್ತೆ ರೈಲು ಹೋದನಂತರ ಸ್ಟೇಶನ್ ತಲುಪಿದ ಹಾಗೆ!

ಮಲ್ಲಯ್ಯ after all a human being ತನ್ನ ಆಕ್ರೋಶ ತೋರಿಸುತ್ತಾ ಇದ್ದದ್ದು ಹೀಗೆ.
“ಮರಳು ಆಹಾ ಅದೇನು ಮರಳು ತಂದಿದ್ದೀರಿ ಬರೀ ಮಣ್ಣು ಅಂದರೆ ಮಣ್ಣು. ಇದು ಸಿಮೆಂಟ್ ಜತೆ ಸೇರಾಕಿಲ್ಲ…”
ಇದಕ್ಕೆ ನನ್ನ ಉತ್ತರ
“ಅವನ್ಯಾವನೋ ತರಲೆ ನನ್ಮಗ. ತುಂಬಾ ಚೆನ್ನಾಗಿದೆ ಅಂತ ಮೋಸ ಮಾಡಿಬಿಟ್ಟ ಕಣಯ್ಯಾ. ಬರೀ ಮಣ್ಣಾ ಅದು? ಹೇಗೋ ಒಂದು ಅಡ್ಜಸ್ಟ್ ಮಾಡಿಬಿಡು. ಮರಳಿಗೆ ಬದಲು ಮಣ್ಣು ಹಾಕಿ ಗೋಡೆ ಕಟ್ಟುವುದು ತುಂಬಾ ಹಿಂದಿನ ಕಾಲದಲ್ಲೂ ಇತ್ತಂತೆ. ಆಗ ಸಿಮೆಂಟ್ ಅನ್ನೋ ಹೆಸರೇ ಯಾರೂ ಕೇಳಿರಲಿಲ್ಲ… ತಿರುಗ ಯಾವನು ಅಲ್ಲಿವರೆಗೂ ಹೋಗೋಕಾಗುತ್ತೆ…” ಇದು ಒಂದು ತರಹ ಅವನ ಅನುಪಸ್ಥಿತಿಯಲ್ಲಿ ಮರಳು ಬಂದಾಗ.
ಅವನಿದ್ದಾಗಲೇ ಮರಳು ಬಂದರೆ, ಅವನು ಇದು ಬರೀ ಮಣ್ಣು ಅಂದರೆ “ಇರು ಇದನ್ನ ಮಾರಿದವನು ಲಾರಿಯಲ್ಲೇ ಕೂತಿದ್ದಾನೆ. ಅವನಿಗೆ ಇನ್ನೂ ದುಡ್ಡು ಕೊಟ್ಟಿಲ್ಲ. ಬಾ ಇದು ಬರೀ ಮಣ್ಣು ಅಂತ ಅವನಿಗೆ ದಬಾಯಿಸು. ಅವನ ತಲೆಮೇಲೆ ಈ ಮಣ್ಣು ಸುರಿದು ಅವನಿಗೆ ಪಾಠ ಕಲಿಸೋಣ. ಇದು ಬರೀ ಮಣ್ಣು, ಇದು ಬರೀ ಕೆಸರು, ನಿನ್ನ ವಂಶ ಉದ್ಧಾರ ಆಗೋಲ್ಲ ಅಂತ ಹೇಳಿ ವಾಪಸ್ ಕಳಿಸಿ ಬಿಡೋಣ…..”
ಮರಳು ತಂದಿರುವ ಲಾರಿ ಓನರ್‌ಗೆ ಇದು ಮಣ್ಣು ಅಂತ ಒಬ್ಬ ಮೇಸ್ತ್ರಿ ಹೇಳಿ ಬಚಾವ್ ಆಗಲು ಸಾಧ್ಯವೇ? ಇವನ ಖೂನಿ ಆಗಿಬಿಡುತ್ತೆ ಅಷ್ಟೇ.. ಮಲ್ಲಯ್ಯ ಜಾಣ.
ಮಲ್ಲಯ್ಯ “ಅದೇನೋ ಹೋಗ್ಲಿ ಬಿಡಿ. ಇದರಲ್ಲೇ ಕಟ್‌ತೀನಿ….” ಅಂತ ಕಾಂಪ್ರಮೈಸ್ ಆಗೋನು!
ಹಾಗೂ ಹೀಗೂ ಪಾಯ ಮುಗಿದು ಫೌಂಡೇಶನ್ ಕಲ್ಲು ಇಟ್ಟರಾ..
ಒಂದು ಮರೆತಿದ್ದೆ. ಪಾಯದ ಗುಂಡಿ ಆರಡಿ ಆಳ ಅಂತ ಕೇಳಿದ ನೆನಪಿತ್ತು. ಗುಂಡಿ ತೋಡಿ ಪೇಮೆಂಟ್ ಆಗಬೇಕಾದರೆ “ಆಳ ಎಷ್ಟಿದೆ ಅಳಿ…” ಅಂದೆ.
ಟೇಪ್ ಉದ್ದುದ್ದಕ್ಕೆ ಇಟ್ಟು ಅಳೆದ. ಬರೀ ಮೂರೂವರೆ ಅಡಿ ತೋರಿಸುತ್ತಾ ಇದೆ!
“ಆರಡಿ ಆಳ ಅಲ್ಲವೇನಪ್ಪಾ ತೋಡಬೇಕಾದ್ದು?”
ಮಲ್ಲಯ್ಯ ಗರಂ ಆದ.
“ಆರಡಿ ಯಾಕೆ? ಎಷ್ಟು ಮಾಡಿ ಕಟ್ತೀರಾ….”
“ಅಲ್ಲಪ್ಪ ಪಾಯ ತೊಡಬೇಕಾದರೆ ಆರಡಿ ಅಂತ ಹೇಳಿದ್ದೆ….” ಅಂದೆ.
“ಮೂರು ಮಾಡಿ ತಂಕ ಮೂರೂವರೆ ಆಳ ಸಾಕು….” ಅಂದ.
“ಲಿಂಟ್ಲೂ ಹಾಕ್ಲಾ…?” ಅಂದ. ಲಿಂಟ್ಲು ಏನು ಹಾಗಂದರೆ? ನನಗೆ ತಿಳಿಯದು. ನನಗೆ ಗೊತ್ತಿಲ್ಲ ಅಂತ ಅವನಿಗೆ ಗೊತ್ತಾಗಬಾರದು! ಧರ್ಮ ಸಂಕಟ ಶುರು ಆಗಬೇಕೆ?
“ಲಿಂಟಲು ಯಾಕೆ…..?” ಅಂದೆ.
“ಕೆರೆ ಪಕ್ಕ ಮನೆ. ನೆಲ ಲೂಸ್ ಇದ್ದರೆ ನಾಳೆ ಬಿಲ್ಡಿಂಗ್ ಕುಸಿತದೆ. ಅದಕ್ಕೆ ಕಬ್ಬಿಣ ಕಟ್ಟಿ ಭದ್ರ ಮಾಡಕ್ಕೆ….” ಅಂದ. ಲಿಂಟ್ಲಿನ ಬಗ್ಗೆ ಒಂದು ಕಲ್ಪನೆ ಬಂದಾಗಿತ್ತು!
“ಕೆರೆ ಪಕ್ಕದಲ್ಲೇ ಈಗ ನಾನಿರೋದು. ಅಲ್ಲಿ ರಸ್ತೆ ಆಕಡೆ ಕೆರೆ ಪಕ್ಕವೇ ಮನೆ ಕಟ್ತಾ ಇರೋದು ನೋಡಿದ್ದೀನಿ. ಯಾರೂ ಲಿಂಟ್ಲ್ ಪಾಂಟಲ್ ಅಂತಹದ್ದು ಏನೂ ಅದನ್ನ ಹಾಕಿಲ್ಲ….” ಅಂದೆ, ನನ್ನ ದನಿಯಲ್ಲಿ ನನಗೇ ಗೊತ್ತಿಲ್ಲದ ಹಾಗೆ ಆತ್ಮ ವಿಶ್ವಾಸ ತುಂಬಿ ತುಳುಕಾಡ್ತಾ ಇತ್ತು. ಇನ್ನೊಂದು ಮರೆತ ವಿಷಯ ಅಂದರೆ ಆಗ ಬೆಂಗಳೂರಿನಲ್ಲಿ ಕಾಲಮ್ಮು, ಬೀಮು ಮೊದಲಾದ ಕಟ್ಟಡ ನಿರ್ಮಾಣದ ಕೆಲವು ಪಾರಿಭಾಷಿಕ ಪದಗಳು ಅಷ್ಟಾಗಿ ನನ್ನ ಐಕ್ಯೂ ಇರುವ ಜನರಿಗೆ ಗೊತ್ತಿರಲಿಲ್ಲ. ಕಾರಣ ಹತ್ತು ಹದಿನೈದು ಮಹಡಿ ಕಟ್ಟಡಗಳು ಇನ್ನೂ ಶೈಶವಾವಸ್ಥೆಯಲ್ಲಿ ಇದ್ದವು ಮತ್ತು ನಾವು ನೋಡಿದ್ದ ಕಟ್ಟಡಗಳು ಅಬ್ಬಬ್ಬಾ ಅಂದರೆ ನಾಲ್ಕು ಮಹಡಿಯವು. ಅವೂ ಹಳೇ ಕಾಲದವು ಮತ್ತು ಆಳವಾದ ಗುಂಡಿ ತೋಡಿ ಅದರಲ್ಲಿ ಕಲ್ಲು ಜೋಡಿಸಿ ಅದರ ಮೇಲೆ ಗೋಡೆ ಎಬ್ಬಿಸಿದ ಕಟ್ಟಡಗಳು! ಇನ್ನೂ ತಮಾಷೆ ಅಂದರೆ ಎಪ್ಪತ್ತು ಎಂಬತ್ತು ವರ್ಷ ಹಿಂದೆ ಕಟ್ಟಿದ ಕೆಲವು ಬಂಗಲೆಗಳಿಗೆ ಮಹಡಿ ಹತ್ತಲು ಮಾಡಿ ಮೆಟ್ಟಿಲುಗಳು ಇಲ್ಲ. ಯಾಕಿಲ್ಲ ಅಂದರೆ ಅದರ ಅವಶ್ಯಕತೆ ಇರಲಿಲ್ಲ. ವಿಶಾಲವಾದ ಅಂಗಳ, ಹಿತ್ತಲು ಇರುತ್ತಿತ್ತು. ಬಟ್ಟೆ ಬರೆ ಒಣಗಿಸಲು, ಹಪ್ಪಳ ಸಂಡಿಗೆ ಹರವಲು ಜಾಗ ಮಸ್ತಾಗಿತ್ತು! ಯಾವಾಗ ಸೈಟ್ ಅಳತೆ ಚಿಕ್ಕದಾಗುತ್ತಾ ಬಂದಿತೋ ಆಗ ಮಹಡಿ, ಅದಕ್ಕೆ ಮೆಟ್ಟಲು ಇದರ ಅವಶ್ಯಕತೆ ಉಂಟಾದವು!

ಬೆಟ್ಟಹಳ್ಳಿ ಪಾಂಡವರಿಗೂ ಮೊದಲು ಇತ್ತು ಎಂದು ನಲವತ್ತು ವರ್ಷದ ಹಿಂದೆ ಕಣ್ಣು ಮುಚ್ಚಿ ಹೇಳಬಹುದಾಗಿತ್ತು, ಅದರಲ್ಲಿದ್ದ ಬೆಟ್ಟ ನೋಡಿ. ಇಲ್ಲಿ ಬಹು ಹಿಂದಿನಿಂದಲೇ ಜನವಸತಿ ಇತ್ತು ಎಂದು ತೋರುವ ಕುರುಹುಗಳನ್ನು ಪತ್ತೆ ಹಚ್ಚಿದ್ದರು. ಮನೆ ನಿರ್ಮಾಣಕ್ಕೆ ಅಲ್ಲಿನ ಕಲ್ಲು ಬೆಟ್ಟದ ಕಲ್ಲುಗಳು ಯತೇಚ್ಛವಾಗಿ ಉಪ್ಯೋಗಿಸಲ್ಪಟ್ಟಿತು. ಇಲ್ಲಿನ ಕಲ್ಲು ಬಂಡೆಗಳ ಜತೆ ಜತೆಗೆ ಸಂಸಾರ ನಡೆಸಿದ ಮೂರು ನಾಲ್ಕು ಮತ್ತು ಅದಕ್ಕೂ ಹಿಂದಿನ ತಲೆಮಾರಿನ ಜನ ಸುತ್ತಮುತ್ತ ಇದ್ದಾರೆ.
ಈಗ ಮನೆ ಕಟ್ಟಬೇಕಾದರೆ lintle, beam, column.. ಮೊದಲಾದವು ಅವಶ್ಯ. ಪ್ರತಿದಿವಸ ಹೊಸ ಹೊಸ ಐಡಿಯಾಗಳು ಹುಟ್ಟುವ ಕಾಲದಲ್ಲಿ ನಾವಿದ್ದೇವೆ. ಮಾರನೇ ದಿವಸ ಪಾಯಕ್ಕೆ ಕಲ್ಲು ಜೋಡಿಸುವ ಕೆಲಸ. ಅದಕ್ಕೆ ಮೊದಲು ಸಿಮೆಂಟು, ಜಲ್ಲಿ ಮರಳು ಸೇರಿಸಿ ನೀರಿನಲ್ಲಿ ಕಲಸಿ ಅದನ್ನು ಪಾಯದ ಉದ್ದಕ್ಕೂ ನಾಲ್ಕು ಇಂಚು ಹರಡುತ್ತಾರೆ. ಇದಕ್ಕೆ ಬೆಡ್ಡಿಂಗ್ ಎಂದು ಹೆಸರಂತೆ. ಬೆಡ್ ಅಂದರೆ ನನ್ನ ಕಲ್ಪನೆ ಮೆತ್ತನೆಯ ಹಾಸಿಗೆ. ಮೆತ್ತನೆಯ ಹಾಸಿಗೆ ನಾವೂ ಮಾರಾಜನ ವಂಶಸ್ಥರಿಗೆ, ಪಾಪ ಬಡವರು ಭೂತಾಯಿಯೇ ಹಾಸಿಗೆ ಮತ್ತು ಆಕಾಶವೇ ಹೊದಿಕೆ ತಾನೇ?
ಪಾಯದಲ್ಲಿ ಕಲ್ಲು ಜೋಡಿಸಿ ಅವುಗಳ ಮಧ್ಯೆ ಮತ್ತು ನಡುವೆ ಮರಳು ಸಿಮೆಂಟು ಕಲಸಿ ನೆಲದಿಂದ ಎರಡು ಅಡಿ ಮೇಲಕ್ಕೆ ಫೌಂಡೇಶನ್ ಬಂತು. ಈಗ ಅದನ್ನು ಮೂರು ವಾರ ಬಿಡಬೇಕಂತೆ. ಈ ನಡುವಿನಲ್ಲಿ ಮುಂದೆ ನಮ್ಮ ತಯಾರಿ ಏನೇನು ಆಗಬೇಕು ಅಂತ ಸತ್ಯಣ್ಣ ಕೋಚ್ ಮಾಡಿದ್ದ.
ಈ ನಡುವೆ ಒಂದು ಸಂಗತಿ ನಡೆಯಿತು. ಸಾಲ ಕೊಡುವ ಬ್ಯಾಂಕ್ ಅವರನ್ನು ಮನೆ ಶುರೂ ಮಾಡ್ತೀನಿ, ಸಾಲ ರಿಲೀಸ್ ಮಾಡಿ ಅಂತ ಕೇಳಿದ್ದೆ. ಅಲ್ಲಿನ ಆಫೀಸರ್ ನಿಮ್ಮ ಹತ್ತಿರ ಇರೋದೆಲ್ಲಾ ಖಾಲಿ ಆದಮೇಲೆ ಮೊದಲನೇ ಕಂತು ರಿಲೀಸ್ ಆಗೋದು, ಅಗ್ರಿಮೆಂಟ್ ನೋಡಿದ್ದೀರಿ ತಾನೇ…? ಅಂದರು.
“ನನ್ನ ಹತ್ತಿರ ಏನೂ ಇಲ್ವಲ್ಲಾ ಇವರೇ….” ಅಂತ ಎರಡೂ ಅಂಗೈ ಉಜ್ಜಿದ್ದೆ.
“ನಿಮ್ಮ ಸೇವಿಂಗ್ಸು, ಪೀ ಎಫು…ಇದೆಲ್ಲ ಖಾಲಿ ಆಗಬೇಕು. ಆಮೇಲೆ ಇಲ್ಲಿಂದ ಹಣ ರಿಲೀಸ್…..”, ಅಂದಿದ್ದರು!
ಎಲ್ಲಾ ಕಡೆ ಇಟ್ಟಿದ್ದ ಪುಡಿ ಕಾಸುಗಳು ಆಚೆ ಬಂದವು. ಹಂಗೂ ಹಿಂಗೂ ದೊಡ್ಡ ಸರ್ಕಸ್ ಮಾಡಿ ಫೌಂಡೇಶನ್ ಹಂತ ತಲುಪಿ ಆಗಿತ್ತು. ಮುಂದಿನ ಕೆಲಸ ಅಂದರೆ ಇಟ್ಟಿಗೆ, ಮರದ ಕೆಲಸ… ಇಂತಹವು. ಇದರ ಮಧ್ಯೆ ನನ್ನ ಕೆಲವರು ಗೆಳೆಯರು ಸರ್ಕಾರ ಸಬ್ಸಿಡಿ ದರದಲ್ಲಿ ಸಿಮೆಂಟ್ ಕೊಡುತ್ತೆ, ಟ್ರೈ ಮಾಡು. ಸರ್ಕಾರಕ್ಕೆ ಅರ್ಜಿ ಹಾಕಿ ಮನೆ ಕೆಲಸಕ್ಕೆ ಮರ ಕೊಡಿ ಅಂತ ಕೇಳಿದರೆ ಫಾರೆಸ್ಟ್‌ನಿಂದಾ ನೀನೇ ಹೋಗಿ ತರಬಹುದು. ತುಂಬಾ ಚೀಪಾಗಿ ಸಿಗುತ್ತೆ ಅಂತ ತಲೆ ಒಳಗೆ ಒಂದು ಹೆಬ್ಬಾವನ್ನೇ ಬಿಟ್ಟಿದ್ದರು.
ಕಡಿಮೆ ಖರ್ಚಿನಲ್ಲಿ ಮನೆಗೆ ಬೇಕಾದ್ದು ಏನು ಸಿಗುತ್ತೆ ಅಂದರೂ ಅದನ್ನು ಕೊಂಡೊ ಕದ್ದೋ ತರುವ ಮೈಂಡ್‌ಸೆಟ್ ಈ ವೇಳೆಗೆ ತಲುಪಿದ್ದೆ. ಕಾಡಿನಿಂದ ಮರ ತರಬೇಕು ಅಂದರೆ ಯಾರನ್ನ ಸಂಪರ್ಕಿಸಬೇಕು ಅಂತ ಗೊತ್ತಿರಲಿಲ್ಲ. ಸಿಮೆಂಟ್ ಬೇಕು ಅಂದರೂ ಯಾರನ್ನ ಹಿಡಿಯೋದು ಅದೂ ಗೊತ್ತಿಲ್ಲ! ಸತ್ಯಣ್ಣ ಹತ್ತಿರ ನಡೆದೆ. ಸತ್ಯಣ್ಣ ಇಂತಹ ವಿಷಯದಲ್ಲಿ ಭಾರೀ ಅನುಭವ ಇರೋನು.
“ಸತ್ಯಣ್ಣ ಹೀಗೆ ಹೀಗೆ ಮರ ಸಿಮೆಂಟು ಗವರ್ಮೆಂಟ್‌ನಿಂದಾ ಚೀಪಾಗಿ ಸಿಗ್ತದಂತೆ… ಅದಕ್ಕೆ ಯಾವ ಡಿಪಾರ್ಟ್ಮೆಂಟ್ ಅಪ್ರೋಚ್ ಮಾಡಬೇಕು……?” ಅಂತ ಐಡಿಯಾ ಕೇಳಿದೆ.
“ಗೋಪು, ಅದು ದೊಡ್ಡ ಪ್ರೊಸೆಸ್…..” ಅಂತ ಸರ್ಕಾರದಿಂದ ಮರ, ಸಿಮೆಂಟು ಪಡೆಯುವ ವಿಧಾನ ವಿವರಿಸಿದ.
“ಸಿಮೆಂಟ್ ಎಷ್ಟು ಬೇಕು ಅಂತ ಲೆಕ್ಕ ಹಾಕಿ ತಹಶೀಲ್ದಾರ, ಅವರ ಮೂಲಕ ಸುಪ್ರೀಡೆಂಟು, ಅವರ ಮೂಲಕ ಡಿ ಸೀ ಆಫೀಸಿಗೆ ಕೊಡಬೇಕು. ಅದ್ಯಾರೋ ಬಂದು ಚೆಕ್ ಮಾಡ್ತಾರೆ. ನಾವು ಕೇಳಿದಷ್ಟು ಕೊಡೋಲ್ಲ. ಅವರು ಕೊಟ್ಟರೂ ಅದು ಮರದ ದಿಮ್ಮಿಗಳ ರೂಪ. ಅದನ್ನು ಅವರು ಹೇಳೋ ಕಾಡಿಂದ ಕತ್ತರಿಸಿ ತರಬೇಕು, ಜತೆಗೆ ಕಾರ್ಪೆಂಟರು ಮರ ಕಡಿಯೋರು ಬೇಕು, ಲಾರಿ ತಗೊಂಡು ಹೋಗಬೇಕು.. ಒಂದೇ ದಿವಸಕ್ಕೆ ಕೆಲಸ ಆಗುತ್ತೆ ಅಂತ ಹೇಳುಕ್ಕೆ ಆಗೊಲ್ಲ…….” ಮೊದಲಾಗಿ ಅದರ ಕಷ್ಟ ವಿವರಿಸಿದ. ಇರೋ ತರಲೆ ತಾಪತ್ರಯದಲ್ಲಿ ಇದನ್ನೂ ಅಂಟಿಸಿಕೊಬೇಕಾ ಅಂತ ಯೋಚಿಸಿ ಮರ, ಸರ್ಕಾರ, ಕಾಡು ಇವುಗಳನ್ನ ಮನಸಿನಿಂದ ಆಚೆ ಓಡಿಸಿಬಿಟ್ಟೆ.
ಇನ್ನು ಸಿಮೆಂಟ್ ಬಗ್ಗೆ ಸತ್ಯಣ್ಣ ವಿವರಿಸಿದ್ದು ಹೀಗೆ…
“ಅದಕ್ಕೂ ದೊಡ್ಡ ಪ್ರೊಸೀಜರ್. ನೂರೆಂಟು ಕಡೆ ಹೋಗಬೇಕು, ಲಂಚ ಕೊಡಬೇಕು, ಬೇಕಾದ್ದ ಸಮಯಕ್ಕೆ ಸಿಗೋಲ್ಲ… ಹೀಗೆ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟೋರಿಗೆ ಇದೆಲ್ಲಾ ವರ್ಕೌಟ್ ಆಗುತ್ತೆ. ನಮ್ಮ ತರಹದವರಿಗೆ ಅಲ್ಲ….!” ಅಂತ ಸವಿವರವಾಗಿ ಇನ್ ಡೆಪ್ತ್ ವಿಷಯ ತಿಳಿಸಿದರು. ಸರಿ ಅಂತ ತಲೆ ಆಡಿಸಿ ಅವರ ಆಫೀಸಿನಿಂದ ಆಚೆ ಬಂದೇನಾ..? ಅವರ ಆಫೀಸು ಅಂದರೆ ನಮ್ಮ ಫ್ಯಾಕ್ಟರಿಯ ಅವರ ರೂಮು. ನನ್ನ ಮನೆ ಕಟ್ಟಿಸುವ ನೂರಕ್ಕೆ ನೂರು ಸಮಾಲೋಚನೆಗಳು ಫ್ಯಾಕ್ಟರಿಯಲ್ಲಿ ನಡೆದದ್ದು. ಇದು ಈಗ ನನಗೆ ಅನಿಸಿದ್ದು ಅಕಸ್ಮಾತ್ ಪ್ರತಿಯೊಂದು ಮೀಟಿಂಗು, ಚರ್ಚೆ ಇದೆಲ್ಲಾ ಫ್ಯಾಕ್ಟರಿ ಹೊರಗಡೆ ಆಗಿದ್ದರೆ ನಾನು ಮನೇನೆ ಕಟ್ಟುತ್ತಾ ಇರಲಿಲ್ಲವೇನೋ ಅಂತ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನಾವು ಜೈಲಿನಲ್ಲಿ ಇದ್ದೀವಿ ಅನ್ನುವ ಭಾವನೆ ಬೆಳೆಸಿಕೊಂಡಿದ್ದರೂ ಸಹ ಅಲ್ಲಿನ ಹಲವು ಸುಖ ಸವಲತ್ತು ನೆನೆದರೆ ಆಗಿನ ಜೀವನ ಅದೆಷ್ಟು ಸುಂದರ ಅನಿಸುತ್ತೆ. ಔಟ್ ಆಫ್ ದಿ ಕಂಟೆಸ್ಟ್ ಒಂದು ನನ್ನ ಸಂಗತಿನೆ ಹೇಳಬೇಕು ಅಂದರೆ ಹೆಚ್ಚಿನ ಓದು, ದೇಶ ಸುತ್ತುವ ವಿಪುಲ ಅವಕಾಶ, ಬರವಣಿಗೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಲೋಕ, ಮೈಕ್ ಹಿಡಿದು ದಿನಗಟ್ಟಲೆ ಕೊರೆಯೋದು….. ಇವೆಲ್ಲದರ ನಂಟು ಮತ್ತು ಬಾಂಧವ್ಯ ನನಗೆ ಬೆಳೆದಿದ್ದೇ ನಾನು ಕಾರ್ಖಾನೆಯಲ್ಲಿ ಇದ್ದದ್ದರಿಂದ. ನನ್ನ ತರಹವೇ ಸಿಕ್ಕ ಸೌಲಭ್ಯಗಳನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡು ಏಣಿಯ ಮೆಟ್ಟಲು ಏರಿದವರು ಸುಮಾರು ಜನ ನನಗೆ ಗೊತ್ತು. ಐವತ್ತು ವರ್ಷದ ನಂತರ ಹಿಂದಿನದನ್ನು ನೆನೆದಾಗ ನಮ್ಮ ಬೆನ್ನಿಗೆ ಇದ್ದ ನಮ್ಮ ವಿಧಿ ಅಥವಾ ದೈವ (ವಿಚಾರವಾದಿಗಳು ಈ ಪದಗಳನ್ನು ಉಪಯೋಗಿಸುವ ಹಾಗಿಲ್ಲ! ಆದರೆ ಇದಕ್ಕೆ ಪರ್ಯಾಯ ಪದ ಇನ್ನೂ ನನಗೆ ಸಿಕ್ಕಿಲ್ಲ! ಅದರಿಂದ ಅದು ಸಿಗುವವರೆಗೆ ಈ ಪದಗಳನ್ನೇ ಉಪಯೋಗಿಸುವುದು ಎಂದು ತುಂಬಾ ಹಿಂದೆಯೇ ನಿರ್ಧರಿಸಿದ್ದೇನೆ!) ನಮಗೆ ಒಳ್ಳೆಯ ಬೆಂಗಾವಲಾಗಿ ನಿಂತು ನಮ್ಮನ್ನು ಕಾಪಾಡಿತು ಎಂದು ಹೇಳಲೇಬೇಕು!
ಮರ ಸರ್ಕಾರದಿಂದ ಪಡೆಯಬೇಕು ಎನ್ನುವ ಆಸೆ ಇನ್ನೂ ಇತ್ತು. ಮಲ್ಲೇಶ್ವರದಲ್ಲಿ ಒಂದು ಅರಣ್ಯ ಕಚೇರಿ ನೋಡಿದ್ದೆ. ಅದರ ಮೇಲೆ Wood Is Good ಎನ್ನುವ ಮರದ ಅಕ್ಷರಗಳನ್ನೇ ಜೋಡಿಸಿದ್ದ ಒಂದು ದೊಡ್ಡ ಫಲಕ ನೋಡಿದ್ದೆ. ಒಂದು ಮಧ್ಯಾಹ್ನ ಸೀದಾ ಅದರೊಳಗೆ ನಡೆದೆ.
ಅಲ್ಲಿನ ಒಬ್ಬರು ಅಧಿಕಾರಿಗಳ ಜತೆ ಮಾತುಕತೆ ಆಯಿತು. ಎರಡು ಗಂಟೆ ಅವರ ಜತೆ ಸಮಾಲೋಚನೆ ಆಗಿದ್ದು. ಸರ್ಕಾರದ ಮರ ಬೇಡ ಎನ್ನುವ ತೀರ್ಮಾನಕ್ಕೆ ಬಂದೆ. ಇನ್ನು ನಮ್ಮ ಏರಿಯಾದಲ್ಲಿ ಯಾರಾದರೂ ಸರ್ಕಾರದ ಸಿಮೆಂಟ್ ಪಡೆದಿದ್ದಾರ ಎನ್ನುವ ಒಂದು ಮಾರ್ಕೆಟ್ ಸರ್ವೇ ಮಾಡಿದೆ.
“ಗೋಪಾಲ್ ದಯವಿಟ್ಟು ಬೇಡ ಸರ್ ಸರ್ಕಾರದ ಸಿಮೆಂಟು ಅಂತ ಹೋಗಬೇಡಿ. ಒಟ್ಟಿಗೆ ನೀವು ಕೊಂಡುಕೋಬೇಕು, ಜತೆಗೆ ಅದನ್ನ ಕಾಪಾಡಬೇಕು, ಕೊನೆವರೆಗೆ. ಜತೆಗೆ ಕ್ವಾಲಿಟಿ ಇರಲ್ಲ…..” ಅಂತ ನನ್ನ ಕೋಲಿಗ್ ಹೇಳಿದರು. ಐಡಿಯಾ ಡ್ರಾಪ್ ಆಯಿತು. ಈಗಲೇ ಮರ ತಗೊಂಡು ಇಟ್ಕೋ. ಅದು ಸೀಸನ್ ಆಗಬೇಕು ಅಂತ ಐಡಿಯ ಬಂತು ಗೆಳೆಯರಿಂದ.
ಮರಕೊಂಡು ಇಡಬೇಕು ಅಂದರೆ ರೊಕ್ಕ? ರೊಕ್ಕಕ್ಕೆ ಏನು ಮಾಡೋದು? ಮರ ಕೊನೆಲಿ ಬೇಕಾದರೆ ಕೊಂಡು ಕಿಟಕಿ ಬಾಗಿಲು ಇವೆಲ್ಲಾ ಮಾಡಿದರೆ ಆಯ್ತು ಅನ್ನುವ ನಿರ್ಧಾರಕ್ಕೆ ಬರುವ ಹಾಗೆ ಆಯಿತು. ಸಿಮೆಂಟ್, ಕೆಲಸಗಾರರ ಹಾರೆ ಗುದ್ದಲಿ ಪಿಕಾಸಿ ಕರಣೆ ಮಟ್ಟಗೋಲು…. ಇವೆಲ್ಲ ಬಯಲಲ್ಲಿ ಇಡಲು ಸಾಧ್ಯವೇ…?
ಒಂದು ಶೆಡ್ ಹಾಕಲೇಬೇಕಾದ ಸಂದರ್ಭ ಉದ್ಭವ ಆಗಬೇಕೆ?
ಮಲ್ಲಯ್ಯ ಸಹ ಶೆಡ್ ಬೇಕು ಸಾಮಿ ಅಂತ ಒತ್ತಡ ಹೇರಿದ. ಹೀಗಾಗಿ ಒಂದು ಲೋಡ್ ಇಟ್ಟಿಗೆ ಹೊಡೆಸಿ ಆಯಿತು. ಯಶವಂತಪುರಕ್ಕೆ ಹೋಗಿ ಒಂದು ಬಾಗಿಲು, ನಾಲ್ಕು ಅಸ್ಬೆಸ್ಟೋಸ್ ಶೀಟ್ ಕೊಂಡು ತಂದೆ ಎರಡೇ ದಿವಸದಲ್ಲಿ ಶೆಡ್ ರೆಡಿ ಆಯ್ತು!

ಶೆಡ್ ರೆಡಿ ಆದರೆ ಅದನ್ನು ನೋಡಿಕೊಳ್ಳಲು ಒಬ್ಬ ವಾಚಮನ್ ಇಲ್ಲ ಅಂದರೆ ಹೇಗೆ? ಮಲ್ಲಯ್ಯ ಒಬ್ಬ ವಾಚ್ಮನ್ ಹುಡುಕಿದ ಅವನಿಗೆ ಗೊತ್ತಿದ್ದವನು. ಅವನ ಹೆಸರು ತುಂಬಾ ಅಪರೂಪದ್ದು. ಚೌರಿ ಅಂತ.
“ಇದೇನೋ ನಿನ್ನ ಹೆಸರು ಹೀಗಿದೆ……?” ಅಂತ ಚೌರಿನ ಮೊದಲನೇ ಪರಿಚಯದಲ್ಲೇ ಕೇಳಿದೆ.
“ಚೌಡಮ್ಮ ಹೆಸರು ಸಾರ್ ಅದು….” ಅಂದ!
ಒಂದು ಚೂರು ಡೀವಿಯೇಷನ್ ಈಗ.
ವೋಡ್ ಹೌಸ್ ಓದಿದವರು ಯಾವತ್ತೂ ಮೆಚ್ಚುವ ಹಲವು ಪಾತ್ರಗಳಲ್ಲಿ ಬರ್ಟಿ ವೂಸ್ಟರ್ ಮತ್ತು ಜೀವ್ಸ್ ಬಹು ಮುಖ್ಯವಾದವು. ಕನ್ನಡದಲ್ಲಿ ವೋಡ್ ಹೌಸ್ ತಂದವರು ಡಾ. ಏ ವಿ ಕೇಶವಮೂರ್ತಿ (ಕೇಫ) ಅವರು. ಬರ್ಟಿ ವೂಸ್ಟರ್ ಮತ್ತು ಜೀವ್ಸ್ ಈ ಪಾತ್ರಗಳು ಕನ್ನಡದಲ್ಲಿ ಪಾಂಡು ಹಾಗೂ ಶೌರಿ ಹೆಸರಿನಲ್ಲಿ ಪ್ರಖ್ಯಾತ ವಾದವು. ಕೊರವಂಜಿಯಲ್ಲಿ ಮೊದಲು ವೋಡ್ ಹೌಸ್ ಕತೆಗಳು ಕನ್ನಡೀಕರಣ ಆಗಿ ನಂತರ ಇತರ ಪತ್ರಿಕೆಗಳಲ್ಲಿ ಸಹ ಬಂದವು ಕೇ ಫ ಅವರ ಈ ಕನ್ನಡ ಅವತರಣಿಕೆ ಈಗಲೂ ಖುಷಿ ಕೊಡುತ್ತವೆ. ನಮ್ಮ ವಾಚಮನ್ ಹೆಸರು ಚೌರಿ ಅಂತ ಕೇಳಿದಾಗ ನನಗೆ ಥಟ್ಟನೆ ಮನಸಿಗೆ ಬಂದದ್ದು ಕೇ ಫ ಅವರ ಶೌರಿ!
ಮತ್ತೆ ಟ್ರ್ಯಾಕ್‌ಗೆ… ಕಾಸಿಲ್ಲದೆ ಕಾರಣ ಮರ ಮುಟ್ಟು ಇವುಗಳನ್ನು ನಂತರ ನೋಡಿದರೆ ಆಯಿತು. ಒಂದು ವಾಸಕಲ್ ರೆಡಿ ಮಾಡಿಸು ಅಂತ ಸತ್ಯಣ್ಣ ಐಡಿಯಾ ಕೊಡ್ತು.ವಾಸಕಲ್ ಅಂದರೆ ಬಾಗಿಲಿನ ಚೌಕಟ್ಟು! ಇದು, ಈ ಪದ ಹೊಸದಾಗಿ ನನ್ನ ಡಿಕ್ಷನರಿಗೆ ಸೇರಿತು. ಮತ್ತೆ ಯಶವಂತಪುರ ಅಲ್ಲಿಂದ ವಾಸಕಲ್‌ಗೆ ಬೇಕಾದ ಮರ ಕ್ಲಾಂಪು… ಇವೆಲ್ಲಾ ತಂದೇವಾ.. ಈ ವೇಳೆಗೆ ಒಬ್ಬರು ಕಾರ್ಪೆಂಟರ್ ಗೊತ್ತು ಮಾಡಿಕೊಂಡಿದ್ದೆವು. ಅವರ ಹೆಸರು ರಾಮಾಚಾರಿ ಅಂತ. ಕಾರ್ಪೆಂಟರ್ ಕಸುಬು ಇಡೀ ಖಾನ್ ದಾನ್‌ದು. ಇವರು ಒಂದೆರೆಡು ದಶಕದ ನಂತರ ಒಂದು ಶನಿ ದೇವಸ್ಥಾನ ಶುರು ಮಾಡಿ ಅದರ ಮುಖ್ಯ ಅರ್ಚಕರಾದರು. ನನಗೆ ಗೊರೂರು ರಾಮಸ್ವಾಮಿ ಅಯ್ಯಂಗಾರರ “ಕಮ್ಮಾರ ವೀರಭದ್ರಾಚಾರಿ ಜೋಯಿಸನಾದದ್ದು..” ಕತೆ ಆಗಾಗ ನೆನಪಿಗೆ ಬರೋದು.
ವಾಸಕಲ್ ಇಟ್ಟಿದ್ದು ಮತ್ತು ಮುಂದಿನ ಕತೆ ಸಿನಿಮಾ ರೀಲುಗಳ ಹಾಗೆ ತಲೆಯಲ್ಲಿ ಕೂತಿವೆ. ಅದಕ್ಕೆ ಹೋಗುವ ಮೊದಲು ಸಿನಿಮಾ ರೀಲುಗಳ ವಿಷಯ. ಹಿಂದೆ ಸಿನಿಮಾ ತೆಗೆಯುತ್ತಾ ಇದ್ದದ್ದು ಫಿಲಂ ರೋಲು ಹಾಕಿ. ಅದು ಸಂಸ್ಕರಿಸಿದ ನಂತರ ಒಂದು ಗುಂಡನೆ ಪೆಟ್ಟಿಗೆಯಲ್ಲಿ ಸುರುಳಿ ಸುರುಳಿಯಾಗಿ ಶೇಖರ ಇಡುತ್ತಿದ್ದರು. ಸಿನಿಮಾ ಪ್ರದರ್ಶನ ವೇಳೆಯಲ್ಲಿ ಪ್ರೊಜೆಕ್ಟರ್‌ನ ಮೂಲಕ ಈ ಸುರುಳಿ ಬಿಚ್ಚುತ್ತಾ ಬಿಚ್ಚುತ್ತಾ ತೆರೆಯ ಮೇಲೆ ಸಿನಿಮಾ ಓಡುತ್ತಿತ್ತು. ಆ ಕಾಲದ ಸುಮಾರು ಜನ ತಮ್ಮ ನೆನಪುಗಳನ್ನು ಹೇಳಬೇಕಾದರೆ ನೆನಪುಗಳು ಸಿನಿಮಾ ರೀಲುಗಳ ಹಾಗೆ ತಲೆಯಲ್ಲಿ ಕೂತಿವೆ ಎಂದು ವಿವರಿಸುತ್ತಾ ಇದ್ದರು. ಈಗ ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ರೀಲುಗಳು ಸ್ಮಶಾನ ಸೇರಿದವು ಮತ್ತು ಇಂತಹ ಪದ-ಪುಂಜಗಳನ್ನು ಉಪಯೋಗಿಸಿದರೆ ಅದರ ವಿವರಣೆಯನ್ನು ಸಹ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ!

ಇದಿಷ್ಟು ಈಗ. ರೀಲುಗಳು ಬಿಚ್ಚಿಕೊಳ್ಳುತ್ತಾ ಇವೆ. ಅವುಗಳನ್ನು. ಮುಂದೆ ತಮಗೆ ತೋರಿಸುತ್ತಾ ತೋರಿಸುತ್ತಾ ತೋರಿಸುತ್ತಾ…. ಹೋಗುತ್ತೇನೆ.
ಮುಂದಕ್ಕೆ…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

ವಾಹ್! ಅದ್ಭುತ ಬರಹ!
ಇತಿಹಾಸ, ಕಟುಸತ್ಯ, ವಾಸ್ತವ, ಅನುಭವ ಇತ್ಯಾದಿ ಸಕಲವೂ ತಿಳಿಹಾಸ್ಯ-ಲಘುವಿಡಂಬನೆಯ ಚಿತ್ತಾಕರ್ಷಕ ಶೈಲಿಯಲ್ಲಿ ಮೂಡಿಬಂದಿವೆ. ‘ಮನೆ ಕಟ್ಟಿ ನೋಡು…’ ಎಂಬ ಗಾದೆಯ ಆಳದ ಅರಿವು ಓದುಗರಿಗೆ ಈ ಬರಹದಿಂದ ಆಗುವುದು ಖಂಡಿತ.
ಎಂಥಾ ಮರಳಯ್ಯ ಇದು ಎಂಥಾ (ಪ್ರಗತಿಯೆಂಬ) ಮರುಳು!
– ಎಚ್. ಆನಂದರಾಮ ಶಾಸ್ತ್ರೀ
ಶ್ರೀ ಆನಂದರಾಮ ಶಾಸ್ತ್ರೀ ಅವರೇ, ತಮ್ಮ ಮೆಚ್ಚುಗೆಗೆ ಋಣಿ ಎಂದರೆ ಕ್ಲೀಷೆ ಆದೀತು.ಧನ್ಯವಾದಗಳು
ಗೋಪಾಲಕೃಷ್ಣ