ಬೆಂಗಳೂರು: ಕನ್ನಡ ಸೃಜನಶೀಲ ಬರೆವಣಿಗೆಗಾಗಿ ಕಪಿಲ ಹುಮನಾಬಾದೆ ಅವರಿಗೆ ಪ್ರಸಕ್ತ ಸಾಲಿನ ಟೊಟೊ ಪುರಸ್ಕಾರ ಸಂದಿದೆ. ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ (ಬಿಐಸಿ)ದಲ್ಲಿ ಶನಿವಾರ ನಡೆದ ಟೊಟೊ ಪುರಸ್ಕಾರ ೨೦೨೫ ಸಮಾರಂಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಮಾಯಾ ಕೃಷ್ಣ ರಾವ್ ವಿಜೇತರಿಗೆ ರೂ. ೬೦,೦೦೦ ನಗದು ಬಹುಮಾನ ನೀಡಿ ಗೌರವಿಸಿದರು.
ಆಂಗೀರಸ್ ಟೊಟೊ ವೆಲ್ಲಾನಿ ಅವರ ಸ್ಮರಣಾರ್ಥವಾಗಿ ಟಿಎಫ್‌ಎ ಕಳೆದ ೨೧ ವರ್ಷಗಳಿಂದ ೨೯ ವರ್ಷದೊಳಗಿನ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸುತ್ತ ಬಂದಿದೆ. ಕನ್ನಡ ಸೃಜನಶೀಲ ಬರೆವಣಿಗೆ ವಿಭಾಗದಲ್ಲಿ ಈ ಸಲ ೭೬ ಬರಹಗಾರರು ಸ್ಪರ್ಧಿಸಿದ್ದರು. ಕೊನೆಯ ಸುತ್ತಿನಲ್ಲಿ ಸುವರ್ಣಾ ಚೆಳ್ಳೂರು, ವಿನಯ ಗುಂಟೆ ಮತ್ತು ಕಪಿಲ ಹುಮನಾಬಾದೆ ಆಯ್ಕೆಯಾಗಿದ್ದರು.
ತೀರ್ಪುಗಾರರಾಗಿದ್ದ ಡಾ. ಗೀತಾ ವಸಂತ ಮತ್ತು ಡಾ, ಟಿ. ಎಸ್. ಗೊರವರ, “ಕಪಿಲ ಅವರ ಕಥೆಗಳು ಸಾಂದ್ರವಾದ ಬರವಣಿಗೆಯಿಂದ ಗಹನವಾದ ಅನುಭವ ನೀಡುತ್ತವೆ. ಕಥನದ ಸಾಂಕೇತಿಕತೆ, ಧ್ವನಿಪೂರ್ಣ ಸಾಧ್ಯತೆ, ಕಾವ್ಯಾತ್ಮಕ ಗುಣಗಳು ಗಮನ ಸೆಳೆಯುತ್ತವೆ. ಸ್ಥಳೀಯ ಬದುಕಿನ ಚಹರೆಗಳನ್ನು ಆದರ ಬಹುತ್ವದೊಂದಿಗೆ ತೆರೆದಿಡುವ ಸೂಕ್ಷ್ಮ ಗ್ರಹಿಕೆ ಕತೆಗಳಲ್ಲಿದೆ. ಭಾಷೆ ಕೂಡ ತನ್ನ ಸ್ಥಳೀಯ ಬನಿಯೊಂದಿಗೆ ವಿಶಿಷ್ಟ ಆವರಣವನ್ನು ನಿರ್ಮಿಸಲು ಪೂರಕವಾಗಿದೆ. ಆದರೆ ಕತೆಗಳ ಅನುಭವ ವಿಶ್ವಾತ್ಮಕವಾದುದು. ಬದುಕಿನ ರಹಸ್ಯಮಯತೆ, ನಿಗೂಢ ತಲ್ಲಣಗಳು, ಬಿಗಿದು ಹೋದಂಥ ಸ್ಥಿತಿಯಿಂದ ಪಾರಾಗಬೇಕೆಂಬ ಮನುಷ್ಯ ಚೇತನದ ಹಂಬಲ… ಈ ಎಲ್ಲ ಪದರಗಳನ್ನು ಕತೆಗಾರರು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಕತೆಗಳಲ್ಲಿ ತೀರ್ಮಾನಗಳ ಬದಲು ಹುಡುಕಾಟವಿರುವದು ಸೃಜನಶೀಲ ಸಾಧ್ಯತೆ, ಹಲವು ಜಗತ್ತುಗಳನ್ನು ಒಂದು ಚೌಕಟ್ಟಿನಲ್ಲಿ ಬೆಸೆಯುವ ಸಾವಯವ ನಿರೂಪಣಾ ಶೈಲಿ ಇವರ ಕತೆಗಳನ್ನು ಕಲೆಯಾಗಿಸಿದೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
