ಗದ್ದೆಯ ಕೆಲಸ ಮಾಡಿ ದಣಿದ ಎತ್ತುಗಳು ಒಮ್ಮೆ ಕೆರೆಯಲ್ಲಿ ಈಜಾಡಿ ಬಂದರೆ ದಣಿವೆಲ್ಲ ಮಾಯ. ಮೇಯಲು ಬಿಟ್ಟ ದನಗಳು ಕೆರೆಯಲ್ಲಿ ನೀರು ಕುಡಿದೇ ಮನೆಕಡೆ ಮುಖಮಾಡುತ್ತಿದ್ದವು. ಇನ್ನು ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ಝಾಂಡಾ ಹೊಡೆದಿರುವ ಎಮ್ಮೆಗಳನ್ನು ಕೆರೆಯಿಂದ ಎಬ್ಬಿಸುವುದೇ ಕಷ್ಟದ ಕೆಲಸ. ಊರಿನ ಕೆರೆ ಎಂದರೆ ಊರಿನ ಹೈಕಳು ಈಜು ಕಲಿಯುವ ತಾಣವೂ ಹೌದು. ನಮ್ಮೂರಿನಲ್ಲಿ ನಾಕಾರು ಜಾತಿಯ ಜನರಿದ್ದರು. ಯಾರಿಗೂ ಕೆರೆಯ ನೀರನ್ನು ಬಳಸಲಿಕ್ಕೆ ಯಾವುದೇ ಅಭ್ಯಂತರವೂ ಇರಲಿಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎಂಟನೆಯ ಕಂತು
ಯಾವುದಾದರೂ ಕೆಲಸ ಮಾಡುವಾಗ ಅದಕ್ಕೆ ಸಂಬಂಧವಿಲ್ಲದವರನ್ನು ಕೇಳಿಕೊಂಡು ಆ ಕೆಲಸ ಮಾಡಬೇಕು ಅಂದರೆ ʻಹೊಳೆ ನೀರಿಗೆ ದೊಣೆನಾಯಕನ ಅಪ್ಪಣೆ ಬೇಕಾ?ʼ ಅಂತ ಕೇಳುವ ರೂಢಿ ಇದೆ. ಪ್ರಸ್ತುತ ಕರ್ನಾಟಕದಲ್ಲಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಮೂಲವೂ ಅದೇ ಆಗಿದೆ. ನಮ್ಮ ರಾಜ್ಯದಲ್ಲಿ ಹರಿಯುವ ನದಿಯ ನೀರನ್ನು ನಾವು ಬಳಸಲಿಕ್ಕೆ ʻಕಾವೇರಿ ನೀರು ನಿರ್ವಹಣಾ ಮಂಡಳಿʼಯ ಅನುಮತಿ ಬೇಕಾಗಿದೆ. ʻಯಾರದೋ ದುಡ್ಡು ಎಲ್ಲಮ್ಮನ ಜಾತ್ರೆʼ ಎನ್ನುವಂತೆ ಕರ್ನಾಟಕ ತನ್ನ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ನೆರೆಯ ರಾಜ್ಯಕ್ಕೆ ನೀಡಬೇಕು ಎನ್ನುವ ಸ್ಥಿತಿ ಉಂಟಾಗಿದೆ. ನೀರು ಜೀವರಕ್ಷಕ. ಮನುಷ್ಯ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ನೀರು ಅಗತ್ಯವೇ. ನೀರು ಇಲ್ಲದೆ ಒಂದು ದಿವಸ ಕೂಡ ನಾವು ಬದುಕಲು ಸಾಧ್ಯವಾಗದು. ನೀರಿಗೆ ʻಜೀವಜಲʼ ಎನ್ನಲಾಗುತ್ತಿದೆ. ಹಾಗಾಗಿಯೇ ನಮ್ಮೆಲ್ಲ ನಾಗರಿಕತೆಗಳು ಬೆಳೆದಿರುವುದು ನದೀತೀರದಲ್ಲಿಯೇ. ಮುಂದಿನ ಕಾಲಘಟ್ಟದಲ್ಲಿ ಮನುಷ್ಯ ಎಲ್ಲ ಕಡೆ ಬದುಕನ್ನು ಕಟ್ಟಿಕೊಳ್ಳಲು ಹೊರಟಾಗ ತನ್ನ ನೀರಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಾವಿ, ಕೆರೆ, ಕಲ್ಯಾಣಿಗಳನ್ನು ಸೃಷ್ಟಿಸಿಕೊಂಡಂತೆ ಕಾಣುತ್ತದೆ. ಹಾಗಾಗಿಯೇ ಊರಿಗೊಂದು ಕೆರೆ ಇದ್ದೇ ಇರುತ್ತದೆ. ಪ್ರಾಯಶಃ ಅದರಿಂದಾಗಿಯೇ ʻಊರಿಗೆ ಬಂದೋಳು ನೀರಿಗೆ ಬಾರಳೇ?ʼ ಎನ್ನುವ ಗಾದೆ ಮಾತು ಹುಟ್ಟಿರಬೇಕು.
ಇತಿಹಾಸದ ಕಾಲಘಟ್ಟದಲ್ಲಿ ಪ್ರಭುತ್ವವು ಕೆರೆ, ಬಾವಿಗಳಿಗೆ ಬಹಳ ಪ್ರಾಧಾನ್ಯ ನೀಡುತ್ತಿತ್ತು ಎನ್ನುವುದಕ್ಕೆ ವಿಜಯನಗರ ಅರಸ ಪ್ರೌಢಪ್ರತಾಪದೇವರಾಯನ ಅಮಾತ್ಯನಾಗಿದ್ದ ಲಕ್ಷ್ಮೀಧರನ ತಾಯಿ ಅವನಿಗೆ ಹಾಲೂಡಿಸುವಾಗ ʻಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸುʼ ಎಂದು ಅವನಿಗೆ ತಿಳಿಸಿದ್ದಳೆನ್ನುವ ಶಾಸನದ ಸಾಲುಗಳು ಕೆರೆಯ ಮಹತ್ವವನ್ನು ಸಾರುತ್ತವೆ. ೧೨ ಮತ್ತು ೧೩ನೆಯ ಶತಮಾನದ ಕರ್ನಾಟಕದ ಶಾಸನಗಳನ್ನು ಗಮನಿಸಿದರೆ ಆ ಕಾಲಘಟ್ಟದಲ್ಲಿ ನೂರಾರು ಕೆರೆಗಳು ನಿರ್ಮಾಣವಾದ ವಿವರಗಳು ದೊರೆಯುತ್ತವೆ. ಕರ್ನಾಟಕದ ಶಾಸನ ಸಮೀಕ್ಷೆಗಳ ಪ್ರಕಾರ ರಾಜರು, ಮಂತ್ರಿಗಳು, ಮಾಂಡಲಿಕರು, ವ್ಯಾಪಾರಿಗಳು, ಶ್ರೀಮಂತರು, ಊರಿನಗೌಡರು, ಸ್ಥಳೀಯರು ಹೀಗೆ ಎಲ್ಲ ರೀತಿಯ ಜನರೂ ಕೆರೆಯನ್ನು ಕಟ್ಟಿಸುವ ಮೂಲಕ ಜನಸಾಮಾನ್ಯರಿಗೆ ನೀರು ಲಭ್ಯವಾಗುವಂತೆ ನೋಡಿಕೊಂಡಿದ್ದರು. ಬೆಂಗಳೂರನ್ನು ಕಟ್ಟಿಸಿದ ಕೆಂಪೇಗೌಡರು ಜನರಿಗೆ ನೀರಿನ ಕೊರತೆ ಆಗದಂತೆ ಅದೆಷ್ಟೋ ಕೆರೆಗಳನ್ನು ಕಟ್ಟಿಸಿದ್ದರು ಎನ್ನುವ ಸಂಗತಿ ನಮಗೆಲ್ಲ ತಿಳಿದಿದೆ. ಅದೇರೀತಿ ಮೈಸೂರಿನ ಒಡೆಯರ ಕಾಲದಲ್ಲಿಯೂ ಮೈಸೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆರೆಗಳು ಅಸ್ತಿತ್ವಕ್ಕೆ ಬಂದಿದ್ದವು. ಕಳೆದ ಅರ್ಧಶತಮಾನದಿಂದೀಚೆಗೆ ನಗರೀಕರಣದ ಕಾರಣದಿಂದ ಈಗ ಅವುಗಳಲ್ಲಿ ಹಲವು ನಾಶವಾಗಿವೆ, ಕೆಲವು ಆ ದಾರಿಯಲ್ಲಿವೆ. ಹೊಯ್ಸಳರ ಕಾಲದಲ್ಲಿ ಪದ್ಮರಸ ಎನ್ನುವ ಕವಿಯೊಬ್ಬನು ಕೆರೆಯನ್ನು ಕಟ್ಟಿಸಿದ್ದರಿಂದ ಅವನನ್ನು ಕೆರೆಯ ಪದ್ಮರಸ ಎಂದು ಕರೆಯಲಾಗಿತ್ತು. ಏಶಿಯಾದಲ್ಲಿಯೇ ಎರಡನೆಯ ಅತ್ಯಂತ ದೊಡ್ಡಕೆರೆ ಎಂದು ಹೇಳುವ ಸೂಳೆಕೆರೆ ಅಥವಾ ಶಾಂತಿಸಾಗರ ಆ ಕಾಲದಲ್ಲಿ ನಿರ್ಮಾಣವಾದ ಕೆರೆಗಳಲ್ಲಿ ಒಂದು. ಆ ಕೆರೆಯನ್ನು ಕುರಿತಂತೆ ವಿಭಿನ್ನ ಐತಿಹ್ಯಗಳು ಲಭ್ಯವಿವೆ. ಅದನ್ನು ಕಟ್ಟಿಸಿದವಳು ಶಾಂತವ್ವೆ ಎನ್ನುವ ಹೆಣ್ಣುಮಗಳು. ಹೀಗೆ ಕಟ್ಟಿಸಿದವರ ಹೆಸರಿನ ಕೆರೆಗಳು ಕೆಲವಾರು, ಮದಗದ ಕೆರೆ, ಕುಣಿಗಳ್ ಕೆರೆ ಮುಂತಾಗಿ ಊರಿನ ಹೆಸರಿನ ಕೆರೆಗಳು ಹಲವು ಹೀಗೆ ಬಗೆಬಗೆಯ ಕೆರೆಗಳಿಗಳಿವೆ. ಕೆರೆಗಳನ್ನು ಕಟ್ಟಿಸಿದವರಿಗೆ ರಾಜರು ದತ್ತಿನೀಡಿದ, ದವಸ, ಧಾನ್ಯಗಳನ್ನು ಕೊಟ್ಟಿರುವ ಶಾಸನಗಳು ದೊರಕಿವೆ.
ನಾವು ಶಾಲೆ ಅಥವಾ ಕಾಲೇಜಿನಲ್ಲಿ ಕೆರೆಗೆಹಾರ ಎನ್ನುವ ಪಠ್ಯವನ್ನು ಓದಿದ್ದೇವೆ. ಊರಿನ ಗೌಡನೋ ಮತ್ಯಾರೇ ಇರಲಿ ಕೆರೆ ತೋಡಿಸುವಾಗ ನೀರು ಬಾರದಿದ್ದರೆ ಕೆರೆಗೆ ಮನುಷ್ಯರನ್ನು ಬಲಿ ಕೊಡುತ್ತಿದ್ದರೆನ್ನುವ ಕತೆಗಳು, ಅದಕ್ಕೆ ಸಂಬಂಧಿಸಿದ ಐತಿಹ್ಯಗಳು ರಾಜ್ಯಾದ್ಯಂತ ಸಿಗುತ್ತವೆ. ಹೊನ್ನಿಹಾಡು, ಒಡ್ಡರಬೋವಿ, ಮದಗದ ಹೊನ್ನಮ್ಮ ಹೀಗೆ ಹಲವು ಪಠ್ಯಗಳಿವೆ. ಊರಿಗೆ ನೀರಿನ ಅನುಕೂಲವನ್ನು ಕಲ್ಪಿಸುವ ಸಲುವಾಗಿ ಕೆರೆಯನ್ನು ತೋಡಿಸುವ ಈ ಕತೆಗಳಲ್ಲಿ ಕೆರೆಗೆ ನೀರು ಬರದಿದ್ದರೆ ಕೆರೆಯಲ್ಲಿ ನೀರು ನಿಲ್ಲದಿದ್ದರೆ ಮಾನವ ಬಲಿಯನ್ನು ಕೊಟ್ಟಾದರೂ ಕೆರೆಯಲ್ಲಿ ನೀರು ಬರುವಂತೆ ಮಾಡಲಾಗುತ್ತಿತ್ತು ಎನ್ನುವ ವಿವರಗಳಿವೆ. ಜನಪದರು ಸಮಷ್ಟಿಯ ಅನುಕೂಲಕ್ಕೆ ಹೆಚ್ಚಿನ ಪ್ರಾಧಾನ್ಯವನ್ನು ನೀಡುತ್ತಿದ್ದರು ಎನ್ನುವುದಕ್ಕೆ ಇವೆಲ್ಲ ಸಾಕ್ಷಿಗಳಾಗಿ ಕಾಣುತ್ತವೆ.
ʻಮಾಯದಂತ ಮಳೆಬಂತಣ್ಣ ಮದಗದ ಕೆರೆಗೆʼ ಎನ್ನುವ ಜನಪದ ಗೀತೆಯಲ್ಲಿ ಮಳೆ ಅತಿಯಾದಾಗ ಏನಾಯಿತೆನ್ನುವ ವಿವರಗಳು ಸಿಗುತ್ತವೆ. ಆರುಸಾವಿರ ಒಡ್ಡರನ್ನು ಕರೆಸಿ, ಆರುಸಾವಿರ ಗುದ್ದಲಿ ತರಿಸಿ ನೀರನ್ನು ನಿಲ್ಲಿಸಲು ಪ್ರಯತ್ನಿಸಿದರೂ ʻನಾ ನಿಲುವಳಲ್ಲʼ ಎಂದು ಕೆರೆಯ ನೀರು ಹೇಳುತ್ತದೆ ಎನ್ನುವ ಸಾಲುಗಳು ನೀರಿನ ಆರ್ಭಟವನ್ನು ಸೂಚಿಸುತ್ತವೆ. ಈ ಗೀತೆಯನ್ನು ಕೇಳಿದಾಗೆಲ್ಲ ನನಗೆ ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ಅತಿಯಾಗಿ ಸುರಿದ ಮಳೆಯಿಂದ ಪಟ್ಟಪಾಡು ನೆನಪಾಗುತ್ತದೆ.
ಪ್ರಾಯಶಃ ೧೯೬೧ ನೆಯ ಇಸವಿ ಇರಬೇಕು. ಶ್ರಾವಣ ಮಾಸದ ಹೊತ್ತಿಗೆ ಎಲ್ಲ ಕೆರೆಕಟ್ಟೆಗಳೂ ತುಂಬಿ ಹರಿಯುತ್ತಿದ್ದ ಕಾಲ ಅದಾಗಿತ್ತು. ಭೂಮಿ ನೀರನ್ನು ಕುಡಿದು ಎಲ್ಲ ಕಡೆ ಒರತೆ ಎದ್ದಿರುತ್ತಿತ್ತು. ಮನೆಯ ಅಂಗಳದಲ್ಲಿ ಕಾಲಿಟ್ಟರೆ ಪಾದ ಮುಳುಗುವಷ್ಟು ನೀರು ಜಿನುಗುತ್ತಿತ್ತು. ಅಂತಹ ದಿನಗಳಲ್ಲಿ ಆ ವರ್ಷ ಮೂರು ದಿನಗಳಿಂದ ಹಗಲು- ರಾತ್ರಿಯೆನ್ನದೆ ಮಳೆ ಸುರಿಯುತ್ತಲೇ ಇತ್ತು. ಕ್ಷಣಕ್ಷಣಕ್ಕೂ ಬಾವಿಯ ನೀರು ಏರುತ್ತಿತ್ತು. ಬಾವಿಯ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಿದ್ದರಿಂದ ತುಸು ನಿರಾಳವೆನಿಸಿತ್ತು. ಆದರೆ ಊರಮುಂದಿನ ಕೆರೆ ತುಂಬಿ ಕೋಡಿಬಿದ್ದು ತಿಂಗಳು ಕಳೆದಿತ್ತು. ಸುರಿಯುತ್ತಿದ್ದ ಮಳೆಗೆ ಕೋಡಿಯಲ್ಲಿ ಹರಿದುಹೋಗಲಾರದ ಪ್ರಮಾಣದಲ್ಲಿ ನೀರಿನ ಒಳಹರಿವು ಉಂಟಾಗಿತ್ತು. ನಮ್ಮೂರ ಕೆರೆಗೆ ಮೇಲಿರುವ ಎರಡು ಕೆರೆಗಳ ನೀರು ಹರಿದು ಬರುತ್ತಿತ್ತು. ಕೆಳಭಾಗದಲ್ಲಿಯೂ ಎರಡು ಕೆರೆಗಳಿದ್ದವು. ಹಿರಿಯರ ಪ್ರಕಾರ ನೂರಾರು ವರ್ಷಗಳಿಂದ ದನಕರುಗಳಿಗೆ ಕುಡಿಯುವ ನೀರಿಗೆ ತತ್ವಾರ ಆಗಿರಲಿಲ್ಲ. ಆ ಮಳೆಯನ್ನು ಕಂಡು ಊರಮಂದಿ ಕಂಗಾಲು ಆಗಿದ್ದರು. ಮೇಲಿನ ಕೆರೆ ಒಡೆದು ಈ ಕೆರೆಗೆ ಭಾರೀ ನೀರು ಹರಿದು ಬರುತ್ತಿತ್ತು. ಈ ಕೆರೆಯೂ ಒಡೆದಲ್ಲಿ ಕೆಳಗಿನ ತೋಟ, ಮತ್ತು ಗದ್ದೆಗಳಿಗೆ ಸಂಪೂರ್ಣ ಹಾನಿಯಾಗುವುದು ಖಚಿತವಾಗಿತ್ತು. ಮುಂದೆ ಬರುವ ಬೇಸಗೆಯಲ್ಲಿ ಕೃಷಿ ಬೆಳೆಗಳಿಗೆ ದನಕರುಗಳಿಗೆ ನೀರಿನ ಅಭಾವ ಉಂಟಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಅಂತು ಮೂರನೆಯ ದಿನದ ಸಂಜೆಹೊತ್ತಿಗೆ ಮಳೆ ನಿಂತು ಮುಂದಿನ ನಾಲ್ಕೈದು ದಿನ ಮೋಡ ಹರಿದು ಎಳೆಬಿಸಿಲು ಬಂದು ಎಲ್ಲರ ಆತಂಕವೂ ದೂರವಾಗಿತ್ತು. ಒಮ್ಮೊಮ್ಮೆ ನಮ್ಮ ಜೀವರಕ್ಷಕ ಎನಿಸಿರುವ ಸಂಗತಿಯೂ ನೆಮ್ಮದಿಯನ್ನು ಕೆಡಿಸಬಹುದು ಎನ್ನುವುದನ್ನು ಪ್ರಕೃತಿ ತಿಳಿಸಿಕೊಟ್ಟಿತ್ತು.
ನಮ್ಮೂರಿನ ಕೆರೆ ಊರಮಂದಿಗೆ ಒಂದು ಸುದ್ದಿಯ ಕೇಂದ್ರವೂ ಆಗಿತ್ತು. ಮನೆಯ ಹತ್ತಿರದಲ್ಲಿ ಕೆರೆ ಇದ್ದುದರಿಂದ ಮಳೆಗಾಲದ ಹೊರತಾಗಿ ಉಳಿದ ದಿನಗಳಲ್ಲಿ ಊರಮಂದಿ ಬಟ್ಟೆತೊಳೆಯುವ ತಾಣ ಕೆರೆಯೇ ಆಗಿತ್ತು. ಅಲ್ಲಿ ಬಸಿರು, ಬಾಳಂತನದ ನೋವು-ನಲಿವುಗಳಿಂದ ಹಿಡಿದು, ಮದುವೆ-ಮುಂಜಿಗಳ ಸುದ್ದಿ, ಅತ್ತೆ-ಸೊಸೆಯರ ಮುನಿಸಿನವರೆಗೆ ಎಲ್ಲವೂ ಅಲ್ಲಿ ಸ್ಥಾನ ಪಡೆಯುತ್ತಿದ್ದವು. ಇನ್ನು ಗಣಪತಿ ಹಬ್ಬದಲ್ಲಿ ಗಣಪತಿ ಮೂರ್ತಿಯ ವಿಸರ್ಜನೆಗೆ ಕೆರೆಯೇ ಆಗಬೇಕು. ʻಗಣಪತಿ ಮೋರಯ ಮೋರಯೋʼ ಎಂದು ಒಂದೇ ರಾಗದಲ್ಲಿ ಹಾಡುತ್ತ ಕೆರೆಯ ನೀರಿನಲ್ಲಿ ಮೂರ್ತಿಯನ್ನು ಮುಳುಗಿಸುವುದರ ಮಜವೇ ಬೇರೆ. ʻಚೌಪದನ ಚೌಪದನ ನೀವೆಲ್ಲ ಕೇಳಿ ಕೇಳದಿದ್ದವರೆಲ್ಲ ಕೆರೆಬಾವಿ ಹಾರಿ ಸತ್ತ ಕಪ್ಪೆಯ ತಂದು ಕಿವಿಗೆರಡು ಕಟ್ಟಿ ಸತ್ತ ಹಾವ್ಗಳ ತಂದು ಜನಿವಾರ ಹಾಕಿʼ ಎಂದು ಹಾಡುತ್ತ ಮೆರವಣಿಗೆಯಲ್ಲಿ ಹೋಗುತ್ತಿದ್ದೆವು. ಮಳೆಗಾಲದ ಪ್ರಾರಂಭದಲ್ಲಿ ನಾವು ಹಿರಿಯರ ಕಣ್ಣುತಪ್ಪಿಸಿ ಕೆರೆಯಲ್ಲಿ ಕಾಣಿಸುತ್ತಿದ್ದ ಲಕ್ಷಾಂತರ ಗೊಜಮಂಡೆಯನ್ನು ಹಿಡಿಯಲು ಕೆರೆಗೆ ಇಳಿಯುತ್ತಿದ್ದೆವು. ಅವು ಸಿಕ್ಕಂತೆ ಕಂಡರೂ ಕೈಯಿಂದ ಪುಳಕ್ಕನೆ ಕಳಚಿಕೊಂಡು ನಮಗೆ ನಿರಾಸೆಯಾಗುತ್ತಿತ್ತು. ನಾವು ಮರಳಿ ಯತ್ನದಲ್ಲಿ ನಂಬಿಕೆ ಇಟ್ಟು ಮುಂದುವರಿಯುತ್ತಿದ್ದೆವು. ಒಮ್ಮೆ ಯಾರಾದರೂ ಒಂದೋ ಎರಡೋ ಗೊಜಮಂಡೆಯನ್ನು ಹಿಡಿದರು ಎಂದರೆ ಅವರು ಆವತ್ತಿನ ಹೀರೋ ಅಥವಾ ಹೀರೋಯಿನ್. ʻಅರೆ ಹ್ಯಾಂಗೆ ಹಿಡ್ದೆ? ನಮಗ್ಯಾರಿಗೂ ಸಿಗ್ಲೇ ಇಲ್ಲʼ ಎನ್ನುವ ಉದ್ಗಾರ.
ನಾವೆಲ್ಲ ಮಕ್ಕಳು ಕೆರೆದಡ ಕೆರೆದಡ ಎಂದು ಕೆರೆಯ ದಡದಲ್ಲಿ ನಿಂತು ಆಡುತ್ತ ಅದನ್ನು ಒಂದು ಆಟವಾಗಿ ಖುಶಿಪಟ್ಟವರು.. ಎಲ್ಲವೂ ಹಿತವಾಗಿದ್ದಾಗ ʻಮೂಡಲ್ ಕುಣಿಗಳ್ ಕೆರೆ ನೋಡೋದೊಂದೈಭೋಗ ಮೂಡಿ ಬರ್ತಾನೆ ಚಂದಿರಾಮʼ ಎಂದು ಹಾಡಬಹುದು. ನಮ್ಮ ಕಡೆ ಕೆರಿಯ, ಕೆರೆದೇವ, ಕೆರಿಯಮ್ಮ, ಕೆರಿದೇವಿ ಎಂದು ಹೆಸರಿಡುತ್ತಿದ್ದರು. ಬನವಾಸಿಯಿಂದ ಸಿರಸಿಗೆ ಹೋಗುವಾಗ ಗುಡ್ನಾಪುರ ಎನ್ನುವ ಊರಿದೆ. ಗುಡ್ನಾಪುರದ ಕೆರೆ ತುಂಬಿದೆ ಅಂದರೆ ಆ ವರ್ಷ ಮಳೆ ಚೆನ್ನಾಗಿ ಆಗಿದೆ ಎನ್ನುತ್ತಿದ್ದರು ಹಿರಿಯರು. ಒಂದಿಲ್ಲದಿನ್ನೊಂದು ರೀತಿಯಲ್ಲಿ ಕೆರೆ ಬದುಕಿನ ಭಾಗವಾಗಿತ್ತು. ಕೆರೆಯ ಹೆಸರನ್ನು ಹೊತ್ತಿರುವ ಎಷ್ಟೊಂದು ಊರುಗಳಿವೆ. ಅರಸಿಕೆರೆ, ಕವಡಿಕೆರೆ, ತರಿಕೆರೆ, ತಾವರೆಕೆರೆ, ತುರುವೆಕೆರೆ, ತೂಬಿನಕೆರೆ, ಮಂಚಿಕೆರೆ, ಹೊಳಲ್ಕೆರೆ ಮುಂತಾಗಿ. ಪ್ರಾರಂಭದಲ್ಲಿ ಕೆರೆಯನ್ನು ಒಳಗೊಂಡ ಊರುಗಳು- ಕೆರೆಕೊಪ್ಪ, ಕೆರೆಗದ್ದೆ, ಕೆರೆಮನೆ, ಕೆರೆಹಳ್ಳಿ, ಕೆರೆಹೊಂಡ ಇತ್ಯಾದಿಯಾಗಿ ಹಲವಿವೆ. ಕೆರೆಯ ಹೊರತಾಗಿ ಗ್ರಾಮೀಣ ಬದುಕನ್ನು ಕಲ್ಪಿಸಿಕೊಳ್ಳುವುದು ಕಷ್ಟ.
ನಮ್ಮೂರಿನಲ್ಲಿ ದೀಪಾವಳಿಯ ಹಿಂದಿನ ದಿವಸ ಊರಿನ ಎಲ್ಲ ದನಕರುಗಳನ್ನು ಕೆರೆಗೆ ಇಳಿಸಿ ಅವುಗಳ ಮೈತೊಳೆಯುವುದು ನಡೆದು ಬಂದ ರಿವಾಜು. ಗದ್ದೆಯ ಕೆಲಸ ಮಾಡಿ ದಣಿದ ಎತ್ತುಗಳು ಒಮ್ಮೆ ಕೆರೆಯಲ್ಲಿ ಈಜಾಡಿ ಬಂದರೆ ದಣಿವೆಲ್ಲ ಮಾಯ. ಮೇಯಲು ಬಿಟ್ಟ ದನಗಳು ಕೆರೆಯಲ್ಲಿ ನೀರು ಕುಡಿದೇ ಮನೆಕಡೆ ಮುಖಮಾಡುತ್ತಿದ್ದವು. ಇನ್ನು ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ಝಾಂಡಾ ಹೊಡೆದಿರುವ ಎಮ್ಮೆಗಳನ್ನು ಕೆರೆಯಿಂದ ಎಬ್ಬಿಸುವುದೇ ಕಷ್ಟದ ಕೆಲಸ. ಊರಿನ ಕೆರೆ ಎಂದರೆ ಊರಿನ ಹೈಕಳು ಈಜು ಕಲಿಯುವ ತಾಣವೂ ಹೌದು. ನಮ್ಮೂರಿನಲ್ಲಿ ನಾಕಾರು ಜಾತಿಯ ಜನರಿದ್ದರು. ಯಾರಿಗೂ ಕೆರೆಯ ನೀರನ್ನು ಬಳಸಲಿಕ್ಕೆ ಯಾವುದೇ ಅಭ್ಯಂತರವೂ ಇರಲಿಲ್ಲ. ಆಗೆಲ್ಲ ಬಯಲು ಶೌಚಾಲಯವೇ. ಕೆರೆಕಡೆ ಹೋಗಿಬಂದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಕೆರೆ ಇರುವಲ್ಲಿ ಎಲ್ಲವು ಸುಖಾಂತ ಎನ್ನುವಂತಿಲ್ಲ. ನಮ್ಮ ದೊಡ್ಡಪ್ಪನ ಮಗಳು ಕೆರೆಯಲ್ಲಿ ಬಿದ್ದು ಒದ್ದಾಡುತ್ತಿರುವಾಗ ಯಾರೋ ಎತ್ತಿ ತಂದು ಬದುಕಿಸಿದ್ದರು. ಒಮ್ಮೆ ನಮ್ಮಕ್ಕನ ಮಗನೂ ಕೆರೆಯ ಆಳವನ್ನು ಕಂಡುಬಂದವನೇ.
ಕೆರೆಯ ಕೆಳಗಿನ ಕೃಷಿಭೂಮಿಗೆ ಬೇಸಿಗೆಯಲ್ಲಿ ಕೆರೆಯೇ ಆಧಾರ. ಪ್ರತಿಯೊಂದು ಕೆರೆಯಲ್ಲಿಯೂ ತೂಬು ಇರುತ್ತಿತ್ತು. ಬಿಸಿಲು ಹೆಚ್ಚಾಗುತ್ತಿದ್ದಂತೆ ತೂಬಿನ ಬೆಣೆಯನ್ನು ತೆಗೆದು ತೋಟ, ಗದ್ದೆಗಳಿಗೆ ನೀರು ಹರಿಸುವ ರೂಢಿ ಇತ್ತು. ಊರವರು ಎಲ್ಲ ಸೇರಿ ಹೂಳು ತೆಗೆದು ಹಸನುಗೊಳಿಸುತ್ತಿದ್ದರು. ಎರಡೋ ಮೂರೋ ವರ್ಷಗಳಿಗೊಮ್ಮೆ ʻಕೆರೆಬೇಟೆʻ ನಡೆಸುತ್ತಿದ್ದರು. ಮೀನು ಆಹಾರವಾಗಿ ಬಳಸುವ ಜನರು ಗಂಟೆಗೆ ಇಷ್ಟು ಎಂದು ಹಣವನ್ನು ಪಾವತಿಸಿ ಕೆರೆಗೆ ಇಳಿದು ಕೂರಿಗೆಯ ಮೂಲಕ ಮೀನನ್ನು ಹಿಡಿಯುವುದು ರೂಢಿಯಲ್ಲಿತ್ತು. ಈ ಆದಾಯದಿಂದ ಕೆರೆಯ ದುರಸ್ತಿ ಕೆಲಸ ನಡೆಯುತ್ತಿತ್ತು. ದೊಡ್ಡ ದೊಡ್ಡ ಊರುಗಳಲ್ಲಿ ನೀರುಗಂಟಿ ಎನ್ನುವವನು ಒಬ್ಬ ಇರುತ್ತಿದ್ದನು. ಎಲ್ಲರ ಜಮೀನಿಗೂ ಪಾಳಿಯ ಪ್ರಕಾರ ನೀರು ಹರಿಸುವುದು ಅವನ ಕೆಲಸವಾಗಿತ್ತು. ಯಾವುದೇ ತಕರಾರಿಲ್ಲದೆ ಇದು ನಡೆಯುತ್ತಿತ್ತು ಎನ್ನುತ್ತಿದ್ದರು ಹಿಂದಿನವರು. ಇತ್ತೀಚೆಗೆ ಅತಿಯಾದ ಮಾನವ ಚಟುವಟಿಕೆಯ ಕಾರಣದಿಂದ ಅಂತರ್ಜಲಮಟ್ಟ ಕಡಿಮೆಯಾಗಿ ನೀರಿನ ಅಭಾವ ಅತಿಯಾಗುತ್ತಿದೆ ಎನ್ನುತ್ತಿವೆ ವರದಿಗಳು. ಕೆಲವು ಊರುಗಳಲ್ಲಿ ನೀರು ಸಂರಕ್ಷಣಾ ಸಮಿತಿಗಳನ್ನು ಮಾಡಿಕೊಂಡು ನೀರನ್ನು ಸಮರ್ಪಕವಾಗಿ ಬಳಸಲು ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸವೂ ನಡೆಯುತ್ತಿದೆ. ಸ್ಥಳೀಯರಿಗೆ ಕೆರೆಯ ಸಂರಕ್ಷಣೆಯ ಹೊಣೆಗಾರಿಕೆಯನ್ನು ನೀಡಿರುವ ಕಡೆ ನೀರಿನ ಉಳಿತಾಯವಾಗುತ್ತಿದೆ ಎನ್ನುತ್ತವೆ ಸಮೀಕ್ಷೆಗಳು. ಅಂದರೆ ಈ ಊರುಗಳಲ್ಲಿ ಕೆರೆ ನೀರಿಗೆ ದೊಣೆ ನಾಯಕನ ಅಪ್ಪಣೆ ಬೇಕು, ಮನಸೋ ಇಚ್ಛೆ ನೀರನ್ನು ಬಳಸುವಂತಿಲ್ಲ. ಬಯಲುನಾಡಿನ ಹಲವೆಡೆ ಕೆರೆಯ ನೀರು ಊರಿನ ಜನರ ಕುಡಿಯುವ ನೀರಿನ ಮೂಲವೇ ಆಗಿದೆ. ಬಾವಿಯಲ್ಲಿ ಸವುಳು ಅಥವಾ ಉಪ್ಪು ನೀರು ಸಿಗುತ್ತಿರುವ ಊರಿನಲ್ಲಿ ಮಳೆಯ ನೀರಿನ ಆಶ್ರಯ ತಾಣವಾದ ಕೆರೆಯ ನೀರು ಸಿಹಿಯ ಗುಣವನ್ನು ಹೊಂದಿದ್ದು, ಕುಡಿಯಲು ಯೋಗ್ಯವಾಗಿರುತ್ತದೆ ಎನ್ನಲಾಗುತ್ತಿದೆ. ಮೋಡ ಸುರಿಸಿದ ನೀರನ್ನು ಸಂಗ್ರಹಿಸಿ ನಮ್ಮ ಬಳಕೆಗೆ ಉಳಿಸಿಕೊಳ್ಳುವ ಜಾಣತನವನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಈಗ ನಾವು ಅವರ ವಾರಸುದಾರಿಕೆಯನ್ನು ಮುಂದುವರಿಸಬೇಕಾಗಿದೆ.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.