Advertisement
ಅಕ್ಷಯ ಪಾತ್ರೆ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

ಅಕ್ಷಯ ಪಾತ್ರೆ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

ಮಹಾನಗರಗಳ ಥಳುಕಿನ ಮಾಲ್ ಗಳ ಕಣ್ಣು ಕುಕ್ಕುವ ಬೆಳಕಿನಲ್ಲಿ ರಾಶಿಗಟ್ಟಲೆ ಜೋಡಿಸಿಟ್ಟ ವಸ್ತುಗಳ ಅಕ್ಷಯ ಭಂಡಾರ ಕಂಡಾಗ ಎಂಥೆಂಥವರ ಜೇಬೂ ಕೂಡ ಗಡಗಡ ನಡುಗಿ ಉಸಿರುಡುಗಿದ ಹತಯೋಧನಂತಾಗುತ್ತದೆ. ತಳ ಕೆದರಿದ ಸಕ್ಕರೆ ಡಬ್ಬಿಯಂತೆ ಕ್ರೆಡಿಟ್ ಕಾರ್ಡು ಬಂದರೆ ಪಕ್ಕದ ಮನೆಯ ಕಡದಂತೆ ಡೆಬಿಟ್ ಕಾರ್ಡು ಬರುತ್ತದೆ. ಎಷ್ಟೆಷ್ಟು ಕೊಂಡರೂ ಮತ್ತೆಷ್ಟೆಲ್ಲ ಉಳಿದು ಹೋಗಿ ಮುಗಿಯದ ಆಕರ್ಷಣೆಯ ಮಹಾ ಸಂಗ್ರಾಮವೊಂದನ್ನು ಎದೆಯಲ್ಲಿ ಹುಟ್ಟಿಸಿಕೊಂಡಂತೆ ಆಗುತ್ತದೆ. ಅಂಥ ಕಡೆ ಓಡಾಡಿದಷ್ಟೂ ಸಲ ನಮ್ಮೊಳಗೆ ತೀರದ ತಳಮಳವು ಗುಳುಗುಳು ಓಡಾಡುತ್ತ ಕಾಡುತ್ತ ದಿನದಿನ ಪೀಡಿಸುತ್ತ ಮತ್ತಷ್ಟು ಇನ್ನಷ್ಟು ಕೊಳ್ಳುವಂತೆ ಉದ್ರೇಕಿಸುತ್ತ ಕೊಂಡಾಗಲೊಮ್ಮೆ ಅತೃಪ್ತಿಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ.
ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

 

ನಮ್ಮ ತುಂಗತ್ತೆ ಇದ್ದಾಳಲ್ಲ ಬಹಳ ಅಂತಃಕರಣಿ. ಮಾತು ಅಂದ್ರೆ ಮೈಯೆಲ್ಲ ಬಾಯಿ. ಮನೆಗೆ ಯಾರಾದ್ರೂ ಬಂದ್ರೆ ಅವಳ ಸಂತೋಷಕ್ಕೆ ಪಾರವೇ ಇಲ್ಲ. ಅವರನ್ನ ಕರೆದು ಕೂರಿಸಿಕೊಂಡು ಹರಟಲು ಶುರು ಮಾಡಿದ್ರೆ ಮುಗಿದು ಹೋಯ್ತು. ಅವರ ಊರ ಸುದ್ದಿ, ಇವಳ ಊರ ಸುದ್ದಿ, ಅವರಿಬ್ಬರದೂ ಅಲ್ಲದಿರುವ ಬೇರೆ ಊರ ಸುದ್ದಿ ಹೀಗೆ ಹಗಲು ರಾತ್ರಿ ಆಗುತ್ತೆ, ರಾತ್ರಿ ಬೆಳಗಾಗುತ್ತೆ. ಅಯ್ಯೊ ಏನೂ ಮಾತಾಡಿದ ಹಾಗೇ ಆಗಲಿಲ್ಲ, ನೀವು ಹೀಂಗ ಬಂದು ಹಾಂಗೆ ಹೊಂಟುಬಿಟ್ರಿ, ಎರಡು ದಿನ ಇರಬಹುದಿತ್ತು ಅಂತ ಪೇಚಾಡಿಕೊಳ್ಳುತ್ತಾಳೆ. ಬರದೆ ಮನೆಯಲ್ಲಿ ಇದ್ದವರನ್ನ ನೆನಪಿಸಿಕೊಂಡು ಕಕ್ಕುಲಾತಿಯಿಂದ ಆಕ್ಷೇಪಿಸಿ ಕರೆದುಕೊಂಡು ಬನ್ನಿ ಅಂತ ಒತ್ತಾಯಿಸುತ್ತಾಳೆ. ಹಬ್ಬ, ಹುಣ್ಣಿಮೆ, ತಿಥಿ-ಪಕ್ಷ, ಆಲೆಮನೆ, ಬಂಡಿಹಬ್ಬ, ಊರ ತೇರು ಎಲ್ಲದರ ಲಿಸ್ಟು ಹೇಳಿ ಮುದ್ದಾಂ ಬರಬೇಕೆಂತ ಆಗ್ರಹಿಸುತ್ತಾಳೆ. ಕೊನೆಗೆ ದಣಪೆ ದಾಟಿ ಬೀದಿಯ ತಿರುವಲ್ಲಿ ಮರೆಯಾದರು ಅನ್ನುವಾಗ ಸೆರಗಲ್ಲಿ ಕಣ್ಣೊರೆಸಿಕೊಳ್ಳುತ್ತಾಳೆ.

ಇಷ್ಟೆಲ್ಲ ಪ್ರೀತಿಪಟ್ಟುಕೊಂಡ ಆತಿಥೇಯರನ್ನು ಯಾರಾದರೂ ಬಿಡಲುಂಟೆ? ಎಂದಾದರೂ ಮರೆಯಲುಂಟೆ? ಪಾಪ ಅವರು ಬಸ್ಸು ಹತ್ತಿದರೂ, ಊರು ತಲುಪಿದರೂ, ತಮ್ಮ ಬಚ್ಚಲಲ್ಲಿ ಸೋಪು ಹಾಕಿ ಮಿಂದರೂ, ತಮ್ಮ ಮನೆ ಪಾತ್ರೆಯಲ್ಲಿ ಅನ್ನ ಮಾಡಿ ಉಂಡರೂ ತುಂಗತ್ತೆ ಮನೆ ನೆನಪು ಮಾಸುವುದಿಲ್ಲ. ಅಷ್ಟು ಸಲ ಕರೆದಿದ್ದಾಳೆ, ಹೋಗದಿದ್ರೆ ಎಷ್ಟು ಬೇಸರ ಮಾಡಿಕೊಳ್ಳುತ್ತಾಳೆ ಅಂತ ಅವರ ಹೊಟ್ಟೆಯಲ್ಲಿ ಕರುಳು ಕಲಕಲ ಕಲಕಾಡಿ, ಕಣ್ಣಲ್ಲಿ ನೀರು ಗಿರಿಗಿರಿ ತಿರುಗಿ ಪದೇಪದೇ ಹೋಗಬೇಕಂತ ಶಪಥ ಮಾಡಿಕೊಳ್ಳುತ್ತಾರೆ.

ಹೀಗಾಗಿ ತುಂಗತ್ತೆಯ ಮನೆಗೆ ನಿತ್ಯ ನೆಂಟರ ದಾಳಿ. ಬೆಳಗಿನ ಬಸ್ಸಿಗೆ ಮದುವೆ ನಿಕ್ಕಿ ಇಟ್ಟುಕೊಂಡವರು ಒಂದು ಹಿಂಡು ಜನ ಬಂದಿಳಿದರೆ ಮಧ್ಯಾಹ್ನ ಊಟದ ಹೊತ್ತಿಗೆ ಹೊಸ ಲಗ್ನವಾದವರು ಇನ್ನೊಂದು ತಂಡ. ಸಂಜೆಗಪ್ಪಾಗಿ ರಾತ್ರಿಯ ಹಾಲ್ಟಿಂಗ್ ಬಸ್ಸಿಗೆ ಜೋಯಿಸರ ಔಷಧಕ್ಕೆ ಬಂದವರು ಮತ್ತೊಂದು ಗುಂಪು. ಹೀಗೆ ನೆಂಟರು, ನೆಂಟರ ಜೊತೆಗಿನ ಗಿಂಟರು, ಬೀಗರು, ಬೀಗರು ಕಳಿಸಿದ ಬಿಜ್ಜರು, ಪರಿಚಿತರು, ಪರಿಚಿತರ ಗುರುತು ಹೇಳಿ ಬಂದಿಳಿದ ಚರ್ಚಿತರು ಎಷ್ಟೊಂದು ಬಗೆಯ ಅತಿಥಿಗಳು. ಅಂಟಿಸಿಕೊಳ್ಳುವ ಮನೋಭಾವವಿದ್ದರೆ ನೆಂಟರಿಗೇನು ಕೊರತೆ ಹೇಳಿ! ತುಂಗತ್ತೆಗೆ ಸಂಭ್ರಮವೊ ಸಂಭ್ರಮ.

ಒಬ್ಬರಿಗೆ ಮಾವಿನಣ್ಣ ರಸಾಯನ, ಮತ್ತೊಬ್ಬರಿಗೆ ಹಲಸಿನಣ್ಣ ಕಡುಬು, ಶೀಂಯ ಮೆಚ್ಚದವರಿಗೆ ಶ್ಯಾವಿಗೆ ಕಾಯಿಹಾಲು, ಸಣ್ಣ ಮಕ್ಕಳಿದ್ರೆ ಚಕ್ಕುಲಿ, ಹೊಸ ಮದುಮಕ್ಕಳಿದ್ರೆ ಹೋಳಿಗೆ, ಮುದುಕರಿದ್ರೆ ಕಾಯಿಕಡುಬು, ಒಂದೇ ಎರಡೇ… ಮಾಡಿ ಹಾಕಲು ಅವಳೇನೊ ಗೆಜ್ಜೆ ಕಟ್ಟಿಕೊಂಡಿದ್ದಾಳೆ. ಆದರೆ ತಂದು ಹಾಕುವವರ ಕತೆ ಕೇಳಬೇಕಲ್ಲ? ಚಿದುಮಾವ ಅದೇ ತುಂಗತ್ತೆಯ ಗಂಡ ಅವನೇನು ದುಡ್ಡಿನ ಗಿಡ ನೆಟ್ಟಿದ್ದಾನೆಯೆ? ವರ್ಷಕ್ಕೊಮ್ಮೆ ಮಾರುವ ಅಡಿಕೆಗೆ ಕೊಳೆರೋಗ. ಕಬ್ಬಿಗೆ ಕಾಡಾನೆ ಕಾಟ, ಭತ್ತಕ್ಕೆ ಬೆಲೆಕುಸಿತ. ಪಾಪ ಅವನಾದರೂ ಏನು ಮಾಡಬೇಕು? ಆಳುಕೂಲಿ ದರ ಕೇಳಿದರೆ ಕೈಕಾಲು ನಡುಕ. ಅದಕ್ಕಾಗಿಯೇ ಅವನು ತುಂಗತ್ತೆಗೆ ಬೈಯುವುದು. ಆದರೆ ವಿಶ್ವಕುಟುಂಬಿನಿ ತುಂಗತ್ತೆ ಹಾಗೆಲ್ಲ ಹುಲುಬದುಕಿನ ತಾಪತ್ರಯಕ್ಕೆ ಅಂಜಿ ಬಂಧುಪ್ರೇಮ ತ್ಯಾಗ ಮಾಡುವವಳಲ್ಲ. ಅವಳು ಬೇಕಾದರೆ ನೆಂಟರ ಜೊತೆ ತಮ್ಮ ತೊಂದರೆ ತಾಪತ್ರಯಗಳನ್ನು ಹೇಳಿಕೊಂಡು ದುಃಖಿಸಿ ಅತ್ತು ಲೊಚಗುಟ್ಟಿದವರಿಗೆ ಗಟ್ಟಿ ಹಾಲಿನ ಕಾಫಿ ಮಾಡಿಕೊಡುತ್ತಾಳೆ. ಹೇಳಿ ಹೇಳಿ ಸಾಕಾದ ಚಿದುಮಾವ ಕಟ್ಟುನಿಟ್ಟಾದ ಕಾನೂನು ಮಾಡಿಬಿಟ್ಟ. ಬೇಳೆ, ಬೆಲ್ಲ, ಎಣ್ಣೆ, ಅಕ್ಕಿ ಎಲ್ಲವನ್ನು ಇಟ್ಟ ಉಗ್ರಾಣಕ್ಕೆ ಕೀಲಿ ಹಾಕಿ ಉಡುದಾರಕ್ಕೆ ಸಿಕ್ಕಿಸಿಕೊಂಡ. ಒಂದು ವಾರದ ಪಡಿತರ ಅಳೆದು ಹೊರಗಿಟ್ಟ. ಅವನಿನ್ನು ಕೀಲಿ ತೆಗೆಯುವುದು ಮುಂದಿನ ವಾರವೇ. ಜೈ ಅಂತ ಆಟದ ಮ್ಯಾಳದ ಭಾಗವತಿಕೆಗೆ ಹೊಂಟ. ಹಗಲು ತ್ವಾಟ-ಗದ್ದೆ, ರಾತ್ರಿ ಭಾಗವತಿಕೆ. ತುಂಗತ್ತೆಯ ಅಳಲು ಕೇಳುವವರ್ಯಾರು? ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.. ಎರಡೂ ಅಲುಗುಗಳ ಅಡಕತ್ತರಿಯಲ್ಲಿ ಸಿಕ್ಕಿ ಪರಿಪಾಟಲು ಪಡುತ್ತಿದ್ದಾಳೆ.

ಅಯ್ಯೊ ಬಿಡಿ. ಇದೇನು ಹೊಸಕತೆಯಲ್ಲ. ನಮ್ಮೂರಲ್ಲಿ ತುಂಗತ್ತೆಯಾದರೆ ನಿಮ್ಮೂರಲ್ಲಿ ಗಂಗೆ, ಮೇರಿ, ಜೀನತ್ ಯಾರಾದರೂ ಇರಬಹುದು. ಎಲ್ಲರಿಗೂ ಸೀಮಿತ ಆದಾಯ. ಎಷ್ಟೊಂದು ವೆಚ್ಚದ ಆಕರ್ಷಣೆಗಳು. ಏನು ಮಾಡೋಣ? ಭವಸಾಗರದಲ್ಲಿ ಈಜುವಾಗ ಕಣ್ಣು ಮುಚ್ಚಲಾದೀತೆ? ಕಣ್ಣು ಬಿಟ್ಟು ನೋಡಿದರೆ ಕಾಣುವವರನ್ನು ಮಾತಾಡಿಸಲೇಬೇಕಲ್ಲ. ಮತ್ತೆ ಹಾಗೆ ಒಣೊಣ ಮಾತಿನಿಂದ ಹೊಟ್ಟೆ ತುಂಬುತ್ತದೆಯೆ? ಅಲ್ಲ ಯಾರಾದರೂ ಬರೀ ಮಾತಾಡಿ ಬರಲಿಕ್ಕೆ ಅಂತ ಹೋಗಿರುತ್ತಾರೆಯೆ? ಬಂದವರ ಬಾಯಾರಿಕೆ-ಹಸಿವು ಹಿಂಗಿಸುವುದು ಆದ್ಯ ಕರ್ತವ್ಯವಲ್ಲವೆ? ಧುತ್ತನೆ ಬಂದ ನೆಂಟರನ್ನು ಯಾವತ್ತೂ ಸಂಭಾಳಿಸಿಕೊಳ್ಳುವುದು ಹೆಂಗಸರೇ. ಗಂಡಸರು ಬಿಡಿ, ನೆಂಟರ ನಡುವೆ ನೆಂಟನಂತೆ ಕುಳಿತು ಹರಟುತ್ತಾರೆ. ಅಪ್ಪಿತಪ್ಪಿ ಒಳಗೆ ದೃಷ್ಟಿ ಹಾಯಿಸುವುದಿಲ್ಲ.
ರೀ ಅಂತ ಬುಲಾವು ಬಂದರೆ ಕಷ್ಟವಾಗುತ್ತದೆ ಅನ್ನಿಸಿದರೆ ನೀವು ಆರಾಮ ಮಾಡಿ ನಾನು ಈಗ ಬರ್ತೇನೆ ಅಂತ ಹೊರ ಬಿದ್ದು ಪಾರಾಗುತ್ತಾರೆ. ಬಡಪಾಯಿ ಹೆಂಗಸರು ಡಬ್ಬಿಯ ತಳ ಕೆದಕುತ್ತಾರೆ. ಅಲ್ಲೂ ಏನಿರದಿದ್ದರೆ ಹಿತ್ತಲ ಬಾಗಿಲಿನಿಂದ ಪಕ್ಕದ ಮನೆಗೋಡಿ ಪಿಸಿಪಿಸಿ ಮಾತಾಡಿ ಕಡ ತರುತ್ತಾರೆ. ಒಂದು ಬಾಳೆಗೊನೆ, ಹಲಸಿನ ಹಣ್ಣು ಏನು ಸಿಕ್ಕರೂ ಸರಿ, ಪಟಪಟ ಹೆಚ್ಚಿ ಕೊಚ್ಚಿ ಕುದಿಸಿ ಅಕ್ಕರೆಯಿಂದ ಉಪಚರಿಸಿ ಉಣ್ಣಿಸಿ ಬಿಡುತ್ತಾರೆ. ಅವರ ಅಂತಃಕರಣ-ಪ್ರೀತಿ ಸೇರಿ ಅದು ಅಮೃತ ಸಮಾನ ರುಚಿ ಪಡೆದು ಬಿಡುತ್ತದೆ.

ನಮಗೆಲ್ಲ ಗೊತ್ತೇ ಇದೆಯಲ್ಲ ಅಕ್ಷಯ ಪಾತ್ರೆಯ ಕತೆ. ದ್ರೌಪದಿ ಕಾಡಿನಲ್ಲಿ ಮನೆ ಮಾಡಿದರೂ ನೆಂಟರು ಬರುವುದು ತಪ್ಪಲಿಲ್ಲ. ಇಡೀ ಶಿಷ್ಯ ಕೋಟಿಯ ಹಿಂಡು ಕಟ್ಟಿಕೊಂಡು ಬಂದರಲ್ಲ ಮಹರ್ಷಿಗಳು. ಏನಿತ್ತು ಒಳಗೆ ಸಾಮಾನು? ಗೆಡ್ಡೆ-ಗೆಣಸು-ಹಣ್ಣು ಹಂಪಲು ಅದೂ ಗಂಡಂದಿರು ತಂದರೆ ಉಂಟು ಇಲ್ಲದಿದ್ರೆ ಇಲ್ಲ. ಕುತ್ತಿಗೆವರೆಗೆ ಸಂಕಷ್ಟ ಬಂದೊಡನೆ ಕಣ್ಣುಮುಚ್ಚಿ ನೆನೆದುಕೊಂಡಳು. ಕಷ್ಟ ಅಂತ ಬಂದಾಗಲೆಲ್ಲ ಅವಳು ಕೂಗಿದ್ದು ಒಬ್ಬ ಅಣ್ಣನನ್ನು ಮಾತ್ರ ತಾನೆ? ಅಕ್ಷಯ ಪಾತ್ರೆಯನ್ನು ಅವಳ ಕೈಗಿತ್ತು ಅವಳ ಗೃಹಿಣಿತನದ ಮಾನ ಕಾದವನು ಶ್ರೀಹರಿ.

ಅಷ್ಟು ಸಲ ಕರೆದಿದ್ದಾಳೆ, ಹೋಗದಿದ್ರೆ ಎಷ್ಟು ಬೇಸರ ಮಾಡಿಕೊಳ್ಳುತ್ತಾಳೆ ಅಂತ ಅವರ ಹೊಟ್ಟೆಯಲ್ಲಿ ಕರುಳು ಕಲಕಲ ಕಲಕಾಡಿ, ಕಣ್ಣಲ್ಲಿ ನೀರು ಗಿರಿಗಿರಿ ತಿರುಗಿ ಪದೇಪದೇ ಹೋಗಬೇಕಂತ ಶಪಥ ಮಾಡಿಕೊಳ್ಳುತ್ತಾರೆ.

ಹಗಲಿಡೀ ಕಂಡವರ ಮನೆಯ ಕಸ-ಮುಸುರೆ ತೊಳೆಯುತ್ತ, ಹೊಗೆಯುಗುಳುವ ಫ್ಯಾಕ್ಟರಿಗಳಲ್ಲಿ ಸವೆದ ಕಸಬರಿಗೆಗಳಂತೆ ದುಡಿಯುತ್ತ ಸಂಜೆಗಳಲ್ಲಿ ತಮ್ಮ ಗುಡಿಸಲಿನ ಒಲೆಗಳಲ್ಲಿ ಕೂಳು ಬೇಯಿಸುವ ಲಕ್ಷಲಕ್ಷ ತಾಯಂದಿರಿಗೆ ಅವರು ಬದುಕಿಡೀ ಅರೆಹೊಟ್ಟೆಯಲಿ ದುಡಿದ ನೋಟುಗಳೆಲ್ಲ ಗಂಡನ ಕುಡಿತಕ್ಕೆ, ಮಗನ ಓದಿಗೆ, ಮಗಳ ಮದುವೆಗೆ ಸಾಕಾಗದೆ ಖಾಲಿ ಕೈ ಆದಾಗಲೊಮ್ಮೆ ಉಕ್ಕುವ ಕಣ್ಣೀರಿನಲೊಮ್ಮೆ ಅನ್ನಿಸದಿರುತ್ತದೆಯೆ ಓ ದೇವರೇ ನಿನ್ನ ಕರುಣೆಯ ಒಂದೇ ಒಂದು ಹನಿಯುದುರಿ ಪಾತ್ರೆಯಲ್ಲದಿದ್ದರೂ ಸಣ್ಣದೊಂದು ಅಕ್ಷಯ ಲೋಟಾ ಆದರೂ ನಮಗೆ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತು. ಹೊಟ್ಟೆ ತುಂಬುವಷ್ಟು, ಮೈ ಮುಚ್ಚುವಷ್ಟು, ಬ್ಯಾಂಕಿನ ಸಾಲ ತೀರುವಷ್ಟು…

ಮಹಾನಗರಗಳ ಥಳುಕಿನ ಮಾಲ್ ಗಳ ಕಣ್ಣು ಕುಕ್ಕುವ ಬೆಳಕಿನಲ್ಲಿ ರಾಶಿಗಟ್ಟಲೆ ಜೋಡಿಸಿಟ್ಟ ವಸ್ತುಗಳ ಅಕ್ಷಯ ಭಂಡಾರ ಕಂಡಾಗ ಎಂಥೆಂಥವರ ಜೇಬೂ ಕೂಡ ಗಡಗಡ ನಡುಗಿ ಉಸಿರುಡುಗಿದ ಹತಯೋಧನಂತಾಗುತ್ತದೆ. ತಳ ಕೆದರಿದ ಸಕ್ಕರೆ ಡಬ್ಬಿಯಂತೆ ಕ್ರೆಡಿಟ್ ಕಾರ್ಡು ಬಂದರೆ ಪಕ್ಕದ ಮನೆಯ ಕಡದಂತೆ ಡೆಬಿಟ್ ಕಾರ್ಡು ಬರುತ್ತದೆ. ಎಷ್ಟೆಷ್ಟು ಕೊಂಡರೂ ಮತ್ತೆಷ್ಟೆಲ್ಲ ಉಳಿದು ಹೋಗಿ ಮುಗಿಯದ ಆಕರ್ಷಣೆಯ ಮಹಾ ಸಂಗ್ರಾಮವೊಂದನ್ನು ಎದೆಯಲ್ಲಿ ಹುಟ್ಟಿಸಿಕೊಂಡಂತೆ ಆಗುತ್ತದೆ. ಅಂಥ ಕಡೆ ಓಡಾಡಿದಷ್ಟೂ ಸಲ ನಮ್ಮೊಳಗೆ ತೀರದ ತಳಮಳವು ಗುಳುಗುಳು ಓಡಾಡುತ್ತ ಕಾಡುತ್ತ ದಿನದಿನ ಪೀಡಿಸುತ್ತ ಮತ್ತಷ್ಟು ಇನ್ನಷ್ಟು ಕೊಳ್ಳುವಂತೆ ಉದ್ರೇಕಿಸುತ್ತ ಕೊಂಡಾಗಲೊಮ್ಮೆ ಅತೃಪ್ತಿಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಕೊಂಡ ವಸ್ತುಗಳು ಹುಟ್ಟಿಸುವ ತೃಪ್ತಿಗಿಂತ ಕೊಳ್ಳದೇ ಹೋದ ವಸ್ತುಗಳು ಹುಟ್ಟಿಸುವ ಅತೃಪ್ತಿಯೇ ದೊಡ್ಡದಾಗಿರುವುದರಿಂದಲೇ ಇಂತಹ ಮಾಲುಗಳು ಗ್ರಾಹಕನಿಗೆ ಚಟವಾಗುವುದು. ಪರ್ವತಾರೋಹಿಯ ಕನಸಿಗೆ ಬರುವ ಎವರೆಸ್ಟಿನಂತೆ ಮಧ್ಯಮವರ್ಗದ ಗ್ರಾಹಕನಿಗೆ ಈ ಮಾಲುಗಳು.

ಹೀಗೆ ರಾಶಿ ರಾಶಿ ವಸ್ತುಗಳನ್ನು ರಾಚುವಂತೆ ಇಟ್ಟು ಸೆಳೆಯುವ ಗುಣದಲ್ಲಿಯೇ ಅವರ ವ್ಯಾಪಾರದ ಗುಟ್ಟು ಅಡಗಿದೆ. ಅದಕ್ಕೆ ಅಲ್ಲಿಗೆ ಹೋದವರ ಮನಸ್ಸಿನಲ್ಲಿ ಅಯ್ಯೊ ನಮ್ಮ ಬ್ಯಾಂಕು ಅಕೌಂಟು ಅಕ್ಷಯ ಪಾತ್ರೆಯಾಗಬಾರದಿತ್ತೆ ಎಂದು ಆಸೆಯೊಂದು ಅಂಬೆಗಾಲಿಕ್ಕಿಕೊಂಡು ಬರುತ್ತದೆ. ಈ ಆಸೆ ಎನ್ನುವುದು ಯಾವಾಗಲೂ ಹಾಗೆ. ಮನಸ್ಸಿನಲ್ಲಿ ಜಾಗ ಕೊಟ್ಟಷ್ಟೂ ಹಬ್ಬುತ್ತದೆ. ಕೂಸಿನಂತೆ ಅಬೋಧವಾಗಿ ಮುಗ್ಧವಾಗಿ ಹುಟ್ಟಿಕೊಳ್ಳುವ ಇದು ಜಾಗ ಸಿಕ್ಕಂತೆಲ್ಲ ಬೆಳೆಯುತ್ತ ಬೆಳೆಯುತ್ತ ತ್ರಿವಿಕ್ರಮನಾಗುತ್ತ ನಮ್ಮ ವ್ಯಕ್ತಿತ್ವವನ್ನು ತಲೆಯ ಮೇಲೆ ಕಾಲು ಊರಿ ಪಾತಾಳಕ್ಕೆ ತಳ್ಳಿ ಬಿಡುತ್ತದೆ. ಅಲ್ಲಿಂದ ಮುಂದೆ ನಮ್ಮ ಬದುಕು ಅಂಧೇರಿ ನಗರಿಯ ಚೌಪಟ್ ರಾಜಾನ ಕೈಯಲ್ಲಿ ಸಿಕ್ಕು ಸೂತ್ರ ಕಿತ್ತ ಗಾಳಿಪಟವಾಗುತ್ತದೆ. ಆಸೆಯೆಂಬ ಅಕ್ಷೋಹಿಣಿ ಸೈನ್ಯ ಧಾಳಿ ಮಾಡಿದವರಿಗೆ ಯಾವ ಅಕ್ಷಯ ಪಾತ್ರೆ ಸಿಕ್ಕರೂ ಅಷ್ಟೆ. ಅವರು ಅದರ ತಳವೂ ತೂತಾಗುವಂತೆ ಕೆರೆದು ನಿಂತರೂ ತೃಪ್ತಿಯ ತೇಗು ತೇಗುವವರಲ್ಲ.

ಅಂದಹಾಗೆ ದ್ರೌಪದಿ ಉಪಯೋಗಿಸಿದ ಆ ಅಕ್ಷಯಪಾತ್ರೆ ಕಡೆಗೆ ಎಲ್ಲಿ ಹೋಯಿತು ಅಂತ ಗೊತ್ತಿದೆಯಾ? ಅದು ಭೂಮಿ ಬಿಟ್ಟು ಎಲ್ಲೂ ಹೋಗಿಲ್ಲ. ಲಾಗಾಯ್ತಿನಿಂದ ನಮ್ಮೆಲ್ಲ ಹೆಣ್ಣುಮಕ್ಕಳಿಗೆ ಅವರ ಮಸಿಕಟ್ಟಿದ ಅಡುಗೆಮನೆಗಳಲ್ಲಿ ನೀರು ತುಂಬಿದ ಕಣ್ಣುಗಳಿಂದ ಕಿಡಕಿಯಾಚೆಗೆ ಕಾಲುದಾರಿಗಳಲ್ಲಿ ಅವಸರವಸರವಾಗಿ ಶರ್ಟು ಏರಿಸಿ ಓಡುವ ಗಂಡಂದಿರನ್ನೇ ನೋಡುತ್ತ ಕಂಗೆಟ್ಟಾಗಲೆಲ್ಲ ನೆರವಿಗೆ ಬರುತ್ತದೆ ಈ ಅಕ್ಷಯಪಾತ್ರೆ. ಡಬ್ಬಿಯ ತಳದ ಸಕ್ಕರೆಯಾಗಿ, ಸಾಸಿವೆ ಡಬ್ಬದ ಚಿಲ್ಲರೆಯಾಗಿ, ದೇವರ ಫೊಟೊ ಹಿಂದಿನ ನೋಟುಗಳಾಗಿ, ಪಕ್ಕದ ಮನೆಯ ಕಡವಾಗಿ, ಹಿತ್ತಿಲ ಹಣ್ಣು ಬಿಟ್ಟ ಗಿಡವಾಗಿ ಕಾಪಾಡುತ್ತದೆ. ಏನಿಲ್ಲವೆಂದರೂ ಅವರ ಪುಟ್ಟ ಎದೆಗೂಡಿನಲ್ಲಿ ಭರವಸೆಯ ಸಣ್ಣ ದೀವಿಗೆಯಾಗಿ ಉರಿಯುತ್ತ ಅವರ ಉಸಿರ ಶಕ್ತಿಯುಡುಗದಂತೆ ಕಾಯುತ್ತದೆ.

ಓದುವ ಮಗ ದೊಡ್ಡ ನೌಕರಿ ಹಿಡಿದು ಸುಖದ ಮಹಲಿಗೆ ಕರೆದೊಯ್ದ ಕನಸೊಂದು ನಡುರಾತ್ರಿಯ ಹರಕು ಚಾದರದೊಳ ನುಸುಳುವ ಚಳಿಯ ಭಾಸವಾಗದಂತೆ ಚುಕ್ಕು ತಟ್ಟಿ ಮಲಗಿಸುತ್ತದೆ. ಬಿಸಿಲು-ಗಾಳಿಗೆ ಬಿರಿದ ಮೈ ಚರ್ಮ ಚುರುಗುಟ್ಟದಂತೆ ಹಗೂರಕೆ ತಬ್ಬುತ್ತದೆ. ಮತ್ತೆ ನಾಳಿನ ಸೂರ್ಯನ ಕಡೆ ಮುಖ ಮಾಡಿ ಎಲ್ಲ ನೋವುಗಳ ಸೊಂಟಕ್ಕೆ ಸಿಕ್ಕಿಸಿಕೊಂಡು ಅಪಮಾನಗಳ ಅಂಗೈಯಿಂದ ಸುರುಳಿ ಸುತ್ತಿ ತುರುಬು ಕಟ್ಟಿಕೊಂಡು ಪರಪರ ಗುಡಿಸುತ್ತಾರೆ, ಕಸವೊಂದೂ ಉಳಿಯದಂತೆ. ತುಂತುರು ನೀರು ಸಿಂಪಡಿಸಿದ ಪುಟ್ಟ ಆಕಾಶದಂತ ಅಂಗಳದಲ್ಲಿ ಕುಕ್ಕುರುಗಾಲಲ್ಲಿ ಕೂತು ಬೆರಳ ಸಂದಿಯಿಂದ ಪುಡಿಯುದುರಿಸುತ್ತ ಬಿಡಿಸುತ್ತಾರೆ ಅಸೀಮ ಚುಕ್ಕಿಗಳ ಅಕ್ಷಯ ಚಿತ್ತಾರಗಳ ರಂಗವಲ್ಲಿಯನ್ನು.

About The Author

ಪ್ರಜ್ಞಾ ಮತ್ತಿಹಳ್ಳಿ

ಪ್ರಜ್ಞಾ ಮತ್ತಿಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಸಹ ಪ್ರಾಧ್ಯಾಪಕರು. ಸಾಹಿತ್ಯ ರಂಗಭೂಮಿ ಮತ್ತು ಯಕ್ಷಗಾನಗಳು ಇವರ ಆಸಕ್ತಿಯ ಕ್ಷೇತ್ರಗಳು. ಕವಿತೆ, ಕತೆ, ಪ್ರಬಂಧ. ನಾಟಕ, ಪ್ರವಾಸ ಕಥನ ಈ ಎಲ್ಲ ಪ್ರಕಾರಗಳೂ ಸೇರಿದಂತೆ ಎಂಟು ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಕಡೆ ಇವರ ಬರಹಗಳು ಗುರುತಿಸಿಕೊಂಡಿವೆ.

2 Comments

  1. ನೀತಾ. ರಾವ್.

    ಚೆಂದದ ಪ್ರಬಂಧ.

    Reply
  2. Poorvi

    Oh Eshtu chenda barediddiri Prajna.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ