ನನ್ನ ಮನದಿಂಗಿತವನ್ನು ಅರಿತ ಅವರು ಅಲ್ರೀ ಈ ಮಕ್ಕಳು ನಮಗೆಲ್ಲ ಎಷ್ಟು ಚಂದ ಚಂದ ಅಡ್ಡ ಹೆಸರುಗಳನ್ನು ಇಟ್ಟು ಕರೆಯುತ್ತಾರೆ. ನಮ್ಮ ಬೆನ್ನ ಹಿಂದೆ ಕರಿತಾರೆ. ಅವರು ಇಷ್ಟು ದಿನ ಅವರಿಗೆ ಮಾತ್ರ ಗೊತ್ತಿತ್ತು. ಈಗ ನಮಗೂ ತಿಳಿಯಿತು. ಇನ್ನು ಎಷ್ಟು ಜನ ಗೊತ್ತಿದ್ಯೋ ಏನೋ ಗೊತ್ತಿಲ್ಲ. ಆದರೂ ಶಾಲೆಯಲ್ಲಿ ಒಂದು ಕಾರ್ಯಕ್ರಮ ಮಾಡಿ ನಮಗೆ ಇಟ್ಟಿರುವ ಅಡ್ಡ ಹೆಸರುಗಳನ್ನು ಬಹಿರಂಗವಾಗಿ ಘೋಷಿಸಿ ನಾಮಕರಣ ಮಾಡಲಿ ಎಂದರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅಂದು ಶಾಲಾ ಟೈಮ್ ಟೇಬಲ್ ಪ್ರಕಾರ ನಾಲ್ಕನೆಯ ಅವಧಿಯ ಬೆಲ್ ಬಾರಿಸಿತು. ಮೂರನೇ ಅವಧಿ ಗಣಿತ ಬೋಧಿಸಿದ ಟೀಚರ್ ಹೊರಗಡೆ ಬರುತ್ತಿದ್ದಂತೆ ನಾಲ್ಕನೇ ಅವಧಿಗೆ ಇಂಗ್ಲಿಷ್ ಕ್ಲಾಸ್ ತೆಗೆದುಕೊಳ್ಳಲು ನಾನು 7ನೇ ತರಗತಿಯ ಕೊಠಡಿಯ ಕಡೆಗೆ ಧಾವಿಸಿದೆ. ಒಬ್ಬ ಟೀಚರ್ ಹೊರಗೆ ಬಂದು ಮತ್ತೊಬ್ಬರ ಪ್ರವೇಶದ ನಡುವೆ ಕೆಲವೇ ಸೆಕೆಂಡುಗಳಿದ್ದರೂ ಮಕ್ಕಳ ಅಬ್ಬರ, ಆರ್ಭಟ, ಕೂಗಾಟ ಮುಗಿಲು ಮುಟ್ಟುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಕಂಡುಬರುವ ದೃಶ್ಯ. ನಿತ್ಯವೂ ಗಣಿತ ಟೀಚರ್ ಹೊರಗೆ ಬಂದು ನಾನು ತರಗತಿ ಒಳಗೆ ಪ್ರವೇಶಿಸುವಷ್ಟರಲ್ಲಿ ಜೇನುಗೂಡಿಗೆ ಕಲ್ಲು ಹೊಡೆದರೆ ಎಲ್ಲ ಹುಳಗಳು ಒಟ್ಟಿಗೆ ಹಾರಿ ಜುಮ್ ಎಂದು ಸೊಂಯ್ ಗುಡುವಂತೆ ಮಕ್ಕಳೆಲ್ಲ ಒಟ್ಟಿಗೆ ಚೀರುತ್ತಾರೆ. 40 ನಿಮಿಷಗಳು ಬಾಯಿಗೆ ವಿರಾಮ ನೀಡಿ, ಕಿವಿ ಮತ್ತು ಮೆದುಳಿಗೆ ಮಾತ್ರ ಕೆಲಸ ನೀಡಿರುವ ಮಕ್ಕಳು ಒಟ್ಟಿಗೆ ಬಾಯಿಗೆ ಕೆಲಸ ಕೊಟ್ಟಾಗ ಆಗುವ ಶಬ್ದವನ್ನು ಶಿಕ್ಷಕರು ಮಾತ್ರವೇ ಸಹಿಸಲು ಸಾಧ್ಯ. ಅದಕ್ಕಾಗಿ ಶಿಕ್ಷಕ ಹುದ್ದೆ ಅತಿ ಹೆಚ್ಚು ಸಹನೆ ಮತ್ತು ತಾಳ್ಮೆಯನ್ನು ಬಯಸುತ್ತದೆ. ನಾನು ತರಗತಿ ಬಾಗಿಲಿಗೆ ಬಂದರೂ, ಇಡೀ ತರಗತಿ ನಿಶ್ಯಬ್ದನಿಂದ ಕೂಡಿದೆ. ನನಗೆ ನಂಬಲು ಆಗುತ್ತಿಲ್ಲ. ಮಕ್ಕಳೆಲ್ಲ ಬೇರೆ ಕ್ಲಾಸಿನೊಂದಿಗೆ ಕಂಬೈನ್ಡ್ ಆಗಿದ್ದಾರಾ ಎಂದು ತರಗತಿಯೊಳಗೆ ಇಣಕಿ ಹಾಕಿದೆ. ಇಲ್ಲ ಮಕ್ಕಳೆಲ್ಲೂ ಹೋಗಿಲ್ಲ. ತರಗತಿ ಒಳಗೆ ಕುಳಿತಿದ್ದಾರೆ. ಬಹುಶಃ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಇಷ್ಟು ಸೈಲೆಂಟಾಗಿ ಕುಳಿತಿರುವುದು ಇದೇ ಮೊದಲು. ನನಗೆ ಪರಮಾಶ್ಚರ್ಯವಾಯಿತು. ನಾನು ತರಗತಿ ಒಳಗೆ ಪ್ರವೇಶಿಸಿ ಬ್ಲಾಕ್ ಬೋರ್ಡ್ ಇರುವ ಪ್ಲಾಟ್ಫಾರ್ಮ್ ಏರಿದೆ. ಎಲ್ಲರೂ ಒಟ್ಟಾಗಿ ಮಧ್ಯಾಹ್ನದ ನಮಸ್ಕಾರಗಳನ್ನ ತಿಳಿಸಿದರು. ಯಾರ ಮುಖದಲ್ಲೂ ಲವಲವಿಕೆ ಇಲ್ಲ. ಎಲ್ಲರ ಮುಖ ಮೂರು ದಿನದ ಹಿಂದೆ ಗಿಡದಿಂದ ಬಿಡಿಸಿದ ಹೂವಿನಂತೆ ಬಾಡಿತ್ತು. ಟೀಚರ್‌ಗೆ ನಮಸ್ಕಾರ ಹೇಳಬೇಕು ಎಂದು ಫಾರ್ಮಾಲಿಟಿಗಾಗಿ ಮಕ್ಕಳೆಲ್ಲ ಒತ್ತಾಯಪೂರ್ವಕವಾಗಿ ವಿಶ್ ಮಾಡಿದ್ದು ನನ್ನರಿವಿಗೆ ಬಂತು. ಎಲ್ಲರ ಮುಖಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಎಲ್ಲರೂ ಅತ್ತಂತೆ ಕಾಣುತ್ತಿತ್ತು. ಕಂಗಳೆಲ್ಲ ಕೆಂಪಾಗಿದ್ದವು. ಕೆನ್ನೆಗಳು ತೇವಗೊಂಡಿದ್ದವು. ಗಣಿತ ತರಗತಿಯಲ್ಲಿ ಏನೋ ನಡೆದಿದೆ ಎಂದು ತಿಳಿಯಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಸಾಮಾನ್ಯವಾಗಿ ಗಣಿತ ಮತ್ತು ಇಂಗ್ಲಿಷ್ ಬೋಧಿಸುವ ಟೀಚರ್ ಗಳು ಮಕ್ಕಳ ಬೇಸರಕ್ಕೆ ತುತ್ತಾಗುವುದು ಸರ್ವೇಸಾಮಾನ್ಯ. ಸರ್ಕಾರಿ ಶಾಲಾ ಮಕ್ಕಳಿಗೆ ಈ ಎರಡು ವಿಷಯಗಳ ಕಲಿಕೆ ಶಾಲೆಯಲ್ಲೇ ಪುನರ್ಬಲನವಾಗಬೇಕು. ಮನೆಯಲ್ಲಿ ಕನ್ನಡ, ವಿಜ್ಞಾನ ಮತ್ತು ಸಮಾಜವನ್ನು ಸ್ವಲ್ಪ ಮಟ್ಟಿಗೆ ಪೋಷಕರು ಹೇಳಿಕೊಡುತ್ತಾರೆ. ಆದರೆ ಗಣಿತ ಮತ್ತು ಇಂಗ್ಲಿಷ್ ಕಲಿಸಲು ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ ಕೆಲವೊಮ್ಮೆ ಗಣಿತ ಮತ್ತು ಇಂಗ್ಲಿಷ್ ಹೋಂವರ್ಕ್ ಮಾಡದೆ ಮಕ್ಕಳು ಶಾಲೆಗೆ ಬರುತ್ತಾರೆ. ಅಂತಹ ಸಂದರ್ಭದಲ್ಲಿ ನಾವೇ ಮತ್ತೊಮ್ಮೆ ಹೆಚ್ಚುವರಿ ವಿಷಯಗಳನ್ನು ಕಲಿಸಬೇಕಾಗುತ್ತದೆ. ಬಹುಶಃ ಇಂದು ಮಕ್ಕಳು ಗಣಿತ ಹೋಂವರ್ಕ್ ಮಾಡಿರಲಿಲ್ಲ ಅನಿಸುತ್ತೆ. ಅದಕ್ಕೆ ಗಣಿತ ಮಿಸ್ ಬೆತ್ತದಿಂದ ಕಜ್ಜಾಯ ಕೊಟ್ಟಿರಬೇಕು. ಸಿಹಿ ಜಾಸ್ತಿಯಾಗಿ ಅಳುತ್ತಿದ್ದಾರೆ ಎಂದು ಮನದೊಳಗೆ ಲೆಕ್ಕಾಚಾರ ಹಾಕಿದೆ. ಇವತ್ತು ಯಾರ್ಯಾರು ಗಣಿತ ಹೋಂವರ್ಕ್ ಮಾಡಿರಲಿಲ್ಲ ಅಂದೆ. ಬಹುತೇಕ ಮಕ್ಕಳು ಮಾಡಿದ್ದರು. ತರಗತಿ ವಾತಾವರಣ ಬದಲಾಗಲು ಕಾರಣ ಏನೆಂದು ಅವರನ್ನೇ ಕೇಳಿದೆ. ಯಾಕೆ? ಏನಾಯ್ತು? ಎಲ್ಲಾ ಸಪ್ಪೆ ಮೋರೆ ಹಾಕಿ ಕೂತಿದ್ದೀರಿ ಅಂದೆ, ಒಬ್ಬರಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಪದೇ ಪದೇ ಕೇಳಿದರೂ ಉತ್ತರಿಸದಿದ್ದಾಗ ಕೋಪ ನೆತ್ತಿಗೇರಿತು. ಸ್ವಲ್ಪ ಧ್ವನಿ ಏರಿಸಿ ಗದರುವ ದನಿಯಲ್ಲಿ ಕೇಳಿದೆ. ಆಗ ಒಬ್ಬ ಹುಡುಗಿ ಗಣಿತ ಟೀಚರ್ ಇವತ್ತು ನಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಯಾರ ಜೊತೆಗೂ ಮಾತಾಡುತ್ತಿಲ್ಲ ಮಿಸ್ ಅಂದಳು. ಹೌದಾ! ಯಾಕೆ? ಅವರು ತುಂಬಾ ಒಳ್ಳೆಯವರು. ಮಕ್ಕಳ ಬಗ್ಗೆ ಸದಾ ಯೋಚಿಸಿ ಮಕ್ಕಳಿಗೆ ಗಣಿತ ಉಕ್ಕಿನ ಕಡಲೆಯಾಗಬಾರದು ಎಂದು ಉರುಗಡಲೆಯಾಗಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ವಿಭಿನ್ನ ತಂತ್ರಗಳನ್ನು, ಚಟುವಟಿಕೆಗಳನ್ನು ರೂಪಿಸಿ ಪ್ರಾಯೋಗಿಕವಾಗಿ ಗಣಿತ ಕಲಿಸುವ ವೃತ್ತಿ ಬದ್ಧತೆ ಇರುವ ಮಾತೃ ಹೃದಯಿ ಶಿಕ್ಷಕಿ. ಹಾಗಿದ್ದರೂ ಇದೇನಾಗಿದೆ ಇಲ್ಲಿ ಎಂದು ಯೋಚಿಸಿ ತಲೆ ಗಿರ್ ಎಂದಿತು.

ಆ ತರಗತಿ ಲೀಡರ್‌ನನ್ನು ಹತ್ತಿರ ಕರೆದು ಏನಾಯ್ತು‌ ಹೇಳು, ಮಿಸ್ ಬೇಸರ ಮಾಡಿಕೊಳ್ಳಲು, ಮಾತು ಬಿಡುವಂಥದ್ದು ಏನು ನಡೆಯಿತು ಎಂದು ಸಮಾಧಾನದಿಂದ ವಿಚಾರಿಸಿದೆ. ಅವನು ಮಿಸ್ ಇವರೆಲ್ಲ ಮಿಸ್ ನಾ ಏನೇನೋ ಅಂದರಂತೆ. ಅದು ಹೇಗೋ ಮಿಸ್‌ಗೆ ಗೊತ್ತಾಗಿ ಇಂದು ತುಂಬಾ ಬೇಜಾರು ಮಾಡಿಕೊಂಡರು. ಮೂರು ದಿನ ನಿಮ್ಮ ಜೊತೆ ಮಾತು ಬಿಟ್ಟಿರುವೆ ಎಂದು ಹೇಳಿದರು. ಯಾರಿಗೂ ಬೈಯ್ಯಲು ಇಲ್ಲ. ಹೊಡೆಯಲು ಇಲ್ಲ ಅಂದನು. ಮನಸ್ಸಿಗೆ ನೋವಾಗುವುದರ ಕಾರಣ ಏನಾಗಿರಬಹುದು ಎಂದು ಯೋಚಿಸುತ್ತಾ, ಆ ವಿಷಯ ಮುಂದುವರೆಸುವುದು ಬೇಡ. ಟೀಚರ್ ಬಳಿಯೆ ಕೇಳೋಣ ಎಂದು ಮಕ್ಕಳಿಗೆ ಪಾಠ ಮಾಡಲು ಶುರು ಮಾಡಿದೆ. ಆ ದಿನದ ತರಗತಿ ನೀರಸವೆನಿಸಿತು. ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಹುಳ ನನ್ನ ಉತ್ಸಾಹ ಕಸಿದಿದ್ದರೆ, ಮಿಸ್ ಮಾತು ಬಿಟ್ಟಿದ್ದು ಮಕ್ಕಳ ನೀರಸಭಾವಕ್ಕೆ ಕಾರಣವಾಗಿತ್ತು. ಊಟದ ಅವಧಿಯಲ್ಲಿ ಊಟ ಮಾಡುತ್ತಾ ಗಣಿತ ಟೀಚರನ್ನು ಮಾತಿಗೆಳೆದೆ. ಇಂದು 7ನೇ ತರಗತಿ ಎಂದಿನಂತೆ ಇರಲಿಲ್ಲ ಏಕೆ? ಏನಾಯ್ತು? ಮಿಸ್ ಅಂದೆ. ಅವರ ಮೊಗದಲ್ಲಿ ದುಃಖದ ಛಾಯೆ ಆವರಿಸಿತು. ಮಕ್ಕಳ ವಿಷಯಕ್ಕೆ ಇಷ್ಟೊಂದು ಬೇಸರ ಪಟ್ಟುಕೊಂಡರೆ ಹೇಗೆ? ಅವರ ಕಪಿ ಚೇಷ್ಟೆಗಳು ನಮಗೇನು ಹೊಸದೇ? ಅವು ಇನ್ನೂ ಚಿಕ್ಕವು. ಸರಿ ತಪ್ಪುಗಳನ್ನು ತಿಳಿಯದವು. ಹೋಗಲಿ ಇದೊಂದು ಬಾರಿ ಕ್ಷಮಿಸಿ ಎಂದೆನು. ನನಗೆ ಮಕ್ಕಳ ಮೇಲೆ ಕೋಪ ಇಲ್ಲ. ಆದರೂ ನನ್ನ ವಿದ್ಯಾರ್ಥಿಗಳು ನನ್ನ ಬೆನ್ನ ಹಿಂದೆ ನನಗೆ ಅಡ್ಡ ಹೆಸರು ಇಟ್ಟು ಕರೆಯುತ್ತಾರೆ. ಇದೇನಾ ನಾವು ಕಲಿಸಿದ್ದು. ನಾನು ಇಷ್ಟು ದಿನ ಇವರಿಗೆ ಬರಿ ಸಂಖ್ಯೆಗಳನ್ನ ಕೂಡುವುದು ಕಳೆಯುವುದನ್ನು ಮಾತ್ರ ಕಲಿಸಿಲಿಲ್ಲ. ಅದಕ್ಕಿಂತ ಮಿಗಿಲಾಗಿ ನಾನು ಒಳ್ಳೆಯ ಗುಣಗಳನ್ನು, ಮೌಲ್ಯಗಳನ್ನು ಕೂಡಿಕೊಂಡು ಹೋಗಬೇಕು. ಕೆಟ್ಟದ್ದನ್ನು ಕಳೆಯಬೇಕು ಎಂದು ಅರಿವು ಮೂಡಿಸಿದ್ದೆ. ಆದರೆ ಈಗ ನೋಡಿ ನನ್ನನ್ನೇ ನನ್ನ ಬೆನ್ನ ಹಿಂದೆ ಹೀಯಾಳಿಸುತ್ತಾರೆ. ನನ್ನ ಬೋಧನೆ ಬಗ್ಗೆ ನನಗೆ ಅಸಹನೆ ಭಾವ ಮೂಡುತ್ತಿದೆ. ಇವರು ಶಾಲಾ ವಾತಾವರಣದಲ್ಲಿ ಹೀಗಾದರೆ, ಈ ಸಮಾಜದಲ್ಲಿ ಹೇಗಾಗುತ್ತಾರೆ? ಇವರ ನಡವಳಿಕೆ ನನಗೆ ತುಂಬಾ ನೋವುಂಟು ಮಾಡಿದೆ. ಮುಂದಿನ ಬಾವಿ ಭವಿಷ್ಯದ ಸತ್‌ಪ್ರಜೆಗಳ ಬಗ್ಗೆ ಆತಂಕವಾಗುತ್ತಿದೆ ಎಂದರು.

ಮಕ್ಕಳ ಮೇಲೆ ಇವರಿಗಿರುವ ಪ್ರೀತಿ ಕಾಳಜಿಗೆ ನಾನು ಮೂಖ ವಿಸ್ಮಿತಳಾದೆ. ಗಣಿತ ಟೀಚರ್ ಮೊದಲಿಂದಲೂ ಎಲ್ಲರೊಂದಿಗೆ ಸಾಮರಸ್ಯದಿಂದ ಇರುತ್ತಿದ್ದರು. ಹಾಗಾಗಿ ಮಕ್ಕಳಿಗೂ ಅವರೆಂದರೆ ಇಷ್ಟ. ಈ ದಿನದ ಅವರ ಮಾತುಗಳನ್ನು ಕೇಳಿ ಮಿಸ್ ಬಗೆಗಿದ್ದ ಗೌರವ ದುಪ್ಪಟ್ಟಾಗಿ, ಅವರ ಬಗ್ಗೆ ಹೆಮ್ಮೆಯ ಭಾವ ಮೂಡಿತು. ಅಡ್ಡ ಹೆಸರೇನು ಇಟ್ಟಿದ್ದಾರೆ ಅಂದೆ. ‘ಬುರ್ರಿ’, ‘ಕುಟ್ರಿ’ ಅಂದರು. ಈ ಮಾತು ಕೇಳಿ ಖೇದವುಂಟಾಯಿತು. ಆ ಮಿಸ್ ಬೆಳ್ಳಗೆ ದಪ್ಪಗೆ ಬುಡ್ಡಗೆ ಇದ್ದರು. ಅವರ ದೇಹಕ್ಕೆ ತಕ್ಕಂತೆ ಮುಖವು ದಪ್ಪವಾಗಿತ್ತು. ಗಲ್ಲಗಳು ಕೂಡ ಊದಿದ ಕಡುಬಿನಂತೆ ಇದ್ದವು. ಅದನ್ನೇ ಮಕ್ಕಳು ಬುರ್ರಿ ಕುಟ್ರಿ ಎಂದು ಕರೆದಿರುವುದು. ಮಕ್ಕಳಿಗೆ ಆ ಶಬ್ದಗಳು ಎಲ್ಲಿ ತಿಳಿಯುತ್ತವೆ? ಇವು ಮಕ್ಕಳ ಹಂತಕ್ಕೆ ತಲುಪುವುದಾದರೂ ಹೇಗೆ? ಯಾರು ಹೇಳಿಕೊಡುತ್ತಾರೆ ಎಂದು ಅಸಮಾಧಾನ ಆಯಿತು.

ನೀವು ಎಲ್ಲಾ ಮಕ್ಕಳ ಪ್ರೀತಿಯ ಮಿಸ್. ಏನೋ ತಿಳಿಯದೆ ತಪ್ಪು ಮಾಡಿದ್ದಾರೆ. ಇದೊಂದು ಬಾರಿ ಕ್ಷಮಿಸಿ ಬುದ್ದಿ ಹೇಳೋಣ ಅಂದೆ. ಅವರು “ನನಗೆ ನಿಜಕ್ಕೂ ಈಗಲೂ ಮಕ್ಕಳ ಮೇಲೆ ಸಿಟ್ಟಿಲ್ಲ. ಸ್ವಲ್ಪ ಬೇಜಾರಾಯಿತು. ಅವರ ಈ ಕೆಟ್ಟ ಗುಣಗಳನ್ನು ನೋಡಿ ಅವರ ಭವಿಷ್ಯದ ಕುರಿತು ಆತಂಕ” ಎಂದರು. ನನ್ನ ಮನ ಒಮ್ಮೆ ಆತ ಮಿಸ್ ನನ್ನು ನನಗರಿವಿಲ್ಲದೇ ಹಗ್ ಮಾಡಿ ಬಂದಿತ್ತು.

ಸಂಜೆ ಮನೆಗೆ ಬಂದರು ಅದೇ ಲಹರಿ. ಗಣಿತ ಮಿಸ್ ಬಗ್ಗೆ ಮಾತ್ರ ಅಡ್ಡ ಹೆಸರು ಕರಿತಾರಾ? ನನ್ನ ಬಗ್ಗೆ? ಮುಖ್ಯ ಶಿಕ್ಷಕರ ಬಗ್ಗೆ? ಇತರ ಶಿಕ್ಷಕರ ಬಗ್ಗೆ? ಅಡ್ಡಹೆಸರುಗಳು ಇರಬಹುದಾ? ನಮಗೆಲ್ಲ ಏನಿರಬಹುದು? ವಿಶಿಷ್ಟವಾಗಿ ನನ್ನ ಬಗ್ಗೆ ಯಾವ ಅಡ್ಡ ಹೆಸರುಗಳಿವೆ ಎಂದು ತಿಳಿಯಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಐಡಿಯಾವನ್ನು ರೆಡಿ ಮಾಡಿಕೊಂಡು ಮಾರನೇ ದಿನ ಶಾಲೆಗೆ ಹೋದೆ. ಏಳನೇ ತರಗತಿ ದೈಹಿಕ ಶಿಕ್ಷಣದ ಅವಧಿ ಇತ್ತು. ನಾನೇ ಮಕ್ಕಳನ್ನು ಆಟದ ಬಯಲಿಗೆ ಪುಸ್ತಕ ಪೆನ್ನಿನೊಂದಿಗೆ ಕರೆದುಕೊಂಡು ಹೋದೆ. “ಮಕ್ಕಳೇ ಇವತ್ತು ನಾನು ಹೊಸ ಆಟ ಆಡಿಸುವೆ ಎಂದಾಗ ಮಕ್ಕಳೆಲ್ಲ ಅತಿ ಉತ್ಸಾಹದಿಂದ ಓಓಓಓಓಓ ಎಂದು ಒಕ್ಕೊರಲಿನ ಸಂಗೀತ ನುಡಿಸಿದರು. ನನಗೂ ಅದೇ ಬೇಕಾಗಿತ್ತು. ಮಕ್ಕಳೆ ನೀವೆಲ್ಲ ಪ್ರಾರ್ಥನಾ ಸಮಯದಲ್ಲಿ ನಾನು ಕ್ಯಾಪ್ಟನ್ ಆಗಬೇಕು ಎಂದು ಜಟಾಪಟಿ ಮಾಡುತ್ತೀರಲ್ಲ. ನಾನೀಗ ನಿಮಗೊಂದು ಟಾಸ್ಕ್ ಕೊಡುವೆ. ಕೆಲವು ಪ್ರಶ್ನೆಗಳ ಚೀಟಿ ನೀಡುವೆ. ಪ್ರಶ್ನೆ ಓದಿಕೊಂಡು ನೀವು ಸರಿಯಾದ ಉತ್ತರ ಯೋಚಿಸಿ ಬರೆಯಬೇಕು. ಯಾರು ಗೆಲ್ಲುತ್ತೀರೋ ಅವರು ನಾಳೆಯಿಂದ ಕಾಷನ್ ಕೊಡಬಹುದು ಎಂದಾಗ “ನಾನು ನಾನು” ಎಂದು ಕುಣಿದು ಕುಪ್ಪಳಿಸಿದರು. ಎಲ್ಲರಿಗೂ ಪ್ರಶ್ನೆ ಚೀಟಿಗಳನ್ನು ನೀಡಿದೆ. ಮಕ್ಕಳು ಉತ್ತರ ಬರೆದು ಡಬ್ಬದಲ್ಲಿ ಹಾಕಿದರು. ಮಕ್ಕಳ ಉತ್ತರ ತಿಳಿಯಬೇಕೆಂದು ಹಂಬಲದಿಂದ ಸಂಜೆ ಮನೆಗೆ ಬಂದು ಕಾಫಿಯನ್ನು ಕುಡಿಯದೆ ಚೀಟಿಗಳನ್ನು ಟೇಬಲ್ ಮೇಲೆ ಸುರಿದೆ. ಆ ಉತ್ತರಗಳನ್ನು ನೋಡಿ ನಾನು ಕುಸಿದು ಹೋದೆ. ಆ ಚೀಟಿಗಳಲ್ಲಿ ಮುಖ್ಯ ಶಿಕ್ಷಕರಿಗೆ, ನನಗೆ, ಇನ್ನೊಬ್ಬ ಮಿಸ್ಸಿಗೂ ಅಡ್ಡ ಹೆಸರುಗಳಿದ್ದವು. ಆದರೆ ದೊಡ್ಡ ಮಕ್ಕಳು ಏನೋ ಅಡ್ಡ ಹೆಸರುಗಳನ್ನು ಬಳಸುತ್ತಾರೆ ಎಂದು ತಿಳಿದಿತ್ತು. ಆದರೆ ನಮ್ಮ ಪ್ರಾಥಮಿಕ ಶಾಲೆಯ ಅದರಲ್ಲೂ ಏಳನೇ ತರಗತಿಯ ಮಕ್ಕಳು ಶಿಕ್ಷಕರಿಗೆ ಅಡ್ಡ ಹೆಸರು ಇಡುತ್ತಾರೆ ಎಂದು ನೋಡಿ ತಲೆ ತಿರುಗಿದಂತಾಯಿತು. ಮುಖ್ಯ ಶಿಕ್ಷಕರಿಗೆ ‘ಉರುಸಿಂಗಿ’, ‘ಸಿಡುಕ್ಮೂತಿ ಸಿದ್ದ’, ಎಂದು ಬರೆದಿದ್ದರು. ಅದನ್ನು ಓದಿ ನಗು ಬಂತು. ಪಾಪ ಅಷ್ಟೊಂದು ಸಿಟ್ಟೇನು ಅವರಿಗೆ ಇರಲಿಲ್ಲ‌ ಆಗಾಗ ಒಮ್ಮೆ ಪಿತ್ತ ನೆತ್ತಿಗೇರಿ ಸ್ವಲ್ಪ ಕೂಗಾಡುತ್ತಿದ್ದರು. ಇನ್ನೊಬ್ಬ ಮಿಸ್ ಬೆಳ್ಳಗೆ ಇದ್ದರು. ಗುಂಗುರು ಕೂದಲಿನವರು. ಇವರಿಗೆ ‘ಬಿಳಿ ಜಿರಲೆ’, ‘ಗುಂಗರಿ’ ಅಂತ ಕರೀತಾರೆ. ಆ ಮೂವರೂ ಪುಣ್ಯಶಾಲಿಗಳು ಎನ್ನಬಹುದು. ನನಗೆ ಅಷ್ಟು ಅದ್ಭುತ ಅಡ್ಡ ಹೆಸರು ಇಟ್ಟಿದ್ದರು. ನಾನು ತುಂಬಾ ತೆಳ್ಳಗೆ ಬೆಳ್ಳಗೆ ಉದ್ದಕ್ಕೆ ಇದ್ದೆ. ಅದಕ್ಕೆ ನನಗೆ ‘ಕಡ್ಡಿ’,’ಲಂಬು’, ಹಾಗೂ ‘ಸ್ಕೆಲಿಟನ್’ ಎಂದು ಕರೆಯುತ್ತಿದ್ದರಂತೆ.

ಮಾರನೇ ದಿನ ಪ್ರಾರ್ಥನೆ ಮುಗಿಸಿ ಮುಖ್ಯ ಶಿಕ್ಷಕರ ಕೊಠಡಿಗೆ ಸಹಿ ಮಾಡಲು ಹೋದಾಗ ಈ ಒಂದು ವಿಚಾರ ಮಕ್ಕಳ ತಲೆಯೊಳಗೆ ಇದೆ. ನಮಗೆಲ್ಲ ಇಂತಹ ಹೆಸರುಗಳಿವೆ ಎಂದು ತಿಳಿಸಿದೆ‌. ಆಗ ಮುಖ್ಯ ಶಿಕ್ಷಕರು ಬರಬರನೆ ಏಳನೇ ತರಗತಿ ಕೊಠಡಿ ಕಡೆ ಹೋದರು.

ನನಗಾಗ ಭಯ ಶುರುವಾಯಿತು. ಕೋಪದಲ್ಲಿ ಮುಖ್ಯ ಶಿಕ್ಷಕರು ಮಕ್ಕಳಿಗೆ ಹೊಡೆದರೆ ಏನು ಗತಿ ಎಂದು ಬೇಡ ಸರ್ ಬೇಡ, ನಿಲ್ಲಿ ಪ್ಲೀಸ್, ನನ್ನ ಮಾತು ಕೇಳಿ ಎನ್ನುತ್ತಲೆ ಅವರ ಹಿಂದೆ ಓಡಿದೆ. ಆದರೆ ಅವರ ಮುಖದಲ್ಲಿ ಕೋಪವೇನು ಇರಲಿಲ್ಲ. ಆಗ ತುಸು ಸಮಾಧಾನವೆನಿಸಿತು. ತರಗತಿಗೆ ಹೋದವರೆ ಎಲ್ಲಾ ಮಕ್ಕಳು ನಾಳೆ ಐದೇ ಐದು ಸಾವಿರ ತೆಗೆದುಕೊಂಡು ಅಮ್ಮ ಅಪ್ಪನೊಂದಿಗೆ ಶೃಂಗಾರ ಮಾಡಿಕೊಡು ಸಿದ್ಧರಾಗಿ ನಾಮಕರಣಕ್ಕೆ ಬರಬೇಕು ಅಂದರು. ತಲೆ ಬುಡ ಇಲ್ಲದ ಪ್ರಶ್ನೆ ಮಕ್ಕಳಿಗಷ್ಟೇ ಅಲ್ಲ ನಾನು ಸೇರಿದಂತೆ ಪ್ರತಿಯೊಬ್ಬರಿಗೂ ಯಾರ ನಾಮಕರಣ? ಮಕ್ಕಳೇಕೆ ದುಡ್ಡು ತರಬೇಕು? ಅವರ ಪೋಷಕರೇಕೆ ಅಲಂಕಾರ ಮಾಡಿಕೊಂಡು ಬರಬೇಕು? ಎಂದು ಅವರ ಕಡೆಗೆ ಅಚ್ಚರಿಯ ನೋಟ ಬೀರಿದೆ.

ನನ್ನ ಮನದಿಂಗಿತವನ್ನು ಅರಿತ ಅವರು ಅಲ್ರೀ ಈ ಮಕ್ಕಳು ನಮಗೆಲ್ಲ ಎಷ್ಟು ಚಂದ ಚಂದ ಅಡ್ಡ ಹೆಸರುಗಳನ್ನು ಇಟ್ಟು ಕರೆಯುತ್ತಾರೆ. ನಮ್ಮ ಬೆನ್ನ ಹಿಂದೆ ಕರಿತಾರೆ. ಅವರು ಇಷ್ಟು ದಿನ ಅವರಿಗೆ ಮಾತ್ರ ಗೊತ್ತಿತ್ತು. ಈಗ ನಮಗೂ ತಿಳಿಯಿತು. ಇನ್ನು ಎಷ್ಟು ಜನ ಗೊತ್ತಿದ್ಯೋ ಏನೋ ಗೊತ್ತಿಲ್ಲ. ಆದರೂ ಶಾಲೆಯಲ್ಲಿ ಒಂದು ಕಾರ್ಯಕ್ರಮ ಮಾಡಿ ನಮಗೆ ಇಟ್ಟಿರುವ ಅಡ್ಡ ಹೆಸರುಗಳನ್ನು ಬಹಿರಂಗವಾಗಿ ಘೋಷಿಸಿ ನಾಮಕರಣ ಮಾಡಲಿ ಎಂದರು. ಪಾಪ ಅವರ ಪೋಷಕರಿಗೂ ಮಕ್ಕಳ ಸಾಧನೆ ತಿಳಿಯಲಿ. ಊರಿಗೆ ಗೊತ್ತಾಗಲಿ ನಾಮಕರಣದ ಖರ್ಚನ್ನು ಅವರೇ ಬರಿಸುತ್ತಾರೆ ಎಂದರು. ಆಗ ಮಕ್ಕಳಿಗೆಲ್ಲ ತಿಳಿಯಿತು. ಮಿಸ್ ನೆನ್ನೆ ಅಡ್ಡ ಹೆಸರು ತಿಳಿಯಲು ಆಟ ಆಡಿಸಿ ನಮ್ಮನ್ನೆಲ್ಲ ಸಿಕ್ಕಿಸಿ ಬಿಟ್ಟರು ಎಂದು ಭಯಗೊಂಡರು.

ಮುಂದೆ ಏನಾಗಬಹುದೆಂದು ಶಿಕ್ಷಕರ ಮುಖ ನೋಡುತ್ತಿದ್ದೆ. ಅವರು ಮಕ್ಕಳನ್ನು ಕೇಳಿದರು. ಯಾರು ನಿಮಗೆ ಇದನ್ನೆಲ್ಲ ಹೇಳಿಕೊಟ್ಟವರು? ನಾವು ನಿಮಗೆ ಶಿಕ್ಷಣದ ಬಗ್ಗೆ ಕಲಿಸುತ್ತೇವೆ. ನಿಮಗೆ ಒಳ್ಳೆಯದಾಗಲಿ ಎಂದೂ ಬಯಸುತ್ತೇವೆ. ನಮ್ಮ ಸ್ವಂತ ಮಕ್ಕಳಂತೆ ನಿಮ್ಮನ್ನು ಕಾಣುತ್ತೇವೆ. ನಿಮಗೆ ಯಾಕೆ ನಮ್ಮ ಮೇಲೆ ಕೋಪ? ನಿಮಗೆ ನಾವಿಲ್ಲಿ ಇರೋದು ಇಷ್ಟ ಇಲ್ಲ ಅಂದ್ರೆ ಹೇಳಿ ನಾವೆಲ್ಲ ವರ್ಗಾವಣೆ ಮಾಡಿಸಿಕೊಂಡು ಬೇರೆ ಶಾಲೆಗೆ ಹೋಗುತ್ತೇವೆ ಅಂದರು. ತಕ್ಷಣ ಮಕ್ಕಳು ಅಳುತ್ತ ಬೇಡ ಸರ್, ನೀವು ಯಾರೂ ಹೋಗಬೇಡಿ. ನೀವೆಲ್ಲ ತುಂಬಾ ಒಳ್ಳೆಯವರು. ನಮ್ಮಿಂದ ತಪ್ಪಾಯಿತು ಎಂದು ಗೋಗರೆದರು. ನಮಗೆ ಇದೆಲ್ಲ ಗೊತ್ತಿರ್ಲಿಲ್ಲ ಸರ್. ಹೈಸ್ಕೂಲು, ಕಾಲೇಜಿಗೆ ಹೋಗ್ತಾರಲ್ಲ ಅಣ್ಣಂದ್ರು ಅವರು ಹೇಳಿಕೊಟ್ಟರು ಅಂದಾಗ ನಾವೇ ವಿದ್ಯೆ ಕಲಿಸಿ ಕಳಿಸಿದ ನಮ್ಮದೇ ಮಕ್ಕಳ ಮೌಲ್ಯಗಳನ್ನು ನೋಡಿ ನಮ್ಮ ಬೋಧನೆ ಬಗ್ಗೆ ನಮಗೆ ಅಸಹನೆ ಉಂಟಾಯಿತು. ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿಕೊಂಡು ಅದದ್ದು ಆಯಿತು ಇನ್ನು ಮುಂದೆ ಈ ಥರ ನಡವಳಿಕೆ ಕಂಡರೇ ಶಿಸ್ತು ಕ್ರಮ ಜರುಗಿಸುವೆ ಎಂದು ಎಚ್ಚರಿಸಿದರು. ಬೇರೆ ಯಾರನ್ನೂ ಹೀಗೆ ಕರೆಯಬಾರದು. ಎಲ್ಲರಿಗೂ ಸಣ್ಣ ಪುಟ್ಟ ವೀಕ್ನೆಸ್ ಇರುತ್ತದೆ. ಅದನ್ನ ಎತ್ತಿ ತೋರಿಸಬಾರದು ಎಂದು ಬುದ್ಧಿ ಹೇಳಿದಾಗ ಎಲ್ಲರೂ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಶಪಥ ಮಾಡಿದರು.

ಅದರಲ್ಲೊಬ್ಬ ಮುಗ್ಧ ಹುಡುಗ ಎದ್ದು ನಿಂತನು. ಏನು ಎಂಬಂತೆ ಅವನೆಡೆ ತಿರುಗಿದಾಗ, ಸರ್ ಟೀಚರ್‌ಗಳನ್ನು ಅಡ್ಡ ಹೆಸರಲ್ಲಿ ಕರೆಯಬಾರದು. ಫ್ರೆಂಡ್ಸ್‌ಗಳನ್ನೂ ಕರೆಯಬಾರದಾ? ಅಂದನು. ಇದನ್ನು ನೋಡಿ ನೀವೆಲ್ಲ ಸರಿಯಾದ ಬಡ್ಡಿ ಮಕ್ಳು ಅಂದುಕೊಂಡು ಯಾರನ್ನು ಕರೆಯಬಾರದು. ಯಾರ್ಯಾರಿಗೆ ಏನೇನು ಅಡ್ಡ ಹೆಸರು ಇಟ್ಟಿದ್ದೀರಾ ಅಂದೆ. ಪುಟ್ಟಾಸಿ, ಪುಟ್ಟಪಯ್ಯ ಸಿಂಗ್ಲಿಕ, ಓತಿಕ್ಯಾತ, ಕಾಡು ಪಾಪ, ಫಿಟ್ಟಿಂಗ್ ಮಾಸ್ಟರ್, ಪುಂಗಿ ದಾಸ, ವಟವಟ ಕಪ್ಪೆ, ಕಿರುಬ, ಎಮ್ಮೆ ತಮ್ಮಣ್ಣ, ಎಣ್ಣೇಲಿ ಬಿದ್ದ ನೊಣ, ಬುರುಡೆ. ಅಬ್ಬಾ ಆ ಹೆಸರು ಕೇಳಿ ಸುಸ್ತು ಆಯ್ತು. ಈ ಹೆಸರುಗಳಿಗೆ ಅರ್ಥ ಹುಡುಕಲು ನನಗೊಂದು ಡಿಕ್ಷನರಿಯೇ ಖರೀದಿಸಬೇಕು ಅನಿಸಿತು. ಅಬ್ಬಬ್ಬಾ ಇಷ್ಟು ಚಿಕ್ಕ ಮಕ್ಕಳಿಗೆ ಇಂತವೆಲ್ಲ ಹೇಗೆ ಹೊಳೆಯುತ್ತವೆ. ಈ ಬುದ್ಧಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ಎಷ್ಟು ಚೆನ್ನ. ಆಗ ಈ ನಾಡು ಎಷ್ಟು ಚೆನ್ನ ಅನಿಸಿತು.