ಅಪ್ಪ ಹೋಗಿ ಮೂವತ್ತಾರು ವರ್ಷಗಳ ನಂತರವೂ ಈಗಲೂ ಹರಳುಗಟ್ಟಿದ ಅವನ ನೆನಪುಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಏನಾದರೂ ಕೊಂಡರೆ ಮನೆಯವರಿಗೆಲ್ಲ ತೋರಿಸಿಯಾದಮೇಲೂ ನಾನು ತೋರಿಸುವುದು ಮತ್ತೂ ಯಾರೋ ಬಾಕಿ ಇದ್ದಾರೆ ಎನಿಸಿಬಿಡುತ್ತದೆ. . ಹೀಗೆಲ್ಲ ಈಗಲೂ ನಮ್ಮೊಳಗೆ ಜೀವಂತವಾಗಿಯೇ ಇದ್ದು ನಮ್ಮನ್ನು ಆಗಿನಿಂದ ಈಗಿನವರೆಗೂ ಪೊರೆಯುತ್ತಲೇ ಇರುವ ಅವ ನಕ್ಷತ್ರವಾಗಿ ನಿಜಕ್ಕೂ ಇದ್ದಿರಬಹುದೆಂದು ಈಗಲೂ ನಕ್ಷತ್ರ ತುಂಬಿದ ರಾತ್ರಿಯಲ್ಲಿ ಆಕಾಶ ನೋಡುತ್ತಿರುತ್ತೇನೆ.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕತೆಗಳ ಇಪ್ಪತ್ತೊಂದನೆಯ ಕಂತು
ಸತ್ತವರೆಲ್ಲ ನಕ್ಷತ್ರಗಳಾಗಿ ಆಕಾಶದಿಂದಲೇ ನಮ್ಮನ್ನು ನೋಡುತ್ತಿರುತ್ತಾರೆ ಎಂದು ತನ್ನ ಹತ್ತು ಮಕ್ಕಳನ್ನು ಕಳೆದುಕೊಂಡ ಅಮ್ಮಮ್ಮ ಹೇಳುತ್ತಿದ್ದಳು. ಹಾಗಿದ್ದರೆ ತುಂಬ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡ ನನ್ನ ಅಪ್ಪ ಈ ರಾಶಿ ರಾಶಿ ನಕ್ಷತ್ರಗಳ ನಡುವೆ ಎಲ್ಲಿ ಸಿಕ್ಕಿಹಾಕಿಕೊಂಡಿರಬಹುದು, ಅಲ್ಲಿಂದಲೇ ನಮ್ಮನ್ನೆಲ್ಲ ಹೇಗೆ ನೋಡುತ್ತಿದ್ದಿರಬಹುದು… ಎಂದು ನಕ್ಷತ್ರ ತುಂಬಿದ ಆಕಾಶ ನೋಡುತ್ತಿದ್ದೆ.
ನನ್ನ ಅಪ್ಪ ಹೋಗಿ ಈಗ ಹೆಚ್ಚುಕಮ್ಮಿ ಮೂವತ್ತಾರು ವರ್ಷಗಳೇ ಸಂದಿವೆ. ಕಾಲ ನೆನಪುಗಳನ್ನು ಮಾಯಿಸುತ್ತದೆ ಎನ್ನುತ್ತಾರೆ. ಆದರೆ ನನ್ನ ಪಾಲಿಗಂತೂ ಕಾಲ ಕಳೆದಂತೆ ನೆನಪುಗಳು ಹೆಚ್ಚು ಮಾಗುತ್ತ ಹೋಗುತ್ತವೆ. ಇಷ್ಟು ವರ್ಷಗಳಾದರೂ ಅಪ್ಪನ ನೆನಪು ಹಾಗೆಯೇ ಉಳಿದಿದೆಯೆಂದರೆ ನೆನಪು ಮಾಗಿದೆಯೇ ಹೊರತು ಮಾಯಲಿಲ್ಲ.
ಅಪ್ಪನ ಹೃದಯದ ಕಾಯಿಲೆ ಅಪ್ಪನ ಜೀವವನ್ನೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯುವ ಹೊತ್ತಿಗೆ ನಾನು ಪಿಯುಸಿಯ ಮೊದಲ ವರ್ಷದಲ್ಲಿದ್ದೆ. ಅಷ್ಟೊತ್ತಿಗಾಗಲೇ ಐನಕೈ ಗಜಾನನ ಶಾಸ್ತ್ರಿಗಳಿಗೆ ಹುಷಾರಿಲ್ಲ, ಆರೋಗ್ಯ ತೀರ ಹದಗೆಟ್ಟಿದೆ ಎಂದು ಇಡೀ ಊರ ತುಂಬ, ತಾಲೂಕು ತುಂಬ ಸುದ್ದಿಯಾಗಿಬಿಟ್ಟಿತ್ತು. ಅವರಿಗೆ ಹೃದಯದ ಸಮಸ್ಯೆ ಇದೆ ಎಂದು ಆಪರೇಷನ್ ಮಾಡಿಸಬೇಕೆಂದು ಎಲ್ಲ ತಯಾರಿಗಳೂ ನಡೆದಿದ್ದವು. ಆಪರೇಷನ್ ಗೆ ಏನಿಲ್ಲವೆಂದರೂ ಐವತ್ತು ಸಾವಿರ ರೂ. ಬೇಕಾಗಿತ್ತು. ಆದರೆ ನಮ್ಮ ಬಳಿ ಅಷ್ಟು ದುಡ್ಡಿರಲಿಲ್ಲ.
ಬಹುಶಃ ಅದು ಸಾವಿರದ ಒಂಬೈನೂರ ಎಂಭತ್ಮೂರರ ಸಮಯವಿರಬಹುದು. ಆಗಿನ್ನೂ ಮುರುಡೇಶ್ವರದ ದೇವಸ್ಥಾನದ ಕಟ್ಟಡ ಈಗಿನಂತಿರಲಿಲ್ಲ. ಸಣ್ಣದಾದ ದೇವಸ್ಥಾನವಿತ್ತು. ಅದಕ್ಕೆ ದೊಡ್ಡ ಕಟ್ಟಡ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿತ್ತು. ಅದರ ಪ್ರಯುಕ್ತ ಅಷ್ಟಬಂಧ ಕಾರ್ಯಕ್ರಮವಿತ್ತು. ರಾಜ್ಯದ, ದೇಶದ ನಾನಾ ಕಡೆಗಳಿಂದ ಖ್ಯಾತ ಪುರೋಹಿತರು ಆಗಮಿಸಿದ್ದರು. ಅದರಲ್ಲಿ ನನ್ನ ಅಪ್ಪನೂ ಒಬ್ಬ. ಅವತ್ತು ಅಪ್ಪನ ಪ್ರವಚನವಿತ್ತು. ಪ್ರವಚನ ಮಾಡುತ್ತಿರುವಾಗಲೇ ಅಪ್ಪ ಎಚ್ಚರತಪ್ಪಿ ಬಿದ್ದುಬಿಟ್ಟ. ತಕ್ಷಣ ಸಮೀಪದ ಶಿರಾಲಿ ಆಸ್ಪತ್ರೆಗೆ ಸೇರಿಸಲಾಯಿತು. ಸ್ವಲ್ಪಮಟ್ಟಿಗಿನ ಚಿಕಿತ್ಸೆ ಪಡೆದು ಸೀದಾ ಸಿದ್ದಾಪುರಕ್ಕೆ ಬಂದ. ಅಷ್ಟರ ನಂತರ ಅಪ್ಪ ಪದೇಪದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಅಂದರೆ ಹೃದಯದ ಸಮಸ್ಯೆ ವಿಕೋಪಕ್ಕೆ ಹೋಗುತ್ತಿತ್ತು. ಅಂದರೆ ಇದು ಆಪರೇಷನ್ ನ ಸಮಯ. ಆಗಲೇ ಅಮ್ಮ ಎಚ್ಚೆತ್ತುಕೊಂಡಳು. ಆಗ ಅಮ್ಮನಿಗೆ ನೆನಪಾದದ್ದು ಡಾ.ಕೆ.ಜಿ.ನಾಗೇಶ್ ಮಾತುಗಳು.
ಸಾವಿರದ ಒಂಬೈನೂರ ಅರತ್ತೊಂಬತ್ತರಲ್ಲಿ ನಾನು ಹುಟ್ಟಿದ ಸಮಯ. ಜೋರು ಮಳೆಗಾಲ. ಅಮ್ಮ ಬಾಣಂತನಕ್ಕೆಂದು ತನ್ನ ತವರುಮನೆ ಬ್ಯಾಡರಕೊಪ್ಪದಲ್ಲಿದ್ದಳು. ಅಪ್ಪ ತಾಳಗುಪ್ಪದ ಸಮೀಪದ ಹಿರೇಮನೆ ಬಳಿಯ ದಿಂಡಿನ ಕಾರಿನಲ್ಲಿ ರಾಮಚಂದ್ರ ಎಂಬುವರ ಮನೆಯಲ್ಲಿದ್ದ. ಅಲ್ಲಿ ಬೆಳಗಿನ ತಿಂಡಿ ತಿನ್ನುವಾಗ ಚಹಾ ಕುಡಿಯಬೇಕೆಂದು ಬಗ್ಗಿದವನು ಹಾಗೆಯೇ ಮುಗ್ಗರಿಸಿ ಬಿದ್ದುಬಿಟ್ಟ. ಎಚ್ಚರವೇ ಇಲ್ಲದವನನ್ನು ಆ ಮನೆಯವರೆಲ್ಲ ಸೇರಿ ಒಂದೆಡೆ ಮಲಗಿಸಿದರು. ತಾಳಗುಪ್ಪದಿಂದ ಒಬ್ಬ ಡಾಕ್ಟರನ್ನು ಕರೆಸಿ ನೋಡಿದಾಗ ‘ಇದರ ಕೆಲಸ ಮುಗಿದಿದೆ, ಮುಂದಿನದ್ದನ್ನು ಏರ್ಪಾಟು ಮಾಡಿ’ ಎಂದು ಹೇಳಿದ್ದರು. ಸುದ್ದಿ ತಿಳಿದ ಅಜ್ಜ-ಅಮ್ಮಮ್ಮ, ಆ ಜೋರುಮಳೆಗಾಲದ ಎದೆ ಎತ್ತರಕ್ಕೆ ಬಂದ ನಂದಿಹೊಳೆಯನ್ನು ಹಾದು ಹೋದರು. ಇವರೆಲ್ಲ ದಿಂಡಿನಕಾರಿಗೆ ಹೋಗುವಷ್ಟರಲ್ಲಿ ಅಪ್ಪ ತನ್ನಾರೆ ಎದ್ದು ಕುಳಿತಿದ್ದನಂತೆ.
ಅಷ್ಟರ ನಂತರ ಪದೇಪದೆ ಜ್ವರ ಬರುತ್ತಿತ್ತು. ಯಾವ ಡಾಕ್ಟರ್ ಹತ್ರ ತೋರಿಸಿದರೂ ಸರಿ ಹೋಗಲಿಲ್ಲ. ನಂತರ ಶಿವಮೊಗ್ಗದಲ್ಲಿ ಡಾ.ಕೆ.ಜಿ.ನಾಗೇಶ್ ಬಗ್ಗೆ ಯಾರೋ ಹೇಳಿ ಅಲ್ಲಿಗೆ ಹೋದರು. ಆಗಲೇ ಅವರು ಲಂಡನ್ ರಿಟರ್ನ್ ಆಗಿದ್ದರು. ಅವರು ಅಪ್ಪನನ್ನು ನೋಡಿದವರೇ, ಇದು ಹಾರ್ಟ್ ಗೆ ಸಂಬಂಧಿಸಿದ ಕಾಯಿಲೆ. ಶ್ರೀಮಂತರಿಗೆ ಬರುವ ಕಾಯಿಲೆ ನಿಮಗೆ ಬಂದುಬಿಟ್ಟಿದೆ, ಇದನ್ನು ಆಪರೇಷನ್ ಮಾಡಿಸಬೇಕು ಎಂದಿದ್ದರು. ಆಗ ಆಪರೇಷನ್ ಗೆ ಏನಿಲ್ಲವೆಂದರೂ ಐವತ್ತು ಸಾವಿರ ರೂ.ಗಳು ಬೇಕಿದ್ದವು. ಇವರ ಬಳಿ ಆಪರೇಷನ್ ಮಾಡಿಸುವಷ್ಟು ದುಡ್ಡಿರಲಿಲ್ಲ. ಅಲ್ಲದೆ ಆಗ ಹಾರ್ಟ್ ಆಪರೇಷನ್ ಮಾಡುವುದು ವೆಲ್ಲೂರು ಮತ್ತು ಬಾಂಬೆಯಲ್ಲಿ ಮಾತ್ರವಾಗಿತ್ತು. ಇವರ ಸ್ಥಿತಿ ಕೇಳಿದ ಡಾಕ್ಟರ್, ಈಗ ನಾನೊಂದು ಟ್ರೀಟ್ಮೆಂಟ್ ನಿಮಗೆ ಕೊಡುತ್ತೇನೆ. ಇದರಿಂದ ನಿಮಗೆ ಇನ್ನು ಹತ್ತು ವರ್ಷ ಈ ಕಾಯಿಲೆ ಬರುವುದಿಲ್ಲ. ಆದರೆ ಹತ್ತು ವರ್ಷದ ನಂತರ ಮತ್ತೆ ಈ ಕಾಯಿಲೆ ಬಂದೇ ಬರುತ್ತದೆ. ಬಂದಮೇಲೆ ಇದನ್ನು ಆಗಲಾದರೂ ಆಪರೇಷನ್ ಮಾಡಿಸಲೇಬೇಕು ಎಂದು ಅವರು ಟ್ರೀಟ್ ಮೆಂಟ್ ಶುರುಮಾಡಿದರು. ಆಗ ಎರಡು ತಿಂಗಳುಗಳ ಕಾಲ ಎಳೆ ಶಿಶುವಾದ ನನ್ನನ್ನೂ ಕರೆದುಕೊಂಡು ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಿದ್ದರು, ಅಮ್ಮ, ಅಪ್ಪ ಮತ್ತು ಮಾವ. ಡಾಕ್ಟರ್ ಮಾತು ಕೊಟ್ಟಂತೆ ಹತ್ತಲ್ಲ, ಹದಿನಾರು ವರ್ಷ ಈ ಕಾಯಿಲೆ ಅಪ್ಪನಿಗೆ ಬರಲಿಲ್ಲ.
ಅದಕ್ಕೆ ಅಮ್ಮ ಸದಾ ನನ್ನ ವಯಸ್ಸಿನ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳುತ್ತಿದ್ದಳು. ಮಗಳಿಗೆ ಹತ್ತಾಯಿತು, ಹನ್ನೊಂದಾಯಿತು, ಹದಿನಾರಾಯಿತು ಎಂದು ಲೆಕ್ಕ ಹಾಕುತ್ತಿದ್ದಳು. ಹದಿನಾರು ವರ್ಷದವರೆಗೆ ಅಪ್ಪನಿಗೆ ಈ ಕಾಯಿಲೆ ಬರಲಿಲ್ಲ. ಆದರೆ ಮುರುಡೇಶ್ವರದಿಂದ ಬಂದ ನಂತರ ಅಪ್ಪನ ಸ್ಥಿತಿಯನ್ನು ನೋಡಿ ಅಮ್ಮ ತಡಮಾಡದೇ ಅವಳ ಅಣ್ಣ ಅಂದರೆ ನನ್ನ ಸೋದರಮಾವ ಜೈರಾಮ ಮಾವನಿಗೆ ಪತ್ರ ಬರೆದು ಕರೆಸಿಕೊಂಡಳು. ಈಗ ಆಪರೇಷನ್ ಮಾಡಿಸಲೇಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಆದರೆ ಈಗಲೂ ನಮ್ಮ ಬಳಿ ದುಡ್ಡಿರಲಿಲ್ಲ. ಅದಿಕ್ಕೆ ಜೈರಾಮ ಮಾವ ಮತ್ತು ಹಾರ್ಸಿ ಮನೆ ಎಸ್.ಆರ್.ಹೆಗಡೆ ಡಾಕ್ಟರ್, ಜೈಶೀಲಣ್ಣ, ಇಸ್ಮಾಯಿಲ್ ಸಾಬಣ್ಣ ಸೇರಿದಂತೆ ಕೆಲವು ಪ್ರಮುಖರು ಸಭೆ ಸೇರಿ ಚಿಂತನೆ ನಡೆಸಿದರು. ಇದರ ಫಲ ಐನಕೈ ಗಜಾನನ ಶಾಸ್ತ್ರಿಗಳ ಹೃದ್ರೋಗ ದತ್ತು ನಿಧಿ ಸಂಗ್ರಹ ಎಂಬ ಸಮಿತಿಯನ್ನು ರಚಿಸಲಾಯಿತು. ಅದರಿಂದ ಮನೆಮನೆಯಿಂದ ದುಡ್ಡು ಸಂಗ್ರಹಿಸಲಾಯಿತು. ಜೊತೆಗೆ ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದರು. ಸರ್ಕಾರದಿಂದ ಸಂಸ್ಕೃತ ಪಂಡಿತರು ಎಂದು ಹತ್ತು ಸಾವಿರ ರೂ. ಬಿಡುಗಡೆ ಮಾಡಲಾಯಿತು.
ಹೀಗೆ ಸ್ವಲ್ಪ ಹಣ ಒಟ್ಟಾದ ಮೇಲೆ ಒಂದು ಮೈನರ್ ಆಪರೇಷನ್ ಗೆ ಎಂದು ಅಪ್ಪ ಮತ್ತು ಜೈರಾಮ ಮಾವ ಇಬ್ಬರೂ ಬೆಂಗಳೂರಿಗೆ ಬಂದರು. ಅಪ್ಪನನ್ನು ಜಯದೇವ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ಅಪ್ಪನಿಗೆ ಚಿಕಿತ್ಸೆ ನೀಡುತ್ತಿದ್ದವರು ಡಾ. ವಿವೇಕ್ ಜವಳಿ. ಅದೇ ಸಮಯದಲ್ಲಿ ಖ್ಯಾತ ಸಾಹಿತಿ ಮಾಸ್ತಿ ಅವರಿಗೆ ತೀವ್ರ ಹುಷಾರು ತಪ್ಪಿ ಅವರನ್ನೂ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪ್ಪ ಮತ್ತು ಮಾಸ್ತಿ ಇಬ್ಬರೂ ಅಕ್ಕಪಕ್ಕದ ಹಾಸಿಗೆಯಲ್ಲಿದ್ದುದು, ಅವರನ್ನು ನೋಡಲು ಬಂದ ರಾಮಕೃಷ್ಣ ಹೆಗಡೆ ತನ್ನನ್ನೂ ಮಾತನಾಡಿಸಿಕೊಂಡು ಹೋಗಿದ್ದನ್ನು ಆಪರೇಷನ್ ಮುಗಿಸಿಕೊಂಡು ಬಂದಮೇಲೆ ಅಪ್ಪ ನೆನೆಪಿಸಿಕೊಳ್ಳುತ್ತಿದ್ದ.
ಅದು ಮೈನರ್ ಆಪರೇಷನ್ ಮಾತ್ರವಾಗಿತ್ತು. ಮೇಜರ್ ಆಪರೇಷನ್ ಮಾಡಿಸುವಷ್ಟು ಹಣ ನಮ್ಮಲ್ಲಿ ಸಂಗ್ರಹವಾಗಿರಲಿಲ್ಲ. ಹಾಗಾಗಿ ಸ್ವಲ್ಪ ದಿವಸ ಬಿಟ್ಟು ಬರುತ್ತೇವೆಂದು ಹೇಳಿ ವಾಪಾಸು ಊರಿಗೆ ಬಂದರು. ಅದಾಗಿ ಎರಡು ತಿಂಗಳಾಗಿರಬಹುದು. ಅಷ್ಟೊತ್ತಿಗೆ ನಮ್ಮಲ್ಲಿ ಒಟ್ಟು ನಲವತ್ತೈದು ಸಾವಿರ ರೂ. ಸಂಗ್ರಹವಾಗಿತ್ತು. ಇನ್ನು ಹೀಗೇ ಕೂತರಾಗುವುದಿಲ್ಲವೆಂದು ಜೈರಾಮ ಮಾವ ಆಪರೇಷನ್ ಗೆ ದಿನಾಂಕವನ್ನು ನಿಗದಿ ಮಾಡಿಸಿಕೊಂಡು ಬರುತ್ತೇನೆಂದು ಬೆಂಗಳೂರು ಬಸ್ಸು ಹತ್ತಿದ.
ಅದು ಸಾವಿರದೊಂಬೈನೂರ ಎಂಭತ್ತಾರನೇ ಇಸವಿ, ಜುಲೈ ಎಂಟರ ರ ಮಂಗಳವಾರದ ಸಂಜೆಯ ಹೊತ್ತು. ಆಗಿನ್ನೂ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದ ನಾನು ಆಗಷ್ಟೇ ಕಾಲೇಜಿನಿಂದ ಬಂದಿದ್ದೆ. ಗೇಟು ದಾಟಿ ಅಂಗಳದಲ್ಲಿ ಕಾಲಿಟ್ಟು ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿಯೇ ಮನೆಯ ಮುಂದಿನ ಮೆಟ್ಟಿಲಿನ ಮೇಲೆ ನಿಂತ ಅಮ್ಮ, ನೀಲಿ ಸೀರೆ ಉಟ್ಟು, ಹಣೆಯ ಮೇಲೆ ದೊಡ್ಡ ಕುಂಕುಮವನಿಟ್ಟು ಹುಣ್ಣಿಮೆಯ ಬೆಳದಿಂಗಳಿನಂಥ ಅಮ್ಮ “ಆನು ಪ್ಯಾಟಿಗೆ ಹೋಗ್ಬತ್ತಿ, ನಾಳಿನ ಪೂಜೆಗೆ ಸಾಮಾನುಗಳನ್ನು ತಗಬತ್ತಿ. ಉಪ್ಪಿಟ್ಟು ಮಾಡಿಟ್ಟಿದ್ದಿ, ತಿನ್ನು’ ಎಂದು ಹೇಳಿ ಹೊರಟಳು. ಮುಂದಾಗುವ ಅವಘಡದ ಯಾವ ಮುನ್ಸೂಚನೆಯೂ ಇಲ್ಲದವಳಂತೆ. ಮಾರನೆಯ ದಿನದಿಂದ ಅಪ್ಪನ ಸಲುವಾಗಿ ಏನೇನೋ ಪೂಜೆ ಮಾಡಿಸುವವರಿದ್ದರು ಮನೆಯಲ್ಲಿ. ಅದಕ್ಕಾಗಿ ಅಮ್ಮ ಪೇಟೆಗೆ ಹೊರಟಿದ್ದಳು.
ಬಾಗಿಲು ತೆರೆಯುತ್ತಿದ್ದಂತೆ ಅಪ್ಪ ಆರಾಮ ಕುರ್ಚಿಯೊಂದರಲ್ಲಿ ಕೂತು ಕವಳ ಹಾಕುತ್ತ ಯಾರೊಡನೆಯೋ ಮಾತನಾಡುತ್ತಿದ್ದ. ಅಷ್ಟೊತ್ತಿಗೆ ಐನಕೈ ಶಾಸ್ತ್ರಿಗಳಿಗೆ ಹುಷಾರಿಲ್ಲವೆಂದು ಎಲ್ಲಕಡೆ ಸುದ್ದಿಯಾಗಿ ಅಪ್ಪನನ್ನು ನೋಡಲೆಂದು ದಿನಾ ಒಬ್ಬರಲ್ಲ ಒಬ್ಬರು ಬರುತ್ತಲೇ ಇದ್ದರು. ಹಾಗೆ ನೋಡಲೆಂದು ಬಂದವರು ಹಿರಿಯರಾದ ಹೆಗ್ಗಾರಳ್ಳಿ ವೆಂಕಟ್ರಮಣ ಭಟ್ರು. ಅವರನ್ನು ಮಾತನಾಡಿಸಿಕೊಂಡು ನಾನು ಒಳ ಹೋದೆ. ಕೈಕಾಲು ತೊಳೆದು ಉಪ್ಪಿಟ್ಟು ತಿಂದು ಮನೆಯ ಒಳಗಡೆಯೇ ಕೂತಿದ್ದೆ. ಹೊರಗಿನ ಮಾತುಕತೆ ಕೇಳುತ್ತಿತ್ತು.
‘ನಿಮಗೀಗ ಆಪರೇಷನ್ ಅಂದ್ರೆ ಭಯವಾ…?’ ಭಟ್ರು ಕೇಳುತ್ತಿದ್ದರು.
ಅಪ್ಪ, ‘ಇಲ್ಲಪ್ಪ, ಆಗ ಸಾವಿರದ ಒಂಬೈನೂರ ಅರತ್ತೊಂಬತ್ತರಲ್ಲೇ ಆಗಿದ್ದಿದ್ದರೆ ಭಯವಿತ್ತು. ಆಗ ಹಣಬಲ, ಜನಬಲ ಎರಡೂ ನನ್ನಲ್ಲಿರಲಿಲ್ಲ. ಆದರೆ ಈಗ ಹಣಬಲ ಇಲ್ಲ. ಜನ ಬಲವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬದುಕು ಎಲ್ಲಿಗೆ, ಹೇಗೆ ಕೊಂಡೊಯ್ಯುತ್ತದೆಯೋ ಹಾಗೆ ಹೋಗುತ್ತೇನೆ ನಾನು. ಅದರ ತೀರ್ಮಾನಕ್ಕೆ ಬದ್ಧ ಇದ್ದೇನೆ. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಮದುವೆಗೋ, ಮಸಣಕೋ ಓಡೆಂದಕಡೆಗೋಡು, ಪದಕುಸಿಯೆ ನೆಲವಿಹುದು ಮಂಕುತಿಮ್ಮ…’
ಹೀಗೆಲ್ಲ ಮಂಕುತಿಮ್ಮನ ಪದ್ಯಗಳನ್ನು ಉದಾಹರಿಸುತ್ತ ಅಪ್ಪ ಹೇಳುತ್ತಿದ್ದು ಕೇಳಿಸುತ್ತಿತ್ತು. ಅಪ್ಪ ಮಾತನಾಡಲು ಕೂತರೆ ಹಾಗೆ, ಅಲ್ಲಿ ಸಾಹಿತ್ಯದ ಝಲಕ್ ಇರುತ್ತಿತ್ತು. ಅನುಭವದ ಕತೆಗಳ ಅನಾವರಣವಾಗುತ್ತಿತ್ತು. ಯಕ್ಷಗಾನ, ತಾಳಮದ್ದಳೆ, ನಾಟಕಗಳ ಕುರಿತು ಕತೆ, ವಿಮರ್ಶೆ, ಸಾಹಿತ್ಯ, ಅದು ಹಿಂದಿ, ಕನ್ನಡ, ಸಂಸ್ಕೃತ ಹೀಗೆ ಎಲ್ಲದರ ಸಾಹಿತ್ಯದ ಸುಧೆ ಹರಿಯುತ್ತಿತ್ತು. ನಮಗೆಲ್ಲ ಮಂಕುತಿಮ್ಮನ ಕಗ್ಗ ಓದಿರುವುದಕ್ಕಿಂತ ಹೆಚ್ಚಾಗಿ ಕೇಳಿಯೇ ಅಭ್ಯಾಸವಾಗಿಬಿಟ್ಟಿತ್ತು.
ಅಮ್ಮ ಸದಾ ನನ್ನ ವಯಸ್ಸಿನ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳುತ್ತಿದ್ದಳು. ಮಗಳಿಗೆ ಹತ್ತಾಯಿತು, ಹನ್ನೊಂದಾಯಿತು, ಹದಿನಾರಾಯಿತು ಎಂದು ಲೆಕ್ಕ ಹಾಕುತ್ತಿದ್ದಳು. ಹದಿನಾರು ವರ್ಷದವರೆಗೆ ಅಪ್ಪನಿಗೆ ಈ ಕಾಯಿಲೆ ಬರಲಿಲ್ಲ. ಆದರೆ ಮುರುಡೇಶ್ವರದಿಂದ ಬಂದ ನಂತರ ಅಪ್ಪನ ಸ್ಥಿತಿಯನ್ನು ನೋಡಿ ಅಮ್ಮ ತಡಮಾಡದೇ ಅವಳ ಅಣ್ಣ ಅಂದರೆ ನನ್ನ ಸೋದರಮಾವ ಜೈರಾಮ ಮಾವನಿಗೆ ಪತ್ರ ಬರೆದು ಕರೆಸಿಕೊಂಡಳು. ಈಗ ಆಪರೇಷನ್ ಮಾಡಿಸಲೇಬೇಕೆಂಬ ತೀರ್ಮಾನಕ್ಕೆ ಬರಲಾಯಿತು.
ಎಸ್.ಎಲ್.ಭೈರಪ್ಪ, ಶಿವರಾಮ ಕಾರಂತ, ಮಾಸ್ತಿ, ಅಡಿಗರ ಕವಿತೆಗಳು, ಪ್ರೇಮಚಂದ್ರರ ಕತೆಗಳು ಇಂಥವನ್ನೆಲ್ಲ ಓದಲು ಪ್ರೇರಣೆಯೇ ಅಪ್ಪನಾಗಿದ್ದ. ಅದಿಕ್ಕೆ ಅಪ್ಪ ಮಾತನಾಡುತ್ತಿದ್ದರೆ ಎಂಥವರೂ ಕೂತು ಕೇಳಬೇಕೆನಿಸುತ್ತಿತ್ತು. ಅಂಥ ಅಪ್ಪ ಅವತ್ತು ಮಂಕುತಿಮ್ಮನ ಕಗ್ಗದ ಬದುಕು ಜಟಕಾ ಬಂಡಿಯ ಕೊನೆಯ ಸಾಲುಗಳನ್ನು ಹೇಳುತ್ತಿದ್ದ. ಇದ್ದಕ್ಕಿದ್ದ ಹಾಗೆ ಒಂದು ಮೌನ ಆವರಿಸಿತು. ಈ ವೆಂಕಟ್ರಮಣ ಭಟ್ರು ‘ಶಾಸ್ತ್ರಿಗಳು… ಶಾಸ್ತ್ರಿಗಳು’ ಎಂದು ಕರೆಯತೊಡಗಿದರು, ತಕ್ಷಣ ತಂಗೀ ತಂಗೀ ಎಂದು ನನ್ನ ಕರೆದರು. ಎದ್ದು ಹೋಗಿ ನೋಡಿದರೆ ಅರಾಮಕುರ್ಚಿಯಲ್ಲಿ ಕುಳಿತ ಅಪ್ಪನ ಉಸಿರು ಮೇಲಕ್ಕೆ ಹೋಗುತ್ತಿತ್ತು.
ಅಡಕೆ ಕತ್ತರಿಸುತ್ತಿದ್ದ ಅಡ್ಡಕತ್ತರಿ ಕೈಯ್ಯಲ್ಲಿ ಹಾಗೆಯೇ ಇತ್ತು. ಉಸಿರು ಮೇಲಕ್ಕೆ ಹೋಗುತ್ತಿತ್ತು. ಬಹುಶಃ ಹಾರ್ಟ್ ಅಟ್ಯಾಕ್ ಆಗಿರಬಹುದೆಂದು ಡಾಕ್ಟರನ್ನು ಕರೆಯುತ್ತೇನೆಂದು ಓಡಿದೆ. ಪಕ್ಕದಲ್ಲೇ ಇದ್ದ ಡಾಕ್ಟರ್ ಮನೆಗೆ ಓಡಿಹೋಗಿ, ಅವರು ಯಾವುದೋ ಪೇಷೆಂಟ್ ನೋಡಲೆಂದು ಕೋಣೆಯ ಬಾಗಿಲು ಹಾಕುವವರಿದ್ದರು. ಬಾಗಿಲನ್ನೂ ತಟ್ಟಿ ತೆಗೆಸಿ, ‘ಡಾಕ್ಟರೇ, ಅಪ್ಪಂಗೆ ಎಂತೋ ಆಗ್ಹೋಯ್ದು, ತಕ್ಷಣ ಬನ್ನಿ’ ಎಂದೆ. ‘ಏನಾಯ್ದು’ ಎಂದು ಕೇಳಿದರು.
‘ಗೊತ್ತಿಲ್ಲೆ, ನೀವು ತಕ್ಷಣ ಬನ್ನಿ’ ಎಂದು ಅಲ್ಲಿ ಕ್ಷಣ ಕೂಡ ನಿಲ್ಲದೆ, ಆಸ್ಪತ್ರೆಯ ಮುಂಭಾಗದಿಂದ ಹೋದರೆ ತಡವಾಗುತ್ತದೆಂದು ಹಿಂದುಗಡೆ ಇದ್ದ ಬೇಲಿಯನ್ನು ಹಾರಿ ಮನೆಗೆ ಬಂದೆ.
ಬಂದು ನೋಡುತ್ತೇನೆ. ಅಂಥ ಒಂದು ಖಾಲಿತನವನ್ನು, ಅಂಥ ಒಂದು ವಿಲಕ್ಷಣತೆಯನ್ನು ಬದುಕಿನಲ್ಲಿ ಮತ್ತೆಂದೂ ಅನುಭವಿಸಲಿಲ್ಲ. ಅಲ್ಲಿ ಭಟ್ರು ಇರಲಿಲ್ಲ. ಅಪ್ಪನ ಕುತ್ತಿಗೆ ಕುರ್ಚಿಯಲ್ಲಿ ಹಾಗೆಯೇ ವಾಲಿತ್ತು. ಹಿಂದೆಯೇ ಡಾಕ್ಟರು ಬಂದರು. ಡಾಕ್ಟರು, ನಾನು ಇಬ್ಬರೂ ಸೇರಿ ಅಪ್ಪನನ್ನು ಕುರ್ಚಿಯಿಂದ ಕೆಳಗೆ ಇಳಿಸಿ ಮಲಗಿಸಿದೆವು. ಡಾಕ್ಟರು ಅಪ್ಪನ ಬಾಯಿಗೆ ಕರ್ಚಿಪ್ ಇಟ್ಟು ಒಂದೇ ಸಮನೆ ತಮ್ಮ ಉಸಿರನ್ನು ಅವನಿಗೆ ಕೊಡ ಹತ್ತಿದರು. ಎದೆಗೆ ಬಲವಾಗಿ ಗುದ್ದತೊಡಗಿದರು. ಏನು ಮಾಡಿದರೂ, ಅಪ್ಪನ ಉಸಿರು ವಾಪಾಸು ಬರಲಿಲ್ಲ. ಅದು ವಾಪಾಸು ಬರುವಂಥದ್ದಲ್ಲ ಎಂದು ಆಗ ನನಗೆ ತಿಳಿಯಲೂ ಇಲ್ಲ. ಹಾರ್ಟ್ ಅಟ್ಯಾಕ್ ಆಗಿದೆ. ಇದೆಲ್ಲ ಸರಿಹೋಗುತ್ತದೆ ಎಂದೇ ಅಂದುಕೊಳ್ಳುತ್ತಿದ್ದೆ. ಅದಿಕ್ಕೆ ಏನೂ ಮಾತನಾಡದೆ ತಮ್ಮ ಪಾಡಿಗೆ ತಾವು ಅಪ್ಪನಿಗೆ ಉಸಿರು ಬರಿಸುವಲ್ಲಿ ಸತತ ಪ್ರಯತ್ನಿಸುತ್ತಿರುವ ಡಾಕ್ಟರ್ ಆ ಹೊತ್ತಿಗೆ ದೇವರ ಹಾಗೆಯೇ ಕಂಡರು ನನಗೆ.
ಇಷ್ಟೆಲ್ಲ ಆಗುವ ಹೊತ್ತಿಗೆ ಪೇಟೆಯಿಂದ ಅಮ್ಮ ಬಂದಳು. ಮಾರನೇ ದಿನದ ಪೂಜೆಗೆ ಬೇಕಾಗುವ ಸಾಮಾನುಗಳನ್ನೆಲ್ಲ ಹಿಡಿದುಕೊಂಡು. ಬಂದವಳೇ ಅಪ್ಪನನ್ನು ನೋಡಿ ಒಂದು ಕ್ಷಣ ದಿಗ್ಭ್ರಾಂತಳಾಗಿ ಹಾಗೆಯೇ ಗೋಡೆಗೊರಗಿ ನಿಂತಳು ಒಂದೂ ಮಾತನಾಡದೆ. 5 ನಿಮಿಷ ಹಾಗೆಯೇ ನಿಂತವಳು ನಂತರ ನಿಧಾನಕ್ಕೆ ಒಳ ಹೋಗಿ ಕಾಲು ತೊಳೆದು ದೇವರಿಗೆ ದೀಪ ಹಚ್ಚಿದಳು. ಅಷ್ಟೊತ್ತಿಗೆ ನೆಂಟರಿಷ್ಟರು, ಅಮ್ಮನ ಸ್ನೇಹಿತೆಯರೆಲ್ಲ ಒಟ್ಟಾದರು. ಅಣ್ಣ ಆಗ ಶಿರಸಿಯ ಕಾಲೇಜಿಗೆ ಹೋಗುತ್ತಿದ್ದ. ದಿನಾ ಸಿದ್ದಾಪುರದಿಂದಲೇ ಹೋಗಿಬಂದು ಮಾಡುತ್ತಿದ್ದ. ರಾತ್ರಿ ಎಂಟೂ ಮೂವತ್ತರ ಸುಮಾರಿಗೆ ಮನೆಗೆ ಬಂದ. ಅಷ್ಟೊತ್ತಿಗಾಗಲೇ ಅಪ್ಪನನ್ನು ಶಿರಸಿಗೆ ಕರೆದುಕೊಂಡು ಹೋಗಬೇಕು, ಡಾ.ಬಳಗಂಡಿ ಅವರಹತ್ರ ತೋರಿಸಬೇಕೆಂದೆಲ್ಲ ಮಾತನಾಡುತ್ತಿದ್ದರು. ಅಮ್ಮ, ಅಪ್ಪನ ಎದೆಯ ಮೇಲೆ ಕೈಯಿಟ್ಟು, ‘ಇದು ತಣ್ಣಗೆ ಕೊರೆಯುತ್ತಿದೆ, ಯಾವ ಡಾಕ್ಟರ್ ಏನು ಮಾಡುತ್ತಾರೆ’ ಎಂದು ತನ್ನ ಮತ್ತೊಬ್ಬ ಅಣ್ಣ ಶ್ರೀಧರಣ್ಣಯ್ಯನ ಹತ್ತಿರ ಕೇಳಿದಳು. ಯಾರೂ ಉತ್ತರಿಸಲಿಲ್ಲ.
ಅಪ್ಪ ಅವತ್ತು ಬೆಳಗಿನಿಂದ ತುಂಬ ಮಾತನಾಡಿದ್ದ. ಅದಿಕ್ಕೇ ಹಾಗಾಗಿದೆ, ಎಚ್ಚರಾದ ಕೂಡಲೇ ಅವನಿಗೆ ಹೇಳಬೇಕು, ಇನ್ನು ಮುಂದೆ ಜಾಸ್ತಿ ಮಾತನಾಡಬೇಡ ನೀನು ಎಂದು ಅಂದುಕೊಳ್ಳುತ್ತಿದೆ. ಅಷ್ಟೊತ್ತಿಗೆ ನರ್ಸ್ ಬಂದು ನನ್ನ ಮತ್ತು ಅಣ್ಣ ಇಬ್ಬರನ್ನೂ ಒಳಕರೆದು ಹೇಳಿದಳು, “ನಿನ್ನ ಅಪ್ಪ ಇನ್ನು ವಾಪಾಸು ಬರುವುದಿಲ್ಲ. ನೀವಿನ್ನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು. “ಬಳಗಂಡಿ ಡಾಕ್ಟರ್ ಹತ್ರ ಕರೆದುಕೊಂಡು ಹೋದರೂ ಸರಿಹೋಗುವುದಿಲ್ಲವಾ” ಎಂದು ಕೇಳಿದೆ. “ಯಾವ ಡಾಕ್ಟರ್ ಬಂದ್ರೂ ಅಷ್ಟೇಯ. ಅವನ ಕೆಲಸ ಮುಗಿದಿದೆ” ಎಂದು ಹೇಳಿದಳು.
ಇವಳು ಸುಳ್ಳು ಹೇಳುತ್ತಿರಬಹುದು. ನರ್ಸ್ ಗಳಿಗೆ ತಿಳಿಯುತ್ತದೆ, ಡಾಕ್ಟರ್ ನನ್ನೇ ಕೇಳಬೇಕು ಎಂದುಕೊಂಡೆ. ಅವಳ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ ನನಗೆ. ಯಾರನ್ನು ಕೇಳಿದರೂ ಅಷ್ಟೆ, ಅಪ್ಪನ ಜೀವ ವಾಪಾಸು ಬರಲೇ ಇಲ್ಲ.
ಅಪ್ಪನ ಆಪರೇಷನ್ ಗೆಂದು ದಿನಾಂಕ ನಿಗದಿಮಾಡಿಕೊಂಡು ಬರುತ್ತೇನೆಂದು ಹೋಗಿದ್ದ ಜೈರಾಮ ಮಾವ ಇನ್ನೂ ಬಂದಿರಲಿಲ್ಲ. ಅವತ್ತಿಡೀ ದಿವಸ ಅಪ್ಪ ಕೇಳುತ್ತಲೇ ಇದ್ದ, ಜೈರಾಮ ಇನ್ನೂ ಯಾಕೆ ಬರಲಿಲ್ಲ ಎಂದು. ಮುಂಚಿನ ದಿವಸವೇ ಶುರುಮಾಡಿದ್ದ, ಜೈರಾಮನ ಸುದ್ದಿಯನ್ನು. ಆಗ ಈಗಿನಂತೆ ಎಲ್ಲವನ್ನೂ ತಿಳಿಸಲು ಫೋನ್ ವ್ಯವಸ್ಥೆ ಇರಲಿಲ್ಲ. ಕಡೆಗೂ ಜೈರಾಮ್ ಮಾವ ಬಂದದ್ದು ಅಪ್ಪ ಹೋದಮೇಲೆಯೇ. ಅದೇನು ಹೇಳಬೇಕೆನಿಸಿತ್ತೋ ಏನೋ…
ಈ ಘಟನೆ ನನಗೆ ಯಾವಾಗಲೂ ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ಶ್ರೀ ಕೃಷ್ಣನ ಕೊನೆಯ ದಿನಗಳನ್ನು ನೆನಪಿಸುತ್ತಿರುತ್ತದೆ ನನಗೆ. ಕೃಷ್ಣನ ಕೊನೆಯ ದಿನಗಳ ಸಂದರ್ಭದಲ್ಲಿ ಅರ್ಜುನನ್ನು ಕರೆತರಲು ದಾರುಕನೊಬ್ಬನನ್ನು ಅಟ್ಟುತ್ತಾನೆ. ಅರ್ಜುನ ಹಸ್ತಿನಾಪುರದಿಂದ ಬರುವಷ್ಟರಲ್ಲಿ ಪದೇಪದೆ ಕೃಷ್ಣ ಅರ್ಜುನ ಇನ್ನೂ ಬರಲಿಲ್ಲ, ಇನ್ನೂ ಬರಲಿಲ್ಲ ಎಂದು ಅರ್ಜುನನ ಹಾದಿಯನ್ನು ನೋಡಿ ನೋಡಿ ತೀರಿಕೊಳ್ಳುತ್ತಾನೆ. ಕಡೆಗೂ ಅರ್ಜುನ ಬರುವುದು ಕೃಷ್ಣನ ಅವಸಾನದ ನಂತರವೇ.
ಕಾದಂಬರಿಯ ಈ ಸನ್ನಿವೇಶ ಸದಾ ನನ್ನ ನೆನಪಿನಲ್ಲುಳಿಯುವುದಕ್ಕೆ ಕಾರಣವಿದೆ. ಅಪ್ಪ ಮತ್ತು ಜೈರಾಮ ಮಾವ ಇಬ್ಬರನ್ನೂ ಕೃಷ್ಣಾರ್ಜುನರಂತೆ ಇದ್ದಾರೆಂದು ಹೇಳುತ್ತಿದ್ದರು. ಅಷ್ಟು ಆಪ್ತವಾಗಿದ್ದರು ಇಬ್ಬರೂ. ಆಪರೇಷನ್ ಗೆಂದು ದಿನಾಂಕ ನಿಗದಿಪಡಿಸುತ್ತೇನೆಂದು ಹೋದ ಜೈರಾಮ ಮಾವನನ್ನು, ‘ಜೈರಾಮ ಯಾಕಿನ್ನೂ ಬರಲಿಲ್ಲ’ ಎಂದು ಪದೇಪದೇ ನೆನಪಿಸಿಕೊಂಡ ಅಪ್ಪ ಜೈರಾಮ ಮಾವನನ್ನು ನೋಡದೆ ಮಂಗಳವಾರ, ಸಂಜೆ ಐದೂ ಮೂವತ್ತರ ಸಮಯದಲ್ಲಿ ಇಹಲೋಕ ತ್ಯಜಿಸಿದ. ಮಾರನೇ ದಿವಸ ಬೆಳಗಿನ ಜಾವ ಐದು ಗಂಟೆಗೆ ಜೈರಾಮ ಮಾವ ಆಪರೇಷನ್ನ ದಿನಾಂಕವನ್ನು ಗೊತ್ತುಮಾಡಿಕೊಂಡು ಬಂದವ ನೋಡಿದ್ದು ಅಪ್ಪನ ಕಳೇಬರವನ್ನು.
ಆಗೆಲ್ಲ ಪದೇಪದೆ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ, ಯಾವುದಾದರೊಂದು ಪವಾಡ ಜರುಗಿ ಈ ಅಪ್ಪ ಬದುಕಿಬರಲಿ ಎಂದು. ಸಾವಿರದ ಒಂಬೈನೂರ ಅರತ್ತೊಂಬತ್ತನೇ ಇಸವಿಯಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಅಟ್ಯಾಕ್ ಆಗಿ ಸಂಜೆ ಆರು ಗಂಟೆಗೆ ಎಚ್ಚರವಾದ ಹಾಗೆ ಈಗಲೂ ಇವ ಎಚ್ಚರಗೊಳ್ಳಬಾರದಾ ಎಂದು ಸ್ಮಶಾನಕ್ಕೆ ಅಪ್ಪನ ಶವವನ್ನು ತೆಗೆದುಕೊಂಡು ಹೋಗಿ ಸುಡುವ ಕೊನೆಯ ಘಳಿಗೆಯವರೆಗೂ ಅನಿಸುತ್ತಿತ್ತು. ಈಗಲಾದರೂ ಯಾವುದಾದರೊಂದು ಪವಾಡ ಜರುಗಿ ಅಪ್ಪ ಎದ್ದು ಕುಳಿತುಬಿಡಬಾರದಾ ಎಂದು. ಆದರೆ ಯಾವ ಪವಾಡವೂ ಅಲ್ಲಿ ಜರುಗಲಿಲ್ಲ. ನಿರ್ದಯಿ ಅದೃಷ್ಟ ಅಪ್ಪನ ಕಣ್ಣನ್ನು ಮುಚ್ಚಿಸಿಯೇ ಬಿಟ್ಟಿತು.
ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನ್ನ ಕಣ್ಣೆದುರೇ ಇಂಥದ್ದೊಂದು ದುರಂತ ಜರುಗಿಹೋಯಿತು.
ಅಪ್ಪ, ಅಮ್ಮ, ನಾನು ಮತ್ತು ಅಣ್ಣ ಹೇಗಿದ್ದೆವೆಂದರೆ ಅದೊಂದು ಸುಂದರ ಆಪ್ತವಾದ ಕುಟುಂಬ. ಸದಾ ಓದಿಕೊಳ್ಳುತ್ತ, ಮಾತನಾಡುತ್ತ, ಕತೆಯಾಡುತ್ತ ಅಪ್ಪನೆಂಬ ಯಾವ ಹಮ್ಮೂ ಇಲ್ಲದೆ ನಮ್ಮೊಂದಿಗೆ ಒಡನಾಡುತ್ತಿದ್ದ ಅಪ್ಪ ಈಗಿಲ್ಲ. ನಾನು ಎಲ್ಲೇ ಹೋಗಲಿ, ಯಾವುದೇ ಸಿನಿಮಾ ನೋಡಲಿ, ಕಾದಂಬರಿ, ಕತೆ ಓದಲಿ, ಯಾರದ್ದೇ ಭಾಷಣ ಕೇಳಿರಲಿ…. ಅದನ್ನು ಅಪ್ಪನೊಂದಿಗೆ ಹಂಚಿಕೊಂಡರಷ್ಟೆ ಸಮಾಧಾನ. ಒಂದು ಹೊಸಲಂಗ, ಹೊಸ ಬ್ಲೌಸು, ಹೊಸ ಬ್ಯಾಗು, ಚಪ್ಪಲಿ, ಹೀಗೆ ಏನೇ ತಂದರೂ ಅಪ್ಪನಿಗೆ ತೋರಿಸಿ, ‘ಚೊಲೋ ಇದ್ದು’ ಎಂದು ಅಪ್ಪ ಹೇಳಿದರೆ ಆಗ ಸಿಗುವ ಸಮಾಧಾನವೇ ಬೇರೆ.
ಕಳೆದ ಮೇ ತಿಂಗಳಲ್ಲಿ ಊರಿಗೆ ಹೋದಾಗ ಅಕಸ್ಮಾತ್ತಾಗಿ ನಾವಿದ್ದ ಈ ಹಳೆಯ ಮನೆಗೆ ಹೋಗಬೇಕಾಗಿ ಬಂತು. ಅದೇ ಅಂಗಳ, ಅದೇ ಮೆಟ್ಟಿಲು, ಆ ಮೆಟ್ಟಿಲಿನ ಮೇಲೆಯೇ ನಿಂತ ದೊಡ್ಡ ಕುಂಕುಮದ ತುಂಬು ಹುಣ್ಣಿಮೆಯ ಮೊಗದ ಅಮ್ಮ, ಅದರ ಹಿಂದೆಯೇ ಅಪ್ಪನ ಅರಾಮ ಕುರ್ಚಿ, ಅಪ್ಪನನ್ನು ಮಲಗಿಸಿದ ಆ ಕೋಣೆ ಎಲ್ಲವೂ ಕಣ್ಣಮುಂದೆ ಹಾದು… ಕಣ್ಣುಗಳು ತುಂಬಿಬಂದವು.
ಅಪ್ಪ ಹೋಗಿ ಈ ಮೂವತ್ತಾರು ವರ್ಷಗಳ ನಂತರವೂ ಈಗಲೂ ಹರಳುಗಟ್ಟಿದ ಅವನ ನೆನಪುಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಏನಾದರೂ ಕೊಂಡರೆ ಮನೆಯವರಿಗೆಲ್ಲ ತೋರಿಸಿಯಾದಮೇಲೂ ನಾನು ತೋರಿಸುವುದು ಮತ್ತೂ ಯಾರೋ ಬಾಕಿ ಇದ್ದಾರೆ ಎನಿಸಿಬಿಡುತ್ತದೆ. ಇನ್ನೂ ಯಾರಿಗೋ ನಾನು ಹೇಳಬೇಕಿದೆ ಎನಿಸುತ್ತದೆ. ನನ್ನ ಮಾತುಗಳನ್ನು ಇನ್ನೂ ಯಾರೋ ಕೇಳಬೇಕಿತ್ತು ಎನಿಸುತ್ತದೆ. ಹೀಗೆಲ್ಲ ಈಗಲೂ ನಮ್ಮೊಳಗೆ ಜೀವಂತವಾಗಿಯೇ ಇದ್ದು ನಮ್ಮನ್ನು ಆಗಿನಿಂದ ಈಗಿನವರೆಗೂ ಪೊರೆಯುತ್ತಲೇ ಇರುವ ಅವ ನಕ್ಷತ್ರವಾಗಿ ನಿಜಕ್ಕೂ ಇದ್ದಿರಬಹುದೆಂದು ಈಗಲೂ ನಕ್ಷತ್ರ ತುಂಬಿದ ರಾತ್ರಿಯಲ್ಲಿ ಆಕಾಶ ನೋಡುತ್ತಿರುತ್ತೇನೆ.
ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಮೊದಲ ಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು(ಕಥಾ ಸಂಕಲನ), ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)ಪುಸ್ತಕಗಳು ಪ್ರಕಟವಾಗಿವೆ.