ಎಲ್ಲರಿಗೂ ಸಂತೋಷವಾಗಿತ್ತು, ಇನ್ನೈದೇ ನಿಮಿಷದಲ್ಲಿ ಜೋರಾಗಿ ನಗುತ್ತಿದ್ದರು. ದುನ್ಯಾ ಮಾತ್ರ ನಡೆದದ್ದನ್ನೆಲ್ಲ ಯೋಚನೆ ಮಾಡುತ್ತ ಆಗಾಗ ಹುಬ್ಬು ಗಂಟಿಕ್ಕುತ್ತಿದ್ದಳು. ಪುಲ್ಚೇರಿಯ ತನಗೂ ಇಷ್ಟು ಸಂತೋಷವಾದೀತೆಂದು ಅಂದುಕೊಂಡೇ ಇರಲಿಲ್ಲ. ಅಂದು ಬೆಳಗ್ಗೆ ಕೂಡ ಪೀಟರ್ ಪೆಟ್ರೊವಿಚ್ ನ ಜೊತೆ ಸಂಬಂಧ ಕಳೆದುಕೊಳ್ಳುವುದು ಬಲು ದೊಡ್ಡ ಅನಾಹುತವೆಂದೇ ಅವಳಿಗೆ ಅನಿಸಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ಭಾಗ ನಾಲ್ಕು: ಮೂರನೆಯ ಅಧ್ಯಾಯ
ಹೀಗಾದೀತು ಅನ್ನುವ ಊಹೆ ಕೂಡ ಇದ್ದಿರಲಿಲ್ಲ ಅವನಿಗೆ. ಇಬ್ಬರು ಅಸಹಾಯಕ ಹೆಂಗಸರು ತನ್ನ ಬಿಗಿ ಮುಷ್ಠಿಯಿಂದ ತಪ್ಪಸಿಕೊಂಡಾರು ಅನ್ನುವ ಕಲ್ಪನೆಯೂ ಇಲ್ಲದೆ ತನ್ನ ಧೈರ್ಯವನ್ನೇ ನೆಚ್ಚಿ ಅಬ್ಬರಿಸಿ ಬೊಬ್ಬಿರಿದಿದ್ದ. ಒಣ ಹೆಮ್ಮೆ, ಸ್ವ-ಮೋಹದ ಮಟ್ಟಕ್ಕೆ ಬೆಳೆದುಕೊಂಡಿದ್ದ ಆತ್ಮವಿಶ್ವಾಸ ಇವೂ ಅವನಲ್ಲಿದ್ದ, ‘ನನ್ನ ಬಿಟ್ಟರೆ ಇನ್ನಿಲ್ಲ’ ಅನ್ನುವ ಅವನ ಭಾವನೆಯನ್ನು ಬೆಳೆಸಿದ್ದವು. ಏನೇನೂ ಅಲ್ಲದ ಬಡವನಾಗಿದ್ದ ಪೀಟರ್ ಪೆಟ್ರೊವಿಚ್ ಗಣ್ಯನಾಗಿ ಬೆಳೆದಿದ್ದ. ಅವನ ಜಾಣತನ, ಅವನ ಸಾಮರ್ಥ್ಯ, ಅವನ ಶಕ್ತಿಗಳನ್ನು ಅವನೇ ಮೆಚ್ಚಿಕೊಳ್ಳುತ್ತಿದ್ದ. ಒಬ್ಬನೇ ಇರುವಾಗ ಕನ್ನಡಿಯಲ್ಲಿ ನೋಡಿಕೊಂಡು ತನ್ನನ್ನೇ ಮೆಚ್ಚಿಕೊಳ್ಳುವಷ್ಟು ಮಟ್ಟದ ಸ್ವಮೋಹ ಬೆಳೆಸಿಕೊಂಡಿದ್ದ. ಕಷ್ಟಪಟ್ಟು, ಬುದ್ಧಿವಂತಿಕೆ ಬಳಸಿ ಸಂಪಾದಿಸಿದ್ದ ದುಡ್ಡನ್ನು ಈ ಬದುಕಿನಲ್ಲಿ ಮಿಕ್ಕ ಎಲ್ಲ ಸಂಗತಿಗಳಿಗಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ. ಆ ದುಡ್ಡು, ‘ಜಗತ್ತಿನಲ್ಲಿ ದೊಡ್ಡದಾದ್ದು ಏನೇನಿವೆಯೋ ಅವೆಲ್ಲ ನನ್ನೊಳಗೇ ಇವೆ,’ ಅನ್ನುವ ಭಾವವನ್ನು ಬೆಳೆಸಿತ್ತು.
‘ಊರ ಜನ ನಿನ್ನ ಬಗ್ಗೆ ಕೆಟ್ಟ ಮಾತಾಡಿದ್ದರೂ ನಿನ್ನ ಕೈ ಹಿಡಿಯಲು ಒಪ್ಪಿದೆ,’ ಎಂದು ದುನ್ಯಾಗೆ ಅವನು ಹೇಳಿದಾಗ ಪೀಟರ್ ಪೆಟ್ರೋವಿಚ್ ಆ ಮಾತನ್ನು ಪ್ರಾಮಾಣಿಕವಾಗಿ ನಂಬಿದ್ದ. ಅವನು ಮದುವೆಯ ಪ್ರಸ್ತಾಪವನ್ನು ಮುಂದಿಡುವಾಗ ಆಕೆಯ ಬಗ್ಗೆ ಹರಡಿದ್ದೆಲ್ಲ ಬರಿಯ ಗಾಳಿ ಮಾತು, ಬರಿಯ ಸುಳ್ಳೆಂದು ಅವನಿಗೆ ಮನವರಿಕೆಯಾಗಿತ್ತು. ಆದರೂ ಅವಳು ಕಿಂಚಿತ್ತೂ ಕೃತಜ್ಞತೆ ಇಲ್ಲದೆ ನಡೆದುಕೊಂಡಳೆಂದು ನಿಜವಾಗಿ ಸಿಟ್ಟುಗೊಂಡಿದ್ದ. ಮಾರ್ಫಾ ಮನೆ ಮನೆಗೂ ಹೋಗಿ ನಿಜ ಹೇಳಿದ್ದಳು, ಊರ ಜನವೂ ದುನ್ಯಾಳನ್ನು ಒಪ್ಪಿದ್ದರು. ಇದೆಲ್ಲ ಅವನಿಗೂ ಗೊತ್ತಿತ್ತು. ಆದರೂ ದುನ್ಯಾಳ ಕೈ ಹಿಡಿಯಲು ನಾನು ಒಪ್ಪಿದ್ದು ಬಲು ಧೈರ್ಯದ ಉದಾತ್ತ ತೀರ್ಮಾನ, ಅವಳನ್ನು ತನ್ನ ಮಟ್ಟಕ್ಕೆ ಏರಿಸುತ್ತಿದ್ದೇನೆ, ಮಹತ್ಕಾರ್ಯ ಮಾಡುತ್ತಿದ್ದೇನೆ ಅಂತಲೇ ನಂಬಿಕೊಂಡಿದ್ದ. ಮದುವೆಯ ವಿಷಯ ಪ್ರಸ್ತಾಪ ಮಾಡುತ್ತಿರುವಾಗ ಅವನ ಒಳ್ಳೆಯತನವನ್ನು ಅವನೇ ಮೆಚ್ಚಿಕೊಳ್ಳುತ್ತಿದ್ದ. ‘ನನ್ನ ಉದಾತ್ತ ವರ್ತನೆಯನ್ನು ಕಂಡು ಮೆಚ್ಚದೆ ಇರುವವರು ಯಾರೂ ಇಲ್ಲ,’ ಅನ್ನುವ ನಂಬಿಕೆಯೂ ಅವನಲ್ಲಿತ್ತು. ಅವನು ಮೊದಲ ಬಾರಿ ರಾಸ್ಕೋಲ್ನಿಕೋವ್ ನನ್ನು ಭೇಟಿ ಮಾಡಲು ಹೋದಾಗ ದಾನಿ ನಾನು ಎಂಬ ಭಾವದಲ್ಲೇ ಮೆಚ್ಚುಗೆಯ ಸುಗ್ಗಿಯನ್ನು ನಿರೀಕ್ಷಿಸಿ ಹೋಗಿದ್ದ, ಇವತ್ತು ಮೆಟ್ಟಿಲಿಳಿಯುತ್ತಿರುವಾಗ ‘ನನಗೆ ಅನ್ಯಾಯವಾಯಿತು, ನನ್ನ ಉದಾತ್ತ ಗುಣ ಯಾರೂ ಗಮನಿಸಲಿಲ್ಲ, ನಾನು ಎಲ್ಲರ ನಿರ್ಲಕ್ಷ್ಯಕ್ಕೆ ಗುರಿಯಾದೆ,’ ಅನ್ನುವ ಭಾವಗಳು ಅವನಲ್ಲಿ ತುಂಬಿದ್ದವು.
ದುನ್ಯಾ ಅವನಿಗೆ ಅನಿವಾರ್ಯವಾಗಿದ್ದಳು. ಅವಳು ದೂರವಾದಾಳೆನ್ನುವ ಕಲ್ಪನೆಯೂ ಬಂದಿರಲಿಲ್ಲ. ಅವನು ಬಹಳ ಕಾಲದಿಂದ ಮದುವೆಯ ಕನಸು ಕಾಣುತಿದ್ದ. ದುಡ್ಡು ಕೂಡಿಡುತ್ತ ಕಾಯುತ್ತಲೇ ಇದ್ದ. ಪರವಶಗೊಳಿಸುವಂಥ ಗುಟ್ಟಾದ ಕನಸು ಕಟ್ಟಿಕೊಂಡಿದ್ದ:
‘ಒಳ್ಳೆಯ ಹುಡುಗಿ ಬಡವಳು, (ಇದು ಬಹಳ ಮುಖ್ಯ), ಚಿಕ್ಕ ಪ್ರಾಯದವಳು, ತುಂಬ ಮುದ್ದಾಗಿರುತ್ತಾಳೆ, ಒಳ್ಳೆಯ ಮನೆಯವಳು, ಓದಿದವಳು, ಅನೇಕ ಕಷ್ಟ ಅನುಭವಿಸಿದ ದುರದೃಷ್ಟವಂತೆ, ಹಸುವಿನಂಥವಳು, ಜೀವಮಾನ ಪರ್ಯಂತವೂ ಮುಕ್ತಿ ನೀಡಿದ ಮಹಾಪುರಷನೆಂದು ನನ್ನನ್ನು ಗೌರವಿಸುವವಳು. ನನ್ನ ಮಾತನ್ನು ತಪ್ಪದೆ ಪಾಲಿಸುವವಳು, ನನ್ನನ್ನು ಕಂಡು ಸದಾ ಬೆರಗುಪಡುವವಳು ನನ್ನವಳಾಗುತ್ತಾಳೆ,’ ಅನ್ನುವ ಕನಸು ಅದು. ದುಡಿಮೆಯಿಂದ ಬಿಡುವು ಸಿಕ್ಕಾಗಲೆಲ್ಲ ಇಂಥ ಪಾತ್ರವನ್ನಿಟ್ಟುಕೊಂಡು ರುಚಿರುಚಿಯಾದ ಚೆಲ್ಲಾಟದ, ಮಾದಕವಾದ ಎಷ್ಟೊಂದು ಸನ್ನಿವೇಶ, ಪ್ರಸಂಗಗಳನ್ನು ಸೃಷ್ಟಿಮಾಡಿಕೊಂಡಿದ್ದು ಸುಖಿಸಿದ್ದ! ಅಷ್ಟೊಂದು ವರ್ಷಗಳ ಎಲ್ಲ ಕನಸೂ ನಿಜವಾಗುವ ಹೊತ್ತು ಬಂದಿತ್ತು. ದುನ್ಯಾಳ ಶಿಕ್ಷಣ, ಅವಳ ಚೆಲುವು, ಅವಳು ಅಸಹಾಯಕಳಾಗಿ ಅನುಭವಿಸಿದ ಕಷ್ಟ ಇವೆಲ್ಲ ಅವನ ಕಲ್ಪನೆಯನ್ನು ಕೆರಳಿಸಿದ್ದವು.
ಅವನು ಕನಸು ಕಂಡದ್ದಕ್ಕಿಂತ ಮಿಗಿಲಾದ ಹುಡುಗಿ ದುನ್ಯಾ. ಆತ್ಮಾಭಿಮಾನಿ, ಅಸಾಮಾನ್ಯಳು, ವಿದ್ಯೆಯಲ್ಲಿ, ವರ್ತನೆಯಲ್ಲಿ ಅವನಿಗಿಂತ ಉತ್ತಮಳು (ಹಾಗೆ ಅವನಿಗೇ ಅನಿಸುತ್ತಿತ್ತು); ಅಂಥ ಹೆಣ್ಣು ಅವನು ಮಾಡಿದ ಮಹದುಪಕಾರಕ್ಕೆ ಬದುಕು ಪೂರ್ತಿ ಗುಲಾಮಳ ಹಾಗೆ ಕೃತಜ್ಞಳಾಗಿರುವುದು, ಅವನೆದುರು ತಾನೇನೂ ಅಲ್ಲ ಅನ್ನುವ ಹಾಗಿರುವುದು, ಮತ್ತೆ ಅವನು ಅವಳ ಮೇಲೆ ಅಪರಿಮಿತ ಪರಿಪೂರ್ಣ ಅಧಿಕಾರ ಚಲಾಯಿಸುವುದು…! ಎಂಥ ಸುಖ ಸ್ವಪ್ನ! ಅವನು ತನ್ನ ವ್ಯವಹಾರವನ್ನು ಬದಲಾಯಿಸಿ ಹೊಸ ವಿಸ್ತಾರವಾದ ಚಟುವಟಿಕೆಗಳಲ್ಲಿ ತೊಡಗುವ ನಿರ್ಧಾರವನ್ನು ಇತ್ತೀಚೆಗೆ ಮಾಡಿದ್ದ. ಬಹಳಷ್ಟು ಯೋಚನೆ ಮಾಡಿ, ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ನಿಧನಿಧಾನವಾಗಿ ಸಮಾಜದ ಉನ್ನತ ವರ್ಗದ ಜನರ ಜೊತೆ ಬೆರೆಯುವುದಕ್ಕೆ ಶುರು ಮಾಡಿದ್ದ. ತಾನೂ ತೂಕದ ಮನುಷ್ಯನಾಗಬೇಕೆಂದು ಬಹುಕಾಲದಿಂದ ಮನಸಿನಲ್ಲೇ ಚಪ್ಪರಿಸುತ್ತಿದ್ದ. ಅದೆಲ್ಲ ನೆರವೇರುವುದಕ್ಕ ಪೀಟರ್ಸ್‍ಬರ್ಗ್ ಸೇರಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದ. ಇಂಥ ಕಾರ್ಯದಲ್ಲಿ ಹೆಂಗಸರು ‘ಬಹಳ ಬಹಳ’ ಉಪಯೋಗಕ್ಕೆ ಬರುತ್ತಾರೆ ಅನ್ನುವುದು ಅವನಿಗೆ ಗೊತ್ತಿತ್ತು. ಸುಂದರಿ, ಸದ್ಗುಣಿ, ಸುಶಿಕ್ಷಿತ ಹೆಂಗಸು ಪೀಟರ್ ಪೆಟ್ರೊವಿಚ್ ನ ಸುತ್ತ ಕಾಮನಬಿಲ್ಲಿನ ವರ್ಣರಂಜಿತ ಪ್ರಭಾವಳಿಯನ್ನು ಬೆಳೆಸಿ, ಕೆಲವರನ್ನು ಆಕರ್ಷಿಸಿ, ಅವನು ಸಾಗುವ ದಾರಿಯನ್ನು ಸುಗಮಗೊಳಿಸುವುದು ಸಾಧ್ಯವಿತ್ತು. ಈಗ ಆ ಕನಸು ಕುಸಿದುಬಿದ್ದಿತ್ತು. ಸಿಡಿಲು ಬಡಿದ ಹಾಗೆ ಎಲ್ಲ ಮುರಿದುಬಿದ್ದಿತ್ತು. ವಿಧಿ ಮಾಡಿದ ಕೆಟ್ಟ ಜೋಕ್ ನ ಹಾಗಿತ್ತು ಬದುಕು.
ಅವನಿನ್ನೂ ಎಳ್ಳು ಕಾಳಿನಷ್ಟೂ ತನ್ನೊಳಗಿನ ಧೈರ್ಯದ ಪ್ರದರ್ಶನ ಮಾಡಿರಲಿಲ್ಲ, ಮನಸಿನಲ್ಲಿದ್ದ ಮಾತನ್ನೆಲ್ಲ ಆಡುವುದಕ್ಕೂ ಸಮಯ ಸಿಕ್ಕಿರಲಿಲ್ಲ, ಸುಮ್ಮನೆ ತಮಾಷೆ ಮಾಡುತ್ತ ಎಲ್ಲೆ ಮೀರಿದ್ದ, ಜೋಕ್ ಅಂದುಕೊಂಡದ್ದು ಸೀರಿಯಸ್ಸಾಗಿ ಕೊನೆ ಕಂಡಿತ್ತು. ಕೊನೆಯದಾಗಿ—ಅವನಿಗೆ ದುನ್ಯಾ ಮೇಲೆ ಪ್ರೀತಿ ಕೂಡಾ ಹುಟ್ಟಿತ್ತು, ಕನಸುಗಳಲ್ಲಿ ಅವಳ ಯಜಮಾನನೂ ಆಗಿದ್ದ—ಹಾಗಿರುವಾಗ, ಇದ್ದಕಿದ್ದ ಹಾಗೆ…!—ಇಲ್ಲ! ನಾಳೆ, ನಾಳೆಯೇ ಇದನ್ನೆಲ್ಲ ರಿಪೇರಿ ಮಾಡಬೇಕು, ವಾಸಿ ಮಾಡಬೇಕು, ಸರಿಮಾಡಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಆ ಉದ್ಧಟ ತಂಟೆಕೋರ ಹುಡುಗ ರಾಸ್ಕೋಲ್ನಿಕೋವ್ ಇಷ್ಟೆಲ್ಲ ಅನಾಹುತಕ್ಕೆ ಕಾರಣ, ಅವನನ್ನು ನಾಶಮಾಡಬೇಕು. ರಝುಮಿಖಿನ್ ನ ನೆನಪು ಮೂಡಿತ್ತು. ತಕ್ಷಣವೇ ತನಗೆ ತಾನೆ ಸಮಾಧಾನ ಮಾಡಿಕೊಂಡ—‘ಅವನನ್ನು ಸರಿಸಮ ಅಂತ ಯಾಕೆ ತಿಳಿಯಲಿ!’ ಅಂದುಕೊಂಡ. ಅವನಿಗೆ ನಿಜವಾಗಿ ಭಯ ಇದ್ದದ್ದು ಸ್ವಿದ್ರಿಗೈಲೋವ್ ಬಗ್ಗೆ… ಆ ವಿಷಯದಲ್ಲಿ ಅವನು ಎದುರಿಸಬೇಕಾದ ತೊಂದರೆಗಳು ಬಹಳವಿದ್ದವು.
‘ಇಲ್ಲ, ತಪ್ಪು ನನ್ನದೇ, ನನ್ನದೇ!’ ದುನ್ಯಾ ಅಮ್ಮನನ್ನು ಅಪ್ಪಿಕೊಂಡು, ಮುತ್ತಿಡುತ್ತ ಹೇಳಿದಳು. ‘ದುಡ್ಡಿನ ಆಸೆ ಹುಟ್ಟಿತ್ತು. ಆದರೆ ಆಣೆ ಮಾಡಿ ಹೇಳತೇನೆ ಅಣ್ಣಾ, ಅವನು ಇಂಥ ಅಯೋಗ್ಯ ಅಂತ ಗೊತ್ತಿರಲಿಲ್ಲ. ಮೊದಲೇ ಅವನು ಇಂಥವನು ಅಂತ ಗೊತ್ತಾಗಿದ್ದರೆ ದುಡ್ಡಿನ ಆಸೆಗೆ ಬಲಿ ಬೀಳುತಿರಲಿಲ್ಲ! ಪ್ಲೀಸ್ ಬೈಯಬೇಡ, ಅಣ್ಣಾ!’
‘ದೇವರು ಕಾಪಾಡಿದ ನಮ್ಮನ್ನ! ದೇವರು ಕಾಪಾಡಿದ ನಮ್ಮನ್ನ!’ ಮೈಮೇಲೆ ಎಚ್ಚರವೇ ಇಲ್ಲ ಅನ್ನುವ ಹಾಗೆ, ನಡೆದದ್ದೆಲ್ಲ ಪೂರ ಅರ್ಥವೇ ಆಗಿಲ್ಲ ಅನ್ನುವ ಹಾಗೆ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ,
ಎಲ್ಲರಿಗೂ ಸಂತೋಷವಾಗಿತ್ತು, ಇನ್ನೈದೇ ನಿಮಿಷದಲ್ಲಿ ಜೋರಾಗಿ ನಗುತ್ತಿದ್ದರು. ದುನ್ಯಾ ಮಾತ್ರ ನಡೆದದ್ದನ್ನೆಲ್ಲ ಯೋಚನೆ ಮಾಡುತ್ತ ಆಗಾಗ ಹುಬ್ಬು ಗಂಟಿಕ್ಕುತ್ತಿದ್ದಳು. ಪುಲ್ಚೇರಿಯ ತನಗೂ ಇಷ್ಟು ಸಂತೋಷವಾದೀತೆಂದು ಅಂದುಕೊಂಡೇ ಇರಲಿಲ್ಲ. ಅಂದು ಬೆಳಗ್ಗೆ ಕೂಡ ಪೀಟರ್ ಪೆಟ್ರೊವಿಚ್ ನ ಜೊತೆ ಸಂಬಂಧ ಕಳೆದುಕೊಳ್ಳುವುದು ಬಲು ದೊಡ್ಡ ಅನಾಹುತವೆಂದೇ ಅವಳಿಗೆ ಅನಿಸಿತ್ತು. ರಝುಮಿಖಿನ್ ಆನಂದೋನ್ಮತ್ತನಾಗಿದ್ದ, ತನಗಾದ ಆನಂದವನ್ನು ಪೂರ್ತಿಯಾಗಿ ತೋರಿಸಿಕೊಳ್ಳುವ ಧೈರ್ಯವಿಲ್ಲದೆ, ಜ್ವರ ಬಂದವರ ಹಾಗೆ ಅವನ ಮೈ ಕಂಪಿಸುತ್ತಿತ್ತು, ಇನ್ನೂರು ಪೌಂಡು ಭಾರವನ್ನು ಅವನೆದೆಯ ಮೇಲಿಂದ ಇಳಿಸಿದ ಹಾಗೆ ಅನಿಸಿತ್ತು. ಇಡೀ ಜೀವನವನ್ನು ಅವರಿಗಾಗಿ ಮುಡುಪಿಡುವ, ಅವರಿಗೆ ಸೇವೆ ಸಲ್ಲಿಸುವ ಹಕ್ಕು ದೊರೆತಿತ್ತು,.. ಮುಂದೇನಾಗುತ್ತದೋ ಯಾರಿಗೆ ಗೊತ್ತು… ಭವಿಷ್ಯದ ಯೋಚನೆಗಳನ್ನೆಲ್ಲ ಮನ ಕಂಪಿಸುತ್ತಲೇ ದೂರ ತಳ್ಳುತ್ತಿದ್ದ. ತನ್ನ ಕಲ್ಪನೆಯ ಬಗ್ಗೆಯೇ ಹೆದರುತ್ತಿದ್ದ. ರಾಸ್ಕೋಲ್ನಿಕೋವ್ ಮಾತ್ರ ಕೂತಲ್ಲೇ ಕೂತಿದ್ದು ಮಂಕಾಗಿದ್ದ. ಅವನ ಮನಸ್ಸು ಎಲ್ಲೋ ಇದ್ದ ಹಾಗಿತ್ತು. ಪೀಟರ್ ಪೆಟ್ರೊವಿಚ್ ನನ್ನು ಮದುವೆಯಾಗಬಾರದೆಂದು ಮೊದಲು ಒತ್ತಾಯ ಮಾಡಿದವನೇ ಈಗ ನಡೆದ ಒಂದಿಷ್ಟೂ ಕುತೂಹಲ ಇಲ್ಲದವನ ಹಾಗೆ ಕೂತಿದ್ದ. ಅಣ್ಣನಿಗೆ ನನ್ನ ಮೇಲಿನ್ನೂ ಕೋಪ ಇರಬಹುದು ಅಂದುಕೊಂಡಳು ದುನ್ಯಾ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಕಣ್ಣೀರು ತುಂಬಿಕೊಂಡು ಮಗನನ್ನೇ ನೋಡುತ್ತಿದ್ದಳು.
‘ಸರಿ, ಸ್ವಿದ್ರಿಗೈಲೋವ್ ಏನಂದ?’ ಅಣ್ಣನ ಹತ್ತಿರ ಹೋಗುತ್ತ ದುನ್ಯಾ ಕೇಳಿದಳು.
‘ಹೌದು, ಹೌದು,’ ಅನ್ನುತ್ತ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕುತೂಹಲ ತೋರಿದಳು.
‘ನಿನಗೆ ಹತ್ತು ಸಾವಿರ ರೂಬಲ್ ಕೊಡಲೇಬೇಕು ಅನ್ನುತ್ತಿದ್ದಾನೆ. ಹಾಗೇ ನನ್ನೆದುರಿಗೇ ನಿನ್ನನ್ನ ಒಂದು ಸಾರಿ ನೋಡಿ ಮಾತಾಡಬೇಕು ಅಂತ ಹೇಳತಿದ್ದಾನೆ.’
‘ಅವಳನ್ನ ನೋಡೋದಾ! ಕೋಟಿ ಕೊಟ್ಟರೂ ಆಗಲ್ಲ! ಎಷ್ಟು ಧೈರ್ಯ ಅವನಿಗೆ ದುಡ್ಡು ಕೊಡೋದಕ್ಕೆ ಬಂದಿದಾನೆ!’ ಅಂದಳು ಅಮ್ಮ.
ಆಮೇಲೆ ರಾಸ್ಕೋಲ್ನಿಕೋವ್ ಸ್ವಿದ್ರಿಗೈಲೋವ್ ಹೇಳಿದ್ದನ್ನೆಲ್ಲ ನೀರಸವಾಗಿ ವರದಿ ಮಾಡಿದ. ಮಾರ್ಫಾಳ ಭೂತದ ಕತೆ ಹೇಳಲಿಲ್ಲ — ಅದು ಅನಗತ್ಯ ವಿವರ ಎಂಬ ಕಾರಣಕ್ಕೆ, ತೀರ ಅಗತ್ಯವಲ್ಲದ ಮಾತಾಡುವುದು ಅಸಹ್ಯ ಅನ್ನುವ ಕಾರಣಕ್ಕೆ ಆ ಮಾತು ಕೈ ಬಿಟ್ಟ.
‘ಅವನು ಹೇಳಿದ್ದಕ್ಕೆ ನೀನೇನಂದೆ?’ ದುನ್ಯಾ ಕೇಳಿದಳು.
‘ತಂಗಿಗೆ ಏನೂ ಹೇಳಲ್ಲ ಅಂದೆ. ಅದಕ್ಕೆ ಅವನು ತಾನೇ ಏನಾದರೂ ಪ್ರಯತ್ನ ಮಾಡಿ ನಿನ್ನ ಭೇಟಿ ಮಾಡೇ ಮಾಡತೀನಿ ಅಂದ. ನಿನ್ನ ಬಗ್ಗೆ ಇದ್ದದ್ದು ಒಂದು ಥರ ಖಯಾಲಿ, ಈಗ ನಿನ್ನ ಬಗ್ಗೆ ಯಾವ ಭಾವನೆಯೂ ಇಲ್ಲ ಅಂತ ಒತ್ತಿ ಹೇಳಿದ… ನೀನು ಪೀಟರ್ ಪೆಟ್ರೊವಿಚ್ ನ ಮದುವೆಯಾಗುವುದು ಅವನಿಗಿಷ್ಟವಿಲ್ಲ… ಒಟ್ಟಾರೆ ಹೇಳಬೇಕು ಅಂದರೆ ಅವನ ಮಾತಿನಲ್ಲಿ ದೃಢ ಇರಲಿಲ್ಲ.’
‘ಅವನು ಎಂಥವನು ಅಂತ ನಿನಗನ್ನಿಸತ್ತೆ, ರೋದ್ಯಾ? ನಿನ್ನ ಅಭಿಪ್ರಾಯ ಏನು?’
‘ನಿಜ ಹೇಳಬೇಕಂದರೆ, ನನಗೇನೂ ಸರಿಯಾಗಿ ಅರ್ಥ ಆಗಲಿಲ್ಲ. ಹತ್ತು ಸಾವಿರ ಕೊಡತೀನಿ ಅಂತಾನೆ, ನಾನು ಶ್ರೀಮಂತ ಅಲ್ಲ ಅಂತಲೂ ಹೇಳತಾನೆ. ಎಲ್ಲಿಗೋ ಹೋಗಬೇಕು ಅಂತ ತೀರ್ಮಾನ ಮಾಡಿದೇನೆ ಅಂತಾನೆ, ಹತ್ತು ನಿಮಿಷ ಬಿಟ್ಟರೆ ಮರೆತೇ ಹೋಗತಾನೆ, ಮದುವೆ ಆಗಬೇಕು ಅಂದುಕೊಂಡಿದೀನಿ, ಬಹಳ ಮಟ್ಟಿಗೆ ನನಗೆ ಹೊಂದುವ ಹುಡುಗಿ ಸಿಕ್ಕಿಯೂ ಆಯಿತು ಅನ್ನತಾನೆ. ಅವನ ಮನಸ್ಸಿನಲ್ಲಿ ಕೆಟ್ಟ ಆಸೆ ಇರಬಹುದೇನೋ ಅನ್ನಿಸತ್ತೆ. ನಿನ್ನ ಮೇಲೆ ಅವನಿಗೆ ಮನಸಿದ್ದರೆ ಈ ಥರ ವಿಷಯ ಪ್ರಸ್ತಾಪ ಮಾಡಿದ್ದು ಅವನ ಪೆದ್ದುತನ ಅನಿಸತ್ತೆ. ನಾನೇನೋ ದುಡ್ಡು ಬೇಡವೇ ಬೇಡ ಅಂತ ನಿನ್ನ ಪರವಾಗಿ ಹೇಳಿದೆ. ನನಗೆ ಯಾಕೋ ಅವನು ಬಹಳ ವಿಚಿತ್ರ ಅನಿಸಿದ. ಹ್ಞೂಂ… ಒಂಥರ ಹುಚ್ಚನ ಲಕ್ಷಣ ಇತ್ತು. ನಾನು ಅಂದುಕೊಂಡದ್ದು ತಪ್ಪೂ ಇರಬಹುದು. ಅವನು ನಮ್ಮನ್ನ ಯಾಮಾರಿಸಕೆ ನೋಡತಾ ಇರಲೂಬಹುದು. ಮಾರ್ಫಾ ಸಾವು ಅವನ ಮನಸಿನ ಮೇಲೆ ತುಂಬ ಪರಿಣಾಮ ಮಾಡಿದೆ ಅಂತಲೂ ಅನಿಸತ್ತೆ…’
‘ಸತ್ತು ಸ್ವರ್ಗ ಸೇರಿದಳು! ನಾನು ಬದುಕಿರುವ ತನಕ ಅವಳ ಹೆಸರು ಹೇಳಿ ಪ್ರಾರ್ಥನೆ ಮಾಡತೇನೆ! ಅವಳು ನಮ್ಮ ಹೆಸರಿಗೆ ಮೂರು ಸಾವಿರ ರೂಬಲ್ ಬರೆದಿಲ್ಲದಿದ್ದರೆ ಈಗ ನಮ್ಮ ಗತಿ ಏನಾಗಬೇಕಾಗಿತ್ತು ದುನ್ಯಾ. ದೇವರೇ ವರ ಕೊಟ್ಟ ಹಾಗಾಯಿತು! ಅಯ್ಯೋ, ರೋದ್ಯಾ, ಇವತ್ತು ಬೆಳಗ್ಗೆ ನಮ್ಮ ಹತ್ತಿರ ಬರೀ ಮೂರು ರೂಬಲ್ ಇದ್ದವು. ದುನ್ಯಾನೂ ನಾನೂ ಕೂತು ಯೋಚನೆ ಮಾಡಿದೆವು. ಅವಳ ಗಡಿಯಾರನ ಎಲ್ಲಾದರೂ ಗಿರವಿ ಇಡಣ ಅಂದುಕೊಂಡೆವು. ಇವಳನ್ನ ಮದುವೆ ಆಗತೇನೆ ಅಂದವನು ಅವನಾಗಿ ಅವನೇ ಏನಾದರೂ ಕೊಡೋವರೆಗೆ ನಾವೇ ಏನೂ ಕೇಳೋದು ಬೇಡ ಅಂದುಕೊಂಡೆವು,’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
ಸ್ವಿದ್ರಿಗೈಲೋವ್ ನ ಕೊಡುಗೆಯಿಂದ ದುನ್ಯಾ ತಬ್ಬಿಬ್ಬಾಗಿದ್ದಳು. ಯೋಚನೆಯಲ್ಲಿ ಮುಳುಗಿ ಹಾಗೇ ನಿಂತಿದ್ದಳು.
‘ಏನೋ ಭಯಂಕರವಾದ್ದು ಯೋಚನೆ ಮಾಡಿದಾನೆ!’ ಪಿಸುದನಿಯಲ್ಲಿ ತನಗೇ ಹೇಳಿಕೊಂಡಳು, ಸಣ್ಣದಾಗಿ ಕಂಪಿಸಿದಳು.
ಅವಳ ಈ ಅತೀ ಭಯವನ್ನು ರಾಸ್ಕೋಲ್ನಿಕೋವ್ ಗಮನಿಸಿದ.
‘ಒಂದು ಸಾರಿಗೆ ಮುಗಿಯಲಿಲ್ಲ, ಮತ್ತೆ ಮತ್ತೆ ಅವನನ್ನ ನೋಡಬೇಕಾಗಬಹುದು ನಾನು,’ ಅಂದ.
‘ಅವನ ಮೇಲೆ ಕಣ್ಣಿಡತೀವಿ! ಅವನು ಎಲ್ಲಿ ಹೋದರೂ ಅವನ ಹಿಂದೇನೇ ಇರತೀನಿ!’ ರಝುಮಿಖಿನ್ ಉತ್ಸಾಹದಲ್ಲಿ ಹೇಳಿದ. ‘ಅವನು ನನ್ನ ಕಣ್ಣು ತಪ್ಪಿಸಿ ಎಲ್ಲೂ ಹೋಗಕ್ಕಾಗಲ್ಲ, ಏನೂ ಮಾಡಕ್ಕಾಗಲ್ಲ. ನೀನು ಹ್ಞೂಂ ಅನ್ನು ರೋದ್ಯಾ, ಸಾಕು. ನೀವು ಒಪ್ಪತೀರಾ ಅವದೋತ್ಯ ರೊಮನೋವ್ನಾ? ‘ನನ್ನ ತಂಗೀನ ಕಾಪಾಡು,’ ಅಂತ ನಿಮ್ಮಣ್ಣ ಹೇಳಿದಾನೆ, ನಿಮ್ಮ ಒಪ್ಪಿಗೆ ಇದೆಯಾ?’
‘ದುನ್ಯಾ ನಗುತ್ತ ಅವನತ್ತ ಕೈ ಚಾಚಿದಳು. ಆದರೂ ಅವಳ ಮುಖದಲ್ಲಿದ್ದ ಆತಂಕ ಹಾಗೇ ಇತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಅಂಜಿದ ಹಾಗೆ ಕಾಣುತ್ತಿದ್ದಳು. ಮೂರು ಸಾವಿರ ರೂಬಲ್ ಅನ್ನುವುದು ಅವಳಿಗೆ ಸಮಾಧಾನ ತಂದ್ದದ್ದು ಗೊತ್ತಾಗುವಂತಿತ್ತು.
ಕಾಲು ಗಂಟೆಯ ನಂತರ ಅವರೆಲ್ಲ ಉತ್ಸಾಹದಿಂದ ಮಾತಾಡಿಕೊಳ್ಳುತ್ತಿದ್ದರು. ರಾಸ್ಕೋಲ್ನಿಕೋವ್ ಸ್ವತಃ ಏನೂ ಮಾತಾಡದಿದ್ದರೂ, ಸ್ವಲ್ಪ ಹೊತ್ತು ಅವರ ಮಾತನ್ನು ಗಮನವಿಟ್ಟು ಕೇಳಿಸಿಕೊಂಡ. ರಝುಮಿಖಿನ್ ಮಾತಿನ ಗುತ್ತಿಗೆ ಹಿಡಿದಿದ್ದ.
‘ನೀವೆಲ್ಲಾ ವಾಪಸ್ಸು ಹೋಗಬೇಕು ಯಾಕೆ!’ ಪರವಶನಾದವನ ಹಾಗೆ ಉತ್ಸಾಹದಲ್ಲಿ ಹೇಳುತ್ತಿದ್ದ. ‘ಆ ಸಣ್ಣ ಊರಲ್ಲಿದ್ದುಕೊಂಡು ಏನು ಮಾಡುತ್ತೀರಿ? ಮುಖ್ಯ ಏನಪ್ಪ ಅಂದರೆ ನೀವೆಲ್ಲ ಇಲ್ಲಿ ಒಟ್ಟಿಗೆ ಇರುತ್ತೀರಿ, ಒಬ್ಬರಿಗೆ ಒಬ್ಬರು ಆಗುತ್ತೀರಿ. ನನ್ನ ಮಾತು ಕೇಳಿ! ಸದ್ಯಕ್ಕಾದರೂ… ನನ್ನನ್ನ ನಿಮ್ಮ ಸ್ನೇಹಿತ ಅಂದುಕೊಳ್ಳಿ. ನಾವೆಲ್ಲ ಸೇರಿ ದೊಡ್ಡ ಕೆಲಸ ಶುರುಮಾಡಣ. ಇಲ್ಲಿ ಕೇಳಿ, ಒಂದು ನಿಮಿಷ. ನಿಮಗೆ ಎಲ್ಲಾ ಹೇಳತೇನೆ. ಇವೆಲ್ಲಾ ಆಗಕ್ಕೂ ಮೊದಲೇ, ಇವತ್ತು ಬೆಳಗ್ಗೆ ಇದು ನನ್ನ ಮನಸಿಗೆ ಹೊಳೆದಿತ್ತು. ಏನಂದರೆ ನಮ್ಮ ಚಿಕ್ಕಪ್ಪ ಒಬ್ಬರಿದಾರೆ, (ನಿಮಗೆ ಅವರ ಪರಿಚಯ ಮಾಡಿಸತೇನೆ, ತುಂಬ ಒಳ್ಳೆಯವರು, ಮರ್ಯಾದಸ್ಥರು, ಹಳೆಯ ಕಾಲದ ತಮಾಷೆ ಸ್ವಭಾವದವರು!) ಈ ಚಿಕ್ಕಪ್ಪನ ಹತ್ತಿರ ಒಂದು ಸಾವಿರ ರೂಬಲ್ ನ ಬಂಡವಾಳ ಇದೆ. ಅವರ ಜೀವನಕ್ಕೆ ಪೆನ್ಶನ್ ಬರತ್ತೆ, ಬೇರೆ ಇನ್ನೇನೂ ಬೇಕಾಗಿಲ್ಲ ಅವರಿಗೆ. ಎರಡು ವರ್ಷದಿಂದ ಪೀಡಿಸತಾ ಇದಾರೆ, ನನ್ನ ದುಡ್ಡು ತಗೋ, ವರ್ಷಕ್ಕೆ ಶೇಕಡಾ ಆರು ಬಡ್ಡಿ ಕೊಡು ಅಂತ. ನನಗೆ ಸಹಾಯ ಮಾಡಬೇಕು ಅಂತ ಅವರ ಮನಸು… ಹೋದ ವರ್ಷ ನನಗೆ ಆ ದುಡ್ಡು ಬೇಕಾಗಿರಲಿಲ್ಲ. ಈ ವರ್ಷ ಅವರು ಬರಲಿ ಅಂತ ಕಾಯತಾ ಇದೇನೆ. ಆ ದುಡ್ಡು ತಗೊಳ್ಳತೇನೆ. ಮತ್ತೆ ನಿಮ್ಮ ಹತ್ತಿರ ಇರುವ ಮೂರು ಸಾವಿರದಲ್ಲಿ ಒಂದು ಸಾವಿರ ಕೊಡಿ. ಆಗ ನಮ್ಮ ಕೆಲಸಕ್ಕೆ ಬಂಡವಾಳ ಸಿಕ್ಕ ಹಾಗಾಗತ್ತೆ. ಏನು ಮಾಡಣ ನಾವು, ಅದನ್ನ ಹೇಳತೇನೆ.’
ಅಂಥ ಹೆಣ್ಣು ಅವನು ಮಾಡಿದ ಮಹದುಪಕಾರಕ್ಕೆ ಬದುಕು ಪೂರ್ತಿ ಗುಲಾಮಳ ಹಾಗೆ ಕೃತಜ್ಞಳಾಗಿರುವುದು, ಅವನೆದುರು ತಾನೇನೂ ಅಲ್ಲ ಅನ್ನುವ ಹಾಗಿರುವುದು, ಮತ್ತೆ ಅವನು ಅವಳ ಮೇಲೆ ಅಪರಿಮಿತ ಪರಿಪೂರ್ಣ ಅಧಿಕಾರ ಚಲಾಯಿಸುವುದು…! ಎಂಥ ಸುಖ ಸ್ವಪ್ನ!
ರಝುಮಿಖಿನ್ ತನ್ನ ಯೋಜನೆಯನ್ನು ವಿವರಿಸುವುದಕ್ಕೆ ಶುರು ಮಾಡಿದ. ಸುಮಾರು ಒಂದು ಗಂಟೆಯಷ್ಟು ಹೊತ್ತು ವಿವರ ವಿವರವಾಗಿ ಹೇಳಿದ. ನಮ್ಮ ಪುಸ್ತಕ ಮಾರಾಟಗಾರರು, ಪ್ರಕಾಶಕರಿಗೆ ತಾವು ಪ್ರಕಟಿಸುತ್ತಿರುವ ಪುಸ್ತಕಗಳ ಬೆಲೆಯೇ ಗೊತ್ತಿಲ್ಲ, ಸಭ್ಯರಾದ ಪ್ರಕಾಶಕರು ಬರೆದವರಿಗೆ ದುಡ್ಡನ್ನೂ ಕೊಡುತ್ತಾರೆ ತಾವೂ ಒಳ್ಳೆಯ ಲಾಭ ಮಾಡಿಕೊಳ್ಳುತ್ತಾರೆ. ಪುಸ್ತಕ ಪ್ರಕಾಶನ ರಝುಮಿಖಿನ್ ನ ಕನಸು. ಯಾಕೆಂದರೆ ಎರಡು ವರ್ಷದಿಂದ ಅವನು ಬೇರೆಯ ಪ್ರಕಾಶಕರಿಗಾಗಿ ಕೆಲಸ ಮಾಡುತ್ತಿದ್ದ. ಅವನಿಗೆ ಮೂರು ಯೂರೋಪಿಯನ್ ಭಾಷೆಗಳು ಚೆನ್ನಾಗಿಯೇ ಬರುತ್ತವೆ. ಆರು ದಿನಗಳ ಹಿಂದೆ ತನಗೆ ಜರ್ಮನ್ ಚೆನ್ನಾಗಿ ಬರುವುದಿಲ್ಲವೆಂದು ಹೇಳಿದ್ದ. ರಾಸ್ಕೋಲ್ನಿಕೋವ್ ಗೆ ಅನುವಾದದ ಕೆಲಸ ಕೊಡಿಸಬೇಕು, ಮೂರು ರೂಬಲ್ ಮುಂಗಡ ಅವನು ಒಪ್ಪಿಕೊಳ್ಳಬೇಕು ಎಂದು ಸುಳ್ಳು. ಹೇಳಿದ್ದ. ಅದು ಸುಳ್ಳೆಂದು ರಾಸ್ಕೋಲ್ನಿಕೋವ್ ಗೂ ತಿಳಿದಿತ್ತು.
‘ಯಾಕೆ, ಯಾಕೆ ಈ ಅವಕಾಶ ಕೈ ತಪ್ಪಬೇಕು? ಅದೂ, ಬಹಳ ಮುಖ್ಯವಾಗಿ ಬೇಕಾದ ದುಡ್ಡು ನಮ್ಮ ಹತ್ತಿರ ಇರುವಾಗ?’ ರಝುಮಿಖಿನ್ ಉತ್ಸಾಹ ಹೆಚ್ಚುತ್ತಿತ್ತು. ‘ಕೆಲಸ ಹೆಚ್ಚಾಗತ್ತೆ, ನಿಜ. ದುಡಿಯೋಣ. ನಾವೆಲ್ಲಾ—ನೀವು ಅವ್ದೋತ್ಯ ರೊಮನೋವ್ನ, ನಾನು ಮತ್ತೆ ರೋಡಿಯಾನ್… ಕೆಲವು ಪುಸ್ತಕಗಳಿಂದ ಒಳ್ಳೆಯ ಲಾಭ ಬರತ್ತೆ. ಎಲ್ಲಕ್ಕಿಂತ ಮುಖ್ಯ ಅಂದರೆ ನಮಗೆಲ್ಲಾರಿಗೂ ಏನು ಅನುವಾದ ಮಾಡಬೇಕು ಅನ್ನುವುದು ಗೊತ್ತಿದೆ. ನಾವು ಅನುವಾದ ಮಾಡಣ, ಪ್ರಕಟ ಮಾಡಣ, ಓದಣ, ಎಲ್ಲಾ ಒಟ್ಟಿಗೆ ಮಾಡಣ. ನನಗೆ ಅನುಭವ ಇದೆಯಲ್ಲ, ಉಪಯೋಗಕ್ಕೆ ಬರತ್ತೆ. ಸುಮಾರು ಎರಡು ವರ್ಷದಿಂದ ಪ್ರಕಾಶಕರ ಜೊತೆ ಇದೀನಿ. ವ್ಯವಹಾರದ ಗುಟ್ಟೆಲ್ಲ ಗೊತ್ತು. ಸ್ಪೂರ್ತಿ ಗೀರ್ತಿ ಎಲ್ಲ ಬೇಕಾಗಿಲ್ಲ, ನಂಬಿ ನನ್ನ! ಕೈಗೆ ಬಂದಿರೋ ತುತ್ತು ಬಾಯಿಗೆ ಯಾಕೆ ಬರಬಾರದು? ನನಗೆ ಒಂದೆರಡು ಪುಸ್ತಕಗಳು ಗೊತ್ತಿವೆ, ಗುಟ್ಟಾಗಿಟ್ಟಿದೀನಿ, ಅವನ್ನ ಅನುವಾದ ಮಾಡಿ ಪ್ರಕಟಿಸಬಹುದು ಅನ್ನುವ ಐಡಿಯಾಕ್ಕೇನೆ ಒಂದೊಂದಕ್ಕೂ ನೂರು ರೂಬಲ್ ಸಿಗಬಹುದು. ಐನೂರು ಕೊಟ್ಟರೂ ನಾನು ಯಾರಿಗೂ ಹೇಳಲ್ಲ. ಯಾಕೆಂದರೆ ಹೇಳುವುದಕ್ಕೆ ಹೋದರೆ ಪೆದ್ದು ತಲೆಗಳಿಗೆ ಅರ್ಥ ಆಗಲ್ಲ, ನಂಬಲ್ಲ! ಇನ್ನು ವ್ಯವಹಾರಕ್ಕೆ ಸಂಬಂಧಪಟ್ಟ ಅಚ್ಚಿನ ಮೊಳೆ, ಕಾಗದ, ಮಾರಾಟ ಇಂಥದ್ದೆಲ್ಲ ನನಗೆ ಬಿಡಿ! ನಿಧಾನವಾಗಿ ಮುಂದುವರೆದು ದೊಡ್ಡ ಲಾಭಕ್ಕೆ ಕೈ ಹಾಕಣ. ಕೊನೆಯ ಪಕ್ಷ ನಮ್ಮ ಊಟಕ್ಕಾಗುವಷ್ಟು ಸಿಗತ್ತೆ, ನಾವು ಹಾಕಿದ ದುಡ್ಡು ಖಂಡಿತ ನಮಗೆ ವಾಪಸ್ ಬರತ್ತೆ.’
ದುನ್ಯಾಳ ಕಣ್ಣು ಹೊಳೆಯುತಿದ್ದವು.
‘ನೀವು ಹೇಳತಾ ಇರೋದು ತುಂಬ ಚೆನ್ನಾಗಿದೆ, ದ್ಮಿತ್ರಿ ಪ್ರೊಕೊಫ್ಯಿಚ್,’ ಅಂದಳು.
‘ಇದೇನೂ ನನಗೆ ತಿಳಿಯಲ್ಲ, ಒಳ್ಳೆಯ ಕೆಲಸ ಇರಬಹುದು, ದೇವರಿಗೇ ಗೊತ್ತು. ಇದೆಲ್ಲ ಹೊಸದು, ಗೊತ್ತಿಲ್ಲದ್ದು. ಹೇಗಿದ್ದರೂ ನಾವು ಸಧ್ಯಕ್ಕಾದರೂ ಇಲ್ಲಿರಲೇಬೇಕು,’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನ.
ರೋದ್ಯಾನತ್ತ ನೋಡಿದಳು.
‘ನೀನೇನು ಅನ್ನುತೀಯ, ಅಣ್ಣಾ?’ ದುನ್ಯಾ ಕೇಳಿದಳು.
‘ಐಡಿಯ ಚೆನ್ನಾಗಿದೆ. ವ್ಯವಹಾರ ಶುರುಮಾಡುವ ಮೊದಲು ಕನಸು ಕಾಣಬೇಕು ಅನ್ನುವುದು ನಿಜವೇ ಸರಿ. ಆದರೆ ಲಾಭ ಗ್ಯಾರಂಟಿ ಅನಿಸುವಂಥ ಆರು ಪುಸ್ತಕಗಳನ್ನ ಪ್ರಕಟ ಮಾಡುವುದಕ್ಕೆ ಆಗುತ್ತದಾ? ಅನುವಾದ ಚೆನ್ನಾಗಿ ಮಾರಾಟ ಆಗುವಂಥ ಒಳ್ಳೆಯ ಪುಸ್ತಕ ನನಗೂ ಒಂದು ಗೊತ್ತಿದೆ. ಇನ್ನ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಇವನಿಗೆ ತಾಕತ್ತು ಇದೆ, ಅನುಮಾನವಿಲ್ಲ… ನೀನು ಯೋಚನೆ ಮಾಡಿ ಒಂದು ತೀರ್ಮಾನಕ್ಕೆ ಬರೋದಕ್ಕೆ ಸಮಯ ಇದೆ…’
‘ಹುರ್ರಾ!’ ಸಂತೋಷದಿಂದ ಚೀರಿದ ರಝುಮಿಖಿನ್. ‘ಸ್ವಲ್ಪ ತಾಳಿ, ಇದೇ ಬಿಲ್ಡಿಂಗಿನಲ್ಲಿ ಒಂದು ಅಪಾರ್ಟ್‍ಮೆಂಟಿದೆ. ಇದೇ ಓನರ್ ಗೆ ಸೇರಿದ್ದು. ವಸತಿಗೃಹಕ್ಕೂ ಅದಕ್ಕೂ ಸಂಬಂಧ ಇಲ್ಲ. ಮೂರು ರೂಮು, ಎಲ್ಲ ಸಜ್ಜಾಗಿವೆ, ಅದನ್ನ ಮೊದಲು ಬಾಡಿಗೆಗೆ ಹಿಡಿಯೋಣ. ನಾಳೆ ಗಡಿಯಾರ ಗಿರವಿ ಇಟ್ಟು ದುಡ್ಡು ತರತೇನೆ. ಆಮೇಲೆ, ಎಲ್ಲ ವ್ಯವಸ್ಥೆ ಆಗತ್ತೆ. ಮುಖ್ಯ ಏನಪ್ಪ ಅಂದರೆ ನೀವು ಮೂರು ಜನವೂ ಒಟ್ಟಿಗೆ ಇರಬಹುದು. ರೋದ್ಯಾ… ಏನು ಹೊರಟುಬಿಟ್ಟೆ? ಯಾಕೆ ರೋದ್ಯಾ?’
‘ಆಗಲೇ ಹೊರಟೆಯಾ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕೇಳಿದಳು, ದನಿಯಲ್ಲಿ ಭಯವಿತ್ತು.
‘ಅದೂ ಇಂಥ ಹೊತ್ತಿನಲ್ಲಿ!’ ರಝುಮಿಖಿನ್ ಉದ್ಗಾರ ತೆಗೆದ.
ದುನ್ಯಾ ಅಣ್ಣನನ್ನು ನೋಡಿದಳು. ಅವಳ ನೋಟದಲ್ಲಿ ‘ನಂಬಲಾಗದು ಇದನ್ನ!’ ಅನ್ನುವಂಥ ಆಶ್ಚರ್ಯವಿತ್ತು. ಅವನು ಕ್ಯಾಪು ಕೈಯಲ್ಲಿ ಹಿಡಿದಿದ್ದ. ಹೊರಡಲು ಸಿದ್ಧವಾಗಿದ್ದ.
‘ನನಗೆ ಶಾಶ್ವತವಾಗಿ ಗುಡ್ ಬೈ ಹೇಳೋದಕ್ಕೋ ಸಮಾಧಿ ಕಟ್ಟುವುದಕ್ಕೋ ಸಿದ್ಧವಾದವರ ಥರ ಮಾತಾಡತಿದೀರಲ್ಲ,’ ಅಂದ ವಿಚಿತ್ರವಾಗಿ. ನಕ್ಕ. ಅದು ನಗುವಿನ ಹಾಗೆ ಇತ್ತೇ ಹೊರತು ನಿಜವಾದ ನಗುವಲ್ಲ.
‘ಯಾರಿಗ್ಗೊತ್ತು, ನಾವು ಒಬ್ಬರನ್ನೊಬ್ಬರು ನೋಡತಾ ಇರೋದು ಇದೇ ಕೊನೇ ಸಲ ಇರಬಹುದು,’ ಬಾಯಿತಪ್ಪಿ ಅಂದುಬಿಟ್ಟ ರಾಸ್ಕೋಲ್ನಿಕೋವ್.
ಅವನ ಮನಸಿನಲ್ಲಿದ್ದ ಯೋಚನೆ ಹೇಗೋ ಮಾತಾಗಿ ಹೊರಬಂದಿತ್ತು.
‘ಏನಾಗಿದೆ ನಿನಗೆ?’ ಅಮ್ಮ ಜೋರಾಗಿ ಕೇಳಿದಳು.
‘ಯಾಕೆ ಹೊರಟೆ, ರೋದ್ಯಾ?’ ದುನ್ಯಾ ವಿಚಿತ್ರವಾಗಿ ಕೇಳಿದಳು.
‘ಹೋಗಲೇಬೇಕು, ನಾನು,’ ಏನು ಹೇಳಬೇಕು ಗೊತ್ತಿಲ್ಲವೇನೋ ಅನ್ನುವ ಹಾಗೆ, ಹಿಂಜರಿಯುತ್ತಿರುವವನ ಹಾಗೆ, ಹೋಗಲು ಇಷ್ಟವಿಲ್ಲದವನ ಹಾಗೆ ಅಸ್ಪಷ್ಟವಾಗಿ ಹೇಳಿದ. ಆದರೂ ಅವನ ಬಿಳಚಿದ ಮುಖದಲ್ಲಿ ಗಟ್ಟಿಯಾದ ನಿರ್ಧಾರವಿತ್ತು.
‘ಹೇಳಬೇಕು ಅಂತಿದ್ದೆ… ಇಲ್ಲಿಗೆ ಬರತಿರೋವಾಗ… ಅಮ್ಮಾ ನಿನಗೆ ಹೇಳಬೇಕು, ದುನ್ಯಾ ನಿನಗೂ ಹೇಳಬೇಕು… ಅಂತಲೇ ಇದ್ದೆ… ನಾವು ಸ್ವಲ್ಪ ದಿನ ದೂರ ದೂರ ಇದ್ದರೆ ಒಳ್ಳೆಯದು, ನನಗೆ ಹುಷಾರಿಲ್ಲ, ಮನಸಿಗೂ ಸಮಾಧಾನ ಇಲ್ಲ… ನಾನೇ ಆಮೇಲೆ ಬರತೇನೆ… ನನ್ನ ಕೈಲಾದಾಗ, ನಿಮ್ಮ ಜ್ಞಾಪಕ ಬಂದಾಗ, ನೀವೆಲ್ಲ ನನಗೆ ತುಂಬ ಇಷ್ಟ… ಬಿಟ್ಟು ಬಿಡಿ ನನ್ನ! ನನ್ನ ಒಬ್ಬನ್ನೇ ಬಿಟ್ಟುಬಿಡಿ! ಮೊದಲೇ ಈ ತೀರ್ಮಾನ ಮಾಡಿದ್ದೆ, ನಿಜವಾಗಲೂ… ನನಗೇನಾದರೂ ಆಗಲಿ, ನಾನು ಹಾಳಾಗತೇನೋ ಏನಾಗತೇನೋ, ನಾನು ಒಬ್ಬನೇ ಇರಬೇಕು. ನನ್ನ ಪೂರ್ತಿ ಮರೆತುಬಿಡಿ. ಅದೇ ಒಳ್ಳೆಯದು… ನನ್ನ ಏನೂ ಕೇಳಬೇಡಿ. ಬೇಕಾದಾಗ ನಾನೇ ಬರತೇನೆ… ಅಥವಾ ನಿಮಗೆ ಹೇಳಿಕಳಿಸತೇನೆ. ಎಲ್ಲಾದಕ್ಕೂ ಮತ್ತೆ ಜೀವ ಬಂದರೂ ಬರಹಬಹುದು!… ನಿಮಗೆ ನನ್ನ ಮೇಲೆ ಪ್ರೀತಿ ಇದ್ದರೆ, ಸಧ್ಯಕ್ಕೆ ನನ್ನ ಮಾತು ಒಪ್ಪಿಕೊಳ್ಳಿ… ಇಲ್ಲದಿದ್ದರೆ, ನಿಮ್ಮ ಮೇಲೆ ನನಗೆ ದ್ವೇಷ ಹುಟ್ಟತ್ತೆ… ಗುಡ್ ಬೈ!’
‘ದೇವರೇ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
ಅಮ್ಮ, ತಂಗಿ ಇಬ್ಬರಿಗೂ ಬಹಳ ಭಯವಾಯಿತು. ರಝುಮಿಖಿನ್ ಗೂ ಅಷ್ಟೆ.
‘ರೋದ್ಯಾ, ರೋದ್ಯಾ! ಬೇಡಪ್ಪಾ! ನಮ್ಮ ಜೊತೆ ಇರಪ್ಪಾ, ಮೊದಲು ಇದ್ದೆಯಲ್ಲಾ ಹಾಗೇನೇ…’ ತಾಯಿ ಕೋರಿಕೊಂಡಳು.
ಅವನು ನಿಧಾನವಾಗಿ ತಿರುಗಿದ, ನಿಧಾನವಾಗಿ ರೂಮಿನಿಂದಾಚೆಗೆ ನಡೆದ. ದುನ್ಯಾ ಓಡಿ ಹೋಗಿ ಅವನ ಮುಂದೆ ನಿಂತಳು.
‘ಅಣ್ಣಾ, ಏನು ಮಾಡತಿದ್ದೀಯಾ, ಅಮ್ಮನ ಗತಿ ನೋಡು! ನಿನ್ನಿಂದ ಅಮ್ಮನ ಗತಿ ಏನಾಯಿತು ನೋಡು!’ ಅವಳ ಕಣ್ಣು ಸಿಟ್ಟಿನಲ್ಲಿ ಉರಿಯುತ್ತಿದ್ದವು.
ಅವಳನ್ನೆ ನೋಡಿದ, ಅವನ ಕಣ್ಣಲ್ಲಿ ದುಃಖವಿತ್ತು.
‘ಸರಿ, ಸರಿ, ವಾಪಸು ಬರತೇನೆ, ಬರತೇನೆ, ಬಂದೆ!’ ಗೊಣಗಿದ… ಏನು ಹೇಳುತ್ತಿದ್ದನೋ ಅವನಿಗೇ ಗೊತ್ತಿಲ್ಲ ಅನ್ನುವ ಹಾಗೆ.
‘ಕಲ್ಲು ಮನಸ್ಸು, ದುರಹಂಕಾರ, ಕೊಬ್ಬು!’ ಜೋರಾಗಿ ಅಂದಳು ದುನ್ಯಾ.
‘ಕಲ್ಲು ಮನಸಿನವಲ್ಲ, ಅವನಿಗೆ ಹುಚ್ಚು, ಅಷ್ಟೇ. ಅವನ ತಲೆ ಸರಿ ಇಲ್ಲ ಅಂತ ಗೊತ್ತಾಗದಿದ್ದರೆ ನಿಮ್ಮದು ಕಲ್ಲು ಮನಸ್ಸು, ಅಷ್ಟೆ,’ ರಝುಮಿಖಿನ್ ಅವಳ ಭುಜದ ಹಿಂದಿನಿಂದ ಪಿಸುಮಾತಿನಲ್ಲಿ ಹೇಳಿದ. ‘ಇಗೋ, ಈಗ ಬಂದೆ,’ ಎಂದು ಮರಗಟ್ಟಿದಂತಿದ್ದ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಗೆ ಹೇಳಿ, ರೂಮಿನಿಂದಾಚೆಗೆ ಓಡಿದ.’
ರಾಸ್ಕೋಲ್ನಿಕೋವ್ ಹಜಾರದ ತುದಿಯಲ್ಲಿ ಅವನಿಗಾಗಿ ಕಾಯುತ್ತ ನಿಂತಿದ್ದ.
‘ನೀನು ಬರುತ್ತೀಯ ಅಂತ ಗೊತ್ತಿತ್ತು. ಹೋಗು, ಅವರ ಜೊತೆ ಇರು, ಅವರ ಜೊತೆ ಇರು, ನಾಳೆನೂ, ಯಾವಾಗಲೂ ಅವರ ಜೊತೇನೇ ಇರು..ನಾನು ಬಂದರೂ ಬರತೇನೆ… ಬರದೆ ಇದ್ದರೆ, ಗುಡ್ ಬೈ!’
ಅವನ ಕೈ ಕುಲುಕದೆ ಹಾಗೇ ಹೆಜ್ಜೆ ಹಾಕಿದ. ‘ಎಲ್ಲಿಗೆ ಹೋಗತಾ ಇದೀಯ? ಯಾಕೆ? ಏನಾಗಿದೆ ನಿನಗೆ? ಹೀಗೆಲ್ಲ ಮಾಡೋಹಾಗಿಲ್ಲ!’ ಎಂದು ರಝುಮಿಖಿನ್ ಗೊಣಗುತ್ತಲೇ ಇದ್ದ. ಅವನಿಗೆ ದಿಕ್ಕು ತೋಚದಂತಾಗಿತ್ತು.
ರಾಸ್ಕೋಲ್ನಿಕೋವ್ ಮತ್ತೆ ನಿಂತ.
‘ನನ್ನ ಬಗ್ಗೆ ಇನ್ನೇನೂ ಇನ್ನು ಯಾವತ್ತೂ ಕೇಳಬೇಡ. ನಿನ್ನ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ. ನನ್ನ ಹುಡುಕಿಕೊಂಡು ಬರಬೇಡ. ನಾನೇ ಬೇಕಾದರೆ ಬರತೇನೆ. ನನ್ನ ಪಾಡಿಗೆ ನನ್ನ ಬಿಟ್ಟು ಬಿಡು. ಅವರನ್ನ ಮಾತ್ರ ಬಿಡಬೇಡ. ಅರ್ಥ ಆಯಿತಲ್ಲವಾ?’
ಹಜಾರದಲ್ಲಿ ಕತ್ತಲಿತ್ತು. ಅವರು ನಿಂತಿದ್ದಲ್ಲಿ ಸ್ವಲ್ಪ ಬೆಳಕಿತ್ತು. ಒಂದು ನಿಮಿಷ ಇಬ್ಬರೂ ಮೌನವಾಗಿ ಒಬ್ಬರನ್ನೊಬ್ಬರು ನೋಡಿದರು. ಆ ಒಂದು ನಿಮಿಷ ರಝುಮಿಖಿನ್ ನ ಬದುಕಿನಲ್ಲಿ ಸದಾ ನೆನಪಿರುವಂಥದ್ದು. ರಾಸ್ಕೋಲ್ನಿಕೋವ್ ನ ನೆಟ್ಟ ನೋಟದ, ಸುಡುವ ನೋಟದ ಉರಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು, ಅವನ ಆತ್ಮವನ್ನು, ಪ್ರಜ್ಞೆಯನ್ನು ಸುಡುತ್ತಿತ್ತು. ಇದ್ದಕಿದ್ದ ಹಾಗೆ ರಝುಮಿಖಿನ್ ಮೆಟ್ಟಿಬಿದ್ದ. ವಿಚಿತ್ರವಾದದ್ದೇನೋ ಅವರಿಬ್ಬರ ನಡುವೆ ಹರಿದಾಡಿದಂತಾಯಿತು… ಯಾವುದೋ ಭಯಂಕರ, ವಿಕೃತ ಐಡಿಯ ಇಬ್ಬರನ್ನೂ ಸೋಂಕಿ ತಟ್ಟನೆ ಇಬ್ಬರಿಗೂ ಅರ್ಥವಾದಂತೆ ಅನಿಸಿತು. ರಝುಮಿಖಿನ್ ಹೆಣದ ಹಾಗೆ ಬಿಳಿಚಿಕೊಂಡ.
‘ನಿನಗೆ ಈಗ ಅರ್ಥವಾಯಿತೇನು?’ ರಾಸ್ಕೋಲ್ನಿಕೋವ್ ತಟ್ಟನೆ ಕೇಳಿದ. ಅವನ ಮೈ ಮನಸ್ಸು ಎಲ್ಲ ನೋವಿನಲ್ಲಿ ನುಲಿದುಕೊಂಡಿತ್ತು.
‘ವಾಪಸ್ಸು ಹೋಗು, ಅವರ ಹತ್ತಿರ,’ ಅಂದ. ತಟ್ಟನೆ ತಿರುಗಿ ಮನೆಯಿಂದಾಚೆಗೆ ನಡೆದ.
ಅಂದು ಸಂಜೆ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಕೋಣೆಯಲ್ಲಿ ಏನು ನಡೆಯಿತೆಂದು ಈಗ ವಿವರಿಸುವುದಿಲ್ಲ. ರಝುಮಿಖಿನ್ ಹೇಗೆ ಅವರ ಹತ್ತಿರ ಹೋದ, ಅವರಿಗೆ ಹೇಗೆ ಸಮಾಧಾನ ಮಾಡಿದ, ರಾಸ್ಕೋಲ್ನಿಕೋವ್ ನನ್ನು ಈ ಕಾಯಿಲೆಯಲ್ಲಿ ಒಬ್ಬನೇ ವಿರಾಮವಾಗಿ ಇರುವುದಕ್ಕೆ ಬಿಡುವುದು ಎಷ್ಟು ಮುಖ್ಯ ಎಂದು ಹೇಗೆ ಹೇಳಿದ, ಅವರನ್ನು ನೋಡುವುದಕ್ಕೆ ದಿನವೂ ಬಂದೇ ಬರುತ್ತೇನೆ ಎಂದು ಹೇಗೆಲ್ಲ ಆಣೆಮಾಡಿದ, ಅವನ ಮನಸು ಬಹಳ ಬಹಳ ಕೆಟ್ಟಿದೆ ಅವನನ್ನು ಕೆರಳಿಸಬಾರದು ಎಂದು ಹೇಗೆ ಅವರನ್ನ ಒಪ್ಪಿಸಿದ, ತಾನು ಅವನ ಮೇಲೆ ಹೇಗೆ ಕಣ್ಣಿಟ್ಟಿರುತ್ತೇನೆ, ಒಬ್ಬ ಡಾಕ್ಟರನ್ನ, ತುಂಬ ಒಳ್ಳೆಯ, ಅತ್ಯುತ್ತಮ ಡಾಕ್ಟರನ್ನ ಹುಡುಕಿ ಅವನನ್ನ ತೋರಿಸುತ್ತೇನೆ ಅಂದ… ಅದೆಲ್ಲ ಬೇಡ. ಸ್ವಲ್ಪದರಲ್ಲಿ ಹೇಳಬೇಕೆಂದರೆ ಅವತ್ತು ಸಂಜೆಯಿಂದ ರಝುಮಿಖಿನ್ ಅವರ ಮಗನೂ ಅಣ್ಣನೂ ಆದ.
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.