ಈ ಎಲ್ಲ ಮಾತು ರಾಸ್ಕೋಲ್ನಿಕೋವ್‌ನನ್ನು ತಡೆದು ನಿಲ್ಲಿಸಿದವು. ಅವನ ನಾಲಗೆ ತುದಿಗೆ ಬಂದಿದ್ದ, ‘ನಾನು ಕೊಲೆಮಾಡಿದೆ,’ ಅನ್ನುವ ಮಾತು ಅಲ್ಲೇ ಹೆಪ್ಪುಗಟ್ಟಿತು. ಈ ಎಲ್ಲ ಉದ್ಗಾರ ಶಾಂತವಾಗಿ ಕೇಳಿಸಿಕೊಂಡ. ಹಿಂದೆ ತಿರುಗಿ ನೋಡದೆ ಪೋಲೀಸು ಸ್ಟೇಷನ್ನಿನ ರಸ್ತೆಯಲ್ಲಿ ನಡೆದ. ದಾರಿಯಲ್ಲಿ ಅವನ ಮುಂದೆಯೇ ಯಾವುದೋ ನೆರಳು ಹಾದು ಹೋದ ಹಾಗೆ ಅನ್ನಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಅವನು ಊಹಿಸಿದಂತಿತ್ತು. ಹೇಮಾರ್ಕೆಟ್ಟಿನಲ್ಲಿ ಎರಡನೆಯ ಬಾರಿ ಇಡೀ ಲೋಕಕ್ಕೆ ನಮಸ್ಕಾರ ಮಾಡಿದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಆರು: ಎಂಟನೆಯ ಅಧ್ಯಾಯ

ಸೋನ್ಯಾಳ ಮನೆಗೆ ಅವನು ಬಂದಾಗ ಮುಸ್ಸಂಜೆಯಾಗಿ ಕತ್ತಲಿಳಿಯುತ್ತಿತ್ತು. ಅವನಿಗಾಗಿ ಇಡೀ ದಿನ ಕಳವಳಪಡುತ್ತ ಕಾದಿದ್ದಳು ಸೋನ್ಯಾ. ದುನ್ಯಾಳ ಜೊತೆಯಲ್ಲಿ ಅವಳೂ ಕಾದಿದ್ದಳು. ಸೋನ್ಯಾಗೆ ‘ಅದು ಗೊತ್ತು’ ಎಂದು ಸ್ವಿದ್ರಿಗೈಲೋವ್ ಹಿಂದಿನ ದಿನ ಹೇಳಿದ ಮಾತನ್ನು ಕೇಳಿದ ದುನ್ಯಾ ಅವಳನ್ನು ಕಾಣಲು ಬೆಳಗ್ಗೆಯೇ ಬಂದಿದ್ದಳು. ಆ ಇಬ್ಬರು ಹೆಂಗಸರ ಮಾತು ಕಣ್ಣೀರುಗಳ ವಿವರವನ್ನು, ಅಥವಾ ಅವರ ಮಧ್ಯೆ ಆಪ್ತ ಸ್ನೇಹ ಬೆಳೆದ ವಿವರವನ್ನು ನಾವು ಹೇಳುವುದಿಲ್ಲ. ಈ ಸಂಭಾಷಣೆಯಿಂದ ದುನ್ಯಾಗೆ ಒಂದು ಸಮಾಧಾನವಂತೂ ಆಯಿತು. ತನ್ನಣ್ಣ ಒಂಟಿಯಾಗಿ ಇರುವುದಿಲ್ಲ, ಅವನು ಮೊದಲು ಸೋನ್ಯಾ ಹತ್ತಿರ ಹೋಗಿ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ, ಮನಷ್ಯರ ಸಹವಾಸ ಬೇಕಾಗಿದ್ದಾಗ ಅವಳಲ್ಲಿ ಮನುಷ್ಯ ಹೃದಯ ಕಂಡಿದ್ದಾನೆ, ವಿಧಿ ಅವನನ್ನು ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ಅವಳೂ ಹೋಗುತ್ತಾಳೆ. ಇದನ್ನೆಲ್ಲ ಬಾಯಿ ಬಿಟ್ಟು ಹೇಳಿರದಿದ್ದರೂ ತಿಳಿದು ಬಂದಿತ್ತು. ಸೋನ್ಯಾಳ ಬಗ್ಗೆ ಅವಳಲ್ಲಿ ಗೌರವ ಹುಟ್ಟಿತು. ಆ ಗೌರವ ಕಂಡು ಸೋನ್ಯಾಗೆ ಮುಜುಗರವಾಗಿ, ಇನ್ನೇನು ಅಳುವುದರಲ್ಲಿದ್ದಳು. ತಾನು ಅಯೋಗ್ಯಳು, ದುನ್ಯಾಳ ಕಡೆಗಣ್ಣ ನೋಟಕ್ಕೂ ಅರ್ಹಳಲ್ಲ ಎಂದು ಭಾವಿಸಿದ್ದಳು ಸೋನ್ಯಾ. ಅವತ್ತು ರಾಸ್ಕೋಲ್ನಿಕೋವ್ ಮನೆಯಲ್ಲಿ ದುನ್ಯಾ ಗೌರವಪೂರ್ವಕವಾಗಿ ವಂದಿಸಿದ ಚಿತ್ರ ಸೋನ್ಯಾಳ ಮನಸಿನಲ್ಲಿ ಅತ್ಯಂತ ಚೆಲುವಾದ, ಎಂದೆಂದೂ ತನ್ನ ಕೈಗೆಟುಕದ ಆದರ್ಶದ ಚಿತ್ರವಾಗಿ ಉಳಿದಿತ್ತು.

ಕೊನೆಗೆ ದುನ್ಯಾ ಮನಸಿನ ಒತ್ತಡ ಸಹಿಸಲಾಗದೆ ತಾನು ಅಣ್ಣನ ರೂಮಿಗೇ ಹೋಗಿ ಕಾಯುತ್ತೇನೆಂದು ಹೇಳಿ ಹೊರಟು ಹೋದಳು. ಅವನು ಮೊದಲು ತನ್ನ ರೂಮಿಗೇ ಬಂದಾನು ಅಂದುಕೊಳ್ಳುತ್ತಿದ್ದಳು. ಒಬ್ಬಳೇ ಆದಾಗ ಸೋನ್ಯಾ ಭಯಪಡುವುದಕ್ಕೆ ಶುರು ಮಾಡಿದಳು. ಅವನು ಆತ್ಮಹತ್ಯೆ ಮಾಡಿಕೊಂಡರೆ ಎಂದು ಕಳವಳಪಟ್ಟಳು. ದುನ್ಯಾಗೂ ಅದೇ ಭಯ ಇತ್ತು. ಯಾಕೆ ಹಾಗಾಗಲಾರದೆಂದು ಎಲ್ಲ ಬಗೆಯ ಕಾರಣ ಕೊಟ್ಟುಕೊಂಡು ಇಡೀ ದಿನ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡಿದ್ದರು. ಹಾಗಾಗಿ ಇಬ್ಬರೂ ಒಟ್ಟಿಗೆ ಇದ್ದಾಗ ಸಮಾಧಾನವಾಗಿದ್ದರು. ಬೇರೆ ಬೇರೆಯಾದ ತಕ್ಷಣ ಅದೇ ಯೋಚನೆ ಇಬ್ಬರನ್ನೂ ಕಾಡುವುದಕ್ಕೆ ಶುರು ಮಾಡಿತು. ರಾಸ್ಕೋಲ್ನಿಕೋವ್‌ಗೆ ಎರಡು ದಾರಿ ಇವೆ—ಸೈಬೀರಿಯಾ ಅಥವಾ… ಎಂದು ಹಿಂದಿನ ದಿನ ಸ್ವಿದ್ರಿಗೈಲೋವ್ ಹೇಳಿದ್ದು ಸೋನ್ಯಾಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಲ್ಲದೆ ಅವನ ಜಂಬ, ಉದ್ಧಟತನ, ಆತ್ಮಾಭಿಮಾನ, ನಾಸ್ತಿಕತೆಗಳೂ ಅವಳಿಗೆ ತಿಳಿದಿದ್ದವು. ‘ಅವನ ಮನಸ್ಸು ವೀಕು, ಸಾವಿನ ಭಯ ಅವನನ್ನ ಬದುಕಿರುವ ಹಾಗೆ ಮಾಡುತ್ತವೋ?’ ಅನ್ನುವ ಯೋಚನೆ ಅವಳಿಗೆ ಬರುತ್ತಿತ್ತು. ಸೂರ್ಯ ಮುಳುಗುತ್ತಿದ್ದ. ಅವಳು ದುಃಖಪಡುತ್ತ ಕಿಟಕಿಯ ಪಕ್ಕದಲ್ಲಿ ನಿಂತು ನೋಡುತ್ತಿದ್ದಳು. ಪಕ್ಕದ ಮನೆಯ ಬಣ್ಣ ಬಳಿದಿರದ ಗೋಡೆಯನ್ನು ಮಾತ್ರ ಆ ಕಿಟಕಿಯಿಂದ ನೋಡಬಹುದಾಗಿತ್ತು. ಕೊನೆಗೆ ದುರದೃಷ್ಟವಂತ ರಾಸ್ಕೋಲ್ನಿಕೋವ್ ಸತ್ತುಹೋಗಿರಬೇಕು ಅನ್ನುವ ತೀರ್ಮಾನಕ್ಕೆ ಅವಳು ತಲುಪುವ ಹೊತ್ತಿಗೆ ಅವನು ರೂಮಿನೊಳಕ್ಕೆ ಬಂದಿದ್ದ.

ಅವನನ್ನು ನೋಡಿ ಸಂತೋಷದ ಚೀರು ಅವಳೆದೆಯಿಂದ ಹೊಮ್ಮಿತು. ಅವನ ಮುಖವನ್ನು ಗಮನವಿಟ್ಟು ನೋಡುತ್ತಿದ್ದ ಹಾಗೆ ತಟ್ಟನೆ ಅವಳ ಮುಖ ಬಣ್ಣಗೆಟ್ಟಿತು.

ರಾಸ್ಕೋಲ್ನಿಕೋವ್ ನಗುತ್ತ ಹೇಳಿದ—‘ಸರಿ, ನೀನು ಕೊಡುವ ಶಿಲುಬೆ ತಗೊಳ್ಳುವುದಕ್ಕೆ ಬಂದಿದೇನೆ. ನನ್ನನ್ನ ಮೂರು ಬೀದಿ ಸೇರುವಲ್ಲಿಗೆ ಕಳಿಸುತ್ತಿರುವವಳು ನೀನೇ ಅಲ್ಲವಾ? ಈಗ ಕೆಲಸ ಮಾಡಿ ತೋರುವ ಹೊತ್ತು ಬಂದಿರುವಾಗ ಹೇಡಿಯ ಹಾಗೆ ಹಿಂಜರಿಯುವುದು ಯಾಕೆ?’
ಆಶ್ಚರ್ಯಪಡುತ್ತ ನೋಡಿದಳು ಸೋನ್ಯಾ. ಅವನ ದನಿ ವಿಚಿತ್ರವಾಗಿ ಕೇಳುತ್ತಿತ್ತು. ಅವಳ ಇಡೀ ಮೈ ಥಣ್ಣಗಾಗಿ ಕಂಪಿಸಿತು. ಒಂದು ಕ್ಷಣ ಕಳೆಯುತ್ತಿದ್ದ ಹಾಗೆ ಅವನ ದನಿ, ಅವನ ಮಾತು ಎರಡೂ ತೋರಿಕೆಯವು ಅನ್ನುವುದು ಅರಿವಾಯಿತು. ಅವಳ ಜೊತೆಯಲ್ಲಿ ಮಾತಾಡುತ್ತಿದ್ದರೂ ಅವನ ನೋಟ ಮಾತ್ರ ಅವಳ ಮೇಲಿರದೆ ಎಲ್ಲೋ ಮೂಲೆಯನ್ನು ದಿಟ್ಟಿಸುತ್ತಿತ್ತು.

‘ನೋಡು, ಸೋನ್ಯಾ, ಹೀಗೆ ಮಾಡಿದರೆ ನನಗೇ ಲಾಭ. ಪರಿಸ್ಥಿತಿ ಏನೆಂದರೆ… ಸರಿ, ಬಿಡು. ಅದು ದೊಡ್ಡ ಕಥೆ. ಹೇಳಿ ಉಪಯೋಗವಿಲ್ಲ. ನನಗೆ ಹುಚ್ಚು ಹಿಡಿಯುವ ಹಾಗೆ ಮಾಡೋದು ಏನು ಗೊತ್ತಲ್ಲಾ ನಿನಗೆ? ಪ್ರಾಣಿಗಳಂಥ ಮೂರ್ಖ ಆಸಾಮಿಗಳು ನನ್ನ ಸುತ್ತ ನಿಂತು ಕಣ್ಣು ಗುಡ್ಡೆ ಕಿತ್ತು ಬೀಳತ್ತೆ ಅನ್ನುವ ಹಾಗೆ ದಿಟ್ಟಿಸುತ್ತ, ಪೆದ್ದ ಪ್ರಶ್ನೆಗಳನ್ನ ಕೇಳತಾರಲ್ಲ, ನನ್ನತ್ತ ಬೆರಳು ತೋರುತ್ತಾರಲ್ಲ, ನಾನು ಉತ್ತರ ಹೇಳಬೇಕಲ್ಲ… ಥೂ! ನಾನು ಪೋರ್ಫಿರಿ ಹತ್ತಿರ ಹೋಗತಾ ಇಲ್ಲ. ಅವನನ್ನ ನೋಡಿ ನೋಡಿ ಸಾಕಾಗಿ ಹೋಗಿದೆ. ನನ್ನ ಸ್ನೇಹಿತ ಇದಾನಲ್ಲ, ‘ಗನ್‌ಪೌಡರ್’ ಅವನ ಹತ್ತಿರ ಹೋಗುವುದು ವಾಸಿ. ಕೊನೆಯ ಪಕ್ಷ ಅವನಿಗೆ ಆಶ್ಚರ್ಯ ಆಗತ್ತೆ, ಒಂದು ಥರಾ ಪರಿಣಾಮ ಆಗತ್ತೆ! ನಾನು ರೇಗದೆ ಥಣ್ಣಗಿರಬೇಕು. ಇತ್ತೀಚೆಗೆ ಬಹಳ ಬೇಗ ಸಿಟ್ಟು ಬರತ್ತೆ. ನಂಬತೀಯಾ? ಹೋಗೋದಕ್ಕೆ ಮೊದಲು ಕೊನೆಯ ಸಾರಿ ನನ್ನ ಕಡೆ ತಿರುಗಿ ನೋಡಿದಳು ಅಂತ ತಂಗಿಯನ್ನ ಹೊಡೆಯುವ ಹಾಗೆ ಕೈ ಎತ್ತಿದೆ. ನಾನು ಹಂದಿ ಥರ ಅನ್ನತಾರೆ ಹೀಗೆ ನಡಕೊಂಡರೆ! ಯಾವ ಗತಿಗೆ ಬಂದಿದೀನಿ ನೋಡು! ಸರಿ, ಶಿಲುಬೆ ಎಲ್ಲಿ?’

ಅವನಿಗೆ ಸ್ಥಿಮಿತ ಇರಲಿಲ್ಲ ಅನಿಸುತ್ತಿತ್ತು. ಒಂದು ನಿಮಿಷ ಕೂಡ ಒಂದೇ ಕಡೆ ನಿಲ್ಲುವುದಕ್ಕೆ ಆಗುತ್ತಿರಲಿಲ್ಲ. ಯಾವ ವಸ್ತುವನ್ನೂ ಗಮನವಿಟ್ಟು ನೋಡುವುದಕ್ಕೆ ಆಗುತ್ತಿರಲಿಲ್ಲ. ಅವನ ಮನಸು ಒಂದು ಯೋಚನೆಯಿಂದ ಇನ್ನೊಂದಕ್ಕೆ ಕುಪ್ಪಳಿಸುತ್ತಿತ್ತು. ಕೈ ನಡುಗುತ್ತಿದ್ದವು.
ಸೋನ್ಯಾ ಡ್ರಾ ನಿಂದ ಎರಡು ಶಿಲುಬೆಗಳನ್ನು ತೆಗೆದಳು, ಒಂದು ಸೈಪ್ರಸ್ ಶಿಲುಬೆ, ಇನ್ನೊಂದು ತಾಮ್ರದ್ದು. ತನ್ನ ಮೇಲೆ ತಾನು ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡು, ಅವನಿಗೂ ಕ್ರಾಸ್ ಮಾಡಿ ಸೈಪ್ರಸ್ ಶಿಲುಬೆಯನ್ನು ಅವನ ಕೊರಳಿಗೆ ಹಾಕಿದಳು.

‘ಇದು ನನ್ನ ಶಿಲುಬೆ ನಾನೇ ಹೊರುವುದರ ಸಂಕೇತ, ಹ್ಹೆಹ್ಹೇ! ಹೌದಲ್ಲವಾ, ನಾನು ಸಫರ್ ಮಾಡಿದ್ದು ಸಾಕಾಗಿಲ್ಲ ಇನ್ನೂ! ಮರದ್ದು, ಸಾಮಾನ್ಯ ಜನರಿಗೆ, ರೈತರಿಗೆ; ತಾಮ್ರದ್ದು ಲಿಝವೆಟ ಹಾಕಿಕೊಳ್ಳತ ಇದ್ದದ್ದು ನಿನಗೆ—ತೋರಿಸು ನೋಡಣ? ಅದನ್ನ ಹಾಕಿಕೊಳ್ಳತಾ ಇದ್ದಳಾ… ಆವಾಗಲೂ ಇತ್ತಾ? ಇಂತಾದ್ದೇ ಎರಡು ಶಿಲುಬೆ ನೋಡಿದೇನೆ, ಒಂದು ಬೆಳ್ಳಿಯದು ಇನ್ನೊಂದು ಪುಟ್ಟ ವಿಗ್ರಹದ ಥರ. ಅವನ್ನ ಆ ಮುದುಕೀ ಎದೆ ಮೇಲೆ ಎಸೆದೆ. ನಾವು ಅವನ್ನ ಈಗ ಹಾಕಿಕೊಂಡಿದ್ದರೆ ಬಹಳ ಅರ್ಥ ಇರತಿತ್ತು…. ನಾನ್ಸೆನ್ಸ್. ನಿಜವಾಗಿ ಮಾಡಬೇಕಾದ ಕೆಲಸ ಮರೆತು ಏನೇನೋ ಮಾತಾಡತಾ ಇದೇನೆ. ತಲೆ ಕೆಟ್ಟಿದೆ. ನೋಡು, ಸೋನ್ಯಾ ಯಾಕೆ ಬಂದೆ ಅಂದರೆ, ನಿನಗೆ ಮೊದಲೇ ಹೇಳಿ ಹೋಗಣ ಅಂತ. ಅದೊಂದೇ ಕಾರಣ. (ಇಲ್ಲಿಗೆ ಬರುವಾಗ ಹೇಳುವುದಕ್ಕೆ ಬಹಳ ಇದೆ ಅಂದುಕೊಂಡಿದ್ದೆ). ಹೇಗಿದ್ದರೂ ನಾನು ಹೋಗಬೇಕು ಅಂತ ಮೊದಲು ಹೇಳಿದವಳು ನೀನೇ ಅಲ್ಲವಾ? ನಾನು ಜೈಲಿನಲ್ಲಿರತೇನೆ, ನಿನ್ನ ಆಸೆ ನೆರವೇರತ್ತೆ. ನೀನು ಯಾಕೆ ಅಳತಾ ಇದೀಯ? ಸಾಕು, ನಿಲ್ಲಿಸು! ನನಗೆ ಎಷ್ಟು ಕಷ್ಟ ಆಗತ್ತೆ, ಗೊತ್ತಾ!’

ಅವನೊಳಗೆ ಭಾವಗಳು ಜಾಗೃತವಾಗಿದ್ದವು. ಅವಳನ್ನು ನೋಡುತ್ತ ಅವನ ಎದೆ ಹಿಂಡಿದ ಹಾಗೆ ಅನಿಸಿತು. ‘ಇವಳು, ಈಕೆ, ಯಾಕೆ ಹೀಗೆ? ನಾನು ಅವಳಿಗೇನಾಗಬೇಕು? ಯಾಕೆ ಅಳತಾ ಇದಾಳೆ, ನಮ್ಮಮ್ಮನ ಥರ, ದುನ್ಯಾ ಥರ? ನನ್ನ ಸೇವೆ ಮಾಡಕ್ಕೆ ಬರತಾ ಇದಾಳೆ, ಆಸ್ಪತ್ರೆಯ ನರ್ಸ್ ಥರ…’

‘ದಿನಕ್ಕೆ ಒಂದು ಸಾರಿ ಪ್ರಾರ್ಥನೆ ಮಾಡು, ಕೊನೇ ಪಕ್ಷ. ಕ್ರಾಸ್ ಮಾಡಿಕೋ,’ ಯಾಚನೆಯ ದನಿಯಲ್ಲಿ ಹೇಳಿದಳು ಸೋನ್ಯಾ.

‘ಓಹ್ ಸರಿ. ನಿನ್ನಿಷ್ಟದ ಹಾಗೇ ಆಗಲಿ! ಪ್ರಾಮಾಣಿಕವಾಗಿ, ಮನಸ್ಸಿಟ್ಟು ಮಾಡತೇನೆ….’
ಅವನು ಬೇರೆ ಇನ್ನೇನೋ ಹೇಳಬೇಕು ಅಂದುಕೊಳ್ಳುತಿದ್ದ.

ಹಲವು ಬಾರಿ ಕ್ರಾಸ್ ಮಾಡಿಕೊಂಡ. ಸೋನ್ಯಾ ಶಾಲು ತಲೆಯ ಮೇಲೆ ಎಳೆದುಕೊಂಡಳು. ಹಸಿರು ಬಣ್ಣದ ಶಾಲು. ಮಾರ್ಮೆಲಡೋವ್ ಹೇಳಿದ್ದ ‘ಮನೆತನಕ್ಕೆ ಸೇರಿದ’ ಶಾಲು ಇದೇ ಇರಬಹುದು ಅನ್ನುವ ಯೋಚನೆ ರಾಸ್ಕೋಲ್ನಿಕೋವ್‌ಗೆ ಬಂದು ಹೋಯಿತು ಅದನ್ನ ಕೇಳಲಿಲ್ಲ. ಮನಸ್ಸು ಹುಚ್ಚು ಹುಚ್ಚಾಗಿ ಅಲೆಯುತ್ತಿದೆ, ನೋವು ಪಡುತ್ತಿದೆ ಅನ್ನಿಸಿತು. ಭಯಂಕರ ಹೆದರಿಕೆ ಅನಿಸಿತು. ಸೋನ್ಯಾ ಕೂಡ ತನ್ನ ಜೊತೆ ಬರಲು ಸಿದ್ಧವಾಗಿದ್ದಾಳೆ ಅನ್ನುವುದು ಅವನ ಮನಸಿಗೆ ಬಂದಿತು.

‘ಏನಿದು! ಎಲ್ಲಿಗೆ ಹೊರಟೆ? ಇರು, ಇಲ್ಲೇ ಇರು! ಒಬ್ಬನೇ ಹೋಗತೇನೆ! ಒಬ್ಬನೆ ಹೋಗತೇನೆ!’ ದುರ್ಬಲವಾದ ದನಿಯಲ್ಲಿ ಕೇಳಿದ. ಸಿಟ್ಟು ಮಾಡಿಕೊಂಡು ಬಾಗಿಲವರೆಗೂ ಹೋದ. ‘ಬೆನ್ನ ಹಿಂದೆ ಬಾಲದ ಥರ ಬರೋದು ಬೇಕಾಗಿಲ್ಲ,’ ಅಂತ ಗೊಣಗಿ ಹೊರಟ.
ಸೋನ್ಯಾ ಕೋಣೆಯ ಮಧ್ಯದಲ್ಲಿ ನಿಂತಿದ್ದಳು. ಅವನು ಗುಡ್‍ ಬೈ ಕೂಡ ಹೇಳದೆ ಹೊರಟು ಹೋಗಿದ್ದ. ಅವಳನ್ನ ಆಗಲೇ ಮರೆತಿದ್ದ. ಅವಳ ಮನಸಿನಲ್ಲಿ ಸಂಶಯ ದಂಗೆ ಎದ್ದಿತ್ತು, ಅವಳನ್ನು ಚುಚ್ಚಿ ಇರಿಯುತಿತ್ತು.

‘ಇದು ಸರಿಯೋ? ಅಷ್ಟೊಂದು, ಪೂರಾ ಸರಿಯೋ?’ ಮೆಟ್ಟಿಲಿಳಿಯುತ್ತ ಯೋಚನೆ ಮಾಡಿದ. ‘ಈಗ ತಡೆದು ನಿಂತು ಎಲ್ಲಾ ಮತ್ತೆ ಯೋಚನೆ ಮಾಡಿ ತೀರ್ಮಾನ ಬದಲಾಯಿಸಕ್ಕೆ, ಹೋಗದೆ ಇರಕ್ಕೆ ಆಗಲ್ಲವಾ?’

ಆದರೂ ಹೋಗುತ್ತಲೇ ಇದ್ದ. ಸುಮ್ಮನೆ ಪ್ರಶ್ನೆ ಕೇಳಿಕೊಂಡು ಇನ್ನು ಪ್ರಯೋಜನವಿಲ್ಲ ಅನ್ನಿಸಿಬಿಟ್ಟಿತು. ಬೀದಿಗೆ ಬಂದಾಗ, ಸೋನ್ಯಾಗೆ ಗುಡ್ ಬೈ ಹೇಳಲಿಲ್ಲ, ಅವಳು ಹಸಿರು ಶಾಲು ಹೊದ್ದಿದ್ದಳು, ಅವನು ಚೀರಾಡಿದ ಮೇಲೆ ಅಲುಗಾಡಲು ಧೈರ್ಯವಿರದೆ ರೂಮಿನ ಮಧ್ಯ ಸುಮ್ಮನೆ ನಿಂತಿದ್ದಳು ಅನ್ನುವುದು ನೆನಪಾಗಿ ಒಂದು ಕ್ಷಣ ನಿಂತ. ಅದೇ ಕ್ಷಣದಲ್ಲಿ ಉಜ್ವಲವಾದ ಯೋಚನೆಯೊಂದು ಹೊಳೆಯಿತು—ಅದು ಕೊನೆಗೂ ಅವನ ಮನಸಿನಲ್ಲಿ ಮಿಂಚಲು ಕಾದಿತ್ತೋ ಅನ್ನುವ ಹಾಗೆ.

‘ಅವಳ ಮನೆಗೆ ಈಗ ಹೋಗಿದ್ದು ಯಾಕೆ? ಏನು ಕೆಲಸವಿತ್ತು ನನಗೆ? ಏನೋ ಕೆಲಸ ಇದೆ ಅಂತ ಹೇಳಿದೆ. ಯಾವ ಕೆಲಸವೂ ಇರಲಿಲ್ಲ. ನಾನು ಹೋಗತಾ ಇದೇನೆ ಅಂತ ಹೇಳುವುದಕ್ಕಾ? ಅದರಿಂದೇನು, ಏನಾಗಬೇಕಾಗಿತ್ತು? ಅವಳ ಮೇಲೆ ನನಗೆ ಪ್ರೀತಿ ಇದೆಯಾ? ಇಲ್ಲವಾ? ಇದೆಯಾ? ಅವಳನ್ನ ನಾಯಿ ಥರ ಗದರಿಸಿ ಅಟ್ಟಲಿಲ್ಲವಾ? ನಿಜವಾಗಿ ಅವಳ ಹತ್ತಿರ ಶಿಲುಬೆ ಇಸಕೋ ಬೇಕಾಗಿತ್ತ. ಎಷ್ಟು ನೀಚ ನಾನು! ಇಲ್ಲ—ಅವಳ ಕಣ್ಣಲ್ಲಿ ನೀರು ಬರಿಸಬೇಕಾಗಿತ್ತು, ಅವಳು ಹೆದರುವುದು ನೋಡಬೇಕಾಗಿತ್ತು, ಅವಳು ನೊಂದು ಹಿಂಸೆಪಡುವುದನ್ನ ಕಾಣಬೇಕಾಗಿತ್ತು! ಹಿಡಿದುಕೊಳ್ಳುವುದಕ್ಕೆ ಹುಲ್ಲು ಕಡ್ಡಿಯಾದರೂ ಬೇಕಾಗಿತ್ತು, ತಡಮಾಡುವುದಕ್ಕೆ ಕಾರಣ ಬೇಕಾಗಿತ್ತು, ಮನುಷ್ಯ ಜೀವಿಯ ಜೊತೆ ಇರಬೇಕಾಗಿತ್ತು! ಅಯ್ಯೋ, ನನ್ನ ಬಗ್ಗೆ ನಾನೇ ಏನೆಲ್ಲ ಆಸೆ ಇಟ್ಟುಕೊಂಡಿದ್ದೆ, ಏನೆಲ್ಲ ಕನಸು ಕಂಡಿದ್ದೆ, ಈಗ ಅಯೋಗ್ಯ, ನೀಚ, ಸ್ಕೌಂಡ್ರಲ್ ಆಗಿಬಿಟ್ಟೆ!’

ಅವನೀಗ ಕೆನಾಲ್‍ ದಂಡೆಯ ಮೇಲೆ ನಡೆಯುತ್ತಿದ್ದ. ಇನ್ನು ಬಹಳ ದೂರ ಹೋಗಬೇಕಾಗಿರಲಿಲ್ಲ. ಸೇತುವೆಯ ಹತ್ತಿರ ಬಂದಾಗ ಒಂದು ಕ್ಷಣ ನಿಂತ, ಆಮೇಲೆ ತಟ್ಟನೆ ಸೇತುವೆ ದಾಟಿ, ಹೇಮಾರ್ಕೆಟ್ಟಿನ ದಿಕ್ಕಿಗೆ ನಡೆದ..

ಎಡಕ್ಕೂ ಬಲಕ್ಕೂ ಆಸೆಬುರುಕನ ಹಾಗೆ ನೋಡುತ್ತ ನಡೆದ. ಕಂಡಕಂಡದ್ದೆಲ್ಲವನ್ನು ಗಮನಿಸಿ ನೋಡಿದ. ಆದರೆ ಗಮನ ಮಾತ್ರ ಯಾವುದರ ಮೇಲೂ ನಿಲ್ಲುತ್ತಿರಲಿಲ್ಲ. ನೋಡಿದ್ದೆಲ್ಲವೂ ಹಾಗೇ ಜಾರಿ ಹೋಗುತ್ತಿತ್ತು. ‘ಇನ್ನೊಂದು ವಾರವೋ ತಿಂಗಳೋ ಅಷ್ಟೆ. ಈಗ ಸೇತುವೆ ಮೇಲೆ ಹೋಗುತ್ತಿವೆಯಲ್ಲ, ಜೈಲಿನ ವಾಹನಗಳು, ಅಂಥದ್ದರಲ್ಲಿ ನನ್ನನ್ನೂ ಎಲ್ಲಿಗೋ ಕರಕೊಂಡು ಹೋಗತಾರೆ. ಆವಾಗ ಕೆನಾಲು ನನಗೆ ಹೇಗೆ ಕಾಣತ್ತೆ? ಜ್ಞಾಪಕ ಇಟ್ಟುಕೊಂಡು ನೋಡಬೇಕು,’ ಅನ್ನುವ ಯೋಚನೆ ಬಂತು ಅವನಿಗೆ. ಈ ಬೋರ್ಡಿನ ಅಕ್ಷರಗಳನ್ನ ಹೇಗೆ ಓದತೇನೆ ಆವಾಗ? ಕಂಪಿನಿ ಅಂತ ಬರೆದಿದಾರೆ. ತಪ್ಪು ಬರೆದಿರುವ ಅಕ್ಷರ ಜ್ಞಾಪಕ ಇಟ್ಟುಕೊಂಡು ಇನ್ನೊಂದು ತಿಂಗಳ ನಂತರ ಅದೇ ಅಕ್ಷರ ನೋಡಬೇಕು, ಆವಾಗ ಹೇಗೆ ಕಾಣುತ್ತೋ? ಆವಾಗ ನನಗೆ ಏನು ಅನಿಸತಾ ಇರತ್ತೋ ಏನು ಯೋಚನೆ ಇರತ್ತೋ…? ದೇವರೇ, ಈ ಕ್ಷಣದ ನನ್ನ ಯೋಚನೆಗಳು ಎಷ್ಟು ಕ್ಷುಲ್ಲಕ! ಆದರೂ, ಇವೆಲ್ಲ ಒಂಥರ ಕುತೂಹಲ ಹುಟ್ಟಿಸುತವೆ…(ಹ್ಹ ಹ್ಹಾ! ಎಂಥಾ ಯೋಚನೆ!) ಜಂಬ ಕೊಚ್ಚುವ ಮಗು ಥರ ಆಗತಾ ಇದೇನೆ, ನಾಚಿಕೆ ಆಗಬೇಕು ನನಗೆ! ಥೂ, ಈ ಜನ ಯಾಕೆ ಹೀಗೆ ನುಗ್ಗಾಡತಾರೆ! ಈ ಡುಮ್ಮ—ಜರ್ಮನ್ ಇರಬೇಕು—ಹೇಗೆ ದಬ್ಬಿಕೊಂಡು ಹೋದ ನನ್ನ! ಇಗೋ, ಮಗು ಎತ್ತಿಕೊಂಡು ಭಿಕ್ಷೆ ಬೇಡತಾ ಇರುವ ಹೆಂಗಸು ಯಾಕೆ ನನ್ನನ್ನ ಅವಳಿಗಿಂತ ಅದೃಷ್ಟವಂತ ಅಂದುಕೊಂಡಿದಾಳಲ್ಲ! ಏನಾದರೂ ಕೊಡಬೇಕು ಅವಳಿಗೆ. ಹಾ, ಇಲ್ಲೊಂದು ಐದು ಕೊಪೆಕ್ ನಾಣ್ಯ ಇದೆ. ಹೇಗೋ ನನ್ನ ಜೇಬಲ್ಲಿ ಉಳಿದಿದೆ. ಹ್ಞೂಂ, ಹ್ಞೂಂ.. ತಗೋ… ಅಮ್ಮಾ!’

‘ದೇವರು ಕಾಪಾಡಲೀ ದಣೀ!’ ಅಳುದನಿಯಲ್ಲಿ ಹರಸಿದಳು ಭಿಕ್ಷುಕಿ.

ಹೇಮಾರ್ಕೆಟ್ಟಿನೊಳಕ್ಕೆ ಹೋದ. ಜನರನ್ನ ಕಂಡು ಅಸಹ್ಯ, ಬಹಳ ಅಸಹ್ಯವಾಗುತ್ತಿತ್ತು ಅವನಿಗೆ. ಆದರೂ ಜನ ಹೆಚ್ಚಾಗಿ ಎಲ್ಲಿರತಾರೋ ಅಲ್ಲಿಗೇ ಹೋಗತಿದ್ದ. ತನ್ನ ಪಾಡಿಗೆ ತಾನು ಇರುವುದಕ್ಕೆ ಆಗುವ ಹಾಗಿದ್ದರೆ ಆ ಕ್ಷಣದಲ್ಲಿ ಏನು ಬೇಕಾದರೂ ಕೊಡುತ್ತಿದ್ದ. ಒಂಟಿಯಾಗಿ ಒಂದೇ ಒಂದು ಕ್ಷಣವೂ ಇರಲಾರೆ ಅಂತಲೂ ಅನಿಸುತ್ತಿತ್ತು. ಕುಡುಕನೊಬ್ಬ ಜನಗಳ ಮಧ್ಯದಲ್ಲಿ ನಿಂತು ಆಟ ಕಟ್ಟುತ್ತಿದ್ದ. ಡಾನ್ಸು ಮಾಡಲು ಪ್ರಯತ್ನಪಡುತ್ತ ಆಯ ತಪ್ಪುತ್ತಿದ್ದ. ಜನ ಸುತ್ತಲೂ ನಿಂತು ನೋಡುತ್ತಿದ್ದರು. ರಾಸ್ಕೋಲ್ನಿಕೋವ್ ಜನದ ಗುಂಪಿನಲ್ಲಿ ನುಸುಳಿ ಹೋಗಿ ಕುಡುಕನ ಕುಣಿತವನ್ನು ಸ್ವಲ್ಪ ಹೊತ್ತು ನೋಡಿದ. ಇದ್ದಕಿದ್ದ ಹಾಗೆ ಗಹಗಹಿಸಿ ನಕ್ಕು ತಟ್ಟನೆ ಸುಮ್ಮನಾಗಿಬಿಟ್ಟ. ಮರುಕ್ಷಣದಲ್ಲೇ ಅವನನ್ನ ಮರೆತೂ ಬಿಟ್ಟ. ಕುಡುಕನನ್ನೇ ನೋಡುತ್ತಿದ್ದರೂ ಅವನು ಕಾಣುತ್ತಲೇ ಇರಲಿಲ್ಲ. ಕೊನೆಗೆ, ಮುಂದೆ ಸಾಗಿದ. ತಾನೆಲ್ಲಿದ್ದೇನೆ ಅನ್ನುವುದೂ ಮರೆತು ಹೋಗಿತ್ತು. ಚೌಕದ ಹತ್ತಿರ ಬಂದಾಗ ಮನಸಿನೊಳಗೆ ಏನೋ ಚಲನೆ, ಏನೋ ಸಂವೇದನೆ ತಟ್ಟನೆ ಅವನನ್ನು ಆವರಿಸಿತು, ಅವನ ಮನಸು, ದೇಹ ಎಲ್ಲವನ್ನೂ.

ಸೋನ್ಯಾ ಹೇಳಿದ್ದ ಮಾತು ತಟ್ಟನೆ ನೆನಪಾದವು. ರಸ್ತೆಗಳು ಸೇರುವ ಜಾಗಕ್ಕೆ ಹೋಗು. ಜನಗಳ ಮುಂದೆ ಮೊಳಕಾಲೂರಿ ಕೂತುಕೋ. ನೆಲಕ್ಕೆ ಮುತ್ತಿಡು. ಜನದ ಕಣ್ಣಲ್ಲಿ, ನೆಲದ ಕಣ್ಣಲ್ಲಿ ಪಾಪಿ ನೀನು. ‘ನಾನು ಕೊಲೆಗಾರ’ ಅಂತ ಇಡೀ ಜಗತ್ತಿಗೆ ಕೂಗಿ ಹೇಳು!’ ಅಂದಿದ್ದಳು. ನೆನಪಾಗುತ್ತಿದ್ದ ಹಾಗೆ ಅವನ ಮೈ ನಡುಗಿತು. ಕೊನೆಯ ಕೆಲವು ಗಂಟೆಗಳ ಅವಧಿಯಲ್ಲಿ ಹತಾಶ ನೋವು, ಕಳವಳಗಳಿಗೆ ಸಿಕ್ಕಿ ಅವನೆಷ್ಟು ಪುಡಿಗುಟ್ಟಿ ಹೋಗಿದ್ದನೆಂದರೆ ತನ್ನಲ್ಲಿ ಹುಟ್ಟಿದ ಹೊಸ, ಸ್ವಸ್ಥ, ಪೂರ್ಣ ಭಾವನೆಗೆ ಶರಣಾಗಿ ಒಪ್ಪಿಸಿಕೊಂಡ. ಪುಟ್ಟದೊಂದು ಕಿಡಿಯಿಂದ ದೊಡ್ಡ ಜ್ವಾಲೆ ಭುಗ್ಗನೆ ಹೊತ್ತುವ ಹಾಗೆ ಅವನ ಮನಸಿನಲ್ಲಿ ಹುಟ್ಟಿದ ಭಾವ ಅವನನ್ನು ಇಡಿಯಾಗಿ ಆವರಿಸಿ, ತಟ್ಟನೆ ಮನಸನ್ನು ಮೃದು ಮಾಡಿ, ಕಣ್ಣಲ್ಲಿ ನೀರು ಒಂದೇ ಸಮ ಹರಿದವು. ನಿಂತಲ್ಲೇ ನೆಲಕ್ಕೆ ಕುಸಿದ…

ಚೌಕದ ಮಧ್ಯದಲ್ಲಿ ಮೊಳಕಾಲೂರಿ, ಕೊಳಕು ಮಣ್ಣಿಗೆ ಆನಂದವಾಗಿ ಮುತ್ತಿಟ್ಟ. ಎದ್ದು ನಿಂತು ಸೊಂಟ ಬಾಗಿಸಿ ವಂದಿಸಿದ.
‘ಕುಡಿದದ್ದು ಹೆಚ್ಚಾಯಿತು ಇವನಿಗೆ!’ ಅಲ್ಲಿದ್ದ ಯಾರೋ ಅಂದರು.
ನಗು ಕೇಳಿಸಿತು.

‘ಇವನು ಜೆರುಸಲೆಮ್‌ಗೆ ಹೋಗತಾ ಇದಾನೆ, ಅದಕ್ಕೆ ಮೊದಲು ಮಕ್ಕಳಿಗೆ, ತಾಯಿನಾಡಿಗೆ, ಗುಡ್ ಬೈ ಹೇಳುತ್ತ ಇಡೀ ಲೋಕಕ್ಕೆ ನಮಸ್ಕಾರ ಮಾಡತಿದಾನೆ. ಸಂತ ಪೀಟರ್ಸ್‌ಬರ್ಗ್‌ನ ಈ ಮಹಾ ನಗರಕ್ಕೆ, ಈ ನೆಲಕ್ಕೆ ಮುತ್ತಿಡತಾ ಇದಾನೆ,’ ಕುಡಿದಿದ್ದ ವ್ಯಾಪಾರಿಯೊಬ್ಬ ಹೇಳಿದ.

‘ಇನ್ನೂ ಹುಡುಗ, ಪಾಪ!’ ಇನ್ಯಾರೋ ಅಂದರು.

‘ಮರ್ಯಾದಸ್ಥರ ಮನೆಯವನು!’ ಗಂಭೀರವಾದ ದನಿ ಕೇಳಿಸಿತು.

‘ಯಾರು ಮರ್ಯಾದಸ್ಥರು, ಯಾರು ಅಲ್ಲ ಅಂತ ಈಗಿನ ಕಾಲದಲ್ಲಿ ಹೇಳಕ್ಕಾಗಲ್ಲ.’

ಅವನೊಳಗೆ ಭಾವಗಳು ಜಾಗೃತವಾಗಿದ್ದವು. ಅವಳನ್ನು ನೋಡುತ್ತ ಅವನ ಎದೆ ಹಿಂಡಿದ ಹಾಗೆ ಅನಿಸಿತು. ‘ಇವಳು, ಈಕೆ, ಯಾಕೆ ಹೀಗೆ? ನಾನು ಅವಳಿಗೇನಾಗಬೇಕು? ಯಾಕೆ ಅಳತಾ ಇದಾಳೆ, ನಮ್ಮಮ್ಮನ ಥರ, ದುನ್ಯಾ ಥರ? ನನ್ನ ಸೇವೆ ಮಾಡಕ್ಕೆ ಬರತಾ ಇದಾಳೆ, ಆಸ್ಪತ್ರೆಯ ನರ್ಸ್ ಥರ…’

ಈ ಎಲ್ಲ ಮಾತು ರಾಸ್ಕೋಲ್ನಿಕೋವ್‌ನನ್ನು ತಡೆದು ನಿಲ್ಲಿಸಿದವು. ಅವನ ನಾಲಗೆ ತುದಿಗೆ ಬಂದಿದ್ದ, ‘ನಾನು ಕೊಲೆಮಾಡಿದೆ,’ ಅನ್ನುವ ಮಾತು ಅಲ್ಲೇ ಹೆಪ್ಪುಗಟ್ಟಿತು. ಈ ಎಲ್ಲ ಉದ್ಗಾರ ಶಾಂತವಾಗಿ ಕೇಳಿಸಿಕೊಂಡ. ಹಿಂದೆ ತಿರುಗಿ ನೋಡದೆ ಪೋಲೀಸು ಸ್ಟೇಷನ್ನಿನ ರಸ್ತೆಯಲ್ಲಿ ನಡೆದ. ದಾರಿಯಲ್ಲಿ ಅವನ ಮುಂದೆಯೇ ಯಾವುದೋ ನೆರಳು ಹಾದು ಹೋದ ಹಾಗೆ ಅನ್ನಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಅವನು ಊಹಿಸಿದಂತಿತ್ತು. ಹೇಮಾರ್ಕೆಟ್ಟಿನಲ್ಲಿ ಎರಡನೆಯ ಬಾರಿ ಇಡೀ ಲೋಕಕ್ಕೆ ನಮಸ್ಕಾರ ಮಾಡಿದ. ಎಡಕ್ಕೆ ತಿರುಗಿ ನೋಡಿದ. ಐವತ್ತು ಹೆಜ್ಜೆ ದೂರದಲ್ಲಿ ಸೋನ್ಯಾ ನಿಂತಿದ್ದಳು. ಪೆಟ್ಟಿಗೆ ಅಂಗಡಿಯ ಗೋಡೆಯ ಹಿಂದೆ ಬಚ್ಚಿಟ್ಟುಕೊಂಡಿದ್ದಳು. ಅಂದರೆ ಅವನ ಈ ದುಃಖದ ಮೆರವಣಿಗೆಯುದ್ದಕ್ಕೂ ಜೊತೆಗಿದ್ದಳು ಅವಳು. ಆ ಕ್ಷಣದಲ್ಲಿ ರಾಸ್ಕೋಲ್ನಿಕೋವ್‌ಗೆ ಅನಿಸಿತು, ಅರ್ಥವಾಯಿತು-ಸೋನ್ಯಾ ಎಂದೆಂದೂ ನನ್ನ ಜೊತೆಗೆ ಇರುತ್ತಾಳೆ, ಈ ಭೂಮಿಯ ತುದಿಯವರೆಗೂ, ನಾನೆಲ್ಲಿ ಹೋದರೂ ಅಲ್ಲಿರತಾಳೆ… ತನ್ನ ವಿಧಿ ನಿರ್ಣಯವಾಗುವ ಸ್ಥಾನ ಬಂದಿತ್ತು…

ಚುರುಕಾಗಿ ಅಂಗಳಕ್ಕೆ ನಡೆದ. ಮೂರನೆಯ ಮಹಡಿಗೆ ಹೋಗಬೇಕಾಗಿತ್ತು. ‘ಇಲ್ಲೀವರೆಗೆ ಎಲ್ಲಾ ಸರೀ,’ ಅಂದುಕೊಂಡ. ಮುಹೂರ್ತ ಇನ್ನೂ ಬಹಳ ದೂರವಿದೆ, ಇನ್ನೂ ಬಹಳ ಸಮಯವಿದೆ, ಇನ್ನೂ ಎಲ್ಲಾ ಯೋಚನೆ ಮಾಡಿ ನೋಡಬಹುದು ಅನ್ನಿಸಿತ್ತು…

ಚಕ್ರಾಕಾರದ ಮೆಟ್ಟಿಲು ಎಂದಿನ ಹಾಗೆ ಕಸ ಚೆಲ್ಲಾಡಿಕೊಂಡು ಕೊಳಕಾಗಿತ್ತು. ಅಗಲವಾದ ಮೆಟ್ಟಿಲ ಮೇಲೆ ಅವೇ ಮುರಿದ ಖಾಲಿ ಮೊಟ್ಟೆಗಳು. ದೊಡ್ಡದಾಗಿ ತೆರೆದುಕೊಂಡು ನಿಂತಿರುವ ಅವೇ ಮನೆ ಬಾಗಿಲು, ಹೊಗೆಯೂ ಹಳಸುವಾಸನೆಯೂ ತುಂಬಿದ್ದ ಅದೇ ಅಡುಗೆ ಮನೆ, ಆ ದಿನ ಬಂದವನು ಮತ್ತೆ ಇಲ್ಲಿಗೆ ಬಂದೇ ಇರಲಿಲ್ಲ ರಾಸ್ಕೋಲ್ನಿಕೋವ್. ಕಾಲು ಮರಗಟ್ಟುತಿದ್ದವು, ಕುಸಿಯುತ್ತಿದ್ದವು, ಆದರೂ ನಡೆದ. ಉಸಿರು ತೆಗೆದುಕೊಳ್ಳಲು, ಮನುಷ್ಯ ಜೀವಿಯ ಹಾಗೆ ನೆಟ್ಟಗೆ ಹೆಜ್ಜೆ ಹಾಕಲು ಒಂದು ಕ್ಷಣ ನಿಂತ. ‘ಯಾಕೆ? ಯಾಕೆ?’ ತನ್ನ ಯೋಚನೆ ತನಗೇ ಅರಿವಿಗೆ ಬಂದ ಹಾಗೆ ತಟ್ಟನೆ ನಿಂತ. ‘ಏನು ವ್ಯತ್ಯಾಸ? ತುಟಿಗೆ ಒಡ್ಡಿರುವ ಬಟ್ಟಲು, ಕುಡಿಯುವುದೇ ಹೌದಾದರೆ ಕಹಿಯಾಗಿದ್ದಷ್ಟೂ ಒಳ್ಳೆಯದೇ,’ ಅಂದುಕೊಂಡ. ಇಲ್ಯಾ ಪೆಟ್ರೊವಿಚ್ ಗನ್‌ಪೌಡರ್‌ನ ಚಿತ್ರ ಅವನ ಮನಸಿನಲ್ಲಿ ಮಿಂಚಿತು. ‘ಅವನ ಹತ್ತಿರಕ್ಕೆ ಹೋಗಬೇಕಾ? ಬೇರೆ ಯಾರಾದರೂ ಆದರೆ ಆಗಲ್ಲವಾ? ನಿಕೋಡಿಮ್ ಫೋಮಿಚ್ ಯಾಕಾಗಬಾರದು?’ ಪೋಲೀಸು ಮುಖ್ಯಸ್ಥನ ಹತ್ತಿರಕ್ಕೇ ಹೋದರೆ ಹೇಗೆ? ಅವನ ಫ್ಲಾಟಿನಲ್ಲಿ ಮನೆಯ ಥರ ಇರತ್ತೆ… ಇಲ್ಲ, ಇಲ್ಲ, ಗನ್‌ಪೌಡರ್ ಹತ್ತಿರಕ್ಕೇ ಸರಿ! ಕುಡಿಯಲೇಬೇಕಾಗಿದ್ದರೆ ಎಲ್ಲಾನೂ ತಟ್ಟಂತ ಕುಡಿಯುವುದು ವಾಸಿ….’

ಮೈ ಥಣ್ಣಗಾಗಿ, ಮೈ ಮೇಲೆ ಎಚ್ಚರವಿಲ್ಲದೆ, ಆಫೀಸು ಬಾಗಿಲು ತೆಗೆದ. ಜನ ಬಹಳ ಕಡಮೆ ಇದ್ದರು. ಯಾರೋ ವಾಚ್‌ಮ್ಯಾನು, ಇನ್ನು ಯಾರೋ ಸಾಮಾನ್ಯ ಜನ. ಗಾರ್ಡು ಅವನತ್ತ ಕಣ್ಣೆತ್ತಿಯೂ ನೋಡಲಿಲ್ಲ. ರಾಸ್ಕೋಲ್ನಿಕೋವ್ ಮುಂದಿನ ರೂಮಿಗೆ ಹೋದ. ‘ಈಗಲೂ ಅವರಿಗೆ ಹೇಳದೆ ಸುಮ್ಮನೆ ಇರಬಹುದು,’ ಅನ್ನುವ ಯೋಚನೆ ಮಿಂಚಿತು. ಕಾರಕೂನರುಗಳ ಮಧ್ಯೆ ಯಾರೋ ಒಬ್ಬ ನಾಗರಿಕ ಕೂತು ಏನೋ ಬರೆಯುವುದಕ್ಕೆ ಸಿದ್ಧನಾಗುತ್ತಿದ್ದ. ಮೂಲೆಯಲ್ಲಿ ಇನ್ನೊಬ್ಬ ತನ್ನ ಕುರ್ಚಿಯ ಮೇಲೆ ಕೂರುತ್ತಿದ್ದ. ಝಮ್ಯತೋವ್ ಇರಲಿಲ್ಲ. ನಿಕೋದಿಮ್ ಫೋಮಿಚ್ ಕೂಡ ಇರಲಿಲ್ಲ.

‘ಯಾರೂ ಇಲ್ಲವಾ?’ ಮೇಜಿನ ಮೇಲೆ ಕೂತಿದ್ದವನನ್ನು ರಾಸ್ಕೋಲ್ನಿಕೋವ್ ಕೇಳಿದ.

‘ಯಾರು ಬೇಕಾಗಿತ್ತು?’

‘ಆಹಾ-ಹಾ-! ಫೀ, ಫಿ, ಫೊ, ಫಮ್, ರಶಿಯನ್ ನರ ಮನುಷ್ಯನ ವಾಸನೆ ಬರತಾ ಇದೇ… ಏನದು ಕಥೆ… ಮರೆತು ಹೋಯಿತು! ಗ್ರ್-ಗ್ರೀಟಿಂಗ್ಸ್!’ ಪರಿಚಿತವಾದ ಧ್ವನಿ ತಟ್ಟನೆ ಕೂಗಿದ್ದು ಕೇಳಿಸಿತು.

ರಾಸ್ಕೋಲ್ನಿಕೋವ್ ನಡುಗಿದ. ಗನ್‌ಪೌಡರ್ ಅಲ್ಲಿ ನಿಂತಿದ್ದ. ಮೂರನೆಯ ರೂಮಿನಿಂದ ಹೊರಕ್ಕೆ ಬರುತ್ತಿದ್ದ.

‘ಹಣೆಬರಹ, ಇವನು ಯಾಕೆ ಇಲ್ಲಿ?’ ಅಂದುಕೊಂಡ ರಾಸ್ಕೋಲ್ನಿಕೋವ್.

‘ನಮ್ಮನ್ನ ನೋಡಕ್ಕೆ ಬಂದಿರಾ? ಏನು ವಿಶೇಷ?’ ಇಲ್ಯಾ ಪೆಟ್ರೊವಿಚ್ ಉದ್ಗಾರ ತೆಗೆದ. (ಅದ್ಭುತವಾದ, ಸ್ವಲ್ಪ ಉದ್ರಿಕ್ತವೂ ಆದ ಮನಸ್ಥಿತಿಯಲ್ಲಿದ್ದ ಹಾಗಿತ್ತು.) ‘ಕೆಲಸದ ಮೇಲೆ ಬಂದಿದ್ದರೆ, ತೀರ ಬೇಗ ಬಂದಿದೀರಿ. ನಾನು ಇದೇ ಈಗ..ರಲಿ, ನಾನೇನು ಮಾಡಬೇಕು ಹೇಳಿ, ಮಾಡಿಕೊಡತೇನೆ… ಅಂದ ಹಾಗೆ, ಕ್ಷಮಿಸಿ, ನಿಮ್ಮ ಹೆಸರೂ…’

‘ರಾಸ್ಕೋಲ್ನಿಕೋವ್.’

‘ಆಹಾ-ರಾಸ್ಕೋಲ್ನಿಕೋವ್! ನಾನು ನಿಜವಾಗಿ ಮರೆತು ಹೋದೆ ಅಂದುಕೊಳ್ಳಬೇಡಿ! ಖಂಡಿತ ಇಲ್ಲ. ರೋಡಿಯಾನ್ ರೊ..ರೊ.. ರೊಡಿಯೋನ್ಯಿಚ್, ಅಲ್ಲವಾ?’

‘ರೋಡಿಯಾನ್ ರೊಮನ್ಯಿಚ್.’

‘ಹೌದು, ಹೌದು. ಅದೇ! ರೋಡಿಯಾನ್ ರೊಮನ್ಯಿಚ್, ರೋಡಿಯಾನ್ ರೊಮನ್ಯಿಚ್! ಅದನ್ನೇ ಹೇಳಕ್ಕೆ ಹೊರಟಿದ್ದೆ. ಒಪ್ಪಿಕೊಂಡು ಬಿಡಲಾ?-ನಿಜವಾಗಲೂ ಬೇಜಾರಾಯಿತು, ನಿಮಗೂ ನನಗೂ ಅಂಥ… ಆಮೇಲೆ ನನಗೆ ಹೇಳಿದರು, ನೀವು ಲೇಖಕರಂತೆ—ವಿದ್ವಾಂಸ ಕೂಡ ಅಂತೆ—ಲೇಖಕರ ಲೋಕಕ್ಕೆ ಮೊದಲ ಹೆಜ್ಜೆ ಇಡತಾ ಇದೀರಂತೆ… ಅಯ್ಯೋ, ದೇವರೇ! ಮೊದಲನೆಯ ಹೆಜ್ಜೆ ಇಡದೆ ಯಾರು ತಾನೇ ದೊಡ್ಡ ಲೇಖಕರಾಗಿದಾರೆ, ವಿದ್ವಾಂಸರಾಗಿದಾರೆ? ನನಗೂ ನನ್ನ ಹೆಂಡತಿಗೂ ಸಾಹಿತ್ಯ ಅಂದರೆ ಬಹಳ ಗೌರವ, ನನ್ನ ಹೆಂಡತಿಗಂತೂ ಸಾಹಿತ್ಯದ ಹುಚ್ಚು ಅನ್ನಬೇಕು… ಸಾಹಿತ್ಯ ಮತ್ತು ಕಲೆ! ಮರ್ಯಾದಸ್ಥ ಆಗಿ ಜಂಟಲ್‍ಮ್ಯಾನ್ ಆಗಿದ್ದರೆ ಸಾಕು, ಮಿಕ್ಕದ್ದನ್ನೆಲ್ಲ ಕೌಶಲ್ಯ, ಜ್ಞಾನ, ವಿಚಾರ, ಪ್ರತಿಭೆಯಿಂದ ಸಂಪಾದಿಸಿಕೊಳ್ಳಬಹುದು. ಹ್ಯಾಟು, ಉದಾಹರಣೆಗೆ. ಹ್ಯಾಟು ಪ್ಯಾನ್‌ಕೇಕಿನ ಥರ, ಹೋಗಿ ಝಿಮ್ಮರ್‍ಮಾನ್ ಹ್ಯಾಟು ಖರೀದಿ ಮಾಡಬಹುದು. ಆದರೆ ಹ್ಯಾಟಿನ ಕೆಳಗೆ ಏನಿರ್ತೆ, ಯಾವುದನ್ನ ಹ್ಯಾಟು ಬಚ್ಚಿಟ್ಟಿರತ್ತೆ, ಅದನ್ನ ಖರೀದಿ ಮಾಡಕ್ಕಾಗಲ್ಲ, ಸಾರ್..! ನಾನೇ ನಿಮ್ಮ ಹತ್ತಿರ ಬಂದು ವಿವರಿಸಬೇಕು ಅಂತಿದ್ದೆ… ಇರಲಿ ಬಿಡಿ… ಏನಾದರೂ ಕೆಲಸ ಇತ್ತಾ ನಿಮ್ಮ ಮನೆಯವರೆಲ್ಲ ಬಂದಿದಾರೆ ಅಂತ ಕೇಳಿದೆ.’

‘ನಮ್ಮ ತಾಯಿ, ನನ್ನ ತಂಗಿ.’

‘ನಿಮ್ಮ ತಂಗಿಯವರನ್ನ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ವಿದ್ಯಾವಂತೆ, ಲಕ್ಷಣವಾಗಿದಾರೆ. ಅವತ್ತು ಸಿಟ್ಟುಮಾಡಿಕೊಂಡು ಆದಮೇಲೆ ನನಗೆ ತುಂಬ ಬೇಜಾರಾಯಿತು. ನಾನು ನಿಮ್ಮನ್ನ ಒಂಥರಾ ನೋಡಿದೆ, ನೀವು ಎಚ್ಚರ ತಪ್ಪಿದಿರಲ್ಲ ಆಗ—ಮೇಲೆ ಅದಕ್ಕೆ ಅದ್ಭುತವಾದ ವಿವರಣೆ ಸಿಕ್ಕಿತು! ಆವೇಶ ಜಾಸ್ತಿ, ದುಡುಕು ಜಾಸ್ತಿ ನನಗೆ ಅಂದರು. ಏನು, ಮನೆ ಬದಲಾಯಿಸತಾ ಇದೀರಾ, ಮನೆಯವರು ಬಂದರು ಅಂತ?’

‘ಇಲ್-ಇಲ್ಲ, ಸುಮ್ಮನೆ… ಕೇಳಕ್ಕೆ ಬಂದೆ… ಝಮ್ಯೊತೋವ್ ಇರತಾರೆ ಅಂದುಕೊಂಡಿದ್ದೆ.’

‘ಹಾಂ, ಹೌದು! ನೀವು ಸ್ನೇಹಿತರಾದಿರಂತೆ, ಕಿವಿಗೆ ಬಿತ್ತು ವಿಚಾರ. ಝಮ್ಯೊತೋವ್ ಈಗ ಇಲ್ಲಿಲ್ಲ. ಸಿಗಲ್ಲ. ಹೌದು, ಸಾರ್, ಅಲೆಕ್ಸಾಂಡರ್ ಗ್ರಿಗೊರಿಯೆವಿಚ್ ಝಮ್ಯೊತೋವ್‌ನ ಕಳಕೊಂಡವು! ನಿನ್ನೆಯಿಂದ ಪತ್ತೆ ಇಲ್ಲ. ಅವನಿಗೆ ವರ್ಗಾ ಆಯಿತು. ಬಹಳ ಜಗಳ ಆಡತಿದ್ದ. ಹೋಗೋವಾಗಲೂ ಎಲ್ಲಾರ ಹತ್ತಿರ ಜಗಳ ಆಡಿದ. ಮರ್ಯಾದೆ ಮೀರಿ ಅನ್ನುವ ಹಾಗೆ. ಹೋರಾಟದ ಮನೋಭಾವದ ಯುವಕ. ಅಷ್ಟೆ. ಇನ್ನೇನಿಲ್ಲ. ಅವನ ಮೇಲೆ ಭರವಸೆ ಇತ್ತು, ಈಗಿನ ಕಾಲದ ಬುದ್ಧಿವಂತ ಯುವಕರೋ! ಅವನು ಒಂದಲ್ಲಾ ಒಂದು ಪರೀಕ್ಷೆ ಕಟ್ಟತಾನೆ, ಅಷ್ಟೆ. ಅದರ ಬಗ್ಗೆ ಜಂಬ ಹೊಡೆಯುವುದಕ್ಕೆ ಅಷ್ಟೇ. ಜಂಬ ಕೊಚ್ಚಿಕೊಂಡರೆ ಪರೀಕ್ಷೆಯನ್ನೂ ಮುಗಿಸಿದ ಹಾಗೆ ಈ ಹುಡುಗರಿಗೆ. ನೀವು, ಉದಾರಹಣೆಗೆ, ಅಥವಾ ನಿಮ್ಮ ಗೆಳೆಯ ರಝುಮಿಖಿನ್ ಹೀಗಲ್ಲ! ನಿಮ್ಮದು ವಿದ್ವತ್ತಿನ ಕೆಲಸ. ಎಂಥಾ ಕಷ್ಟ ಎದುರಾದರೂ ಹೆದರುವವರಲ್ಲ! ನಿಮ್ಮ ಮಟ್ಟಿಗೆ ಕಷ್ಟ ಅಂದರೆ ಬದುಕಿನ ಚೆಲುವು. ನೀವು ನಿಹಿಲಿಸ್ಟರು, ಸಂನ್ಯಾಸಿಗಳು, ಮಂಕ್‌ಗಳು, ಆಶ್ರಮವಾಸಿಗಳು! ಕೈಯಲ್ಲೊಂದು ಪುಸ್ತಕ, ಕಿವಿಯ ಮೇಲೆ ಪೆನ್ನು, ವಿದ್ವತ್ ಶೋಧನೆಗೆ ವಿಷಯ—ಇಷ್ಟಿದ್ದರೆ ನಿಮ್ಮ ಆತ್ಮ ಆಕಾಶದಲ್ಲಿ ಹಾರಾಡತ್ತೆ! ನಾನೂ ಒಂಥರಾ… ನೀವು ಲಿವಿಂಗ್ಟನ್ ಡೈರಿ ಓದಿದೀರಾ?’

‘ಇಲ್ಲ.’

‘ನಾನು ಓದಿದೇನೆ. ಇತ್ತೀಚೆಗೆ ನಿಹಿಲಿಸ್ಟರು ಜಾಸ್ತಿ ಆಗತಿದ್ದಾರೆ. ಎಂಥಾ ಕಾಲ ನಮ್ಮದು! ಅರ್ಥ ಆಗತ್ತೆ.! ನೀವು ನಿಹಿಲಿಸ್ಟ್ ಅಲ್ಲಾ ಅಲ್ಲವಾ? ನಿಜ ಹೇಳಿ!’

‘ಇ-ಇಲ್ಲ.’

‘ಇಲ್ಲ. ನೋಡಿದಿರಾ, ನನ್ನ ಹತ್ತಿರ ನಿಜ ಹೇಳಬಹುದು. ಮುಜುಗರ ಬೇಡ. ನೀವು ಒಬ್ಬರೇ ನಿಮ್ಮ ಜೊತೆ ಹೇಗಿರತೀರೋ ಹಾಗೆ ಇರಬಹುದು. ಡ್ಯೂಟಿನೇ ಬೇರೆ…. ಇನ್ನೊಂದು ಏನಪ್ಪಾ…. ಅಯ್ಯೋ, ನಾನು ಖುಷಿನೇ ಬೇರೆ ಅಂತೇನೆ ಅಂದುಕೊಂಡಿದ್ದಿರಾ? ಇಲ್ಲ ಸಾರ್, ತಪ್ಪು ತಿಳಕೊಂಡಿದೀರಿ! ಖುಷಿ ಅಲ್ಲ, ನಾಗರಿಕನಾಗಿ ಕರ್ತವ್ಯ ಮಾಡೋದು ಬೇರೆ, ಮನುಷ್ಯರಾಗಿ ಭಾವನೆ, ಕರುಣೆ, ದೇವರ ಪ್ರೀತಿ ಇಟ್ಟುಕೊಳ್ಳೋದು ಬೇರೆ. ನಾನು ಅಧಿಕಾರಿ, ಕರ್ತವ್ಯ ಮಾಡತಾ ಇರಬಹುದು, ಆದರೆ ನನ್ನೊಳಗೆ ನಾಗರಿಕ ಮತ್ತು ಮನುಷ್ಯರಿಬ್ಬರೂ ಯಾವಾಗಲೂ ಇರಬೇಕು. ಆ ಜವಾಬ್ದಾರಿ ನನ್ನದು. ಈಗಷ್ಟೇ ಝಮ್ಯೊತೋವ್ನ ಪ್ರಸ್ತಾಪ ಮಾಡಿದಿರಿ. ಝಮ್ಯೊತೋವ್! ಅವನು ಮರ್ಯಾದೆ ಇಲ್ಲ ಯಾವುದಾದರೂ ಜಾಗಕ್ಕೆ ಹೋಗಿ, ಶಾಂಪೇನು, ಇಲ್ಲಾ ವೈನು ಕುಡಿದು, ಫ್ರೆಂಚರ ಥರ ಯಾವುದಾದರೂ ಗುಲ್ಲು ಎಬ್ಬಿಸತಾನೆ. ಝೊಮ್ಯತೋವ್ ಹಾಗೇನೇ! ನಾನು, ನೋಡಿ, ಭಕ್ತಿ, ಉನ್ನತ ಭಾವನೆಗಳು ಇರುವ ಮನುಷ್ಯ. ಜೊತೆಗೆ ದೊಡ್ಡ ಪದವಿ ಇದೆ. ನನಗೊಂದು ಸ್ಥಾನ ಇದೆ! ವಿವಾಹಿತ, ಮಕ್ಕಳೊಂದಿಗ, ಕರ್ತವ್ಯ ಮತ್ತು ಮನುಷ್ಯತ್ವ ಎರಡನ್ನೂ ನಿಭಾಯಿಸಿದೀನಿ. ಅವನು ಯಾವನು? ಅದು ಗೊತ್ತಾಗಬೇಕು ನನಗೆ. ವಿದ್ಯಾವಂತರು ಅಂತ ನಿಮ್ಮನ್ನ ಕೇಳತಾ ಇದೇನೆ. ಇತ್ತೀಚೆಗಂತೂ ಸೂಲಗಿತ್ತಿಯರು ಬಹಳ ಹೆಚ್ಚಾಗಿದಾರೆ.’

ಪ್ರಶ್ನೆ ಕೇಳುವ ಹಾಗೆ ರಾಸ್ಕೋಲ್ನಿಕೋವ್ ಹುಬ್ಬೇರಿಸಿದ. ಇಲ್ಯಾ ಪೆಟ್ರೋವಿಚ್‌ನ ಮಾತು ಅವನ ಟೇಬಲಿನಿಂದ ಎದ್ದು ಬಡಬಡ ಸದ್ದುಮಾಡಿಕೊಂಡು, ರಾಸ್ಕೋಲ್ನಿಕೋವ್‌ಗೆ ಬಡಿದು ಚೆಲ್ಲಾಡುತ್ತಿತ್ತು. ಅವನ ಬಹಳಷ್ಟು ಮಾತು ಖಾಲೀ ಸದ್ದುಗಳೇ ಸರಿ. ಆದರೂ ಅಲ್ಲಿಷ್ಟು ಇಲ್ಲಿಷ್ಟು ಅರ್ಥ ಆಗಿತ್ತು. ಯಾವಾಗ ನಿಲ್ಲುತ್ತದೆ ಮಾತು ಅನ್ನುವ ಹಾಗೆ ರಾಸ್ಕೋಲ್ನಿಕೋವ್ ಹುಬ್ಬೇರಿಸಿದ್ದ.

‘ಕ್ರಾಪು ಮಾಡಿಸಿಕೊಂಡ ಹುಡುಗಿಯರ ಬಗ್ಗೆ ಹೇಳತಾ ಇದೇನೆ, ಅವರನ್ನ ಸೂಲಗಿತ್ತೀರು ಅನ್ನತೇನೆ. ಆ ಅಡ್ಡಹೆಸರು ಅವರಿಗೆ ಸರಿಯಾಗಿ ಒಪ್ಪತ್ತೆ, ನನ್ನ ಅಭಿಪ್ರಾಯದಲ್ಲಿ. ಹ್ಹೆಹ್ಹೇ! ಅಕಾಡೆಮಿಯಲ್ಲಿ ಸೀಟು ಗಿಟ್ಟಿಸತಾರೆ ಅನಾಟಮಿ ಓದತಾರೆ, ಅಲ್ಲಾ ನನಗೆ ಹುಷಾರು ತಪ್ಪಿದರೆ ಈ ಹುಡುಗಿಯರನ್ನ ಕರೆಸತೇನಾ ನನಗೆ ಉಪಚಾರ ಮಾಡಕ್ಕೆ? ನೀವೇ ಹೇಳಿ. ಹ್ಹೆ ಹ್ಹೆ!’

ತನ್ನ ಜಾಣ ಮಾತಿಗೆ ತಾನೇ ಮೆಚ್ಚಿ ಗಹಗಹಿಸಿದ ಇಲ್ಯಾ ಪೆಟ್ರೊವಿಚ್.

‘ಸರಿ, ಅವರಿಗೆ ಜ್ಞಾನದ ಬಾಯಾರಿಕೆ ಇದೆ ಅಂತ ಒಪ್ಪೋಣ. ಒಂದು ಸಾರಿ ಜ್ಞಾನ ಪಡೆದ ಮೇಲೆ ಮುಗಿಯಿತು. ಬೈಯೋದು ಯಾಕೆ? ಆ ಝಮ್ಯೊತೋವ್‍ ಥರ ಯಾಕೆ ಬೈಯಬೇಕು ಒಳ್ಳೆಯವರನ್ನೆಲ್ಲಾ? ನನಗೆ ಯಾಕೆ ಅವಮಾನ ಮಾಡಿದ ಅಂತ ಕೇಳತಿದೇನೆ. ಆಮೇಲೆ ಎಷ್ಟೊಂದು ಆತ್ಮಹತ್ಯೆಗಳಾಗತಾ ಇವೆ-ನಿಮಗೆ ಕಲ್ಪನೆ ಮಾಡಿಕೊಳ್ಳಕ್ಕೂ ಆಗಲ್ಲ, ಅಷ್ಟು. ಕೈಯಲ್ಲಿರೋ ಕಾಸೆಲ್ಲ ಖರ್ಚು ಮಾಡಿಕೊಳ್ಳತಾರೆ, ಹೋಗಿ ಸಾಯತಾರೆ. ಹುಡುಗಿಯರು, ಹುಡುಗರು, ಮುದುಕರು… ಇವತ್ತು ಬೆಳಿಗ್ಗೆ ತಾನೇ ಆತ್ಮಹತ್ಯೆ ವರದಿ ಬಂತು. ಈ ಊರಿಗೆ ಹೊಸದಾಗಿ ಬಂದಿದ್ದವನು. ನಿಲ್‍ ಪಾವ್ಲಿಚ್ ಅಂತಲೋ ಏನೋ! ಏನು ಅವನ ಹೆಸರು, ಪೀಟರ್ಸ್‍ಬರ್ಗ್ ಸೈಡಿನಲ್ಲಿ ಗುಂಡು ಹಾರಿಸಿಕೊಂಡು ಸತ್ತನಲ್ಲ ಅವನು?

‘ಸ್ವಿದ್ರಿಗೈಲೋವ್,’ ಪಕ್ಕದ ಕೋಣೆಯಿಂದ ಒರಟಾಗಿ ಉದಾಸೀನವಾಗಿ ಉತ್ತರ ಬಂತು.
ರಾಸ್ಕೋಲ್ನಿಕೋವ್ ಬೆಚ್ಚಿದ.

‘ಸ್ವಿದ್ರಿಗೈಲೋವ್! ಸ್ವಿದ್ರಿಗೈಲೋವ್ ಗುಂಡು ಹಾರಿಸಿಕೊಂಡನಾ!’ ಚೀರಿದ.

‘ಏನು, ಸ್ವಿದ್ರಿಗೈಲೋವ್ ಗೊತ್ತಾ?’

‘ಗೊತ್ತು… ಪರಿಚಯ ಇದೆ… ಇತ್ತೀಚೆಗಷ್ಟೇ ಬಂದಿದ್ದ.’

‘ಹೌದು. ಹೆಂಡತಿ ಸತ್ತಿದ್ದಳು, ಇವನು ಸ್ವಲ್ಪ ಪೋಲಿ. ಇದ್ದಕಿದ್ದ ಹಾಗೆ ಶೂಟ್ ಮಾಡಿಕೊಂಡಿದಾನೆ; ನೀವು ಕಲ್ಪನೆ ಮಾಡಿಕೊಳ್ಳಕ್ಕಾಗಲ್ಲ, ಹಾಗೆ. ನೋಟ್‌ಬುಕ್ಕಿನಲ್ಲಿ ನಾಲ್ಕು ಸಾಲು ಬರೆದಿದಾನೆ, ಸ್ವಸ್ಥವಾದ ಮನಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳತಿದೀನಿ, ಇದಕ್ಕೆ ಯಾರೂ ಕಾರಣರಲ್ಲ ಅಂತ ಬರೆದಿದಾನೆ. ತುಂಬ ದುಡ್ಡಿತ್ತು ಅವನ ಹತ್ತಿರ, ಅನ್ನತಾರೆ. ನಿಮಗೆ ಹೇಗೆ ಗೊತ್ತು?’

‘ಪರಿಚಯ ಇತ್ತು… ನನ್ನ ತಂಗಿ ಅವನ ಮನೆಯಲ್ಲಿ ಗೌರ್ನೆಸ್ ಆಗಿದ್ದಳು…’

‘ಆಹಾ, ಆಹಾ… ಹಾಗಾದರೆ ಇವನ ಬಗ್ಗೆ ಹೇಳಬಹುದು ನೀವು. ನಿಮಗೇನೂ ಅನುಮಾನ ಬರಲಿಲ್ಲವಾ?’

‘ನಿನ್ನೆ ನೋಡಿದ್ದೆ… ಅವನು… ವೈನ್ ಕುಡಿತಾ ಇದ್ದ… ನನಗೇನೂ ಗೊತ್ತಿಲ್ಲ.’
ಭಾರವಾದದ್ದೇನೋ ಮೈ ಮೇಲೆ ಬಿದ್ದ ಹಾಗನ್ನಿಸಿತು ರಾಸ್ಕೋಲ್ನಿಕೋವ್‌ಗೆ.

‘ಮತ್ತೆ ಬಿಳಿಚಿದ ಹಾಗೆ ಕಾಣತೀರಲ್ಲ, ಇದು ಉಸಿರು ಕಟ್ಟಿಸುವ ಜಾಗ.’

‘ಹೋಗಬೇಕು, ಹೊತ್ತಾಗತಾ ಇದೆ, ನಿಮಗೆ ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ.’

‘ಅಯ್ಯೋ ದೇವರೇ, ಎಷ್ಟು ಬೇಕಾದರೂ ತೊಂದರೆ ಕೊಡಿ! ನಾವಿರುವುದೇ ಅದಕ್ಕೆ! ಬಹಳ ಸಂತೊಷ..’
ಇಲ್ಯಾ ಪೆಟ್ರೊವಿಚ್ ಕೈಯನ್ನು ಮುಂದೆ ಚಾಚಿದ.

‘ಝಮ್ಯತೋವ್‌ನ ನೋಡಬೇಕಾಗಿತ್ತು, ಅಷ್ಟೇ.’

‘ಅರ್ಥ ಆಗತ್ತೆ, ಅರ್ಥ ಆಗತ್ತೆ. ನಿಮ್ಮ ಭೇಟಿಯಾಗಿದ್ದು ಸಂತೋಷ.’

‘ನನಗೂ… ಬಹಳ ಸಂತೋಷ… ಗುಡ್ ಬೈ, ಸಾರ್.’ ರಾಸ್ಕೋಲ್ನಿಕೋವ್ ನಕ್ಕ.
ಹೊರ ನಡೆದ. ತಲೆ ಸುತ್ತುತ್ತಿತ್ತು. ಕಾಲು ಕುಸಿದ ಹಾಗೆ. ಮೆಟ್ಟಿಲು ಇಳಿಯುವುದಕ್ಕೆ ಶುರು ಮಾಡಿದ. ಬಲಗೈಯನ್ನು ಗೋಡೆಗೊತ್ತಿ ಆಸರೆ ಪಡೆಯುತ್ತ ಮೆಲ್ಲಗೆ ಇಳಿದ. ದಪ್ಪ ಪುಸ್ತಕ ಹಿಡಿದು ಆಫೀಸಿಗೆ ಹೋಗುತ್ತಿದ್ದ ವಾಚ್‍ಮ್ಯಾನು ಅವನನ್ನು ದಬ್ಬಿಕೊಂಡು ಹೋದ ಅನಿಸಿತ್ತು. ಕೆಳಗಿನ ಮಹಡಿಯಲ್ಲೆಲ್ಲೋ ನಾಯಿ ಬೊಗಳುತ್ತಿತ್ತು. ಯಾರೋ ಹೆಂಗಸು ನಾಯಿಯ ಮೇಲೆ ಲಟ್ಟಣಿಗೆ ಎಸೆದು ಕೂಗಿದಳು. ಮೆಟ್ಟಿಲಿಳಿದು ಅಂಗಳಕ್ಕೆ ಬಂದ. ಅಲ್ಲಿ, ಅಂಗಳದಲ್ಲಿ, ಪ್ರವೇಶ ದ್ವಾರದ ಹತ್ತಿರವೇ ಸೋನ್ಯಾ ನಿಂತಿದ್ದಳು. ಮುಖ ಬಿಳಚಿತ್ತು, ಮೈ ಸೆಟೆತಿತ್ತು, ಹುಚ್ಚಿಯ ಹಾಗೆ ಅವನನ್ನು ನೋಡಿದಳು. ಹೋಗಿ ಅವಳೆದುರು ನಿಂತ. ನೋವು, ಹಿಂಸೆ, ಹತಾಶೆ ಅವಳ ಮುಖದಲ್ಲಿದ್ದವು. ಕೈ ಹಿಸುಕಿಕೊಂಡಳು. ವಿಕಾರವಾದ ಅನಾಥ ನಗು ಬಲವಂತವಾಗಿ ತುಟಿಯ ಮೇಲೆ ಬಂದಿತ್ತು. ಅವನು ನಿಂತ, ಹಲ್ಲುಕಿರಿದ, ಮತ್ತೆ ಆಫೀಸಿನೊಳಕ್ಕೆ ಹೋದ.

ಇಲ್ಯಾ ಪೆಟ್ರೊವಿಚ್ ಕುರ್ಚಿಯಲ್ಲಿ ಕೂತು ಪೇಪರುಗಳನ್ನು ಜೋಡಿಸುತ್ತಿದ್ದ. ರಾಸ್ಕೋಲ್ನಿಕೋವ್‌ನನ್ನು ದಬ್ಬಿಕೊಂಡು ಹತ್ತಿ ಬಂದಿದ್ದವನು ಈಗ ಪೆಟ್ರೋವಿಚ್‌ನ ಎದುರು ನಿಂತಿದ್ದ.

‘ಆಹಾ? ಮತ್ತೆ ನೀವು! ಏನಾದರೂ ಮರೆತು ಹೋದಿರಾ?… ಯಾಕೆ, ಏನಾಯಿತು?’
ತುಟಿ ಬಿಳಿಚಿದ ರಾಸ್ಕೋಲ್ನಿಕೋವ್ ನೆಟ್ಟ ನೋಟ ಬೀರುತ್ತ ಸೀದಾ ಪೆಟ್ರೋವಿಚ್‌ನ ಟೇಬಲ್ಲಿನ ಹತ್ತಿರ ಹೋಗಿ ಅದರ ಮೇಲೆ ಕೈಯೂರಿ ಏನೋ ಹೇಳುವ ಹಾಗೆ ಮುಂದಕ್ಕೆ ಬಾಗಿದ. ಅಸ್ಪಷ್ಟವಾದ ಸದ್ದುಗಳಷ್ಟೇ ಕೇಳಿಸಿದವು.

‘ನಿಮಗೆ ಹುಷಾರಿಲ್ಲ! ಕುರ್ಚಿ ತನ್ನೀ! ಇಗೋ, ಇಲ್ಲಿ ಕೂತುಕೊಳ್ಳಿ. ಕೂತುಕೊಳ್ಳಿ. ನೀರೂ!’
ರಾಸ್ಕೋಲ್ನಿಕೋವ್ ಧೊಪ್ಪನೆ ಕುಸಿದು ಕೂತ. ಆಶ್ಚರ್ಯದಿಂದ ಚಡಪಡಿಸುತ್ತಿದ್ದ ಪೆಟೊವಿಚ್‍ನ ಮುಖದಿಂದ ದೃಷ್ಟಿ ಬದಲಾಯಿಸಲಿಲ್ಲ ಕೆಲವು ಕ್ಷಣ ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು.
ನೀರು ಬಂತು.

‘ನಾನು…’ ರಾಸ್ಕೋಲ್ನಿಕೋವ್ ಮಾತಾಡಲು ಹೆಣಗಿದ.

‘ನೀರು ಕುಡಿಯಿರಿ.’

ರಾಸ್ಕೋಲ್ನಿಕೋವ್ ನೀರಿನ ಗ್ಲಾಸು ಪಕ್ಕಕ್ಕೆ ತಳ್ಳಿದ. ಮೆಲ್ಲಗೆ, ನಡುನಡುವೆ ತಡೆದು, ಆದರೂ ಸ್ಪಷ್ಟವಾದ ದನಿಯಲ್ಲಿ ಹೇಳಿದ:

‘ಅಧಿಕಾರಿಯ ವಿಧವೆ, ಮುದುಕಿ ಮತ್ತವಳ ತಂಗಿ ಲಿಝವೆಟರನ್ನು ಕೊಡಲಿಯಲ್ಲಿ ಹೊಡೆದು ಕೊಂದಿದ್ದು, ದರೋಡೆ ಮಾಡಿದ್ದು ನಾನು.’
ಇಲ್ಯಾ ಪೆಟ್ರೊವಿಚ್ ದೊಡ್ಡದಾಗಿ ಬಾಯಿ ತೆರೆದ. ಜನ ಓಡಿಬಂದರು.

ರಾಸ್ಕೋಲ್ನಿಕೋವ್ ತನ್ನ ಹೇಳಿಕೆಯನ್ನು ಮತ್ತೆ ನುಡಿದ……