Advertisement
ಅಯ್ಯೋ ಉಪ್ಪಿಟ್ಟಾ!: ಚಂದ್ರಮತಿ ಸೋಂದಾ ಸರಣಿ

ಅಯ್ಯೋ ಉಪ್ಪಿಟ್ಟಾ!: ಚಂದ್ರಮತಿ ಸೋಂದಾ ಸರಣಿ

ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ. ನೀವು ಮಾಡೋ ಅವರೆಕಾಳು ಉಪ್ಪಿಟ್ಟಿನ ರುಚಿ ಬಹಳ ವಿಶಿಷ್ಟ’ ಅಂತ ಹೇಳಿದ ಮೇಲೆ ಇನ್ನಷ್ಟು ಬಡಿಸದೆ ಇರೋಕೆ ಹೇಗೆ ಸಾಧ್ಯ?
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು

ಪ್ರಿಯ ನಿನ್ನ ಮುಖ ಹೀಗೇಕೆ ಕಪ್ಪಿಟ್ಟಿದೆ
ಪ್ರಿಯೆ ನನ್ನ ಮುಂದೆ ನೀ ಮಾಡಿದ ಉಪ್ಪಿಟ್ಟಿದೆ

ಇದು ಉಪ್ಪಿಟ್ಟಿನ ಬಗೆಗೆ ದುಂಡಿರಾಜರ ವ್ಯಾಖ್ಯಾನ. ಇದು ಅವರದೊಬ್ಬರದೇ ಅಲ್ಲ, ಹೆಚ್ಚಿನ ಜನರು ಉಪ್ಪಿಟ್ಟು ಎಂದರೆ ಮುಖ ಸಿಂಡರಿಸುತ್ತಾರೆ ಇಲ್ಲವೆ ಮೂಗುಮುರಿಯುತ್ತಾರೆ. ಯಾವ ಪುಣ್ಯಾತ್ಮರು ಅದಕ್ಕೆ ಉಪ್ಪಿಟ್ಟು ಎಂದು ಹೆಸರಿಟ್ಟರೋ? ಅದು ಉಪ್ಪು ಹಿಟ್ಟು ಸೇರಿ ತಯಾರಿಸುವುದೇನಲ್ಲ. ಉಪ್ಪಿನಕಾಯಿ ಎಂದರೆ ಅದರಲ್ಲಿ ಉಪ್ಪಿನ ಅಂಶ ಅತಿಯಾಗಿರುತ್ತದೆ. ಮಾವಿನಕಾಯಿ, ನಿಂಬೆಹಣ್ಣು, ಅಮಟೆಕಾಯಿ ಅಂತ ಯಾವುದರಿಂದ ತಯಾರಾದರೂ ಅದರಲ್ಲಿ ಉಪ್ಪು ಕಟುವಾಗಿ ಇರಲೇಬೇಕು, ಇಲ್ಲದಿದ್ದರೆ ಅದರ ಆಯುಷ್ಯ ತೀರ ಅಲ್ಪ. ತಾಳಿಕೆಯ ಗುಣ ಉಪ್ಪಿನದು. ಈಗ ಹೇಳುತ್ತಾರಲ್ಲ, preservative ಅಂತ. ಉಪ್ಪು ಪ್ರಕೃತಿಸಹಜವಾದ ಪ್ರಿಸರ್ವೇಟಿವ್ ಗುಣ ಉಳ್ಳದ್ದು. ಇನ್ನು ಉಪ್ಪೇರಿ, ಉಪ್ಪೆಸರು, ಉಪ್ಸಾರು ಅನ್ನುವ ವ್ಯಂಜನಗಳಲ್ಲಿ ಉಪ್ಪಿನ ರುಚಿ ತುಸು ತೀಕ್ಣವಾದುದೇ. ಅಷ್ಟೆ ಅಲ್ಲ, ಅವುಗಳಲ್ಲಿ ಖಾರವೂ ತುಸು ಜಾಸ್ತಿಯೇ. ಆದರೆ ಇವ್ಯಾವ ಗುಣವೂ ಇಲ್ಲದೆ ಉಪ್ಪಿಟ್ಟು ಆ ಹೆಸರನ್ನು ಹೊತ್ತಿದೆ.

ಉಪ್ಪಿಟ್ಟಿನ ಬಗ್ಗೆ ಲೇಜಿ ವಿಮೆನ್ ಈಜಿ ಟಿಫಿನ್ ಎನ್ನುವ ಮಾತೂ ಚಾಲ್ತಿಯಲ್ಲಿದೆ. ನಮ್ಮವರು ನನ್ನ ತಮ್ಮನ ಹೆಂಡತಿಯನ್ನು ಹೀಗೆ ರೇಗಿಸುತ್ತಾರೆ. ಅದಕ್ಕೆ ಆಕೆ `ಭಾವ, ನೀವನ್ನೋತರ ಉಪ್ಪಿಟ್ಟು ಮಾಡೋದೇನು ಸುಲಭದ್ದಲ್ಲ, ಬೋಳು ಉಪ್ಪಿಟ್ಟು ಮಾಡಿರೆ ಯಾರು ತಿಂತಾರೆ’ ಅಂತ ಹೇಳುತ್ತಿರುತ್ತಾಳೆ. ಆದು ನಿಜ. ಅದನ್ನು ತಯಾರಿಸಲು ಸಾಕಷ್ಟು ಸಮಯ ಬೇಕೇಬೇಕು. ಸುಲಭವಾಗಿ ರವೆ ಕೆದಕಿ ಉಪ್ಪಿಟ್ಟು ಮಾಡಿದ್ರೆ ನಮ್ಮನೆ ನಾಯಿಯೂ ಮೂಸಲಿಕ್ಕಿಲ್ಲ. ಯಾಕೆಂದರೆ ಅದಕ್ಕೂ ಬೇರೆ ರುಚಿ ರೂಢಿಯಾಗಿದೆಯಲ್ಲ. ನಾಯಿ ಅಂದಾಗ ಒಂದು ವಿಷಯ ನೆನಪಾಗುತ್ತಿದೆ. ಒಮ್ಮೆ ಯಾರೋ ನೆಂಟರ ಮನೆಗೆ ಹೋಗಿದ್ದೆ, ಆ ಮನೆಯೊಡತಿ ವಾಂಗಿಭಾತ್ ಮಾಡಿದ್ದರು. ಹೊಸದಾದ ಸಿದ್ಧಪುಡಿ ಆಗಿತ್ತಂತೆ, ಆಕೆಗೆ ಅಂದಾಜಾಗದೆ ಖಾರ ಅತಿಯಾಗಿತ್ತು. ನಾವೆಲ್ಲ ಕಷ್ಟಪಟ್ಟು ತಿನ್ನುತ್ತಿದ್ದೆವು. ಆಕೆಯ ಪತಿಮಹಾಶಯ `ತುಂಬ ಖಾರ, ಕಷ್ಟಪಟ್ಟು ಯಾಕೆ ತಿನ್ನದು, ಯಾವುದಾದ್ರೂ ಬೀದಿನಾಯಿ ಬರುತ್ತೆ ಅದಕ್ಕೆ ಹಾಕು’ ಅಂತ ಹೆಂಡತಿಗೆ ಹೇಳಿದರು. ಕೂಡಲೇ ಅವರ ಮಗ `ಅಪ್ಪಯ್ಯ ಇದನ್ನು ನಾಯಿಗೆ ಹಾಕಿರೆ ನಾಳೆಯಿಂದ ಅದು ನಮ್ಮನೆ ಕಡೆ ಬರದನ್ನ ನಿಲ್ಸುತ್ತೆ’ ಅಂತ ತಮಾಶೆ ಮಾಡಿದ್ದ.

ಉಪ್ಪಿಟ್ಟು ಎಷ್ಟೊಂದು ವೈವಿಧ್ಯಮಯವಾದದ್ದು. ಅಕ್ಕಿತರಿ, ಗೋಧಿರವೆ, ಗೋಧಿಶಾವಿಗೆ, ಅಕ್ಕಿಶಾವಿಗೆ, ರಾಗಿಶಾವಿಗೆ, ಸಿರಿಧಾನ್ಯ, ಮುಂತಾಗಿ ತರಾವರಿ ಉಪ್ಪಿಟ್ಟುಗಳು. ತಯಾರಿಸುವ ವಿಧಾನವೂ ವಿಭಿನ್ನ. ಮೂಲವಸ್ತು ಯಾವುದೇ ಇರಲಿ, ಹುರುಳಿಕಾಯಿ, ಕ್ಯಾರೆಟ್, ದಪ್ಪಮೆಣಸು ಇವೆಲ್ಲ ಉಪ್ಪಿಟ್ಟಿಗೆ ಒಳ್ಳೆಯ ಸಂಗಾತಿಗಳು. ಕೆಲವರಿಗೆ ಅಕ್ಕಿತರಿ ಉಪ್ಪಿಟ್ಟು ಅಂದ್ರೆ ಬಹಳ ಪ್ರಿಯ. ಇನ್ನು ಕೆಲವರಿಗೆ ಗೋಧಿರವೆಯೇ ಆಗಬೇಕು. ಗೋಧಿ ಅಂದ್ರೆ ಮಡಿಗೂ ಆಗುತ್ತದೆ. ಏಕಾದಶಿ, ಶಿವರಾತ್ರಿ, ಸಂಕಷ್ಟಿ ಏನೇ ಇರಲಿ ಗೋಧಿ ಅಂದರೆ ಅಕ್ಕಿಯಂತೆ ಮುಸುರೆ ಅಲ್ಲವಲ್ಲ ಅದಕ್ಕೆ. (ಅದ್ಯಾವ ಪುಣ್ಯಾತ್ಮರು ಗೋಧಿ ಮುಸುರೆಯಲ್ಲ ಅಂದರೋ!)ಹಾಗಾಗಿಯೇ ಇರಬೇಕು, ಪಕ್ಕದ್ಮನೆ ಸುಬ್ಬಮ್ಮನ ಏಕಾದಶಿ ಉಪವಾಸದಲ್ಲಿ ಆಕೆ ತಿನಿಸಿನ ಪಟ್ಟಿಗೆ ಅವಲಕ್ಕಿಯೊಂದಿಗೆ ಉಪ್ಪಿಟ್ಟೂ ಸೇರಿದೆ. ಉಪವಾಸ ಮಾಡೋರು ಗೋಧಿರವೆ ಉಪ್ಪಿಟ್ಟು ತಿಂತಾರೆ. ನಮ್ಮ ಪರಿಚಿತರೊಬ್ಬರು ಅವರ ಅಳಿಯನ ಏಕಾದಶಿ ಉಪವಾಸಕ್ಕೆ ಖಾಯಂ ಆಗಿ ಶುಂಟಿ ಉಪ್ಪಿಟ್ಟು ಮಾಡ್ತಾರೆ. ಈರುಳ್ಳಿ ಹಾಕದೆ, ತುಸು ಹೆಚ್ಚು ಶುಂಟಿ ಹಾಕಿ ಕಾಯಿತುರಿ ಸ್ವಲ್ಪ ಹೆಚ್ಚಿಗೆ ಸೇರಿಸಿ ತಯಾರಿಸುವ ಆ ಉಪ್ಪಿಟ್ಟು ಅವರಿಗೆ ಪ್ರಿಯವಂತೆ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ ದಿನ ನಮ್ಮ ತಂದೆ ಸಂಜೆಹೊತ್ತಿಗೆ ಕೇಳುತ್ತಿದ್ದರು, `ಬೆಳಗಿನ ಉಪ್ಪಿಟ್ಟು ಇದೆಯಾ?’ ಅಂತ. ಎಚ್. ನರಸಿಂಹಯ್ಯ ಅವರು ಇಂಗ್ಲೆಂಡಿನಲ್ಲಿದ್ದಾಗ ಪ್ರತಿದಿನವೂ ಉಪ್ಪಿಟ್ಟು ಮಾಡಿಕೊಂಡು ತಿನ್ನುತ್ತಿದ್ದರಂತೆ. ಅವರಿಗೆ ಉಪ್ಪಿಟ್ಟು ಪ್ರಿಯವಾದುದಾಗಿತ್ತೋ ಅಥವಾ ಅವರಿಗೆ ಅದು ಅನಿವಾರ್ಯವಾಗಿತ್ತೋ! ಮತ್ಯಾವ ಕಾರಣದಿಂದಲೋ? ನಾನಂತೂ ಉಪ್ಪಿಟ್ಟಿನ ಬಗ್ಗೆ ಏನೇ ಹೇಳಿದರೂ ಅದು ಮುಖ್ಯ ಅಂತಾ ಭಾವಿಸೋಳು. ಯಾಕೆ ಗೊತ್ತಾ? ವಧುಪರೀಕ್ಷೆಯಲ್ಲಿ ಶಿರದೊಂದಿಗೆ ಸ್ಥಾನ ಪಡೆದಿರೋದು ಈ ಉಪ್ಪಿಟ್ಟೇ ಅಲ್ವಾ? ನಮ್ಮೂರ ಕಡೆ ಹೇಳುವುದಿದೆ, ಅವನು ಇನ್ನೆಷ್ಟು ಮನೆಯಲ್ಲಿ ಶಿರ ಉಪ್ಪಿಟ್ಟು ತಿನ್ನಬೇಕಂತೆ ಅಂತ.

ನಮ್ಮ ಹಿರಿಯರು ತಯಾರಿಸುತ್ತಿದ್ದ ಉಪ್ಪಿಟ್ಟಿನಲ್ಲಿ ರವೆಯೇ ಮುಖ್ಯ ಪರಿಕರವಾಗಿತ್ತು. ಆದರೆ ಈಗ ಹಾಗಿಲ್ಲ. ಶಾವಿಗೆಗೆ ಅದು ಭಡ್ತಿ ಹೊಂದಿದಂತೆ ಕಾಣುತ್ತದೆ. ಹಿಂದೆಲ್ಲ ಗೋಧಿಶಾವಿಗೆಯನ್ನು ಹುರಿದು ಉಪ್ಪಿಟ್ಟು ತಯಾರಿಸಬೇಕಿತ್ತು. ಆದರೆ ಈಗ ಹುರಿದ ಶಾವಿಗೆಯೇ ಸಿಗುತ್ತದೆ. ಅಕ್ಕಿಶಾವಿಗೆಯನ್ನು ಕುದಿಯುವ ನೀರಿಗೆ ಹಾಕಿ ಬಸಿದೇ ತಯಾರಿಸಬೇಕು. ಯಾವುದೇ ಶಾವಿಗೆ ಇರಲಿ, ಏಳೆಂಟು ಇಂಚಿನಷ್ಟು ಉದ್ದವಿದ್ದು ಕಡ್ಡಿಯಂತಿರುತ್ತಿತ್ತು. ಸಣ್ಣದಾಗಿ ಮುರಿದು ಬಳಸಬೇಕಿತ್ತು. ಶಾವಿಗೆ ಉಪ್ಪಿಟ್ಟು ತಿನ್ನೋದು ಒಂದು ಚಾಲೆಂಜ್ ಆಗಿತ್ತು. ಆ ಬಾಲವನ್ನು ಮುಖಕ್ಕೆ ಮೆತ್ತಿಕೊಳ್ಳದೆ ಹ್ಯಾಗೆ ನಾಜೂಕಾಗಿ ತಿನ್ನೋದು ಅಂತ. ಒಂದು ಸರಿ ನಾನು ಪರಿಚಿತರೊಬ್ಬರ ಮನೆಗೆ ಹೋಗಿದ್ದೆ, ಶಾವಿಗೆ ಉಪ್ಪಿಟ್ಟು ಕೊಟ್ಟರು. ಜೊತೆಯಲ್ಲಿ ಸುತ್ತಿ ತಿನ್ನಲು ಬೇಕಾದ ಚಮಚವನ್ನೂ ಕೊಟ್ಟಿದ್ದರು. ಅಷ್ಟಾಗಿ ರೂಢಿಯಿಲ್ಲದ ನನಗೆ ಬಾರಿ ಕಷ್ಟವಾಗಿತ್ತು. ಈಗ ಹಿಂದಿನಂತಲ್ಲ, ಅಂಗಡಿಯಲ್ಲಿ ಸಿಕ್ಕೋದೇ ಚಿಕ್ಕದಾಗಿ ಮುರಿದ ಶಾವಿಗೆ. ಈಗ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಶಾವಿಗೆ ಉಪ್ಪಿಟ್ಟು ಸ್ಥಾನಪಡೆದುಕೊಂಡಿದೆ.

ಸಕ್ಕರೆ ಕಾಯಿಲೆಯ ಕಾರಣದಿಂದಲೋ ಏನೋ ರಾಗಿಶಾವಿಗೆ ಮಾರುಕಟ್ಟೆಗೆ ಬಂತು. ಅದನ್ನು ನೀರಲ್ಲಿ ಒಂದುಕ್ಷಣ ನೆನೆಸಿಟ್ಟು ಉಗಿಯಲ್ಲಿ ಬೇಯಿಸಿ ಉಪ್ಪಿಟ್ಟು ಮಾಡಲು ತಾಳ್ಮೆಬೇಕು. ಹೀಗೆ ತಯಾರಿಸಿದರೂ ಮನೆಗೆ ಬಂದ ಅತಿಥಿಗಳಿಗೆ ಕೊಡುವಂತಿಲ್ಲ. ಕಪ್ಪಾದ ಉಪ್ಪಿಟ್ಟನ್ನು ಹೇಗೆ ಕೊಡೋದು? ಒಮ್ಮೆ ಅವರು ಬೇಡ ಅಂದರೆ? ನನ್ನ ಮೊಮ್ಮಗನೇ ಹೇಳಿದ್ದ `ಅಜ್ಜಿ ರಾಗಿಶಾವಿಗೆ ಉಪ್ಪಿಟ್ಟು ಮಾಡಬೇಡ’ ಅಂತ. `ಯಾಕೋ?’ ಅಂತ ಕೇಳಿದರೆ, “ಅದರ ಬಣ್ಣ ನೋಡಿದ್ರೆ ತಿನ್ನಕ್ಕೆ ಒಂಥರಾ ಆಗುತ್ತೆ” ಅಂತ ಅಂದಿದ್ದ. ಸಿರಿಧಾನ್ಯದ ಉಪ್ಪಿಟ್ಟಿನ ವಿಷಯವೂ ಹಾಗೆಯೇ. ಕೆಲವರು `ಅಯ್ಯೋ ನಮ್ಮನೆಯಲ್ಲಿ ಯಾರೂ ಅದನ್ನ ಇಷ್ಟಪಡಲ್ಲ. ಅದ್ಕೆ ನಾವು ಮಾಡಲ್ಲ’ ಅಂತಾರೆ. ಈಗಂತೂ ಸಿರಿಧಾನ್ಯದ ಬಗ್ಗೆ ತರಾವರಿ ವ್ಯಾಖ್ಯಾನಗಳು. ಅದರಲ್ಲಿ ಇರುವ ಪ್ರೊಟಿನ್ ನಮಗೆ ಅಗತ್ಯ ಎನ್ನುವ ಉಪದೇಶಗಳು. ಕೊಳ್ಳುವವರೇ ಇಲ್ಲದ ಸಿರಿಧಾನ್ಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅದೇ ಮುಖ್ಯ ಆಹಾರವಾಗಿದ್ದ ವಲಯದವರು ಅಕ್ಕಿಯ ಬೆಳುಪಿಗೆ ಮರುಳಾಗಿ ತಿನ್ನುವುದನ್ನು ನಿಲ್ಲಿಸಿದ್ದರು. ಈಗ ಬಹಳ ಜನರಿಗೆ ಅದರ ಅಗತ್ಯ ಕಂಡಿದೆ. ಅದರ ವಿಶೇಷವೆಂದರೆ ಧಾನ್ಯವನ್ನು ನೇರವಾಗಿ ಉಪ್ಪಿಟ್ಟು ಮಾಡಬಹುದು. ಇತ್ತೀಚೆಗೆ ಸಕ್ಕರೆ ಕಾಯಿಲೆಯ ಕಾರಣದಿಂದ ಗೋಧಿ ರವೆಯಂತೆ ಗೋಧಿ ನುಚ್ಚಿನ ಉಪ್ಪಿಟ್ಟೂ ಚಾಲ್ತಿಗೆ ಬಂದಿದೆ. ಈ ಪಟ್ಟಿಗೆ ಬ್ರೆಡ್ ಉಪ್ಪಿಟ್ಟನ್ನೂ ಸೇರಿಸಬಹುದು. ನಿನ್ನೆಯ ಉಳಿದ ಸಾಂಬಾರ್ ಇವತ್ತು ಹೋಟೆಲ್ಲಿನ ವಿಶೇಷ ಅಂತ ತಮಾಶೆ ಮಾಡುವುದಿದೆ. ಇದೂ ಒಂದರ್ಥದಲ್ಲಿ ಹಾಗೆಯೇ. ಬ್ರೆಡ್ ತಂದು ಎರಡೋ ಮೂರೋ ದಿನ ಕಳೆದ ಮೇಲೆ ಅದನ್ನು ಯಾರೂ ಮೂಸುವುದಿಲ್ಲ. ಅವಧಿ ಮುಗಿದಿರದಿದ್ದರೆ ಹೆಂಗಸರಿಗೆ ಅದನ್ನು ಬಿಸಾಡಲು ಮನಸ್ಸಾಗಲ್ಲ. ಪ್ರಾಯಶಃ ಅದರ ಮುಂದುವರಿಕೆಯ ಒಂದು ವಿಧಾನವೇ ಬ್ರೆಡ್ ಉಪ್ಪಿಟ್ಟಿನ ವೇಷಧರಿಸಿ ಆರ‍್ಷಿಸಿರಬಹುದು. ಉಪ್ಪಿಟ್ಟಿನ ಒಗ್ಗರಣೆ ಸಿದ್ಧಪಡಿಸಿ (ತರಕಾರಿ ಇರಬೇಕು) ನೀರನ್ನು ಹಾಕದೆ ಬ್ರೆಡ್ಡನ್ನು ಚಿಕ್ಕದಾಗಿ ತುಂಡರಿಸಿ, ಸಾಧ್ಯವಾದರೆ ಪುಡಿಮಾಡಿ ಹಾಕಿ, ಮೆದು ಅಂಶ ಹೋಗಲು ಅಥವಾ ರುಚಿ ಹೆಚ್ಚಿಸಲು ಹುರಿಗಡಲೆ ಪುಡಿಮಾಡಿ ಹಾಕಿದರೆ ಸ್ವಾದಿಷ್ಟವಾದ ಬ್ರೆಡ್ ಉಪ್ಪಿಟ್ಟು ರೆಡಿ. ಈರುಳ್ಳಿ ಬದಲು ಈರುಳ್ಳಿ ಗಿಡವನ್ನು ಕತ್ತರಿಸಿ ಒಗ್ಗರಣೆಗೆ ಹಾಕಿದರೆ ರುಚಿ ಹೆಚ್ಚು.

ಇನ್ನೊಂದು ಬಗೆಯ ಉಪ್ಪಿಟ್ಟಿದೆ. ವಾಂಗಿಭಾತ್ ಉಪ್ಪಿಟ್ಟು. ಒಳ್ಳೆ ಬದನೆಕಾಯಿ ಹಾಕಿ ವಾಂಗಿಭಾತಿನ ಪುಡಿ ಹಾಕಿ ತಯಾರಿಸಿದರೆ ಬಾಯಲ್ಲಿ ನೀರು ಬರೋದು ಗ್ಯಾರಂಟಿ. ಉಪ್ಪಿಟ್ಟಾ ಅಂತ ಕೇಳೋರು ಕೂಡ ರುಚಿಯಾಗಿದೆ ಅಂತ ಬಾಯಿ ಚಪ್ಪರಿಸದಿದ್ದರೆ ಕೇಳಿ. ತಯಾರಾದ ಮೇಲೆ ತುಸು ಘಮಘಮ ಅಂತ ತುಪ್ಪ ಹಾಕುವುದನ್ನು ಮಾತ್ರ ಮರಿಬಾರದು. ಅದರ ಗುಟ್ಟು ಇರೋದು ಅಲ್ಲಿಯೇ. ಕೆಲವರು ಮಾಡುವ ತಿಳಿಸಾರಿನ ರಹಸ್ಯವೂ ಇದೇ. ತುಪ್ಪದ ಒಗ್ಗರಣೆ ಹಾಕಿದರೆ ಸ್ವಾದ ಅಧಿಕ. ಪ್ರಮಾಣ ಗೊತ್ತಿರಬೇಕು ಅಷ್ಟೆ.

ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ. ನೀವು ಮಾಡೋ ಅವರೆಕಾಳು ಉಪ್ಪಿಟ್ಟಿನ ರುಚಿ ಬಹಳ ವಿಶಿಷ್ಟ’ ಅಂತ ಹೇಳಿದ ಮೇಲೆ ಇನ್ನಷ್ಟು ಬಡಿಸದೆ ಇರೋಕೆ ಹೇಗೆ ಸಾಧ್ಯ? ಬೇರೆ ಉಪ್ಪಿಟ್ಟಿಗಿಂತ ಅವರೆಕಾಳು ಉಪ್ಪಿಟ್ಟು ಮಾಡಲಿಕ್ಕೆ ಹೆಚ್ಚು ತಯಾರಿ ಬೇಕು. ಸೊನೆ ಇರುವ ಎಳೆಯ ಅವರೆಕಾಯಿ ತರಬೇಕು. ಅದನ್ನು ಬಿಡಿಸಿ ಬೆರ್ಪಡಿಸಬೇಕು. ನೀರಲ್ಲಿ ನೆನೆಹಾಕಿ ಕಾಳನ್ನು ಒಂದೊಂದಾಗಿ ಹಿತಕಬೇಕು. ಈ ಕೆಲಸಕ್ಕೆ ಮನೆಯ ಇತರ ಸದಸ್ಯರು ಕೈಹಾಕೋದು ಅಪರೂಪ. ರುಚಿ ಉಪ್ಪಿಟ್ಟು ಮಾಡಬೇಕು ಅಂತ ಮಹಿಳೆಯರೇ ಈ ಕಷ್ಟವನ್ನ ಮೈಮೇಲೆಳಕೊಳ್ಳೋದು. ಈರುಳ್ಳಿ, ಶುಂಟಿ ಇತ್ಯಾದಿಯಾಗಿ ಎಲ್ಲವೂ ತುಸು ಹೆಚ್ಚಿಗೆ ಪ್ರಮಾಣವೇ ಬೇಕು. ಉಪ್ಪಿಟ್ಟು ಕೂಡ ಬೇರೆ ಉಪ್ಪಿಟ್ಟಿಗಿಂತ ಹೆಚ್ಚೇ ಮಾಡಬೇಕು.

ಅವರೆಕಾಳು ಶ್ರಾಯದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿರಲಿ. ಅಲ್ಲಿ ಸಾಧಾರಣವಾಗಿ ಅವರೆಕಾಳು ಉಪ್ಪಿಟ್ಟು ಹಾಜರಿ ಹಾಕುತ್ತದೆ. ಅವರೆಕಾಳು ಉಪ್ಪಿಟ್ಟಿನ ವ್ಯಾಮೋಹ ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು. ಈಗೀಗ ಮಹಿಳೆಯರು ಅವರೆಕಾಳಿನ ಸೀಸನ್‌ಲ್ಲಿ ಅದನ್ನು ಬಿಡಿಸಿ, ಉಪ್ಪುನೀರಲ್ಲಿ ತೊಳೆದು ಆರುಹಾಕಿ ಒರೆಸಿ ಫ್ರಿಜ್ಜಿನಲ್ಲಿ ಕಾಪಿಟ್ಟು ಬಳಸುತ್ತಾರೆ. ಇನ್ನು ಮೊದಲಿಂದಲೂ ಹಿತಕಿದ ಕಾಳನ್ನು ಒಣಗಿಸಿ ಬಾಟಲಿಯಲ್ಲಿ ತುಂಬಿಟ್ಟು ಬಳಸುವುದು ಇದ್ದೇಇದೆ. ಆದರೆ ಅದು ಉಪ್ಪಿಟ್ಟಿಗೆ ಅಷ್ಟೊಂದು ರುಚಿಸುವುದಿಲ್ಲ. ಹಸಿಯಾಗಿ ರಕ್ಷಿಸಿಕೊಂಡು ಬಳಸಬಹುದು.

ಒಮ್ಮೆ ಯಾರದೋ ಮನೆಗೆ ಹೋದಾಗ ಕಡಲೆಬೇಳೆ ಉಪ್ಪಿಟ್ಟು ಅಂತ ಕೊಟ್ಟಿದ್ದರು. ನಾನು ಇದೇನು ಅಂಥ ಮಿಕಿಮಕಿ ಅವರ ಮುಖ ನೋಡಿದೆ. ತಿಂದು ನೋಡು ಅಂದರು ತಿಂದೆ ಸವಿಯಾಗಿತ್ತು. ಅದರ ರೆಸಿಪಿ ಕೇಳಿ ತಿಳಿದು ಮನೆಯಲ್ಲಿ ಪ್ರಯೋಗ ಮಾಡಿದೆ. `ಚೆನ್ನಾಗಿದೆ’ ಅಂತ ಎಲ್ಲ ಸವಿದರು. ಕಡಲೆಬೇಳೆಯನ್ನು ಎರಡು ಗಂಟೆ ಕಾಲ ನೆನಸಿ ಅದನ್ನು ತರಿತರಿಯಾಗಿ ರುಬ್ಬಿ ಅದನ್ನು ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಒಂದು ಹಂತ ಮುಗಿಯಿತು. ಆಮೇಲೆ ಉಳಿದ ಉಪ್ಪಿಟ್ಟುಗಳಂತೆ ಒಗ್ಗರಣೆ ಸಿದ್ಧಪಡಿಸಿ, ಅದಕ್ಕೆ ತಯಾರಿಸಿದ ಇಡ್ಲಿಯನ್ನು ಪುಡಿಮಾಡಿ ಸೇರಿಸಿದರೆ ಉಪ್ಪಿಟ್ಟು ರೆಡಿ. ಬಾಯಿಗೂ ಸವಿ, ಸಾಕಷ್ಟು ಪ್ರೊಟೀನೂ ಸಿಗುತ್ತದೆ. ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಷಯ ನನಗೆ ಗೊತ್ತಿರಲಿಲ್ಲ. ಒಮ್ಮೆ ತಿಂದ ಮೇಲೆ ಮಾಡುವುದನ್ನು ಕಲಿತೆ. ಅದು ಧಾನ್ಯವಲ್ಲ, ಹಾಗಾಗಿ, ಎಂಥ ಮಡಿಯವರು ಕೂಡ ಅದರ ಉಪ್ಪಿಟ್ಟನ್ನು ಸವಿಯಬಹುದು.

ಇತ್ತೀಚೆಗೆ ಇನ್ನೊಂದು ಬಗೆಯ ಉಪ್ಪಿಟ್ಟು ಮಾಡುವುದನ್ನು ಕಲಿತೆ. ಅದಕ್ಕೆ ನಾವು ಕೊಟ್ಟ ಹೆಸರು ಇಡ್ಲಿ ಉಪ್ಪಿಟ್ಟು ಅಂತ. ಎಲೆಕೋಸು, ಅಥವಾ ಕ್ಯಾರೆಟ್ ಇಲ್ಲವೆ ಸೀಮೆಬದನೆ ಯಾವುದಾದರೂ ಒಂದನ್ನು ಸಣ್ಣಗೆ ಅಂದರೆ ಕೋಸುಂಬರಿಯಷ್ಟು ಸಣ್ಣಗೆ ಹೆಚ್ಚಬೇಕು. ಈಗೇನು ಕಷ್ಟವಿಲ್ಲ ಬಿಡಿ. ವೆಜ್ ಕಟರ್‌ನಲ್ಲಿ ಹಾಕಿ ಎಳೆದರಾಯಿತು. ಒಂದು ಲೋಟ ಇಡ್ಲಿ ತರಿಯನ್ನು ರಾತ್ರಿ ನೀರಿನಲ್ಲಿ ತೊಳೆದಿಡಬೇಕು. ಬೆಳಗ್ಗೆ ಅದಕ್ಕೆ ಸಣ್ಣಗೆ ಹೆಚ್ಚಿದ ತರಕಾರಿಯನ್ನು ಎರಡೂವರೆ ಲೋಟದಷ್ಟು ಸೇರಿಸಿ, ಒಂದು ಲೋಟ ತೆಂಗಿನತುರಿಯನ್ನು ಪತ್ರೊಡೆ ಮಸಾಲೆಯೊಂದಿಗೆ ರುಬ್ಬಿ ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪಿನೊಂದಿಗೆ ಇಡ್ಲಿ ಲೋಟದಲ್ಲಿ ಬೇಯಿಸಿದರೆ ಇಡ್ಲಿ ಉಪ್ಪಿಟ್ಟು ರೆಡಿ. ಬೆಂದಿರುವ ಇಡ್ಲಿಯನ್ನು ಚಮಚದಲ್ಲಿ ಕೆದಕಿದರೆ ಅದು ಇಡ್ಲಿ ಆಕಾರ ಕಳೆದುಕೊಂಡು ಉಪ್ಪಿಟ್ಟಾಗಿ ತಟ್ಟೆಯತುಂಬ ಹರಡುತ್ತದೆ. ಹೀಗೆ ಕಾಲಕಾಲಕ್ಕೆ ಅದು ಹೊಸಹೊಸ ರೂಪದಲ್ಲಿ ವಿಜೃಂಭಿಸುತ್ತಿದೆ. ʻಉಪ್ಪಿಟ್ಟಾʼ ಅಂತ ಮೂಗುಮುರಿಯುವವರಿಗೆ ಅದರ ಇತಿಹಾಸ ಎಷ್ಟೊಂದು ವೈವಿಧ್ಯದಿಂದ ಕೂಡಿದೆ ಅಂತ ಗೊತ್ತಿಲ್ಲ. ಆದರೂ ಯಾಕೋ ದೋಸೆ ಪಾಯಿಂಟ್ ಇದ್ದಂತೆ ಉಪ್ಪಿಟ್ಟು ಪಾಯಿಂಟ್ ಅಂತ ಯಾರೂ ಶುರುಮಾಡಿಲ್ಲ.

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ