ಅವಳು ಸತ್ತು, ಅವಳ ತಿಥಿ ಮಾಡಿದ ಮೇಲೆ ನಾನು ಮಾಡಿದ ಮೊದಲ ಕೆಲಸ ಅವಳ ಟ್ರಂಕನ್ನು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ವೃದ್ಧಾಶ್ರಮಕ್ಕೆ ಕೊಟ್ಟು ಟ್ರಂಕಲ್ಲಿ ಸಿಕ್ಕ ಐನೂರು ರುಪಾಯಿಯ ಮಾಸಲು ನೋಟನ್ನು ಆಶ್ರಮಕ್ಕೆ ಕೊಟ್ಟಿದ್ದು, ಆಮೇಲೆ ತಡೆಯಲಾರದೆ ಅವಳ ಇಷ್ಟದ ಕೆಂಪು ಕಾಟನ್ ಸೀರೆ, ಅವಳ ಆರೆಂಜ್ ಕಲರಿನ ಜಾಕೆಟ್, ಅವಳು ಬಳಸುತ್ತಿದ್ದ ಉಮಾ ಗೋಲ್ಡ್ ಬಳೆ ತೆಗೆದುಕೊಂಡೆ, ಅವು ಇನ್ನೂ ನನ್ನ ಬೀರುವಿನಲ್ಲಿದೆ, ಆ ಜಾಕೆಟ್ ಸೀರೆ ಈಗಲೂ ಮುಟ್ಟಿದರೆ ಅವಳ ಕೊನೆಯೇ ಕಾಣದ ಮಮತೆಯಿಂದ ಮೈ ತಡುವಿಕೆ ನೆನಪಾಗುತ್ತದೆ, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
ಅಮ್ಮನ ಕುರಿತು ಬೆಚ್ಚನೆಯ ನೆನಪನ್ನು ಹಂಚಿಕೊಂಡಿದ್ದಾರೆ ಜಯರಾಮಚಾರಿ

ಅವ್ವನ ಬಳಿ ಒಂದು ಟ್ರಂಕ್ ಇತ್ತು. ಕಬ್ಬಿಣದ ಟ್ರಂಕು, ನನಗೆ ನೆನಪಿದ್ದಂತೆ ಅದಕ್ಕೆ ಬಣ್ಣ ಇದ್ದಿದಿಲ್ಲ, ಅದು ಯಾವಾಗ ಅವಳು ತೆಗೆದುಕೊಂಡಳೋ ಗೊತ್ತಿಲ್ಲ, ಆ ಟ್ರಂಕು ತನ್ನ ಬಣ್ಣ ಕಳೆದುಕೊಂಡು, ತುದಿಗಳಲ್ಲಿ ಅಲ್ಲಿ ಇಲ್ಲಿ ಜಜ್ಜಿಸಿಕೊಂಡು, ಬೀಗ ಹಾಕುವ ಕಡೆ ರಸ್ಟ್ ಕೂಡ ಹಿಡಿದಿತ್ತು. ದೊಡ್ಡ ಅಣ್ಣ ಸ್ವಂತ ಮನೆ ಮಾಡುವ ಮುನ್ನ ಇದ್ದ ವಠಾರದಲ್ಲಿ, ಆಮೇಲೆ ಆದ ಸ್ವಂತ ಮನೆಯಲ್ಲಿ, ಅಲ್ಲಿಂದ ಅಣ್ಣ ಅತ್ತಿಗೆ ಹೊರಹಾಕಿದಾಗ ಹೋದ ಮೂರನೇ ಅಣ್ಣನ ಮನೆಯಲ್ಲಿ, ಅಲ್ಲಿಂದ ಜಗಳವಾಡಿಕೊಂಡು ಆಯಾ ಆಗಿ ಸೇರಿಕೊಂಡ ನರ್ಸ್ ಹಾಸ್ಟೆಲಿನಲ್ಲಿ, ಅಲ್ಲಿಂದ ಎರಡನೇ ಅಣ್ಣನ ಜೊತೆ ಸೇರಿ ಮಾಡಿದ ಚಿಕ್ಕ ರೂಮಿನಲ್ಲಿ, ಅನಂತರ ನಾನು ಅವರ ಜೊತೆ ಸೇರಿ ಸುಮಾರು ನಾಲ್ಕು ಮನೆ ಬದಲಾಯಿಸಿದಾಗಲೂ ಆ ಟ್ರಂಕ್ ಅವಳ ಜೊತೆ ಬಂದಿತ್ತು. ನನಗೆ ಆ ಕಬ್ಬಿಣದ ಟ್ರಂಕ್ ಅವಳ ಆತ್ಮ ಸಂಗಾತಿಯೇನೋ ಅನಿಸುತ್ತದೆ ಈಗ ನೆನೆಸಿಕೊಂಡರೆ.

ಆ ಟ್ರಂಕಿನಲ್ಲಿ ಅವಳೆಂದು ಬಳಸಿರದ ಒಂದಷ್ಟು ಗರಿಗರಿ ಸೀರೆಗಳು ಇದ್ದವು, ಅಪರೂಪಕ್ಕೆ ಅವರಿವರ ಮದುವೆ ಸಂಭ್ರಮಕ್ಕೆ ಹಾಕಿಕೊಂಡು ಹೋಗುವ ಒಂದೇ ಒಂದು ರೇಷ್ಮೆ ಸೀರೆ, ಮತ್ತೆರಡು ದುಬಾರಿ ಅನಿಸುವ ಆದರೆ ದುಬಾರಿಯಲ್ಲದ ಸೀರೆಗಳು ಇದ್ದವು, ನೀಲಿ ಕೆಂಪು ಹಸಿರು ಹಳದಿ ಹೀಗೆ ಅದಕ್ಕೊಪ್ಪುವ ಹಳೆಕಾಲದ ಈ ಕಾಲದ ಜಾಕೆಟ್‌ಗಳು ಕೂಡ ಇದ್ದವು, ಎಲ್ಲವನ್ನು ಇಸ್ತ್ರಿ ಮಾಡಿ ಒಪ್ಪವಾಗಿ ಜೋಡಿಸಿರುತ್ತಿದ್ದಳು, ಅದರ ಜೊತೆಗೆ ನೂರು ಐನೂರಿನ ನೋಟು ಒಂದೊಂದು ಸಲ ಸೀರೆ ಕೆಳಗೆ ಅಡಗಿರುತ್ತಿತ್ತು, ಆಮೇಲೆ ಆಧಾರ್ ಕೂಡ ಅಲ್ಲೇ ಬಂತು, ವಿಧವಾ ಮಾಶಾಸನ ಮಾಡಿಸಿಕೊಂಡ ಮೇಲೆ ಪೋಸ್ಟ್ ಆಫೀಸಿನ ಪಾಸ್ ಬುಕ್ ಸೇರಿಕೊಂಡಿತು, ಸೀರೆಗಳ ಮಧ್ಯೆ ಒಗರು ವಾಸನೆ ಹೋಗಲಾಡಿಸುವ ಬಿಳಿ ಗುಳಿಗೆಗಳು ಕೂತುಕೊಂಡವು, ಅಪರೂಪಕ್ಕೆ ಟ್ರಂಕ್ ತೆಗೆದಾಗ ರಪ್ಪನೆ ಮೈಮೂಗಿಗೇ ಬಡಿಯುತ್ತಿದ್ದ ಗುಳಿಗೆಯ ವಾಸನೆ ನನ್ನ ನೆನಪಿನಾಳದಲ್ಲಿ ರಿಜಿಸ್ಟರ್ ಒತ್ತಿಬಿಟ್ಟಿದೆ.

ಅವ್ವ ಸತ್ತ ಎರಡು ಮೂರು ವಾರ ನಾನು ತತ್ತರಿಸಿ ಹೋಗಿದ್ದೆ, ಅವಳ ನೆನಪುಗಳು ದಾಳಿ ಇಟ್ಟು ಅವಳ ಜೊತೆ ನಕ್ಕ ನೆನಪುಗಳು ಅಳು ಬರಿಸುತ್ತಿದ್ದರೆ, ಅವಳ ಜೊತೆ ಅತ್ತ ನೆನಪುಗಳು ನಗು ತರಿಸತ್ತಿದ್ದವು, ಅವಳ ಕಿವುಡುತನ, ಅವಳ ಬಡತನ, ಅವಳ ಅಸಹಾಯಕತೆ, ಅವಳ ಗಟ್ಟಿತನ, ಅವಳ ಪ್ರೀತಿ, ಅವಳ ಸ್ವಾರ್ಥ, ಬದುಕುವ ಛಲ ನೆನಪಿಗೆ ಬಂದು ಹಿಂಡಿ ಹಿಪ್ಪೆ ಮಾಡಿಬಿಟ್ಟವು, ಆಗ ಅವುಗಳಿಂದ ತಪ್ಪಿಸಿಕೊಳ್ಳಲು ನನಗಿದ್ದ ಏಕೈಕ ಮಾರ್ಗವೆಂದರೆ ಅವಳ ನೆನಪು ತರಿಸುವ ಎಲ್ಲ ವಸ್ತುಗಳಿಗೂ ಎಳ್ಳು ನೀರು ಬಿಡುವುದು. ಅವಳದು ಗಾಂಧಿಯಂತ ಸರಳ ಬದುಕು. ಅವಳು ನಮ್ಮನ್ನು ಬಿಟ್ಟು ಹೋದಮೇಲೆ ನಮಗೋಸ್ಕರ ಬಿಟ್ಟು ಹೋದದ್ದು ರಾಶಿಗಟ್ಟಲೆ ನೆನಪುಗಳು, ಪೋಸ್ಟ್ ಆಫೀಸಲ್ಲಿ ಉಳಿದುಕೊಂಡ ಮಾಶಾಸನ ಮತ್ತವಳ ತುಕ್ಕಿಡಿದ ಟ್ರಂಕು. ಅವಳು ಸತ್ತ ಮೇಲೆ ಅವಳ ವಿಧವಾ ಮಾಶಾಸನ ಏನಾಯ್ತು ಗೊತ್ತಿಲ್ಲ? ಪೋಸ್ಟ್ ಆಫೀಸಿಗೆ ನಾವಂತೂ ತಿಳಿಸಲಿಲ್ಲ, ಅವಳಿನ್ನು ಅವರ ರೆಕಾರ್ಡಿನಲ್ಲಿ ಬದುಕಿರಬಹುದಾ? ಮೂರು ದಿನ ಮುಂಚೆ ಕಾಲ್ನಡಿಗೆಯಲ್ಲಿ ನಡೆದು ತನ್ನ ಮುದಿ ಗೆಳತಿಯರ ಜೊತೆ ಪೋಸ್ಟ್ ಆಫೀಸ್ ಎದುರು ಕೂತು, ಬಿಸಿಲಿಗೆ ಸೆರಗು ತಲೆ ಮೇಲೆ ಹಾಕಿಕೊಂಡು ಪೋಸ್ಟ್ ಮಾಸ್ತರನ ನೋಡುತ್ತಾ ಕೂತ ಅವಳ ಚಿತ್ರ ಎಷ್ಟು ಮಂದಿಗೆ ನೆನಪಿದ್ದಿತು, ಹೂ ನಗು ಚೆಲ್ಲುವ ಕೈ ಒಡ್ಡುವ ಕಾಣದ ಮುದುಕಿಯನ್ನ ಅಟ್ ಲಿಸ್ಟ್ ಪೋಸ್ಟ್ ಮಾಸ್ಟರ್ ನೆನಪಿಸ್ಕೊಂಡಿರಬಹುದಾ? ಮುದುಕಿಗೆ ಬರುತ್ತಿರುವ ದುಡ್ಡು ಅವನೇ ತೆಗೆದುಕೊಳ್ಳುತ್ತಿದ್ದನ? ಇಲ್ಲ ಮುದುಕಿ ಸತ್ತಿರಬಹುದೆಂದು ತಿಳಿಸಿದ್ದನಾ? ಗೊತ್ತಿಲ್ಲ!

ಅವಳು ಸತ್ತು, ಅವಳ ತಿಥಿ ಮಾಡಿದ ಮೇಲೆ ನಾನು ಮಾಡಿದ ಮೊದಲ ಕೆಲಸ ಅವಳ ಟ್ರಂಕನ್ನು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ವೃದ್ಧಾಶ್ರಮಕ್ಕೆ ಕೊಟ್ಟು ಟ್ರಂಕಲ್ಲಿ ಸಿಕ್ಕ ಐನೂರು ರುಪಾಯಿಯ ಮಾಸಲು ನೋಟನ್ನು ಆಶ್ರಮಕ್ಕೆ ಕೊಟ್ಟಿದ್ದು, ಆಮೇಲೆ ತಡೆಯಲಾರದೆ ಅವಳ ಇಷ್ಟದ ಕೆಂಪು ಕಾಟನ್ ಸೀರೆ, ಅವಳ ಆರೆಂಜ್ ಕಲರಿನ ಜಾಕೆಟ್, ಅವಳು ಬಳಸುತ್ತಿದ್ದ ಉಮಾ ಗೋಲ್ಡ್ ಬಳೆ ತೆಗೆದುಕೊಂಡೆ, ಅವು ಇನ್ನೂ ನನ್ನ ಬೀರುವಿನಲ್ಲಿದೆ, ಆ ಜಾಕೆಟ್ ಸೀರೆ ಈಗಲೂ ಮುಟ್ಟಿದರೆ ಅವಳ ಕೊನೆಯೇ ಕಾಣದ ಮಮತೆಯಿಂದ ಮೈ ತಡುವಿಕೆ ನೆನಪಾಗುತ್ತದೆ, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.

ವೃದ್ಧಾಶ್ರಮಕ್ಕೆ ಸೀರೆ ಕೊಟ್ಟ ಎಷ್ಟೋ ತಿಂಗಳುಗಳ ಮೇಲೆ ಒಮ್ಮೆ ಆ ವೃದ್ಧಾಶ್ರಮದ ಎದುರು ಗಾಡಿ ಓಡಿಸುವಾಗ ಅವ್ವನ ಸೀರೆ ಉಟ್ಟ ಒಬ್ಬ ಮುದುಕಿ ಅಲ್ಲಿ ಕೂತಿದ್ದು ನೋಡಿ ಅಳು ಬಂದಿತ್ತು. ತುಂಬಾ ಚಿಕ್ಕ ವಯಸ್ಸಲ್ಲಿ ಒಮ್ಮೆ ಎಲ್ಲೋ ಕರೆದುಕೊಂಡ ಹೋದ ನನ್ನ ಅವ್ವ ಕಾಣಿಸದೆ ಇದ್ದಾಗ ನಾನು ನನ್ನ ಅವ್ವನಂತೆ ಕಾಣುವ ಒಬ್ಬರನ್ನು ನೋಡಿ ಹೋಗಿ ಅವರ ಸೀರೆ ಹಿಡಿದುಕೊಂಡ ನೆನಪು ಬಂತು.

*****

ಅವಳ ಈ ಟ್ರಂಕ್ ನಾನು ಮರೆತೇಬಿಟ್ಟಿದ್ದೆ, ಮತ್ತೆ ನೆನಪು ಮಾಡಿದ್ದು ನನ್ನ ಹೆಂಡತಿ. ನನ್ನ ಮೂರನೇ ಅಣ್ಣ ಸತ್ತಾಗ ಅವನ ದೇಹ ನೋಡಲು ಹೋಗಿದ್ದಾಗ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದೆ, ಕಾರ್ಯವನ್ನು ಮುಗಿಸಿ ಮನೆಗೆ ಬಂದಾಗ ಹೆಂಡತಿ ಕೇಳಿದ ಪ್ರಶ್ನೆ ‘ನಿಮ್ ಅಮ್ಮ ಹತ್ರ ಇದ್ದ ಆರು ಸೀರೆ ಏನು ಮಾಡಿದ್ಯೋ?’ ನನಗೆ ತಟ್ಟನೆ ನೆನಪಾಗಲಿಲ್ಲ, ಅದರಲ್ಲೂ ಎಣಿಸಿಕೊಂಡು ಆರು ಸೀರೆ ಎಂದರೆ ಏನು ಹೇಳೋದು? ಏನು ಹೇಳ್ತ ಇದ್ದೀಯ ಯಾವ ಸೀರೆ ಅಂದಾಗ ಅವಳು ಅದರ ಹಿನ್ನೆಲೆ ಹೇಳಲು ಶುರು ಮಾಡಿದಳು.

ಅವ್ವನಿಗೆ ಕ್ಯಾನ್ಸರ್ ಬಂದು ಮಂಚಕ್ಕೆ ದೇಹ ಆತುಕೊಂಡಾಗ ಅವಳನ್ನು ನೋಡಿಕೊಂಡಿದ್ದು ನನ್ನ ಮೂರನೇ ಅಣ್ಣನ ಆಗಷ್ಟೇ ಹೊಸದಾಗಿ ಮದುವೆಯಾದ ಅತ್ತಿಗೆ, ಆಗಾಗ್ಗೆ ನನ್ನ ದೊಡ್ಡ ಅತ್ತಿಗೆಯೂ ಜೊತೆಗೆ ಅಕ್ಕ ಕೂಡ ಮನೆಗೆ ಬಂದು ಮಾತನಾಡಿಸಿ ಹೋಗುತ್ತಿದ್ದರು. ನನ್ನ ಅಕ್ಕ, ದೊಡ್ಡ ಅತ್ತಿಗೆ ಮತ್ತು ಕೊನೆಯ ಅತ್ತಿಗೆ ಮೂವರಿಗೂ ನನ್ನ ಅವ್ವನ ಟ್ರಂಕಲ್ಲಿ ಭದ್ರವಾಗಿ ಉಳಿದಿದ್ದ ಆರು ಸೀರೆಗಳ ಮೇಲೆ ಕಣ್ಣಿತ್ತು, ಅವ್ವ ಜಾಸ್ತಿ ದಿನ ಉಳಿಯೋಲ್ಲ ಎಂದು ಎಲ್ಲರಿಗೂ ಗೊತ್ತಿತ್ತು, ಅವಳು ಸತ್ತ ಮೇಲೆ ಆ ಆರು ಸೀರೆಗಳನ್ನು ಅಕ್ಕನೂ, ದೊಡ್ಡ ಅತ್ತಿಗೆಯೂ ಮತ್ತು ಸಣ್ಣ ಅತ್ತಿಗೆಯೂ ಇಟ್ಟುಕೊಳ್ಳಲು ಬಯಸಿದ್ದರು. ಆದರೆ ನಾನು ಯಾರನ್ನು ಕೇಳದೆ ಇವೆಲ್ಲದರ ಅರಿವು ಕೂಡ ಇಲ್ಲದೆ ಅದನ್ನು ವೃದ್ಧಾಶ್ರಮಕ್ಕೆ ಕೊಟ್ಟಿದ್ದೆ, ನನ್ನದು ಲವ್ ಮ್ಯಾರೇಜ್ ಆದ ಕಾರಣ ನನ್ನ ಅತ್ತಿಗೆಯರ ಮತ್ತು ಅಕ್ಕ ಆ ಸೀರೆಗಳನ್ನು ನನ್ನ ಹೆಂಡತಿಗೆ ಕೊಟ್ಟಿದ್ದೇನೆ ಎಂದು, ಅದನ್ನು ಆ ಸಾವಿನ ಮನೆಯಲ್ಲಿ ಕೇಳಿದ್ದರು. ನನ್ನ ಹೆಂಡತಿಗೂ ನಾನು ಈ ವಿಷಯ ಹೇಳಿರದ ಕಾರಣ ಅವಳಿಗೂ ಗೊತ್ತಿಲ್ಲ ಎಂದು ಹೇಳಿದ್ದಾಳೆ.

ವಾಪಸು ಮನೆಗೆ ಬಂದಾಗ ಕೇಳಿದಾಗ, ನನಗೆ ಸಾವಿನ ಮನೆ ಎಲ್ಲಿ? ಟ್ರಂಕಿನಲ್ಲಿ ಇದ್ದ ಅವ್ವನ ಸೀರೆಗಳೆಲ್ಲಿ? ಎನಿಸಲು ಶುರುವಾಯ್ತು. ಆ ಟ್ರಂಕಿನ ಆರು ಸೀರೆಗಳಿಗೆ ಆರು ಕಣ್ಣುಗಳು ಕೂಡ ಬಿದ್ದಿದ್ದು ನೆನಪಾಗಿ ಒಂತರ ವಿಚಿತ್ರ ಅನುಭವ ಆಯ್ತು. ಸಾವು ಸೀರೆ ರೂಪದಲ್ಲೂ ಕಾಡಿರುವ ವಿಚಿತ್ರ ರೀತಿ ಕಂಡು ನಗು ಬಂತು.