ನಿಜ; ತಾತನನ್ನು ಹೊರಗೆ ಮಲಗಿಸಿದ್ದರು. ಬಸಿದು ಹೋಗಿದ್ದ. ಮಾತು ಸರಿಯಾಗಿ ಹೊರಡುತ್ತಿರಲಿಲ್ಲ. ಹೋದ ಕೂಡಲೆ ವ್ಯಗ್ರ ನಾಯಿಗಳಂತೆ ನನ್ನ ಮೇಲೆ ಆ ಬಂಧು ಬಳಗ ಬೊಗಳಿತು. ಕೇರು ಮಾಡಲಿಲ್ಲ. ಅವನು ದರಿದ್ರ ನನ್ನಪ್ಪ ಹೆಣದಂತೆ ಅರೆ ಬೆತ್ತಲೆಯಾಗಿ ಬೀದಿಯ ಲೈಟು ಕಂಬಕ್ಕೆ ಒರಗಿಕೊಂಡು ಅಮಲಾಗಿ ಯಾರ ಮೇಲೊ ಬೈಯ್ಯುತ್ತಿದ್ದ. ನನ್ನ ಕಂಡ ಕೂಡಲೇ… ‘ವರದಕ್ಷಿಣೆಯಾ ಯೆಸ್ಟು ತಕಂದಿದ್ದಾನಂತೆ ಕೇಳೀ… ಆ ದುಡ್ಡು ನನುಗೆ ಸೇರಬೇಕೂ’ ಎಂದು ಕುಯ್ಗರೆಯುತ್ತಿದ್ದ. ಇವನು ಇಂಗೇ ಭಿಕ್ಷೆ ಬೇಡಿಕೊಂಡೇ ಸಾಯುತ್ತಾನೆ ಎನಿಸಿತು.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 35ನೇ ಕಂತು
ಒಂದು ಹದಕ್ಕೆ ಬಂದಿದ್ದೆ. ಸನ್ಯಾಸಿ ಆಗಲು ನಿರ್ಧರಿಸಿದ್ದೆ. ಸಾಕೇತ್ರಾಜ್ಗೆ ಕೊಟ್ಟಿದ್ದ ಮಾತು ಅಣಕಿಸಿತ್ತು. ವೈರಾಗ್ಯ ತಾಳಿದ್ದೆ. ಏಟು ತಿಂದು ಜಡವಾಗಿದ್ದ ಜೀವಕ್ಕೆ ಈ ಲೋಕದ ಬಾಹ್ಯ ವಿಷಯಗಳೆಲ್ಲ ಸಂಕೋಲೆ ಎನಿಸಿತ್ತು. ಸನ್ಯಾಸಿಯೂ ಜ್ಞಾನಿಯೇ… ನಾನು ಕಳ್ಳ ಸನ್ಯಾಸಿ ಅಲ್ಲ… ಸಾತ್ವಿಕ ಕ್ರಾಂತಿಕಾರಿ ಯೋಗಿಯಾಗಲು ಸಾಧ್ಯ ಇಲ್ಲವೇ ಎಂದು ಕೇಳಿಕೊಂಡಿದ್ದೆ. ಅನೇಕ ಪತಂಗಗಳ ಕಂಡು ನಿರಾಶೆಗೊಂಡಿದ್ದೆ. ಇದು ಇಷ್ಟೇ; ಇದರಲ್ಲೇನೂ ಅನಂತವಾದದ್ದು ಇಲ್ಲ ಎನಿಸಿತ್ತು. ಹಳ್ಳಿಯಲ್ಲಿ ಕಂಡಿದ್ದ ಆ ನೂರಾ ನಮೂನಿ ಕುಟುಂಬಗಳ ಕನಸುಗಳೆಲ್ಲ ಕೆದರಿಕೊಂಡು ಬಂದು ನನ್ನ ಮುಂದೆ ಕುಣಿದಂತೆ ಭಯವಾಗಿತ್ತು. ಅಂತಹ ವಿಕೃತ ಅಪ್ಪ ಸಂಸಾರವನ್ನು ಹೇಗೆ ಸಂಹರಿಸುತ್ತಿದ್ದ ಎಂಬುದು ಗೊತ್ತಿತ್ತು. ಅಕ್ಕನ ಮನೆಯ ಸಹವಾಸ ಬಿಟ್ಟಿದ್ದೆ. ಅಲ್ಲಿಗೆ ಹೋದರೆ ಸಾಕು; ಆಕೆ ನನ್ನ ಮಗಳನ್ನೆ ಮದುವೆ ಆಗಬೇಕು ಎಂದು ಹಕ್ಕು ಚಲಾಯಿಸುತ್ತಿದ್ದಳು. ಅಕಸ್ಮಾತ್ ಅಕ್ಕನ ಕೊಂಡಿ ಕಳಚಿದ್ದರೂ ತುಂಡಾಗದೆ ಹಾಗೇ ಹೇಗೊ ಮಾಯವಾಗಿತ್ತು. ನನಗಿದ್ದ ಅಳಿದುಳಿದ ರಕ್ತ ಬಾಂಧವ್ಯ ಅವಳಲ್ಲಿ ಮಾತ್ರ ಒಂದಿಷ್ಟು ಉಳಿದಿತು. ಆ ಶ್ರೀನಿವಾಸ ಎಲ್ಲಿ ಹಾಳಾದನೊ ಮತ್ತೆ ಎಲ್ಲೂ ಕಂಡಿರಲಿಲ್ಲ. ಶಾಂತಿ ತನ್ನ ಸಂಸಾರದ ಮರೆಯಲ್ಲಿ ಸುಖವಾಗಿದ್ದಳು.
ಎಷ್ಟೋ ಸಲ ಉರಿವ ಮುನಿಯಂತೆ ಇರುತ್ತಿದ್ದೆ. ‘ಸರಿ ಬಿಡೂ… ನಿನ್ನ ಮುದ್ದಿಸೋದಕ್ಕೂ ಆಗಲ್ಲ; ದ್ವೇಷ ಮಾಡೋಕು ಆಗಲ್ಲ… ಅಕಸ್ಮಾತ್ ನೀನು ಯಾವಳನ್ನಾದರೂ ಒಪ್ಪಿ ಕೈ ಹಿಡಿದೆಯೊ… ಅಲ್ಲಿಗೆ ಅವಳ ಕತೆ ಮುಗಿಯುತ್ತೆ’ ಎಂದು ಬಿಟ್ಟಿದ್ದಳು ಒಬ್ಬ ಚಿನಾಲಿ. ನನ್ನ ಕಾಡಿ ಹಿಂದೆ ಹಿಂದೆಯೆ ಬಂದು ಕಾಟಕೊಟ್ಟು; ಅವನು ನನ್ನ ಹಿಂದೆ ಬಿದ್ದಿದ್ದಾನೆ ಎಂದು ಹೈ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಳು. ಅಪಾಯದಿಂದ ದೂರವಿದ್ದೆ. ಒಂದೇ ಎರಡೇ ಹೆಣ್ಣ ಸಂಗದ ಮಧುರ ನೆನಪೂ… ಒಂದು ದಿನ ಅವೆಲ್ಲ ಕೊಚ್ಚಿ ಹೋಗಿದ್ದವು. ದಾಹ ತೀರಿದ ಮೇಲೆ ದಾರಿ ಬೇರೆ ಬೇರೆ ಆಗುವುದು ಪ್ರಾಯದಲ್ಲಿ ಸಹಜ. ಅಕ್ರಮ ಏನನ್ನೂ ಮಾಡಿರಲಿಲ್ಲ. ಯಾವುದೂ ಗ್ಯಾರಂಟಿ ಇರಲಿಲ್ಲ. ಸುಪ್ತವಾಗಿದ್ದ ಎಲ್ಲ ಕೋಪತಾಪಗಳು ಚಿಮ್ಮುವ ಸ್ಥಿತಿಗೆ ಬಂದಿದ್ದವು. ಮಾತೇ ಬೇಡ… ಚರ್ಚೆಯೇ ವ್ಯರ್ಥ… ನಾನಿದನ್ನೆಲ್ಲ ಸರಿಪಡಿಸಲಾರೆ ಎಂಬ ಸಂಕಟ ಎದೆಯಲ್ಲಿ ಕುಲುಮೆಯ ತಿದಿ ಒತ್ತಿದಂತೆಲ್ಲ ತೀವ್ರವಾಗುವಂತೆ ನೀಲಿಗಟ್ಟುತ್ತ ಉರಿಯುತಿತ್ತು. ಒಬ್ಬ ಐನ್ಸ್ಟೈನ್ ಸನ್ಯಾಸಿ ಅಲ್ಲವೇ… ಅನಂತವಾದದ್ದನ್ನು ಹಿಡಿಯುವುದು ಚಿಟ್ಟೆ ಹಿಡಿದಷ್ಟು ಸುಲಭವೇ… ಸಂಸಾರದಲ್ಲಿ ಗೆದ್ದರೇನು ಫಲ… ಈ ವಿಸ್ಮಯ ಲೋಕವ ಗೆಲ್ಲಬೇಕು. ಅದನ್ನು ಕಾಮಿಸಬೇಕು… ನಾಗರೀಕತೆಗಳ ತೊಟ್ಟಿಲಲ್ಲಿ ಮನುಷ್ಯನ ಪಯಣದ ಏಳು ಬೀಳುಗಳ ಹುಡುಕಬೇಕು… ಅದೇ ಮುಕ್ತಿ… ಅದೇ ಹೆಣ್ಣು… ಅದರೊಡನೆ ಮಿಲನವಾಗಿ ಪ್ರಾಣ ಬಿಡಬೇಕು ಎಂಬ ಉತ್ಕಟತೆ ಎಷ್ಟಿತ್ತು ಎಂದರೆ ನನ್ನ ಭಾಷೆಗೆ ವಿವರಿಸಲು ಅಂತಹ ಶಕ್ತಿ ಇಲ್ಲ. ಆ ಎಲ್ಲ ಕಿರಿಕಿರಿಗಳು ಹೊಗೆ ಹಾಕುತ್ತಲೇ ಇದ್ದವು… ನಿಭಾಯಿಸಲು ಹತ್ತಾರು ಯೋಗಗಳ ಕಲಿತುಕೊಂಡಿದ್ದೆ.
ಇದ್ದಕ್ಕಿದ್ದಂತೆ ನನ್ನ ಅಕ್ಕ ಭಾವ ಅವತ್ತು ವಿಳಾಸ ಹುಡುಕಿಕೊಂಡು ಹಾಸ್ಟಲಿಗೆ ಬಂದು ಬಾಗಿಲು ಬಡಿದಾಗ ನನಗೆ ದಿಗಿಲಾಗಿತ್ತು. ಹಾಗೆ ತಡಕಿ ಬರುವ ಯಾವ ಮಹಾ ಸಂಗತಿಯೂ ಇರಲಿಲ್ಲ. ಅಕ್ಕರೆಯಿಂದ ಕರೆದು ಮಂಚದ ಮೇಲೆ ಕೂರಿಸಿ ನಾನು ಕುರ್ಚಿ ಮೇಲೆ ಕೂತೆ. ನನ್ನ ಭಾವ ಶಾಲಾ ಶಿಕ್ಷಕ. ನನ್ನಕ್ಕನೇ ಜೋರು. ಹಠವಾದಿ. ನಮ್ಮ ಮನೆತನದ ಎಷ್ಟೋ ಗುಣಗಳ ಬಳುವಳಿಯಾಗಿ ಪಡೆದುಕೊಂಡಿದ್ದವಳು. ತಕ್ಷಣ ಚಹಾ ಮಾಡಿಕೊಟ್ಟೆ, ತುರ್ತಲ್ಲಿದ್ದರು. ‘ಏನವ್ವ ಬಂದದ್ದು’ ಎಂದಿದ್ದೆ. ನೇರ ವಿಷಯಕ್ಕೆ ಬಂದಳು. ‘ಏನಿಲ್ಲ ಕಣಪ್ಪಾ… ನೋಡ್ಕಂದು ವೋಗುವಾ… ಅಂಗೇ ವಿಶ್ಯನೂ ತಿಳಿಸುವಾ ಅಂತಾ ಬಂದೊ’ ಎಂದಳು. ‘ಏನಕ್ಕ ವಿಷಯ?’ ‘ಶೋಭನ ಮದುವೆ ಮಾಡುಕೆ ಏರ್ಪಾಟಾಗದೆ ಕಣಪ್ಪಾ… ನಿಮ್ಮ ಮಾವನ ಕಡೆ ಹಳೆ ಸಂಬಂಧ. ಮದುವೆ ಒಪ್ಕಂದವರೆ… ನಿನುಗೊಂದು ಸಲ ಯಿದಾ ಯೇಳ್ಬೇಕು ಅನಿಸ್ತು… ಅದ್ಕೇ ಇಲ್ಲಿಗಂಟ ತಡಿಕಂಡು ಉಡಿಕಂಡು ಬರುತ್ರೆಲಿ ಸಾಕಾಗೋಯ್ತು ಕನಪ್ಪಾ’ ಎಂದು ಮಾತು ನಿಲ್ಲಿಸಿದಳು. ನನ್ನ ಮಾವ ದೇವರಂಥಹ ಮನುಷ್ಯ. ಏನೂ ಮಾತಾಡಲಿಲ್ಲ. ನನ್ನ ಅಕ್ಕನ ಇಂಗಿತ ನನಗೆ ಹೊಳೆಯುತಿತ್ತು. ‘ಹುಡುಗ ಏನು ಕೆಲ್ಸ ಮಾಡ್ತಾನವ್ವಾ’ ಎಂದೆ. ‘ಲೆಚ್ಚರಂತೆ ಕನಪ ಬೆಂಗಳೂರೆಲಿ’ ‘ಹೌದೇ… ಹೋಗಿ ನೋಡಿ ವಿಚಾರ್ಸಿದ್ದೀರಾ… ಶೋಭಳ ಕೇಳಿದ್ದೀರಾ… ಇಷ್ಟು ಚಿಕ್ಕ ವಯ್ಸಿಗೇ ಯಾಕಕ್ಕ ಅವಳಿಗೆ ಮದುವೆ’ ‘ಅಂಗನ್ನಬ್ಯಾಡ ಸುಮ್ನಿರಪ್ಪಾ… ವಳ್ಳೆ ಕಾರ್ಯಕೆ ಕೈ ಹಾಕಿವೀ… ಮದ್ವೆ ಮಾಡ್ಕಪಾ ನನ ಮಗಳಾ ಅಂತಾ ನಿನ್ನ ಕಾಲಿಡ್ಕಂಡೆ… ಆದ ನೀನೂ… ಎಲ್ಲೊ ಒಂದ್ಮನೆ ಸಂಸಾರ ಮಾಡ್ಕಂದಿರ್ತಳೆ ಬಿಡೂ… ನೀನೇನಾರ ಆಗುವಂಗಿದ್ದಿಯಾ… ಈಗ ಯಾಕೆ ಅದೆಲ್ಲ. ಋಣ ಇಲ್ಲ ಅಂತಾ ಎದೆಗೆ ಕಲ್ಲಾಕಂದು ಮದುವೆಗೆ ಒಪ್ಪಿದ್ದೀವಿ… ಮುಂದಿನ ಭಾನುವಾರ ಒಪ್ಪಿಳ್ಳೇವು ಅದೇ… ಕೊಡುದು ಬುಡುದು ಮಾತದೆ. ನೀನು ಇದ್ದೂ ನಮ್ಮ ಪಾಲ್ಗೆ ಇಲ್ದಂಗಾದೆ… ಮಾತುಕತೆಗಾದ್ರು ಬಂದು ಸೋದುರಮಾವನಾಗಿ ನಾಕು ಮಾತಾಡಿ ಕೈಲಾದ್ದ ಮಾಡು’ ಎಂದು ಅಳುವ ತಡೆದುಕೊಂಡಳು. ಇವೆಲ್ಲ ಹಳೆ ಕಾಲದ ಹಳ್ಳಿಯ ಮೆಲೊಡ್ರಾಮಾ ಬ್ಲಾಕ್ಮೇಲ್ ಎಂದು ನಿರ್ಲಕ್ಷಿಸಿದೆ. ‘ಈಗಲಾದರೂ ಯೋಚನೆ ಮಾಡಪ್ಪಾ’ ಎಂದಳು ಅಕ್ಕ. ‘ಅಂಗಂದ್ರೆ ಏನಕ್ಕ’ ಎಂದದ್ದಕ್ಕು ಮಾವ ಸಿಟ್ಟಾಗಿ ನನ್ನ ಅಕ್ಕನ ಮೇಲೆ ರೇಗಿದಕ್ಕೂ ಒಂದೇ ಆಗಿತ್ತು. ಮಾತು ತುಂಡಾಗಿದ್ದವು.
ಹೊತ್ತಾಗುತಿತ್ತು. ಹೊರಡಲು ಮುಂದಾದರು. ಬೀಳ್ಕೊಡಲು ಕರೆತಂದೆ. ಅಕ್ಕ ಇನ್ನೊಂದು ಮಾತು ಸೇರಿಸಿದಳು. ‘ನೀನು ಸೋದುರಮಾವ ಕಣಪಾ… ಏನ್ಕೊಟ್ಟ ನಿಂತಮ್ಮ ಅಂತಾ ಕೇಳ್ತರೆ. ಏನಾರ ಒಡವೆ ಮಾಡಿಸ್ಕೊಡಬೇಕಾಯ್ತದೆ. ದುಡ್ಡ ರೆಡಿ ಮಾಡ್ಕಪಾ’ ಎಂದಳು. ಇಷ್ಟವಾಗಲಿಲ್ಲ. ನಾನು ಅಂತಹ ವ್ಯವಹಾರದ ಭಾಷೆ, ಸಂಬಂಧಗಳ ಮನುಷ್ಯನೇ ಅಲ್ಲಾ… ನಾಲ್ಕು ಜನರ ಹಿತಕ್ಕಾಗಿ ಪ್ರಾಣವನ್ನೆ ಬೇಕಾದರು ಕೊಡಲು ದುಡುಕಿ ಬಂಡೆಗೆ ತಲೆ ಚಚ್ಚಿಕೊಳ್ಳಬಹುದಾಗಿದ್ದೆ. ಹೊರಟರು. ಒಂದು ಕ್ಷಣ ಇಸ್ಸೀ ಅನಿಸಿತು. ಎಷ್ಟೆಲ್ಲ ಓದಿ ಏನು ತಾನೆ ಫಲ… ಹಳ್ಳಿಯ ಸಂಬಂಧ ಹತ್ತಿರ ಬಂದಕೂಡಲೆ ನಾನು ಅದೇ ಅವತ್ತಿನ ಆ ನರಕದ ಕೂಪದಲ್ಲಿ ಬಿದ್ದಂತಾಗುತ್ತದಲ್ಲಾ… ಅದರಿಂದ ಮುಕ್ತಿ ಎಂದರೆ ಹೇಗೆ… ಇಲ್ಲಿಗೆ ಬಂದು ಇಷ್ಟೆಲ್ಲ ಕಲಿತು ಏನಾದರು ವಿಮೋಚನೆ ಪಡೆದಿರುವೆನೆ? ಇನ್ನೂ ಸಂಕೋಲೆಗಳು ಹೆಚ್ಚಾಗಿವೆಯಲ್ಲಾ ಎಂದು ತಲೆ ನೋವಾಯಿತು. ಅದೇ ಹಿತವಾದ ಸಂಗೀತ ಆಲಿಸುತ್ತ ರಾತ್ರಿ ಕಳೆದೆ. ಹಳೆಯದೆಲ್ಲವ ನೆನೆದೆ. ಶೋಭಳ ನೆನೆದೆ… ಪುಟ್ಟ ಹಳ್ಳಿಯ ಹುಡುಗಿ. ಒಂದು ದಿನವೂ ನನ್ನ ಹತ್ತಿರ ಬಂದು ಮಾವ ಎಂದು ಕೂತು ಆಟ ಆಡಿದವಳಲ್ಲ. ‘ನಿನ್ನ ಯಜಮಾನ… ಗಂಡ ಬಂದವನೆ’ ಎಂದು ಬಾಲಕಿಯಾಗಿದ್ದಾಗ ಜನ ಚುಡಾಯಿಸುತ್ತಿದ್ದರು. ಅದಕ್ಕಾಗಿಯೊ ಏನೊ ನಾನು ಹಳ್ಳಿಗೆ ಹೋದಾಗಲೆಲ್ಲ ಅವರ ಅಜ್ಜಿಯ ಸೆರಗ ಮರೆಯಲ್ಲೆ ಓಡಾಡಿ ಕೈಗೇ ಸಿಗುತ್ತಿರಲಿಲ್ಲ. ಅವರವರ ಲೆಕ್ಕ… ಅವರ ಮಗಳು… ಯಾರಿಗಾದರೂ ಕೊಟ್ಟು ಮದುವೆ ಮಾಡಲಿ. ಸದ್ಯ ಅಲ್ಲಿಗೆ ಸಂಬಂಧ ಮುಗಿಯುತ್ತದಲ್ಲಾ… ಆ ದಿನ ಬಂದಾಗ ಹೋಗಿ ಅಕ್ಷತೆ ಹಾಕಿ ಬಂದರಾಯಿತು ಎಂದು ಮರೆತೆ. ಜಂಜಡಗಳಲ್ಲಿ ಈಜಿದೆ. ಒಂದೊಂದು ದಿನವೂ ಒಂದೊಂದು ದಂಡೆಗೆ ಬಂದು ಹೊಸ ಹೊಸ ಅಲೆಗಳಿಗೆ ಎದೆಕೊಡುತ್ತಿದ್ದೆ. ಅಕ್ಕನ ಮಗಳ ಒಪ್ಪಂದಕ್ಕೂ ನನಗೂ ಏನು ಸಂಬಂಧ… ಯಾಕೆ ಹೋಗಬೇಕು… ನಾನ್ಯಾವ ಸೀಮೆಯ ದೊಡ್ಡಮನುಷ್ಯ… ನನ್ನ ಯಾವ ಅವಶ್ಯಕತೆಯೂ ಅಲ್ಲಿಲ್ಲ. ಹೋಗುವುದು ಬೇಡ. ಆ ಹಳ್ಳಿ ಜನರ ತಲೆಕೆಟ್ಟ ತರಲೆ ಶಾಸ್ತ್ರಗಳ ಮದುವೆಗೂ ನನಗೂ ಆಗಿ ಬರುವುದಿಲ್ಲ. ನಮ್ಮ ದಾರಿಯೆ ಬೇರೆ ಅವರ ಆಲೋಚನೆಗಳೇ ಬೇರೆ ಎನಿಸಿತು.
ವಿದ್ಯಾರ್ಥಿಗಳು ಡೆಸರ್ಟೇಷನ್ ಸಲ್ಲಿಸಬೇಕಿತ್ತು. ಅದಕ್ಕೆ ಗೈಡ್ ಮಾಡಿ ಮೌಲ್ಯಮಾಪನ ಮಾಡಬೇಕಿತ್ತು. ಅದೇನು ಲಟಾರಿ ಕಿರುನಿಬಂಧಗಳೊ… ಬಲೇ ತಮಾಷೆಯಾಗಿರುತ್ತಿದ್ದವು. ಜಗತ್ತಿನ ಏನೇನೊ ಓದಿಕೊಂಡಿದ್ದ ಮಾದರಿಗಳ ಮುಂದೆ ಅಂತಹ ಬರಹಗಳೆಲ್ಲ ಕಾಗದದ ದೋಣಿಗಳಂತೆ ಕಂಡು ಅಯ್ಯೋ ಎನಿಸುತಿತ್ತು. ಆ ಬ್ಯುಸಿಯಲ್ಲಿ ಭಾನುವಾರ ಬಂದಿದ್ದೇ ಗೊತ್ತಿರಲಿಲ್ಲ. ದೇಮಯ್ಯ ಎಂಬ ವಿದ್ಯಾರ್ಥಿ ಇದ್ದ. ಪಿಎಚ್.ಡಿ ಮಾಡುತ್ತಿದ್ದ. ನನ್ನ ಅಕ್ಕ ಭಾವ ಬಂದಿದ್ದು ಅವನಿಗೆ ಗೊತ್ತಿತ್ತು.
‘ವೋsss ಅಣ್ಣಾ… ನೀನು ಊರ್ಗೆ ವೋಗಿರ್ತಿಯೆ ಅಂದ್ರೆ ಇನ್ನೂ ಇಲ್ಲೇ ಇದ್ದೀಯಾ… ನಿಂದೊಳ್ಳೆ ಯವಾರ ಆಯ್ತು. ಸಂಬಂಧ ಬ್ಯಾಡ್ವಣ್ಣಾ… ಅದೂ ಕಳ್ಳುಬಳ್ಳಿ. ಅಕ್ಕುನ ಮಾತ ಅತ್ತಾಗಿ ಬಿಸಾಕುಬುಟ್ಟಾ… ನಡಿಯಣ್ಣಣೊ… ನಂತಾವು ಕಾಸವೆ; ಕೊಡ್ತಿನಿ; ವೋಗಿದ್ದು ನಾಳೆಕೆ ಬರೋಗಣ್ಣ’ ಎಂದು ಮುನ್ನೂರು ರೂಪಾಯಿಗಳ ತೆಗೆದು ಟೇಬಲಿನ ಮೇಲೆ ಇಟ್ಟ. ನನ್ನ ಬಳಿ ಸಾಕಷ್ಟು ದುಡ್ಡಿತ್ತು. ಹಿಂತಿರುಗಿಸಿ ತಪ್ಪಿಸಿಕೊಳ್ಳುವ ಮಾತಾಡಿದ್ದೇ, ‘ವೋsss ಅಂಗೆಲ್ಲ ಆಗುದಿಲ್ಲ… ನಾ ಬುಡೂದುಲ್ಲ. ವೋಗಿದ್ದು ಮಾತ ಮುಗಿಸ್ಕ ಬಾ’ ಎಂದು ಹಠ ಹಿಡಿದ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಗುಲಾಬಿ ಬಣ್ಣದ ಗೀರಿನ ಅಂಗಿಯ ಅವನೆ ತೊಡಿಸಿದ. ‘ಹೇ ಬಿಡೊ… ಜಿಪ್ಪನ್ನೂ ಹಾಕೋಕೆ ಬರಬ್ಯಾಡಾ… ನಾನೇನು ಮದುವೆ ಗಂಡಲ್ಲಾ’ ಎಂದು ಬೆಲ್ಟ್ ಹಾಕಿಕೊಂಡೆ. ಅಣ್ಣಾ ಫರ್ಫ್ಯೂಮ್ ಎಂದು ಕಂಕುಳಿಗೆ ಹಾಕಿದ. ‘ಲೋ ನನ್ನ ಏನು ಅನ್ಕಂಡಿದ್ದೀಯೊ’ ಎಂದೆ. ಏನ್ಕಂಡಿವಿನಿ ಗೊತ್ತಾ… ಮೈ ಹೀರೊ… ಬುಗುರಿ ಚಾಂಪಿಯನ್… ನೊ ಒನ್ ಮ್ಯಾಚ್ ವಿತ್ ಯೂ… ಯೂ ಆರ್ ಮೈ ಪ್ರೈಡ್!’ ಎಂದ. ‘ಲೊ; ಇಷ್ಟೆಲ್ಲ ಏರಿಸ್ಬೇಡಾ… ವೋಗಿದ್ದು ಬತ್ತಿನೀ ನಾಳೆ ಸಿಕ್ಕು’ ಎಂದು ಆಟೊ ಹತ್ತಿ ಬಸ್ನಿಲ್ದಾಣ ತಲುಪಿ ಮದ್ದೂರು ಬಸ್ಸಿಗೆ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಹಳ್ಳಿಯ ತಲುಪುವಷ್ಟರಲ್ಲಿ ಮೂರು ಗಂಟೆ ಆಗಿತ್ತು. ಬಹುಪಾಲು ಮಾತೆಲ್ಲ ಮುಗಿದಿದ್ದವು. ನನ್ನ ಅಕ್ಕ ಮಾತ್ರ ಸಡಗರ ಪಟ್ಟಳು. ‘ಇವನ್ಯಾಕೆ ಬಂದಾ… ವಲ್ಲೆ ವಲ್ಲೆ ಬ್ಯಾಡಾ ಅಂತಿದ್ದೋನು; ಶಿವಪೂಜೆಲಿ ಕರಡಿ ಬಿಟ್ಟಂಗೆ ಯೀಗ್ಯಾಕೆ ಬಂದ’ ಎಂದು ಅಜ್ಜಿಯೊಬ್ಬಳು ಹೊಗೆಸೊಪ್ಪ ಕವಟೆಗೆ ತೂರಿಕೊಂಡು ಗೊಣಗಿದ್ದು ಕೇಳಿಸಿತು. ನನಗೇನಂತೇ… ಅನ್ನೋರು ಏನಾದರೂ ಅಂದುಕೊಳ್ಳಲಿ ಎಂದು ಒಳ ಮನೆಯ ಒಂದು ಮರೆಗೆ ಬಂದು ಕೂತೆ.
ಮದುವೆ ಮನೆ ಎಂದರೇ ಏನೊ ಭಯ. ಅಂತಹ ದುರಂತಗಳನೆಲ್ಲ ನಾನು ನನ್ನ ಮನೆಯಲ್ಲೇ ಕಂಡಿದ್ದೆ. ಅಪ್ಪನೇ ನನ್ನ ಎದಿರೇ ಮೂರು ಮದುವೆ ಆಗಿದ್ದ. ಛೇ; ಆ ನರಕ ಇಲ್ಲಿ ಬೇಡ ಎಂದು ಅನ್ಯನಾಗಿದ್ದೆ. ಅಕ್ಕ ಷರಬತ್ತು ಕೊಟ್ಟಳು. ಬಾರಪ್ಪಾ… ಹಜಾ಼ರ್ದೆಲಿ ಕುತ್ಕಂದು ಏನಾರ ನಾಕ್ಮಾತಾಡಪ್ಪಾ’ ಎಂದಳು. ಬ್ಯಾಡವ್ವಾ… ಎಲ್ಲ ಆಗೋಗಿರುವಾಗ ನನ್ನದೇನು ಒಂದು ಸೊಟುಗ… ಎಂದೆ. ಅಂಗಂದ್ರೆ ಎಂಗಪ್ಪಾ… ಹೆತ್ತಿರುಳು ನಾನು. ಸೋದುರುಮಾವ ನನ್ನ ಮಗಳಿಗೆ ಹಕ್ಕುದಾರ… ನೀನು ಓದಿದ್ದಿಯಲ್ಲಪ್ಪಾ ಅದೇನೇನೊ! ಮಾತಾಡುಕೆ ಬರೂದಿಲ್ಲುವೇ’ ಎಂದಳು. ‘ನನಗೆ ಈ ವಿಷಯ ಏನೂ ಗೊತ್ತಿಲ್ಲವ್ವಾ’ ಎಂದು ಮಾತು ಬದಲಿಸಿ.
‘ಎಲ್ಲವ್ವಾ; ನಿನ್ನ ಮಗಳು… ಮದುಮಗಳೂ… ಆರೇಳು ವರ್ಷ ಆಯ್ತು ಅನಿಸ್ತದೆ. ನೋಡೇ ಇಲ್ಲ ಕರಿಸವ್ವಾ ಅವಳಾ… ನೋಡಬೇಕೂ… ಮದುವೆ ಆಗಿ ಬೇರೆ ಮನೆಗೆ ಹೊರಟೋಗ್ತಾ ಇದ್ದಾಳೆ’ ಎಂದೆ. ‘ಈಚೆ ಮನೆಲವಳೆ ಬಾರಪ್ಪಾ’ ಎಂದು ಕರೆದೊಯ್ದು ತೋರಿದಳು. ಒಂದು ಚಾಪೆಯ ಮೇಲೆ ಕಾಲು ನೀಡಿ ಗೋಡೆಗೆ ಒರಗಿ ಕೂತಿದ್ದಳು. ಎದ್ದು ನಿಂತಳು. ಹೆದರಿದಳು. ಅತ್ತು ಅತ್ತು ಕಣ್ಣು ಊದಿದಂತಿದ್ದವು. ಇದೇನು ಮದುಮಗಳ ಕಣ್ಣಲ್ಲಿ ಕಂಬನಿ ಎಂದು ಹತ್ತಿರದಿಂದ ದಿಟ್ಟಿಸಿದೆ. ಒಂದು ಹಳೆಯ ಸ್ಟೂಲಿನ ಮೇಲೆ ಅವಳ ಪಕ್ಕದಲ್ಲೇ ಕೂತಿದ್ದೆ. ಅಕ್ಕ ಹೊರಗೆ ಹೋದಳು. ಮಗಳೂ ತಾಯಿಯ ಹಿಂಬಾಲಿಸುವಳಿದ್ದಳು. ಹೊರಗೆ ಗಿಜಿಗಿಜಿ ಒಪ್ಪಂದದ ಜನ. ಹೋಗುವಂತಿರಲಿಲ್ಲ. ‘ಪುಟ್ಟಾ… ಇಲ್ಲೇ ಕೂರೂ… ನನ್ನೊಡನೆ ಮಾತಾಡು… ಮದುವೆ ಆಗಿ ಹೊರಟು ಹೋಗ್ತಿದ್ದೀಯೆ’ ಎಂದು ಕರೆದೆ. ಲೋಕವನ್ನೆ ಅರಿಯದ ಹುಡುಗಿ. ಒನಕೆಗೆ ಸೀರೆಸುತ್ತಿ ಹೆಣ್ಣು ಮಾಡಿದ್ದಂತೆ ಕಂಡಳು. ಛೇ ಎಂದುಕೊಂಡೆ. ವರೋಪಚಾರದ ಎಳೆದಾಟದ ಮಾತುಗಳು ಇನ್ನೂ ಜಗ್ಗಾಡುತಿದ್ದವು. ಕಿವಿ ಮೇಲೆ ಬಡಿದಂತಾಗುತ್ತಿದ್ದವು. ಬೀದಿಯಲ್ಲಿ ನಾನು ಅಂತರ್ಜಾತಿ ಸರಳ ವಿವಾಹಗಳ ಕ್ರಾಂತಿಕಾರಿ; ಆದರೆ… ಇಲ್ಲಿ ನನ್ನ ಮನೆಯಲ್ಲೇ ಮದುವೆ ವ್ಯಾಪಾರ ನಡೆಯುತ್ತಿದೆಯಲ್ಲಾ ಎನಿಸಿ ವಿಷಾದಗೊಂಡೆ. ‘ಇದ್ಯಾಕಪ್ಪಾ ಇತ್ತಾಗ್ಬಂದೇ… ಯೇನೇನೊ ಮಾತಾಡ್ಕತರೆ ನಿನುಗ್ಯಾಕಪ್ಪಾ… ಅತ್ತಾಗಿ ಹಿತ್ಲುಗೋಗಿ ಕುತ್ಕೋ… ಮರುದ್ನೆಳ್ಳದೇ… ವೋಗೋಗು’ ಎಂದು ಓಡಿಸುವಂತೆ ಹುಳುಕು ಹಲ್ಲಿನ ಒಬ್ಬ ಅತ್ತ ಅಟ್ಟಲು ಆ ಮಾತ ಆಡಿದ್ದ. ಯಾರಿಗೂ ನಾನು ‘ಕ್ಯಾರೇ’ ಅನ್ನುವಂತಿರಲಿಲ್ಲ. ಯಾರೂ ಪರಿಗಣಿಸುತ್ತಿಲ್ಲ. ಒಂಥರ ಅಪಮಾನ. ‘ಯೇನಪ್ಪಾ… ಯಂಗಿದ್ದಿಯೇ; ನಮ್ಮ ಗೌರಮ್ಮನ ತಮ್ಮ ಅಲ್ಲುವೆ ನೀನೂ… ನಿಮ್ಮಕ್ಕನ ಮದುವೇಲಿ ನಿನ್ನ ನೋಡಿದ್ದೆ. ಇಟ್ಟುದ್ದ ಇದ್ದೆ… ಇದೇನಪ್ಪಾ ಆಗ್ಲೆ ವಯ್ಸಾಗಿ ಮುದುಕ ಆಗೇ ಬುಟ್ಟಿದ್ದೀಯೆ! ಮದುವೆನೆ ಆಗ್ಲಿಲ್ವಪ್ಪಾ…’ ಎಂದು ತೀರ ಬಡಪಾಯಿ ಅಯ್ಯೋ ಎಂಬಂತೆ ನಿರ್ಲಕ್ಷಿಸಿ ವಿಷಾದಿಸುವಂತೆ ಮೇಲೆ ಕೆಳಗೆ ನೋಡಿ ಬೀಡಿ ಹಚ್ಚಿ ಹೊಗೆ ಬಿಟ್ಟ. ‘ನನುಗ್ಯಾರಣ್ಣ ಯೆಣ್ಣುಕೊಟ್ಟಾರೂ… ಎಲ್ಲು ಸಿಕ್ತೆ ಸಿಕ್ತೆ ಕೊನೆಗತಗೆ ಬೇಜಾರಾಗಿ ಗುರುಬೋದ್ನೆ ತಕಂದಿವಿನಿ… ಯಾವ್ದಾರು ಮಠ ಇದ್ರೆ ಯೇಳಣ್ಣ… ಅಲ್ಲುಗೋಗಿ ಸೇರ್ಕತಿನಿ’ ಎಂದೆ. ‘ಯೇ ಮೊದ್ಲೆ ಯೇಳುಕಿಲ್ಲುವೇ… ನಮ್ಮೂರೆಲೇ ಒಂದು ಬಜ್ನೆಮನೆ ಅದೇ ಅಲ್ಲೆ ಬಂದು ಸೇರ್ಕೋ… ಪದ ಆಡುರು ಅಲ್ಲವರೆ’ ಎಂದ ಉತ್ಸಾಹದಿಂದ. ನನ್ನ ಅಕ್ಕನಿಗೆ ಏನೊ ಅನುಮಾನ ಆಗಿ ಹತ್ತಿರ ಬಂದು… ‘ಯಾಕಣ್ಣ ಯೇನೇನೊ ಯೇಳ್ತಿದ್ದಿಯೆ ನಂತಮ್ಮುನ್ಗೆ… ಅವುನೊಂತರ ಸೂಕ್ಷ್ಮ… ತುಂಬ ವೋದ್ಕಂದವನೆ’ ಎಂದು ನನ್ನ ವ್ಯಕ್ತಿತ್ವವನ್ನು ಬೇರೆ ಮಾತಲ್ಲಿ ಎತ್ತಿ ಹಿಡಿಯಲು ಆಗದೆ ಕಸಿವಿಸಿಗೊಂಡಳು. ‘ಯೇ; ಮೊದ್ಲೆ ಯೇಳುಕಿಲ್ಲುವವ್ವಾ… ಅಂಗಾಗಿದ್ದದೇ… ನಿಜ ನಿಜಾ… ವೋದಿ ವೋದಿ ತಲೆ ಕೆಟ್ಟೋಗಿರ್ತದೆ… ಅಂತೆವುನ ಇಂತಾ ಟೇಮೆಲಿ ಯಾಕವ್ವ ಕರುಸ್ದೇ… ಯೇನಾರ ಯಡವಟ್ಟಾದದೂ’ ಎಂದು ಎಚ್ಚರಿಸುತ್ತಿದ್ದ.
ನಾನು ಈಚೆ ಪಡಸಾಲೆಗೆ ಬಂದು ನಿಂತಿದ್ದೆ. ಅವರ ಜೊತೆ ಸಂವಾದವೇ ಸಾಧ್ಯ ಇರಲಿಲ್ಲ. ಹಿತ್ತಲಿಗೆ ಬಂದು ಕೂತೆ. ಆಚೀಚೆ ಹೇಸಿಗೆ ಮಾಳ. ಹೊಲಸು ವಾಸನೆ. ‘ಛೇ… ನಾನ್ಯಾಕೆ ಇಲ್ಲಿಗೆ ಬಂದೆ? ಬರಬಾರದಿತ್ತು’ ಎಂದು ನನ್ನ ಬಗ್ಗೆ ನನಗೇ ಮರುಕ ಉಂಟಾಯಿತು. ವರದಕ್ಷಿಣೆಯ ಅಬ್ಬರದ ಮಾತುಗಳು ಹಿತ್ತಿಲ ತನಕ ಬಡಿವಂತೆ ಕೇಳಿಸುತ್ತಿದ್ದವು. ಅಕ್ಕ ಬಂದು ಕರೆದಳು. ‘ನನ್ನಿಂದ ಸಾಧ್ಯ ಇಲ್ಲವ್ವಾ’ ಎಂದು ತಲೆ ತಗ್ಗಿಸಿದೆ. ನನ್ನ ಮಾವ ಗಂಡಿನ ಕಡೆಯವರ ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡಿದ್ದ. ಅಕ್ಕ ಅಸಮಾಧಾನ ತೋರುತ್ತಿದ್ದಳು. ನನ್ನ ಉಳಿದ ಸಂಬಂಧಿಕರು ಹಳ್ಳಿಯಿಂದ ಬಂದಿರಲಿಲ್ಲ. ಅದೊಂದು ಜುಜುಬಿ ವಿಷಯವೇ ಆಗಿತ್ತು ಅವರಿಗೆ. ಎಲ್ಲ ಮುದುರಿ ಮೂಲೆಕಸವಾಗಿದ್ದರೂ ನನ್ನ ತಾತನ ಮನೆಯವರು ಅಹಂಕಾರ ಬಿಟ್ಟಿರಲಿಲ್ಲ. ಅವರ ನೂರೆಂಟು ರಗಳೆಗಳ ಅಕ್ಕ ಒಂದಿಷ್ಟೇ ಹೇಳಿದ್ದರೂ ಆ ಪರಿಸ್ಥಿತಿ ಅಲ್ಲಿ ಹೇಗೆ ಉಲ್ಬಣವಾಗಿರುತ್ತದೆ ಎಂದು ಊಹೆ ಮಾಡಿಕೊಂಡಿದ್ದೆ.
ಯಾರೊ ಹಳೆ ಕಾಲದ ಯಜಮಾನ… ‘ಲೇ ಮೊಗಾ… ಲೋ… ನಿನ್ನೇಕನೊ ಕರಿತಿರುದೂsss ಬಾರೊ ಇಲ್ಲಿ’ ಎಂದು ಕರೆದರು. ತಲೆ ಮಾಸಿದ ಅಂತಹ ಮುದುಕರೆಂದರೆ ನನಗೆ ಆಗುವುದಿಲ್ಲ. ನನ್ನ ತಾತನ ಕಾಲದವನು. ಆಗ ಹಬ್ಬಗಳಿಗೆ ನಮ್ಮ ಹಳ್ಳಿಗೆ ಬಂದು ತಪ್ಪದೇ ತಾತನ ಹೋಟೆಲಿನ ರುಚಿ ತಿಂಡಿಗಳ ಚೆನ್ನಾಗಿ ಮೇದು ವಾಪಸ್ಸು ಹೋಗುತ್ತಿದ್ದ. ದೂರದ ನೆಂಟ. ‘ಏನು’ ಎಂದು ಮುಖ ನೋಡಿದೆ. ಆ ಮುದುಕನ ತಲೆ ತುಂಬ ನೆರೆತ ಕೂದಲು ದಟ್ಟವಾಗಿದ್ದವು! ಕೂದಲುಗಳ ಬೆರಳುಗಳಿಂದ ಬಾಚಿಕೊಳ್ಳುತ್ತ… ‘ಯೇನೊ ಮೊಗಾ… ಬುಂಡೆ ಆಗೋಗಿದ್ದಿಯಲ್ಲೊ… ನೀನೂ ನಿಮಪ್ಪನ ಬಾಂಡ್ಲಿ ತಲೆನೇ ತಕಬಂದಿದ್ದಿಯಾ’ ಎಂದ. ನನಗೊ ಉರಿದು ಹೋಯಿತು. ಆ ಮುಠ್ಠಾಳನ ತಲೆ ತಕಂಡು ಬಂದಿಲ್ಲಾ… ಅದೆಲ್ಲ ನಿನಗೆ ಬೇಡಾ… ಕರ್ದಲ್ಲಾ ಏನೇಳು’ ಎಂದೆ ಖಡಕ್ಕಾಗಿ. ‘ಬೇಜರ್ಮಾಡ್ಕಬ್ಯಾಡ ಕಣೋ… ಮಗಳ ಮಗಳು ಮದುವೆಗೆ ಬಂದು ಇಲ್ಲಿ ವಪ್ಪಂದ ಮಾಡ್ತಿದ್ರೆ ನಿಮ್ಮಪ್ಪ ಅಲ್ಲಿ ಕೂಡ್ಲೂರಿಗೆ ಯೆಣ್ಣ ನೋಡುಕೆ ವೋಗಿದ್ದನಂತಲ್ಲಾ… ಯಂಗಿದ್ದದು ನೋಡು ಅವನ ಜಮಾನ… ನೀನೂ ಇದ್ದೀಯೇ… ಸನ್ಯಾಸಿ ಆಗೋಕೆ ಹೋಗಿದ್ದೀಯೆಲ್ಲಾ… ಅಷ್ಟೇ ಕನಾ ಹೋಗಪ್ಪಾ’ ಎಂದ. ಛೇ ಇಷ್ಟು ವಯಸ್ಸಾದ ಮುದುಕನಿಗೆ ನೋವು ಉಂಟು ಮಾಡುವಂಥದ್ದು ನಾನೇನು ಮಾಡಿದ್ದೆ. ನೋಯಿಸುವ ಉದ್ದೇಶದಲ್ಲೇ ಈತ ಈ ವಿಷಯವ ನನಗೆ ಮುಟ್ಟಿಸುತ್ತಿದ್ದಾನಲ್ಲಾ… ಇವನ ವಯಸ್ಸಿಗೆ ಯಾವುದ ತಕಂದು ವಡೀಬೇಕು ಎಂದು ಮನದಲ್ಲೇ ಬುಸುಗುಟ್ಟಿದೆ. ಅವರ ಆ ಲೋಕವೇ ಅಂಥಾದ್ದು. ಅಲ್ಲಿ ಸಂಪೂರ್ಣ ಮೂರ್ಖವಾಗಿರಬೇಕು. ವಿನೀತನಾಗಿ ನಡಕೊಳ್ಳಬೇಕೂ… ಆಗ ಅವರಿಗೆ ಒಳ್ಳೆಯ ಹುಡುಗನಾಗಿ ಕಾಣುವೆ… ಅಹಾ! ನಾನು ಅಂತಹ ವಿನಯವಂತನೇ… ಬಂದೂಕು ಹಿಡಿಯುವುದರಲ್ಲಿ ಕೊಂಚ ಹಿಂದು ಮುಂದಾಯಿತಲ್ಲವೇ… ನನ್ನೊಳಗಿನ ವ್ಯಾಘ್ರನ ಇವರು ನೋಡಲು ಸಾಧ್ಯವಿಲ್ಲ ಎಂದು ಮನೆಯ ಒಳಗೆ ಬಂದೆ.
ಅಂತೂ ಒಪ್ಪಿಳ್ಳೇವು ಮುಗಿದಿತ್ತು. ಲಗ್ನ ಕಟ್ಟಿಸುವ ದಿನವ ಐಯ್ನೋರ ಕೇಳಿ ಹೇಳುತ್ತೇವೆ ಎಂದಾಯಿತು. ಅಂತೂ ಆಯಿತಲ್ಲಾ… ನಾನಿನ್ನು ಹಿಂತಿರುಗಬಹುದಲ್ಲಾ ಎನಿಸಿ ಸಿದ್ಧನಾದೆ. ಕೊನೆಗೊಮ್ಮೆ ಆ ಹುಡುಗಿಯ ನೋಡಿ ವಿಶ್ ಮಾಡುವ ಎಂಬ ಯಾವುದೊ ಭಾವನಾತ್ಮಕ ಸಂಕಟ ತುಳುಕಿತು. ನೆರಳು ನನ್ನ ಕೈ ಹಿಡಿದು ಒಳಮನೆಗೆ ಎಳೆದೊಯ್ದಂತಾಯಿತು. ಶೋಭ ಮುದುರಿಕೊಂಡು ಮೂಲೆಯಲ್ಲಿ ಕೂತಿದ್ದಳು. ‘ಪುಟ್ಟಾ… ನಾನು ಮೈಸೂರ್ಗೆ ವೋಗ್ತಾ ಇದ್ದೀನಿ… ಹೋಗಿದ್ದು ಬರ್ಲಾ’ ಎಂದೆ. ತಲೆ ಎತ್ತಲೇ ಇಲ್ಲ. ‘ಮಾತಾಡಪ್ಪೀ… ನಾನು ನಿಮ್ಮ ಮಾವ… ನಿನ್ನ ತಾಯಿಯ ತಮ್ಮ… ನನ್ನ ಜೊತೆ ಮಾತಾಡಲ್ಲವಾ’ ಎಂದು ಅದೇ ಕಬ್ಬಿಣದ ಚಿಕ್ಕ ಸ್ಟೂಲಿನ ಮೇಲೆ ಕೂತು… ನೋಡಿದೆ. ಬಿಕ್ಕಿಬಿಕ್ಕಿ ಅಳುತ್ತಿದ್ದಳು. ನಡುಗುತ್ತಿದ್ದಳು. ಅತ್ತು ಅತ್ತು ಕಣ್ಣು ಊದಿ ಕೆಂಪಗಾಗಿದ್ದವು. ಪುಟ್ಟ ಹಕ್ಕಿ ರೆಕ್ಕೆ ಬಲಿಯಲಾರದೆ ಹಾರಲಾರದೆ ಅನಾಥವಾಗಿ ಕೂತಿರುವಂತೆ ಕಂಡಳು.
‘ಇವನ್ಯಾಕೆ ಬಂದಾ… ವಲ್ಲೆ ವಲ್ಲೆ ಬ್ಯಾಡಾ ಅಂತಿದ್ದೋನು; ಶಿವಪೂಜೆಲಿ ಕರಡಿ ಬಿಟ್ಟಂಗೆ ಯೀಗ್ಯಾಕೆ ಬಂದ’ ಎಂದು ಅಜ್ಜಿಯೊಬ್ಬಳು ಹೊಗೆಸೊಪ್ಪ ಕವಟೆಗೆ ತೂರಿಕೊಂಡು ಗೊಣಗಿದ್ದು ಕೇಳಿಸಿತು. ನನಗೇನಂತೇ… ಅನ್ನೋರು ಏನಾದರೂ ಅಂದುಕೊಳ್ಳಲಿ ಎಂದು ಒಳ ಮನೆಯ ಒಂದು ಮರೆಗೆ ಬಂದು ಕೂತೆ.
ಪಡಸಾಲೆಯಲ್ಲಿ ಜನ ಕಾಗೆಗಳು ವರಗುಟ್ಟುವಂತೆ ಮಾತಾಡುತ್ತಲೇ ಇದ್ದರು. ಕರಗಿಹೋದೆ. ಶೋಭ ನನ್ನ ಸ್ವೆಟರ್ ಹಾಕಿದ್ದಳು! ಹುಡುಗರದನ್ನು ಈಕೆ ಹಾಕಿಕೊಂಡಿದ್ದಾಳಲ್ಲಾ… ಯಾಕಪ್ಪಾ… ಇಸ್ಟು ಶೆಕೆಯಿದೇ… ಸ್ವೆಟರ್ ಹಾಕ್ಕೊಂಡಿದ್ದೀಯೇ ಎಂದೆ. ಮಾತಾಡಲಿಲ್ಲ. ಅಕ್ಕ ಒಳ ಬಂದಳು. ‘ಜ್ವರ ಕನಪ್ಪಾ; ಯೆದುರ್ಕಬುಟ್ಟವಳೆ! ಮದ್ವೆ ಮಾಡಿ ಕಳಿಸ್ಬುಡ್ತರೆ ಅಂತಾ ಅಳ್ತಾ ಕುಂತವಳೆ… ಬುದ್ದಿ ಯೇಳಪ್ಪಾ… ಯೆಣ್ಣಾಗಿ ವುಟ್ಟುದುಮ್ಯಾಲೆ ಯಾವತ್ತಾರು ಯಾರ ಜೊತೆಗಾದ್ರು ಮದ್ವೆ ಆಗ್ಲೇಬೇಕಲುವೇನಪ್ಪಾ… ಹೇಳಪ್ಪ ನಾಕ್ಮಾತ’ ಎಂದು ಅತ್ತ ಹೋದಳು. ಶೋಭಳ ತಂಗಿ ನಿರ್ಮಲ, ತಮ್ಮಂದಿರು ಸತೀಶ ಮಂಜ ಪುಟ್ಟ ಹುಡುಗರು. ನನ್ನ ಕಂಡು ಬೀದಿಯತ್ತ ಓಡಿ ಹೋದರು. ಚಳಿ ಜ್ವರದಲ್ಲಿ ನಡುಗುವ ಈ ಹುಡುಗಿಗೆ ಮದುಮಗಳ ಅಲಂಕಾರವೇ… ಅವೇನನ್ನೂ ಮಾಡಿಕೊಂಡಿರಲಿಲ್ಲ. ಆಗತಾನೆ ತನ್ನ ಸ್ವಂತ ಶಕ್ತಿಯಿಂದ ಸ್ವಚ್ಚಂದವಾಗಿ ಮೊಳಕೆಯೊಡೆದ ಕಾಳಿನಂತೆ ಕಂಡಳು. ಮೈತುಂಬಿ ಬೆಳೆದಿದ್ದಳು. ಏನೋ ತೀವ್ರವಾಗಿ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿದ್ದಳು. ‘ನಿನಗೆ ಈ ಮದುವೆ ಇಷ್ಟವೇ… ಒಪ್ಪಿಕೊಂಡಿದ್ದೀಯಾ’… ಏನೂ ಪ್ರತಿಕ್ರಿಯೆ ಇಲ್ಲ. ಮುಖ ಮರೆಸಿಕೊಳ್ಳುವಳು… ‘ನನ್ನ ನೋಡೂ… ನಿನ್ನ ಕಷ್ಟಕ್ಕಾಗಿ ನಾನು ಬಂದಿರುವೆ. ಏನಾದರು ಬೇರೆ ವಿಷಯ ಇದ್ದರೆ ಈಗಲೇ ತಿಳಿಸು… ನಾನಿದ್ದೀನೀ… ನಿನಗೆ ಮದುವೆ ಇಷ್ಟ ಇಲ್ಲ ಎಂದರೆ ಬೇಡ ಎಂದು ಬಿಡೂ… ನಾನು ಈ ಒಪ್ಪಂದವ ಈ ಕೂಡಲೆ ನಿಲ್ಲಿಸುವೆ’ ಎಂದೆ.
ಆಗ ಮುಖ ಎತ್ತಿ ಕಣ್ಣಗಲಿಸಿ ಏನೊ ಹೊಳೆದಂತೆ ದಿಟ್ಟಿಸಿದಳು. ತಲೆ ಸವರಿ; ಧೈರ್ಯವಾಗಿರು… ‘ಬೇರೆ ಯಾರನ್ನಾದರೂ ಲವ್ ಮಾಡುತ್ತಿರುವೆಯಾ’ ಎಂದೆ. ಬೆಚ್ಚಿಬೆದರಿದಳು ಲವ್ ಎಂಬ ಶಬ್ದಕ್ಕೆ. ಯಾರೂ ಅಂತವರು ಇಲ್ಲ ಎಂದು ತಲೆ ಆಡಿಸಿದಳು. ‘ಮತ್ಯಾಕಪ್ಪಾ… ಇಷ್ಟು ದುಃಖಾ…’ ಗೊತ್ತಿಲ್ಲ ಎಂಬಂತೆ ತಲೆ ಆಡಿಸಿ ಬಿಕ್ಕಿ ಬಿಕ್ಕಿ ದುಃಖವ ನುಂಗಿಕೊಳ್ಳಲು ಯತ್ನಿಸಿದಳು. ಯಾಕಳ್ತೀಯಾ… ಸುಮ್ಮನಿರು… ಏನೂ ಆಗಲ್ಲ ಎಂದು ಹೆಗಲ ಮೇಲೆ ಕೈ ಇಟ್ಟು ತಟ್ಟಿದೆ. ಅಂತಹ ಯಾವ ಭಾವನೆಗಳು ಇರಲಿಲ್ಲ. ಭುಜಕ್ಕೆ ತಲೆ ಆನಿಸಿದಳು. ಈ ಕ್ಷಣಕ್ಕೆ ಈಕೆಗೆ ಬೇಕಿರುವುದು ಸಂತೈಕೆ… ಅವಳ ದುಃಖಕ್ಕೆ ಮಿಡಿವ ನಾಲ್ಕು ಮಾತು ಅಷ್ಟೇ ಎಂದು ಮರುಗುವ ಮಾತಾಡಿದೆ. ‘ನಿಮ್ಮ ಅಜ್ಜ ಅಜ್ಜಿ ಇಲ್ಲ ಎಂದು ದುಃಖವೇ… ಹೊರಟು ಹೋದರು! ಆದರೆ ಅವರ ಹಾರೈಕೆ ಯಾವತ್ತೂ ನಿನ್ನ ಪರವಾಗಿದೆ…’ ಎಂದೆ. ಕೈ ಹಿಡಿದೆ. ಬಿಗಿಯಾಗಿ ಅದುಮಿ ಹಿಡಿದುಕೊಂಡಳು. ಖಚಿತವಾಯಿತು. ನಿಮ್ಮ ಅಜ್ಜಿ ಕೇಳ್ತಿದ್ರಲ್ಲಾ… ನನ್ನ ಮಮ್ಮಗಳ ಮದುವೆ ಆಗಪ್ಪಾ ಎಂದು… ನೆನಪಿದೆಯಾ; ಅಕ್ಕ ಆಸೆಪಟ್ಟು ಸುಸ್ತಾಗಿ ಬಿಟ್ಟುಬಿಟ್ಟಳು. ನಿನಗೆ ಮನಸಲ್ಲಿ ಆ ಬಗ್ಗೆ ಏನನಿಸಿತ್ತು… ಎಂದು ಮಧುರವಾಗಿ ಕೇಳಿದೆ. ನಕ್ಕಳು. ಇನ್ನಷ್ಟು ಖಚಿತವಾಯಿತು. ‘ನನ್ನ ಜೊತೆ ಮದುವೆ ಆಗುವೆಯಾ’… ಹಿಂಜರಿಯುತ್ತ ಕೇಳಿದೆ. ಸದ್ದೇ ಇಲ್ಲ. ‘ಇಷ್ಟ ಇಲ್ಲ ಅಲ್ಲವೇ…’ ಎಂದು ಹಿಂದೆ ಸರಿಯುತಿದ್ದೆ. ಮೈಸೂರ ದಾರಿ ಕಾಯುತಿತ್ತು.
‘ಏನಂತಿದ್ದಾಳಪ್ಪಾ’ ಎಂದು ಅಕ್ಕ ಕೇಳಿದಳು. ‘ಏನೂ ಗೊತ್ತಾಗ್ತ ಇಲ್ಲ ಅಕ್ಕಾ… ನಿರ್ಣಯ ತಕಳೊ ವಯಸ್ಸೇ ಅವಳದೂ’ ಎಂದೆ. ‘ಬುದ್ದಿ ಇನ್ಯಾವಾಗಪ್ಪ ಬರುದೂ’ ಎಂದು ಮಗಳ ಮೇಲೆ ಅಸಹನೆ ತೋರಿದಳು. ಹಜಾ಼ರಕ್ಕೆ ಬಂದೆ. ಮಂಚದ ಮೇಲೆ ಕೂತಿದ್ದೆ… ನಾಳೆ ಏನು ಎಂದು ಲೆಕ್ಕಿಸುತ್ತ. ನೆಂಟರೆಲ್ಲ ಹೊರಟಿದ್ದರು. ಗದ್ದಲ ಇಳಿದಿತ್ತು. ಮಂಚದ ಬಳಿ ಸಲೀಸಾಗಿ ನನ್ನ ಬಳಿಯೇ ಕೂತಳು. ಮದುವೆ ಒಪ್ಪಂದಕ್ಕೆ ಅಕ್ಕ ಕರೆಯಲು ಬಂದಿದ್ದಾಗ; ‘ಒಂದು ಸ್ವೆಟರ್ ಕೊಡಪ್ಪಾ… ಎರಡು ಮೂರು ಅವೆಯಲ್ಲಾ’ ಎಂದಿದ್ದಳು. ‘ಹೆಂಗಸರು ಹಾಕೋಳೊವು ಬೇರೆ ಇವೆ ಅಕ್ಕಾ’ ಎಂದಿದ್ದೆ. ‘ಅಯ್ಯೋ ಬೆಚ್ಗೆ ಹಾಕೋಕೆ ಯೆಂತೆವಾದ್ರೆ ಯೇನು ಕೊಡಪ್ಪಾ’ ಎಂದಿದ್ದಳು. ಈಗ ಆ ಸ್ವೆಟರನ್ನೇ ಶೋಭ ಹಾಕಿಕೊಂಡಿದ್ದಳು. ನನ್ನ ಮೇಲೆ ಏನೊ ಒಂದು ಅಭಿಪ್ರಾಯ ಪ್ರೀತಿ ಇದ್ದೇ ಇರಬೇಕು… ಇಲ್ಲ ಎಂದರೆ ನನ್ನ ಬಟ್ಟೆ ತೊಡುತ್ತಿದ್ದಳೇ; ಎಂದುಕೊಂಡು… ‘ಬರ್ಲಾ… ಹೋಗ್ಲಾ’ ಎಂದು ಅಕ್ಕನ ಮಗಳ ಕಣ್ಣುಗಳನ್ನೆ ಓದುವಂತೆ ದಿಟ್ಟಿಸಿದೆ. ‘ಹೋಗಬ್ಯಾಡ’ ಎಂದಳು. ‘ನಿನ್ನ ಜೊತೆಯಲ್ಲೇ ಇದ್ದು ಬಿಡಲೇ’ ಎಂದೆ. ಗಟ್ಟಿಯಾಗಿ ‘ಹೂಂ’ ಎಂದು ಒತ್ತಿಕೊಂಡು ಕೂತಳು. ಅಲ್ಲಿಗೆ ಸರಿ ಹೋಗಿತ್ತು. ಅಕ್ಕನ ಕರೆದೆ. ಹೇಳಿದೆ… ಅಕ್ಕ ಬೆರಗಾದಳು… ಕುಣಿದಾಡುವುದು ಬಾಕಿ ಇತ್ತು. ಮಾವನ ಕರೆಸಿದಳು. ನನ್ನ ತಮ್ಮನೇ ನನ್ನ ಮಗಳ ಮದುವೆ ಆಗುವನು… ಆ ಗಂಡಿನೋರ ಕಡೆಯೋರಿಗೆ ಹೇಳಿಕಳಿಸು ನಾವು ಹೆಣ್ಣು ಕೊಡುದಿಲ್ಲಾ ಅಂತಾ… ದೇವ್ರು ಒಳ್ಳೇದ್ನೆ ಮಾಡವನೆ. ನನ್ಮಗಳು ನನ್ನ ಕಳ್ಳುಬಳ್ಳಿಲೇ ಇರ್ತಳೆ… ನನಗದೇ ಸಾಕು’ ಎಂದು ಎಲ್ಲರಿಗೂ ಸಾರುವಂತೆ ಹೇಳಿದಳು. ಮಾವ ಹಿಂದೆ ಮುಂದೆ ನೋಡಿ ‘ಹೇಗಪ್ಪಾ’ ಎಂದು ಕೇಳಿದರು. ‘ನಾನು ಮದುವೆ ಆಗ್ತಿನಿ ಮಾವಾ’ ಎಂದಿದ್ದೆ.
ಹತ್ತಿರದಲ್ಲೇ ಇದ್ದ ಆ ಹಳ್ಳಿಗೆ ಸೈಕಲಲ್ಲಿ ಒಬ್ಬನ ಕಳಿಸಿ, ‘ಒಪ್ಪಿಳ್ಳೇವು ಬಿದ್ದೋಯ್ತು. ಅವರು ಹೆಣ್ಣು ಕೊಡೋಲ್ಲವಂತೆ’ ಎಂದು ಸುದ್ದಿ ಮುಟ್ಟಿಸಿದ್ದರು. ಆ ಹಳ್ಳಿಯ ಜನಕ್ಕೆ ವಿಚಿತ್ರ ಎನಿಸಿತ್ತು. ಬೆಳಬೆಳಿಗ್ಗೆಯೇ ಆ ಒಂದು ಅಜ್ಜಿ ಬಂದು ಮಜ್ಜಿಗೆ ನೆಪದಲ್ಲಿ ಬಟ್ಟಲು ಹಿಡಿದು; ನಾನಿದ್ದಲ್ಲಿಗೆ ಬಂದು… ‘ಪರ್ವಾಗಿಲ್ಲ ಕಲ ಮೊಗಾ… ನಮ್ಮಕ್ಕಿ ಮರಿಯ ಯಿಡ್ದು ಪಂಜುರ್ಕೆ ಆಕಬುಟ್ಟಲ್ಲಾ… ನೀ ಬಂದಾಗ್ಲೆ ಅನ್ಸಿತ್ತು… ಇವ್ನು ಯೇನಾರ ಕೆಡ್ಸಣ್ಣುನು ಕತೆಯ ಮಾಡ್ತನೆ ಅಂತಾ’ ಎಂದು ಇಣುಕಾಡುವ ಪಿಸಿರೆ ಕಣ್ಣುಗಳ ನನ್ನ ಮೇಲೆ ವಾರೆಯಾಗಿ ಬಿಟ್ಟಿದ್ದಳು. ಸಾಕಾಗಿತ್ತು… ಆ ಅಜ್ಜಿಗೆ ಒಂದು ಡೋಸ್ ಕೊಡಬೇಕನಿಸಿ; ‘ಹೂಂ ಅಜ್ಜೀ ಮಾಟ್ಲಾಮಾಡಿ ಹಿಡ್ಕಂದೇ… ನಿನ್ನಂತೆ ಮುದ್ಕಿರ ಪ್ರಾಯದ ಹಕ್ಕಿ ಮಾಡೊ ಮಂತ್ರ ಅವೇ… ಹೇಳ್ಕೊಡನೇ… ನೀನಾಗ ಪ್ರಾಯಕ್ಕೆ ಬರಬಹುದು’ ಎಂದೆ. ‘ಅಯ್ಯೋ ಅದೇನೇಳಿಯೊ; ಗೊತ್ತಾಗೊಲ್ತು… ನಂದ ಬಿಸಾಕೂ… ಮದ್ವೆ ಮಾಡ್ಕೋನ್ಗೆ ಯೇನಿರ್ಬೇಕೊ ಅದಾ ನೋಡ್ಕೊ’ ಎಂದು ಬಲವಾಗಿ ವಾಪಸ್ಸು ಕೊಟ್ಟು ಹೋಗಿದ್ದಳು. ಅವಳ ಲೆಕ್ಕದಲ್ಲಿ ನಾನು ‘ನಾಮರ್ದ’ ಆಗಿದ್ದೆ; ಯೋಗ್ಯ ಗಂಡು ಅಲ್ಲ ಎಂಬ ಅರ್ಥದಲ್ಲಿ. ಈ ಮದುವೆ ಆಗೋದರಲ್ಲಿ ಯಾರ್ಯಾರಿಂದ ಏನೇನು ಮಾತ ಕೇಳಬೇಕೊ… ಹೂಂ; ಇದೂ ಒಂದು ಪಾಠ. ಕಲಿಯೋಣ ಎಂದುಕೊಂಡು ಸ್ನಾನ ಮಾಡಿದೆ.
ಭಯದ ಜ್ವರ ಚಳಿ ಶೋಭಳಿಗೆ ಹೊರಟು ಹೋಗಿದ್ದವು. ಅಕ್ಕ ಎಂತಹ ಚತುರೆ ಎಂದರೆ ಆ ದಿನವೇ ಗಂಧದ ಸ್ನಾನ ಮಾಡಿಸಿ ಸುಂದರವಾಗಿ ಜಡೆ ಹೆಣೆದು ಮಲ್ಲಿಗೆ ಮುಡಿಸಿ ಚೂಡಿದಾರ್ ತೊಡಿಸಿ; ಹೋಗಪ್ಪ ತೋಟದ ಕಡೆ ಶೋಭನ್ನ ಸುತ್ತಾಡಿಸಿ ಮಾತಾಡಿಸಿಕೊಂಡು ಬಾ ಎಂದು ಮಗಳ ಕಳಿಸಿಕೊಟ್ಟಳು. ಅಂತಹ ಶಾಸ್ತ್ರ ಸಂಹಿತೆಯವಳಲ್ಲ ಅಕ್ಕ. ಇವತ್ತಿಂದಲೇ ನನ್ನ ತಮ್ಮನ ಕೈ ಹಿಡಿದಳು ಮಗಳು… ಇದೇ ಮದುವೆ ಎಂದು ಬಿಟ್ಟಿದ್ದಳು. ನಾನೂ ಹಾಗೇ ಅಂದುಕೊಂಡಿದ್ದೆ. ಮದುವೆಯ ಆ ಶಾಸ್ತ್ರಗಳೆಂದರೆ ರೇಜಿಗೆ. ಮಾವ ಮದುವೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಬೇಡ ಎಂದಿದ್ದೆ. ಹಳ್ಳಿ ಮಂದಿ ಮೊಂಡು. ಹಾಗೆ ಹೀಗೆ ಎಂದು ಊರ ಯಜಮಾನರು ದುಂಡಾವರ್ತಿ ಮಾಡಿದರು. ಆ ಮುದುಕನಿಗೆ ಗದರಿದೆ. ಆರು ತಿಂಗಳು ಸಮಯ ಕೋರಿದೆ. ಕೊಡೋದು ತಕೋಳೋದು ಎಂದು ಜನ ಕೇಳಿದರು. ನನ್ನ ಜೀವವ ಅಕ್ಕನ ಮಗಳಿಗೆ ಕೊಡುವೆ… ಅವಳು ತನ್ನ ಜೀವವ ನನಗೆ ಕೊಡುವಳು… ಇಷ್ಟೇ ನನ್ನ ಶಾಸ್ತ್ರ… ಉಳಿದದ್ದು ಹಳ್ಳಿ ಪದ್ಧತಿಯಲ್ಲಿ ನಿಮ್ಮದು ವಾಲಗ ಬಾರಿಸೋದು ಇದೆಯೊ ಅದಾ ನೀವೆ ಮಾಡ್ಕಳಿ ಎಂದೆ.
ಈ ವಿಷಯ ತಕ್ಷಣವೇ ನನ್ನ ಹಳ್ಳಿಗೆ ತಲುಪಿತ್ತು. ‘ಹಾಂ… ಅಂಗ್ಮಾಡಿದ್ದಾನಾ… ಯಾರವುನ್ಗೆ ವಪ್ಗೆ ಕೊಟ್ಟಿರುದು… ನಮ್ಮ ಕೇಳ್ದೆ ಅದೆಂಗೆ ಮದುವೆಗೆ ವಪ್ಗೆ ಕೊಟ್ಟಾ… ಅವುನಿಲ್ಲಿಗೆ ಲಗ್ನಪತ್ರಿಕೆ ತಕಂದು ಬರ್ಲಿ… ಆಗ ಅದೆ ಅವನಿಗೆ ಶಾಸ್ತ್ರ… ಮೆಟ್ಟಿನ ಸೇವೆ ಮಾಡಿ ಕಳಿಸ್ತೀವಿ’ ಎಂದು ಆ ಚಿಕ್ಕಪ್ಪಂದಿರೂ ನನ್ನಪ್ಪನೂ ಖ್ಯಾತೆ ತೆಗೆದಿದ್ದರು. ಒಂದು ವಾರ ಅಕ್ಕನ ಮಗಳ ಜೊತೆ ಹಾಯಾಗಿ ಕಾಲ ಕಳೆದೆ. ಮುದ್ದು ಮುದ್ದಾದ ಪುಟ್ಟು ಪುಟಾಣಿ ಚಿಟ್ಟೆಯಂತಿದ್ದಳು ಅಕ್ಕನ ಇನ್ನೊಬ್ಬ ಮಗಳು. ಅವಳು ನಿರ್ಮಲ. ಅಕ್ಕನ ರೂಪವತಿ. ಚುಟುಕಾದ ಕೆಂಪು ಚಿಟ್ಟೆಯಂತಹ ಹುಡುಗಿ. ಹತ್ತಿರ ಕರೆದರೆ ಹಾರಿ ಹೋಗುತ್ತಿದ್ದಳು. ಆಗವಳು ಹತ್ತನೆ ತರಗತಿಯವಳು. ಚಾಲಾಕಿಯಾಗಿದ್ದಳು. ಶೋಭ ಗಂಭೀರ. ಮೌನವತಿ. ಮಾರ್ಮಿಕ ಮಾತುಗಾತಿ. ಮೈಸೂರಿಗೆ ಹಿಂತಿರುಗಬೇಕಿತ್ತು.
ಅಕ್ಕಾ… ಅನುಮಾನ ಪಡಬೇಡ. ಆರು ತಿಂಗಳಾಗಲಿ… ಇಲ್ಲೇ ನಿನ್ನ ಮನೆ ಮುಂದೆಯೆ ಮದುವೆ ಆಗುವೆ ಎಂದು ಹೇಳಿ; ಶೋಭಳ ಅಪ್ಪಿ ಹಣೆಗೆ ಮುತ್ತು ಕೊಟ್ಟು, ಮೈಸೂರಿಗೆ ಹೋಗುವೆ ಹದಿನೈದು ದಿನ ಬಿಟ್ಟು ಬರುವೆ ಎಂದೆ. ‘ಮೊಗ ಮೊಗಾ… ಇಲ್ಲೇ ಹತ್ತುರ್ದೆಲದೆ ನಮ್ಮೂರು. ಅಂಗೇ ವೋಗಿ ತಾತ್ನ ಮಾತಾಡಿಸ್ಕಂದು ವೋಗಪ್ಪಾ… ಉಷಾರಿಲ್ದೆ ಪಡ್ಸಲೆಗೆ ಹಾಕಿದ್ದಾರಂತೇ’ ಎಂದಳು. ‘ನೀ ಮೊದ್ಲೆ ಹೇಳುಕಿಲ್ಲುವೇ’ ಎಂದೆ. ‘ಯೀ ಮದುವೆ ವಪ್ಪಂದುದೆಲಿ ಯೇಳುಕಾಗಿರ್ಲಿಲ್ಲ. ಅಂಗೆ ವಸಿ ನೋಡ್ಕಂದು ಮಾತಾಡ್ಸಿ ಆರ್ಶೀವಾದ ತಕಪಾ… ಎಷ್ಟೇ ಆಗ್ಲಿ ನಮುಗೆ ಒಂದು ದಾರಿ ತೋರ್ದೋನು ಅವುನೊಬ್ಬುನೇ ತಾನೇನಪ್ಪಾ… ಆ ವೂರೋರು ಆ ನಾಯ್ಗಳು ಯಂಗರ ಬೊಗುಳ್ಕಲಿ… ತಲೆಕೆಡಿಸ್ಕಬ್ಯಾಡ. ನಾನೋಗಿ ತೀರ್ಮಾನ ಮಾಡ್ಕತಿನಿ; ತಾತುನ ಮಾತಾಡಿಸ್ಕಂದು ಅಂಗೆ ಮೈಸೂರ್ಗೆ ವೋಗಿದ್ದು ಬಪ್ಪಾ’ ಎಂದು ಕಳಿಸಿಕೊಟ್ಟಳು. ಮನಸಿಲ್ಲ. ತಾತನ ಬಿಡುವಂತಿರಲಿಲ್ಲ. ಶೋಭಳ ಎತ್ತಿ ಹೆಗಲ ಮೇಲೆ ಕೂರಿಸಿಕೊಂಡಂತೆ ಭಾವ ತುಂಬಿತ್ತು. ನಾನು ಇಲ್ಲಿಗೆ ಬಂದಿದ್ದಾದರೂ ಯಾತಕ್ಕೆ? ಬಿಟ್ಟುಬಿಡಲು… ಕಳಚಿಕೊಳ್ಳಲು… ವಿದಾಯ ಹೇಳಲು… ಆದರೆ ಈಗ ಎಲ್ಲವನ್ನು ಕಟ್ಟಿಕೊಂಡು ಹೊತ್ತುಕೊಂಡು ನಡೆದಿರುವೆನಲ್ಲಾ… ಜೀವನದಲ್ಲಿ ಈ ಘಟನೆಗಳೆಲ್ಲ ಹೇಗೆ ಸಂಯೋಜಿಸಲ್ಪಟ್ಟಿರುತ್ತವೆ… ಏನಿದರ ಸೂತ್ರ ಎಂದು ಕಾಲುದಾರಿಯಲ್ಲಿ ನಡೆದುಕೊಂಡು ಹೆದ್ದಾರಿಗೆ ಬಂದೆ. ಅಲ್ಲಿಂದ ನನ್ನ ಹಳ್ಳಿಗೆ ಲಡಾಸು ಬಸ್ಸು ಲಾರಿ ವ್ಯಾನುಗಳು ಸಿಗುತ್ತಿದ್ದವು. ವ್ಯಾನೊಂದರಲ್ಲಿ ನಿಂತು ಪಯಣಿಸಿದೆ.
ನಿಜ; ತಾತನನ್ನು ಹೊರಗೆ ಮಲಗಿಸಿದ್ದರು. ಬಸಿದು ಹೋಗಿದ್ದ. ಮಾತು ಸರಿಯಾಗಿ ಹೊರಡುತ್ತಿರಲಿಲ್ಲ. ಹೋದ ಕೂಡಲೆ ವ್ಯಗ್ರ ನಾಯಿಗಳಂತೆ ನನ್ನ ಮೇಲೆ ಆ ಬಂಧು ಬಳಗ ಬೊಗಳಿತು. ಕೇರು ಮಾಡಲಿಲ್ಲ. ಅವನು ದರಿದ್ರ ನನ್ನಪ್ಪ ಹೆಣದಂತೆ ಅರೆ ಬೆತ್ತಲೆಯಾಗಿ ಬೀದಿಯ ಲೈಟು ಕಂಬಕ್ಕೆ ಒರಗಿಕೊಂಡು ಅಮಲಾಗಿ ಯಾರ ಮೇಲೊ ಬೈಯ್ಯುತ್ತಿದ್ದ. ನನ್ನ ಕಂಡ ಕೂಡಲೇ… ‘ವರದಕ್ಷಿಣೆಯಾ ಯೆಸ್ಟು ತಕಂದಿದ್ದಾನಂತೆ ಕೇಳೀ… ಆ ದುಡ್ಡು ನನುಗೆ ಸೇರಬೇಕೂ’ ಎಂದು ಕುಯ್ಗರೆಯುತ್ತಿದ್ದ. ಇವನು ಇಂಗೇ ಭಿಕ್ಷೆ ಬೇಡಿಕೊಂಡೇ ಸಾಯುತ್ತಾನೆ ಎನಿಸಿತು. ನನ್ನ ಕುರುಡಿ ತಾತನ ಮೂರು ಹೆಣ್ಣುಮಕ್ಕಳು… ನನ್ನ ಒಂದು ಕಿಶೋರ ಕಾಲದ ಅಪ್ಸರೆ ಅತ್ತೆಯರು ಓಡೋಡಿ ಬಂದರು. ಗಕ್ಕನೆ ನಿಂತರು. ನಾನು ಅಷ್ಟು ಘನ ಗಂಭೀರವಾಗಿ ತಾತನ ಮುಂದೆ ಕೈ ಕಟ್ಟಿ ನಿಂತು ಏನೇನೊ ಹೇಳುತ್ತಿದ್ದೆ. ಅವರತ್ತ ಕೈ ಬೀಸಿದೆ. ಅವರ ಬಗ್ಗೆ ಕಥೆ ಬರೆದಿದ್ದೆ. ಅದ ಮರೆತಿದ್ದರು. ಎಷ್ಟೇ ಆಗಲಿ ಎತ್ತಿ ಆಡಿಸಿದ್ದವರು. ಈಗ ಕುರೂಪಿಯಂತೆ ಕಾಣುತ್ತಿದ್ದರು. ಅವರ ಮಡಿಲಲ್ಲಿ ಆಡಿದ್ದೆ. ಈಗ ಅವರ ಹತ್ತಿರ ಹೋಗಿ ಮುಟ್ಟಿಸಿಕೊಳ್ಳಲು ಭಯವಾಗುತ್ತದೆ… ಅರೇ ಇದೇನಿದೀ ವಿಚಿತ್ರ ಸೆಳೆತ, ನಿರಾಕರಣೆ… ಅತ್ತೆಯರು ಅತ್ತ ಮರೆಗೆ ಸರಿದರು.
ಭಾಗಶಃ ಆಗ ತಾನೆ ಹಿರಿ ಅತ್ತೆಗೆ ಏಡ್ಸ್ ಹಿಡಿದಿತ್ತು ಎನಿಸುತ್ತದೆ. ಆ ಕಾಳಮ್ಮ ಮಂಚಮ್ಮ ಮುಟ್ಟಿ ಮಾತಾಡಿಸಿದರು. ನಾನೇ ಇತ್ತ ಬಂದು ಅತ್ತೆಯರ ಕೈ ಹಿಡಿದುಕೊಂಡೆ. ‘ಬಾಳ ಸಂತೋಸ ಆಯ್ತು ಕಣಪ್ಪಾ… ಪಾಪಿ ಜನ್ಮಗಳು… ನಮ್ಮುನ್ನ ಮುಟ್ಟಿ ಅಪ್ಕಂದಲ್ಲಾ… ಇದೇ ಸ್ವರ್ಗ… ಇಷ್ಟೇ ಸಾಕು ಬಿಡಪ್ಪಾ… ಎಂಗಿದ್ದೋನು ಎಂಗಾಗಿದ್ದೀಯಲ್ಲಪ್ಪಾ… ನನ್ನ ಚಪ್ಲಿಗೆ ಸಿಕಾಕಂದಿರು ಕಸ ಇವುನು ಅಂತಿದ್ದ ನಿನ್ನ ನಿಮ್ಮಪ್ಪ ನಮ್ಮಣ್ಣ. ಯಾರಪ್ಪ ಇವತ್ತು ಕಾಲಕಸವಾದೋರೂ… ದೇವುರ ಪಾದ ಸೇರೊ ಹೂವಾದೆ ನೀನು… ನಮುಗೆ ಅಸ್ಟೋ ಇಸ್ಟೋ ಗೊತ್ತು ನಿನ್ನ ಬಗ್ಗೆ. ಕೊಂಡಾಡು ಜನ ಅವ್ರೆ… ನಿನ್ನ ಹೆಸರ ಹೇಳು ಯೋಗ್ಯತೆಯೂ ನಮಗಿಲ್ಲ ಕನಪ್ಪಾ… ಅಕ್ಕನ ಮಗಳ ಮದುವೆ ಆಯ್ತಿದ್ದೀಯೇ… ಆಗಪ್ಪಾ… ಒಳ್ಳೇದು ಕನಪ್ಪಾ’ ಎಂದು ಕಣ್ಣೀರು ಒರೆಸಿಕೊಂಡರು. ತೀವ್ರವಾಗಿ ಅವರ ಕೈಗೆ ದುಡ್ಡು ಕೊಡುವ ಒತ್ತಡ ಉಂಟಾಗುತ್ತಿತ್ತು. ಅವರು ವೃತ್ತಿಯವರು… ಗಿರಾಕಿಗಳು ನೋಟುಗಳ ಮುಖದ ಮೇಲೆ ಬಿಸಾಡುವಾಗ ಎತ್ತಿಕೊಂಡು ಗಂಜಿಗೆ ಗತಿ ಕಾಣುವವರು. ಅಂತಹ ಅತ್ತೆಯರಿಗೆ ಕಾಸುಕೊಡಲೊ ಬೇಡವೊ ಎನಿಸಿ ಹಿಂಜರಿದೆ. ತಂತಾನೆ ಕೈ ನೋಟುಗಳ ಎಳೆದು ಮುಚ್ಚಿ ಮೂರು ಅತ್ತೆಯರಿಗೆ ಕೊಟ್ಟೆ. ಹಣೆಗೆ ಒತ್ತಿಕೊಂಡರು ಕೈಯನ್ನು. ಅದೇ ಕೊನೆ ಮತ್ತೆ ಅವರು ನನಗೆ ಕಾಣಲೇ ಇಲ್ಲ. ಎಂದೊ ನಂತರ ಹೆಂಡತಿಯ ಮೂಲಕ ಮಾತಾಡಿಸಿ ಫೋಟೊ ತೆಗೆದುಕೊಂಡು ತರಲು ಹೇಳಿದ್ದೆ. ಅದೆಲ್ಲ ಹಳೆಯ ಗಾಯ… ಕಾಲ ಮುಂದೆ ಹೊರಟು ಹೋಗಿದೆ.
ನೆನೆದೆ ಹಿಂದೆ ಮುಂದೆ ಎಲ್ಲವ. ತಾತನ ಮಾತು ನಿಂತು ಹೋಗಿದ್ದವು. ಅಷ್ಟೊತ್ತಿಗೆ ಚಿಕ್ಕಪ್ಪಂದಿರು ತೋಳೇರಿಸಿಕೊಂಡು ಬಂದರು. ‘ಇವುನ್ಯಾರ್ಲಾ… ಯಾಕ್ ಬಂದಿದ್ದಾನು ಇಲ್ಲಿಗೇ’ ಎಂದು ಕೀಳಾಗಿ ರೇಗಿದರು. ‘ಅದೆಂಗ್ಲಾ ಮದ್ವೆಗೆ ವಪ್ಗಂದೇ… ನಾವಿಲ್ಲಿ ಇರ್ಲಿಲ್ಲುವೇ… ನಿಮ್ಮಪ್ಪ ವಪ್ಲಿಲ್ಲ… ನಾವು ವಪ್ಲಿಲ್ಲ… ಯಾರ್ಗೂ ಇಷ್ಟ ಇಲ್ಲಾ… ವೋಗಿ ವೋಗಿ ಆ ತಿಪ್ಪೆಗುಂಡಿಗೆ ಬಿದ್ದಲ್ಲೊ… ಓದಿದ್ದಾನಂತೆ ಇಷ್ಟುದ್ದ; ಏನೊ ನನ್ನ ಲವುಡಾವ… ನಿನ್ನೇಗ್ತಿಗೆ ಬೆಂಕಿ ಹಾಕ! ಎಲ್ಲೊ ಹೇಲೆತ್ಕಂದಿರಬೇಕಾಗಿದ್ದೋನಾ ಇಷ್ಟು ಓದ್ಸಿದ್ದು ಯಾರೂ… ನಾವಲ್ಲವೇ… ನಮ್ಮನೆ ಅನ್ನ ತಿಂದಿಲ್ಲುವೇ… ನಮ್ಮೆಂಜಲೆಲಿ ಬಿದ್ದಿದ್ದಲ್ಲೊ… ನಮ್ಮೆಕ್ಕಡ ಎತ್ಕಂದಿರಬೇಕಾಗಿದ್ದೋನ ಇವತ್ತು ವಿದ್ಯಾವಂತ ಮಾಡಿರುರು ಯಾರೋಲೇ ಲೋಪರ್… ಯಾಕೊ ಬಂದೇ… ತರಿಯುಕೆ ಬಂದಾ’ ಎಂದು ಅಮಲಿನ ಕಣ್ಣುಗಳಿಂದ ರಕ್ತಕಾರುವಂತೆ ಎರಗಿದರು. ಸೊಂಟದ ಮರೆಯ ಜೇಬಿಗೆ ಕೈ ಹಾಕಿದೆ. ಬೇಡ! ತಾಳು ಎಂದಿತು ನೆರಳು. ಹರಿತವಾದ ಬಟನ್ ಚಾಕನ್ನು ಯಾಕೊ ಯಾವತ್ತೂ ರಕ್ಷಣೆಗೆ ಇರಲಿ ಎಂದು ಇಟ್ಟುಕೊಂಡಿರುತ್ತಿದ್ದೆ. ಯಾರೊಬ್ಬರೂ ಊಹಿಸಲು ಸಾಧ್ಯವಿರಲಿಲ್ಲ ನನ್ನ ದಾಳಿಯ ಮರ್ಮಾಘಾತದ ದಾಳಿಯ ತಂತ್ರವನ್ನು. ಜಪಾನಿನ ನನ್ನ ಗೆಳೆಯ ಇದ್ದ ಹಜೀ಼ಮಾ ಚಿಬಾ ಎಂದವನ ಹೆಸರು. ಅತ್ಯಂತ ಅಪಾಯದ ಕ್ಷಣದಲ್ಲಿ ಪ್ರಾಣರಕ್ಷಿಸಿಕೊಳ್ಳುವ ಕೆಲವು ಸಮರ ಹೊಡೆತಗಳ ತಂತ್ರವ ಕಲಿಸಿಕೊಟ್ಟಿದ್ದ. ಒಂದೇ ಸಲಕ್ಕೆ ಕೊರಳ ಒಂದು ಶ್ವಾಸನಾಳದ ಭಾಗವ ಸುಮ್ಮನೆ ಗಿಂಡಿದಂತೆ ಹಿಡಿದು ಎಳೆದು ಬಿಟ್ಟರೂ ಸಾಕು… ಅವನ ನರಮಂಡಲದ ವ್ಯವಸ್ಥೆಯೇ ಸ್ತಬ್ಧವಾಗಿ ತಂತಾನೆ ಬಿದ್ದು ಹೋಗುವ ತಂತ್ರವದು. ಅಂತಹ ಕೆಲ ಹೊಡೆತಗಳ ಕಲಿತಿದ್ದೆ.
ಕೈಗಳು ಬಿಗಿಯಾಗಿ ಕುತ್ತಿಗೆಯತ್ತ ಹೋಗುತ್ತಿದ್ದವು… ‘ಲೇಯ್… ನಿಮ್ಮಪ್ಪನುಗೆ ನೀನು ಹುಟ್ಟಿದ್ರೆ ಯೀ ಮದುವೆಯ ಕ್ಯಾನ್ಸಲ್ ಮಾಡ್ಲ… ಬೆರ್ಕೆಗೆ ಹುಟ್ಟಿದ್ದೀನಿ ಅಂದ್ರೆ ಬುಡ್ಲಾ’ ಎಂದ ಚಿಕ್ಕಪ್ಪ. ‘ಅಲ್ಲಿ ಬಿದ್ದವನಲ್ಲ ಕುಡುದು; ನಿಮ್ಮಣ್ಣ… ಅವನ ಕೇಳು… ಅವನು ಹುಟ್ಸಿದ್ದೋ ಬೇರೆಯೋರು ಹುಟ್ಸಿದ್ದೊ ಅಂತಾ ಅವುನ ಬಾಯಲ್ಲೇ ಕೇಳಿ’ ಎಂದು ಎದೆಯ ಮೇಲೆ ಮುಷ್ಠಿಯ ತಟಕ್ಕನೆ ಗುದ್ದಿ ನೂಕಿದೆ. ಆ ಏಟು ಹೃದಯ ಸ್ತಂಬನಕ್ಕೆ ಸಂಬಂಧಿಸಿದ್ದು. ಮೆಲ್ಲಗೆ ಪ್ರಯೋಗಿಸಿದ್ದೆ. ಕುಸಿದು ಬಿದ್ದು ಎದೆ ಹಿಡಿದುಕೊಂಡ. ಗಾಭರಿಯಾದ. ಇನ್ನೊಬ್ಬ ಚಿಕ್ಕಪ್ಪ… ‘ಲೇಯ್ ಕೈ ಮಾಡಿಲಾ… ಬಾಲ ನಂತಾಕೆ ಮಂತೇ’ ಎಂದು ನುಗ್ಗಿ ಕತ್ತಿನ ಪಟ್ಟಿ ಹಿಡಿದ. ಮುಂಗೈಯನ್ನು ಒಂದು ಅಳತೆಯಲ್ಲಿ ನುಲಿದು ಹಿಡಿದೆ. ನೋವೇ ಗೊತ್ತಾಗದು. ರಕ್ತನಾಳಕ್ಕೆ ನುಲಿದಿದ್ದರಿಂದ ವಾಸಿಯಾಗದ ಪೆಟ್ಟಾಗಿರುತ್ತದೆ. ಕೈ ಬೆಂಡಾಗಿ ಜುಂ ಹಿಡಿದಂತಾಗಿರುತ್ತದೆ! ಅಷ್ಟೇ… ಮರುದಿನ ಆ ಕೈ ಸರಿಯಾಗಿ ಕೆಲಸ ಮಾಡಲಾರದು. ಅವನು ಅದೇ ಕೈಯಲ್ಲಿ ಉಂಡು ಅದೇ ಕೈಯಲ್ಲಿ ತಿಕಾ ತೊಳೆದುಕೊಳ್ಳುವಂತೆ ಮಾಡಿದ್ದೆ. ಅಷ್ಟಕ್ಕೆ ಜಗಳ ನಿಂತಿತ್ತು. ಮಾಯದ ಹೊಡೆದಾಟ! ನನ್ನ ಬದುಕೇ ಅದಾಗಿತ್ತು. ಆ ಮುಠ್ಠಾಳ ಚಿಕ್ಕಪ್ಪ ಯಾವುದೊ ಒಂದು ಬುದ್ಧಿಮಾಂದ್ಯ ಹುಡುಗಿಯ ಮದುವೆ ಮಾಡಿಸಿ ಲಕ್ಷಗಟ್ಟಲೆ ವರದಕ್ಷಿಣೆ ತೆಗೆದುಕೊಳ್ಳಲು ಪ್ಲಾನು ಮಾಡಿದ್ದ. ಮತ್ತೊಬ್ಬ ಚಿಕ್ಕಪ್ಪ ತನ್ನ ಹೆಂಡತಿ ಕಡೆಯ ಸ್ಲಮ್ಮಿನಲ್ಲಿದ್ದ ಅಕ್ಕತಂಗಿಯರ ತೋರಿದ್ದ. ಆ ಹುಡುಗಿಯರ ಬಗ್ಗೆ ನನಗೆ ಪ್ರೀತಿ ಮರುಕ ಇತ್ತು. ಆದರೆ ಅವರನ್ನು ಬಳಸಿಕೊಂಡು ನನ್ನನ್ನೂ ಮಾರಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದಕ್ಕೆ ಅವರನ್ನು ನಿರಾಕರಿಸಿದ್ದೆ.
ತಾತ ಅಸಹಾಯಕವಾಗಿ ನೋಡುತಿದ್ದ. ಮದುವೆ ಯಾವಾಗಪ್ಪಾ ಎಂದು ಬಹಳ ಕಷ್ಟಪಟ್ಟು ದನಿ ಹೊರಡಿಸಿ ಕೇಳಿದ್ದ. ಆರು ತಿಂಗಳಾದ ನಂತರ ಎಂದಿದ್ದೆ. ‘ಆಗದು; ಅಲ್ಲಿ ತನಕ ನನ್ನ ಜೀವ ಇರದು’ ಎಂದು ಸನ್ನೆ ಮಾಡಿ ಹೇಳಿದ. ಸಂಕಟವಾಯಿತು. ತಾತನ ಕಾಲಿಗೆ ಎರಗಿದೆ. ಅಷ್ಟೊತ್ತಿಗಾಗಲೇ ನನ್ನ ಬುಗುರಿ ಕಥಾ ಸಂಕಲನವನ್ನು ಲಂಕೇಶರು ಪ್ರಕಟಿಸಿದ್ದರು. ಪ್ರಖ್ಯಾತವಾಗಿತ್ತು. ಹೀಗೆಲ್ಲ ಬರೆದು ನಮ್ಮ ಮಾನ ಹರಾಜು ಹಾಕಿದ್ದಾನೆ ಎಂಬ ಸಿಟ್ಟೂ ಅವರಿಗೆಲ್ಲ ಇತ್ತು. ಬ್ಯಾಗಿಂದ ತೆಗೆದು ಬುಗುರಿ ಪುಸ್ತಕವ ತಾತನ ಕೈಗಿತ್ತು… ‘ಇದೆಲ್ಲ ನಿನ್ನಿಂದ ಆದದ್ದು’ ಎಂದು ಕೈ ಮುಗಿದೆ. ಇಲ್ಲ ಇಲ್ಲಾ ಎಂದು ತಲೆ ಆಡಿಸಿ ಮೇಲೆ ಒಬ್ಬ ಇದ್ದಾನೆಂದು ತಲೆ ಮೇಲೆ ಕೈ ಎತ್ತಿ ಆಕಾಶವ ತೋರಿದ. ‘ಲೇಯ್… ಅದೇನೊ… ನೋಟಿನ ಕಟ್ಟು ಅನ್ನುವಂತೆ ಕೊಡ್ತಿರುದು ಆ ನನ್ನ ಎಕ್ಕಡವಾ… ಕಿತ್ತಿ ಬಿಸಾಕುರ್ಲಾ ಅದಾ’ ಎಂದು ಎದೆ ನೀವಿಕೊಳ್ಳುತ್ತಿದ್ದವನು ಕುಯ್ಗರೆದ. ತಾತ ಹೆಮ್ಮೆಯಿಂದ ನೋಡುತಿದ್ದ. ಕಿತ್ತು ಬಚ್ಚಲಿಗೆ ಎಸೆದುಬಿಟ್ಟ ಬುಗುರಿ ಪುಸ್ತಕವ. ಮನೆ ಮುಂದೆಯೆ ಬಚ್ಚಲು ನೀರು ಕಪ್ಪಾಗಿ ಮಲೆತು ಮುಂದೆ ಹೋಗದಂತೆ ನಿಂತಿತ್ತು. ಮುಳುಗುತಿತ್ತು. ಕಾಲಲ್ಲಿ ತುಳಿದ. ಅಹಾ! ದೇವರೇ… ಆ ಬುಗುರಿ ಕಥೆಯ ನಾನು ಬರೆದದ್ದು ಏತಕ್ಕಾಗಿ ಯಾರಿಗಾಗಿ… ಈಗ ಅದೇ ಬುಗುರಿ ಕೃತಿ ರೂಪದಲ್ಲಿ ಮತ್ತೆ ಹೇಸಿಗೆಗೆ ಸೇರಿತಲ್ಲಾ… ಎತ್ತಿಕೊಳ್ಳುವಂತಿರಲಿಲ್ಲ. ಸಂಪೂರ್ಣ ತಗ್ಗಿದೆ. ಮನವ ಸಂತೈಸಿಕೊಂಡೆ. ‘ನಡೀಲಲೇಯ್; ಬಂದ್ಬುಟ್ಟ ದೊಡ್ಮನುಸ್ನಂಗೆ… ಏನೊ ದಬ್ಬಾಕು ಬುಟ್ಟವನೆ ನೋಡೂ… ನಿನ್ನ ಯಾಸುಕ್ಕೆ ನನ್ನೆಕ್ಕಡ ವಡಿಯ ನಡೀಲಲೇಯ್… ಏನೊ; ದುರುಗುಟ್ಟೋದೂ… ತೋರಿಸ್ಲಾ… ನೋಡ್ತಿಯಾ’ ಎಂದು ಪಂಚೆ ಎತ್ತುತ್ತಿದ್ದ. ಒಂದೇ ಒಂದು ಸಲ ಒದ್ದರೆ ಅವನ ತರಡು ಗಂಟಲಿಗೆ ಹೋಗಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಬಹುದಿತ್ತು… ನನ್ನೊಳಗೆ ಎಲ್ಲಾ ತರದ ಜನರೂ ಇದ್ದಾರೆ ಎಂದು ತೋರಿಸಿಕೊಡಬಹುದಿತ್ತು. ಕೈ ಮೀರಿದರೆ ಇನ್ನೂ ಏನೇನೊ ಆಗಿ ಬಿಡುತಿತ್ತು. ಆ ಕಾಳ ಅದೆಲ್ಲಿದ್ದನೊ… ಬಂದವನೇ; ‘ಯೇಯ್ ಅಣ್ಣಾ… ಅವುನು ತಲೆ ಕೆಟ್ರೆ ಸರಿ ಇಲ್ಲಾ… ಸುಮ್ನೆ ತಳ್ಳದ್ರೂ ಸಾಕೂ… ಕೈಲಾಸ ಕಂಡೋಯ್ತಿಯೇ… ವೋಗತ್ತಾಗೆ… ಹೇ; ನೀನೋಗಪ್ಪ ಮೈಸೂರ್ಗೆ… ನಿನ್ನ ಮದುವೆಗೆ ಬತ್ತಿವಿ ಹೋಗು’ ಎಂದು ಕಳಿಸಿದ. ಆ ನನ್ನ ಮನೆಯಲ್ಲೇ ನನಗೆ ಯಾರೂ ಇರಲಿಲ್ಲ. ಶಾಂತಿಯ ಮದುವೆ ಅದಾಗಲೆ ಆಗಿತ್ತು. ಸರ್ಕಲ್ಲಿಗೆ ಬಂದೆ. ಸಾವಿತ್ರಿ ನೆನಪಾದಳು. ಮನಸ್ಸು ಎಷ್ಟು ವಿಚಿತ್ರ… ಅವಳ ನೋಡಬೇಕು ಎನಿಸಿತು. ಅಲ್ಲೇ ಹತ್ತಿರದಲ್ಲೆ ಅವಳ ಮನೆ. ನಾನು ಬಂದಿರುವುದು ಅವಳಿಗೆ ಗೊತ್ತಾಗಿತ್ತು. ಆ ಜಗಳದಲ್ಲಿ ಅವಳ ಮುಖವ ಕಂಡಂತಿತ್ತು. ಅವಳ ಮನೆಯ ಮುಂದೆಯೆ ನಿಂತಿದ್ದೆ. ಅವಳ ತಾಯಿ ಬಂದು; ‘ಮೊಗಾ… ಬಾರಪ್ಪಾ ಊಟ ಮಾಡು’ ಎಂದಳು. ‘ಬೇಡ; ಆಯ್ತು’ ಎಂದೆ. ‘ಎಲ್ಲಿ ನಿಮ್ಮ ಮಗಳು ಸಾವಿತ್ರಿ’ ಎಂದೆ. ‘ಈಗ ಹೊಲಕ್ಕೆ ಹೋದ್ಲು ಕಣಪ್ಪ ಕೆಲ್ಸ ಇತ್ತು’ ಎಂದಳು. ಓಹ್! ಇಷ್ಟೇ… ನೋಡೋಣ; ನಾಳೆ ಅವಳು ನನ್ನ ಮದುವೆಗೆ ಬರುವಳು ಎಂದು; ಬಸ್ಸು ಇಲ್ಲದ್ದರಿಂದ ಮುಖ್ಯ ರಸ್ತೆಗೆ ನಡೆದುಕೊಂಡೆ ಹೋದೆ. ಅದೇ ನನ್ನ ಬಾಲ್ಯದ ಆ ಶಾಲೆ, ಆ ಮಾಸ್ತರು… ಊರ ಮುಂದಿನ ಮಾರಿಗುಡಿ, ಮಹಾಸತಿ ಕಲ್ಲುಗಳ ಮುಟ್ಟಿ ಸುತ್ತಿಕೊಂಡು ಕೆರೆ ಏರಿ ಮೇಲೆ ನಡೆದು ತಿಳಿನೀಲಿ ನೀರಲ್ಲಾಡುವ ಹಕ್ಕಿಗಳ ಕಂಡು ಹಿಂತಿರುಗಿದ್ದೆ. ಮನಸ್ಸು ಬಾರವಾಗಿತ್ತು. ಅದೇ ಚಲುವಾಂಬ ಆಸ್ಪತ್ರೆಯ ಪಾರ್ಕಿನ ಮರದ ನೆರಳಲ್ಲಿ ಅಂಗಾತ ಅನಾಥನಾಗಿ ಬಿದ್ದುಕೊಂಡೆ. ಯಾವುದೋ ಒಂದು ನಾಯಿ ಹತ್ತಿರ ಬಂದು ಮೂಸಿ ಮಾತಾಡಿಸಿ ನನ್ನ ಪಕ್ಕದಲ್ಲೆ ಕೆಡೆದುಕೊಂಡಿತು. ರೋಗಿಗಳ ಕಡೆಯ ನಾಯಿ ಇರಬೇಕು… ಹೊರಗೇ ಕಾಯುತ್ತ ಇಲ್ಲೆ ಸಿಕ್ಕಿದ್ದ ತಿಂದುಕೊಂಡು ಬಿದ್ದಿದೆ ಎನಿಸಿತು. ಆಗಾಗ ಅದು ಮಖ್ಯ ಬಾಗಿಲ ತನಕ ಹೋಗಿ ವಾಸನೆ ಹಿಡಿದು ಬರುತ್ತಿತ್ತು. ಮನುಷ್ಯ ತನಗಾಗದವರ ವಾಸನೆಯ ಕಂಡ ಕೂಡಲೆ ಕ್ರೋಧನಾಗುತ್ತಾನೆ. ಈ ನಾಯಿ ನೋಡಿದರೆ ನನ್ನ ಕಾಲ ಬಳಿಯೇ ಕಾಯುವಂತೆ ಮಲಗಿ ಎಲ್ಲವನ್ನೂ ಮಂಪರುಗಣ್ಣಲ್ಲೇ ಅವಲೋಕಿಸುತ್ತಿದೆಯಲ್ಲಾ ಎಂದು ಅಚ್ಚರಿ ಆಯಿತು.
ಅಲ್ಲೆಲ್ಲ ಸುತ್ತಾಡಿದೆ. ಮಾರುಕಟ್ಟೆಯಲ್ಲಿ ಪರಿಚಿತರಾಗಿದ್ದವರ ಮಾತಾಡಿಸಿದೆ. ದೇಹ ದಂಡಿಸಿಕೊಳ್ಳಬೇಕು ಎಂಬಂತೆ ಗಂಗೋತ್ರಿಗೆ ನಡೆದುಕೊಂಡೇ ಬಂದೆ. ಈ ಆರು ತಿಂಗಳಲ್ಲಿ ಏನೆಲ್ಲ ರೆಡಿ ಮಾಡಿಕೊಳ್ಳಬೇಕು ಎಂದು ಅಂದಾಜು ಮಾಡಿದೆ. ಹಿತವಾಗಿ ಕಿವಿಯಲ್ಲಿ ಕ್ಲಾಸಿಕಲ್ ಮ್ಯೂಸಿಕ್ ಮಿಡಿಯುತ್ತಿತ್ತು. ಜಸ್ರಾಜ್ ಅವರ ಸಂಗೀತವನ್ನು ಆಲಿಸುತ್ತಿದ್ದೆ. ದೇಮಯ್ಯ ಬಂದ. ‘ಏನಣ್ಣಾ… ಹಣ್ಣೊ ಕಾಯೊ’ ಎಂದ. ‘ಲೋ ದೇಮಾ ನೀನು ದೂತ ಕಣೊ… ಯಾವುದೋ ಒಂದು ಒಳ್ಳೆಯ ಘಟನೆ ಘಟಿಸುವುದಕ್ಕಾಗಿ ದೂತನೊಬ್ಬನ ದೇವಲೋಕದಿಂದ ದೇವರು ಕಳಿಸುತ್ತಾನಂತೆ. ಅಂಗೇ ಆಯಿತು. ತ್ಯಾಂಕ್ಸ್ ಕಣೋ… ನನ್ನ ಅಕ್ಕನ ಮಗಳ ನಾನೆ ಮದುವೆ ಆಗುವಂತಾಯಿತು’ ಎಂದು ಆ ಪ್ರಸಂಗವ ಚುಟುಕಾಗಿ ಹೇಳಿದೆ. ‘ಹೇ ಅಣ್ಣಾ… ಇದಕ್ಕೆ ಸೆಲಬರೇಶನ್ ಆಗ್ಲೇ ಬೇಕೂ… ಬಾ ಹೋಗೋಣ’ ಎಂದು ತನ್ನ ಬೈಕಲ್ಲಿ ಕೂರಿಸಿಕೊಂಡು ‘ಗ್ರ್ಯಾಂಡ್ ಪಾ’ಗೆ ಕರೆತಂದು ವಿಸ್ಕಿ ಕುಡಿಸಿದ. ಹಳ್ಳಿಯ ಕಹಿಯ ಹೇಳಿಕೊಂಡೆ. ‘ಇರ್ಲಿ ಬಿಡಣ್ಣಾ… ನಮ್ಮ ಜಾತಿಗೆ ನಮ್ಮೋರೆ ಶತ್ರು ಕಣಣ್ಣಾ… ಅಪ್ಪ ಅಮ್ಮ ಬಂಧು ಬಳಗನೇ ಸಹಿಸ್ಕೋದಿಲ್ಲ. ಅಂತಾದ್ರೆಲಿ ನಿನ್ನ ಈ ಇವ್ರು ಸಂಚು ಮಾಡೋರು ಎಂಗಣ್ಣ ವಪ್ಕಂದರು’ ಎಂದು ತಡರಾತ್ರಿ ತನಕ ಮಾತಾಡುತ್ತಿದ್ದ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.