ಓದುಗರ ದೃಷ್ಟಿಯಿಂದ ನೋಡಿದರೆ, ಸಾಮಾನ್ಯವಾಗಿ, ನಮ್ಮ ವೃತ್ತಿಯಲ್ಲಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಆತ್ಮಚರಿತ್ರೆ ಓದಲು ಆಸಕ್ತಿಯಿರುತ್ತದೆ. ಅವರ ಜೀವನ ವಿಧಾನ, ವಿಶಿಷ್ಟ ಮೈಲಿಗಲ್ಲುಗಳು ಅಥವಾ ಸಂಘರ್ಷಗಳನ್ನು ಆತ್ಮಚರಿತ್ರೆಯಲ್ಲಿ ಹುಡುಕಲು ಪ್ರಯತ್ನಿಸುತ್ತಾ, ಅದರಿಂದ ನಮಗೇನು ಹೊಸ ಅರಿವು, ಮಾರ್ಗದರ್ಶನ, ಅಥವಾ ಪ್ರೇರಣೆ ಸುಳಿವು ಸಿಗಬಹುದೆಂದು ಆಶಿಸುತ್ತೇವೆ. ಅವರ ಜೀವನಾನುಭವಗಳು ಓದುಗರಿಗೆ ದಾರಿದೀಪವಾಗಬಹುದು. ಆದರೆ, ಇಂತಹ ಹುಡುಕಾಟಕ್ಕೆ ಗುಣಾತ್ಮಕ ಸ್ಪಂದನೆ ಸಿಗದಿದ್ದಾಗ ಆತ್ಮಚರಿತ್ರೆ ನಿಷ್ಪ್ರಯೋಜಕವೆನಿಸಿ, ಇದೊಂದು ಕೇವಲ ಬರೆಯಲು ಬರುವವರ ಸ್ವಪ್ರತಿಷ್ಠೆಯ ಹವ್ಯಾಸದಂತೆ ಕಾಣಿಸುತ್ತದೆ.
ಡಾ. ಜ್ಯೋತಿ ಬರೆದ ಲೇಖನ

 

ಬರವಣಿಗೆಯೆನ್ನುವುದು, ಸ್ವಯಂಕೇಂದ್ರಿತ ಅಹಂಯೆಂದು ಅರಿತವರು ಹೇಳುತ್ತಾರೆ. ಅಲ್ಲಿ ಅಧಿಕಾರ, ಶಕ್ತಿ ಮತ್ತು ಹತೋಟಿಯಿದೆ. ಹಾಗಾಗಿಯೇ, ನಮ್ಮ ಜ್ಞಾನಪರಂಪರೆಯ ಕವಲುಗಳಾದ ವೇದ ಪುರಾಣಗಳಿಂದ ಹಿಡಿದು, ಜಾನಪದ, ಭಕ್ತಿಸಾಹಿತ್ಯ, ತತ್ವಪದ ಇತ್ಯಾದಿಗಳೆಲ್ಲ ಮೌಕಿಕವಾಗಿಯೇ ಮುಂದುವರಿದವು. ಯಾಕೆಂದರೆ, ಮೌಖಿಕ ಜ್ಞಾನಕ್ಕೆ ವಾರಸುದಾರರಿಲ್ಲ. ಅದು ಒಂದು ಇಡೀ ಸಂಸ್ಕೃತಿ ಅಥವಾ ಜನಾಂಗದ ಸ್ವತ್ತು, ಅಲ್ಲದೆ, ನಿರಂತರವಾಗಿ ತಿದ್ದುಪಡಿಯಾಗುತ್ತಲೇ ಇರುತ್ತದೆ. ಅದು ಪ್ರದೇಶದಿಂದ ಪ್ರದೇಶಕ್ಕೆ, ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಟ್ಟಂತೆ, ಮಾರ್ಪಡುತ್ತ ಹೊಸ ರೂಪ, ವ್ಯಾಖ್ಯಾನ ಪಡೆಯುತ್ತದೆ. ಆದರೆ, ಕಾಲಕ್ರಮೇಣ ಮನುಷ್ಯಸಮಾಜ ಸ್ವಕೇಂದ್ರಿತವಾದಂತೆ, ಮನುಷ್ಯ ತನ್ನನ್ನು ಪ್ರಪಂಚದಿಂದ ವಿಭಿನ್ನವಾಗಿ ಗುರುತಿಸಿ ತಾನು, ತನ್ನದು ಮತ್ತು ತನ್ನವರೆನ್ನುವ ಪರಿಧಿ ಕಟ್ಟಲು ಆರಂಭಿಸುತ್ತಾನೆ.

ಈ ಮೂಲಕ ತಾನು ಪಡೆದುಕೊಂಡ ಅರಿವು, ಸತ್ಯ ಹಾಗು ಅರ್ಥೈಸಿಕೊಂಡ ಜೀವನದೃಷ್ಟಿಗಳನ್ನು ಪ್ರಪಂಚಕ್ಕೆ ತಿಳಿಸಲು, ಹಾಗು ಬರವಣಿಗೆಯ ಮೂಲಕ ಶಾಶ್ವತಗೊಳಿಸಲು ತೊಡಗುತ್ತಾನೆ. ಇದಕ್ಕೆ ಮುಖ್ಯ ಪ್ರೇರಣೆ, ಮನುಷ್ಯನ ಮೂಲಭೂತ ಭಯ, ತನ್ನ ಜೀವನದ ಅನಿಶ್ಚಿತತೆ ಅಥವಾ ಸಾವು. ಇದರಿಂದ ಹೊರಬರಲಾರದ ಮನುಷ್ಯನ ಮೊದಲ ಪ್ರಯತ್ನವೇ, ತನ್ನ ಹೆಸರನ್ನಾದರೂ ತನ್ನ ಜೀವಿತಾವಧಿಗಿಂತ ಮುಂದುವರಿಸುವುದು, ಅಥವಾ ಅಜರಾಮರವಾಗಿಸಲು ಪ್ರಯತ್ನಿಸುವುದು. ಈ ಪ್ರಯತ್ನಗಳ ಕುರುಹುಗಳಾದ ಶಾಸನ, ಸ್ಮಾರಕ, ಚಿತ್ರಕಲೆ, ಶಿಲ್ಪಕಲೆ, ಸಮಾಧಿ ಇತ್ಯಾದಿಗಳು, ಇತಿಹಾಸದ ಶಕ್ತಿಶಾಲಿ ಮಹಾಪುರುಷರ ನೆನಪನ್ನು ಇನ್ನೂ ಹಿಡಿದಿಟ್ಟಿವೆ.

ಶಕ್ತಿಶಾಲಿ ಯಾಕೆಂದರೆ, ಇಂತಹ ಕುರುಹುಗಳನ್ನು ನಿರ್ಮಿಸುವುದು ಜನಸಾಮಾನ್ಯರ ಸಾಮರ್ಥ್ಯಕ್ಕೆ ಮೀರಿದ್ದು. ಹಾಗೆ ಕೇವಲ ನಿರ್ಮಿಸಿದರೆ ಸಾಕೆ, ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ಕೂಡ ಅದರ ವಾರಸುದಾರರಿಗೆ ಇರುತ್ತದೆ. ಹಾಗಾಗಿಯೇ ಕಾಲಕ್ರಮೇಣ ಎಷ್ಟೋ ಸ್ಮಾರಕಗಳು ದೂಳು ಹಿಡಿದು ಇತಿಹಾಸದ ಪುಟ ಸೇರಿವೆ. ಈ ನಿಟ್ಟಿನಲ್ಲಿ, ಜನಸಾಮಾನ್ಯರಿಗೆ ತಮ್ಮ ಹೆಸರ ಶಾಶ್ವತವಾಗಿಸಲು ನಿಲುಕುವುದು ಬರವಣಿಗೆ ಮಾತ್ರ. ಅದರ ಒಂದು ರೂಪ ಆತ್ಮಚರಿತ್ರೆ.

ಈ ಪ್ರಸ್ತುತತೆಯಲ್ಲಿ, ಆತ್ಮಚರಿತ್ರೆಗಳ ಬರೆಯುವ ಹಿಂದಿರುವ ಉದ್ದೇಶವೇನು ಎಂದು ವಿಮರ್ಶಿಸುವ ಅಗತ್ಯವಿದೆ. ನಮಗ್ಯಾಕೆ ನಮ್ಮ ಜೀವನ ಜನರ ಓದಿಗೆ ಪ್ರಸ್ತುತ ಅಥವಾ ಚರಿತ್ರೆಯ ಭಾಗವಾಗಬೇಕೆಂದೆನಿಸುತ್ತದೆ? ಇಲ್ಲಿ ಮುಖ್ಯವಾಗಿ ಚರ್ಚಿಸಬೇಕಾದುದು; ಆತ್ಮಚರಿತ್ರೆ ಬರೆಯುವ ಒತ್ತಾಸೆಯೇನು? ಬರೆಯಲು ಪ್ರೇರೇಪಿಸುವ ಹಾಗು ಕಾಡುವ ತುಡಿತವೇನು? ಆತ್ಮಚರಿತ್ರೆಯನ್ನು ಹೆಚ್ಚಾಗಿ ಯಾರು ಮತ್ತು ಏನನ್ನು ಹೇಳುವುದಕ್ಕಾಗಿ ಬರೆಯುತ್ತಾರೆ? ಇದು ಅವರ ವ್ಯಕ್ತಿತ್ವದ ಪರಿಪೂರ್ಣ ಕನ್ನಡಿಯೇ? ಇದನ್ನು ಯಾರ ಮೇಲಿನ ಜಿದ್ದಿನಿಂದೇನಾದರೂ ಬರೆದಿದ್ದಾರೆಯೇ? ಬರೆದಿರುವುದರ ಸತ್ಯಾಸತ್ಯತೆ ಎಷ್ಟು?

ಇದರಿಂದ ಹೊರಬರಲಾರದ ಮನುಷ್ಯನ ಮೊದಲ ಪ್ರಯತ್ನವೇ, ತನ್ನ ಹೆಸರನ್ನಾದರೂ ತನ್ನ ಜೀವಿತಾವಧಿಗಿಂತ ಮುಂದುವರಿಸುವುದು, ಅಥವಾ ಅಜರಾಮರವಾಗಿಸಲು ಪ್ರಯತ್ನಿಸುವುದು. ಈ ಪ್ರಯತ್ನಗಳ ಕುರುಹುಗಳಾದ ಶಾಸನ, ಸ್ಮಾರಕ, ಚಿತ್ರಕಲೆ, ಶಿಲ್ಪಕಲೆ, ಸಮಾಧಿ ಇತ್ಯಾದಿಗಳು, ಇತಿಹಾಸದ ಶಕ್ತಿಶಾಲಿ ಮಹಾಪುರುಷರ ನೆನಪನ್ನು ಇನ್ನೂ ಹಿಡಿದಿಟ್ಟಿವೆ.

ಆತ್ಮಚರಿತ್ರೆಯ ಓದುಗರು ಯಾರು ಮತ್ತು ಅವರ ಹುಡುಕಾಟವೇನು? ಸಾರ್ವಜನಿಕವಾಗಿ ನಮ್ಮ ಬದುಕನ್ನು ನಾವು ಎಷ್ಟು ತೆರೆದಿಡಬಹುದು ಹಾಗೂ ಅದರಿಂದಾಗುವ ಪರಿಣಾಮಗಳೇನು? ಇದು ಬದುಕಿನ ಸಿಂಹಾವಲೋಕನವೇ ಅಥವಾ ಗತಕಾಲದ ನೆನಪುಗಳ ಮೆಲುಕುಹಾಕಿ ಭವಿಷ್ಯವನ್ನು ಇನ್ನು ಅರ್ಥಪೂರ್ಣವಾಗಿಸುವ ಪ್ರಯತ್ನವೇ? ಇಂತಹ ಪ್ರಶ್ನೆಗಳನ್ನು ಮುಂದಕ್ಕಿಟ್ಟು ಅಧ್ಯಯನ ಮಾಡಿದರೆ ವಿಸ್ಮಯ ಹುಟ್ಟಿಸುವ ಅಂಶಗಳು ಬೆಳಕಿಗೆ ಬರಬಹುದು.

ಓದುಗರ ದೃಷ್ಟಿಯಿಂದ ನೋಡಿದರೆ, ಸಾಮಾನ್ಯವಾಗಿ, ನಮ್ಮ ವೃತ್ತಿಯಲ್ಲಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಆತ್ಮಚರಿತ್ರೆ ಓದಲು ಆಸಕ್ತಿಯಿರುತ್ತದೆ. ಅವರ ಜೀವನ ವಿಧಾನ, ವಿಶಿಷ್ಟ ಮೈಲಿಗಲ್ಲುಗಳು ಅಥವಾ ಸಂಘರ್ಷಗಳನ್ನು ಆತ್ಮಚರಿತ್ರೆಯಲ್ಲಿ ಹುಡುಕಲು ಪ್ರಯತ್ನಿಸುತ್ತಾ, ಅದರಿಂದ ನಮಗೇನು ಹೊಸ ಅರಿವು, ಮಾರ್ಗದರ್ಶನ, ಅಥವಾ ಪ್ರೇರಣೆ ಸುಳಿವು ಸಿಗಬಹುದೆಂದು ಆಶಿಸುತ್ತೇವೆ. ಅವರ ಜೀವನಾನುಭವಗಳು ಓದುಗರಿಗೆ ದಾರಿದೀಪವಾಗಬಹುದು. ಆದರೆ, ಇಂತಹ ಹುಡುಕಾಟಕ್ಕೆ ಗುಣಾತ್ಮಕ ಸ್ಪಂದನೆ ಸಿಗದಿದ್ದಾಗ ಆತ್ಮಚರಿತ್ರೆ ನಿಷ್ಪ್ರಯೋಜಕವೆನಿಸಿ, ಇದೊಂದು ಕೇವಲ ಬರೆಯಲು ಬರುವವರ ಸ್ವಪ್ರತಿಷ್ಠೆಯ ಹವ್ಯಾಸದಂತೆ ಕಾಣಿಸುತ್ತದೆ.

ಇತ್ತೀಚೆಗೆ, ಆತ್ಮಚರಿತ್ರೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಓದಿಸಿಕೊಂಡು ಮನತಟ್ಟುವ ಅಂಶಗಳು ಕಡಿಮೆಯಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ, ಬರೆಯುವವನಿಗೆ, ತನ್ನ ಆತ್ಮಚರಿತ್ರೆಯ ಉದ್ದೇಶ ಸ್ಪಷ್ಟವಾಗಿರುವುದಿಲ್ಲ. ನಮ್ಮ ಜೀವನಸಾಧನೆ ನಮಗೆ ಮಹತ್ವದೆನಿಸಬಹುದು. ಆದರೆ, ಓದುಗನ ದೃಷ್ಟಿಯಲ್ಲಿ ಅದು ಅವನಿಗೆ ಸ್ಪೂರ್ತಿದಾಯಕವೆನಿಸಬೇಕಲ್ಲವೇ? ಈ ನೆಲೆಯಲ್ಲಿ, ಗಾಂಧೀಜಿಯ ಆತ್ಮಚರಿತ್ರೆ ಎಂದಿಗೂ ಪ್ರಸ್ತುತ. ಅವರಷ್ಟು ಮುಕ್ತತೆಯಿಂದ ತನ್ನ ಜೀವನವನ್ನು ಸಾರ್ವಜನಿಕವಾಗಿ ತೆರೆದಿಟ್ಟವರು ಬೇರೆಯಿರಲಿಕ್ಕಿಲ್ಲ.

ಹೆಚ್ಚು ಓದುಗರನ್ನು ಸೆಳೆಯುವ ದೃಷ್ಟಿಯಿಂದ, ರಂಜನೀಯವಾಗಿ, ಭಾವೋದ್ರೇಕವಾಗಿ, ಆತ್ಮಚರಿತ್ರೆಯಲ್ಲಿ ತಮ್ಮ ಜೀವನವನ್ನು ಸಾರ್ವಜನಿಕಗೊಳಿಸಿದ ಜನಪ್ರಿಯ ಉದಾಹರಣೆಗಳು ನಮ್ಮ ಮುಂದೆ ಹಲವಾರಿವೆ. ಆದರೆ, ಗಾಂಧೀಜಿಯಂತೆ, ತನ್ನ ಜೀವನವೊಂದು ಸತ್ಯದ ಪ್ರಯೋಗ, ಹುಡುಕಾಟವೆಂದು, ಆ ಮಾರ್ಗದಲ್ಲಿ ತಾನು ಮಾಡಿದ ಎಲ್ಲ ಸರಿತಪ್ಪುಗಳನ್ನು ಜನರ ಮುಂದಿಡುತ್ತಾ, ಆ ಮೂಲಕ ತನ್ನ ಮಾರ್ಗದಲ್ಲಿ ನಡೆಯಲು ಬೆಳಕ ಚೆಲ್ಲುತ್ತ, ಬದುಕನ್ನು ಪಾರದರ್ಶಕವಾಗಿ ತೆರೆದಿಟ್ಟ ಬಗೆ ಅನುಕರಣೀಯ.

ಇಲ್ಲಿನ ವಿಶೇಷವೆಂದರೆ, ಗಾಂಧೀಜಿ ಸಾಮಾನ್ಯರಂತೆ ಎಲ್ಲ ತಪ್ಪುಗಳನ್ನು ಮಾಡಿದರೂ, ಅದನ್ನು ತಿದ್ದಿಕೊಳ್ಳುತ್ತ ತನ್ನ ನಿಲುವುಗಳನ್ನು ಬದಲಾಯಿಸುತ್ತ ವಿಕಾಸವಾಗುತ್ತಾ ಮೇರುವ್ಯಕ್ತಿತ್ವ ಪಡೆಯುತ್ತಾರೆ. ಹಾಗಾಗಿ, ಗಾಂಧೀಜಿ ಆತ್ಮಚರಿತ್ರೆ ಅವರನ್ನು ಇಂದಿಗೂ ಜೀವಂತವಾಗಿಟ್ಟಿದೆ. ಇದೊಂದು ಮನುಷ್ಯನ ಜೀವತಾವಧಿಗಿಂತ ಮೀರಿ ಬದುಕಿದ ಆತ್ಮಚರಿತ್ರೆ. ಹಾಗಾಗಿ, ಆತ್ಮಚರಿತ್ರೆ ಬರೆಯುವ ಮೊದಲು, ಸಾರ್ವಜನಿಕವಾಗಿ ತೆರೆದಿಡುವ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಆದ್ಯತೆಯಾಗಬೇಕು.

ಆತ್ಮಚರಿತ್ರೆ ಬರೆಯುವನಿಗೆ ಈ ಎಚ್ಚರವಿದ್ದರೆ, ಬದುಕನ್ನು ಮೀರಿ ಜನರ ಮನಸ್ಸಲ್ಲಿ ಜೀವಿಸಬಹುದು. ಇಲ್ಲವಾದಲ್ಲಿ ಆತ್ಮಚರಿತ್ರೆ, ಕೇವಲ ವೈಯಕ್ತಿಕ ದಿನಚರಿಯಾಗಿ, ಉಳಿಯದೆ ಮಾಸಿಹೋಗುವ ಸಾಧ್ಯತೆಯಿದೆ.