”ಅವರು ಮೀನು ಹಿಡಿಯಲು ಬಲೆ ಹರಡುತ್ತಲೇ ದೂರದಲ್ಲಿ ಗೆರೆಯಂತೆ ಕಾಣುತ್ತಿದ್ದ ಭೂಮಿಯತ್ತ ಸೂರ್ಯೋದಯವಾಗತೊಡಗಿತು. ಅದೇ ಭೂಮಿಯಲ್ಲಿ ನಿಂತು ಈ ಕಡಲಲ್ಲಿ ಮುಳುಗುವ ಎಷ್ಟೋ ಸೂರ್ಯಾಸ್ಥಗಳನ್ನು ನೋಡಿದ್ದೆ. ಆದರೆ ನಾನೇ ಕಡಲಲ್ಲಿ ನಿಂತು ಭುವಿಯತ್ತ ಉದಯಿಸುತ್ತಿದ್ದ ಸೂರ್ಯನನ್ನು ನೋಡಿದ್ದು ಅದೇ ಮೊದಲು. ಅಲ್ಲಿ ಅಲೆಗಳ ಸದ್ದೂ ಇಲ್ಲ. ಆ ನೀರವತೆಯನ್ನು ನಾನು ಬೇರೆಲ್ಲೂ ಅನುಭವಿಸಿಲ್ಲ”
ತರುಣ ಕಾದಂಬರಿಗಾರ ಮತ್ತು ಸಂಗೀತ ಕಲಾವಿದ ಅನುಷ್ ಶೆಟ್ಟಿ ತನ್ನೊಳಗಿನ ಬರಹಗಾರನ ಆತ್ಮವನ್ನು ಇಲ್ಲಿ ತೆರೆದಿಡಲು ನೋಡಿದ್ದಾರೆ.

 

ನನ್ನ ಈವರೆಗಿನ ಜೀವನದಲ್ಲಿ ನಾನು ಎರಡು ಲೋಕಗಳನ್ನು ಕಂಡಿದ್ದೇನೆ ಮತ್ತು ಅವುಗಳಲ್ಲಿ ಬದುಕಿದ್ದೇನೆ. ಒಂದು, ನಾವೆಲ್ಲರೂ ನಿತ್ಯವೂ ಬದುಕುತ್ತಿರುವ, ನಿಜವೆಂದು ನಂಬಿರುವ, ಹೊಟ್ಟೆ ಹಸಿಯುವ, ಹೊಟ್ಟೆಕಿಚ್ಚಾಗುವ, ಸಮಯ – ದಿನಾಂಕ ವಾರಗಳ ಗಡುವಿರುವ ಕ್ಯಾಲೆಂಡರುಗಳ ಲೋಕ. ಮತ್ತೊಂದು ಇವ್ಯಾವೂ ಇರದ, ನಾನು ಸ್ವತಂತ್ರಾನಾಗಿರುವ, ನಾನು ನಾನಾಗಿರುವ ಸಂಗೀತ, ರಂಗಭೂಮಿ ಮತ್ತು ಸಾಹಿತ್ಯದ ಲೋಕ. ಮಹಾರಾಜ ಕಾಲೇಜಿನ ಬಹುತೇಕ ದಿನಗಳಲ್ಲಿ ನಾನು ಬದುಕಿದ್ದು ಈ ಎರಡನೇ ಲೋಕದಲ್ಲೇ. ರಂಗಾಯಣದ ನಾಟಕ ಮತ್ತು ಚಿನ್ನರ ಮೇಳಗಳಿಗೆ ಸಂಗೀತ ನೀಡುತ್ತಿರುವುದು. ಸೌಥ್ ಜೋನ್ ನಂತಹ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಗೆಳೆಯರೆಲ್ಲ ಸೇರಿ ನಾವು ಬ್ಯಾಂಡ್ ಶುರು ಮಾಡಿದೆವು, ಕಾದಂಬರಿಗಳನ್ನು ಓದುತ್ತಿದ್ದೆ, ಇವೆಲ್ಲದರ ನಡುವೆಯೂ ಹೇಗೋ ಕಾಲೇಜನ್ನೂ ಸಂಭಾಳಿಸುತ್ತಿದ್ದೆ. ಹಾಗಾಗೇ ಬಹುಶಃ ಈ ದಿನಗಳು ಯಾವಾಗ, ಹೇಗೆ ಕಳೆದವೆಂದೇ ಗೊತ್ತಾಗಲಿಲ್ಲ.

ನಾವು ಓದುತ್ತಿದ್ದ ಪತ್ರಿಕೋದ್ಯಮದ ಬಿಸಿ ತಟ್ಟಿತ್ತು. ಅಸಂಖ್ಯ ಸಂಪಾದಕರಿಗೆ-ಪತ್ರ, ಸಣ್ಣ-ಸಣ್ಣ ಲೇಖನಗಳನ್ನು ವಿವಿಧ ಪತ್ರಿಕೆಗಳಿಗೆ ಬರೆದು ಕಳಿಸಿ ಅವುಗಳಲ್ಲಿ ಕೆಲವು ಮುದ್ರಣವೂ ಆಗಿದ್ದವು. ಈ ನಡುವೆಯೇ ನನ್ನ ಮೊದಲ ಕಾದಂಬರಿ ಆಹುತಿಯ ಬರವಣಿಗೆಯೂ ಶುರುವಾಗಿದ್ದು. ಕಾದಂಬರಿಯೊಂದನ್ನು ರಚಿಸುವ ಆಲೋಚನೆಯಾಗಲಿ, ಅದಕ್ಕೆ ಬೇಕಾದ ತಯಾರಿಯಾಗಲಿ ನನಗಿರಲಿಲ್ಲ. ಒಂದು ದಿನ ನನ್ನ ತಂದೆ ಮತ್ತವರ ಗೆಳೆಯ ಹನಗೋಡು ನಟರಾಜ್ ಅವರೊಂದಿಗೆ ನಾಗರಹೊಳೆ ಅರಣ್ಯಕ್ಕೆ ಹೋಗಿದ್ದಾಗ ಅವರು ಚರ್ಚಿಸಿದ ಕೆಲವು ಸಂಗತಿಗಳು ಕೆಲ ದಿನ ನನ್ನ ನಿದ್ರೆಗೆಡಿಸಿದವು. ತೇಜಸ್ವಿಯವರ ಕಾಡಿನ ಕಥೆಗಳು ಅಷ್ಟರಲ್ಲಾಗಲೇ ನನ್ನೊಳಗಿಳಿದಿತ್ತು. ದಶಕದ ಹಿಂದೆ ನಡೆದಿದ್ದ ಮರಗಳ್ಳತನದ ಪ್ರಕರಣವೊಂದನ್ನು ಹುಡುಕಿ ಹೊರಟೆ. ಮಾಹಿತಿ ಕಲೆಹಾಕಿದೆ. ಅದಕ್ಕೊಂದು ಕಥೆಯ ಸ್ವರೂಪ ನೀಡಿ ಬರೆಯತೊಡಗಿದೆ. ಆದರೆ ಅದು ಕಾದಂಬರಿಯೇ ಏಕಾಯಿತೊ? ನನಗೂ ಗೊತ್ತಿಲ್ಲ. ನನಗೆ ಬರವಣಿಗೆಯಲ್ಲಿ ಖುಷಿ ಕೊಡುವುದು, ಸನ್ನಿವೇಶವೊಂದನ್ನು ವಿವರಿಸುವಾಗ ನಾನು ಕಟ್ಟಲು ಹವಣಿಸುವ ಸನ್ನಿವೇಶದ ಸುತ್ತಲಿನ ವಾತಾವರಣ, ಪಾತ್ರಗಳ ಮೈಗೆ ಸೋಕುವ ಗಾಳಿ, ಅವರ ಕಿವಿಗಳಿಗೆ ಬೀಳುವ ಸದ್ದು, ಪ್ರಕೃತಿ. ಇವುಗಳನ್ನು ತುಂಬುವ ಪ್ರಯತ್ನದಿಂದಲೇ ಆಹುತಿ ಬರೆದು ಮುಗಿಸುವ ಹೊತ್ತಿಗೆ ಅದೊಂದು ಕಾದಂಬರಿಯಾಗಿರಬಹುದು..!

ಆಹುತಿ ಒಂದು ಶ್ರೇಷ್ಠ ಕಾದಂಬರಿ ಎಂದು ನಾನು ಹೇಳಲಾರೆ. ಈಗ ಅದನ್ನು ಓದಿದರೂ ನನಗದರಲ್ಲಿ ಅದನ್ನು ಬರೆದಿರುವ ಒಬ್ಬ ಮಹಾರಾಜ ಕಾಲೇಜಿನ ವಿದ್ಯಾರ್ಥಿಯೇ ಕಾಣುತ್ತಾನೆ. ಆದರೆ ಖುಷಿಯೂ ಆಗುತ್ತದೆ. ಇತ್ತೀಚೆಗೆ ಹೊರಬಂದ ‘ನೀನು ನಿನ್ನೊಳಗೆ ಖೈದಿ’ ಕಾದಂಬರಿಯನ್ನು ಕೈಯಲ್ಲಿ ಹಿಡಿದರೆ, ಅದರ ಗುಣಮಟ್ಟ ನೋಡಿ, ಇದಕ್ಕೆಲ್ಲ ನಾಂದಿಯಾಗಿದ್ದು ಆ ಮೊದಲ ಕಾದಂಬರಿಯೇ ತಾನೆ ಎಂದು..! ನನ್ನ ಪ್ರಕಾರ ನನ್ನ ಬರವಣಿಗೆಗಳಿಗೆ ಮುಖ್ಯ ಕಾರಣ ನನ್ನ ಸುತ್ತಾಟದಲ್ಲಿ ಸಿಗುವ ಅನುಭವಗಳು. ಆಹುತಿಯು ನಾನಾಗಲೇ ಹೇಳಿದಂತೆ ಕಾಡಿನ ಅಲೆದಾಟದಲ್ಲಿ ಪ್ರಾಪ್ತಿಯಾದದ್ದು. ಇದನ್ನು ರಚಿಸಲು ಕಾಡಿನ ಹಾಡಿಯ ಜನರ ಜೊತೆ ನಾ ಒಡನಾಡಿದ ದಿನಗಳು, ಒಬ್ಬೊಬ್ಬನೇ ಬಸ್ ಹತ್ತಿ ನಾಗರಹೊಳೆಗೆ ಹೋಗುತ್ತಿದ್ದದ್ದು, ಇವನ್ನೆಲ್ಲ ಮರೆಯಲಾರೆ. ಬರಿಯ ಕಥೆಯಾಗಿರುವ ದರೋಡೆಕೋರರನ್ನು ಹುಡುಕಲು ಗೆಳೆಯ ಜಾರ್ಜ್ ನೊಂದಿಗೆ ಹನಗೋಡಿನ ಒಳ ಹೊರಗೆಲ್ಲ ಬೈಕ್ ಒಂದರಲ್ಲಿ ಸುತ್ತಾಡಿ ಏನೂ ಮಾಹಿತಿ ಸಿಗದೆ ಕಡೆಗೆ ಕಾಲ್ಪನಿಕವಾಗಿ ರಚಿಸಿದ ‘ಕಳ್ಬೆಟ್ಟದ ದರೋಡೆಕೋರರ’ನ್ನು ಹೇಗೆ ಮರೆಯಲಿ..!

ಒಂದು ದಿನ ನನ್ನ ತಂದೆ ಮತ್ತವರ ಗೆಳೆಯ ಹನಗೋಡು ನಟರಾಜ್ ಅವರೊಂದಿಗೆ ನಾಗರಹೊಳೆ ಅರಣ್ಯಕ್ಕೆ ಹೋಗಿದ್ದಾಗ ಅವರು ಚರ್ಚಿಸಿದ ಕೆಲವು ಸಂಗತಿಗಳು ಕೆಲ ದಿನ ನನ್ನ ನಿದ್ರೆಗೆಡಿಸಿದವು. ತೇಜಸ್ವಿಯವರ ಕಾಡಿನ ಕಥೆಗಳು ಅಷ್ಟರಲ್ಲಾಗಲೇ ನನ್ನೊಳಗಿಳಿದಿತ್ತು. ದಶಕದ ಹಿಂದೆ ನಡೆದಿದ್ದ ಮರಗಳ್ಳತನದ ಪ್ರಕರಣವೊಂದನ್ನು ಹುಡುಕಿ ಹೊರಟೆ. ಮಾಹಿತಿ ಕಲೆಹಾಕಿದೆ. ಅದಕ್ಕೊಂದು ಕಥೆಯ ಸ್ವರೂಪ ನೀಡಿ ಬರೆಯತೊಡಗಿದೆ. ಆದರೆ ಅದು ಕಾದಂಬರಿಯೇ ಏಕಾಯಿತೊ? ನನಗೂ ಗೊತ್ತಿಲ್ಲ. ನನಗೆ ಬರವಣಿಗೆಯಲ್ಲಿ ಖುಷಿ ಕೊಡುವುದು, ಸನ್ನಿವೇಶವೊಂದನ್ನು ವಿವರಿಸುವಾಗ ನಾನು ಕಟ್ಟಲು ಹವಣಿಸುವ ಸನ್ನಿವೇಶದ ಸುತ್ತಲಿನ ವಾತಾವರಣ, ಪಾತ್ರಗಳ ಮೈಗೆ ಸೋಕುವ ಗಾಳಿ, ಅವರ ಕಿವಿಗಳಿಗೆ ಬೀಳುವ ಸದ್ದು, ಪ್ರಕೃತಿ.

‘ಜೋಡ್ಪಾಲ’ ರಚಿಸಲು ಬೇಕಿದ್ದ ಮೀನು ಹಿಡಿಯುವ ಅನುಭವಕ್ಕಾಗಿ ನಾನೇ ಮರಕಲರೊಂದಿಗೆ ಕಡಲಿಗಿಳಿದದ್ದು..! ಅದನ್ನು ಕಾದಂಬರಿಯೊಳಗೂ ಬರೆದಿದ್ದೇನಾದರೂ ಇನ್ನೊಮ್ಮೆ ಹೇಳುತ್ತೇನೆ. ಆ ನೆಪದಲ್ಲಾದರೂ ಮತ್ತೆ ಅದನ್ನು ಅನುಭವಿಸಬಹುದೆಂಬ ಅಭಿಲಾಷೆ. ಮೀನಿನ ವಾಸನೆ ಹೊತ್ತ ಕಡಲ ಆ ಗಾಳಿ ಮತ್ತೆ ಮುಖವ ಸವರಲೆಂಬ ಹಂಬಲ..! ಜೋಡ್ಪಾಲ ಕಾದಂಬರಿಯೊಳಗಿನ ಮೂರು ಭಾಗಗಳಲ್ಲಿ ಎರಡನೆಯದು ನಡೆಯುವುದು ಮಂಗಳೂರಿನ ತಣ್ಣೀರುಬಾವಿ ಕಡಲ ತಡಿಯಲ್ಲಿ. ಇದನ್ನು ಬರೆಯಲು ನಾನೇ ಮೀನು ಹಿಡಿಯುವ ಮರಕಲನಾಗಿ ಕಡಲಿಗಿಳಿಯಬೇಕಾಗಿ ಬಂದು, ಬೈಕಂಪಾಡಿಯ ಮರಕಲರನ್ನು ಭೇಟಿಮಾಡಿ ನಾನೂ ಮೀನು ಹಿಡಿಯಲು ಬರುತ್ತೇನೆಂದಾಗ ಅವರಿಗೆಲ್ಲ ತಮಾಷೆ ಎನಿಸಿ ನಕ್ಕರು. ಆದರೆ ನನ್ನ ಉದ್ದೇಶ ತಿಳಿಸಿದ ನಂತರ ‘ಮರುದಿನ ಮುಂಜಾನೆ ನಾಲ್ಕೂ ಮೂವತ್ತಕ್ಕೆ ಬನ್ನಿ.. ನಾವು ಮೀನು ಹಿಡಿಯಲು ಕಡಲಿಗಿಳಿಯುತ್ತೇವೆ. ಹಾಗೆಯೇ ಒಂದು ನಿಂಬೆಹಣ್ಣನ್ನು ತನ್ನಿ. ಕಡಲಲ್ಲಿ ತಲೆಸುತ್ತಿ ವಾಂತಿಯಾಗುತ್ತದೆ’ ಎಂದರು.

ಹಾಗಾಗಿ ಪುಸ್ತಕ, ಕ್ಯಾಮರಾ ಜೊತೆ ಸೀ ಸಿಕ್ ನೆಸ್ ಆಗದಿರಲು ಒಂದು ನಿಂಬೆಹಣ್ಣನ್ನೂ ಬ್ಯಾಗಲ್ಲಿ ತುರುಕಿ ಮರುದಿನ ಮುಂಜಾನೆ ಅವರೊಂದಿಗೆ ಕಡಲಿಗಿಳಿದೆ. ನಾಲ್ಕೈದು ಮರಕಲರಿದ್ದ ಸಣ್ಣ ಓಡ ಅದು. ನನ್ನನ್ನು ದೋಣಿಯ ನಡುಭಾಗದಲ್ಲಿ ಭದ್ರವಾಗಿ ಕೂರಿಸಿ ದೋಣಿಯನ್ನು ಕಡಲಿಗಿಳಿಸಿದರು. ಅಲೆಗಳನ್ನೇರಿ ಜಿಗಿಯುತ್ತ ಸಾಗುವ ಆ ದೋಣಿಯಲ್ಲಿ ನನ್ನನ್ನವರು ಮಕ್ಕಳಂತೆ ನೋಡಿಕೊಳ್ಳಬೇಕಾಯಿತು. ದೋಣಿ ಅಲೆಗಳ ಸವಾರಿ ದಾಟಿ ಕೊಂಚ ಶಾಂತವಾದ ಸಾಗರಕ್ಕೆ ತಲುಪಿದ ನಂತರ ಪ್ರಪಂಚವೇ ಬದಲಾಯ್ತು. ದೋಣಿಯನ್ನು ಗಟ್ಟಿಯಾಗಿ ಹಿಡಿದು ಕೂತಿದ್ದ ನನ್ನನ್ನು ಮರಕಲರು ‘ನಿಂತುಕೊಳ್ಳಿ ಏನೂ ಆಗಲ್ಲ..’ ಎಂದಾಗ ನಿಂತುಕೊಂಡೆ. ಆದರೆ ನನ್ನ ಮೈ ಹೆಂಡ ಕುಡಿದವರಂತೆ ವಾಲಾಡುತ್ತಿತ್ತು. ಸೂರ್ಯೋದಯವೇ ಆಗಿರದ ಆ ಕತ್ತಲಲ್ಲಿ ಕಡಲೂ ಕಾಣುತ್ತಿಲ್ಲ. ಮರಕಲರೆಲ್ಲ ಕಪ್ಪು ಆಕೃತಿಗಳಂತೆ ಕಾಣುತ್ತಿದ್ದರು. ಎತ್ತ ಕಡಲು? ಎತ್ತ ಭೂಮಿ? ಏನೂ ಗೊತ್ತಾಗದೆ ನೀರಿಗೆ ಬೀಳುವ ಭಯದಲ್ಲಿ ಮತ್ತೆ ದೋಣಿಯನ್ನು ಭದ್ರವಾಗಿ ಹಿಡಿದು ಕೂತೆ. ಆರಾಮಾಗಿ ನಿಂತಿದ್ದ ಮರಕಲರೆಲ್ಲ ನನ್ನ ಕಂಡು ನಕ್ಕರು. ನಾನು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲಿ ವಾಲಾಡುವ ದೋಣಿಯಲ್ಲಿ ನಿಂತುಕೊಳ್ಳುವುದನ್ನು ಹೇಳಿಕೊಡಲಿಲ್ಲ ಎಂದು ಅವರಿಗೆ ಹೇಗೆ ತಾನೆ ಅರ್ಥ ಮಾಡಿಸಲಿ!

ಆದರೆ ಅದನ್ನು ಅವರೇ ಅರ್ಥ ಮಾಡಿಕೊಂಡರೇನೋ. ದೋಣಿಗೆ ಬಿಗಿದಿದ್ದ ಒಂದು ಹಗ್ಗವನ್ನು ನನ್ನ ಕೈಗೆ ಕೊಟ್ಟು ‘ಇದನ್ನು ಹಿಡಿದು ನಿಲ್ಲಿ’ ಎಂದರು. ನಂತರ ಆ ಹಗ್ಗವನ್ನು ಹಿಡಿದು ನಿರ್ಲಿಪ್ತನಾಗಿ ಮಬ್ಬುಗತ್ತಲಲ್ಲಿ ಕಾಣುತ್ತಿದ್ದ ಕಡಲನ್ನೇ ನೋಡುತ್ತ ನಿಂತೆ. ಜಗತ್ತಿನ ಯಾವ ಸದ್ದೂ, ಜಂಜಾಟವೂ, ಸಂಪರ್ಕವೂ, ಮೊಬೈಲ್ ನೆಟ್ವರ್ಕೂ ಅಲ್ಲಿರಲಿಲ್ಲ. ಕೇವಲ ಕಡಲು, ದೋಣಿಯಲ್ಲಿದ್ದ ಮರಕಲರು, ಕಿವಿಯಲ್ಲಿ ಗುಟ್ಟು ಹೇಳುತ್ತಿದ್ದ ತಂಗಾಳಿ.

ದೋಣಿ ಅಲೆಗಳ ಸವಾರಿ ದಾಟಿ ಕೊಂಚ ಶಾಂತವಾದ ಸಾಗರಕ್ಕೆ ತಲುಪಿದ ನಂತರ ಪ್ರಪಂಚವೇ ಬದಲಾಯ್ತು. ದೋಣಿಯನ್ನು ಗಟ್ಟಿಯಾಗಿ ಹಿಡಿದು ಕೂತಿದ್ದ ನನ್ನನ್ನು ಮರಕಲರು ‘ನಿಂತುಕೊಳ್ಳಿ ಏನೂ ಆಗಲ್ಲ..’ ಎಂದಾಗ ನಿಂತುಕೊಂಡೆ. ಆದರೆ ನನ್ನ ಮೈ ಹೆಂಡ ಕುಡಿದವರಂತೆ ವಾಲಾಡುತ್ತಿತ್ತು. ಸೂರ್ಯೋದಯವೇ ಆಗಿರದ ಆ ಕತ್ತಲಲ್ಲಿ ಕಡಲೂ ಕಾಣುತ್ತಿಲ್ಲ. ಮರಕಲರೆಲ್ಲ ಕಪ್ಪು ಆಕೃತಿಗಳಂತೆ ಕಾಣುತ್ತಿದ್ದರು. ಎತ್ತ ಕಡಲು? ಎತ್ತ ಭೂಮಿ? ಏನೂ ಗೊತ್ತಾಗದೆ ನೀರಿಗೆ ಬೀಳುವ ಭಯದಲ್ಲಿ ಮತ್ತೆ ದೋಣಿಯನ್ನು ಭದ್ರವಾಗಿ ಹಿಡಿದು ಕೂತೆ. ಆರಾಮಾಗಿ ನಿಂತಿದ್ದ ಮರಕಲರೆಲ್ಲ ನನ್ನ ಕಂಡು ನಕ್ಕರು. ನಾನು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲಿ ವಾಲಾಡುವ ದೋಣಿಯಲ್ಲಿ ನಿಂತುಕೊಳ್ಳುವುದನ್ನು ಹೇಳಿಕೊಡಲಿಲ್ಲ ಎಂದು ಅವರಿಗೆ ಹೇಗೆ ತಾನೆ ಅರ್ಥ ಮಾಡಿಸಲಿ!

ಅವರು ಮೀನು ಹಿಡಿಯಲು ಬಲೆ ಹರಡುತ್ತಲೇ ದೂರದಲ್ಲಿ ಗೆರೆಯಂತೆ ಕಾಣುತ್ತಿದ್ದ ಭೂಮಿಯತ್ತ ಸೂರ್ಯೋದಯವಾಗತೊಡಗಿತು. ಅದೇ ಭೂಮಿಯಲ್ಲಿ ನಿಂತು ಈ ಕಡಲಲ್ಲಿ ಮುಳುಗುವ ಎಷ್ಟೋ ಸೂರ್ಯಾಸ್ಥಗಳನ್ನು ನೋಡಿದ್ದೆ. ಆದರೆ ನಾನೇ ಕಡಲಲ್ಲಿ ನಿಂತು ಭುವಿಯತ್ತ ಉದಯಿಸುತ್ತಿದ್ದ ಸೂರ್ಯನನ್ನು ನೋಡಿದ್ದು ಅದೇ ಮೊದಲು. ಅಲ್ಲಿ ಅಲೆಗಳ ಸದ್ದೂ ಇಲ್ಲ. ಆ ನೀರವತೆಯನ್ನು ನಾನು ಬೇರೆಲ್ಲೂ ಅನುಭವಿಸಿಲ್ಲ. ಅಂದು ಅನೇಕ ಬೊಳೆಂಜಿರ್ ಮೀನುಗಳು ಬಲೆಗೆ ಬಿದ್ದವು. ಕೆಲಹೊತ್ತು ಕ್ಯಾಮರಾಕ್ಕೆ ಕೆಲಸ ಕೊಟ್ಟು, ಮತ್ತೆ ಬಿಗಿಯಾಗಿ ಕುಳಿತು ಅಲೆಗಳ ಸವಾರಿ ಮಾಡುತ ದಡ ತಲುಪಿ ತಿರುಗಿ ಕಡಲ ನೋಡಿದರೆ, ಅದೇ ಬೆಳ್ಳನೆ ಅಲೆಗಳ ಭೋರ್ಗರೆತ. ಈ ಅನುಭವಗಳಿಲ್ಲದೆ ಎರಡನೇ ಭಾಗ ಬರೆಯಲಾಗುತ್ತಿರಲಿಲ್ಲ. ನೀನು ನಿನ್ನೊಳಗೆ ಖೈದಿ ಬರೆಯಲು ಕಾರಣವಾಗಿದ್ದು, ನಾನು ಹುಲಿಗಪ್ಪ ಕಟ್ಟಿಮನಿ ಅವರ ಜೊತೆ ಜೈಲು ನಾಟಕಗಳಿಗೆ ಸಂಗೀತ ನೀಡಲು ಹೋಗುತ್ತಿದ್ದ ಮೈಸೂರು ಜೈಲಿನ ಅನುಭವಗಳಿಂದ. ಅಲ್ಲಿನ ಖೈದಿಗಳ ಒಡನಾಟದಿಂದಲೇ ಒಬ್ಬ ಗಿಲ್ಬರ್ಟ್ ನನ್ನು ಸೃಷ್ಠಿಸಲು ಸಾಧ್ಯವಾದದ್ದು.

ಕಡೆಗೆ ಏನಿಲ್ಲವೆಂದರೂ, ಈ ಕಾದಂಬರಿಗಳು ನನಗೆ ಕೊಟ್ಟ ಸುತ್ತಾಟದ ಅನುಭವವೇ ಸಾಕು. ಇದಕ್ಕಾಗಿ ಅವಕ್ಕೆ ಋಣಿ ನಾನು. ಈ ಪಯಣ ಇನ್ನೂ ಸಾಗುತ್ತಲೇ ಇದೆ. ಆದರೆ ಇಷ್ಟೆಲ್ಲ ತಿರುಗಾಡಿಯೂ ಈಗ ತಿರುಗಿ ಮೊದಲ ಕಾದಂಬರಿಯನ್ನು ನೋಡಿದರೆ, ನಾನು ಅದನ್ನು ಬರೆದೆ ಎನ್ನುವುದಕ್ಕಿಂತ ಯಾರೂ ಅದನ್ನು ಪ್ರಕಟಿಸದಿದ್ದಾಗ ನಾವೇ ನಮ್ಮ ಸ್ವಂತ ಪ್ರಕಾಶನವೊಂದನ್ನು ಶುರುಮಾಡಿ ಆ ಮೂಲಕವೂ ಒಂದು ಪಯಣ ಹೊರಟೆವಲ್ಲ ಎಂಬ ಸೋಜಿಗವೂ ಉಂಟಾಗುತ್ತದೆ. ಹುಣಸೂರ ಒಂದು ಪುಟ್ಟ ಮುದ್ರಣಾಲಯದಲ್ಲಿ ಮುದ್ರಣಗೊಂಡ ‘ಆಹುತಿ’ಯಿಂದ ಶುರುವಾದದ್ದು ಈಗ ‘ಖೈದಿ’ಯ ಮುದ್ರಣಕ್ಕಾಗಿ ಹರಿಯಾಣದ ಪ್ರತಿಷ್ಠಿತ ರೆಪ್ಲಿಕಾ ಪ್ರೆಸ್ ವರೆಗು ತಲುಪಿದೆ. ಇನ್ನೆಲ್ಲೆಲ್ಲಿಗೆ ಹೋಗುವುದುಂಟೋ ಕಾಣೆ..!

‘ಆಹುತಿ’ಯನ್ನು ಗ್ರೀನ್ ಆಸ್ಕರ್ ಪುರಸ್ಕೃತ ಕೃಪಾಕರ್ ಸೇನಾನಿ ಅವರು ಬಿಡುಗಡೆಗೊಳಿಸಿದರು. ಕಳ್ಬೆಟ್ಟದ ದರೋಡೆಕೋರರು ಈಗ ಸಿನಿಮವಾಗುತ್ತಿದೆ. ಖೈದಿಗೆ ಅಪಾರ ಜನಮನ್ನಣೆ ದೊರೆತಿದೆ. ಆದರೂ ನನಗೆ ಬಹಳ ಪ್ರಿಯವಾದ ಕಾದಂಬರಿ ಎಂದರೆ ಅದು ಜೋಡ್ಪಾಲವೇ..! ಏಕೆಂದರೆ, ಕಾಲೇಜಿನ ದಿನಗಳು ಮುಗಿದೊಡನೆಯೆ ನಾನಾಗಲೇ ಹೇಳಿದ ಎರಡು ಲೋಕಗಳಲ್ಲಿ ಎರಡನೆಯದು ಕೇವಲ ಭ್ರಮೆ ಎಂದೆನಿಸಿ ಬೆಂಗಳೂರಿನ ಮೀಡಿಯಾ ಜಗತ್ತು ಸೇರಿದ್ದೆ. ಜೋಡ್ಪಾಲದಲ್ಲಿರುವ ಮೂರು ಭಾಗಗಳಲ್ಲಿ ಒಂದನ್ನು ಬರೆದು ಮುಗಿಸಿದ್ದವನು ಆರು ತಿಂಗಳು ಪೆನ್ನನ್ನೇ ಮುಟ್ಟಿರಲಿಲ್ಲ. ಜಿಗುಪ್ಸೆ ಕಾಡಿತು. ಕೆಲಸ ಬಿಟ್ಟೆ. ಎರಡನೇ ಲೋಕ ಕೇವಲ ಭ್ರಮೆಯಾಗಿರಲು ಸಾಧ್ಯವಿಲ್ಲವೆಂದೆನಿಸಿತು. ಜೋಡ್ಪಾಲದ ಮೂರೂ ಭಾಗಗಳನ್ನು ಮುಗಿಸಿದೆ. ಅದನ್ನು ಮುದ್ರಿಸಲು ಕಳೆದ ದಿನಗಳೇ ನಮ್ಮ ಅತೀ ಕಷ್ಟದ ದಿನಗಳು. ಆದರೆ ಒಮ್ಮೆ ಅದು ಬಿಡುಗಡೆಯಾದಮೇಲೆ ನಾವೆಂದೂ ಹಿಂತಿರುಗಲಿಲ್ಲ. ಹಾಗಾಗೇ ಈ ನಾಲ್ಕರಲ್ಲಿ ನನಗದು ಹೆಚ್ಚು ಇಷ್ಟ. ಅದರಲ್ಲಿ ಮಣ್ಣಿನ ವಾಸನೆಯಿದೆ. ಮಬ್ಬುಗತ್ತಲ ಕಾಡಿದೆ. ಮಳೆಯಿದೆ. ಕಡಲ ಉಪ್ಪಿದೆ. ರಾತ್ರಿ ರಾಣಿ ಹೂಗಳ ಘಮಲಿದೆ. ಎಲ್ಲೋ, ನನ್ನದೇ ಜಾಡಿದೆ..! ಈ ನಾಲ್ಕರಲ್ಲಿ ಯಾವುದಾದರೊಂದು ಕಾದಂಬರಿಯೊಳಗೆ ಹೊಕ್ಕು ಅದೇ ಕಾಲಘಟ್ಟದಲ್ಲಿ ಬದುಕುವ ಅವಕಾಶವೇನಾದರು ಸಿಕ್ಕರೆ ನಾನು ಆರಿಸುವುದು ಜೋಡ್ಪಾಲವನ್ನೇ.

ಇಷ್ಟೆಲ್ಲ ತಿರುಗಾಡಿಯೂ ಈಗ ತಿರುಗಿ ಮೊದಲ ಕಾದಂಬರಿಯನ್ನು ನೋಡಿದರೆ, ನಾನು ಅದನ್ನು ಬರೆದೆ ಎನ್ನುವುದಕ್ಕಿಂತ ಯಾರೂ ಅದನ್ನು ಪ್ರಕಟಿಸದಿದ್ದಾಗ ನಾವೇ ನಮ್ಮ ಸ್ವಂತ ಪ್ರಕಾಶನವೊಂದನ್ನು ಶುರುಮಾಡಿ ಆ ಮೂಲಕವೂ ಒಂದು ಪಯಣ ಹೊರಟೆವಲ್ಲ ಎಂಬ ಸೋಜಿಗವೂ ಉಂಟಾಗುತ್ತದೆ. ಹುಣಸೂರ ಒಂದು ಪುಟ್ಟ ಮುದ್ರಣಾಲಯದಲ್ಲಿ ಮುದ್ರಣಗೊಂಡ ‘ಆಹುತಿ’ಯಿಂದ ಶುರುವಾದದ್ದು ಈಗ ‘ಖೈದಿ’ಯ ಮುದ್ರಣಕ್ಕಾಗಿ ಹರಿಯಾಣದ ಪ್ರತಿಷ್ಠಿತ ರೆಪ್ಲಿಕಾ ಪ್ರೆಸ್ ವರೆಗು ತಲುಪಿದೆ. ಇನ್ನೆಲ್ಲೆಲ್ಲಿಗೆ ಹೋಗುವುದುಂಟೋ ಕಾಣೆ..!

ಮುಂದಿನ ಕಾದಂಬರಿ ಯಾವುದೆಂದು ಅನೇಕರು ಕೇಳುತ್ತಾರೆ. ನಾನಿನ್ನೂ ಶುರುಮಾಡಿಲ್ಲ. ನನಗೆ ನನ್ನ ಕಾದಂಬರಿಗಳ ಸಂಖ್ಯೆ ಹೆಚ್ಚಿಸುವ ತವಕವಿಲ್ಲ. ನನಗೆ ಬರೆಯಬೇಕೆಂದೆನಿಸಿದರೆ ಮಾತ್ರ ಬರೆಯುತ್ತೇನೆ. ಹಾಗೆ ಬರವಣಿಗೆಗೂ ಸಮಯದ ಗಡುವಿಟ್ಟರೆ ಅದನ್ನೂ ಮೊದಲ ಲೋಕಕ್ಕೆ ಸೇರಿಸಬೇಕಾಗಿ ಬರಬಹುದು. ಅದಾಗಕೂಡದು. ನಾಟಕವೊಂದನ್ನು ರಚಿಸುವುದು ನನ್ನ ಬಹು ವರ್ಷದ ಕನಸು. ಅದು ಸುಲಭವೂ ಅಲ್ಲ. ಕಾದಂಬರಿಗಿಂತ ಬಹಳ ಭಿನ್ನ. ಹಾಗಾಗಿ ನಾಟಕ ರಚನೆಯೊಂದನ್ನು ಪ್ರಯೋಗಿಸಬೇಕಿದೆ. ಇನ್ನು ಕಾದಂಬರಿ. ಅಂತಹ ವಿಷಯವೊಂದು ಸಿಕ್ಕು ಕಾಡಿದಾಗ ಖಂಡಿತ ಬರೆಯುತ್ತೇನೆ. ಅದರ ಸಲುವಾಗಿಯೇ ಮತ್ತೊಂದು ಪಯಣ, ಮತ್ತೊಂದು ಅನುಭವ ಎಲ್ಲೋ ಕಾದು ಕೂತಿರಬಹುದು. ಈಗಂತೂ ಈ ಭ್ರಮೆಯ ಲೋಕವೇ ಆಪ್ಯಾಯಮಾನವಾಗಿದೆ. ಹಸಿವು ನೀಗುವುದಷ್ಟೇ ಅಲ್ಲದೆ ಹೊಟ್ಟೆಯೂ ತುಂಬುತ್ತಿದೆ. ನಾಟಕಗಳಿಗೆ ಸಂಗೀತ ನೀಡುತ್ತ ದೇಶಾದ್ಯಂತ ಅಲೆಯುವುದು ಅನುಭವಗಳ ಗಂಟನ್ನು ಇನ್ನೂ ಭಾರವಾಗಿಸುತ್ತಿದೆ. ಮನಸ್ಸನ್ನು ಹಗುರಾಗಿಸುತ್ತಿದೆ. ಹೀಗೇ ಪಯಣದಲ್ಲಿ ಮತ್ತೇನೇನು ಸಿಗುವುದೋ ಎಂದು ಕಾತರನಾಗಿ ಕಾಯುತ್ತಿದ್ದೇನೆ.