Advertisement
ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ

ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ

ಮುಂದಿನ ಬಾರಿ ನೀವು ಮೆಟ್ರೋ ನಿಲ್ದಾಣಕ್ಕೆ ಹೋದಾಗ, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೇಲೆ ಓಡಾಡುವ ತಲೆಗಳನ್ನು ಲೆಕ್ಕ ಹಾಕಲು ಟ್ರೈ ಮಾಡಿ. ಮೆಟ್ಟಿಲನ್ನು ಬಳಸುವ ಜನರ ಲೆಕ್ಕ ನಿಮಗೆ ಆರಾಮಾಗಿ ಸಿಕ್ಕಿಬಿಡುತ್ತದೆ. ಎಸ್ಕಲೇಟರ್ ಮೇಲಿನ ಮಾನವರ ತಲೆಗಳನ್ನು ಎಣಿಸುವುದು ಮಾತ್ರ ತಾರೆಗಳನ್ನು ಕಲೆಹಾಕಿದಷ್ಟೇ ಕಷ್ಟವಾಗಬಹುದು. ಇದಕ್ಕೆ ಕಲಶಪ್ರಾಯವಾಗಿ, ಮೊಬೈಲ್ ಫೋನು ನೋಡುತ್ತಾ, ಮೆಟ್ಟಿಲುಗಳ ಬಳಿ ಬಂದು, ಕೂಡಲೇ ಮುಖವನ್ನು ಸಿಂಡರಿಸಿಕೊಂಡು, ಪಕ್ಕದ ಎಸ್ಕಲೇಟರ್ ಏರಿದ ಹೋಮೋ ಸೇಪಿಯನನ್ನು ಕೆ ಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ನೋಡಲು ಸಿಕ್ಕಿದ್ದು ನನ್ನ ಸುಕೃತವೋ… ಮಾನವನ ಅಳಿವಿನ ಆರಂಭವೋ… ಗೊತ್ತಿಲ್ಲ!
ಮೆಟ್ಟಿಲುಗಳ ಬಳಕೆಯ ಕುರಿತು ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

ನನ್ನ ಆಫೀಸಿರುವುದು ನಾಲ್ಕನೇ ಅಂತಸ್ತಿನಲ್ಲಿ. ಕ್ಯಾಂಟೀನು ಐದನೇ ಮಹಡಿಯಲ್ಲಿದೆ. ಆಗಾಗ ಚಹಾ ಹೀರುವ ಖಯಾಲಿಯಿರುವ ನಾನು ಈ ಎರಡು ಮಹಡಿಗಳ ನಡುವೆ ದಿನಕ್ಕೆ ಒಂದೈದು ಬಾರಿಯಾದರೂ ಓಡಾಡುತ್ತಿರುತ್ತೇನೆ. ಗುಂಪಿನಲ್ಲಿ ಗೋವಿಂದ ಎಂದು ಎಲ್ಲರೊಡನೆ ಲಿಫ್ಟ್‌ನಲ್ಲಿಯೇ ಮೇಲೆ ಕೆಳಗೆ ಅಡ್ಡಾಡುತ್ತಿದ್ದ ನನಗೆ, ‘ಅರೇ… ನಾಲ್ಕು ಮಹಡಿಗಳನ್ನು ಏರಲು ಲಿಫ್ಟ್ ಏನಕ್ಕೆ ಬೇಕು… ಸ್ಟೆಪ್ಸ್‌ಗಳನ್ನು ಬಳಸಿಯೇ ಹತ್ತಿಳಿಯಬಹುದಲ್ಲಾ… ಆರೋಗ್ಯಕ್ಕೂ ಒಳ್ಳೆಯದು’ ಎಂಬ ಜ್ಞಾನೋದಯವಾಗಿ, ಸ್ಟೈರ್ವೇಗೆ ತೆರೆದುಕೊಳ್ಳುವ ಬಾಗಿಲನ್ನು ಹುಡುಕಿದೆ. ಎಲ್ಲಿಯೂ ಕಾಣಿಸಲಿಲ್ಲ. ಫಾಲ್ಸ್ ಸೀಲಿಂಗ್ ಮಾಡುವ ಈ ಯುಗದಲ್ಲಿ ಆಲಿಬಾಬನ ಗುಹೆಯಂತೆ ಆ ಬಾಗಿಲು, ಸದಾ ಮುಚ್ಚಿದ್ದು ಸರಿಯಾದ ಕೋಡ್ ವರ್ಡ್ ಹೇಳಿದರೆ ತೆರೆದುಕೊಳ್ಳಬಹುದೇನೋ ಎಂಬ ಯೋಚನೆ ಬಂದು ಸೀದಾ ಸೆಕ್ಯೂರೊಟಿ ಗಾರ್ಡಿನ ಬಳಿ ವಿಚಾರಿಸಿದೆ. ಆತ “ಸಾರ್… ಎಂಪ್ಲಾಯೀಗಳಿಗೆ ಮೆಟ್ಟಿಲುಗಳ ಆಕ್ಸೆಸ್ ಇಲ್ಲ” ಎಂದು ಸಣ್ಣಗೆ ನಕ್ಕ. ನನಗೆ ಆಶ್ಚರ್ಯವೆನಿಸಿತು. ‘ಅಲ್ಲಾ… ಮೇಲಿನ ಫ್ಲೋರಲ್ಲಿರುವ ಕ್ಯಾಂಟೀನಿಗೆ ಹೋಗಬೇಕಾದರೂ ಲಿಫ್ಟ್ ಬರೋ ತನಕ ಕಾಯಬೇಕಾ’ ಎಂದು ಕೇಳಿದ್ದಕ್ಕೆ ‘ಎಂಪ್ಲಾಯೀಗಳೆಲ್ಲಾ ಲಿಫ್ಟ್‌ನಲ್ಲೇ ಹೋಗಬೇಕಂತೆ.. ಮೇಲಿಂದ ಆರ್ಡರ್ ಸಾರ್’ ಎಂದು ಆಲಿಬಾಬಾನ ಗುಹೆಯ ನನ್ನ ಹುಡುಕಾಟಕ್ಕೆ ತಿಲಾಂಜಲಿ ಇಟ್ಟುಬಿಟ್ಟ.

ಕಳೆದ ವಾರ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗೆ ಹೋಗಿದ್ದೆ. ಅಲ್ಲಿ ಕನ್ನಡ ಪುಸ್ತಕಗಳು ಎರಡನೇ ಮಹಡಿಯಲ್ಲಿದ್ದರೆ, ಮಕ್ಕಳ ಆಟಿಕೆ-ಇಂಗ್ಲಿಷ್ ಪುಸ್ತಕಗಳು ಒಂದನೇ ಮಹಡಿಯಲ್ಲಿದೆ. ಅಲ್ಲಿರುವುದು ಒಂದೇ ಲಿಫ್ಟ್. ಕನ್ನಡ ಪುಸ್ತಕ ಕೊಳ್ಳಲು ಎರಡನೇ ಮಹಡಿಗೆ ಹೋಗಲು ಲಿಫ್ಟಿನ ಬಳಿ ಇದ್ದ ಮೆಟ್ಟಿಲಿನ ಹತ್ತಿರ ಹೋದಾಗ ಸುಮಾರು ಹತ್ತು ಜನ ಅಲ್ಲಿ ನಿಂತಿದ್ದರು. ಲಿಫ್ಟಿಗೆ ಕಾಯುತ್ತಿದ್ದ ಅವರೆಲ್ಲರೂ ಯುವಕರೇ. ಕೈಯಲ್ಲೊಂದು ಫೋನು ಹಿಡಿದುಕೊಂಡು, ತಲೆಯ ಮೇಲೆ ದಪ್ಪನೆಯ ಹೆಡ್ ಫೋನು ಹಾಕಿಕೊಂಡು ಲಿಫ್ಟಿಗಾಗಿ ಕಾಯುತ್ತಿದ್ದ ಅವರೆಲ್ಲರೂ ಆಕಾಶದಿಂದ ಇಳಿದು ಬರುವ ಏಣಿಗಾಗಿ ಕಾಯುತ್ತಿದ್ದಂತೆ ನನಗೆ ಭಾಸವಾಗುತ್ತಿತ್ತು. ಲಿಫ್ಟ್ ಕೆಳಗೆ ಬಂದೊಡನೆ ನಾ ಮುಂದೂ ತಾ ಮುಂದೂ ಎಂದು ಒಳಗೆ ಸೇರುತ್ತಿದ್ದ ಅವರನ್ನು ಲಿಫ್ಟಿನ ಬಾಗಿಲಿನ ಮೇಲೆ ಅಂಟಿಸಿದ್ದ “use stairs, stay healthy” ಎಂಬ ಸ್ಟಿಕ್ಕರು ಅಣಕಿಸುತ್ತಿತ್ತು. ಇವೆಲ್ಲವನ್ನೂ ಅಲ್ಲೇ ನಿಂತು ನೋಡುತ್ತಿದ್ದ ನನ್ನನ್ನು ಮರಳಿ ವಾಸ್ತವಕ್ಕೆ ಕರೆತಂದಿದ್ದು “ಚೂರು ಸೈಡ್ ಬಿಡಪ್ಪ” ಎಂದು ಹೇಳಿದ ವಯಸ್ಸಾದವರೊಬ್ಬರ ದನಿ. ನಾನು ಅವರಿಗೆ ಜಾಗ ಬಿಡುತ್ತಂತೆಯೇ ಮೆಟ್ಟಿಲುಗಳನ್ನು ಏರಲು ಶುರುಮಾಡಿದ ಅವರನ್ನು ಕಂಡು ಬೆರಗಾಗುವ ಸರದಿ ನನ್ನದಾಗಿತ್ತು.

ಮುಂದಿನ ಬಾರಿ ನೀವು ಮೆಟ್ರೋ ನಿಲ್ದಾಣಕ್ಕೆ ಹೋದಾಗ, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೇಲೆ ಓಡಾಡುವ ತಲೆಗಳನ್ನು ಲೆಕ್ಕ ಹಾಕಲು ಟ್ರೈ ಮಾಡಿ. ಮೆಟ್ಟಿಲನ್ನು ಬಳಸುವ ಜನರ ಲೆಕ್ಕ ನಿಮಗೆ ಆರಾಮಾಗಿ ಸಿಕ್ಕಿಬಿಡುತ್ತದೆ. ಎಸ್ಕಲೇಟರ್ ಮೇಲಿನ ಮಾನವರ ತಲೆಗಳನ್ನು ಎಣಿಸುವುದು ಮಾತ್ರ ತಾರೆಗಳನ್ನು ಕಲೆಹಾಕಿದಷ್ಟೇ ಕಷ್ಟವಾಗಬಹುದು. ಇದಕ್ಕೆ ಕಲಶಪ್ರಾಯವಾಗಿ, ಮೊಬೈಲ್ ಫೋನು ನೋಡುತ್ತಾ, ಮೆಟ್ಟಿಲುಗಳ ಬಳಿ ಬಂದು, ಕೂಡಲೇ ಮುಖವನ್ನು ಸಿಂಡರಿಸಿಕೊಂಡು, ಪಕ್ಕದ ಎಸ್ಕಲೇಟರ್ ಏರಿದ ಹೋಮೋ ಸೇಪಿಯನನ್ನು ಕೆ ಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ನೋಡಲು ಸಿಕ್ಕಿದ್ದು ನನ್ನ ಸುಕೃತವೋ… ಮಾನವನ ಅಳಿವಿನ ಆರಂಭವೋ… ಗೊತ್ತಿಲ್ಲ!

‘ಯಶಸ್ಸಿಗೆ ಏಳೇ ಮೆಟ್ಟಿಲು’, ‘ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು’, ‘ಒಂದೊಂದೇ ಮೆಟ್ಟಿಲೇರುತ್ತಾ ಜೀವನದಲ್ಲಿ ಮುಂದೆ ಬರಬೇಕು’ ಎಂಬಂಥ ಮಾತುಗಳನ್ನು ನಾವೆಲ್ಲಾ ಆಗಾಗ ಕೇಳುತ್ತಿರುತ್ತೇವೆ. ಏರಿಳಿಯುವ ಪ್ರೋಸೆಸ್‌ನಲ್ಲಿ ಮೆಟ್ಟಿಲಿಗೆ ಎಷ್ಟೊಂದು ಮಹತ್ವವಿದೆ ನೋಡಿ. ಮೆಟ್ಟಿಲುಗಳನ್ನು ಏರುವುದು ಧ್ಯಾನದಂತೆ ಎಂದು ನನಗೀಗ ಅನ್ನಿಸತೊಡಗಿದೆ. ಸುಮ್ಮನೆ ರೋಬೋಟ್ ನಂತೆ ಏರುವುದಲ್ಲ. ಒಂದೊಂದೇ ಮೆಟ್ಟಿಲನ್ನು ಏರಿದಂತೆ ಉಸಿರಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು. ಕಾಲಿನ ಸ್ನಾಯುಗಳು ಹಿಗ್ಗುವುದನ್ನು ಕಂಡು ನಾವೂ ಹಿಗ್ಗಬೇಕು. ಇದೊಂಥರ ನಮ್ಮ ದೇಹಕ್ಕೆ ಸಿಗುವ ಫ್ರೀ ಸರ್ವಿಸ್. ಯಾವುದೇ ಖರ್ಚಿಲ್ಲದೆ ದೇಹವನ್ನು ಸುಸ್ಥಿತಿಯಲ್ಲಿಡುವ ಬಗೆ. ಎಸ್ಕಲ್ಟರ್, ಲಿಫ್ಟಿನ ಹಾಗೆ ಮನುಜನನ್ನು ಇನ್ನಷ್ಟು ಆಲಸಿಯನ್ನಾಗಿಸುವುದಿಲ್ಲ ಈ ಮೆಟ್ಟಿಲುಗಳು. ದೇಹವನ್ನು ಕೊಂಚ ದಂಡಿಸಿ, ಮಂಡಿ – ಶ್ವಾಸಕೋಶಗಳನ್ನು ಕಂಡೀಶನಲ್ಲಿರುವಂತೆ ನೋಡಿಕೊಳ್ಳುತ್ತದೆ. ಮನುಷ್ಯ ಮೆಟ್ಟಿಲುಗಳನ್ನೇ ಮರೆತುಹೋಗುತ್ತಿರುವ ಈ ಕಾಲದಲ್ಲಿ, ಮುಂದೊಂದು ದಿನ “ಯಶಸ್ಸಿಗೆ ಒಂದೇ ಎಸ್ಕಲೇಟರ್” ಎಂಬ ಮಾತು ಚಾಲ್ತಿಗೆ ಬಂದರೆ ಅಚ್ಚರಿಯೇನಿಲ್ಲ!

About The Author

ಕಾರ್ತಿಕ್ ಕೃಷ್ಣ

ಕಾರ್ತಿಕ್ ಕೃಷ್ಣ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಹವ್ಯಾಸಿ ಬರಹಗಾರ. ದಿನಪತ್ರಿಕೆಗಳಲ್ಲಿ ಇವರ ಹಲವು ಲಲಿತ ಪ್ರಬಂಧಗಳು ಹಾಗೂ ವಿಜ್ಞಾನ ಬರಹಗಳು ಪ್ರಕಟಗೊಂಡಿವೆ.

3 Comments

  1. Praveen

    Very nice article. But system not allowing to rate 5 stars !

    Reply
  2. ಎಸ್ ಪಿ.ಗದಗ.

    ನಮ್ಮ ಯುವ ಜನತೆಯ ಮನಸ್ಥಿತಿಯನ್ನು ಚೆನ್ನಾಗಿ ತಿಳಿಸಿದ್ದಿರಿ, ಖುಷಿ ಕೊಟ್ಟ ಲೇಖನ.

    Reply
  3. DEEPAK

    Wah Wah

    ಒಂದೊಂದೇ ಮೆಟ್ಟಿಲನ್ನು ಏರಿದಂತೆ ಉಸಿರಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು. ಕಾಲಿನ ಸ್ನಾಯುಗಳು ಹಿಗ್ಗುವುದನ್ನು ಕಂಡು ನಾವೂ ಹಿಗ್ಗಬೇಕು. ಇದೊಂಥರ ನಮ್ಮ ದೇಹಕ್ಕೆ ಸಿಗುವ ಫ್ರೀ ಸರ್ವಿಸ್. ಯಾವುದೇ ಖರ್ಚಿಲ್ಲದೆ ದೇಹವನ್ನು ಸುಸ್ಥಿತಿಯಲ್ಲಿಡುವ ಬಗೆ. ಎಸ್ಕಲ್ಟರ್, ಲಿಫ್ಟಿನ ಹಾಗೆ ಮನುಜನನ್ನು ಇನ್ನಷ್ಟು ಆಲಸಿಯನ್ನಾಗಿಸುವುದಿಲ್ಲ ಈ ಮೆಟ್ಟಿಲುಗಳು. ದೇಹವನ್ನು ಕೊಂಚ ದಂಡಿಸಿ, ಮಂಡಿ – ಶ್ವಾಸಕೋಶಗಳನ್ನು ಕಂಡೀಶನಲ್ಲಿರುವಂತೆ ನೋಡಿಕೊಳ್ಳುತ್ತದೆ. ಮನುಷ್ಯ ಮೆಟ್ಟಿಲುಗಳನ್ನೇ ಮರೆತುಹೋಗುತ್ತಿರುವ ಈ ಕಾಲದಲ್ಲಿ, ಮುಂದೊಂದು ದಿನ “ಯಶಸ್ಸಿಗೆ ಒಂದೇ ಎಸ್ಕಲೇಟರ್” ಎಂಬ ಮಾತು ಚಾಲ್ತಿಗೆ ಬಂದರೆ ಅಚ್ಚರಿಯೇನಿಲ್ಲ!

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ