ಕೊನೆಗೆ ಗಲೀನಾಗೆ ವಿವರಿಸಬೇಕಾಯಿತು. ನಾನು ಬಹಳ ದುಃಖಿಯಾಗಿದ್ದೇನೆ. ನನ್ನ ಯುವಜನಾಂಗವನ್ನು ನಿಮ್ಮ ಯುವಜನಾಂಗದ ಜೊತೆ ಹೋಲಿಕೆ ಮಾಡಿಕೊಂಡು ನೋವನ್ನು ಅನುಭವಿಸುತ್ತಿದ್ದೇನೆ. ಅಲ್ಲದೆ ನನ್ನ ಸಂಸ್ಕಾರ ಬೇರೆಯೆ ಇದ್ದುದರಿಂದ ಈ ಕುಣಿತ ಸಾಧ್ಯವೇ ಇಲ್ಲದ ಮಾತು ಎಂದೆ. ಅವಳು ಅರ್ಥ ಮಾಡಿಕೊಂಡಳು. ‘ನಾನು ಉತ್ತರ ಭಾರತದ ಪ್ರವಾಸದಲ್ಲಿದ್ದಾಗ ಅಲ್ಲಿನ ಬಡತನ ನೋಡಿ ಮರುಗಿದ್ದೆ’ ಎಂದು ತಿಳಿಸಿದ ಅವಳು, ‘ಐ ಯಾಮ್ ಸೋ ಪ್ರೌಢ ಆಫ್ ಯು’ ಎಂದಳು. ಆ ಸ್ಥಳದಿಂದ ವಾಪಸ್ ಬಂದೆವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 52ನೇ ಕಂತು ನಿಮ್ಮ ಓದಿಗೆ.
ಬೈಲೋರಷ್ಯಾ (ಬೆಲಾರುಸ್) ರಾಜಧಾನಿ ಮಿನ್ಸ್ಕ್‌ನಲ್ಲಿ ಮೂರನೇ ದಿನ ನಮ್ಮನ್ನು ಮಿಖಾಯಿಲ್ ಸವಿತ್ಸ್ಕಿಯ ಆರ್ಟ್ ಗ್ಯಾಲರಿಗೆ ಕರೆದುಕೊಂಡು ಹೋದರು. ಮಿಖಾಯಿಲ್ ಸವಿತ್ಸ್ಕಿ ೧೯ ವರ್ಷದವರಿದ್ದಾಗ ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್‌ನ ನಾಜಿ (ಫ್ಯಾಸಿಸ್ಟ್) ಸೈನ್ಯದ ವಿರುದ್ಧ ಹೋರಾಡಲು ಸೈನ್ಯ ಸೇರಿದರು. (ಇದಕ್ಕೆ ಸೋವಿಯತ್ ದೇಶದ ಜನರು “ಮಹಾ ಸ್ವಾಭಿಮಾನಿ ಯುದ್ಧ” ಎಂದು ಕರೆದಿದ್ದಾರೆ. ಈ ಕೆಂಪುಸೇನೆಗೆ ಸಹಾಯಕರಾಗಿ ಫ್ಯಾಸಿಸ್ಟರ ವಿರುದ್ಧ ಗೆರಿಲ್ಲಾ ಮಾದರಿಯಲ್ಲಿ ಹೋರಾಡುತ್ತಿದ್ದ ಅರೆ ಸೈನಿಕರಿಗೆ ಪಾರ್ಟಿಸಾ಼ನ್ಸ್ ಎಂದು ಕರೆಯುತ್ತಾರೆ.)
ಫ್ಯಾಸಿಸ್ಟರ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಫಿರಂಗಿದಳದಲ್ಲಿ ವಿಖಾಯಿಲ್ ಸವಿತ್‌ಸ್ಕಿ ಸೇವೆ ಸಲ್ಲಿಸತೊಡಗಿದರು. ಅವರು ೨೦ ವರ್ಷದವರಿದ್ದಾಗ ಸವತ್ಸೊಪೋಲ್ ಪ್ರದೇಶದಲ್ಲಿ ನಡೆದ ೨೫೯ ದಿನಗಳ ಯುದ್ಧದಲ್ಲಿ ಫ್ಯಾಸಿಸ್ಟರ ಕೈಗೆ ಸಿಕ್ಕಿಬಿದ್ದರು. ಅವರನ್ನು ಜರ್ಮನಿಯ ಮೂರು ಯಾತಾನಾ ಶಿಬಿರಗಳಲ್ಲಿ ಇಡಲಾಯಿತು. ಹಿಟ್ಲರ್ ನಾಜಿಪಡೆಗಳು ೨೬೦ ಯಾತನಾ ಶಿಬಿರಗಳನ್ನು ನಿರ್ಮಿಸಿತ್ತು. ೧೯೪೫ನೇ ಏಪ್ರಿಲ್ ೨೯ರಂದು ಅಮೆರಿಕದ ಪಡೆಗಳು ಡಚಾವು ಯಾತನಾ ಶಿಬಿರದಿಂದ ಇತರರ ಜೊತೆ ಅವರನ್ನು ಬಿಡುಗಡೆಗೊಳಿಸಿದವು. ಅದೇ ವರ್ಷ ಮಹಾಯುದ್ಧ ಮುಗಿಯಿತು.
೧೯೫೧ರಲ್ಲಿ ಮಿಖಾಯಿಲ್ ಸವಿತ್ಸ್ಕಿ ಮಿನ್ಸ್ಕ್ ಕಲಾ ಶಾಲೆಯಿಂದ ಶಿಕ್ಷಣ ಪಡೆದ ನಂತರ ಮಾಸ್ಕೋ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನಿಂದ ೧೯೫೭ರಲ್ಲಿ ಪದವಿ ಪಡೆದರು. ತಾವು ಯಾತನಾ ಶಿಬರದಲ್ಲಿ ಕಂಡ ಭಯಾನಕ ದೃಶ್ಯಗಳನ್ನು ಕಲೆಯಲ್ಲಿ ಸೆರೆ ಹಿಡಿಯುವುದೇ ಅವರ ಜೀವನದ ಉದ್ದೇಶವಾಗಿತ್ತು. ಆ ಛಲದಿಂದ ಕಲಾವಿದರಾಗಿ ಯಶಸ್ಸನ್ನು ಸಾಧಿಸಿದರು. ಅವರ ಆರ್ಟ್ ಗ್ಯಾಲರಿ ಫ್ಯಾಸಿಸ್ಟರ ಕ್ರೌರ್ಯದ ವಿರಾಟ್ ಸ್ವರೂಪವನ್ನು ನೋಡುಗರ ಕಣ್ಣಿಗೆ ಕಟ್ಟುವಂತದ್ದಾಗಿದೆ.
ಅಸ್ಥಿಪಂಜರದಂತಾದ ಯುದ್ಧಕೈದಿಗಳು, ನಿರಂತರ ದುಡಿಮೆ ಮತ್ತು ಅರೆಹೊಟ್ಟೆಯಿಂದ ಸತ್ತವರ ಹೆಣಗಳನ್ನು ರಾಶಿ ಮಾಡಿ ಸುಡುವುದು, ಬಂಧನಕ್ಕೊಳಗಾದ ಸೋವಿಯತ್ ದೇಶದ ತರುಣಿಯರನ್ನು ಅತ್ಯಾಚಾರಕ್ಕಾಗಿ ಬೆತ್ತಲೆ ಮಾಡಿ ನಿಲ್ಲಿಸುವುದು, ಯುದ್ಧಕೈದಿಗಳನ್ನು ಸಾಮೂಹಿಕವಾಗಿ ಉಸಿರುಗಟ್ಟಿ ಕೊಲ್ಲುವ ಗ್ಯಾಸ್ ಚೇಂಬರ್‌ನಲ್ಲಿ ಕುರಿಗಳಂತೆ ತುಂಬುವುದು ಮುಂತಾದ ಹೃದಯವಿದ್ರಾವಕ ಭಿತ್ತಿಚಿತ್ರಗಳು ನೋಡುಗರನ್ನು ಸ್ತಂಭೀಭೂತರನ್ನಾಗಿ ಮಾಡುತ್ತವೆ. ‘ಯಾತನಾಶಿಬಿರಗಳಲ್ಲಿ ನಾವೂ ನಿಂತಿದ್ದೇವೆ’ ಎಂಬ ಭಾವ ಮೂಡುತ್ತದೆ. ಅಲ್ಲಿನ ನೂರಾರು ಕಲಾಕೃತಿಗಳು ಕ್ರೌರ್ಯ ಮತ್ತು ಪ್ರತಿರೋಧದ ಸಂಕೇತಗಳಾಗಿ ಮನದಲ್ಲಿ ಉಳಿಯುತ್ತವೆ.
ದೇಶರಕ್ಷಣೆಗಾಗಿ ಯುದ್ಧಕ್ಕೆ ಹೋದ ಯುವಕನ ತಾಯಿಯೊಬ್ಬಳ ಚಿತ್ರ ನನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತು. ಮಗನನ್ನು ಎತ್ತಿ ಮುದ್ದಾಡುವ ರೀತಿಯಲ್ಲಿ ತಾಯಿಯೊಬ್ಬಳು ಕಾಲುಚಾಚಿ ಕುಳಿತಿದ್ದಾಳೆ. ಆಕೆಯ ಬೆಳೆದ ಮಗ, ಪುಟ್ಟಮಗುವಾಗಿ ತಾಯಿಯ ಕಡೆಗೆ ಓಡಿ ಬರುತ್ತಿದ್ದಾನೆ. ಬೆತ್ತಲೆಯಾಗಿರುವ ಆ ಮಗು ಅನೇಕ ಗಲ್ಲುಗಂಭಗಳನ್ನು ದಾಟುತ್ತ ಖುಷಿಯಿಂದ ಓಡಿ ಬರುತ್ತಿರುವುದು, ಆ ತಾಯಿ ತನ್ನ ಮಗುವನ್ನು ಎತ್ತಿಕೊಳ್ಳುವುದಕ್ಕಾಗಿ ಕಾತರದಿಂದ ಕೈ ಎತ್ತಿ ಕುಳಿತಿರುವುದು ನಮ್ಮನ್ನು ತಲ್ಲಣಗೊಳಿಸುತ್ತದೆ. ಯುದ್ಧದ ಕ್ರೌರ್ಯ ಮತ್ತು ತಾಯಿಯ ಅನನ್ಯ ಪ್ರೀತಿಯನ್ನು ಏಕಕಾಲಕ್ಕೆ ಸೂಚಿಸುವ ಹಾಗೆ ಮಹಾನ್ ಕಲಾವಿದ ಮಿಖಾಯಿಲ್ ಸವಿತ್ಸ್ಕಿ ಚಿತ್ರಿಸಿದ್ದಾರೆ. ಮಕ್ಕಳು ಎಷ್ಟೇ ಬೆಳೆದು ನಿಂತರೂ ತಾಯಿಗೆ ಮಗುವೇ ಆಗಿ ಕಾಣುತ್ತಾರೆ ಎಂಬ ಕಲಾವಿದನ ಕಲ್ಪನೆ ಲೋಕಮಾನ್ಯವಾಗಿ ಅಮರತ್ವವನ್ನು ಪಡೆಯುತ್ತದೆ.
ಸವಿತ್ಸ್ಕಿಯ ‘ಪಾರ್ಟಿಸಾ಼ನ್ ಮದೋನ್ನಾ’ ಚಿತ್ರ ಬಹಳ ಪ್ರಸಿದ್ಧಿ ಪಡೆಯಿತು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿನ ಬೈಲೋರಷ್ಯಾದ ಸಂಕೇತವಾಗಿ ಈ ‘ರೈತಮಾತೆ’ಯ ಕಲಾಕೃತಿಯನ್ನು ನೋಡುತ್ತಾರೆ. ‘ಲೀವಿಂಗ್ ಇನ್ ದ ನೈಟ್’ ಕಲಾಕೃತಿ ಕೂಡ ಹೃದಯಸ್ಪರ್ಶಿಯಾಗಿದೆ. ಈ ಕಲಾಕೃತಿ ತಾಯಿ ಮತ್ತು ಮಗಳಿಗೆ ಸಂಬಂಧಿಸಿದ್ದಾಗಿದೆ. ಮಗಳು ದೇಶ ರಕ್ಷಣೆಗಾಗಿ ಪಾರ್ಟಿಸಾ಼ನ್ ಯೂನಿಟ್ ಸೇರಲು ಹೋಗುತ್ತಿದ್ದಾಳೆ. ತಾಯಿ ತನ್ನ ಮಗಳನ್ನು ಕಳಿಸುವ ನಿರ್ಧಾರ ಮಾಡಿದ್ದಾಳೆ. ಆದರೆ ಮಗಳನ್ನು ಮತ್ತೆ ನೋಡುವ ಸಾಧ್ಯತೆ ಇಲ್ಲ ಎಂಬ ದುಗುಡ ಅವರ ಮುಖದಲ್ಲಿದೆ. ಮಗಳ ಮುಖ ಭಯ ಮತ್ತು ದುಃಖದಿಂದ ತುಂಬಿದೆ. ಆದರೆ ನಿರ್ಧಾರ ಅಚಲವಾಗಿದೆ. ಸವಿತ್ಸ್ಕಿ ಕಲಾ ಗ್ಯಾಲರಿ ಇಂಥ ಹೃದಯಸ್ಪರ್ಶಿ ಮತ್ತು ಹೃದಯವಿದ್ರಾವಕ ದೃಶ್ಯಗಳಿಂದ ತುಂಬಿದ್ದು ಯುದ್ಧದ ನಿರರ್ಥಕತೆಯನ್ನು ಸಾರುತ್ತದೆ.
ಎರಡನೇ ಮಹಾಯುದ್ಧದಲ್ಲಿ ಸೋವಿಯತ್ ದೇಶದ ಗಣರಾಜ್ಯಗಳಲ್ಲಿ ಒಂದಾಗಿದ್ದ ಬೈಲೋರಷ್ಯಾ ಅತಿ ಹೆಚ್ಚು ಹಾನಿಗೊಳಗಾಯಿತು. ಅದು ತನ್ನ ಒಟ್ಟು ಜನಸಂಖ್ಯೆಯ ಕಾಲುಭಾಗದಷ್ಟು ಜನರನ್ನು ಕಳೆದುಕೊಂಡಿತು. ಅಲ್ಲದೆ ಗಣರಾಜ್ಯದ ಅರ್ಧದಷ್ಟು ಪ್ರದೇಶ ಫ್ಯಾಸಿಸ್ಟರ ದಾಳಿಗೆ ಆಹುತಿಯಾಯಿತು.
‘ಮಿನ್ಸ್ಕ್ ರಾಜಧಾನಿ ಭಗ್ನಾವಶೇಷಗಳ ರಾಶಿಯಂತಾಗಿದ್ದ ಕಾರಣ ಜನವಸತಿಗೆ ಅಯೋಗ್ಯವಾಗಿದೆ. ಅದನ್ನು ಸ್ವಚ್ಛಗೊಳಿಸಿ ಪುನರ್ನಿರ್ಮಾಣ ಮಾಡುವುದು ಬಹಳ ವೆಚ್ಚದಾಯಕ ಮತ್ತು ಅಸಾಧ್ಯವಾದುದು. ಆದ್ದರಿಂದ ಅದನ್ನು ಹಾಗೇ ಬಿಟ್ಟು, ಬೇರೆ ಕಡೆ ಹೊಸ ರಾಜಧಾನಿ ಮಿನ್ಸ್ಕ್ ನಿರ್ಮಾಣ ಮಾಡುವುದು ಯೋಗ್ಯ’ ಎಂದು ವಿಶ್ವಸಂಸ್ಥೆ ಸಲಹೆ ನೀಡಿತು. ಆದರೆ ಬೈಲೋರಷ್ಯಾದ ಎಂಜಿನಿಯರುಗಳು ಒಪ್ಪಲಿಲ್ಲ. ಬಾಂಬ್ ದಾಳಿಗೆ ಈಡಾದ ಆ ಎಲ್ಲ ಕಟ್ಟಡಗಳ ರಾಶಿಯನ್ನೂ ಬಳಕೆ ಮಾಡಿ ಅದೇ ಜಾಗದಲ್ಲಿ ರಾಜಧಾನಿಯ ಪುನರ್ ನಿರ್ಮಾಣ ಮಾಡಿದರು. ಈ ವಿಚಾರವನ್ನು ಹಿರಿಯ ಎಂಜಿನಿಯರೊಬ್ಬರು ಹೆಮ್ಮೆಯಿಂದ ಹೇಳಿದರು.
ಮಿನ್ಸ್ಕ್‌ನಲ್ಲಿ ನಡೆದ ಮೊದಲ ದುಂಡುಮೇಜಿನ ಸಭೆಯಲ್ಲಿ ನಾನು ಬಸವಣ್ಣನವರ ಕುರಿತು ಮಾತನಾಡಿದೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಕನ್ನಡದ ನೆಲದಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮಾನತೆಗಾಗಿ ಇತರ ಶರಣರ ಕೂಡ ಮಾಡಿದ ವಚನ ಚಳವಳಿ ಕುರಿತು ತಿಳಿಸಿದೆ. ಅದು ಹೇಗೆ ರಾಜಪ್ರಭುತ್ವಕ್ಕೆ ವಿರುದ್ಧವಾಗಿದ್ದು ಜನಮನದಲ್ಲಿ ಆತ್ಮಗೌರವ, ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಚಿಂತನೆಗಳನ್ನು ಬೆಳೆಸಿತು ಎಂಬುದರ ಬಗ್ಗೆ ವಿವರಿಸಿದೆ. ಈ ಸಭೆಯಲ್ಲಿದ್ದ ಇತಿಹಾಸಕಾರರೊಬ್ಬರು ‘ಈ ಚಳವಳಿ ಆಸಕ್ತಿದಾಯಕವಾಗಿದೆ ಇದರ ಪರಿಣಾಮವೇನಾಯಿತು’ ಎಂದು ಕೇಳಿದರು. ಅವರು ಸೃಷ್ಟಿಸಿದ ವಚನಗಳ ಮೂಲಕ ಚಳವಳಿಯ ಚೈತನ್ಯ ಇನ್ನೂ ಸ್ಫೂರ್ತಿದಾಯಕವಾಗಿದೆ. ಆದರೆ ಅದು ಕೇವಲ ಒಂದು ತಲೆಮಾರಿನ ಚಳವಳಿಯಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಅವರ ವಚನ ಸಾಹಿತ್ಯದ ಬಹುಭಾಗವನ್ನು ಸುಟ್ಟುಹಾಕಿದರು ಮತ್ತು ಅನೇಕ ಶರಣರನ್ನು ಕೊಂದು ಅವರ ಚಳವಳಿಯನ್ನು ಹತ್ತಿಕ್ಕಿದರು ಎಂದು ನಾನು ಹೇಳಿದಾಗ ‘ನಿಮ್ಮ ದೇಶ ಬಹಳ ಮಹತ್ವದ್ದನ್ನು ಕಳೆದುಕೊಂಡಿತು’ ಎಂದು ಆ ಇತಿಹಾಸತಜ್ಞ ಬೇಸರ ವ್ಯಕ್ತಪಡಿಸಿದರು.
ಇನ್ನೊಂದು ದುಂಡುಮೇಜಿನ ಸಭೆ ಅಲ್ಲಿನ ವೈದ್ಯರ ಜೊತೆ ನಡೆಯಿತು. ಆಗ ಅಲ್ಲಿ ಕ್ಯಾಸನೂರ್ ಮಂಗನ ರೋಗ ಲಕ್ಷಣಗಳು ಕಂಡುಬಂದ ಬಗ್ಗೆ ಒಬ್ಬ ವೈದ್ಯರು ತಿಳಿಸಿದರು. ಅದು ನಮ್ಮ ಉತ್ತರ ಕನ್ನಡದಲ್ಲಿ ಹಬ್ಬಿ ಸೈಬೀರಿಯಾವರೆಗೂ ತಲುಪಿದ್ದು ಆಶ್ಚರ್ಯವೆನಿಸಿತು. ಒಬ್ಬ ವೈದ್ಯರು ಹವಾಮಾನ ವೈಪರೀತ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ೧೯೮೩ರ ಆ ಸಂದರ್ಭದಲ್ಲಿ ಈ ಸಮಸ್ಯೆ ಕುರಿತು ಮಾತನಾಡಿದ್ದು ಎಚ್ಚರಿಕೆಯ ಗಂಟೆಯಾಗಿತ್ತು. ಜಾಗತಿಕ ತಾಪಮಾನದಿಂದಾಗಿ ಸೈಬೀರಿಯಾದಲ್ಲಿ ತಾಪಮಾನ ಮೈನಸ್ ೪೦ ಡಿಗ್ರಿ ಸೆಂಟಿಗ್ರೇಡ್‌ನಿಂದ ಮೈನಸ್ ೧೬ ಡಿಗ್ರಿ ಸೆಂಟಿಗ್ರೇಡ್‌ಗೆ ಬಂದಿದೆ ಎಂದು ತಿಳಿಸಿದರು.
ಬೆತ್ತಲೆಯಾಗಿರುವ ಆ ಮಗು ಅನೇಕ ಗಲ್ಲುಗಂಭಗಳನ್ನು ದಾಟುತ್ತ ಖುಷಿಯಿಂದ ಓಡಿ ಬರುತ್ತಿರುವುದು, ಆ ತಾಯಿ ತನ್ನ ಮಗುವನ್ನು ಎತ್ತಿಕೊಳ್ಳುವುದಕ್ಕಾಗಿ ಕಾತರದಿಂದ ಕೈ ಎತ್ತಿ ಕುಳಿತಿರುವುದು ನಮ್ಮನ್ನು ತಲ್ಲಣಗೊಳಿಸುತ್ತದೆ. ಯುದ್ಧದ ಕ್ರೌರ್ಯ ಮತ್ತು ತಾಯಿಯ ಅನನ್ಯ ಪ್ರೀತಿಯನ್ನು ಏಕಕಾಲಕ್ಕೆ ಸೂಚಿಸುವ ಹಾಗೆ ಮಹಾನ್ ಕಲಾವಿದ ಮಿಖಾಯಿಲ್ ಸವಿತ್ಸ್ಕಿ ಚಿತ್ರಿಸಿದ್ದಾರೆ.
ಮಧ್ಯಾಹ್ನದ ಊಟ ಆದಮೇಲೆ ಒಬ್ಬ ವೈದ್ಯರ ಜೊತೆ ಮಾತನಾಡುತ್ತ ನಿಮ್ಮ ದೇಶದ ಜನ ಬಹಳ ಸಂವೇದನಾಶೀಲರು ಎಂದೆ. ಅವರು ನಗುತ್ತ ‘ಇವರೆಲ್ಲ ಹೀಗೆ ಆಗಲು ಅರ್ಧ ಶತಮಾನ ಬೇಕಾಯಿತು’ ಎಂದರು.
ಮಿನ್ಸ್ಕ್ ಕಾರ್ಪೊರೇಷನ್ ಮೇಯರ್ ಜೊತೆ ನಡೆದ ಸಭೆಯಲ್ಲಿ ಅವರು ನಮಗೆ ಗೊತ್ತಿರದ ವಿಚಾರವೊಂದನ್ನು ತಿಳಿಸಿದರು. ಸೋವಿಯತ್ ದೇಶ ಮತ್ತು ಭಾರತದ ಒಪ್ಪಂದದ ಮೇರೆಗೆ ಮಿನ್ಸ್ಕ್ ಮತ್ತು ಬೆಂಗಳೂರ ನಗರಗಳನ್ನು ‘ಸಹೋದರಿ ನಗರ’ಗಳೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ನನಗೆ ಕೂಡಲೆ ಬೆಂಗಳೂರಿನ ಪ್ರೆಸ್ ಕ್ಲಬ್ ಬಳಿ ಇರುವ ಮಿನ್‌ಸ್ಕ್ ಚೌಕದ ದೊಡ್ಡ ಬೋರ್ಡ್ ನೆನಪಾಯಿತು. ಮೆಟ್ರೋ ಕಾರಣ ಈಗ ಚೌಕ್ ಹೋಗಿದೆ. ಅದರ ಹಿಂದೆ ಇದ್ದ ಚಿಕ್ಕ ಉದ್ಯಾನವನ ಮತ್ತು ಅದರೊಳಗೆ ಇದ್ದ ಸೈನಿಕನ ಮೂರ್ತಿಯೂ ಇಲ್ಲ. ಆ ಮೂರ್ತಿಯನ್ನು ಮತ್ತು ಮಿನ್ಸ್ಕ್ ಬೋರ್ಡನ್ನು ಎಲ್ಲಿ ಇಟ್ಟರೋ ಗೊತ್ತಿಲ್ಲ.
ಆಶ್ಚರ್ಯವೆಂದರೆ ಮಿನ್ಸ್ಕ್ ನಗರ ಬೆಂಗಳೂರು ನಗರದ ಹಾಗೆಯೆ ಇದೆ. (ಈಗಿನ ಬೆಂಗಳೂರು ಅಲ್ಲ.) ಮಿನ್ಸ್ಕ್ ನಗರದಲ್ಲಿ ಅಂಡರ್‌ಗ್ರೌಂಡ್ ಮೆಟ್ರೋ ನಿರ್ಮಾಣ ಕಾರ್ಯ ನಾವು ಭೇಟಿಯಾದ ಸಂದರ್ಭದಲ್ಲಿ ಮುಗಿದಿತ್ತು. ಒಂದು ವರ್ಷದಲ್ಲಿ ನಗರದ ವಿವಿಧ ಕಡೆಗಳಲ್ಲಿ ಅಪಘಾತಗಳು ಸಂಭವಿಸಿ ಮೂವರು ಸತ್ತಿದ್ದನ್ನು ಗಂಭೀರವಾಗಿ ಪರಿಗಣಿಸಿ ಮೆಟ್ರೋ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು ಎಂದು ಮೇಯರ್ ತಿಳಿಸಿದರು!
ಬೈಲೋರಷ್ಯನ್ನರು ಬಿಳಿಯ ಜನರಲ್ಲೇ ಹೆಚ್ಚು ಬಿಳಿಯರು. ಬೈಲೊ (ಬೆಲಾ) ಎಂದರೆ ಬಿಳಿ ಎಂದು ಅರ್ಥ. ಅಮೃತಶಿಲೆಯಿಂದ ಕೆತ್ತಿದ ಜೀವಂತ ಮೂರ್ತಿಗಳ ಹಾಗೆ ಅಲ್ಲಿನ ಜನ ಕಾಣುತ್ತಿದ್ದರು. ದೊಡ್ಡವರು ಕೂಡ ಚಾಕಲೇಟ್ ಪ್ರಿಯರಾಗಿದ್ದರು. ಒಂದೆರಡು ಹಲ್ಲುಗಳನ್ನು ಕಳೆದುಕೊಂಡರೂ ಚಾಕಲೇಟ್ ವ್ಯಾಮೋಹ ಹೋಗಿದ್ದಿಲ್ಲ. ಆ ತೆಗೆಸಿದ ಹಲ್ಲುಗಳ ಜಾಗದಲ್ಲಿ ಬಂಗಾರದ ಹಲ್ಲುಗಳು ಹೊಳೆಯುತ್ತಿದ್ದವು.
ನಮ್ಮ ಗೈಡ್ ಗಲೀನಾ ಸ್ಫುರದ್ರೂಪಿಯಾಗಿದ್ದಳು. ಅವಳು ಹದಿಹರೆಯದವಳಾಗಿದ್ದರಿಂದ ಹಿರಿಯರೆಲ್ಲರೂ ಮಗಳ ಹಾಗೆ ಪ್ರೀತಿಯಿಂದ ಗಾಲ್ಯಾ ಎಂದು ಕರೆಯುತ್ತಿದ್ದರು. ಮಾನವೀಯ ಸ್ಪಂದನದ ಆಕೆ ಗಂಭೀರಳೂ ಕರ್ತವ್ಯ ನಿಷ್ಠಳೂ ವಿಚಾರವಂತಳೂ ಆಗಿದ್ದಳು. ಜೊತೆಯಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕಿ ಲಿಡಿಯಾ ಬಹಳ ಮೃದುಸ್ವಭಾವದ ಹೆಣ್ಣುಮಗಳು. ಸಭೆಗಳಲ್ಲಿ ಇಂಗ್ಲಿಷ್‌ನಿಂದ ಬೈಲೊರಷ್ಯನ್ ಭಾಷೆಗೆ ಮನಸ್ಸಿಗೆ ನಾಟುವಂತೆ ಆಕೆ ಅನುವಾದಿಸುತ್ತಿದ್ದರು ಎನ್ನುವುದಕ್ಕೆ ಆ ಸಭೆಯಲ್ಲಿದ್ದವರ ಖುಷಿಯೇ ಸಾಕ್ಷಿಯಾಗುತ್ತಿತ್ತು.
ಕೊನೆಯ ದಿನ ಬೆಳಿಗ್ಗೆ ನಾವು ಬೈಲೋರಷ್ಯದ ಪ್ರಸಿದ್ಧ ಕವಿಗಳಾದ ಯಾಂಕಾ ಕುಪಾಲಾ (೧೮೮೨-೧೯೪೨) ಮತ್ತು ಯಾಕೂಬ್ ಕೊಲಾಸ್ (೧೮೮೨-೧೯೫೬) ಅವರಿದ್ದ ಮನೆಗಳಿಗೆ ಭೇಟಿ ನೀಡಿದ್ದೆವು. ಆ ಮನೆಗಳನ್ನು ಅವರು ಬಳಸಿದ ವಸ್ತುಗಳು ಮತ್ತು ಅವರ ಗ್ರಂಥಭಂಡಾರಗಳೊಂದಿಗೆ ವಸ್ತುಸಂಗ್ರಹಾಲಯ ಮಾಡಲಾಗಿದೆ.
ಉಚಿತ ಗಾಳಿ ಪುಕ್ಕಟೆ ಹಾಡುಗಳನ್ನು ಹಾಡಿತು ನಿನ್ನ ಹೆಸರೆತ್ತಿ
ಸೆಳೆದವು ಅರಣ್ಯಗಳು ಅವುಗಳನ್ನೆಲ್ಲ ಸಾಂಗತ್ಯದ ಧ್ವನಿಯಿಂದ.
ಎಂಬ ಯಾಂಕಾ ಕುಪಾಲಾ ಅವರ ಕವನವೊಂದರ ಸಾಲುಗಳು ನನಗೆ ಬಹಳ ಹಿಡಿಸಿದವು. ನಿಸರ್ಗ ಮತ್ತು ದೇವರ ಮಧ್ಯೆ ಅವರು ಬೆಳೆಸುವ ಸಂಬಂಧ ಆಪ್ಯಾಯಮಾನವಾದುದು.
ಮನೆಯ ಉದ್ಯಾನದಲ್ಲೇ ಅವರ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೂರ್ತಿಯ ಭಾಗವಾಗಿ ಒಂದು ಹೂ ಕೂಡ ಇದೆ. ಕವಿಯ ಜನ್ಮದಿನದಂದು ಅಲ್ಲಿನ ಕಾವ್ಯಪ್ರಿಯರೆಲ್ಲ ಸೇರುತ್ತಾರೆ. ಆ ರಾತ್ರಿ ಆ ಹೂ ಅರಳುವುದೆಂಬ ಆ ಜನರ ಕಲ್ಪನೆ ಖುಷಿ ಕೊಟ್ಟಿತು. ಖಂಡಿತವಾಗಿಯೂ ಕಾವ್ಯಪ್ರೇಮಿಗಳ ಹೃದಯದಲ್ಲಿ ಅವರ ಕಾವ್ಯ ಕುಸುಮಗಳು ಅರಳುತ್ತವೆ. ಯಾಕೂಬ್ ಕೊಲಾಸ್ ಅವರ ಮೂಲ ಕಾಳಜಿ ರೈತರ ಕಡೆಗೆ. ಅವರನ್ನು ಜಗತ್ತಿನ ರೈತಕವಿ ಎಂದು ಕರೆಯಬಹುದು.
ನಾನು ಬಡ ರೈತನ ಮಗ.
ನಾನು ಕಟ್ಟಿಗೆ ಅಲ್ಲ, ಕಲ್ಲಲ್ಲ.
ನನ್ನದು ಒಣಭೂಮಿ ಮಾತ್ರ.
ಬೀಳುತ್ತಿದೆ ನನ್ನ ಗುಡಿಸಲು;
ಬದುಕಲಾರೆ, ಸವೆಯುತ್ತಿರುವೆ.
ಬಡವ ನಾನು ಇಲಿಯ ಹಾಗೆ;
ನೋಡಿ ನನಗೆದುರಾದ ವಿಧಿಯ
ನನ್ನ ಶಿಲುಬೆಯ ಭಾರ ನೋಡಿ!
ಯಾಕೂಬ್ ಕೊಲಾಸ್ ಅವರ ಕವನವೊಂದರ ಕೆಲ ಸಾಲುಗಳ ಭಾವಾನುವಾದವಿದು. ಭಾರತೀಯ ರೈತರ ಕುರಿತೇ ಬರೆದಂತಿದೆ. ಇವರ ಹೆಸರಿನಲ್ಲಿ ರಾಜಧಾನಿ ಮಿನ್ಸ್ಕ್‌ನಲ್ಲಿ ಚೌಕ ಇದೆ. ಪಕ್ಕದಲ್ಲೇ ಅವರ ಬೃಹತ್ ಮೂರ್ತಿ ಇದೆ.
ಕೊನೆಯದಿನ ರಾತ್ರಿ ನಾವು ಮಿನ್ಸ್ಕ್‌ನಿಂದ ಲೆನಿನ್‌ಗ್ರಾಡ್‌ಗೆ ರೈಲು ಮೂಲಕ ಹೋಗಬೇಕಿತ್ತು. ಆ ದಿನ ಸಾಯಂಕಾಲ ಸಾರ್ವಜನಿಕ ಸಭೆ ನಡೆಯಿತು. ಮುನ್ನೂರಕ್ಕೂ ಹೆಚ್ಚು ಜನ ಸೇರಿದ್ದರು. ಅಷ್ಟೊಂದು ಜನ ಸೇರಿದ್ದು ಆಶ್ಚರ್ಯವೆನಿಸಿತು. ಇದೆಲ್ಲ ಭಾರತದ ಮೇಲಿನ ಆ ದೇಶದ ಗೌರವಕ್ಕೆ ಕಾರಣವಾಗಿತ್ತು. ಅನುವಾದಕಿ ಪ್ರೊಫೆಸರ್ ಲಿಡಿಯಾ ಮತ್ತು ಗೈಡ್ ಗಲೀನಾ ಬಹಳ ಖುಷಿಯಾಗಿದ್ದರು.
ಬೈಲೋರಷ್ಯಾದ ಉಪ ಪ್ರಧಾನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಚಿವೆ ಮುಖ್ಯ ಅತಿಥಿಯಾಗಿದ್ದರು. (ಇವರಿಬ್ಬರೂ ತೋರಿಸಿದ ಪ್ರೀತಿ ಅಗಾಧವಾದುದು. ಇವರ ಹೆಸರು ಮರೆತದ್ದಕ್ಕೆ ಬಹಳ ವಿಷಾದವಿದೆ.) ಉಳಿದ ಕೆಲ ಗಣ್ಯರು ಮತ್ತು ಡಾ|| ಪಿ.ಎಸ್. ಶಂಕರ್ ವೇದಿಕೆಯ ಮೇಲೆ ಇದ್ದರು. ಅಲ್ಲಿ ಕೂಡ ಮೊದಲಿಗೆ ಮಾತನಾಡಲು ಹಿಂದಿನ ದಿನವೇ ಡಾ|| ಶಂಕರ್ ಅವರು ತಿಳಿಸಿದ್ದರು.
ಮೊದಲೇ ತಿಳಿಸಿದಂತೆ ಅಲ್ಲಿ ನಾನು ಪ್ಯಾಲೆಸ್ಟೀನ್ ದುರಂತದ ಕುರಿತು ಮಾತನಾಡಿದೆ. ಭಾರತ ಮತ್ತು ಸೋವಿಯತ್ ದೇಶಗಳು ಪ್ಯಾಲೆಸ್ಟೀನ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದರ ಕುರಿತು ವಿವರಿಸಿದೆ. ಲಿಡಿಯಾ ಅವರು ನನ್ನ ಭಾಷಣವನ್ನು ಬೈಲೊರಷ್ಯನ್ ಭಾಷೆಗೆ ಅನುವಾದ ಮಾಡಿದರು. ಇಡೀ ಸಭೆ ಭಾಷಣವನ್ನು ಗಂಭೀರವಾಗಿ ಆಲಿಸಿತು. ಭಾರತದ ವ್ಯಕ್ತಿಯಾದ ನಾನು, ಸೋವಿಯತ್ ಜನರ ಮುಂದೆ ಪ್ಯಾಲೆಸ್ಟೀನ್ ಜನರ ಹೃದಯವಿದ್ರಾವಕ ಸ್ಥಿತಿಯ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು. ನನ್ನ ಮಾತು ಮುಗಿದು ಪೋಡಿಯಂನಿಂದ ನನ್ನ ಆಸನದಲ್ಲಿ ಬಂದು ಕೂಡುವವರೆಗೆ ಜನ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಈ ‘ಸ್ಟ್ಯಾಂಡಿಂಗ್ ಓವೇಶನ್’ ನನ್ನ ಜೀವನದ ಮೊದಲ ಅನುಭವ. ವೇದಿಕೆಯಿಂದ ಇಳಿದು ಸಭಾಭವನದ ಹೊರಗೆ ಬಂದಾಗ ಅನೇಕ ಯುವತಿಯರು ಗುಂಪಾಗಿ ಬಂದು ಪ್ಯಾಲೆಸ್ಟಿನ್ ಮಕ್ಕಳ ಬಗ್ಗೆ ಕನಿಕರ ವ್ಯಕ್ತಪಡಿಸಿದರು. ಗಲೀನಾ ಮತ್ತು ಲಿಡಿಯಾ ಆ ಯುವತಿಯರ ಭಾವನೆಗಳನ್ನು ನನಗಾಗಿ ಇಂಗ್ಲಿಷ್‌ಗೆ ಅನುವಾದಿಸುತ್ತಿದ್ದರು.
‘ಉಪ ಪ್ರಧಾನಿಯವರು ತಮ್ಮ ಗೌರವಾರ್ಥ ಇಂದು ರಾತ್ರಿ ಭೋಜನಕೂಟ ಏರ್ಪಡಿಸಿದ್ದಾರೆ. ಶಿಕ್ಷಣ ಸಚಿವರೂ ಬರುತ್ತಾರೆ. ತಮ್ಮ ಭಾಷಣವನ್ನು ಅವರು ಬಹಳ ಮೆಚ್ಚಿಕೊಂಡಿದ್ದಾರೆ’ ಎಂದು ಗಲೀನಾ ತಿಳಿಸಿದಳು. ನನಗೆ ಆಶ್ಚರ್ಯವಾಯಿತು. ‘ಇಂದು ರಾತ್ರಿ ರೈಲು ರಿಸ಼ರ್ವೇಷನ್ ಆಗಿದೆ. ನಾಳೆ ರಾತ್ರಿ ಲೆನಿನ್‌ಗ್ರಾಡ್‌ನಲ್ಲಿ ಸಾಹಿತಿ, ಕಲಾವಿದರು ಮತ್ತು ಇತಿಹಾಸಕಾರರ ಜೊತೆ ಮಾತುಕತೆಯ ವ್ಯವಸ್ಥೆಯಾಗಿದೆಯಲ್ಲಾ’ ಎಂದು ಹೇಳಿದೆ. ಉಪ ಪ್ರಧಾನಿಯವರಿಗೆ ಗೊತ್ತು. ಫ್ಲೈಟ್ ವ್ಯವಸ್ಥೆ ಮಾಡಿದ್ದಾರೆ. ನಿಮ್ಮ ಕಾರ್ಯಕ್ರಮದಲ್ಲಿ ಸ್ವಲ್ಪವೂ ವ್ಯತ್ಯಾಸವಾಗದು ಎಂದು ಗಲೀನಾ ಹೇಳಿದಳು.
ಭೋಜನಕೂಟಕ್ಕೆ ಸರಿಯಾದ ಸಮಯಕ್ಕೆ ಹೋದೆವು. ‘ಟೋಸ್ಟ್’ಗಾಗಿ ಹೋಗಿ ಕುಳಿತಮೇಲೆ ಕೆಲ ಹೊತ್ತಿನ ಮಾತುಕತೆ ನಂತರ ಭೋಜನದ ವ್ಯವಸ್ಥೆ ಇತ್ತು. ಸ್ವಸ್ತಿಪಾನದ ವೇಳೆ ಬಹಳಷ್ಟು ವಿಚಾರ ಮಾತನಾಡಿದೆವು. ಅದು ಮುಖ್ಯವಾಗಿ ಕಲೆ, ಸಾಹಿತ್ಯ, ಶಾಂತಿ ಮತ್ತು ಸೌಹಾರ್ದದ ಬದುಕಿನ ಕುರಿತಾಗಿತ್ತು. ಆ ಸಂದರ್ಭದಲ್ಲಿ ಸ್ವಲ್ಪ ದೂರದಲ್ಲೇ ಯುವಕ ಯುವತಿಯರು ಕ್ಲಬ್ ಡಾನ್ಸ್‌ನಲ್ಲಿ ತಲ್ಲೀನರಾಗಿದ್ದನ್ನು ನಾನು ತದೇಕಚಿತ್ತದಿಂದ ನೋಡುತ್ತಿದ್ದೆ. ನನಗೆ ನನ್ನ ದೇಶದ ಯುವಜನರ ನೆನಪಾಗಿ ದುಃಖಿಯಾದೆ. ಹೀಗೆ ಸಂತೋಷದಿಂದ ಬದುಕುವ ವಯಸ್ಸಿನಲ್ಲಿ ನಮ್ಮ ಯುವಕರು ಜೋಲು ಮುಖದೊಂದಿಗೆ ಅರ್ಜಿ ಹಿಡಿದುಕೊಂಡು ನೌಕರಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಘಟನೆಗಳು ನೆನಪಾಗಿ ಮನದಲ್ಲೇ ನೋವನ್ನು ಅನುಭವಿಸುತ್ತಿದ್ದೆ. ನಾವು ಕಲಿಯುವಾಗ ನೆರಳಚ್ಚು ಮುಂತಾದ ವ್ಯವಸ್ಥೆ ಇರಲಿಲ್ಲ. ಸರ್ಟಿಫಿಕೆಟ್‌ಗಳನ್ನು ಟೈಪ್ ಮಾಡಿದ ಮೇಲೆ ದೃಢೀಕರಣಕ್ಕಾಗಿ ಗೆಜೆಟೆಡ್ ಆಫೀಸರರ ಸಹಿ ಆ ಪ್ರತಿಗಳ ಮೇಲೆ ಬೀಳುವುದು ಅವಶ್ಯವಾಗಿತ್ತು. ಅವರು ಕೆಲವೊಂದು ಸಲ ಗಂಟೆಗಟ್ಟಲೆ ಕಾಯುತ್ತ ಕುಳಿತರೂ ಸಹಿ ಮಾಡುತ್ತಿರಲಿಲ್ಲ. ಕಿರಿಕಿರಿ ಮಾಡಿಕೊಳ್ಳುತ್ತಿದ್ದರು. ‘ನಾಳೆ ಬಾ’ ಎನ್ನುತ್ತಿದ್ದರು. ಅದರಿಂದ ಅವರಿಗೆ ಯಾವ ಲಾಭವೂ ಇದ್ದಿದ್ದಿಲ್ಲ. ನಾವು ದೀನರಾಗಿ ನಿಂತು, ಕಾಯ್ದು ಸಹಿ ಮಾಡಿಸಿಕೊಂಡು ಬರಬೇಕಿತ್ತು. ಹೀಗೆ ನಾನು ಚಿಂತೆಯಲ್ಲಿ ತಲ್ಲೀನನಾಗಿದ್ದಾಗ, ಆ ಉಪ ಪ್ರಧಾನಿಯವರು, ನಾನು ಡಾನ್ಸ್ ಮಾಡಬಯಸುತ್ತಿದ್ದೇನೆಂದು ಭಾವಿಸಿ ಗಲೀನಾಗೆ ಹೇಳಿದರು. ಗಲೀನಾ ‘ಬನ್ನಿ ಡಾನ್ಸ್ ಮಾಡೋಣ’ ಎಂದರು. ನಾನು ಗಲಿಬಿಲಿಗೊಂಡು ಇಲ್ಲ ನನಗೆ ಡಾನ್ಸ್ ಬರುವುದಿಲ್ಲ ಎಂದು ಹೇಳಿದೆ. ನಾನು ಕಲಿಸುತ್ತೇನೆ ಬಹಳ ಸರಳ ಸ್ಟೆಪ್ಸ್ ಇವೆ ಎಂದು ಗಲೀನಾ ಮನವೊಲಿಸಲು ಯತ್ನಿಸಿದಳು. ಆ ಉಪ ಪ್ರಧಾನಿಯವರು ಮತ್ತು ಶಿಕ್ಷಣ ಸಚಿವೆ ಕೂಡ ಪ್ರೋತ್ಸಾಹಿಸಿದರು. ಅನಿವಾರ್ಯವಾಗಿ ಗಲೀನಾ ಜೊತೆ ಆ ಕ್ಲಬ್ ಡಾನ್ಸ್ ನಡೆದ ಸ್ಥಳದ ಕಡೆ ಹೋಗಬೇಕಾಯಿತು.
ನನಗೆ ಇದು ಸಾಧ್ಯವೇ ಇಲ್ಲ ಎಂದು ಗಲೀನಾಗೆ ಹೇಳಿದೆ. ಆ ತಂಪುವಾತಾವರಣದಲ್ಲೂ ಬೆವರಿದೆ. ಕೊನೆಗೆ ಗಲೀನಾಗೆ ವಿವರಿಸಬೇಕಾಯಿತು. ನಾನು ಬಹಳ ದುಃಖಿಯಾಗಿದ್ದೇನೆ. ನನ್ನ ಯುವಜನಾಂಗವನ್ನು ನಿಮ್ಮ ಯುವಜನಾಂಗದ ಜೊತೆ ಹೋಲಿಕೆ ಮಾಡಿಕೊಂಡು ನೋವನ್ನು ಅನುಭವಿಸುತ್ತಿದ್ದೇನೆ. ಅಲ್ಲದೆ ನನ್ನ ಸಂಸ್ಕಾರ ಬೇರೆಯೆ ಇದ್ದುದರಿಂದ ಈ ಕುಣಿತ ಸಾಧ್ಯವೇ ಇಲ್ಲದ ಮಾತು ಎಂದೆ. ಅವಳು ಅರ್ಥ ಮಾಡಿಕೊಂಡಳು. ‘ನಾನು ಉತ್ತರ ಭಾರತದ ಪ್ರವಾಸದಲ್ಲಿದ್ದಾಗ ಅಲ್ಲಿನ ಬಡತನ ನೋಡಿ ಮರುಗಿದ್ದೆ’ ಎಂದು ತಿಳಿಸಿದ ಅವಳು, ‘ಐ ಯಾಮ್ ಸೋ ಪ್ರೌಢ ಆಫ್ ಯು’ ಎಂದಳು. ಆ ಸ್ಥಳದಿಂದ ವಾಪಸ್ ಬಂದೆವು.
ಮರುದಿನ ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಜೊತೆಯಲ್ಲಿ ಹೋಟೆಲ್ ಪ್ಲನೋತಾದಲ್ಲಿ ಬಹಳ ಬೇಗ ಮಧ್ಯಾಹ್ನದ ಊಟ ಮಾಡುವಾಗ ಬರ್ಚ್ ಮರದಿಂದ ತಯಾರಿಸಿದ ಗುಲಾಬಿ ಬಣ್ಣದ ಜ್ಯೂಸ್ ತುಂಬಿದ ಗಾಜಿನ ಪಾಟ್ ಅನ್ನು ವೇಟರ್ ತಂದು ಇಟ್ಟಳು. ಹಾಗೆ ತರಲು ಗಲೀನಾ ತನ್ನ ಭಾಷೆಯಲ್ಲಿ ಆಕೆಗೆ ಹೇಳಿದ್ದಳು. ಪ್ರತಿಸಲ ಊಟ ಮಾಡುವಾಗ ನಾನು ಆ ಜ್ಯೂಸನ್ನು ಬಹಳ ಖುಷಿಯಿಂದ ಕುಡಿಯುವುದನ್ನು ಆಕೆ ಗಮನಿಸಿದ್ದಳು ಎಂಬುದರ ಅರಿವು ನನಗಾಯಿತು. ಆಕೆ ಖುಷಿಯಿಂದ ಮತ್ತೆ ಮತ್ತೆ ಗ್ಲಾಸ್ ತುಂಬಿಸುತ್ತಿದ್ದಳು.
ಊಟವಾದ ಸ್ವಲ್ಪ ಹೊತ್ತಿನ ನಂತರ ರೆಡಿಯಾಗಿ ವಿಮಾನ ನಿಲ್ದಾಣಕ್ಕೆ ಹೋದೆವು. ಗಲೀನಾ ಜೊತೆ ಲಿಡಿಯಾ ಕೂಡ ಬಂದರು. ವಿಮಾನ ನಿಲ್ದಾಣದಲ್ಲಿ ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹೋಗುವುದು ತಡವಾಗುವ ಕುರಿತು ಪ್ರಕಟಿಸಲಾಯಿತು. ನಾವು ಲೆನಿನ್‌ಗ್ರಾಡ್ ಗೇಟ್ ಬಳಿಯ ಆಸನಗಳಲ್ಲಿ ಕುಳಿತಿದ್ದೆವು. ‘ಎಲ್ಲ ಪ್ರಕ್ರಿಯೆಗಳು ಮುಗಿದಿವೆ, ಯಾವುದೇ ಸಮಸ್ಯೆ ಇಲ್ಲ. ಗೇಟ್ ಓಪನ್ ಆದ ಕೂಡಲೇ ವಿಮಾನದಲ್ಲಿ ಹೋಗಿ ಕೂಡುತ್ತೇವೆ. ನೀವು ಗಂಟೆಗಟ್ಟಲೆ ಕಾಯಬೇಕಿಲ್ಲ, ದಯವಿಟ್ಟು ಹೋಗಿ. ನಿಮ್ಮ ಆತಿಥ್ಯಕ್ಕೆ ಮತ್ತು ಕಂಪನಿ ಕೊಟ್ಟಿದ್ದಕ್ಕೆ ಋಣಿಯಾಗಿದ್ದೇವೆ’ ಎಂದು ಮುಂತಾಗಿ ಹೇಳಿದರೂ ಅವರು ಕೇಳಲಿಲ್ಲ. ‘ನಿಮ್ಮನ್ನು ಕಳಿಸಿದ ನಂತರವೇ ಹೋಗುತ್ತೇವೆ’ ಎಂದು ಜೊತೆಯಲ್ಲೇ ಉಳಿದರು. ಗೇಟ್ ಓಪನ್ ಆದ ಮೇಲೆ ನಮ್ಮನ್ನು ಬೀಳ್ಕೊಟ್ಟು ಹೋದರು. ಅವರ ಆತ್ಮೀಯತೆ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು.
ಲೇನಿನ್‌ಗ್ರಾಡ್ ವಿಮಾನ ನಿಲ್ದಾಣ ಸಮೀಪ ಬಂದಾಗ ವಿಮಾನ ಇಳಿಯಲು ಅನುಮತಿ ಸಿಗಲಿಲ್ಲ. ಬಹಳ ಹೊತ್ತಿನವರೆಗೆ ವಿಮಾನ ಆಕಾಶದಲ್ಲಿ ಸುತ್ತುತ್ತಲೇ ಇತ್ತು. ವಿಮಾನದಲ್ಲಿ ಎಲ್ಲರೂ ಗಾಬರಿಯಾಗಿದ್ದರು. ಇಂಥ ಸನ್ನಿವೇಶದ ಅನುಭವ ಹಿಂದೆಂದೂ ಆಗಿದ್ದಿಲ್ಲ. ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ವಿದ್ಯುದ್ದೀಪಗಳ ಮಂದ್ರ ಬೆಳಕು ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಕೊನೆಗೂ ವಿಮಾನ ಇಳಿಯಿತು. ವಿಮಾನ ನಿಲ್ದಾಣದಲ್ಲಿ ನಮ್ಮ ಗೈಡ್ ಮತ್ತು ಡ್ರೈವರ್ ಕಾಯುತ್ತಿದ್ದರು. ಅಂತೂ ಹೋಟೆಲ್ ತಲುಪಿದೆವು. ಎರಡನೇ ಮಹಾಯುದ್ಧದಲ್ಲಿ ಲೆನಿನ್ ಗ್ರಾಡ್ ಮೇಲೆ ವಿಜಯ ಸಾಧಿಸಿದ ನಂತರ ಇದೇ ಹೋಟೆಲ್‌ನಲ್ಲಿ ಸಭೆ ನಡೆಸಬೇಕೆಂದು ಹಿಟ್ಲರ್ ಸೂಚಿಸಿದ್ದನಂತೆ!
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.