ಅಂದು ಮಧ್ಯಾಹ್ನದ ಉಪ್ಪಿಟ್ಟು ತರುವವನು ಮಧ್ಯಾಹ್ನ ಒಂದುಗಂಟೆಯಾದರೂ ಬಂದಿರಲಿಲ್ಲ. ಈಗಿನಂತೆ ಅವಾಗ ಯಾವ ಫೋನು ಸಹ ಇರಲಿಲ್ಲ. ಹಾಗಾಗಿ ಅವನು ಯಾಕೆ ಬರಲಿಲ್ಲ ಎಂದು ತಿಳಿದುಕೊಳ್ಳುವುದು ಹೇಗೆ ಎಂದು, ಹಿರಿಯ ವಿದ್ಯಾರ್ಥಿಯೊಬ್ಬನನ್ನು ಸೈಕಲ್ಲಿನಲ್ಲಿ ಆತ ಬರುವ ಹಾದಿಗೆ ಹೋಗಿ ನೋಡಿಕೊಂಡು ಬರುವಂತೆ ಕಳುಹಿಸಲಾಯ್ತು. ಆದರೆ ರಸ್ತೆಯಲ್ಲಿ ಆತನ ಸುಳಿವಿರಲಿಲ್ಲ. ಆದರಲ್ಲಿ ಮಕ್ಕಳು ಮಧ್ಯಾಹ್ನದ ಫಲಹಾರಕ್ಕಾಗಿ ಕಾದಿದ್ದರು. ಕೆಲವರ ಮುಖಗಳು ಬಾಡಿಹೋಗಿದ್ದವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ
ನಮ್ಮ ಶಾಲೆ ಇದ್ದದ್ದು ಈ ಹಿಂದೆ ತಿಳಿಸಿದಂತೆ ಊರಿನ ಹೆಬ್ಬಾಗಿಲು ಎಂದೆ ಕರೆಯುವ ರಸ್ತೆಯ ಪಕ್ಕದಲ್ಲಿ ಸ್ಥಳೀಯವಾಗಿ ಸಿಗುವ ಕಲ್ಲಿನಿಂದ ನಿರ್ಮಾಣವಾದ ಕಟ್ಟಡದಲ್ಲಿ. ಬಾಲ್ಯದಲ್ಲಿ ಅದನ್ನು ನಾವೆಲ್ಲರೂ ‘ಮಠ’ ಎಂದೆ ಕರೆಯುತ್ತಿದ್ದೆವು. ನನಗಾಗ ನಾಲ್ಕನೆಯ ತರಗತಿ ಇರಬಹುದು. ನಮ್ಮನ್ನು ಅದೆ ಕಟ್ಟಡದಲ್ಲಿ ಕೂರಿಸುತ್ತಿದ್ದರು. ಬಹಳ ಹಳೆಯ ಕಟ್ಟಡವದು. ಬಹುತೇಕ ಅಂದಿನ ಸ್ಥಿತಿಯೆ ಇಂದು ಕೆಲವು ಶಾಲೆಗಳಲ್ಲಿಯೂ ಇದೆ. ಆ ಶಾಲೆಯ ಮುಂಭಾಗದಲ್ಲಿ ಅರಳಿಕಟ್ಟೆ ಇದೆ. ಹಳ್ಳಿಗಳಲ್ಲಿ ಎಲ್ಲಾ ಸಾರ್ವಜನಿಕ ಸಭೆಗಳು ನಡೆಯುವುದು ಅಲ್ಲಿಯೆ. ಅದೊಂದು ಹರಟೆಯ ಕೇಂದ್ರವೂ ಹೌದು. ಆ ಶಾಲೆಯ ಎಡಭಾಗದಲ್ಲಿ ಮುಸ್ಲಿಂ ಕುಟುಂಬದ ಮನೆಯೂ ಇತ್ತು. ನಮ್ಮೂರಿನಲ್ಲಿ ಇದ್ದದ್ದು ಅವರದೊಂದೆ ಕುಟುಂಬ. ಆದರೆ ಯಾರಲ್ಲಿಯೂ ಭೇದಭಾವ ಇರಲಿಲ್ಲ. ಎಲ್ಲರೂ ಸಾಮರಸ್ಯದಿಂದಲೆ ಬದುಕುತ್ತಿದ್ದರೂ ಆ ಮನೆಯ ಚಾಂದ್ ಭಾಷ ನನ್ನ ಬಾಲ್ಯದ ಗೆಳೆಯ ನಮ್ಮಿಬ್ಬರಲ್ಲಿ ಆತ್ಮೀಯತೆ ತುಸು ಹೆಚ್ಚೆ ಇತ್ತು. ತರಗತಿಯಲ್ಲಿ ನನ್ನ ಪಕ್ಕದಲ್ಲಿಯೆ ಹೆಚ್ಚು ಕುಳಿತುಕೊಳ್ಳುತ್ತಿದ್ದ. ನಾವೆಲ್ಲ ಹದಿನೈದು ಹುಡುಗ ಹುಡುಗಿಯರ ಸಹಪಾಠಿಗಳಷ್ಟೆ ಇದ್ದದ್ದು. ಅದರ ಬಗ್ಗೆ ಯೋಚಿಸುವಂತ ಮನಸ್ಥಿತಿಯೂ ನಮ್ಮಲ್ಲಿ ಇರಲಿಲ್ಲ. ನಾವೆಲ್ಲ ಮಕ್ಕಳು ಅಷ್ಟೆ. ನಮಗೆ ಅಂತಹ ತಿಳುವಳಿಕೆ ಎಲ್ಲಿ ಬರಬೇಕು. ನಿರ್ಮಲ ನಿಷ್ಕಲ್ಮಶ ಭಾವನೆ ನಮ್ಮದು. ಹಾಗಾಗಿ ಬಾಲ್ಯಕಾಲದ ಗೆಳೆತನದ ನೆನಪು ಮಧುರವಾದದ್ದು ಎಂದೆ ನನ್ನ ಭಾವನೆ.
ಚಾಂದ್ ಭಾಷನ ತಂದೆ ಸ್ವಲ್ಪ ಮದ್ಯವ್ಯಸನಿಯಾಗಿದ್ದ. ಉಳಿದಂತೆ ಆತನ ಸ್ವಭಾವ ಎಲ್ಲರೊಂದಿಗೆ ಸಹಜವಾಗಿ ಬೆರೆಯುವಂಥದ್ದಾಗಿತ್ತು. ಆತನಿಗೆ ಚಾಂದ್ ಭಾಷ ಅವರ ಅಕ್ಕ ಇಬ್ಬರೆ ಮಕ್ಕಳು. ನಾಲ್ಕು ಜನರ ಕುಟುಂಬವದು. ಊರಿನಲ್ಲಿ ಅವರ ಹಿರಿಯರು ಸಂಪಾದಿಸಿದ ಸುಮಾರು ಹತ್ತು ಎಕರೆಗೂ ಹೆಚ್ಚು ಜಮೀನಿತ್ತು. ಅದನ್ನು ಬೇರೆಯವರು ಒಂದಿಷ್ಟು ಗೇಣಿ ಮಾಡುತ್ತಿದ್ದರು. ಕಾಳುಕಡಿ ರಾಗಿ ಭತ್ತ ಬೆಳೆದು ಮನೆಗೆ ತಂದು ಹಾಕುತ್ತಿದ್ದರು. ಹಾಗಾಗಿ ಮನೆ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಆತ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹೆಂಡತಿಗೆ ಹೊಡೆಯುತ್ತಿದ್ದ. ಶಾಲೆ ಹತ್ತಿರವೇ ಇದ್ದುದರಿಂದ ಎಷ್ಟೊ ಬಾರಿ ಪಾಠ ನಡೆಯುವಾಗಲೂ ಇವರ ಗಲಾಟೆಯನ್ನು ನಾವು ಆಲಿಸುತ್ತಿದ್ದೆವು ಅನ್ನುವುದಕ್ಕಿಂತ ನಮಗೆ ಅದು ಸ್ಪಷ್ಟವಾಗಿಯೆ ಕೇಳುತ್ತಿತ್ತು. ಅವಾಗಲೆಲ್ಲಾ ತರಗತಿಯಿಂದ ಗೆಳೆಯನನ್ನು ಯಾರೊ ಕರೆಯುತ್ತಿದ್ದರು. ಆತ ಹೋಗುತ್ತಿದ್ದ… ಮತ್ತೆ ತರಗತಿಗೆ ಬಂದಾಗೆಲ್ಲಾ ಆತನ ಮುಖದಲ್ಲಿ ದುಃಖದ ಛಾಯೆ ಎದ್ದು ಕಾಣುತ್ತಿತ್ತು. ಅರ್ಥವಾಗದ ವಯಸ್ಸು ನಮ್ಮದಾದರೂ ಮನೆಯಲ್ಲಿ ಜಗಳವಾಗಿದೆ ಅನ್ನುವುದು ಮಾತ್ರ ತಿಳಿಯುತ್ತಿತ್ತು. ಚಾಂದ್ ಭಾಷನ ತಂದೆ ತೀರ ಕೆಟ್ಟವನೇನಲ್ಲ. ಆದರೆ ಯಾಕೆ ಹಾಗೆ ಗಲಾಟೆ ಮಾಡ್ತಾ ಇದ್ದ ಅನ್ನೋದು ಮಾತ್ರ ತಿಳಿಯುತ್ತಿರಲಿಲ್ಲ. ಎಷ್ಟೋ ಮನೆಯ ಸಂಕಟವು ಇದೆ ಅಲ್ಲವೇ. ತರಗತಿಯಲ್ಲಿ ಮಾತ್ರ ಚಾಂದ್ ಭಾಷ ಯಾವಾಗಲೂ ಆಕ್ಟೀವಾಗಿ ಇರುತ್ತಿದ್ದ. ಕೆಲವೊಮ್ಮೆ ಆತನ ಕಣ್ಣಲ್ಲಿ ತುಂಬಿರುತ್ತಿದ್ದ ಕಣ್ಣ ಹನಿಗಳು ಸಂಕಟವನ್ನಂತೂ ಹೇಳುತ್ತಿದ್ದವು.
ನನ್ನ ಮನೆಯಲ್ಲಿಯೂ ಬಡತನದ ಬೇಗೆಯ ದಿನಗಳವು. ಒಂದೊತ್ತಿದ್ದರೆ ಇನ್ನೊಂದ್ಹೊತ್ತು ಅರೆಹೊಟ್ಟೆಗಷ್ಟೆ ಊಟ. ಕೆಲವೊಮ್ಮೆ ಊರಿನ ಗೌಡರ ಮನೆಯಲ್ಲಿ ಉಳಿಕೆಯ ಅನ್ನ ಸಾಂಬಾರ್ ಹಿಡಿಸ್ಕೊಂಡು ಬಂದಿದ್ದು ನೆನಪಿದೆ. ಅದು ನಮಗೆ ಮೃಷ್ಟಾನ್ನ. ಇಂತಹ ಹಸಿವಿನ ಸಂಕಟದ ಮಧ್ಯೆ ನಮ್ಮ ಬದುಕು ನಡೆಯುತ್ತಿತ್ತು. ಬಹುತೇಕ ಮಧ್ಯಾಹ್ನದ ಊಟ ಎಂದು ಮನೆಯಲ್ಲಿ ಮಾಡುತ್ತಿರಲಿಲ್ಲ. ಶಾಲೆಯ ಮಧ್ಯಾಹ್ನದ ಗೋಧಿಯ ಉಪ್ಪಿಟ್ಟೇ ನಮಗೆ ಪರಮಾನ್ನ. ಅದನ್ನು ನಮ್ಮೂರಿನ ಪಕ್ಕದ ಹೊಸಹಳ್ಳಿಯವನೊಬ್ಬ ತರುತ್ತಿದ್ದ. ಅದಕ್ಕಾಗಿ ನಾವು ಮಕ್ಕಳೆಲ್ಲ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು. ಆತನು ಮೂರ್ನಾಲ್ಕು ಶಾಲೆಗಳಿಗೆ ಅದನ್ನು ಕೊಡುತ್ತಿದ್ದ. ಬಹಳ ಬಿಸಿಬಿಸಿಯಾದ ಉಪ್ಪಿಟ್ಟು ಅದು. ತನ್ನ ಮುಷ್ಟಿಯಲ್ಲಿ ಹಿಡಿದು ಒಬ್ಬೊಬ್ಬರಿಗೇ ಒಂದಿಡಿ ಹಾಕುತ್ತಿದ್ದ. ಅದನ್ನು ನಾವು ನಮ್ಮದೆ ವರ್ಕ್ ಬುಕ್‌ನ ಹಾಳೆಯಲ್ಲಿ ಹಾಕಿಸಿಕೊಳ್ಳುತ್ತಿದ್ವಿ. ಅದರಲ್ಲಿ ಸ್ವಲ್ಪ ತಿಂದು ಮನೆಗೆ ತರುತ್ತಿದ್ದೆವು. ನಮ್ಮ ಅಕ್ಕಂದಿರು ಇಬ್ಬರೂ ಹಾಗೇ ತರುತ್ತಿದ್ದರು. ಮೂವರು ಅದನ್ನು ಒಟ್ಟುಗೂಡಿಸಿ ಅದಕ್ಕೆ ಇನ್ನೊಂದಿಷ್ಟು ಖಾರ ಉಪ್ಪು ಹಾಕಿ ಒಗ್ಗರಣೆ ಮಾಡಿದರೆ ರಾತ್ರಿಯ ಊಟಕ್ಕೆ ಅದೆ ಅನ್ನವೂ ಆಗುತ್ತಿತ್ತು. ಅದರ ಒಂದಗುಳನ್ನೂ ನಾವ್ಯಾರೂ ಚೆಲ್ಲುತ್ತಿರಲಿಲ್ಲ. ಹಸಿವಿನ ಸಂಕಟ ಮತ್ತು ಊಟದ ಮಹತ್ವ ಎರಡನ್ನು ಬದುಕು ನಮಗೆ ಕಲಿಸಿತ್ತು.
ಅದೊಂದು ಘಟನೆಯನ್ನು ಹೇಳಲೆಬೇಕು. ಅಂದು ಮಧ್ಯಾಹ್ನದ ಉಪ್ಪಿಟ್ಟು ತರುವವನು ಮಧ್ಯಾಹ್ನ ಒಂದುಗಂಟೆಯಾದರೂ ಬಂದಿರಲಿಲ್ಲ. ಈಗಿನಂತೆ ಅವಾಗ ಯಾವ ಫೋನು ಸಹ ಇರಲಿಲ್ಲ. ಹಾಗಾಗಿ ಅವನು ಯಾಕೆ ಬರಲಿಲ್ಲ ಎಂದು ತಿಳಿದುಕೊಳ್ಳುವುದು ಹೇಗೆ ಎಂದು, ಹಿರಿಯ ವಿದ್ಯಾರ್ಥಿಯೊಬ್ಬನನ್ನು ಸೈಕಲ್ಲಿನಲ್ಲಿ ಆತ ಬರುವ ಹಾದಿಗೆ ಹೋಗಿ ನೋಡಿಕೊಂಡು ಬರುವಂತೆ ಕಳುಹಿಸಲಾಯ್ತು. ಆದರೆ ರಸ್ತೆಯಲ್ಲಿ ಆತನ ಸುಳಿವಿರಲಿಲ್ಲ. ಆದರಲ್ಲಿ ಮಕ್ಕಳು ಮಧ್ಯಾಹ್ನದ ಫಲಹಾರಕ್ಕಾಗಿ ಕಾದಿದ್ದರು. ಕೆಲವರ ಮುಖಗಳು ಬಾಡಿಹೋಗಿದ್ದವು. ಬೆಳಿಗ್ಗೇನೆ ತಂದೆ ತಾಯಿಗಳು ಕೂಲಿ ಹೋಗುವ ಸಂಭವವೆ ಹೆಚ್ಚು. ಹಾಗಾಗಿ ಎಷ್ಟೊ ಮಕ್ಕಳು ಬೆಳಿಗ್ಗೆ ಮನೆಯಲ್ಲಿ ಊಟವನ್ನೆ ಮಾಡಿ ಬರುತ್ತಿರಲಿಲ್ಲ, ಮಧ್ಯಾಹ್ನವಾದರೂ ಶಾಲೆಯಲ್ಲಿ ಊಟ ಸಿಗುತ್ತಲ್ಲ ಎಂದು.. ಹಾಗೆ ಬಂದವರಿಗೆ ಅಂದು ನಿರಾಸೆಯಾಗಿತ್ತು. ಆದರೆ ಪಾಠದ ಸಮಯವಾಗಿ ಮಧ್ಯಾಹ್ನದ ತರಗತಿಯೂ ಪ್ರಾರಂಭವಾಗಿತ್ತಾದರೂ ಯಾರೊಬ್ಬರಿಗೂ ಬೋಧನೆಯು ರುಚಿಸುತ್ತಿರಲ್ಲ. ಸುಮ್ಮನೆ ಕುಳಿತು ಪಾಠ ಕೇಳುವವರಂತಿದ್ದರು ಅಷ್ಟೇ.
ಚಾಂದ್ ಭಾಷನ ತಂದೆ ತೀರ ಕೆಟ್ಟವನೇನಲ್ಲ. ಆದರೆ ಯಾಕೆ ಹಾಗೆ ಗಲಾಟೆ ಮಾಡ್ತಾ ಇದ್ದ ಅನ್ನೋದು ಮಾತ್ರ ತಿಳಿಯುತ್ತಿರಲಿಲ್ಲ. ಎಷ್ಟೋ ಮನೆಯ ಸಂಕಟವು ಇದೆ ಅಲ್ಲವೇ. ತರಗತಿಯಲ್ಲಿ ಮಾತ್ರ ಚಾಂದ್ ಭಾಷ ಯಾವಾಗಲೂ ಆಕ್ಟೀವಾಗಿ ಇರುತ್ತಿದ್ದ. ಕೆಲವೊಮ್ಮೆ ಆತನ ಕಣ್ಣಲ್ಲಿ ತುಂಬಿರುತ್ತಿದ್ದ ಕಣ್ಣ ಹನಿಗಳು ಸಂಕಟವನ್ನಂತೂ ಹೇಳುತ್ತಿದ್ದವು.
ತಡವಾಗಿಯಾದರೂ ಯಾರಾದರೂ ಉಪ್ಪಿಟ್ಟು ತರಬಹುದು ಎಂದು ಎಲ್ಲರೂ ಆಸೆಗಣ್ಣಿನಿಂದ ನೋಡುವಾಗ ಬೇರೆ ವ್ಯಕ್ತಿಯೊಬ್ಬನು ಶಾಲೆಯ ಹತ್ತಿರ ಬರುವುದು ಕಂಡಿತು. ಇದೇನು ಇವತ್ತು ಬೇರೆಯವರು ಬಂದಿದ್ದಾನಲ್ಲ ಎಂದರೆ ಅದಕ್ಕೆ ಬೇರೆಯೇ ಕಾರಣವು ಇತ್ತು. ಎಂದಿನಂತೆ ಆತ ಬೇರೆ ಎರಡು ಹಳ್ಳಿಗೆ ಉಪ್ಪಿಟ್ಟು ಕೊಟ್ಟು ಬರುವಾಗ ನಮ್ಮೂರಿನ ಏರಿಯ ಮೇಲೆಯೆ ಬರಬೇಕಾಗಿತ್ತು. ಹಿಂದಿನ ರಾತ್ರಿ ಆತನಿಗೆ ವಿಪರೀತ ಜ್ವರ ಇದ್ದರೂ ಮಕ್ಕಳ ಆಹಾರ ತಪ್ಪಿಸಬಾರದು ಅನ್ನುವ ಕಾರಣಕ್ಕೆ ಬಂದಿದ್ದನಂತೆ. ಆದರೆ ಬರುವಾಗ ತಲೆ ಸುತ್ತು ಬಂದಂತಾಗಿ ಬಿದ್ದಿದ್ದ ಅವನನ್ನು ಹೊಲದ ಕೆಲಸಕ್ಕೆ ಹೋಗಿದ್ದ ನಮ್ಮೂರಿನವನೊಬ್ಬರು ಎಬ್ಬಿಸಿ ನೀವು ಇಲ್ಲಿಯೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕುಳ್ಳಿರಿಸಿ ಆತನೆ ಆಹಾರವನ್ನು ಶಾಲೆಗೆ ತೆಗೆದುಕೊಂಡು ಬಂದಿದ್ದ. ಆತ ಇದನ್ನೆಲ್ಲ ವಿವರಿಸಿ ಹೇಳುವಾಗ ಹಸಿವನ್ನು ಕಾಯುವವನು ಯಾರಾದರೂ ಒಬ್ಬರು ಇದ್ದೆ ಇರುತ್ತಾರೆ ಎನಿಸಿತು. ಅಂತೂ ಉಪ್ಪಿಟ್ಟು ಮಕ್ಕಳ ಉದರ ಸೇರಿ ಜೀವ ಚೈತನ್ಯವನ್ನು ತಂದಿತ್ತು. ಇಂಥ ಸಂದರ್ಭಗಳಲ್ಲೇ “ಹಸಿವಿಗೆ ಅನ್ನ ನೀಡಬೇಕೆ ಹೊರತು ವೇದಾಂತವನ್ನಲ್ಲ” ಎಂಬ ಮಾತು ಎಷ್ಟು ಸತ್ಯ ಅನಿಸದೆ ಇರದು.
*****
ಅದೊಂದು ಶನಿವಾರ ಶಾಲೆಯ ತರಗತಿಗಳು ವಾಡಿಕೆಯಂತೆ ಬೆಳಿಗ್ಗೆಯೇ ನಡೆಯುತ್ತಿದ್ದವು. ಶಿಕ್ಷಕರು ಪಾಠ ಮಾಡುತ್ತಿದ್ದರು. ನಾವು ತದೇಕ ಚಿತ್ತರಾಗಿ ಅವರ ಪಾಠವನ್ನು ಕೇಳುತ್ತಿದ್ದೆವು. ಇದ್ದಕ್ಕಿದ್ದಂತೆ ಮೇಷ್ಟರು ಪಾಠವನ್ನು ನಿಲ್ಲಿಸಿದರು. ನಾವೆಲ್ಲ ಗಾಬರಿಯಿಂದ ಅವರನ್ನು ನೋಡುತ್ತಿರುವಾಗ ಪುಸ್ತಕವನ್ನು ಹಿಡಿದುಕೊಂಡೆ ಹೊರಗೋಡಿದರು. ಹೊರಗೆ ಗಲಾಟೆ ನಡೆದಂತೆ ಧ್ವನಿಗಳು ಕೇಳಿಸುತ್ತಿವೆ. ನಾವೆಲ್ಲರೂ ತರಗತಿಯಿಂದ ಹೊರಗೆ ಬರಲು ಹವಣಿಸುತ್ತಿದ್ದಂತೆ ಶಿಕ್ಷಕರು ಬೇಡ ಬೇಡ ನೀವು ಹೊರಗೆ ಬರಬೇಡಿ ಎಂದರು. ಹಾಗಾಗಿ ಹೊರಗಡೆ ಏನಾಗುತ್ತಿದೆ ಎಂಬುದೆ ನಮಗೆ ತಿಳಿಯಲಿಲ್ಲ. ಗೆಳೆಯ ಚಾಂದ್ ಭಾಷನ ತಂದೆಯ ಗಲಾಟೆ ಇರಬಹುದ ಎಂದುಕೊಳ್ಳುತ್ತಿರುವಾಗ ಯಾರೊ ನನ್ನ ಗೆಳೆಯನನ್ನು ಹೊರಬರುವಂತೆ ಕರೆದರು. ಚಾಂದ್ ಭಾಷ ಎದ್ದು ಹೊರಹೋಗುವಾಗ ನಾವು ಅವನ ಹಿಂದೆಯೆ ಹೊರಗೆ ಬಂದೆವು. ನೀವು ಚಿಕ್ಕ ಮಕ್ಕಳು ಹೋಗ್ಬೇಡಿ ಎಂದು ನಮ್ಮನ್ನು ಅರ್ಧದಲ್ಲೆ ತಡೆದರು.
ಅಂಥದ್ದೇನಾಗಿರಬೇಕು ಅಂದುಕೊಳ್ಳುವಾಗಲೇ ಪಕ್ಕದ ವ್ಯಕ್ತಿಯೊಬ್ಬ ಹೇಳುತ್ತಿದ್ದ. ಮೇಷ್ಟ್ರು ಹೊರಗಡೆ ಓಡಿಬಂದ್ರು. ನಾನು ಅರಳಿಕಟ್ಟೆ ಮೇಲೆ ಕುಳಿತು ನೋಡ್ತಾಇದ್ದೆ. ಆ ತಾಯಿ ಇದ್ದಕ್ಕಿದ್ದಂತೆ ಹಿಂದಕ್ಕೆ ಬಿದ್ದರು. ಎಂದರು. ಯಾರು? ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿತ್ತು. ಗೆಳೆಯ ಚಾಂದ್ ಅವರ ತಾಯಿ ಬೆಳಿಗ್ಗೆ ಊಟಮಾಡಿ ಪಾತ್ರಗಳನ್ನು ತೊಳೆಯುವಾಗ ಇದ್ದಕ್ಕಿದ್ದಂತೆ ಬಿದ್ದಿದ್ದರು. ಅದು ಮೇಷ್ಟ್ರಿಗೆ ಕಂಡು ಅವರು ಓಡಿ ಬಂದಿದ್ದಾರೆ. ಮನೆಯ ಒಳಗೆ ಕುಳಿತಿದ್ದ ಚಾಂದ್ ಅವರ ಅಪ್ಪನು ಓಡಿಬಂದಿದ್ದಾನೆ. ಎಲ್ಲರೂ ಒಟ್ಟಾಗಿ ಆಕೆಯನ್ನು ಎತ್ತಿ ಚಾಪೆ ಹಾಸಿ ಮಲಗಿಸಿ ಗಾಳಿ ಬೀಸಲು ಪ್ರಾರಂಭಿಸಿದ್ದಾರೆ. ಅಷ್ಟರಲ್ಲಿ ಇಡೀ ಊರಿಗೆ ಊರೇ ಬಂದು ಸೇರಿದೆ. ಅಯ್ಯೋ ಏನಾಯಿತು ಪಾಪ… ಮಕ್ಕಳು ಇನ್ನೂ ಮಕ್ಕಳು ಚಿಕ್ಕವರು. ಆಕೆಗೆ ಏನೂ ಆಗದಿರಲಿ ಎಂದೆ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರು. ಹಿರಿಯರೊಬ್ಬರು ಇಲ್ಲ ಆಕೆ ಉಸಿರಾಡುತ್ತಿಲ್ಲ ಪ್ರಾಣ ಹೋಗಿರಬಹುದು.. ಎಂದೆಲ್ಲ ಹೀಗೆ ಮಾತನಾಡಿಕೊಳ್ಳುತ್ತಿದ್ದರು. ಹತ್ತಿರದಲ್ಲಿ ಯಾವ ಆಸ್ಪತ್ರೆಯೂ ಇರಲಿಲ್ಲ. ಆದ್ದರಿಂದ ದೂರದ ತಾಲ್ಲೂಕಿಗೆ ಕರೆದುಕೊಂಡು ಹೋಗಬೇಕು ಅಂದುಕೊಳ್ಳುತ್ತಿರುವಾಗಲೇ ಆ ತಾಯಿಗೆ ಹೃದಯಾಘಾತವಾಗಿದೆ ಎಂಬ ಮಾತು ನಮ್ಮ ಕಿವಿಗೆ ಬಿತ್ತು. ಕೊನೆಗೆ ಆಸ್ಪತ್ರೆಗೆ ಹೋದ ಮೇಲೆ ಅದು ತಿಳಿದಿತ್ತು. ಈ ಕಾರಣವಾಗಿ ಚಾಂದ್ ಭಾಷನನ್ನು ಕರೆದುಕೊಂಡು ಹೋಗಿದ್ದರು.
ಶನಿವಾರವಾದ್ದರಿಂದ ಅಂದು ಬೆಳಿಗ್ಗೆಯೆ ಶಾಲೆಗೆ ಉಪ್ಪಿಟ್ಟು ತಂದಿದ್ದರು. ಹಸಿವಿಗೆ ಅನ್ನವು ಮುಖ್ಯ ಬದುಕಿಗೆ ಉಸಿರು ಮುಖ್ಯ ಎಂದೆನಿಸಿದರೂ ದಿನ ನಿತ್ಯದಂತೆ ಅದನ್ನೇನೊ ಪಡೆದೆವು. ಆದರೆ ಗೆಳೆಯನ ತಾಯಿಗೆ ಹೀಗಾಗಿರುವಾಗ ನಾವು ಅದನ್ನು ತಿನ್ನುವುದಾದರೂ ಹೇಗೆ ಎಂದು ಅದನ್ನು ಮನೆಗೆ ತೆಗೆದುಕೊಂಡು ಹೋದೆವು. ಅದು ಸಾಯಂಕಾಲದ ಹಸಿವನ್ನು ನೀಗಿಸುವುದಿತ್ತು. ಮುಂದೆ ಆ ತಾಯಿಯ ಅಂತ್ಯಸಂಸ್ಕಾರವು ನಡೆಯಿತು. ಆದರೆ ನಾವೆಲ್ಲ ಚಿಕ್ಕ ಮಕ್ಕಳಾಗಿದ್ದರಿಂದ ಮನೆಯಲ್ಲಿ ನಮ್ಮನ್ನು ಹೊರಗಡೆಯೆ ಕಳಿಸಲಿಲ್ಲ. ಎರಡು-ಮೂರು ದಿನಗಳಲ್ಲಿ ಗೆಳೆಯ ಚಾಂದ್ ಬಂದನಾದರೂ ಆತ ವರ್ಗಾವಣೆ ಪಡೆದು ತನ್ನ ತಾಯಿಯ ತವರೂರಿಗೆ ಹೋದ. ಇಲ್ಲಿ ನೋಡಿಕೊಳ್ಳುವವರಿಲ್ಲ ಎಂಬುದು ಆ ವರ್ಗಾವಣೆಗೆ ಕಾರಣವಾಗಿತ್ತು. ಈಗಲೂ ನನಗೆ ಕಾಡುವುದು ಆ ಹಸಿವಿನ ದಿನಗಳು. ಆ ತಾಯಿಯ ಸಾವು ಹಾಗೂ ಇದರಿಂದ ದೂರಾದ ಗೆಳೆಯ ಚಾಂದ್. ಆದರೆ ಬದುಕಿನಲ್ಲಿ ಎಲ್ಲವೂ ಅನಿರೀಕ್ಷಿತ ಘಟನೆಗಳು. ಇವೆಲ್ಲವುಗಳ ಮೊತ್ತವಲ್ಲವೆ ಬದುಕು ಎಂದೆನಿಸಿದಾಗಲೆಲ್ಲ ನೆನಪುಗಳು ಮಾತ್ರ ಬಿಡದೆ ಕಾಡುತ್ತವೆ. ಮುಂದಿನ ಬದುಕಿನ ಅನುಭವಕ್ಕೆ ಅಣಿಯಾಗಿ….